ನಾಲ್ಕು ಕವಿತೆಗಳು: ಜಹಾನ್ ಆರಾ ಕೋಳೂರು

ನನಗೂ ಹೇಳುವುದು ಬಹಳ ಇತ್ತು

ಅಂದು ಶ್ರೀರಂಗ ಪಟ್ಟಣದ ವೇದಿಕೆಯ ಮೇಲೆ
ಸೂಟು ಬೂಟಿನ ಠೀವಿನಲ್ಲಿ ಕುಳಿತ ನಿಸಾರ್
ನನಗೆ ನನ್ನ ನೆಚ್ಚಿನ ಪದ್ಯದ ಕವಿಯಷ್ಟೆ

ಜೋಗದ ಝರಿಗಳ ಮುಂದೆ ನಿಂತಾಗಲೆಲ್ಲ
ಅದರ ಹನಿಗಳು ಮುಖಕ್ಕೆ ಚಿಮ್ಮುತ್ತಿದಾಗಲೆಲ್ಲ
ಜೊತೆಯಲ್ಲಿ ಇಲ್ಲೇ ಕುಳಿತು ಮಾತಾಡಬೇಕೆಂಬ ಹಂಬಲವೇನೋ ಇತ್ತು.

ಕಾಲಕ್ಕೆ ಕಾದೆ
ಕಾಲ ಅವಕಾಶ ನೀಡಲೇ ಇಲ್ಲ

ಶಿಲುಬೆ ಏರಿದವನು ನಿನ್ನ ಕಾಡಿದಂತೆ
ನನಗೂ ಕಾಡಿದ ನಿನ್ನ ಪದಗಳ ಮೂಲಕ

ಸಂಜೆ ಐದರ ಮಳೆ ಇರಬೇಕಿತ್ತು
ಲಾಲ್ ಬಾಗ್ನಲ್ಲಿ ಸ್ವಲ್ಪ ದೂರ ನಡೆದು
ನಾನು ನಿನ್ನಲ್ಲಿ ಹೇಳುವುದು ಬಹಳ ಇತ್ತು

ಮನಸ್ಸು ಗಾಂಧಿ ಬಜಾರ್ ಆದಾಗಲೆಲ್ಲ
ನಿನ್ನಂತೆ ನಾನು ಪರಕೀಯವೆಂಬ ಭಾವ
ಆದರೂ ಕನ್ನಡಮ್ಮ ನಮ್ಮನು ಸಲುಹುತ್ತಿದ್ದಾಳೆ
ಅವಳ ಮುಂದೆ ನಮಗೆ ಏಕೆ ಅನೇಕ ದೇವರುಗಳು?

ಕೆಲವು ಬಾರಿ ಅವರಿವರ ಮಾತಿಗೆ
ಕಿವಿಕೊಟ್ಟು ಮನಸ್ಸು ನೋಯಿಸಿಕೊಂಡು
ಅವಳೊ ಸಾಬಿ ಹುಡುಗಿ ಎಂದಾಗಲೆಲ್ಲ
ಜಾತಿ ರಾಜಕೀಯ ಗೊತ್ತಿಲ್ಲದಿದ್ದರೂ
ನಾನು ಕುರಿಯಂತೆ ಮಂದೆ ಸೇರಿಲ್ಲ
ನಾನೆನ್ನುವ ಅಸ್ತಿತ್ವದ ಚೂರಿನ ಅಸ್ಪಷ್ಟ
ಅರ್ಥೈಸುವುದು ನಿನಗೂ ಕಷ್ಟವಿತ್ತು
ನನಗೂ ಇದೆ

ಸೌಹಾರ್ದತೆಯ ಮಣ್ಣಿನಲ್ಲಿ ನಿಂತ ನೀನು
ಭಾವೈಕ್ಯತೆಯ ಬೀಜ ನೆಟ್ಟಿದ್ದು ನಿಜ
ಈಗ ನಿನ್ನ ತೆಂಗು ಎಲ್ಲರಿಗೂ ನೆರಳಾಗಿದೆ

ಭಯಾನಕವಾಗಿದ್ದ ಕ್ವಾರಂಟೀನ್ ದಿನಗಳಲ್ಲಿ
ನಿಸಾರ್ ಸತ್ತ ಸುದ್ದಿ
ಮನಸ್ಸಿನಲ್ಲಿ ಇದ್ದ ಅನೇಕ ಭಾವಗಳು
ಹಾಗೆಯೇ ಉಳಿದುಬಿಟ್ಟವು

ಜೋಗ ನಿಧಾನವಾಗಿ ರೋಧಿಸುತ್ತಿತ್ತು
ಕನ್ನಡಿಗರ ಕೋಟಿ ಮನಗಳಂತೆ
ಸಹ್ಯಾದ್ರಿಯ ಚಿಗುರು ಕಂಬನಿಯಾಗಿತ್ತು
ನಿತ್ಯೋತ್ಸವ ಕವಿಯ ಅಗಲಿಕೆಯಲ್ಲಿ

ನಾನು, ಸುಮ್ಮನೆ ಆಕಾಶ ನೋಡುತ್ತ ನಿಂತೆ
ನಿಜವಾಗಿಯೂ ಆಕಾಶಕ್ಕೆ ಸರಹದ್ದು ಇರಲಿಲ್ಲ

*

ಆವೇಷ್ಟಿಕ

ಮಧ್ಯ ರಾತ್ರಿಯ ಚಂದಿರ
ಮಧ್ಯ ರಾತ್ರಿಯ ತಂಗಾಳಿ
ಆಗಲೇ ಮೆಲ್ಲ ಅರಳಿ
ಸುವಾಸನೆ ಹರಡುವ ಗುಲಾಬಿ
ಎಲ್ಲ ನಿನ್ನ ಹಾಗೆ ಶಾಂತ
ನಿರ್ಮಲ ಮೃದು ಹಿತ

ಮಧ್ಯಾಹ್ನದ ಸುಡುವ ಸೂರ್ಯ
ಬೇಸಿಗೆಯ ಉರಿವ ಮರಳು
ಮೂಗಿನ ರಂದ್ರಗಳನ್ನು ಸೀಳಿ
ಮೆದುಳಿಗೆ ಹೊಕ್ಕುವ ಪರ್ಫ್ಯೂಮ್ ಗಾಟು
ಎಲ್ಲಾ ನನ್ನ ಹಾಗೆ ಕುಕ್ಕರಿ
ಕೋಪ ಆವೇಷ್ಟಿಕ ಬೆಂಕಿ

ಸೂರ್ಯ ಮುಳುಗಿ
ಚಂದ್ರ ಉದಯಿಸಿ
ತಂಪಾದ ಗಾಳಿ ಇಳಿ ಸಂಜೆ
ಗುಲಾಬಿ ಪರ್ಫ್ಯೂಮ್ನ ನಶೆ
ಎಲ್ಲಾ ಹಾಗೆ….
ನೀನು ವಿಸ್ಕಿ ಮರೆತು
ನನ್ನ ಕೆಂದುಟಿಗೆ ಶರಣಾದಂತೆ
ಮಂಜುಮ ರಮಣೀಯ
ಹೊಸ ಕಾವ್ಯದಂತೆ

*

ಸ್ವಯಂ ಸ್ವತಂತ್ರರು

ನಾವು ಸ್ವಯಂ ಸ್ವತಂತ್ರರು
ದೇಶಭಕ್ತರು
ದೇಶದ ನಕ್ಷೆಯ ರೇಖೆಗಳ ಕಲಿತು ಮರೆತು
ಬರೆದುಕೊಟ್ಟರು ಹೆಸರು ಮರೆಮಾಚಿ
ಜಾಗತಿಕತೆಯ ಭಾಷಣ ಮಾಡುವವರು

ಸ್ವಾತಂತ್ರ್ಯಕ್ಕಾಗಿ ಹೋರಾಡಿದ
“ಗಾಂಧಿ” ಈಗ ಕೇವಲ ತಾತನಾಗಿದ್ದಾನೆ.
ಸಂವಿಧಾನ ಬರೆಯಲು
ಹಗಲಿರುಳನು ಸವೆಸಿದ ಭೀಮನ
ಸೋಲದ ತೋರು ಬೆರಳು ಇನ್ನೂ
ಗುರಿಯತ್ತ ತೋರಿಸುತ್ತಲೇ ನಿಂತಿದ್ದಾನೆ

ನಾವು ನಮ್ಮದೇ ಚಕ್ರವ್ಯೂಹಕ್ಕೆ ಸಿಲುಕಿ
ಅವರನ್ನೆಲ್ಲ ವ್ಯೂಹ ಗೋಡೆಗೆ ನೇತು ಹಾಕಿದ್ದೇವೆ

ಏಕೆಂದರೆ,
ತಾತನನ್ನು ಕೇಳುವವರಾರು?
ಗಾಂಧಿ ಮನದ ಮಾತಿನ ಮೌಲ್ಯ
ಈಗ ಪೂರ್ಣ ಸವಕಳಿ
ಗಾಂಧಿ ನೋಟಿಗೆ ಮಾತ್ರ ಅನುದಿನ
ಮೂರುಪಟ್ಟು ಮರ್ಯಾದೆ

ಮೂರು ಮಂಗಗಳ ಜೊತೆಗೆ
ನಾಲ್ಕನೇ ಮಂಗವನ್ನು ಕೂರಿಸಿ
ಡೊಂಬರಾಟ ಮಾಡುವವರಿಗೆ
ಯಾವತ್ತೂ ಕಾಣುವುದು
ಮಂಗವೇ ಹೊರತು
ಅದರ ಹಿಂದಿನ ಸತ್ಯ ಅಲ್ಲ
ಈಗ ಅದು ಕೂಡ
ಕಣ್ಣು ಕಿವಿ ಬಾಯಿ ಮುಚ್ಚಿಕುಳಿತಿರುತ್ತದೆ

ಎಡ-ಬಲ ಕಮ್ಯೂನಿಸ್ಟ್ ಗಾಂಧಿವಾದಿ ಎಂತೆಲ್ಲಾ
ಬಣಗಳನ್ನು ತೋರಿಸುತ್ತಾ ನಟಿಸುವ
ಶುಭ್ರ ಶ್ವೇತ ವಸ್ತ್ರಗಳು
ಕೊಳಕು ಮೈಮನಗಳ ಮುಚ್ಚಿ ಹರಾಜಿಗೆ ಒಳಗಾಗಿವೆ
ಬೇಕಾದಾಗ ಭಾವುಕತೆಯನ್ನು
ಕಿತ್ತು ಬಿಸಾಡುವ ನವರಂಗಿ ಭಾವನೆಗಳು
ಸಂಪೂರ್ಣ ಅಧಿಕಾರ ಹೊಂದಿವೆ..

ನಮ್ಮದು ರಾಮರಾಜ್ಯ ಅದಕ್ಕಾಗಿ
ಗಲ್ಲಿಗೊಬ್ಬನಂತೆ
ತಲೆ ಎತ್ತಿದ್ದಾನೆ ರಾವಣ
ರಾಮ-ರಾವಣ ಎಂಬ ವ್ಯತ್ಯಾಸ ಯಾಕೆ ಬಿಡಿ
ಅವರ ತತ್ವಗಳೆಲ್ಲ ಇಲ್ಲಿ
ಫಿಲ್ಟರ್ ಆಗಿ ಹೋಗಿದೆ
ಹೆಣ್ಣಿಗೆ ಗೌರವ ನೀಡುತ್ತಿಲ್ಲ ಎಂಬ ಆಪಾದನೆಯೇನು ಇಲ್ಲ
ಒಮ್ಮೊಮ್ಮೆ ಅವರಿಗೂ ಮೀಸೆ ಮೂಡಿ
ಹೆಣ್ತನ ಮರೆಯಾಗುತ್ತದೆ
ಸೀತೆಯ ಸಾವಾಗುತ್ತದೆ.

ನಾವು ಬಿಡಿ ಸ್ವಯಂ ಸ್ವತಂತ್ರರು
ಒಮ್ಮೊಮ್ಮೆ ಸಮಾಜಕ್ಕೂ ನಮಗೂ ಸಂಬಂಧವಿಲ್ಲದವರು..
ಗಾಂಧೀ ನೋಟಿಗೆನೇ ಬಲಿ ಬೀಸಿದ ಗೌರವಸ್ಥರು
ನಾವು ಸರ್ವ ಸ್ವತಂತ್ರರಲ್ಲವೇ!!!

*

ಬರಲಿ ಮಳೆಯೊಂದು

ಬರಲಿ ಮಳೆಯೊಂದು
ಪಾಷಾಣ ಕಣಗಳ ಹೊತ್ತು
ಕೊಳಚೆ ಕಿಲುಬುವಾಸನೆ ಸಹಿತ
ಕೊಚ್ಚೆಗಳ ಧರಣಿ ಕೃತಘ್ನರಿಂದ
ಮೈಲಿಗೆಯಾದ ಇಳೆಯ ಮೈ ತೊಳೆದು
ಮಡಿಯಾಗಿ ಮಂದಹಾಸದಲ್ಲಿ
ಮತ್ತೆ ಹಸಿರುಟ್ಟು ನಲಿಯುವಂತೆ

ಬರಲಿ ಮಳೆಯೊಂದು
ನಮ್ಮ ಪಾಪಗಳ
ತನ್ನಲ್ಲೇ ಹೆಂಗಿಸಿಕೊಂಡು
ನಗ್ನಪವಿತ್ರಳಾದರೂ
ಸಂಚಲನಶೀಲತೆಯ
ಕಾಪಿಟ್ಟುಕೊಳ್ಳುವ ಶಿವಗಂಗೆಯ
ಮಾಲಿನ್ಯ ಕೊಚ್ಚಿ ಹೋಗುವಂತೆ

ಬರಲಿ ಮಳೆಯೊಂದು
ಧೂಮದ ಮುಸುಕಿನಲ್ಲಿ
ಯಾರದು ಹಾಸಿಗೆ ಮೇಲೆ
ನರಳುತ್ತಿರುವ ಕೂಗು
ನಿಶಬ್ದವಾಗಿ ಎಚ್ಚೆತ್ತ
ಅವಳ ಬಾಳಲ್ಲಿ
ಮಲ್ಲಿಗೆ ಅರಳುವಂತೆ

ಬರಲಿ ಮಳೆಯೊಂದು
ರೈತ ಬಿತ್ತ ಬೀಜಗಳು ಇಂದು
ನಿಧಾನವಾಗಿ ನಿರಾಳವಾಗಿ
ಬಲ ಹೊತ್ತು ಛಲ ಮೆರೆದು
ಧರೆಯ ಗರ್ಭದಿಂದರಳಿ
ಚಿಗುರಿ ನಗುವಂತೆ

-ಜಹಾನ್ ಆರಾ ಕೋಳೂರು


ಕನ್ನಡದ ಬರಹಗಳನ್ನು ಹಂಚಿ ಹರಡಿ
1 1 vote
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x