“ಕತ್ತಲ ಹೂವು” ನೀಳ್ಗತೆ (ಕೊನೆಯ ಭಾಗ): ಎಂ.ಜವರಾಜ್

ಚೆನ್ನಬಸವಿ ಸತ್ತು ವರ್ಷದ ಮೇಲಾಯ್ತು.

ಒಂದೆರಡು ವರ್ಷಗಳಿಂದ ಹೊಟ್ಟೆ ನೋವು ಸುಸ್ತು ಸಂಕ್ಟ ವಾಂತಿ ಬೇಧಿ ಬಾಧೆಯಿಂದ ನರಳುತ್ತ ಮಲಗಿದ ಮಗ್ಗುಲಲ್ಲೇ ಹೇಲು ಉಚ್ಚೆ ಎಲ್ಲನು ಮಾಡಿಕೊಳ್ಳುತ್ತಿದ್ದಳು. ಇದನ್ನು ನೋಡಿ ಸೊಸೆ ‘ತೂ ಛೀ..’ ಅಂತ ರೇಗ್ತಾ ಉಗಿತಾ ಮಲಗಿದ್ದವಳನ್ನು ಎತ್ತಿ ದರದರ ಎಳೆದು ಜಾಡಿಸಿ ಒದ್ದು ಮನೆಯಿಂದ ಹೊರಕ್ಕೆ ಬಿಸಾಕಿದ್ದಳು. ಮೊಕ್ಕತ್ತಲ ಬೆನ್ನಿಗೆ ಬಂದ ಸಿದ್ದೇಶ ಕುಡಿದ ಮತ್ತಿನಲ್ಲಿ ‘ಅವ್ವುನ್ಗ ಈತರ ಮಾಡಿದ್ದಯಲ್ಲ ಲೌಡಿಮುಂಡ’ ಅಂತ ಹೆಂಡತಿ ಮುಂದಲೆ ಹಿಡಿದು ಬೀದಿಲಿ ನಿಲ್ಸಿ ಒದ್ದಿದ್ದ. ಅವಳು ಚಿಳ್ಳನೆ ಚೀರಿ ಕುಡಿದು ಮತ್ತಿನಲ್ಲಿದ್ದ ಗಂಡನನ್ನು ತಳ್ಳಿ ಎಳೆದಾಡಿ ಒದ್ದು ಮೋರಿಗೆ ಬಿಸಾಕಿದ್ದಳು. ಅವನ ಇಬ್ಬರು ಗಂಡು ಮಕ್ಕಳು ಅವ್ವಳ ಕಿರುಚಾಟ ರಂಪಾಟ ಮೋರಿಗೆ ಬಿದ್ದು ನರಳಾಡುತ್ತಿದ್ದ ಅಪ್ಪನ ನೋಡ್ತ ಅಳ್ತ ಜಗುಲಿ ಮೇಲೆ ಬೆಪ್ಪಾಗಿ ನಿಂತಿದ್ದವು.

ಇತ್ತ ಮೊಕ್ಕತ್ತಲಾದರು ಚೆನ್ನಬಸವಿ ಏಳಲಾಗದೆ ಬೀದೀಲಿ ಬಿದ್ದಲ್ಲೇ ಬಿದ್ದು ನರಳುತ್ತ ಕೈಸನ್ನೆ ಬಾಯ್ಸನ್ನೆ ಮಾಡ್ತ ಅಳುತ್ತಿದ್ದಳು. ಅವಳ ಕೈಸನ್ನೆ ಬಾಯ್ಸನ್ನೆನ ಕೈ ತೋರುತ್ತ ಆಡಿಕೊಳ್ತ “ಅದೇನಾರಿ ಕ್ವಾಟ್ಲ ಕೊಟ್ಟಯ.. ನೀನು ನಿನ್ ಮಗ ಅಲ್ಲೆ ಬಿದ್ದಿರಿ. ನೀವೆಲ್ಲ ಅದ್ಯಾವತ್ ನಿಗ್ರುಕಂಡರ‌್ಯಾ” ಅಂತ ನಟಿನಟಿ ಬೊಯ್ಯುತ್ತಿದ್ದಳು. ಅಕ್ಕಪಕ್ಕದವರು ಸಮಾಧಾನ ಮಾಡಿದರು ಕೇಳುವ ಮಾತಿಲ್ಲ. ಶಿವಯ್ಯ ಸಿದ್ದಿ ಅವನ ಮಕ್ಕಳು ಎಲ್ಲರು ಹೇಳಿದರು ಕೇಳದೆ ಚೆನ್ನಬಸವಿಯ ಸೊಸೆಯ ನಟಿನಟಿ ಮಾತು ನಿಲ್ಲದೆ ಬೀದಿಲಿ ಧೂಳೆರಚಿ ಶಾಪಾಕ ತೊಡಗಿದಳು.
ಆಗ ಏನೂ ಮಾತಾಡದೆ ಕಿಸಿಕಿಸಿ ನಗ್ತ ತೆಂಗಿನ ಮರ ಒರಗಿ ನಿಂತಿದ್ದ ನೀಲ “ಅದ್ಯಾಕಮ್ಮಿ ಹಂಗಾಡ್ದೈ.. ನಮ್ಮೊವ್ವನ ಹಂಗಂದೈ.. ನಮ್ಮೊವ್ವನ್ಯಾಕಮ್ಮಿ ಒದ್ದು ಆಚ್ಗ ಎಳ್ದಾಕ್ದ.. ಜಾಡ್ಸಿ ಒದ್ರ ನಡ ಮುರ‌್ದೊಗ್ಬೇಕು ನಾಯಿಮುಂಡ” ಅಂತ ಅವಳ ಮುಂದಲೆ ಹಿಡಿದು ಸಸ್ತಾಕ್ದ. ಸಿದ್ದೇಶನ ಹೆಂಡತಿಯೂ ಮೊದಲಿನ ಹಾಗೆ ಹೆದರದೆ ಅವಳೂ ನೀಲಳ ಜುಟ್ಟಿಡಿದು ಸಸ್ತಾಕಿದಳು. ಸೂರಿ ಒಂದ್ಸಲ ತಲೆ ಬೋಳಿಸಿದ ಮೇಲೆ ಪುನ ತಲೆಕೂದಲು ಬೆಳೆದು ಸೋಪು ನೀರಿಲ್ಲದೆ ಅದೂ ಜಡೆಯಾಗ್ತ ಇತ್ತು. ಅವಳು ಸಸ್ತೇಟಿಗೆ ನೀಲ ಅರಚುತ್ತ ಓಡುತ್ತ ರೂಮಿನ ಬಾಗಿಲು ತೆಗೆದು ಒಳಗೆ ಹೋದಾಗ ಮನೆಯಾಗಿದ್ದ ಮನೆಯೆಲ್ಲ ಗಬ್ಬುನಾತ ಬೀರುತ್ತಿತ್ತು. ಆ ಗಬ್ಬುನಾತ ಒಂದು ದಿನವಲ್ಲ ಅವಳು ರೂಮು ತೆಗೆದು ಒಳಗೆ ಹೋಗುವಾಗ ಬರುವಾಗ ಮಾಮೂಲಿಯಾಗಿ ಆ ಗಬ್ಬುನಾತವು ಆ ಮನೆಗೂ ಒಗ್ಗಿ ಹೋಗಿತ್ತು.

ಆಗಾಗ ಅಕ್ಕಪಕ್ಕದವರು ಚೆನ್ನಬಸವಿನೊ ಸಿದ್ದೇಶನನ್ನೊ ಮಾತಾಡಿಸಲೋ ಅಥವಾ ಆಕಡೆ ಬೀದಿಯಿಂದ ಈಕಡೆ ಬೀದಿಗೆ ಬೇಗ ದಾಟಲು ಸಂದಿಗುಂಟ ಹೋಗುವವರು ಮೂಗು ಮುಚ್ಚಿಕೊಂಡೆ ಹೋಗುತ್ತಿದ್ದರು. ಕೆಲವರು ಹೋಗ್ತ ಸುಮ್ಮನೆ ಹೋಗದೆ “ಎಲ್ಲನು ಎತ್ತಾಕಿ ದುಂಬು ಧೂಳು ವಡ್ದು ಅಚ್ಕಟ್ಟು ಮಾಡಕಿಲ್ವ.. ನಂಟ್ರು ಯತ್ರು ಅವ್ರು ಇವ್ರು ಬಂದ್ರ ಸಿಬ್ರುಸ್ಕಳಲ್ವ” ಅಂದರೆ “ಅಯ್ಯೋ ಸಿಬ್ರಸ್ಕಂಡ್ರ ಸಿಬ್ರುಸ್ಕತರ ತಕ್ಕ. ಅದ್ಯಾರ್ ಮಾಡ್ದರು. ಅವ್ರ್ ಹೇಲು ಉಚ್ಚನೆಲ್ಲ ಗೋರಾಕಕ್ಯಾ ನಾ ಇರದು. ಅವ್ಳ್ ಅವ್ಳಲ್ಲ ಮಗ್ಳು ಶಿವಿ ಅದೆ ಸುಶೀಲ ಮುದ್ಕಿಚಿಕ್ನುಂಡಿಯಿಂದ ಬಂದು ಮಾಡ್ಲಿ. ಯಂಕ್ಟಪ್ಪ ಬತ್ತನ ಅಂತ ವಾರೋರುಕ್ಕು ಬಂದು ಬಂದು ಕಾಸು ಕರಿಮಣಿ ಹಣ್ಣು ಹಂಪ್ಲು ಅಂತ ಬ್ಯಾಸ್ಕೆಟ್ ತುಂಬ ತುಂಬ್ಕ ಹೊಯ್ತಿದ್ಲಲ್ಲ ಬಂದು ಮಾಡ್ಲಿ.. ಅವತ್ ಬೇಕಿತ್ತು ಇವತ್ ಬ್ಯಾಡ್ವ ಅವ್ವ ಅಂತ… ನಾ ಯಾಕ್ ಮಾಡ್ಲಿ ನಂಗೇನ್ ದರ್ದ್ ಬಂದಿದ್ದ.. ಹೆಂಗಾರು ಇರ‌್ಲಿ.. ಇಂಕ್ರ ಇವು ಬ್ಯಾಗ್ನ ನಿಗುರ‌್ಕಂಡ್ರ ನನ್ಗು ನೆಮ್ದಿ” ಅಂತ ಮುಕ್ಕರಿತಿದ್ಲು.

ಹಿಂಗೆ ಆಯ್ತ ಆಯ್ತ ಕಾರ್ತಿಕ ಕಳ್ದು ಷಷ್ಠಿ ಹಬ್ಬ ಬಂತು.

ಸಿದ್ದೇಶ ಕುಡಿದು ಬಂದು ಮಲಗಿದ್ದ. ಗಂಡನನ್ನು ಏಳಿಸಿ “ಏಯ್ ನಾಯಿ, ಈ ಬೆಯಿಸ್ದೋರುಕ್ಕ ಸ್ರುಸ್ಟಿ ಅದ. ಹುತ್ಗ ತನಿ ಎರ‌್ದು ಕೋಳಿ ಕುಯ್ಬೇಕು. ನಾಳ ಸಂತ್ಗೋಗಿ ಒಂದ್ ಕೆಂಪುಂಜ ತಕ್ಕ ಬಾ ” ಅಂದಳು. ಸಿದ್ದೇಶ ಹ್ಞೂಂಕಂಡು “ಕಾಸೆಲ್ಲಿದ್ದು ನಿಮ್ಮಪ್ ಕೊಟ್ಟನ” ಅಂತ ದಬಾಕ ಮನಿಕಂಡ.

ಷಷ್ಠಿ ದಿನ ಹಿತ್ತಲಮಾರಿ ಗುಡಿತವು ಇದ್ದ ದೊಡ್ಡುತ್ತುಕ್ಕ ಊರಿನ ಒಂದಷ್ಟು ಹೆಂಗುಸ್ರು ಐಕಮಕ್ಳು ನಿಂತು ಅರಿಸಿನ ಕುಂಕುಮ ಚೆಲ್ಲಿ ಕಾಯಿ ಒಡ್ದು ಹುತ್ಗ ಹಾಲೂದು ಮೊಟ್ಟೆ ಒಡೆದು ಕರಿಬಳೆ ಇಟ್ಟು ಕೋಳಿ ಕೂದು ಪೂಜ ಮಾಡ್ತಿದ್ದರು.

ಸಿದ್ದೇಶನ ಹೆಂಡತಿ ಹುತ್ತತವ್ಕ ಹೋಗಲು ಗಂಡನಿಗೆ ಹೇಳಿದಳು. ಸಿದ್ದೇಶ ನೀರನ್ನು ಉಯ್ಕಳ್ಳದೆ ಕುಡಿದು ಚಿತ್ತಾಗಿ ಗಲಾಟೆ ಮಾಡ್ತ ಬೀದಿಲೆ ನಿಂತಿದ್ದ. ನೀಲ ‘ಅಂವ ಬರದಿಲ್ಲ ಅಂದ್ರ ನಾನೇ ಬತ್ತಿನಿ’ ಅಂತ ಅಂದಳು. ಅವಳು ಕ್ಯಾಣಾಡ್ತ ನೀಲನ್ನ ರೇಗ್ತ “ನೀ ಯಾತಿಕ್ ಬಂದೈ ಸುಮ್ನ ಬಾಯ್ಮುಚ್ಕ ನಿಂತ್ಕ” ಅಂದಳು. ನೀಲ “ಯಾಕಲೈ ನೀನೊಬ್ಳೆ ಪೂಜ ಮಾಡ್ಬೇಕ.. ನಾ ಮಾಡ್ಬಾರ‌್ದ. ಕೋಳಿನ ನೀ ತಂದಿದಯ ನನ್ ತಮ್ ತಂದಿರದು ” ಅಂತ ಕೋಳಿ ಹುಂಜನ ಕಿತ್ತುಕೊಳ್ಳಲು ಹೋದಳು. ಸಾಲ ಮಾಡಿ ಹುಂಜ ತಂದಿದ್ದ ಸಿದ್ದೇಶ “ಇವುರೊವ್ವ ಮಿಂಡ್ ಕೊಟ್ಟಿದ್ನ ದುಡ್ಡ ಕೋಳಿ ತರಕ.. ಸಾಲ, ಸಾಲ ಮಾಡಿ ತಂದಿರದು.. ಅದೇನ ಮಾಡಿ ತಿಂದು ಸಾಯಿ.. ನಾಯಿ ಮುಂಡ” ಅಂತ ಬೀಡಿ ಸೇದ್ತಾ ಕೋಳಿ ಕಿತ್ತುಕೊಳ್ಳಲು ಬಂದ ನೀಲಕ್ಕಳಿಗೆ ಸಪೋರ್ಟು ಮಾಡ್ತ ನಗ್ತಾ ಹಾಡಾಡ್ತ ತೂರಾಡ್ತಿದ್ದ.

ಈಗಾಗಲೇ ಮಡಿಯಾಗಿ ರೆಡಿ ಮಾಡ್ಕೊಂಡು ನಿಂತಿದ್ದ ಸಿದ್ದೇಶನ ಹೆಂಡತಿ “ಈ ನಾಯ್ಗಳ್ ಜೊತ್ಗ ಆಡಕಾಗಲ್ಲ” ಅಂತ ತನ್ನಿಬ್ಬರು ಗಂಡು ಮಕ್ಕಳ ಜೊತೆ ಬಿರಬಿರನೆ ಬಂದು ಪೂಜೆ ಮಾಡ್ತ ಕೋಳಿ ಕೂದು ಅದರ ಕಾಲು, ರೆಕ್ಕೆ, ಕತ್ತು ಹಿಡಿದು ಹುತ್ತದ ಸುತ್ತ ಚಿಲ್ ಚಿಲ್ ಅಂತ ಚಿಮ್ಮುತ್ತಿದ್ದ ರಕ್ತ ಚಿಮುಕಿಸುತ್ತ ತುಟಿ ಕುಣಿಸುತ್ತ ಏನೇನೊ ಬೇಡಿಕೊಳ್ತಿದ್ದಳು. ಆಗ “ಏ ಬಲೇ.. ಬಂದ್ರುಡೋ ಅವ್ವ ಸತ್ತೋಗಳ ” ಅಂತ ನೀಲ ಕೂಗ್ತ ಅಳ್ತ ಅಳ್ತ ಕಿರುಚುತ್ತ ಓಡಿ ಬರುತ್ತಿದ್ದಳು. ಅವಳು ಅಳ್ತ ಕೂಗ್ತ ಕಿರುಚ್ತ ಹೇಳ್ತ ಇದ್ದುದ ಸಿದ್ದೇಶನ ಹೆಂಡತಿ ಕೇಳ್ತ ಕೇಳ್ತ ರಕ್ತ ಸೋರ‌್ತಿದ್ರು ಇನ್ನೂ ಪಟಿಪಟಾಂತ ಪತರ‌್ಗುಟ್ಟಿ ಒದರುತ್ತಿದ್ದ ಹುಂಜನ ಕೈಲಿ ಭದ್ರವಾಗಿ ಹಿಡಿದು ನೀಲಳತ್ತ ನೋಡ್ತ ಬೆರಗಾಗಿ ನಿಂತಳು.

                    -----------

ಚಂದ್ರ ಫಸ್ಟ್ ಬಿಎ ಆಗಿ ಸೆಕೆಂಡ್ ಬಿಎಗೆ ರೆಡಿಯಾಗ್ತಿದ್ದ. ಎಡದಂಡೆಗೆ ಇದ್ದುದು ಬರಿ ಐದುಗುಂಟೆ ಗದ್ದೆ. ಅದು ಬೆಳುದ್ರ ಏನೇನ್ಕು ಸಾಕಾಯ್ತಿರಲಿಲ್ಲ. ಈಗ ಬಲದಂಡೆ ನಾಲೆಗೆ ನೀರು ಶುರುವಾಗಿತ್ತು. ಮೂರೆಕ್ಕರೆ ಹೊಲವೀಗ ನೀರಾವರಿ ಆಗಿತ್ತು. ಮಕ್ಕಳೊಂತಿಗ ಶಿವಯ್ಯನ ಮುಖ ಗೆಲುವಾಗಿತ್ತು. ಚಂದ್ರ ಓದ್ತ ಓದ್ತನೆ ಆ ಕೆಲ್ಸ ಈ ಕೆಲ್ಸ ಮಾಡ್ತ ಗದ್ದೆಗೂ ಹೋಗಿ ನೀರು ಕಟ್ಟೋದು ಮಾಡೋದು ಮಾಡ್ತಿದ್ದ. ರಾಗಿ ಭತ್ತ ಶಿವಯ್ಯನ ಮನೆ ತುಂಬಿತ್ತು. ಸಿದ್ದೇಶನ ಕುಡಿತ ಜಾಸ್ತಿ ಆಗಿ ಅವನ ಹೆಂಡತಿ ರೋದನೆ ಹೇಳತೀರದಾಗಿತ್ತು. ಆಗಾಗ ಬರುತ್ತಿದ್ದ ಸುಶೀಲ ಈಚೀಚೆಗೆ ಬರುವುದನ್ನು ನಿಲ್ಲಿಸಿದ್ದಳು. ಅತ್ತಿಗೆಯ ಆಟ ಕಂಡಿದ್ದ ಸುಶೀಲ ಯಾವಾಗಲಾದರು ಬಂದರೆ ಶಿವಯ್ಯನ ಮನೇಲಿ ಕುಂತು ಉಂಡು ತಿಂದು ಹೊಯ್ತ ಸಿದ್ದೇನನ್ನು ಕಂಡು “ಏ ಅಣ್ಣ ನಿನ್ನೆಡ್ತಿ ಆ..ಪಾಟಿ ಆಟ ಆಡ್ತಳ ನಾ ಮಾತ್ರ ಬುಡದಿಲ್ಲ. ಈ ಹೊಲ ಮನ ನಂಗು ಒಂದು ಭಾಗ ಬೇಕು” ಅಂತ ಕೇಳಿದಳು. ಸಿದ್ದೇಶ ಕುಡಿದ ಮತ್ತಿನಲ್ಲಿ “ಕುಸೋ ನೀ ಯಾರ.. ನನ್ ತಂಗಿ ನಿಂಗಾದ್ರೇನ ನಂಗಾದ್ರೇನ ತಕ್ಕಳೈ ಹೋಗು” ಅನ್ನವ. ಆಗ ಅವನ ಹೆಂಡತಿ ಅವನ ಕಿರಿ ಎಟ್ಟಿ “ಕೊಡು ಕೊಡು ಇಲ್ಲಿರ ಹುಟ್ಸುದ್ ಐಕ್ಳ ತುಂಬ್ದೊಳ್ಗ ಸೇತ್ವ ಮೇಲಿಂದ ತಳ್ಳಿ ಸಾಯ್ಸಿ ನನ್ನು ಸಾಯ್ಸಿ ಕೊಡು ಕೊಡು ನಿನ್ ತಂಗಿಗೇ ಕೊಡು.. ಬಾ ನಾಯಿ.. ಕೊಟ್ಟನಂತ. ನಿಮ್ಮೊವ್ವ ನೂರೆಕ್ರ ಬುಟ್ಟು ಹೋಗಳ..” ಅಂತ ರೇಗಿದಳು. ಸುಶೀಲ ಬ್ಯಾಗೆತ್ತಿಕೊಂಡು ಪುರಪುರನೆ ಸಂದಿಗುಂಟ ರೋಡಿಗೆ ಇಳಿದು ತಿರುಮಕೂಡ್ಲು ಓಣಿಗಾಣ ಸರ್ಕಲ್ ಗೆ ಹೋಗಿ ಮುದುಕಿಚಿಕ್ಕನಹುಂಡಿ ಬಸ್ ಹತ್ತಿದಳು.

ಯಾವಾಗಲು ತೆಂಗಿನ ಮರ ಒರಗಿ ನಿಂತು ಕುಂತು ಅತ್ತಿತ್ತ ಮಣ್ಣೆರಚಿ ಕೂಗ್ತ ಅಳ್ತ ನಗ್ತ ಇದ್ದವಳು ಅವ್ವ ಚೆನ್ನಬಸವಿ ಸತ್ತ ಮೇಲೆ ಸಪ್ಪಗಿರುತ್ತಿದ್ದುದ ಜನ ಗಮಸಿ “ನೀಲ ಉಂಡ್ಯವ್ವ” ಅಂದ್ರೆ “ಇನ್ನು ಇಲ್ಲ.. ಅದು ಅದಲ್ಲ ಮನಲಿ ಅದು ಏನು ಕೊಡ್ದು. ನಮ್ಮೊವ್ವಿದ್ದಾಗ ಕರ‌್ದು ಕರ‌್ದು ಕೊಡಳು” ಅನ್ನೋಳು. ಇದನ್ನೆಲ್ಲ ನೋಡ್ತ ಕೇಳ್ತ ಇದ್ದ ಶಿವಯ್ಯ ಅವಳು ನಿಂತಿದ್ದ ಜಾಗಕ್ಕೆ ಏನಾದರು ತಂದು ಕೊಡ್ತಿದ್ದ. ಸಿದ್ದಿನು ಹೊಟ್ಟೆ ಉರಿದುಕೊಂಡು ಟೀ ಕಾಯ್ಸುದ್ರ ಟೀ. ಕಾಫಿ ಕಾಯ್ಸುದ್ರ ಕಾಫಿ. ಬಾಡ್ನಸ್ರು ಮಾಡುದ್ರ ಬಾಡ್ನಸ್ರು ಮುದ್ದ ಕೊಡವ. ಈಗೀಗ ನೀಲ ಸರೊತ್ತಿಗು ಮುಂಚೆ ಮಲಗೋಕೆ ಹೋಗೋಳು. ಒಂದ್ಸಲ ಸರೊತ್ತಲಿ ಹೋದಾಗ ಬಾಗಿಲು ತಾಳ ಹಾಕಿತ್ತು. ತಾಳ ಹಾಕಿರ ಬಾಗಿಲ ತಳ್ಳಿ ತಳ್ಳಿ ಸಾಕಾಗಿ ಕಿರುಚ್ತ ಮಣ್ಣ ತಂದು ಸುರಿಯೋಳು. ಒಳಗೆ ಸಿದ್ದೇಶ ಎದ್ದು ತಾಳ ತೆಗೆಯಲು ಹೋದಾಗ ಅವನ ಹೆಂಡತಿ ರೇಗಿ ಮಲಗಿಸಿದ್ದು ನೀಲಳಿಗೆ ಕೇಳ್ತು. ಅದಾಗಿ ಮೊಬ್ಬಿಗೆ ಎದ್ದು ತಾಳ ತೆಗೆದು ಈಚೆ ಬಂದ ಸಿದ್ದೇಶನ ಹೆಂಡತಿಗೆ ಮೋರಿಲಿರ ಬದಿನ ಬಗ್ರವಟಲಿ ತುಂಬ್ಕ ಬಂದು ಮೈಗೆಲ್ಲ ಎರಚಿ ಸೇಡು ತೀರಿಸಿಕೊಂಡು ಕಲ್ಲು ಬೀರಿ “ಯಾಕಲೇಯ್ ನಾಯಿಮುಂಡ ರಾತ್ರ ತಾಳ ತಗಿನಿಲ್ಲ. ನಿಮ್ಮಪ್ ಕಟ್ಟಿದ್ನ ಮನನ. ಅಪಾಟಿ ಸಳಿಡಿತುದ.. ಅಂತ ಹೊತ್ಲಿ ಆ ಸಳಿಲೆ ನನ್ನ ಈಚ ಮನುಗುಸ್ದೆಲ್ಲ” ಅಂತ ಕೆಕ್ಕಳಿಸಿ ನೋಡಿ ಸತ್ತೋದ ಅವ್ವನ ನೆನಸಿಕೊಂಡು ಅಳುತ್ತಿದ್ದಳು.

ಚೆನ್ನಬಸವಿ ಇದ್ದಾಗ ಸರೊತ್ತಾದ್ರು ಬಾಗಿಲು ತಾಳ ಹಾಕ್ದೆ ಆಗೇ ಇದ್ದು ಅವಳು ಒಳ ಬಂದು ಮಲಗಿದ ಮೇಲೆ ಎದ್ದು ಸಂದಿ ಗೋಡೆತವು ಮೂತ್ರಿಸಿ ಕ್ಯಾಕರಿಸಿ ಉಗ್ತು ಒಳಕೋಗಿ “ಮೇ ನೀಲ್ಮುಂಡ ಅರ್ದಾತ್ರ ಆಗದ. ಆ್ಞ.. ಏನಂದಿ, ಅರ್ದಾತ್ರ ಆಗದ ಗಾಳಿ ಗಾಚಾರ ಉಣ್ಣ ಉಡ ಹೊತ್ಲಿ ಬತ್ತಿದಯಲ್ಲ ನಿಂಗೇನ ಬಂದಿರದು ಮಾರ‌್ನ.. ಯಾಕಿಂಗ್ ಹೊಟ್ಟುರಿಸ್ದಯಿ” ಅಂತ ರೇಗ್ತ ಮಲಗ್ತಿದ್ದಳು.

ಅವಳು ಅಳುತ್ತಲೇ ಇದ್ದಳು. ಅಳ್ತ ಅಳ್ತ “ಊ್ಞ ನಮ್ಮೊವ್ವುನ್ಗ ಗೊತ್ತಿತ್ತು ನಾ ಯಾಕ್ ಅರ್ದ ರಾತ್ರತಂಕ ನಿಂತ್ಕತಿನಿ ಅಂತ. ಅಂವ ಬರದೆ ರಾತ್ರ ಆದ್ಮೇಲ. ಈ ರಾತ್ರಲಿ ಈ ಕತ್ಲೇ ಸಪೋರ್ಟು ಆ ನನೈದುನ್ಗ. ಅದ್ಕೆ ಈ ಸಂದಿ ತಲಬಾಗ್ಲಲೇ ನಿಂತಿನಿ. ಅಂವ ಬಂದ್ರ ಹಿಡ್ದು ಅವ್ನ್ ರಕ್ತ ಕುಡಿತಿನಿ. ನಾ ಇಲ್ಲಿ ನಿಂತಿರವತ್ಗೆ ಎದುರ‌್ಕಂಡು ಇನ್ನು ಬರ‌್ದೆ ಈ ಕತ್ಲಲೇ ಅವುಸ್ಕಂಡ್ ಅವುಸ್ಕಂಡ್ ತಿರುಗಾಡ್ತವ್ನ ಅನ್ಸುತ್ತ. ಈಗ ಕತ್ಲು ಹೊಂಟೋಗಿ ಅದ್ರೊಂದ್ಗ ಅವ್ನೂ ಹೋಗನ. ಸಂದಕ ಬರ‌್ಲಿ ಮಾಡ್ತಿನಿ. ಅಂವ ಸಂದಕು ಬರ‌್ನಿಲ್ಲ ಅಂದ್ರ ಅದೆಲ್ಲಿದನು ಅಂತ ಹುಡಿಕಂಡೇ ಹೋಯ್ತಿನಿ. ನಾ ಹೆದ್ರಿನಾ.. ಈ ಬೂಮಿ ಮೇಲ ಎಲ್ಲೆ ಅಡ್ಗಿದ್ರು ಬುಡದಿಲ್ಲ ಹುಡ್ಕಿ ಅವ್ನ್ ರಕ್ತ ಕುಡ್ದೇ ಕುಡಿತಿನಿ. ಇದ ಕಾಣ್ದೆ ಸರೊತ್ಲಿ ಹೋದ್ರ ತಾಳ ಹಾಕಂಡು ಬೆಚ್ಚುಗ್ ಮನ್ಗಳ ನಾಯಿಮುಂಡ. ಅದ್ಕೆ ಬದಿ ಹಾಕಿರದು” ಅಂತ ಬೊಯ್ತ ಅವ್ವ ನೆನಿಸ್ಕಂಡು ಅಳ್ತ ಇದ್ದವಳಿಗೆ ಮೈಗೆಲ್ಲ ಮೋರಿ ಬದಿ ತಂದು ಎರಚುದ್ಲಲ್ಲ ಅಂತ ಸಿದ್ದೇಶನ ಹೆಂಡತಿ ತೊಗರಿ ಕಸ್ಬಳ್ಳು ತಕ್ಕಬಂದು ರಪ್ಪರಪ್ಪನೆ ಬಡಿದಳು. ಅದೆ ಕಸ್ಬಳ್ಳು ಕಿತ್ತುಕೊಂಡು ಮುಂದಲೆ ಹಿಡಿದು ಹಂಗೇ ಬಡಿದಳು. ಮಲಗಿದ್ದ ಸೂರಿ ದಡಬಡ ಓಡಿ ಬಂದು ಕಸ್ಬಳ್ಳ ಕಿತ್ತೆಸೆದು ಇಬ್ಬರಿಗೂ ಉಗಿದ. ಆಗ ರೂಮಿನಲ್ಲಿ ಓದುತ್ತಾ ಕುಂತಿದ್ದ ಚಂದ್ರ ಕೈಯಲ್ಲಿ ಪುಸ್ತಕವಿಡಿದು ಹೊರ ಬಂದು ಜಗುಲಿ ಅಂಚಿನಲ್ಲಿ ನಿಂತು ನೋಡತೊಡಗಿದ.

ಶಿಶುವಾರದ ಜಗುಲಿತವು, ಬಾವಿ ಕಟ್ಟೇತವು ಸೋಮಯ್ಯನ ಟೀ ಅಂಗಡಿತವು, ಜನ ಕುಂತು ನಿಂತು ಬೆಂಕಿ ಕಾಯ್ತ ಬೀಡಿ ಸೇದ್ತಾ ಟೀ ಕುಡಿತಾ ಮಾತಾಡ್ತ ಹರಟೆ ಹೊಡಿತಾ ನಗ್ತ ಇತ್ತಗೇ ನೋಡ್ತಿದ್ರು. ಮಲ್ಲಮೇಷ್ಟ್ರು ಅವರ ಜಗುಲಿ ಮೇಲೆ ಕುಂತು ಬೀಡಿ ಕಚ್ಚಿ ಹೊಗೆ ಬಿಡುತ್ತ ಆರತಿ ಪೇಪರ್ ಬದಲಿಗೆ ಆಂದೋಲನ ಪೇಪರ್ ಹಿಡಿದು ಓದುತ್ತಾ ಕುಂತಿದ್ದ.
———–

ಮಂಡಲ್ ಪಂಚಾಯ್ತಿ ಎಲೆಕ್ಷನ್ ಜೋರಿತ್ತು. ಗೋವಿಂದ ಊರೊಳಗಲ್ಲದೆ ಊರಾಚೆಯೂ ಹೆಸರು ಮಾಡಿದ್ದ. ಗೂಳಿಯಂಗೆ ತಿರುಗುತ್ತಿದ್ದವನು ಎಳೂರುಂಡಿ ಓಣಿನಲ್ಲಿ ಯಾರೊಂದಿಗೊ ಮಲಗಿದ್ದ. ಅವನಿಗಾಗದವರು ಇದೇ ಒಂದು ಸವುಳು ಅಂತ ಜನ ಸೇರಿಸಿ ಹಿಡಿದಿದ್ದರು. ಅವಳ ಊರಿನವರು ಬಂದು ನ್ಯಾಯಪಂಚಾಯ್ತಿ ಮಾಡಿ ಕಟ್ಟಿದ್ದರು. ಕಟ್ಟಿಕೊಂಡ ಮೇಲೆ ಎರಡು ಮಕ್ಕಳೂ ಆಯ್ತು‌. ಅವಳನ್ನು ಹೆದರಿಸಿ ಬೆದರಿಸಿ ಮನೆ ಈಚೆ ಬರದ ಹಾಗೆ ಕಟ್ಟು ಮಾಡ್ತ ತನ್ನ ಸುಪರ್ದಿಯಲ್ಲಿ ಇರಿಸಿಕೊಂಡಿದ್ದ.

ಗೋವಿಂದನ ಹಿಡಿತ ಹೇಗಿತ್ತೆಂದರೆ ಕಂಟ್ರಾಕ್ಟ್ ಲೈಸೆನ್ಸ್ ಇಲ್ಲದಿದ್ದರು ಅವರಿವರ ಸಂಗಡ ಕಟ್ಟಿಕೊಂಡು ಪಂಚಾಯ್ತಿಯ ಎಲ್ಲ ಕೆಲ್ಸನು ಅವನೇ ಮಾಡಿಸ್ತ ಇದ್ದ. ಅವನು ಮಾಡಿಸುತ್ತಿದ್ದ ಕೆಲಸ ಆರು ತಿಂಗಳೂ ಬರದೆ ಮಳೆಗೆ ಕೊಚ್ವಿ ಹೋಗುತ್ತಿತ್ತು. ಪಂಚಾಯ್ತಿ ಆಫೀಸ್ ಕಾಂಪೌಂಡ್ ಗೆ ಮೂರು ಸಲ ಗೇಟ್ ಹಾಕಿಸ್ದ. ಮೂರು ಸಲವೂ ಕಿತ್ತು ಬಂತು. ಬಿಲ್ ಆಗ್ತಾನೆ ಇತ್ತು. ಒಂದಷ್ಟು ಪುಂಡುಡುಗರು ಮಂಡಲ್ ಪಂಚಾಯ್ತಿ ಆಫೀಸ್ ಗೆ ಹೋಗಿ ಗಲಾಟೆ ಮಾಡಿದವು. ಸೆಕ್ರೆಟ್ರಿ ಮಾದೇವು ಒಂದು ಲಾಂಗ್ ಬುಕ್ ಹಿಡಿದುಕೊಂಡು ಮೆಂಬರ್ ಕರೆದುಕೊಂಡು ಊರಿನ ಬೀದಿಬೀದಿನು ಸುತ್ತಿ ಎಲ್ಲೆಲ್ಲಿಗೆ ಏನಾಗಬೇಕು ಅಂತ ಬರೆದುಕೊಂಡ. ಅವನು ಬಿಲಿಗೇರಿಹುಂಡಿಯವನು. ಕಿರಗಸೂರು ಹುಣಸೂರು ಮಾರ್ಗವಾಗಿ ಸೈಕಲ್ ನಲ್ಲಿ ಬಂದು ಆಫೀಸ್ ಹೊಕ್ಕರೆ ಅವನು ಇರುವ ತನಕವೂ ಗೋವಿಂದ ಜೊತೆಗೇ ಇರ‌್ತಿದ್ದ.

ಇದಕ್ಕು ಮುನ್ನ ಶಿವಣ್ಣ ಅಂತವನೊಬ್ಬ ಇದ್ದ. ಅವನು ಯಂಕ್ಟಪ್ಪನ ದೂರದ ಸಂಬಂಧಿ. ಯಂಕ್ಟಪ್ಪನೇ ತನ್ನ ಯವರಕ್ಕೆ ಇರಲಿ ಅಂತ ಪಂಚಾಯ್ತಿಗೆ ಹಾಕಿಸಿಕೊಂಡಿದ್ದ. ಯಂಕ್ಟಪ್ಪ ಶಿವಣ್ಣನನ್ನು ಇಟ್ಟುಕೊಂಡು ಗೋವಿಂದನ ಮೂಲಕ ಎಲ್ಲ ಕೆಲಸ ಮಾಡಿಸುತ್ತಿದ್ದ. ಅವನು ಒಂದೊಂದು ಸೈಟಿಗೆ ಎರಡು ಮೂರು ಹಕ್ಕುಪತ್ರ ಕೊಟ್ಟು ಮೂಲ ಯಜಮಾನ ಬಂದು ಮನೆ ಕಟ್ಟಲು ಲೈಸೆನ್ಸ್ ಕೇಳಿದರೆ ಲೈಸೆನ್ಸೂ ಕೊಡ್ತಿದ್ದ. ಅವನಿಂದ ಎಷ್ಟು ಬೇಕೊ ಅಷ್ಟು ದುಡ್ಡನ್ನು ಈಸಿಕೊಂಡೇ ಸೈನ್ ಹಾಕ್ತಿದ್ದುದು. ಅದೇ ಹೊತ್ತಿಗೆ ಅದೇ ಸೈಟಿಗೆ ಉಳಿದವರು ಮನೆ ಕಟ್ಟಲು ಲೈಸೆನ್ಸ್ ಕೇಳಿ ಅರ್ಜಿ ಹಾಕಿದರೆ ಸೆಪರೇಟ್ ಸೆಪರೇಟ್ ಅವರಿಗೆ ಗೊತ್ತಾಗದ ಹಾಗೆ ಲೈಸೆನ್ಸ್ ಕೊಟ್ಟು ದುಡ್ಡು ಈಸ್ಕೊತಿದ್ದ. ಒಂದ್ಸಲ ಮೂಲ ಯಜಮಾನ ಮನೆ ಕಟ್ಟಲು ಪಾಯ ತೋಡಲು ಹೋದಾಗ ಉಳಿದವರೂ ಬಂದು ಇದು ನನ್ನ ಸೈಟು ಅನ್ನೋರು. ಅದಕ್ಕೆ ಸೆಕ್ರೆಟ್ರಿ ಕೊಟ್ಟಿರೊ ಲೈಸೆನ್ಸ್ ತೋರಿಸೋರು. ಅದು ಪಂಚಾಯ್ತಿಗೆ ಬಂದಾಗ ಗೋವಿಂದ ಹಾಜರಾಗಿ ಎಲ್ಲರನ್ನು ಸೆಪರೇಟ್ ಸೆಪರೇಟ್ ಕರೆದುಕೊಂಡು ಹೋಗಿ ಮಾತಾಡಿ ದುಡ್ಡು ಈಸಿಕೊಂಡು ಬಗೆಹರಿಸುತ್ತಿದ್ದ. ಅದೆಲ್ಲ ಮೊದಲೇ ಪ್ಲಾನ್ ಮಾಡಿಕೊಂಡಿರುತ್ತಿದುದು ಊರಿಗೆ ಗೊತ್ತಿದ್ದರು ಯಾರು ಏನು ಮಾಡಲು ಆಗದ ಸ್ಥಿತಿ ಇತ್ತು.

ಹಿಂಗೆ ನಡಿತಾ ನಡಿತಾ ಒಂದ್ಸಲ ಪಂಚಾಯ್ತಿ ವ್ಯಾಪ್ತಿಯ ಎಲ್ಲ ‌ಪತ್ರಗಳು ಫೈಲ್ ಗಳು ಮೇಲ್ಮಟ್ಟದ ಪರಿಶೀಲನೆಗೋಗಿ ಶಿವಣ್ಣ ಸಿಕ್ಕಿಬಿದ್ದು ಅರೆಸ್ಟ್ ಆಗಿ ಜೈಲಾದ. ಅವನು ಜೈಲಾದ ಹೊತ್ತಲ್ಲೆ ಅವನ ಸೊಸೆ ನೇಣು ಬಿಗಿದು ಸತ್ತು ಹೋಗಿ ಅವರ ಮನೆಯವರೆಲ್ಲ ಜೈಲಾದರು. ಅವರನ್ನು ಬಿಡಿಸಲು ಬಚಾವ್ ಮಾಡಲು ಗೋವಿಂದ ಲಾಯರ‌್ರು, ಅಲ್ಲಿಗೆ, ಇಲ್ಲಿಗೆ ಅಂತ ಶಿವಣ್ಣನ ಎಲ್ಲ ಆಸ್ತಿನೂ ಯಂಕ್ಟಪ್ಪನ ಹೆಂಡತಿ ಯಶೋಧಳ ಮೂಲಕ ತನ್ನದಾಗಿಸಿಕೊಂಡಿದ್ದು ಗುಟ್ಟಿನ ವಿಚಾರವಾಗಿರಲಿಲ್ಲ.

ಇಂಥ ಗೋವಿಂದನ ಬಗ್ಗೆ ಊರಲ್ಲಿ ಗುಲ್ಲೆದ್ದು ಒಗ್ಗಲಗೇರಿಯ ಯಂಕ್ಟಪ್ಪನ ಬಾಮೈದ ಮಂಡಲ್ ಪಂಚಾಯ್ತಿ ಆಫೀಸ್ ಮುಂದೆ ಗಲಾಟೆ ಮಾಡುತ್ತಿದ್ದ. ಅವನ ಗಲಾಟೆ ನೋಡಿ ಊರ ಜನ ಬಂದು ಪಂಚಾಯ್ತಿ ಮುಂದೆ ತುಂಬಿಕೊಂಡಿತ್ತು.

ಯಂಕ್ಟಪ್ಪನ ಹೆಂಡತಿ ಯಶೋಧ ಹೆಸರಲ್ಲಿದ್ದ ತೆಂಗಿನತೋಟ ಹಿಪ್ಪುನೇರಳೆ ತೋಟ ಮಲ್ಲನಕೇರಿ ಮೂಲೆಲಿದ್ದ ಎರಡೆಕರೆ ಹೊಲ ಎಲ್ಲ ಗೋವಿಂದನ ಹೆಸರಲ್ಲಿದ್ದವು.

         ‌‌‌                ---------

ಒಂದಿನ ಹಿಪ್ಪುನೇರಳೆ ಸೊಪ್ಪು ಖರೀದಿಯಾಗಿ ಎಳೂರುಂಡಿಯ ಹೆಳವರು ಸೊಪ್ಪು ಊರಲು ಬಂದಿದ್ದರು. ಅವರು ಸೊಪ್ಪು ಊರುವಾಗ ಯಾರೂ ಇಲ್ಲದಿದ್ದರೆ ಕುಡಿ ಸಮೇತ ಮೊಟಕಿ ಊರುಕೊಂಡು ಹೊಯ್ತಾರೆ ಅಂತ ಅಲಂಕಾರ ಮಾಡಿಕೊಂಡು ತೋಟಕ್ಕೆ ಹೋಗಿದ್ದ ಯಶೋಧ ‘ಕುಡಿ ಮೊಟುಕ್ಬೇಡಿ ಬಂದು ನೋಡ್ತಿನಿ ಇಲ್ಲೆ ಇರ್ತಿನಿ ಊರಗಂಟ’ ಅಂತ ಬಿಸಿಲಿನ ಝಳಕ್ಕೆ ಮುಖ ಕಪ್ಪಿಟ್ಟದು ಅಂತ ತಡಿಕೆ ಗುಳ್ಳಲ್ಲೆ ಕಲ್ಲಿನ ಮೇಲೆ ಕುಂತಳು. ಅವರು ಸೊಪ್ಪು ಊರುವುದು ಮೊಕ್ಕತ್ತಲಾದರು ಮುಗಿಯದೆ ಊರುತ್ತಲೇ ಇದ್ದರು. ಉಳಿದ ಒಂದು ಪಾತಿ ನಾಳೆ ಊರುಕೊಳ್ಳರಿ ಅಂತ ಅಂದರು “ಅದೊಂದ್ ಪಾತಿಗ ನಾಳ ಯಾರ ಬರವ್ರು” ಅಂತ ಗೊಣಗುಟ್ಟಿದ್ದರು. ಅಷ್ಟೊತ್ತಿಗೆ ಗಾಳಿ ಬಡ್ತ ಶುರುವಾಗಿ ಗುಳ್ಳಿನ ತಡಿಕೆ ಏಳ್ತಿತ್ತು. ಗುಡುಗು ಸಿಡಿಲು ಮಿಂಚು ಫಳಾರ್ ಅಂದು ಮಳೆ ರಮ್ಮರುಮ್ಮನೆ ಬೀಳತೊಡಗಿತು.

ಸೊಪ್ಪು ಊರುವವರು ತರಬರ ತುಂಬಿಕೊಂಡು ಹುಣಸೇಮರದ ಕೆಳಗೆ ನಿಂತರು. ಯಶೋಧ ಮಳೆ ನಿಂತ ಮೇಲೆ ಹೋದರಾಯ್ತು ಅಂತ ಸುಮ್ಮನಿದ್ದಳು. ಗಂಟ್ಯಾದರು ಮಳೆ ನಿಲ್ಲದೆ ಅದೀಗ ನಿಧಾನಕೆ ನಿಲ್ತ ಸೀಪರು ಸೀಪರು ಬೀಳ್ತ ಕತ್ತಲು ಕವಿಕಂತು. ಹುಣಸೇಮರದ ಕೆಳಗೆ ನಿಂತಿದ್ದ ಐದಾರು ಜನ ಹೆಳವರು ಸೊಪ್ಪಿನ ಪಿಂಡಿನ ತಲೆ ಮೇಲೆ ಹೊತ್ತುಕೊಂಡು ಎಳೂರುಂಡಿ ಓಣಿಗುಂಟ ನಡೆದರು. ಕತ್ತಲು ಕವಿಕತಿರದು ಕಂಡ ಯಶೋಧ ತಲೆ ಮೇಲೆ ಸೆರಗ ಹೊದ್ದು ಬೇಲಿ ದಾಟಿ ರೋಡಿಗೆ ಕಾಲಿಟ್ಟರೆ ಅದು ಹೂತುಕೊಂಡು ಜಿರುಗುಟ್ಟುವ ಬದಿ ತುಳಿಯುತ್ತ ಮೆಲ್ಲಮೆಲ್ಲಗೆ ಕಾಲಿಡುತ್ತ ಮನೆ ಮುಟ್ಟುವ ತನಕ ಆ ಸೀಪರು ಮಳೆಗೆ ನೆಂದು ಅದ್ದಿ ಹೋಗಿದ್ದಳು.

ಅದೇ ಹೊತ್ತಲ್ಲಿ ಯಂಕ್ಟಪ್ಪೋರ ಎರಡೆಕ್ಕರೆ ಹೊಲದ ತಕರಾರಿತ್ತು. ಅದರ ಬಗ್ಗೆ ಕೇಳಲು ವಿಲೇಜ್ ಅಕೌಂಟೆಂಟ್ ನೋಡಿ ಬರಲು ಹೋಗಿ ಆ ಸುದ್ದಿ ಹೊತ್ತು ಬಂದಿದ್ದ ಗೋವಿಂದ ಮಳೆಗೆ ಸಿಕ್ಕಿ ಜಗುಲಿಯಲ್ಲೆ ಕುಂತಿದ್ದ. ಅವಳು ಬಂದು ಇಸ್ಸಿಸ್ಸಿಸ್ಸೀ.. ಅಂತ ಅವನನ್ನೇ ನೋಡಿದರು ಒಬ್ಬರ ಮುಖ ಒಬ್ಬರಿಗೆ ಕಾಣದ ಕತ್ತಲು. ಗುಡುಗು ಸಿಡಿಲು ಗಾಳಿ ಬಡಿತಕ್ಕೆ ಕರೆಂಟ್ ಹೋಗಿತ್ತು. ಅವಳು ನಡುಗುತ್ತ ಬಾಗಿಲು ತೆಗೆದು ಲಾಟೀನು ಹಸ್ಸಿದಳು.

ಆ ಲಾಟೀನು ಬೆಳಕಲ್ಲಿ ಅವಳು ನೆಂದು ಅದ್ದಿದ್ದ ಮೈಮಾಟವನ್ನೇ ನೋಡುತ್ತಿದ್ದ ಗೋವಿಂದನ ಕಡೆ ಸರ‌್ರನೆ ತಿರುಗಿದಳು. ಅವನು ಕೈಕಟ್ಟಿ ನಡುಗುತ್ತಿದ್ದ. ಅವಳು “ಸೊಪ್ಪೂರವ್ರು ಮಾಡ್ದ ಕೆಲ್ಸ ಇದು” ಅಂತಂದಳು. ಲಾಟೀನಿನ ಬೆಳಕಿಗೆ ಅವಳು ಇನ್ನಷ್ಟು ಒಂಥರಾ ಕಂಡಳು. “ಏನಾಯ್ತು” ಅಂದಳು. “ಈಗ ಎಲಕ್ಷನ್ ಅದ ಈಗೇನು ಮಾಡಕಾಗಲ್ಲ ಅಂದ್ರು” ಅಂದ. “ಸರಿಬುಡು ಈಗ ಅದರ ಸಿಂತೆಗ್ ಹೋಗದ್ ಬ್ಯಾಡ.. ಸಾಯದ್ ಸಾಯ್ತ ಎಲ್ಲನು ಯಕ್ಕುಟ್ಸಿ ಸತ್ನ” ಅಂತ ಯಂಕ್ಟಪ್ಪನ ಬಗ್ಗೆ ಆಡಿದಳು. “ಈಗ್ಯಾಕ ಅವ್ರ್ ಮಾತು. ಅದ್ನ ನಾನ್ ಸರಿ ಮಾಡ್ತಿನಿ” ಅಂತ ಅವಳ ಕೈ ಹಿಡಿದ.

ಮನೆ ಒಳಗೆ ನಾಲ್ಕು ಕಂಬಗಳ ಮಧ್ಯೆ ಇದ್ದ ತೊಟ್ಟಿ ಮೇಲಿಂದ ಒಳಕ್ಕೆ ಗಾಳಿ ಜೋರಾಗಿ ಬೀಸ್ತಿತ್ತು. ಆ ಗಾಳಿಯ ರಭಸಕ್ಕೆ ಬಾಗಿಲು ಲಟ್ಟಂತ ಮುಚ್ಚಿ ಹಿಂದಕ್ಕು ಮುಂದಕ್ಕು ಆಡ್ತ ಕರ‌್ರೊ ಪರ‌್ರೊ ಅಂತಿತ್ತು. ಅವಳು ಬಾಗಿಲು ಹಿಡಿದು ಭದ್ರವಾಗಿ ತಾಳ ಹಾಕಿದಳು. ಹೊರಗೆ ಮಳೆ ಜೋರಾದಂತಾಯ್ತು. ತೊಟ್ಟಿಗೆ ಬೀಳುತ್ತಿದ್ದ ಮಳೆನೀರು ತೊಟ್ಟಿತುಂಬ ತುಂಬಿ ತುಳುಕ್ತ, ಅದೆ ತೊಟ್ಟಿ ತೂತಿಂದ ಮಳೆನೀರು ಹೊರಗೆ ಹೋಯ್ತಿತ್ತು.

ಆಗ ಅವನು “ಆ ವಿಲೇಜ್ ಅಕೌಂಟೆಂಟು ನಿನ್ನೆಸ್ರೇ ಹೇಳ್ತರಲ್ಲ ಇವ್ನೆ ಎಲಕ್ಷನ್ಗ.. ಎಲ್ಲ ನಿನ್ನೇ ನಿಂತ್ಕಳ್ಳಿ ಅಂತವ್ರ…” ಅಂತಂದ . ಅವಳು “ಹಂಗಿದ್ರ ನಿಂತ್ಕ” ಅಂದಳು. “ದುಡ್ಡು.. ದುಡ್ಡಿದ್ರ ಎಲಕ್ಷನು” ಅಂದ. “ನಾನ್ ಕೊಡ್ತಿನಿ” ಅಂದಳು. “ನಿಂತವು ಎಲಕ್ಷನ್ಗ ಆಗ ಅಸ್ಟು ಕೊಡಕಾದ್ದ” ಅಂದ. “ಎಸ್ಟಾದ್ದು” ಅಂದಳು. ಅವನು “ನೀನ್ ಕೊಡ್ತಿನಿ ಅಂದ್ರ ಈ ಊರ‌್ನೇ ಆಳ್ತಿನಿ” ಅಂದ. “ನನ್ ಆಳ್ದಂವ ಊರಾಳ್ದೆ ಇದ್ದನ.. ನಿಂತ್ಗ ಹೋಗು” ಅಂದಳು. “ಇರಗಂಟ ನಿನ್ ಆಳುದ್ದು ಯಂಕ್ಟಪ್ಪೋರು ನನ್ಯಾಕ್ ಮದ್ಯಕ್ ತಂದಯ್. ನಾನು ಕೂಸು. ನಿಂಗಿಂತ ಚಿಕ್ಕಂವ. ನನ್ ವಯ್ಸಿರ ಮಗವ್ನ ನಿಂಗ ಅನ್ನದ ಮರಿಬ್ಯಾಡ” ಅಂತ ಕೆನ್ನೆ ಚಿವುಟ್ದ. “ನಿನ್ ಯಂಕ್ಟಪ್ಪ ನನ್ಯಾವತ್ತು ಮುಟ್ನಿಲ್ಲ. ನುಲ್ಕ ನುಲ್ಕ ಬತ್ತಿದ್ಲಲ್ಲ.. ಅಕ್ಕ ಅಕ್ಕ ಅಂತ ಸೆರ‌್ಗಿಡ್ಕ ಬತ್ತಿದೆಲ್ಲ ನಿಮ್ ಚೆನ್ಬಸ್ವಿ.. ಅವ್ಳ ಅಂವ ಆಳುದ್ದು.. ಅವ್ಳ್ ತರ ನಂಗ ನಲ್ಯಾಕ ನುಲ್ಯಾಕ ಬರ‌್ದೆ ಜಿನೇಡೊತ್ತು ಪೋಡ್ರು ಸುನಾವ್ ಹಾಕಂಡು ಕೂತಿರಕ ಆಗ್ದೆ ಇರವತ್ಗ ನನ್ನ ದೂರ ಇಟ್ಟು ಆ ಚೆನ್ಬಸ್ವಿನೆ ಇರಗಂಟ ಆಳ್ದ. ನಾನುವ ಆ ಚೆನ್ಬಸ್ವಿ ನೋಡ್ತ ನನ್ಗೂ ಆಸ ಆಗಿ ಅವ್ಳಂಗೆ ಗಂಟ್ ಗಂಟ್ಗು ಮೊಕ ತೊಳಿತಾ ಅಲಂಕಾರ ಮಾಡ್ಕಂಡು ಅಂದಚೆಂದ್ವಾಗಿ ನುಲುದ್ರು ನನ್ನ ಕಣ್ಣೆತ್ತು ನೋಡ್ದೆ ‘ಈ ವಯುಸ್ಲಿ ನಿಂಗ್ಯಾಕ ಮುದಿ ಸೋಕಿ’ ಅಂತ ಕ್ಯಾಣಡಂವ. ಆ ಟೇಮ್ಲೆ ಚೆನ್ಬಸ್ವಿ ನಿನ್ನ ಯಂಕ್ಟಪ್ಪುಂತವ್ಕ ಕರ‌್ಕ ಬಂದು ಬುಟ್ಟಾಗ ನಾನು ಅಲ್ಲೆ ಇದ್ದಿ. ತ್ವಾಟ್ದಲಿ ಅಂಗಿ ಬಿಚ್ಚಿ ಕೆಲ್ಸ ಮಾಡ್ತಿದ್ದ ನಿನ್ ಮೈ ನೋಡಿ ಆಸ ಆಯ್ತು ಅಂತ ನಿಂಗೆಸ್ಟ್ ಸಲ ಹೇಳಿಲ್ಲ ಹೇಳು.. ಇನ್ನೊಂದ್ ಏನಂದ್ರ ಆ ನೀಲ್ನು ಮೊಕ ಯಂಕ್ಟಪ್ಪುನ್ ಮೊಕ್ದಾಗೆ ಇಲ್ವ.. ಎಲ್ಲ ಗೊತ್ತು ನಂಗ ಗೊತ್ತಿಲ್ದೆ ನಾನೇನು ಕಣ್ ಕಾಣ್ದೆ ಇರ ಕುಂಡಿನ ” ಅಂತ ರೂಮಿಗೆ ಹೋದಳು.

ಅವನು ಅವಳಿಂದನೇ ಹೊಯ್ತ “ಅದೆಲ್ಲ ಸರಿ ನಿನ್ ಮುಟ್ದೆ ಆ ಶಿವ್ನಂಜ ಎಲ್ಲಿಂದ್ ಬಂದಾ” ಅಂತಂದ. “ಅದು ನಂದಲ್ಲ.‌ ಅದ್ಯಾರಿಗುಟ್ಟಿತ್ತಾ ಏನಾ.. ನಾನು ನಮ್ಮಪ್ಪನ ಮನಲೇ ಇದ್ದಿ ಊರ‌್ಲಿ. ಅರ್ದರಾತ್ರಲಿ ಅದ್ಯಾರ ಕೂಗ್ದಾಗಾಯ್ತು. ಇಂವ ಕೂಸಿಡ್ಕಂಡು ತಂದು ನನ್ ಕೈಗ ಕೊಟ್ಟ. ನನ್ಗ ಸಿಬ್ರಿಯಾಗಿ ತೂ ಅಂತ ಆ ಕೂಸ ಅಲ್ಲೆ ಕೆಳಗಿಟ್ಟು ರೂಮ್ ಬಾಗ್ಲೆಳಕಂಡು ಮನಿಕಂಡಿ. ಆಗ ನಮ್ಮೊವ್ವ ಅಪ್ಪ ಹೊಲ್ದಲ್ಲಿ ಜ್ವಾಳ ಮೆದ ಕಟ್ಟಕ ಅಂತ ಹೋಗಿ ಸರೊತ್ತಾದ್ರು ಬಂದಿರ‌್ನಿಲ್ಲ. ಆಗ ನನ್ ಮುಂದಲ ಹಿಡ್ದು ಹೊಡ್ದು ‘ಏಯ್ ನೀನು ಒಂದೆ ಆ ಜಾಡ್ಮಲಿ ಹೆಂಗುಸ್ರು ಒಂದೆ. ನಿನ್ ಯಾಸ ನೋಡಕಾಗಲ್ಲ.. ನಮ್ಮೊವ್ವ ಇಂಸ ಮಾಡ್ದ. ಸ್ವಾದುರ್ ಮಾವುನ್ ಮಗ್ಳು ಅಂತ ನಿನ್ನ ಮಾಡ್ಕಂಡಿ. ನಿನ್ತವು ಏನಿದ್ದು… ನಯ ಇಲ್ಲ ನಾಜೂಕಿಲ್ಲ ಅಂದಚೆಂದ… ಏನಿದ್ದು. ನಿನ್ನ ನೋಡಕೆ ಆಗಲ್ಲ ಅಂತದ್ರಲ್ಲಿ ಮುಟ್ಟಿ ಬೋಗ್ಸಕಾದ್ದ.. ನಿನ್ ಕಟ್ಗಂಡ್ ತಪ್ಗ ಊರ‌್ಲಿ ಕೂಸುಕುರಿಗಳೆಲ್ಲ ನನ್ ಗಂಡುಸ್ತನನೇ ಪ್ರಶ್ನ ಮಾಡ ತರ ಆಗದ. ಅದ್ಕ ನಂಗ ಇಸ್ಟ ಇಲ್ದೆ ವರ್ಸ ಆರ‌್ತಿಂಗ್ಳಿಂದ ಇಲ್ಲೆ ನಿಮ್ಮಪ್ಪುನ್ ಮನಲಿರ್ಸಿದ್ದಿ. ನೋಡಿಲ್ಲಿ ನಂಗ ಬೇರೆ ದಾರಿ ಇರ‌್ನಿಲ್ಲ. ಇದು ಪಿಳ್ಳಳ್ಳಿ ಮಾದಿಗೇರಿದು. ಇದ್ಕ ಅವ್ವನು ಇಲ್ಲ ಅಪ್ಪನು ಇಲ್ಲ. ಇದ ಸಾಕ ಜಬದಾರಿ ನಿಂದು. ಹಂಗೆ ನೀನು ವರ್ಸ ಆರ‌್ತಿಂಗ್ಳು ಇಲ್ಲೆ ಇದ್ದದ್ಕ ಊರುನ್ ಜನ್ಕ ಕೂಸಾಯ್ತು ಅಂತ ಹೇಳಿನಿ. ಇದ ನೀನು ಅಲ್ಗೆಳ್ದು ಈಚ್ ಬಂದು ಮಾನ ತಗುದ್ರ ನಿನ್ನ ತುಂಡ್ ತುಂಡ್ಮಾಡಿ ಕತ್ರುಸಿ ಸೇತ್ವ ಮೇಲಿಂದ ಹರಿಯ ಹೊಳ್ಗ ಎಸ್ದು ಕೈ ತೊಳ್ಕತಿನಿ ಅಂತ ತಾಕಿತ್ ಮಾಡ್ದ” ಅಂತ ಅತ್ತಳು. ಅವಳ ಆ ಅಳು ಆ ಮಳೆ ಆ ಗಾಳಿ ಆ ಗುಡುಗು ಆ ಸಿಡಿಲು ಮಿಂಚಿನಲಿ ಒಂದಾಗ್ತ ಒಂದಾಗ್ತ ಆ ಲಾಟೀನ್ ಬೆಳ್ಕೂ ಇಳಿದು ಒಳ್ಗೇ ಸಣ್ಣಗೆ ಉರಿತಿತ್ತು.

ಹೊತ್ತು ಮೀರಿ ಮಳೆ ನಿಂತಂತಿತ್ತು. ಒಂದೇ ರಗ್ಗು ಇಬ್ಬರನ್ನೂ ಸುತ್ತಿಕೊಂಡು ಕಿಸಿಕಿಸಿ ನಗ್ತಿತ್ತು. ಬೆಳಗಾದಾಗ ಅವಳ ಎಲ್ಲ ಕಾಗದ ಪತ್ರಗಳು ಗೋವಿಂದನ ಕೈಲಿದ್ದವು. ಇದು ಒಕ್ಕಲಗೇರಿಯ ಮನೆಮನೆಗೂ ದಾಟಿತ್ತು.

ಯಂಕ್ಟಪ್ಪನ ಬಾಮೈದನಿಗೆ ಒಂದಾಸೆ ಇತ್ತು. ಶಿವನಂಜ ನಾಪತ್ತೆ ಆದ್ಮೇಲ ಎಲ್ಲ ಆಸ್ತಿ ನಂಗೆ ಅಂದುಕೊಂಡು ಬಾವನ ಜೊತೆ ಚೆಂದಾಗಿದ್ದ. ಗೋವಿಂದನ ಜೊತೆ ಸಲಿಗೆ ಇದ್ದ ಅಕ್ಕ ಯಶೋಧಳೊಂದಿಗೆ ಆಗಾಗ ಜಗಳ ಆಡಿ ಎದುರು ಹಾಕೊಂಡಿದ್ದ. ಬಾವ ಸತ್ತ ಮೇಲೆ ಎಲ್ಲ ಸುಪರ್ದಿ ಅಕ್ಕನ ಕೈಗೆ ಬಂದಾಗ ಪೆಚ್ಚಾಗಿ ದಿಕ್ಕೆಟ್ಟವನಂತೆ ಬರುವುದನ್ನು ನಿಲ್ಲಿಸಿದ್ದ. ಅದಾದ ಮೇಲೆ ಗೋವಿಂದನ ಹೆಸರೆತ್ತಿ ಬೀದಿಲಿ ಮಾನ ಹೋಗುವ ಹಾಗೆ ರಂಪ ಮಾಡಿ ಬೈದು ಉಗಿದಿದ್ದ. ಆಗ ಅವಳು ಅವನ ಎದುರಿಗೇ ನೇಣು ಬಿಗಿದುಕೊಳ್ಳಲು ಹಗ್ಗ ಎತ್ತಿಕೊಂಡು ಅವನನ್ನು ಆಚೆ ತಳ್ಳಿ ಬಾಗಿಲು ಹಾಕೊಂಡಾಗ ಮನೆ ಮೇಲೆ ಹತ್ತಿ ತೊಟ್ಟಿಯಿಂದ ಇಳುದು ಹಗ್ಗ ಬಿಚ್ಚಾಕಿದ್ದ. ಅದಾದ ಮೇಲೆ ಇವಳ ಸಾವಾಸವೇ ಬೇಡ ಅಂತ ಅಲ್ಲಿಗೆ ಬರುವುದನ್ನೇ ನಿಲ್ಲಿಸಿದ್ದ.

ಈಗ ಅವಳು ರಂಗು ಕಳೆದುಕೊಂಡು ಹೊಟ್ಟೆ ಬಟ್ಟೆಗಿಲ್ಲದೆ ಹಾಸಿಗೆ ಹಿಡಿದಿದ್ದಳು. ಯಾರಿಂದಲೊ ಈ ವಿಚಾರ ಅವನಿಗೆ ಗೊತ್ತಾಯ್ತು. ಬಾವ ಸತ್ತ ಮೇಲೆ ಕೆಲಸವಿಲ್ಲದೆ ದುಡ್ಡು ಕಾಸಿಲ್ಲದೆ ಅಲ್ಲಿ ಇಲ್ಲಿ ಅಲೀತಿದ್ದ. ಬಂದವನು ಅಕ್ಕನ ಮುಂದೆ ಆರ್ಭಟಿಸಿ ರೇಗುತ್ತ ಬೈಯುತ್ತಲೇ ಹೇಗಾದರು ಮಾಡಿ ಕೋರ್ಟಿಗಾಕಿ ಅಕ್ಕನ ಆಸ್ತಿ ಹೊಡೆಯಬೇಕೆಂದು ಅಕ್ಕನನ್ನು ಪುಸಲಾಯಿಸಿ ಕಂಪ್ಲೆಂಟ್ ಕೊಡಿಸಲು ಪ್ರಯತ್ನಿಸಿದ. ಯಶೋಧ ಕೇರು ಮಾಡದೆ ಮಲಗಿದಳು. ಅವನು ಅದಾಗದ ಮಾತು ಅಂತ ತಿಳಿದು ಗೋವಿಂದನನ್ನು ಕಂಡರಾಗದ ಪುಢಾರಿಯೊಬ್ಬನ ಮಾತು ಕೇಳಿ ಪಂಚಾಯ್ತಿ ಮುಂದೆ ರಂಪ ಮಾಡಿದ. ಗೋವಿಂದ ಹುಡುಗರನ್ನು ಬಿಟ್ಟು ಕುಡಿಸಿ ತಿನ್ನಿಸಿ ಪಂಚಾಯ್ತಿ ಮುಂದೆನೆ ಅವನ ಕಾಲು ಮುರಿಸಿ ದೊಡ್ಡಾಸ್ಪತ್ರೆಲಿ ಮಲಗಿಸಿದ್ರು ಯಾರ ಮೇಲು ಯಾವ ಕಂಪ್ಲೆಂಟೂ ಆಗಲಿಲ್ಲ.

                        -------

ಭೀಮನ ಅಮವಾಸೆ.

ಅವ್ವ ಚೆನ್ನಬಸವಿ ಸತ್ತ ಮೇಲೆ ರಾತ್ರಿವೊತ್ತು ಸಿದ್ದೇಶನು ಅವನ ಹೆಂಡತಿಯೂ ತಾಳ ಹಾಕಿ ಮಲಗಿದರೆ ಎದ್ದು ಬಾಗಿಲ ತೆಗೆಯೊಲ್ಲ ಅಂತ ಬೇಗ ಹೋಗಿ ರೂಮು ಸೇರಿಕೊಳ್ಳುತ್ತಿದ್ದ ನೀಲ ಸರೊತ್ತಾದರು ತೆಂಗಿನಮರ ಬಿಟ್ಟು ಕದಲದೆ ಗವ್ವ್ ಅನ್ನುತ್ತಿದ್ದ ಕತ್ತಲಿಗೆ ಕ್ಯಾಕರಿಸಿ ಕ್ಯಾಕರಿಸಿ ಉಗಿಯುತ್ತ ‘ಬಾ ನಿನ್ ಮಾಡ್ತಿನಿ ನಿನ್ ರಕ್ತ ಕುಡಿತಿನಿ ನನೈದುನ್ ಕೂಸೆ’ ಅಂತ ಜಗುಲಿ ಮೇಲಕ್ಕೆ ಮಣ್ಣು ತುಂಬಿ ಸುರಿದು ಒಣಗಾಕಿದ್ದ ರಾಗಿ ಭತ್ತ ಕೈಯಾಡ ತರ ಕೈಯಾಡ್ತ ಇದ್ದಳು.

ಊರಿನ ಬೀದಿ ಬೀದಿಯಲ್ಲಿ ನಾಯಿಗಳು ಓಡಾಡುತ್ತ ಬೊಗಳುತ್ತ ಗಳ್ಳಾಕುತ್ತಿದ್ದವು. ಸಿದ್ದೇಶ ಕುಡಿದ ಮತ್ತಿನಲ್ಲಿ ಈಚೆ ಬಂದು ‘ಏಯ್ ಬೌಲ ಬಡ್ಡೆತುದ ಯಾಕಿಂಡಾಯೆ. ಅಮಾಸ ಜಿನ ಏನ ನಿಂದು.. ಬಂದು ಮನಿಕ ಬಾ’ ಅಂದ. ಗವ್ವ್.. ಅನ್ನೊ ಆ ಗವ್ಗತ್ತಲಲ್ಲಿ ನೀಲ ‘ಏಯ್ ಯಾರ‌್ನ ಬೌಲ ಅನ್ನದು.. ನೀನು ಕುಡ ಬೌಲ. ನಿನ್ನೆಡ್ತಿ ಕುಡ ಬೌಲ. ನಿಮ್ಮೊವ್ವ ಕುಡ ಬೌಲ. ನಿನ್ ಮಕ್ಳು ಕುಡ ಬೌಲ. ಬೌಲನಂತ ಬೌಲ. ಜಾಡ್ಸಿ ಕೆಳೊಟ್ಗ ಒದ್ರ ಒಳ್ಗಿರದೆಲ್ಲ ಈಚುಗ್ ಬರ‌್ಬೇಕು’ ಅಂತ ಇಟ್ಟಿಗೆ ತಗ್ದು ಅವನ ತಲೆಗೆ ಹೊಡ್ದಳು. ಸಿದ್ದೇಶ ಆ ಕತ್ತಲೊಳಗೆ ಅರಚುತ್ತ ಸಂದಿಯಲ್ಲಿ ಬಿದ್ದು ಒದ್ದಾಡ್ತಿದ್ದ. ಶಿವಯ್ಯ ಸೂರಿ ಮನೆಯವರೆಲ್ಲ ತಾಳ ತಗ್ದು ಕಡ್ಡಿ ಗೀರಿ ಲಾಟೀನಸ್ಸಿ ಈಚ ಬಂದು ಜಗುಲಿಲಿ ನಿಂತ್ಗ ನೋಡುದ್ರು. ಸಿದ್ದೇಶನ ತಲೆ ಹೊಡ್ದು ರಕ್ತ ಹರಿತಿತ್ತು. ಅವನ ಹೆಂಡತಿ ಮಕ್ಕಳೂ ಬಂದರು. ಅವಳು ಅಳ್ತ ‘ಈ ನಾಯಿ ಮುಂಡ ಇರಗಂಟ ನಾವ್ ನೆಮ್ದಿಲಿ ಇರಕಾಗಲ್ಲ ಕಪ್ಪೊ.. ಅದೇನಾಯ್ತೊ… ಸಾಯಿಸ್ಬುಟ್ಲಲ್ಲೊ’ ಅಂತ ಲಬಲಬ ಲಬಗುಟ್ಟುತ್ತ ಬಾಯಿ ಬಡಿಯುತ್ತಿದ್ದಳು. ಸೂರಿ ‘ಏಯ್ ಕೂತ್ಗ ಸಾಯಿಸ್ಬುಟ್ಟ.. ಎಲ್ಯಾ ಸಾಯಿಸ್ಬುಟ್ಟದು.. ನೀವೆಲ್ಲ ನ್ಯಟ್ಗಿದ್ರ ಇದೆಲ್ಲ ಆಗದ. ಅಮಾಸ ಜಿನ ಯಾತಿಕ್ ಬಂದು ಕೆಣುಕುದ್ನ ಅವ್ಳ. ಅವ್ಳ್ ಪಾಡ್ಗ ಅವ ಯಂಗ್ಯಾ ಪೇಚ್ಗತಿದ್ದ. ಗೊತ್ತಿರ‌್ನಿಲ್ವ ಅಮಾಸ ಹುಣ್ಣುಮ್ಗ ಅವ ಇಂಗಾಡ್ತಳ ಅಂತ. ಕುಡುದ್ಮೇಲ ತಿಕ ಅಮಿಕ ಮನ್ಗಿದ್ರ ಇಂಗಾಯ್ತಿತ್ತ.. ಇವುನ್ಯಾರ ಈಚ ಬಾ ಅಂದಂವ” ಅಂತ ರೇಗಿ “ಎತ್ಗಳಿ ಮ್ಯಾಕ್ಕ’ ಅಂತ ಮೇಲೆತ್ತಿ ಜಗುಲಿ ಮೇಲೆ ಮಲಗಿಸಿ ನೀರು ತಂದು ಕುಡಿಸಿ ಒದ್ದೆ ಬಟ್ಟೇಲಿ ಒರೆಸಿ ಒಡ್ದ ಜಾಗಕ್ಕೆ ಕಾಫಿಪುಡಿ ಹಚ್ಚಿ ಇಂಕ್ರ ಸುಣ್ಣನು ಹಾಕಿ ಮೆತ್ತಿ ಬಟ್ಟೆ ಕಟ್ಟಿ ಮಲಗ್ಸಿದ್ರು. ಇದೆಲ್ಲ ಆಗವತ್ಲಿ ನೀಲ ಕಿಸಿಕಿಸಿ ನಗ್ತಾ ‘ಏನಾಯ್ತು.. ಇದೇನ್ ಮಾಡ್ತಿದ್ದರಿ ಲಾಟಿನಸ್ಕಂಡು.. ಮುದೇವಿ ಜಿನಾ ಕುಡ್ದು ಕುಡ್ದು ಬಿದ್ದು ಸಾಯ್ತುದ.. ಸಾಯ್ಲಿ ಬುಡ್ರಿ ಕುಡ್ಯಾದು ತಪ್ಪುತ್ತ ಅವ್ನೆಡ್ತಿಗು ಸಿಕ್ಸೆ ಆಗದು ತಪ್ಪುತ್ತ..’ ಅಂತ ಕತ್ಲೊಳಗೇ ಪೇಚಾಡ್ತಿದ್ದ. ಇದನ್ನು ಕೇಳಿ ರೋಸಿ ಹೋದ ಸಿದ್ದೇಶನ ಹೆಂಡತಿ ಅದೇ ಇಟ್ಟಿಗೆ ತಗ್ದು ಕಿಸಿಕಿಸಿ ನಗ್ತಿದ್ದ ನೀಲಳ ತಲೆಗೆ ಹೊಡ್ದಳು. ನೀಲ ಕಿರ‌್ರೋ ಅಂತ ಕಿರುಚಿ ರೋಡಿಗೋಡಿದಳು. ಬೀದಿಬೀದಿ ಅಲಿತಾ ಬೊಗುಳ್ತಾ ಗಳ್ಳಾಕ್ತಿದ್ದ ನಾಯಿಗಳು ರೋಡಿಗೆ ಬಂದು ಇನ್ನೂ ಗಳ್ಳಾಕತೊಡಗಿದವು. ಸೂರಿ ಕೆಳಕ್ಕಿಳಿದು ಓಡಿದ. ನೀಲಳ ತಲೆನು ಒಡೆದು ರಕ್ತ ಸೋರುತ್ತಿತ್ತು. ಅವಳು ಯಾವ್ದೊ ಗ್ಯಾನದಲ್ಲಿ ಸೂರಿ ಮುಂದಲೆ ಹಿಡಿದು ಎಳೆದಾಡಿ “ವಡ್ದಯ. ನಂಗೆ ವಡ್ದಯ” ಅಂತ ಕುಕ್ಕರಿಸಿದಳು.

ನಾಯಿಗಳ ಗಳ್ಳು ಜೋರಾಯ್ತು.

ಶಿವಯ್ಯನ ಉಳಿದ ಗಂಡು ಮಕ್ಕಳು ಓಡಿ ಬಂದು ಬಿಡಿಸಿ ನೀಲನ್ನ ಭದ್ರವಾಗಿ ಹಿಡಿದು ನೀರು ಕುಡಿಸಿ ಒದ್ದೆ ಬಟ್ಟೇಲಿ ಒರೆಸಿ ಕಾಫಿಪುಡಿ ಸುಣ್ಣ ಹಚ್ಚಿದರು. ಅಷ್ಟು ಜನ ಹಿಡಿದರು ಬಗ್ಗದೆ ಮೊಸಗರಿಯುತ್ತ “ಬುಡಿ. ನನ್ ಬುಡಿ ಅಂವ ಹೊಂಟೊಯ್ತನ. ಅವ್ನ್ ರಕ್ತ ಕುಡಿಬೇಕು. ಬುಡ್ರ ನನ್ ಸಂವ್ತಿ ಮಕ್ಳ.” ಅಂತ ಎಲ್ಲರನ್ನು ಜೋರಾಗಿ ತಳ್ಳಿದೇಟಿಗೆ ಎಲ್ಲ ದಿಕ್ಕಾಪಾಲು ಬಿದ್ದರು. ಶಿವಯ್ಯ ಮೋರಿಗೆ ಬಿದ್ದ. ಅವನನ್ನ ಮೋರಿಯಿಂದ ಎತ್ತಲು ಹೋದರು. ಅಷ್ಟೊತ್ತಿಗೆ ನೀಲ “ನಿನ್ನಂತು ಬುಡಲ್ಲ ನಿನ್ ರಕ್ತ ಕುಡಿತಿನಿ ಲೇ…. ” ಅಂತ ಕೂಗುತ್ತ ಅರಚುತ್ತ ಆ ಗವ್ಗತ್ತಲಲ್ಲಿ ರೋಡಿನುದ್ದಕ್ಕು ಹೋಗ್ತ ಹೋಗ್ತ ದಂಡಿನ ಮಾರಿಗುಡಿ ಮುಂಡ್ಗಳ್ಳಿ ಬೇಲಿ ಕಡೆ ಓಡಿದಳು.

ಆಗ ಗಾಳಿ ಬೀಸ್ತಿತ್ತು.

ಸೂರಿ, ಅಪ್ಪ ಶಿವಯ್ಯನನ್ನು ಮೋರಿಯಿಂದ ಮೇಲೆತ್ತಿ ನೀಲಳನ್ನು ಹಿಡಿಯಲು ಕೂಗುತ್ತಾ ಆ ಕತ್ತಲೊಳಗೆ ದಿಗಿಲುಗೊಂಡು ಗುಡುಗುಡನೆ ಓಡ್ದ.

ನೀಲ ನಾಪತ್ತೆಯಾಗಿ ಹತ್ತಾರು ದಿನಗಳೇ ಆಯ್ತು. ಅವಳ ಬಗ್ಗೆ ಮಾತಾಡದವರಿಲ್ಲ. ಅವಳು ದಂಡಿನಮಾರಿ ಗುಡಿತವು ಪರಾಜಿತ ಹಾಡಿಗೆ ಕುಣಿತ ಇದ್ದದು, ಅದಕ್ಕು ಮುನ್ನ ಮಲ್ಲಮೇಷ್ಟ್ರ ಮನೆಯ ಎರಡು ಬ್ಯಾಂಡಿನ ರೇಡಿಯೊದಲ್ಲಿ ಬರುತ್ತಿದ್ದ ಹಾಡಿಗೆ ಕುಣಿಯುತ್ತಿದ್ದುದು, ಅದಾದ ಮೇಲೆ ಅಗ್ರಹಾರಕ್ಕೆ ಡ್ಯಾನ್ಸ್ ಪ್ರಾಕ್ಟೀಸ್ ಗೆ ಹೋಯ್ತಿದ್ದು ಎಲ್ಲವೂ ಅವರವರ ಮನಸ್ಸಿಗೆ ತೋಚಿದಂತೆ ನೀಲ ಕಾಣುತ್ತ ಲಕಲಕನೆ ಕುಣಿಯತೊಡಗಿದಳು.

ಈಗ ಅವಳು ಎಲ್ಲಿ ಹುಡುಕಿದರು ಕಾಣಿ. ಈ ಹೊತ್ತಲ್ಲಿ ಗೋವಿಂದನಿಗೆ ಚೆನ್ನಬಸವಿ ನೆನಪಾದಳು. ನೀಲಳಿಗಾಗಿ ಏನೇನು ಮಾಡಿದಳು ಎಂಬುದೆಲ್ಲ ಕಣ್ಮುಂದೆ ಬಂತು. ನೀಲ ಆತರ ಆದ ಮೇಲೆ ಆಗಾಗ ಅವಳಿಗೆ ಬೇಕಾದ್ದು ತಂದು ಕೊಡುತ್ತಿದ್ದ. ಕಿಚಾಯಿಸುತ್ತಿದ್ದ. ಅದಾಗಿ ನೀಲ ನಾಪತ್ತೆ ಸುದ್ದಿ ಕೇಳಿ ಸಂದಿ ಮನೆ ಗೋಡೆ ಒರಗಿ ಕಣ್ಣೀರಾಕಿ ಸಿದ್ದೇಶನಿಗು ಅವನ ಹೆಂಡತಿಗು ಕ್ಯಾಕರಿಸಿ ಉಗ್ತು ಪೋಲೀಸು ಸ್ಟೇಷನ್ನಿಗೆ ಹತ್ತಿಸಿದ್ದ. ಅವರು ಪೊಲೀಸ್ ಸ್ಟೇಷನ್ ಹತ್ತಿ ಪೊಲೀಸರು ಗದರಿಸುವಾಗ ಇತ್ತ ಅವರ ಮಕ್ಕಳು ದಿಕ್ಕೆಟ್ಟು ಅಳುವುದನ್ನು ನೋಡಿ ಗೋವಿಂದನಿಗೆ ಒಂಥರಾ ಆಗಿ ಆ ಕಂಪ್ಲೇಟನ್ನೂ ವಾಪಸ್ ತೆಗೆಸಿ ಬೈದು ಕಳಿಸಿದ್ದ.

ಹಿಂಗೆ ಒಂದಷ್ಟು ದಿನ ಉರುಳಿ ರಾತ್ರಿ ಹಗಲು ಬಂದು ಹೋದವು. ಚಂದ್ರನ ಡಿಗ್ರಿ ಕಂಪ್ಲೀಟ್ ಆಗಿ ಕತೆ ಬರಿತಿನಿ ಸಿನಿಮಾ ಸೇರ‌್ತಿನಿ ದಾರಾವಾಹಿ ಡೈರೆಕ್ಟ್ರು ಆಯ್ತಿನಿ ಅಂತ ಏನೇನೊ ಹೇಳ್ತಾ ತಿರುಗ್ತಾ ಬೆಂಗಳೂರು ಮೈಸೂರು ಕಡೆ ಅಲಿತಾ ಊರು ಬಿಟ್ಟಿದ್ದ.

ಶಿವಯ್ಯ ಕೈಯಂಚಿನ ತನ್ನ ಹಳೇ ಮನೆನ ಅಳಿದು ಇದ್ದುದರಲ್ಲಿ ಸರಿಯಾಗಿ ನ್ಯಾರ ಮಾಡಲು ಮನೇಲಿದ್ದ ಐವತ್ತರವತ್ತು ಕ್ವಿಂಟಾಲ್ ಭತ್ತ ರಾಗಿ ಮಾರಿ ಮನೆ ರಿಪೇರಿಗೆ ಬೇಕಾದ ಸಾಮಾನು ತಂದು ಸಂದಿ ಕಡೆಗಿದ್ದ ಬಾಗಿಲು ಮುಚ್ಚಿ ಪೂರ್ವಕ್ಕೆ ರೋಡ್ ಸೈಡ್ ಗೆ ಬಾಗಿಲು ತೆಗೆದು ನೀಲ ಒರಗಿ ನಿಲ್ಲುತ್ತಿದ್ದ ತೆಂಗಿನ ಮರದ ಬುಡಕ್ಕೆ ಹಾಲೂದು ತನಿ ಎರೆದು ಪೂಜ ಮಾಡಿ ಮರವನ್ನು ಕತ್ತರಿಸಿ ಬಿಸಾಡಿ ಆ ಜಾಗ ಸೇರಿಸಿಕೊಂಡು ಕಾಂಪೌಂಡ್ ಹಾಕಿಸಿ ಸುಣ್ಣ ಬಣ್ಣ ತುಂಬಿಸಿದ ಮೇಲೆ ಶಿವಯ್ಯನ ಮನೆ ಫಳಾರ್ ಅಂತು.

                      --------

ಮಳೆ ಉಯ್ಯುತ್ತಲೇ ಇತ್ತು. ಗಾಳಿ ಬೀಸುತ್ತಲೇ ಇತ್ತು. ಗುಡುಗು ಸಿಡಿಲು ಸದ್ದು ಮಾಡುತ್ತ ಮಿಂಚು ಫಳಾರ್ ಫಳಾರ್ ಅಂತ ಮಿಂಚುವಾಗ ಚಂದ್ರನಿಗೆ “ಅರೆ ಅವ್ಳು ನಮ್ ನೀಲಕ್ಕ ಅಲ್ವ..” ಅಂತ ಅನ್ನುಸ್ತು. “ಅವ್ನ್ಯಾರ..? ಎಲ್ಲೊ ನೋಡಿನಿ ಅಂತಂದ.. ಅವ್ಳ್ ಕಡೆನೆ ಕೈತೋರ‌್ದ ಅಲ್ವ.. ಈ ಕತ್ಲಲ್ಲಿ ಬಸ್ ಟೆನ್ಸನ್ಲಿ ಅದೇನಂತ ನಂಗೂ ಗೊತ್ತಾಗ್ನಿಲ್ಲ.. ಇರ‌್ಲಿ..” ಅಂತ ಆ ಮಳೆ ಗಾಳಿ ಗುಡುಗು ಸಿಡಿಲು ಮಿಂಚಿನೊಳಗೆ ಇಲವಾಲ ಕೆಎಸ್ಸಾರ್ಟಿಸಿ ಬಸ್ ಸ್ಟಾಪ್ ನ ಒಳಗೆಲ್ಲ ಹೆಜ್ಜೆ ಹಾಕುತ್ತ ದಿಕ್ಕೆಟ್ಟವನಂತೆ ದಿಕ್ದಿಕ್ಕಿಗು ಕಣ್ಣಾಡಿಸುತ್ತ ನೋಡ ತೊಡಗಿದ.

ಇಡೀ ಬಸ್ಟ್ಯಾಂಡ್, ಜನ ಜಂಗುಳಿಯಿಂದ ತುಂಬಿ ತುಳುಕುತ್ತ ಅವರವರ ಊರಿಗೋಗಲು ಬಸ್ಸಿಲ್ಲದೆ ಕುಂತು ನಿಂತು ಚಳಿಗೆ ಗಡಗಡ ನಡುತ್ತ ಕರೆಂಟಿಲ್ಲದೆ ತಮ್ಮ ತಮ್ಮ ಮೊಬೈಲ್ ಟಾರ್ಚ್ಗಳನ್ನು ಆನ್ ಮಾಡಿ ಆ ಬೆಳಕಲ್ಲಿ ತಮ್ಮತಮ್ಮವರೊಂದಿಗೆ “ಊರಿಗೆ ಹೆಂಗ್ ಹೋಗೋದು” ಅಂತ ಮಾತಾಡಿಕೊಳ್ತ ಇದ್ದರೆ ಚಂದ್ರ ಆ ಟಾರ್ಚ್ಗಳ ಬೆಳಕಲ್ಲಿ ಅಲ್ಲಲ್ಲೆ ಒಂದೇ ಸಮ ಬುಗುಬುಗುನೆ ಸುತ್ತಿ ಸುತ್ತಿ ನೀಲಳನ್ನು ಹುಡುಕುತ್ತ ‘ಎಲ್ಲೊ ನೋಡಿನಿ’ ಅಂದವನ ಕಡೆನೂ ದಿಗಿಲಾಗಿ ರೋಡ್ ಕಡೆ ಕಣ್ಣಾಡಿಸಿದ. ಮಳೆ ಸ್ವಲ್ಪ ನಿಂತಂತೆ ಕಂಡಿತು. ಸೀಪರು ಸೀಪರು ಮಳೆ ಉದುರುತ್ತಿತ್ತು. ಗಾಳಿ ರೊಯ್ಯ ರೊಯ್ಯ ಅಂತ ರೊಯ್ಞ್ ಗುಟ್ಟುತ್ತ ಬೀಸುತ್ತಲೇ ಇತ್ತು. ಮಿಂಚು ಮಿಂಚುತ್ತಲೇ ಇತ್ತು. ರೋಡಿನಲ್ಲಿ ಮಳೆ ನೀರು ಹೊಳೆಯಂತೆ ಸದ್ದು ಮಾಡುತ್ತ ಹರಿಯುತ್ತಿತ್ತು. ಅದೇ ಹೊತ್ತಿಗೆ ಒಂದು ಬಸ್ ಹಾರ್ನ್ ಮಾಡುತ್ತಾ ಹೆಡ್ ಲೈಟ್ ಹಾಕೊಂಡು ಬರ‌್ತಿತ್ತು. ಬಸ್ಸಿನ ಹಾರ್ನ್ ಸದ್ದು ಕೇಳಿದ ಜನ ಬಸ್ಸಿಗಾಗಿ ತಳ್ಳಾಡಿಕೊಂಡು ಮೆಟ್ಟಿಲಿಳಿದು ದಬದಬನೆ ರೋಡಿಗಿಳಿಯ ತೊಡಗಿದರು. ಆಗ ಆ ಗವ್ಗತ್ತಲಲ್ಲಿ “ಜಾಗ ಬುಡ್ರಲೆಯ್ ನನ್ ಸಂವ್ತಿ ಮಕ್ಳ.. ನಿಮ್ಮೊಕ್ಕ ನನ್ನುಚ್ಚ ಉಯ್ಯ.. ಅಂವ ತಪ್ಪುಸ್ಕ ಓಡ್ತಾವ್ನ.. ಅವ್ನ್ ರಕ್ತ ಕುಡ್ಯಾಗಂಟ ಬುಡದಿಲ್ಲ. ದಾರಿ ಬುಡ್ರ ಬೇವರ್ಸಿಗಳ..” ಅಂತ ಜನರನ್ನು ತಳ್ಳಿಕೊಂಡು ಸಿಕ್ಕಸಿಕ್ಕವರ ಬೆನ್ನಿಗೆ ಗುದ್ದಿ ಮುಂದಲೆ ಹಿಡಿದು ಸಸ್ದು ಗುಡುಗುಡುನೆ ಓಡುತ್ತಿದ್ದಳು. ಚಂದ್ರ ಸಡನ್ನಾಗಿ ಬೈಯುತ್ತಿದ್ದ ನೀಲಳ ದನಿ ಕೇಳಿ ಆ ನೂಕು ನುಗ್ಗಲಿನ ಜನರ ಸಂದಿಯಲ್ಲಿ ಜಾಗ ಮಾಡಿಕೊಂಡು ಹರಿಯುತ್ತಿದ್ದ ಆ ಮಳೆಯ ನೀರೊಳಗೆ “ನೀಲಕ್ಕ… ನೀಲಕ್ಕ ನಿಂತ್ಗ ನಾನ್ ಚಂದ್ರ” ಅಂತ ಕೂಗುತ್ತ ಹೆಗಲಲ್ಲಿ ಬಲದಿಂದ ಎಡಕ್ಕೆ ನೇತಾಡುವಂತೆ ನೇತಾಕಿಕೊಂಡಿದ್ದ ಕಪ್ಪು ಬ್ಯಾಗನ್ನು ಎಡಗೈಲಿ ಒತ್ತರಿಸಿ ಬಿಗಿ ಹಿಡಿದು ಗುಡುಗು ಸಿಡಿಲು ಮಿಂಚು ರೊಯ್ಯ ರೊಯ್ಯನೆ ಬೀಸುತ್ತಿದ್ದ ಗಾಳಿಯನ್ನೂ ಲೆಕ್ಕಿಸದೆ ಗವ್ವ್ ಅಂತಿದ್ದ ಆ ಗವ್ಗತ್ತಲಲ್ಲಿ ಬೀಳುತ್ತಿದ್ದ ಆ ಸೀಪರು ಸೀಪರು ಮಳೆಯೊಳಗೇ ಅವಳು ಓಡಿದ ದಿಕ್ಕಿನ ಕಡೆಗೆ ಓಡತೊಡಗಿದ.

                                       (ಮುಗಿಯಿತು)

-ಎಂ.ಜವರಾಜ್


[ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ ]


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x