ಸುಮೇರು ನಂದನ: ಬಿ. ಟಿ. ನಾಯಕ್

ಅವಧದ ಮಹಾರಾಜಾ ಮಧುಕರ ನಂದನ ಮತ್ತು ರಾಣಿ ಸೌಮ್ಯವತಿ ಇವರ ಏಕ ಮಾತ್ರ ಪುತ್ರನಾದ ರಾಜಕುಮಾರ ಸುಮೇರು ನಂದನ ಬಿಲ್ಲು ವಿದ್ಯೆಯಲ್ಲಿ ಪಾರಂಗತನಾಗಿದ್ದ. ಆತನ ಗುರುಗಳಾದ ಆಚಾರ್ಯ ಮಧುರಾಕ್ಷರರ ಬಳಿ ಆತನು ಕಲಿತಿದ್ದನು. ಆದರೆ, ಅವರ ಗುರುಗಳು ತಿಳಿಸಿದ ಹಾಗೆ ಆತ ವಿದ್ಯೆಯನ್ನು ಸದ್ಬಳಕೆ ಮಾಡುತ್ತಿರಲಿಲ್ಲ. ಆತನು ಕಲಿತುಕೊಂಡ ಬಿಲ್ಲು ವಿದ್ಯೆ ಒಂದು ಹವ್ಯಾಸ ವೃತ್ತಿಯಾಯಿತು. ಆತನು ಆಗಾಗ ಒಂಟಿಯಾಗಿ ಅರಣ್ಯಕ್ಕೆ ಹೋಗಿ ಮೃಗಗಳನ್ನು ಬೇಟೆಯಾಡುತ್ತಿದ್ದ. ಎಷ್ಟೋ ಮೃಗಗಳನ್ನು ಬೇಟೆಯಾಡಿ ಅವುಗಳ ಮಾರಣ ಹೋಮ ಮಾಡಿ ಆನಂದಿಸುತ್ತಿದ್ದ. ಇದನ್ನು ಅರಿತ ಆತನ
ಗುರುಗಳು ಬಹಳೇ ನೊಂದುಕೊಂಡರು. ಆತನನ್ನು ಕರೆಯಿಸಿ ಆ ಬಗ್ಗೆ ತಿಳಿ ಹೇಳಲು ಕೂಡಾ ಮುಂದಾಗಿದ್ದರು.

ಆದರೆ, ಗುರುಪತ್ನಿ ಅದನ್ನು ಹೀಗೆ ಹೇಳಿ ತಡೆ ಹಿಡಿದಳು;
‘ಸ್ವಾಮಿ, ನೀವು ನಿಮ್ಮ ಅಮೋಘ ವಿದ್ಯೆಯನ್ನು ಆತನಿಗೆ ಕೃಪೆ ಮಾಡಿದ್ದೀರಿ. ಅಲ್ಲದೇ, ಅದರ ಸದ್ಬಳಕೆಯ ಬಗ್ಗೆಯೂ ಆತನಿಗೆ ತಿಳಿಸಿದ್ದೀರಿ. ಈಗ ಭವಿಷ್ಯದ ವಿಚಾರ ಆತನಿಗೆ ಬಿಟ್ಟು ಕೊಡಬೇಕು. ಈಗಲ್ಲದಿದ್ದರೂ, ಮುಂದೊಂದು ದಿನ ತನ್ನ ನಡೆ ತಪ್ಪು ಎಂದು ಅರಿತಾಗ, ಆತನು ಸರಿ ದಾರಿಯಲ್ಲಿ ಹೋಗಬಹುದು. ಹಾಗಾಗಿ, ಆ ವಿಷಯದಲ್ಲೇ ಮಗ್ನರಾಗಿ ಚಿಂತಿಸದಿರಿ’ ಎಂದು ಹೇಳಿದ್ದಳು.

‘ಸರಿ. . ಆ ಗೋಜಲನ್ನು ಬಿಟ್ಟು ಬಿಡುತ್ತೇನೆ’ ಎಂದು ಆಗ ಸುಮ್ಮನಾಗಿದ್ದರು. ಮಹಾರಾಜಾ ಮಧುಕರ ನಂದನರೂ, ರಾಜಕುಮಾರನ ಹವ್ಯಾಸದ ಬಗ್ಗೆ ಆತಂಕಗೊಂಡರು. ಆತನು ಬೆಳಗಾದರೆ ಅರಣ್ಯಕ್ಕೆ ಹೋಗಿ ಬಿಡುತ್ತಿದ್ದನು. ಆತನಿಗೆ ರಾಜ್ಯಭಾರದ ವಿಷಯಗಳ ಬಗ್ಗೆ ಮತ್ತು ದೇಶ ವಿದೇಶಗಳ ಕಾರ್ಯಭಾರದ ಬಗ್ಗೆ ತಿಳಿಸಿ ಹೇಳಬೇಕೆಂದರೆ, ಆತ ಅವರಿಗೆ ದೊರಕುತ್ತಲೇ ಇರಲಿಲ್ಲ. ಅದು ಅವರಿಗೆ ಒಂದು ದೊಡ್ಡ ತಲೆ ನೋವೇ ಆಯಿತು. ಎಷ್ಟೋ ಬಾರಿ ತಮ್ಮ ರಾಣಿಯವರಿಗೂ ಪುತ್ರನನ್ನು ತಿದ್ದಲು ಹೇಳಿದ್ದರು. ಆದರೆ, ರಾಜಕುಮಾರ ಯಾರ ಮಾತು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಆತನ ದಿನಚರಿ ಹಾಗೆಯೇ ಸಾಗಿತ್ತು.

ಒಂದು ಬಾರಿ ರಾಜಕುಮಾರ ಯಥಾ ಪ್ರಕಾರ ಬೇಟೆಯಾಡಲು ಅರಣ್ಯಕ್ಕೆ ಹೋಗಿದ್ದ. ಅಲ್ಲಿ ಮೃಗದ ಬೇಟೆಯಾಡಲು ಪ್ರಾರಂಭಿಸಿದಾಗ, ಒಂದು ಕಾಡು ಮೃಗ ಕಾಣಿಸಿಕೊಂಡಿತು. ಅದು ಅಲ್ಲಿರುವ ಹೊಂಡದಲ್ಲಿ ನೀರನ್ನು ಕುಡಿಯಲು ಬಂದಿತ್ತು. ಅದರ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸಿ ರಾಜಕುಮಾರ ತನ್ನ ಬಾಣ ಪ್ರಯೋಗ ಮಾಡಿದ. ಆದರೆ, ಹೇಗೋ ಆ ಗುರಿ ತಪ್ಪಿ ಆ ಮೃಗ ಅಲ್ಲಿಂದ ಒಡಲು ಪ್ರಾರಂಭಿಸಿತು. ರಾಜಕುಮಾರ ಕೂಡಾ ಅದರ ಬೆನ್ನು ಹತ್ತಿ ಓಡುತ್ತಾ ಅಕ್ಕ ಪಕ್ಕದಲ್ಲಿ ನೋಡುತ್ತಾ ಮತ್ತೆಮತ್ತೇ ಓಡುತ್ತಾ ಹೋದ. ಆದರೆ, ಅದು ಆನಂತರ ಕಾಣಲೇ ಇಲ್ಲ. ಆತನಿಗೆ ಆಶ್ಚರ್ಯವಾಯಿತು. ಅದು ಮಾಯಾವಿ ಮೃಗವಾಗಿರಬಹುದೇ ಎಂದುಕೊಂಡ.

ಇಲ್ಲಿಯವರೆಗೆ ಆತನು ಬೇಟೆಯಾಡಿದ ಮೃಗಗಳು ಒಂದೇ ಏಟಿಗೆ ಮರಣಿಸಿವೆ. ಆದರೆ, ಇದು ಹೇಗೆ ತಪ್ಪಿಸಿಕೊಂಡಿತು ಎಂದು ಚಿಂತಾಕ್ರಾಂತನಾದ. ಹಾಗೆಯೇ, ಸುಮಾರು ದೂರ ಕ್ರಮಿಸಿ ಒಂದು ಹೊಸದಾದ ಸ್ಥಳಕ್ಕೆ ಬಂದ. ಅಲ್ಲಿ ಕೂಡಾ ಒಂದು ದೊಡ್ಡ ನೀರಿನ ಹೊಂಡವಿತ್ತು. ಬಹುಶಃ ಅದು ಅಲ್ಲಿಯೇ ಇರಬೇಕೆಂದುಕೊಂಡು ಹೊಂಡದ ಹತ್ತಿರಕ್ಕೆ ಹೋದ. ಅದೊಂದು ರಮ್ಯವಾದ ಸ್ಥಳವಾಗಿತ್ತು. ಅಲ್ಲಿಯ ಕಾನನ ಬಲು ಸುಂದರವಾಗಿತ್ತು. ಅಲ್ಲಿ ಎತ್ತರವಾದ ಹಚ್ಚನೆಯ ಮರ ಗಿಡಗಳು, ಅಲ್ಲಲ್ಲಿ ಕಂಗೊಳಿಸುವ ಹೂವು ಹೊತ್ತ ಬಳ್ಳಿಗಳು, ಮತ್ತು ಅಂದವಾಗಿ ಬಣ್ಣ ಬಣ್ಣದ ಹೂವುಗಳಿರುವ ಪ್ರದೇಶವದು. ಈ ಪ್ರದೇಶ ಬಹುಶಃ ಯಾರಾದರೂ ಪಾಲನೆ ಮಾಡುತ್ತಿದ್ದಾರೆಯೇ ಎಂಬ ಅನುಮಾನ ಆತನನ್ನು ಕಾಡಿತು. ಒಂದು ಬಾರಿ ಸುತ್ತಲೂ ಕಣ್ಣು ಹಾಯಿಸಿದ. ಆಗ ಆತನಿಗೆ ಹತ್ತಿರದಲ್ಲಿ ಒಂದು ಕುಟೀರ ಕಾಣಿಸಿತು. ಆಗ ಆ ಕಡೆಗೆಯೇ ಹೆಜ್ಜೆ ಹಾಕಿದ, ಮತ್ತು ಹತ್ತಿರಕ್ಕೆ ಹೋದ.

ಆ ಕುಟೀರ ಅದೆಷ್ಟು ಸುಂದರ ಮತ್ತು ಮನಮೋಹಕವಾಗಿತ್ತೆಂದರೇ, ಅಲ್ಲಿಯೂ ಹೂವು ಹಣ್ಣಿನ ಬಳ್ಳಿ ಮರಗಳು ಸುಂದರವಾಗಿ ಹಬ್ಬಿಕೊಂಡಿದ್ದವು. ಅಲ್ಲಿ ವಿಶಿಷ್ಟವಾದ ಮತ್ತು ಸುವಾಸನೆಯ ಹೂವುಗಳಿದ್ದ ಬಳ್ಳಿಗಳು ಮತ್ತು ಪೊದೆಗಳು ಕಂಡು ಬಂದವು. ಅದು ಅಲ್ಲದೇ, ಬಣ್ಣ ಬಣ್ಣದ ಮೊಲಗಳು ಮತ್ತು ಜಿಂಕೆಗಳು ಅಲ್ಲಿ ಕಂಡು ಬಂದವು. ಇಂಥಹ ಘಾಡವಾದ ಕ್ರೂರ ಪ್ರಾಣಿಗಳಿರುವ ಪ್ರದೇಶದಲ್ಲಿ ಇವು ಹೇಗೆ ಜೀವಿಸಿವೆ ಎಂದು ರಾಜಕುಮಾರಿಗೆ ಆಶ್ಚರ್ಯವಾಯಿತು. ಅಲ್ಲಿ ಕೆಲವು ಹೆಂಗೆಳೆಯರು ಅತ್ತ ಇತ್ತ ಓಡಾಡುತ್ತಿದ್ದುದು ರಾಜಕುಮಾರನ ಕಣ್ಣಿಗೆ ಬಿತ್ತು. ಆತ ಇನ್ನೂ ಹತ್ತಿರಕ್ಕೆ ಹೋಗಿ, ಅವರನ್ನು ಮಾತಾಡಿಸಲು ಪ್ರಯತ್ನಿಸಿದ. ಆದರೆ, ಅಪರಿಚಿತ ವ್ಯಕ್ತಿಯನ್ನು ಕಂಡು ಅವರು

ಕುಟೀರದೊಳಕ್ಕೆ ಓಡಿ ಹೋದರು. ಆಮೇಲೆ ಒಬ್ಬ ಬಾಲಕ ಹೊರಗೆ ಬಂದು ರಾಜಕುಮಾರನ ಕಡೆ ಬರುತ್ತಿರುವುದು ಕಾಣಿಸಿತು. ಆ ಬಾಲಕ ಬಂದವನೇ ರಾಜಕುಮಾರನನ್ನು ಕಂಡು ಹೀಗೆ ಮಾತಾಡಿಸಿದ’

‘ತಾವು ಯಾರು ಮಾನ್ಯರೆ ? ಇಲ್ಲಿಗೆ ಏತಕ್ಕೆ ಬಂದೀರಿ ?’ ಎಂದಾಗ ರಾಜಕುಮಾರ;
‘ನಾನು ಅವಧದ ರಾಜಕುಮಾರ ಸುಮೇರು ನಂದನ, ಇಲ್ಲಿ ಬೇಟೆಯಾಡಲಿಕ್ಕೆ ಬಂದವನು. ಅಕಸ್ಮಾತ್ ನನ್ನ ದೃಷ್ಟಿ ತಪ್ಪಿಸಿ ಒಂದು ಮೃಗ ಈ ಕಡೆಗೆನೇ ಬಂದಿತು. ಅದನ್ನು ಬೆನ್ನತ್ತಿ ಬಂದಿದ್ದೇನೆ. ನಿಮ್ಮ ಕುಟೀರ ಸುಂದರವಾಗಿದೆ. ಹಾಗಾಗಿ, ಆಕರ್ಷಿತಗೊಂಡು ಇಲ್ಲಿಗೆ ಬಂದಿದ್ದೇನೆ. ‘ ಎಂದಾಗ ಆ ಬಾಲಕ;
‘ನೀವು ಹಾಗೆಯೇ ಹೋಗುವಿರಾ ಅಥವಾ ಒಳಗೆ ಬರಬೇಕೆಂದಿರಾ ?’ ಎಂದ.
‘ನಿಮ್ಮಲ್ಲಿ ಯಾರಾದರೂ ಹಿರಿಯರು ಆಮಂತ್ರಿಸಿದರೆ, ಒಳಕ್ಕೆ ಬರುತ್ತೇನೆ’ ಎಂದು ರಾಜಕುಮಾರ ಹೇಳಿದ. ಆಗ ಬಾಲಕ ಕುಟೀರದೊಳಕ್ಕೆ ಹೋಗಿ ಒಬ್ಬ ಹಿರಿಯಜ್ಜಿಯನ್ನು ಕರೆ ತಂದ. ಆಗ ಆಕೆ ಬಾಲಕನಿಗೆ ಅವರನ್ನು ಕರೆದುಕೊಂಡು ಬರಲು ಹೇಳಿ, ತಾನು ಒಳಗೆ ಹೋದಳು. ರಾಜಕುಮಾರ ಒಳಗೆ ಬರುತ್ತಿದ್ದಂತೆ ಅಲ್ಲಿ ಗುರುಗಳೊಬ್ಬರು ಕಂಡರು. ಅವರಿಗೆ ಎರಡೂ ಕೈ ಜೋಡಿಸಿ ನಮಸ್ಕರಿಸಿದ.

‘ಒಳಕ್ಕೆ ಬನ್ನಿ ಕುಮಾರ’ ಎಂದು ಕರೆದರು
ಆಗ ರಾಜಕುಮಾರ ಒಳಗೆ ಹೋಗಿ ಆಸೀನರಾದನು. ಆತನಿಗೆ ತಿನ್ನಲು ಹಣ್ಣು ಹಂಪಲು ಮತ್ತು ಕುಡಿಯಲು ನೀರು ಕೊಟ್ಟರು. ಆತನಿಗೆ ತುಂಬಾ ಆಯಾಸವಾಗಿತ್ತು ಅಲ್ಲದೆ ಹಸಿವು ಕೂಡಾ ಮೂಡಿತ್ತು. ಹಾಗಾಗಿ, ಅವರು ನೀಡಿದ ಹಣ್ಣು ಹಂಪಲುಗಳನ್ನು ಸೇವಿಸಿ ಸಂತೃಪ್ತಿ ಗೊಂಡನು. ಆಮೇಲೆ ಗುರುಗಳು ಆತನ ಪರಿಚಯ ಕೇಳಿದರು.

ಆಗ ರಾಜಕುಮಾರ;
‘ಗುರುಗಳೇ, ನಾನು ಮಹಾರಾಜಾ ಮಧುಕರ ನಂದನ ಅವರ ಪುತ್ರ ರಾಜಕುಮಾರ ಸುಮೇರು ನಂದನ. ನನಗೆ ಮೃಗಗಳನ್ನು ಬೇಟೆಯಾಡುವದು ಒಂದು ತೀರಾ ಹವ್ಯಾಸವಾಗಿಬಿಟ್ಟಿದೆ. ನನ್ನ ಜೀವನದ ಗುರಿಯೇ ಅದು ಎನ್ನುವಷ್ಟರಮಟ್ಟಿಗೆ ಅದು ಆಗಿದೆ. ಹಾಗಾಗಿ, ಒಂದು ಮೃಗವನ್ನು ಬೆನ್ನತ್ತಿ ಇಲ್ಲಿಯವರೆಗೆ ಬಂದಿದ್ದೇನೆ. ಕೊನೆಗೂ ಅದು ಸಿಗಲಿಲ್ಲ. ಆದರೆ, ಅದಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ‘ ಎಂದ.

‘ಅದನ್ನು ವಧೆ ಮಾಡಲು ಬಂದವರು, ಅದ್ಹೇಗೆ ಅದಕ್ಕೆ ಧನ್ಯವಾದಗಳನ್ನು ಹೇಳುತ್ತೀರಿ ?’ ಎಂದರು ಗುರುಗಳು.
‘ಬಹುಶಃ ಅದು ದೈವೀ ಸ್ವರೂಪಿ ಇರಬಹುದು. ನನ್ನನ್ನು ನಿಮ್ಮವರೆಗೆ ತಂದು ಬಿಟ್ಟಿದೆ ಮತ್ತು ನನಗೆ ನೀವು ಆತಿಥ್ಯ ಸತ್ಕಾರ ಕೂಡ ಮಾಡಿದಿರಿ. ಇದು ಸಾಮಾನ್ಯವಿಷಯವೇ ?. ‘
‘ನಿಜ ! ನಿಮ್ಮದು ಒಳ್ಳೆಯ ವಿಚಾರ. ಬಹುಶಃ ಆ ಮೃಗ ಎಲ್ಲೊ ಮಾಯವಾಗಿ, ನಾವು ನಿಮ್ಮ ಮುಂದೆ ಪ್ರತ್ಯಕ್ಷವಾಗಿ ಬಿಟ್ಟೇವೋ ಏನೋ ?’ ಎಂದು ಗುರುಗಳು ನಕ್ಕರು.
‘ಅಯ್ಯೋ ನೀವು ಹೇಳುವುದೇನು ?’
‘ತಪ್ಪು ತಿಳಿಯಬೇಡಿ ರಾಜಕುಮಾರ , ನಾನು ಹಾಗೆಯೇ ಲಘು ಹಾಸ್ಯದಲ್ಲಿ ಹೇಳಿದೆ. ‘
ಅಷ್ಟರಲ್ಲಿ ಅಲ್ಲಿಗೆ ಒಬ್ಬ ಸುಂದರ ಯುವತಿ ಬಂದಳು.

ಆಗ ಗುರುಗಳು ಆಕೆಯನ್ನು ರಾಜಕುಮಾರನಿಗೆ ಪರಿಚಯಿಸಿದರು;
‘ಈಕೆ ವಸುಂಧರೆ, ನಮ್ಮ ಪುತ್ರಿ. ಇವಳ ಮುಖ್ಯ ಕಾರ್ಯ ವನ್ಯ ಪ್ರಾಣಿಗಳ ರಕ್ಷಣೆ. ಯಾರಾದರೂ ವನ್ಯ ಪ್ರಾಣಿಗಳನ್ನು ನಾಶ ಮಾಡಲು ಬಂದರೆ, ಅವರನ್ನೇ ನಾಶ ಮಾಡುವ ಕ್ಷಮತೆ ಈಕೆ ಹೊಂದಿದ್ದಾಳೆ. ಹಾಗಾಗಿ, ಮೃಗವನ್ನು ಬೆನ್ನತ್ತಿ ಬಂದ ನೀವು ಅವಳ ಬಗ್ಗೆ ಎಚ್ಚರದಿಂದ ಇರಬೇಕು’ ಎಂದಾಗ ರಾಜಕುಮಾರ
ಸ್ತಬ್ದವಾಗಿಬಿಟ್ಟ !

ಈಗ ರಾಜಕುಮಾರ ಅವಳ ಬಗ್ಗೆಯೇಯೋಚಿಸತೊಡಗಿದ. ಅವಳು ನಿಜವಾಗಿಯೂ ಅಂಥಹ ಬಲಶಾಲಿಯೇ ? ಅವಳ ವನ್ಯ ಜೀವಿಗಳ ಮೇಲಿನ ಪ್ರೇಮ ನಿಜವೇ ? ಹೀಗೆ ಯೋಚಿಸುವಾಗ ಅವಳ ಮುಖ ಸೌಂದರ್ಯಯ ಮತ್ತು ಹಾವ ಭಾವ ಕೂಡಾ ಆಕರ್ಷಣೆ ಗೊಳ್ಳುವ ಹಾಗೆ ಮಾಡಿತು. ಆದರೆ, ವಸುಂಧರೆ ರಾಜಕುಮಾರನನ್ನು ನೋಡಿ ವಿಚಲಿತಳಾಗಲಿಲ್ಲ. ಅವಳು ಮನೆಯ ಒಳಕ್ಕೆ ಹೋಗಿಬಿಟ್ಟಳು. ಹಾಗೆ ಹೋಗುವಾಗ ರಾಜಕುಮಾರ ತದೇಕಚಿತ್ತದಿಂದ ಅವಳನ್ನು ನೋಡುತ್ತಲೇ ಇದ್ದ.

ಆ ನಂತರ ಗುರುಗಳು ರಾಜಕುಮಾರನನ್ನು ಹೀಗೆ ಎಚ್ಚರಿಸಿದರು;
‘ರಾಜಕುಮಾರರೇ, ನೀವು ಬಂದ ಕೆಲಸ ಆಯಿತು ಎಂದನ್ನಿಸುತ್ತೆ. ತಾವು ನಮ್ಮಲ್ಲಿ ಭೋಜನ ಕೂಡಾ ಮಾಡಿ ಹೋಗಬಹುದು. ಹೀಗೆ ಆಮಂತ್ರಿಸುವುದು ನಮ್ಮದು ಆತಿಥ್ಯದ ಧರ್ಮ. ಸ್ವೀಕರಿಸುವುದು ನಿಮ್ಮ ಧರ್ಮ’ ಎಂದಾಗ;
‘ಗುರುಗಳೇ, ಇನ್ನೊಂದು ಬಾರಿ ಬಂದು ತಮ್ಮ ಆತಿಥ್ಯ ಸ್ವೀಕರಿಸುತ್ತೇನೆ. ಈಗ ನನಗೆ ಹೊರಡಲು ಅಪ್ಪಣೆ ಕೊಡಿ’ ಎಂದು ನಮಸ್ಕರಿಸಿದ.
‘ನಿಮಗೆ ಶುಭವಾಗಲಿ’ ಎಂದು ಹೇಳಿ ಆಚರ್ಯಮರು ಆತನನ್ನು ಬೀಳ್ಕೊಟ್ಟರು.

ರಾಜಕುಮಾರನು ಅರಮನೆಗೆ ಮರಳಿದ ಮೇಲೆ, ಆ ವಿಷಯವನ್ನು ತನ್ನ ಮಾತಾ ಪಿತೃಗಳಲ್ಲಿ ಹೇಳಿಕೊಂಡನು. ಅಲ್ಲದೇ, ತಾನು ಅವಳಲ್ಲಿ ಅನುರಾಗಿಯಾದದ್ದು ಕೂಡಾ ಹೇಳಿಕೊಂಡನು. ಈತನ ಮಾತು ಕೇಳಿ ಮಹಾರಾಜರು ಕೊಂಚ ವಿಚಲಿತರಾದರು. ಯಾವುದೂ ಅಚಾತರ್ಯನವಾಗಬಾರದು, ಅಲ್ಲದೆ, ಆತನು ಈ ನಾಡಿನ ಭಾವಿ ದೊರೆ. ಇದನ್ನು ಗಮನದಲ್ಲಿ ಇಟ್ಟು ಕೊಂಡು ವೈವಾಹಿಕ ಮೈತ್ರಿ ಮಾಡಿಕೊಳ್ಳಬೇಕು. ಅಲ್ಲದೆ, ಪ್ರಥಮ ಬಾರಿಗೆ ನೋಡಿದ ಸುಂದರ ಯುವತಿಯರು ಯಾರೇ ಇರಲಿ ಅವರು ಆಕರ್ಷಿತರಾಗಿ ಕಾಣುವದು ಸಹಜ. ತಮಗಾಗಿ ರಾಜ ಮನೆತನದ ಸಂಭಂಧಗಳನ್ನೇ ಹುಡುಕುವುದು ಒಳ್ಳೆಯದು. ಆ ಬಗ್ಗೆ ರಾಣಿಯ ಜೊತೆಗೆ ಮಾತಾಡಿ, ಆತನಿಗೆ ತಿಳಿಸಿ ಹೇಳಲು ರಾಣಿಯನ್ನೇ ಮುಂದು ಮಾಡಿದರು.

ಒಂದೆರಡು ದಿನಗಳನ್ನು ರಾಜಕುಮಾರ ಹಾಗೆಯೇ ಚಿಂತಿತನಾಗಿ ಕಳೆದ. ಏಕೋ ಆತನಿಗೆ ಅರಣ್ಯದಲ್ಲಿರುವ ಕುಟೀರದ ಕಡೆಯೇ ಹೋಗಬೇಕೆನಿಸಿತು. ಅದರಂತೆ ಆತ ತಯಾರು ಮಾಡಿಕೊಂಡ. ಸಾಮಾನ್ಯವಾಗಿ ರಾಜಕುಮಾರ ಹೊರಗೆ ಹೋಗುವಾಗ, ತನ್ನ ಮಾತೆಗೆ ತಿಳಿಸಿಯೇ ಹೋಗುತ್ತಿರುವುದು ಆತನ ರೂಢಿಯಾಗಿತ್ತು. ಈ ಬಾರಿಕೂಡಾ ಆತ ರಾಣಿಯಬಳಿಹೋಗಿ, ತಾನು ಅರಣ್ಯಕ್ಕೆ ಹೋಗುತ್ತೇನೆಂದು ತಿಳಿಸಿದಾಗ;
‘ಏನು ಕುಮಾರ ಪ್ರಾಣಿಗಳನ್ನು ಬೇಟೆಯಾಡುವದಕ್ಕೋ ಅಥವಾ ಆ ಸುರ ಸುಂದರಿಯನ್ನು ಬೇಟೆ ಮಾಡಲಿಕ್ಕೋ ?’ ಎಂದಾಗ ಅವಕ್ಕಾದನು !
‘ಹಾಗೇನಿಲ್ಲ ಮಾತೆ, ನಾನು ಬಂದ ಮೇಲೆ ಅದರ ವಿವರ ತಿಳಿಸುತ್ತೇನೆ’ ಎಂದು ಅರಣ್ಯದ ಕಡೆಗೆ ಕುದುರೆ ಸವಾರಿ ಮಾಡುತ್ತಾ ಹೊರಟು ಹೋದ. ಆತನೇರವಾಗಿ ಹೋಗುವಾಗ ಪೊದೆಯಲ್ಲಿ ಯಾವುದೋ ಮೃಗ ಸೇರಿಕೊಂಡಂತೆ ಆತನಿಗೆ ಅನಿಸಿತು. ಆಗ ಅದರ ಕಡೆಗೆ ದೃಷ್ಟಿ ಕೇಂದ್ರೀಕರಿಸಿ ಒಂದು ಬಾಣ ಬಿಟ್ಟ. ಆಮೇಲೆ ಏನಾಯಿತೋ ಆತನಿಗೆ ತಿಳಿಯಲಿಲ್ಲ.

ಆ ವಿಷಯವನ್ನು ಅಷ್ಟಕ್ಕೇ ಬಿಟ್ಟು ಗುರುಗಳ ಕುಟೀರಕ್ಕೆ ಹೋದ. ಅಲ್ಲಿ ಕೆಲ ಪರಿಚಾರಿಕೆಯರನ್ನು ಕಂಡು ಮಾತಾಡಿದ. ಆಗ ಅವರು ಹೀಗೆ ಹೇಳಿದರು;
‘ಗುರುಗಳು ಆಶ್ರಮದಲ್ಲಿಯೇ ಇದ್ದಾರೆ, ಆದರೆ, ಗುರುಪುತ್ರಿ ಪ್ರಾಣಿ ವೈದ್ಯರನ್ನು ಕರೆದುಕೊಂಡು ಅರಣ್ಯಕ್ಕೆ ಹೋಗಿದ್ದಾರೆ. ಅಲ್ಲಿ ಒಂದು ವನ್ಯ ಮೃಗ ಗಾಯದಿಂದ ನರಳುವುದನ್ನು ಕಂಡು, ಕೂಡಲೇ ಚಿಕಿತ್ಸಕನನ್ನು ಕರೆದುಕೊಂಡು ಹೋಗಿದ್ದಾರೆ. ‘ ಎಂದಳು.
‘ಅದು ಯಾವ ಕಡೆಗೆ ಹೋಗಿದ್ದಾರೆ ?’ ಎಂದಾಗ;
‘ಆಶ್ರಮಕ್ಕೆ ಒಂದು ಕೂಗಳತೆಯಲ್ಲಿ ಒಂದು ವಿಶಾಲ ಹೊಂಡವಿದೆ. ಅದಕ್ಕೆ ಸಮೀಪದಲ್ಲಿಯೇ ಆ ಘಟನೆ ಯಾಗಿದೆ. ಅಲ್ಲಿಗೆ ಹೋಗಿದ್ದಾರೆ’ ಎಂದಳು.
ಆಮೇಲೆ, ರಾಜಕುಮಾರ ಘಟನಾ ಸ್ಥಳವನ್ನು ಹುಡುಕುತ್ತಾ ಹೋದ. ಅಲ್ಲಿಗೆ ಹೋದವನೇ ಆ ವನ್ಯ ಪ್ರಾಣಿಯನ್ನು ನೋಡಿ ಗಾಭರಿಯಾದ. ಏಕೆಂದರೆ, ಆತನು ಬರುವಾಗ ಆ ಜೀವಿಯನ್ನು ಘಾಸಿಗೊಳಿಸಿದ್ದವನು ತಾನೇ ಎಂದು ಅರಿವಾಯಿತು. ಗುರುಪುತ್ರಿ ಅದಕ್ಕೆ ಚಿಕಿತ್ಸೆ ಒದಗಿಸುತ್ತಲೆಯೇ ಗಾಯಗೊಳಿಸಿದವನನ್ನು ಶಪಿಸುತ್ತಲೇ ಇದ್ದಳು. ಆ ಪ್ರಾಣಿ ಆತಂಕದಿಂದ ಪಾರಾಗಿತ್ತು. ಸ್ವಲ್ಪ ಸಮಯದ ನಂತರ ಅದು ಮೆಲ್ಲಗೆ ಅಲ್ಲಿಂದ ಹೊರಟು ಹೋಯಿತು.

ಆಮೇಲೆ ವಸುಂಧರೆಯ ಲಕ್ಷ್ಯ ರಾಜಕುಮಾರನ ಕಡೆಗೆ ಹೋಯಿತು. ಕೂಡಲೇ ಹೀಗೆಂದಳು;
‘ಏನು ರಾಜಕುಮಾರರೇ, ತಮ್ಮ ಆಗಮನ ಇಲ್ಲಿಗೆ ಹೇಗೆ ಆಯಿತು ?’ ಎಂದು ಕೇಳಿದಾಗ,
‘ಗುರುಪುತ್ರಿ, ಆಶ್ರಮದಲ್ಲಿರುವ ನಿಮ್ಮ ಸಖಿ ನೀವು ಇಲ್ಲಿ ಇರುವುದಾಗಿ ತಿಳಿಸಿದಳು. ಹಾಗಾಗಿ, ನಾನು ಇಲ್ಲಿಗೆ ಬಂದೆ. ಆದರೆ ಇಲ್ಲಿ ಏನು ನಡೆಯುತ್ತಿದೆ ನನಗೆ ತಿಳಿಯುತ್ತಿಲ್ಲ ‘ ಎಂದ.
‘ಹೌದು ರಾಜಕುಮಾರ. . ಯಾರೋ ರಣ ಬೇಟೆಗಾರನ ಕೆಲಸ ಇದು. ಈ ರೀತಿಯ ಆಕ್ರಮಣದಿಂದ ಆತನಿಗೆ ಸಂತೋಷ ಹೇಗೆ ಮೂಡುತ್ತದೆಯೋ ನಾನರಿಯೆ ?’ ಎಂದಳು.

ಆತನಿಗೆ ಮುಂದೆ ಮಾತಾಡುವುದು ತಿಳಿಯಲಿಲ್ಲ. ಆಗ ವಸುಂಧರೆ ಹೀಗೆ ಹೇಳಿದಳು;
‘ಬನ್ನಿ ರಾಜಕುಮಾರ ಕುಟೀರಕ್ಕೆ ಹೋಗೋಣ. ಅಲ್ಲಿ ಫಲಾಹಾರ ಸೇವಿಸಿ ಹೋಗುವೀರಂತೆ’ ಎಂದಳು.
‘ಅದೇನು ಬೇಡ, ನಿಮಗೆ ಒಂದು ನೇರ ಪ್ರಶ್ನೆ ಕೇಳಬೇಕಾಗಿದೆ. ನನಗೆ ಉತ್ತರ ಸಿಕ್ಕ ಕೂಡಲೇ ನಾನು ಅರಮನೆಕಡೆಗೆ ಹೊರಟು ಹೋಗುತ್ತೇನೆ’ ಎಂದು ಎದ್ದು ನಿಂತ.
‘ಏನದು ರಾಜಕುಮಾರರೇ ?’
‘ಏನೋ, ಮೊದಲ ಭೇಟಿಯಲ್ಲಿ ನಿಮ್ಮಲ್ಲಿ ನನಗೆ ಪ್ರೇಮಾಂಕುರ ಉಂಟಾಗಿದೆ. ಇದನ್ನು ಹೇಳಲು ಏಕೋ ನನಗೆ ಮುಜುಗರವಾಗುತ್ತಿದೆ. ‘ ಎಂದ.
‘ಅದೇಕೆ ಹಾಗೆ ಆಗಬೇಕು. ಯಾವ ವಿಷಯದ ಬಗ್ಗೆ ನಿಮ್ಮಲ್ಲಿ ಆತಂಕ ಉಂಟಾಗಿದೆ ಎಂದು ಹೇಳಬಹುದೇ ?’
‘ಗುರು ಪುತ್ರಿ, ನೀವು ನನ್ನನ್ನುಕ್ಷಮಿಸುವೀರೆಂದು ಹೇಳಿದರೆ ಮಾತ್ರ ಆ ವಿಷಯ ನಿಮಗೆ ಅರುಹುತ್ತೇನೆ’ .
‘ರಾಜಕುಮಾರ ಹೇಳಿ, ಅದು ಸರಿ ಇದ್ದರೇ ಸರಿ, ಇಲ್ಲದಿದ್ದರೆ ತಪ್ಪು ಎಂದು ಅರಿಯುತ್ತೇನೆ’
ಎಂದಳು.

‘ನೀವು ಚಿಕಿತ್ಸೆ ಮಾಡಿಸಿದ ವನ್ಯ ಜೀವಿಗೆ ನಾನೇ ನನ್ನಬಾಣದಿಂದ ಗಾಯ ಮಾಡಿದ್ದೇನೆ.
ಹಾಗಾಗಿ, ನನಗೆ ಈಗಷ್ಟೇ ಪ್ರಾಣಿಗಳ ಜೀವ ಪ್ರಜ್ಞೆ ಮೂಡುತ್ತಲಿದೆ ‘ ಎಂದ.
‘ಆಯಿತು, ಈಗಂತೂ ಅದು ಪ್ರಾಣಾಪಾಯದಿಂದ ಪಾರಾಗಿ, ತನ್ನ ನೆಲೆಯನ್ನು ಸೇರಿಕೊಂಡಿದೆ. ನಿಮಗೆ ಪಶ್ಚಾತಾಪ ಕೂಡಾ ಆಗಿದೆಯೆಂದು ಕೂಡಾ ನನಗೆ ಅನ್ನಿಸುತ್ತದೆ’ ಎಂದಳು.

‘ಹೌದು, ನಾನು ಮಾಡಿದ್ದು ಘನ ಘೋರ ಅಪರಾಧ. ಆ ವನ್ಯ ಜೀವಿಯಂತೂ ಕ್ಷಮಿಸಲಾರದು. ಹಾಗಾಗಿ, ನೀವೇ ಕ್ಷಮಿಸಿಬಿಡಿ’ ಎಂದ.
‘ಸರಿ ರಾಜಕುಮಾರ, ಇನ್ನು ಮೇಲೆಯಾದರೂ ಅನವಶ್ಯಕ ವನ್ಯ ಜೀವಿಗಳ ಮೇಲೆ ಆಕ್ರಮಣ ಮಾಡಬೇಡಿ. ಹಾಗೆ ಒಂದು ವೇಳೆ ನಿಮಗೆ ಅವು ಘಾತುಕ ಎನಿಸಿ, ನಿಮ್ಮ ಮೇಲೆಯೇ ಅವು ಆಕ್ರಮಣ ಮಾಡಿದಾಗ ಮಾತ್ರ,

ನಿಮ್ಮ ಜೀವವನ್ನು ರಕ್ಷಿಸಿಕೊಳ್ಳಲು ಎಷ್ಟು ಬೇಕೋ ಅಷ್ಟು ನೀವೂ ಅವುಗಳಮೇಲೆ ಪ್ರಹಾರ ಮಾಡಬಹುದು’ ಎಂದಳು.

‘ಆಯಿತು, ಇನ್ನು ಮೇಲೆ ಹಾಗೆಯೇ ಮಾಡುತ್ತೇನೆ ಎಂದು ನಿಮಗೆ ವಾಗ್ದಾನ ನೀಡುತ್ತೇನೆ’ ಎಂದು ಹೇಳಿ ಆತ ವಚನ ಬದ್ಧನಾದ. ಈ ಮಾತು ಕೇಳಿ ವಸುಂಧರೆ ಸಂತೋಷಗೊಂಡಳು. ಆಮೇಲೆ ಇಬ್ಬರೂ ಕುಟೀರದ ಕಡೆ ಹೋದರು. ಹೊರಗಡೆ ಗುರುಗಳು ವಸುಂಧರೆಯನ್ನೇ ಕಾಯುತ್ತಿದ್ದರು, ಇವರಿಬ್ಬರೂ ಜೊತೆಗೂಡಿ ಬಂದದ್ದು ನೋಡಿ ಏಕೋ ಅವರಿಗೆ ಮುಜುಗರವಾಯಿತು. ಆಗ ವಸುಂಧರೆ ತನ್ನ ತಂದೆಯವರಿಗೆ ಅಲ್ಲಿ ಅದ ಘಟನೆಯ ಬಗ್ಗೆ ತಿಳಿಸಿ ಹೇಳಿದಳು. ಅಲ್ಲದೆ, ರಾಜಕುಮಾರನ ಬಯಕೆಯ ಬಗ್ಗೆಯೂ ಹೇಳಿದಳು.

ರಾಜಕುಮಾರ ಹೊರಡಲನುವಾದಾಗ, ತಮ್ಮ ಅರಮನೆಗೆ ಬರಲು ಅವರಿಬ್ಬರನ್ನೂ ಆಮಂತ್ರಿಸಿದ. ಅದಕ್ಕೆ ಅವರು ಸಮ್ಮತಿಸಿ ಕೆಲವೇದಿನಗಳಲ್ಲಿ ತಾವು ಬರುವುದಾಗಿ ಹೇಳಿದರು.

ರಾಜಕುಮಾರ ಇಲ್ಲಿಯ ವಿಷಯವನ್ನು ರಾಣಿ ಮಾತೆಗೆ ತಿಳಿಸಿದ ಮತ್ತು ಆ ವಿಷಯ ಮಹಾರಾಜರಿಗೂ ತಲುಪಿತು. ಅವರೂ ಅನಿವರ್ಯರವಾಗಿ ಪುತ್ರನ ಸಂತೋಷಕ್ಕೆ ಮತ್ತುಧಕ್ಕೆ ಮೂಡದಿರಲು ವೈವಾಹಿಕ ಪ್ರಸ್ತಾವನೆಯನ್ನು ಒಪ್ಪಿದರು. ರಾಜಕುಮಾರನ ಆಮಂತ್ರಣದಂತೆ ಆಗಮಿಸಿದ ಗುರುಗಳು ಮತ್ತು ಗುರು ಪುತ್ರಿ ಅರಮನೆಯ ಮನಸ್ಸುಗಳನ್ನು ಗೆದ್ದರು. ಮುಂದೆ ಕೆಲವು ದಿನಗಳಲ್ಲಿ ಅರಮನೆಯಲ್ಲಿ ಶುಭ ಕರ್ಯಮ ನಡೆಯಿತು. ಮಹಾರಾಜಾ ಮತ್ತು ಮಹಾರಾಣಿಯವರಿಗೆ ತಮ್ಮ ಪುತ್ರ ವಸುಂಧರೆಯಿಂದ ಪ್ರಭಾವಿತನಾಗಿ ವನ್ಯ ಜೀವಿಗಳ ಬೇಟೆಯಾಡುವುದನ್ನು ಆತ ನಿಲ್ಲಿಸಿದ್ದು ಕೇಳಿ ಬಹಳೇ ಸಂತೋಷಗೊಂಡರು. ಆದರೆ, ಎಲ್ಲರಿಗಿಂತ ಪರಿಪರ್ಣು ಸಂತೋಷವಾಗಿದ್ದುದು ಸುಮೇರುನಂದನನ ಗುರುಗಳಾದ ಆಚಾರ್ಯ ಮಧುರಾಕ್ಷರರಿಗೆ. ಅವರೂ ಬಂದು ಜೋಡಿಗಳನ್ನು ಹರಸಿ ಆಶರ್ವಂದಿಸಿದರು.

-ಬಿ. ಟಿ. ನಾಯಕ್,


ಕನ್ನಡದ ಬರಹಗಳನ್ನು ಹಂಚಿ ಹರಡಿ
5 1 vote
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಜನಾರ್ಧನ ರಾವ್
ಜನಾರ್ಧನ ರಾವ್
4 months ago

ಸರಳವಾದ ಕಥೆ ಸೊಗಸಾಗಿ ಮೂಡಿ ಬಂದಿದೆ. ಅಭಿನಂದನೆಗಳು ನಾಯಕರೇ 💐💐

ಬಿ.ಟಿ.ನಾಯಕ್
ಬಿ.ಟಿ.ನಾಯಕ್
4 months ago

ಧನ್ಯವಾದಗಳು.

2
0
Would love your thoughts, please comment.x
()
x