ಚಲನಚಿತ್ರೋತ್ಸವದಲ್ಲಿ ಭಾನುವಾರ ಮತ್ತು ಸೋಮವಾರ

ಚಲನಚಿತ್ರೋತ್ಸವದಲ್ಲಿ ಭಾನುವಾರ

ಶಿವಮ್ಮ

ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಬಿಟ್ಟು ಸಿನಿಮಾಕ್ಕೆ ಹೊರಳಿದ ಜೈಶಂಕರ್ ‘ ಲಚ್ಚವ್ವ’ ಕಿರು ಚಿತ್ರದ ಮೂಲಕ ಹೆಸರು ಗಳಿಸಿದರು‌. ಪೂರ್ಣ ಪ್ರಮಾಣ ಚಿತ್ರವನ್ನು ನಿರ್ದೇಶಿಸುವ ಅವರ ಕನಸನ್ನು ‘ ಶಿವಮ್ಮ’ ಸಾಕಾರಗೊಳಿಸಿದ್ದಾರೆ.

ಒಕ್ಕಲುತನವಲ್ಲದೆ ಬೇರೆ ಆದಾಯವಿಲ್ಲದ ಗ್ರಾಮೀಣ ಬದುಕನ್ನು ‘ಶಿವಮ್ಮ’ ನೆಂಬ ಗಟ್ಟಿಗಿತ್ತಿಯ ಮೂಲಕ ಚಿತ್ರ ಕಟ್ಟಿ ಕೊಡುತ್ತದೆ. ಶಿವಮ್ಮ ಬಡವಿಯಾದರೂ ಏನಾದರೂ ಮಾಡಬೇಕು ಎನ್ನುವ ಛಲ ಉಳ್ಳವಳು. ಲಕ್ವದಿಂದ ಮೂಲೆಗುಂಪಾದ ಗಂಡ, ಮದುವೆಗೆ ನಿಂತ ಮಗಳು, ಕಾಲೇಜು ಓದುವ ಹುಡುಗ ಇವರೆಲ್ಲರ ಜವಾಬ್ದಾರಿ ನಿರ್ವಹಿಸಬೇಕಾಗಿರುವ ಆಕೆ ಹಣ ಗಳಿಸುವ ಮಾರ್ಗ ಕಂಡುಕೊಳ್ಳುತ್ತಾಳೆ. ಮಗನ ಒಪ್ಪಿಗೆ ಇಲ್ಲದಿದ್ದರೂ ಹಿಂತೆಗೆಯವಾಕೆಯಲ್ಲ. ಆದರೆ ಆಕೆ ಕಂಡುಕೊಂಡ ದಾರಿ ಕಲ್ಲು,ಮುಳ್ಳಿನದು. ಶಿವಮ್ಮ ಏನೇ ಅಡ್ಡಿ, ಆತಂಕ ಬಂದರೂ ಹಿಂತೆಗೆಯುವುದಿಲ್ಲ, ಆದರೆ ಪರಿಸ್ಥಿತಿ ಅವಳಿಗೆ ಪ್ರತಿಕೂಲವಾಗಿದೆ.

ಈ ಕತೆಯನ್ನು ಜೈಶಂಕರ್ ಕೊಪ್ಪಳದ ಕನ್ನಡದಲ್ಲಿ ಸೊಗಸಾಗಿ ಕಟ್ಟಿ‌ ಕೊಡುತ್ತಾರೆ. ಶಿವಮ್ಮನ ಪಾತ್ರದ ಶಾರದಮ್ಮ ತಾನೇ ತಾನಾಗಿದ್ದಾರೆ. 105 ನಿಮಿಷಗಳು ಸರಿದಿದ್ದೇ ತಿಳಿಯುವುದಿಲ್ಲ. ಕೆಲವು ಸಡಿಲ ಬಂಧಗಳನ್ನು ಬಿಗಿ ಮಾಡಬೇಕಿತ್ತು; ಅಂತ್ಯದಲ್ಲಿ ಇನ್ನಷ್ಟು ಸಂಯಮ‌ ಬೇಕಿತ್ತು ಅನ್ನಿಸಿದರೂ ಜೈಶಂಕರ್ ಮೊದಲ ಫೀಚರ್ ಫಿಲ್ಮ್ ನಲ್ಲೇ ಭರವಸೆ ಮೂಡಿಸಿದ್ದಂತೂ ನಿಜ.

ಟೆರೆಸ್ಟ್ರಿಯಲ್ ವರ್ಸಸ್

ಖ್ಯಾತ ನಿರ್ದೇಶಕ ಅಲಿ ಅಸ್ಗರಿ ಮತ್ತು ಅಲಿರೆಝ ಖಟಾಮಿ ಜಂಟಿ ನಿರ್ದೇಶನದ ಚಿತ್ರ.

ಊಹಿಸಿ: ಶಾಲಾ ಹುಡುಗಿ ಗೆಳೆಯನ‌ ಜೊತೆ ಬರಬಾರದು, ಕೂದಲಿಗೆ ಬಣ್ಣ ಹಚ್ಚಬಾರದು.
ಡೇವಿಡ್ ಎನ್ನುವ ಹೆಸರಿಡಬಾರದು; ದಾವೂದ್ ಆಗಬಹುದು.
ಉದ್ಯೋಗ ಮಾಡುವ ಹೆಣ್ಣು ಮಗಳಿಗೆ ಪ್ರಿಯತಮನಿರಬಾರದು; ಸಂದರ್ಶನ ಮಾಡುವವನ ಸಮೀಪ ಬರಬಹುದು.
ಕಾರ್ ಡ್ರೈವರ್ ಆಂಟಾಸಿಡ್ ತಗೊಂಡರೆ ಉದ್ವೇಗವಿರುವ ಅನುಮಾನ.
ಚಿತ್ರಕತೆಯಲ್ಲಿ ತಂದೆಯ ಮೇಲೆ ಆಕ್ರಮಣ, ತಂದೆ ತಾಯಿಯನ್ನು ಪೀಡಿಸುವ ದೃಶ್ಯವಿರಬಾರದು….

ಇಂತಹ ಹಲವು ಸಾಮಾಜಿಕ, ಸಾಂಸ್ಕೃತಿಕ, ವೈಯಕ್ತಿಕ ನಿಷೇಧಗಳನ್ನು ಹೇರುವ ಮೂಲಭೂತವಾದಿ ಪ್ರಭುತ್ವವನ್ನು ಅಣಕಿಸುವ ಪ್ರಭಾವಪೂರ್ಣ ಚಿತ್ರ. ಇರಾನಿನ ಆಡಳಿತವನ್ನು ಸಣ್ಣ,ಸಣ್ಣ ಪ್ರಸಂಗಗಳ ಮೂಲಕ ಬಯಲು ಮಾಡುವಂತಿದ್ದರೂ ಯಾವುದೇ ಫಂಡಮೆಂಟಲಿಸ್ಟ್ ಸರಕಾರದ ಧೋರಣೆಗೂ ಇದು ಅನ್ವಯಿಸುತ್ತದೆ.

ಸಿನಿಮಾ ಅಲಿ ಅಸ್ಗರಿ, ಅಲಿರೆಝ ಖಠಾಮಿಯವರ ಖ್ಯಾತಿಗೆ ತಕ್ಕಂತಿಲ್ಲವಾದರೂ ಮನ ಮುಟ್ಟುತ್ತದೆ.

20000 ಸ್ಪೀಶೀಸ್ ಆಫ್ ಬೀಸ್

ಎಂಟು ವರ್ಷದ ಹುಡುಗನಿಗೆ ತನ್ನ ಲಿಂಗದ ಬಗ್ಗೆ ಗೊಂದಲವಿದೆ. ಗಂಡುಮಕ್ಕಳ‌ ಹೆಸರಿಂದ ಕರೆಸಿಕೊಳ್ಳಲು ಅವನು ಇಷ್ಟ ಪಡುವುದಿಲ್ಲ. ಇನ್ನೆರಡು ಹೆಣ್ಣು ಮಕ್ಕಳಿರುವುದರಿಂದ ಈತನನ್ನು ಗಂಡೆಂದೇ ಬೆಳೆಸುತ್ತಾರೆ. ಜೇನು ಸಾಕುವ ಹಿರಿಯರ ಊರಿಗೆ ಎಲ್ಲರ ಜೊತೆ ಬಂದಾಗ ಆತ ತನ್ನನ್ನು ತಾನೇ ಕಂಡುಕೊಳ್ಳುತ್ತಾನೆ. ತಮ್ಮದೇ ಆಕಾಂಕ್ಷೆ, ಸಮಸ್ಯೆಗಳಿರುವ ಮನೆ ಮಂದಿ ಇದನ್ನು ಪುರಸ್ಕರಿಸಲು ಹಿಂದೆಗೆಯುತ್ತಾರೆ.

ಈ ರೀತಿಯ ಭಿನ್ನಲಿಂಗಿಗಳ ಕುರಿತಾದ ವಿಷಯವನ್ನು ನಿರ್ವಹಿಸುವುದು ಸುಲಭವಲ್ಲ. ಅದರಲ್ಲೂ ಬಾಲಕನ ಲೈಂಗಿಕ ತುಡಿತವನ್ನು ನಿರ್ವಹಿಸುವುದು ಕಷ್ಟ. ನಿರ್ದೇಶಕಿ ಎಸ್ಟಿಬಲಿಜ್ಹ್ ಉರ್ಸೊಲಾ ಈ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಅತಿಯಾದ ಸಂಭಾಷಣೆಗಳು, ಜೇನು ಹುಳುಗಳ ಬಗ್ಗೆ ಹೆಚ್ಚೆನಿಸುವ ದೃಶ್ಯಗಳು ವೀಕ್ಷಕನ ಸಹನೆಯನ್ನು ಬೇಡುತ್ತದೆ.

ದ ಝೋನ್ ಆಫ್ ಇಂಟ್ರೆಸ್ಟ್

ಹಿಟ್ಲರನ ಕಾಲದ ನರಮೇಧದ ಕುರಿತು ಹಲವು ಸಿನಿಮಾಗಳಿವೆ. ದ ಝೋನ್ ಆಫ್ ಇಂಟ್ರೆಸ್ಟ್ ಅವುಗಳಿಗಿಂತ ಭಿನ್ನವಾಗಿ ಹತ್ಯಾಕಾಂಡದ ಭೀಕರತೆಯನ್ನು ಮನದಟ್ಟು ಮಾಡುತ್ತದೆ. ಇಲ್ಲಿ ನೇರವಾಗಿ ಏನನ್ನೂ‌ ಹೇಳುವುದಿಲ್ಲ‌. ಆದರೆ ಹಿನ್ನೆಲೆ ಸಂಗೀತ, ಹೊಗೆಯ ಹಿನ್ನೆಲೆ, ಆಕ್ರಂದನ ಸಂದರ್ಭದ ಅರಿವು ಮೂಡಿಸುತ್ತದೆ.

ಹಿಟ್ಲರ್ ಕಾಲದಲ್ಲಿ ನರಮೇಧ ನಡೆದ ಔಸ್ ವಿಡ್ಜ್ ಗೆ ಸಮೀಪದಲ್ಲೇ ಎಲ್ಲಾ ಸವಲತ್ತುಗಳಿರುವ ಮನೆ, ಕಣ್ಮನ ತಣಿಸುವ ಉದ್ಯಾನ ನಿರ್ಮಿಸಿ‌ ಐದು ಮಕ್ಕಳೊಂದಿದೆ ಕಮಾಂಡೆಂಟ್ ರುಡಾಲ್ಪ್ ಹಾಸ್ ಸುಖದ ಜೀವನ ನಡೆಸುತ್ತಿರುತ್ತಾನೆ. ಪಕ್ಕದಲ್ಲಿ ದಿನ ನಿತ್ಯ ನಡೆಯುತ್ತಿರುವ ಸಾವಿರಾರು ಜನರ ಹತ್ಯೆಗಳು, ಚೀರಾಟ ಅವರ ಮೇಲೆ ಏನೇನೂ ಪರಿಣಾಮ ಬೀರುವುದಿಲ್ಲ. ತಾನಿಲ್ಲೇ ಭದ್ರ ಎನ್ನುವ ಧೈರ್ಯದಲ್ಲಿರುವ ರುಡಾಲ್ಫ್‌ಗೆ ಟ್ರಾನ್ಸ್ ಫರ್ ಅಗುತ್ತದೆ. ಇದನ್ನು ಅವನಿಗೆ ಅವನ ಪತ್ನಿಗೆ ಒಪ್ಪಿಕೊಳ್ಳಲು ಕಷ್ಟವಾಗುತ್ತದೆ.

ತಾನು ಸುಖವಾಗಿದ್ದರೆ ಸಾಕು ಆಸುಪಾಸಲ್ಲಿ ಏನಾದರೇನು? ತನಗೆ ಆರಾಮಾವಾದರೆ ಏನನ್ನು ಮಾಡಲೂ ಸಿದ್ಧ ಎನ್ನುವ ಮನೋವೃತ್ತಿ ಇರುವ ವರೆಗೆ ಇಂತಹ ಚಿತ್ರಗಳು ಮನಸ್ಸನ್ನು ಕಲಕುತ್ತಿರುತ್ತವೆ.

ಜೋಮಾಥನ್ ಗ್ಲಾಜೆರ್ ನಿರ್ದೇಶನದ ಪೊಲೆಂಡ್/ ಜರ್ಮನಿಯ ಈ ಚಿತ್ರ ಅರ್ಥ ಮಾಡಿಕೊಳ್ಳಲು ಔಸ್ ವಿಡ್ಜ್ ಬಗ್ಗೆ ತಿಳಿವು ಇರಬೇಕಾಗುತ್ತದೆ.

ಬಿಫೆಸ್ ನಲ್ಲಿ ಸೋಮವಾರ

ಸಿನಿಮಾಪ್ರಿಯರು ಜಾಣರಾಗಿದ್ದಾರೆ. ಶೆಡ್ಯೂಲ್ ಓದುವುದಲ್ಲದೆ, ಗೂಗಲ್ ನಲ್ಲಿ ಹುಡುಕಿ, ಅವರಿವರಿಂದ ಮಾಹಿತಿ ಪಡೆದು ಒಳ್ಳೆಯ ಚಿತ್ರಗಳನ್ನು ಆಯ್ಕೆ ಮಾಡುತ್ತಾರೆ. ಅಂತಹ ಚಿತ್ರಗಳಿಗೆ ವಿಪರೀತ ರಶ್. ಅದೃಷ್ಟವಿದ್ದರೆ ಬಯಸಿದ ಸಿನಿಮಾ ನೋಡಬಹುದು; ಇಲ್ಲದಿದ್ದರೆ ನೋಡಿದವರಿಂದ ಕೇಳಿ ಹೊಟ್ಟೆ ಉರಿಸಿಕೊಳ್ಳಬೇಕು.ಸೋಮವಾ ನಮಗೆ ದಕ್ಕಿದ್ದು ನಾಲ್ಕು ಚಿತ್ರಗಳು.

ಡ್ಯಾಮೇಜ್

ಆಸ್ಟ್ರೇಲಿಯಾದ ನಿರ್ದೇಶಕಿ ಮ್ಯಾಡೆಲಿನ್ ಬ್ಲಾಕ್ ವೆಲ್ ಚಿತ್ರೋತ್ಸವಕ್ಕೆ ಬಂದಿದ್ದರು. ಚಿತ್ರ ಅರಂಭವಾಗುವ ಮುನ್ನ ಮಾತನಾಡಿ 84 ನಿಮಿಷದ ಚಿತ್ರದ ಫೂಟಿಂಗ್ ಹತ್ತು ಗಂಟೆಗೂ ಹೆಚ್ಚಿದೆ. ಅದನ್ನು ಎಡಿಟ್ ಮಾಡಿ ಈ ಹಂತಕ್ಕೆ ತಂದೆವು ಎಂದರಂತೆ.

ಎಂಬತ್ತೆಂಟರ ವೃದ್ಧೆ ಮತ್ತು ವೀಸಾ ಇಲ್ಲದ ಇರಾಕಿನ ಡ್ರೈವರ್ ಇವರಿಬ್ಬರೇ ಇರುವ ಈ ಚಿತ್ರದ ಎಡಿಟಿಂಗ್ ಮೆಚ್ಚಲೇ ಬೇಕು. ಸಿನಿಮಾದ ಹೆಚ್ಚು ಭಾಗ ಕಾರಿನಲ್ಲಿ ಮತ್ತು ಸಂಭಾಷಣೆಯಲ್ಲೇ ಸಾಗುವುದರಿಂದ ಚಿತ್ರದಲ್ಲಿ ಸಂಕಲನದ ಪಾತ್ರ ಮಹತ್ವದ್ದು. ಚಿತ್ರ ತನ್ನ ಉದ್ದೇಶವನ್ನು ವೀಕ್ಷಕನಿಗೆ ತಲಪಿಸುವಲ್ಲಿ ಸಫಲವಾಗುತ್ತದೆ.

ಎಲ್ಲಿಗೆ ಹೋಗಬೇಕೆಂದು ಹೇಳಲಾರದ ವೃದ್ಧೆಗೆ ದಾರಿ ಎಲ್ಲೆಂದು ಗೊತ್ತಿಲ್ಲದ ಡ್ರೈವರ್. ಅವನಿಗೆ ಅವನದೇ ಅದ, ಮುತ್ತುವ ನೆನಪುಗಳಿದ್ದರೆ ಆಕೆಗೆ ನೆನಪಿಸಿಕೊಳ್ಳಲಾರದ ವಿಷಯಗಳಿವೆ. “ನಮ್ಮ ಊರಿಗೆ ಬಂದವರು ನೀವು” ಎಂದಾಕೆ ಹೇಳಿದರೆ ” ನಾವು ಕರೆಯದೇ ನಮ್ಮೂರಿಗೆ ಬಂದು ನಮ್ಮನ್ನು ಹೊರ ಹಾಕಿದವರು ನೀವು” ಎಂದಾತ ಹೇಳುತ್ತಾನೆ. ಅವಳಿಗೆ ಪ್ರಿಯವಾದುದನ್ನು ಕಸಿದುಕೊಂಡಿದ್ದಾರೆ. ಅವನು ಪ್ರಿಯರಾದವರನ್ನು ಕಳೆದುಕೊಂಡಿದ್ದಾನೆ…ಹೀಗೆ ಒಂದಲ್ಲ ಒಂದು ರೀತಿಯಲ್ಲಿ ನಮ್ಮದಲ್ಲದ ಬದುಕನ್ನು, ನಮ್ಮದಲ್ಲದ ಊರಲ್ಲಿ ಬಾಳುವ ನೋವನ್ನು ನಿರ್ದೇಶಕಿ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ.

ಟೆಂಪೊರರೀಸ್

ಉದ್ಯೋಗವಿಲ್ಲದ ಯುವಕರು ಎಲ್ಲಿಂದೆಲ್ಲಿಗೋ ಬಂದು ಏನೇನೋ‌ ಕೆಲಸಗಳನ್ನು ಮಾಡಬೇಕಾಗುತ್ತದೆ. ಅವರನ್ನು ಸಮಯದ ಮಿತಿಯಿಲ್ಲದೆ, ಸರಿಯಾದ ಸೌಕರ್ಯವಿಲ್ಲದೆ, ಅವರ ಸಾಮರ್ಥ್ಯ ಮೀರಿ ದುಡಿಸಿಕೊಳ್ಳಲಾಗುತ್ತದೆ. ಅವರ ಪರವಾಗಿ ನಿಂತು ಹೋರಾಟ ಮಾಡಿದರೂ, ಹೊಟ್ಟೆಪಾಡಿನ ಅವಶ್ಯಕತೆಯಲ್ಲಿ ಅದು ಉಪಯೋಗವಾಗದೇ ಹೋಗಬಹುದು.

ಅರಿಯಾನ್ ಕೆನಡಾದಲ್ಲಿ ಗ್ವಾಟೆಮಾಲಾದಿಂದ ಬರುವ ಕೆಲಸಗಾರರಿಗೆ ಅನುವಾದಕಿಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಅವಳಿಗೆ ಉದ್ಯೋಗದ ತೀರಾ ಅವಶ್ಯಕತೆ ಇದೆ. ಆದರೆ ಯುವಕರ ಪಡಿಪಾಟಲನ್ನು ಕಂಡು ನೋಯುತ್ತಾಳೆ. ಅವರ ಪರ ನಿಲ್ಲುತ್ತಾಳೆ. ಇದರಿಂದ ಏನೆಲ್ಲ ತೊಡಕುಗಳು ಉಂಟಾಗುತ್ತವೆ ಎನ್ನುವುದನ್ನು ಚಿತ್ರ ಹೇಳುತ್ತದೆ.
ಪಿಯರ್ ಫಿಲಿಪ್ ಚೆವಿಗ್ನಿ ನಿರ್ದೇಶನದ ಈ‌ ಚಿತ್ರ ಕಾರ್ಪೋರೆಟ್ ಸಂಸ್ಕೃತಿಯನ್ನೂ ಬಿಂಬಿಸುತ್ತದೆ.

ಅಮಲ್

ಸಾಹಿತ್ಯದ ಅಧ್ಯಾಪಕಿ ವಿದ್ಯಾರ್ಥಿನಿಯೊಬ್ಬಳ‌ ಮೇಲೆ ಧಾರ್ಮಿಕ ಕಾರಣಗಳಿಗಾಗಿ ಹಲ್ಲೆ ನಡೆದಾಗ ಆಕೆಯ ಪರವಾಗಿ ನಿಲ್ಲುತ್ತಾಳೆ. ಅವಳ ಉದ್ದೇಶ ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಮಾಡುವ ಮನೋಭಾವ, ಚಿಂತನೆ ಮತ್ತು ಅರಿವನ್ನು ಮೂಡಿಸುವುದು. ಅದರೆ ಅವಳ ನಿರೀಕ್ಷೆಗೆ ವಿರುದ್ಧವಾಗಿ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಧರ್ಮ ಬೋಧೆಗೆ ಮರುಳಾಗಿದ್ದಾರೆ. ಇದರಿಂದ ಆಕೆಗೆ ತೊಂದರೆಗೆ ಒಳಗಾಗುವುದಲ್ಲದೆ, ಇತರರ ಮೇಲಾಗುವ ಆಕ್ರಮಣವನ್ನೂ ತಡೆಯಲಾಗುವುದಿಲ್ಲ. ಆಕೆಗೆ ಸ್ಪಷ್ಟವಾಗಿ ವಿದ್ಯಾರ್ಥಿಗಳು ಯಾರ ದುರ್ಬೋಧನೆ ಒಳಗಾಗಿದ್ದಾರೆ ಎಂದು ತಿಳಿದಿದೆ. ಅದನ್ನು ನೇರವಾಗಿ ಹೇಳುತ್ತಾಳೆ. ಆದರೆ ವಿಷಯ ಅಲ್ಲಿಗೇ ಮುಗಿಯುವುದಿಲ್ಲ…..

ಚಿತ್ರ ಮೂಲಭೂತವಾದದ ಕೆಡುಕನ್ನು ಅನಾವರಣ ಮಾಡುತ್ತದೆ.’ ಸ್ವಾತಂತ್ರ್ಯದ ಸವಿಯನ್ನು ಒಮ್ಮೆ ಅನುಭವಿಸಿದರೆ ಮತ್ತೆ ಅದರಿಂದ ಹೊರ ಹೋಗಲಾಗುವುದಿಲ್ಲ’ ಎನ್ನುವ ಮಾತು ಚಿತ್ರದಲ್ಲಿ ಬರುತ್ತದೆ. ಸ್ವಾತಂತ್ರ್ಯವನ್ನು ನಿರಾಕರಿಸುವ ಎಲ್ಲಾ ಮೂಲಭೂತವಾದಿಗಳು ಮನನ ಮಾಡಬೇಕಾದ ವಿಷಯವಿದು.

ಬೆಲ್ಜಿಯಂ ದೇಶದ ಈ ಚಿತ್ರದ ನಿರ್ದೇಶಕ ಜವಾದ್ ರಾಲಿಬ್ ಮರೆಯಲಾರದ ಅನುಭವವನ್ನು ಕಟ್ಟಿಕೊಟ್ಟಿದ್ದಾರೆ.

ಪರ್ಫೆಕ್ಟ್ ಡೇಸ್

ಶೌಚಾಲಯ ಸ್ವಚ್ಚ ಮಾಡುವ ಕೆಲಸ ಕೀಳೆಂದು ತಿಳಿಯುವ ದೇಶ ನಮ್ಮದು. ಅದಕ್ಕಾಗಿಯೇ ಜಾತಿಯೊಂದನ್ನು ಸೃಷ್ಟಿಸಿ ಅವರನ್ನು ದೂರ ಇರಿಸಿದವರು ನಾವು. ಅದರೆ ಜಪಾನ್ ದೇಶದಲ್ಲಿ ಯಾವ ಕೆಲಸವೂ ಕೀಳಲ್ಲ; ಶೌಚಾಲಯ ಸ್ವಚ್ಚ ಮಾಡುತ್ತಾ ಗೌರವದ ಜೀವನ‌ ನಡೆಸಬಹುದು.

ಹಿರಾಯಾಮ ಏಕತಾನತೆಯ ಕೆಲಸದಲ್ಲೂ ನೆಮ್ಮದಿ ಕಂಡುಕೊಂಡವನು. ನಿಷ್ಠೆಯಿಂದ, ಕ್ಲುಪ್ತ ಸಮಯದಲ್ಲಿ ಕೆಲಸ ಮಾಡುವ ಅವನು ತೃಪ್ತ. ಸಂಗೀತ, ಓದು, ಫೋಟೋಗ್ರಫಿ ಅವನ ಜೀವನದ ಅವಿಭಾಜ್ಯ ಅಂಶಗಳು. ಇದರ ನಡುವೆ ಅವನನ್ನು ಹಚ್ಚಿಕೊಳ್ಳುವವರು,ದೂರ ಹೋಗುವವರೂ ಇದ್ದಾರೆ. ಅವನು ಯಾರನ್ನು ಹಚ್ಚಿಕೊಂಡಂತೆ ತೋರದಿದ್ದರೂ ಅವನನ್ನು ಇಷ್ಟ ಪಡುವವರು ಇದ್ದಾರೆ. ತಂಗಿಯ ಮಗಳು, ಶ್ರೀಮಂತ ತಂಗಿ ಬಂದಾಗಲೂ ಅವನು ವಿಚಲಿತನಾಗುವುದಿಲ್ಲ. ಅಸ್ವಸ್ಥ ತಂದೆಯನ್ನೂ ನೋಡಲು ಹೋಗುವುದಿಲ್ಲ. ಅವನು ಯಾವಾಗಲೂ ಊಟಕ್ಕೆ ಹೋಗುವ ಹೋಟೆಲಲ್ಲಿ ಅವನು ಇಷ್ಟ ಪಡುವ ಮಾಲಕಿ ಮತ್ತೊಬ್ಬನ ತೆಕ್ಕೆಯಲ್ಲಿರುವುದನ್ನು ಕಂಡಾಗ ಅವನಿಗೆ ಕಸಿವಿಸಿಯಾಗುತ್ತದೆ. ಆದರೆ ಸತ್ಯ ತಿಳಿದಾಗ ಮುಖ‌ ಅರಳುತ್ತದೆ.
‘ಪ್ರತಿ ಮುಂಜಾನೆ,ಪ್ರತಿ ಉಷೆ ಹೊಸದು’ ಎನ್ನುವ ಹಾಡಿನಲ್ಲಿ ಚಿತ್ರದ ಅಂತಃಸತ್ವವಿದೆ. ಪ್ರತಿದಿನವನ್ನೂ ನೆಮ್ಮದಿಯಿಂದ ಬದುಕುವ ಹಿರಾಯಾಮನಿಗೆ ಮತ್ತೊಬ್ಬರಿಗೆ ಖುಷಿ‌ ಕೊಡುವುದು ಹೆಚ್ಚು ಸಂತೃಪ್ತಿ‌ ನೀಡುತ್ತದೆಯೇ? ಚಿತ್ರ ನೋಡಿ‌ ಕಂಡುಕೊಳ್ಳಬೇಕು.

ಜರ್ಮನಿಯ ನಿರ್ದೇಶಕ ವಿಮ್ ವೆಂಡರ್ಸ್ ನ ‘ಪರ್ಫೆಕ್ಟ್ ಡೇಸ್’ ಬಿಫೆಸ್ 15 ರ ಅತ್ಯುತ್ತಮ ಚಿತ್ರಗಳಲ್ಲೊಂದು.

ಎಂ. ನಾಗರಾಜ ಶೆಟ್ಟಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
5 2 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x