ಒಂದು ಸಾಹಿತ್ಯ ಕೃತಿ ಯಾವ ಕಾರಣಕ್ಕೆ ಓದುಗರನ್ನು ಸೆಳೆಯುತ್ತದೆ ಎಂಬುದು ಓದುಗರ ಅಭಿರುಚಿಯ ಮೇಲೆ ನಿಂತಿರುತ್ತದೆಯೇ? ಈ ‘ಅಭಿರುಚಿ’ಗೆ ನಿರ್ದಿಷ್ಟ ಕಾರಣ ಹೇಳಲಾಗದು. ಆದರೆ ಇತರ ಆಯಾಮಗಳೂ ಲೇಖಕನೊಬ್ಬನ ಕೃತಿ, ಓದುಗರನ್ನು ಭಿನ್ನ ಬಗೆಯಲ್ಲಿ ತಲುಪುತ್ತದೆ ಎಂಬುದಕ್ಕೆ ಸಾಕ್ಷ್ಯವಿದೆ. ಅತ್ಯಂತ ಮಾನವೀಯ ನೆಲೆಯಲ್ಲಿ ರಚಿತವಾದ ಅನೇಕರ ಬರಹಗಳು ಎಷ್ಟು ಜನ ಓದುಗರನ್ನು ತಲುಪಿವೆ? ಅವು ವಿಭಿನ್ನವು ಕಥನತಂತ್ರದಲ್ಲಿ ಕಲಾತ್ಮಕ ಗುಣವೂ ಆಗಿರುವ ಕೃತಿಗಳೂ ಹೌದು. ಪ್ರಕಾಶಕರು ಪ್ರಕಟಣೆ ಮಾಡುವುದಷ್ಟೆ ಮುಖ್ಯವಲ್ಲ ಒಂದು ಸಾಹಿತ್ಯ ಕೃತಿಯನ್ನು ಜನರಿಗೆ ತಲುಪಿಸುವ ಹೊಸ ಮಾರ್ಗವನ್ನು ಅನುಸರಿಸಿದರೆ ಬರಹಗಾರರಿಗೆ ಮತ್ತು ಅವರ ಸಾಹಿತ್ಯಕ್ಕೆ ಒಂದು ಸಾರ್ಥಕತೆ ಒದಗಿಸಿದಂತಾಗುತ್ತದೆ. ಹಾಗಾದರೆ ಓದುಗರಿಗೆ ಕೃತಿ ತಲುಪಿಸುವುದಾದರೂ ಹೇಗೆ ಎನ್ನುವುದಕ್ಕೆ ಇವತ್ತಿನ ಮಟ್ಟಿಗೆ ಸತೀಶ್ ಶೆಟ್ಟಿ ವಕ್ವಾಡಿ ಅವರ ಕೃತಿಯನ್ನು ಓದುಗರಿಗೆ ತಲುಪಿಸಲು ಬುಕ್ ಬ್ರಹ್ಮ ಅನುಸರಿಸಿದ ಮಾರ್ಗ.
ಕಥೆಗಳು ಮತ್ತು ಆ ಕಥೆ ಹೇಳುವ ಕಥೆಗಾರರು ತನ್ನ ರಚನೆಯಲ್ಲಿ ತರುವ/ ಆಯ್ದುಕೊಳುವ ವಿಷಯದಲ್ಲಿ ಪ್ರಸ್ತುತತೆ, ತನ್ನ ಬರಹದ/ ಕಟ್ಟುವ ಕಥೆಗಳ ವಸ್ತು ನಿಷ್ಠತೆ, ವಿಷಯ ನಿಷ್ಠತೆ, ಜೀವಪರತೆಯ ಸೂಕ್ಷ್ಮತೆ, ಮೇಲಾಗಿ ಸೃಜನಶೀಲತೆ ಕಾಯ್ದುಕೊಳ್ಳುವ ನಿರಂತರತೆ – ಇದು ಕಥೆಗಾರರಿಗೆ ಒಂದು ಸವಾಲು. ಈ ಸವಾಲು ಗೆಲ್ಲುವ ಹಕೀಕತ್ತಿನಲ್ಲಿ ‘ಏಗುವ’ ಬರಹಗಾರರಿದ್ದಾರೆ. ಒಂದು ಕೃತಿ ಬರೆದು ಸುಮ್ಮನಿದ್ದು ಬಿಡುವ, ಮತ್ತೆ ಬರೆಯಲು ಹಾತೊರೆವ, ವಸ್ತು ವಿಷಯವಿದ್ದೂ ಮೊದಲ ಸಾಲೇ ಕಠಿಣವಾಗಿ – ಶಿಲ್ಪಿಗಳು ಕಲ್ಲುಗಳನ್ನು ಕೆತ್ತಿ ಕೆತ್ತಿ ಶಿಲ್ಪವಾಗಿಸುವಂತೆ ಬರಹವನ್ನು ಗಟ್ಟಿಯಾಗಿಸುವ ಹೊಸ ಸವಾಲು. ಹೀಗೆ ಏಗಿಏಗಿ ಬರೆಯುವುದೂ ಒಂದು ಕ್ರಿಯಾತ್ಮಕ ಸೃಜನಶೀಲ ಕ್ರಮ. ಒಂದು ಬರೆದು ತದ ನಂತರ ಒಮ್ಮಿಂದೊಮ್ಮೆಲೆ ಐದಾರು ಕೃತಿ ಬರೆಯುವುದೂ ಕೂಡ ಚಲನಶೀಲ ಕ್ರಿಯಾಶೀಲ ಕ್ರಮ.
ಇದರ ನಡುವೆ ಇವತ್ತು ಬರಹಗಾರನೊಬ್ಬ ಆಕರ್ಷಕ ಬಹುಮಾನದ ಕತ್ತಿ ಅಲಗಿನ ಮೇಲೆ ನಿಂತು ಸಾಹಿತ್ಯ ಸ್ಪರ್ಧೆಗಳ ಸೆರಗಿನಲ್ಲಿ ತನ್ನ ಸೃಜನಶೀಲತೆಯನ್ನೇ ಪಣಕ್ಕಿಟ್ಟು ಸಾಹಿತ್ಯ ಬರಹಗಳ ರಚನೆ ಮಾಡುವ ಹಕೀಕತ್ತಿನ ಕಾಲಘಟ್ಟದಲ್ಲಿ – ಸದ್ಯ ಒಂದು ಬೆರಗಿನ ವಾತಾವರಣವಿದೆ.
ಇಂಥ ಹೊತ್ತಲ್ಲಿ ಸತೀಶ್ ಶೆಟ್ಟಿ ವಕ್ವಾಡಿ ಅವರ ಎರಡನೇ ಕಥಾ ಸಂಕಲನ ‘ಕೊನೆಯ ಎರಡು ಎಸೆತಗಳು’ ಸಾಹಿತ್ಯ ವಲಯದಲ್ಲಿ ಬಿಡುಗಡೆಗು ಮುನ್ನ ಒಂದು ಸಂಚಲನವನ್ನೇ ಸೃಷ್ಟಿಸಿ – ಕಲರ್ ಕಲರ್ ಬಹು ಮಾಧ್ಯಮಗಳ ಅಬ್ಬರದಲ್ಲಿ ಪುಸ್ತಕ ಕೊಂಡು ಓದುವವರಿಲ್ಲ ಎಂಬುದನ್ನು ಸುಳ್ಳು ಮಾಡಿ ದಾಖಲೆ ಬರೆದ ಈ ಕೃತಿಯಲ್ಲಿ – ಗಾಳಿ ಮರ, ಕ್ಷಮಿಸಿ ಸಂಪಾದಕರೇ.. ಕಥೆ ಕಳುಹಿಸಲಾಗುತ್ತಿಲ್ಲ, ದೀಪವಾರಿದ ಬೀದಿಯಲಿ, ಮುಕ್ತಿ, ಮುಳ್ಳಿಗಂಟಿದ ಸೀರೆ, ಅಜ್ಜಯ್ಯನ ಕನಸು, ತಲ್ಲಣಿಸದಿರು ಜೀವವೇ, ಕೊನೆಯ ಎರಡು ಎಸೆತಗಳು, ನಕ್ಷತ್ರ ಜಾರಿದಾಗ – ಅನ್ನೊ ಒಟ್ಟು ಒಂಭತ್ತು ಕಥೆಗಳಿವೆ.
ಎರಡು ಊರುಗಳ ಭಾವನಾತ್ಮಕ ವಿಷಯಗಳ ಮೇಲೆ ಬೆಳಕು ಚೆಲ್ಲುವ ‘ಕೊನೆಯ ಎರಡು ಎಸೆತಗಳು’ ಕಥೆ ವಿಭಿನ್ನಾರ್ಥ ಹೊರಡಿಸುವ ಶೀರ್ಷಿಕೆ. ಕ್ರಿಕೆಟ್ ಸಂಬಂಧಿತ ಕಥೆಯೇನೊ ಅನಿಸುವಷ್ಟು ಆಕರ್ಷಕ ಶೀರ್ಷಿಕೆಯ ಬೆನ್ನಿಡಿದು ನಿಂತರೆ ಓದುಗನ ಅನಿಸಿಕೆಯನ್ನೇ ತಲೆಕೆಳಗು ಮಾಡುವ ಈ ಕಥೆಯ ಚೌಕಟ್ಟಿದೆ. ಇಲ್ಲಿ ದೇವರು, ನಂಬಿಕೆ, ಊರಾಳ್ತನ, ಒಳಿತು ಕೆಡುಕುಗಳ ಬಹುದೊಡ್ಡ ತಾಂತ್ರಿಕ ಆಯಾಮವೇ ಇದೆ. ದೇವಸ್ಥಾನ ಜೀರ್ಣೋದ್ಧಾರದ ನಂತರ ಆಗುವ ಹೆಸರು ಬದಲಾವಣೆ ಮಾತು ಮೊದಲ ಕೆಡುಕಾದರೆ, ಕ್ರಿಕೆಟ್ ಆಯೋಜನೆ ಮಾಡಿ ಗೆಲ್ಲುವ ಕಡೆಗೆ ತೀರ್ಪಿನ ಮಾತು ಎರಡನೆ ಕೆಡುಕು. ಈ ಎರಡು ಕೆಡುಕಿನ ಆಯಾಮದಲ್ಲಿ “ಕೊನೆಯ ಎರಡು ಎಸೆತಗಳು” ಕಥೆಯನ್ನು ವಿಶ್ಲೇಷಿಸಿದರೆ ವಕ್ವಾಡಿ ಅವರ ಕಥನದ ಸೂಕ್ಷ್ಮತೆ ಕಾಣುತ್ತದೆ.
ಇಲ್ಲಿನ ಕೆಲವು ಕಥೆಗಳು ಕರೋನ ಕಾಲಘಟ್ಟದ ಮತ್ತು ಕರೋನ ನಂತರದಲ್ಲಿ ಬೀರಿದ ಪರಿಣಾಮವನ್ನು ವಿಶಧೀಕರಿಸುತ್ತವೆ. ದೊಡ್ಡ ದೊಡ್ಡ ಕಂಪನಿಗಳ ಆರ್ಥಿಕ ಸ್ಥಿತಿಗತಿಯನ್ನು ಚರ್ಚಿಸುವುದಲ್ಲದೆ ಉದ್ಯೋಗ ನಷ್ಟವನ್ನು, ಅದರಿಂದಾಗುವ ಕೌಟುಂಬಿಕ ಏರುಪೇರು, ವ್ಯಕ್ತಿಯ ಮಾನಸಿಕ ತಲ್ಲಣವನ್ನು ಬಹಳ ಗಂಭೀರವಾಗಿ ಓದುಗನೆದುರು ತೆರೆದಿಡುತ್ತವೆ.
ಹಾಗೆ, ಕಾಲ ಬದಲಾಗಿದೆ. ಬದಲಾಗುತ್ತಿದೆ. ಬದಲಾವಣೆ ಗಾಳಿ ಬೀಸುತ್ತಿದೆ. ಗಾಳಿ ಬೀಸಿದೆಡೆ ತೂರಿಕೊಂಡು ಹೋಗುವ ಮನಸ್ಥಿತಿ. ಇಂಥ ಮನಸ್ಥಿತಿ – ‘ಸೇರುವ’ ‘ಸೇರಿಸಿಕೊಳುವ’ – ಕಾರ್ಪೋರೇಟ್ ಜಗತ್ತಿನಲ್ಲಿ ಮಾನವೀಯತೆ, ಅಂತಃಕರಣವಿದೆಯೇ? ಇದೆ, ಇರುತ್ತದೆ. ಇಲ್ಲ ಎನ್ನಲಾಗದು! ಆದರೆ ಅದನ್ನು ದುರ್ಭೀನಿನಲ್ಲಿ ಹುಡುಕಿದರು ಸಿಗದಷ್ಟು ಆ ವಲಯದ ಮನಸ್ಥಿತಿ ಸಂಕೀರ್ಣವಾಗಿದೆ. ಒಂದು ಕಂಪನಿಯಲ್ಲಿ ಕಿರುಕುಳವಿಲ್ಲದೆ ಉಳಿಯಬೇಕಾದರೆ ಅಲ್ಲಿನ ವಾತಾವರಣಕ್ಕೆ ಒಗ್ಗಿಕೊಳಬೇಕು. ಅದರಲ್ಲು ಹೆಣ್ಣಿನ ಸ್ಥಿತಿ ಹೇಳತೀರದು! ತನ್ನ ಮೇಲಿನವರಿಗೆ ವಿಧೇಯಳಾಗಿದ್ದರೆ ಆಕೆ ಲೈಫ್ ಹಸನಾಗಿರುತ್ತದೆ ಇಲ್ಲದಿದ್ದರೆ ಆಕೆಯ ಬದುಕು ಪಡಿಪಾಟಲಿಗೆ ಬಲಿಯಾಗುತ್ತದೆ. ಒಮ್ಮೆ ಕಾರ್ಪೋರೇಟ್ ಜೀವನಕ್ಕೆ ಒಗ್ಗಿದರೆ ಅದರಿಂದ ಬಿಡಿಸಿಕೊಳಲಾರದಷ್ಟು ಸಂಕೀರ್ಣವಾದ ವಸ್ತು ವಿಷಯದ ‘ಮುಳ್ಳಿಗಂಟಿದ ಸೀರೆ’ ಕಥೆ ಈ ಬಗ್ಗೆ ವಿಸ್ತೃತವಾಗಿ ಅಷ್ಟೇ ಗಂಭೀರವಾಗಿ ತಿಳಿಸುತ್ತದೆ. ಸೂಕ್ಷ್ಮ ಸನ್ನಿವೇಶವನ್ನು ಹೇಗೆ ಹ್ಯಾಂಡಲ್ ಮಾಡಬೇಕೆಂದು ಶಿಸ್ತೀಯವಾಗಿ ಮಂಡಿಸಿ ಹೇಳುವ ಮೈಲೇಜ್ ಇರುವ ಗಟ್ಟಿ ಕಥೆ.
ಈ ಕಾರ್ಪೋರೇಟ್ ಜಗತ್ತಿನ ಬಗ್ಗೆ ‘ನಕ್ಷತ್ರ ಜಾರಿದಾಗ’ ಕಥೆಯ ದೇವಳದ ದೇವಸ್ಥಾನದ ಅರ್ಚಕ ಪುರಂದರ ಉಡುಪರ ಮುಂದೆ ಅರುಹುವ ಕ್ಷಿತಿಜನ “ಅಯ್ಯ ನಿಮ್ದೆ ಪರವಾಗಿಲ್ಲ ಅಯ್ಯ, ಒಂದು ಶಾಶ್ವತ ನೆಲೆ ಇರುತ್ತೆ. ಒಂದು ನೆಮ್ಮದಿ ಇರುತ್ತೆ. ನಾಳೆ ಇನ್ನೆಲ್ಲೊ ಅನ್ನೊ ದುಗುಡ ಇರೊಲ್ಲ. ಆದ್ರೆ ನಮ್ದು ನೋಡಿ, ಒಂದೇ ಕಡೆ ನಿಲ್ಲಲಿಕ್ಕೆ ಆಗದ ಧಾವಂತ. ಜಾಸ್ತಿ ಸಮಯ ಒಂದೇ ಕಡೆ ನಿಂತ್ರೆ, ಇಂವ ಪ್ರಯೋಜನಕ್ಕೆ ಇಲ್ಲ ಅಂತ ಡಿಸೈಡ್ ಮಾಡುತ್ತೆ ನಮ್ ಕಾರ್ಪೋರೇಟ್ ಜಗತ್ತು, ಇಲ್ಲಿ ನೀವ್ ಬೆಳೆಯಬೇಕಾದ್ರೆ, ನಿಯತ್ತು ಕೆಲ್ಸಕ್ಕೆ ಬರೋಲ್ಲ, ಒಂದ್ ಕಡೆ ನಿಂತ್ರೆ ನಿಮ್ ಕತೆ ಮುಗಿತು, ಓಡ್ತಾನೇ ಇರಬೇಕು” “ಇದೆ ನನ್ನ ಶಾಶ್ವತ ನೆಲೆ ಅನ್ನೊ ತರಹ ನಮ್ಮದು ಇಲ್ಲ. ಕಟ್ಟಿಕೊಂಡ ಮನೆಗೆ, ತಗೊಂಡ ಕಾರಿಗೆ, ವೀಕ್ ಎಂಡ್ ಖರ್ಚಿಗೆ ಅಂತ ದುಡಿದ್ದುದ್ದರಲ್ಲಿ ಮುಕ್ಕಾಲು ಪಾಲು ಎತ್ತಿಡಲೇಬೇಕು” “ಬದಲಾಗೊ ಕಾಲಕ್ಕೆ ನಾವು ನೀವು ಎಲ್ಲ ಬದಲಾಗಲೇಬೇಕು” ಎಂಬ ಮಾತು ಸ್ಪಷ್ಟವಾಗಿ ಕಾರ್ಪೋರೇಟ್ ವಲಯವನ್ನು ಫಾಲೋ ಮಾಡುವವರ ದುಗುಡವನ್ನು ಚಿತ್ರಿಸುವುದಲ್ಲದೆ ಯಾವುದೇ ಶ್ರಮವಿಲ್ಲದೆ ತನ್ನ ಪೂರ್ವಜರಿಂದ ಬಳುವಳಿಯಾಗಿ ಬಂದ ಸ್ಥಾನದ ಕಾರಣವಾಗಿ ಕೂತುಣ್ಣುವ ವ್ಯವಸ್ಥಿತತೆ, ಇದು ಅಧಿಕಾರದ ಕೇಂದ್ರೀಕರಣವನ್ನು ಸೂಚ್ಯವಾಗಿ ಪುರಂದರ ಉಡುಪರಿಗೆ ಬದಲಾವಣೆಯ ಮಾತನ್ನು ಉಚ್ಚರಿಸುವ ಮೂಲಕ ಕ್ಷಿತಿಜ ಪಾತ್ರ ಬಹಳ ಎಚ್ಚರಿಕೆಯಿಂದ ಎಚ್ಚರಿಸುತ್ತದೆ. ಹಾಗೆ ಉಡುಪರ ಮಗಳನ್ನು ಪ್ರೇಮಿಸುವ ಕ್ಷಿತಿಜ ಜಾತಿಯ ಕಾರಣಕ್ಕೆ ತಿರಸ್ಕೃತಗೊಳ್ಳುತ್ತಾನೆ. ಅವಳು ಹೇಳುವ ಸಾಂಪ್ರದಾಯಿಕ ಕಾರಣಗಳು ಅವನನ್ನು ಮೌನವಾಗಿಸುತ್ತದೆ. ಆದರೆ ಕ್ಷತಿಜನಿಗೆ ಹೇಳಿದ ಕಾರಣದಂತೆ ಅವಳು ನಡೆದುಕೊಂಡಳೇ? ಈ ಸಮಾಜದಲ್ಲಿ ಜಾತಿ ವ್ಯವಸ್ಥೆ ಹೇಗೆ ಪೋಷಣೆಗೊಳಗಾಗುತ್ತಿದೆ ಎಂಬುದಕ್ಕೆ ಕೊನೆಯ ಅವಳ ಪ್ರೇಮ ಪುರಾಣ, ಸಾಕ್ಷ್ಯ ಒದಗಿಸುತ್ತದೆ.
ಹಾಗೆ “ದೀಪವಾರಿದ ಬೀದಿಯಲಿ’ ಚಿಂತನನ ಆಸೆ, ಕನಸು, ಪ್ರೀತಿ, ಮದುವೆ, ಓವರ್ ಟೇಕ್ ಲೈಫ್ – ಇವುಗಳೆಲ್ಲದರ ಸುತ್ತ ಹೆಣೆಯಲ್ಪಟ್ಟ ಕಥೆ. ಇಲ್ಲಿ ಮೊದಲರ್ಧ ವ್ಹೀಕೆಂಡ್ ಗೆಳತಿ ಜೊತೆಗಿನ ಬದುಕು, ತದನಂತರದ್ದು ತಾನೇ ನಿರ್ಮಿಸಿಕೊಂಡ ಎಟುಕದ ಆಶಾಗೋಪುರ, ದುಡಿಮೆಗು ಮೀರಿದ ವೆಚ್ಚ, ಮಾಜಿ ಗೆಳತಿಗೆ ಸೆಡ್ಡು ಹೊಡೆಯುವ ಹುಂಬತನ, ಆಕಸ್ಮಿಕವಾಗಿ ಬಂದೊದಗುವ ಲಾಕ್ಡೌನ್. ಈ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಪರಿ. ‘ನಕ್ಷತ್ರ ಜಾರಿದಾಗ” ಕಥೆಯ ಚೌಕಟ್ಟು ಒಂದು ಮಗ್ಗುಲಾದರೆ ‘ದೀಪವಾರಿದ ಬೀದಿಯಲಿ’ ಕಥೆಯ ಚೌಕಟ್ಟು ಮತ್ತೊಂದು ಮಗ್ಗುಲು. ವ್ಯತ್ಯಾಸವೆಂದರೆ ‘ನಕ್ಷತ್ರ ಜಾರಿದಾಗ’ ಜಾತಿ, ಧರ್ಮದ ಕಟ್ಟುಪಾಡಿನ ನೆಪದಲ್ಲಿ ನೈಜ ಪ್ರೇಮಕ್ಕಾಗುವ ಮೋಸ, ಅಪಮಾನ. ಅಧಿಕಾರ ಸ್ಥಾನದ ಅಹಮ್ಮಿಕೆಯ ಎಲ್ಲೆಯದ್ದಾದರೆ “ದೀಪವಾರಿದ ಬೀದಿಯಲಿ” ತನ್ನ ಬದುಕುವ ಮಿತಿಯನ್ನು ಮೀರಿ ಆಯ್ದುಕೊಂಡ ಮಾರ್ಗದೊಳಗೆ ಒಟ್ಟು ಕಾರ್ಪೋರೇಟ್ ಬದುಕಿನ ವೈರುಧ್ಯದ ಚಿತ್ರಣವನ್ನು ಹೇಳುತ್ತದೆ.
ಸದಾಶಿವನ ಬದುಕಿನ ದಿಕ್ಕನ್ನು ಚಿತ್ರಿಸುವ ‘ಗಾಳಿಮರ’ ತೀರದ ದೂರದಲ್ಲಿ ಸಾಗರದ ಅಲೆಯಂತೆ ಅಬ್ಬರಿಸಿ ತಣ್ಣಗಾಗುವ ಪರಿ, ಓದುತ್ತಾ ಹೋದಂತೆ ಸನ್ನಿವೇಶಗಳು ಇಲ್ಲೆ ಎಲ್ಲೊ ನಡೆದಾಡುತ್ತಿವೆಯೇನೊ ಎನಿಸುವಷ್ಟು ನಿರೂಪಣೆಯಲ್ಲಿ ಗಾಢತೆ ಸಹಜತೆ ಇದೆ.ಇದೊಂದು ಪ್ರೇಮಕಥೆ. ಇದರೊಂದಿಗೆ ವ್ಯಾಜ್ಯಗಳ ಜುಗಲ್ಬಂಧಿ ಇದೆ. ನಾರಾಯಣಶೆಟ್ರು, ಶೀನಪ್ಪಶೆಟ್ರು, ಸಿಂಗಾರಿ ಶೆಡ್ತಿಯ ಬದುಕಿನ ವಿವರವೂ ಬಂದು ಹೋಗುತ್ತವೆ. ಈ ಕಥೆಯಲ್ಲಿ ಕಥೆಗಾರ ವಕ್ವಾಡಿ ಪಾತ್ರಗಳ ನಾಡಿಯನ್ನು ಹಿಡಿದು ಹೆಣೆದಿದ್ದಾರೆ. ಆದರೆ ಕೊನೆಯಲ್ಲಿ “ಅಲ್ಲೆ ಅಣತಿ ದೂರದಲ್ಲಿ ಬಿದ್ದಿದ್ದ ಚಿಕ್ಕ ವಿಷದ ಬಾಟಲಿ , ಸಿದ್ದೇಶನನ್ನು ಹಿಂಬಾಲಿಸುತ್ತ ಸದಾಶಿವನ ಕಡೆಗೆ ಧಾವಿಸುತ್ತಿದ್ದ ಶ್ವೇತಾಳ ಹೈಹೀಲ್ಡ್ ಚಪ್ಪಲಿಗೆ ಸಿಕ್ಕಿ ದೇವರಿಗೂ ಸಹ ಕಾಣಿಸದೆ ಮರಳಲ್ಲಿ ಹೂತು ಹೋಯಿತು” ಎಂದು ಹೇಳುತ್ತಾರೆ.
ಇಲ್ಲಿ ‘ದೇವರಿಗೂ ಸಹ ಕಾಣಿಸದೆ’ ಎಂಬುದು ಏನನ್ನು ಸೂಚಿಸುತ್ತದೆ? ಕಥೆಗಾರ ವಕ್ವಾಡಿ ಅವರ ‘ಕಥಾ ನಿರೂಪಣೆಯ ಈ ವಾಕ್ಯದಲ್ಲಿ’ ದೇವರ ಅಸ್ತಿತ್ವದ ಪ್ರಶ್ನೆ ಏಳುತ್ತದೆ. ಕಥೆಗಾರರ ಈ ಕೊನೆ ವಾಕ್ಯವನ್ನೇ ಮುಂದಿಟ್ಟು ಹೇಳುವುದಾದರೆ ಜನರ ನಂಬಿಕೆಯ ಜನಜನಿತ ಒಂದು ಮಾತಿದೆ. ಅದು “ದೇವರು ಸರ್ವಶಕ್ತ, ಸರ್ವವ್ಯಾಪಿ, ಅಣುರೇಣು ತೃಣಕಾಷ್ಠ ಸಕಲ ಚರಾಚರದರೆಲ್ಲದರಲ್ಲಿಯೂ ಇರುವವನು” ಎಂಬುದು.
ಈ ಅರ್ಥದಲ್ಲಿ ದೇವರು ಎಲ್ಲ ಕಡೆ ಇದ್ದಾನೆ. ಆದರೆ ಕಥಾ ನಿರೂಪಣೆಯಲ್ಲಿ ವಿಷದ ಬಾಟಲಿ ಹೈಹೀಲ್ಡ್ ಚಪ್ಪಲಿಗೆ ಸಿಕ್ಕಿ ಹೂತು ಹೋದದ್ದು ಎಲ್ಲ ಕಡೆ ಇರುವ ದೇವರಿಗೆ ಕಾಣಿಸದೆ ಇರುತ್ತದೆಯೇ? ಹಾಗೆ ಮಳೆ ಗಾಳಿ ಹೊಡೆತಕ್ಕೆ ಮರ ಬೀಳುವ ಸನ್ನಿವೇಶ. ಅದಕ್ಕು ಮುನ್ನ ಜಾತಕದ ಕಂಟಕ. ಆ ಜಾತಕದ ಮಾತಿನಂತೆ ನಡೆವ ಘಟನಾವಳಿ. ಅದಕ್ಕೆ ತಕ್ಕಂತೆ ಕಥಾ ನಿರೂಪಣಾ ಹೆಣಿಗೆಯಲ್ಲಿ ಜಾತಕ, ಮೌಢ್ಯ, ದೇವರು, ನಂಬಿಕೆ ಎಲ್ಲವೂ ಒಂದು ಗುಚ್ಛವಾಗಿ ಸ್ಥಾನಿಕ (ಇರುವಿಕೆ) ಗುಣಲಕ್ಷಣವನ್ನು ಹೊಂದಿ ಕಥೆಯ ಓಘವನ್ನು ಸಂಕ್ಷಿಪ್ತಗೊಳಿಸಿದೆ. ಇಷ್ಟಾಗಿಯೂ ‘ಗಾಳಿಮರ’ ಕಥೆ ತನ್ನ ನಿರೂಪಣಾ ಶೈಲಿಯಿಂದಲೇ ಗಮನ ಸೆಳೆಯುತ್ತದೆ.
ಒಂದು ಜಾಗದ ಕಾರಣ – ಈಗಾಗಲೇ ನಡೆದು ಹೋಗಿರುವ ಪ್ರತಾಪನ ಅಪ್ಪ ರಾಮನ ಕೊಲೆ ರಾಜಾರಾಮ ಭಟ್ಟರಿಗಲ್ಲದೆ ಯಾರಿಗೂ ಗೊತ್ತಿಲ್ಲ. ಕೆಲ ವರ್ಷಗಳ ನಂತರ ಜಾಗದ ವಿಚಾರ ಕೋರ್ಟು ಮೆಟ್ಟಿಲೇರುತ್ತದೆ. ಹೀಗಾಗಿ ಕೊಲೆ ಮಾಡಿದವನಿಂದ ರಾಮನ ಮಗ ಪ್ರತಾಪನಿಗೆ ಆ ಜಾಗದ ವಿಚಾರದಲ್ಲಿ ಕಷ್ಟ ತಪ್ಪಿಲ್ಲ. ಇದು ಪ್ರತಾಪನಿಗೆ ನುಂಗಲಾರದ ತುತ್ತು. ಪ್ರತಾಪನ ಪರವಾಗಿ ಕೇಸು ತೆಗೆದುಕೊಂಡಿರುವವನು ರಾಜಾರಾಮ ಭಟ್ಟರ ಮಗ ವಸಂತನಿಗೂ ರಾಮನನ್ನು ಕೊಲೆ ಮಾಡಿದವ ಗೊತ್ತಿಲ್ಲ. ಪ್ರತಾಪನ ಸಂಕಟ ನೋಡಲಾರದ ರಾಜಾರಾಮ ಭಟ್ಟರು ಗುಟ್ಟಾಗಿ ಹೋಗಿ ಕೊಲೆ ಮಾಡಿದವನಿಗೆ ಸೂಚ್ಯವಾಗಿ ನಡೆದ ಘಟನೆ ಬಗ್ಗೆ ಎಚ್ಚರಿಸುತ್ತಾರೆ. ಕೇಸು ಪ್ರತಾಪನ ಪರ ಸುಖಾಂತ್ಯ ಕಾಣುತ್ತದೆ ಎಂಬುದು “ಮುಕ್ತಿ” ಕಥೆಯ ಒಟ್ಟು ಸಾರ.
ಈ ಕಥೆಗೆ – ಒಂದು ಅದ್ಬುತವಾದ ಚೌಕಟ್ಟಿಗೆ. ಸಂಕಲನದಲ್ಲಿರುವ ಎಲ್ಲ ಕಥೆಗಳಿಗಿಂತಲೂ ಇದು ಬೇರೆಯೇ ತರದ ಅರ್ಥ ಹೊರಡಿಸುತ್ತದೆ. ಪ್ರತಾಪ, ರಾಮ, ವಸಂತ, ವೆಂಕಟೇಶ ನಾಯಕ್ ಪಾತ್ರಗಳಿಗಿಂತ ಸಂಪ್ರದಾಯದ ಎಲ್ಲ ಓರೆಕೋರೆ ಪಾರ್ಸಿಯಾಲಿಟಿಯ ದೌರ್ಬಲ್ಯದಾಚೆಗು ರಾಜಾರಾಮ ಭಟ್ಟರದು ಮಾನವೀಯ ತುಡಿತದ, ಮನುಷ್ಯ ಸಂಬಂಧಗಳ ಬಗ್ಗೆ ಒಂದಷ್ಟು ಕಾಳಜಿ ಇರುವ ಪಾತ್ರ. ರಾಜಾರಾಮ ಭಟ್ಟರು ಮನಸ್ಸು ಮಾಡಿದ್ದರೆ ವೆಂಕಟೇಶ ನಾಯಕ ಜೈಲು ಪಾಲಾಗುತ್ತಿದ್ದ. ಆದರೆ ಆತ ಜೈಲು ಪಾಲಾದರೆ ಚಿಕ್ಕ ಮಕ್ಕಳ ಆತನ ಕುಟುಂಬದ ಗತಿಯೇನು? ಈ ಬಗ್ಗೆ ಅವನ ಕರುಳು ಚುರ್ ಅನ್ನುತ್ತದೆ. ಅದು ಒಂದು ಭಾಗ. ನಂತರದ್ದು ಕೊಲೆಯಾದ ರಾಮನ ಮಗ ಪ್ರತಾಪನ ಸಂಕಟ. ಅವತ್ತು ವೆಂಕಟೇಶ ನಾಯಕನ ಕಂಡು ಮರುಗಿದ್ದ ರಾಜಾರಾಮ ಭಟ್ಟರು ಇಂದು ಪ್ರತಾಪನ ಮೇಲೂ ಅದೇ ತುಡಿತ. ಇದರ ಜಾಡಿನಲ್ಲಿ ಎಲ್ಲೊ ಒಂದು ಕಡೆ ಮನಸ್ಸಿನ ಆಳದಲ್ಲಿ ಮಡುಗಟ್ಟಿದ್ದ ನೋವು ಸಂಕಟ- ಸತ್ಯ ಹೇಳಿ ನ್ಯಾಯ ದೊರಕಿಸುವ ತುಡಿತದ ಪಾತ್ರವಾಗಿ ರಾಜಾರಾಮ ಭಟ್ಟರ ಪಾತ್ರ ಚಿತ್ರಣ ಓದುಗನಿಗೆ ‘ಮುಕ್ತಿ’ ಯ ಅರ್ಥವ್ಯಾಪ್ತಿಯ ನೈಜತೆಯನ್ನು ದೊರಕಿಸಿಕೊಡುತ್ತದೆ.
ದೇವನೂರ ಮಹಾದೇವರ ‘ಸಂಬಂಜ ಅನ್ನದು ದೊಡ್ದುಕನ’ ಅನ್ನೊ ಮಾತು ‘ಮಾಸ್’ ಆಗಿದೆ. ಈ ‘ಮಾಸ್’ ಮಾತಿನಲ್ಲಿ ಸ್ಟ್ರೆಂಥ್ ಇದೆ. ಈ ಬಗೆಯ ಗಟ್ಟಿತನದ ಮಾತಿಗೆ ಸೃಜನಶೀಲ ಆಯಾಮವಿದೆ. ಈ ಕಾರಣಕ್ಕೆ ಇಂಥದ್ದು ತಲೆಮಾರನ್ನು ತಡವಿಕೊಂಡು ಸಾರ್ವಕಾಲಿಕವಾಗುತ್ತದೆ. ಇದನ್ನೇ ಹಿಂದಿನ ಬರಹಗಾರರು ಮತ್ತು ಸಮಕಾಲೀನ ವಿಮರ್ಶಕರು ವಿಶ್ಲೇಷಕರು ತಮ್ಮದೇ ಬಗೆಯಲ್ಲಿ ಉದಾಹರಿಸಿ ಹೇಳಿದ್ದಿದೆ.
ಈ ಸಂಬಂಧದ ಮಾತಿನ ಜಾಡು ಹಿಡಿದು
ಹೊರಟಾಗ ಇಲ್ಲಿನ “ತಲ್ಲಣಿಸದಿರು ಜೀವವೇ” ಎದುರಾಗುತ್ತದೆ. ಪ್ರತಿಮಾಳ ಜೀವನ ಮತ್ತು ಅವಳ ಮನಸ್ಥಿತಿಯನ್ನು ಒಂದು ಗುಚ್ಛವಾಗಿ ಕಟ್ಟಿಕೊಡುವ ಚಿತ್ರ ಇಲ್ಲಿದೆ. ಅವಳ ಪ್ರತಿ ಹೆಜ್ಜೆಯಲ್ಲು ಸವಾಲುಗಳಿವೆ. ಅವಳ ಮನಸ್ಸಿನಲ್ಲಿ ಅಗಾಧ ನೋವಿದೆ. ತನ್ನ ಕರುಳ ಬಳ್ಳಿಯ ಜೊತೆಗೆ ತನಗೆ ತಾನೇ ಸಂತೈಸಿಕೊಂಡು ಸಾಗುವಾಗ ಸಂಗಾತಿಯ ಹುಡುಕಾಟ, ಇಂಥ ಸಂಗಾತದೊಳಗಡೆನೆ ಒಂದು ಧಾವಂತ. ನೈತಿಕವಾಗಿ ಬದುಕುವ ಹಂಬಲ. ಆದರೆ ಅವಳ ಮನಸ್ಸಿನ ಆಯ್ಕೆ? ಸಮಾಜದ ಕೋನದಲ್ಲಿ ಅದು ಅನೈತಿಕವೂ ಅಪ್ರಮಾಣಿಕವೂ ಆಗಿ ಬಿಡುವ ಅಪಾಯ. ಡೈವೊರ್ಸ್ ಕೊಟ್ಟ ಗಂಡ, ನಂತರ ಮರ್ಯಾದೆಯಾಗಿ ಬದುಕು ಮಾಡಲು ತನ್ನ ಆಯ್ಕೆಯ ವ್ಯಕ್ತಿಯ ನಡೆ. ಎಲ್ಲಕ್ಕಿಂತ ಹೆಚ್ಚಾಗಿ ಎದುರಿಗಿದ್ದ ಕರುಳ ಬಳ್ಳಿಯ ಭವಿಷ್ಯ ಇದರೊಂದಿಗೆ ಚಂಚಲಗೊಳ್ಳುವ ಮನಸ್ಸು. ಈ ಕ್ಷಿಪ್ರತೆಯಲ್ಲಿ ಬದುಕಿನ ಸಂಬಂಧವನ್ನು ನೈತಿಕತೆಯ ನೆಲೆಯಲ್ಲಿ ಕಾಪಿಟ್ಟುಕೊಳ್ಳುವ ಪ್ರಮೇಯ. ಅಂತಿಮವಾಗಿ ಅವಳು ಅರಸುತ್ತ ಬಯಸುವ ಸಂಬಂಧದ ನಡೆ ಅನೈತಿಕವೇ..? ಇದನ್ನು ‘ಅನೈತಿಕ’ ಎಂದು ಏಕೆ ಭಾವಿಸಬೇಕು? ‘ನೈತಿಕ’ ‘ಅನೈತಿಕ’ ಕೇವಲ ಹೆಣ್ಣಿಗೆ ಅಂಟಿಕೊಂಡ ಪ್ರಾರಬ್ಧವೇ? ಹಾಗಾದರೆ ಅನಿರುದ್ಧನದು ನೈತಿಕವೇ? ಗಂಡ ರಘುನಂದನನದು? ಪ್ರತಿ ಹಂತದಲ್ಲು ಪ್ರತಿಮಾಳ ಪಾತ್ರದಲ್ಲಿ ಸಹನೆ ಇದೆ. ಗಂಡನ ವಿಚ್ಛೇದನ ಸಂದರ್ಭದಲ್ಲು, ಅನಿರುದ್ಧ ಮನೆಯವರ ಮಾತನ್ನು ಅಲ್ಲಗಳೆಯಲಾರದೆ ಪ್ರತಿಮಾಳ ಬಗೆಗೂ ಸ್ಪಷ್ಟವಾಗಿ ನಿಲುವು ತೆಗೆದುಕೊಳಲಾರದೆ ಬೇರೊಂದು ಮದುವೆಯಾಗಿ ದೂರಾದಾಗಲೂ ಬಹಿರಂಗದಲ್ಲಿ ಪ್ರತಿರೋಧ ತೋರದೆ ತಣ್ಣಗೆ ನಿರ್ವಹಿಸುವ ಅವಳ ಅಂತರಂಗ ದುಮುಗುಡುತ್ತದೆ. ಹೀಗೆ ಪ್ರತಿಮಾ ಪಾತ್ರದಂತೆ ಉಳಿದ ಪಾತ್ರಗಳ ಮನಸ್ಸುಗಳು ಹಿಂದಕ್ಕು ಮುಂದಕ್ಕು ಹೊಯ್ದಾಡುತ್ತ ತಲ್ಲಣಿಸುವ ಜೀವಗಳ ಕಥೆಯಾಗಿ ತನ್ನ ಹದವನ್ನು ಲಯಬದ್ಧವಾಗಿ ಪೋಣಿಸಿಕೊಂಡು ಸಾಗುತ್ತದೆ. ವಕ್ವಾಡಿ ಅವರ ಈ ಕಥೆಯ ರಚನಾ ಶೈಲಿಯಲ್ಲಿ ತೂಕಬದ್ಧ ಗಂಭೀರತೆ ಇದೆ. ಕಥೆಗಾರನ ಮನಸ್ಸಿನಲ್ಲಿ ತಾಯ್ತನವಿದೆ.
ಈ ಸಂಕಲನದ ಬಹುಮುಖ್ಯ ಕಥೆ “ಅಜ್ಜಯ್ಯನ ಕನಸು” – ಪ್ರಸ್ತುತ ರಾಜಕೀಯ, ದೇವರು, ಧರ್ಮ, ಜಾತಿ, ಕೋಮುವಾದ – ಇವುಗಳ ಕೇಂದ್ರದಲ್ಲಿ ದಿಕ್ಕು ತಪ್ಪುತ್ತಿರುವ ಯುವ ಸಮೂಹದ ವಿದ್ಯಮಾನಗಳತ್ತ ಬೆಳಕು ಚೆಲ್ಲುತ್ತದೆ.
ಮಹಾಬಲ ಶೆಟ್ಟರದು ಆದರ್ಶದ ಜೀವನ. ಅದನ್ನು ತನ್ನ ಕುಟುಂಬ, ಮಕ್ಕಳು, ಮೊಮ್ಮಕ್ಕಳು, ಅಳಿಯನಲ್ಲಿ ಕಾಣುವ ಹಂಬಲ. ಆದರೆ ಅವರ ಕನಸು, ಬದುಕಿದ್ದಾಗಲೇ ಮಣ್ಣಾಗುತ್ತದೆ. ಆ ಕುಟುಂಬದ ಯಾವೊಬ್ಬನಿಗೂ ಮಹಾಬಲ ಶೆಟ್ಟರ ಆದರ್ಶದ ಗುಣಗಳಿಲ್ಲ. ಮೊಮ್ಮಗ ಅರ್ಜುನನ ಮೇಲೆ ಅಪಾರ ಭರವಸೆ, ನಂಬಿಕೆ, ಪ್ರೀತಿ. ಕಾಲಾಂತರದಲ್ಲಿ ಅವನು ತಲುಪುವ ಸ್ಥಿತಿ ಧರ್ಮ ಸಂಕಟದ್ದು. ದ್ವೇಷ, ಅಸೂಯೆ, ಸಿಟ್ಟು, ಗಲಭೆ, ರಕ್ತಪಾತದಂಥ ಕೂಪದೊಳಕ್ಕೆ ಸರಿದು ಬಿಡುವ, ಯಾರೂ ಊಹಿಸಲಾರದಂಥ ತನ್ನ ಅಜ್ಜಯ್ಯನ ಕನಸನ್ನು ಭಗ್ನಗೊಳಿಸುವ ಮಟ್ಟಕ್ಕೆ ಇಳಿದು ಸಮಾಜ ಕಂಟಕನಾಗುವಲ್ಲಿ ಕಥೆ ಒಂದು ಸ್ಪಷ್ಟ ಚಿತ್ರಣವನ್ನು ಕೊಡುತ್ತದೆ. ಲೇಖಕರು ಆಯ್ದುಕೊಂಡಿರುವ ವಿಷಯ, ಸರಿ ಸುಮಾರು ಹತ್ತು ವರ್ಷಗಳಲ್ಲಿ ಭಾರತದಲ್ಲಿ ಆಗಿ ಹೋಗಿರುವ ಕೋಮು ಸಂಘರ್ಷ ಮತ್ತು ಅದಕ್ಕೆ ಬಲಿಪಶುಗಳಾಗಿ ಜೀವಜ್ಜೀವನವನ್ನೇ ಪಣಕ್ಕೊಡ್ಡಿದ ಯುವ ಮನಸ್ಸುಗಳ ಧಾರುಣತೆಯನ್ನು ಸೂಕ್ಷ್ಮವಾಗಿ ಸೂಚ್ಯವಾಗಿ ಓದುಗನೆದುರು ಬಿಚ್ಚಿಟ್ಟಿರುವುದು ಕಥೆಯ ಸ್ವರೂಪದಲ್ಲಿ ಕಾಣಬಹುದು. ಈ ಕಾರಣಕ್ಕೆ ‘ಅಜ್ಜಯ್ಯನ ಕನಸು’ ಬೇರೆ ಬೇರೆ ಕಾರಣಗಳಿಗಾಗಿ ಗಮನ ಸೆಳೆಯುತ್ತದೆ.
ಕಥೆಗಾರ ಸತೀಶ್ ಶೆಟ್ಟಿ ವಕ್ವಾಡಿ ಈ ಕಥಾ ಸಂಕಲನದಲ್ಲಿ ಬಳಸಿರುವ ಭಾಷೆ –
“ನಾನ್ ನಿಮ್ಗೆ ಯೆಸ್ಟ್ ಸಲ ಹೇಳ್ದೆ, ಕೆಂಡ್ಯಾ?”
“ಅವತ್ತು ಮಾಬ್ಲಣ್ಣ ತಿಥಿ ದಿನ ಊಟ ಇಟ್ಟಾಗ ಕಾಕಿ ಬರ್ಲೇ ಇಲ್ಲ ಕಾಣ”
“ಎಲ್ಲ ನಿಮ್ ಮಾತ್ನ ಕೆಂತ್ರ್ ಅಲ”
“ನಾನೇನ್ ನಿಮ್ಮ್ ಹತ್ತ ನಾಳೇನೇ ಮದಿ ಆತಿ ಅಂದ್ನ”
“ಚಿಂತು, ನಿಂಗೇನ್ ಮರ್ಲ? ಮನೀ ವಕ್ಲ ಮಾಡ್”
“ಐತ್ ಅಯ್ಯ, ಬತ್ತೇ. ನಿಮ್ಮನಿ ಊಟನ ಯಾವತ್ತಾದ್ರೂ ಮಿಸ್ ಮಿಡಿದ್ನಾ ಹೇಳಿ. ಚೆಣ್ ಹುಡ್ಗ ಇಪ್ಪತಿಗೆ ಅಪ್ಪಯ್ಯನ್ ಜೊತೆ ಬರ್ತಿದ್ದೆ”
ತರಹದ ಸ್ಥಳೀಯ ಕುಂದಾಪುರ ನೆಲದ ಭಾಷೆಯನ್ನು ಬಿಟ್ಟುಕೊಡದೆ ಇಲ್ಲಿರುವ ಎಲ್ಲ ಕಥೆಗಳಲ್ಲು ತಂದಿದ್ದಾರೆ. ಅದರಲ್ಲು ನಕ್ಷತ್ರ ಜಾರಿದಾಗ, ಅಜ್ಜಯ್ಯನ ಕನಸು, ಗಾಳಿ ಮರ, ಕೊನೆಯ ಎರಡು ಎಸೆತಗಳಲ್ಲಿ ಈ ಭಾಷೆಯ ಸೊಗಡು ತುಸು ಹೆಚ್ಚೇ ಇದ್ದು – ಕಥೆಗಳಿಗೆ ಜೀವಸ್ಪರ್ಷದಂಥ ಕಲಾತ್ಮಕ ಮೆರುಗು ನೀಡಿದೆ. ಅದನ್ನು ಇಲ್ಲಿ ಓದುವುದೇ ಒಂಥರ ಚೆಂದ. ಈ ಆಡುನುಡಿ ಕೆಲ ಕಡೆ ಓದುಗನನ್ನು ತಡೆದು ನಿಲಿಸುತ್ತದೆ. ಇದು ಕಥಾ ನಿರೂಪಣೆಯ ತೊಡಕಲ್ಲ ಓದುಗನ ತೊಡಕು ಅನಿಸಿದರು ಒಂದು ಪ್ಯಾರ ಅಥವಾ ಎರಡೆರಡು ಸಾಲಿನ ಆಡುನುಡಿಯ ಈ ಸಂಭಾಷಣೆ ಓದ್ತಾ ಓದ್ತಾ ಆ ಭಾಷೆಯ ಸೊಗಡು ಎಲ್ಲವನ್ನೂ ತಾನೇ ತಾನಾಗಿ ಓದುಗನಿಗೆ ಅರ್ಥೈಸುತ್ತದೆ ಎಂಬುದೇ ಅದರ ವಿಶಿಷ್ಟ ಗುಣ.
ಕೊನೆಯದಾಗಿ, ವಕ್ವಾಡಿ ಅವರ ಹಿಂದಿನ ಕಥಾ ಸಂಕಲನ “ಅಜ್ಜ ನೆಟ್ಟ ಹಲಸಿನ ಮರ”ದ ನನ್ನ ಓದಿನ ಗ್ರಹಿಕೆಗು, ಪ್ರಸ್ತುತ “ಕೊನೆಯ ಎರಡು ಎಸೆತಗಳು” ಕಥೆಗಳ ಗ್ರಹಿಕೆಗು ತಾರ್ಕಿಕವಾಗಿ ಸಂಕ್ಷಿಪ್ತವಾಗಿ ಒಂದು ಉಪ ಸಂಹಾರದ ರೂಪದಲ್ಲಿ ಹೇಳುವುದಾದರೆ, ಒಂದು ಕಥೆ, ಕವಿತೆ, ಕಾದಂಬರಿ – ಬರೆವ ತನಕ/ ಬರೆವ ಮುಂಚೆ ಆ ಕಥಾವಸ್ತು/ ಕವಿತೆಯ ವಸ್ತು/ ಕಾದಂಬರಿಯ ವಸ್ತು ಬರೆವವನ ಎದೆಯೊಳಗೆ ಹೊಯ್ದಾಡಿ ಮಾಗುವಾಗೆಲ್ಲ ಅದು ಬರಹಗಾರನದು. ಬರೆದಾದ ಮೇಲೆ ಅದು ಅವನದಲ್ಲ ಇತರರದು – ಎಂದು ಹಿರಿಯ ಲೇಖಕರೊಬ್ಬರು ಹೇಳುತ್ತ ಅದನ್ನು ವಿಸ್ತೃತ ನೆಲೆಯಲ್ಲಿ ವ್ಯಾಖ್ಯಾನಿಸಿದ್ದಾರೆ. ಹಾಗಾಗಿ ಕವಿ/ ಕಥೆಗಾರ/ ಕಾದಂಬರಿಕಾರ – ಈಗಾಗಲೇ ಬರೆದದ್ದ ಬಿಟ್ಟು ಹೊಸದಾಗಿ ಬರೆಯುತ್ತಿದ್ದೇನೆ ಎಂದು ಬರೆಯಬೇಕು. ಬರೆವ ಮುನ್ನ ಕಥೆಯ ವಸ್ತು, ವಿಷಯ, ಕಥನ ಶೈಲಿ ಕ್ರಮದ ಬಗ್ಗೆ ಒಂದು ಸ್ಪಷ್ಟ ಗ್ರಹಿಕೆ ಇಟ್ಟುಕೊಂಡು ಬರೆದಾಗಲೆ ಬರೆಯುವ ಪ್ರತಿ ಕಥೆ, ಕವಿತೆ ಕಾದಂಬರಿ ಹೊಸದಾಗಿ ಕಾಣುತ್ತದೆ. ಹಾಗೆ ಕಂಡಾಗಲೆ ಓದುಗನಿಗೆ ‘ಅದರ ಮೇಲಿನ ಸಂಬಂಧ’ ಗಟ್ಟಿಯಾಗಿ ಹೊಸ ಹೊಸ ಓದುಗನನ್ನು ತಡವಿ ತಡವಿ ಮುನ್ನುಗ್ಗುತ್ತದೆ. ಇದು ಲೇಖಕ ಮತ್ತು ಅವನ ಬರಹದ ಜೀವಂತಿಕೆ ಕೂಡ.
–ಎಂ.ಜವರಾಜ್
ಕೃತಿ: ಕೊನೆಯ ಎರಡು ಎಸೆತಗಳು (ಕಥಾ ಸಂಕಲನ)
ಲೇಖಕರು: ಸತೀಶ್ ಶೆಟ್ಟಿ ವಕ್ವಾಡಿ
ಬೆಲೆ: ೧೮೦ ರೂಪಾಯಿಗಳು
ಪ್ರಕಾಶಕರು: ಬುಕ್ ಬ್ರಹ್ಮ
ಪ್ರತಿಗಳಿಗಾಗಿ ಸಂಪರ್ಕಿಸಿ: 97430 24960
[ ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. “ಕತ್ತಲ ಹೂವು” (ನೀಳ್ಗತೆ) ಪ್ರಕಟಣೆಗೆ ಸಿದ್ದಗೊಳ್ಖುತ್ತಿದೆ. ಇವರ ಕಥೆ, ಕವಿತೆ, ಇತರೆ ಬರಹಗಳು ಪಂಜು ಸೇರಿಂದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಇದಲ್ಲದೆ ಪ್ರಸ್ತುತ “ಪೋಸ್ಟ್ ಮ್ಯಾನ್ ಗಂಗಣ್ಣ” ಎಂಬ ನೀಳ್ಗತೆ ಪಂಜುವಿನಲ್ಲಿ ಪ್ರಕಟವಾಗುತ್ತಿದೆ ]
Nice Sir 💐💐💐