1) ಒಂಟಿ ಚಪ್ಪಲಿ
ನಾ ಕೊಂಡ ಆರಿಂಚಿನ ದುಬಾರಿ ಮೊತ್ತದ ಚಪ್ಪಲಿಗಳಲ್ಲಿ
ಒಂದು ಮಾತ್ರ ಉಳಿದಿದೆ
ಮತ್ತೊಂದು ನಾಯಿ ಪಾಲಾಯಿತೋ..
ಬೀದಿ ಪಾಲಾಯಿತೋ..
ನೀರು ಪಾಲಾಯಿತೋ..
ಅರಿವಿಲ್ಲ
ಹೈಕಳು ಹರಿದಿರಬಹುದೇ..?
ಬೇಕಂತಲೇ ಎಸೆದಿರಬಹುದೆ?
ಕಳುವಾದ ಸಾಧ್ಯತೆಯಿಲ್ಲ
ಒಂಟಿ ಚಪ್ಪಲಿ ಎಲ್ಲಿ ನರಳಿಹುದೋ..?
ದುಃಖಿಸಲೇ.. ಒಂದು ಚಪ್ಪಲಿ ಕಳೆದು ಹೋಗಿದಕ್ಕೆ
ಸುಖಿಸಲೇ..
ಒಂದು ಚಪ್ಪಲಿ ಉಳಿದಿದ್ದಕ್ಕೆ
ಅತ್ರಂತ್ರ ಸ್ಥಿಥಿ ಬರಿಗಾಲು
ಉಳಿದ ಕಾಣೆಯಾದ
ಬಿಡಿಬಿಡಿಯಾದ ದುಬಾರಿ ಚಪ್ಪಲಿಗಳನು
ಅಣಕ ಮಾಡುತ್ತಿವೆ
ಪುಟಪಾತಿನಲಿ ನೂರಕ್ಕೋ ಇನ್ನೂರಕ್ಕೋ..
ಅಗ್ಗವಾಗಿ ಸಿಕ್ಕ
ಹಳೆಯ ಅವಾಯಿ ಚಪ್ಪಲಿಗಳು
2) ಕೀಳರಿಮೆ
ಮೆಳ್ಳೆಗಣ್ಣೆಂಬ ಕೀಳರಿಮೆ ಹೊರಟು ಹೋಯಿತೆನಗೆ
ಕುರುಡರ ಕಂಡ ಮೇಲೆ
ಎಡಚನೆಂಬ ಕೀಳರಿಮೆ ಹೋಯಿತೆನಗೆ
ಕೈಯಿಲ್ಲದವರ ಕಂಡ ಮೇಲೆ
ಹೆಳವನೆಂಬ ಕೀಳರಿಮೆ
ಕಾಣೆಯಾಯಿತೆನ್ನಲಿ
ಕಾಲಿಲ್ಲದವರ ಕಂಡ ಮೇಲೆ
ತೊದಲನೆಂಬ ಕೀಳರಿಮೆ
ತೊಲಗಿತು
ಮೂಕರ ಕಂಡ ಮೇಲೆ
ಕಾರು ಬಂಗಲೆಯಿಲ್ಲದ
ಅತೃಪ್ತಿ ಹೋಯಿತು
ಗುಡಿಸಲೂ ಇಲ್ಲದವರ ಕಂಡ ಮೇಲೆ
ಆಳೆಂಬ ಕೀಳರಿಮೆ
ಇಲ್ಲವಾಯಿತೆನಗೆ
ಹಾಳಾದ ಅರಸರ ಕಂಡ ಮೇಲೆ
3) ಕನ್ನಡವೆಂದರೆ…!
ಮೇರುನುಡಿಯಿದು ಮೇಲರಮಿಯಿರಲಿ
ಆಡುಗನ್ನಡವ ನಾಲ್ಗೆ.
ಚಂದದ ಲಿಪಿಯಿದು
ಬರೆಗನ್ನಡವ ಕೈಯ್ಯೆ
ಇಂಪುಗನ್ನಡವಿದು ಕಿವಿಗೆ
ತಂಪುಗನ್ನಡವಿದು ಕಣ್ಗೆ
ಮುನ್ನುಡಿಗನ್ನಡವಿದು ಬಾಳ್ಗೆ
ಹಾಡುಗನ್ನಡವ ಸಕ್ಕರೆ ಹೋಳ್ಗೆ
ಕನ್ನಡ ಪರಪಂಚವಿದು
ಧನ್ಯಗನ್ನಡಿಗನು
ನೀರೆಲ್ಲವು ಪನ್ನೀರು
ಮಣ್ಣೆಲ್ಲವೂ ತಿಲಕ
ಕೇಳುಗನ್ನಡವ ಕಂದ
ಹೇಳುಗನ್ನಡವ ಸಿಹಿ ಗಂಧ
ಅರಿಗನ್ನಡವಾನಂದ
ತಿಳಿಗನ್ನಡ ಸ್ಚಚ್ಚಂದ
ಇರುಗನ್ನಡಿಗನಾಗಿ
ತಿರುಗು ಕನ್ನಡವಾಗಿ
-ಮೇದರದೊಡ್ಡಿ ಹನುಮಂತ
ಮೂರು ಸೂಪರ್ ಕವನಗಳು. ಅಭಿನಂದನೆಗಳು.
ಚೆನ್ನಾಗಿವೆ ಕವಿತೆಗಳು