ಆಲೋಚನಾ ಕ್ರಮದ ಕ್ಷಿತಿಜವನ್ನು ವಿಸ್ತರಿಸುವ ‘ನಾಲ್ಕು ಋತುಗಳ ಹುಡುಗಿ’: ಡಾ. ಸದಾಶಿವ ದೊಡಮನಿ

‘ನಾಲ್ಕು ಋತುಗಳಹುಡುಗಿ’ ಎಸ್. ನಾಗಶ್ರೀ ಅಜಯ್ ಅವರ ಮೊದಲ ಕವನ ಸಂಕಲನವಾಗಿದ್ದು, ಕರ್ನಾಟಕ ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಪಡೆದು, ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಹೆಸರೇ ಸೂಚಿಸುವ ಹಾಗೆ ಪ್ರಸ್ತುತ ಕೃತಿಯಲ್ಲಿ ನಾಲ್ಕು ಋತುಗಳಿದ್ದು, ಒಟ್ಟು ನಲವತ್ತೆರಡು ಕವಿತೆಗಳಿವೆ. ಅನುದಿನವೂ ಕಾಡುವ, ನಮ್ಮ ಆಲೋಚನಾ ಕ್ರಮದ ಕ್ಷಿತಿಜವನ್ನು ವಿಸ್ತರಿಸುವ ಇಲ್ಲಿಯ ಕವಿತೆಗಳು ಮೊದಲ ಓದಿಗೇ ಅತ್ಯಂತ ಆಪ್ತವಾಗಿ ದಕ್ಕುತ್ತವೆ. ಹೀಗೆ ದಕ್ಕುವುದು ಯಶಸ್ವಿ ಸಂಕಲನದ ಪ್ರತೀಕವೇ ಆಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಕವಿಯ ಸಾವಯವ ಸಹಜ ಅಭಿವ್ಯಕ್ತಿ. ಸಂಕೀರ್ಣತೆಯೇ ಕಾವ್ಯದ ಜೀವಾಳವೆಂದು ಭಾವಿಸಿಕೊಂಡು, ಬರೆಯುತ್ತಾ, ಬರೆಯುತ್ತಾ ಅದೇ ಭ್ರಮೆಯ ಜಾತ್ರೆಯಲ್ಲಿಯೇ ಕಳೆದು ಹೋಗುತ್ತಿರುವವರ ನಡುವೆ ನಾಗಶ್ರೀಯವರು ತುಂಬಾ ವಿಭಿನ್ನವಾಗಿ ನಿಲ್ಲುತ್ತಾರೆ.

ಈ ಕುರಿತು ಮುನ್ನುಡಿಯಲ್ಲಿ ಆರ್. ದಿಲೀಪ್ ಕುಮಾರ್ ಅವರು “ನಾಗಶ್ರೀ ಭಾಷೆ ಮೂಲಕ ಸೂಕ್ಷ್ಮ ಧ್ವನಿ ತರಂಗಗಳನ್ನು ಹಸ್ತಾಂತರಿಸುವ ಸಶಕ್ತ ಅಭಿವ್ಯಕ್ತಿಯ ಮಾರ್ಗಗಳನ್ನು ಬಲ್ಲ ಸಹಜ ಕವಿ. …… ಸಹಜತೆಯೇ ನಾಗಶ್ರೀ ಅವರ ಕವಿತೆಗಳ ಜೀವಾಳ” ಎಂದು ನಾಗಶ್ರೀಯವರ ಕಾವ್ಯ ನೇಯ್ಗೆಯ ಎಳೆಗಳನ್ನು ಸರಿಯಾಗಿಯೇ ಗುರುತಿಸಿದ್ದಾರೆ. ಅಗೆದಷ್ಟು ಕಡಲಾಳ ಎನ್ನುವ ಹಾಗೆ ಇಲ್ಲಿಯ ಕವಿತೆಗಳನ್ನು ಓದಿಗೆ ಒಡ್ಡಿಕೊಳ್ಳುತ್ತಿದ್ದಂತೆಯೇ ಸಹೃದಯನೊಂದಿಗೆ ಮುಖಾಮುಖಿಗಿಳಿಯುತ್ತವೆ. ನಾಲ್ಕೂ ಋತುಗಳಲ್ಲಿ ಅಳವಟ್ಟ ಕವಿತೆಗಳು ಇದೇ ಮಾದರಿಯದವುಗಳಾಗಿದ್ದು, ಇವುಗಳೊಳಗೆ ಒಂದು ಸೂಕ್ಷ್ಮ ಸಂವೇದನೆಯ, ಕಲಾತ್ಮಕತೆಯ ಕೆತ್ತನೆಯ ಒರಿಜಿನಲ್ ಭಾವ, ಕಾವ್ಯಶಿಲ್ಪ ರೂಪಣಗೊಂಡಿರುವುದು ಸಂಕಲನದ ಓದಿನಿಂದ ವೇದ್ಯವಾಗುತ್ತದೆ.

‘ಮೊದಲ ಋತು’ವಿನಲ್ಲಿ ಒಟ್ಟು ಹದಿನೈದು ಕವಿತೆಗಳಿದ್ದು, ಇಲ್ಲಿಯ ಕವಿತೆಗಳಲ್ಲಿ ಜೀವನಾನುಭವಗಳ ಜಿಜ್ಞಾಸೆ, ನೆನಪುಗಳ ಮೇಲೊಗರ, ವಾಸ್ತವತೆಯ ಅನುಸಂಧಾನ ಅತ್ಯಂತ ಹೃದ್ಯವಾಗಿ ಮೂಡಿ ಬಂದಿವೆ. ಇವುಗಳ ಧ್ವನಿ ತರಂಗದ ಗುರುತುಗಳು ‘ಕವಿಯ ಕೊಲ್ಲುವುದು ಸುಲಭ’ದಂತಹ ಕವಿತೆಯಲ್ಲಿ ಗಕ್ಕನೆ ಕಾಣಸಿಗುತ್ತವೆ. ಈ ಕವಿತೆಯಲ್ಲಿ ಕವಿಯ ಸಾವಿನ ಸ್ವರೂಪವನ್ನು ಕವಯಿತ್ರಿ ಹೀಗೆ ಸೂತ್ರೀಕರಿಸುತ್ತಾರೆ:

“ಕವಿಯ ಕೊಲೆಯ ಬಲು ಸುಲಭ
ಕತ್ತಿ, ವಿಷ, ಬಂದೂಕು, ಸೈನೈಡ್
ಏನು ಬೇಡ
ಬರೆದ ಕವಿತೆಯೊಂದನ್ನು
ಅಮೂಲಾಗ್ರ ಪರಿಶೀಲಿಸಿ
ಅವನೆದುರಲ್ಲೇ ಉದುರಿದ
ಕೂದಲನ್ನು ಗುಂಗುರಾಗಿಸಿ
ಎಸೆದಂತೆ, ತೂರಿ ಬಿಟ್ಟರೆ
ಮುಗಿಯಿತು”

ಕವಿ ಇಲ್ಲಿ ಕೊಡುವ ಹೋಲಿಕೆ ತುಂಬಾ ಸಾಮಾನ್ಯವೆಂದು ಮೇಲ್ನೋಟಕ್ಕೆ ತೋರಿದರೂ ಆ ಸಾಮಾನ್ಯ ಹೋಲಿಕೆಯ ಹೊಕ್ಕುಳಲ್ಲೇ ಒಂದು ಗಹನ, ಗಂಭೀರವಾದ ವಿಚಾರದ ತಂತು ಇರುವುದು ಓದುಗನ ಅರಿವಿಗೆ ಬಾರದೇ ಇರದು. ಮುಂದುವರೆದು ಕವಿ ಪ್ರತಿಭೆಯ ಇತಿ-ಮಿತಿಗಳನ್ನು ಶೋಧಿಸುತ್ತಲೇ ಕೊನೆಯಲ್ಲಿ

“ಮನುಷ್ಯರ ಪಾಡನ್ನು, ಹಾಡಾಗಿಸುವನಷ್ಟೇ
ನೋಯಿಸುವ ಮುನ್ನ
ಅವನ ಹೃದಯಕ್ಕಿಷ್ಟು
ಗಮನ ನೀಡಿ’

ಎಂದು ಕವಿಯ ಬಗ್ಗೆ ಇನ್ನಿಲ್ಲದ ಕಕ್ಕುಲಾತಿ ತೋರುವುದು ಅನನ್ಯವಾಗಿದೆ. ಹಲವು ಅಸಂಗತಗಳನ್ನು ಸಂಗತವಾಗಿಸುವ ಪ್ರಯತ್ನದ ಕವಿತೆ ‘ಒಡೆದ ರೂಪಕ ಹುಡುಕಿ’. ಈ ಕವಿತೆಯಲ್ಲಿ ‘ಒಡೆದ ಮನಸಿಗೆ ಇನ್ನೂ, ರೂಪಕಗಳು ಸೋಲುತ್ತವೆ’ ಎನ್ನುತ್ತಲೇ ಒಡೆದ ಹಾಲು, ಒಡೆದ ಕನ್ನಡಿ, ಒಡೆದ ಹೃದಯ, ತಳವೊಡೆದ ಪಾತ್ರೆ, ಬಳೆಚೂರ ಇವುಗಳ ಬಹುರೂಪ, ಸದುಪಯೋಗವನ್ನು ಕಟ್ಟಿಕೊಡುತ್ತಾರೆ. ‘ಒಡೆದ ಮನಸಿಗೆ ತೇಪೆ ಬಳೆಯಲಾಗದು, ಬಳೆದರೂ ಅದು ನಿರ್ಥಕ. ಗಾಯ ಮಾಯ್ದರೂ ಕಲೆ ಅಮರ’ ಎಂಬ ವಾಸ್ತವತೆಯ ಚಿತ್ರಣ ಕವಿತೆಯಲ್ಲಿ ಮನೋಜ್ಞವಾಗಿ ಮೂಡಿ ಬಂದಿದೆ. ‘ಬಿರುಸು ಮಳೆಯಲ್ಲೇ’ ಕವಿತೆ ಇದೊಂದು ಶೋಕ ಸಾಗರ ತಪ್ತ ಭಾವಾಣುವಿನಂತಿದ್ದು, ಇದು ವ್ಯಕ್ತಿ, ಸಾವು, ಅಸ್ಥಿರತೆ, ನೆನಪು ಇವೆಲ್ಲವುಗಳನ್ನು ಒಟ್ಟೊಟ್ಟಿಗೆ ಮುಖಾಮುಖಿಯಾಗಿಸುತ್ತದೆ. ಕವಿಯ ಹೊರ ಜಗತ್ತಿನ,ಕವಿತೆಯ ಒಳ ಪರಿಸರದ ಸಾತತ್ಯದ ಸಾದೃಶ್ಯೀಕರಣ ಇಲ್ಲಿ ಪರಿಣಾಮಕಾರಿಯಾಗಿ ಇಲ್ಲಿ ಮೂಡಿ ಬಂದಿದೆ. ಜೊತೆಗೆ ಇಲ್ಲಿ ಬಳಕೆಯಾಗುವ ಬಹುಪಾಲು ರೂಪಕಗಳಲ್ಲೆವೂ ಶೋಕದ ತುಂತುರು ಹನಿಯಂತೆಯೇ ಇವೆ.

“ಎಷ್ಟು ಪ್ರೇಮ ಕವನ
ಮಳೆಯ ಸೌಂದರ್ಯದ ಕವಿತೆ
ಬರೆಯಲು ಕೂತರೂ
ಆಗಾಗ ವಹಿಗೆ ಸಿಕ್ಕು
ಕವಿತೆಯೇ ಕೊಲೆಯಾಗುತ್ತದೆ”

ಎನ್ನುತ್ತಲೇ ಕವಿತೆ ಕೊನೆಯಲ್ಲಿ ‘ನಾನು ಏನೆಂದು, ಶುಭ್ರ ಆಗಸ ಮೂಡುವವರೆಗೂ, ಕಾದು ಕಾದು, ಕಾಫಿ ಹೀರುತ್ತೇನೆ’ ಎಂಬ ಯಥಾರ್ಥದ ನುಡಿಗಳು ಕಾವ್ಯಕ್ಕೆ ಉದಾತ್ತತೆಯನ್ನು ತಂದು ಕೊಟ್ಟಿದೆ. ಹೀಗಾಗಿ ಈ ಕವಿತೆ ಸಂಕಲನದ ಮಹತ್ವದ ಕವಿತೆಗಳಲ್ಲಿ ಒಂದಾಗಿ ಗಮನ ಸೆಳೆಯುತ್ತದೆ. ಈ ಋತುವಿನಲ್ಲಿ ಗಮನ ಸೆಳೆಯುವ ಮತ್ತೊಂದು ಕವಿತೆ ‘ಒಂದು ಬಿನ್ನಹ ದೊರೆಯೇ ಕೇಳು’. ಈ ಕವಿತೆ ಮಾತ್ರವಲ್ಲ; ಈ ಸಂಕಲನದ ಬಹುಪಾಲು ಕವಿತೆಗಳು ಆಕರ್ಷಕ ಶೀರ್ಷಿಕೆಗಳಿಂದಲೇ ನಮ್ಮನ್ನು ಥಟ್ಟನೆ ಸೆಳೆದು ಬಿಡುತ್ತವೆ. ಮುನ್ನುಡಿಯಲ್ಲಿ ಈ ಪದ್ಯದ ಶೀರ್ಷಿಕೆಯನ್ನು ಆರ್ . ದಿಲೀಪ್ ಕುಮಾರ್ ಅವರು ‘ಗೋವಿನ ಹಾಡು’ ಜನಪದ ಕಥನ ಕವನದಲ್ಲಿ ಬರುವ ‘ಒಂದು ಬಿನ್ನಹ ಹುಲಿಯೇ ಕೇಳು’ದೊಂದಿಗೆ ಸಮೀಕರಿಸಿ, ಅರ್ಥೈಸಿದ್ದು, ಔಚಿತ್ಯಪೂರ್ಣವಾಗಿದೆ. ಮೊದಲ ಭಾಗದಲ್ಲಿ ಬರಹಗಾರನ ಬರವಣಿಗೆಯ ನಿಲುವುಗಳ ಬಗ್ಗೆ ಮೂಲಭೂತ ಪ್ರಶ್ನೆಗಳನ್ನು ಎತ್ತಿದರೆ; ಎರಡನೆಯ ಭಾಗದಲ್ಲಿ ಬರಹದ ಜೀವಂತಿಕೆಯ ಬಗ್ಗೆ ಚಿತ್ರಿಸುತ್ತಾ, ಬರಹಗಾರನಿಗೆ ಒಂದು ಸ್ಪಷ್ಟವಾದ ನಿರ್ದೇಶನವನ್ನು ಕೊಡುವುದು ಅತ್ಯಂತ ಧ್ವನಿಪೂರ್ಣವಾಗಿ, ಅಷ್ಟೇ ಕಾವ್ಯಾತ್ಮಕ ಮೂಡಿ ಬಂದಿದೆ. ಆ ಸಾಲುಗಳು ಹೀಗಿವೆ.

“ನೀನು ಬರೆದ ಕಥೆಗಿಂತ
ಬರೆಯದ್ದೇ ಹೆಚ್ಚು ಜೀವಂತ
ಬರೆಯುದಾದರೆ ಬರೆ
ಮೊಗ್ಗರಳಿ ಹೂವಾಗುವ ನಾಜೂಕು
ಅಮ್ಮನ ಮನೆ ಸೀರೆ ಹಿತ
ಅಪ್ಪನ ಜೇಬಿನ ಕೇಸರಿ ಪೆಪ್ಪರ್ಮೆಂಟು
ಮುಗ್ಧ ಕಂದನ ಕೇಕೆಯಂತಹ
ಕಥೆಗಳನು”

ಇಲ್ಲಿ ಕವಿಯತ್ರಿ ಆರೋಗ್ಯಪೂರ್ಣ ಆಲೋಚನಾ ಕ್ರಮ ಮತ್ತು ಬರಹಗಾರನಿರಬೇಕಾದ ಸೂಕ್ಷ್ಮವಾದ ಸಾಮಾಜಿಕ ಬದ್ಧತೆ, ನಿಷ್ಠೆಯ ಅಂಶಗಳನ್ನು ಸ್ಫುಟವಾಗಿ ಕಟ್ಟಿಕೊಟ್ಟಿದ್ದಾರೆ. ಇದರ ಮುಂದುವರೆದ ಭಾಗವಾಗಿ ‘ತಾಯಿ ಕವಿತೆ’ ರಚನೆಯ ಆದಂತೆ ತೋರುತ್ತದೆ.

ಈ ಭಾಗದಲ್ಲಿ ಕಾಡುವ ಇನ್ನೊಂದು ಮಹತ್ವದ ಕವಿತೆಯೆಂದರೆ ‘ನೀಲಿ ಮೋಹದ ತರುಣಿ’. ಈ ಕವಿತೆಯನ್ನು ಕವಯತ್ರಿ ತನ್ನ ಕುರಿತೇ ಬರೆದುಕೊಂಡಂತಿದೆ. ನೀಲಿ ಬಣ್ಣದ ಮೇಲೆ ತನಗಿರುವ ಅನನ್ಯ ಪ್ರೀತಿಯನ್ನು ದೃಢೀಕರಿಸುತ್ತಲೇ ‘ಕಣ್ಣು ಮತ್ತೆ ಮತ್ತೆ ಹುಡುಕಿ, ನೆಲೆ ನಿಲ್ಲುವುದು ಮಾತ್ರ, ನೀಲಿಯಲ್ಲೇ’ ಎನ್ನುತ್ತಾ ಮುಂದುವರೆದು ‘ನೀಲಿ ನೀಲಿ ನೀಲಿ ವ್ಯಾಮೋಹ, ಎದೆಗಂಟಿದ್ದು, ಸುಪ್ತದಲಿ ಸ್ವರವಾಗಿ ಹಾಡಿದ್ದು, ನಿನಗೆ ಕೇಳಿಸುವುದಿಲ್ಲ’ ಎಂದು ಅವಿನಾಭಾವವನ್ನು ಸೂತ್ರೀಕರಿಸುತ್ತಲೇ ಅದನ್ನು ಕಡಲು, ಆಗಸಕ್ಕೆ ವಿಸ್ತರಿಸುತ್ತ, ವಿಸ್ತರಿಸುತ್ತ ಇಡೀ ಕವಿತೆಯ ಜೀವ-ಶರೀರವನ್ನು ನೀಲಿಮಯವಾಗುತ್ತದೆ.

‘ಎರಡನೆಯ ಋತು’ವಿನಲ್ಲಿ ಒಂಬತ್ತು ಕವಿತೆಗಳಿದ್ದು, ವ್ಯಕ್ತಿ ಕೇಂದ್ರೀಕೃತ ವಸ್ತುವನ್ನು ಒಳಗೊಂಡಿವೆ. ತಂದೆ, ತಾಯಿ ಇಲ್ಲಿ ಕವಿತೆಯಾಗಿ ಮೈದಾಳಿದ್ದಾರೆ. ನೆನಪುಗಳೇ ಇಲ್ಲಿಯ ಕವಿತೆಗಳ ಜೀವ-ಜೀವಾಳವಾಗಿದ್ದು, ಅಪ್ಪನನ್ನು ಕುರಿತು ಕವಯತ್ರಿ:

“ಯಾವ ನೆನಪಿನ ನೂಲು
ಹಿಡಿದು ಸುತ್ತಿದರೂ
ನಿನಗೇ ತಬ್ಬುವುದು ಜಾದು
ಆಗಿರಲಾರದು ತಂದೆ”

ಎನ್ನುತ್ತಾ, ಗೆಲುವಿಗೆ ಹೆಗಲಾಗಿ, ನೋವಿಗೆ ನಲ್ಮೆಯ ಸಾಂತ್ವನದ ನೆರಳಾಗಿ ನಿಂತ, ತಂದೆಯ ಅನನ್ಯ ವ್ಯಕ್ತಿತ್ವವನ್ನು ಚಿತ್ರಿಸುತ್ತಾ, ‘ಕಾಲನೇ ಉಳಿಸಿ ಹೋದ, ಮನಸ ಮಾಣಿಕ್ಯ, ಅನುದಿನ ಅಕ್ಕರೆಯನ್ನೇ ಸುರಿಸುವ, ವಿಸ್ಮಯ ನೀನು’ ಎಂದು ಬಣ್ಣಿಸಿದ್ದು, ಅತ್ಯಂತ ಮಾರ್ಮಿಕವಾಗಿದೆ. ಕವಯತ್ರಿ ಕೊನೆಯಲ್ಲಿ ‘ಜೀವಿತವೇ ಅರ್ಪಣೆ, ತಂದೆ ನಿನಗಿಂದು’ ಎಂದು ಇಡೀ ಜೀವನವನ್ನು ತಂದೆಯಾಗಿ ಸಮರ್ಪಿಸಿಕೊಂಡದ್ದು, ತಂದೆಯ ಮೇಲಿರುವ ಅಮಿತ ಪ್ರೀತಿಯನ್ನು ತೋರುತ್ತದೆ. ಕವಯತ್ರಿಗೆ ಜೀವನಾನುಭವವೇ ಬರವಣಿಗೆಯ ಹಿಂದಿರುವ ದೊಡ್ಡ ಶಕ್ತಿ. ಅದರಲ್ಲೂ ಬಾಲ್ಯದ ನೆನಪು, ಅನುಭವಗಳಂತೂ ಕವಿತೆಯಲ್ಲಿ ಕುಸುರಿ ಕೆತ್ತನೆಯಂತೆ ಅತ್ಯಂತ ನವಿರಾಗಿ ರೂಪಣಗೊಂಡಿವೆ. ಇದಕ್ಕೆ ‘ಒಂದು ಅಂಕದ ನಾಟಕ’ ಕವಿತೆ ಸಾಕ್ಷಿಯಾಗಿದೆ.

“…… ಮುರಿದ ಆಟಿಕೆ, ಗಾಜು, ಬೆಂಡು
ರಸ್ತೆಯಲ್ಲಿ ಹೊಳೆಯುತ್ತಿದ್ದ ಕಾಗೆ ಬಂಗಾರ
ಮರಳಿನ ದೊಡ್ಡ ರಾಶಿಯಲ್ಲಿ
ಕೆದುಕುತ್ತಿದ್ದ ಶಂಖ, ಕಪ್ಪೆ ಚಿಪ್ಪು
ಅಮೂಲ್ಯವೆಂಬಂತೆ ಆರಿಸಿ ತಂದು
ಕೋಟೆಗಳ ಕಟ್ಟಿ ಒಡೆಯುದವುದಲ್ಲೆಷ್ಟು ಮಜವಿತ್ತು!”

ಬಾಲ್ಯದ ದಿನಮಾನಗಳನ್ನು ಕೊಂಡಾಡುತ್ತಲೇ ಕಳೆದು ಹೋದ ಬಾಲ್ಯವನ್ನು, ಆ ಮುಗ್ಧತೆಯನ್ನು ಮತ್ತೆ ಪಡೆಯಬೇಕು. ಅದಕ್ಕೆ ಅಡ್ಡಗಾಲಾಗಿರುವ ಅಹಮ್ಮಿಕೆಯನ್ನು ಮೀರಬೇಕೆಂಬ ಆಶಯವನ್ನು ವ್ಯಕ್ತಪಡಿಸುತ್ತಲೇ ಅದು ಅಷ್ಟು ಸುಲಭವಲ್ಲವೆಂಬ ವಾಸ್ತವತೆಯ ಅರಿವೂ ಕವಯತ್ರಿಗಿದೆ.

ಉಳಿದಂತೆ ‘ತಾಯಿಯಂತೆ ಮಗಳು’ ಕವಿತೆಯಲ್ಲಿ ತಾನು ತಾಯಿಯಂತೆ ಆಗದೇ ಇರುವುದಕ್ಕೆ ಕೊರಗಿಲ್ಲದಿರುವುದು; ‘ಮಳೆಯ ಹಾಡಿಗೆ ಗೆಜ್ಜೆ ಬೇಕಿಲ್ಲ’ ಕವಿತೆಯಲ್ಲಿ ಮಳೆಯ ಚಿತ್ರಣದೊಂದಿಗೆ,ಅದೇ ಬಾಲ್ಯದ ನೆನಪುಗಳಲ್ಲಿ ಅಪ್ಪನನ್ನು ಹುಡುಕುವುದು; ‘ಜ್ವರದ ರಾತ್ರಿ’ಕವಿತೆಯಲ್ಲಿ ಅಮ್ಮನ ಅಕ್ಷಯ ಪ್ರೀತಿಯನ್ನು ಶೋಧಿಸುವುದು; ‘ಸಂಕ್ರಾಂತಿಯ ಸಂಜೆಗಳಲ್ಲಿ’ ಬಾಲ್ಯದಲ್ಲಿಯ ಸಂಕ್ರಾಂತಿಯ ಸಂಭ್ರಮ, ಅದು ಕಳಚಿ ಯೌವನಕ್ಕೆ ಕಾಲಿಟ್ಟ ನಾಚಿಕೆಯ ಕ್ಷಣ, ಸುಮಧುರವಾದ ದಾಂಪತ್ಯದ ಚಿತ್ರಣದ ಭಾವಗಳನ್ನು ಕಾಣುತ್ತೇವೆ. ಇದೇ ಭಾಗದಲ್ಲಿಯೂ ಕೊನೆಯ ಕವಿತೆ ‘ಗುರುವೆಂದರೆ ಬರಿಯ ಗುರುವಲ್ಲ’. ಇಲ್ಲಿ ಗುರುವೆಂದರೆ ತಾಯಿ….,ಬೆಳಕು…. ಬದುಕು…..ನಮ್ಮೊಳಗಿನ ಅಂತ್ ಸಾಕ್ಷಿ’ಯೆಂದು ನಿರ್ವಚಿಸುತ್ತಲೇ ಅನುಭಾವದತ್ತ ಮುಖ ಮಾಡುತ್ತಾರೆ.

‘ಋತು ಮೂರ’ರಲ್ಲಿ ಐದು ಕವಿತೆಗಳಿದ್ದು, ವ್ಯಕ್ತಿಗತ ವಸ್ತುಗಳನ್ನು ಒಳಗೊಂಡಿವೆ. ವಯೋ ಸಹಜ ಪ್ರೀತಿ, ಪ್ರಣಯದ ಕವಿತೆಗಳು ಇಲ್ಲಿದ್ದು, ಆಂಶಿಕ ಸಾರ್ಥಕತೆಯನ್ನು ಪಡೆದುಕೊಂಡಿವೆ. ಕವಯತ್ರಿಯ ತೆರೆದ ಮನಸ್ಸು, ಸ್ವಚ್ಛಂದ ಭಾವ ಅತ್ಯಂತ ಹೃದ್ಯವಾಗಿ ಕವಿತೆಯ ರೂಪ ತಾಳಿವೆ. ‘ಪ್ರಿಯ ಮೌನಿ’ ಕವಿತೆಯಲ್ಲಿ ಪ್ರಿಯಕರನನ್ನು ‘ಈತ ಆಕಾಶಕ್ಕೆ ಗಾಳ ಹಾಕಿ, ನಕ್ಷತ್ರ ಹಿಡಿಯುವ ಜಾದೂಗಾರ’ ಎಂದು ಬಣ್ಣಿಸುತ್ತಲೇ ಅವನ ಮೌನ ಸ್ವಭಾವವನ್ನು ಅತ್ಯಂತ ಆಪ್ತವಾಗಿ ಕಟ್ಟಿಕೊಟ್ಟರೆ; ‘ನಿನ್ನ ಧ್ಯಾನದಿ ನಾನಿರಲು ಸದಾ’ ಕವಿತೆಯಲ್ಲಿ ಪ್ರಿಯಕರನ ಪ್ರೀತಿ, ಭಾವೋತ್ಕರ್ಷಕ್ಕೆ ರೋಮಾಂಚಿತಳಾಗಿ:

“ಶ್ರಾವಣದ ಸೋನೆಯಲಿ
ರೇಷಿಮೆ ಸೀರೆಯಲಿ
ನೆನೆನೆನೆದು ಬರುವಾಗ
ನೀನಿಟ್ಟ ಕಚಗುಳಿಯೇ
ಹನಿಯಾದಂತೆ ಸಂಭ್ರಮಿಸಿ
ತಡೆತಡೆದು ಸೇರುವೆನು
ಮನೆಯ ಗುಡಿಯ”

ಎಂದು ನುಡಿದದ್ದು ಅತ್ಯಂತ ಭಾವಸ್ಪರ್ಶಿಯಾಗಿದೆ. ‘ಹಚ್ಚಿಕೊಂಡರೆ’ ಕವಿತೆಯಲ್ಲಿ ಕವಯತ್ರಿ ತಾನು ಹಾಗೂ ತನ್ನ ಪ್ರೀತಿ ಎಂತಹದ್ದು ಎಂಬುದನ್ನು ಮುಕ್ತವಾಗಿ ಹೇಳಿಕೊಳ್ಳುವುದು ತುಂಬಾನೇ ಆಪ್ತವಾಗಿದೆ. ಆ ಸಾಲುಗಳು ಹೀಗಿವೆ.

“ಹಚ್ಚಿಕೊಂಡರೆ ಹೇಗೆಂದು
ಒಮ್ಮೆ ನನ್ನ ಜೊತೆಗಿದ್ದು ನೋಡು
ಉಬ್ಬಸದ ಕಡೆ ಉಸಿರಿನಲ್ಲೂ
ನಿನ್ನದೇ ಹೆಸರು, ಉಸಿರುವ
ಹುಚ್ಚುಚ್ಚು ಹುಡುಗಿ ನಾನು”

ಎಂದು ತನ್ನನ್ನು ತಾನು ಅನಾವರಣಗೊಳಿಸಿಕೊಳ್ಳುತ್ತಲೇ ಹುಸಿ ಕೋಪ, ಮುನಿಸು ಇತ್ಯಾದಿಗಳು ಪ್ರೇಮದ ಮಧ್ಯೆ ಮಂಕಾಗುವುದನ್ನು ಸಾಬೀತುಪಡಿಸುತ್ತಾರೆ. ಕವಿತೆಯೇ ಕೊನೆಯಲ್ಲಿ ‘ಹಚ್ಚಿಕೊಂಡವರಿಗಷ್ಟೇ ಗೊತ್ತು, ಮೆಚ್ಚಿಕೊಂಡವರ ಸುಖ-ದುಃಖ ಇಚ್ಛೆಯಿದ್ದವರ ಆಳು ಈ ಸ್ವರ್ಗ-ನರಕ” ಸಾಲುಗಳು ಅದಮ್ಯ ಜೀವನಾನುಭವಕ್ಕೆ ಸುವರ್ಣದ ಚೌಕಟ್ಟಿನಂತಿವೆ.

ಋತು ನಾಲ್ಕರಲ್ಲಿ ಒಟ್ಟು ಹದಿಮೂರು ಕವಿತೆಗಳಿದ್ದು’ ಕವಯತ್ರಿ ಹಾಗೂ ಸಮಾಜ ಕೇಂದ್ರಿತ ಕವಿತೆಗಳೇ ಅಧಿಕ ಪ್ರಮಾಣದಲ್ಲಿವೆ. ವ್ಯಕ್ತಿ, ಸಮಾಜ, ಪರಿಸರದಲ್ಲಿಯೇ ವೈರುಧ್ಯಗಳು ಕವಯತ್ರಿಯನ್ನು ಇಲ್ಲಿ ಬಿಡದೇ ಕಾಡಿವೆ. ಹೀಗಾಗಿ ಕವಯತ್ರಿ ಇಲ್ಲಿ ಸಮಾಜ ನಿಷ್ಠಳಾಗಿ ಸಂಯಮದಿಂದಲೇ ತಣ್ಣಗೆ ಪ್ರತಿಕ್ರಿಯೆಸುವುದು ಅವರ ಪಕ್ವ ಚಿಂತನೆಯ ಕುರುಹುವಾಗಿದ್ದು ಈ ಭಾವ ‘ನಡೆದು ಬಿಡಬೇಕು ಆಚೆ’ ಕವಿತೆಯಲ್ಲಿ ಸ್ಪಷ್ಟವಾಗಿ ಧ್ವನಿಸುತ್ತದೆ.

“ನಡೆಯುವ ಮುಂಚೆ
ನಗೆಯಲ್ಲೇ ಇರಿದು
ತಾಳ್ಮೆಯಿಂದಲೆ ಕೈಮುಗಿದು
ಹೊರಟು ಬಿಡಬೇಕು”

ಇಂತಹ ಸಾಲುಗಳೇ ಕವಯತ್ರಿಯನ್ನು ಬಹು ದೂರ ಕೈ ಹಿಡಿದು ನಡೆಸಿವೆ, ನಡೆಯ ಕಲಿಸಿವೆ. ‘ಸುಮವೊಂದು ಸೂಜಿಯಾಗಿ ಇರಿದರೂ’ ಕವಿತೆಯಲ್ಲಿ ಆತಂಕದಿಂದ ಕವಯತ್ರಿ:

‘ಭಯವಾಗುವುದು ಒಮ್ಮೊಮ್ಮೆ
ಎಷ್ಟು ನಾಜೂಕು ನಲ್ಮೆಗಳೂ
ಉಲ್ಕೆಯಾಗಬಹುದು ಎಂದೋ
ಹರಿಯಬಹುದು ಸೂತ್ರ
ಸುಮವೊಂದು ಸೂಜಿಯಾಗಿ
ಇರಿಯಬಹುದು ಚೂರಿಯಂತೆ
ಆಗ ಋಣದ ಮಾತಲ್ಲಿ
ವಾದ ಮುಗಿಯುವುದು ಸುಲಭ”

ಎಂದು ವಿವೇಕದಿಂದ ಸಮಾಜದ ನಡುವೆ ಬದುಕುತ್ತಲೇ ಆರೋಗ್ಯಪೂರ್ಣ ಸಮಾಜವನ್ನು ಕಟ್ಟುವ ಹವಣಿಕೆ ಇಲ್ಲಿಯ ಅನೇಕ ಕವಿತೆಗಳಲ್ಲಿ ಮೂಡಿ ಬಂದಿವೆ.

ಹೀಗೆ ‘ನಾಲ್ಕು ಋತುಗಳ ಹುಡುಗಿ’ ಸಂಕಲನದಲ್ಲಿ ನಾಗಶ್ರೀಯವರು ಬದುಕಿನ ನಾಲ್ಕು ಅನನ್ಯ ಮುಖಗಳನ್ನು ಅತ್ಯಂತ ಸಹಜವಾಗಿ ಚಿತ್ರಿಸುತ್ತಲೇ ನಿರಾಳವಾಗುವಿಕೆಯಲ್ಲಿ ಯಶಸ್ಸು ಸಾಧಿಸಿದ್ದಾರೆ. ಅವರು ಬಳಸುವ ಹೊಸ ಹೊಸ ರೂಪಕಗಳು ಕಾವ್ಯಕ್ಕೆ ಒಂದು ವಿಶಿಷ್ಟ ಮೆರಗನ್ನು, ಧ್ವನಿಪೂರ್ಣತೆಯನ್ನು ತಂದುಕೊಟ್ಟಿವೆ. ಸಂಕಲನದ ಬಗ್ಗೆ ಇಷ್ಟೆಲ್ಲಾ ಮೆಚ್ಚುಗೆ ಮಾತುಗಳನ್ನು ಹೇಳಿದ ಮೇಲೂ ಈ ಸಂಕಲನದಲ್ಲಿ ಮಿತಿಗಳೇ ಇಲ್ಲವೆಂದಿಲ್ಲ. ಅವರ ವ್ಯಕ್ತಿ ನೆಲೆಯ ಕವಿತೆಗಳು ಸಮಷ್ಟಿ ಆಯಾಮವನ್ನು ಪಡೆಯುವಲ್ಲಿ ತುಸು ಸೋತಿವೆ ಎಂದೆಸುತ್ತದೆ. ಆದರೆ ಅದೆಲ್ಲವನ್ನು ಮೀರಿ ನಿಲ್ಲುವ ಶಕ್ತಿ ನಾಗಶ್ರೀಯವರಲ್ಲಿ ಇದ್ದು, ಆ ದೆಸೆಯಲ್ಲಿ ಅವರು ಧೃಡವಾಗಿ ಸಾಗಲಿ. ಇನ್ನಷ್ಟು ಗಟ್ಟಿ ಕೃತಿಗಳು ಅವರಿಂದ ಬರಲಿ ಎಂದು ಶುಭ ಆಶಿಸುವೆ.

ಡಾ. ಸದಾಶಿವ ದೊಡಮನಿ

ಕೃತಿ: ನಾಲ್ಕು ಋತುಗಳ ಹುಡುಗಿ

ಪ್ರಕಾರ: ಕವನ ಸಂಕಲನ

ಲೇಖಕರು: ಎಸ್‌ ನಾಗಶ್ರೀ ಅಜಯ್‌

ಬೆಲೆ: ೧೨೦ ರೂಪಾಯಿ

ಪ್ರತಿಗಳಿಗಾಗಿ ಸಂಪರ್ಕಿಸಿ: 9743578443


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x