ದೇವರುಗಳ ಸುತ್ತ ಪ್ರದಕ್ಷಿಣೆ ಹಾಕುವ “ಬ್ಯಾಟೆಮರ”: ಡಾ. ನಟರಾಜು‌ ಎಸ್ ಎಂ

ದಾವಣಗೆರೆಯಲ್ಲಿ ಕಳೆದ ತಿಂಗಳು ಬೆಂಗಳೂರಿನ ಅರವಿಂದ ಬುಕ್ ಹೌಸ್ ನವರು ಒಂದು ಪುಸ್ತಕ ಹಬ್ಬ ಇಟ್ಟುಕೊಂಡಿದ್ದರು. ಬಹುಶಃ ಅವರದು ಕರ್ನಾಟಕದ ಜಿಲ್ಲಾ ಕೇಂದ್ರಗಳಲ್ಲಿ ಒಂದಷ್ಟು ದಿನ ಆಯ್ದ ಕನ್ನಡ ಪುಸ್ತಕಗಳನ್ನು ಮಾರುವ ಮೂಲಕ ಜನರಲ್ಲಿ ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಅಭ್ಯಾಸ ಬೆಳೆಸುವ ಅಭಿಯಾನ ಅನಿಸುತ್ತೆ. ಆ ಪುಸ್ತಕ ಹಬ್ಬಕ್ಕೆ ಹೋಗಿದ್ದಾಗ ಅಲ್ಲಿ ಅನೇಕ ಹೊಸ ಲೇಖಕರ ಪುಸ್ತಕಗಳೂ ಸಹ ಕಣ್ಣಿಗೆ ಬಿದ್ದಿದ್ದವು. ನನಗೆ ಬೇಕೆನಿಸಿದ ಪುಸ್ತಕಗಳನ್ನು ಕೊಂಡುಕೊಂಡ ಪುಸ್ತಕಗಳಲ್ಲಿ “ಬ್ಯಾಟೆಮರ”ವೂ ಒಂದಾಗಿತ್ತು. ಪುಸ್ತಕ ಕೊಂಡು ಅನೇಕ ದಿನಗಳಾಗಿದ್ದರೂ ಮೂರ್ನಾಲ್ಕು ಬಾರಿ ಓದುವ ಪ್ರಯತ್ನ ಮಾಡಿ ನಿಜಕ್ಕೂ ಸೋತಿದ್ದೆ.

“ಬ್ಯಾಟೆಮರ” ಪುಸ್ತಕ ಓದುವ ಪ್ರಯತ್ನ ಮಾಡಿದಾಗ ಹಲಸಿನ ಹಣ್ಣಿನ ಹೊರ ಪದರ ಹೇಗೆ ಮುಳ್ಳು ಮುಳ್ಳೋ ಹಾಗೆ ಈ ಪುಸ್ತಕದ ಭಾಷೆ ಕೂಡ ಒರಟು ಒರಟಾಗಿತ್ತು. ಒಳ ಪುಟಗಳನ್ನು ತೆರೆದು ನೋಡಿದರೂ ಹಲಸಿನ ಹಾಲಿನಂತೆ ಪದಗಳು ಹೆಚ್ಚು ಒತ್ತಕ್ಷರ ಇರುವ ಕಾರಣಕ್ಕೆ ಅಂಟು ಅಂಟು, ಕ್ಲಿಷ್ಟ ಅನಿಸತೊಡಗಿ ಓದುವ ಆಸೆಯನ್ನೇ ಕೈಬಿಟ್ಟಿದ್ದೆ. ಆಗ ಭಾಷೆಯನ್ನು ಬರಹಗಾರರು ಯಾಕಿಷ್ಟು ಕಠಿಣ ಮಾಡಿಬಿಡುತ್ತಾರೆ ಅನಿಸಿದ್ದೂ ಉಂಟು. ಆದರೂ ಪುಸ್ತಕದ ಮಧ್ಯದ ಕತೆಯೊಂದನ್ನು ಒಂದು ದಿನ ಓದುತ್ತಾ ಹೋದೆ. ಒಂದಷ್ಟು ಪುಟಗಳನ್ನು ಓದಿದ ಮೇಲೆ ನಿಧಾನಕ್ಕೆ ಕತೆಯಲ್ಲಿನ ಭಾಷೆ ಜೇನು ಅದ್ದಿದ ಹಲಸಿನ ತೊಳೆಯ ಸಿಹಿಯಷ್ಟೇ ಮಧುರವಾಗಿತ್ತು. ಅದಾದ ಒಂದು ವಾರವಿಡೀ ಒಂದೊಂದೇ ಕತೆಯಂತೆ ಇಡೀ ಪುಸ್ತಕವನ್ನು ಓದಿ ಮುಗಿಸಿದಾಗ ಏನೋ ಒಂದು ಸಂತೃಪ್ತ ಭಾವ ನನ್ನೊಳಗೆ ಆವರಿಸಿತು. ಜೊತೆಗೆ “ಬೆಟ್ಟದ ಕೆಳಗೆ ಆಲದ ಮರವೊಂದೈತೆ ಅಲ್ಲಿ ನಮ್ಮ‌ ಬೀರಪ್ಪ ದ್ಯಾವರ ಗುಡಿಯೊಂದೈತೆ” ಎಂಬ ಡಾ. ರಾಜಕುಮಾರ್ ರವರ ದನಿಯ ಚಿ ಉದಯಶಂಕರ್ ರವರ ಹಾಡು ಕೂಡ ನೆನಪಾಯಿತು. “ಬ್ಯಾಟೆಮರ” ದ ಭಾಷೆ ಕೂಡ ಆ ಹಾಡಿನ ಶೈಲಿಯದೇ!!

“ಬ್ಯಾಟೆಮರ” ಎಂಬ ವಿಶೇಷವಾದ ಹೆಸರಿನ ಈ ಪುಸ್ತಕ ಎ ಎಸ್ ಜಿ (ಶಶಿಕುಮಾರ್‌ ಎ ಎಸ್) ಅವರ ಪ್ರಥಮ ಕಥಾಸಂಕಲನ. ಯಾರ‌ ಮುನ್ನುಡಿ, ಬೆನ್ನುಡಿಯೂ ಇಲ್ಲದ ಈ ಸಂಕಲನದಲ್ಲಿ ಒಟ್ಟು ಎಂಟು ಕತೆಗಳಿವೆ. ಆರು ಕತೆಗಳು ೮ ರಿಂದ ೧೪ ಪುಟಗಳಾಗಿದ್ದರೆ ಒಂದು ಕತೆ ೨೮ ಪುಟಗಳ ದೀರ್ಘ ಕತೆಯಾಗಿದ್ದು, ಶೀರ್ಷಿಕೆಯ ಕತೆ “ಬ್ಯಾಟೆಮರ” ಬರೋಬ್ಬರಿ ೫೮ ಪುಟಗಳ ಸುದೀರ್ಘ ಕಥನವಾಗಿದೆ. ಈ ಕತೆಗಳಿಗೆ ಅದಿತಿ ಜಿ ಹೆಗಡೆಯವರು ಸರಳವಾದ ರೇಖಾಚಿತ್ರಗಳನ್ನು ಬರೆದಿದ್ದಾರೆ. ಭವ್ಯ ಕಬ್ಬಳಿ ಮತ್ತು ದಯಾ ಗಂಗನಘಟ್ಟ ಅವರು ಈ ಪುಸ್ತಕದ ಕರಡು ಪ್ರತಿ ತಿದ್ದಿದ್ದಾರೆ. ಈ ಪುಸ್ತಕದ ಮೂಲಕ ಕರಡು ಪ್ರತಿ ತಿದ್ದುವವರ ಹೆಸರು ಟೆಕ್ನಿಕಲ್ ಪುಟದಲ್ಲಿ ನೀಡಿರುವುದು ಒಳ್ಳೆಯ ಬೆಳವಣಿಗೆ. ಋತುಮಾನ ಡಿಜಿಟಲ್ ಪ್ರಿಂಟರ್ಸ್ ಅವರು ಮುದ್ರಿಸಿರುವ ಈ ಪುಸ್ತಕಕ್ಕೆ ಮದನ್ ಸಿ ಪಿ ಅವರ ಮುಖಪುಟ ಮತ್ತು ಒಳಪುಟವಿನ್ಯಾಸವಿದೆ.

ಈ ಪುಸ್ತಕ ಓದುವಾಗ ಬಹುಮುಖ್ಯವಾಗಿ ಕತೆಗಾರರು ಬಳಸಿಕೊಂಡಿರುವ ಅರಸೀಕೆರೆ ಕಡೆಯ ಕನ್ನಡ ಭಾಷೆ ಕತೆಗಳಲ್ಲಿ ಎದ್ದು ಕಾಣುತ್ತದೆ. ಹಾಗೆಯೇ ಲೇಖಕರು ತಮ್ಮ ಈ ಕತೆಗಳಲ್ಲಿ ಅನೇಕ ಥೀಮ್ ಗಳನ್ನು ಬಳಸಿ ಕತೆ ಹೆಣೆದಿದ್ದಾರೆ. ಈ ಲೇಖನದಲ್ಲಿ ಗ್ರಾಮದೇವತೆಗಳು, ಪಾತ್ರಗಳ ಆತ್ಮಗೌರವ, ಸ್ವಾಭಿಮಾನ ಮತ್ತು ಬಂಡಾಯ, ಪೋಷಕರು‌ ಮತ್ತು ಮಕ್ಕಳ ಬಾಂದವ್ಯ, ಊರುಗಳಲ್ಲಿನ ಜಾತಿ ತಾರತಮ್ಯ ಮತ್ತು ರೂಪಕಗಳು ಎಂಬ ನಾಲ್ಕು ಥೀಮ್ ಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದೇನೆ.

ಗ್ರಾಮದೇವತೆಗಳು
ಬ್ಯಾಟೆಮರ ಪುಸ್ತಕದ “ಮಗ್ಲುಚ್ಚೆ” ಕತೆ ಬಿಟ್ಟು ಉಳಿದ ಏಳು ಕತೆಗಳಲ್ಲೂ ಗ್ರಾಮದೇವತೆಗಳನ್ನು ಪ್ರಸ್ತಾಪಿಸುತ್ತಾ ಕತೆಗಾರ ಕತೆಯನ್ನು ಹೆಣೆದಿರುವುದು ಒಂದು ಗಮನಿಸಬೇಕಾದ ಸಂಗತಿಯಾಗಿದೆ. ಊರಿನಲ್ಲಿ ಒಂದು ಅಥವಾ ಹೆಚ್ಚು ದೇವರ ದೇವಸ್ಥಾನಗಳು ಇದ್ದ ಮೇಲೆ ಅವುಗಳ ಜೊತೆ ಜೊತೆಗೆ ಅನೇಕ ಐತಿಹಾಸಿಕ, ಸಾಂಸ್ಕೃತಿಕ, ರಾಜಕೀಯ ಹಾಗು ಸಾಮಾಜಿಕ ಸಂಗತಿಗಳು ತಳುಕು ಹಾಕಿಕೊಂಡಿರುತ್ತವೆ. ಹಾಗೆಯೇ ಮೌಢ್ಯಗಳು ಸಹ ಜೊತೆ ಜೊತೆಗೆ ಆಚರಣೆಯಲ್ಲಿರುತ್ತವೆ. ಈ ಅಂಶಗಳನ್ನು ಕತೆಗೆ ಹೇಗೆ ಬೇಕೋ ಹಾಗೆ ಬಳಸಿಕೊಂಡು ಕಥಾಹಂದರವನ್ನು ತಯಾರಿಸಿರುವುದು ಶಶಿ ಯವರ ಕಥನ ಶೈಲಿ ಎನ್ನಬಹುದು. ಇವರ ಕತೆಗಳಲ್ಲಿ ಅನೇಕ ಸ್ಥಳೀಯ ದೇವರುಗಳ ಪ್ರಸ್ತಾಪವಿದೆ‌. “ದೇವಿ” ಕತೆಯಲ್ಲಿ ಉಡ್ಲುಸಮ್ಮ, “ಚಿಕ್ಕಮ್ಮ” ಕತೆಯಲ್ಲಿ ಬೀರಪ್ಪ, ಬಾಗಳಮ್ಮ, ಹನುಮಂತ್ರಾಯ, “ತೇರು” ಕತೆಯ ಬಾಗಳಮ್ಮ ಮತ್ತು ಕರಿಮುಳ್ಳಮ್ಮ, ಶಿವಣ್ಣ ಕತೆಯಲ್ಲಿ ಬೀರಪ್ಪ, ಮುತ್ರಾಯಪ್ಪ ಮತ್ತು ಸೋಮೇಶ್ವರ, “ಪ್ರದಕ್ಷಿಣೆ” ಕತೆಯಲ್ಲಿ ಶಿವಪ್ಪ, ಬಸ್ವಣ್ಣ, “ವೊಸ್ತಡ್ಕು” ಕತೆಯ ಅಮ್ಮ, “ಬ್ಯಾಟೆಮರ” ಕತೆಯ ಬೀರಪ್ಪ, ಚಿಕ್ಕಮ್ಮ, ದೊಡ್ಡಮ್ಮ, ಕರಿಮುಳ್ಯಮ್ಮ ಹೀಗೆ ಪುಸ್ತಕದ ತುಂಬಾ ತರಾವರಿ ದೇವರುಗಳು ತುಂಬಿವೆ.

“ದೇವಿ” ಕತೆಯಲ್ಲಿ ಉಡ್ಲುಸಮ್ಮನ ಹುಟ್ಟು ಹೇಗಾಯಿತು ಎಂಬ ಐತಿಹಾಸಿಕ ಘಟನೆಯನ್ನು ಕತೆಗಾರ ವಿವರಿಸಿದರೆ, “ಚಿಕ್ಕಮ್ಮ” ಕತೆಯಲ್ಲಿ “ಬ್ಯಾರೆ ಬ್ಯಾರೆ ಊರಿಂದ ತನ್ನೂರಿಗೆ ಬೀರಪ್ಪ ಯೆಂಗ್ ಬಂದ? ಬಾಗಳಮ್ಮ ಯೆಂಗ್ ಬಂದ್ಲು ಅನ್ನ ಕಥೆಯ, ಹನುಮಂತ್ರಾಯುನ್ ಗುಡಿಗ್ ಒಂದಿಷ್ಟ್ ವರ್ಷ ಪೂಜಾರಿ ಇಲ್ದಿದ್ದಿದ್ ಕಥೆಯ ಮಾತಾಡ್ಕ್ಯಂಡು ಮದ್ಯಾನುದ್ವರ್ಗು ಕಾಲ ತಳ್ಳಳು” ಎನ್ನುತ್ತಾ ಚಿಕ್ಕಮ್ಮನ ಪಾತ್ರದ ಮೂಲಕ ಗ್ರಾಮದೇವತೆಗಳ ಮೂಲಗಳನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ದೇವರುಗಳು ಊರಿನಲ್ಲಿ ಜಾಗ ಪಡೆದಿವೆ ಎಂದ ಮೇಲೆ ದೇವರು ಮತ್ತು ಜನರ ನಡುವೆ ಸಾಂಸ್ಕೃತಿಕ ನಂಟು ಇದ್ದೇ ಇರುತ್ತದೆ. ಆ ಊರಿನ ಜನರು ಹಬ್ಬಗಳನ್ನು ಆಚರಿಸುವ ಬಗೆಯನ್ನು “ವೊಸ್ತಡ್ಕು” ಕತೆಯಲ್ಲಿ ಯುಗಾದಿಯ ಕುರಿತು, “ದೇವಿ” ಕತೆಯಲ್ಲಿ ಊರಹಬ್ಬದ ಕುರಿತು, ತೇರು” ಕತೆಯಲ್ಲಿ ತೇರಿನ ಮೆರವಣಿಗೆಯ ಸಿದ್ಧತೆ ಕುರಿತು ಲೇಖಕರು ವಿಸ್ತಾರವಾಗಿ ಬರೆದಿದ್ದಾರೆ.

ದೇವರ ಗುಡಿಗಳ ಗೌಡ್ಕೆ ಮತ್ತು ದೇವರ ಒಡವೆಗಳ ಒಡೆತನದ ಬಗೆಗಿನ ರಾಜಕಾರಣದ ಬಗೆಗೆ “ಚಿಕ್ಕಮ್ಮ” ಕತೆಯಲ್ಲಿ, “ತೇರು” ತಯಾರಿಸುವ ಉಸ್ತುವಾರಿ ಕುರಿತ ರಾಜಕಾರಣವನ್ನು “ತೇರು” ಕತೆಯಲ್ಲಿ, ಪರ್ಯಾಯ ದೇವಸ್ಥಾನಗಳ ಸೃಷ್ಟಿಸುವ ಬಗೆಗೆ “ವೊಸ್ತಡ್ಕು” ಕತೆಯಲ್ಲಿ ಕತೆಗಾರರು ಹಳ್ಳಿಯ ರಾಜಕಾರಣದ ಸಣ್ಣ ಸಣ್ಣ ತುಣುಕುಗಳನ್ನು ಕಟ್ಟಿಕೊಟ್ಟಿದ್ದಾರೆ. ಮೇಲು ಕೀಳಿನ ಪರಿಕಲ್ಪನೆಯಲ್ಲಿ ದೇವರು ಎಲ್ಲರಿಗೂ ದಕ್ಕದೆ ಇರುವ ಬಗೆಯನ್ನು “ಬ್ಯಾಟೆಮರ” ಕತೆಯಲ್ಲಿಯೂ ಮತ್ತು “ಪ್ರದಕ್ಷಿಣೆ” ಕತೆಯಲ್ಲಿಯೂ ತುಂಬಾ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಮನುಷ್ಯನ ಮೇಲೆ ದೇವರು ಬರುವ ಮೌಢ್ಯವನ್ನು ತನಗೆ ತಕ್ಕಂತೆ ಹೇಗೆ ಪೂಜಾರಿ ಉಪಯೋಗಿಸಿಕೊಳ್ಳಬಲ್ಲ ಎಂಬುದನ್ನು “ದೇವಿ”, “ತೇರು” ಮತ್ತು “ವೊಸ್ತಡ್ಕು” ಕತೆಗಳಲ್ಲಿ ಶಶಿಯವರು ಹೇಳುವುದರ ಮೂಲಕ ಮೌಢ್ಯಗಳು ಹೇಗೆ ಜನರ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದು ಎನ್ನುವುದನ್ನು ಮನಗಾಣಿಸಿದ್ದಾರೆ.

ಪಾತ್ರಗಳ ಆತ್ಮಗೌರವ, ಸ್ವಾಭಿಮಾನ ಮತ್ತು ಬಂಡಾಯ
ಪ್ರತೀ ವ್ಯಕ್ತಿಗೆ ತನ್ನ ಆತ್ಮಗೌರವ ಮತ್ತು ಸ್ವಾಭಿಮಾನ ಶಿರ ಕಳಸವಿದ್ದಂತೆ. ಯಾರೂ ಅದನ್ನು ಕಳೆದುಕೊಳ್ಳಬಾರದು. ಶಶಿಯವರ ಈ ಎಲ್ಲಾ ಕತೆಗಳಲ್ಲಿ ಆತ್ಮಗೌರವ ಉಳಿಸಿಕೊಳ್ಳಲು ಅನೇಕ ಪಾತ್ರಗಳು ಹೆಣಗುತ್ತವೆ, ತಮ್ಮ ಆತ್ಮಗೌರವಕ್ಕೆ ದಕ್ಕೆಯಾಗುವ ಸಂದರ್ಭ ಒದಗಿ ಬಂದರೆ ಪ್ರತಿರೋಧವನ್ನು ಒಡ್ಡುವ ಜೊತೆಗೆ ಬಂಡಾಯವೇಳುತ್ತವೆ. “ಮಗ್ಲುಚ್ಚೆ” ಕತೆಯಲ್ಲಿ ತನ್ನ ಸ್ವಾಭಿಮಾನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವ ಪುಟ್ಟ ಹುಡುಗ ಬಾಬು, “ಚಿಕ್ಕಮ್ಮ” ಕತೆಯಲ್ಲಿನ ಚಿಕ್ಕಮ್ಮ, “ಶಿವಣ್ಣ” ಕತೆಯಲ್ಲಿನ ಶಿವಣ್ಣ, “ಪ್ರದಕ್ಷಿಣೆ” ಕತೆಯಲ್ಲಿನ ಯಲ್ಲಪ್ಪ, ಬ್ಯಾಟೆ ಮರ ಕತೆಯಲ್ಲಿನ “ಚೆನ್ನ” ಎಲ್ಲರೂ ವಿಶೇಷವಾದ ಆತ್ಮ ಗೌರವ ಮತ್ತು ಸ್ವಾಭಿಮಾನ ಉಳ್ಳವರು. ಶಿವಣ್ಣ, ಯಲ್ಲಪ್ಪ, ಚೆನ್ನ ಎಲ್ಲರೂ ಮಧ್ಯ ವಯಸ್ಕರಾಗಿದ್ದು ದುಡಿಯುವ ವರ್ಗಕ್ಕೆ ಸೇರಿರುತ್ತಾರೆ. ಇವರ್ಯಾರು ತಮ್ಮ ಸ್ವಾಭಿಮಾನಕ್ಕೆ ದಕ್ಕೆಯಾಗುವ ಯಾವುದೇ ಕೆಲಸಕ್ಕೆ ಕೈ ಹಾಕದೆ ಇರೋದು ಈ ಕತೆಗಳಲ್ಲಿನ ವಿಶೇಷ. “ದೇವಿ” ಕತೆಯಲ್ಲಿ ವಿಕೃತನೊಬ್ಬನ ವಿರುದ್ಧ ತಿರುಗಿ ಬೀಳುವ ದ್ಯಾವಕ್ಕ ತನ್ನ ಆತ್ಮಗೌರವ ಕಾಪಾಡಿಕೊಳ್ಳಲು ಕತೆಯುದ್ದಕ್ಕೂ ಸೆಣಸುವ ಪರಿ ಇತರ ಸ್ತ್ರೀಯರಿಗೆ ಅನುಕರಣೀಯವಾಗುವುದು ಕತೆಯ ಸಾರ್ಥಕತೆ ಅನಿಸುತ್ತೆ.
“ಪ್ರದಕ್ಷಿಣೆ” ಕತೆಯ ಯಲ್ಲಪ್ಪನಂತೂ ಒಂದು ಇಡೀ ಊರಿನ ವಿರುದ್ಧವೇ ತಿರುಗಿ ಬೀಳುವುದು ಬಂಡಾಯದ ಅಗತ್ಯತೆಯನ್ನು ಒತ್ತಿ ಹೇಳುತ್ತದೆ. “ವೊಸ್ತಡ್ಕು” ಕತೆಯ ಸಿದ್ದೇಶ ಕೂಡ ತನ್ನ ಊರಿನ ಪಂಚಾಯತಿಯ ವಿರುದ್ದ ಸಣ್ಣದಾಗಿ ತಿರುಗಿ ಬೀಳುವುದು ಕೂಡ ಪ್ರತಿಭಟನೆಯ ಒಂದು ಮಾದರಿ.

ಪೋಷಕರು ಮತ್ತು ಮಕ್ಕಳ ಬಾಂಧವ್ಯ
ಮಕ್ಕಳು ಎಷ್ಟೇ ದೊಡ್ಡವರಾದರೂ ತಂದೆ ತಾಯಿಯ ಪಾಲಿಗೆ ಅವರು ಮಗುವೇ‌. ಪೋಷಕರು ಮಕ್ಕಳ ಮೇಲೆ ತೋರುವ ವಿಶೇಷ ಪ್ರೀತಿ ಕಾಳಜಿಯನ್ನು ಪುಸ್ತಕದ ಅನೇಕ ಕತೆಗಳಲ್ಲಿ ಲೇಖಕರು ದಾಖಲಿಸಿದ್ದಾರೆ. “ವೊಸ್ತಡ್ಕು” ಕತೆಯ ಸಿದ್ದೇಶ, “ಬ್ಯಾಟೆಮರ” ಕತೆಯ ಮಧು, ಉಷಾ, ಲೋಕಿ,
“ಶಿವಣ್ಣ” ಕತೆಯ ಬಾಬು, “ಮಗ್ಲುಚ್ಚೆ” ಕತೆಯ ಬಾಬು, “ತೇರು” ಕತೆಯ ಚಂದ್ರಣ್ಣ, “ಚಿಕ್ಕಮ್ಮ” ಕತೆಯ ಶಿವಣ್ಣ ಹೀಗೆ ಅನೇಕ ಮಕ್ಕಳು ಶಶಿಯವರ ಕತೆಗಳಲ್ಲಿ ಕಾಣಲು ಸಿಗುತ್ತಾರೆ. ಬಾಬು ಪಾತ್ರದಾರಿಗಳು ಪುಟ್ಟ ಹುಡುಗರಾಗಿದ್ದರೆ ಮಧು, ಉಷಾ ನಮ್ಮ ಕಣ್ಣ ಮುಂದೆಯೇ ದೊಡ್ಡವರಾಗುತ್ತಾ ಹೋಗುತ್ತಾರೆ. ಅವರು ಬೆಳೆಯುತ್ತಾ ಹೋಗುವಾಗ ಪೋಷಕರು ಮಕ್ಕಳನ್ನು ಬೆಳೆಸುವಲ್ಲಿ ಪಡುವ ಶ್ರಮ ಕಣ್ಣಿಗೆ ಕಟ್ಟುವಂತೆ ಕತೆಗಾರ ಕತೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ.

ಊರುಗಳಲ್ಲಿನ ಜಾತಿ ತಾರತಮ್ಯ ಮತ್ತು ರೂಪಕಗಳು
ಪುಸ್ತಕದ ಎಂಟು ಕತೆಗಳಲ್ಲಿ “ಬ್ಯಾಟೆಮರ” ಮತ್ತು “ಪ್ರದಕ್ಷಿಣೆ” ಕತೆಗಳನ್ನು ಶಶಿಯವರು ಜಾತಿಯ ವಿಕಾರತೆಯನ್ನು ಓದುಗರೆದುರಿಗೆ ತೆರೆದಿಡಲು ಪ್ರಯತ್ನಿಸಿದ್ದಾರೆ. “ಬ್ಯಾಟೆಮರ” ಕತೆಯಲ್ಲಿ ನೀಲಕ್ಕ ಮತ್ತು ನಂಜುಂಡಕ್ಕನ ಪಾತ್ರಗಳ ಮೂಲಕ ಜಾತಿಯ ಗೋಡೆಗಳನ್ನು ಕೆಡವಲು ಅವರಿಬ್ಬರ ನಡುವೆ ಹುಟ್ಟು ಹಾಕಿರುವ ಗೆಳೆತನ ಮತ್ತು ಅನುಬಂಧ ಜಾತಿಗಳನ್ನು ಮೀರಿದ್ದು‌. ಆ ಕತೆಯಲ್ಲಿ “ಬ್ಯಾಟೆಮರ” ಇಬ್ಬರು ಕುಳಿತು ಮಾತನಾಡಲು ಒಂದು ಸ್ಥಳವಾದರೂ ಜಾತಿ ಸೂಚಕವೆಂಬಂತೆ ನೀಲಕ್ಕ ಎಮ್ಮೆ ಮೇಯಿಸುವಂತೆಯೂ, ನಂಜುಂಡಕ್ಕ ಹಸು ಮೇಯಿಸುವಂತೆಯೂ ಕತೆಗಾರರು ಪ್ರಜ್ಞಾಪೂರ್ವಕವಾಗಿ ಎಮ್ಮೆ ಮತ್ತು ಹಸುವನ್ನು ಕೀಳು ಮೇಲು ಎನ್ನುವುದನ್ನು ರೂಪಕವಾಗಿ ಬಳಸಿಕೊಂಡಿದ್ದಾರೆ.
ಹಾಗೆಯೇ “ಪ್ರದಕ್ಷಿಣೆ” ಕತೆಯಲ್ಲಿ ಬಸವ ಮತ್ತು ಹಂದಿಯನ್ನು ರೂಪಕಗಳಾಗಿ ಬಳಸುತ್ತಾ ಮೇಲು ಕೀಳು ಎಂಬ ಅಂಶವನ್ನು ಪ್ರಸ್ತುತಪಡಿಸುತ್ತಾರೆ. ಆ ಪ್ರಸ್ತುತತೆಯ ಯಾವ ಮನುಷ್ಯ ವಿಷಯಗಳು ತಮ್ಮ ಅರಿವಿಗೆ ಬಾರದಿದ್ದರೂ ಹಂದಿ ಹಾಗು ಬಸವನ ನಡುವಿರುವ ಬಾಂದವ್ಯವನ್ನು ವಿಭಿನ್ನ ರೀತಿಯಲ್ಲಿ ಕಟ್ಟಿಕೊಟ್ಟು ಓದುಗರಲ್ಲಿ ಒಂದಷ್ಟು ಚಿಂತನೆಗಳನ್ನು ಹುಟ್ಟು ಹಾಕುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.

ಒಂದಷ್ಟು ಕಿವಿಮಾತುಗಳು

ಕಿರುಗತೆ, ಸಣ್ಣ ಕತೆ, ನೀಳ್ಗತೆ ಮೂರು ಪ್ರಕಾರಗಳನ್ನು ತಮ್ಮ ಪ್ರಥಮ ಪುಸ್ತಕದಲ್ಲಿ ಬರೆದಿರುವ ಶಶಿಯವರ ಭಾಷಾ ಶೈಲಿ ಎಲ್ಲಾ ತರಹದ ಓದುರಗರಿಗೆ ದಕ್ಕದೇ ಹೋಗಬಹುದಾದ ಅಪಾಯವನ್ನು ಅರಿಯಬೇಕಾಗಿದೆ. ತಳಸಮುದಾಯದ ಕತೆಗಳು ಸಿನಿಮಾವಾಗುತ್ತಿರುವುದು ಈ ದಿನಗಳಲ್ಲಿ ಟ್ರೆಂಡ್ ಆಗುತ್ತಿರುವಾಗ ಈಗಾಗಲೆ ಸಿನಿಮಾವಾಗಿರುವವರ ಕತೆಗಳ ಪ್ರಭಾವ ತಮ್ಮ ಕತೆಗಳ ಮೇಲೆ ಬೀಳದಿರುವಂತೆ ನೋಡಿಕೊಳ್ಳಬೇಕಾದ ಅವಶ್ಯಕತೆ ಕೂಡ ಇದೆ. ಯಾಕೆಂದರೆ “ಬ್ಯಾಟೆಮರ” ಕತೆ ಮರಾಠಿಯ “ಸೈರಾಟ್” ಸಿನಿಮಾವನ್ನು ನೆನಪಿಸಿಬಿಟ್ಟಿತು. ಎರಡೂ ಬೇರೆ ಬೇರೆ ನೆಲದ ಕತೆಯಾದರೂ ಒಂದೆಡೆ ಕತೆಯ ಎಳೆಗಳು ಒಂದೇ ದಿಕ್ಕಿ ಸಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. “ಚಿಕ್ಕಮ್ಮ” “ತೇರು” “ಬ್ಯಾಟೆಮರ” ಕತೆಗಳನ್ನು ಓದುವಾಗ ಮುಂದೆ ಹೀಗೆ ಆಗುತ್ತದೆ ಎನ್ನುವುದನ್ನು ಊಹಿಸಿಬಿಡಬಹುದಾದ ಸುಳಿವನ್ನು ಲೇಖಕರು ಅಲ್ಲಲ್ಲಿ ಬಿಟ್ಟುಕೊಡುತ್ತಾರೆ. ಹಾಗೆ ಬಿಟ್ಟುಕೊಡುವುದರಿಂದ ಕತೆಗಳ ತಿರುಳು ಮೊದಲೇ ತಿಳಿದುಬಿಡುವುದರ ಸಂಭವನೀಯತೆ ಇರುತ್ತದೆ. ಹಾಗೆ ಆಗದಂತೆ ಶಶಿಯವರು ಎಚ್ಚರ ವಹಿಸಬೇಕು.

“ದೇವಿ” ಕತೆಯಲ್ಲಿ ಅರ್ಧ ಕತೆಯಲ್ಲಿ ಒಂದು ಪಾತ್ರದ ಹೆಸರು ಶಾಂತಕ್ಕ ಎಂದಾಗಿದ್ದು ನಂತರದಲ್ಲಿ ಶಾರದಕ್ಕ ಎಂದಾಗಿದೆ. ಹಾಗೆಯೇ ಇಡೀ ಕತೆಯ ಪುಟಗಳ ತುಂಬೆಲ್ಲಾ ಯೇಲು ಎಂಬ ಪದ ಅದೆಷ್ಟು ಬಾರಿ ಬಂದಿದೆಯೋ ಲೆಕ್ಕವಿಲ್ಲ. ಅಷ್ಟೊಂದು ಸಲ ಹಾಗೆ ಬರೆಯುವ ಅವಶ್ಯಕತೆ ಇರಲಿಲ್ಲ ಅನಿಸುತ್ತೆ. “ವೊಸ್ತಡ್ಕು” ಕತೆಯ ಪುಟ ೮೨-೮೩ ಅನ್ನು ಮತ್ತೊಮ್ಮೆ ಓದಿಕೊಂಡು ದೇವಸ್ಥಾನದ ವಿಚಾರವಾಗಿ ಗೋಜಲು ಗೋಜಲಾಗಿ ಬರೆದಿರುವ ವಿವರಗಳನ್ನು ಎಡಿಟ್ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ. “ಬ್ಯಾಟೆಮರ” ಕತೆಯಲ್ಲಿ ಇದ್ದಕ್ಕಿದ್ದ ಹಾಗೆ ಬರುವ ಲೋಕಿ ಪಾತ್ರ, “ಶಿವಣ್ಣ” ಕತೆಯಲ್ಲಿ ಶಿವಣ್ಣನ ಪಾತ್ರ ಹೊಲದಿಂದ ಮನೆಗೆ ಬರುವಷ್ಟರಲ್ಲಿ ಇದ್ದಕ್ಕಿದ್ದಂತೆ ಸಿಟ್ಟು ಮಾಡಿಕೊಂಡಿರುವುದು ಇತ್ಯಾದಿಗಳನ್ನು ಲೇಖಕರು ಬೇರೆ ರೀತಿ ಪ್ರಸ್ತುತಪಡಿಸಬಹುದಿತ್ತೇನೋ ಅನಿಸಿಬಿಡುತ್ತದೆ. ಹಾಗೆಯೇ “ಬ್ಯಾಟೆಮರ” ಕತೆಯಲ್ಲಿ ಹಂದಿ ಮಾಂಸ ನೀಲಕ್ಕನ ಮನೆಯ ಆಹಾರವಾಗಿತ್ತು ಎಂಬುದನ್ನು ಹೇಳುವ ಮೂಲಕ ಹಾಸನ ಭಾಗದ ತಳಸಮುದಾಯದ ಮಾಂಸಾಹಾರ ಪದ್ದತಿಯ ಮೇಲೆ ಒಂದಷ್ಟು ಬೆಳಕು ಚೆಲ್ಲುವ ಪ್ರಯತ್ನ ಮಾಡಿರುವ ಲೇಖಕರು, ತಳಸಮುದಾಯದ ಆಹಾರ ಪದ್ದತಿಗಳ ಮೇಲೆ ಇನ್ನೊಂದಷ್ಟು ರೀಸರ್ಚ್ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ.

ಬ್ಯಾಟೆಮರ ಅಥವಾ ಕಕ್ಕೆ ಗಿಡದ ತುಂಬಾ ದೊಡ್ಡ ಮರವೇನಲ್ಲ. ಅದರ ಆಕಾರ ಹೇಗಿರುತ್ತದೆ, ಎಲೆಯ ರಚನೆ, ಕಾಂಡದ ಆಕಾರ, ಚಿನ್ನದ ಬಣ್ಣದ ಹಳದಿ ಹೂಗಳ ಸೌಂದರ್ಯ ಹೇಗಿರುತ್ತದೆ ಎಂಬುದನ್ನು ಮುಖಪುಟ ಕಲಾವಿದರಿಗೆ ಮನದಟ್ಟು ಮಾಡಿಸಿದ್ದರೆ ಒಂದೊಳ್ಳೆ ಬ್ಯಾಟೆಮರದ ಮುಖಪುಟ ಆಗುತ್ತಿತ್ತು. ಹೀಗೆ ಪುಸ್ತಕದಲ್ಲಿ ತಿದ್ದುಕೊಳ್ಳಬಹುದಾದ ವಿಷಯಗಳನ್ನು ಕುರಿತು ಹೇಳುತ್ತಾ ಹೋದರೆ ಅನೇಕ ವಿಷಯಗಳನ್ನು ಹೇಳಬಹುದು. ಸದ್ಯ ಇಷ್ಟು ಸಾಕು ಅನಿಸುತ್ತೆ.

ಒಟ್ಟಿನಲ್ಲಿ, ಈ ನೆಲದ ಕತೆಗಳಿಗೆ ಅಕ್ಷರದ ರೂಪಕೊಟ್ಟಿರುವ ಶಶಿಯವರು ಪುಸ್ತಕದ ಭಾಷೆಯ ಲಾಲಿತ್ಯಕ್ಕೆ, ಕಥಾಹಂದರಕ್ಕೆ, ಕಥನಕಟ್ಟುವಿಕೆಗೆ, ಸಂಭಾಷಣೆಯ ಶೈಲಿಗೆ ಅಭಿನಂದನಾರ್ಹರು. ಸಿನಿಮಾ ರಂಗದವರೂ ಆದ ಶಶಿಯವರು ಕಥಾಸಂಕಲನ ತಂದಿರುವುದು ಅವರ ಬರವಣಿಗೆಯನ್ನು ತಾವೇ ಒರೆಗೆ ಹಚ್ಚಿ ನೋಡಿಕೊಳ್ಳಲು “ಬ್ಯಾಟೆಮರ” ಪುಸ್ತಕ ಒಂದು ಸದಾವಕಾಶ ಎನ್ನಬಹುದು. ಶಶಿಯವರು ಚೊಚ್ಚಲ ಪ್ರಯತ್ನವಾಗಿ ಮೂಡಿ ಬಂದಿರುವ ಬ್ಯಾಟೆಮರ ಅನೇಕ ಕನ್ನಡ ಓದುಗರನ್ನು ತಲುಪಲಿ. ಶಶಿಯವರ ಇನ್ನೂ ಅನೇಕ ಕತೆಗಳನ್ನು ಓದುವ ಹಾಗು ಅವರ ಸಿನಿಮಾಗಳನ್ನು ನೋಡುವ ಭಾಗ್ಯ ನಮ್ಮದಾಗಲಿ ಎಂದು ಹಾರೈಸುತ್ತೇನೆ.

ಡಾ. ನಟರಾಜು ಎಸ್ ಎಂ

ಕೃತಿ: ಬ್ಯಾಟೆಮರ (ಕಥಾಸಂಕಲನ)

ಲೇಖಕರು: ಎ ಎಸ್ ಜಿ (ಶಶಿಕುಮಾರ್ ಎ ಎಸ್)

ಬೆಲೆ: ರೂ.180/-

ಪ್ರತಿಗಳಿಗಾಗಿ ಸಂಪರ್ಕಿಸಿ: 7019646201


ಕನ್ನಡದ ಬರಹಗಳನ್ನು ಹಂಚಿ ಹರಡಿ
5 4 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x