ಬಿಫೇಸ್ಸಲ್ಲಿ ಒಂದನೇ ದಿನ
ಅಬ್ಬಬ್ಬಾ….ಒರಾಯನ್ ಮಾಲ್ನಲ್ಲಿ ಮೊದಲ ದಿನದಂದೇ ಇಷ್ಟೊಂದು ಜನ ಜಂಗುಲಿ ಎಂದೂ ನೋಡಿರಲಿಲ್ಲ. ಅದನ್ನು ನಿರ್ವಹಿಸಿದ ರೀತಿಯೂ ಬಲು ಚೆನ್ನ. ಎಂಟ್ರಿ ಪಾಸ್, ಕೆಟಲಾಗ್, ಶೆಡ್ಯೂಲ್ ವಿತರಣೆಯಲ್ಲಿ ಗೊಂದಲಗಳಿರಲಿಲ್ಲ. ಸ್ವಯಂಸೇವಕರು ಬೂಟಾಟಿಕೆ ತೋರದೆ, ಅಗತ್ಯವಿರುವಷ್ಟು ಮಂದಿ ಮಾತ್ರ ಇದ್ದು, ನೂಕು ನುಗ್ಗಲಿಗೆ ಅವಕಾಶವಿರದಂತೆ ಜನರನ್ನು ನಿಯಂತ್ರಿಸುತ್ತಿದ್ದರು.
ಈ ಸಲದ ಥೀಮ್ ಸಾಂಗ್ ಕೂಡಾ ಕ್ರಿಯಾಶೀಲತೆಗೆ ನಿದರ್ಶನದಂತಿದೆ. ಪರಿಚಿತರೇ ಹಾಡಿರುವ ಡೆನ್ನಾನ, ಡೆನ್ನಾನ ಹಾಡು, ಅದರ ಚಿತ್ರೀಕರಣ….ಚಂದವೋ ಚಂದ!
ಸಿನಿಮಾ ದರ್ಶನ….
ಓಮೆನ್
ಕಾಂಗೋ ದೇಶದ ನಾಲ್ಕು ಭಾಷೆಗಳನ್ನೊಳಗೊಂಡ ಈ ಸಿನಿಮಾ ರೂಢ ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಜನಾಂಗದ ಬಹಿಷ್ಕೃತ ವ್ಯಕ್ತಿ ತಾನು ಮದುವೆಯಾಗುವ ಬಿಳಿಯ ಹೆಣ್ಣನ್ನು ತನ್ನವರಿಗೆ ಪರಿಚಯಿಸಲು ಕರೆದುಕೊಂಡು ಬರುತ್ತಾನೆ. ಅಲ್ಲಿಯ ಪದ್ಧತಿಯಂತೆ ಆತ ತಂದೆಗೆ ವಧುದಕ್ಷಿಣೆ ಕೊಡಬೇಕು. ಅದರೆ ತಂದೆ ಅವನಿಗೆ ಸಿಗುತ್ತಿಲ್ಲ.ಅದಕ್ಕೆ ಕಾರಣಗಳಿವೆ. ಆಫ್ರೀಕಾದ ಕಾಂಗೋ ಬುಡಕಟ್ಟಿನ ಜನರ ರೀತಿ, ನೀತಿಗಳು, ಮೂಢ ನಂಬಿಕೆಗಳು ಜನರ ಮೇಲೆ ಅದರ ಪ್ರಭಾವ ಇದನ್ನು ಮಾನವ ಶಾಸ್ತ್ರದ ನೆಲೆಯಲ್ಲಿ ಚಿತ್ರ ಹೇಳುವ ಪ್ರಯತ್ನ ಮಾಡುತ್ತದೆ.
ಪಾರಡೈಸ್
ಈ ಚಿತ್ರ ನೀಡುವ ಅನುಭವ ಮರೆಯುವಂಥದ್ದಲ್ಲ. ಶ್ರೀಲಂಕಾದಲ್ಲಿ ಆರ್ಥಿಕ ಪರಿಸ್ಥಿತಿ ವಿಷಮಿಸಿ, ಜನರು ರಾಜಪಕ್ಷ ಸರಕಾರದ ವಿರುದ್ಧ ದಂಗೆ ಎದ್ದ ಕಾಲದ ಚಿತ್ರ. ಆರ್ಥಿಕತೆ ಕುಸಿದು ಜೀವನೋಪಾಯ ವಸ್ತುಗಳು, ಡೀಸಲ್ ಮುಂತಾದವು ಜನ ಸಾಮಾನ್ಯರಿಗೆ ಸಿಗುವುದಿಲ್ಲ. ಅದರೆ ಟೂರಿಸ್ಟ್ ಗಳಿಗೆ ಸೌಕರ್ಯವಿದೆ. ಟೂರಿಸ್ಟ್ ಗಳಿಂದ ದೊರಕುವ ಆದಾಯದ ಆರ್ಥಿಕತೆಯ ಮುಖ್ಯ ಅಂಶವಾಗಿರುವುದರಿಂದ ವಿದೇಶಿ ಪ್ರವಾಸಿಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ.
ರಾಮಾಯಣದ ಕತೆಗೆ ಸಂಬಂಧ ಪಟ್ಟ ಸ್ಥಳಗಳನ್ನು ಬಳಸಿಕೊಳ್ಳುವಲ್ಲಿ, ನಿಸರ್ಗವನ್ನು, ಸಾಂಬಾರ್ ಜಿಂಕೆಯನ್ನು ಪಾತ್ರವಾಗಿ ಒಳಗೊಳ್ಳುವುದರಲ್ಲಿ ನಿರ್ದೇಶಕನ ಜಾಣ್ಮೆ ಇದೆ.
‘ಸ್ತ್ರೀಯರನ್ನು ಪುರುಷರೇ ರಕ್ಷಿಸಬೇಕೇ?’ ‘ನಮ್ಮ ರಾಮಾಯಣದಲ್ಲಿ ಸೀತೆ ರಾವಣನನ್ನು ಕೊಲ್ಲುತ್ತಾಳೆ’ ಮುಂತಾದ ಮನಸ್ಸನ್ನು ತಟ್ಟುವ ಸಂಭಾಷಣೆಗಳಿವೆ.
ಶ್ರೀಲಂಕಾದ ಈ ಸಿನಿಮಾದ ನಿರ್ದೇಶಕ ಐದು ಸಲ ನೆಟ್ ಪ್ಯಾಕ್ ನ ಅತ್ಯುತ್ತಮ ನಿರ್ದೇಶಕನೆಂದು ದಾಖಲೆ ನಿರ್ಮಿಸಿದ ಪ್ರಸನ್ನ ವಿತನಗೆ. ಅವರು ಪ್ರದರ್ಶನಕ್ಕೆ ಖುದ್ದು ಹಾಜರಿದ್ದರು.
ಬ್ಲಾಗಾಸ್ ಲೆಸನ್ಸ್
ಬಲ್ಗೇರಿಯನ್ ಭಾಷಾ ಪಂಡಿತೆ ಬ್ಲಾಗಾ ಸಾಮಾನ್ಯರ ಬದುಕಿನಿಂದ ದೂರವಾದವಳು. ಆಕೆ ಗಂಡನ ಸಮಾಧಿಗೆಂದು ಕೂಡಿಟ್ಟ ಹಣವನ್ನು ಲಪಟಾಯಿಸಲಾಗುತ್ತದೆ. ಬ್ಲಾಗಾಳ ಹೆಸರು, ಜ್ಞಾನ ಯಾವುದೂ ಅವಳಿಗೆ ಉದ್ಯೋಗವನ್ನು, ಹಣವನ್ನು ದೊರಕಿಸಿಕೊಳ್ಳಲಾರದು. ಕೊನೆಗೆ ಆಕೆ ಅನಿವಾರ್ಯವಾಗಿ ವಂಚನೆ ಮಾಡುವವರೊಂದಿಗೆ ಕೆಲಸ ಮಾಡಬೇಕಾಗುತ್ತದೆ. ಮಗ ಮತ್ತು ಸಮಾಜದಿಂದ ದೂರವಾಗುವ ಹಿರಿಯ ನಾಗರಿಕರ ಸಂಕಷ್ಟಗಳನ್ನು ಬಲ್ಗೇರಿಯಾದ ವ್ಯವಸ್ಥೆಯೊಂದಿಗೆ ಚಿತ್ರ ಸಮೀಕರಿಸುತ್ತದೆ.
ನಿರ್ದೇಶಕ ಸ್ಟೀಫನ್ ಕಮಾಂಡರೇವ್.
ಇವಿಲ್ ಡಸ್ ನಾಟ್ ಎಕ್ಸಿಸ್ಟ್
‘ಡ್ರೈವ್ ಮೈ ಕಾರ್’ ನಿರ್ದೇಶಿಸಿದ ಜಪಾನಿನ ಖ್ಯಾತ ನಿರ್ದೇಶಕ ರೈಸುಕೆ ಹಮಾಗುಚಿ ನಿರ್ದೇಶನದ ಚಿತ್ರ. ಸಹಜ, ಸುಂದರ ಪರಿಸರದಲ್ಲಿ ಟೊಕಿಯೋದ ಕಂಪನಿಯೊಂದು ಐಶಾರಾಮಿ ಕಾಟೇಜ್ ನಿರ್ಮಿಸಲು ಉದ್ಯುಕ್ತವಾಗುತ್ತದೆ. ಇದಕ್ಕೆ ನಿವಾಸಿಗಳಿಂದ ವಿರೋಧ ವ್ಯಕ್ತವಾಗುತ್ತದೆ. ಈ ವಿರೋಧದ ಮುಂಚೂಣಿಯಲ್ಲಿರುವ ವ್ಯಕ್ತಿಯನ್ನೇ ಈ ಪ್ರಾಜೆಕ್ಟ್ ನಲ್ಲಿ ಸೇರಿಸಿಕೊಳ್ಳುವ ಉಪಾಯ ಹೂಡುತ್ತಾರೆ. ಇದು ಸಫಲವಾಗುವುದೇ ಎನ್ನುವುದನ್ನು ನಿರ್ದೇಶಕ ಕುತೂಹಲಕಾರಿಯಾಗಿ ಕಟ್ಟಿ ಕೊಟ್ಟಿದ್ದಾರೆ.
ಹಮಾಗುಚಿ ಚಿತ್ರಗಳ ಅತ್ಯುತ್ತಮ ಸಿನಿಮಾಟೋಗ್ರಫಿ, ಚುರುಕು ಸಂಭಾಷಣೆಗಳು ಇಲ್ಲೂ ಇವೆ. ಈ ಬಾರಿ ಹಮಾಗುಚಿ ಪರಿಸರವನ್ನು ಉಳಿಸಿಕೊಳ್ಳುವುದರ ಬಗ್ಗೆ ಗಮನ ಸೆಳೆಯುತ್ತಾರೆ.
ಬಿಫೇಸ್ಸಲ್ಲಿ ಮೂರನೇ ದಿನ
ಚಲನ ಚಿತ್ರೋತ್ಸವದ ಮೂರನೇ ದಿನ(02.02.24) ನೋಡಿದ ಮೂರು ಚಿತ್ರಗಳು ಈ ಬಾರಿಯ ಆಯ್ಕೆಯನ್ನು ಸಮರ್ಥಿಸುವ ರೀತಿಯಲ್ಲಿತ್ತು. ಜಾಗತಿಕ ವಿದ್ಯಮಾನಗಳ ಪರಿಚಯ ಮಾಡಿಕೊಡುವುದರೊಂದಿಗೆ ಕಲಾತ್ಮಕ ಅಭಿವ್ಯಕ್ತಿಯನ್ನೂ ತೋರುವ ಚಿತ್ರಗಳಿವು.
ಗುಡ್ ಬೈ ಜೂಲಿಯಾ
ಸೂಡಾನ್ ದೇಶದ ಅರಬಿಕ್ ಭಾಷೆಯ ಈ ಚಿತ್ರದ ಎರಡು ಗಂಟೆಯ ಅವಧಿ ಮುಗಿಯುವುದೇ ತಿಳಿಯುವುದಿಲ್ಲ. ಜನಾಂಗೀಯ ದ್ವೇಷ, ಮತೀಯ ಭಾವನೆಗಳು ಜನರ ಬಾಳನ್ನು ಹಾಳು ಮಾಡುವುದನ್ನು ಚಿತ್ರ ಧಾವಂತವಿಲ್ಲದೆ ನಿರ್ವಹಿಸುತ್ತದೆ. ಕೆಟ್ಟದ್ದು ಮಾಡಬೇಕು ಎನ್ನುವ ಭಾವನೆ ಇಲ್ಲದವರೂ ಪರಿಸ್ಥಿತಿಯ ಅನಿವಾರ್ಯತೆಯಲ್ಲಿ ತಮಗೆ ಒಗ್ಗದ ಕೆಲಸವನ್ನು ಮಾಡಬೇಕಾಗುತ್ತದೆ. ಪ್ರತಿಕೂಲ ರಾಜಕೀಯವೂ ಸಂದಿಗ್ಧತೆಯನ್ನು ಹುಟ್ಟು ಹಾಕುತ್ತದೆ.
ಕೈಮೀರಿದ ಪರಿಸ್ಥಿತಿಯಲ್ಲಿ ಹತ್ಯೆ ಮಾಡಿದ ಕಾರಣಕ್ಕಾಗಿ ಮೋನಾ ಪಶ್ಚಾತ್ತಾಪ ಪಡುತ್ತಾಳೆ. ಅದನ್ನು ಸರಿ ಮಾಡುವ ಇಚ್ಛೆಯಲ್ಲಿ ತೊಂದರೆಗೊಳಗಾದವರಿಗೆ ಹೊಸ ಬದುಕನ್ನು ಕೊಡುವ ಪ್ರಯತ್ನ ಮಾಡುತ್ತಾಳೆ. ಅದರೆ ಅವಳಿಗೆ ಅವಳದೇ ಆದ ವೈಯಕ್ತಿಕ ಸಮಸ್ಯೆಗಳಿವೆ. ಈ ಕತೆಯನ್ನು ಸೂಡಾನ್ ರಾಜಕೀಯ ಸ್ಥಿತ್ಯಂತರದ ಹಿನ್ನೆಲೆಯಲ್ಲಿ ನಿರ್ದೇಶಕ ಮೊಹಮದ್ ಕೊರ್ದೋಫನಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ
ದಿ ಟೀಚರ್
ಪಾಲೆಸ್ತೇನಿಯನ್ ಚಿತ್ರಗಳು ಪ್ರೇಕ್ಷಕರಿಗೆ ವಿಷಯ ಮತ್ತು ಪ್ರಸ್ತುತಿಯಲ್ಲಿ ಮೋಸ ಮಾಡುವುದಿಲ್ಲ. ಪಾಲೆಸ್ತೇನಿಯನ್ ಜನರ ಅತಂತ್ರ ಸ್ಥಿತಿಯನ್ನು ಕಟ್ಟಿ ಕೊಡುವುದರೊಂದಿಗೆ, ಇಸ್ರೇಲಿನ ದಮನಕಾರೀ ಪ್ರವೃತ್ತಿಗೂ ಅವು ಕನ್ನಡಿ ಹಿಡಿಯುತ್ತದೆ.
ತಾನು ಪಾಠ ಮಾಡುವ ವಿದ್ಯಾರ್ಥಿಗಳ ಮನೆಯ ಸಮೀಪವೇ ವಾಸವಾಗಿರುವ ಅಧ್ಯಾಪಕ ಅವರಲ್ಲೊಬ್ಬ ವಿದ್ಯಾರ್ಥಿಯ ಹತ್ಯೆಯಾದಾಗ ವಿಚಲಿತನಾಗುತ್ತಾನೆ. ಹತ್ಯೆಯಾದ ವಿದ್ಯಾರ್ಥಿಯ ತಮ್ಮ ದುಡುಕಿ ಸೇಡು ತೀರಿಸಿಕೊಳ್ಳದಂತೆ ಶಕ್ತಿ ಮೀರಿ ಪ್ರಯತ್ನಿಸುತ್ತಾನೆ. ಈ ನಡುವೆ ಪಾಲೆಸ್ತೇನಿಯನ್ ವಿಮೋಚಕ ಪಡೆ ಅಮೆರಿಕನ್ ಯುವಕನೊಬ್ಬನನ್ನು ಅಪಹರಿಸುತ್ತದೆ. ಆತನನ್ನು ಬಿಡುಗಡೆ ಮಾಡಲು ಸಾವಿರಾರು ಬಂಧಿತ ವಿಮೋಚನಕಾರರನ್ನು ಬಿಡುಗಡೆ ಮಾಡುವ ಶರತ್ತು ಒಡ್ಡುತ್ತಾರೆ. ಮಗನ ಬಿಡುಗಡೆಗೆ ಅಮೆರಿಕದಿಂದ ಬಂಧಿತನ ತಂದೆ ತಾಯಿ ಬರುತ್ತಾರೆ. ಪರಿಸ್ಥಿತಿ ಕಾವೇರುತ್ತದೆ. ಅಧ್ಯಾಪಕನ ಮೇಲೂ ಶಂಕೆ ಉಂಟಾಗುತ್ತದೆ.
ಬಂಧನಕ್ಕೊಳಗಾದವರು ಅರೈಕೆ ಇಲ್ಲದ ಸಾಯುವ ಪರಿಸ್ಥಿತಿ, ಹದಿನಾರು ವಯಸ್ಸಿಗೇ ವಯಸ್ಕನೆಂದು ದೀರ್ಘಾವಧಿ ಶಿಕ್ಷೆ, ಸೆಟ್ಲರ್ಸ್ ಕೊಲೆ ಮಾಡಿದರೂ ವಿನಾಯಿತಿ, ಅಮೆರಿಕ, ಇಂಗ್ಲೆಂಡಿನವರಿಗೆ ವಿಶೇಷ ಗೌರವ ಇವೆಲ್ಲವುಗಳಿಂದ ಮೂರಾಬಟ್ಟೆಯಾಗುವ ಪಾಲೆಸ್ತೇನಿಯನ್ ಜನರ ಬದುಕು ಇವೆಲ್ಲ ಚಿತ್ರದಲ್ಲಿ ಅನಾವರಣಗೊಳ್ಳುತ್ತವೆ. ನುರಿತ ನಟ ಸಾಲೆಹ್ ಬಕ್ರಿ ಅಧ್ಯಾಪಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮೊದಲ ಸಲ ಪೂರ್ಣ ಪ್ರಮಾಣದ ಫೀಚರ್ ಫಿಲ್ಮ್ ನಿರ್ದೇಶಿಸಿದ ಫರಾ ನಬುಲ್ಸಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ.
ದಿ ಮಾಂಕ್ ಅಂಡ್ ದಿ ಗನ್
‘ ಎ ಯಾಕ್ ಇನ್ ದಿ ಕ್ಲಾಸ್ ರೂಮ್’ ನಿರ್ದೇಶಿಸಿದ ಪಾವೊ ಚೊಯ್ನಿಂಗ್ ದೋರ್ಜಿಯವರ ಎರಡನೇ ಚಿತ್ರ. ಇದರಲ್ಲಿ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಾನು ಎಂತಹ ಸಮರ್ಥ ನಿರ್ದೇಶಕನೆನ್ನುವುದನ್ನು ಜಗತ್ತಿಗೇ ತೋರಿಸಿದ್ದಾರೆ.
ಹಾಗೆ ತೋರಿಸುವಾಗಲೂ ಅಮೆರಿಕಾದಂತ ದೇಶದ ಕಾಲೆಳಿದಿದ್ದಾರೆ. ‘ ಅಮೆರಿಕದಲ್ಲಿ ಜನರಿಗಿಂತ ಗನ್ ಗಳು ಜಾಸ್ತಿ ಇವೆ’ ‘ ಇಂಡಿಯಾದ ಡೆಮೋಕ್ರಸಿಯಲ್ಲಿ ಒಬ್ಬರು ಮತ್ತೊಬ್ಬರ ಗಡ್ಡ ಹಿಡಿದು ಎಳೆಯುತ್ತಾರೆ’ ಇಂತಹ ಕಚಗುಳಿ ಮಾತುಗಳು ಖುಷಿ ಕೊಡುತ್ತವೆ.
ಬೂತಾನ್ ಡೆಮೊಕ್ರಸಿಗೆ ಹೊರಳಿಕೊಳ್ಳುವ ಸಂದರ್ಭ. ಜನರಿಗೆ ಡೆಮೊಕ್ರಸಿ ಬಗ್ಗೆ ಆಸಕ್ತಿಯಿಲ್ಲ. ರಾಜ ಇಲ್ಲವೇ?, ತೀರಿಕೊಂಡಿದ್ದಾನಾ? ಎನ್ನುವ ಪ್ರಶ್ನೆಗಳೂ, ನಮಗೆ ಅವನೇ ಸಾಕು ಎನ್ನುವ ಅಭಿಪ್ರಾಯವೂ ಅವರಲ್ಲಿದೆ. ಜನರನ್ನು ಚುನಾವಣೆಗೆ ಸಜ್ಜುಗೊಳಿಸಲು ಅಣಕು ಮತದಾನದ ಏರ್ಪಾಡು ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಬುದ್ಧ ಗುರುವೊಬ್ಬ ಶಿಷ್ಯನಿಗೆ ಗನ್ ತಂದು ಕೊಡಲು ಹೇಳುತ್ತಾನೆ. ಅವನೋ ಅಮಾಯಕ. ಅವನಿಗೆ ಗನ್ ಎಂದರೆ, ಎಲೆಕ್ಷನ್ ಎಂದರೆ ಏನು ಎಂದೇ ಗೊತ್ತಿಲ್ಲ. ಗುರುವಿಗೆ ಗನ್ ಏಕೆ ಬೇಕು ಎಂದೂ ತಿಳಿದಿಲ್ಲ. ಅವನು ಗನ್ ಗೆ ಹುಡುಕಾಡುವ ಹೊತ್ತಲ್ಲಿ ಅಮೆರಿಕನ್ ಗನ್ ಡೀಲರ್ ಒಬ್ಬ ಹಳೆಯ ಗನ್ ಗಾಗಿ ಬೂತಾನ್ ಬರುತ್ತಾನೆ….ಈ ರೀತಿ ಸ್ವಾರಸ್ಯವಾಗಿ ಬೆಳೆಯುತ್ತಾ ಹೋಗುವ ಚಿತ್ರ ಅನಿರೀಕ್ಷಿತ ಅಚ್ಚರಿಯಲ್ಲಿ ಮುಗಿಯುತ್ತದೆ.
ಹಣದ ಬಗ್ಗೆ ವ್ಯಾಮೋಹವಿಲ್ಲದೆ ಶಾಂತ ರೀತಿಯ ಬದುಕನ್ನು ನಡೆಸುವ ಜನ, ಅಧುನೀಕತೆ ತಂದೊಡ್ಡುವ ವೈಷಮ್ಯಗಳು, ಅತಿಯಾದ ಬಯಕೆಗಳಿಂದಾಗುವ ಕಿರಿಕಿರಿಗಳು 107 ನಿಮಿಷಗಳಲ್ಲಿ ರಸಮಯವಾಗಿ ಮೂಡಿ ಬರುತ್ತವೆ. ಚಪ್ಪಾಳೆ, ಜೋರಾದ ನಗು, ಚಿತ್ರ ಮುಗಿದ ಮೇಲೂ ನೆನಪಲ್ಲಿ ಉಳಿಯುವ ಸಂದೇಶ ಚಿತ್ರವನ್ನು ಅನನ್ಯವಾಗಿಸಿದೆ.
-ಎಂ. ನಾಗರಾಜ ಶೆಟ್ಟಿ