ಇಂದಿನ ಸಮಾಜದಲ್ಲಿ ವಿವೇಕಾನಂದರ ಚಿಂತನೆಗಳ ಪ್ರಸ್ತುತತೆ….: ಹರೀಶ್ ಕುಮಾರ್ ಎಸ್

ಪ್ರಸ್ತುತ ಸಮಾಜಕ್ಕೆ ಅವರ ಹೊನ್ನುಡಿಯನ್ನು ಅರ್ಥೈಸುವ ಅವಶ್ಯಕತೆ ಮತ್ತು ಅನಿವಾರ್ಯತೆ ಬಹಳ ಇದೆ. ಸದಾ ಆತ್ಮವಿಶ್ವಾಸವಿಲ್ಲದ ಅಲೆದಾಡುವ ಮನಸಿಗೆ ಸಾಂತ್ವನ ಇದೆ. ಸಾಧಿಸಲು ಮುಂದಾಗುವವರಿಗೆ ಸ್ಫೂರ್ತಿ ಸೆಲೆಯಿದೆ.

“ಜನರು ಮನಸಿಗೆ ಬಂದ ಹಾಗೆ ಅಂದುಕೊಳ್ಳಲಿ. ನಿಮ್ಮ ನಿರ್ಧಾರದಿಂದ ನೀವು ಕದಲದಿರಿ. ಆಗ ಮಾತ್ರ ಜಗತ್ತು ನಿಮ್ಮನ್ನು ಗೌರವಿಸುವುದು. ಸಮಾಜವು ಈ ಮನುಷ್ಯನನ್ನು ನಂಬು, ಆ ಮನುಷ್ಯನನ್ನು ನಂಬು ಎಂದು ಹೇಳುತ್ತದೆ. ಆದರೆ ನಿಮ್ಮಲ್ಲಿ ನಿಮಗೆ ಶ್ರದ್ಧೆಯಿರಲಿ. ಸಕಲ ಶಕ್ತಿಯೂ ನಿಮ್ಮಲ್ಲಿ ಅಡಗಿದೆ. ಇದನ್ನರಿತು ನಿಮ್ಮ ವ್ಯಕ್ತಿತ್ವದಲ್ಲಿ ಆ ಶಕ್ತಿಯನ್ನು ಪ್ರಕಟಪಡಿಸಿ. ನಾನು ಏನು ಬೇಕಾದರೂ ಸಾಧಿಸಬಲ್ಲೆ ಎನ್ನಿ. ಹಾಗೆಂದು ನೀವು ದೃಢವಾಗಿ ನಂಬಿದರೆ, ಸರ್ಪದ ವಿಷವೂ ಸತ್ವ ಹೀನವಾಗುವುದು”.

ಎಂಥ ಅದ್ಭುತವಾದ ಮಾತನ್ನು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ ನೋಡಿ. ನಾವು ಸಮಾಜದಲ್ಲಿ ಬದುಕುತ್ತಿರುವವರು. ಹಾಗಾಗಿ ಸಮಾಜಕ್ಕೆ ಅಂಜಿ, ಹಲವು ವಿಚಾರಗಳಲ್ಲಿ ರಾಜಿ ಮಾಡಿಕೊಂಡು ಬಿಡುತ್ತೇವೆ . ಈ ಕುರಿತಂತೆ ಅವರು ತಮ್ಮ ಸ್ಫೂರ್ತಿ ನುಡಿಯಿಂದ ನಮ್ಮನ್ನು ಹೀಗೆ ಎಚ್ಚರಿಸುತ್ತಿದ್ದಾರೆ. ಜನರು ಎಲ್ಲದಕ್ಕೂ ಒಂದಲ್ಲ ಒಂದು ಮಾತನಾಡುತ್ತಾರೆ. ನಮ್ಮ ಪ್ರತಿ ಕೆಲಸದಲ್ಲೂ ತಪ್ಪನ್ನು ಹುಡುಕಿ ಹೀಯಾಳಿಸಲು ಮುಂದಾಗುತ್ತಾರೆ. ಈ ಜನರು ಇರುವುದೇ ಹಾಗೆ. ಅವರ ಮನಸಿಗೆ ಬಂದಂತೆ ನಮ್ಮ ಬಗ್ಗೆ ಏನಾದರೂ ಅಂದುಕೊಳ್ಳಲಿ ಬಿಡಿ. ಆದರೆ ನಾವು ಮಾತ್ರ ನಮ್ಮ ನಿರ್ಧಾರದ ಬಗ್ಗೆ ನಿಶ್ಚಲವಾಗಿರಬೇಕು. ನಾವು ಮಾಡುವ ಕೆಲಸಗಳ ಉದ್ದೇಶ ತಿಳಿದಿರಬೇಕು. ನಮ್ಮಲ್ಲಿ ಒಳ್ಳೆಯತನವಿದ್ದು, ನಮ್ಮ ಕೆಲಸದಲ್ಲೂ ನಿಷ್ಠೆ ಇದ್ದಮೇಲೆ, ನಾವು ಅವರಿವರ ಮಾತುಗಳಿಗೆ ಕಿವಿಗೊಡದಂತೆ ಕಾರ್ಯಾನ್ಮುಖರಾಗಬೇಕು. ಆಗ ಹಂಗಿಸುತ್ತಿದ್ದ ಜನರೇ ಗೌರವಿಸುವರು. ಅಂತಹ ಗೌರವ ಪಡೆಯಲು ನಮ್ಮಲ್ಲಿ ಶ್ರದ್ಧೆ ಮತ್ತು ದೃಢ ನಿರ್ಧಾರ ಇರಬೇಕೆಂದು ವಿವೇಕಾನಂದರು ಹೇಳಿದ್ದಾರೆ.

ಇಂತಹ ಶ್ರದ್ಧೆ ನಮ್ಮಲ್ಲಿಯೇ ಅಡಕವಾಗಿದೆ. ನಾವು ಯಾವ ಕೆಲಸವನ್ನೇ ಮಾಡಲಿ, ಅದನ್ನು ನಿಷ್ಠೆ ಮತ್ತು ಏಕಾಗ್ರತೆಯಿಂದ ಮಾಡುವುದೇ ಶ್ರದ್ಧೆ. ಅದನ್ನೇ ಸರಿಯಾದ ರೀತಿಯಲ್ಲಿ ನಾವು ಬಳಸಿಕೊಂಡಾಗ ನಮ್ಮ ಮನಸಿನ ಶಕ್ತಿಯಾಗಿ ಮಾರ್ಪಾಡುವುದು. ಎಲ್ಲ ಶಕ್ತಿಯು ನಮ್ಮಲ್ಲೇ ಇರುವುದು. ಹಾಗಾಗಿ ಮೊದಲು ನಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಬೇಕು. ನಂತರ ನಮ್ಮ ವ್ಯಕ್ತಿತ್ವದಲ್ಲಿ ಆ ಚೈತನ್ಯ ಶಕ್ತಿಯನ್ನು ಹೊರಹಾಕಬೇಕು. ಯಾವಾಗ ನಾವು ನಮ್ಮ ಶಕ್ತಿ ಸಾಮರ್ಥ್ಯದ ಮೇಲೆ ದೃಢವಾಗಿರುವೆವೋ, ಆಗ ಇನ್ನೊಬ್ಬರ ಯಾವ ಮಾತುಗಳಿಗೆ ಎದೆಗುಂದುವುದಿಲ್ಲ. ಆಗ ಜನರು ನಮ್ಮ ಕಡೆಗೆ ಎಸೆಯುವ ಕಲ್ಲುಗಳು ನಮ್ಮೆಂದಿಗೂ ತಲುಪುದೇ ಇಲ್ಲ.

ಮನಸ್ಸಿನ ಶಕ್ತಿಗಿಂತ ಮಿಗಿಲಾದ ಮತ್ತೊಂದು ಶಕ್ತಿ ಇಲ್ಲ. ಪ್ರಪಂಚದಲ್ಲಿ ಶೇಕಡಾ 70 ರಷ್ಟು ಕಾಯಿಲೆಗಳನ್ನು ಮನೋಬಲದಿಂದ ದೂರ ಮಾಡಬಹುದು. ಅಂತಹ ಶಕ್ತಿ ಪ್ರತಿಯೊಂದು ಮನಸ್ಸಿಗೂ ಇರುತ್ತದೆ. ಆದರೆ ಮನಸ್ಸಿನ ಶಕ್ತಿ ಗ್ರಹಿಸಲು ನಮ್ಮಿಂದ ಸರಿಯಾಗಿ ಸಾಧ್ಯವಾಗದ ಕಾರಣ ನಾವು ಹಲವು ನೋವುಗಳಲ್ಲಿ ಮುಳುಗಿದ್ದೇವೆ. ಈ ಪರಿಸ್ಥಿತಿಯಿಂದ ಪಾರಾಗಲು ನಮಗೆ ಇರುವ ದಾರಿಯೇ ಮಾನಸಿಕ ಶಕ್ತಿ. ಅದು ನಮ್ಮಲ್ಲಿ ಜಾಗೃತವಾದರೆ, ನಾವು ಏನು ಬೇಕಾದರೂ ಸಾಧಿಸಬಲ್ಲೆವು. ಈ ಮನಸ್ಸಿನ ದೃಢತೆ ನಮಗಿದ್ದರೆ, ಯಾವ ವಿಷಸರ್ಪದ ವಿಷದಿಂದಲೂ ನಮ್ಮ ದೇಹವನ್ನು ಕೊಲ್ಲಲಾಗುವುದಿಲ್ಲ. ಆ ವಿಷವೇ ನಮ್ಮ ಆತ್ಮ ಬಲದ ಮುಂದೆ ಗೆಲ್ಲಲಾಗದೇ ತನ್ನ ಶಕ್ತಿ ಕಳೆದು ಕೊಳ್ಳುವುದು. ಅಂತಹ ಮಾನಸಿಕ ಶಕ್ತಿ ನಮ್ಮದಾಗಬೇಕು.ಧ್ಯಾನದಿಂದ ಮನಸ್ಸಿನ ಶಕ್ತಿಯನ್ನು ನಮ್ಮದಾಗಿಸಿಕೊಳ್ಳೋಣ. ಈ ಸಮಾಜದಲ್ಲಿನ ಜನರ ಅರ್ಥಹೀನ ಟೀಕೆಗಳಿಗೆ ಹೆದರದೇ ನಾವು ಮುಂದೆ ಸಾಗೋಣ..

ಸಾಮಾಜಿಕ ಮಾಧ್ಯಮದಲ್ಲಿ ಕಳೆದುಹೋಗಿರುವ ಯುವಸಮುದಾಯಕ್ಕೆ ದೇಶ ಅಭಿಮಾನ ಕೂಡ ಇಲ್ಲದಂತಾಗಿದೆ. ಇಂಥ ಸನ್ನಿವೇಶದಲ್ಲಿ ಸ್ವಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಲು ಇಚ್ಛಾಶಕ್ತಿವುಳ್ಳ ಯುವ ಸಮುದಾಯವು ಅವಶ್ಯಕವಾಗಿದೆ. ಅಂತಹ ಪುರುಷ ಸಿಂಹರನ್ನು ಕುರಿತು ಅವರು ಆಡಿರುವ ಮಾತುಗಳು ಇಂದಿಗೂ ಪ್ರಸ್ತುತನೀಯವಾಗಿದೆ. “ಜನರಿಗೆ ವಾಸ್ತವಿಕವಾಗಿರುವುದನ್ನು, ದೇಹಬಲ ಹೊಂದಿರುವುದನ್ನು ಕಲಿಸಬೇಕು. ಅಂತಹ ಒಂದು ಡಜನ್ ಪುರುಷಸಿಂಹರು ಲೋಕವನ್ನು ಜಯಿಸಬಲ್ಲರು,ಹೊರತು ಮಿಲಿಯನ್ ಗಟ್ಟಲೆ ಕುರಿಗಳಲ್ಲ.ಎಷ್ಟೇ ಉನ್ನತವಾದುದಾಗಿರಲಿ, ವೈಯಕ್ತಿಕ ಆದರ್ಶದ ಅನುಕರಣೆಯನ್ನು ಕಲಿಸಬಾರದು.”

ಎಂತಹ ಅದ್ಭುತವಾದ ವಿಚಾರವನ್ನು ಈ ಮಾತಿನಿಂದ ಹೇಳಿದ್ದಾರೆ ನೋಡಿ. ಈ ನುಡಿಯು ಪ್ರಸ್ತುತಕ್ಕೆ ಬಹಳ ಅನ್ವಯಿಸುತ್ತದೆ. ಯಾವ ಬದಲಾವಣೆಯನ್ನು ಆಗದ ಇದ್ದಂತೆ ಇರುವ ಸ್ಥಿತಿಯ ಅನಾವರಣ ಮಾಡುತ್ತಿದೆ. ನಮ್ಮ ಜನರು ಬಹಳ ಭಾವ ಜೀವಿಗಳು. ವಾಸ್ತವಕ್ಕಿಂತ ಕಲ್ಪನೆಯಲ್ಲಿ ಹೆಚ್ಚು ಸಮಯ ಕಳೆಯುವವರು. ಹಾಗಾಗಿ ವಿವೇಕಾನಂದರು ಈ ಮಾತನ್ನು ಹೇಳಿದ್ದಾರೆ. ನಾವು ಮೊದಲು ವಾಸ್ತವಿಕತೆಯನ್ನು ಅರ್ಥ ಮಾಡಿಕೊಳ್ಳುವುದನ್ನು ಕಲಿಯಬೇಕು. ಆಗ ಯಾರು ಭಾವನಾತ್ಮಕವಾಗಿ ನಮ್ಮನ್ನು ಬಂಧಿಸಲಾರರು. ಜೊತೆಗೆ ನಾವು ಆರೋಗ್ಯ ಪೂರ್ಣವಾಗಿ ಶಕ್ತಿಯುತವಾಗಿರಬೇಕು. ಆಗ ಯಾರು ನಮ್ಮ ಮೇಲೆ ಆಕ್ರಮಣ ಮಾಡುವ ಮನಸ್ಸನ್ನೇ ಮಾಡಲಾರರು.ಹಾಗಾಗಿ ಗುಲಾಮರಾಗಿ ಬದುಕುವ ಅವಕಾಶವೇ ಬರುವುದಿಲ್ಲ. ಇಂತಹ ಮನೋಬಲವನ್ನು, ದೇಹ ಸದೃಢತೆಯನ್ನು ಹೊಂದಿರುವ 12 ಜನರೇ ಸಾಕು ಜಗತ್ತನ್ನೇ ಗೆಲ್ಲಬಲ್ಲರವರು. ಅದೇ ಕೆಲಸವನ್ನು ಕೋಟಿಗಟ್ಟಲೇ ಇರುವ ಕುರಿಗಳಿಂದ ಎಂದಿಗೂ ಮಾಡಲು ಸಾಧ್ಯವಾಗುವುದಿಲ್ಲವೆಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಕುರಿಗಳೆಂದರೆ ಒಬ್ಬರನ್ನು ಅನುಸರಿಸಿ ನಡೆಯುವ ಭೂಪರು. ಅಂಥವರಿಂದ ಯಾವ ಮಹತ್ಕಾರ್ಯವು ನಡೆಯದು. ನಾವು ಮಹಾತ್ಮರೆನ್ನುವವರ ಆದರ್ಶವೂ ಎಷ್ಟೇ ಶ್ರೇಷ್ಠವಾಗಿರಲಿ, ಅದನ್ನು ಕುರಿಯಂತೆ ಅನುಸರಿಸುವುದು ಯೋಗ್ಯವಲ್ಲ. ಅನುಕರಣೆ ಮಾಡುವುದನ್ನು ನಾವು ಎಂದಿಗೂ ಕಲಿಸಬಾರದು. ಎಷ್ಟು ನಿಜವಲ್ಲವೇ ಈ ಮಾತು. ಈಗಿನ ಸಮಾಜದಲ್ಲಿ ತಮ್ಮ ಮಕ್ಕಳನ್ನು ಇತರೆ ಮಕ್ಕಳೊಂದಿಗೆ ಹೋಲಿಸಿ ಮಾತನಾಡುತ್ತಾರೆ. ಅವರು ಮಾಡುವ ಕೋರ್ಸ್ ಅನ್ನು ಮಕ್ಕಳಿಗೆ ಇಷ್ಟವಿಲ್ಲದೆ ಇದ್ದರೂ ಕೊಡಿಸುತ್ತಾರೆ. ತನ್ನ ಸ್ನೇಹಿತರೊಂದಿಗೆ ಹೋಲಿಕೆ, ಅನುಕರಣೆ ಪ್ರಾರಂಭಿಸಿ ಸದಾ ಅಸೂಹೆ, ಚಿಂತೆಯಲ್ಲಿ ಇರುವಂತೆ ನಮ್ಮನ್ನೇ ನಾವು ಮಾಡಿಕೊಳ್ಳುತ್ತವೆ. ಹಾಗೆ ಆಗಬಾರದೆಂದರೆ ಅನುಕರಣೆ ಮಾಡುವುದನ್ನು ಮತ್ತು ಹೋಲಿಸುವುದನ್ನು ಬಿಡಬೇಕು. ತನ್ನದೇ ಆದ ಹಾದಿಯಲ್ಲಿ ಸಾಗಲು ಅವಕಾಶ ನೀಡಬೇಕು.. ಆಗಲೇ ನೈಜ ವ್ಯಕ್ತಿತ್ವ ವಿಕಸನವಾಗುವುದು… ಹೊಸ ಹಾದಿಯಲ್ಲಿ ನಡೆದವರೇ ಇತರರಿಗೆ ಸ್ಫೂರ್ತಿಯಾಗಲು ಸಾಧ್ಯವಾಗುವುದು.

-ಹರೀಶ್ ಕುಮಾರ್ ಎಸ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x