ನಿನ್ನ ಹೃದಯದರಸಿಯ ವಂದನೆಗಳು
ನಾನು ನಿನ್ನ ಕುರಿತಾಗಿ ಬರೆದದ್ದು, ಏಳನೇ ತರಗತಿಯಲ್ಲಿ ಓದುತ್ತಿದ್ದಾಗ. ವಯಸ್ಸು ಅಂತಹದ್ದಲ್ಲ ಮನಸ್ಸು ಬಯಸಿರಲಿಲ್ಲ, ಬರೆದ ಸಾಲುಗಳು ನನಗೆ ವಿಚಿತ್ರವೂ, ಬರೆದವಳು ನಾನೇನ? ಎನ್ನುವಂತಿದ್ದವು. ಯಾರ ಕಣ್ಣಿಗೂ ಬೀಳ ಬಾರದು ಎಂದು ಮುಚ್ಚಿ ಮುಚ್ಚಿ ಇಟ್ಟರೂ, ಬರೆದ ಸಾಲುಗಳು ತಾವೇ ತೆರೆದು ಕೊಳ್ಳು ತ್ತಿವೆ ಎನ್ನುವಂತೆ ಭಾಸವಾಗುತ್ತಿತ್ತು. ಗೆಳತಿಯರು ಸುಮ್ಮನೆ ಇದ್ದಾರೆ, ಮುಚ್ಚಿ ಇಟ್ಟದ್ದನ್ನು ಕೆಣಕಿ ತೆಗೆಯುವ ಗಟ್ಟಿಗಿತ್ತಿಯರು. ತೆಗೆದು ಓದಿ ನನ್ನನ್ನು ನಿನ್ನನ್ನು ಹೋಲಿಕೆ ಮಾಡಿ ಜೋಡಿ ಮಾಡಿಬಿಟ್ಟರು. ಅಷ್ಟಕ್ಕೂ ನಿನ್ನನ್ನು ಕಂಡರೆ ನನಗೇನು ಭಾರಿ ಕುತೂಹಲ, ಹಂಬಲ, ಒಲವು, ಇರಲಿಲ್ಲ. ಆದರೂ ನಿನ್ನ ನೋಡಿದಾಗ ನನ್ನಲ್ಲಿ ನನಗೆ ಅರಿವಿಲ್ಲದಂತೆ ಏನೇನೋ ಬದಲಾವಣೆ . ನನಗೆ ಹೇಗೆ ಬೇಕೋ ಹಾಗೆ ನಿನ್ನನ್ನು ಸುಂದರವಾಗಿ ನನ್ನ ಸಾಲುಗಳಲ್ಲಿ ಬರೆಯುತ್ತಿದ್ದೆ. ನನ್ನ ಗೆಳತಿಯರು ಹಾಗೆ ಬರೆ, ಹೀಗೆ ಬರೆ, ಅದಕ್ಕೆ ಹೋಲಿಸು, ಇದಕ್ಕೆ ಹೋಲಿಸು ಎಂದು ಬರೆಯಲು ಉತ್ಸಾಹ ತುಂಬುತ್ತಿದ್ದರು.
ಏಳನೆಯ ತರಗತಿ ಮುಗಿಯಿತು, ಶಾಲೆ ಬದಲಾಯ್ತು, ಗೆಳತಿಯರು ಬದಲಾವಣೆ, ನೀನೂ ಸ್ವಲ್ಪ ಬದಲಾದಂತೆ ಅನಿಸಿತು. ನಿಜವೂ ನಾನು ಬದಲಾದಂತೆ. ನನಗೆ ಈ ಪ್ರೇಮಿಗಳ ದಿನದ ಕುರಿತಾಗಿ ತಿಳಿಯದು. ಪ್ರೇಮ ನಿವೇದನೆಗಾಗಿ ತಯಾರಿ ನಡೆಸಿದ್ದೆ, ಆದರೆ ಅದಕ್ಕಾಗಿಯೇ ಒಂದು ದಿನ ಮೀಸಲಿಟ್ಟು, ಆಚರಣೆ ಮಾಡುತ್ತಾರೆ ಎಂಬುದು ತಿಳಿಯದು. ಏನೇ ಕಂಡರೂ ಉಪಮಾನ ಉಪಮೆಯ ನೀನೇ. ಇಂದ್ರ ಚಂದ್ರ ನಿಗೆ ನಿನ್ನನ್ನು ಹೋಲಿಸಿ ಬರೆದ ನಾನು,, ಇದುವರೆಗೂ ಅವರನ್ನು ಕಣ್ಣಾರೆ ನೋಡಿಲ್ಲ. ಇದಕ್ಕಿಂತ ಹೆಚ್ಚು ಸಾಕ್ಷಿ ಬೇಕಿಲ್ಲ ಪ್ರೀತಿ ಕುರುಡು ಎನ್ನಲು. ನೀನು ನನ್ನೊಳಗೆ ಇರುವ ಒಂದು ಶಕ್ತಿ. ಏಳನೇ ತರಗತಿಯ ಬಾಲೆ ನಾನು ನನ್ನಲ್ಲಿ ನೀನು ಅದೇನೂ ಕಂಡೆ? ನೀನೇ ಸೆಳೆದೆ ಎನ್ನುವಕ್ಕಿಂತ ನಾನೇ ನಿನ್ನ ವಿಶಾಲವಾದ ಬಾಹುಗಳನ್ನು ಬಿಗಿದಪ್ಪಿ ಕೊಂಡೆ ಎನ್ನುವುದು ಸೂಕ್ತ ಏನೋ. ಈ ಪ್ರೀತಿ ಎಂಬುದರಲ್ಲಿ ನಾನೇನು ಪರಿನಿತಳು ಅಲ್ಲ ಪ್ರೌಢ ಳು ಅಲ್ಲ, ಅದರಲ್ಲೂ ನಿನ್ನ ಮೇಲೆ ಇಷ್ಟೊಂದು ಪ್ರೀತಿ ಎಂದರೆ ಜಗತ್ತು ನಂಬದು.
ನೀನೇ ಹೇಳು ನನ್ನ ಸಾಮ್ರಾಜ್ಯದರಸ , ನನ್ನ ಕನಸಿನ ರಾಜ, ನನ್ನ ಹೃದಯದ ಭಾವನೆಗಳ ಮಹಾಪೂರ ನೀನೇ ಹೇಳು. ಬಯಸಿ ಬರೆದದ್ದು ತಪ್ಪೇ ಊಹಿಸಿ ಬರೆದದ್ದು ತಪ್ಪೇ ? ಯಾಕೋ ನೀನು ನನ್ನ ನಿರ್ಲಕ್ಷಿಸುತ್ತಿರುವೆ. ಅದೇ ಕಾರಣ ವೇ ಏನೋ ನಾನು ನಿನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದೇನೆ. ನಿನ್ನದೇ ಧ್ಯಾನ ನಿನ್ನದೇ ಭಾವ, ಆದರೂ ಬರೆಯಲು ಉತ್ತಮ ಸಾಲುಗಳ ಅಭಾವ. ಕಾರಣ ನೀನೇ ಹೇಳು. ಬಹಳ ದಿನಗಳ ನಂತರ ನನ್ನ ನಿನ್ನ ಭೇಟಿ ನನಗೆ ಅಪಾರ ಆನಂದ, ಆದರೆ ಬೇಸರ. ನೀನು ನೇರವಾಗಿ ನನ್ನಲ್ಲಿಗೆ ಬರದೇ ಮಧ್ಯವರ್ತಿಗಳ ಮೂಲಕ ನನ್ನಲ್ಲಿ ನಿನ್ನ ಇರುವಿಕೆಯನ್ನು ನೆನಪಿಸಿ ದೆಯಲ್ಲ? ನಾನೇನು ಮರೆತಿರಲಿಲ್ಲ, ಒಂದೊಳ್ಳೆ ಸಮಯಕ್ಕಾಗಿ ಕಾಯುತ್ತಿದ್ದೆ ಪ್ರೇಮ ನಿವೇದನೆ ಮಾಡಲು. ನಿನ್ನ ಬಗ್ಗೆ ನನ್ನಮ್ಮನ ಹತ್ತಿರ ಮಾತನಾಡಲು ಹಲವು ಬಾರಿ ಪ್ರಯತ್ನ ಪಟ್ಟಿದ್ದೆ, ಸಮಯ ಸರಿಯಾಗಿ ಇಲ್ಲವೇನೋ? ನಮ್ಮಿಬ್ಬರ ಜೋಡಿ ಮೋಡಿ ಮಾಡಿದರೆ ಚೆನ್ನ ಇಲ್ಲದಿದ್ದರೆ ಬೇಡಿ ಯಾರಿಗೆ ಬೇಕು? ಮೌನಿ ಆದೆ ನಾನು.
ನಾನು ಈಗ ಪ್ರೌಢಳು ವಿಚಾರವಂತ ಹಾಗೂ ಬುದ್ಧಿ ತಿಳಿದವಳು. ಇನ್ನೂ ನನ್ನಿಂದ ಬಚ್ಚಿಡಲು ಸಾಧ್ಯವಿಲ್ಲ, ಈ ಲೋಕಕ್ಕೆ ನೀನು ನನ್ನವನು, ನನ್ನ ಬಾಳ ಪಯಣದ ಜೊತೆಗಾರ ನೆಂದು ತೋರಿಸುವ ಸುಸಮಯ ಬಂದಿದೆ. ನೀನೂ ಸಜ್ಜಾಗಿರುವ ಹಾಗಿದೆ. ಈ 10-15 ವರ್ಷ ಗಳಲ್ಲಿ ನೀನು ಸದ್ದು ಮಾಡಿದ್ದು ನಾನು ಬರೆದ ಮೊದಲ ಒಂದು ಕವನ ದಲ್ಲಿ ಮಾತ್ರ. ಇನ್ನಾದರೂ ಕರುಣೆ ತೋರಿ ಬಾ ಓ ನನ್ನ ನಲ್ಲ. ಪ್ರೀತಿಯೋಡೆದು ವರುಷ ವರುಷ ಗಳು ಕಳೆದರೂ ಇನ್ನೂ ನಮ್ಮಿಬ್ಬರ ಪ್ರೀತಿ ಪೂರ್ವಕ ಭೇಟಿ ಆಗಿಲ್ಲವೆಂದರೆ ನನಗೆ ನಂಬಲಾಗುತ್ತಿಲ್ಲ. ಏಳನೇ ತರಗತಿಯ ಬಾಲೆಯಾಗಿದ್ದಾಗ ನೀನು ನನ್ನನ್ನು ಗುರುತಿಸಿ ಕಾರಣವೇ ಇಂದು ನಾನು ಏನು ಎಂದು ನನಗೆ ತಿಳಿದಿದ್ದು, ನಿನಗೆ ಕೋಟಿ ನಮನಗಳು. ನಿನ್ನ ಪ್ರೀತಿಯ ಹಾದಿಯಲ್ಲಿ ನನಗೆ ಸಹಾಯ ಮಾಡಿದ ಶಿಕ್ಷಕರ ಸಾಲುಗಳು ಇಂದಿಗೂ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿವೆ.
“ಭಾವನೆಗಳ ಬಸುರಿಗೆ
ಕನಸಿನಲ್ಲಿ ಹೆರಿಗೆ
ಇದು ಕವಿಯ ಮನವಂತೆ”
ನಿಜಕ್ಕೂ ಅರ್ಥ ಪೂರ್ಣವಾದ ಸಾಲುಗಳು. ಏಳನೇ ತರಗತಿಯ ಬಾಲೆಯಾಗಿದ್ದಾಗ ನಾನು ನಿನ್ನ ಕೂಸು ಆಗಿದ್ದೆ, ಈಗ ನಾನು ಮೂರು ಮಕ್ಕಳ ತಾಯಿ ಆಗಿಯೂ ಮೊದಲ ಕೂಸಿನ ನಿರೀಕ್ಷೆಯಲ್ಲಿರುವೆ. ನಮ್ಮಿಬ್ಬರ ಪ್ರೀತಿ ಯಾವ ಗಂಡು ಹೆಣ್ಣಿನ ಪ್ರೀತಿ ಗೂ ಕಡಿಮೆ ಇಲ್ಲ, ಒಂದು ಹೆಜ್ಜೆ ಮುಂದು ಅಲ್ಲವೇ? ಎಲ್ಲರಿಗೂ ನಿನ್ನನ್ನು ಪರಿಚಯಿಸುವ ಕಾಲ ಬಂದಿದೆ ನೀನು ಬೇರೆ ಯಾರೂ ಅಲ್ಲ ನನ್ನ ಹೃದಯ ಮಂದಿರದಲ್ಲಿ ಕುಳಿತ ಆರಾಧ್ಯ ದೇವರು ನೀನೇ ನನ್ನ “ಕವಿ ಹೃದಯ”. ಎಲ್ಲರಿಗೂ ನಿನ್ನ ಪರಿಚಯಿಸುವೆ ಒಂದು ಸುಂದರ ಕಾದಂಬರಿ ಯೊಂದಿಗೆ.
ವಂದನೆಗಳೊಂದಿಗೆ
ಇತಿ ನಿನ್ನ
ಲವಿನಾ