ಮೂರು ಕವಿತೆಗಳು: ಗೀತಾ ಡಿ. ಸಿ.

೧. ಮಹಾಕಾವ್ಯ

ಬೀಜ ಮೊಳಕೆಯೊಡೆದು
ಮಣ್ಣಿನಾಳಕ್ಕೆ ಬೇರೂರುತ್ತಲೇ
ಕತ್ತಲ ಮಣ್ಣಗರ್ಭ ಸೀಳಿ
ಬೆಳಕು ಮೋಡ ಗಾಳಿ ಮಳೆ
ಬಿಸಿಲು ಬೆಳದಿಂಗಳಿಗೆ
ಮೈಯ್ಯೊಡ್ಡುತ್ತಾ ಮೊಗ್ಗಾಗಿ
ಹೂವು ಹೀಚು ಕಾಯಿ
ಹಣ್ಣಾಗಿ ಮಾಗಿ ಮಣ್ಣು
ಸೇರುವ ಅನುದಿನದಾಟ
ಅಷ್ಟು ಸುಲಭದ್ದೇನೂ ಅಲ್ಲ.

ಇಲಿ ಹೆಗ್ಗಣಗಳಾದಿಯಾಗಿ
ದೊಡ್ಡ ಬೇರುಗಳ ನಡುವೆ
ದಿಟ್ಟತನದಿ ಗಟ್ಟಿ ಬೇರೂರಿ
ಒಂದಿಷ್ಟು ಚಿಗುರ ಚಾಚಿದರಷ್ಟಕ್ಕೇ
ಮುಗಿಯುವುದಿಲ್ಲ..
ಬಿಸಿಲು ಮಳೆ ಗಾಳಿಗಳ ಹೊಡೆತಕ್ಕೆ
ದನಕರುಗಳ ಮನುಜರ
ಕೈಕಾಲು ಬಾಯಿಗಳಿಂದಲೂ
ಬಚಾವಾಗಬೇಕು!

ತನ್ನ ಗುರುತೂರಲು
ಬೀಜ ಮೊಳಕೆಯೊಡೆದು
ಹಣ್ಣಾಗಿ ಮಣ್ಣಸೇರಿ
ಮತ್ತೆ ಚೆಗುರೊಡೆಯಲು
ನಿತ್ಯ ಕನಸು ಭರವಸೆಗಳ
ಹೊತ್ತು ನಂಬಿಕೆಯೇ ತಾನಾಗಿ
ಬಯಲಲ್ಲಿ ಬಯಲಾಗಿ
ಎಚ್ಚರದಿ ಸಹಜತನದಲಿ
ತನ್ನನೊಡ್ಡಿಕೊಳ್ಳುತ್ತಲಿರಬೇಕು..

ಮುಗಿಲೆತ್ತರಕೆ ಬೆಳೆದರಷ್ಟೆ ಸಾಕೆ?
ಮೊಗ್ಗು ಹೂವಾಗಿ ಕಂಪಬೀರಬೇಕು
ಹೀಚು ಕಾಯಾಗಿ ಹಣ್ಣಾಗಿ
ಬಯಸಿದವರ ಬೊಗಸೆತುಂಬಬೇಕು
ನಂಬಿದವರ ಹಸಿವೆ ನೀಗಬೇಕು…
ತಿಂದವರ ತೃಪ್ತಿರಲಿ ಬೀಜ
ಮತ್ತೆ ಮತ್ತೆ ಮಣ್ಣಾಗುತ್ತಲಿರಬೇಕು..

೨. ಪ್ರೀತಿ ಪಸೆಯಾರಿದವರ ನಡುವೆ…

ಅಂದೊಂದು ದಿನ
ಬೀಜ ಮೊಳಕೆಯೊಡೆದು
ಮಣ್ಣಿನಾಳಕ್ಕೆ ಬೇರೂರಿ
ಕತ್ತಲ ಮಣ್ಣಗರ್ಭ ಸೀಳಿ
ಬೆಳಕು ಮೋಡ ಗಾಳಿ ಮಳೆ
ಬಿಸಿಲು ಬೆಳದಿಂಗಳಿಗೆ
ಮೈಯ್ಯೊಡ್ಡುತ್ತಾ ಮೊಗ್ಗಾಗಿ
ಹೂವು ಹೀಚು ಕಾಯಿ
ಹಣ್ಣಾಗಿ ಮಾಗಿ ಮಣ್ಣು
ಸೇರುವ ಅನುದಿನದಾಟ
ಇವನ ಕಣ್ಣಿಗೆ ಬಿತ್ತು.

ಗಮನಿಸಿದ: ಇದು
ಅಷ್ಟು ಸುಲಭದ್ದೇನೂ ಅಲ್ಲ.
ಇಲಿ ಹೆಗ್ಗಣಗಳಾದಿಯಾಗಿ
ದೊಡ್ಡ ಬೇರುಗಳ ನಡುವೆ
ದಿಟ್ಟತನದಿ ಗಟ್ಟಿ ಬೇರೂರಿ
ಒಂದಿಷ್ಟು ಚಿಗುರ ಚಾಚಿದರಷ್ಟಕ್ಕೇ
ಮುಗಿಯುವುದಿಲ್ಲ..
ಬಿಸಿಲು ಮಳೆ ಗಾಳಿಗಳ ಹೊಡೆತಕ್ಕೆ
ದನಕರುಗಳ ಮನುಜರ
ಕೈಕಾಲು ಬಾಯಿಗಳಿಂದಲೂ
ಬಚಾವಾಗಬೇಕು!

ತನ್ನ ಪ್ರೀತಿ ಗುರುತೂರಲು
ಬೀಜ ಮೊಳಕೆಯೊಡೆದು
ಹಣ್ಣಾಗಿ ಮಣ್ಣಸೇರಿ
ಮತ್ತೆ ಚೆಗುರೊಡೆಯಲು
ನಿತ್ಯ ಕನಸು ಭರವಸೆಗಳ
ಹೊತ್ತು ನಂಬಿಕೆಯೇ ತಾನಾಗಿ
ಬಯಲಲ್ಲಿ ಬಯಲಾಗಿ
ಎಚ್ಚರದಿ ಸಹಜತನದಲಿ
ತನ್ನನೊಡ್ಡಿಕೊಳ್ಳುತ್ತಲಿರಬೇಕು..
ಮುಗಿಲೆತ್ತರಕ್ಕೇರಿದರೆ ಸಾಲದು
ಮೊಗ್ಗು ಹೂವಾಗಿ ಕಂಪು ಬೀರಬೇಕು
ಹೀಚು ಕಾಯಾಗಿ ಹಣ್ಣಾಗಿ
ಬಯಸಿದವರ ಬೊಗಸೆತುಂಬಬೇಕು
ನಂಬಿದವರ ಹಸಿವೆ ನೀಗಬೇಕು…
ತಿಂದವರ ತೃಪ್ತಿಯಲಿ ಬೀಜ
ಮಣ್ಣಾಗುತ್ತಲಿರಬೇಕು
ಮತ್ತೆ.. ಮತ್ತೆ..

ಹೊಳೆದದ್ದೇ ತಡ,
ಇದ್ದೆಲ್ಲ ಸುಖವನೊದ್ದು
ಮನೆ ತೊರೆದು ಪ್ರೀತಿ ಪಸೆಯರಸಿ
ಹೊರಟೇಬಿಟ್ಟ!

ದೇಶಕಾಲವ ಮೀರಿ
ಇವನೇರಿದೆತ್ತರವ ಕಂಡ ಜನ
ಇನ್ನಿಲ್ಲದೆತ್ತರಕೆ ಇವನ ವಿಗ್ರಹ ಕೆತ್ತಿ
ಏರೆತ್ತರದ ಪೀಠದಲಿ
ಕುಳ್ಳುರಿಸಿ ಸ್ಥಾವರವಾಗಿಸಿದರು!
(ಇವನಿಗೂ ಉಸಿರುಗಟ್ಟಿರಬೇಕು ಪಾಪ!)

ಒಮ್ಮೆ ಯಾವನೋ ತಲೆಕೆಟ್ಟು
ವಿಗ್ರಹದ ತಲೆ ಕತ್ತರಿಸಿದ್ದೇ ಸುದ್ದಿಜಂಗಮವಾಗಿ
ಬಯಲಲ್ಲಿ ಬಯಲಾಗಿ
ಎಲ್ಲೆಲ್ಲೂ ಬೇರೂರಿಬಿಟ್ಟ!

ಗಟ್ಟಿಯೂರಿದ ಬೇರುಗಳ
ಕತ್ತರಿಸಿ ಮಾಲೆಯಾಗಿಸಿ
ಬೀಗಲೆಂದೇ ಪಣತೊಟ್ಟಂತೆ
ಮದ್ದುಗುಂಡಗಳ ಸಿಡಿಸಿ
ಜೀವಗಳ ಬಲಿಕೊಟ್ಟು ಗಹಗಹಿಸಿದರು–
ಅಂಗುಲಿಮಾಲನಂತೆ!

ನಿಜ.
ತರಲಾಗದು ಸಹಜ ಸಾವಿನ
ಮನೆಯಿಂದ ಸಾಸಿವೆಯನು.
ಗುಂಡಿನ ಸದ್ದಿಗೆ ತನ್ನವರ ಕಳಕೊಂಡು
ಮೈತುಂಬಾ ಸಿಡಿದ ನೆತ್ತರಿನೊಂದಿಗೆ
ನಡುಬೀದಿಯಲಿ ಕುಳಿತು
‘ಎ..ಲ್ಲ..ವ..ನ್ನೂ
ದೇ..ವ..ರಿ..ಗೆ ..ಹೇ..ಳು..ತ್ತೇ..ನೆ!’
ಎಂದು ಉಮ್ಮಳಿಸುತ್ತಿರುವ ಮಗು
ವಿಗೆ ವಿಡಿಯೋ ವೈರಲ್ಲಾದರೂ
ಸಿಕ್ಕೀತೇ ಸಾಸಿವೆಯ ಸಮಾಧಾನ?

ಕಾಲಕಾಲಕ್ಕೆ ಜತನದಿಂದ
ಬದಕು ಕಾಯ್ದ ಸಾವಿರದ ಬುದ್ಧರು
ಪ್ರೀತಿ ಪಸೆಯಾರಿದವರ ಬಳಿ
ಮೌನದಲಿ ಕುಳಿತು ಮೈದಡವಿ
ಭಿಕ್ಷಾಪಾತ್ರೆಯನೊಡ್ಡಿ ಸಾಗುತ್ತಲೇ ಇದ್ದಾರೆ:
ಪ್ರೀತಿ ತಂದೀರಾ ಭಿಕ್ಷಕೆ ಪ್ರೀತಿ ತಂದೀರಾ?

೩. ಅವಳು

ಬೆಚ್ಚಗೆ ಬದುಕ ಕಾಪಿಡುವ ಮನಗಳು
ಇವಳ ರೆಕ್ಕೆಗಳ ಕತ್ತರಿಸಿದಷ್ಟೂ
ಬದುಕ ಪಾಠವೆಂದೆಣಿಸಿ
ಮುಗಿಲ ಸೀಳಿ ಹಾರುತ್ತಾಳೆ!

ಬೆಳಕನಿಟ್ಟು ಬದುಕ ಬೆಳಗುವ
ಸೂರ್ಯ ಉರಿದುರಿದು ಸುಟ್ಟಷ್ಟೂ
ವಿರಹದ ತೋಳತೆಕ್ಕೆಗಳಲಿ
ಹುಣ್ಣಿಮೆಗಳ ಕುಡಿದು ಹಾಡುತ್ತಾಳೆ!

ಕೆಣಕಿ ಘಾಸಿಗೊಳಿಸಿದಷ್ಟೂ
ಕತ್ತಲೆಯ ಮೊಗೆಮೊಗೆದು ಕುಡಿದು
ಬೆಳಕಿನ ಸುಳ್ಳುಗಳಿಗೆ ಸಿಡಿದು
ಕಾಲದ ಕನಸುಗಳಿಗೆ ಬೆಳಕಾಗುತ್ತಾಳೆ!

ಇವಳಿಷ್ಟು ಬಿಕ್ಕಿದರೂ ಬೆದರುತ್ತವೆ ಬೆಟ್ಟಗಳು.
ಇವಳ ನಿಟ್ಟುಸಿರಿಗೆ ಅದರುತ್ತದೆ ಬ್ರಹ್ಮಾಂಡ!
ಗುಡುಗು ಸಿಡಿಲು ಆರ್ಭಟಗಳ ನುಂಗಿ
ಹನಿಹನಿಯಾಗಿ ಹರಿದು ತೊರೆ ಹಳ್ಳ ನದಿಯಾಗಿ
ಹಸಿರ ಪೊರೆವ ಜೀವದಾಯಿಯಾಗುತ್ತಾಳೆ.

ಅವಳೊಂದು ತಂಪಿನ ಸಾಗರಗನ್ನಡಿ.
ಆಕಾಶವನೇ ಕಣ್ಣಬಿಂಬದಲಿಟ್ಟು ತೂಗುತ್ತಾಳೆ
ಇಬ್ಬನಿ ಹನಿಯಾಗಿ ಸೂರ್ಯನ
ನುಂಗಿ ಮುತ್ತಾಗುತ್ತಾಳೆ.

ಅಳುವ ಕೂಸಿಗೆ ಮೊಲೆಯೂಡುವವಳು
ಸೆರಗಲ್ಲಿ ಸೆರೆಯಾದವನ ಬದುಕಾದವಳು
ಯುಗಯುಗಗಳ ಚಲನೆಗಿವಳು ಬೆಳಕು
ಅವಳೆಂದರೆ ಮಹಾಕಾವ್ಯಗಳ ಬೆರಗು!

-ಗೀತಾ ಡಿ.ಸಿ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x