ಓದುವ ಸುಖ ಹಾಗೂ ಅರಿವು: ಗೋಳೂರ ನಾರಾಯಣಸ್ವಾಮಿ

ಓದುವ ಸುಖ ಹಾಗೂ ಅದು ನಮ್ಮಲ್ಲಿ ಮೂಡಿಸುವ ಅರಿವಿದೆಯಲ್ಲ ಅದರ ಆನಂದವೇ ಬೇರೆ. ನಾವು ಏನನ್ನೋ ಓದುವಾಗ ಇನ್ಯಾವುದೋ ಹೊಸದೊಂದು ಕಥೆ, ಚಿಂತನೆ ಹುಟ್ಟುಕೊಳ್ಳುವುದು ಅಥವಾ ಈಗಾಗಲೇ ನಡೆದು ಹೋಗಿರುವ ಘಟನೆಗಳ ನೆನಪು ಕಾಡುವುದು ಮನಸ್ಸಿಗೆ ಒಂಥರ ಮುದ ಅನ್ನಿ.

ಕವಿ ಪ್ರೇಮಚಂದನ ಮಾತುಗಳಿವು:

“ಒಳ್ಳೆಯವರ ಮಧ್ಯದಲ್ಲಿ ಯಾಕೆ ಅಷ್ಟೊಂದು ದ್ವೇಷ? ಹಾಗೆಯೇ ಕೆಟ್ಟವರ ನಡುವೆ ಯಾಕೆ ಅಷ್ಟೊಂದು ಪ್ರೀತಿ. ಇದೊಂದು ವಿಸ್ಮಯ. ಒಬ್ಬ ವಿದ್ವಾಂಸ ಇನ್ನೊಬ್ಬ ವಿದ್ವಾಂಸ ಎದುರಾದಾಗ, ಒಬ್ಬ ಸಾದು ಇನ್ನೊಬ್ಬ ಸಾದು ಎದುರಾದಾಗ, ಒಬ್ಬ ಕವಿ ಇನ್ನೊಬ್ಬ ಕವಿ ಎದುರಾದಾಗ ದ್ವೇಷದಿಂದ ಕುದಿಯುತ್ತಾನೆ. ಆದರೆ ಒಬ್ಬ ಕಳ್ಳ ಕಷ್ಟದಲ್ಲಿರುವ ಇನ್ನೊಬ್ಬ ಕಳ್ಳನನ್ನು ಕಂಡಾಗ ನೆರವಿಗೆ ಹೋಗುತ್ತಾನೆ. ಎಲ್ಲರೂ ಕೆಟ್ಟತನವನ್ನು ದ್ವೇಷಿಸುತ್ತಾರೆ. ಅದಕ್ಕೆ ಕೆಟ್ಟವರು ಯಾವಾಗಲೂ ಪರಸ್ಪರ ಪ್ರೀತಿಸುತ್ತಾರೆ. ಸದ್ಗುಣವನ್ನು ಇಡೀ ಜಗತ್ತು ಹೊಗಳುತ್ತದೆ. ಹಾಗಾಗಿ ಒಳ್ಳೆಯವರು ಪರಸ್ಪರ ಕಚ್ಚಾಡುತ್ತಾರೆ. ಒಬ್ಬ ಕಳ್ಳನಿಗೆ ಇನ್ನೊಬ್ಬ ಕಳ್ಳನನ್ನು ಕೊಂದರೆ ಏನು ಸಿಗುತ್ತದೆ? ದ್ವೇಷ. ಒಬ್ಬ ವಿದ್ವಾಂಸನಿಗೆ ಇನ್ನೊಬ್ಬ ವಿದ್ವಾಂಸನನ್ನು ಅವಮಾನಿಸಿದರೆ? ಖ್ಯಾತಿ!

ಮೊನ್ನೆ ಪ್ರೇಮಚಂದ್ರನ ಈ ಸಾಲುಗಳನ್ನು ಓದುತ್ತಿದ್ದೆ‌. ಕಳ್ಳರೆಲ್ಲರೂ ಒಂದಾಗುವ ಈ ಪರಿಗೆ ಬುದ್ದಿಜೀವಿಗಳು, ನಕಲಿ ಸನಾತನಿಗಳು ನಾಚಬೇಕಲ್ಲದೆ ಮತ್ತೇನೂ ಮಾಡಬೇಕಾದೀತು ಅನಿಸಿತು. ಜೊತೆಗೆ ಈ ಕಳ್ಳರು ಯಾವ ಕಾಲಕ್ಕೂ ಹೊಂದಿಕೊಂಡು ಹೋಗುವವರು. ಪ್ರೇಮ ಚಂದ್ರನಂತಹ ಒಬ್ಬ ದಾರ್ಶನಿಕನಿಂದ ಬಂದ ಈ ಪ್ರಾಥಮಿಕನ ಚಿಂತನೆ ಯಾವಾಗಲೂ ಜನರ ಮಧ್ಯೆಯೇ ಹುಟ್ಟಿಕೊಂಡಿರುತ್ತದೆ ಎಂಬುದು ನನ್ನ ನಂಬಿಕೆ.
ಈ ವಿಚಾರವಾಗಿ ಆಲೋಚನೆ ಮಾಡುವಾಗ ಜನಪದ ಹಿನ್ನೆಲೆ ಇರುವ ಕಥೆಯೊಂದು ನೆನಪಿಗೆ ಬಂತು. ಅದು ಹೀಗಾಗಿರಬಹುದು ಎನಿಸಿತು.

ನಮ್ಮೂರಿನ ಕಪನಿ ಹೊಳೆ ಬಳಿ ಉರುಕಾತಿ ಗುಡಿಯಿದೆ. ಅದರ ಪಕ್ಕದಲ್ಲಿ ಆಗ ತಾರೆ ಮರ, ಗಂಧದ ಮರ, ಲಕ್ಕಿಗಿಡ ಜೊತೆಗೆ ಪೊದೆಯಿಂದ ಕೂಡಿದ ವಿಷಂಪ್ರಾಜಿ ಗಿಡಗಳಿದ್ದವು. ಅಲ್ಲಿ ಈಗ ತಾರೆಮರವಿದೆ ಅಷ್ಟೇ. ಈಗಲೂ ಬೇಸಿಗೆ ಕಾಲದಲ್ಲಿ ಯೆಥೇಚ್ಚವಾಗಿ ಕಾಯಿ ಬಿಟ್ಟು ಉದುರಿ ಬೀಳುವ ತಾರೆಕಾಯಿಗಳನ್ನು ಕಾಣಬಹುದು. ಅಲ್ಲಿ ನೆಲೆಸಿರುವ ಉರುಕಾತಿಗೂ ಈ ತಾರೆಕಾಯಿಗಳಿಗೂ ಒಂದಕ್ಕೊಂದು ಸಂಬಂಧವಿದೆ.

ಒಮ್ಮೆ ಉರುಕಾತಿಯು ತನ್ನ ಅಕ್ಕನಾದ ಚಾಮಲಾಳ ಬಯಕೆಯ ಮೇರೆಗೆ ತನ್ನ ಭಾವನಾದ ನಂಜಲಗೂಡು ನಂಜಲದೇವನನ್ನು ಕರೆದುಕೊಂಡು ಹೋಗಲು ಮಯಿಸೂರಿನ ನೀಲಗಿರಿಯಿಂದ ಬರುತ್ತಾಳೆ. ಬಂದುದೆ ಕಪನಿ ಹೊಳೆ ದಾಟಿ ಮುಳ್ಳಯ್ಯನ ಗುಡ್ಡದ ಮೇಲೆ ನಿಂತು ಭಾವ ಎಂದು ಕೂಗಲಾಗಿ; ಇಬ್ಬರು ಹೆಂಡತಿಯರ ನಡುವೆ ಮಲಗಿದ್ದ ನಂಜಲದೇವನಿಗೆ ಕೇಳಿಸಿದರೂ ಕೇಳಿಸದವನಾಗಿ ಮಲಗಿರಲು, ಉರುಕಾತಿಯು ಕೋಪದಿಂದ ಕುದಿದು ಕೆಂಪುಂಡೆಯಾಗಿ ಗುಡ್ಡ ಇಳಿದು ಮುಳ್ಳೂರು ಮಾರ್ಗವಾಗಿ ಬರುತ್ತಿದ್ದಾಳೆ. ನಂಜಲದೇವನ ಗವಿ ಬಾಗಿಲು ಕಾಯುತ್ತಿದ್ದ ಪಾರದವರು ಯಾರೋ ನಮ್ಮ ನಂಜಲದೇವನನ್ನು ಭಾವ ಎಂದು ಕೂಗುತ್ತಿದ್ದಾರೆ. ಸಾಲದ್ದಕ್ಕೆ ನಮ್ಮ ಕಡೆಯೇ ಬರುತ್ತಿರುವ ಸದ್ದು ಕೇಳಿಸುತ್ತಿದೆ. ಅವರನ್ನು ಮುಗಿಸಬೇಕೆಂದು ಉರುಕಾತಿಯ ಕಡೆ ಬಾಣ-ಭರ್ಜಿಗಳನ್ನು ಹಿಡಿದುಕೊಂಡು ಬರುತ್ತಾರೆ. ಇದನ್ನು ನೋಡಿದ ಉರುಕಾತಿ ಈ ದಂಡಿನ ಕೈಗೆ ಸಿಕ್ಕರೆ ನನ್ನ ಕಥೆ ಮುಗಿಯಿತು. ಇಲ್ಲ ಈ ದಂಡೆಲ್ಲಾ ನಾಶವಾಗುತ್ತದೆ. ನಾಳೆ ದಿನ ನನ್ನ ಅಕ್ಕ ಹಾಗೂ ಭಾವನವರು ದಂಡಿನ ನಾಶಕ್ಕೆ ನನಗೆ ತಕ್ಕ ಸಾಸ್ತಿ ಮಾಡುತ್ತಾರೆ ಎಂದು ತಿಳಿದು ಅಲ್ಲಿಂದ ಓಡಿ ಬಂದು ಆ ಗವಿಯ ಬಳಿಯಿದ್ದ ದೊಡ್ಡ ಗುತ್ತಿಯೊಳಗೆ ಸೇರುತ್ತಾಳೆ.

ಆವಾಗಲೀಗ,
ಇದೇ ಹಾದಿಯಲ್ಲಿ ನಾಲ್ಕು ಜನ ಕಳ್ಳರ ಗುಂಪು ತೆಂಗಿನಕಾಯಿಗಳನ್ನು ಕದ್ದುಕೊಂಡು ಹೋಗುತ್ತಿರುತ್ತಾರೆ. ಪಾರದವರು ಉರುಕಾತಿಯನ್ನು ಅಟ್ಟಿಸಿಕೊಂಡು ಬರುವುದನ್ನು ನೋಡಿ ನಮ್ಮನ್ನೇ ಹಿಡಿಯಲು ಬರುತ್ತಿದ್ದಾರೆಂದು ಉರುಕಾತಿಯು ಅವಿತು ಕುಳಿತ ಗುತ್ತಿಯೊಳಗೆ ಓಡಿ ಬರುತ್ತಾರೆ. ಅಲ್ಲಿ ಪರಂಜ್ಯೋತಿಯಾಗಿ ಉರಿಯುತ್ತಿದ್ದ ಉರುಕಾತಿಯನ್ನು ಕಂಡು ಅವ್ವ ಯಾರವ್ವ ನೀನು ಎಂದು ಭಯದಿಂದಲೇ ಕಳ್ಳರು ಕೇಳುತ್ತಾರೆ. ಆಕೆ ಅಲ್ಲಿಗೆ ಬಂದ ಕಾರಣ ತಿಳಿದ ಕಳ್ಳರು ಅವ್ವ ನೀನು ಹೆಚ್ಚುಕಮ್ಮಿ ನಮ್ಮ ಹಾಗೆಯೇ ಕದ್ದು ಕುಳಿತಿದ್ದಿಯೇ ಈಗ ನಾವಿಬ್ಬರೂ ಒಬ್ಬರಿಗೊಬ್ಬರು ಆಗಬೇಕು. ನೀನು ಮನಸ್ಸು ಮಾಡಿದರೆ ಏನುಬೇಕಾದರೂ ಮಾಡಬಲ್ಲೆ ನಮಗದು ಗೊತ್ತು. ಆದರೆ ನಾವೇನಾದರೂ ಪಾರದವರ ಕೈಗೆ ಸಿಕ್ಕರೆ ನಮ್ಮನ್ನು ನೇಣುಗಂಬಕ್ಕೆ ಏರಿಸಿ ಬಿಡುತ್ತಾರೆ. ದಯಮಾಡಿ ನಮ್ಮನ್ನು ನೀನೇ ಕಾಪಾಡು ಈ ತೆಂಗಿನ ಕಾಯಿ ಮೂಟೆಗಳು ಇಲ್ಲಿರುವುದನ್ನು ಹೇಳಬೇಡವೆಂದು ಬೇಡಿಕೊಳ್ಳುತ್ತಾರೆ ಹಾಗೂ ಅವಳಿಗೆ ಅಡ್ಡಲಾಗಿ ಕಾಣದಂತೆ ತೆಂಗಿನ ಮೂಟೆಗಳನ್ನು ಇಡುತ್ತಾರೆ.

ಅಷ್ಟರಲ್ಲಿ ಪಾರದವರು ಇವರು ಇದ್ದ ಸ್ಥಳಕ್ಕೆ ಬಂದುಬಿಡುತ್ತಾರೆ. ಕಳ್ಳರನ್ನು ನೋಡಿ ಸಿಕ್ಕಿಬಿದ್ದಿರಾ ಕಳ್ಳ ಬಂಡುಕೋರರೆ ಬನ್ನಿ ನಿಮಗೆ ತಕ್ಕ ಸಾಸ್ತಿಯಾಗುತ್ತದೆ. ಹಲವಾರು ದಿನಗಳಿಂದ ಕಳ್ಳತನ ಮಾಡಿ ನಮವೆ ದೊಡ್ಡ ನಷ್ಟ ಮಾಡಿದ್ದೀರಿ; ಬನ್ನಿ ನಿಮಗೆ ಸರಿಯಾದ ಶಿಕ್ಷೆ ವಿಧಿಸುತ್ತೇವೆ ಎಂದು ಬೆದರಿಸುತ್ತಾರೆ. ಆಗ ಕಳ್ಳರು ನಾವೇನು ತಪ್ಪು ಮಾಡಿಲ್ಲ, ನಮಗ್ಯಾಕೆ ಶಿಕ್ಷೆ ಕೊಡಿಸುವಿರಿ. ನಾವು ಮೊಲದ ಬೇಟೆಗೆಂದು ಬಂದವರು, ನಮಗೂ ನೀವು ಹೇಳುತ್ತಿರುವ ಕಳ್ಳತನಕ್ಕೂ ಯಾವುದೇ ಸಂಬಂಧವಿಲ್ಲವೆಂದು ಧೈರ್ಯದಿಂದ ಹೇಳುತ್ತಾರೆ. ಆಗ ಆ ಪಾರದವರು ಕದ್ದು ಹೊತ್ತು ತಂದಿದ್ದ ಒಂದೆರೆಡು ಮೂಟೆಗಳನ್ನು ಬಿಚ್ಚಿ ನೋಡುತ್ತಾರೆ. ಅಲ್ಲಿ ತಾರೆಕಾಯಿಗಳು ತುಂಬಿರುತ್ತವೆ. ಕಾಯಿಗಳು ಮಾಯವಾಗಿರುವುದನ್ನು ಕಂಡ ಕಳ್ಳರು ಆಶ್ಚರ್ಯದಿಂದ ಆ ಗುತ್ತಿಯ ಮೂಲೆಯಲ್ಲಿ ಉರಿಯುತ್ತಾ ಕುಳಿತಿದ್ದ ಉರುಕಾತಿಯನ್ನು ನೋಡಲು; ಆಕೆ ಮುಗುಳ್ನಗುತ್ತಾಳೆ. ನಂತರ ಪಾರದವರು ಇಲ್ಲಿಗ್ಯಾರದರೂ ಹೆಣ್ಣೊಂದು ಬಂದದ್ದನ್ನು ಕಂಡಿರಾ ಎಂದು ಕೇಳಲಾಗಿ, ಆ ರೀತಿಯಾಗಿ ಇತ್ತಕಡೆ ಯಾರೂ ಬಂದಿಲ್ಲವೆಂದು ಹೇಳಿದ ಕಳ್ಳರು ಪಾರದವರನ್ನು ಅಲ್ಲಿಂದ ಕಳಿಸುತ್ತಾರೆ. ಅವರು ಇನ್ಮೇಲೆ ಇಷ್ಟು ಹೊತ್ತಲ್ಲಿ ಈ ಗವಿ ಬಳಿಯೆಲ್ಲ ಬರಬೇಡಿ ಎಂದು ಹೇಳಿ ಹೊರಡುತ್ತಾರೆ.

ಅವರು ಹೊರಡುವುದನ್ನೇ ಕಾಯುತ್ತಿದ್ದ ಕಳ್ಳರು ಉರುಕಾತಿಯ ಪಾದಗಳಿಗೆ ನಮಸ್ಕರಿಸಿ ಅಲ್ಲಿಂದ ಅವಳನ್ನೂ ಬೀಳ್ಕೊಡುತ್ತಾರೆ. ತಮ್ಮನ್ನು ಕಾಪಾಡಿದ್ದರಿಂದ ಅವಳು ಇದ್ದ ಜಾಗದಲ್ಲಿ ಬೆಳಗ್ಗೆ ಆಗುವುದರೊಳಗೆ ಒಂದೇ ರಾತ್ರಿಯೊಳಗೆ ಗುಡಿಯೊಂದನ್ನು ಕಟ್ಟುತ್ತಾರೆ. ಈಗಲೂ ಕೂಡ ಇದು ಒಂದೇ ರಾತ್ರಿ ಒಳಗೆ ಕಟ್ಟಿದ ಗುಡಿ ಹಾಗೂ ಮತ್ತೆ ಈ ಗುಡಿಯನ್ನು ಕಟ್ಟುವುದಾದರೆ ಹಿಂದಿನ ರೀತಿಯೇ ಒಂದೇ ರಾತ್ರಿಯಲ್ಲಿ ಕಟ್ಟಬೇಕು ಎಂಬ ನಂಬಿಕೆಯು ಜನಜನಿತವಾಗಿದೆ.

ಅದೇನೆಯಾದರೂ ಆ ಕಳ್ಳರನ್ನು ಕಾಪಾಡಿದ ಕಾರಣಕ್ಕೆ ಆ ದಿನ ಕದ್ದು ಅವಿತುಕೊಂಡಿದ್ದ ಉರುಕಾತಿಯೂ ಪೂಜೆಗೆ ಒಳಪಡುತ್ತಾಳೆ. ಅಂದು ಕಳ್ಳರು ಕದ್ದು ತಂದಿದ್ದ ತೆಂಗಿನಕಾಯಿಗಳನ್ನು ತನ್ನ ಮೋಡಿ ವಿದ್ಯೆಯಿಂದ ತಾರೆಕಾಯಿಗಳಾಗಿ ಮಾಡಿದ ಉರುಕಾತಿ ಹಾಗೂ ಉರುಕಾತಿಯನ್ನು ಬಚ್ಚಿಟ್ಟು, ಆಕೆ ಇತ್ತಕಡೆ ಬಂದಿಲ್ಲವೆಂದು ಹೇಳಿದ ಕಳ್ಳರ ನಡುವೆ ಒಂದು ಸಹಕಾರ- ಸಾಮರಸ್ಯ ಇತ್ತು. ಹಾಗಾಗಿಯೇ ಅವರು ಬಂದ ಕಷ್ಟದಿಂದ ಪಾರಾಗುತ್ತಾರೆ.

ಇಂದು ಸಮಾಜದಲ್ಲಿ ನಡೆಯುತ್ತಿರುವ ಒಳ್ಳೆಯದು ಕೆಟ್ಟದ್ದನ್ನು ಹೇಳುವ ಸಾಹಿತಿಗಳು, ನ್ಯಾಯವಾದಿಗಳು, ಮುಂದಾಳುಗಳು ಹಾಗೂ ಇನ್ನಿತರರು ಮಾಧ್ಯಮಗಳ ನಡುವೆ ಅಸೂಯೆ, ವೈಮನಸ್ಸು, ಅಹಂಕಾರ ಇರುತ್ತದೆ; ಆದರೆ ಬಂಡವಾಳಶಾಹಿಗಳು, ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು, ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ದಂಧೆಕೋರರು, ಭಯೋತ್ಪಾದಕರು, ಉಗ್ರಗಾಮಿಗಳು, ಆಯಕಟ್ಟಿನ ಜಾಗಗಳಲ್ಲಿ ಆಡಳಿತ ನಡೆಸುವ ಭ್ರಷ್ಟಾಚಾರಿಗಳ ನಡುವೆ ತುಂಬಾ ದೊಡ್ಡ ಸಾಮರಸ್ಯವಿದೆ: ಸಹಕಾರವಿದೆ. ಸಮಾಜ ಇನ್ನೂ ಬಹಳ ದೊಡ್ಡ ವೈರುದ್ಯದಿಂದ ಕೂಡಿರಲು ಇದೂ ಒಂದು ಕಾರಣವಾಗಿದೆ.

ಈಗಾಗಲಾಗಿ,
“ಆ ದಿನ ಉರುಕಾತಿ ಹಾಗೂ ಕಳ್ಳರ ನಡುವೆ ಮೂಡಿಬಂದ ಸಾಮರಸ್ಯವು ಜನ ಸಾಮಾನ್ಯರಲ್ಲೂ ಮೂಡಿ ಬರಲಿ: ಒಳ್ಳೆಯ ಉದ್ದೇಶಕ್ಕೆ ಅದು ಬಳಕೆಯಾಗಲಿ ಎಂದು ಆಶಿಸುತ್ತೇನೆ”

-ಗೋಳೂರ ನಾರಾಯಣಸ್ವಾಮಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x