ವ್ಯಾಪಾರ, ಮನೆ ಮಕ್ಕಳು …ಇಷ್ಟೇ ಎನ್ನುವಂತಿದ್ದ ಕಾಲವದು. ಬೆಂಗಾಡಿನಂತಿದ್ದ ನಮ್ಮೂರ ಪರಿಸರವೂ ಸಹಜವಾಗಿ ಹಸಿರು, ಜಲಪಾತ, ಬೆಟ್ಟಗುಡ್ಡ, ದಟ್ಟಕಾಡು, ನೀರಿನ ಹರಿವು ಇವುಗಳೆಡೆ ಒಂದು ಆಕರ್ಷಣೆ ಹುಟ್ಟಿಸುತ್ತಿದ್ದವು.
ಶಾಲಾ ಕಾಲೇಜು ಸಮಯದಲ್ಲಿ ಪ್ರವಾಸಕ್ಕೆಂದು ಹೋದಾಗ ಇಳಿದ ಜೋಗದ ಗುಂಡಿಯೂ ಏರಿದ ಮುಳ್ಳಯ್ಯನಗಿರಿ ಬೆಟ್ಟವೇ ನಮ್ಮ ಪಾಲಿನ ಕೌತುಕಗಳು ಮತ್ತು ದಾರಿಯಲ್ಲಿ ಬರುವ ದಟ್ಟಕಾಡು, ಭೋರ್ಗರೆವ ಜಲಪಾತ, ಮಳೆಗಳೇ ಚೇತೊಹಾರಿ ಚಿತ್ರಗಳು.
ವಿಪರೀತ ಆಸ್ಥೆಯಿಂದ ಗಿಡ ನೆಟ್ಟು , ನೀರುಣಿಸಿ, ಟಿಸಿಲೊಡೆದ ಚಿಗುರು ನೋಡಿ ” ನಾ ನೆಟ್ಟ ಗಿಡ” ವೆಂದು ಸಂಭ್ರಮಿಸಿದ್ದು ನೆನಪೇ ಇಲ್ಲ. ಬುದ್ಧಿ ಭೇಟಿಯಾಗಿ ಆಸಕ್ತಿ ತಿದಿಯೊತ್ತುವ ಹೊತ್ತಿಗೆ ಪರ್ಯಾಯವಾಗಿ ನನ್ನದೇ ಸಹಪಾಠಿಗಳೂ ಕೂಡ ಹತ್ತಿರದ ಮಾಲವಿ, ಅಂಕಸಮುದ್ರ, ಹೊಳೆ ಹಿನ್ನೀರಿನಲ್ಲಿ ಹಾರಾಡುತ್ತಿದ್ದ ಹೊರ ಮತ್ತು ದೇಸಿ ಪಕ್ಷಿಗಳ ಆಧ್ಯಯನ , ರಕ್ಷಣೆ, ಅವುಗಳಿಗೆ ಅನುಕೂಲಕರ ವಾತಾವರಣದ ನಿರ್ಮಾಣ, ಇಂತಹ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಸಮಾನ ಮನಸ್ಕರು ಸೇರಿ ” ಗ್ರೀನ್ ಹೆಚ್. ಬಿ.ಹೆಚ್.” ಗುಂಪನ್ನು ರಚಿಸಿ ಪರಿಸರ ಸಂರಕ್ಷಣೆ, ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದಕ್ಕೆ ಹೆಮ್ಮೆಯಿದೆ.
ವೈಯುಕ್ತಿಕವಾಗಿ ಹೇಳುವುದಾದರೆ ನಿತ್ಯ ಬದುಕಿನ. ಜಂಜಡಗಳಿಂದ ಹೊರಗುಳಿದು ಪಕ್ಷಿ ವೀಕ್ಷಣೆ, ಅವುಗಳ ನಡೆ, ಆಹಾರ ಅರಸುವಿಕೆ, ಮರಿಗಳ ರಕ್ಷಣೆ ಎಲ್ಲವೂ ಕೌತುಕ ಮತ್ತು ಆಹ್ಲಾದಕರ… ಹೊರದೇಶ ಬಿಡಿ, ಹೊರ ಖಂಡಗಳಿಂದ ನಮ್ಮಲ್ಲಿಗೆ ಬರುವ ಹಕ್ಕಿಗಳ ನಡೆಯೇ ವಿಚಿತ್ರವೆನಿಸುತ್ತಿತ್ತು. ಮಾತು ಬಾರದ (ಕ್ಷಮಿಸಿ) ಲಿಪಿ ಇಲ್ಲದ ಭಾಷೆಯೇ ಅಲ್ಲದ ಭಾಷೆಯಲ್ಲಿ ಅವುಗಳ ಮಾತುಗಾರಿಕೆ, ಸನ್ನೆ, ಆದೇಶ, ಸಂದೇಶ ಎಲ್ಲವೂ ರೋಚಕ…
ಪರಿಸರ, ಪ್ರಾಣಿ, ಪಕ್ಷಿಗಳ ಬಗ್ಗೆ ಎಷ್ಟೊಂದು ಪುಸ್ತಕಗಳು, ಅದೆಷ್ಟು ವಿಡಿಯೋಗಳು ಯ್ಯೂಟೂಬ್ ಗಳಲ್ಲಿ ತುಂಬಿ ಹರಿಯುತ್ತಿರುವ ಮಾಹಿತಿಗಳನ್ನು ಇಟ್ಟುಕೊಂಡೂ ಕೂಡ ಹೊಸ ವಿಷಯ ಕೇಳಿದಾಗ ಹುಬ್ಬೇರಿಸುತ್ತೇನೆ. ಆದರೆ 1980- 90ರ ದಶಕದಲ್ಲಿ ಇಂಟರ್ನೆಟ್ ಇಲ್ಲದ, ಮೊಬೈಲ್ ಇಲ್ಲದ ಕಾಲದಲ್ಲಿ ಅದೆಲ್ಲಿಂದ ಪಕ್ಷಿಗಳ ಬಗ್ಗೆ ವಿಷಯ ಸಂಗ್ರಹ ಆದೂ ಅತ್ಯಂತ ನಿಖರವಾಗಿ ಹೆಕ್ಕಿದರೋ ಡಾ. ಸಲೀಂ ಅಲಿ ( birdman of India) . ಆವರಿಗೊಂದು ಸಲಾಂ..
ಇತ್ತೀಚಿಗೆ ಹೊಳೆದಂಡೆಗೆ “ರಾಜಹಂಸ” ಪಕ್ಷಿಗಳು ಇಳಿದಿವೆ ಎಂಬ ಸುದ್ಧಿ ಕೇಳಿ ಮರುದಿನ ನಸುಕಿನಲ್ಲಿ ಮಕ್ಕಳೊಂದಿಗೆ ಹೊರಟೆವು.. ಆ ದಂಡೆಗೆ ಹೋಗಲು ಮೀನುಗಾರರ ಬೋಟ್ ಏರಿದೆವು. ಉದಯಿಸುವ ಸೂರ್ಯ, ಮೀನುಗಾರರ ತೆಪ್ಪಗಳು, ತಿಳಿಯಾಗಿ ಹರಿಯುವ ಹೊಳೆ… ಅಷ್ಟು ಸಾಕಲ್ಲವೇ?!!! ನಮ್ಮ ಕ್ಯಾಮೆರಾ ಕಣ್ಣು ಹೊಡೆಯಲು ಶುರು ಮಾಡಿದವು… ಮಕ್ಕಳಿಗೂ “ಫೋಟೋಗ್ರಫಿ ” ಆಸಕ್ತಿ ಬೆಳೆಸಲು ಅವರ ಕೈಗೇ ಕ್ಯಾಮೆರಾ ಕೊಟ್ಟು ತೆಗೆಯಲು ಹಚ್ಚಿದೆವು.. ರಿವರ್ ಟರ್ನ್, ವಿಸ್ಕರ್ ಟರ್ನ್, ಗಲ್ ಗಳ ಒಡನಾಟ ಶುರುವಾಗಿತ್ತು..
ಆ ಕಡೆ ದಡದಲ್ಲಿ ರಾಜಹಂಸಗಳ ಗುಂಪುಗಳಿದ್ದ ಬಗ್ಗೆ ಮಾಹಿತಿ ಇದ್ದದ್ದಷ್ಟೇ. ಆದರೆ ಅವು ನೋಡಲು ಸಿಗುತ್ತವೋ ಇಲ್ಲವೇ ಹಾರಿ ಹೋಗಿವೆಯೋ ಎನ್ನುವ ಬಗ್ಗೆ ಸುಳಿವಿರಲಿಲ್ಲ.. ಅವೇನು ನಮ್ಮ ಬೀಗರೇ?!! ಹೊರಡುವ ಮುನ್ನ ಹೇಳಿ ಹೋಗಲು….
ಅದೃಷ್ಟಕ್ಕೆ ಗುಂಪು ಗುಂಪಾಗಿದ್ದ ರಾಜಹಂಸಗಳು ಗೋಚರಿಸಿದವು. ಅವುಗಳಿಗೆ ತೊಂದರೆ ಆಗದಂತೆ ಬೋಟ್ ನಿಲ್ಲಿಸಿ ಹತ್ತಿರ ಹೋದೆವು. ಅಬ್ಬಾ!!!! ಸಾವಿರ ಸಾವಿರ ಸಂಖ್ಯೆಯಲ್ಲಿ ರಾಜಹಂಸ ಪಕ್ಷಿಗಳು.. ಅದೊಂದು ಜೀವನದುದ್ದಕ್ಕೂ ನೆನಪಿಡುವಂಥ ಅಮೋಘ ದೃಶ್ಯ.. ಕ್ಯಾಮೆರಾ ಕಣ್ಣೊಡೆಯುವುದರಲ್ಲಿ ನಿರತವಾಗಿತ್ತು. ನಿರ್ದಿಷ್ಟ ಮೆಗಾ ಫಿಕ್ಸಲ್ ಹೊಂದಿ ಕ್ಯಾಮೆರಾ ಕಣ್ಣಿಗೂ ಅನಿರ್ದಿಷ್ಟ ಮೆಗಾ ಫಿಕ್ಸಲ್ ಹೊಂದಿರುವ ನಮ್ಮ ನಿಜದ ಕಣ್ಣುಗೂ ನಡುವೆ ಸ್ಪರ್ಧೆ ಬಿಟ್ಟಂತೆ…
ಒಂದು ಕ್ಷಣ ಎಲ್ಲಾ ರಾಜಹಂಸ ಪಕ್ಷಿಗಳು ಹಿಂಡಾಗಿ ಒಂದೇ ಬಾರಿಗೆ ಹಾರಿದಾಗ ಸನ್ನಿವೇಶದ ಸಂಪೂರ್ಣ ಕ್ಯಾಪ್ಚರ್ ನಲ್ಲಿ ಗೆದ್ದದ್ದು ನಮ್ಮ ಕಣ್ಣುಗಳೇ…ಆಹಾ! ಎಂಥ ಮನೋಹರ ದೃಶ್ಯ. ನೋಡಿ ಜೀವನ ಸಾರ್ಥಕವೆನಿಸಿತು…
-ಅಶೋಕ ಬಾವಿಕಟ್ಟಿ
Beautifully described 🙌👌