ಡೆನ್ನಾನ ಡೆನ್ನಾನ ಗುಂಗಿನಲ್ಲಿ‌ ಇನ್ನೆರಡು ದಿನ: ಎಂ. ನಾಗರಾಜ ಶೆಟ್ಟಿ

ಮಂಗಳವಾರದ ಚಿತ್ರಗಳು

ದಿ ರೈ ಹಾರ್ನ್

ಬಸುರು ಮಾಡಿ ಮುಖ ತಿರುಗಿಸುವ ಗಂಡಸರು ಹೆಣ್ಣಿನ ಕಷ್ಟಗಳನ್ನು, ಅವಳ ಬವಣೆಯನ್ನು ಅನುಭವಿಸಲಾರರು. ಸ್ತ್ರೀವಾದಿ ಚಿತ್ರದಂತೆ ತೋರುವ ‘ ದಿ ರೈ ಗ ಹಾರ್ನ್’ ಚಿತ್ರದ ನಿರ್ದೇಶಕಿ ಜೈಒನೆ ಕಾಂಬೋರ್ಡ ಸ್ಪೈನ್ ನ ಗ್ರಾಮೀಣ ಮಹಿಳೆಯೊಬ್ಬಳ ದಾರುಣ ಬದುಕನ್ನು ಮಹಿಳಾ ಕಣ್ಣೋಟದಲ್ಲಿ ಕಟ್ಟಿಕೊಡುತ್ತಾಳೆ.

ಮದುವೆಯಾಗದ ಮಾರಿಯಾ ಹೆರಿಗೆ ಮಾಡುವುದರಲ್ಲಿ ನಿಷ್ಣಾತೆ ಹೇಗೋ ಅಂತೆಯೇ ಗರ್ಭಪಾತವನ್ನೂ ಮಾಡಬಲ್ಲಳು. ಹದಿಹರೆಯದ ಹೆಣ್ಣೊಬ್ಬಳಿಗೆ ನೆರವಾಗಲು ಗರ್ಭಪಾತ ಮಾಡುವುದು ಅವಳನ್ನು ಸ‌ಂಕಷ್ಟಕ್ಕೆ ದೂಡುತ್ತದೆ. ಆಕೆ ತನ್ನ ರಕ್ಷಣೆಗಾಗಿ ಪೋರ್ಚುಗಲ್ ನಲ್ಲಿ ಮರೆಯಾಗಬೇಕಾಗುತ್ತದೆ. ಆಗ ಅವಳ ಸಹಾಯಕ್ಕೆ ಒದಗುವವಳು ಕಪ್ಪು ಬಣ್ಣದ ಲೈಂಗಿಕ ಕಾರ್ಯಕರ್ತೆ. ಮಾರಿಯಾ ಬಸುರಿಯೆಂದು ತಿಳಿದಾಗ ಅವಳಿಗೆ ಆಕೆ ಬೆಂಬಲವಾಗಿ ನಿಲ್ಲುತ್ತಾಳೆ.

ಹೆರಿಗೆ ಸಮಯದ ನೋವು, ಕ್ಷಣದ ಖುಷಿಗಾಗಿ ಪ್ರಾಣ ಕಳೆದುಕೊಳ್ಳುವ ಹೆಣ್ಣು ಮಗಳು, ಕಪ್ಪು ಬಣ್ಣದವಳೆ‌ಂದು ಲೈಂಗಿಕ‌ ಕಾರ್ಯಕರ್ತೆಯಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ, ಹೀಗೆ ಹೆಣ್ಣಿನ‌ ಶೋಷಣೆ ಹಲವು ಮುಖಗಳನ್ನು, ಕದ್ದು ಮುಚ್ಚಿ ದೇಶಾಂತರ ಹೋಗುವ ಕಷ್ಟಗಳನ್ನೂ ನಿರ್ದೇಶಕಿ ಹಿಡಿದಿಟ್ಟಿದ್ದಾರೆ.

ಕೆಲವು ಸನ್ನಿವೇಶಗಳನ್ನು ಹರಿತಗೊಳಿಸಿ, ವೇಗ ಹೆಚ್ಚಿಸಿದ್ದರೆ ಚಿತ್ರ ಇನ್ನಷ್ಟು ಚೆನ್ನಾಗಿರುತ್ತಿತ್ತು.

ಸಿಟಿ ಆಫ್ ವಿಂಡ್

ಚಿತ್ರದ ಪ್ರಾರಂಭದಲ್ಲಿ‌ ದಕ್ಷಿಣ ಕನ್ನಡದ ಭೂತಗಳಂತೆ ಕಣಿ ಹೇಳುವ ಪಾತ್ರವಿದೆ. ಬೇಡಿಕೊಂಡವರಿಗೆ ಅಭಯ ನೀಡುವಾತ ಮುಖವಾಡ ತೆಗೆದಾಗ ಹದಿನೇಳರ ಯುವಕನೆಂದು ತಿಳಿಯುತ್ತದೆ. ತಾತನ ಸ್ಪಿರಿಟ್ ಆವಾಹನೆಯಾಗಿ ಭವಿಷ್ಯ ಹೇಳುತ್ತಾನೆಂದು ಊರವರು ನಂಬುವಂತೆ ಆತನೂ ನಂಬುತ್ತಾನೆ. ಪದವಿ‌ ಕಾಲೇಜಲ್ಲಿ ಆತನ ಮೈಮೇಲೆ ಬರುವುದನ್ನು ಹಾಸ್ಯ ಮಾಡುತ್ತಾರೆ. ಯುವಕರಿಗಿರುವ ತುಡಿತಗಳೆಲ್ಲ ಅವನಿಗೂ ಇದೆ. ಯುವತಿಯೊಬ್ಬಳನ್ನು ಗಾಢವಾಗಿ ಪ್ರೀತಿಸುತ್ತಾನೆ. ಅವಳಿಗೆ ಆಕೆಯ ತಂದೆ ಇರುವ ಕೊರಿಯಾಗೆ ಹೋಗುವ ಅಸೆ. ಇವನಿಗೆ ದೊಡ್ಡ ಅಪಾರ್ಟ್ ಮೆಂಟಲ್ಲಿ ಸುಖವಾಗಿ ಬದುಕುವಾಸೆ. ಈ ಸಂಬಂಧ ಆವರಿಸಿಕೊಂಡಾಗ ಅವನ‌ ಮೇಲೆ ಆವಾಹನೆಯಾಗುವುದು ತಪ್ಪುತ್ತದೆ. ಅವನು ಪ್ರೀತಿಸಿದ ಹುಡುಗಿ ಕೊರಿಯಾಕ್ಕೆ ಹೊರಡುತ್ತಾಳೆ.

ಆಧುನೀಕತೆಗೆ ತೆರೆದುಕೊಳ್ಳುವ ಮಂಗೋಲಿಯಾದಲ್ಲಿ ಪಾರಂಪರಿಕ ನಂಬಿಕೆಗೂ ಹೊಸ ಬದುಕಿನ‌ ಕ್ರಮಕ್ಕೂ ಸಂಘರ್ಷ ಉಂಟಾಗುವ ಬಗೆಯನ್ನು ನಿರ್ದೇಶಕಿ ಲಗ್ವದುಲಂ ಪುರೆವ್- ಒಚಿರ್ ಸಂಯಮದಿಂದ ರೂಪಿಸಿದ್ದಾರೆ. ಹಳೆಯ ಮತ್ತು ಹೊಸ ಮಂಗೋಲಿಯಾದ ಸ್ವರೂಪಗಳನ್ನು ವಿಡಿಯೋಗ್ರಫಿ ಸಶಕ್ತವಾಗಿ ಸೆರೆ ಹಿಡಿಯುತ್ತದೆ. ಓಸ್ಕರ್ ಹೆಸ್ ಯುವಕನ ಪಾತ್ರದಲ್ಲಿ ಅದ್ಭುತವಾಗಿ‌ ನಟಿಸಿದ್ದಾರೆ.

ದಿ ಸೆಟ್ಲರ್ಸ್

ಹೆಸರೇ ಸೂಚಿಸುವಂತೆ ಲ್ಯಾಟಿನ್ ಅಮೆರಿಕಾದಲ್ಲಿ ನೆಲೆ ನಿಂತ ಯುರೋಪಿಯನ್ನರ ಆಕ್ರಮಣದ ಕತೆ. ಆದಷ್ಟು ಆಸ್ತಿ ಮಾಡಿಕೊಳುವ ಇರಾದೆಯಲ್ಲಿ ಭೂ ಮಾಲಿಕನೊಬ್ಬ ಮೂವರು ವ್ಯಕ್ತಿಗಳನ್ನು ಚಿಲಿ ದೇಶದ ದಕ್ಷಿಣ ಭಾಗಕ್ಕೆ ಕಳುಹಿಸುತ್ತಾನೆ. ಅವರಲ್ಲಿ ಒಬ್ಬ ಮೂಲ ನಿವಾಸಿ. ಉಳಿದಿಬ್ಬರು ಅತಿ ಕ್ರೂರಿಗಳು. ಅಡ್ಡಿ ಮಾಡಿದವರಿಗಷ್ಟೇ ಅಲ್ಲ, ನಿರುದ್ದಿಶ್ಯವಾಗಿಯೂ ಅವರು ಹತ್ಯೆ ಮಾಡುತ್ತಾರೆ‌. ಅವರಲ್ಲಿ ಜನಾಂಗೀಯ ದ್ವೇಷವುಳ್ಳವನೊಬ್ಬನ ಕೊಲೆಯಾಗುತ್ತದೆ. ಮತ್ತೊಬ್ಬ ಅತ್ಯಂತ ಕ್ರೂರವಾಗಿ ನೂರಾರು ಮೂಲ ನಿವಾಸಿಗಳ ಹತ್ಯೆ ಮಾಡುತ್ತಾನೆ.

ಇಪ್ಪತ್ತನೇ ಶತಮಾನದ ಅನಾಗರಿಕ ಕ್ರಮಗಳು ನಿಂತು ಹೋಗಿ ಹೊಸ ಸರಕಾರ ಬಂದ ನಂತರ ಹಿಂದೆ ನಡೆದ ಬರ್ಬರ ಹತ್ಯೆಗಳ ಮಾಹಿತಿ ಸಂಗ್ರಹಿಸಲಾಗುತ್ತದೆ. ಭೂಮಾಲೀಕನಿಗೆ ಇಷ್ಟವಿಲ್ಲದಿದ್ದರೂ ಚಿಲಿಗೆ ಬಂದು ಹಿಂಸೆ, ಕೊಲೆ ನಡೆಸಿದ ತಂಡದಲ್ಲಿದ್ದ ಮೂಲ ನಿವಾಸಿಯನ್ನು ಸಂದರ್ಶಿಸಲಾಗುತ್ತದೆ.

ಶತಮಾನದ ಹಿಂದೆ ವಸಾಹತುಶಾಹಿ‌ ನಡೆಸಿದ ಘೋರ ಹಿಂಸೆ, ಹತ್ಯೆಗಳನ್ನು ಚಿತ್ರ ಪುನರ್ ರೂಪಿಸುತ್ತದೆ. ಆಕ್ರಮಣಕಾರರ ಕ್ರೂರತನ, ಮೂಲ ನಿವಾಸಿಗಳ‌ ಅಸಹಾಯಕತೆ ಚಿತ್ರದಲ್ಲಿ ಎದ್ದು ಕಾಣುತ್ತದೆ.

ಚಿಲಿ ದೇಶದ ಈ ಚಿತ್ರದ ನಿರ್ದೇಶಕ ಫೆಲಿಪೆ ಗಲ್ವೆಜ್

ಗ್ರೀನ್ ಬಾರ್ಡರ್

ಈ ಚಿತ್ರವನ್ನು ನಿರ್ದೇಶಿಸಿ ಹಲವು ಆಪಾದನೆಗಳನ್ನು ಮೈಮೇಲೆ ತಂದುಕೊಂಡ ಪೋಲೆಂಡಿನ ನಿರ್ದೇಶಕಿ ಅಗ್ನೀಷ್ಕಾ ಹಾಲೆಂಡ್.

ಈಗ ವಲಸೆ ಜಾಗತಿಕ ಸಮಸ್ಯೆ. ಆಫ್ರಿಕಾದ ದೇಶಗಳಿಂದ, ಅಫಘಾನಿಸ್ತಾನ, ಸಿರಿಯಾ, ಇರಾಕ್ ಮುಂತಾದ ದೇಶಗಳಿಂದ ಯುರೋಪಿಯನ್ ದೇಶಗಳಿಗೆ ಬರುವ ನಿರ್ವಸಿತರ ಸಂಖ್ಯೆ ಹೆಚ್ಚುತ್ತಿದೆ. ಪೊಲೆಂಡ್ ಮುಂತಾದ ದೇಶಗಳು ನಿರ್ವಸಿತರ ಬಗ್ಗೆ ಮೆದು ಧೋರಣೆ ತಳೆದಿರುವುದು ಒಂದು ಕಾರಣವಾದರೆ ಬೆಲೋರಸ್ ಮುಂತಾದ ಸರ್ವಾಧಿಕಾರಿ ದೇಶಗಳು ಯುರೋಪಿಯನ್ ದೇಶಗಳ ಆರ್ಥಿಕತೆ ಹಾಳು ಮಾಡಲು ನಿರ್ವಸಿತರನ್ನು ಆಹ್ವಾನಿಸಿ‌ ಗಡಿಯಾಚೆ ತಳ್ಳುತ್ತದೆ. ಇವರಲ್ಲಿ ಬದುಕುಳಿವವರಿರುವಂತೆ, ಸಾಯುವವರೂ ಅನೇಕ.

ಈ ಜ್ವಲಂತ, ಸ್ಪೋಟಕ ಸಮಸ್ಯೆಯನ್ನು ನಿರ್ದೇಶಕಿ ಅಷ್ಟೇ ಬಿಗಿಯಾಗಿ, ಮೈ ನವಿರೇಳುವಂತೆ ಚಿತ್ರೀಕರಿಸಿದ್ದಾರೆ.
ಸಿರಿಯಾದ ಹಸುಗೂಸನ್ನೊಳಗೊಂಡ ಕುಟುಂಬ ಮತ್ತು ಅಫ್ಘಾನಿಸ್ತಾನದಿಂದ ಪಾರಾಗುವ ಮಹಿಳೆ ನಿರ್ವಸಿತರು. ಇವರಲ್ಲದೆ ಇತರ ವಲಸಿಗರು, ಇವರನ್ನು ರಕ್ಷಿಸಲು ಕಂಕಣ ಬದ್ಧರಾದ ಹ್ಯೂಮನ್ ರೈಟ್ಸ್ ಆಕ್ಟಿವಿಸ್ಟ್ಸ್ , ಗಡಿಯನ್ನು ಕಾಯುವ ಪಡೆಗಳು, ಪೊಲೆಂಡ್ ರಕ್ಷಣಾ ಪಡೆಯ ಬಸುರಿಯೊಬ್ಬಳ‌ ಗಂಡ ಇವರೆಲ್ಲರನ್ನೂ ಕತೆ ಒಳಗೊಳ್ಳುತ್ತದೆ. ಇವರೆಲ್ಲರ ಕುಸುರಿಯಿಲ್ಲದಿದ್ದರೆ ಚಿತ್ರ ಡಾಕ್ಯುಮೆಂಟರಿಯಾಗುತ್ತಿತ್ತು.

ಕೊನೆ ಗಳಿಗೆಯಲ್ಲಿ ವಾಹನ ಏರದ ಅಪ್ಪ, ಮಗುವನ್ನು ಕಳೆದುಕೊಳ್ಳುವ ತಾಯಿ, ಸ್ಟೇಷನ್ನಿನಲ್ಲಿ ಬಟ್ಟೆ ಕಳಚಬೇಕಕಾದ ಆಕ್ಟಿವಿಸ್ಟ್, ಬಚ್ಚಿಟ್ಟವರನ್ನು ಕಂಡರೂ ಕಾಣದಂತಿರುವ ಪೋಲಿಸ್ ಇಂತಹ ಮಾನವೀಯ ಗಳಿಗೆಗಳು ಮನಸ್ಸನ್ನು ಮಿಡಿಯುತ್ತವೆ.ಚಿತ್ರದ ಕೊನೆಯಲ್ಲಿ ಪೊಲೆಂಡಿಗೆ ಪ್ರವಾಹದಂತೆ ಬರುವ ಉಕ್ರೇನಿನ‌ ನಿರ್ವಸಿತರ ದಂಡನ್ನು ಕಾಣಬಹುದು.

ಧರ್ಮ, ಯುದ್ಧ, ಸರ್ವಾಧಿಕಾರಗಳು ಮಾನವ ಜನಾಂಗದ ನೆಲೆ ತಪ್ಪಿಸುತ್ತಿದೆ. ಅಸಹಾಯಕ ಜನರು ತಾವು ಮಾಡದ ತಪ್ಪಿಗೆ ಜೀವ ತೆರುತ್ತಿದ್ದಾರೆ. ಈ ಸಂಕಷ್ಟಗಳ ನಡುವೆ ಬೆರಳೆಣಿಕೆಯ ಹ್ಯೂಮನ್ ಆಕ್ಟಿವಿಸ್ಟ್ ಗಳು ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಇದನ್ನು ಕಗ್ಗತ್ತಲೆಯ ಬೆಳಕು ಎನ್ನಬೇಕೇ, ಬೆಳಕನ್ನು ಮರೆಸುವ ಕತ್ತಲೆ ಎನ್ನಬೇಕೇ?

ಬುಧವಾರದ ಚಿತ್ರಗಳು

ಮಿಥ್ಯ

ಶ್ರದ್ಧೆಯಿಂದ ಸಿನಿಮಾ ಅಧ್ಯಯನ ಮಾಡಿ, ಕೈ ತುಂಬಾ ಪಗಾರ ಸಿಗುವ ನೌಕರಿಗೆ ತಿಲಾಂಜಲಿ ನೀಡಿ ನಿರ್ದೇಶನದಲ್ಲಿ ಅಸಕ್ತಿಯಿಂದ ತೊಡಗಿಕೊಳ್ಳುವ ಯುವಕರ ಸಂಖ್ಯೆ ಹೆಚ್ಚುತ್ತಲಿದೆ.ಇದು ಸ್ವಾಗತಾರ್ಹ ವಿಷಯ. ಈ ಸಾಲಿಗೆ ಇನ್ನೊಂದು ಗಮನಾರ್ಹ ಸೇರ್ಪಡೆ ಸುಮಂತ್ ಭಟ್.

ಅವರ ಚೊಚ್ಚಲ ಪ್ರಯತ್ನ ‘ಮಿಥ್ಯ’ ಚಿತ್ರದ ಕತೆಯನ್ನು ಹೊಸತು ಎಂದು ಹೇಳಲಾಗದು. ತಂದೆ ತಾಯಿ ತೀರಿಕೊಂಡ ಬಳಿಕ ಬಾಲಕ ಮಿಥುನ್, ತಂಗಿ ವಂದನಾಳೊಂದಿಗೆ ಚಿಕ್ಕಮ್ಮನ ಮನೆಗೆ ಬರುತ್ತಾನೆ. ಅತನ ಮನಸ್ಸಲ್ಲಿ ತುಮುಲವಿದೆ. ಚಿಕ್ಕಮ್ಮ, ಚಿಕ್ಕಪ್ಪ ಪ್ರೀತಿಸಿದರೂ ಒಗ್ಗಿಕೊಳ್ಳಲು ಕಷ್ಟ ಪಡುತ್ತಾನೆ. ಗಂಡು ಮಗುವನ್ನು ತಮ್ಮ ಸುಪರ್ದಿಗೆ ಒಪ್ಪಿಸಬೇಕೆಂಬ ತಂದೆಯ ಸಂಬಂಧಿಕರು, ಅವರು ಸತ್ತಿದ್ದು ಹೇಗೆ ಎಂದು ಪ್ರಶ್ನಿಸುವವರು ಈ ಎಲ್ಲಾ ಗೋಜಲುಗಳಿಂದ ಅವನ ಮನಸ್ಸು ಪ್ರಕ್ಷುಬ್ದಗೊಂಡಿದೆ. ತಂಗಿ ವಂದನಾ ಬಂದ ಬಳಿಕ ತಂದೆ ತಾಯಿ ಸರಿಯಾಗಿರಲಿಲ್ಲ ಎನ್ನುವುದೂ ಅವನನ್ನು ಕಾಡುತ್ತಿದೆ. ಬಾಲಕನ ಹೊಯ್ದಾಟದ ಮನಸ್ಥಿತಿ ತೆರೆಯಲ್ಲಿ ಬಹಳ ಚೆನ್ನಾಗಿ ಮೂಡಿ ಬಂದಿದೆ. ಅಂತ್ಯವೂ ಕೂಡಾ ಮನ ಮುಟ್ಟುವಂತಿದೆ.

ಮಿಥುನ್ ಪಾತ್ರದಲ್ಲಿ ಅತೀಶ್ ಶೆಟ್ಟಿ ಅತ್ಯುತ್ತಮವಾಗಿ ನಟಿಸಿದ್ದಾನೆ. ಇತರ ಪಾತ್ರಗಳ ಆಯ್ಕೆಯೂ ಸಮರ್ಪಕವಾಗಿದ್ದು ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಸಂಭಾಷಣೆಗೆ ಇನ್ನೊಂದಿಷ್ಟು ಗಮನ ಕೊಟ್ಟಿದ್ದರೆ ಚೆನ್ನಾಗಿತ್ತು ಅನ್ನಿಸುತ್ತದೆ.

ಮುಂದಿನ ದಿನಗಳಲ್ಲಿ ಸುಮಂತ್ ಭಟ್ ರವರಿಂದ ಒಳ್ಳೊಳ್ಳೆಯ ಚಿತ್ರಗಳನ್ನು ಖಂಡಿತಾ ನಿರೀಕ್ಷಿಸಬಹುದು.

ಬಾನೆಲ್ ಆಂಡ್ ಅಡೆಮಾ

ಪರಸ್ಪರ ತೀವ್ರವಾಗಿ ಪ್ರೀತಿಸುವ ದಂಪತಿ ಬಾನೆಲ್ ಮತ್ತು ಅಡೆಮಾ. ಅಲ್ಲಿಯ ಪದ್ಧತಿ ಪ್ರಕಾರ ಅಣ್ಣ ಸತ್ತ ನಂತರ ತಮ್ಮ ಆತನ ವಿಧವೆಯನ್ನು ಮದುವೆಯಾಗಬೇಕು. ಬಾನೆಲ್ ಅಡೆಮಾನ ಪತ್ನಿಯಾಗಿದ್ದಳು. ಮೊದಲೇ ಪ್ರೀತಿಸುತ್ತಿದ್ದ ಅವರಿಬ್ಬರೂ ಬಾನೆಲ್ ನ ಗಂಡ ತೀರಿ ಹೋದ ನಂತೆ ಅಡಮಾನನ್ನು ಮದುವೆಯಾಗುತ್ತಾಳೆ. ಪರಂಪರೆಯಂತೆ ಅಡಮಾ ಊರಿನ ಮುಖ್ಯಸ್ಥನಾಗಬೇಕು. ಆದರೆ ಅವನಿಗದು ಇಷ್ಟವಿಲ್ಲ. ಉರಿನಿಂದ ಪ್ರತ್ಯೇಕವಾಗಿ ಇರಬೇಕೆಂದು ಅವರಿಬ್ಬರೂ ಊರಿನಿಂದಾಚೆ ಮನೆ ಕಟ್ಟಿಕೊಳ್ಳುತ್ತಾರೆ. ಮಳೆ ಇಲ್ಲದೆ ತೀವ್ರ ಬರಗಾಲ ಉಂಟಾಗಿ ಜಾನುವಾರುಗಳೆಲ್ಲ ಸಾಯುತ್ತವೆ. ಅಡೆಮಾ ಊರ ಕೆಲಸಗಳಲ್ಲಿ ಪಾಲ್ಗೊಳ್ಳುತ್ತಾನೆ. ಬಾನೆಲ್ ಗೆ ಇದು ಇಷ್ಟವಿಲ್ಲ. ಉತ್ತಮ ಗುರಿಕಾರಳಾದ ಅವಳು ವಿಕ್ಷಿಪ್ತವಾಗಿ ವರ್ತಿಸುತ್ತಾಳೆ. ಅಡೆಮಾ ನಂತರ ಊರ ಮುಖ್ಯಸ್ಥರಾಗುವವರು ಇಲ್ಲದಿರುವುದರಿಂದ ಅಡೆಮಾ ಮತ್ತೊಂದು ಮದುವೆಯಾಗಿ ಮಗು ಪಡೆಯುತ್ತಾನೆ.

ಸೆನೆಗಲ್ ನ ಗ್ರಾಮೀಣರ ನಂಬುಗೆ, ಪರಂಪರೆಯ ಮೋಹ ಇದರಿಂದ ವೈಯಕ್ತಿಕ ಬದುಕಿಗೆ ಹಾನಿಯಾಗುವುದನ್ನು ಜಾನಪದದ ಚೌಕಟ್ಟಿನಲ್ಲಿ ನಿರೂಪಿಸಲಾಗಿದೆ. ಪ್ರಕೃತಿಯ ವಿಕೋಪವನ್ನು ಧಾರ್ಮಿಕ ನಂಬುಗೆಗೆ ಜೋಡಿಸುವುದನ್ನೂ ಚಿತ್ರ ಸೂಚಿಸುತ್ತದೆ. ನಿರ್ದೇಶಕಿ ರಮಟ- ಟೌಲಯೆ ಸಿ.

ಮಾನ್ಸ್ ಟರ್

ಜಪಾನಿನ ಪ್ರತಿಭಾವಂತ ನಿರ್ದೇಶಕರಲ್ಲಿ ಕೊರೆ- ಎಡ ಹಿರೊಕಾಜ್ಹು ಕೂಡಾ ಒಬ್ಬರು. ಅವರ ‘ ಶಾಪ್ ಲಿಫ್ಟರ್ಸ್’ ಜಾಗತಿಕ ಪ್ರಶಸ್ತಿ ಪಡೆದಿತ್ತು.

ಮಾನ್ಸ್ ಟರ್ ಮಿನಾಟೋ‌ ಎಂಬ ಬಾಲಕನ ಕತೆ ಎಂದು ತೋರಿದರೂ ಮೂರು ಸ್ತರದಲ್ಲಿದೆ. ಟೊಕಿಯೋದ ಗಗನ ಚುಂಬಿ ಕಟ್ಟಡವೊಂದಕ್ಕೆ ಬೆಂಕಿ ಬಿದ್ದು ಅದನ್ನು ಆರಿಸಲು ಅಗ್ನಿಶಾಮಕ ದಳ ಆಗಮಿಸುವುದರೊಂದಿಗೆ ಚಿತ್ರ ಅರಂಭವಾಗುತ್ತದೆ.ಈ ಬೆಂಕಿ ಅನಾಹುತ ಮತ್ತು ಆರಿಸುವ ಪ್ರಯತ್ನ ಮೂರು ಬಾರಿ ಒದಗುತ್ತದೆ.

ಮೊದಲ ಬಾರಿ ಮಿನಾಟೋ ತಾಯಿ ವಿಚಿತ್ರವಾಗಿ ಆಡುವುದನ್ನು ನೋಡಿ ಗಾಬರಿ‌ಯಾಗುತ್ತಾಳೆ. ಇದಕ್ಕೆ ಅಧ್ಯಾಪಕನೊಬ್ಬನನ್ನು ಗುರಿ ಮಾಡಿತ್ತಾಳೆ. ಅವಳ ಆಟೋಟೋಪಕ್ಕೆ ಆಧ್ಯಾಪಕ ಕ್ಷಮೆ ಕೇಳುತ್ತಾನೆ. ಆದರೂ ಪರಿಸ್ಥಿತಿ ಹದಗೆಡುತ್ತದೆ.
ಎರಡನೆಯ ಸಲ ಅಧ್ಯಾಪಕ ಹುಡುಗನ ವಿಚಿತ್ರ ವರ್ತನೆಗೆ ಕಾರಣ ಹುಡುಕುತ್ತಾನೆ. ಅವನನ್ನೇ ಅಪರಾಧಿಯನ್ನಾಗಿ ಮಾಡಿದ್ದರಿಂದ ಕೆಲಸ ಕಳೆದುಕೊಳ್ಳುತ್ತಾನೆ. ಪ್ರೇಯಸಿ ದೂರಾಗುತ್ತಾಳೆ. ಆತ್ಮಹತ್ಯೆಗೂ ಪ್ರಯತ್ನಿಸುತ್ತಾನೆ. ತಪ್ಪೇನೂ ಇಲ್ಲದಿದ್ದರೂ ತೊಂದರೆಗೆ ಸಿಲುಕಿಕೊಳ್ಳಲು ಹುಡುಗನು ಪೂರ್ತಿ ಕಾರಣವಲ್ಲ ಎಂದವನಿಗೆ ತೋಚುತ್ತದೆ.
ಮೂರನೆಯದು ಮಿನಾಟೋ ಮತ್ತವನ ಗೆಳೆಯ ಶಾಲೆಯಿಂದಾಚೆ ಸಂತೋಷ ಪಡೆಯಲು ಪ್ರಯತ್ನಿಸುವ ಭಾಗ. ಪ್ರಕೃತಿಯ ನಡುವಲ್ಲಿ ಅವರಿಬ್ಬರು ಸ್ಚಚ್ಚಂದವಾಗಿರಲು ಬಯಸುತ್ತಾರೆ. ಮಿನಾಟೋಗೆ ತಂದೆ ಇಲ್ಲ, ಅವನ ಗೆಳೆಯನಿಗೆ ತಾಯಿ ಇಲ್ಲ. ಗೆಳೆಯನಿಗೆ ಕಟ್ಟು ನಿಟ್ಟಿನ ತಂದೆ, ಮೀನಾಟೋಗೆ ಅತಿಯಾಗಿ ಹಚ್ಚಿಕೊಂಡಿರುವ ತಾಯಿ.

ಬೆಂಕಿ ಹತ್ತಿಕೊಂಡಿದೆ. ಅದನ್ನು ನಂದಿಸಲು ಪ್ರಯತ್ನ ಬೇರೆ ಬೇರೆ ರೀತಿಯಲ್ಲಿ ಅಗುತ್ತಿರುವುದನ್ನು ಚಿತ್ರ ಹೇಳುವಂತಿದೆ. ಮಾತು ಹೇಗೆ ಪ್ರಭಾವ ಬೀರುತ್ತದೆ, ಮಾತಿನಲ್ಲಿ ಜಾಗ್ರತೆ ಇರಬೇಕು ಎನ್ನುವುದನ್ನು ‘ ಹಂದಿಯ ಮಿದುಳು’ ಎನ್ನುವ ಮಾತಿಂದ ಉಂಟಾಗುವ ಪರಿಣಾಮಗಳಲ್ಲಿ ಕಾಣಬಹುದು. ಒಂದು ಸಂದರ್ಭವನ್ನು ಬೇರೆ ಬೇರೆ ರೀತಿ ಅರ್ಥೈಸುವ ಬಗೆಯನ್ನೂ ಚಿತ್ರ ತೋರುತ್ತದೆ. ಹೆಸರಾಂತ ನಿರ್ದೇಶಕನ ಮತ್ತೊಂದು ಗಮನಾರ್ಹ ಸಿನಿಮಾ.

-ಎಂ. ನಾಗರಾಜ ಶೆಟ್ಟಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
5 1 vote
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x