ಕೊನೆಯ ದಿನದ ಚಿತ್ರಗಳು
ಎಂಡ್ ಲೆಸ್ ಬಾರ್ಡರ್ಸ್
ಈ ಚಿತ್ರದಲ್ಲಿ ಗಾಯಕನೊಬ್ಬ ಸುಶ್ರಾವ್ಯವಾದ ಹಾಡನ್ನು ಹಾಡುತ್ತಾರೆ. ‘ವಿವೇಕ ಇದ್ದವರೆಲ್ಲ ಒಳ್ಳೆಯವರಲ್ಲ. ಮತ್ತೊಬ್ಬರ ಸುಖ ದುಃಖಗಳನ್ನು ಹಚ್ಚಿಕೊಳ್ಳಬಾರದು. ಹಚ್ಚಿಕೊಂಡರೆ ಕೊನೆ ತನಕ ಇರಬೇಕು’ ಇದು ಹಾಡಿನ ಅರ್ಥ.
ಚಿತ್ರದ ಪ್ರಮುಖ ವ್ಯಕ್ತಿ ಅಹ್ಮದ್ ಪರಿಸ್ಥಿಯೂ ಹೀಗೆ ಇದೆ. ದೇಶಭ್ರಷ್ಟನಾಗಿರುವ ಅಹ್ಮದ್ ಅಫ್ಘಾನಿಸ್ತಾನದ ಸರಹದ್ದಿನ ಪುಟ್ಟ ಗ್ರಾಮದಲ್ಲಿರುತ್ತಾನೆ. ತಾಲಿಬಾನ್ ಆಕ್ರಮಣವನ್ನು ಒಪ್ಪದ ಅಲ್ಲಿಯ ಬಲೂಚಿಗಳು ಹಜಾರಾ ನಿರಾಶ್ರಿತರು ಇರಾನ್ ಗೆ ಪಲಾಯನ ಮಾಡಲು ಸಹಕರಿಸುತ್ತಾರೆ. ಇವರ ಜೊತೆ ಉತ್ತಮ ಸಂಬಂಧ ಬೆಳೆಸಿ, ಮಕ್ಕಳಿಗೆ ಪಾಠ ಹೇಳಿಕೊಡುವ ಅಹ್ಮದ್ ಗೆ ಅವರ ಕಂದಾಚಾರ, ಕ್ರೂರ ಪದ್ಧತಿಗಳ ಪರಿಚಯವಾಗುತ್ತದೆ.
ಹದಿನಾರರ ಹುಡುಗಿಯೊಬ್ಬಳನ್ನು ಊರ ಮುಖ್ಯಸ್ಥನಾದ ವಯೋವೃದ್ಧ ಮದುವೆಯಾಗಿರುತ್ತಾನೆ. ಅವಳು ಗೆಳೆಯನೊಂದಿಗೆ ಓಡಿ ಹೋಗುವಾಗ ಸಿಕ್ಕಿ ಬೀಳುತ್ತಾಳೆ. ಅವಳನ್ನೂ, ಅವಳ ಗೆಳೆಯನನ್ನೂ ಗಡಿ ದಾಟಿಸುವ ಕೆಲಸವನ್ನು ಅಹ್ಮದ್ ಹೊತ್ತುಕೊಳ್ಳುತ್ತಾನೆ. ಅಹ್ಮದನ ಹೆಂಡತಿ ನಿಲೋಫರ್ ಜೈಲಲ್ಲಿದ್ದವಳು ಅವಧಿ ಮೇರೆಗೆ ಬಿಡುಗಡೆಯಾಗುತ್ತಾಳೆ. ಅವಳನ್ನು ಭೇಟಿಯಾಗುವ ಅಹ್ಮದ್ ಎಲ್ಲರನ್ನೂ ಗಡಿ ದಾಟಿಸುವ ಹಂಚಿಕೆ ಮಾಡುತ್ತಾನೆ. ಆದರೆ ಅಹ್ಮದ್ ಮತ್ತು ನಿಲೋಫರ್ ನಡುವೆಯೂ ಗಡಿ ಇದೆ.
ಜೈಲಿಗೆ ಹೋಗಲು ಅಹ್ಮದ್ ಕಾರಣವಾಗಿರುವನೆಂದು ಅವಳು ಪಲಾಯನ ಮಾಡಲು ಹಿಂದೇಟು ಹಾಕುತ್ತಾಳೆ.
ಅಪಘಾನಿಸ್ತಾನದ ಪರ್ವತ, ಬರಡು ನೆಲ, ಪಲಾಯನ ಮಾಡುವ ದಾರಿಯ ಹಳ್ಳಕೊಳ್ಳಗಳು ಸುಂದರವಾಗಿ ಚಿತ್ರಿತವಾಗಿದೆ. ಹೇಗಾದರೂ ಒಳ್ಳೆಯ ಬದುಕನ್ನು ಕಾಣಬೇಕೆಂಬ ತವಕದಲ್ಲಿ ಪ್ರಾಣ ಭಯ ಕಳೆದುಕೊಂಡವರನ್ನು, ಸಂಕಷ್ಟದ ಬದುಕಿನಲ್ಲೂ ಸಂಪ್ರದಾಯ ಬಿಡದವರನ್ನು ಚಿತ್ರ ಮುಖಾಮುಖಿಯಾಗಿಸುತ್ತದೆ.
ಇರಾನಿನ ಅಬ್ಬಾಸ್ ಅಮಿನಿ ಸಿನಿಮಾದಲ್ಲಿ ವರ್ತಮಾನದ ಅಫ್ಘಾನಿಸ್ತಾನದ ಗಡಿಯಲ್ಲಿನ ವಾಸ್ತವವನ್ನು ಚಿತ್ರಿಸುವ ಪ್ರಯತ್ನವಿದೆ.
ಫೋರ್ ಲಿಟಲ್ ಅಡಲ್ಟ್ಸ್
ವೈವಾಹಿಕ ಜೀವನದ ರೂಢಿಗತ ಮೌಲ್ಯಗಳನ್ನು ಪ್ರಶ್ನಿಸುವ ಚಿತ್ರ. ಹೆಣ್ಣಿಗೊಂದು ಗಂಡು ಎನ್ನುವ ವ್ಯವಸಾಯ ಕಾಲಾನಂತರದ ಸಾಮಾಜಿಕ ವ್ಯವಸ್ಥೆ ಈಗಲೂ ಪ್ರಸ್ತುತವೇ ಎನ್ನುವುದನ್ನು ಚಿತ್ರ ಶೋಧಿಸುತ್ತದೆ.
ಚರ್ಚಿನ ಪಾದ್ರಿ ಮತಿಯಾಸ್ ನೊಂದಿಗೆ ಜೂಲಿಯಾ ಹಲವು ವರ್ಷಗಳಿಂದ ಸುಖೀ ದಾಂಪತ್ಯ ನಡೆಸುತ್ತಿರುತ್ತಾಳೆ. ಮತಿಯಾಸ್ ಮತ್ತೊಂದು ಹೆಣ್ಣಿನ ಜತೆ ಸಂಬಂಧವಿದೆ ಎಂದು ತಿಳಿದಾಗ ಆಕೆ ಕುಸಿದು ಹೋಗುತ್ತಾಳೆ.ತಮ್ಮ ದಾಂಪತ್ಯವನ್ನು ಉಳಿಸಲು ಸಹಬಾಳ್ವೆಗೆ ಒಪ್ಪಿಕೊಳ್ಳುತ್ತಾಳೆ. ಕ್ರಮೇಣ ಅವಳಿಗೂ ಒಬ್ಬ ಗೆಳೆಯ ಸಿಗುತ್ತಾನೆ. ಮುಚ್ಚುಮರೆ ಇಲ್ಲದೆ ಸಂಬಂಧಗಳನ್ನು ಒಪ್ಪಿಕೊಂಡರೂ ಮತಿಯಾಸ್ ಗೆ ಗೆಳತಿಯಲ್ಲಿ ಮಗುವಾದಾಗ ಗೊಂದಲ ಉಂಟಾಗುತ್ತದೆ. ಜೂಲಿಯಾ ಗೆಳೆಯನೂ ಸಂಬಂಧದ ನೈತಿಕತೆಯನ್ನು ಪ್ರಶ್ನಿಸುತ್ತಾನೆ. ಪಾರ್ಲಿಮೆಂಟ್ ಸದಸ್ಯೆ ಜೂಲಿಯಾ ತಮ್ಮೆಲ್ಲರ ಸಹಬಾಳ್ವೆಯ ಬಗ್ಗೆ ಪರಿಚಿತರಲ್ಲಿ ನೇರವಾಗಿ ಹೇಳಿಕೊಳ್ಳುವ ಪರಿಸ್ಥಿತಿ ಉದ್ಭವವಾಗುತ್ತದೆ.
ಚಿತ್ರ ಲತೀರ್ಮಾನಕ್ಕೆ ಅವಸರಿಸದೆ ಹೊಸ ಬಗೆಯ ಸಂಬಂಧಗಳ ಸಾಧ್ಯತೆಯನ್ನು ತೋರುವ ಪ್ರಯತ್ನ ಮಾಡುತ್ತದೆ. ಬೆಚ್ಚಿಸುವ ವಿಷಯವನ್ನೊಳಗೊಂಡ ಈ ಸಿನಿಮಾದ ನಿರ್ದೇಶಕಿ ಸೆಲ್ಮಾ ವಿಲ್ಯುಹುನೆನ್.
ಬೀಫೆಸ್ 15 – ನೋಡಿದ್ದು, ಕೇಳಿದ್ದು ಮತ್ತು ಅರಿತಿದ್ದು
ಏಳು ದಿನಗಳ ಬೆಂಗಳೂರು ಚಲನಚಿತ್ರೋತ್ಸವಕ್ಕೆ ತೆರೆ ಬಿತ್ತು. ಜೊತೆಗಿರುತ್ತಿದ್ದ ಗೆಳೆಯರು, ಅಲ್ಲಲ್ಲಿ ಸಿಗುತ್ತಿದ್ದ ಪರಿಚಿತರು, ಸಿನಿಮಾ ನೋಡುತ್ತಾ, ಅಡ್ಡಾಡುತ್ತಾ ಗುರುತಾದವರು ಮತ್ತು ಮುಖ್ಯವಾಗಿ ಬೆಳ್ಳಿಪರದೆಯೂ ದೃಷ್ಟಿ ದೂರವಾಗಿ ಖಾಲಿ, ಖಾಲಿ ಅನ್ನಿಸುತ್ತಿದೆ. ಮುಂಬಯಿ, ಗೋವಾ, ಕೇರಳಗಳಲ್ಲಿ ನಡೆಯುವ ಚಿತ್ರೋತ್ಸವಗಳಿಗಿಂತ ನಮ್ಮ ನೆಲದಲ್ಲಿ ನಡೆಯುವ ಚಲನಚಿತ್ರೋತ್ಸವ ನೀಡುವ ಮುದವೇ ಬೇರೆ. ಇತ್ತೀಚಿಗೆ ಮುಂಬಯಿ ಮತ್ತು ಗೋವಾದ ಫಿಲ್ಮ್ ಫೆಸ್ಟಿವಲ್ಸ್ ಗಳಿಗೆ ಮೊದಲಿನ ಖದರಿಲ್ಲ ಎನ್ನಲಾಗುತ್ತದೆ.
ಕಳೆದ ಬಾರಿ ಬೆಂಗಳೂರು ಚಿತ್ರೋತ್ಸವ ನೋಡಿದವರಿಗೆ ಈ ಸಲದ ಚಿತ್ರೋತ್ಸವ ಉತ್ತಮವೆಂದೇ ಅನ್ನಿಸುತ್ತದೆ. ಕಲಾತ್ಮಕ ನಿರ್ದೇಶಕರನ್ನು ಬಿಟ್ಟರೆ ನಿಯೋಜಕ ತಂಡದಲ್ಲಿ ಹೆಚ್ಚು ಹಳಬರೇ ಇದ್ದಾರೆ. ರಾಜಕೀಯ ಹಸ್ತಕ್ಷೇಪ ಇಲ್ಲದಿದ್ದಾಗ ಮತ್ತು ಸರಕಾರ ಡೆಮೋಕ್ರಟಿಕ್ ಆದಾಗ ಒಳ್ಳೆಯ ಕೆಲಸಗಳಾಗುತ್ತವೆ ಎನ್ನುವುದಕ್ಕೆ ಇದು ಸಾಕ್ಷಿ ಒದಗಿಸುತ್ತದೆ. ಪ್ರಾಪಗಾಂಡ ಫಿಲ್ಮ್ ಗಳ ಹಾವಳಿ ಇಲ್ಲದಿದ್ದರೂ ಹಳೆ ಚಾಳಿ ಸುಲಭದಲ್ಲಿ ಬಿಟ್ಟು ಹೋಗದು ಎನ್ನುವುದಕ್ಕೆ ಉದಾಹರಣೆಯಂತೆ ‘ಗೋಲ್ಡ’ ಎನ್ನುವ ವ್ಯಕ್ತಿಯ ಬಯೋಪಿಕ್ ಪ್ರದರ್ಶಿತವಾಗಿದೆ.
ಚಿತ್ರೋತ್ಸವದಲ್ಲಿ ಈ ಬಾರಿ ಗದ್ದಲವಿರಲಿಲ್ಲ. ಪಾಸ್ ಒದಗಿಸುವುದರಲ್ಲಿ, ಮಾಹಿತಿ ನೀಡುವುದರಲ್ಲಿ, ಸಿನಿಮಾ ವ್ಯವಸ್ಥೆಯಲ್ಲಿ ಗೊಂದಲವಿಲ್ಲದೆ ಎಲ್ಲವೂ ಸುಸೂತ್ರವಾಗಿ ನಡೆಯಿತು.ಬೌನ್ಸರ್ ಗಳಂತ ವಾಲಂಟಿಯರ್ಸ್ ಕಾಟವಿಲ್ಲದೆ ಅಗತ್ಯಕ್ಕೆ ತಕ್ಕಷ್ಟು ಮಂದಿ ಇದ್ದು, ಅವರೆಲ್ಲರೂ ಸೌಜನ್ಯದಿಂದ ವರ್ತಿಸುತ್ತಿದ್ದರು.
ಚಿತ್ರೋತ್ಸವದಲ್ಲಿ ಎಲ್ಲಾ ಸಿನಿಮಾಗಳು ಚೆನ್ನಾಗಿರಲು ಸಾಧ್ಯವಿಲ್ಲ. ಖ್ಯಾತ ನಿರ್ದೇಶಕರ ಚಿತ್ರಗಳೂ ಬೇಸರ ಹುಟ್ಟಿಸಬಹುದು. ಹಾಗೆಯೇ ಇಷ್ಟ ಪಟ್ಟ ಚಿತ್ರಗಳೆಲ್ಲಾ ನೋಡಲಾಗುವುದಿಲ್ಲ. ನೋಡಿದ ಒಟ್ಟಾರೆ ಚಿತ್ರಗಳಲ್ಲಿ ಹೆಚ್ಚು ಚಿತ್ರಗಳು ಸಮಾಧಾನ ನೀಡಿದರೆ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದಕ್ಕೆ ಸಮಾಧಾನ. ಈ ನಿಟ್ಟಿನಲ್ಲಿ ನಾನು ಮತ್ತು ಗೆಳೆಯರು ಲಕ್ಕಿ ಎಂದೇ ಹೇಳಬೇಕು.
ಈ ಸಲ ಪ್ರದರ್ಶಿತವಾದ ಚಿತ್ರಗಳಲ್ಲಿ ಉತ್ತಮ ಚಿತ್ರಗಳೆಂದು ಪರಿಗಣಿತವಾದ ಫಾಲನ್ ಲೀವ್ಸ್, ದಿ ಡಿಲಿಕ್ವೆಂಟ್ಸ್, ಅನಾಟಮಿ ಆಫ್ ಎ ಫಾಲ್, ದಿ ಓಲ್ಡ್ ಓಕ್ ನಮ್ಮಲ್ಲಿ ಹಲವರು ನೋಡಿದ್ದೆವು. ಇದರಿಂದಾಗಿ ಅಯ್ಕೆ ಮಾಡಲು ಸುಲಭವಾಗಿತ್ತು. ಆದರೆ ಕೆಲವು ಉತ್ತಮವಲ್ಲದ ಚಿತ್ರಗಳನ್ನು ನೋಡುವ ಅನಿವಾರ್ಯತೆಯೂ ಒದಗಿತು. ನಾವು ನೋಡಿದ ಚಿತ್ರಗಳಲ್ಲಿ ‘ ದಿ ಮದರ್ ಆಫ್ ಆಲ್ ಲೈಸ್’ ‘ ಮಾನ್ಸ್ ಟರ್’ ಮತ್ತು ‘ ದಿ ಜೋನ್ ಆಫ್ ಇಂಟ್ರಸ್ಟ್’ ಚಿತ್ರಗಳು ಸುಲಭ ಗ್ರಾಹ್ಯವಲ್ಲ. ಇವು ಮೂರೂ ಬೇರೆ ಕಾರಣಗಳಿಗಾಗಿ ಇಷ್ಟವಾಗುತ್ತವೆ.
ಈ ಸಲದ ಚಿತ್ರಗಳಲ್ಲಿ ವಲಸೆ, ನಿರಾಶ್ರಿತರ ಸಮಸ್ಯೆಗಳ ಚಿತ್ರಗಳೇ ಹೆಚ್ಚು. ನಿರುದ್ಯೋಗ, ಪರಿಸರ ನಾಶಗಳ ಕುರಿತಾದ ಚಿತ್ರಗಳು ನಂತರದ ಸ್ಥಾನ ಪಡೆದರೆ ಕೆಲವು ವೈಯಕ್ತಿಕ, ಕೌಟುಂಬಿಕ ಸಮಸ್ಯೆಗಳ ಸಿನಿಮಾಗಳೂ ಇದ್ದವು. ಯಾವಾಗಲೂ ಯುದ್ಧ ಸಂಬಂಧಿ ಚಿತ್ರಗಳು ಮೇಲುಗೈ ಪಡೆಯುತ್ತಿದ್ದವು. ಈ ಬಾರಿ ಅಂತಹ ಸಿನಿಮಾಗಳು ನಮ್ಮ ಗಮನಕ್ಕೆ ಬರಲಿಲ್ಲ.
‘ ಗುಡ್ ಬೈ ಜೂಲಿಯಾ’ ‘ ದಿ ಟೀಚರ್’ ‘ ಟೆರೆಸ್ಟ್ರಿಯಲ್ ವರ್ಸಸ್’ ‘ ಅಮಲ್’ ‘ ಫರ್ಫೆಕ್ಟ್ ಡೇಸ್’ ‘ ಗ್ರೀನ್ ಬಾರ್ಡರ್’ ‘ ಎಂಡ್ ಲೆಸ್ ಬಾರ್ಡರ್ಸ್’ ‘ ಟೆಂಪೊರರೀಸ್’ ‘ ಡ್ಯಾಮೇಜ್ ‘ ‘20000 ಸ್ಪೀಸೀಸ್ ಆಫ್ ಬೀಸ್’ ‘ ಬ್ಲಾಗಾಸ್ ಲೆಸನ್ಸ್’ ಸಿನಿಮಾಗಳು ಸಿನಿಪ್ರಿಯರನ್ನು ಕಾಡುವ ಗುಣವುಳ್ಳವು. ‘ ದಿ ಮಾಂಕ್ ಎಂಡ್ ದಿ ಗನ್’ ‘ ಪಾರಡೈಸ್’ ನಕ್ಕು ಹಗುರಾಗುವ ಸಿನಿಮಾಗಳು.
‘ ಶಿವಮ್ಮ’ ಮತ್ತು ‘ ಮಿಥ್ಯ’ ಎರಡೂ ಕನ್ನಡ ಸಿನಿಮಾಗಳು ಇಷ್ಟವಾದವು. ‘ ಶಿವಮ್ಮ’ಳ ಕೊಪ್ಪಳದ ಕನ್ನಡ, ಛಲ ಇಷ್ಟವಾದರೆ, ‘ಮಿಥ್ಯ’ ದಲ್ಲಿ ಬಾಲಕನ ಮಾನಸಿಕ ತುಮುಲವನ್ನು ಕಟ್ಟಿಕೊಟ್ಟ ರೀತಿ ಇಷ್ಟವಾಯಿತು. ಯುವ ಪ್ರತಿಭಾವಂತ ನಿರ್ದೇಶಕರು ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವುದು ಮೆಚ್ಚಬೇಕಾದ ವಿಷಯ.
ಕನ್ನಡದಲ್ಲಿ, ಸಿನಿಮಾದಲ್ಲಿ ಅಸಕ್ತಿ ಇರುವ ಯುವ ಪ್ರತಿಭೆಗಳಿದ್ದರೂ ಅವರಿಗೆ ಪ್ರೋತ್ಸಾಹದ ಕೊರತೆ ಇದೆ. ಪುನೀತ್ ರಾಜಕುಮಾರ್ ಆಸ್ಥೆಯಿಂದ ಹೊಸಬರನ್ನು ಬೆಳಕಿಗೆ ತರುತ್ತಿದ್ದರು. ‘ಶಿವಮ್ಮ’ ‘ ಮಿಥ್ಯ’ ಸಿನಿಮಾಗಳಿಗೆ ಬೆನ್ನೆಲುಬಾದವರು ರಕ್ಷಿತ್ ಮತ್ತು ರಿಷಬ್ ಶೆಟ್ಟಿ. ಇವರ ನಿರ್ಮಾಣ ಸಂಸ್ಥೆಗಳು ಹೊಸಬರಿಗೆ ಅವಕಾಶ ಮಾಡಿ ಕೊಟ್ಟಿದೆ. ನಮ್ಮಲ್ಲಿ ಕೋಟಿ, ಕೋಟಿಗಳಲ್ಲಿ ವ್ಯವಹರಿಸುವ ನಿರ್ಮಾಪಕರು, ನಟರು ಹಲವರಿದ್ದಾರೆ. ಅವರು ಮನಸ್ಸು ಮಾಡಿದರೆ ತಮಿಳು, ಮಲಯಾಳಂಗಳಂತೆ ನಮ್ಮಲ್ಲೂ ಉತ್ತಮ ಚಿತ್ರಗಳು ಬರಬಹುದು. ಅವರು ಕೈ ಬಿಚ್ಚಬೇಕಷ್ಟೇ.
ಕೇಸರಿ ಹರವುರವರ ‘ ಕಿಸಾನ್ ಸತ್ಯಾಗ್ರಹ’ ದ ಪ್ರದರ್ಶನಕ್ಕೆ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆ ತಡೆ ಒಡ್ಡಿದ್ದರಿಂದ ಅದು ಪ್ರದರ್ಶನಗೊಳ್ಳಲಿಲ್ಲ. ಅದು ಚಿತ್ರೋತ್ಸವದಲ್ಲಿ ತೆರೆ ಕಂಡಿದ್ದರೆ ಯಾವ ಸರಕಾರ ಬೀಳುತ್ತಿತ್ತೋ? ಕೇಸರಿ ಹರವು ಇದರಿಂದ ವಿಚಲಿತರಾಗದೆ ಇನ್ನಷ್ಟು ಹುರುಪು ತುಂಬಿಕೊಂಡಿದ್ದು ಶ್ಲಾಘನೀಯ.
‘ಬೆಂಗಳೂರಲ್ಲಿ ಜಗತ್ತು’ ಇದು ಬಿಫೆಸ್ ಧ್ಯೇಯ ವಾಕ್ಯ. ಜಗತ್ತಿನ ಕೆಲ ದೇಶಗಳ ಆಗುಹೋಗುಗಳ ಕಿರು ನೋಟ ಚಿತ್ರಗಳ ಮುಖಾಂತರ ನಮಗೆ ಲಭ್ಯವಾಗುತ್ತದೆ. ನಿರುದ್ಯೋಗ, ವಲಸೆ ಜಾಗತಿಕ ಸಮಸ್ಯೆ ಯಾಗಿದೆ. ಸಿನಿಮಾಗಳು ಜನರ ಪ್ರತಿರೋಧವನ್ನು ದಾಖಲಿಸುತ್ತಿವೆ. ಸರ್ವಾಧಿಕಾರ, ಫಂಡಮೆಂಟಲಿಸ್ಟ್ ಸರಕಾರಗಳಿರುವ ದೇಶಗಳಿಂದಲೂ ವ್ಯವಸ್ಥೆ, ನಂಬಿಕೆ, ಧಾರ್ಮಿಕ ಆಚರಣೆಗಳನ್ನು ಪ್ರಶ್ನಿಸುವ ಚಿತ್ರಗಳು ಬರುತ್ತಿವೆ. ಇದನ್ನು ಗಮನಿಸಿದರೆ ನಮಲ್ಲಿ ಅಂತಾ ಚಿತ್ರಗಳು ಕಾಣುತ್ತಿಲ್ಲ. ಕಂದಾಚಾರಗಳನ್ನು ಪಾಲಿಸುವುದರಲ್ಲಿ ನಾವು ಅವರಿಗಿಂತ ಮುಂದಿದ್ದೇವೆಯೋ, ಪ್ರಶ್ನಿಸುವುದನ್ನು ಮರೆತು ಬಿಟ್ಟಿದ್ದೇವೆಯೋ ಚಲನಚಿತ್ರೋತ್ಸವ ಮುಗಿದ ಬಳಿಕವೂ ಪ್ರಶ್ನೆಗಳು ಕಾಡುತ್ತಿವೆ….
–ಎಂ. ನಾಗರಾಜ ಶೆಟ್ಟಿ