ನೋವೆಂಬ ಒಲವಿನಲಿ ತೇಲುವ ನಾವೆ “ಪ್ರೇಮಾಯತನ”: ಅಶ್ಫಾಕ್ ಪೀರಜಾದೆ

ಚಿತ್ರಕಲೆ, ಸಾಹಿತ್ಯ, ಪ್ರವಾಸ, ಕರಕುಶಲ ಕಲೆ, ಓದು, ಬರಹ, ಅಂಚೆ ಚೀಟಿ, ಹಳೆ ನಾಣ್ಯ ಸಂಗ್ರಹ, ಛಾಯಾಚಿತ್ರ, ವೈದ್ಯಕೀಯ ಸೇವೆ ಹೀಗೆ ಹತ್ತು ಹಲವು ಹವ್ಯಾಸಗಳಲ್ಲಿ ಟಿಸಲೋಡೆದು ಸಮೃದ್ಧವಾದ ಕಲೆ ಮತ್ತು ಸಾಹಿತ್ಯದ ಹೆಮ್ಮರವಾಗಿ ಬೆಳೆದು ಸಮಾಜಕೆ ನೆರಳಾಗಿ ನಿಂತ ಬಹುಮುಖ ಪ್ರತಿಭೆಯ ಹೆಸರೇ ಜಬೀವುಲ್ಲಾ ಎಂ. ಅಸದ್. ನರ್ಸಿಂಗ್ ಓದಿರುವ ಇವರು ಸಧ್ಯ ಬೆಂಗಳೂರಿನ ಕರುಣಾ ಟ್ರಸ್ಟ್ ನ ಮುಖಾಂತರ ಜನರಿಗೆ ವೈದ್ಯಕೀಯ ಸೇವೆ ನೀಡುತ್ತ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. ಕಾವ್ಯ ಮತ್ತು ಚಿತ್ರಕಲೆಯ ಕಡು ವ್ಯಾಮೋಹಿಯಾಗಿರುವ ಇವರು ಈ ಎರಡೂ ಕ್ಷೇತ್ರದಲ್ಲಿ ಪರಿಣತಿ ಸಾಧಿಸಿದ್ದಾರೆ. ಚಿತ್ರಕಲೆಗಾಗಿ ಸಾಕಷ್ಟು ಪ್ರಶಸ್ತಿಗಳನ್ನು ಸಂಪಾದಿಸಿದಂತೆ ಸಾಹಿತ್ಯದಲ್ಲೂ ಬಹಳಷ್ಟು ಪ್ರತಿಷ್ಠಿತ ಪ್ರಶಸ್ತಿಗಳು ಪಡೆದುಕೊಂಡು ಸಾಧನೆ ಮೆರದಿದ್ದಾರೆ. ಈಗಾಗಲೇ ಏಕಾಂಗಿಯ ಕನವರಿಕೆಗಳು, ಗಾಳಿಗೆ ಗೆಜ್ಜೆ ಕಟ್ಟಿ ಎಂಬೆರಡ ಕಾವ್ಯ ಗುಚ್ಛಗಳನ್ನು ಮತ್ತು ಅನಾವರಣ ಎನ್ನುವ ವಿಮರ್ಶಾ ಕೃತಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿರುವ ಇವರು ಇತ್ತೀಚೆಗೆ “ಪ್ರೇಮಾಯತನ” ಎಂಬ ಕವನ ಸಂಕಲನವನ್ನು ಪ್ರಕಟಿಸಿ ನಮ್ಮ ಮುಂದೆ ಇಟ್ಟಿದ್ದಾರೆ.

ಪ್ರಸ್ತುತ ಪ್ರೇಮಾಯತನ ಶೀರ್ಷಿಕೆಯೇ ಸೂಚಿಸುವಂತೆ ಪ್ರೀತಿ ತುಂಬಿ ತುಳುಕುವ ಯುವ ಕವಿಯೊಬ್ಬನ ಒಟ್ಟು ತೊಂಬತ್ತು ಕವಿತೆಗಳ ಬೆಳೆ, ಒಟ್ಟು ೧೮೧ ಪುಟಗಳಲ್ಲಿ ಹರಡಿಕೊಂಡು ಕಾವ್ಯ ಪ್ರೇಮಿಗಳ ಮನ ತಣಿಸಲು ಮುಂದಾಗಿದೆ. ಜಬೀಯವರು ಯುವ ಕವಿ ಎಂದ ಮಾತ್ರಕ್ಕೆ ಇಲ್ಲಿನ ಕವಿತೆಗಳು ಯೌವ್ವನದ ಹಸಿಬಿಸಿ ಹಳಹಳಿಕೆಗಳು ಅಥವಾ ಹರೆಯದ ಕನಸು ಕನವರಿಕೆಗಳ ಅಭಿವ್ಯಕ್ತಿ ಮಾತ್ರ ಎಂದು ಭಾವಿಸಬೇಕಿಲ್ಲ. ಇಲ್ಲಿನ ಒಟ್ಟಾರೆ ಕವಿತೆಗಳು ಜವ್ವನದ ಬಿಸಿ ರಕ್ತದ ಆರ್ಭಟವಾಗದೆ ಒಂದು ಪ್ರಭುದ್ಧ ಮಾಗಿದ ಮನಸ್ಸಿನ ಸಂಯಮದ ರಚನೆಯಾಗಿ ಕಾಣಲು ಕವಿ ಈಗಾಲೇ ಹತ್ತಾರು ಕ್ಷೇತ್ರಗಳಲ್ಲಿ ದುಡಿದು ಜೀವಾನಾನುಭವ ಸಂಪಾದಿಸಿ, ಅವಿರತ ಓದು ಬರಹ ಮತ್ತು ನಿರಂತರ ಅಲೆದಾಟದ ಸಮಾಜಮುಖಿ ಕಾರ್ಯಗಳ ಮುಖಾಂತರ ಸಾಹಿತ್ಯ ಕ್ಷೇತ್ರದಲ್ಲಿ ಗಟ್ಟಿಯಾದ ಹೆಜ್ಜೆಯೂರಲು ಶ್ರಮಿಸುತ್ತಿರುವುದು ಕಾರಣವಾಗುತ್ತದೆ. ಈಗಾಗಲೇ ಏಕಾಂಗಿಯ ಕನವರಿಕೆಗಳು, ಗಾಳಿಗೆ ಗೆಜ್ಜೆ ಕಟ್ಟಿ ಕವನ ಸಂಕಲನಗಳ ಮೂಲಕ ಗುರ್ತಿಸಿಕೊಂಡಿರುವ ಜಬೀಯವರು ಪ್ರೇಮಾಯತನದ ಮೂಲಕ ಒಂದು ದಾರ್ಶನಿಕ ನೆಲೆಯನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದು. ಪುಸ್ತಕದ ಪ್ರಾಸ್ತಾವಿಕ ನುಡಿಗಳಾದ ಮನದ ಮಾತುಗಳಲ್ಲಿ ತಮ್ಮದೇ ಕಾವ್ಯ ಉಲ್ಲೇಖಿಸುತ್ತ –

ಕವಿತೆ ಎಂದರೆ
ಕೇವಲ ಕನಸುಗಳ ಮೆರವಣಿಗೆಯಲ್ಲ
ಕಲ್ಪನೆಗಳ ವೀಲೆವಾರಿಯಲ್ಲ
ಕಾದ ಕವಿ ಮನದ ಒಸುಗೆ
ಅಂತರಂಗದ ಭಾವಗಳ ಬೆಸುಗೆ…
ಕವಿತೆ ಎಂದರೆ…..
ಆತ್ಮ ಧ್ಯಾನದ ನಿನಾದದ ಅನುಭವ

ಎಂದು ತಮ್ಮ ಕಾವ್ಯದ ನಿಲುವು ಸ್ಪಷ್ಟ ಪಡಿಸುತ್ತಾರೆ.ಹಾಗೇ –

ಮಾತಾಗದ ಮೌನ ಅಕ್ಷರವಾದಾಗ
ಕೊಲ್ಲಲಾಗದ ನೋವು ಸಹ ಕವಿತೆಯಾಗುತ್ತದೆ

ಎನ್ನುವ ತಮ್ಮ ಹೃದಯಾನುಭವವನ್ನು ಅನುಭಾವವಾಗಿ ಪರಿವರ್ತಿಸುವ ಪ್ರಯತ್ನ ಮಾಡುತ್ತಾರೆ. ಹೀಗಾಗಿ ಇಡೀ ಸಂಕಲನದ ಕವಿತೆಗಳು ಹೃದಯ ತುಂಬಿಕೊಂಡಾಗ ಒಬ್ಬ ಅನುಭಾವಿಯ, ಸೂಫಿ ಸಂತನ ಅಲೌಕಿಕ ಪ್ರೇಮದ ಕಾವ್ಯಾತ್ಮಕ ಅನುಸಂಧಾನದಂತೆ ಭಾಸವಾಗುತ್ತದೆ. ಹಾಗಾದರೆ ಕವಿಯ ಪ್ರಕಾರ –

ಸಾವಿನ ಸೂತಕದ ಶೋಕದ ನಡುವೆ
ಭರವಸೆಯ ವಚನ ನೀಡುವ ಹಣತೆಯ ಬೆಳಕು ಪ್ರೇಮವೆಂದರೆ…

“ನೀನೆಂಬ ಕಲ್ಪನೆ ನಾನೆಂಬ ವಾಸ್ತವ” ಎಂಬ ಕವಿತೆಯಲ್ಲಿ ತನ್ನ ಮತ್ತು ತನ್ನ ಮನದನ್ನೆಯ ಅಂತರವನ್ನು ಕಲ್ಪನೆ ಮತ್ತು ವಾಸ್ತವಾಗಿ ಕಾಣುತ್ತ –

ಎಂದಿಗೂ ಕಾಣದ, ಸಿಗದ ಗಮ್ಯದ ಗಹನತೆ
ಮಹೋನ್ನತ ಅನ್ಯೂಹ ನೀನು
ಕೈಜಾರಿ ಒಡೆದು ಚೂರುಚೂರಾದ ಮಡಿಕೆಯ
ಮತ್ತೆ ಅಂಟಿಸಿದ ಅಸ್ಮಿತೆ ನಾನು

ಎಂದು ತಾನು ತನ್ನ ಕನಸಿನ ಕನ್ಯೆಯ ಕಲ್ಪನಾ ವಿನ್ಯಾಸ ಮತ್ತು ಬದುಕಿನ ಜಾತ್ರೆಯಲ್ಲಿ ಒಡೆದು ಚೂರಾಗಿ ತನ್ನ ಅಸ್ತಿತ್ವಕ್ಕಾಗಿ ಹೆಣಗುವ ಪ್ರೇಮಿಯ ಚಿತ್ರವನ್ನು ನೀಡುತ್ತಾರೆ.

“ನಡೆದು ಹೋದ ದಾರಿ” ಕವಿತೆಯಲ್ಲಿ ವಿರಹ ವೇದನೆ ಎಷ್ಟೊಂದು ತೀವ್ರವಾಗಿದೆ ಎಂದರೆ-

ಕಂಬನಿಗಳೆಲ್ಲ ನಿನ್ನ ನೆನಪಲ್ಲೆ ಇಂಗಿ
ನೋವು ಹೆಪ್ಪುಗಟ್ಟಿ ಹೃದಯವೇ ಶಿಲೆಯಾಗಿದೆ
ಸಮಯ ಸರಿಯದೆ ಕೂತು ಕೆತ್ತಿದ ಶಿಲ್ಪ
ಅದು ಸಹ ನಿನ್ನನ್ನೇ ಹೋಲುತ್ತಿದೆ…

ಎಂದು ಸಾರಿದರು ಕೊನೆಗೆ ಕಾವ್ಯವೆನ್ನುವುದು ಪ್ರೇಮ ಕಾಮಗಳಾಚಿನ ಯಾವುದೋ ಒಂದು ಆತ್ಮ ವಿಮೋಚನೆಯ ಮಾರ್ಗವಾಗಿ ಆಧ್ಯಾತ್ಮಿಕ ನೆಲೆಯನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಈ ಕವಿತೆಯ ಕೊನೆ ಸಾಲುಗಳು ಗಮನಿಸಿದಲ್ಲಿ ಈ ವಿಚಾರ ಅರಿವಿಗೆ ನಿಲುಕುತ್ತದೆ

ಮೆರೆವಿಗೆ ಈವೊಂದು ಬದುಕು ಸಾಲದಾಗಿದೆ
ಮತ್ತೊಂದು ಜನ್ಮವನ್ನು ಸಾಲ ಪಡೆಯಬೇಕಿದೆ
ಇಲ್ಲಿ ಹುಟ್ಟು ಸಾವು ಆಕಸ್ಮಿಕವಷ್ಟೇ
ನಿನ್ನ ಸೇರಬೇಕೆಂಬು ಬಯಕೆ ಹಟವಾಗಿದೆ

ಇಲ್ಲಿ ಕವಿ ಪ್ರೀತಿಸಿದ ಹುಡುಗಿ ಯಾವ ಕಾರಣಕ್ಕೆ ದೂರವಾಗಿದ್ದಾಳೆ ಎನ್ನುವುದು ಅಸ್ಪಷ್ಟ. ಎಲ್ಲಿ ಹೋಗಿದ್ದಾಳೆ? ಬದುಕಿದ್ದಾಳೋ ಸತ್ತಿದ್ದಾಳೋ ಎನ್ನುವುದು ಕಗ್ಗಂಟು. ಈ ಅಸ್ಪಷ್ಟತೆ, ಈ ನಿಗೂಢತೆ ಈ ಸೂಚ್ಯತೆಯೇ ಯಾವುದೇ ಕಾವ್ಯಕ್ಕೆ ಇರಬೇಕಾದ ನಿಜವಾದ ಅಹರ್ತೆ ಮತ್ತು ಸೊಗಸು. ಇದೆಲ್ಲ ಓದುಗನ ಕಲ್ಪನೆಗೆ ಬಿಟ್ಟಾಗಲೇ ಬರಹ ಕಾವ್ಯ ಅನಿಸಿಕೊಳ್ಳುವುದು.
ಮತ್ತು ಓದುಗನ ಮನಸ್ಸಿನ ಕನ್ನಡಿಯಲ್ಲಿ ಪ್ರತಿ ಫಲಿಸಿದಂತೆ ಅರ್ಥ ಪಡೆದುಕೊಳ್ಳುವುದು. ಆದರೆ ಇದೆಲ್ಲವನ್ನು ಮೀರಿದ ಕವಿಯ ಅಲೌಕಿಕ ಪ್ರೀತಿ ನಿನ್ನ ಮರೆಯಲು ಜನ್ಮ ಜನ್ಮ ಕಳೆದರೂ ಸಾಧ್ಯವಿಲ್ಲ. ಹುಟ್ಟು ಸಾವುಗಳು ಇಲ್ಲಿ ಆಕಸ್ಮಿಕ ಆದರೆ ಪ್ರೇಮ ಆತ್ಮಿಕವಾದುದು ಮತ್ತು ಜನ್ಮಜನ್ಮಾಂತರದು, ಮುಂದೆ ಯಾವುದಾದರೂ ಜನ್ಮದಲ್ಲಿ ಅವಳಲ್ಲಿ ತಾನು ಒಂದಾಗಬಹುದೆನ್ನುವ ಪವಿತ್ರ ಪ್ರೇಮದ ಭರವಸೆ ಕವಿ ವ್ಯಕ್ತಪಡಿಸಿದ್ದು, ಪುನರ್ಜನ್ಮದ ಕಲ್ಪನೆ ಮತ್ತು ಮುಂದಿನ ಜನ್ಮದಲ್ಲಿ ಒಂದಾಗುವ ಸದಿಚ್ಛೆ ಎಲ್ಲವೂ ಆಧ್ಯಾತ್ಮಿಕ ಸ್ವರೂಪ ಪಡೆದುಕೊಳ್ಳುವಂಥದ್ದು. ಇದರದೇ ಮುಂದವರೆದ ಭಾಗದಂತಿರುವ “ಮತ್ತೆ ಎಲ್ಲಿ ಸಿಗುವೆ ಹೇಳು ಸಖಿ?” ಎಂಬ ಕವಿತೆಯಲ್ಲಿ –

ಎಲ್ಲ ಮರೆತು ಬದುಕುವುದು ಹೇಗೆ?
ಎಂದು….
ನಿನ್ನ ನೆನಪಿನಲ್ಲಿ ಕೃತಿಯೊಂದು ಬರೆದಾಗಿದೆ
ನಿನಗೆ ಅರ್ಪಿಸಬೇಕೆಂದಿರುವೆ!
ಮತ್ತೆ ಎಲ್ಲಿ ಸಿಗುವೆ ಹೇಳು?

ಎಂದು ಅದೆಲ್ಲೋ ಮರೆಯಾಗಿರುವ ಕಾಣದ ತನ್ನ ಗೆಳತಿ ಯನ್ನು ಕಾಯುವ ಕಾಯಕದಲಿ ಆನಂದ ಪಡೆದು ಕೊಳ್ಳುವುದು ಕಾಣದ ದೇವರಿಗಾಗಿ ಧ್ಯಾನಿಸುವ ಪರಮ ಭಕ್ತನ ತಾಳ್ಮೆ ಸಯಂ ಕಾಣಸಿಗುತ್ತದೆ. ಇಂತಹದೇ ಇನ್ನೊಂದು ಕವಿತೆಯಲ್ಲಿ –

ಮನಸ್ಸೆಂಬ ನಾವೆ ಶವವಾಗಿ
ತೇಲುತ್ತಿದೆ ಮತ್ತೆ ಮತ್ತೆ
ಮುಳುಗುತ್ತಿದೆ
ಕಣ್ಣಿನ ಅಗೋಚರ
ದಿಗಂತದಂಚಿನಲಿ…

ಕೊನೆಗೆ ಒಂದು ತಾರ್ಕಿಕ ಅಂತ್ಯ ಕಾಣುವಲ್ಲಿ ಕವಿ ಸಮುದ್ರ ದಡದಲ್ಲಿ ಬಂದು ನಿಂತು ತನ್ನ ಭಾವನೆಗಳನ್ನು ಶವವಾದ ಮನಸ್ಸೆಂಬ ನಾವೆಯಲ್ಲಿ ತುಂಬಿ ವಿಧಿಯ ಸುಪರ್ದಿಗೆ ಹರಿಬಿಟ್ಟು ನಿರಾಳವಾಗುತ್ತಾನೆ. ತನ್ನ ಮನಸ್ಸಿನ ವಿರಹ, ವೇದನೆ, ದ್ವಂದ್ವ ತುಮುಲಗಳನ್ನೆಲ್ಲ ದೂರ ದಿಗಂತದಂಚಿನಲ್ಲಿ ಮುಳಗಿದಂತೆ ಕಲ್ಪಿಸಿಕೊಂಡು ಹಗುರಾಗಿದ್ದಾನೆ. ಈ ಸಂಕಲನದುದ್ದಕ್ಕೂ ಪದೆ ಪದೆ ಹಲವು ಬಗೆಯಲ್ಲಿ ನಾವೆ ರೂಪಕವಾಗಿ ಕಾವ್ಯದ ಚಲನಶಕ್ತಿಯಾಗಿ ಕವಿ ಆರ್ದ್ರ ಭಾವನೆಗಳನ್ನು ಕಾವ್ಯವಾಗಿ ದಾಟಿಸುವಲ್ಲಿ ಸೋಪಾನವಾಗುತ್ತದೆ. ನದಿ, ಕಡಲು, ಹಕ್ಕಿ, ರೆಕ್ಕೆ, ಜೋಕಾಲಿ, ಅಲೆಗಳೆಲ್ಲ ಅಲ್ಲಲಿ ಕಾವ್ಯ ರೂಪಕಗಳಾಗಿ ಮೂಡಿ ಬಂದರೆ “ನಾವೆ” ಎನ್ನುವ ರೂಪಕ ಕವಿಯ ಮನದಾಳದಿಂದ ಮತ್ತೆ ಮತ್ತೆ ಪುಟಿದೆದ್ದ ಜೀವಂತ ರೂಪಕವಾಗಿ ಮೂಡಿ ಬರುತ್ತದೆ. ಉದಾಹರಣೆಗೆ,

೧) ಮಳೆಗೆ ಒದ್ದೆಯಾಗಿ ಇಡೀ ಹೃದಯ ನಾವೆ ನೆನಪುಗಳಾಗಿ ಮೊಳಕೆಯಾಗುತ್ತಿವೆ(ಉಸಿರನ್ನು ಬೆರೆಸಿ)

೨) ಜಲಧಿ ನಿರವತೆ ಕಣ್ಣು ಬೊಗಸೆಯಲಿ ಕನಲಿ ಹೃದಯ ತೀರದಿ ಮುಳುಗವ ನಾವೆ ತೇಲುವಂತಾಗಲಿ (ನೋವೆಂಬ ಒಲವು)

೩) ತೇಲುತಿದೆ ನಾವೆಯೊಂದು ಬೇಸರವನು ಹೇರಿಕೊಂಡು ಅಲೆಗಳ ಮೇಲೆ ಧ್ಯಾನಿಸುತ್ತ (ಮರೆಯಾದ ನಿನ್ನ ನೆನಪಲ್ಲಿ…)

೪) ನೀನಿದ್ದರೆ ಹತ್ತಿರದಲ್ಲಿ ಇಬ್ಬರ ಆತ್ಮ ಒಂದಾಗಿ ನಾನು ಎಂಬುದು ನಾವಾಗಿ…. ಪಯಣದ ಹಾದಿಯಲ್ಲಿ ಪ್ರೇಮದ ನಾವೆ ಏರಿ… (ಪ್ಯಾರಿ ಪದ್ಯ)

೫) ಹೃದಯ ಮರಭೂಮಿಯಲ್ಲಿ ಹಡಗೇಕೆ ಲಂಗರು ಹಾಕಿ ನಿಂತಿದೆ (ಆತ್ಮ ಸಖಿ)

೬) ಬದುಕಿನಲೆಗಳ ಮೇಲೆ ನಾವೆಯಾಗಿ ತೇಲುತ್ತಿದೆ ಮೋಹಬ್ಬತ್ ! ( ಮೋಹಬ್ಬತ್)

೭) ಬೇಸರದ ನಾವೆ ಏರಿ…
ಸಿಗದೆ ಏನೂ ನಿರಾಶೆ ಹೇರಕೊಂಡು ನಾವೆ ತುಂಬಾ ಬರಿಗೈಗಳಲ್ಲಿ ಮರಳುತ್ತೇನೆ (ನಸುಕಿನ ಬೆಳಕ ಹೂ ಅರಳುವವರೆಗೆ)

೮) ಅರ್ಧ ಚಂದಿರನಲ್ಲಿ ಒಂಟಿ ನಾವೆ ರೂಪ ತಾಳಿ ತೇಲುತಿಹನು ನೋಡು ( ಪ್ರೇಮವೆಂದರೆ ಇದೇ ಇರಬಹುದೇನು?)

೧೦) ಬೆಳಕ ನೆರಳ ನಾವೆ ನೆನಪು ಹೇರಿಕೊಂಡು ವಿಷಾದದಿ ಕರಗುತ್ತದೆ ( ಕಾಣದ ಕಡಲ ಅರಿಸಿ)

ಈ ಎಲ್ಲ ಸಾಲುಗಳಿಂದ ಕವಿ ಮತ್ತು ನಾವೆಯ ಒಡನಾಟ, ಸ್ನೇಹ.. ನಾವೆ ಎಂಬುದು ಕೇವಲ ಸಾಗಾಣಿಕೆಯ ಮಾಧ್ಯಮವಾಗದೆ ಭಾವನೆಗಳು ಹೊತ್ತು ತಿರಗುವ ಮನೋಲೋಕದ ಒಬ್ಬ ಅಲೆಮಾರಿಯಾಗಿ ತೋರುತ್ತದೆ.

ನಾವೆಯ ಹೊರತಾಗಿ ಮುಂದುವರೆದು ಹೇಳಬೇಕೆಂದರೆ, “ನೋವೆಂಬ ಒಲವು” ಕವಿತೆಯಲ್ಲಿ ಕೂಡ ಇಹದ ಜಂಜಡದಿಂದ ತನ್ನೇ ತಾ ಬಿಡಿಸಿಕೊಂಡು ಬಿಡುಗಡೆಯ ಮಾರ್ಗ ಕಂಡುಕೊಳ್ಳವ ಪ್ರಯತ್ನ ಕಂಡು ಬರುತ್ತದೆ –

ಮನಸಿನ ವೇದನೆಗೆ
ಕೆದಿಗೆಯ ಹೂ ಮುಡಿಸಿ
ದುಃಖವನು ಸಂಭ್ರಮಿಸುವ ಬಯಕೆ
ತಲೆದೂಗುವಂತಾಗಲಿ…
…………
…………..

ಬೇಡದ ಬಯಕೆಗಳ ಗಾಯದಿ
ನೆತ್ತರು ದೇಹ ತ್ಯಜಿಸುವ
ಬದುಕಿಗೆ ಜೀವನ್ಮುಕ್ತಿ
ಸಿಗುವಂತಾಗಲಿ…

ಇದು ದುಃಖ ಮತ್ತು ಬಯಕೆಗಳಲ್ಲಿನ ವೈರುದ್ಧ್ಯ, ಒಂದು ಕಡೆ ದುಃಖಕ್ಕೆ ಹೂಮುಡಿಸಿ ಸಂಭ್ರಮಿಸುವ ವಿಚಾರವಾದರೆ, ಇನ್ನೊಂದು ಕಡೆ ಬಯಕೆಗಳಿಂದ ರಕ್ತ ಹರಿದು ಹೋಗಿ ಜೀವನಕ್ಕೆ ಮುಕ್ತಿ ಸಿಗುಂತಾಗಲಿ ಎನ್ನುವುದು ಕವಿಯ ಮಾನಸಿಕತೆ ಮತ್ತು ದ್ವಂದ್ವಗಳು ವ್ಯಕ್ತವಾಗುವಂಥದ್ದು. ಆದರೆ ಕೊನೆಗೆ ಇಲ್ಲೂ ಕೂಡ ಜೀವನ್ಮುಕ್ತಿಯ ವಿಚಾರ ಮುನ್ನೆಲೆಗೆ ಬರುವಂಥದ್ದು.

ನಿನ್ನ ಕಾಡಿಗೆ ಅಂಚಿನ ದಾರಿಯಲ್ಲಿ… ಕವಿತೆ ಶುದ್ಧ ಪ್ರೇಮದ ಅಭಿವ್ಯಕ್ತಿಯಾಗಿ ಲಯ, ಲಾಲಿತ್ಯಪೂರ್ಣವಾಗಿ ಸುಂದರ ಕಲ್ಪನೆಗಳಿಂದ, ಸುಂದರ ಪದಪುಂಜಗಳಿಂದ ಓದುಗರರನ್ನು ಮಂತ್ರ ಮುಗ್ಧವಾಗಿಸುವಂಥದ್ದು. “ನೋವೆಂಬ ಒಲವು” ಕವಿತೆ ಸಹ ಪ್ರಾಸಗಳಲ್ಲಿ ಅಂತ್ಯಗೊಂಡು ಓದುಗರರ ಮನಸ್ಸಿನಲ್ಲಿ ಗೇಯತೆಯ ರಮ್ಯತೆಯನ್ನು ಹುಟ್ಟು ಹಾಕುತ್ತದೆ. ಇದೇ ಕಾವ್ಯ ಲಯದಲ್ಲಿ ಮುಂದವರೆಯುವ ಇನ್ನೊಂದು ಕವಿತೆ “ಅವನು ಬರಬಹುದು” ಧೀರೆ ಧೀರೆ ಮಚಲ್ ಅಯ್ ದೀಲೆ ಬೇಕರಾರ್.. ಕೋಯಿ ಆತಾ ಹೈ ಎನ್ನುವ ಹಳೆ ಸುಂದರ ಹಿಂದಿ ಚಿತ್ರಗೀತೆಯೊಂದರ ಮೃದುವಾದ ನಯವಾದ ಭಾವಪೂರ್ಣ ಹೆಣಿಗೆ ನೆನಪಿಸುತ್ತದೆ.

“ಮರೆಯಾದ ನಿನ್ನ ನೆನಪಲ್ಲಿ ಫಕೀರ” ಕವಿತೆಯಲ್ಲೂ ಇದೇ ನಯನಾಜೂಕಿನ ಭಾವ ನೇಯ್ಗೆ ಕಂಡು ಬರುತ್ತದೆ. –

ಮಾತನ್ನು ಕಳೆದು, ಮೌನ ತಳೆದಿರುವೆ
ಬೇಲಿಯ ಕಿತ್ತೆಸೆದು ಬಯಲಾಗಿರುವೆ
ಜೀವದ ಹಂಗಿಲ್ಲ, ಸಾವಿನ ಭಯವಿಲ್ಲ
ಕನಸು ಕುದುರೆ ಏರಿ ಕೂತ ಫಕೀರ ನಾನು
ಮರೆಯಾದ ನಿನ್ನ ನೆನಪಲ್ಲಿ…

ತಂಗಾಳಿಯಾಗಿ ಹೃದಯಕೆ ಹಿತಸ್ಪರ್ಶ ನೀಡಿ ಹೋಗುವ ಸಾಲುಗಳು ಇಲ್ಲಿ ಕವಿ ಅಕ್ಕ ಮಹಾದೇವಿಯಂತೆ ಕಾಣದ ಅವಳ ನೆನಪಲ್ಲಿ ಮೌನಿಯಾಗಿದ್ದಾನೆ. ಜೀವ ಜೀವನದ ಹಂಗು ತೊರೆದಿದ್ದಾನೆ. ಸಾವಿನ ಭಯ ಮೆಟ್ಟಿ ನಿಂತಿದ್ದಾನೆ.. ಎಲ್ಲ ಆಸೆ ಬಯಕೆಗಳು ಮೀರಿ ಬಯಲಾಗಿ ಫಕೀರನಾದರೂ ಕೊನೆಗೆ ಮರೆಯಾದವಳ ನೆನಪಲ್ಲಿ ಕನಸು ಕುದುರೆ ಏರಿ ಕೂತಿರುವುದು ಮರೆಯುವುದು ಅಂದರೆ ಒಂದರ್ಥದಲ್ಲಿ ನೆನಪಿಸಿಕೊಳ್ಳುವುದು ಮತ್ತು ಎಲ್ಲವನ್ನು ಕಳಚಿ ಬೆತ್ತಲಾಗುವುದೆಂದರೆ ಅಗೋಚರ ಮಾಯೆಗೆ ಬೆನ್ನು ಹತ್ತುವುದನ್ನೆ ಸಾಬೀತು ಪಡಿಸುತ್ತದೆ.

“ಪ್ಯಾರಿ ಪದ್ಯ”ದಲ್ಲಿ ನೀನಿದ್ದರೆ ಜೊತೆಯಲಿ… ನಾನು ನೀನು ಎಂಬುದು ನಾವಾಗಿ ಲೋಕದ ಮಾಯೆ ಮರೆತು ನಮ್ಮ ಪ್ರೇಮವಾಗಲಿ ಅಮರ ಅಮೃತದ ಬಟ್ಟಲು ಹೀರಿ..
ಹೀಗೆ ಅಲೌಕಿಕವಾದ ಪ್ರೇಮದ ಮುಖಾಂತರ ಜಗದ ಮೋಹ ಮಾಯೆಯನ್ನು ಗೆಲ್ಲುವ ಪ್ರಯತ್ನ ನೋಡಬಹುದು. ಮುಳ್ಳುಗಳು ಹೂಗಳೆಂದು ಭ್ರಮಿಸಿ/ ಮುಗುಳ್ನಗುತಿದೆ ಹುಚ್ಚು ಮನಸ್ಸು/ ಹಾಗಾಗಿ ತಿಳಿಯುತ್ತಿಲ್ಲ ನೋವು/….. ಬದುಕಾಗಿದೆ ಕನಸು!/
ಹೀಗೆ ಕವಿ ಮನಸ್ಸು ಎಲ್ಲ ನೋವು ನಿರಾಸೆಗಳಿಂದ ಮುಕ್ತವಾಗಿ ಅಧ್ಯಾತ್ಮದ ಕಡೆಗೆ ತುಡಿದರೂ ತನಗೇ ಗೊತ್ತಿಲ್ಲದಂತೆ ಒಲುಮೆಯ ಕನಸೊಂದು ಕಾಪಿಡುವದರ ಮೂಲಕ ಜೀವನ ಪ್ರಿತಿಯನ್ನು ಜತನವಾಗಿಡುವಲ್ಲಿ ಯಶಸ್ವಿಯಾಗುತ್ತಾನೆ.

“ದೈವಿಕ ಸುಗಂಧ” ಕವಿತೆಯಲ್ಲಿ …. ಕಡಲು ಸೇರಿದ ನದಿಯೇ ಕಡಲಾಗಿ/ ಗಾಳಿಯಲಿ ಬೆರೆತ ಹೂವಿನ ವಾಸನೆ/ ದೈವಿಕ ಸುಗಂಧವಾಗಿ/ ನಾನು ಕಳೆದು ನೀನಾಗಿ/ ನೀನು ಕರಗಿ ನಾನಾಗಿ/ ನಾನು ನೀನೆಂಬ ಅಂತರ ಅಳಿದು ಪ್ರೇಮವಾಗಬೇಕು ಎನ್ನುವ ಹಂಬಲ ಮತ್ತೆ ಅಲೌಕಿಕ ಪ್ರೇಮದ ಕಡೆಗೆ ತುಡಿಯುವುದನ್ನು ನಿರೂಪಿಸುತ್ತದೆ. “ಆತ್ಮ ಸಖಿ” ಕವಿತೆಯಲ್ಲೂ ಇದೆ ಭಾವ ಮನಸ್ಸಿಗೆ ತಟ್ಟಿ ಹೋಗುತ್ತದೆ. ಅವಳು ತೀರಿ ಹೋಗಿ ವರುಷಗಳೇ ಸಂದಿವೇ, ಜೀವ ಹೋದರೂ, ದೇಹ ಅಳಿದರೂ ಅವಳು ನನ್ನೊಂದಿಗೆ ಇರುವಳು ಸದಾ.. ಸರ್ವದಾ…! ಆತ್ಮಸಖಿಯಾಗಿಹಳು ಎಂಬುದು ಕವಿಯ ನಿಸ್ವಾರ್ಥ ನಿಸ್ಪ್ರಹ ಪ್ರೇಮದ ಸಂಕೇತವಾಗುತ್ತದೆ.

ಈ ಪ್ರೀತಿ ಪ್ರೇಮದ ಹೊರತಾಗಿ “ಇನ್ನಾದರೂ..” ಎನ್ನುವ ಕವಿತೆ ಪ್ರೀತಿ ಮಮತೆಯ ಮರೆಯಲ್ಲಿ ನಡೆಯುವ ಸ್ತ್ರೀ ಶೋಷಣೆಯನ್ನು ವೈಚಾರಿಕ ನೆಲೆಯಲ್ಲಿ ಅನಾವರಣಗೊಳಿಸುವಲ್ಲಿ ಸಫಲವಾಗಿದೆ.

” ಹರಿಯುವ ನದಿಗೆ ಗಮ್ಯ ಸೇರಲು ಬಿಡದೆ
ಸಂಬಂಧಗಳ ಆಣೆಕಟ್ಟುಗಳ ಕಟ್ಟಿದ್ದೇವೆ
ನಮ್ಮ ಮೋಹ ಕಾಮಗಳಿಗೆ
ಪ್ರೇಮದ ಹೆಸರು ನೀಡಿ
ಸ್ವಾರ್ಥಕ್ಕೆ ಬಳಸಿಕೊಂಡಿದ್ದೇವೆ”
ಎನ್ನುವ ಕವಿ ಮುಂದೆ ಹೇಳುವುದು ಗಮನಾರ್ಹವಾದುದ್ದು.
” ಅವಳು ಅವಳಾಗಿಲಿ
ಇನ್ನಾದರೂ ಪಂಜರಗಳನ್ನು ಮುರಿದು ಹಾಕಿ
ರೆಕ್ಕೆ ಹಚ್ಚಿ ಸ್ವಚ್ಚಂದವಾಗಿ ಹಾರಲು ಬಿಡಿ
ಸಂಭ್ರಮದ ಆಗಸ ಮುಟ್ಟಿ ಹಾಡಲಿ
ಕನಸುಗಳನ್ನು ಕಣ್ತುಂಬಿಕೊಳ್ಳಲಿ”
ಎಂದು ಮಹಿಳಾಪರ ಕಾಳಜಿಯನ್ನು ಎತ್ತಿ ಹಿಡಿಯುತ್ತಾರೆ.

ಕವಿ ಜಬೀಯವರು ನಿಷ್ಕಪಟ ಮನಸ್ಸಿನ ಅಪ್ಪಟ ಸೌಂದರ್ಯೋಪಾಸಕ ಪ್ರೇಮದ ಆರಾಧಕ ಎಂಬುದು ಇಲ್ಲಿನ ಬಹುತೇಕ ಕವಿತೆಗಳು ಸಾಬೀತು ಪಡಿಸುತ್ತವೆ.
ಅವನು ಹಚ್ಚಿಟ್ಟ ಹಣತೆ, ಪ್ರೇಮವೆಂಬ ಸಾಕ್ಚಾತ್ಕಾರ, ಹನಿ ಪ್ರೇಮ ಕಹಾನಿ, ಎರಡು ಜಡೆಯವಳು, ಮರೆಯಾದ ಸಖಿಯ ನೆನೆದು, ಗಿಲ್ಮೊಹರ್, ನೀನು ನಾನು, ಪ್ರೇಮ ಎಂಬ ಆತ್ಮದ ಧ್ಯಾನ, ಒಲವ ಗೀತೆ, ಅವಳು, ಮಾತು ಮೌನ ತಾಳುವ ಮುಂಚೆ… ಹೀಗೆ ಹಲುವಾರು ಕವಿತೆಗಳು ಕವಿಯ ಮನದ ಕನ್ನಡಿಯಾಗಿ ಪ್ರತಿಬಿಂಬಿತವಾಗಿವೆ.

ಬಹುತೇಕ ಕವಿತೆಗಳಲ್ಲಿ ನಿಜವಾದ ಪ್ರೀತಿಯ ಅರ್ಥ ಹುಡುಕುವ ಜಿಜ್ಞಾಸೆ ಮುಂದವರೆಯುವದನ್ನ ಕಾಣಬಹುದಾಗಿದೆ. ಉದಾಹರಣೆಗೆ,

ಪ್ರೀತಿ ಎಂದರೆ
ನನ್ನ ಕಣ್ಣಲ್ಲಿರುವುದು
ನಿನ್ನ ಕಣ್ಣಿಗೆ ಮಾತ್ರ ಕಾಣುವಂಥದ್ದು”
(ಗುಲ್ಮೊಹರ್)

ನಾನು ಕೇಳಿದೆ
ಪ್ರೇಮವೆಂದರೆ ಏನೆಂದು
ಮೊಲ್ಲೆ ಹೂವಾಗಿ ಅರಳುವುದನು
ತೋರಿ ನಕ್ಕು ನಡೆದಳು
(ಒಲವ ಗೀತೆ)

ದಿನಗಳೆಷ್ಟು ಉರುಳಿದರೂ
ಕಿಂಚಿತ್ತು ಮಾಸಲಿಲ್ಲ ನಿನ್ನ ನೆನಪು
ಅಳಿಸಬಹುದೇನು ಹೇಳು
ಹೃದಯದ ಮೇಲಿನ ಮಚ್ಚೆ?
…….
ಮೊಹವಲ್ಲ, ಕಾಮವಲ್ಲ
ಇದುವೇ…….
(“ಪ್ರೇಮ’ ಎಂಬ ಆತ್ಮದ ಧ್ಯಾನ)

…………
ಮಾಗಿಯ ಕನಸೊಂದು
ಮುದಗೊಂಡು ಮನಸೋತಿದೆ
ಚುಮ ಚುಮ ನಸುಕಿಗೆ
ಕತ್ತಲಲ್ಲರಳಿದ ಹೂವಿನ ಸುಗಂಧ
ಮುಳ್ಳುಗಳನ್ನು ಮೋಹಿಸಿ
ಮೃದುವಾಗಿಸಿದೆ
ವಂದನೆ ಸಲ್ಲುತ್ತವೆ ಬೆಳಕಿಗೆ
(ಪ್ರೇಮ ಎಂದರೆ
ಇದೇ ಇರಬಹುದುದೇನು!)

ಪ್ರೇಮವೆಂಬುದು
ಕಡಲನ್ನು ಧ್ಯಾನಿಸಿ ಸೇರಿ
ಸಾರ್ಥಕವಾಗುವ ನದಿಯಂತೆ
ಅದರೊಡಲಲ್ಲೆ ಕರಗಿ ಒಂದಾಗಿ
ನಿತ್ಯ ನಿರಂತರವಾಗಯವುದಲ್ಲ.

ಇದೇ ರೀತಿ ವಿರಹ ವೇದನೆ, ಅಗಲಿಕೆ, ನೋವು, ನೆನಪು ನಿರಾಶೆಗಳು ಕೂಡ ಕವಿಗೆ ತೀವ್ರವಾಗಿ ಕಾಡಿದಿದ್ದೆ.

ನನ್ನ ನೆನಪುಗಳ ಮೇಲೆ
ಹನಿಹನಿಯಾಗಿ ಮಳೆ ಸುರಿದು
ಹಚ್ಚ ಹಸಿರಾಗಿದೆ ನೋವು
(ಯಾರನ್ನ ದೂರಲಿ?)

.. ಈ ಸಲ
ಒಸರಿದ್ದು ಬರಿ ಕಂಬನಿಯಲ್ಲ
ಬದಲಿಗೆ ರಕುತ!
ಪ್ರೇಮದ ಗಾಯದ ಕೀವು
ಮತ್ತು ಸಹಿಸಲಾಗದ
ಅಪರಿಮಿತ ನೋವು
(ಅವಳು ಮತ್ತೆ ಸಿಕ್ಕಾಗ)

ನೋವಿನ ಕ್ಷಣಗಳನ್ನು ಕೂಡುತ
ಕಾಲವನ್ನು ದೂಡುತ
ಒಂಟಿಯಾಗಿ ಕೂರಬಾರದು ಹೀಗೆ
( ಈ ಕ್ಷಣದ ಪ್ರೇಮದ ಹೊರತಾಗಿ)

ಏನೆಲ್ಲ ಆದರೂ ನೋವು ನಿರಾಶೆ ದೋಷಾಸೊಯೆ ವಿರಹ ವೇದನೆ ಗಳಂಥ ಭಾವನೆಗಳು ಮೀರಿ ಕೊನೆಗೆ ಪ್ರೀತಿಯೊಂದೇ ಅಮರ ಶಾಶ್ವತ ಎನ್ನುವ ತೀರ್ಮಾನಕ್ಕೆ ಬರುವುದು ಪ್ರತಿ ಕವಿಯ ಮೂಲಧರ್ಮ ಇಲ್ಲಿ ಕವಿತೆಗಳಲ್ಲಿ ಕಾಣಸಿಗುತ್ತವೆ.

ಪ್ರೀತಿಸಲಷ್ಟೇ ಸಾಧ್ಯ ನನಗೆ
ದ್ವೇಷಿಸಲಾರೆ ಎಂದಿಗೂ
ಹೃದಯ ಕನ್ನಡಿಯಲಿ
ನೀ ನಕ್ಕ ಬಿಂಬ
ಹಚ್ಚೆ ಹುಯ್ದಿರುವಾಗ
ಒಡೆದು ಹಾಕಲಿ ಹೇಗೆ ಹೇಳು?
(ವಿದಾಯದ ಘಳಿಗೆ)

ಪ್ರೇಮವಿಲ್ಲದೆ
ಇರಬಲ್ಲೆನೆ ನಾನು
ಹೀಗೆ ಆಲೋಚಿಸುತ್ತೇನೆ
(ಪ್ರೇಮ ಎಂಬ ಮದಿರೆ)

ಎಂದು ಹೇಳುವ ಕವಿ-

ನನ್ನ ನೋವು ನನ್ನದಷ್ಟೇ
ಯಾರಿಗೂ ದಾಟಿಸಲಾರೆ
(ವಿದಾಯದ ಘಳಿಗೆ)

ಎಂದು ಅಂದರೂ ಕೂಡ ಕವಿಯ ಭಾವನೆ ಸಹೃದಯ ಓದುಗರ ಮನಸ್ಸಿನಲ್ಲಿ ಪ್ರತಿಬಿಂಬಿತವಾಗಿ ಕಾವ್ಯವೆನ್ನುವುದು ಕೇವಲ ಬರೆದ ಕವಿಯ ಸ್ವತ್ತಾಗಿ ಉಳಿಯದೇ ಬರೆದ ನಂತರ ಕವಿತೆ ಕವಿಯ ಸ್ವತ್ತಲ್ಲ ಎಂಬಂತೆ ಓದುಗುರ ಭಾವನೆಗಳಿಗೆ ಸ್ಪಂದಿಸುವ ಮೂಲಕ ಸಾರ್ವತ್ರಿಕ ಸ್ವರೂಪ ಪಡೆದುಕೊಂಡು literature is a mirror of life ಎನ್ನುವಂತೆ ನಿಜವಾಗಿಯೂ ನಿಜವಾದ ಸಾಹಿತ್ಯವಾಗುತ್ತದೆ. ಇಲ್ಲಿನ ಕವಿತೆಗಳ ಬಗ್ಗೆ ಬರೆಯುತ್ತ ಹೋದರೆ ಒಂದು ಬೃಹತ್ತಾದ ಹೊತ್ತಿಗೆಯೇ ಆಗಬಹುದು. ಒಟ್ಟಿನಲ್ಲಿ ಹಲವು ಸುಂದರ ಭಾವಗಳು ಪೋಣಿಸಿ ಕಟ್ಟಿದ ಹಸಿರು ತೋರಣ ಈ ಪ್ರೇಮಾಯತನ.
“Poetry is the first and last of all knowledge it is as immortal as the heart of man.” ಎನ್ನುವ ವರ್ಡ್ಸ್‌ವರ್ತ್ ನ ಮಾತುಗಳು ಈ ಕವಿಗೂ ಕಾವ್ಯಕ್ಕೂ ಬಹಳಷ್ಟು ಅನ್ವಯಿಸುತ್ತದೆ.

ಮಾತಿಲ್ಲದ ಘಳಿಗೆ
ಹುಟ್ಟುತ್ತದೆ ಒಂದು ಕವಿತೆ
ಕರುಣಾಳ ಬೆಳಕ ಸಂಹಿತೆ
ಸಂಭವಿಸುತ್ತದೆ ಅಂತರಂಗದ
ಬಯಲೊಳಗೆ
(ಒಂದು ಕವಿತೆ)

ಈ ಕವಿಯ ಸಾಲುಗಳೊಂದಿಗೆ ಅವರ ಮೌನದ ಚಿಪ್ಪಿನಿಂದ ಇನ್ನಷ್ಟು ಅಲೌಕಿಕ ಅನುಭವ ನೀಡುವ ಪವಿತ್ರ ಪ್ರೇಮದ ಕವಿತೆಗಳು ಹೊರಗೆ ಬರಲಿ ಮತ್ತು ನಾವು ಮನಸಾರೆ ಆಸ್ವಾದಿಸುವಂತಾಗಲಿ ಎಂಬ ಸದಾಶಯದೊಂದಿಗೆ ಅವರಿಗೆ ಶುಭ ಹಾರೈಸೋಣ.

-ಅಶ್ಫಾಕ್ ಪೀರಜಾದೆ


ಕೃತಿ – ಪ್ರೇಮಾಯತನ (ಕವಿತೆಗಳು)
ಪುಟಗಳು; ೧೮೧
ಬೆಲೆ; ೨೧೦/-
ಲೇಖಕ: ಜಬೀವುಲ್ಲಾ ಎಂ. ಅಸದ್
(ಮೊ. ಸಂ: ೯೭೪೦೫೫೬೩೦೫)
ಪ್ರಕಾಶನ; ಕೆ ಎನ್ ಎಸ್ ಪಬ್ಲಿಕೇಷನ್ಸ್, ಬೆಂಗಳೂರು
(ಮೊ. ಸಂ: ೯೬೬೩೧೨೦೫೮೧)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x