ಸೀನು ಪುರಾಣ: ಡಾ. ವೃಂದಾ ಸಂಗಮ್

ಅರೆ ವ್ಹಾ, ಕ್ಯಾ ಸೀನ್ ಹೈ ಅಂತ ನಿಮಗ ಯಾರಾದರೂ ಹೇಳಿದರೂ ಅಂದರೆ, ಅದು ಭಾಳ ಭಾಳ ಚಂದದ ಸಿನಿಮಾದ ಒಂದು ಚಂದದ ಸೀನ್ ಅಂತನೋ, ಯಾವುದೋ ಒಂದು ಪ್ರಕೃತಿ ರಮ್ಯ, ರಮಣೀಯ ದೃಶ್ಯನೋ ಅಂತ ತಿಳಿದರೆ ನೀವು ನೂರಕ್ಕೆ ನೂರು ತಪ್ಪು. ಮತ್ತ, ಅಂದರೆ, ಅಂದರೇನು, ಅನಲಿಕ್ಕೇ ಬೇಕು. ಯಾಕಂದರೆ, ಆ ಸೀನು ಹಂಗದ. ಇದೇನರೀ, ಯಾವ ಸೀನು, ಅಂತ ಕೇಳಿದರೆ, ನಾನು ಹೇಳೋದಿಷ್ಟೇ, ನಾನು ಅಚ್ಚ ಕನ್ನಡದ, ನಮ್ಮ ಸೀನೂ ಮಾಮಾನ ಸೀನಿನ ಬಗ್ಗೆ ಹೇಳಲಿಕ್ಕೆ ಹತ್ತೇನಿ. ನೀವದನ್ನ ತಪ್ಪು ತಿಳದೀರಿ, ಮತ್ತ ಇಂಗ್ಲೀಷ್ ಸೀನ್ ಅಂದುಕೊಂಡೀರಿ. ನಾವು ಆರನೇ ಕ್ಲಾಸಿನೊಳಗಿದ್ದಾಗ, ನಮಗ ಹಿಂದಿ ಭಾಷಾ ಕಲಿಸಿದರು, ಅಷ್ಟರೊಳಗ ಐದನೆಯ ಕ್ಲಾಸಿನಿಂದನೇ ಇಂಗ್ಲೀಷ್ ಕಲಿತು, ನಾವು, ಈಡಿಯಟ್, ಫೂಲ್ ಮುಂತಾದ ಶಬ್ದಗಳನ್ನ ಕಲಿತಿದ್ದವಿ. ಈಗ ಹಿಂದಿ ಬ್ಯಾರೆ, ಏನರೆ ತಪ್ಪು ಮಾಡಿದರ, ಹುಡುಗೂರು, ಯೂ ಫೂಲ್ ಅಂತ ಬೈತಿದ್ದರು, ನಾನು ಇಮ್ಮಿಡಿಯೇಟ್ ಆಗಿ, ಅವರಿಗೆ, ಹೌದು, ನೀವೆಲ್ಲಾ ಇಂಗ್ಲೀಷ್ ಫೂಲ್ ನಾನು ಮಾತ್ರ ಹಿಂದೀ ಫೂಲ್ ಅಂತ ಹೇಳತಿದ್ದೆ. ಹಂಗೆ ಇದೂ ಕೂಡಾ, ನಾನು ಹೇಳೋದು ಕನ್ನಡ ಸೀನು. ಅದೂ ನಮ್ಮ ಸೀನೂ ಮಾಮಾನ ಸೀನು.

ಅದೇನು ವಿಶೇಷ ಅಂತೀರಾ, ಸೀನೂ ಮಾಮಾ ಒಮ್ಮೆ ಸೀನಿದರೆ, ಮನೀ ಮ್ಯಾಲಿನ ನಾಲ್ಕು ಹಂಚು ಹಾರಿ ಬೀಳತಾವ. ಒಮ್ಮೆ ಆಕ್ಷಿ ಅಂದರೆ ಸಾಕು, ಮೂಗು, ಬಾಯಿ, ತಲೀಯೊಳಗಿನ ಎಲ್ಲಾ ಅವಯವಗಳನ್ನು ದೇವರು ಅಲುಗಾಡಿಸಿ ಪುನಃ ಮೊದಲಿನ ಸ್ಥಾನಕ್ಕೇ ತಂದು ಕೂಡಿಸುವ ಒಂದು ಮಹಾನ್ ಚಮತ್ಕಾರಿಕ ಕಾರ್ಯ. ಸಾಮಾನ್ಯವಾಗಿ ಸೀನಿನ ವೇಗ 35 ರಿಂದ 40 mph ನ ಸಮೀಪದಲ್ಲಿರುತ್ತದೆ ಎಂದು ವೈಜ್ಞಾನಿಕವಾಗಿ ಅಂದಾಜು ಮಾಡಿದಾರೆ. ಈ ವೇಗದಲ್ಲಿ ಸೀನು 15 ರಿಂದ 20 ಅಡಿಗಳವರೆಗೆ ಸಣ್ಣ ಹನಿಗಳನ್ನು ಸುತ್ತೆಲ್ಲಾ ಎರಚುತ್ತದಂತೆ. ಅದಕ್ಕೇ ರೋಗಗಳನ್ನು ಹರಡುವುದರಲ್ಲಿ ಸೀನಿಗೇ ಅಗ್ರಸ್ಥಾನ. ಕೆಲವೊಮ್ಮೆ ಸೀನಿನ ವೇಗ 100 mph ಕೂಡ ಆಗಿರುತ್ತಂತೆ. ಬಹುಶಃ ನಮ್ಮ ಸೀನೂ ಮಾಮಾನ ವೇಗ ಇದೇ ಆಗಿತ್ತೇನೋ! ಅಥವಾ ಅದಕ್ಕೂ ಹೆಚ್ಚಾಗಿದ್ದರೂ ಇರಬಹುದು. ಒಮ್ಮೊಮ್ಮೆ ಮಡೀಲೆ ಸ್ನಾನ ಮಾಡಿ ದೇವರ ಕಟ್ಟೀ ಮ್ಯಾಲೆ ಕೂತು ಸೀನಿದರೆ, ಝಾಂಗಟೀ ಬಾರಿಸಿದಂಗ ಎಲ್ಲಾ ದೇವರ ಉಪಕರಣಿಗಳೂ ಹಾರಿ ಬೀಳತಿದ್ದವು. ಆ ಹನುಮಂತದೇವರ ಪೀಠ ಸಣ್ಣದಿತ್ತು, ಬಹುಶಃ ಲಂಕಾಕ್ಕ ಹಾರೋ ಅಷ್ಟು ವೇಗವಾಗಿ ಹಾರಿ ಬಂದಿರತಿದ್ದ. ನನಗ ನೆನಪಿದ್ದಂಗ, ಬಾಜೂ ಮನೀ ಕೂಸುಗಳ ಸೈತ ಅಳತಿದ್ದವು. ಅಷ್ಟ ಅಲ್ಲ ಭೂಕಂಪ ಆಧಂಗ ಆಗತಿತ್ತು. ನಮ್ಮ ಹಕ್ಕಿಮನೀಯೊಳಗ ದನಾ ಕರಾ ಎಲ್ಲಾ ಅಂಬಾ ಅಂತಿದ್ದವು. ನಮ್ಮ ಮನೀಯೊಳಗ ಒಂದು ನಾಯಿ ಇತ್ತು. ಅದೇನು ನಾವು ತಂದು ಸಾಕಿದ್ದಲ್ಲ. ಬಿಡಾಡಿ ನಾಯಿ, ನಮ್ಮಜ್ಜಿ ಉಳಿದಿದ್ದು ಪಳದಿದ್ದು ಹಾಕತಾಳ ಅಂತ ಅಲ್ಲೇ ಮಲಗಿರತಿತ್ತು. ಅದರಿಂದ ಲಾಭ ಲುಕ್ಸಾನ್ ಏನೂ ಇರಲಿಲ್ಲ. ಯಾರು ಬಂದರೂ ಅದೇನು ಬೊಗಳತಿದ್ದಿದ್ದಿಲ್ಲ. ಯಾರಾರೇ ಅಪರಿಚಿತರು ಬಂದರೆ ಅದು ಬೊಗಳಬೇಕು, ಅದೊಂದು ಸಣ್ಣ ಹಳ್ಳಿ, ಎಲ್ಲಾರೂ ಪರಿಚಿತರೇ ಅನ್ನೋ ಮಹಾನ್ ದೃಷ್ಟಿಯ ನಾಯಿ ಕೂಡಾ, ಊರೊಳಗ ಮುಲ್ಲಾ ತನ್ನ ಆಝಾನೋ ಏನೋ ಅಂತಾರಲ್ಲಾ, ಅದನ್ನ ಕೂಗಿದಾಗ ತಾನೂ ಬೊಗಳತಿತ್ತು, ಮತ್ತ ನಮ್ಮ ಶೀನೂ ಮಾಮಾ ಸೀನಿದಾಗ ಬೊಗಳತಿತ್ತು. ಮತ್ತ ಇನ್ನೊಂದು ಏನಂದರ, ಕೆಟ್ಟು ಹೋದ ಗೋಡೆ ಗಡಿಯಾರ ದಿನಕ್ಕ ಎರಡು ಸಲ ಸರಿಯಾದ ಟೈಂ ತೋರಸತದ ಅಂತಾರಲ್ಲ ಹಂಗ ನಮ್ಮ ನಾಯಿ.

ಇಷ್ಟೆಲ್ಲಾ ಆದ ಮ್ಯಾಲೆ, ಅಂದರ ಸಣ್ಣ ಪ್ರಮಾಣದ ಪ್ರಳಯ ಆದ ಮ್ಯಾಲೆ ನಮ್ಮಜ್ಜಿ ಮಾತ್ರ ಮುಗಳ್ನಗತಿದ್ದಳು, ಯಾಕಂದರ, ದೇವರ ಕಟ್ಟೀ ಪಕ್ಕಕ್ಕೇ ಇದ್ದ ಒಲೀಯೊಳಗಿನ ಕಟ್ಟಿಗೆ ಈ ಸೀನಿನ ನಡುಕಕ್ಕ, ಹಾರಿ ಕೂಡತಿದ್ದವಂತ, ಆ ರಭಸದಾಗ, ಕಟ್ಟಿಗೆ ಕುಕ್ಕಿದಂಗಾಗಿ, ಒಲೀ ಚಂದಾಗಿ ಉರೀತಿತ್ತಂತ. ಮತ್ತ ಇಷ್ಟೆಲ್ಲಾ ಆದರೂ ನಮಗ ಏನೂ ಅನಸತಿದ್ದಿದ್ದಿಲ್ಲ. ನಾವು ಮಾತ್ರ ಮಾಮೂಲಿಯಾಗೇ ಇರತಿದ್ದಿವಿ. ನಮ್ಮ ಆಳು ಮಗ ಮಾತ್ರ, ಅಣ್ಣಾರ, ತಲೀ ಹಗೂರಾತಲ್ಲರೀ ಅಂತಿದ್ದ, ಒಂದು ವಿಶೇಷ ಅಂದರ ನಮ್ಮ ಸೀನೂ ಮಾಮಾನ ಮೊಮ್ಮಗ, ಸಣ್ಣ ಕೂಸಿದ್ದಾಗಿನಿಂದ, ಥೇಟ್ ಸೀನೂ ಮಾಮಾನಂಗ ಸೀನತಾನ. ಸೀನೂ ಮಾಮಾನ ಸೀನು ಸಾಮಾನ್ಯಕ್ಕ ಒಂದೇ ಇರತಿತ್ತು. ಅದು ಕೆಲವೊಮ್ಮೆ ಮಾತ್ರ ಎರಡಾಗಿರತಿತ್ತು, ಆದರ ನಮ್ಮ ಗೋವಿ ಕಾಕಾ ಮಾತ್ರ ಸೀನೋದು ಸಣ್ಣಕ, ಸೀನಲಿಕ್ಕೆ ಶುರು ಮಾಡಿದರ ಎಂಟು ಹತ್ತಕ್ಕಿಂತ ಕಡಿಮೆ ಇರತಿದ್ದಿಲ್ಲ. ಒಮ್ಮೊಮ್ಮೆ ಹದಿನೈದಿಪ್ಪತ್ತು ಇರತಿತ್ತು. ಮುಂಜಾನೆ ಎದ್ದು ಪಡಸಾಲಿಗೆ ಬಂದು ಎರಡು ನಿಮಿಷದೊಳಗೇ ಗೋಡೆ ಹಿಡಕೊಂಡು ಸೀನಲಿಕ್ಕೆ ಶುರು ಮಾಡಿದರ ಸಾಕು, ನಮ್ಮ ಪುರೋಚಿ ಲೆಕ್ಕ ಶುರುವಾಗತಿತ್ತು. ಒಂದು ಎರಡು ಕಲಿತಿದ್ದೇ ಗೋವೀ ಕಾಕಾನ ಸೀನಿನ ಲೆಕ್ಕಾ ಹಾಕಿ. ಆದರ ನಾವು ಸೀನೂ ಮಾಮಾನ ಅವಾಂತರದ ಸೀನಿನೊಂದಿಗೇ, ಗೋವೀ ಕಾಕಾನ ಲೆಕ್ಕದ ಸೀನಿಗೂ ಹೊಂದಿಕೊಂಡು ಬಾಳೋದನ್ನ ಸಣ್ಣದಿನಿಂದಲೇ ಕಲಿತಿದ್ದಿವಿ.

ಈ ಸೀನಿನ ಪುರಾಣ ಯಾಕಂದರ, ಇದು ಒಂದು ನಂಬಿಕೆಯ ಪ್ರಶ್ನೆಯಾಗಿತ್ತು. ಯಾವುದೊಂದು ಶುಭ ಸಮಾಚಾರ ಆಗಿದ್ದರೂ, ಆ ವಿಷಯ ಮಾತಾಡುವಾಗ, ಯಾರಾದರೂ ಒಂದು ಸೀನು ಸೀನಿದರೆ, ಆ ಕೆಲಸ ಕೈಗೂಡುವುದಿಲ್ಲವಂತೆ. ಜೋಡಿ ಸೀನು ಸೀನಿದರೆ ಮಾತ್ರ, ಆ ಕೆಲಸ ಕೈಗೂಡುವುದು ನಿಶ್ಚಿತ. ಕೇವಲ ಎರಡೇ ಸೀನಿಗೇ ಲೆಕ್ಕ ಮುಗಿಯುತ್ತಿತ್ತಾದ್ದರಿಂದ ಗೋವೀ ಕಾಕಾನ ಸೀನಿನಿಂದ ಅದು ಪಾರಾಗಿತ್ತು. ನಮ್ಮ ಸೀನೂ ಮಾಮಾ ಮಾತ್ರ ಒಂದೇ ಸೀನತಾನಲ್ಲ, ಅಂತಾ ಸಮಯದಾಗ ಎಲ್ಲಾರೂ ಅವಗ ಇನ್ನೊಂದು ಸೀನು ಅಂತಿದ್ದರು, ಅದೇನೋ ಹುಸಿ ಕೆಮ್ಮು ಅಂದಂಗ ಹುಸಿ ಸೀನು ಅಂತೇನಾದರೂ ಇರತದೋ ಏನೋ ಗೊತ್ತಿಲ್ಲಪ್ಪ. ಸೀನೂ ಮಾಮಾ ಮಾತ್ರ ಆಕ್ಷಿ ಅಂತ ಸೀನತಿದ್ದ. ಅಥವಾ ಬರೇ ನಾಟಕ ಮಾಡತಿದ್ದ. ಸೀನು ಅಥವಾ ಸೀನುವ ಪ್ರಕ್ರಿಯೆ ಎಂಬುದು ಗಾಳಿಯನ್ನು ಶ್ವಾಸಕೋಶಗಳಿಂದ ಮೂಗು ಮತ್ತು ಬಾಯಿಯ ಮೂಲಕ ಅರೆ ಸ್ವನಿಯಂತ್ರಿತ ಸೆಟೆತದ ಹೊರದೂಡುವಿಕೆ ಆಗಿದೆ. ಇದು ಸಾಮಾನ್ಯವಾಗಿ ಬಾಹ್ಯ ಕಣಗಳು ನಾಸಿಕದ ಲೋಳೆಪೊರೆಗೆ ಉಪದ್ರವವನ್ನು ಕೊಟ್ಟಾಗ ಉಂಟಾಗುತ್ತದೆ. ಸೀನುವಿಕೆಯು, ಇದ್ದಕ್ಕಿದ್ದಂತೆ ಪ್ರಕಾಶಮಾನವಾದ ಬೆಳಕಿನೆದುರಿಗೆ ಒಡ್ಡಿಕೊಂಡಾಗ, ಪೂರ್ತಿ ಹೊಟ್ಟೆ ತುಂಬಿದಾಗ, ಅಥವಾ ವೈರಲ್ ಸೋಂಕು ತಗುಲಿದಾಗ ಉಂಟಾಗುತ್ತದೆ . ಅಲ್ಲದೇ ರೋಗವು ಹರಡುವಂತೆ ಮಾಡುತ್ತದೆ ಅಂತ ನಮ್ಮ ವಿಕೀಪೀಡಿಯಾ ಆಂಟಿ ಹೇಳತಾಳ.

ಈ ಸೀನಿಗೆ ಐತಿಹಾಸಿಕತೆ ಅದ. ಪ್ರಾಚೀನ ಗ್ರೀಸ್ ನಲ್ಲಿ, ಸೀನುಗಳನ್ನು, ದೇವತೆಗಳಭವಿಷ್ಯ ಸೂಚಕ ಸಂಕೇತಗಳು ಎಂದು ನಂಬಲಾಗುತ್ತಿತ್ತು. ಉದಾಹರಣೆಗೆ, ಕ್ರಿಸ್ತಪೂರ್ವ 410 ರಲ್ಲಿ, ಅಥೆನ್ಸ್ ನ ಜನರಲ್ ಕ್ಸೆನೊಫೋನ್ , ಅವರ ಸೈನಿಕರನ್ನು ಪರ್ಷಿಯನ್ನರ ವಿರುದ್ಧ ಸ್ವತಂತ್ರ ಅಥವಾ ಮರಣಕ್ಕಾಗಿ ಅವರನ್ನು ಅನುಸರಿಸುವಂತೆ ಹುರಿದುಂಬಿಸಲು ಮನಮಟ್ಟುವ ಭಾಷಣವನ್ನು ಮಾಡಿದ. ಅವನು ತನ್ನ ಸೈನ್ಯವನ್ನು ಪ್ರೇರೇಪಿಸಲು ಸುಮಾರು ಒಂದು ಗಂಟೆಗಳ ಕಾಲ ಮಾತನಾಡಿದ ಹಾಗು ಅವರು ಸುರಕ್ಷಿತವಾಗಿ ಅಥೆನ್ಸ್ ಗೆ ಹಿಂದಿರುಗುವುದಾಗಿ ಭರವಸೆ ನೀಡಿದ. ಸೈನಿಕರುನೊಬ್ಬ ಅವನ ತೀರ್ಮಾನವನ್ನು ಸೀನಿನೊಂದಿಗೆ ಪ್ರತಿಕ್ರಿಯಿಸಿದಾಗ, ಈ ಸೀನು ದೇವತೆಗಳಿಂದ ದೊರೆತ ಅನುಕೂಲಕರ ಸಂಕೇತವೆಂದು ಭಾವಿಸಿ, ಸೈನಿಕರು ಕ್ಸೆನೊಫೋನ್‌ಗೆ ತಲೆಬಾಗಿದರು ಮತ್ತು ಅವನ ಆಜ್ಞೆಯನ್ನು ಅನುಸರಿಸಿದರು. ಗ್ರೀಕರಿಗೆ ಸೀನುವಿಕೆಯ ಮತ್ತೊಂದು ಪವಿತ್ರ ಕ್ಷಣವು ಓಡಿಸಿಯಸ್‌ನ ಕಥೆಯಲ್ಲಿ ಕಾಣಿಸಿಕೊಂಡಿದೆ. ಓಡಿಸಿಯಸ್ ಬಿಕ್ಷುಕನಂತೆ ವೇಷಧರಿಸಿ, ಅವನಿಗಾಗಿ ಕಾದುಕುಳಿತಿದ್ದ ಅವನ ಹೆಂಡತಿ ಪೆನೆಲೋಪ್ ಳೊಂದಿಗೆ ಮಾತನಾಡುತ್ತಾನೆ. ಆತ ಓಡಿಸಿಯಸ್ ಎಂಬುದನ್ನು ಅರಿಯದೆ ಆತನನ್ನು ಕುರಿತು ಅವಳು “ಅವಳ ಗಂಡ ಅವಳನ್ನು ಓಲೈಸುವ ಕನ್ಯಾರ್ಥಿಗಳಿಗೆ ಸವಾಲು ಹಾಕಲು ಆತ ಸುರಕ್ಷಿತವಾಗಿ ಹಿಂದಿರುಗುತ್ತಾನೆ”ಎಂದು ಹೇಳುತ್ತಾಳೆ. ಆ ಸಮಯದಲ್ಲಿ ಅವರ ಮಗ ಜೋರಾಗಿ ಸೀನುತ್ತಾನೆ ಹಾಗು ಪೆನೆಲೋಪ್, ಇದು ದೇವರಿಂದ ಬಂದಂತಹ ಸಂಕೇತವೆಂಬ ಖಚಿತ ಭರವಸೆಯೊಂದಿಗೆ ಸಂತೋಷದಿಂದ ನಗುತ್ತಾಳೆ.

ಕೆಲವು ನಂಬಿಕೆಗಳು ಪ್ರಪಂಚದಲ್ಲೆಲ್ಲಾ ಇವೆ ಎಂದು ಹೇಳಲಾಗುತ್ತದೆ, ವಿಶೇಷವಾಗಿ ಈ ರೀತಿಯ ನಂಬಿಕೆಗಳು ಸಮಕಾಲೀನ ಗ್ರೀಕ್, ಸೆಲ್ಟಿಕ್, ಇಂಗ್ಲೀಷ್, ಫ್ರೆಂಚ್, ಮತ್ತು ಭಾರತೀಯ ಸಂಸ್ಕೃತಿಗಳಲ್ಲಿ ಕಂಡುಬರುತ್ತವೆ. ಇದೆ ರೀತಿಯಾಗಿ, ನೇಪಾಳದಲ್ಲಿ, ಸೀನು ಬಂದರೆ ಆ ಕ್ಷಣದಲ್ಲಿ ಆ ವ್ಯಕ್ತಿಯನ್ನು ಯಾರಾದರು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ನಂಬಲಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ, ಅದರಲ್ಲೂ ವಿಶೇಷವಾಗಿ ಭಾರತದ ಉತ್ತರ ಭಾಗಗಳಲ್ಲಿ, ಮತ್ತು ಇರಾನ್ ನಲ್ಲಿಯೂ ಕೂಡ, ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಸೀನು ಬಂದರೆ ಅದು ಕೆಟ್ಟ ಅಡಚಣೆಯ ಮುನ್ಸೂಚನೆ ಎಂಬ ಸಾಮಾನ್ಯ ಮೂಢನಂಬಿಕೆಯಿದೆ. ಆದ್ದರಿಂದ, ಯಾವುದೇ ದುರದೃಷ್ಟ ಘಟಿಸದಂತೆ ತಡೆಯಲು ಸೀನು ಬಂದಾಗ ಸ್ವಲ್ಪ ಕಾಲ ನಿಂತು ನೀರು ಕುಡಿಯಬೇಕು ಅಥವಾ ಕೆಲಸವನ್ನು ಸ್ವಲ್ಪ ತಡವಾಗಿ ಪ್ರಾರಂಭಿಸುವುದು ವಾಡಿಕೆಯಾಗಿದೆ.
ಕೆಲವರು ಸೀನು ಬಂದರೆ ಅದನ್ನು ತಡೆ ಹಿಡಿಯುತ್ತಾರೆ. ಹೀಗೆ ಮಾಡುವುದು ನಮ್ಮ ಆರೋಗ್ಯಕ್ಕೆ ಉತ್ತಮವಲ್ಲ. ಇನ್ನೂ ಅಚ್ಚರಿ ಎಂದರೆ ಸೀನುವಾಗ ನಮ್ಮ ಹೃದಯವು ಕೆಲವೇ ಮಿಲಿ ಸೆಕೆಂಡುಗಳ ಕಾಲ ತನ್ನ ಕಾರ್ಯ ನಿಲ್ಲಿಸುತ್ತದೆ. ಇದು ನಿಮ್ಮ ಅರಿವಿಗೆ ಬಾರದ ಸಮಯವಾಗಿದ್ದು, ನಮಗೆ ಗೊತ್ತಾಗುವುದಿಲ್ಲ. ಹೀಗಾಗಿ ಸೀನುವಾಗ ಅರ್ಧಕ್ಕೆ ನಿಲ್ಲಿಸುವುದು, ಅದನ್ನು ತಡೆಯುವುದು ಮಾಡಬಾರದು. ನೀವು ಎಷ್ಟು ವೇಗವಾಗಿ ಸೀನುತ್ತೀರೋ ಅಷ್ಟು ಒಳ್ಳೆಯದು. ಸೀನು ಒಂದು ಅನೈಚ್ಛಿಕ ಕಾರ್ಯವೇ.

ಸೀನಿನ ಸೂಚನೆಗಳು ಹಿಂಗಿವೆ. ಅಡುಗೆಮನೆಯಲ್ಲಿ ಹಾಲು ಕುದಿಸುವಾಗ ಗೃಹಿಣಿ ಸೀನಿದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ನಾಯಿ ದಾರಿಯಲ್ಲಿ ಅಥವಾ ಮನೆಯ ಹೊರಗೆ ಸೀನಿದರೆ ಅದನ್ನು ತೊಂದರೆ ಮತ್ತು ವಿಪತ್ತಿನ ಸೂಚನೆ ಎಂದು ಪರಿಗಣಿಸಲಾಗುತ್ತದೆ. ನಾಯಿ ಒಂದಕ್ಕಿಂತ ಹೆಚ್ಚು ಬಾರಿ ಸೀನಿದರೆ ಅದು ನಮಗೆ ಬರಬಹುದಾದ ವಿಪತ್ತನ್ನು ತಪ್ಪಿಸುವ ಸೂಚಕವಾಗಿರುತ್ತದೆ. ಒಬ್ಬ ವ್ಯಕ್ತಿಯು ದುಃಖ, ಶವಸಂಸ್ಕಾರ ಮತ್ತು ಅಪಘಾತದ ಸ್ಥಳದಲ್ಲಿ ಸೀನುವಾಗ ಇದನ್ನು ವೈದಿಕ ಸಾಹಿತ್ಯದಲ್ಲಿ ಶುಭವೆಂದು ಪರಿಗಣಿಸಲಾಗುತ್ತದೆ. ಪ್ರಾಣಿಗಳು, ಜೀವ, ಜಂತು ಮತ್ತು ಮಾನವರು ಒಮ್ಮೆಲೇ ಸೀನುತ್ತಿದ್ದರೆ ಅದು ಭೂಕಂಪ, ಕ್ಷಾಮ ಅಥವಾ ಸಾಂಕ್ರಾಮಿಕ ರೋಗದ ಲಕ್ಷಣವನ್ನು ಸೂಚಿಸುತ್ತದೆ. ಇದು ವಿನಾಶದ ಸೂಚನೆಯಾಗಿದೆ. ಶುಭ ಕೆಲಸಕ್ಕೆ ಹೋಗುವಾಗ ಹಸು ಅಥವಾ ಅದರ ಕರು ಸೀನಿದರೆ ನೀವು ಹೊರಟ ಕೆಲಸವು ಯಶಸ್ವಿಯಾಗುವುದು. ತುಂಬಾ ಬಾರಿ ಸೀನಿದರೆ ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಮತ್ತು ಕಡಿಮೆ ಸೀನುವುದು ಅಶುಭದ ಸೂಚನೆಯಾಗಿದೆ. ನಡೆಯುವಾಗ ಸೀನಿದರೆ ಅದನ್ನು ಅಶುಭವೆಂದು ಹೇಳಲಾಗುತ್ತದೆ. ಬಲಭಾಗದಲ್ಲಿ ಸೀನಿದರೆ ಅದು ನಿಮ್ಮ ಸಂಪತ್ತನ್ನು ನಾಶಪಡಿಸುತ್ತದೆ. ಎಡಭಾಗದಲ್ಲಿ ಸೀನಿದರೆ ಅದು ಸಂತೋಷವನ್ನು ನೀಡುತ್ತದೆ. ಮುಂಭಾಗದಲ್ಲಿ ಸೀನಿದರೆ ಅದು ಜಗಳದ ಸೂಚನೆಯಾಗಿರುತ್ತದೆ.

ಹಿಂಭಾಗದಲ್ಲಿ ಸೀನಿದರೆ ಸಂತೋಷದ ಸೂಚನೆಯಾಗಿದೆ. ಶುಭ ಕೆಲಸಕ್ಕಾಗಿ ಹೋಗುವ ಸಮಯದಲ್ಲಿ ಯಾರಾದರೂ ಸೀನಿದರೆ ಅದನ್ನು ಅಶುಭ ಶಕುನವಾಗಿರುತ್ತದೆ. ಆದರೆ ಇವೆಲ್ಲಾ ಸೀನಿಗೆ ಗೊತ್ತಿವೆಯೇ ಎಂಬುದು ನನಗೆ ಗೊತ್ತಿಲ್ಲವಷ್ಟೇ. ಸೀನು ಯಾವಾಗ ಬರುತ್ತೆ ಎನ್ನಲು ಸಾಧ್ಯವಿಲ್ಲ. ಎಲ್ಲೆಂದರಲ್ಲಿ ಅಚಾನಕ್ಕಾಗಿ ಬಂದು ಬಿಡುತ್ತದೆ. ಕೆಲವೊಂದು ಈ ಅಚಾನಕ್ಕಾಗಿ ಬಂದ ಸೀನು ನಿಂದಾಗಿ ಮರ್ಯಾದೆ ಹೋಗುವ ಸಂದರ್ಭಗಳೂ ಸೃಷ್ಟಿಯಾಗುತ್ತವೆ. ಅದರಲ್ಲೂ ಸಾಂಕ್ರಾಮಿಕ ಸಮಯದಲ್ಲಿ, ಸಾರ್ವಜನಿಕವಾಗಿ ಸೀನುವುದು ಅಥವಾ ಕೆಮ್ಮುವುದು ಗಮನಾರ್ಹ ಸಮಸ್ಯೆಯಾಗಿದೆ. ಮುಖ್ತವಾಗಿ ಕರೋನ ಸಮಯದಲ್ಲಿ ಮುಖಗವಸು ಇದರಿಂದನೇ ಬಂದಿದ್ದು, ಸೀನುವವರಿಂದ ದೂರವಿರವ, ಅಂತರ ಕಾಯ್ದು ಕೊಳ್ಳುವುದಷ್ಟೇ ಅಲ್ಲ, ಸೀನು ಕರೋನ ಲಕ್ಷಣವೇ ಆಗಿತ್ತಲ್ಲ. ಆಗೆಲ್ಲ ಸೀನು ರಾಜನಂಗೆ ಅಲ್ಲಲ್ಲ ತಾನೇ ಪರಮಾತ್ಮನಂಗೆ ಮೆರೆದಿದ್ದು ನೋಡಿಲ್ಲವೇ. ಎಲ್ಲರಿಗೂ ಒಂದೊಂದು ಕಾಲ. ಕರೋನಾದಲ್ಲಿ ಸೀನು ಮೆರೆಯುವ ಕಾಲವಾಗಿತ್ತು ಅಷ್ಟೇ.

ಈ ಪದೇ ಪದೇ ಸೀನು ಬರೋದು, ಕರೋನಾ ಕಾಲ ನಮಗ ಮತ್ತ ಮನೆ ಮದ್ದು ಕಷಾಯಗಳನ್ನ ಮರಳಿ ತಂದು ಕೊಟ್ಟಿದೆ. ಶುಂಠಿ, ಜೇನು ತುಪ್ಪ, ಪುದಿನ, ತುಳಸಿ, ಲವಂಗ, ಅರಿಷಿಣ, ಜೇಷ್ಟಮಧು, ಬಿಸಿ ನೀರು ಕುಡಿಯುವುದು, ಹಬೆ ತೆಗೆದುಕೊಳ್ಳೋದು ಮುಂತಾಗಿ ಸೀನಿಗೆ ರಾಜಮರ್ಯಾದೆ ಕೊಟ್ಟಿದ್ದೂ ನೋಡಿಲ್ಲವೇ. ಕಾಮಿಡಿ ಪಿಚ್ಚರ್ ಅಂದ್ರೆ ಪ್ರತಿಯೊಂದು ಸೀನು ಕೂಡಾ ಮಜವಾಗಿರುತ್ತದೆ, ಆದರೆ ಸೀನಿನ ಬಗ್ಗೆ ಯಾವ ಹಾಡೂ ಬಂದಿದ್ದು ಕಂಡಿಲ್ಲ. ನಾನು ಆರೋಗ್ಯವಂತ ಅಂತ ಸೂಚಿಸುವುದಕ್ಕೂ “ಛಟ್ ಅಂತ ಸೀತಿಲ್ಲ” ಅಂತಾರ. ಅಂತೂ ಇಂತೂ ಸೀನು ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗೇದ. ಇಲ್ಲಿಗೇ ಸೀನು ಬಂದು ಈ ಸೀನು ಪುರಾಣ ಸಾಕು ಅಂತ ಸೂಚಿಸಿದ್ದರಿಂದ ಇಲ್ಲಿಗೇ ಸೀನು ಪುರಾಣಕ್ಕೆ ಮಂಗಳ ಹಾಡುತ್ತೇನೆ.

-ಡಾ. ವೃಂದಾ ಸಂಗಮ್


ಕನ್ನಡದ ಬರಹಗಳನ್ನು ಹಂಚಿ ಹರಡಿ
5 2 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಗೀತಾ ಶೆಣೈ
ಗೀತಾ ಶೆಣೈ
23 days ago

ಕನ್ನಡದ ಸೀನಿಗೆ ಇಷ್ಟೊಂದು ಶಕ್ತಿ ಇರೋದು ಗೊತ್ತೆ ಇರಲಿಲ್ಲ 😀. ಆದರೆ ಕೊರೋನ ಹಬ್ಬಿದ ಕಾಲದಲ್ಲಿ ಸೀನಿಗೆ ಹೆದರಿ ಎಲ್ಲರೂ ದೂರ ಓಡುತಿದ್ದು . ಸೀನಿದ್ದ ಕಾರಣಕ್ಕೆ ಗೃಹಬಂಧನ ಶಿಕ್ಷೆಯಾಗಿದ್ದು ಮತ್ತು ಎಲ್ಲರೂ ಬಾಯಿ ಮುಚ್ಕೊಂಡು ಮಾಸ್ಕ್ ಕಟ್ಕೊಂಡು ಓಡಾಡುವ ಸೀನು ಜ್ಞಾಪಕ ಆಯ್ತು.

ಮ.ಮೋ.ರಾವ್ ರಾಯಚೂರು
ಮ.ಮೋ.ರಾವ್ ರಾಯಚೂರು
23 days ago

ಡಾ. ವೃಂದಾ ಸಂಗಮರ ‘ಸೀನು ಪುರಾಣ’ ಎಲ್ಲೂ ಗುಕ್ಕದೆ, ಖೆಮ್ಮದೆ ಸಮಗ್ರವಾಗಿ ಮೂಡಿದೆ. ಸಿನಿನ ಜಾಗತಿಕ ಇತಿಹಾಸವಲ್ಲದೆ, ಅದರ ಮೈಲೇಜನ್ನೂ, ಅದು ಮಾಡಿದ ಘನಕಾರ್ಯವನ್ನೂ ವಿಷದಿಸಿದ್ದಾರೆ. ವಿಷಯವಲ್ಲದಂಥ ವಿಷಯವನ್ನು ಮನಮುಟ್ಟುವಂತೆ ಹರಡಿದ್ದಾರೆ. ಓದುತ್ತಾ ಓದುತ್ತಾ ನಿಜಕ್ಕೂ ಅಚ್ಚರಿಯಾಗಿ ನನ್ನ ಅರಿವೂ ಹೆಚ್ಚಾಯಿತು. ಅಭಿನಂದನೆಗಳು.

2
0
Would love your thoughts, please comment.x
()
x