ಮೂರು ಕವಿತೆಗಳು: ಚಲುವೇಗೌಡ ದೊಡ್ಡಹಳ್ಳಿ

ಉಪಕಾರಿಯಾಗು

ಇರುವಂತಿದ್ದರೆ ತೆಂಗಿನ ಮರದಂತಿರು
ಬಿಸಲಲಿ ನೆರಳಾಗಿ ದೇವರ ಪೂಜೆಗೆ ಕಾಯಾಗಿ
ಬಾಯಾರಿದವರಿಗೆ ಎಳನೀರಾಗಿ
ಭುವಿಯ ಮೇಲಿನ ಕಲ್ಪವೃಕ್ಷವಾಗಿ…

ಮನೆಯ ಮುಂದೆ ಚಪ್ಪರವಾಗಿ
ಅನ್ನ ಮಾಡಲು ಕಟ್ಟಿಗೆಯಾಗಿ
ಕಸಗುಡಿಸುವ ಪೊರಕೆಯಾಗಿ
ನೆತ್ತಿಗೆ ಕೊಬ್ಬರಿ ಎಣ್ಣೆಯಾಗಿ…

ಮನೆ ಮೇಲಣ ಚಾವಣಿಯಾಗಿ
ಮನೆ ಭಾರ ಹೊರುವ ತೊಲೆಯಾಗಿ
ಮಲಗುವರಿಗೆ ಸೋಗೆ ಹಾಸಾಗಿ
ಶುಭ ಶಾಸ್ತ್ರಕೆ ಕೊಬ್ಬರಿಯಾಗಿ…

ಹುಟ್ಟಿದರೆ ಹಸುವಿನಂತಾಗು
ಹಸಿದ ಮಕ್ಕಳಿಗೆ ಹಾಲಾಗಿ
ಧಣಿದವರಿಗೆ ಮಜ್ಜಿಗೆಯಾಗಿ
ಊಟಕ್ಕೆ ತುಪ್ಪವಾಗಿ ಇಳೆಯೊಳಗೆ ಕಾಮಧೇನುವಾಗಿ…

ಹೊಲಕ್ಕೆ ಗೊಬ್ಬರವಾಗಿ
ಅನ್ನದಾತರಿಗೆ ಬೆನ್ನೆಲುಬಾಗಿ
ಪ್ರಥಮ ಪೂಜೆಗೆ ಇಡುವ ಸಗಣಿಯಾಗಿ
ಪವಿತ್ರವಾದ ಗೋಮೂತ್ರವಾಗಿ…

ಮನೆ ಮುಂದೆ ಸಾರಿಸುವ ಸಗಣಿಯಾಗಿ
ದೇವರ ಅಭಿಷೇಕಕೆ ಹಾಲು-ಮೊಸರಾಗಿ
ಜಗಕೆಲ್ಲ ನೀನೆ ಗೋಮಾತೆಯಾಗಿ
ನೀನಿರುವೆ ಜಗದೊಳಗೆ ಉಪಕಾರಿಯಾಗಿ…


ನೀನಾರಿಗಾದೆಯೋ ಮಾನವ…!

ಮಾವಿನ ಮರ ಹಣ್ಣು ಕೊಟ್ಟಿತು
ನೀನೇನು ಕೊಟ್ಟೆ ಮನುಜ?
ತೆಂಗು ಎಳನೀರು ಕಾಯಿ ನೀಡಿ
ಇಳೆಯೊಳಗೆ ಕಲ್ಪವೃಕ್ಷವಾಯಿತು
ನಿನ್ನಿಂದ ಏನು ಸಿಕ್ಕಿತು ಮನುಜ?

ಗಿಡವು ಹೂವು ನೀಡಿತು ನೀನೇನು
ಕೊಟ್ಟೆ ಮಾನವ!
ಧರೆಯ ಮೇಲಿನ ಮನುಜರಿಗೆ
ಹಸು ಹಾಲು ನೀಡಿ ಕಾಮಧೇನುವಾಯಿತು
ಅದ ಕುಡಿದು ನೀ ಏನ ಕೊಟ್ಟೆ ಮನುಜ?

ವ್ಯರ್ಥವಾಯಿತು ಮನುಷ್ಯ ಜನ್ಮ
ವಿಷವೆ ತುಂಬಿದೆ ಎದೆಯ ತುಂಬ!
ಒಳಿತು ಮಾಡು ಇರುವಷ್ಟು ದಿನ
ಸಾರ್ಥಕ ಮಾಡಿಕೊ ನಿನ್ನ ಬದುಕನ್ನ||

ಇಲ್ಲದವರ ಕಂಡು ಅಸಹ್ಯ ಪಡಬೇಡ
ಇದ್ದವರ ನೋಡಿ ಅಸೂಯೆ ಮಾಡಬೇಡ
ಕೆಟ್ಟವರ ಸಂಗಡ ಸೇರದಿರು
ಒಳ್ಳೆಯವರನ್ನು ಹಾಳುಮಾಡದಿರು||

ನೆರವಿಗೆ ಬಂದವರ ಕೀಳಾಗಿ ಕಾಣಬೇಡ
ಮನೆಗೆ ಬಂದವರ ಅವಮಾನ ಮಾಡಬೇಡ
ತಪ್ಪು ಮಾಡದವನಿಗೆ ಶಿಕ್ಷಿಸಬೇಡ
ಮನಬಂದಂತೆ ವರ್ತಿಸಬೇಡ
ಎಲೆ ಮಾನವ ಇನ್ನಾದರು ಅರಿತು ನಡೆ..!


ಅವನತಿ ಹಾದಿಯತ್ತ

ಎಲ್ಲೆಲ್ಲೂ ಕಾಣುತಿವೆ ಕಪ್ಪು ರಸ್ತೆಗಳು
ರಸ್ತೆ ಬದಿಯಲ್ಲಿ ನಿಂತಿವೆ ವಿದ್ಯುತ್ ಕಂಬಗಳು
ಹೆಚ್ಚುತ್ತಿವೆ ಓಡಾಡುವ ವಾಹನಗಳು
ಮುಚ್ಚುತ್ತಿವೆ ಕೆರೆ ಕಟ್ಟೆಗಳು

ಕಣ್ಮರೆಯಾಗುತಿವೆ ವನ್ಯ ವೃಕ್ಷಗಳು
ವಿನಾಶದತ್ತ ಓಝೋನ್ ಪದರಗಳು
ಮಲಿನವಾಗುತಿವೆ ಜಲಾಶಯ ನದಿಗಳು
ಪರಿಣಾಮ ಎದುರಿಸಬೇಕಾಗಿದೆ ಮುಂದೆ ನಮ್ಮ ಮಕ್ಕಳು

ಮುಚ್ಚುತ್ತಿವೆ ಸರಕಾರಿ ಕನ್ನಡ ಶಾಲೆಗಳು
ಏರಿಕೆಯತ್ತ ಖಾಸಗೀ ಶಿಕ್ಷಣ ಸಂಸ್ಥೆಗಳು
ಬಳಕೆಗೆ ಬರುತ್ತಿವೆ ಪರಭಾಷೆಗಳು
ಕರುನಾಡಿಗರಿಗೆ ದೊರಕುತ್ತಿಲ್ಲ ನೌಕರಿಗಳು

ಎಲ್ಲರ ಕೈಗಳಲಿ ಎರಡೆರಡು ಮೊಬೈಲ್ ಗಳು
ಪುಟ ತೆರೆಯದೆ ನಿದ್ರಿಸುತ್ತಿವೆ ಪುಸ್ತಕಗಳು
ಗಗನದೆತ್ತರ ಮುಟ್ಟುತ್ತಿವೆ ಕಟ್ಟಡಗಳು
ಆಕಾಶದೊಳಗೆ ಚಲಿಸುತಿವೆ ವಿಮಾನಗಳು

ಪ್ರಕೃತಿಯ ಅಂದವು ಹಾಳಾಯಿತು
ಹಿರಿಯರ ಸಂಸ್ಕೃತಿ ಮರೆಯಾಯಿತು
ವಸ್ತುಗಳ ಬೆಲೆ ಏರಿಕೆ ಗಗನವಾಯಿತು
ಮನುಷ್ಯತ್ವವೆ ಇಂದು ಇಲ್ಲದಂತಾಯಿತು

-ಚಲುವೇಗೌಡ ದೊಡ್ಡಹಳ್ಳಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
2.9 21 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x