ಕಣ್ಣು ಮಿಟುಕಿಸದೆ ನೋಡುವ ಚಿತ್ರ: ಬ್ಲಿಂಕ್: ಎಂ. ನಾಗರಾಜ ಶೆಟ್ಟಿ

ಕೆಲವು ಸಿನಿಮಾಗಳನ್ನು ವಿವರಿಸುವಂತಿಲ್ಲ, ಅರ್ಥ ಹೇಳುವಂತಿಲ್ಲ; ಅನುಭವವಾಗಿ ಗ್ರಹಿಸಬೇಕು. ವ್ಯಕ್ತಿಯಿಂದ ವ್ಯಕ್ತಿಗೆ ದಕ್ಕುವ ಅನುಭವ ಭಿನ್ನವಾಗಿರಬಹುದು. ಹಾಗಿದ್ದರೆ ಒಳ್ಳೆಯದೇ. ಮತ್ತೆ ಮತ್ತೆ ನೋಡುವ, ನೋಡಲು ಪ್ರೇರೇಪಿಸುವ ಗುಣವಿದ್ದರಂತೂ ಸಾರ್ಥಕ. ಈ ಮಾತುಗಳನ್ನು ‘ಬ್ಲಿಂಕ್’ ಸಿನಿಮಾದ ಹಿನ್ನೆಲೆಯಲ್ಲಿ ಹೇಳುತ್ತಿದ್ದೇನೆ.

‘ಟೈಮ್ ಟ್ರಾವಲ್ ‘ ಜಾನರ್ ನಲ್ಲಿ‌ ಸಿನಿಮಾ ಮಾಡುವುದು ಸವಾಲೇ ಸರಿ. ಈ ಜಾನರ್ ನಲ್ಲಿ ಕೆಲವು ಸಿನಿಮಾಗಳು ಯಶಸ್ವಿಯಾಗಿದ್ದಿದೆ. ಆದರೆ ಕಾಲಯಂತ್ರದಲ್ಲಿ ಹಿಂದಕ್ಕೂ, ಮುಂದಕ್ಕೂ ಚಲಿಸುತ್ತಾ ನೋಡುಗನ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳುವುದು, ಮುಂದೇನು ಎನ್ನುವ ಕಾತರವನ್ನು ಹೆಚ್ಚಿಸುತ್ತಾ ಹೋಗುವುದು ಸುಲಭ ಸಾಧ್ಯವಲ್ಲ.

ಟೈಮ್ ಜಾನರ್ ಚಿತ್ರಗಳು ಯಾವ ಸಂದೇಶ, ಮೌಲ್ಯಗಳ‌ ಗೊಡವೆಗೆ ಹೋಗುವುದಿಲ್ಲ. ಕಾಲವನ್ನು ಬದಲಾಯಿಸುವ ಮಾನವನ ಅಭೀಪ್ಸೆ, ಮುಂದಿನ ದಿನಗಳನ್ನು ಮೊದಲೇ ಕಾಣುವ ಅಪೇಕ್ಷೆ ಇವುಗಳನ್ನು ಇಟ್ಟುಕೊಂಡು ಸಹಜವಲ್ಲದ ರೀತಿಯಲ್ಲಿ ನಿರೂಪಣೆ ಮಾಡುತ್ತವೆ. ಸರಳವಾಗಿ ಕತೆ ಹೇಳುವ ವಿಧಾನಕ್ಕೆ, ಸುಲಭ ಮನರಂಜನೆಗೆ ಒಗ್ಗಿದ ಪ್ರೇಕ್ಷಕನಿಗೆ ಈ‌ ಚಿತ್ರಗಳು ಭಿನ್ನ ಅನುಭವವನ್ನು ಕೊಡುತ್ತವೆ.

ಶ್ರೀನಿಧಿ ಬೆಂಗಳೂರು ತಮ್ಮ‌ ನಿರ್ದೇಶನದ ಮೊದಲ ಚಿತ್ರದಲ್ಲೇ ಎಲ್ಲರು ಮಾಡಿದ್ದನ್ನು ಮಾಡಹೋಗಿಲ್ಲ. ಟೈಮ್ ಟ್ರಾವಲ್ ನ ಕುದುರೆ ಏರಿ ಹೊಸ ದಿಕ್ಕಿಗೆ ಹೊರಳಿದ್ದಾರೆ. ಅದು ಕೊಟ್ಟ ಕುದುರೆಯಲ್ಲ, ಪಡೆದ ಕುದುರೆ. ಒರಟು ಕುದುರೆ. ಗಮ್ಯವನ್ನು ತಲುಪುತ್ತೋ, ಕೆಡವುತ್ತೋ‌ ಹೇಳಲಾಗದು.

‘ಬ್ಲಿಂಕ್’ ಚಿತ್ರ ಮೊದಲಲ್ಲಿ ಆಕರ್ಷಿಸುವುದು ಲಂಕೇಶ್ ಮಾತಿನಿಂದ. 1995 ರಲ್ಲಿ ಲಂಕೇಶ್ ಆಕಾಶವಾಣಿಗೆ ನೀಡಿದ ಸಂದರ್ಶನವನ್ನು ಬಳಸಿ ಚಿತ್ರಕ್ಕೆ ಸೊಗಸಾದ ಆರಂಭ ಒದಗಿಸಲಾಗಿದೆ. “ಬರವಣಿಗೆ ಸುಲಭವಲ್ಲ, ಬರೆಯಲೇ ಬೇಕೆನ್ನಿಸಿದ್ದು, ಬರೆದಾದ ನಂತರ ಸಿಗುವ ತೃಪ್ತಿ ಬರವಣಿಗೆಯ ಶಕ್ತಿ” ಎಂಬರ್ಥದ ಲಂಕೇಶ್ ಮಾತುಗಳು ಚಿತ್ರಕ್ಕೆ ಹೊಂದಿಕೆಯಾಗುತ್ತದೆ.

ಮುಂದಿನ ದೃಶ್ಯ: ಲಂಕೇಶ್ ಅನುವಾದಿಸಿದ ಸೊಫೋಕ್ಲಿಸ್ ‘ ಈಡಿಪಸ್ ‘ ನ ಪ್ರಯೋಗ. ಸ್ವಪ್ನಳ ಹುಬ್ಬನ್ನು ತೀಡುವ ಅಪೂರ್ವನ ಪಾತ್ರ ಪರಿಚಯವಾಗುತ್ತದೆ. ಅಪೂರ್ವ, ಸ್ವಪ್ನ ಪ್ರೇಮಿಗಳು. ಓದು ಮುಗಿಸಲು ಬಂದ ಅಪೂರ್ವ ಫೇಲಾಗಿದ್ದಾನೆ, ಓದು ಮುಂದುವರಿಸುತ್ತಿಲ್ಲ. ಕೆಲಸ ಇಲ್ಲ, ದುಡ್ಡಿಲ್ಲ. ಖರ್ಚಿಗೆ ಸಹಾಯ ಮಾಡುವವಳು ಸ್ವಪ್ನ. ಅವರಿಬ್ಬರ ಸುಂದರ ಪ್ರೇಮ ಅನಾವರಣಗೊಳ್ಳುತ್ತಿರುವಾಗ ಮುದುಕನೊಬ್ಬನ ದರ್ಶನವಾಗುತ್ತದೆ. ಅವನು ಬೆಂಬತ್ತುತ್ತಾನೆ. ಅಪೂರ್ವ ತನ್ನಂತ ಇನ್ನೊಬ್ಬನನ್ನು ನೋಡುತ್ತಾನೆ; ಇಲ್ಲಿಂದ ಕುತೂಹಲದ ಬಾಗಿಲು ತೆರೆದುಕೊಳ್ಳುತ್ತದೆ.

ಕಾಲದ ಹಿಂದು ಮುಂದಿನ ಓಟಗಳು ನಡೆಯುವುದು ರಾಯದುರ್ಗ ಮತ್ತು ಬೆಂಗಳೂರಲ್ಲಿ. ಎರಡೂ ಊರಿನ ದೃಶ್ಯಗಳು ಒಂದರ ಮೇಲೆ ಮತ್ತೊಂದು ಅಪ್ಪಳಿಸಿ, ಜಾರಿ, ಏರಿ, ಸಾಗುತ್ತಿರುತ್ತವೆ. ಮಧ್ಯಂತರದ ವರೆಗೆ ಹಿಡಿತಕ್ಕೆ ಸಿಗದೆ, ನಿಧಾನ ಅನ್ನಿಸಿದರೂ ಆಕಳಿಕೆ ತರುವುದಿಲ್ಲ. ವಿರಾಮದ ನಂತರ ಒಂದೊಂದಾಗಿ ತೆರೆದುಕೊಳ್ಳುತ್ತಾ, ಕೊಂಡಿಗಳು ಸೇರಿಕೊಳ್ಳುತ್ತಾ, ಕಣ್ಣು ಮಿಟುಕಿಸಲು ( ನೋ ಬ್ಲಿಂಕಿಂಗ್) ಬಿಡುವುದಿಲ್ಲ. ಚಿತ್ರದ ನಾಯಕನ ವಿಶೇಷವೂ ಅದೇ. ಅವನು ಹೆಚ್ಚು ಹೊತ್ತು ‘ಬ್ಲಿಂಕ್’ ಮಾಡದೇ ಇರಬಲ್ಲ. ಅವನೆಷ್ಟು ಹೊತ್ತು ಬ್ಲಿಂಕ್ ಮಾಡುವುದಿಲ್ಲವೋ‌ ಅಷ್ಟು ಹೊತ್ತು ಟೈಂ‌ ಟ್ರಾವಲ್ ಮಾಡಬಲ್ಲ! ಇಂಟರೆಸ್ಟಿಂಗ್? ಯಸ್, ಅಪೂರ್ವನ ಈ ಸಾಮರ್ಥ್ಯ ಅವನಿಗೆ ತಿಳಿಯದಿದ್ದನ್ನು ತಿಳಿಸುತ್ತದೆ, ಇರುವುದನ್ನು ಇದ್ದ ಹಾಗೆ ಇರ ಬಿಡುವುದಿಲ್ಲ. ಅಪೂರ್ವ ದಿಕ್ಕು ತಪ್ಪಿದಂತಾಗಿದ್ದಾನೆ. ನಾವೂ ಅವನ ಹಿಂದೆ ಬೀಳುತ್ತೇವೆ. ಅಯ್ಯೋ ಅನ್ನಲ್ಲ, ಅಬ್ಬಾ ಅನ್ನಲ್ಲ ಯಾಕೆಂದರೆ ನಾವೂ ಕಣ್ಣಿಗೆ ಡ್ರಾಪ್ಸ್ ಬಿಟ್ಟುಕೊಂಡು ಅಪೂರ್ವನ ಜತೆಗಿರುತ್ತೇವೆ.

ಇದು ಚಿತ್ರದ ಶಕ್ತಿ. ಚಿತ್ರ ಎರಡು ಗಂಟೆ ಹದಿನಾರು ನಿಮಿಷ ನಮ್ಮನ್ನು ಹಿಡಿದಿಡುತ್ತದೆ‌. ಚಿತ್ರದ ಬರವಣಿಗೆ ಅದನ್ನು ಸಾಧ್ಯವಾಗಿಸಿದೆ. ಪ್ರತಿಯೊಂದು ದೃಶ್ಯ ಕಾಳಜಿಯಿಂದ ಕಟ್ಟಲಾಗಿದೆ.ಯಾವುದೂ ಅನವಶ್ಯವಲ್ಲ, ಅನಗತ್ಯವಲ್ಲ. ಪುಸ್ತಕ ಕೊಳ್ಳುವಾಗ ಮುದುಕ ಸಿಕ್ಕರೆ ಹಿಂದೆ ರಾಮ, ಲಕ್ಷ್ಮಣ ವೇಷಧಾರಿಗಳು, ಎಳನೀರು ಕುಡಿಯುವಾಗ ಮೈಮೇಲೆ ಹೊಡೆದು ಕೊಳ್ಳುವ ಹರಕೆಯ ಜನ, ವೀರಗಾಸೆ, ಅಣ್ಣಮ್ಮ, ರೇಣುಕೆ ಹೀಗೆ ಆಗಾಗ್ಗೆ, ಅಲ್ಲಲ್ಲಿ ಹಾದು ಹೋಗುವ ರೂಪಕಗಳು. ಹಿಂದಿನ ನೆನಪುಗಳಿಗೆ ತಡವರಿಸುವಾಗ ‘ ಬೇಡರ ಕಣ್ಣಪ್ಪ’ ಪೋಸ್ಟರ್, ಹಳೆಯ ರೀಲ್ ಗಳು, ಅಗಾಗ್ಗೆ ಕಾಣುವ ‘ರಂಗನಾಯಕಿ’ ಇತ್ಯಾದಿ ಪೋಸ್ಟರ್ ಗಳು ಇಡುಕಿರುದು ತುಂಬಿಕೊಂಡಿವೆ. ಸಂದರ್ಭಕ್ಕೆ ತಕ್ಕಂತೆ ಮುನ್ನೆಲೆ, ಹಿನ್ನೆಲೆಗಳು ಬೆಸೆಯಲಾಗಿದೆ.

ಚಿತ್ರದಲ್ಲಿ ಕನ್ನಡ ಸಾಹಿತ್ಯದ ಅರ್ಥಪೂರ್ಣ ಬಳಕೆಯಾಗಿದೆ. ‘ಈಡಿಪಸ್ ‘ ನಾಟಕದ ಮಾತುಗಳು, ಚಿತ್ತಾಲರ ‘ಶಿಕಾರಿ’ ತೇಜಸ್ವಿಯವರ ‘ ಮಹಾ ಪಲಾಯನ’ ಮುಂತಾದುವಲ್ಲದೆ ಬೋದಿಲೇರ್, ರೂಮಿಯರ ಮಾತುಗಳನ್ನೂ ಬಳಸಿಕೊಳ್ಳಲಾಗಿದೆ.

ಸಿನಿಮಾ ತಂಡಕ್ಕಿರುವ ರಂಗಾನುಭವ ಎದ್ದು ಕಾಣುತ್ತದೆ. ‘ಸದ್ದುಗದ್ದಾಲ ಮ್ಯಾಡಬ್ಯಾಡ್ರಿ ಸಭೆಯೊಳಗ’ ಹಾಡಿನ ಮಟ್ಟಿನಿಂದ ತೊಡಗಿ, ನಾಟಕ ತಯಾರಿ, ಸಮಾಲೋಚನೆ, ಸಿದ್ಧತೆ, ಹಾಡಿನ ತುಣುಕುಗಳು ಎಲ್ಲದರಲ್ಲೂ‌ ಈ ಅನುಭವ ಒದಗಿ ಬಂದಿದೆ. ಈಡಿಪಸ್ ನಾಟಕವನ್ನು ಮೊದಲಲ್ಲಿ ಮತ್ತು ಕೊನೆಯಲ್ಲಿ ಉಪಯೋಗಿಸಿಕೊಂಡ ರೀತಿ ಮೆಚ್ಚತಕ್ಕದ್ದು. ಇದೇ ಶ್ರದ್ಧೆ ಕೊಂಡಿಗಳನ್ನು ಬೆಸೆಯುವಲ್ಲಿಯೂ‌ ಇದೆ. ಪ್ರೇಕ್ಷಕ ಮರೆತೇ ಬಿಟ್ಟಿರುವ ಕಾಳಯ್ಯನ ಮಗಳನ್ನು ಉಂಗುರದ ರೂಪದಲ್ಲಿ ಜೋಡಿಸುವಲ್ಲಿ ಈ ಎಚ್ಚರ ಗುರುತಿಸಬಹುದು.

ಪಾತ್ರಗಳ ಹೆಸರನ್ನೂ ಎಚ್ಚರದಿಂದಲೇ‌ ಆರಿಸಲಾಗಿದೆ. ಅಪೂರ್ವ- ಅರಿವು, ದೇವಕಿ- ಯಶೋದೆ ಮತ್ತು ಗೋಪಾಲಕೃಷ್ಣ. ಹೇಗಿದೆ ನೋಡಿ…. ಇದರಲ್ಲೇ ಕತೆಯ ಹೊಳಹು ಇದೆ.

ಹಿನ್ನೆಲೆ ಸಂಗೀತ ಚಿತ್ರವನ್ನು ಇನ್ನೊಂದು ಮಟ್ಟಕ್ಕೆ ಏರಿಸುತ್ತದೆ. ಕೆಲವು ಸನ್ನಿವೇಶಗಳಂತೂ‌ ಹಿನ್ನೆಲೆ ಸಂಗೀತದ ನೆರವಿಲ್ಲದಿದ್ದರೆ ಅರ್ಥಪೂರ್ಣವಾಗುತ್ತಲೇ ಇರಲಿಲ್ಲ. ಸಂಕಲನ ಮತ್ತು ಹಿನ್ನೆಲೆ ಸಂಗೀತದ ಅಪೂರ್ವ ಸಮಾಗಮ ಸಾಧ್ಯವಾಗಿದೆ.

ದೀಕ್ಷಿತ್ ಶೆಟ್ಟಿಗೆ ತನ್ನ ನಟನೆಯನ್ನು ಸಾಬೀತು ಮಾಡುವ ಅವಕಾಶ ಸಿಕ್ಕಿದೆ. ಆತ ತಳಮಳ, ಸಿಟ್ಟು, ನೋವನ್ನು ವ್ಯಕ್ತಪಡಿಸುವ ರೀತಿ ಇಷ್ಟವಾಗುತ್ತದೆ. ಚೈತ್ರ ಆಚಾರ್ ಅಭಿನಯ ಕಣ್ಣುಗಳಲ್ಲಿದ್ದರೆ ಗೋಪಾಲಕೃಷ್ಣ ದೇಶಪಾಂಡೆ ಪೂರ್ತಿಯಾಗಿ ತೊಡಗಿಸಿಕೊಳ್ಳುತ್ತಾರೆ. ಮಂದಾರ ಬಟ್ಟಲಹಳ್ಳಿ, ಸುರೇಶ ಅನಗಳ್ಳಿ ನಟನೆ ಪಾತ್ರೋಚಿತವಾಗಿದೆ. ಯಶೋದ ಫೋನ್ ಮಾತುಗಳು ಸ್ಪಷ್ಟವಾಗಿದ್ದರೆ ಅಭಿನಯ ಅಷ್ಟಿಲ್ಲ.

ಸತ್ಯನಿಗೆ ರೊಚ್ಚಿನಲ್ಲಿ ಹೊಡೆಯುವುದು, ಕಾಳಯ್ಯ ಆಕ್ರಮಣ ಮಾಡುವ ದೃಶ್ಯ ಸುಧಾರಿಸಬೇಕಿತ್ತು. ಇವು ಬಿಟ್ಟರೆ ಬೇರೆ ಚಿತ್ರದಲ್ಲಿ ಕಿರಿಕಿರಿ ಅಗುವಂತದ್ದಿಲ್ಲ.

ಚಿತ್ರದ ಬಜೆಟ್ ಎಷ್ಟೆಂದು ಗೊತ್ತಿಲ್ಲ. ಹೆಚ್ಚು ವ್ಯಯಿಸಿದಂತೆ ಕಾಣುವುದಿಲ್ಲ. ಇದರಿಂದ ಸತ್ವಕ್ಕೆ ಕೊರತೆಯಾದಂತೆ ಕಾಣಿಸುವುದಿಲ್ಲ‌. ಹಿಂದಿನ‌ ಮತ್ತು ಇಂದಿನ ಕಾಲಕ್ಕೆ ತಕ್ಕ ವಾತಾವರಣ, ಬಟ್ಟೆಬರೆ ಇತ್ಯಾದಿಗಳಲ್ಲಿ ಸೂಕ್ಷ್ಮತೆ ಇದೆ. ನಾಟಕದ ಸಲಕರಣೆಗಳು, ಮುಖವಾಡ ಇವುಗಳನ್ನೂ‌ ಸರಿಯಾಗಿ ಉಪಯೋಗಿಸಿಕೊಳ್ಳಲಾಗಿದೆ.

ಸಿನಿಮಾದಲ್ಲಿ ದ್ವಂದ್ವಾರ್ಥದ ಮಾತುಗಳು, ಸೆಕ್ಸ್, ಹೊಡೆದಾಟಗಳಿಲ್ಲ. ಅಪೂರ್ವ ಮತ್ತು ಸ್ವಪ್ನ ಸಂಬಂಧಕ್ಕೆ ಸೆಕ್ಸ್ ಬೆರೆಸಲು ಅವಕಾಶವಿತ್ತು. ಆದರೆ ನಿರ್ದೇಶಕರು ಅವರಿಬ್ಬರು ಒಟ್ಟಾಗಿರುವ ರೀತಿಯಲ್ಲೇ ಸಂಬಂಧದ ಆಳವನ್ನು ದಾಟಿಸುತ್ತಾರೆ.

ಬಹಳ ಶ್ರದ್ಧೆಯಿಂದ, ಹಲವು ತಿಂಗಳು, ವರ್ಷ ಕೆಲಸ ಮಾಡಿ ನಿರ್ದೇಶಕರು ಚಿತ್ರ ಕಡೆದಂತಿದೆ. ಅವರ ಶ್ರಮದ ಅನುಭವವಾಗುತ್ತದೆ. ಈ ಬಾರಿ ಅವರು ಹತ್ತಿದ ಕುದುರೆ ಸಾಗಬೇಕಾದ ದಾರಿಯಲ್ಲೇ ಸಾಗಿದೆ. ಹಿಂಜರಿಕೆಯಿದ ಹೆಚ್ಚು ಪ್ರಚಾರ ಮಾಡದೇ ಕೆಲವೇ ಪರದೆಗಳಲ್ಲಿ ಬಿಡುಗಡೆಯಾದ ಸಿನಿಮಾ ಮೂರನೇ ವಾರಕ್ಕೆ ತಲುಪಿದೆ. ಹೌಸ್ ಫುಲ್ ಶೋಗಳಾಗುತ್ತಿವೆ.

ತನ್ನೆಲ್ಲ ಕಸುವನ್ನು ಹಾಕಿ ‘ಬ್ಲಿಂಕ್’ ಮಾಡಿದ ಶ್ರೀನಿಧಿ ಬೆಂಗಳೂರು ಗೆದ್ದಿದ್ದಾರೆ. ಅವರು ಮುಂದೆ ಏನು ಮಾಡಬಹುದು? ಅವರಲ್ಲಿ ಇನ್ನೂ ಸರಕು ಇದೆಯಾ? ನನಗಂತೂ ಕುತೂಹಲವಿದೆ. ಹೊಸ ನಿರ್ದೇಶಕನಲ್ಲಿ
ಭರವಸೆಯೂ ಇದೆ.

ಎಂ. ನಾಗರಾಜ ಶೆಟ್ಟಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x