ಪ್ರಾಚೀನ ಚೀನಾದ ಮೂರು ಮುಖ್ಯ ಜೀವನಧರ್ಮಗಳಲ್ಲಿ ಮೂಲತಃ ಎರಡು ಅಲ್ಲಿಯವೇ. ಒಂದು ತಾವೋ, ಇನ್ನೊಂದು ಕನ್ಫ್ಯೂಷಿಯಸ್. ಮತ್ತೊಂದು ಬೌದ್ಧವು ಭಾರತದ ಬಿಕ್ಕುಗಳ ಮೂಲಕ ಚೀನಾವನ್ನು ಪ್ರವೇಶಿಸಿದ್ದು. ಕ್ರಿ. ಪೂ. ಆರನೆಯ ಶತಮಾನದಲ್ಲೇ ತಾವೋ ಜನಿಸಿತು. ಇದರ ನಿರ್ಮಾತೃ ಆಚಾರ್ಯ ಲಾವೋತ್ಸೆ. ಇವನು ಚೌ ಚಕ್ರವರ್ತಿಯ ಆಸ್ಥಾನದಲ್ಲಿ ನೌಕರನಾಗಿದ್ದವನು ತರುವಾಯ ವಿರಕ್ತ ಜೀವನ ನಡೆಸಿದನು. ನಮ್ಮ ಉಪನಿಷತ್ತುಗಳ ನಿರ್ಗುಣ ಬ್ರಹ್ಮತತ್ತ್ವ ಮತ್ತು ಬೌದ್ಧರ ನಿರ್ವಾಣ ತತ್ತ್ವಗಳಂತೆ ಇವನ ಮಾತುಗಳಿವೆ. ಪಥವಲ್ಲದ ಪಥವೆಂದೂ ಬಾಗಿಲಿಲ್ಲದ ಹೆಬ್ಬಾಗಿಲೆಂದೂ ಇವನ ಸಿದ್ಧಾಂತವನ್ನು ವರ್ಣಿಸಲಾಗಿದೆ. ವಿಪರ್ಯಾಸವೆಂದರೆ ತತ್ತ್ವ ಮತ್ತು ಸಿದ್ಧಾಂತಗಳಾಚೆಗೆ ಲೋಕದ ಬದುಕನ್ನು ಅರ್ಥೈಸಲು ಹೊರಟವನೀತ. ತಾವೋ ತೇ ಕಿಂಗ್ ಅಂತಲೂ ದಾವೋ ದೆ ಜಿಂಗ್ ಅಂತಲೂ ಈತನ ಪಥ-ಧರ್ಮ-ಸೂತ್ರಗಳನ್ನು ಕರೆಯಲಾಗಿದೆ. 1994 ರಲ್ಲೇ ಖ್ಯಾತ ಚಿಂತಕರೂ ಜ್ಞಾನಪೀಠ ಪುರಸ್ಕೃತರೂ ಆದ ಡಾ. ಯು ಆರ್ ಅನಂತಮೂರ್ತಿಯವರು ಅಕ್ಷರ ಪ್ರಕಾಶನದ ವತಿಯಿಂದ ದಾವ್ ದ ಜಿಂಗ್ ಎಂಬುದಾಗಿ ಇವನನ್ನು ಕನ್ನಡಿಸಿದ್ದಾರೆ. ಲೌಕಿಕ ಮತ್ತು ಅಲೌಕಿಕ ಎರಡನ್ನೂ ವಿಭಿನ್ನವಾದೊಂದು ಬೆಸುಗೆಯಿಂದ ನೋಡುವ ಕ್ರಮ ಈ ಹೊತ್ತಿಗೆ ಬೇಕಾಗಿದೆಯೆಂದು ಅವರು ಪ್ರತಿಪಾದಿಸಿದ್ದಾರೆ. ಇಂಥ ಲಾವೋತ್ಸೆಯ ಶಿಷ್ಯನೇ ಚಾಂಗ್ ತ್ಸು. ಈತನೇ ‘ಶೂನ್ಯ ನಾವೆ’ ಪರಿಕಲ್ಪನೆಯ ಒಡೆಯ.
ಚೀನಾದ ಲಾವೋತ್ಸೆ ಹೆಸರಿನಲ್ಲಿ ಇರುವ ಸೂಕ್ತಿಯೊಂದಿದೆ. The usefulness of a cup is in its emptiness. ಬಟ್ಟಲು ಖಾಲಿಯಿದ್ದರೇನೇ ಅದರ ಉಪಯೋಗ! ಪಾತ್ರೆಯ ಉಪಯುಕ್ತತೆಯು ಅದರ ಖಾಲಿತನದಲ್ಲಿದೆ ಎಂದರ್ಥ. ಖಾಲಿಯಿದ್ದರೆ ತಾನೇ ಏನನ್ನಾದರೂ ತುಂಬಿಸಲು ಸಾಧ್ಯ!? ಇದು ಅಂತಿಮವಾಗಿ ಆಧ್ಯಾತ್ಮಿಕ ಸಿದ್ಧಿಯ ಸೂತ್ರ. ಲೌಕಿಕ ಪ್ರತಿಮೆಗಳ ಮೂಲಕವೇ ಅಪ್ರತಿಮವಾದುದನ್ನು ಸಾರುವ ಗುಣ ಸಂತರದು. ಆ ಕಾಲದ ಬುದ್ಧರಿಂದ ಈ ಕಾಲದ ಜಗ್ಗಿ ವಾಸುದೇವ್ ಸದ್ಗುರುಗಳತನಕ ಇದು ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ನಾವದನ್ನು ಸೂಕ್ಷ್ಮವಾಗಿ ಅರಿಯಬೇಕಷ್ಟೆ. ನಮ್ಮ ಶೂನ್ಯ ಸಂಪಾದನೆಯೇ ಇದು! ಗಣಿತದಲ್ಲಿ ಸೊನ್ನೆಯೆಂಬುದು ಒಂದರ್ಥದಲ್ಲಿ ಏನೂ ಇಲ್ಲವೆಂದೂ ಇನ್ನೊಂದರ್ಥದಲ್ಲಿ ತನ್ನ ಹಿಂದಿನ ಸಂಖ್ಯೆಯನ್ನು ಉದ್ಧರಿಸುವ ಅಪಾರ ಪ್ರಮಾಣವೆಂದೂ ಭಾವಿಸಿ ಬಳಸುತ್ತೇವೆ. ಸಂಸ್ಕೃತದ ಶೂನ್ಯ ಎಂಬುದು ತದ್ಭವಗೊಂಡು ಕನ್ನಡದಲ್ಲಿ ಸೊನ್ನೆ ಎಂದಾಗುವುದು. ಸೊನ್ನೆಯೆಂದರೆ ಏನೂ ಇಲ್ಲವೆಂದಲ್ಲ; ಎಲ್ಲವೂ ಇಹುದೆಂದು! ಅಧ್ಯಾತ್ಮಶಾಸ್ತ್ರದಲ್ಲಂತೂ ಈ ಶೂನ್ಯಕ್ಕೆ ಎಲ್ಲಿಲ್ಲದ ಬೆಲೆ! ಇಷ್ಟಕ್ಕೂ ಸೊನ್ನೆಯನ್ನು ಜಗತ್ತಿಗೆ ಕೊಟ್ಟದ್ದು ನಾವೇ ಅಲ್ಲವೇ? ಹಾಗಾಗಿ ಅಧ್ಯಾತ್ಮದ ಈ ವಿಕಸನ ಅರ್ಥವೂ ನಮ್ಮದೇ! ಸತ್ಯವು ಒಂದೇ ಆಗಿರುವುದರಿಂದ ಅಲ್ಲಿಯೂ ಲಾವೋತ್ಸೆ ಶೂನ್ಯದ ಖಾಲಿತನವನ್ನು ಮನನ ಮಾಡಿಸುತ್ತಾರೆ.
ಸಾವಿರದ ಒಂಬೈನೂರ ಅರುವತ್ತು ಎಪ್ಪತ್ತರ ದಶಕದಲ್ಲಿದ್ದ ಮಾರ್ಷಲ್ ಆರ್ಟ್ಸ್ ಕಲಾವಿದ ಮತ್ತು ಸಿನಿಮಾ ನಟ ಬ್ರೂಸ್ ಲಿ ಸಹ ಈ ದಾರ್ಶನಿಕ ಸೂಕ್ತಿಯನ್ನು ಪುನರುಕ್ತಿಸಿದನು: It is the emptiness of the cup that makes it valuable and not its composition. ‘ಬಟ್ಟಲಿನ ಖಾಲಿತನವೇ ಅದರ ಮೌಲ್ಯ; ಅದನ್ನು ವಿನ್ಯಾಸಗೊಳಿಸಿದ್ದಲ್ಲ!’ ಹೊಡೆದಾಟಗಳ ಕಲೆ ಬಲ್ಲ ಬ್ರೂಸ್ ಲಿಯಂತಹ ವ್ಯಕ್ತಿಯು ಲಾವೋತ್ಸೆಯ ಮಾತನ್ನು ಅಂಗೀಕರಿಸಿ, ಅದನ್ನು ಇನ್ನಷ್ಟು ವಿಶದಗೊಳಿಸಿದನೆಂದರೆ ಎಂಥವರಿಗೂ ಅಚ್ಚರಿಯೇ. ಏಕೆಂದರೆ ನಾವು ಆಧ್ಯಾತ್ಮಿಕ ಪಥಿಕನಿಗೂ ಹೊರ ಜಗತ್ತಿನ ಉಪಾಧಿಗೆ ಸಿಕ್ಕಿಕೊಂಡ ಲೌಕಿಕನಿಗೂ ಎತ್ತಣಿದೆತ್ತ ಸಂಬಂಧ ಎಂದುಕೊಂಡಿದ್ದೇವೆ. ಇದು ಹಾಗಲ್ಲ! ಮಾರ್ಷಲ್ ಆರ್ಟ್ಸ್ ಬಲ್ಲಾತ ನಿಜವಾದ ಆಧ್ಯಾತ್ಮಿಕ ಸಾಧಕ! ಆಧ್ಯಾತ್ಮಿಕ ಸಾಧನೆಯಲ್ಲಿರುವವ ತನ್ನನ್ನು ಗೆಲ್ಲಲು ಹೊರಟ ಹೋರಾಟಗಾರ!!
ಚೀನಾ ದೇಶದ ವೈಶಿಷ್ಟ್ಯವೇ ಇದು. ಅಲ್ಲಿಯ ಪ್ರತಿಯೊಬ್ಬ ಗುರುವೂ ಯುದ್ಧಕಲೆಯಲ್ಲಿ ಪರಿಣತರು. ಎದುರಾಳಿಯ ಚೂಪುಕತ್ತಿಯನ್ನು ಕೇವಲ ಹಕ್ಕಿಯ ಪುಕ್ಕವೊಂದರ ಮೂಲಕ ಎದುರಿಸಬಲ್ಲರು! ಸಾಧನ ಮುಖ್ಯವಲ್ಲ; ಸಾಧನೆ ಮುಖ್ಯ ಎಂಬ ಸಂದೇಶ ನೀಡಿದವರು. ಇಂಥಲ್ಲಿ ನಮ್ಮ ಅಲ್ಲಮಪ್ರಭುವಿನ ಪ್ರಸಂಗವೊಂದು ನೆನಪಾಗುತ್ತದೆ. ಗೋರಕ್ಷನೆಂಬ ಸಿದ್ಧನು ಅಲ್ಲಮರ ಕೈಗೆ ಕತ್ತಿಯನ್ನು ಕೊಟ್ಟು ನನ್ನನ್ನು ಪರೀಕ್ಷಿಸು ಎನ್ನುವನು. ಅಲ್ಲಮನು ಆತನ ಶರೀರಕ್ಕೆ ಕತ್ತಿಯಲ್ಲಿ ಹೊಡೆದಾಗ ಬಂಡೆಗಲ್ಲಿಗೆ ಹೊಡೆದಂತೆ ಕಿಡಿ ಹಾರುವುದು; ಗೋರಕ್ಷನ ಮುಖದಲ್ಲಿ ಮಂದಹಾಸ ಮಿನುಗುವುದು. ಅದೇ ಕತ್ತಿಯನ್ನು ಗೋರಕ್ಷನು ಅಲ್ಲಮರಿಗೆ ಬೀಸಿದಾಗ ಗಾಳಿಯಲ್ಲಿ ಅಲ್ಲಾಡಿಸಿದಂತೆ ಸರಾಗವಾಗುವುದು! ಆಗ ಅಲ್ಲಮರು ಅವನಿಗೆ ಬೋಧಿಸುವುದು ಹೀಗೆ: ಶರೀರವನ್ನು ವಜ್ರಕಾಯ ಮಾಡಿಕೊಳ್ಳುವುದು ಸಾಧನೆಯಲ್ಲ; ಅದನ್ನು ಇಲ್ಲವಾಗಿಸುವುದು ಸಾಧನೆ!
ಹಿಂದೆಲ್ಲ ಗುರುವೆಂದರೆ ಲೌಕಿಕ ಮತ್ತು ಲೋಕೋತ್ತರ ಎರಡೂ ವಿದ್ಯೆಗಳನ್ನು ಬಲ್ಲವರು ಎಂದಿತ್ತು. ಈಗಷ್ಟೇ ನಾವು ವಿಪರೀತ ಲೌಕಿಕರಾಗಿ ಸಾಮಾನ್ಯರನ್ನು ನಾಚಿಸುವಂಥ ವ್ಯವಹಾರ ಕುಶಲಿಗಳಾಗಿದ್ದೇವೆ. ಲೌಕಿಕದ ಭ್ರಮೆಯನ್ನು ಮನವರಿಕೆ ಮಾಡಿ ಕೊಡಬೇಕಾದ ಗುರುಗಳೇ ಲೌಕಿಕವನ್ನು ವೈಭವೀಕರಿಸಿ, ಅದರಲ್ಲೇ ಬಿದ್ದು ಒದ್ದಾಡುತ್ತಾರೆ. ಭೋಗವನ್ನೇ ಯೋಗವೆಂದುಕೊಂಡು ಬದುಕುತ್ತಿದ್ದೇವೆ. ಇದು ಯೋಗವಲ್ಲ; ರೋಗ ಎಂಬುದು ತಿಳಿಯುವುದರೊಳಗೆ ಆಯಸ್ಸು ಮುಗಿದ ಗಂಟೆ ಮೊಳಗುತ್ತದೆ. ಅಂದರೆ ಪ್ರಾಚೀನ ಕಾಲದಲ್ಲಿ ದುಷ್ಟಶಿಕ್ಷಣವನ್ನೂ ಶಿಷ್ಟರಕ್ಷಣವನ್ನೂ ಮಾಡಬೇಕಾದ ಅನಿವಾರ್ಯವಿತ್ತು. ಹಾಗಾಗಿ, ಬದುಕುವುದನ್ನು ಹೇಳಿ ಕೊಡುವಾಗ ಹೇಗೆ ಬದುಕಬೇಕು? ಅಪಾಯಗಳು ಎದುರಾದಾಗ ಹೇಗೆ ಪಾರಾಗಬೇಕು? ಎಂಬುದೂ ವಿದ್ಯೆಯ ಭಾಗವಾಯಿತು. ಅದರಲ್ಲೂ ಚೀನಾದಂಥ ಬೃಹತ್ ಸಾಮ್ರಾಜ್ಯವು ಹಲವು ಏರುಪೇರುಗಳನ್ನು ಕಂಡ ದೇಶ. ಕುಂಗ್ಫು, ಸಮುರಾಯ್, ಜೂಡೋ ಮೊದಲಾದ ಯುದ್ಧಕಲೆಗಳನ್ನು ಕಲಿಯಲೇ ಬೇಕಿದ್ದ ಯುಗ. ಇದನ್ನು ಕಲಿಸುವ ಶಿಕ್ಷಕರು ಹಲವು ಕಠಿಣ ಪರೀಕ್ಷೆಗಳನ್ನು ಒಡ್ಡುತ್ತಿದ್ದರು. ಅವರೇ ಮುಂಚಿತವಾಗಿ ಯೋಜನೆ ತಯಾರಿಸಿ, ಕಲಿಕಾರ್ಥಿಗಳು ದಿನನಿತ್ಯದ ವ್ಯವಹಾರಗಳನ್ನು ಮಾಡುತ್ತಿರುವಾಗಲೇ ಧುತ್ತನೇ ಶತ್ರುಗಳಂತಿರುವವರು ಎದುರಾಗಿ ಅವರೊಡನೆ ಕಾದಾಟಕ್ಕೆ ನಿಲ್ಲುತ್ತಿದ್ದರು. ಗುರುಗಳು ಹೇಳಿಕೊಟ್ಟ ಪಟ್ಟುಗಳ ಪ್ರಾಯೋಗಿಕ ಪರೀಕ್ಷೆ ಈ ತೆರನಾದದ್ದು! ಸಾಧನೆ ಎಂಬುದು ಏರಬೇಕಾದ ಎತ್ತರ ಎಂಬುದನ್ನು ಅರಿಯುವಂಥ ವಿದ್ಯಾರ್ಥಿಗಳನ್ನು ತಯಾರು ಮಾಡಲಾಗುತ್ತಿತ್ತು. ಏನೋ ಒಂದಷ್ಟನ್ನು ಕಲಿತೆ! ಎಂಬ ಅಹಂಭಾವವು ಇದರಿಂದ ನಿರಸನಗೊಂಡಂತೆಯೇ!!
ನಮ್ಮಲ್ಲಿ ಲೋಕೋತ್ತರ ವಿದ್ಯೆಯನ್ನು ಪಡೆಯಲು ಗುರು ಮುಖೇನ ಸಾಗುವುದೇನೋ ಸರಿ; ಆದರೆ ಅವರು ಇಂಥ ಲೌಕಿಕಾರ್ಥದ ಹೊಡೆದಾಟ, ಬಡಿದಾಟಗಳನ್ನೇನೂ ಬೋಧಿಸಿದವರಲ್ಲ. ಸಮರಕಲೆಯನ್ನು ಕಲಿಸುವ ಆಚಾರ್ಯರಿದ್ದರೇನೋ ಸರಿಯೇ. ಆದರೆ ಚೀನಾದವರಂತೆ ಮಾರ್ಷಲ್ ಆರ್ಟ್ಸ್ ಕಲಿಸಲು ಮುಂದಾದವರಲ್ಲ. ವಾಸ್ತವವಾಗಿ ಇದು ಭಾರತದಂಥ ದಾರ್ಶನಿಕ ದೇಶಕ್ಕೆ ಬೇಕಾಗಿರಲಿಲ್ಲ. ಗುರುಗಳಾದವರಿಗೆ ಲೋಕವೇ ನಮಿಸುತ್ತಿತ್ತು. ಜೊತೆಗೆ ಇವರು ಸಂನ್ಯಾಸಿಗಳೂ ಆಗಿದ್ದರು. ರಾಜ್ಯ, ಕೋಶ, ಸಿಂಹಾಸನ ಎಂದು ಅಲವತ್ತುಕೊಂಡವರಲ್ಲ; ಅವನ್ನೆಲ್ಲ ಬಿಟ್ಟು ಬಂದವರೇ ಆಗಿದ್ದರು! ಇವರ ಪ್ರಭಾವಲಯಕ್ಕೆ ಬಂದ ಸಾಮಾನ್ಯರೂ ಪವಾಡಸದೃಶವೆಂಬಂತೆ ಬದಲಾಗುತ್ತಿದ್ದರು. ತಮ್ಮಲ್ಲಿದ್ದ ತಾಮಸ ಭಾವಗಳನ್ನು ನಿರಸನ ಮಾಡಿಕೊಂಡು ಸಾತ್ತ್ವಿಕರಾಗುತ್ತಿದ್ದರು. ಎಂಥವರೂ ಸಾತ್ತ್ವಿಕರಾಗುವಂತೆ ನೋಡಿಕೊಳ್ಳುವಲ್ಲಿ ಗುರುಗಳ ಪಾತ್ರ ಇರುತ್ತಿತ್ತು. ಹಾಗಾಗಿ ಶಾಂತಿಮಂತ್ರ ನಮ್ಮ ಭಾರತೀಯ ಗುರುಗಳ ಮೊದಲ ಮತ್ತು ಕೊನೆಯ ಪಠಣ. ಇಂತಿರುವಾಗ ಲಾವೋತ್ಸೆ ಹೇಳಿದ ಮಾತಿನ ಸತ್ಯಾರ್ಥವನ್ನು ಅರಿಯಬೇಕು. ಜೊತೆಗೆ ಬ್ರೂಸ್ ಲೀ ಅನುಮೋದಿಸಿದ್ದನ್ನೂ ತಿಳಿಯಬೇಕು.
ನಾವಿಂದು ಬುದ್ಧರು ಹೇಳಿದ ಮಧ್ಯಮಮಾರ್ಗವನ್ನು ಮರೆತಿದ್ದೇವೆ. ಎರಡು ಅತಿಗಳ ನಡುವೆ ಇರುವುದೇ ಜೀವನ ಸತ್ಯ. ಆದರೆ ಅತಿಗಳಲ್ಲಿ ಇರುವುದೇ ಬದುಕು ಎಂಬ ಭ್ರಮೆಯಲ್ಲಿದ್ದೇವೆ. ಭ್ರಮೆಗಳಾಚೆಗೆ ಬದುಕಿದೆ; ನಮ್ಮ ಬಗ್ಗೆ ಇನ್ನೊಬ್ಬರು ಅಂದುಕೊಂಡದ್ದರಲ್ಲಿ ಇಲ್ಲ ಎಂಬ ಸತ್ಯವನ್ನು ಧರಿಸಬೇಕಿದೆ. ಲೌಕಿಕವು ಒಂದು ಅತಿ; ಲೋಕೋತ್ತರವೂ ಇನ್ನೊಂದು ಅತಿ! ಆತ್ಯಂತಿಕ ಭೋಗಲಾಲಸೆಯಲ್ಲೇ ಬಿದ್ದು ಒದ್ದಾಡುವ ಜೀವ ಹೇಗೆ ಕ್ಷುಲ್ಲಕವೋ ಹಾಗೆಯೇ ಹಿಮಾಲಯಕ್ಕೆ ಓಡಿ ಹೋಗಿ ಚಳಿಮಳೆಯಲ್ಲಿ ಪ್ರಾಣತ್ಯಾಗ ಮಾಡುವುದೂ ಲೋಕವಿರೋಧಿಯೇ! ಹೋಗಬೇಕು ಮತ್ತು ವಾಪಸಾಗಬೇಕು- ಇದು ಸತ್ಯದರ್ಶನ. ಅಷ್ಟೇ ಅಲ್ಲ, ತಾ ಕಂಡುಂಡ ದರ್ಶನವನ್ನು ಜಗತ್ತಿಗೆ ಹಂಚಿ, ಸಾಮಾನ್ಯರನ್ನು ಉದ್ಧರಿಸಬೇಕು. ಮಹಾತ್ಮರ ಮತ್ತು ದಾರ್ಶನಿಕರ ಜೀವನ ಚರಿತ್ರೆಯನ್ನು ಮನಗಂಡರೆ ಇದು ಸ್ಪಷ್ಟ. ಗೌತಮಬುದ್ಧರು ಜ್ಞಾನೋದಯದ ನಂತರವೂ ಶಿಷ್ಯರನ್ನು ಕಟ್ಟಿಕೊಂಡು ಊರೂರು ತಿರುಗಿ ಮಂದಿಯ ಭ್ರಮೆಗಳನ್ನು ಹೋಗಲಾಡಿಸಲು ಪ್ರಯತ್ನಿಸಿದರೇಕೆ? ಶಂಕರಾಚಾರ್ಯರು ಭರತಖಂಡದುದ್ದಗಲಕೂ ಸಂಚರಿಸಿ ಹಿಂದೂಧರ್ಮದ ಪುನರುಜ್ಜೀವನಕೆ ಶ್ರಮಿಸಿದರೇಕೆ?
ವಿವೇಕಾನಂದರು ವಿದೇಶಕೆ ತೆರಳಿ ನಮ್ಮ ದೇಶ ಮತ್ತು ಸಂಸ್ಕೃತಿಗಳನ್ನು ಕುರಿತ ತಪ್ಪುಕಲ್ಪನೆಯನ್ನು ಹೋಗಲಾಡಿಸಿದರೇಕೆ? ಮಹಾತ್ಮಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ತಮಗಾದ ಅಪಮಾನವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೇ ಒಟ್ಟೂ ಭಾರತೀಯರ ಆತ್ಮಗೌರವದ ಪ್ರಶ್ನೆಯೆಂದು ಪರಿಗಣಿಸಿ, ಚಳವಳಿ ಹೂಡಿದರೇಕೆ? ಡಾ. ಬಿ ಆರ್ ಅಂಬೇಡ್ಕರರು ತಮ್ಮ ಜೀವಿತದುದ್ದಕೂ ಮನುಕುಲದ ಸ್ವಾಭಿಮಾನ ಮತ್ತು ಧೀಮಂತಿಕೆಗಾಗಿ ಶ್ರಮಿಸಿದರೇಕೆ? ಸರ್ವಸಂಗ ಪರಿತ್ಯಾಗಿಗಳಾಗಿ ಮೌನವ್ರತಿಯಾದರೂ ತಮ್ಮಾಶ್ರಮಕೆ ಬಂದ ನಿಜ ಭಕ್ತರ ಕಣ್ತೆರೆಸಲು ರಮಣ ಮಹರ್ಷಿಗಳು ಮಾತಾಡಿದರೇಕೆ? ತನ್ನ ಮತ್ತು ತನ್ನ ಸತ್ಸಂಗಗಳ ವಿರುದ್ಧ ಅದೆಷ್ಟೇ ಲೋಕಾಪವಾದ ಮತ್ತು ತಿರಸ್ಕಾರಗಳು ಬಂದರೂ ಕಿಂಚಿತ್ತೂ ಕಕಮಕಗೊಳ್ಳದೇ ಓಶೋ ರಜನೀಶರು ಸಾಯುವ ಕೊನೆಯ ಗಳಿಗೆಯವರೆಗೂ ವಿದೇಶದ ತುಂಬ ಅಡ್ಡಾಡಿ, ಪ್ರವಚನಗಳನ್ನು ನೀಡುತ್ತಾ, ಹೊಸದೊಂದು ಆಧ್ಯಾತ್ಮಿಕ ಕಾಣ್ಕೆಯನ್ನು ಕಾಣಿಸಿಕೊಟ್ಟರೇಕೆ? ಎಲ್ಲ ಬಗೆಯ ಹುದ್ದೆ, ಪ್ರತಿಷ್ಠೆ ಮತ್ತು ಮಾನ್ಯತೆಗಳನ್ನು ತೊರೆದು ಆತ್ಮದ ಬೆಳಕನ್ನು ಕಾಣಿಸಲು ಜಿದ್ದು ಕೃಷ್ಣಮೂರ್ತಿಯವರು ಮತಧರ್ಮಾಗಳಾಚೆಗೆ ತಮ್ಮ ಚಿಂತನೆಯನ್ನು ಚಾಚಿಕೊಂಡು ಫಿಲಾಸಫಿಗೊಂದು ನೂತನ ಆಯಾಮ ನೀಡಿದರೇಕೆ? ಈ ಪಟ್ಟಿಯನ್ನು ಎಷ್ಟು ಬೇಕಾದರೂ ಮಾಹಿತಿ ಮತ್ತು ತಿಳಿವಿನ ಮೂಲಕ ಬೆಳೆಸಬಹುದು!
ಆದರೆ ಇದರ ಹಿಂದೊಂದು ಸಂದೇಶವಿದೆ. ಲೌಕಿಕದಲಿದ್ದೇ ಲೋಕೋತ್ತರಕೆ ಕೈ ಚಾಚಬೇಕು. ಅದುವೇ ಲೋಕನಿಯಮ ಮತ್ತು ಲೋಕವಿವೇಕ. ನಮ್ಮ ಶರಣರು ಮತ್ತು ದಾಸರು ಇದನ್ನು ಮಾಡಿ ತೋರಿಸಿದರು. ಲಿಂಗಪೂಜೆಗೆ ಮಾತ್ರವೇ ಬಸವಣ್ಣನವರು ಸೀಮಿತಗೊಳ್ಳಲಿಲ್ಲ; ಭಕ್ತಿಮಾರ್ಗವೆಂದು ಸುಮ್ಮನೆ ತಾಳ ತಂಬೂರಿ ಹಿಡಿದು ದಾಸರು ಜಪ ಮಾಡಲಿಲ್ಲ. ‘ಮಾನವ ಜನ್ಮ ದೊಡ್ಡದು; ಹಾನಿ ಮಾಡದಿರಿ ಹುಚ್ಚಪ್ಪಗಳಿರಾ!’ ಎಂದು ಹಾಡುತ್ತಲೇ ತಿವಿದರು. ಬದುಕು ಶೂನ್ಯವೆಂದು ಅವರಿಗೆ ತಿಳಿದಿತ್ತಾದರೂ ಸಾರ್ಥಕಗೊಳಿಸಿ ಕೊಳ್ಳುವುದು ನಮ್ಮ ಕೈಯಳತೆಯಲೇ ಇದೆ ಎಂಬುದನ್ನು ಮನಗಾಣಿಸಿದರು. ಇದನ್ನೇ ಲಾವೋತ್ಸೆ ಹೇಳಿದ್ದು: ಬಾಳೆಂಬುದು ಬಟ್ಟಲು; ಅದು ಮೂಲತಃ ಖಾಲಿಯೇ. ಬಟ್ಟಲು ಖಾಲಿಯಿದ್ದರೇನೇ ತಾನೇ ನಾವದನ್ನು ತುಂಬಲು ಬಳಸುವುದು! ನಾವು ಏನನ್ನು ತುಂಬಿಸುತ್ತೇವೆಂಬುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅದನ್ನು ಬರಿದಾಗಿಸಿ ಇಡುವುದು!! ಇದೇನೋ ತರ್ಕದ ಮಾತು ಎಂದೆನಿಸಬಹುದು. ತರ್ಕದಲ್ಲಿ ಸತ್ಯ ಇರುತ್ತದೆ; ಸತ್ಯವನ್ನು ದರ್ಶಿಸಲು ಬಳಕೆಯಾಗುತ್ತದೆ. ತತ್ತ್ವದ ಸಾರವನ್ನು ಅರ್ಥ ಮಾಡಿಸಲು ತರ್ಕದ ಬಳಕೆ. ಆದರೆ ತರ್ಕವೇ ಸತ್ಯವಲ್ಲ! ತರ್ಕವು ದಾರಿಯೇ ವಿನಾ ಗುರಿಯಲ್ಲ. ‘ಹರಿದ ಗೋಣಿಯಲೊಬ್ಬ ಕಳವೆಯ ತುಂಬಿದ; ಇರುಳೆಲ್ಲ ನಡೆದನಾ ಸುಂಕಕೆ ಅಂಜಿ!’ ಎನ್ನುತ್ತಾರೆ ಜೇಡರ ದಾಸಿಮಯ್ಯರು. ನಾವು ತರ್ಕವನ್ನು ಬಳಸುವುದು ಹೀಗೆ. ಆದರೆ ಇಲ್ಲಿ ನಾವು ತಿಳಿಯಬೇಕಾಗಿರುವುದು ಬದುಕಲ್ಲಿ ತುಂಬಿಸಿಕೊಳ್ಳುವುದು ನಡೆದಾದ ಮೇಲೆ ನಾವೇ ಖಾಲಿ ಮಾಡಿ ಹೋಗಬೇಕು.
ಲೌಕಿಕಕ್ಕೋಸ್ಕರ ತುಂಬಿಸಿಕೊಳ್ಳುತ್ತೇವೆ; ಆಮೇಲೆ ಅಗತ್ಯವಿದ್ದಷ್ಟನ್ನು ಇಟ್ಟುಕೊಂಡು ಒಂದೊಂದಾಗಿ ಎಸೆಯುತ್ತಲೋ ಕೈ ಬಿಡುತ್ತಲೋ ಸಾಗುತ್ತೇವೆ. ನಿರರ್ಥಕತೆಯೇ ಅರ್ಥದ ಮೂಲ ನೆಲೆ ಮತ್ತು ಸೆಲೆ. ಈ ಪ್ರಪಂಚದಲ್ಲಿ ಲೌಕಿಕ ಕಾರಣಕ್ಕಾಗಿ ಎರಡು ಎದುರುಗಳನ್ನು ಇಟ್ಟುಕೊಂಡು ಇವು ಒಂದಕ್ಕೊಂದು ವಿರುದ್ಧ ಎನ್ನುತ್ತೇವೆ. ಆದರೆ ಅಧ್ಯಾತ್ಮದಲ್ಲಿ ಹಾಗಲ್ಲ. ಆ ಎದುರಿಟ್ಟವನ್ನೇ ಅಕ್ಕಪಕ್ಕ ಇಟ್ಟು ಅರ್ಥ ಮಾಡಿಕೊಳ್ಳಬೇಕು. ಅರ್ಥವೂ ನಿರರ್ಥವೂ ಜೊತೆಗೇ ಇರುತ್ತವೆ. ಇನ್ ಟು ಮಾರ್ಕು ತೆಗೆದು ಆ ಜಾಗದಲ್ಲಿ ಈಕ್ವಲ್ಸ್ ಹಾಕುತ್ತಾ ಹೋದರೆ ಲೌಕಿಕವೆಂಬುದು ಲೋಕೋತ್ತರವನ್ನು ದರ್ಶಿಸಿ ಕೊಡುತ್ತದೆ. ಅಪ್ಪ ಮತ್ತು ಅಮ್ಮ ವಿರುದ್ಧ ಪದವಲ್ಲ. ಹಾಗೆಯೇ ಗಂಡ ಹೆಂಡತಿ ಎದುರು ಪದವಲ್ಲ. ಗಂಡಿಗೆ ಹೆಣ್ಣು ಮತ್ತು ಹೆಣ್ಣಿಗೆ ಗಂಡು ವಿರುದ್ಧವಲ್ಲ! ಇವುಗಳ ನಡುವಿನ ಇನ್ ಟು ಮಾರ್ಕು ತೆಗೆದು ಈಕ್ವಲ್ಸ್ ಹಾಕಿದರೆ ಆಗ ನಮಗಾಗುವ ಅರಿವೇ ಬೇರೆ. ಮೇಲ್ನೋಟಕ್ಕೆ ವಿರುದ್ಧವೆನಿಸುವ ಈ ಲೋಕದೆಲ್ಲವೂ ಪರಸ್ಪರ ಸಂಪರ್ಕಿತ ಮಾತ್ರವಲ್ಲ ಸಂತುಲಿತ. ಎಲ್ಲವೂ ಏನೋ ಒಂದರ ಘನೋದ್ದೇಶಕ್ಕೆ ಕಾರ್ಯತತ್ಪರವಾಗಿರುತ್ತವೆ. ಒಂದಕ್ಕೊಂದು ಸಂಬಂಧವಿಲ್ಲದಂತೆ ಕಂಡರೂ ಆಳದಲ್ಲಿ ಮತ್ತು ಬಲು ದೀರ್ಘಕಾಲದಲ್ಲಿ ಅವು ಸಂಬಂಧಿತವೇ ಆಗಿರುತ್ತವೆ. ಈ ಮಹಾಕಾಣ್ಕೆಯೇ ಅಧ್ಯಾತ್ಮ. ಚಿಕ್ಕ ಪುಟ್ಟ ಘಟನೆ, ಸಂದರ್ಭ ಮತ್ತು ಪದಾರ್ಥಗಳಲ್ಲೂ ಇದು ಸುವ್ಯಕ್ತ. ನಮ್ಮ ಒಳಗಣ್ಣು ತೆರೆದಿದ್ದರೆ ಅನುಭವ ಗ್ರಾಹ್ಯ.
ಸಂಗೀತವನ್ನೇ ಉಸಿರಾಡುತ್ತ ಬದುಕಿದ ನನ್ನೋರ್ವ ಸ್ನೇಹಿತರು ಕೆಸೆಟ್ ಯುಗದಲ್ಲಿ ಎಲ್ಲವನ್ನೂ ಮನೆಯಲ್ಲಿ ಜೋಡಿಸಿ ಸಂರಕ್ಷಿಸಿದರು. ಕೇಳಿದ್ದಕ್ಕಿಂತ ಸಂಗ್ರಹಿಸಿದ್ದೇ ಹೆಚ್ಚು. ಕೆಸೆಟ್ ಕಾಲ ಮುಗಿದು ಆಡಿಯೋ ಸಿಡಿಗಳು ಕಾಲಿಟ್ಟಾಗ ಕೆಸೆಟ್ಗಳಲ್ಲಿ ಇದ್ದುವನ್ನು ಸಿಡಿಗೆ ಪರಿವರ್ತಿಸಿ ಕೊಂಡರು. ಸಿಡಿಗಳನ್ನು ಜೋಡಿಸಿಡುತ್ತಿದ್ದ ಹೊತ್ತಲ್ಲೇ ಪೆನ್ಡ್ರೈವ್ಗಳು ಧುತ್ತನೆ ಪ್ರತ್ಯಕ್ಷವಾಗಿ ಅಗಾಧ ಮೆಮೊರಿಗಳ ಮೂಲಕ ಅಣಕಿಸಲಾರಂಭಿಸಿದಾಗ ಬೇರೆ ವಿಧಿಯಿಲ್ಲದೇ ಸಿಡಿಗಳಲ್ಲಿ ಇದ್ದ ಎಲ್ಲ ಸಂಗೀತವನ್ನು ಕಂಪ್ಯೂಟರಿನ ಹಾರ್ಡ್ ಡಿಸ್ಕಿಗೂ ಪೆನ್ಡ್ರೈವ್ಗೂ ತುಂಬಲಾರಂಭಿಸಿದರು. ಅವುಗಳ ಫ್ಲಾಶ್ ಮೆಮೊರಿ ಆಗಿಂದಾಗ್ಗ್ಯೆ ಕರಪ್ಟ್ ಆಗತೊಡಗಿ, ಬೇಕಾದಾಗ ಪ್ಲೇ ಆಗದೇ ಕಂಗೆಡಿಸಿ, ನಿದ್ದೆಗೆಡಿಸಿತು. ಇನ್ನಷ್ಟು ಖರ್ಚು ಮಾಡಿ, ಎಕ್ಸ್ಟ್ರನಲ್ ಹಾರ್ಡ್ಡಿಸ್ಕ್ ತಂದು ಎಲ್ಲವನ್ನೂ ಮತ್ತೆ ತುಂಬತೊಡಗಿದರು. ಯೂಟ್ಯೂಬು ಕಾಣಿಸಿಕೊಂಡು, ಇಂಟರನೆಟ್ಟು ಸ್ಪೀಡಾಗಿ, ಕಂಪ್ಯೂಟರುಗಳೂ ಮೊಬೈಲ್ ಫೋನುಗಳೂ ಅಪ್ಡೇಟಾಗಿ, ಕ್ಷಣಮಾತ್ರದಲಿ ಬೇಕಾದ ಹಾಡು, ಆಡಿಯೋ, ವಿಡಿಯೋ ದೊರೆಯುವಂತಾದಾಗ ಆನ್ಲೈನೇ ನಮ್ಮ ಬದುಕಾದಾಗ ಸ್ನೇಹಿತರು ಸಂಗ್ರಹಿಸಿದ್ದೆಲ್ಲವೂ ಮೂಲೆ ಗುಂಪಾದವು. ತಾವು ಸಂಗ್ರಹಿಸಿದ್ದರಲ್ಲಿ ಬೇಕಾದುದನ್ನು ಹುಡುಕಿ ಆಲಿಸುವುದರೊಳಗೆ ಮೂಡೇ ಆಫ್ ಆಗುತ್ತಿತ್ತು. ಸಂಗ್ರಹಿಸಿದ್ದೇ ಬದುಕಾಯಿತು; ಸಂಗ್ರಹಿಸುವುದೇ ಕೆಲಸವಾಯಿತು. ಆಲಿಸಲೇ ಇಲ್ಲ; ಆಸ್ವಾದಿಸಲೇ ಇಲ್ಲ; ಆನಂದಿಸಲೇ ಇಲ್ಲ! ನದಿಯಿಂದ ನೀರು ತರುವ ಬದಲು ನದಿಗೇ ನೀರು ಹೊತ್ತರು! ಹಾಗೆಯೇ ಸತ್ತೇ ಹೋದರು. ಸಿದ್ಧತೆಯಲ್ಲೇ ಬದುಕು ಸವೆಸಿದರು; ನಿಜವಾಗಿ ಬದುಕಲೇ ಇಲ್ಲ! ಜೀವದ ಖಾಲಿ ಬಟ್ಟಲನು ತುಂಬಿಸಿದ್ದೇ ಬಂತು ಭಾಗ್ಯ; ಬಟ್ಟಲಿನ ಖಾಲಿತನದ ಮಹತ್ವವನ್ನು ಕಾಣದ ಲೌಕಿಕ ಯಾಂತ್ರಿಕ ನಿರ್ಭಾಗ್ಯ!
ಲಾವೋತ್ಸೆಯಾಗಲೀ ಆತನ ಮಾತನ್ನು ಪುನರುಚ್ಚರಿಸಿ ಹೊಸದೃಷ್ಟಿಯಿಂದ ವಿವೇಚಿಸಿದ ಬ್ರೂಸ್ಲೀಯಾಗಲೀ ಇದನ್ನೇ ಹೇಳಿದ್ದು: ಬಟ್ಟಲಿನ ಉಪಯುಕ್ತತೆಯು ಅದರ ಖಾಲಿತನದಲ್ಲಿದೆ; ಅದರಲ್ಲಿ ತುಂಬಿಸಿಟ್ಟ ಪದಾರ್ಥಗಳ ಮೌಲ್ಯದಿಂದಲ್ಲ! ಬದುಕನ್ನು ಬೆದಕುತ್ತಾ ಹೋದರೆ ಬದುಕಿದಂತಾಗುವುದಿಲ್ಲ; ಭ್ರಮೆಗಳಾಚೆಗೆ ಬದುಕಿದೆ; ಎಲ್ಲ ಭ್ರಮೆಗಳನ್ನು ಕಳಚುವುದೇ ಬದುಕಿನ ಉದ್ದೇಶವಾಗಿದೆ ಎಂಬುದೇ ಜ್ಞಾನೋದಯ. ಇದನ್ನೇ ತಿಳಿದವರು ನಾನಾ ರೀತಿಯಲ್ಲಿ ಬೋಧಿಸಿದ್ದಾರೆ. ಖಾಲಿಯೇ ನಿಜದ ಭರ್ತಿ; ಭರ್ತಿಯು ನಿಜವಾಗಲೂ ಭರ್ತಿಯಲ್ಲ! ಸುಮ್ಮನಿರುವುದೇ ಸತ್ಯಸಂತಸ; ಸುಮ್ಮನಿರುವುದರ ಬಗ್ಗೆ ಮಾತಾಡುವುದಲ್ಲ! ನಮ್ಮ ಸ್ನೇಹಿತರೊಬ್ಬರಿದ್ದರು. ಯಾವಾಗಲೂ ಲಿಜ಼ನಿಂಗ್ ಕೆಪಾಸಿಟಿಯ ಬಗ್ಗೆ ಮಾತಾಡುತ್ತಿದ್ದರು. ಅವರಲ್ಲೇ ಲಿಜ಼ನಿಂಗ್ ಇರಲಿಲ್ಲ. ಹೀಗೆ ನಮಗೇ ಗೊತ್ತಿಲ್ಲದೆ ನಮ್ಮ ಬದುಕು ವಿಪರ್ಯಾಸಗಳ ಸಂತೆಯಾಗಿರುತ್ತದೆ. ಹೊರಗಿನ ಪ್ರಯಾಣವನ್ನು ಕೈಬಿಟ್ಟು ಅಂತರ್ಯಾತ್ರೆ ಕೈಗೊಂಡಾಗ ಇವೆಲ್ಲ ಬೆಳಕಿಗೆ ಬರುತ್ತವೆ; ಆಗ ನಿಧಾನವಾಗಿ ಹೃದಯದಲ್ಲಿ ಬೆಳಕು ಮೂಡ ತೊಡಗುತ್ತದೆ. ಲಾವೋತ್ಸೆ ಮಾತಿನಂತರಾಳವು ಕರುಳಲ್ಲಿ ಬೆರಳಾಡಿಸಿದಂತಾಗುತ್ತದೆ!
-ಡಾ. ಹೆಚ್ ಎನ್ ಮಂಜುರಾಜ್
ಪಂಜುವಿಗೆ ಧನ್ಯವಾದಗಳು
ಲೇಖನವು ಇಂದಿನ ವಸ್ತುಪ್ರಪಂಚದಾಚೆ ಇಣುಕಿ ಹಾಕಲು ಉತ್ತೇಜಿಸುತ್ತಿದೆ. Our preferences should change, before it is too late…!