“ಕತ್ತಲ ಹೂವು” ನೀಳ್ಗತೆ (ಭಾಗ ೧೫): ಎಂ.ಜವರಾಜ್

ಮಲೆ ಮಾದೇಶ್ವರನ ಬೆಟ್ಟದಿಂದ ಬಂದ ಶಂಭುಲಿಂಗೇಶ್ವರ ಮಲ್ಲಿಕಾರ್ಜುನ ಬಸ್ಸುಗಳು ನರಸೀಪುರದ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿದ್ದ ಹುಣಸೇಮರ ತೋಪಿನ ಸೈಡಿನಲ್ಲಿ ನಿಂತಾಗ ರಾತ್ರಿ ಎಂಟಾಗಿತ್ತು.
ಬಸ್ಸೊಳಗೆ ಕುಂತು ನಿಂತವರನ್ನು ನಿದ್ರಾದೇವಿ ಆತುಕೊಂಡು ಡ್ರೈವರ್ ಕ್ಲೀನರನ ಕೂಗಿಗೆ ಲಗುಬಗೆಯಿಂದ ಎದ್ದರೆ ಇನ್ನು ಕೆಲವರು ಆಕಳಿಸುತ್ತಲೇ ಕಣ್ಣು ಮುಚ್ಚಿ ಹಾಗೇ ಒರಗುತ್ತಿದ್ದರು. ಕ್ಲೀನರು ಇಳಿರಿ ಇಳಿರಿ ಟೇಮಾಗುತ್ತ ಅಂತ ಎಲ್ಲರನ್ನು ಏಳಿಸಿ ಇಳಿಸಿ ರೈಟ್ ರೈಟ್ ಅಂತ ಬಾಯಲ್ಲೇ ನಾಲಿಗೆ ಮಡಚಿ ಒಂದು ಜೋರು ವಿಶೆಲ್ ಹಾಕಿದೇಟಿಗೆ ಜಗನ್ ಜಾತ್ರೆಯಂತಿದ್ದ ಜನಗಳ ಸಂದಿಯಲ್ಲೆ ಬಸ್ಸು ಬರ‌್ರಂತ ಧೂಳೆಬ್ಬಿಸಿ ಹೊರಟಾಗ ಆ ಧೂಳು ಇಡೀ ತೋಪನ್ನೇ ಅಡರಿಕೊಂಡಿತು.

ಈಗಾಗಲೇ ಸುತ್ಮುತ್ತಲ ಊರವರು ತೋಪಿನ ಆಯಕಟ್ಟಿನ ಮರಗಳ ಜಾಗ ಹಿಡಿದು ಕುಂತಿದ್ದರು.

ಇದು ಇಂದಲ್ಲ, ತಾತ ಮುತ್ತಾತನ ಕಾಲದಿಂದಲೂ ಬೆಟ್ಟಕ್ಕೆ ಹೋಗಿ ಬಂದವರು ಈ ತೋಪಿನಲ್ಲಿ ಒಂದು ರಾತ್ರಿ ಒಂದು ಹಗಲು ಇದ್ದು ಅಲ್ಲೆ ಸಂಗಮದಲ್ಲಿ ನೀರು ಮುಳುಗಿ ಮಡಿಯಾಗಿ ತಮಟೆ ಬಡಿದು ಬೆಟ್ಟದಿಂದ ತಂದಿದ್ದ ಬಿದಿರು ಬುಟ್ಟಿ ಇನ್ನಿತರ ಸಾಮಾನು ಸರಂಜಾನು ಹಸುಬೆ ಹೊತ್ತುಕೊಂಡು ಕುಣಿತಾ ಮಾದಪ್ಪನ ಹಾಡು ಹಾಡ್ತ ಊರಿಗೆ ಎಂಟ್ರಿ ಕೊಡುತ್ತಿದ್ದರು.

ಅಲ್ಲೋ ಮಾರು ದೂರದ ಲೈಟುಕಂಬದಲ್ಲಿ ಪಿಣುಗುಡುವ ಒಂದೆರಡು ಲೈಟುಗಳ ಬೆಳಕು ತೋಪಿನೊಳಕ್ಕೆ ಬೀರದೆ ಮಂಪರು ಮಂಪರಾಗಿತ್ತು. ಆ ಮಂಪರು ಬೆಳಕಿನ ತೋಪಿನ ಬಲಕ್ಕೆ ಮುರುಗನ್ ಟಾಕೀಸ್ ಇದೆ. ಅದರ ಎದುರು ಒಂದು ದೊಡ್ಡ ಹೆಂಡದಂಗಡಿ ಇತ್ತು. ಮಾದಪ್ಪನ ದರ್ಶನ ಮಾಡಿ ಬಂದು ತೋಪಿನಲ್ಲಿ ಇಳಿದಿರುವವರು ಮೋಜುಮಸ್ತಿಯಲ್ಲಿ ತೊಡಗಿದ್ದರು. ಅವರಲ್ಲಿ ಕೆಲವರು ಸೀದಾ ಹೆಂಡದಂಗಡಿಗೆ ಹೋಗಿ ಅಲ್ಲೆ ಕುಡಿದು ತಿಂದು ಮತ್ತೇರಿಸಿಕೊಂಡು ತೋಪಿನ ಮರದ ಬೊಡ್ಡೆಯಲ್ಲಿ ಠಿಕಾಣಿ ಹೂಡಿ ಸುಸ್ತಾಗಿ ಮಲಗಿದ್ದ ತಮ್ಮ ಮನೆ ಮಂದಿಗೆ ಅಂತ ಒಂದೆರಡು ಬಾಟಲಿ ಹೆಂಡ, ಚಾಕಣ, ಚಾಪೀಸು, ಆಮ್ಲೇಟು, ಹುರಿದ ಲಾಕಿ, ಗಮಗುಡುವ ಹುರುಬಾಡು, ಬೇಯಿಸಿ ಒಗ್ಗರಣೆ ಹಾಕಿದ ಅಲಸಂದೆ ಕಾಳು ಹಿಡಿದು ತರುವವರು ತರುತ್ತಿದ್ದರು.

ಊರಿನ ಜನ ಮನೆಗೊಬ್ಬರಂತೆ ಬೆಟ್ಟಕ್ಕೆ ಹೋಗಿದ್ದ ತಮ್ಮ ಮನೆಯವರನ್ನು ನೋಡಿ ಮಾತಾಡಿಸಿ ಕುಣಿದು ಕುಪ್ಪಳಿಸಲು ಕಾತರದಿಂದ ಕಾಯುತ್ತ ತೋಪಿನ ಆಚೆ ಧೂಳಿಡಿದು ಕಿತ್ತೋಗಿದ್ದ ರೋಡಿನಲ್ಲಿ ನಿಂತಿದ್ದವರು ಬರ‌್ರಂತ ಧೂಳೆಬ್ಬಿಸಿ ಹೋದ ಬಸ್ಸುಗಳನ್ನು ನೋಡಿ “ಹ್ಞು ಈ ಬಸ್ಸು ನಮ್ಮವೆ” ಅಂತ, ಅವರು ಬಂದಿರುವುದು ಖಾತರಿಯಾಗುತ್ತಿದ್ದಂತೆ ಜನಗಳ ನೂಕು ನುಗ್ಗಲಲ್ಲಿ ಮಂಪರು ಮಂಪರು ಬೆಳಕು – ಕತ್ತಲಲ್ಲೆ ಜಾಗ ಮಾಡಿಕೊಂಡು ಪರಿಸೆ ಕಡೆ ನಡೆದರು.

ಇನ್ನೊಂದು ಸೈಡಲ್ಲಿ ಧಾವಂತದಲ್ಲಿ ನಿಂತಿದ್ದ ದೊಡ್ಡಬಸವಯ್ಯ ಕಚ್ಚೆಪಂಚೆ ಸರಿಮಾಡಿಕೊಂಡು ಧಾವಿಸಿ ಚೆನ್ನಬಸವಿ ಎದುರಿಗೆ ನಿಂತಾಗ ಮಂಪರು ಬೆಳಕಿನ ಆ ತೋಪೇ ಮತ್ತೂ ಮಂಕಾಗಿ ಕಂಡಿತು.

ಎಲ್ಲ ಅವರವರ ಮನೆಯವರು ಅದೂ ಇದು ಮಾಡ್ಕೊಂಡು ಬಂದಿದ್ದ ಬಾಡುಬಳ್ಳನ ತಿನ್ಕ ಉಣ್ಕಂಡು ತೂರಾಡ್ತ ವಾಲಾಡ್ತ ಇದ್ರ ದೊಡ್ಡಬಸವಯ್ಯನ ಮುಖ ನೋಡ್ತಿದ್ದಂಗೆ ಶಿವಯ್ಯನ ಮನೆಯವರ ಸಯಿತ ಚೆನ್ನಬಸವಿ, ಆ ಮಂಪರು ಬೆಳಕಿನ ತೋಪಿನಲ್ಲೇ ನೀಲುನ್ನ, ಸತ್ತು ಹೋದ ಅವಳ ಕೂಸನ್ನ ನೆನುಸ್ಕಂಡು ಅಳ್ತ ಆ ಗೌಜು ಗದ್ದಲದ ತೋಪಿನ ಮರದ ಕೆಳಗೆ ಬಿದ್ದು ಒದ್ದಾಡ್ತ ಎದೆಎದೆ ಬಡಿದುಕೊಂಡು ಹೆಂಡದಂಗಡಿ ಪಕ್ಕದ ರೋಡಿನ ಗವ್ವೆನ್ನುವ ಬೇಲಿಗುಂಟ ಗೋಪಾಲಪುರ ಮಾರ್ಗವಾಗಿ ಓಡೋಡಿ ಬಂದು ಊರು ಸೇರಿದಾಗ ಗಕುಂ ಅಂತಿತ್ತು.

ಚೆನ್ನಬಸವಿ “ಬೆಟ್ಟುಕ್ಕ ಹೋಗವತ್ಲಿ ಕಿಲಕಿಲ ಅಂತ ನಗ್ತಿದ್ದ ಕೂಸುನ್ ಮುಖನೂ ಕಾಣ್ದೆರತರ ಆಯ್ತಲ್ಲ ಶಿವ್ನೇ” ಅಂತ, ಏನೂ ಮಾತಾಡದೆ ಮಂಕಾಗಿ ರೂಮಿನ ಮೂಲೇಲಿ ಕುಂತಿದ್ದ ನೀಲಳನ್ನು ತಬ್ಬಿಕೊಂಡು “ಯಾಕ ಮಗ್ಳೆ ಇಂಗಾಯ್ತು ನಿಂಗ.. ಆ ದೇವ್ರು ಯಾಕಿಂಗ್ ಮಾಡುದ್ನಾ.. ಅಯ್ಯೊ ಶಿವ್ನೇ ನಾನೇನ್ ಅನ್ಯಾಯ ಮಾಡಿದ್ನೋ.. ನನ್ ಮಗ್ಳೇನ್ ಅನ್ಯಾಯ ಮಾಡಿದ್ಲೋ.. ಆ ಕೂಸೇನ್ ಅನ್ಯಾಯ ಮಾಡಿತ್ತೋ” ಅಂತ ಗೋಳಾಡಿದಳು.

                       ---------

ಬೆಳಗಾಯ್ತು. ಚೆನ್ನಬಸವಿ ದುಂಡಿ ಸಿದ್ದಯ್ಯ ಶಿವಯ್ಯನ ಸಯಿತ ಎಲ್ಲ ದೊಡ್ಡಾಸ್ಪತ್ರೆಯಲ್ಲಿ ನೆರೆದಿದ್ದರು.

ವಾರ ಕಳೆದರು ಮಂಜನ ಕಣ್ಣೀರು ನಿಂತಿರಲಿಲ್ಲ. ಅವನ ಕಣ್ಣ ಮುಂದೆ ಕೂಸು ಬಂದು ಕುಣೀತಿತ್ತು. ಚಂದ್ರನಂತೆ ಬೆಳಗುತ್ತಿದ್ದ ನೀಲಳ ನಗು ಅವನನ್ನು ಬೆನ್ನು ಬಿಡದೆ ಕಾಡುತ್ತ ‘ಎಂಥ ಕೆಲ್ಸ ಆಯ್ತು ಮನತವೆ ಇದ್ರ ಹಿಂಗಾಯ್ತಿತ್ತ’ ಅಂತ ನರಳಿ ನರಳಿ ಗಳಗಳನೆ ಎಲ್ಲರ ಮುಂದೆ ಅಳತೊಡಗಿದನು.

ಅವನ ಕಾಲಿಗಾಕಿದ್ದ ಬ್ಯಾಂಡೇಜು ಹಾಗೇ ಇತ್ತು. ಮಂಡಿ ಚಿಪ್ಪು ಜಾರಿ ಬಲ ತೊಡೆ ಸೀಳಿ ಗಾಯವಾಗಿತ್ತು. ಮಂಜನ ಸ್ಥಿತಿ ನೋಡಿ ಎಲ್ಲರು ಕಣ್ಣೀರು ಕಚ್ಚಿಕೊಂಡರು. ಮಂಜನ ಅವ್ವ ಜೊತೆಗಿದ್ದು ನೋಡ್ಕತಾ ಮಗಳು ಚೆನ್ನಬಸವಿ ಮುಂದೆ “ಒಂಚೂರು ಹೆಚ್ಚು ಕಮ್ಮಿ ಆಗಿದ್ರ ನನೈದ ನೋಡಕ ಸಿಕ್ತಿರ‌್ನಿಲ್ವಲ್ಲ.. ಜೊತ್ಗ ನನ್ ಮೊಮ್ಗೂಸು ಹೋಯ್ತು.. ನನ್ ಮೊಮ್ಮೆಣ್ಣ್ಗೂ ಇಂಗಾಯ್ತು.. ಏನ ಶಿವ್ನೇ..” ಅಂತ ಗೋಳಾಡುವಾಗ ನರ್ಸ್ ಗದರಿ ‘ಎಲ್ಲ ಹೋಗಿ ಇದೇನ್ ಆಸ್ಪತ್ರೆನಾ ಮಾರ್ಕೆಟ್ಟಾ ದಾರಿ ಬಿಡಿ’ ಅಂತನ್ನುವಾಗ ಪೋಲೀಸರು ಬಂದರು. ಅವರು ಬಂದಾಗ ಎಲ್ಲ ಅತ್ತ ಸರಿದರು. ಏನೇನೊ ಕೇಳಿ ಬರೆದುಕೊಂಡು ಗುಸುಗುಟ್ಟಿದರು.

ಹಾಗೆ ಗುಸುಗುಸು ಅಂತ “ನೋಡಪ್ಪ ಯಾರ ಅಂತ ಹೇಳುದ್ರ ಏನಾದ್ರು ಮಾಡಬಹುದು” ಅಂದರು.

ಮಂಜ ಅಳ್ತ ಅಳ್ತನೆ –
“ಸಾ.. ದೊಡ್ಡೋಣಿ ಸಾ. ಗವ್ಗತ್ಲು ಸಾ. ವಸಿ ದುಡ್ಡು ಕಾಸು ಯವರ ಇತ್ತಲ್ಲ ಸಾ.. ಸಂತ ಇನ್ನು ಮೂರ್ ನಾಕ್ ಜಿನ ಇತ್ತಲ್ಲ ಸಾ.. ಇನ್ನು ಅಲ್ಲಿಗಂಟ ಯವರ ಸಟ್ಟಾಗಲ್ಲ ಅಂತ ಇಂಜದಿಂದ ಸಂದಗಂಟ ನನ್ ಕೆಲ್ಸ ಮುಗ್ಸಿ ಬೆಳ್ಕಿರ ಹೊತ್ಲೆ ಸೈಕಲ್ಲಿ ಎಳೂರುಂಡಿಗೋಗಿ ದುಡ್ಡೀಸ್ಕಂಡು ಅದೇ ಎಳೂರುಂಡಿ ಓಣಿಗುಂಟ ಬರಾಗ ಮೊಕ್ಕತ್ಲು…

“ನಂಗೂ ಸಲಿರ ನಡ್ಗದು. ಈ ಓಣಿಲಿ ಕೊಲಪಲ ನಡಿತವ ಅಂತ ಹೇಳವ್ರು ಹೇಳ್ತಿದ್ರು ಸಾ. ಆದ್ರ ಹಂಗೇನು ಇಲ್ಲ ಅಂತ ನಂಗ ಸುಮಾರಾಗಿ ಗೊತ್ತಿತ್ತು ಸಾ. ದುಡ್ಡು ಜೋಬಲ್ಲಿತ್ತಲ್ಲ ಅದ್ಕ ಅಳುಕು ಅನ್ನದು ಇತ್ತು. ಅದೇ ಅಳುಕಲ್ಲಿ ಆ ಮೊಕ್ಕತ್ಲಲ್ಲಿ ಸೈಕಲ್ ತುಳ್ದಿ. ಹಿಂದ ಅಲ್ಲಿ ಹತ್ತಾರು ಜನುಕ್ಕ ಹಂಗ ಆಗಿರದ ನಮ್ ಬಾವ ಸೌದ ಹೊಡಿಯಕ್ಕೋಗಿದ್ದಾಗ ಆಗಿದ್ನ ಹೇಳಿದ್ನ…

“ಸರಿ ಇರ‌್ಲಿ ಅಂತ ಧೈರ್ಯ ಮಾಡ್ದಿ. ಮೊಕ್ಕತ್ಲು ಅಂದ್ರ ಅಲ್ಲಿ ಒಂದ್ ಜನಾನೂ ತಿರ‌್ಗಾಡದಿಲ್ಲ. ಮೇನ್ ರೋಡ್ಲಿ ಹೋಗಗಂಟ ಟೇಮಾಗುತ್ತ.. ಕೂಸು ಬಾಣ್ತಿ ಅವ್ರ ಬ್ಯಾಗ್ನೆ ಮನ ಸೇರ‌್ಕಳಂವ್ ಅಂತ ಅದೇ ಓಣಿಲಿ ಸೈಕಲ್ ತುಳಿತಾ ಚಿಣ್ಣಕೊಪ್ಪಲು ಮಾಳ ಬಳುಸ್ಕಂಡು ಹಂಗೆ ದೊಡ್ಡೋಣಿತವ್ಕ ಬರಗಂಟ ಪೂರ್ತ ಕತ್ಲೇ ಆಯ್ತು ಸಾ…

“ಬತ್ತಾ ಬತ್ತಾ ಹಿಂದ ಅದೇನ ಎಳ್ದಂಗಾಯ್ತು ಸಾ. ಆ ರೋಡು ಬರೀ ಕಲ್ಲೇ. ಕಲ್ಮೇಲ ಚಕ್ರ ಬಿದ್ದು ಎಳಿತು ಅನ್ಸುತ್ತ ಅಂತ ನಾನು ಎಡಗಾಲು ಕಾಲು ಕೆಳಕ್ಕೆ ಬುಟ್ಟು ಬಲಗಾಲು ಒಂದರಲ್ಲಿ ಪೆಟ್ಲ ಒತ್ತುತಾ ಒತ್ತುತಾ ಇದ್ರು ಮುಂದುಕ್ಕೋಗದು.‌ ನಾನು ಇಳ್ದಿ. ಆಗ ನನ್ನ ಯಾರೋ ಯಳ್ದಂಗಾಯ್ತು ಸಾ. ನಾನು ಕೆಳಕ ಬಿದ್ದೇಟ್ಗೆ ಮಂಡಿಗ ಏಟು ಬಿದ್ದಂಗಾಯ್ತು ಸಾ. ಅಪ್ಪೋ ಅಂತ ಕಿರುಚ್ದಿ. ಕತ್ಲು ಕವಿಕಂಡಿತ್ತು. ಏನೂ ಕಾಣ್ದು. ಆ ಏಟ್ಗ ಕಾಲು ಬರ‌್ದು. ಸೈಕಲ್ ಬುಟ್ಟು ಕಾಲೆಳ್ಕಂಡು ಅರುಚ್ತ ಹೋಯ್ತಿದ್ದಾಗ ಬಲಗಾಲು ತೊಡ್ಗೊಂದು ಏಟು ಬಿತ್ತು ಸಾ.. ನಂಗ ಪ್ರಾಣ ಹೋದಂಗಾಯ್ತು. ಮುಟ್ಟಿ ನೋಡ್ದಿ. ಕೈ ಗಡಗಡ ನಡುಗಾಕ ಶುರುವಾಯ್ತು…

“ತೊಡ ಸೀಳಿ ರಕ್ತ ಸುರಿತಿತ್ತು ಸಾ. ನಾನು ಹಂಗೆ ಕೆಳಕ ಬಿದ್ದಿ. ಐದಾರು ಜನ ಇದ್ರು ಅನ್ಸುತ್ತ ಸಾ. ಅವ್ರು ಓಡಾಡ ಸದ್ದು ನಂಗ ಅಂದಾಜಾಯ್ತು. ಜೋಬ್ಲಿ ಒಂದ್ ಕಂತ ದುಡ್ಡಿತ್ತು ಸಾ. ಮುಟ್ಟಿ ನೋಡ್ದಿ. ಆ ಕಂತ ದುಡ್ಡೂ ಇಲ್ಲ ಏನೂ ಇಲ್ಲ. ನಾ ನಿಚಾಯಿಸ್ಕಂಡಿ. ಕೂಸುವ ನನ್ ನೀಲ್ನುವ ಗೆಪ್ತಿಗ್ ಬಂದ್ರು. ನಂಗ ಏನ್ ಮಾಡ್ಬೇಕು ಅನ್ನದು ಕಾಣ್ದೆ ಅರುಚ್ತಾನೆ ಇದ್ದಿ. ಆಗ ನಾಯ್ಗಳು ಗಳ್ಳಾಕ್ದ ಸದ್ದು. ಹಂಗೆ ಗದ್ದ ಮಾಳ್ದಿಂದ ಯಾರ ಓಡ್ಬರಂಗಿ ದಿದಿದಿದಿ ಸದ್ದಾಯ್ತು. ಅದಸ್ಟೆ ಸಾ ನಂಗ ಗ್ಯಾಪ್ಕ. ಆಮೇಲೆ ಅದೇನಾಯ್ತ ಏನ ಗೊತ್ತಾಗ್ದೆ ಕಣ್ಬುಟ್ಮೇಲ ಈ ಆಸ್ಪತ್ರಲಿ ಮನ್ಗಿದ್ದಿ ಸಾ.. ಒಕ್ಕಲಗೇರಿ ಪುಂಡೈಕ್ಳುವ, ನಮ್ ಬಾವ ಸೌದ ಹೊಡಿಯಕ ಹೊಯ್ತಿದ್ನಲ್ಲ ಗೌರುಗ್ಗೇರಿ ಸೌದ ಡಿಪೊನವ್ರು ನಿಂತಿದ್ರು ಸಾ… ” ಅಂತ ದುಕ್ಕಳಿಸ್ತಾ ನರುಳ್ತಾ ಅಳತೊಡಗಿದ.

                  ‌‌      ---------

ತಿಂಗ್ಳೊಪ್ಪತ್ತು ಕಳಿತಾ ಕಳಿತಾ ರಾತ್ರಿ ಹಗಲೂ ಅನ್ನದ ರೀತಿಲಿ ನೀಲ ಎಲ್ಲೆಂದರಲ್ಲಿ ಚಿಳ್ಳನೆ ಚೀರುತ್ತ ಉಗಿಯುತ್ತ ಸಂದಿಗುಂಟ ಬಂದು ಶಿವಯ್ಯನ ಮನೆಯ ಗೋಡೆ ಹೊತ್ತಿಗೆ ದನ ಕಟ್ಟಾಕ ಜಾಗ್ದಲ್ಲಿದ್ದ ತೆಂಗಿನ ಮರ ಒರಗಿ ನಿಂತಳು. ಉಗಿಯೋದು ಬೈಯೋದು ನಗೋದೇ ಆಯ್ತು. ಉಂಡಳೊ ತಿಂದಳೊ ಏನೂ ತಿಳಿದು. ಬರ‌್ತಾ ಬರ‌್ತಾ ಮಂಕಾದಂತೆ ಕಂಡಳು. ಹಲ್ಲುಜ್ಜಿ ಮುಖ ತೊಳೆಯದೆ ನೀರುಯ್ಕಳದೆ ಬಟ್ಟೆ ಬದಲಿಸದೆ ಹೇಗಿದ್ದಳೊ ಹಾಗೇ ಇದ್ದು ಬೀದಿಲಿರ ಮಣ್ಣ ಎಲ್ಲೆಂದರಲ್ಲಿ ತಂದು ಗುಡ್ಡೆ ಹಾಕೋಳು. ಅದೇ ಮಣ್ಣ ತಲೆಗೆ ಹಾಕಳೋಳು. ರಾತ್ರಿ ಎಲ್ಲ ಮಲಗಿದ ಮೇಲೆ ಶಿವಯ್ಯನ ಮನೆ ಜಗುಲಿ ಮೇಲೆ ಮಣ್ಣು ಸುರಿಯುತ್ತಿದ್ದಳು. ಮೊಬ್ಬಿಗೆ ಎದ್ದು ನೀರ‌್ಕಡೆ ಹೋಗಲು ತಾಳ ತೆಗೆದು ಈಚೆ ಬಂದ ಸೂರಿ ಕಣ್ಣಿಗೆ ಜಗುಲಿ ಮೇಲಿನ ಮಣ್ಣು ಗುಡ್ಡೆ ಕಂಡು ನೀಲಳ ಜುಟ್ಟಿಡಿದು ಬಡಿದಿದ್ದ. ಇದು ದೊಡ್ಡದಾಗಿ ಅವಳ ಅವ್ವ ಚೆನ್ನಬಸವಿ ಶಾಪ ಧೂಪಾಕಿದ್ದಳು. ಶಿವಯ್ಯನು ಸಿದ್ದಿನು ಸೂರಿನ ಕರೆದು ಈಗ ಅವಳಿಗೆ ಆಗಿರೋದು ಸಾಕು. ಗ್ಯಾನ ಚೆನ್ನಾಗಿಲ್ಲ. ಅವ್ಳ ಯಾಕಪ್ಪ ಹೊಡ್ದಯ್ ಜನ ಏನಂದರು ಅಂತ ಬುದ್ದಿ ಹೇಳಿದ್ದರು. ಸೂರಿ ಅಲ್ಲಿಂದ ಅವ ಏನೇ ಮಾಡಿದರು ಸುಮ್ಮನಿರುತ್ತಿದ್ದ.

ರಾತ್ರಿ ಆಗುತ್ತಿದ್ದಂತೆ ಏನೋನೋ ಮಾತಾಡೋಳು.

“ನಾ ಇನ್ಮೇಲ ಇಲ್ಲೆ.. ಈ ಸಂದಿ ತಲಬಾಗ್ಲಲ್ಲೆ.. ಈ ಮರುತ್ತವೇ ನಿಂತ್ಗ ಕಾಯ್ತಿನಿ. ಅಂವ ಬಂದ್ರ ರಕ್ತ ಕುಡಿತಿನಿ. ಯಾರ‌್ಗು ಗೊತ್ತಾಗಲ್ಲ ಅಂತ ಕತ್ಲಾದ್ಮೇಲ ಬಂದಯ. ಬಾ ನನೈದ್ನೆ.. ಬಾ ಸಟ್ಗ ಇಲ್ಲಿ.. ಕತ್ಲು ಜೊತ್ಗದ ಅಂತ ನಸರಾಣಿ ಆಟ ಆಡಿಯಾ.. ಏ ಕತ್ಲೇ ಸಪೋಟ್ ಮಾಡಕ ಬಂದು ಬಂದು ಗವ್ವರಾಕಂಡಯ.. ಬನ್ನಿ ನನ್ನೆದುರ‌್ಗ” ಅಂತ ಉಗಿತಾ ಕಿಸಕಿಸ ನಗತೊಡಗಿದಳು.

ಅಡಿನಿಂಗಿ ಮೊಮ್ಮಗಳ ಸ್ಥಿತಿ, ಅವಳ ಕೂಸಿನ ಸಾವು ನೆನೆದು ಒಳಗೊಳಗೆ ಕಣ್ಣೀರಾಕ್ತ ಹೋಗಾ ಬರ ನೀಲಳನ್ನು ನೋಡ್ತ ಅವಳ ಕೆನ್ನೆ ಚಿವುಟಿ ಮುತ್ತಿಕ್ತ ನಡಿನಲ್ಲಿ ಇಟ್ಟುಕೊಂಡಿದ್ದ ಕಾಸು ತೆಗೆದು “ಯಾರ‌್ಯಾರ ಏನಾದ್ರ ತಂದ್ರ ತಕ್ಕ ತಿನ್ನು” ಅಂತ ಕೊಡ್ತಿದ್ದಳು. ನೀಲ ಕಾಸು ಈಸಿಕೊಂಡು “ನಮ್ಮೊವ್ಗಿಂತ ನೀನೆ ಸರಿಕಮ್ಮ. ಅವ ಏನೂ ಕೊಡಲ್ಲ.. ಇಲ್ಲಿ ನಾನು ಹೊಟ್ಟಸ್ಕ ನಿಂತಿದ್ರು ನೋಡ್ದೆರತರ ಮಾತೆತ್ತುದ್ರ ಪುರಪುರನ ಕಡ್ದುಕಡ್ದು ಒಕ್ಕಲಗೇರಿಗ ಹೋಯ್ತುದ ನಾಯಿ ಮುದೇವಿ.. ಆ ಒಕ್ಕಲಗೇರಿಲಿ ಅದೇನ್ ಮಡ್ಗಿದಳ ಕಾಣಿ” ಅಂತ ಅನ್ನೋಳು. ಅವಳ ಮಾತಿಗೆ ಮಾತು ಸೇರಿಸಿದ ಅಡುನಿಂಗಿ ಸೊಸೆ ಚೆನ್ನಬಸವಿಗೆ ಆ ಯಂಕ್ಟಪ್ಪುನ್ನು ನಾಪತ್ತೆಯಾಗಿದ್ದ ಅವನ ಮಗ ಶಿವನಂಜನ ಹೆಸರೆತ್ತಿ ಕ್ಯಾಕರಿಸಿ ಕ್ಯಾಕರಿಸಿ ಉಗಿಯುತ್ತ ನಟಿನಟಿ ಹಲ್ಲು ಕಡಿಯುತ್ತಿದ್ದರೆ ಚೆನ್ನಬಸವಿ ಕೇರು ಮಾಡದೆ ಒಕ್ಕಲಗೇರಿ ಕಡೆ ನಡೆಯುತ್ತಿದ್ದುದು ಊರು ನೋಡಿತ್ತು.

                       -----------

ಒಂದು ಗೌರಿ ಕಳ್ದು ಇನ್ನೊಂದು ಗೌರಿ ಬಂದಾದ್ಮೇಲೆ ಮಾರ‌್ಲಾಮಿನೂ ಬಂತು. ಊರ‌್ಲಿ ಚಾಮುಂಡಿ ಒಕ್ಕಲವ್ರಿಗೆ ದೊಡ್ಡಬ್ಬ. ಅವ್ರು ಊರಲ್ಲಿ ಒಂದೇಳೆಂಟು ಕುಲವಿದ್ರು. ಅವ್ರು ಬುಟ್ರೆ ಇನ್ಯಾರು ಮಾರ‌್ಲಾಮಿ ಹಬ್ಬ ಮಾಡ್ತ ಇರಲಿಲ್ಲ. ಅದರ ಬೆಳುಗ್ಗ ಮೈಸೂರಿಗೆ ಜಂಬೂ ಸವಾರಿ ನೋಡೋಕೆ ಅಂತ ಆ ಕುಲ ಈ ಕುಲ ಅಂದೇದ ರೀತಿಗ ಪುಂಡೈಕಳ ಸಯಿತ ಹೋಗ್ತಿದ್ದರು. ಒಂದ್ಸಲ ನೀಲ ದಸರದಲ್ಲಿ ಅರಮನೆ ಮುಂದೆ ಡ್ಯಾನ್ಸ್ ಮಾಡಕೆ ಅಂತ ಅಗ್ರಹಾರದ ಮೇಷ್ಟ್ರು ಸಯಿತ ಹತ್ತಾರು ಜನ ಹೋಗಿದ್ದರು. ಆಗ ಮಳೆ ಬಂದು ನೆನಕೊಂಡು ರಾತ್ರಿವೊತ್ತು ಶಿವನಂಜನ ಜೊತೆ ಬಸ್ಸಲ್ಲಿ ಬಂದು ಊರ ಹೆಬ್ಬಾಗಿಲಲ್ಲಿ ಇಳಿದಾಗ ಏನೂ ಕಾಣದ ಗವ್ಗತ್ತಲಲ್ಲಿ ನಡೆದದ್ದು ಅವರಿಬ್ಬರಿಗಲ್ಲದೆ ಆ ಗವ್ಗತ್ತಲನ್ನು ಸೀಳಿ ದಾಟಿತ್ತು.

                       ---------

ಮಂಜನಿಗೆ ಕಾಲಿನ ಗಾಯ ಪೂರ್ತಿ ವಾಸಿಯಾದಂತಿತ್ತು. ಅವನು ಯವರ ಶುರು ಮಾಡಿ ಸೈಕಲ್ಲಿ ಹೋಗ್ತಾ ಬರ‌್ತಾ ಇದ್ದ. ಬಂದಾಗೆಲ್ಲ ನೀಲಳಿಗೆ ತಿಂಡಿ ಗಿಂಡಿ ತಂದು ಕೊಡೋದು ಮಾಡೋದು ಮಾಡ್ತಿದ್ದ. ಅವಳು ಮಂಜನನ್ನು ನೋಡಿ ಕಿಸಕಿಸ ನಗ್ತ ಕೆನ್ನೆ ಗಿಂಡಿ ಮುತ್ತಿಕ್ಕೋಳು. ಅವನು ‘ಬುಡ ಮುದೆವಿ ಹಲ್ ತೀಡೋಗು ಹೋಗಿ’ ಅಂತ ಕಿಚಾಯಿಸಿ ನಗಾಡ್ತಿದ್ದ. ಬಂದವನು ಹೋಗಿ ಜಗುಲಿ ಮೇಲೆ ಕುಂತು ಅಕ್ಕ ಚೆನ್ನಬಸವಿ ಜೊತೆ ಮಾತಾಡ್ತ ಕಣ್ಣೀರಾಕ್ತ ಇದ್ದ. “ಅವ್ಳ ಎಲ್ಯಾರ ತೋರ‌್ಸು” ಅಂತ ಅಳ್ತಿದ್ದ. ಅಕ್ಕನ ಮಾತು ಕೇಳಿ ಅವನೂ ಅಲ್ಲಿ ಇಲ್ಲಿ ತೋರ‌್ಸಿ ದೇವ್ರು ದಿಂಡ್ರು ಅಂತ ಮಾಡುದ್ರು ಆ ನೀಲ ಹಂಗೇ ಇದ್ದಳು.

                      -----------

ಅವತ್ತೊಂದಿನ ಊರಲ್ಲಿ ಸೊಸ್ಮಾರಿ ಹಬ್ಬ. ನೀಲ ಎಲ್ಲೊ ತಿಪ್ಪೇಲಿ ಸಿಕ್ಕಿದ್ದ ಒಡೆದು ನಾಕು ಭಾಗವಾಗಿ ಸೊಟ್ಟಗಿದ್ದ ಅರ್ಧಂಬರ್ಧ ಕನ್ನಡಿ ಪೀಸನ್ನ ತೆಂಗಿನ ಮರ ಬಟ್ಟೆ ಒಣಗಾಕಲು ಕಟ್ಟಿದ್ದ ತಂತಿ ಮಧ್ಯಕ್ಕೆ ಸಿಕ್ಕಿಸಿ ಅದರಲ್ಲಿ ಮುಖ ನೋಡ್ತ ಹಲ್ಲು ಕಿರಿತ ತಲೆ ಬಾಚ್ಕತ ಕೈಯಲ್ಲಿ ಪಾಂಡ್ಸ್ ಪೌಡ್ರು ಕಪ್ಪು ಹಿಡ್ಕಂಡು ಹಾಕೊಂಡು ಹೋಗೊ ಬರೊರಿಗೆಲ್ಲ ತೋರುಸ್ತ ತೆಂಗಿನಮರ ಒರಗಿ ನಿಂತು ಸೊಸ್ಮಾರಿಗುಡಿಲಿ ಹಾಕಿದ್ದ ರೇಡಿಯೋ ಹಾಡು ಕೇಳ್ತ ತುಟಿ ಕುಣಿಸ್ತ ಸೊಂಟ ಕುಣಿಸ್ತ ನಗ್ತ ನಗ್ತ ಮರದ ಸುತ್ತ ಕುಣಿಯೋಳು.

ವಾರದ ಹಿಂದೆನೆ ಕುಲ ‘ಮನಕ್ವಾಣ ತೊಳ್ದು ಕಿರುಸುಣ್ಣ ಬುಟ್ಗಳಿ’ ಅಂತ ಊರಲ್ಲಿ ಸಾರಿದ್ದರು. ಅವರು ಸಾರಿದಂಗೆ ಜನ ಮನಕ್ವಾಣ ತೊಳ್ದು ಸುಣ್ಣ ಬುಟ್ಗಂಡು ನೀರು ಗೀರು ಉಯ್ಕಂಡು ಪೂಜಾ ಸಾಮಾನು ಎಳ್ನೀರ್ ಎತ್ಗಂಡು ರೆಡಿಯಾಗ್ತಿದ್ರು. ಮದ್ಯಾಹ್ನ ಎರಡು ಎರಡೂವರೆ ಅನ್ಸುತ್ತ. ಆ ಹೊತ್ಲಿ ಸೊಸ್ಮಾರಿಗುಡಿಗ ಬಲಿ ಕೊಡಕ ಅಂತ ತಮಟೆ ಬಡಿತ ಆಡು ಮರಿಗಳ ಅಟ್ಟಿಕೊಂಡು ಕುಣಿತ ಕುಲದ ಯಜಮಾನರು ತಯಾರಾಗ್ತಿದ್ರು.ಆಗ ಇದ್ದಕ್ಕಿದ್ದಂತೆ ಒಕ್ಕಲಗೇರಿ ಕಡೆ ಜನ ಕೂಗ್ತ ಹೋಗ್ತಿದ್ರು. ಇದೇನ ಅಂತ ನೋಡುದ್ರ ಆ ಯಂಕ್ಟಪ್ಪ ಮಲಗಿದ್ದ ಮಗ್ಗುಲ್ಲೆ ಸತ್ತು ಹೋಗಿದ್ದ. ಅದು ಮಾದಿಗೇರಿ ತಲುಪಿ ಕೇರಿಯ ಬೀದಿಬೀದಿನು ಸುತ್ತತೊಡಗಿತು. ಒಕ್ಕಲಗೇರಿ, ಕೆಳಗಲಕೇರಿ ಜನ ಅಂತಲ್ಲದೆ ಸುತ್ಮುತ್ತಲ ಜನ ಜಮಾವಣಿ ಆಗಿ ಮಿತಿಮಿತಿ ಮುತ್ತತೊಡಗಿದರು.

                          ----------

ಚಿನ್ನದಂಥ ಮಗ ಶಿವನಂಜ ಕಾಣದೆ ಒಂದು ಒಂದೂವರೆ ವರ್ಷವೇ ಆಯ್ತು. ಯಂಕ್ಟಪ್ಪ ತನಗೆ ಗೊತ್ತಿದ್ದ ಎಲ್ಲ ಕಡೆ ಹುಡುಕಿಸಿದರು ಶಿವನಂಜನ ಪತ್ತೆನೆ ಇಲ್ಲ. ಪೋಲೀಸ್ ಕಂಪ್ಲೆಂಟೂ ಆಗಿತ್ತು. ಇಷ್ಟಾಗಿ ಏನೂ ಆಗದ ಮಾತಾಯ್ತು. ಯಂಕ್ಟಪ್ಪನಿಗೆ ಇದೇ ಯೋಚ್ನೆ ಆಗಿ ದಿನ ಸಂಜೆ ಬೆಳಗ್ಗೆ ಅನ್ನದ ರೀತಿ ತೋಟದ ತಡಕ ಗುಳ್ಳಲ್ಲಿ ಸೇರಿ ಕುಡ್ದು ಕುಡ್ದು ಒದ್ದಾಡ್ತಿದ್ದ. ಶಿವನಂಜ ನಾಪತ್ತೆ ಆದ ಮೇಲೆ ದೂರಾಗಿದ್ದ ಗೋವಿಂದ ನಿಧಾನಕ್ಕೆ ಯಂಕ್ಟಪ್ಪನಿಗೆ ಹತ್ತಿರಾಗಿದ್ದ.

ಈ ನಡುವೆ ಚೆನ್ನಬಸವಿ ಯಂಕ್ಟಪ್ಪನ್ನ ಕಂಡು ಸಮಾಧಾನ ಹೇಳಿ ಬರುತಿದ್ದುದು ಮಾಮೂಲಿ ಆಗಿತ್ತು. ಅವಳು ಅಲ್ಲಿಗೆ ಹೋಗಿ ಬಂದಾಗೆಲ್ಲ ಅತ್ತೆ ಅಡಿನಿಂಗಿ ಮಗ ನಿಂಗಯ್ಯನಿಗೆ ಹೇಳ್ತ ನಟಿನಟಿ ಬೈದು ಜಗಳಾಡುವುದೇ ಆಗಿತ್ತು. ಇದ್ಯಾವುದಕ್ಕು ಕೇರು ಮಾಡದ ಚೆನ್ನಬಸವಿ ನೀಲ ಈತರ ಆಗಕ ಆ ಕೂಸು ಸತ್ತೊದ್ದು. ಅದು ಬದ್ಕಿದ್ರ ಅವ್ಳಿಗ ಈತರ ಆಗ್ತ ಇರಲಿಲ್ಲ ಅನ್ನೊ ಚಿಂತೇಲಿ ಚೆನ್ನಬಸವಿ ಯಂಕ್ಟಪ್ಪನ ಜೊತೆ ಹೇಳ್ತ “ನಿಮ್ಗ ದೊಡ್ಡವ್ರೆಲ್ಲ ಗೊತ್ತದ ಅವ್ಳ ಅಲ್ಲಿಗೆಲ್ಯಾರ ಸೇರ‌್ಸಿ ಏನಾರ ಮಾಡ್ಕೊಡಿ” ಅಂತ ಕೇಳ್ತಿದ್ದಳು‌. ಯಂಕ್ಟಪ್ಪನು ಅವಳಿಗೆ ಸಮಾಧಾನ ಮಾಡಿ “ಅವತ್ತು ಶಿವ್ಲಾತ್ರ ಜಿನ ಬೆಳುಗ್ಗ ಆ ದೊಡ್ಡಬಸುವುನ್ಗ ಹೇಳಿ ಆಲ್ಗೂಡ್ಗ ಕಡ್ಸು ನೋಡ್ಕ ಬತ್ತಿನಿ ಅಂತ ಹೇಳ್ಬುಟ್ಟು ಹೋದ್ನಂತ. ಅವತ್ತಿಂದ ಇವತ್ಗಂಟು ಆ ನನೈದ ಕಾಣಿ” ಅಂತ ಯಂಕ್ಟಪ್ಪ ಎದೆ ಹಿಡಿದು ಅಳುವಾಗ ಚೆನ್ನಬಸವಿಯ ಕೈತೋಳು ತಾಕಿ ಅವನ ಅಳು ನಿಂತದ್ದು ಕಂಡು ಇಡಿ ತೋಟಾಗಿದ್ ತೋಟೆಲ್ಲ ಕಿಲಕಿಲನೆ ನಗತೊಡಗಿತು.

ಈ ಕಿಲಕಿಲ ನಗುನಾಟ ಅಡಿನಿಂಗಿಯನ್ನು ಕೆಣಕಿ ಚೆನ್ನಬಸವಿ ಮುಂದಲೆ ಹಿಡಿದು ಸಸ್ತಾಡಿದಳು. ಇವರ ಸಸ್ತಾಟ ಊರಿನ ಬೀದಿಬೀದಿ ಸುತ್ತಿ ಕುಲಕ್ಕೆ ಹೋಯ್ತು. ಅಲ್ಲು ಬಗ್ಗದೆ “ಈ ಕ್ವಾಟ್ಲವಳ್ಗ ನಾ ಇರಲ್ಲ ಸಾಯ್ತಿನಿ” ಅಂತ ಸೇತುವೆ ದಾರಿ ಹಿಡ್ದಳು.

ಅವ ಹೋದಾಗ ಮೊಕ್ಕತ್ಲು. ಎಷ್ಟು ಹುಡುಕಿದರು ಸಿಕ್ನಿಲ್ಲ. ನೀಲ, “ಅವ್ವ ಅವ್ವೋ” ಅಂತ ಸಂತೆಮಾಳ ದಾರಿ ಹಿಡ್ದು ನಿಲಸೋಗಕ್ಕೆ ಹೋದಾಗ ಸರೊತ್ತು. ಚೆನ್ನಬಸವಿ ಅವರಪ್ಪನ ಮನೇಲಿ ಅಡಿನಿಂಗಿ ಕ್ವಾಟ್ಲವ ಒಪ್ಪಿಸಿ ಸಾಕಾಗಿ ಮಲಗಿದ್ದಳು. ಸರೊತ್ತಲಿ ನೀಲ ಬಂದದ್ದು ನೋಡಿ ಮಂಜ ಗಾಬರಿಯಾಗಿ ಬಾ ಅಂದ. ನೀಲ “ಅಲ್ಲಿ ಎಲ್ಲ ಗಾಬ್ರಿಯಾಗರ ಇವ ಇಲ್ ಬಂದು ಮನ್ಗಳ. ನಾನೋಗಿ ಇವಿರದ ಹೇಳ್ಬೇಕು” ಅಂತ ಅಲ್ಲಿ ನಿಲ್ಲದೆ ಆ ಗವ್ಗತ್ತಲಲ್ಲಿ ನಿಲಸೋಗ ಓಣಿ ದಾರಿಲಿ ಗುಡುಗುಡನೆ ಓಡತೊಡಗಿದಳು. ಈ ರಾತ್ರಿಲಿ ಏನ ಎತ್ತ ಅಂತ ಯೋಚನೆಗೆ ಬಿದ್ದ ಮಂಜ ಒಂದಷ್ಟು ಜನರನ್ನು ಕೂಗೆಬ್ಬಿಸಿ ಅವಳನ್ನು ಹಿಡಿದು ಕರೆ ತರಲು ಆ ಕತ್ತಲಲ್ಲಿ ಅವಳ ಹಿಂದೆ ಓಡಿದರು.

ಇದಾದ ಮೇಲೆ ಚೆನ್ನಬಸವಿ ನಿಂಗಯ್ಯ ಹೋಗಿ ಕರೆದರು ಅಡಿನಿಂಗಿಯ ಕ್ಯಾಣಕ್ಕೆ ತಿಂಗಳಾದರು ಊರಿಗೆ ಬರದೆ ನಿಲಸೋಗೆಯಲ್ಲೆ ಉಳಿದದ್ದು ಊರಲ್ಲಿ ಗುಸುಗುಸು ಎದ್ದಿತು.

ಇತ್ತ ಯಂಕ್ಟಪ್ಪ ಎಲ್ಲೊ ಹೋಗೊದು ಎಷ್ಟೊತ್ತಿಗೊ ಬರೋದು ಯಾರಾದರು ಏನಾದರು ಕೇಳಿದರೆ ಏನೂ ಮಾತಾಡದೆ ತೋಟದ ತಡಿಕೆ ಗುಳ್ಳಲ್ಲೊ ಇಲ್ಲ, ಮನೆಯ ರೂಮಲ್ಲೊ ಮಲಗೋದು ಏಳೋದು ಆಗಾಗ ಯಾವುದ್ಯಾವುದಕ್ಕೊ ರೇಗೋದು ಮಾಡ್ತಿದ್ದುದು ಒಕ್ಕಲಗೇರಿಯ ಮನೆಮನೆಗು ತಲುಪಿತ್ತು.

                     ---------

ಒಂದಿನ ನಡು ಮದ್ಯಾಹ್ನ ರವ್ಗುಟ್ಟೊ ಬಿಸಿಲು. ಚಿಂತಾಕ್ರಾಂತನಾಗಿ ಎತ್ತಿಂದಲೊ ಬಂದ ಯಂಕ್ಟಪ್ಪ ಉಸ್ಸೊ ಅಂತ ಮನೆಯೊಳಗಿದ್ದ ರೂಮಿಗೆ ಹೋದ. ಆಗ ಅಲಂಕಾರ ಮಾಡಿಕೊಂಡು ಮರದ ಕುರ್ಚಿ ಮೇಲೆ ಕುಂತಿದ್ದ ಅವನ ಹೆಂಡತಿ ಯಶೋಧ ಸುಸ್ತಾಗಿ ಬಂದಿದ್ದ ಗಂಡನಿಗೆ ನೀರು ಕೊಡಲು ರೂಮಿಗೆ ಹೋದಳು. ಯಂಕ್ಟಪ್ಪ ತೊಟ್ಟಿದ್ದ ತನ್ನ ಬಟ್ಟೆನೆಲ್ಲ ಬಿಚ್ಚಾಕಿ ಬರಿ ಮೈಯಲ್ಲಿ ಮಂಗಳೂರು ಗಣೇಶ ಬೀಡಿ ಸೇದ್ತ ನಿಧಾನಕೆ ಹೊಗೆ ಬಿಡ್ತಾ ಗ್ಲೂಕೂಸ್ ಬಿಸ್ಕೆಟ್ ತಿಂತಾ ಜೋರಾಗಿ ಗೋಡೆ ಕಿತ್ತು ಹೋಗುವ ಹಾಗೆ ಕಿರುಚುತ್ತಿದ್ದ. ಹೆಂಡತಿ ಯಶೋಧ ನೀರಿನ ಚೊಂಬನ್ನು ಕೆಳಗಿಟ್ಟು ಅವನ ಸೊಂಟದ ಸುತ್ತ ಪಂಚೆ ಸುತ್ತಿ ‘ತಿಂಗ್ಳಾಯ್ತು. ಈತರ ಆಡ್ತ ಆಡ್ತ ಮನ ಮರ‌್ಯಾದೆಯಲ್ಲ ಎಕ್ಕುಟ್ಡೋಯ್ತು. ಏನೇನ ಚಿಂತ ಮಾಡ್ತ.. ಇದ್ಯಾಕ ಇಂಗಾಡಿರಿ’ ಅಂತ ಮುಖ ತಿರುಗಿಸಿ ಬೆವರು ಒರೆಸಿಕೊಂಡಳು.

ಆಗ ಅವರ ಮನೆಯವರ ಸಯಿತ ಒಕ್ಕಲಗೇರಿಲಿದ್ದ ಅವರ ಕುಲವೆಲ್ಲ ಮಾಮೂಲಿ ತರ ಯಂಕ್ಟಪ್ಪನ ಕಿರುಚಾಟಕ್ಕೆ ದಡದಡನೆ ಓಡಿ ರೂಮು ಹೊಕ್ಕರು. ಬಂದವರನ್ನು ಸನ್ನೆ ಮಾಡಿದ. ಅವನ ಸನ್ನೆಗೆ ಬಂದವರೆಲ್ಲ ಕುಂತರು. ಅವನು ಆಡುವ ಮಾತನ್ನು ಕೇಳ್ತ ದಿಕ್ಕೆಟ್ಟವರಂತೆ ನಿಧಾನಕೆ ಒಬ್ಬೊಬ್ಬರಾಗಿ ಏನೇನೊ ಕೇಳತೊಡಗಿದರು. ಕೇಳ್ತ ಕೇಳ್ತ ಅದೇನೊ ಅರುವಾಗಿ “ಯಂಕ್ಟಪ್ಪನಿಗೆ ಮನೆದೇವ್ರು ಹೊಕ್ಕಂಡು ಬತ್ತವ್ನ” ಅಂತ ದೇವರು ಕೇಳಲು ಶುರು ಮಾಡಿದರು. ಆಗ ಯಂಕ್ಟಪ್ಪ “ಈ ಮನಲಿ ಒಂದ್ ಜೀವ ಹೋಗದ. ಜೀವುಂದಲ್ಲಿ ಏನು ಕಾಣ್ದೆರ ಹೈದ. ಆ ಹೈದ ನಾನೇ ಅನ್ಕಳಿ. ನಾನೆ ಅಂದ್ರ ಶಿವ್ನೇ ಅನ್ಕಳಿ. ಶಿವ್ನೆ ಅಂದ್ರ ಯಂಕ್ಟಪ್ನೇ ಅನ್ಕಳಿ. ಯಂಕ್ಟಪ್ನೆ ಅಂದ್ರ ಕುಲ್ದೇವ್ರೇ ಅನ್ಕಳಿ. ‘ ಅಂತ ಏನೇನೊ ಹೇಳಿ ನಿಮುರ‌್ಕಂಡು ನಿಧಾನಕೆ ಕಣ್ಣು ಮುಚ್ಚಿ ಒರಗುತ್ತ ನೆಲದ ಮೇಲೆ ಮಲಗಿದ. ಆಗ ಸೊಂಟಕ್ಕೆ ಸುತ್ತಿದ್ದ ಪಂಚೆ ಸರಿದು ನಿಟಾವಟ್ ಎಲ್ಲ ಕಾಣ್ತು. ಕುಂತಿದ್ದ ಹೆಂಗಸರು ಎದ್ದು ಓಡುದ್ರು. ಆಮೇಲೆ ಎಚ್ಚರವಾದವನಂತೆ “ಇದ್ಯಾಕ ಎಲ್ಲ ಹಿಂಗ್ ಬಂದು ಕುಂತಿದರಿ” ಅಂದ.

ಈ ಸುದ್ದಿ ನಿಲಸೋಗೆಯಲ್ಲಿದ್ದ ಚೆನ್ಮಬಸವಿಗೂ ತಲುಪಿತ್ತು.

ನಿಲಸೋಗೆಯಿಂದ ಬಂದವಳು ಕನ್ನಡಿ ಮುಂದೆ ನಿಂತು ತಲ ಬಾಚ್ಕಂಡು ಪೌಡ್ರು ಸ್ನೌ ಕಪ್ಪು ಹಾಕಂಡು ತಲೆ ಮೇಲೆ ಸೆರಗ ಎಳಕೊಂಡು ‘ಆ ಯಂಕ್ಟಪ್ಪೋರ‌್ಗ ದೇವ್ರ್ ಬಂದುದಂತ. ಎಲ್ಲನು ಹೇಳ್ದರಂತ.. ನನ್ ಕಸ್ಟ ಹೇಳ್ಕಂಡು ಕೇಳ್ಕಂಡು ಬತ್ತಿನಿ” ಅಂತ ನೀಲಳಿಗೆ ಹೇಳೋಳಂಗೆ ಹೇಳ್ತ ಅಡಿನಿಂಗಿನ ಕೆಕ್ಕಳಿಸಿ ನೋಡ್ತ ರೋಡಿಗೆ ಬಂದು ಒಕ್ಕಲಗೇರಿ ಕಡೆ ತಿರುಗಿದಾಗ ಸೌದೆ ಹೊಡೆಯಲು ಡಿಪೋಗೆ ಹೋಗಿದ್ದ ಗಂಡ ನಿಂಗಯ್ಯ ಇನ್ನೂ ಬಂದಿರಲಿಲ್ಲ.

ಅಡಿನಿಂಗಿ ಕುಂತಲ್ಲೆ ಮುಕ್ಕರಿದು “ಇವ್ಳ ಆಂಕಾರ ಮುರ‌್ಯಾದ್ಯಾವತ್ತ” ಅಂತ ನೀಲಳ ಕಡೆ ನೋಡಿ ಕಣ್ಣಲ್ಲಿ ನೀರು ಕಚ್ಚಿಕೊಂಡಳು.

                        --------

ಚೆನ್ನಬಸವಿ ಯಂಕ್ಟಪ್ಪನ ಮನೆ ಮುಂದೆ ನಿಂತಾಗ
ಅವನ ಹೆಂಡತಿ ಯಶೋಧ ಚೆನ್ನಬಸವಿಗಿಂತಲು ಚೆನ್ನಾಗಿಯೇ ಕಂಡಳು. “ಇದೇನ ಬಸ್ವಿ ಈಗ ತಿಂಗ್ಳಾಯ್ತು ನೋಡಿ ಅದೆಲ್ಲಿಗೋಗಿದ್ದ.. ಅವ್ರು ಮನ್ಗರ ಆಮೇಲ ಬರಗು. ಏನಾಯ್ತು.. ನೀಲ ಹೆಂಗಿದ್ದಳು.. ಎರ‌್ಡೊರ‌್ಸೆ ಆಯ್ತು ಅಲ್ವ.. ಯಾರಾ ಏನಾ ಅಂತ ಗೊತ್ತಾಯ್ತಾ..” ಅಂದಳು. ಯಶೋಧ ಮಾತು ಕೇಳಿ ಚೆನ್ನಬಸವಿಗೆ ಮಾತೆ ಬರಲಿಲ್ಲ. ಆಗ ಒಳಗಿಂದ ಟವಲ್ಲು ಒದರುತ್ತಾ ಬಂದ ಯಂಕ್ಟಪ್ಪ ‘ನಿಂಗ್ಯಾಕ ಅದೆಲ್ಲ.. ತಿಕ ಅಮಿಕ ಕೂತ್ಕ. ನಿನ್ ಕುಡಿನೇ ಕಾಣ್ದು ಅದೇನಾರ ಚಿಂತ ಇದ್ದ ನಿಂಗ. ಗ್ಯಾನ್ಗೆಟ್ಟವ್ಳ.. ಮದ್ಯಾನನೇ ತ್ವಾಟುಕ್ಕೋಗಿ ಮೋಟ್ರು ಆನ್ ಮಾಡಿ ಹಿಪ್ನೇರಳ ತ್ವಾಟ್ಗ ನೀರ್ ಬುಡು ಅಂದಿ ಮಾಡ್ದ್ಯಾ” ಅಂತ ರೇಗಿದ. ಅವನ ರೇಗಿಗೆ ಸೋಡು ತಿರುಗಿಸಿ ಸಿಡುಕಿ ಬೀದಿಗೆ ಬಿದ್ದ ಯಶೋಧ ತಲೆಗೆ ಮುಡಿದಿದ್ದ ಮಲ್ಲಿಗೆ ಮೊಗ್ಗು ಗಮಗುಡುತ್ತಿತ್ತು.

ಅವಳು ತೋಟಕ್ಕೆ ಹೋದಾಗ ಸಂಜೆ ಐದರ ಹೊತ್ತು. ಅಲ್ಲಿ ಗೋವಿಂದನಿದ್ದ. ಅಲ್ಲೆ ಕೆಲಸಕ್ಕಿದ್ದ ಈ ಗೋವಿಂದ ಶಿವನಂಜನ ಸಿಟ್ಟಿಗೆ ಯಂಕ್ಟಪ್ಪನ ಜೊತೆ ಕೆಲಸ ಬಿಟ್ಟು ಹೋದವ ಶಿವನಂಜ ನಾಪತ್ತೆ ಆದ ಮೇಲೆ ಯಂಕ್ಟಪ್ಪನೇ ಗೋವಿಂದನ ಜೊತೆಗಾಕಂಡು ಅವನ ಹುಡುಕ್ತ ಅಲ್ಲಿ ಇಲ್ಲಿ ಸುತ್ತುತ್ತ ಮೊದಲಿನ ತರ ಅಲ್ಲದಿದ್ದರು ಜೊತೆಗಿದ್ದ. ಗಂಡನೊಂದಿಗೆ ಸೋಡು ತಿರುಗಿಸಿ ಸಿಡುಕಿ ಬಂದಿದ್ದ ಯಶೋಧ ಮಿರಮಿರ ಮಿಂಚುತ್ತಿದ್ದಳು. ಅವ್ವನ ವಯ್ಯಾರ ಶಿವನಂಜನಿಗೂ ಗೊತ್ತಿತ್ತು. ಇದೂ ಗೊವಿಂದನ ಮೇಲೆ ಹಗೆಗೆ ಕಾರಣವಾಗಿತ್ತು.

ಈಗ ಅವನನ್ನೂ ಅವಳನ್ನೂ ಒಂದಾಳಿಗೂ ಮೇಲೆದ್ದು ಬೆಳೆದು ತೊನ್ಯಾಡುತ್ತಿದ್ದ ಹಿಪ್ಪನೇರಳೆ ತೋಟ ಒಳಗೆಳೆದು ಹೊದ್ದುಕೊಂಡದ್ದನ್ನು ಎಳೂರುಂಡಿಗೋಗಿ ಬರುತ್ತಿದ್ದ ನವುಲೂರಮ್ಮ ಕಂಡಂಗೆ ಆಯ್ತು. ಅದು ಅಡಿನಿಂಗಿಗೆ ತಲುಪಿ ಇಡೀ ಒಕ್ಕಲಗೇರಿ ಮಾದಿಗೇರಿನೇ ಆಳತೊಡಗಿತ್ತು.

                   -------

ಈಗ ಯಂಕ್ಟಪ್ಪನ ಹೆಂಡತಿ ಯಶೋಧ ತಲೆತುಂಬ ಹೂವ ಮುಡಿದು ಹಣೆತುಂಬ ಕುಂಕುಮ ಇಟ್ಟುಕೊಂಡು ಕೈತುಂಬ ಬಳೆ ತೊಟ್ಟುಕೊಂಡು ಸತ್ತ ಯಂಕ್ಟಪ್ಪನ ಮೇಲೆ ಬಿದ್ದು ಗೋಳಿಡುತ್ತಿದ್ದಾಗ ಚೆನ್ನಬಸವಿ ತಲೆ ಮೇಲೆ ಸೆರಗೆಳೆದುಕೊಂಡು ಕಣ್ಣೀರು ಕಚ್ಚಿಕೊಂಡು ಸೆರಗಲ್ಲಿ ಮೂಗು ಒರೆಸಿಕೊಂಡಳು.

ಸಂಜೆ ಮೊಕ್ಕತ್ತಲ ಬೆನ್ನಿಗೆ ಸೌದೆ ಹೊಡೆದು ಕೊಳ್ಳಿ ಹೆಗಲಿಗೇರಿಸಿಕೊಂಡು ಬೀಡಿ ಸೇದುತ್ತ ಚಿಣ್ಣಕೊಪ್ಪಲು ಮಾಳದಲ್ಲಿ ಸಿಕ್ಕ ನಿಂಗಯ್ಯನಿಗೆ ಒಂದೆರಡು ಪ್ಯಾಕೆಟು ಕೈಗಿಟ್ಟು ಜೋಬಿಗೆ ಕೈ ಹಾಕಿ ಎಷ್ಟು ಸಿಕ್ಕುತ್ತೊ ಅಷ್ಟನ್ನು ಅವನ ಜೋಬಿಗಾಕಿ ‘ನಡಿ ನಿಂಗ ಬತ್ತಿನಿ’ ಅಂತ ಹೋಗ್ತಿದ ಯಂಕ್ಟಪ್ಪ ಇವತ್ತು ಈತರ ಸತ್ತು ಮಲಗಿರುವುದು ಅರಗಿಸಿಕೊಳ್ಳಲಾರದ ನಿಂಗಯ್ಯನ ಕಣ್ಣಲ್ಲು ನಿರಾಡ್ತಿತ್ತು.

          ‌‌‌              ----------

ಅವತ್ತು ಯಂಕ್ಟಪ್ಪನ ತಿಂಗಳ ತಿಥಿ. ಮನೆ ಒಳಗಿನದು ಬಿಟ್ಟು ಹಿತ್ತಿಲ ಎಲ್ಲ ಜವಾಬ್ದಾರಿ ಗೋವಿಂದನದೆ. ಚೆನ್ನಬಸವಿನು ನಿಂಗಯ್ಯನು ಯಂಕ್ಟಪ್ಪನ ತಿಥಿ ಊಟ ಮಾಡ್ಕಂಡು ಹಂಗೆ ಬೋಸಿಗು ತುಂಬುಸ್ಕಂಡು ಬಂದಿದ್ರು. ಅದರ ಬೆಳುಗ್ಗ ಅವ್ವ ಅಪ್ಪ ಕರುದ್ರು ಅಂತ ನಿಲಸೋಗೆಗೆ ಹೋಗಿ ಬರೊವಾಗ ಅಳ್ತ ಬಂದಳು. ಇನ್ನು ಎಷ್ಟು ದಿನ ಅಂತ ಅಂವ ಹಿಂಗೆ ಇರದು ಆದ್ದು ಆಯ್ತು ಮದ್ವಗಿದ್ವ ಮಾಡವ ಅಂತ ಮಾತಾಗಿತ್ತು. ಮಂಜನಿಗೆ ಮದುವೆ ಗೊತ್ತಾದ ಮೇಲೆ ಚೆನ್ನಬಸವಿ ಹಗಲು ರಾತ್ರಿ ಯೋಚಿಸಿದಳು. ನೀಲನ್ನ ನೋಡಿ ಅಳೋಳು.

ಅವತ್ತು ಶಿವರಾತ್ರಿ. ನೀಲ ಈತರ ಆಗಿ ಎರಡು ವರ್ಷ ಆಗಿತ್ತು. ಊರಿಗೂರೇ ಬೆಟ್ಟಕ್ಕೆ ಹೋಗಿತ್ತು. ಅವಳಿಗೆ ಈತರ ಆದ ಮೇಲೆ ಶಿವಯ್ಯನ ಮನೆಯವರ ಸಯಿತ ಇವರ‌್ಯಾರೂ ಬೆಟ್ಟಕ್ಕೆ ಹೋಗುವುದಿರಲಿ ಆ ಮಲೈ ಮಾದೇಶ್ವರನ ಬಗ್ಗೆ ಮಾತೇ ಇಲ್ಲ. ಊರಲ್ಲಿ ಇದ್ದಬದ್ದವರು ಜಾಗರಣೆ ಅಂತ ಬೀದೀಲಿ ಕುಂತು ಮಾತಾಡ್ತ, ಆಣಿಕಲ್ಲು ಆಡ್ತ ಅಳಿಗುಳಿ ಆಡ್ತ ಪರಸಂಗ ಹೇಳ್ತ ನಕ್ಲಿ ಮಾಡ್ತ ಇದ್ದರು. ಶಿವಯ್ಯ ತಾನು ನೋಡಿದ್ದ ರಾಜಕುಮಾರನ ದೇವರು ದಿಂಡ್ರು ಪಿಚ್ಚರ್ ಸ್ಟೋರಿ ಹೇಳ್ತ ಇದ್ದರೆ ಅಡಿನಿಂಗಿ ಸಿದ್ದಿ ಐಕ ಮಕ್ಕಳು ಜಗುಲಿ ಉದ್ದಕ್ಕು ಕುಂತು ಕೇಳ್ತಿದ್ದರು. ನೀಲ ಶಿವಯ್ಯನ ಕಥೆ ಕೇಳ್ತ ‘ಹಂಗ್ಯಾ.. ಹ್ಞೂ..’ ಅಂತ ನಗೋಳು.

ಆಗ ಚೆನ್ನಬಸವಿ ಎತ್ತಗು ನೋಡ್ದೆ ಸಂದಿಗುಂಟ ಬಂದು ಮೋರಿ ಕಲ್ಮೇಲ ನಿಂತು ನೋಡ್ತ ಇರೋವತ್ಲಿ ನೀಲ “ಏ ಅವ್ವ ಮಂಜುನ್ಗ ಮದ್ವನಂತ.. ಹೆಣ್ ಚೆನ್ನಗಿದ್ದಾ.. ಮದ್ವಗ ನಾನು ಬತ್ತಿನಿ. ನಂಗ ಸೀರ ರವ್ಕ ತಕ್ಕೊಡಕೇಳು ಆ ನನೈದುನ್ಗ. ಅಂವ ತಕ್ಕೊಡ್ನಿಲ್ಲ ಅಂದ್ರ ಅವ್ನ್ ಮುಂದಲ ಸಸಿತಿನಿ‌. ಹಂಗೆ ನನ್ನ ಮದ್ವಗ ಕರ‌್ಕ ಹೋಗ್ನಿಲ್ಲ ಅಂದ್ರ ನಿನ್ ಮುಂದಲನು ಸಸ್ತಾಕ್ತಿನಿ” ಅಂತ ರೇಗ್ತಾ ಕಿಸಿಕಿಸಿ ನಗತೊಡಗಿದಳು.

                      ----------

ಅದಾಗಿ ಮುಂಗಾರು ಬೀಸ್ತಿತ್ತು. ಮಂಜನಿಗೆ ಮದುವೆ ಆಗಿ ತಿಂಗಳಾಗಿತ್ತು. ಹೊಸ ಹೆಂಡತಿ ಜೊತೆ ಬ್ಯಾಸ್ಕೆಟ್ ತುಂಬ ಹಣ್ಣು ಬಿಸ್ಕೆಟ್ ತುಂಬ್ಕಂಡು ಬಂದು ನಡು ಮನೆಯಲ್ಲಿ ಕುಂತಿದ್ದರು. ನಿಂಗಯ್ಯ ನಗ್ತಾ ಮಾತಾಡ್ಸಿ “ಕುಂತ್ಕ ಬತ್ತಿನಿ” ಅಂತ ಗರ್ಗೇಶ್ವರಿ ಸಾಬರಗೇರಿಗೆ ಬಾಡು ತರಲು ಹೋದ. ಚೆನ್ನಬಸವಿ ಅವತ್ತು ಮದುವೆ, ಬೀಗರೂಟ ಎಲ್ಲ ಮುಗಿಸಿ ನಿಲಸೋಗೆಯಿಂದ ಬರೊ ಹೊತ್ತಲ್ಲಿ “ಶಾಸ್ತ್ರಗೀಸ್ತ್ರ ಮುಗಿಸ್ಕಂಡು ಯೆಡ್ತಿ ಕರ‌್ಕಂಡು ಊರುಗ್ ಬಾ” ಅಂದಿದ್ದಳು.

ಮಂಜ ಬಂದದ್ದು ಗೊತ್ತಾಗಿ ಅಕ್ಕಪಕ್ಕದವರು ಬಂದು ಮಂಜನನ್ನ ಮಾತಾಡಿಸಿ ಅವನ ಹೆಂಡತಿನೂ ಮಾತಾಡುಸ್ತ ಹಂಗೆ ಅವಳ ತಾಳಿ ಮುಟ್ಟಿ ನೋಡ್ತ ‘ಅಗಲಾಗಿ ದಪ್ಪಗಿ ಚೆನ್ನಗಿರದ್ ಮಾಡ್ಸರ” ಅಂತ ಅನ್ನುತ್ತಿದ್ದರೆ ಅವಳ ಮುಖ ಅರಳ್ತಿತ್ತು. ನಡುನಲ್ಲಿ ಡಾಬೂ ಇತ್ತು. ಕಿವಿಲಿ ಓಲೆ ಜುಮುಕಿ ನ್ಯಾತಾಡ್ತ ಇದ್ದವು. ಮಂಜ ಯವರಸ್ತ ಅನ್ನೊದ್ಕ ಅವನ ಹೆಂಡತಿಲೇ ಎಲ್ಲ ಕಾಣ್ತಿತ್ತು. ಇದೆಲ್ಲ ನೋಡ್ತ ಕೇಳ್ತ ಏನೂ ಮಾತಾಡದೆ ಕುಂತಿದ್ದ ಚೆನ್ನಬಸವಿ ಕಣ್ಣಲ್ಲಿ ನೀರು ಬರ‌್ತಿತ್ತು. ಅಲ್ಲಿಗೆ ಅಡಿನಿಂಗಿ ಸಿದ್ದಿ ಶಿವಯ್ಯನೂ ಬಂದು ಮಾತಾಡಿಸಿ ಹೋದರು. ನೀಲ ತೆಂಗಿರಮರ ಬಿಟ್ಟು ಬರದೆ ನಿಂತಲ್ಲೆ ಕಿಸಿಕಿಸಿ ಅಂತ ನಗ್ತಿರುವಾಗ ಗಳ್ಳಾಕಿ ಜೋರಾಗಿ ಅರಚುವ ಸದ್ದು. ಒಳಗಿದ್ದವರು ಇದ್ದಕ್ಕಿದ್ದಂತೆ ದಡಬಡನೆ ಹೊರ ಬಂದರು. ಶಿವಯ್ಯ ಇದೇನ ಅಂತ ಓಡಿ ಹೋದ. ಹೊರ ಬಂದವರು ಗಾಬರಿಯಾಗಿ ನಿಂತಿದ್ದರು. ಶಿವಯ್ಯ ದಾರಿ ಮಾಡಿಕೊಂಡು ಒಳಹೋದ. ಮಂಜನ ಹೊಸ ಹೆಂಡತಿ ಹೆದರಿದವಳಂತೆ ಅವಳೂ ಹೊರಕ್ಕೆ ಬಂದಳು.

ನಡುಮನೆ ಗೋಡೆ ಹೊತ್ತಿಗೆ ಏನೂ ಮಾತಾಡದೆ ಕಣ್ಣೀರಾಕುತ್ತ ಕುಂತಿದ್ದ ಚೆನ್ನಬಸವಿ ತಾನುಟ್ಟಿದ್ದ ಸೀರೆ ರವಿಕೆ ಬಿಚ್ಚಾಕಿ ನಿಟಾವಟ್ ಕುಂತು ಅರಚುತ್ತ ಒದರಾಡುತ್ತಿದ್ದಳು. ಮಂಜ ತೊಲೆ ಮೇಲಿದ್ದ ರಗ್ಗು ಎತ್ತಿ ಅವಳ ಮೇಲೆ ಹಾಕಿ ಮುದುಡಿ ತಬ್ಬಿಡಿದು “ಅಕೈ.. ಅಕ್ಕ, ಇದೇನ ಇದ್ಯಾಕಕ್ಕ ಏನಾಯ್ತು” ಅಂತ ಒಂದೇ ಸಮ ಕೇಳ್ತಿದ್ದ. ಶಿವಯ್ಯ “ಸುಮ್ನಿರು ಮಂಜ ನಿದಾನ್ಸು” ಅಂತ ಹೊರಗೆ ನಿಂತಿದ್ದ ಹೆಂಗಸರ ಕರೆದು ಚೆನ್ನಬಸವಿಗೆ ಸೀರೆ ಉಡಿಸಿ ನೀರು ಕುಡಿಸಿದರು. ಅವಳು ಸುಧಾರಿಸಿಕೊಂಡು ‘ಬೀಡಿ ತತ್ತಾ.. ಕಡ್ಡಿಪೆಟ್ಟಿ ತತ್ತಾ’ ಅಂದಳು. ಅವಳ ಮಾತಿಗೆ ಯಾರೂ ಕೇರು ಮಾಡದೆ ನಿಂತಿದ್ದರು. ಆಗ ಅವಳು ಒದರುತ್ತ “ಏಯ್ ಬೀಡಿ ತತ್ತರಿ ಅಂದ್ರ ನಿಂತ್ಗ ನೋಡ್ತ ಇದ್ದರ‌್ಯಾ.. ಮರ‌್ವಾದಿ ಇಲ್ವ” ಅಂತ ದನಿ ಎತ್ತರಿಸಿದಳು. ಮಂಜ ಜೋಬಲ್ಲಿದ್ದ ಬೀಡಿನು ಕಡ್ಡಿ ಪೆಟ್ಟಿನು ಕೊಟ್ಟ. ಅವಳು ಅದನ್ನು ನೋಡಿ ತೂದಿ ಎಸೆದು “ಇದ ನಾ ಸೇದದು.. ಲಕ್ಷ್ಮಿ ಬೀಡಿನ ನಾ ಎಂದಾದ್ರು ಸೇದಿರದ ನೋಡಿದರ‌್ಯಾ.. ನಾ ಯಾರ ಅಂತ ಗೊತ್ತಾ.. ಏಯ್ ನಂಗ ಮಂಗ್ಳೂರ್ ಗಣೇಶ ಬೀಡಿ ಬೀಗದೆಸಳುನ್ ಕಡ್ಡಿಪೆಟ್ಟಿ, ಗುಲ್ಕೊಸ್ ಬಿಸ್ಕೆಟ್ ಬೇಕು ತತ್ತರಿ ಹೋಗಿ..” ಅಂತ ಗದರಿದಳು.

ಇದು ಊರ ಬೀದಿಬೀದಿನು ಚೆಲ್ತು. ಒಕ್ಕಗೇರಿಗು ಮುಟ್ತು. ಎಲ್ಲ ಕಡೆಯಿಂದ ಜನ ಬಂದು ಸೇರ‌್ತು. ಆ ಜನ “ಯಂಕ್ಟಪ್ಪ ಗಾಳಿ ಆಗಿ ಇವ್ಳ ಹಿಡ್ಕಂಡನ. ನೋಡ್ರಿ ಅವ್ನಂಗೆ ಆಡದ. ಅಂವ ಸೇದ ಬೀಡಿನೇ ಕೇಳ್ತ ಇರದ..” ಅಂತ ಏನೇನೋ ಮಾತಾಡ್ತ ಇದ್ದರು.

ಆಗ ಬಾಡಿಗೆ ಸೈಕಲ್ ತಕ್ಕಂಡು ಗರ್ಗೇಶ್ವರಿ ಸಾಬರಗೇರಿಗೆ ಬಾಡು ತರಲು ಹೋಗಿದ್ದ ನಿಂಗಯ್ಯ ಎಡಗಡೆ ಹ್ಯಾಂಡಲ್ಗೆ ಬಾಡಿನ ಬ್ಯಾಗು ಸಿಕ್ಕಿಸಿಕೊಂಡು ಬರ‌್ತಾ ಇದ್ದವನು ಜನರ ಗುಂಪು ಗಲಾಟಿ ನೋಡಿ ಸರ‌್ರಂತ ಇಳಿದು ಬೆರಗಿನಿಂದ ನೋಡುತ್ತ ಒಂದೊಂದೆ ಹೆಜ್ಜೆ ಇಡುತ್ತ ಸಂದಿಗುಂಟ ನಡೆದು ಒಳ ಹೋದಾಗ ಚೆನ್ನಬಸವಿ ಸುಸ್ತಾಗಿ ಉಸ್ ಅಂತ ನಿಧಾನಕೆ ಕಣ್ಣು ಬಿಟ್ಟು ನೋಡಿದ್ದು ಮಂಪರು ಮಂಪರಾಗಿ ಕಾಣ್ತ ಆ ಕಡ್ಡಬುಡ್ಡಯ್ನ ಕಡ್ಡಬುಡ್ಡ ಸದ್ದಿನ ಸಂದಿಯಲ್ಲಿ ತಲೆ ಬೋಳಿಸಿಕೊಂಡು ಹಿಂದಲ ಅಂದಚೆಂದವ ತುಂಬಿಕೊಂಡು ತೆಂಗಿನಮರ ಒರಗಿ ಕಿಲಕಿಲ ನಗ್ತ ನಿಂತಿದ್ದ ನೀಲಳ ಗ್ಯಾನದಲ್ಲಿ ಸೂರ್ಯ ನೆತ್ತಿಗೇರಿದ್ದ.

ನೀಲಳ ತಲೆ ಬೋಳಿಸಿದ ಸಂದೀಲಿ ಯಂಕ್ಟಪ್ಪನ ಕೇಳಲು ಬತ್ತೀನಿ ಅಂದ ಒಕ್ಕಲಗೇರಿಯವರೂ ಬರಲಿಲ್ಲ. ಈ ಚೆನ್ನಬಸವಿಯ ಮೇಲೆ ಯಂಕ್ಟಪ್ಪನೂ ಬರಲಿಲ್ಲ.

-ಎಂ.ಜವರಾಜ್


[ ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ ]


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x