ಮೈಸೂರಿನ ನಂದಿತ ಪ್ರಕಾಶನ ಸಂಸ್ಥೆಯು ಪ್ರಕಟಿಸುತ್ತಿರುವ, ಎಫ್.ಎಂ.ನಂದಗಾವ ಅವರ ಹೊಸ ಕಥಾ ಸಂಕಲನ
ಇನ್ನಾಸಪ್ಪ ಮತ್ತು ಬಂಡೆಗಳು’ ಇಷ್ಟರಲ್ಲೇ ಬಿಡುಗಡೆಯಾಗಲಿದೆ. ಅದರಲ್ಲಿ ಒಟ್ಟು ಹತ್ತು ಕತೆಗಳಿದ್ದು, ಅವುಗಳಲ್ಲಿನ ಕೆಲವು ನಾಡಿನ ಹಲವಾರು ಪತ್ರಿಕೆಗಳಲ್ಲಿ ಈಗಾಗಲೆ ಪ್ರಕಟಗೊಂಡು ಓದುಗರ ಗಮನ ಸೆಳೆದಿವೆ. ಪ್ರಸ್ತುತ
ಇನ್ನಾಸಪ್ಪ ಮತ್ತು ಬಂಡೆಗಳು’ ಕಥಾ ಸಂಕಲನದಲ್ಲಿನಬೊಗಸೆ ಬರ್ನಾರ್ಡ್’ ಕತೆ
ಪಂಜು’ವಿನ ಓದುಗರಿಗಾಗಿ..
ಮೇ ತಿಂಗಳ ಸೂಟಿ. ದೊಡ್ಡಪ್ಪ ಇರುವ ಊರಿಗೆ ಬಂದಿದ್ದೆ. ಅಲ್ಲಿ ಬಿಸಿಲೋ ಕಡುಬಿಸಿಲೋ ಒಂದೂ ಗೊತ್ತಾಗುತ್ತಿರಲಿಲ್ಲ. ಫಂಕಾ ಹಾಕಿಕೊಂಡರೆ ಬಿಸಿ ಬಿಸಿ ಗಾಳಿ ಮತ್ತಷ್ಟು ಸೆಕೆ ಕುದಿಸುವಂತೆ ಮಾಡುತ್ತಿತ್ತು. ಇಲ್ಲಿನ ಜನ ಫ್ಯಾನ್ ಗೆ ಫಂಕಾ ಅನ್ನುತ್ತಾರೆ, ರಜೆಗೆ ಸೂಟಿ ಅನ್ನುತ್ತಾರೆ. ಬೆಳಗಿನ ತಿಂಡಿಗೆ ನಾಷ್ಟಾ ಅನ್ನಬೇಕಂತೆ. ದಿನಕ್ಕೊಂದು ಕನ್ನಡದ ಹೊಸ ಪದ ಕಲಿಯಬೇಕು ಇಲ್ಲಿ. ನನ್ನ ಸ್ನೇಹಿತನೊಬ್ಬ, ಗುಲ್ಬರ್ಗ ಸೀಮೆಯಲ್ಲಿ ಮಧ್ಯಾಹ್ನ ಹಾಲು ಕೊಂಡವರು, ಪಾಕೀಟು ಕತ್ತರಿಸಿ, ಹಾಗೇಯೇ ಅಂದರೆ ಕಾಯಿಸಿಕೊಳ್ಳದೇ ಗಟಗಟ ಕುಡಿಯುತ್ತಾರೆ!’ ಎಂದು ಹೇಳುತ್ತಿದ್ದ. ಇಂಥಾ ಪರಿಸರದಲ್ಲಿ ದೊಡ್ಡಪ್ಪ ಐದು ವರ್ಷದಿಂದ ಇದ್ದಾರೆ ಅಂದರೆ, ನಮಗೆಲ್ಲಾ ಅದು ಒಂದು ದೊಡ್ಡ ಪವಾಡದ ಸಂಗತಿ. ಪ್ರತಿ ಬಾರಿ
ರಜೆಯಲ್ಲಿ ಅಲ್ಲಿಗೆ ಹೋಗುವೆ’ ಎಂದಾಗ, `ಬೇಡವೇ ಬೇಡ ನಿನಗೆ ಕಷ್ಟ ಆಗುತ್ತದೆ. ಅಲ್ಲಿ ಕಡುಬಿಸಿಲು’ ಎಂದು ಅಪ್ಪ ತಡೆಯುತ್ತಿದ್ದರು.
ತಮ್ಮಾ, ನನ್ನ ಇಲ್ಲಿಯ ಸೇವೆಗೆ ಮಂಗಳ ಹಾಡುವ ಸಮಯ ಬಂದಿದೆ. ಇನ್ನೆಷ್ಟು ವರ್ಷ ಇಲ್ಲಿ ಇರ್ತಿನೋ ಗೊತ್ತಿಲ್ಲ’ ಎಂದು ದೊಡ್ಡಪ್ಪ ಒಂದು ದಿನ ಫೋನ್ ಮಾಡಿದಾಗ, ನಾನು
ದೊಡ್ಡಪ್ಪನ ಹತ್ತಿರ ಹೋಗಿಯೇ ತೀರುವೆ’ ಎಂದು ಪಟ್ಟು ಹಿಡಿದೆ. ದೊಡ್ಡಪ್ಪನಿಗೆ ನಾನೇ ಫೋನ್ ಮಾಡಿ ಒತ್ತಾಯಿಸಿದಾಗ, `ಸರಿ ಕಳಿಸು, ಲೆಟ್ ಹಿಮ್ ಕಮ್’ ಎಂದು ಅವರು ಅಪ್ಪನಿಗೆ ಹೇಳಿದ ನಂತರವೇ, ನನಗೆ ಇಲ್ಲಿಗೆ ಬರಲು ಸಾಧ್ಯವಾದದ್ದು.
ಸಂತ ಜೋಸೆಫ್ ರ ಸ್ಕೂಲ್ ನಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ್ದೆ. ನನ್ನ ಪಿ ಯೂ ಸಿ ಓದು ಮುಗಿದಿತ್ತು. ಸಿಇಟಿ – ಕಾಮನ್ ಎಂಟರನ್ಸ್ ಟೆಸ್ಟ್ ಬರೆದಾಗಿತ್ತು. ಇನ್ನೂ ಅದರ ಫಲಿತಾಂಶದ ದಾರಿ ಕಾಯುತ್ತಿದ್ದೆ. ನಂತರ ಸೀಟಿನ ಚಿಂತೆ. ಎಂಜಿನಿಯರಿಂಗ ಓದಬೇಕೋ? ಡಾಕ್ಟರ್ ಆಗಬೇಕೋ? ಎಂಜಿನಿಯರಿಂಗ್ ಮಾಡಿದರೆ ಯಾವ ವಿಷಯದಲ್ಲಿ ಮಾಡಬೇಕು. ಡಾಕ್ಷರ್ ಪದವಿ ಓದಿದರೆ ಸಾಲದು, ಸ್ನಾತಕೋತ್ತರ ಪದವಿ ಮುಗಿಸಬೇಕು. ಅಷ್ಟೊಂದು ಆರ್ಥಿಕ ಭಾರ ಹೊರುವಷ್ಟು ಅಪ್ಪನ ಆರ್ಥಿಕ ಸ್ಥಿತಿ ಸುಸ್ಥಿತಿಯಲ್ಲಿಲ್ಲ. ಸದ್ಯಕ್ಕೆ ಬಿಡುವು, ಮತ್ತೆ ಯಾವುದಾದರೂ ಕಾಲೇಜು ಸೇರಿದರೆ ಎಲ್ಲೂ ಹೋಗಲಾಗದು. ನಾನು ಪಟ್ಟು ಹಿಡಿದು ದೊಡ್ಡಪ್ಪ ಇರುವ ಊರಿಗೆ ಬಂದಿದ್ದೆ. ಎಲ್ಲೂ ಹೋಗದೇ ಮನೆಯಲ್ಲಿಯೇ ಇರುವುದಾದರೆ ಎಂದುಕೊಂಡು ಸ್ನೇಹಿತರಲ್ಲಿ ಕೇಳಿಕೊಂಡು ಅವರಲ್ಲಿದ್ದ ಇರ್ವಿಂಗ್ ವ್ಯಾಲೇಸ್ ರ ದಿ ವರ್ಡ,’
ದಿ ಮಿರಾಕಲ್’ ಮತ್ತು ಹೆರಾಲ್ಡ್ ರಾಬಿನ್ಸ್ ಅವರ ದಿ ಡ್ರೀಮ್ ಮರ್ಚಂಟ್ಸ್’,
ದಿ ಬೆಟ್ಸಿ’ ಹೀಗೆ ನಾಲ್ಕಾರು ಪುಸ್ತಕಗಳನ್ನು ಜೊತೆಗೆ ಇರಿಸಿಕೊಂಡಿದ್ದೆ.
ನಮ್ಮ ದೊಡ್ಡಪ್ಪ ಫಾದರ್. ಆತ ಕಳೆದ ಹತ್ತು ವರ್ಷಗಳಿಂದ ಉತ್ತರ ಕರ್ನಾಟಕದ ತುತ್ತ ತುದಿಯ ಕಥೋಲಿಕ ಧರ್ಮ ಕ್ಷೇತ್ರ – ಗುಲ್ಬರ್ಗ ಧರ್ಮಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರೀಗ ಅಲ್ಲಿ ಹಿರಿಯ ಗುರುಗಳು. ಅಲ್ಲಿನ ಮೇತ್ರಾಣಿಗಳಾದ ಮಿಖೇಲಪ್ಪ ಮಿರಾಂಡ್ ಅವರು ಅಲ್ಲಿ ಜನಾನುರಾಗಿಯಾಗಿದ್ದಾರೆ ಎಂದು ನಮ್ಮ ದೊಡ್ಡಪ್ಪ ಹೇಳುತ್ತಿದ್ದರು. ಹೊಸಧರ್ಮ ಕ್ಷೇತ್ರ, ಸ್ಥಳೀಯವಾಗಿ ಗುರುಗಳು ಇರಲಿಲ್ಲ. `ರಾಜ್ಯದ ಎಲ್ಲಾ ಗುರುಮಠ(ಸೆಮಿನರಿ)ಗಳಿಂದ ಆಯ್ದ ಕೆಲವರನ್ನು, ಈ ಮೇತ್ರಾಣಿಗಳು ತಮ್ಮ ಧರ್ಮಕ್ಷೇತ್ರದಲ್ಲಿ ಸೇವೆ ಮಾಡಲು ಕರೆದುಕೊಂಡು ಬರುತ್ತಾರೆ’ ಎಂಬ ಮಾತು ಕೇಳಿದ್ದೆ.
ನಾನು ಅಲ್ಲಿ ಇರುವವರೆಗೂ ಅವರನ್ನು ಭೇಟಿ ಮಾಡುವ ಅವಕಾಶ ಸಿಗಲಿಲ್ಲ. ಆದರೆ, ಅವರೊಂದಿಗೆ ಒಡನಾಟ ಇದ್ದ ಧಾರ್ಮಿಕ ಸೋದರರು, ಗುರುಗಳು ಹಾಗೂ ಅಲ್ಲಿನ ಜನ ಅವರ ಕುರಿತು ಮಾತನಾಡುತ್ತಿದ್ದ ವಿಷಯಗಳ ಆಧಾರದ ಮೇಲೆ, ಅವರ ಆದರ್ಶವಾದ ವ್ಯಕ್ತಿತ್ವದ ಚಿತ್ರಣ ನನ್ನ ಮನಸ್ಸಿನಲ್ಲಿ ಮೂಡಿತ್ತು. ಪ್ರತಿಯೊಬ್ಬರನ್ನು ಹೆಸರು ಹಿಡಿದು ಕೂಗಿ ಮಾತನಾಡಿಸುವರಂತೆ, ಪ್ರತಿಯೊಬ್ಬರ ಮನೆಯಲ್ಲಿನ ಸದಸ್ಯರ ಬಗ್ಗೆ ಆಪ್ತವಾಗಿ ವಿಚಾರಿಸುವರಂತೆ. ಯಾವ ಊರಿಗೆ ಹೋದರೂ, ಎಲ್ಲರ ಮನೆಗೂ ಯಾವುದೇ ಬಿಗುಮಾನವಿಲ್ಲದೇ ಭೇಟಿ ಕೊಡುವರಂತೆ. ಅಲ್ಲಿನ ಜನ ಅವರನ್ನು ತಮ್ಮ ನಿಜವಾದ ತಂದೆ ಎಂಬ ಲೆಕ್ಕದಲ್ಲಿಯೇ ನೋಡುವರಂತೆ. ಅಂಥ ಮೇತ್ರಾಣಿಗಳು ತಮ್ಮ ಧರ್ಮಕ್ಷೇತ್ರದಲ್ಲಿರುವ ಗುರುಗಳು ಮತ್ತು ಸೋದರರು ಸಹ ತಮ್ಮಂತೆಯೇ ವಿಶ್ವಾಸಿಕ ಜನರೊಂದಿಗೆ ಆಪ್ತವಾಗಿ ನಡೆದುಕೊಳ್ಳುವಂತೆ ಬಯಸುತ್ತಿದ್ದರು. ನಮ್ಮ ದೊಡ್ಟಪ್ಪ ಸಹ ಮೇತ್ರಾಣಿಗಳಂತೆಯೇ ತಮ್ಮೊಂದಿಗೆ ಆಪ್ತವಾಗಿ ನಡೆದುಕೊಳ್ಳುವರೆಂದು ಗುಡಿಗೆ ಬಂದ ಜನ ಮಾತನಾಡುವುದನ್ನು ಕೇಳಿಸಿಕೊಂಡಿದ್ದೆ.
ಎಷ್ಟಾದರೂ ನಮ್ಮದು ಉಪದೇಶಿ ಮ್ಯಾನುವೇಲಪ್ಪ ಅವರ ಸಂತತಿ. ಈಗೇನೋ ನಾವು ಪಟ್ಟಣ ಸೇರಿದ್ದೇವೆ. ಈಗಲೂ ನಮ್ಮೂರಿಗೆ ಹೋದರೇ ಅಲ್ಲಿನ ಜನ ಉಪದೇಶಿ ಮ್ಯಾನುವೇಲಪ್ಪನ ಮಕ್ಕಳು ಮತ್ತು ಮೊಮ್ಮಕ್ಕಳು ಎಂದರೆ ತುಂಬಾ ಅಭಿಮಾನದಿಂದ ಕಾಣುತ್ತಾರೆ. ಎಷ್ಟೋ ಬಾರಿ ನಮ್ಮ ಮುತ್ತಜ್ಜ, ಸ್ವಾಮಿಗಳು ವರ್ಷ, ತಿಂಗಾಳಾನುಗಟ್ಟಲೇ ಬಾರದೇ ಇದ್ದಾಗ, ಊರವರಿಗೆ ಧರ್ಮೋಪದೇಶ ಬೋಧಿಸಿ, ಮದುವೆಗೆ ಸಿದ್ಧತೆ ನಡೆಸಿ, ಜಪಗಳನ್ನು ಕಲಿಸಿ ಮದುವೆ ಪೂಜೆ ಮಾಡುತ್ತಿದ್ದರಂತೆ, ಫ್ರೆಂಚ್ ಗುರುಗಳು ಊರಿಗೆ ಬಂದಾಗ ಅಂಥ ಮದುವೆಗಳನ್ನು ಉರ್ಜಿತಗೊಳಿಸುತ್ತಿದ್ದರಂತೆ. ಜ್ಞಾನಸ್ನಾನ ಮತ್ತು ನಾಮಕರಣಗಳಂಥ ಕರ್ಯಗಳಿಗೆ ಮತ್ತು ಯೇಸುಪಾದ ಸೇರಿದವರ ಭೂಸ್ಥಾಪನೆಗೆ ನಮ್ಮ ಮುತ್ತಜ್ಜನೇ ಸಾಕಾಗಿತ್ತಂತೆ.
ಆ ಕಾಲದಲ್ಲಿ ಊರಲ್ಲಿನ ಸಂತ ರೀಟಮ್ಮನ ಹೆಸರಿನ ಗುಡಿಗೆ ಬಂದು ಹೋದ ಎಲ್ಲಾ ಗುರುಗಳ ಹೆಸರು, ಊರವರ ಬಾಯಲ್ಲಿ ಇರುತ್ತದೋ ಇಲ್ಲವೋ, ಆದರೆ, ನನ್ನ ಹಿಂದಿನ ಪೀಳಿಗೆಯ ಜನರಲ್ಲಿ, ನಮ್ಮ ಅಜ್ಜನ ಹೆಸರು ಉಪದೇಶಿ ಮ್ಯಾನುವೇಲ್ ಎಂದರೆ ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಯಾರು ಮರೆತರೂ ಹಿರಿಯರಂತೂ ನಮ್ಮಜ್ಜನನ್ನು ನೆನಸದ ದಿನವಿಲ್ಲ ಎಂದು ಹೇಳಲಾಗುತ್ತದೆ. ಹೀಗಾಗಿ ಜನಸಂಖ್ಯೆಗೆ ತಕ್ಕಂತೆ ಸಾಲದೆಂಬ ಕಾರಣವೊಡ್ಡಿ, ಇಟ್ಟಿಗೆಗಳಿಂದ ಕಟ್ಟಿದ್ದ ಸುಂದರವಾದ ಹಳೆಯ ಗುಡಿಯನ್ನು, ಅದರೊಂದಿಗಿದ್ದ ಗುರುಮನೆಯನ್ನು ಬೀಳಿಸಿ ಹೊಸದಾದ ಗುಡಿ ಕಟ್ಟಿದರೂ, ಗುಡಿ ಅಂಗಳದ ಮೂಲೆಯಲ್ಲಿದ್ದ ಕಲ್ಲಿನಿಂದ ಕಟ್ಟಿದ್ದ ಎರಡು ಕೋಣೆಗಳ ಉಪದೇಶಪ್ಪನ ಮನೆ ಬೀಳಿಸಿರಲಿಲ್ಲ. ಅದು ಊರ ಜನರ ಅಭಿಮಾನ. ಉಪದೇಶಿ ಎಂದರೆ ಅವರ ಪಾಲಿಗೆ ಸಾಕ್ಷಾತ್ ಗುರುಗಳು ಅಥವಾ ಗುರು ಸಮಾನರು.
ಅದು ನಿಜವೇ ಅಲ್ಲವೇ? ನನ್ನ ವಾದಕ್ಕೆ ನಾನು ಪವಿತ್ರ ಬೈಬಲ್ ನ ಮೊರೆ ಹೋಗುವೆ. ಇಮ್ಯಾನುವೇಲ್ ಎಂಬ ಹೆಸರು ಮೊಟ್ಟಮೊದಲು ಶ್ರೀಗ್ರಂಥ ಬೈಬಲ್ಲಿನ ಹಳೆಯ ಒಡಂಬಡಿಕೆಯ ಪ್ರವಾದಿ ಯೆಶಾಯನ ಗ್ರಂಥದಲ್ಲಿ ದಾಖಲಾಗಿದೆ. ಇಸ್ರೇಲರ ನಡುವೆ ಒಗ್ಗಟ್ಟು ಇಲ್ಲದ ಸಂದರ್ಭದಲ್ಲಿ ಬರುವ, ಪ್ರವಾದಿ ಯೆಶಾಯನ ಗ್ರಂಥದ ಏಳನೇ ಅಧ್ಯಾಯದ ೧೪ನೇ ಚರಣ ಹೀಗಿದೆ: ಆಗಲಿ ಸರ್ವೇಶ್ವರ ನಿಮಗೊಂದು ಗುರುತನ್ನು ಕೊಡುವರು. ಇಗೋ ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು. ಇಮ್ಯಾನುವೇಲ್ ಎಂದು ಆತನಿಗೆ ಹೆಸರಿಡುವಳು.
ಆ ದೇವರ ಗುರುತು ದಾವಿದ ಅರಸನ ಮನೆಯನ್ನು ರಕ್ಷಿಸುವುದು ಎನ್ನುವುದು ಈ ಮಾತಿನ ತಿರುಳು.
ಅದೆ ಯೆಶಾಯನ ಗ್ರಂಥದ ಒಂಬತ್ತನೇ ಅಧ್ಯಾಯದ ಆರನೇ ಚರಣವು, `ಮಗುವೊಂದು ಹುಟ್ಟಿತೆಮಗೆ, ವರಪುತ್ರನನು ಕೊಟ್ಟರೆಮಗೆ. ಆತನ ಕೈಯಲ್ಲಿಹುದು ರಾಜ್ಯಾಡಳಿತ. ಅದ್ಭುತಶಾಲಿ, ಮಂತ್ರಿಶ್ರೇಷ್ಠ, ಶಾಂತಿ ನೃಪ- ಇವು ಆತನ ನಾಮಾಂಕಿತ’ ಎನ್ನುತ್ತದೆ. ನಂತರದ ಏಳನೇ ಚರಣದ ಎರಡು ಸಾಲುಗಳು ಹೀಗಿವೆ: ಅಂತ್ಯವಿರದಾತನ ರಾಜ್ಯಾಭಿವೃದ್ಧಿಗೆ ಕೊನೆಯಿರದಾ ರಾಜ್ಯದ ಶಾಂತಿಗೆ. ಆಸೀನನಾಗಿರುವನಾತ ದಾವಿದನ ಸಿಂಹಾಸನದ ಮೇಲೆ, ಅಧಿಕಾರ ನಡೆಸುವನು ಆ ಸಮ್ರಾಜ್ಯದ ಮೇಲೆ. ಬಲಪಡಿಸುವನು ನ್ಯಾಯನೀತಿಯಿಂದದನು. ಇಂದಿಗೂ ಎಂದೆಂದಿಗೂ ಸ್ಥಿರಪಡಿಸುವನದನು.’
ಅದಕ್ಕೂ ಮೊದಲಿನ ಯೆಶಾಯನ ಗ್ರಂಥದ ಏಳನೇ ಅಧ್ಯಾಯದ ೧೪ನೇ ಚರಣದ ಮಾಹಿತಿ ಹೀಗಿದೆ: ಆಗಲಿ ಸರ್ವೇಶ್ವರ ನಿಮಗೊಂದು ಗುರುತನ್ನು ಕೊಡುವರು. ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು. ಇಮ್ಯಾನುವೇಲ್ ಎಂದು ಆತನಿಗೆ ಹೆಸರಿಡುವಳು.
ಈ ಮಾಹಿತಿಯೇ, ಹೊಸ ಒಡಂಬಡಿಕೆಯಲ್ಲಿನ ಸಂತ ಮತ್ತಾಯನ ಶುಭ ಸಂದೇಶದ ಮೊದಲನೇ ಅಧ್ಯಾಯದ ಇಪ್ಪತ್ತೆರಡನೇ ಚರಣದಲ್ಲಿ ಪ್ರಸ್ತಾಪಿಸಲಾಗಿದೆ. ಇಪ್ಪತ್ತಮೂರನೇ ಚರಣದಲ್ಲಿ, `ಇಮ್ಯಾನುವೇಲ್ ಎಂದರೆ ದೇವರು ನಮ್ಮೊಡನೆ ಇದ್ದಾರೆ ಎಂದು ಅರ್ಥ’ ಎಂದು ಸ್ಪಷ್ಟ ಪಡಿಸಲಾಗಿದೆ.
ನನ್ನ ಗೆಳೆಯರಲ್ಲಿ ಕೆಲವರು ಪ್ರಾಟೆಸ್ಟಂಟ್ ಪಂಥದ ಕ್ರೈಸ್ತ ಪಂಗಡಕ್ಕೆ ಸೇರಿದವರು. ಅವರು ನನ್ನಜ್ಜನ ಹೆಸರಿನ ಬಗ್ಗೆ ಕೀಟಲೇ ಮಾಡಿದಾಗ ನಾನು ನಮ್ಮಜ್ಜನ ಹೆಸರಿನ ಕುರಿತು ಅಧ್ಯಯನ ನಡೆಸಿದೆ. ಆಗ ನನಗೆ ಗೊತ್ತಾದದ್ದು, ಮ್ಯಾನುವೇಲ್ ಹೆಸರಿಗೂ ಮೂಲ, ಹಿಬ್ರೂವಿನ ಇಮ್ಯಾನುವೇಲ್ ಎಂದರೆ ದೇವರು ನಮ್ಮೊಡನಿದ್ದಾರೆ. ಈ ಹೆಸರು ಬೈಜೆಂಟೈನ್ ಸಾಮ್ರಾಜ್ಯದ ಅವಧಿಯಲ್ಲಿ ಸಾಕಷ್ಟು ಪ್ರಚಾರದಲ್ಲಿದ್ದ ಹೆಸರು. ಆನಂತರ, ಈ ಹೆಸರು ಈ ಸಾಮ್ರಾಜ್ಯದ ಕಾರಣವಾಗಿ, ಮುಂದೆ ೧೩ ನೇ ಶತಮಾನದಿಂದೀಚೆಗೆ ಸ್ಪೇನ್ ಮತ್ತು ಪೋರ್ಚುಗಲ್ ನಲ್ಲಿ ಬಳಕೆಗೆ ಬಂದಿದೆ. ಅದು ಕ್ರಮೇಣ ಸ್ಪೇನ್, ಜರ್ಮನಿ, ಫ್ರೆಂಚ್, ರೋಮಾನಿಯ, ಗ್ರೀಸ್, ಡಚ್ ಮತ್ತು ಪೋಲಂಡ ದೇಶಗಳ ಜನರಲ್ಲೂ ಜನಪ್ರಿಯ ಹೆಸರಾಯಿತಂತೆ.
ಪೋರ್ಚುಗಲ್ ಮತ್ತು ಸ್ಪೇನಿನ ಅರಸರು ಮ್ಯಾನುವೇಲ್ ಎಂಬ ಹೆಸರನ್ನು ಇಟ್ಟುಕೊಳ್ಳತೊಡಗಿದಾಗ, ಈ ಹೆಸರು ಮತ್ತಷ್ಟು ಪ್ರಚಾರಕ್ಕೆ ಬಂದಿತು. ಹದಿನೇಳನೇ ಶತಮಾನದಲ್ಲಿ ನಮ್ಮೂರಿಗೆ ಬಂದವರು ಸ್ಪೇನ್ ಮತ್ತು ಫ್ರೆಂಚ್ ಮೂಲದ ಪಾದ್ರಿಗಳು. ನಮ್ಮಜ್ಜನ ಅಜ್ಜನ ಮುತ್ತಜ್ಜನ ಹೆಸರು ಮುನಿವೇಲು, ಅದು ಕ್ರೈಸ್ತ ಬಟ್ಟೆ ತೊಟ್ಟು ಮ್ಯಾನುವೇಲ್ ಆಗಿದ್ದಿರಬಹುದು. ಇದು ನನ್ನ ಪುಟಾಣಿ ಸಂಶೋಧನೆ.
ಒಂದು ದಿನ ಸಂಜೆ ಬಿಸಿಲಲ್ಲಿ ಕೆಲವರನ್ನು ಕರೆದುಕೊಂಡು ನಮ್ಮ ದೊಡ್ಡಪ್ಪ ಸಮೀಪದ ಊರಿಗೆ ಹೋಗಿದ್ದರು. ಜೊತೆಗೆ ಗುಡಿಯ ಉಪದೇಶಿ ಚಿನ್ನಪ್ಪನೂ ಅವರೊಂದಿಗೆ ಹೋಗಿದ್ದ. ಅಡುಗೆಯ ಆಳು ಅನ್ನಮ್ಮ ಸಂಜೆ ಏಳು ಗಂಟೆಯ ಸುಮಾರು ಬರುವವಳಿದ್ದಳು. ಕಾಕತಾಳೀಯ ಅಂದ್ರೆ ನಮ್ಮ ಅಜ್ಜಿಯ ಹೆಸರೂ ಅನ್ನಮ್ಮ ಎಂದಿತ್ತು. ಒಬ್ಬನೇ ಬೇಸರವಾಗಿತ್ತು. ಇರ್ವಿಂಗ್ ವ್ಯಾಲೇಸರ `ದಿ ವರ್ಡ’ ಕಾದಂಬರಿ ಹಿಡಿದುಕೊಂಡು ಹಾಗೇಯೇ ದೊಡ್ಡಪ್ಪನ ಖಾಸಾ ರೂಮಿಗೆ ಹೋದೆ. ಅದಕ್ಕೆ ಬೀಗ ಹಾಕಿರಲಿಲ್ಲ. ನಾನು ಇದುವರೆಗೂ, ಏನಿದ್ದರೂ, ಪೀಠ, ಪೀಠದ ಹಿಂದಿನ ಕೋಣೆಯನ್ನಷ್ಟೇ ನೋಡಿದ್ದೆ.
ಗುರುಗಳ ಕಚೇರಿ ಪ್ಯಾರಿಷ್ -ಆಫಿಸ್ ವರೆಗೆ ಮಾತ್ರ ನಮಗೆ ಪೀಠ ಬಾಲಕರಿಗೆ ಪ್ರವೇಶವಿತ್ತು. ಪೀಠ ಬಾಲಕನಾಗಿದ್ದಾಗ ಕೆಲವೊಮ್ಮೆ ಗುರುಗಳ ಮತ್ತು ಉಪದೇಶಿಗಳ ಕಣ್ಣು ತಪ್ಪಿಸಿ ಬಾಟಲಿಯಲ್ಲಿನ ದ್ರಾಕ್ಷಾರಸದ ಸ್ವಲ್ಪ ರುಚಿ ನೋಡಿದ್ದೂ ಇದೆ. ಗುರುಗಳ ಖಾಸಗಿ ಕೋಣೆಗೆ ಉಪದೇಶಿಯೂ ಹೋಗುತ್ತಿರಲಿಲ್ಲ. ಏನಿದ್ದರೂ ವರ್ಗವಾದ ಹಳೆಯ ಗುರುಗಳು ಹೋಗುವ ಮತ್ತು ಹೊಸ ಗುರುಗಳು ಬಂದಾಗ ಮಾತ್ರ ಅದಕ್ಕೆ ಪ್ರವೇಶ.
ನಮ್ಮ ಫಾದರ್ ದೊಡ್ಡಪ್ಪನ ಖಾಸಗಿ ಕೋಣೆಯಲ್ಲಿ ಒಂದು ಕಡೆ ಮಂಚ ಹಾಕಿದ್ದರು. ಅದರ ಪಕ್ಕದಲ್ಲಿ ಓದುವ ಟೇಬಲ್ ಇತ್ತು. ಒಂದು ಕಡೆ ವಿದೇಶಿ ಮಾದರಿಯ ಕಕ್ಕಸು ಕೋಣೆ ಇತ್ತು. ಒಂದು ಗೋಡೆಗೆ ಕಪಾಟುಗಳನ್ನು ಇರಿಸಿದ್ದರು. ಒಂದು ಕಪಾಟನ್ನು ಬಾಗಿಲಿನಿಂದ ಮುಚ್ಚಲಾಗಿತ್ತು. ಬಹುಶಃ ದೊಡ್ಡಪ್ಪನ ಬಟ್ಟೆಬರೆಗಳು ಇದ್ದಿರಬಹುದು. ಉಳಿದ ಕಪಾಟುಗಳಿಗೆ ಗಾಜಿನ ಕಿಡಕಿಯ ಬಾಗಿಲುಗಳಿದ್ದವು. ಒಳಗಿನ ಪುಸ್ತಕಗಳು ಕಾಣಿಸುತ್ತಿದ್ದವು. ಆ ಬಾಗಿಲುಗಳಿಗೆ ಬೀಗ ಹಾಕಿರಲಿಲ್ಲ. ಕುತೂಹಲದಿಂದ ನಾನು ಒಂದೆರಡು ಕಪಾಟಿನ ಬಾಗಿಲುಗಳನ್ನು ತೆಗೆದು ಒಂದೊಂದೆ ಪುಸ್ತಕಗಳ ಮುಖಪುಟಗಳ ಮೇಲೆ ಕಣ್ಣಾಡಿಸುತ್ತಿದ್ದೆ.
ಕೇವಲ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪುಸ್ತಕಗಳು ಅಲ್ಲಿರಬಹುದು ಎಂದು ಕೊಂಡಿದ್ದೆ. ಮೊದಲು ಗಮನಿಸಿದ್ದು ನಾಲ್ಕಾರು ಬಗೆಯ ಬೈಬಲ್ ಗಳನ್ನು. ನಂತರ ಬೌದ್ಧ, ಜೈನ್ ಮತ್ತು ಹಿಂದೂ ಧರ್ಮದ ಕುರಿತ ಪುಸ್ತಕಗಳು ಕಣ್ಣಿಗೆ ಬಿದ್ದವು. ಶತಮಾನಗಳ ಹಿಂದೆ ಬೆಂಗಳೂರಿಗೆ ಪ್ಲೇಗ್ ಬಂದಾಗ ಅದಕ್ಕೆ ಲಸಿಕೆ ತಂದಿದ್ದ ಖ್ಯಾತ ಫ್ರೆಂಚ್ ಗುರು ಅಬ್ಬೆ ದ್ಯುಬುವಾ ಅವರ ಹಿಂದೂ ಮ್ಯಾರ್ಸ್ ಆಂಡ್ ಕಸ್ಟಮ್’್ಸ ಪುಸ್ತಕ ಸಿಕ್ಕಿತು. ಸುರಪುರ್ ಸಂಸ್ಥಾನದಲ್ಲಿದ್ದ ಬ್ರಿಟಿಷ್ ಆಡಳಿತಗಾರ ಮೆಡೋಸ್ ಟೈಲರ್ ನ
ದಿ ಸ್ಟೋರಿ ಆಫ್ ಮೈ ಲೈಫ್’ ಕಂಡಿತು. ಅದರಲ್ಲಿ ಆತ, ಕ್ರಿಸ್ತ ಶಕ ೧೫೦೧ರಲ್ಲಿ ರಾಯಚೂರಿನ ಮುದಗಲ್ಲಿನಲ್ಲಿ ಮತ್ತು ಗುಲ್ಬರ್ಗದ ಚಿತ್ತಾಪುರ ಊರುಗಳಲ್ಲಿ ಚರ್ಚುಗಳಿದ್ದವು, ಕ್ರೈಸ್ತರಿದ್ದರು ಎಂದು ದಾಖಲಿಸಿದ್ದಾನೆ ಎಂದು ಎಲ್ಲೋ ಓದಿದ ನೆನಪು.
ಹಾಗೇಯೇ ಕಪಾಟಿನ ಇನ್ನೊಂದು ಪುಸ್ತಕ ಕೈಯಲ್ಲಿ ಹಿಡಿಯಬೇಕು ಎಂದುಕೊಳ್ಳುವಷ್ಟರಲ್ಲಿ ಅದು ಕೆಳಗೆ ಬಿದ್ದಿತು. ಅದನ್ನು ಎತ್ತಿಕೊಂಡೆ, ಅಷ್ಟರಲ್ಲಿ, ದೊಡ್ಡಪ್ಪ ಮತ್ತು ಉಪದೇಶಿ ಚಿನ್ನಪ್ಪ ಅವರು ಹೊರಗೆ ಬಂದಿರುವಹೆಜ್ಜೆ ಸಪ್ಪಳ ಕೇಳಿಸಿತು.
ಆ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡೆ ಹೊರಗೆ ಬಂದಿದ್ದೆ. ನನಗೆ ಅರಿವಿಲ್ಲದೇ ಅದರಲ್ಲಿನ ಒಂದು ಹಾಳೆ ಕೆಳಗೆ ಬಿದ್ದಿತ್ತು. ದೊಡ್ಟಪ್ಪ ಅವರ ಕೋಣೆಗೆ ಹೋಗಿದ್ದರಿಂದ ಎಲ್ಲಿ ಬೈಯುತ್ತಾರೋ ಎಂಬ ಅಳುಕು ಕಾಡುತ್ತಿತ್ತು. ಉಪದೇಶಿ ಚಿನ್ನಪ್ಪನ ಮುಖ ಭಾವವೂ ಅದನ್ನೇ ವ್ಯಕ್ತಪಡಿಸುತ್ತಿತ್ತು.
“ಚಿನ್ನಪ್ಪ ನೀನು ಹೊರಡು. ಜಮೀನಿನ ಬಗ್ಗೆ ಮೇತ್ರಾಣಿಗಳೊಂದಿಗೆ ಮಾತನಾಡಿ ನೋಡುತ್ತೇನೆ. ನೀನೀಗ ಹೊರಡು’’ ಎನ್ನುತ್ತಾ, ದೊಡ್ಡಪ್ಪ ನನ್ನ ಕಡೆ ನೋಡಿದರು.
“ಏನೋ ಚಿನ್ನು, ನಿನ್ನ ಕೈಯಲ್ಲಿರುವ ಪುಸ್ತಕ?’’
“ನೋಡಿಲ್ಲ ದೊಡ್ಡಪ್ಪ.’’
“ಏನು ಮಾಡೂದು ನಿಮ್ಮಂಥ ಹುಡುಗರ ಕೈಗಳಲ್ಲಿ, ಸೊಂಟದ ಕೆಳಗಿನ ಮಾತುಗಳ ಹೆರಾಲ್ಡ್ ರಾಬಿನ್, ಇರ್ವಿಂಗ್ ವ್ಯಾಲೇಸ್ ಅವರ ಪುಸ್ತಕಗಳು ಹರಿದಾಡುತ್ತಿವೆ. ಅದು ಬೇಸರವಾದರೆ, ಪರ್ರಿ ಮಿಷನ್, ಷರ್ಲಾಕ್ ಹೋಮ್ಸ್ ಇಲ್ಲವೇ ಅಗಾಥಾ ಕ್ರಿಸ್ಟಿ ಅವರ ಪುಸ್ತಕಗಳು ಇರುತ್ತವೆ.. ಈಗ ನಿಮ್ಮ ಕೈಯಲ್ಲಿ ಮೊಬೈಲ್, ಲ್ಯಾಪ್ ಟಾಪ್, ಇಂಟರ್ ನೆಟ್ ಕಾಲದಲ್ಲೂ ಅಂಥ ಪುಸ್ತಕಗಳಿಗೆ ಬರವಿಲ್ಲ.’’
“ಇಲ್ಲ ದೊಡ್ಡಪ್ಪ, ಅವು ನಾನು ಕೊಂಡುತಂದ ಪುಸ್ತಕಗಳಲ್ಲ. ಅವು ನನ್ನವಲ್ಲ. ನನ್ನ ಗೆಳೆಯರಿಗೆ ಸೇರಿದ್ದು.’’
`ಸರಿ ಬಿಡಪ್ಪ, ಕುವೆಂಪು, ಪಂಜೆ, ಮಂಗೇಶರಾಯರು, ವರಕವಿ ಪಂಪ, ಶೇಕ್ಸಪೀಯರ್, ವರ್ಡ್ಸವರ್ತ, ಬರ್ನಾಡ್ ಶಾ ಮೊದಲಾದ ಸಾಹಿತಿಗಳು ಕೇವಲ ಪಠ್ಯಕ್ಕಷ್ಟೇ ಸೀಮಿತಗೊಂಡಿದ್ದಾರೆ. ನೋಡು ನನ್ನ ಕಪಾಟಿನಲ್ಲಿ ಇಂಗ್ಲಿಷ್
ನಾವೆಲ್’ ಸಾಹಿತ್ಯ ಪ್ರಕಾರಕ್ಕೆ ಸ್ಥಳೀಯವಾದ ಪರ್ಯಾಯ ಪದವಾಗಿ ಕಾದಂಬರಿ’ಯನ್ನು ಕೊಡಮಾಡಿದ, ಭಾರತದ ಸಂಸ್ಕೃತ ಸಾಹಿತಿ ಬಾಣನ
ಕಾದಂಬರಿ’ಯನ್ನು ಹೋಲುವ ಎಚ್ ರೈಡರ್ ಹೆಗಾರ್ಡ್ಸ ಅವರ ಶೀ’ ಕಾದಂಬರಿ, ಇಂದಿಗೂ ಪ್ರಸ್ತುತವೆನಿಸುವ ರಾಜಕೀಯ ವಿಡಂಬನೆಯ ಜಾರ್ಜ ಆರ್ವೆಲ್ ಅವರ
ಎನಿಮಲ್ ಫಾರ್ಮ’ ಮೊದಲಾದ ಪುಸ್ತಕಗಳಿವೆ. ಒಂದು ಸಾರಿ ಕಣ್ಣು ಹಾಯಿಸು’’.
“ಸರಿ ದೊಡ್ಡಪ್ಪ.’’
“ಅದೇನು ನಿನ್ನ ಕೈಯಲ್ಲಿರುವ ಪುಸ್ತಕ? ಮುಖ ಪುಟ ತೋರಿಸು.’’
“ನೋಡು ದೊಡ್ಡಪ್ಪ’’. ಪುಸ್ತಕ ತೋರಿಸಿದೆ.
`ಹಾಂ ಅದು, ಹರ್ಮನ್ ಹಿಸ್ಸೆ ಅವರ
ಸಿದ್ಧಾರ್ಥ’ ಕಾದಂಬರಿ.’’ ಮತ್ತೆ ಕೆಳಗೆ ಬಿದ್ದ ಆ ಕಾಗದದ ತುಣುಕು ಎತ್ತಿಕೊಡು. ‘’ಅದು ಬದುಕಿನ ತತ್ವಜ್ಞಾನದ ಪಠ್ಯ.’’
`ಆ ಕಾಗದದ ತುಣುಕನ್ನು ಎತ್ತಿಕೊಡುತ್ತಾ ಅದರಲ್ಲಿನ ಬರಹವನ್ನು ಓದಿದೆ. ಅದರಲ್ಲಿ,
ಐ ಕ್ಯಾನ್ ಥಿಂಕ್, ಐ ಕ್ಯಾನ್ ವೇಟ್, ಐ ಕ್ಯಾನ್ ಫಾಸ್ಟ್’’ ಎಂದು ಬರೆದಿತ್ತು.
“ಅದೇನು ಚಿಕ್ಕಪ್ಪ ಬದುಕಿನ ತತ್ವಜ್ಞಾನದ ಪಠ್ಯ ಅಂದ್ರೆ?’’
`ಅದು ಬದುಕಿನ ಅರ್ಥ ತಿಳಿಸಿದ ಜೀವ. ಕಳೆದ ಶತಮಾನದ ೧೯೭೯ರ ಸಾಲಿನಲ್ಲಿ ಬೆಂಗಳೂರಿಗೆ ಹರ್ಮನ್ ಹಿಸ್ಸೆ ಅವರ
ಸಿದ್ಧಾರ್ಥ’ ಸಿನಿಮಾ ಬಂದಿತ್ತು. ಬೆಂಗಳೂರಿನ ಬ್ರಿಗೇಡ್ ರಸ್ತೆಯ ಕೊನೆಯಲ್ಲಿ `ರೆಕ್ಸ್’ ಸಿನಿಮಾ ಥಿಯೇಟರ್ ಇತ್ತು. ಅಲ್ಲಿ ಬರಿಯ ಇಂಗ್ಲಿಷ್ ಭಾಷೆಯ ಚಲನಚಿತ್ರಗಳನ್ನೇ ಹಾಕುತ್ತಿದ್ದರು. ಸೆಮಿನರಿಯಲ್ಲಿ ಎರಡನೇ ವರ್ಷದಲ್ಲಿ ಇದ್ದಾಗ ನಾವೊಂದಿಷ್ಟು ಹುಡುಗರು ನಮ್ಮ ಪಾಠಮಾಡುವ ಗುರುಗಳಿಗೆ ಗೊತ್ತಾಗದಂತೆ ಆ ಸಿನೆಮಾ ನೋಡಿಕೊಂಡು ಬಂದಿದ್ದೆವು. ಆ ಸಿನಿಮಾದಲ್ಲಿ ನಮ್ಮೂರಲ್ಲಿ ಕೆಲಸಗಾರರು ಕುಡಿಯಲು ನೀರು ಕೇಳಿದಾಗ, ನಾವು ಬೊಗಸೆಯಲ್ಲಿ ನೀರು ಸುರಿದಂತೆ ಸಿದ್ಧಾರ್ಥ ನೀರು ಕೇಳಿದಾಗ ಅವನ ಬೊಗಸೆಗೆ ಚಿತ್ರದ ನಾಯಕಿ ನೀರು ಸುರಿಯುತ್ತಾಳೆ. ಅವಳನ್ನೇ ನೋಡುತ್ತಿದ್ದ ಅವನ ಬೋಗಸೆಯಲ್ಲಿನ ನೀರು ಉಕ್ಕಿ ಹರಿದು ಅವನ ಎದೆಯನ್ನು ತೋಯಿಸುತ್ತದೆ.
ಸಾಹಿತಿ ಹರ್ಮನ್ ಹಿಸ್ಸೆ ಅವರ ಕಾದಂಬರಿ ಆಧರಿಸಿ ಇಂಗ್ಲಿಷ್ ಭಾಷೆಯಲ್ಲಿ ಸಿದ್ಧಪಡಿಸಿದ ಸಿದ್ಧಾರ್ಥ’ ಸಿನಿಮಾದಲ್ಲಿ, ಹಿಂದಿ ಸಿನಿಮಾ ಕ್ಷೇತ್ರ ಮುಂಬೈಯಿಯ ಬಾಲಿವುಡ್ ನ ನಟಿ ಸಿಮ್ಮಿ ಗಾರೆವಾಲ ಮತ್ತು ನಟ ಶಶಿಕುಮಾರ್ ಅವರು ಭಾಗವಹಿಸಿದ್ದರು. ಸಿನಿಮಾದಲ್ಲಿ ಯುವ ಬೌದ್ಧ ಸನ್ಯಾಸಿ ಸಿದ್ಧಾರ್ಥನನ್ನು ವರ್ತಕ ಕಾಮಸ್ವಾಮಿ,
ನೀನು ಏನೆಲ್ಲಾ ಕಲ್ತಿದ್ದೀಯಾ?’ ಎಂದಾಗ, ಆತ ನಾನು ಯೋಚನೆ ಮಾಡುವುದನ್ನು, ಕಾಯುವುದನ್ನು ಮತ್ತು ಉಪವಾಸ ಇರುವುದನ್ನು ಕಲಿತಿದ್ದೇನೆ’ ಎನ್ನುತ್ತಾನೆ. ಆದರೆ, ಕನ್ನಡ ಮಾಧ್ಯಮದಲ್ಲಿ ಓದಿ ಬಂದಿದ್ದ ನಮಗೆ ಇಂಗ್ಲಿಷ್ ಸಂಭಾಷಣೆ,
ಐ ಕ್ಯಾನ್ ಥಿಂಕ್, ಐ ಕ್ಯಾನ್ ವೇಟ್, ಐ ಕ್ಯಾನ್ ಫಾಸ್ಟ್’ ಸೊಂಟದ ಕೆಳಗಿನ ಮಾತುಗಳಂತೆ ಕೇಳಿಸಿದ್ದವು. ವರ್ತಕ ಮತ್ತೆ ಅದೇ ಎಲ್ಲವೂನಾ? ಎಂದು ಕೇಳಿದಾಗ ಸಿದ್ಧಾರ್ಥ
ಹೌದು, ಅದು ಎಲ್ಲವನ್ನೂ ಒಳಗೊಂಡಿದೆ’ ಎನ್ನುತ್ತಾನೆ.
ನಾವು ಕದ್ದುಮುಚ್ಚಿ `ಸಿದ್ಧಾರ್ಥ’ ಸಿನಿಮಾ ನೋಡಿಬಂದ ವಿಷಯ ತಿಳಿದ, ನಮಗೆ ತತ್ವಜ್ಞಾನದ ಪಾಠ ಮಾಡುತ್ತಿದ್ದ ಗುರುಗಳಾದ ಸ್ವಾಮಿ ಅಂತಪ್ಪ ಅವರು ನಮ್ಮ ಕೋಣೆಗೆ ಬಂದಾಗ, ನಮ್ಮ ಕೈಕಾಲುಗಳಲ್ಲಿ ಶಕ್ತಿ ಉಡುಗಿದಂತಾಗಿತ್ತು. ಅವರು ಅದೇ ವರ್ಷ ಇಟಲಿಯ ಗ್ರೆಗೋರಿಯನ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮಾಡಿ ಡಾಕ್ಟರೇಟ್ ಪದವಿ ಪಡೆದು ಬಂದಿದ್ದರು. ಆ ಸಿನಿಮಾದ ಸಾರವೇ ಆ ಸಂಭಾಷಣೆ ಎನ್ನುವಂತೆ, ಅವರು ಅದರ ಅರ್ಥವನ್ನು ವಿವರಿಸಿದಾಗಲೇ ನಮಗೆ ಜ್ಞಾನೋದಯ ಆಗಿದ್ದು. ಆಗ, ನಿನ್ನಂತೆಯ ನಮ್ಮದು ಹುಡುಗು ಬುಧ್ದಿ.
ಯೋಚನೆ ಅನ್ನುವುದು ಉಳಿದ ಪ್ರಾಣಿಗಳಿಂದ ಮಾನವನನ್ನು ಬೇರ್ಪಡಿಸುತ್ತದೆ. ವೈಚಾರಿಕತೆಗೆ ಒಂದು ಉದ್ದೇಶವಿರುತ್ತದೆ. ಗಮನಿಸುವುದು, ಕೊನೆ ಮುಟ್ಟುವುದು ಮತ್ತು ಕರ್ಯೋನ್ಮುಖ ಆಗುವುದು.
ಕಾಯುವುದು ಅಂದರೆ ಬಹುಮಾನಕ್ಕೆ ಬರಿ ಕಾಯುವುದಲ್ಲ, ಕೆಟ್ಟ ಪರಿಸ್ಥಿತಿಯಲ್ಲೂ ಸಾವಧಾನವಾಗಿ ಇರುವುದು. ಪೂರಕವಾಗಿ ಅವಕಾಶ ಬದಲಾಗುವುದರ ತನಕ ಕಾಯುವುದು ವಿಶ್ವಾಸವನ್ನು ರೂಢಿಸುತ್ತದೆ. ಶಾಂತಿ, ಸಮಾಧಾನ ಮೂಡಿಸುತ್ತದೆ ಮತ್ತು ಮನಸ್ಸನ್ನು ಸ್ವಸ್ಥವಾಗಿಸುತ್ತದೆ.
ಉಪವಾಸ ಇರುವ ಸಾಮರ್ಥ್ಯವು, ಜಗತ್ತಿನಲ್ಲಿ ಎಲ್ಲದಕ್ಕೂ ಅನಿವಾರ್ಯ ಆಗಿರುವ ಹಣದಿಂದ ಮುಕ್ತಿ ಕೊಡುತ್ತದೆ. ಎಲ್ಲಾರೂ ಮಾಡುವುದು ಗೇಣು ಹೊಟ್ಟೆಗಾಗಿ, ಗೇಣು ಬಟ್ಡೆಗಾಗಿ. ಹಸಿವು ಏನೆಲ್ಲಾ ಮಾಡಿಸುತ್ತದೆ. ಹಸಿವನ್ನು ಗೆದ್ದಾಗ, ಯಾವ ಒತ್ತಡಗಳು ಅಂಥವರ ಮೇಲೆ ಪರಿಣಾಮ ಬೀರವು.’’
ದೊಡ್ಡಪ್ಪ ಮಾತು ನಿಲ್ಲಿಸುತ್ತಿದ್ದಂತೆಯೇ, ಅಡುಗೆ ಆಳು ಅನ್ನಮ್ಮ ಬಂದಳು. ನಮ್ಮಿಬ್ಬರ ಮಾತುಕತೆಗೆ ಕಡಿವಾಣ ಬಿದ್ದಿತು.
ಮರುದಿವಸ ಸಂಜೆ ಬಿಸಿಲಲ್ಲಿ ಗುಡಿಯ ಉಪದೇಶಿ ಚಿನ್ನಪ್ಪನ ಜೊತೆಗೆ ಹೊರಗೆ ಹೋಗಿದ್ದರು. ಮತ್ತೆ ನನ್ನದೇ ಸಾಮ್ರಾಜ್ಯ’ ಎನ್ನುತ್ತಾ ದೊಡ್ಡಪ್ಪನ ಖಾಸಾ ಕೋಣೆಗೆ ಲಗ್ಗೆ ಇಟ್ಟು ಒಂದೊಂದೆ ಪುಸ್ತಕ ನೋಡತೊಡಗಿದ್ದೆ. ದೊಡ್ಡಪ್ಪ ಪರವಾನಿಗೆ ಕೊಟ್ಟಾಗಿತ್ತು. ಪುಸ್ತಕದ ಕಪಾಟಿನಲ್ಲಿ ನನಗೆ ಕಳೆದ ಶತಮಾನದ ೧೯೬೯ರ ಡೈರಿ ಕಾಣಿಸಿತು. ನೀಲಿ ಬಣ್ಣದ ದಪ್ಪ ರಟ್ಟಿನ ಆ ಡೈರಿಯಲ್ಲಿ, ಮೊದಲನೇ ಪುಟದಿಂದ ಕೊನೆಯ ಪುಟದವರೆಗೆ ನನ್ನ ಕೆಲವು ಸ್ನೇಹಿತರ ಅಜ್ಜಿಯಂದಿರು ನೋಟು ಬುಕ್ ಪುಟಗಳ ತುಂಬಾ ರಾಮ ರಾಮ ಎಂದು ಬರೆದಂತೆ,
ಬೊಗಸೇ ಬಾರ್ನಾರ್ಡ, ಬೊಗಸೇ ಬರ್ನಾರ್ಡ’ ಎಂದು ಬರೆಯಲಾಗಿತ್ತು. ಕಟ್ಟ ಕಡೆಯ ಪುಟದಲ್ಲಿ, ಬರ್ನಾಲ್- ಕರಡಿಯಷ್ಟು ಬಲಶಾಲಿ. ಬೆರ್ನಾಲ್ಡ್, ಬರ್ನಾರ್ಡ – ಕರಡಿಯಷ್ಟು ಧೈರ್ಯವಂತ ಮತ್ತು ಬೆರ್ಲಿನ್ – ವೈನ್ ತುಂಬಿ ಕೊಡುವವ ಎಂದು ಬರೆಯಲಾಗಿತ್ತು. ಆ ಅಕ್ಷರಗಳು ಬಹಳ ಮುದ್ದಾಗಿದ್ದವು. ಯಾರೋ ಹಿರಿಯ ಗುರುಗಳು ಬರೆದಂತಿತ್ತು. ಆದರೆ, `ಬೊಗಸೆ ಬರ್ನಾರ್ಡ’ ಯಾರೋ ಮಕ್ಕಳು ಬಿಟ್ಟಿ ಬೇಸರಿಕೆಯಿಂದ ಬರೆದಂತಿತ್ತು.
ಉಪದೇಶಿ ಚಿನ್ನಪ್ಪನೊಂದಿಗೆ ದೊಡ್ಡಪ್ಪ ಹಿಂದಿರುಗಿ ಬರುವುದನ್ನೇ ಕಾಯುತ್ತಿದ್ದೆ ಚಿನ್ನಪ್ಪ, ದೊಡ್ಡಪ್ಪ ಬಂದರು. ಆಗಲೇ ಕತ್ತಲಾಗಿತ್ತು. ಅನ್ನಮ್ಮ ಬಂದು ಅಡಿಗೆ ಮಾಡುತ್ತಿದ್ದಳು. ಬೆಳಿಗ್ಗೆಯಷ್ಟೇ ಪೂಜೆ ಇರುವುದರಿಂದ ಅವರು ತಡವಾಗಿ ಬಂದಿದ್ದರಿಂದ ಯಾರಿಗೂ ತೊಂದರೆ ಇರಲಿಲ್ಲ. ಉಪದೇಶಿ ಚಿನ್ನಪ್ಪನ ಮುಖ ಅಗಲವಾಗಿತ್ತು. ದೊಡ್ಡಪ್ಪ ಉಪದೇಶಿ ಚಿನ್ನಪ್ಪನನ್ನು ಗುಡಿಯ ಆವರಣದ ಗೇಟಿನವರೆಗೆ ಕರೆದುಕೊಂಡು ಹೋಗಿ ಬಿಟ್ಟು ಬಂದರು. ದೊಡ್ಡಪ್ಪ ಬರುವವರೆಗೂ, ಆ ೧೯೬೯ರ ವರ್ಷದ ಜೀವ ವಿಮಾ ಕಂಪೆನಿಯ ಡೈರಿ ಹಿಡಿದುಕೊಂಡೆ ಇದ್ದೆ.
ಒಳಗೆ ಬಂದ ದೊಡ್ಡಪ್ಪ, ನನ್ನ ಕೈಯಲ್ಲಿನ ಡೈರಿ ಪುಸ್ತಕ ಕಂಡೊಡನೇ ಒಂದು ಬಗೆಯಲ್ಲಿ ನೋವಿನ ಮುಖ ಮಾಡಿದರು. ಒಂದು ಬಗೆಯ ಹೆದರಿಕೆಯಲ್ಲಿ ನಾನು `ಇದೇನು ದೊಡ್ಡಪ್ಪ?’ ಎಂದು ಕೇಳಬೇಕು ಎನ್ನುವ ಶಬ್ದಗಳು ನನ್ನ ಬಾಯಿಂದ ಹೊರಗೆ ಬರಲೇ ಇಲ್ಲ. ಆದರೆ, ದೊಡ್ಡಪ್ಪ ಅದನ್ನು ಗ್ರಹಿಸಿದಂತಿತ್ತು.
“ಚಿನ್ನು, ಆ ಡೈರಿಗೂ ಒಂದು ಕತೆ ಇದೆ. ಅನ್ನಮ್ಮ ಊಟ ಬಡಿಸಿ ಹೋಗಲಿ. ಊಟ ಮಾಡಿದ ಮೇಲೆ ನಿಧಾನವಾಗಿ ಅದನ್ನು ಹೇಳುವೆ’’ ಎಂದರು.
ಅಂದು ಪೂರ್ಣಿಮೆ. ಅಂಗಳದಲ್ಲಿ ಹೊರಗೆ ಹಾಲು ಚೆಲ್ಲಿದಂತೆ ಬೆಳದಿಂಗಳು ಹರಡಿತ್ತು. ಊಟವಾದ ಮೇಲೆ ದೊಡ್ಡಪ್ಪ ಹೊರಗೆ ಬಟ್ಟೆಯ ಆರಾಮ ಕುರ್ಚಿಯ ಮೇಲೆ ಕುಳಿತರೆ, ನಾನು ಒಂದು ಕಬ್ಬಿಣದ ಕುರ್ಚಿಯನ್ನು ಅವರ ಆರಾಮ ಕುರ್ಚಿಯ ಪಕ್ಕದಲ್ಲಿ ಹಾಕಿಕೊಂಡು ಕುಳಿತೆ.
`ನಮ್ಮ ಅಪ್ಪ, ಅಂದರೆ ನಿನ್ನ ಅಜ್ಜ ಮ್ಯಾನುವೇಲಪ್ಪ ನಮ್ಮೂರಿನ ಉಪದೇಶಿ ಆಗಿದ್ದು ನಿನಗೇ ಗೊತ್ತೇ ಇದೆ. ನೀಲಗಿರಿ ಸೀಮೆಯ ಗುರುಗಳು ಬರುವವರೆಗೂ ಅಪ್ಪನ ಕೆಲಸಕಾರ್ಯಗಳು ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದ್ದವು. ನೀಲಗಿರಿ ಸೀಮೆಯ ಹೊಸ ಸ್ವಾಮಿಗಳು ವಿಚಾರಣಾ ಗುರುಗಳಾಗಿ ಬಂದಾಗಲೇ ಅಪ್ಪನಿಗೆ ಕಿರಕಿರಿ ಆಗತೊಡಗಿತು, ಒಂದೊಂದೆ ಕಷ್ಟಗಳು ಬರತೊಡಗಿದವು. ರಾತ್ರಿ ಊಟವಾದ ನಂತರ ಸ್ವಾಮಿಗೆ ಬಟ್ಟಲಲ್ಲಿ ಮದ್ಯ ಬಸಿದುಕೊಡುವ ಹೊಸ ಕೆಲಸ ಅಪ್ಪನಿಗೆ ಅಂಟಿಕೊಂಡಿತು. ಅದೇ ಸಂದರ್ಭದಲ್ಲಿ ನಮ್ಮೂರಿನ ಗುಡಿಯ ವಿಚಾರಣಾ ಗುರು ಅದನ್ನು ಬರೆಸಿದ್ದು. ಆಗ ನಾನು ಏಳನೇ ತರಗತಿಯಲ್ಲಿದ್ದೆ. ನಮ್ಮಪ್ಪನನ್ನು ಕಂಡರೆ ಆ ಸ್ವಾಮಿಗೆ ಅಷ್ಟಕಷ್ಟೇ. ದಶಕಗಳ ಕಾಲ ಉಪದೇಶಿ ಆಗಿದ್ದರಿಂದ ಗುಡಿಗೆ ಬಂದವರೆಲ್ಲಾ ನಮ್ಮಪ್ಪನನ್ನೇ ಮೊದಲು ಮಾತನಾಡಿಸುತ್ತಿದ್ದರು. ಅವನನ್ನು ನೋಡಿ ಗುಡಿಯಲ್ಲಿ ನಡೆಯಬೇಕಾದ ತಮ್ಮ ಕೆಲಸಗಳನ್ನು ತಿಳಿದುಕೊಂಡು ಹೋಗುತ್ತಿದ್ದರು. ಜ್ಞಾನಸ್ನಾನದ ದಿನವನ್ನು ನಿಗದಿ ಮಾಡುವುದು, ಒಳ್ಳೆಯ ಹೆಸರುಗಳನ್ನು ಹುಡುಕಿ ಕೊಡುವುದು, ಮದುವೆ ದಿನಗಳನ್ನು ಗುರುತಿಸಿಕೊಡುವುದು ಮುಂತಾದವನ್ನು ನಮ್ಮಪ್ಪನೇ ಮಾಡುತ್ತಿದ್ದ. ಗುರುಗಳಿಗೆ ಸಮಯ ಇರುವುದಿಲ್ಲ ಎಂದುಕೊಂಡು ಅವನ್ನೆಲ್ಲಾ ತನ್ನ ಕೆಲಸ ಎಂದು ಕೊಂಡಿದ್ದನೋ ಏನೋ? ಜ್ಞಾನಸ್ವಾನದ, ಮದುವೆಯ ಪ್ರಮಾಣ ಪತ್ರಗಳನ್ನು ಸಿದ್ಧಪಡಿಸಿ ಅದಕ್ಕೆ ಸಹಿ ಮಾಡುವುದಕ್ಕಾಗಿ ಮಾತ್ರ ವಿಚಾರಣಾ ಗುರುಗಳ ಹತ್ತಿರ ಹೋಗುತ್ತಿದ್ದ. ಹಿಂದಿನ ಗುರುಗಳು ನಮ್ಮಪ್ಪನ ಕೆಲಸಗಳಲ್ಲಿ ಕೈ ಹಾಕಿದವರೇ ಅಲ್ಲ. ಇದೇಕೋ ಆ ಹೊಸ ಸ್ವಾಮಿಗೆ ಇದಾವುದು ಸರಿ ಕಾಣಲಿಲ್ಲ ಅನ್ನಿಸುತ್ತದೆ. ಒಂದು ದಿನ ಏಕಾಏಕಿ ನಮ್ಮಪ್ಪನನ್ನು, ಅವರು ಬರ್ನಾರ್ಡ್ ಎಂಬ ಅಡ್ಡ ಹೆಸರಿನಿಂದ ಕರೆಯತೊಡಗಿದರು. ನಾನು ಜ್ಞಾನೋಪದೇಶ ತರಗತಿಗೆ ಹೋದಾಗ, ನನ್ನನ್ನು ಕರೆದು ಆ ವರ್ಷದ ಜೀವ ವಿಮಾ ಕಂಪೆನಿಯ ಡೈರಿ ಕೊಟ್ಟು ಆ ಡೈರಿಯಲ್ಲಿ
ಬೊಗಸೇ ಬರ್ನಾರ್ಡ್’ ಎಂದು ಬರೆಯಿಸತೊಡಗಿದರು. ದಿನಕ್ಕಿಷ್ಟು ಪುಟ ಎಂದು ನಿಗದಿ ಕೂಡ ಮಾಡಿದ್ದರು.’’
ನಾನು ಅಪನಂಬಿಕೆಯಿಂದ ದೊಡ್ಡಪ್ಪನ ಮುಖ ನೋಡಿದೆ.
ಹೌದಪ್ಪಾ, ಹೌದು ನಾನೇ ಅವನ್ನೆಲ್ಲಾ ಬರೆದಿದ್ದು’’ ಎಂದು ದೊಡ್ಡಪ್ಪ, ತಮ್ಮ ಮಾತುಗಳನ್ನು ಮುಂದುವರೆಸಿದರು.
ನಾನು ಕುಳಿತುಕೊಳ್ಳಲು ಒಂದು ದುಂಡನೆಯ ಪುಟಾಣಿ ಸ್ಟೂಲ್ ಕೂಡ ಇರಿಸಿದ್ದರು. ತುಂಬಾ ಹಿಂದೆ ಪಾಪ ಮಾಡಿದವರಿಗೆ ಅಂಥ ಸ್ಟೂಲ್ (ಸ್ಟೂಲ್ ಆಫ್ ರಿಪೆಂಟನ್ಸ್) ಮೇಲೆ ಕೂರುವ ಶಿಕ್ಷೆ ಕೊಡುತ್ತಿದ್ದರಂತೆ. ಆ ಬಗೆಯ ಅರ್ಥ ಸೆಮಿನರಿಯನ್ನು ಸೇರಿ ಸುಮಾರು ವರ್ಷಗಳ ನಂತರ ನನಗೆ ಗೊತ್ತಾಯಿತು. ಕೆಲವೊಮ್ಮೆ ಶಾಲೆಯಲ್ಲಿನ ನನ್ನ ಸಹಪಾಠಿಗಳು, ನನ್ನನ್ನು ಬಿ ಸ್ಕೆ÷್ವಯರ್’ ಎಂದು ಛೇಡಿಸಿದಾಗಲೆಲ್ಲಾ ಬೇಸರವಾಗುತ್ತಿತ್ತು. ಆದರೆ, ಆ ಡೈರಿಯನ್ನು ಕಂಡಾಗಲೆಲ್ಲಾ ನಮ್ಮಪ್ಪನ ನೆನಪಾಗುತ್ತದೆ. ಕೊನೆಗೊಂದು ದಿನ ಆ ಸ್ವಾಮಿ, ನಮ್ಮಪ್ಪನನ್ನು ಗುಡಿಯ ಉಪದೇಶಿ ಕೆಲಸದಿಂದ ವಜಾ ಮಾಡಿದರು.
ನಿನಗೇ ಊರ ಜನ ಏನಾದರೂ ಕೊಡಬಹುದು ಎನ್ನುವುದಾದರೆ, ನೀನು ಮೂರು ಭಾನುವಾರ ಪಾಡುಪೂಜೆಯ ನಂತರ ಕೈಯೊಡ್ಡಿ, ಬೊಗಸೆಯನ್ನು ಮುಂದೆ ಮಾಡಿಕೊಂಡು ಬೇಡಿಕೋ’ ಎಂದು ಮುಖಕ್ಕೆ ಹೊಡೆದಂತೆ ಹೇಳಿದರು. ಅಷ್ಟಾದ ಮೇಲೆ, ‘ಗುಡಿಯ ಆವರಣದಲ್ಲಿನ ಉಪದೇಶಿ ಮನೆಯನ್ನು ತೊರೆದು ಹೋಗಬೇಕು’ ಎಂದು ಆದೇಶಿಸಿದರು’’.
ಇದನ್ನು ಹೇಳುವಾಗ ದೊಡ್ಡಪ್ಪನ ಕಣ್ಣುಗಳಲ್ಲಿ ನೀರು ತುಂಬಿ ಕೊಂಡಿರುವುದನ್ನು ನಾನು ಗಮನಿಸಿದೆ. ನನಗೂ ಹೊಟ್ಟೆಯಲ್ಲಿ ಏನೂ ತಳಮಳ. ಕಸಿವಿಸಿ. ಮನಸ್ಸು ಭಾರವಾದಂತಾಯಿತು.
“ನಮ್ಮಪ್ಪ ಉಪದೇಶಿ ಮ್ಯಾನುವೇಲಪ್ಪ ಮೂರು ಭಾನುವಾರ ಗುಡಿಯ ಬಾಗಿಲಲ್ಲಿ ಕೈ ಒಡ್ಡಿ ನಿಂತಿದ್ದರು. ಪಾಡುಪೂಜೆ ಮುಗಿಸಿ ಗುಡಿಯಿಂದ ಚರ್ಚಿನಿಂದ ಹೊರಗಡೆ ಬರುವವರು, ಒಬ್ಬೊಬ್ಬರೇ ಅಪ್ಪನ ಬೊಗಸೆಯಲ್ಲಿ ಬಿಡಿಗಾಸನ್ನು ಹಾಕುತ್ತಿದ್ದರು. ಅಕ್ಷರಶಃ ಅಪ್ಪ ಆ ಮೂರು ದಿನ, ಪ್ರಭು ಯೇಸುಸ್ವಾಮಿಯ ಕಾಲದಲ್ಲಿ ಫರಿಸಾಯರು ಮತ್ತು ಸದ್ದುಕಾಯರು ನಜರೇತಿನ ಮಹಾ ದೇವಾಲಯದ ಒಳಗೆ ಕುರಿ ಬಲಿಯೊಂದಿಗೆ ಆಡಂಬರದ ಪೂಜಾವಿಧಿಗಳಲ್ಲಿ ತೊಡಗಿದ್ದರೆ, ಹೊರಗೆ ಆ ಮಹಾ ದೇವಾಲಯದ ಎದುರು ಬಿಕ್ಷೆ ಬೇಡುವ ಬಿಕ್ಷÄಕರಂತೆ ಆಗಿದ್ದ.
ನೀಲಿ ಬಣ್ಣದ ಒಂದು ರೂಪಾಯಿ, ಕೆಂಪು ಬಣ್ಣದ ಎರಡು ರೂಪಾಯಿ, ಹಸಿರು ಬಣ್ಣದ ಐದು ರೂಪಾಯಿ ನೋಟುಗಳು ಬೊಗಸೆಯಲ್ಲಿ ಕೂಡಿದ್ದವು. ಕೆಲವರು ಒಂದು ರೂಪಾಯಿ, ಎಂಟಾಣೆ ನಾಣ್ಯಗಳನ್ನೂ ಹಾಕಿದ್ದರು. ಮೂರು ಭಾನುವಾರಗಳ ಬೊಗಸೆಯಲ್ಲಿ ಬಿದ್ದ ಹಣವನ್ನು ಒಟ್ಟುಗೂಡಿಸಿ ಲೆಕ್ಕ ಮಾಡಿದಾಗ, ಅದು ಸುಮಾರು ಮುನ್ನೂರಾಐವತ್ತು ರೂಪಾಯಿ. ಆ ಕಾಲಕ್ಕೆ ಅದು ದೊಡ್ಡ ರಕಮು. ಊರವರ ಮನಸ್ಸು ದೊಡ್ಡದು.
`ಗುಡಿಯ ಅಂಗಳದಲ್ಲಿನ ಮನೆ ಬಿಟ್ಟು ಹೋಗಬೇಕು ಎಂದರೆ ಅದು ಸಂತ ಜೋಸೆಫರು ಹೆಂಡತಿ ಮಗುವಿನೊಂದಿಗೆ ಇಜಿಪ್ತಿಗೆ ಪಲಾಯನ ಮಾಡಿದಂತೆ’ ಎಂದು ಅಪ್ಪ ಅಂದುಕೊಂಡಿದ್ದ. ಆದರೆ, ಪಾದ್ರಿ ಹೆರೋದನಲ್ಲ ನಮ್ಮಪ್ಪ ಜೋಸೆಫರೂ ಅಲ್ಲ. ನಮ್ಮಪ್ಪ ಒಂದು ಎತ್ತಿನ ಬಂಡಿಯ ಮೇಲೆ ಮನೆಯಲ್ಲಿದ್ದ ಸಾಮಾನುಗಳನ್ನು ಹೇರಿ, ಅಮ್ಮ, ನನ್ನನ್ನು ಮತ್ತು ನಿಮ್ಮಪ್ಪ ಸಿಮೋನಪ್ಪನನ್ನು ಕರೆದುಕೊಂಡು ಹೊರಟೇ ಬಿಟ್ಟರು. ಅಪ್ಪ ಎಲ್ಲಿಗೆ ಎಂದು ಬಂಡಿ ಚಿನ್ನರಾಯಪ್ಪನಿಗೆ ಹೇಳಿರಲಿಲ್ಲ.
“ಮಾನುವೇಲಪ್ಪ, ನಡಿ ನಿಮ್ಮನ್ನು ಬೆಂಗಳೂರಿಗೆ ಸೇರಿಸ್ತೀನಿ’’ ಎಂದು ಚಿನ್ನರಾಯಪ್ಪ ಬಂಡಿಯನ್ನು ಹೊಡೆದುಕೊಂಡು ಬಂದು ಯಶವಂತಪುರಕ್ಕೆ ಸೇರಿಸಿದರು. ಅಲ್ಲಿಯೇ ಬಂಡಿ ಓಡಿಸುತ್ತಿದ್ದವರ ಪರಿಚಯದಿಂದ ಬಾಡಿಗೆ ಮನೆಯೊಂದನ್ನು ಗೊತ್ತುಮಾಡಿಕೊಟ್ಟರು. ಅಪ್ಪ ಅಲ್ಲಿಯೇ ಒಂದು ದಲಾಲಿ ಅಂಗಡಿಯಲ್ಲಿ ಲೆಕ್ಕ ಬರೆಯಲು ಸೇರಿಕೊಂಡ. ಆ ಕೆಲಸ ಸಿಗುವವರೆಗೂ ನಾವೆಲ್ಲಾ ಉಪವಾಸವಿದ್ದು ಒಂದೇ ಹೊತ್ತು ಊಟ ಮಾಡಿದ್ದಿದೆ. ಕೆಲವು ದಿನ ಅಪ್ಪ ಯಶವಂತಪುರದ ಮಾರುಕಟ್ಡೆಯಲ್ಲಿ ಕೂಲಿ ಮಾಡಿದ್ದೂ ಇದೆ. ನಂಬಿರುವ ದೇವರು ಎಂದೂ ಕೈ ಬಿಡುವುದಿಲ್ಲ ಎನ್ನುತ್ತಿದ್ದ ಅಪ್ಪ. ಪರಿಸ್ಥಿತಿ ನಿಧಾನವಾಗಿ ಸರಿಹೋಯಿತು. ಗಟ್ಟಿಮುಟ್ಟಾಗಿದ್ದ ನಿಮ್ಮಪ್ಪ ಕೂಲಿ ಅಂದರೆ ಖಲಾಸಿ ಕೆಲಸ ಅರಸಿ ಯಶವಂತಪುರದ ಮೈಸೂರ್ ಲ್ಯಾಂಪ್ ಕಾರ್ಖಾನೆ ಸೇರಿದ್ದ. ಈಗ ಅದು ಇತಿಹಾಸದ ಪುಟಗಳನ್ನು ಸೇರಿದೆ. ಹಾಗೆಯೇ ಎಳೆಯ ವಯಸ್ಸಿನಲ್ಲಿ ಸೇರಿದ್ದರಿಂದ ಅವನಿಗೆ ಬಲು ಬೇಗ ಮೇಲಿನ ಹುದ್ದೆಗಳು ಸಿಕ್ಕವು. ನಾನು, ಅಪ್ಪನಂತೆಯೇ ಗುಡಿ- ಚರ್ಚು ಎಂದರೆ ನನ್ನ ಬದುಕು ಎಂದುಕೊಂಡಿದ್ದೆ. ನನಗೆ ಓದುವ ಖಯ್ಯಾಲಿ. ಅಂದಿನ ಯಶವಂತಪುರದ ಗುಡಿಯ ವಿಚಾರಣಾ ಗುರು ಸ್ವಾಮಿ ಅರುಳಪ್ಪರ ಕಣ್ಣಿಗೆ ಬಿದ್ದೆ. ಅವರು ತೋರಿದ ಆಸಕ್ತಿಯಿಂದ ನಾನು ಯಶವಂತಪುರದಲ್ಲಿ ರಾಯಪ್ಪರ ಗುರುಮಠವನ್ನು ಸೇರಿದೆ.’’
ದೊಡ್ಡಪ್ಪ ಕತೆ ಹೇಳುತ್ತಿದ್ದರು ನಾನು ಬಾಯಿ ತೆರೆದು ಅಚ್ಚರಿಯಿಂದ ಕೇಳುತ್ತಲೇ ಕುಳಿತಿದ್ದೆ.
“ಕುಂಟ ಚಿನ್ನಪ್ಪನನ್ನು ಕುಂಟ ಚಿನ್ನಪ್ಪ ಕರೆದಾಗ ಬೇಸರವಾಗುವಂತೆ ನಮ್ಮಪ್ಪನನ್ನು ಬರ್ನಾರ್ಡ ಎಂಬ ಹೆಸರಿನಿಂದ ಗುರುತಿಸಿದರೆ ಅದೇನೋ ಕಳೆದುಕೊಂಡ ಅನುಭವ. ಆ ಹೆಸರು ನೆನಪಾದರೆ ನೋವಾಗುತ್ತದೆ. ಆದರೆ, ನಾನು ಆ ನೆನಪನ್ನ ನನಗೆ ನೆಮ್ಮದಿ ಸಿಗುವಂತೆ ಮಾಡಿಕೊಂಡಿದ್ದೇನೆ. ನಾನೀಗ ಶಿವನಂತೆ ವಿಷಕಂಠನಾಗಿದ್ದೇನೆ. ಸಮುದ್ರ ಮಂಥನದ ಪುರಾಣ ಕಥೆ ಗೊತ್ತಲ್ಲ? ಹಿಂದೆ ಅಸುರರು ಮತ್ತು ದೇವತೆಗಳು ಸೇರಿ ಸಮುದ್ರ ಮಂಥನ ಮಾಡಲು ಮುಂದಾಗುತ್ತಾರೆ. ಮಂದಾರ ಪರ್ವತವನ್ನು ಕಡೆಗೋಲನ್ನಾಗಿ ಮಾಡಿಕೊಂಡರು, ಸರ್ಪರಾಜ ವಾಸುಕಿಯನ್ನು ಹಗ್ಗವಾಗಿ ಬಳಸುತ್ತಾರೆ, ಕುಸಿಯತೊಡಗುವ ಮಂದಾರ ಪರ್ವತದ ಬುಡದಲ್ಲಿ ವಿಷ್ಣು ಆಮೆಯ ರೂಪ ತಾಳಿ (ಕೂರ್ಮಾವತಾರ) ದೃಢವಾಗಿ ನಿಂತು ಗಟ್ಟಿ ನೆಲೆ ಒದಗಿಸುತ್ತಾನೆ. ಮೊಸರು ಕಡೆದಾಗ ಬೆಣ್ಣೆ ಬರುವಂತೆ ಸಮುದ್ರ ಮಂಥನದಿಂದ ಹಲವಾರು ವಸ್ತುಗಳು ಬರುತ್ತವೆ. ಅಮೃತ ಬಂದಾಗ ಅದನ್ನು ಕುಡಿಯಲು ಪೈಪೋಟಿ ನಡೆಯಿತು. ಇಂದ್ರ ದೇವರು ಮೋಹಿನಿಯ ರೂಪ ಧಾರಣೆ ಮಾಡಿ ಅಸುರರಿಗೆ ಅಮೃತ ದೊರೆಯದಂತೆ ಮಾಡುತ್ತಾನೆ. ಆದರೆ, ಅದಕ್ಕೂ ಮೊದಲು ಬಂದಿದ್ದ ಹಾಲಾಹಲ ವಿಷವನ್ನು ಕುಡಿಯುವ ಶಿವ, ಅದನ್ನು ತನ್ನ ಗಂಟಲಲ್ಲಿ ಇರಿಸಿಕೊಳ್ಳುತ್ತಾನೆ. ಅವನ ಕಂಠ ನೀಲಿಗಟ್ಟುತ್ತದೆ. ವಿಷ್ಣು, ಬ್ರಹ್ಮ, ಮಹೇಶ್ವ್ವರರು ತ್ರಿಮೂರ್ತಿ ದೇವತೆಗಳು. ಮಹೇಶ್ವರ ಶಿವನ ಇನ್ನೊಂದು ಹೆಸರು. ಅವನು ವಿಷಕಂಠ. ಈ ತ್ರಿಮೂರ್ತಿ ಪರಿಕಲ್ಪನೆ, ಕ್ರೆöÊಸ್ತರಲ್ಲಿನ ತಂದೆ, ಮಗ, ಪವಿತ್ರಾತ್ಮ ತ್ರಿತ್ವದ ಪರಿಕಲ್ಪನೆಗೆ ಹತ್ತಿರದ್ದು ಎಂದು ತಿಳಿದವರು ಹೇಳುತ್ತಾರೆ. ಇರಲಿ, ಅದು ನಿನಗೆ ಇಲ್ಲಿ ಅಪ್ರಸ್ತುತ.
ನಮ್ಮ ಉಪದೇಶಿಗಳು ಬಡವರಿರಬಹುದು. ಅವರಿಗೂ ಆತ್ಮಸಮ್ಮಾನ ಎಂಬುದಿರುತ್ತದೆ. ಯಾವ ಗುರುಗಳು ಕಾಯಂ ಆಗಿ ಒಂದೇ ಗುಡಿಯಲ್ಲಿ ಇರಲಾಗದು. ಸ್ಥಾವರವಾದ ಗುಡಿಗೆ ಬರುವ ವಿಶ್ವಾಸಿಕರೊಂದಿಗೆ ಉಪದೇಶಿಗಳ ಒಡನಾಟ ಸದಾ ಇರುವುದು. ಹೀಗಾಗಿ ಅವರು ಆತ್ಮಸಮ್ಮಾನದೊಂದಿಗೆ ಇರಲು ನಾನು ಇಲ್ಲಿ ಶ್ರಮಿಸುತ್ತಿದ್ದೇನೆ. ಇದು ಹೊಸ ಧರ್ಮಕ್ಷೇತ್ರ. ಇಲ್ಲಿ ಎಲ್ಲಾ ಊರುಗಳಲ್ಲಿನ ಗುಡಿಗಳ ಉಪದೇಶಿಗಳಿಗೆ ಸೂಕ್ತ ತರಬೇತಿ ನೀಡಲಾಗಿದೆ. ನಾನೇ ಅದರ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ನಾನು ಇಲ್ಲಿ ಯಾವುದೇ ಊರಿಗೆ ಹೋದರೂ, ಅಲ್ಲಿ ಮೊದಲೇ ಉಪದೇಶಿಯ ನೇಮಕವಾಗಿದ್ದರೆ ಅಥವಾ ನಾನು ಹೋದ ಮೇಲೆ ನೇಮಕವಾದರೆ, ಅವರು ಆರ್ಥಿಕವಾಗಿ ಸಬಲರಾಗಿರದಿದ್ದರೆ ಅವರಿಗೊಂದು ಆರ್ಥಿಕ ಭದ್ರತೆ ಒದಗಿಸುವುದು ನನ್ನ ಪ್ರಾಥಮಿಕ ಕೆಲಸ ಎಂದು ಕೊಂಡಿರುವೆ. ಅವರ ಮಕ್ಕಳಿಗೂ ಗುಲ್ಬರ್ಗ ಮತ್ತು ಬೀದರ್ ಗಳಲ್ಲಿನ ನಮ್ಮ ಧರ್ಮಕ್ಷೇತ್ರಗಳ ಶಾಲೆಗಳಲ್ಲಿ ಓದುವ ಅವಕಾಶ ಕಲ್ಪಿಸಿಕೊಡುತ್ತಿರುವೆ. ನಾಲ್ಕು ಶತಮಾನಗಳಾದರೂ ಇಲಿಯೇ ಪಕ್ಕದ ಚಿತ್ತಾಪುರ ಮತ್ತು ದೂರದ ಮುದಗಲ್ಲಿನಲ್ಲಿನ ಕ್ರೆöÊಸ್ತರಿಗೆ ಸರಿಯಾಗಿ ಓದಿ, ಒಳ್ಳೆಯ ಬದುಕು ಕಟ್ಟ್ಟಿಕೊಳ್ಳುವ ಅವಕಾಶ ಸಿಕ್ಕಿಲ್ಲ. ತೀರ ಇತ್ತೀಚೆಗೆ, ಅಂದರೆ ಸರಿಯಾಗಿ ನಾಲ್ಕು ವರ್ಷಗಳ ಹಿಂದೆ ಮೂವರು ಜನ ಮುದುಗಲ್ಲ ಮೂಲದ ಹುಡುಗರಿಗೆ ಗುರುಪಟ್ಟ ಸಿಕ್ಕಿದ್ದು ನನಗೆ ಸಂತೋಷ ಹಾಗೂ ಅಭಿಮಾನದ ಸಂಗತಿ. ಮುದಗಲ್ಲಿನ ಚರ್ಚಅನ್ನು ೧೫೦೨ರಲ್ಲಿ ಕಟ್ಟಲಾಗಿದೆ ಎಂದು ಇತಿಹಾಸ ಪ್ರಾಧ್ಯಾಪಕ ಡಾ. ಅಮರೇಶ ಯತಗಲ್ ಅವರು ದಾಖಲಿಸಿದ್ದಾರೆ. ನನಗೂ ಅದು ಹೊಸದಾಗಿ ತಿಳಿದುಬಂದ ಸಂಗತಿ.
ನಿನ್ನೆ ಮತ್ತು ಇಂದು ಉಪದೇಶಿ ಚಿನ್ನಪ್ಪನನ್ನು ಕರೆದುಕೊಂಡು ಹೋಗಿದ್ದೆನಲ್ಲಾ, ಯಾತಕ್ಕಂತಿಯಾ? ಅವನಿಗೆ ಗೌರವದ ಬದುಕು ಸಾಗಿಸಲು ಅನುಕೂಲವಾಗುವಂತೆ ಒಂದಿಷ್ಟು ಜಮೀನು ಕೊಡಿಸುವುದಕ್ಕೆ ಹೋಗಿದ್ದೆ. ಅವನು, ಅವನ ಸಂಬಂಧಿಗಳು ಒಂದಿಷ್ಟು ದುಡ್ಡು ಹೊಂದಿಸಿದರೆ, ನಾನೊಂದಿಷ್ಟು ದುಡ್ಡು ಹೊಂದಿಸುತ್ತಿರುವೆ. ಮೇತ್ರಾಣಿಗಳು ಮನಸ್ಸು ಮಾಡಿದರೆ ಅವರಿಂದಲೂ ಒಂದಿಷ್ಟು ಚೂರುಪಾರು ಸಹಾಯವಾಗುತ್ತದೆ. ಅವರ ಮನೆಯಲ್ಲಿ ವಂಶ ಪರಂಪರೆಯಾಗಿ ಅದು ಮುಂದುವರೆದರೆ ಸಂತೋಷ. ಹುಟ್ಟಿದ ಎಲ್ಲಾ ಮಕ್ಕಳು ಇದೊಂದೆ ವೃತ್ತಿಗೆ ಅಂಟಿಕೊಳ್ಳುವುದು ಒಳ್ಳೆಯ ಬೆಳವಣಿಗೆ ಅಲ್ಲವೇ ಅಲ್ಲ.’’
ದೊಡ್ಡಪ್ಪನ ಕಣ್ಣುಗಳಲ್ಲಿ ಈಗ ಮಿಂಚು ಮಿನುಗುತ್ತಿತ್ತು. ಹುಣ್ಣಿಮೆಯ ಬೆಳದಿಂಗಳಲ್ಲಿ ದೊಡ್ಡಪ್ಪನ ಮುಖದಲ್ಲಿ ನೆಮ್ಮದಿ ಮನೆಮಾಡಿತ್ತು. ಅಂಗಳದಿಂದ ಗುರುಮನೆಗೆ ತೆರಳಲು ದೊಡ್ಡಪ್ಪ ಎದ್ದು ನಿಂತರು, ಅವರ ತಲೆ ಹಿಂದೆಯೇ ಚಂದಿರ ಇದ್ದ. ಅದೊಂದು ಬಗೆಯಲ್ಲಿ ಸಂತರ ತಲೆಯ ಸುತ್ತ ಇರುವ ಪ್ರಭಾವಳಿಯಂತೆ ಕಂಡಿತು. ಅದು, ನನ್ನ ಭ್ರಮೆಯೋ ಗೊತ್ತಿಲ್ಲ.
-ಎಫ್.ಎಂ.ನಂದಗಾವ್