ಪುಟ್ಟ ಕಾಫಿ ಕಪ್ ನಲ್ಲೂ ಕಡಲಷ್ಟು ಸ್ವಾದವಿದೆ: ಕಿರಣ ದೇಸಾಯಿ

ನನ್ನೊಲವಿಗೆ….
ಏನೆಂದು ಸಂಬೋಧಿಸಲಿ….? ಜಾನು, ಡಿಯರ್, ಹೃದಯದ ಒಡತಿ.. ಮುದ್ದು ಗೆಳತಿ.. ಪ್ರೇಮಪತ್ರಕೆ ಒಕ್ಕಣೆ ಬೇಕೆ ? ಒಲವಿದ್ದರಷ್ಟೆ ಸಾಕಲ್ಲವೇ.. ? ಹೌದು ಶಾಲೆಯಲ್ಲಿ ಪತ್ರಲೇಖನಗಳ ಕಲಿಸುತ್ತಾರೆ ಅದಕೊಂದಿಷ್ಟು ನಿಯಮಗಳು ಅದಕ್ಕೆ ಮಾರ್ಕ್ಸು ಪ್ರೇಮಪತ್ರಕ್ಕೆನು ನಿಯಮವಿಲ್ಲ ಒಲವು ತುಂಬಿ ಬರೆದ ಪದಗಳೆ ಇಲ್ಲಿ ಅಂಕವನ್ನು ನಿರ್ಧರಿಸುತ್ತವೆ…ಆ ಅಂಕ ಕೊಡುವ “ಸ್ಟ್ರಿಕ್ಟ ಟೀಚರ್” ನನಗಿಗ.. ನನ್ನೊಲವಿನ ಹೋಮವರ್ಕು ನಿನ್ನ ಮುಂದೆ ಹಿಡಿದು ನಿಂತಿರುವೆ ನಿನ್ನ ವಿಧೇಯ ವಿದ್ಯಾರ್ಥಿಯಂತೆ.. ಓದು ಅಂಕನೀಡು… ಹಾಹಾ..ವಿಷಯಕ್ಕೆ ಬರ್ತಿನಿ… ಬೇಸಿಗೆಯ ಬಿಸಿಲಿಗೆ ಮಾಡಿಟ್ಟ ಅಟ್ಟದ ಮೇಲೆ ಹಳೆಯ ಸೀರೆಯ ಗಂಟಲಿ ಬೆಚ್ಚಗೆ ಕುಳಿತ ಶಂಡಿಗೆಗಳು ಮಳೆಗಾಲದಲ್ಲಿ ಬಿಸಿ ಎಣ್ಣೆಯಲ್ಲಿ ಮುಳುಗೆದ್ದು ಕುರುಕುರು ಸದ್ದು ಮಾಡುವಂತೆ… ನಾನು ಒಂದಿಷ್ಟು ನೆನಪುಗಳ ಒಟ್ಟುಗೂಡಿಸಿ ಹೀಗೊಂದು ಪ್ರೇಮಪತ್ರ ಬರೆಯುತ್ತೆನೆ ಎಂದುಕೊಂಡಿದ್ದೆನೆ ಇಲ್ಲವೊ..? ಅಂತೂ ಇವತ್ತು ಆ ಮನದ ಅಟ್ಟದ ಮೇಲಿಟ್ಟ ಒಲವಿಗೊಂದಿಷ್ಟು ಸದ್ದು ಕೊಟ್ಟಿರುವೆ…

ಅದೆಷ್ಟು ವ್ಯಕ್ತಿತ್ವಗಳು ನಿನ್ನಲ್ಲಿ! ಹುಬ್ಬು ಗಂಟಿಕ್ಕಿ ಸುಳ್ಳು ಸುಳ್ಳೇ ಕೋಪಿಸಿಕೊಳ್ಳುವ ರೀತಿ, ಬಣ್ಣಗಳ ಕಂಡಾಗ ನಿನ್ನ ಕಂಗಳು ಅರಳುವ ರೀತಿ, ಭಾವಲಹರಿಯಲ್ಲಿ ಮಾತನಾಡುತ್ತ ನೀನು ಕಳೆದುಹೋಗುವ ರೀತಿ, ಮೂಗಿನ ತುದಿ, ಗಲ್ಲಕೆಲ್ಲ ಮೆತ್ತಿಕೊಂಡು ನೀನು ಐಸ್‌ಕ್ರೀಂ ತಿನ್ನುವ ಪರಿ. ಸಂಜೆಯ ಹೊತ್ತಲ್ಲಿ ಸೂರ್ಯನಿಳಿಯುವ ಮತ್ತಲ್ಲಿ ಪಾನಿಪುರಿಯೆ ಬೇಕೆಂಬ ನಿನ್ನ ಹಠ ದಿನವು ಅದೆ ತಿನ್ನೊದು ಸರಿನಾ ಅಂದ್ರೆ… “ದಿನಾ ತಿಂತಿನಿ ಹತ್ತಸಲಾ ತಿಂತಿನಿ ಏನಿವಾಗ..? ಸುಮ್ಕೆ ಕೊಡಿಸಿದ್ರೆ ಸರಿಯಿಗಾ ಎನ್ನೊ ಜೋರು.. ಕೊನೆಗೆ ಕೊಡಿಸಿದಾಗ ಹೀ…. ಅಂತಾ ಹಲ್ಲಗಿಂಜಿ ನನ್ನ ತಲೆಗೆ ಮೊಟಕಿ “ಕೊಡಿಸು ಅಂದ್ರೆ ಕೊಡಿಸೊದೆ ಇಲ್ಲ” ಎನ್ನುತ್ತ ಮಗುತರಾ ನಗೋದು.. ಮುಗಿಯದ ಮಾತುಗಳು, ಹಂಚಿಕೊಂಡರು ಉಳಿಯುವ ಕನಸುಗಳು, ಒಂದಿಷ್ಟು ನೋವು-ನಿರಾಶೆಗಳು ನಮ್ಮವರಿಂದಲೆ ಆದ ಅವಮಾನಗಳ ನೆನೆದು ಅದು ಇದು ಜಗಳವೆಲ್ಲ ಮುಗಿದು, ಒಂದು ಸುತ್ತು ಅತ್ತಾದ ಮೇಲೆ ಮಗುವಿನಂತೆ ನನ್ನ ಎದೆಗೆ ಅಪ್ಪಿಕೊಳ್ಳುವುದು. ಕೆಲವೇ ತಿಂಗಳುಗಳಲ್ಲಿ ಅದೆಷ್ಟು ನೆನಪುಗಳ ಕಟ್ಟಿಕೊಟ್ಟುಬಿಟ್ಟೆ ಹುಡುಗಿ!

ನೀ ಮಾಡೋದೆ ಚಂದ
ಅರಳು ಹುಣ್ಣಿಮೆಯೊಂದು
ಹೂತೆಕ್ಕೆಗೆ ಬಿದ್ದು ಮುದ್ದಿಸಿದಂತೆ

“ನೀನೆಂದರೆ ನನ್ನೆದೆಯೊಳಗೊಂದು ಸದ್ದಿಲ್ಲದ ಹೋಳಿ ಸಂಭ್ರಮವೆ”

ಕಾಫಿ ಕಪ್ಪಿನ ಮೊದಲ ಗುಟುಕಿನ ನಿನ್ನ ಕಿರುನಗೆಯಿಂದಲೆ…ಇಷ್ಟೆಲ್ಲ ಆದದ್ದು… ಆವತ್ತು ಸವಿದ ಆ ಕಾಫಿ ಇವತ್ತಿಗೂ ತನ್ನ ಸ್ವಾದವನ್ನು ನೆನಪಿಸುತ್ತಲೆ ಇರುತ್ತದೆ… ಕಾಫಿಯನ್ನೆನೊ ನಿನ್ನ ತುಟಿಗಳು ಹೀರುತ್ತಿದ್ದರೆ ನಿನ್ನ ಕಣ್ಣುಗಳು… ಅಬ್ಬಾ..! ನನ್ನನೆ ಒಳಗಿಳಿಸಿಕೊಳ್ಳುತ್ತಿದ್ದವು ಆವತ್ತೆ ನನ್ನ ಪಯಣ ಆರಂಭವಾದದ್ದು ನಿನ್ನ ಹೃದಯದೂರಿನ ಕಡೆಗೆ… ನನಗೆ ಬರೆಯುವ, ಹುಚ್ಚು… ನಿನಗೆ ಓದುವ ಹುಚ್ಚು, ಸರಿಯಾಗಿ ಸಿಕ್ಕಂತಾಯಿತು ಇಬ್ಬರು ಮೊದಲೆಲ್ಲ ಯಾರಯಾರಿಗೊ ಬರಿತಿದ್ದವನು ನಿನ್ನ ಚೆಲುವನು ಒಲವನ್ನು ಟೆಂಡರ್ ತುಗೊಂಡು ಬಿಟ್ಟೆ ಬರೆದಿದ್ದೆಲ್ಲವು ನಿನಗಾಗಿಯೆ… ನಿನ್ನೊಲವಿಗಾಗಿಯೆ. ನಾನು ಬರೆದಿರುವೆ ಎನ್ನುವದಕಿಂತ ನೀನು ಬರೆಸಿಕೊಂಡಿದ್ದೆ ಹೆಚ್ಚು ನಾಲ್ಕು ಸಾಲಿನ ಚುಟುಕಿನಿಂದ ಆರಂಭವಾದ ಈ ಪಯಣ ಕವನ, ಕವಿತೆ ಗದ್ಯ ಕಾದಂಬರಿ, ಅನುಭವ ಕಥನಗಳೆ ಬರೆದುಬಿಟ್ಟೆನಲ್ಲಾ…

ಅಬ್ಬಾ…!! ಅದೆಂತ ಸ್ಪೂರ್ತಿ ಕೊಟ್ಟೆ ನೀನು….ಬಾಚಿಕೊಂಡಷ್ಟು ಉಳಿಯೋದು.. ಉಳಿದಷ್ಟು ಹೆಚ್ಚೊದು..ಅದನ್ನೆ ನಾ ಮತ್ತೆ ಮತ್ತೆ ಹೊಸರೂಪಕೊಟ್ಟು ಬರೆಯೋದು ನಿನ್ನ ಚೆಲುವಿನ ಕಣ್ಣೊಟದಲ್ಲೆ ನನ್ನ ದೋಚಿಕೊಂಡು ಬಿಟ್ಟೆಯಲ್ಲಾ…
ತಂಗಾಳಿಗೆ ಹಾಯಾಗಿ ಹಾರುವ ಆ ಕೇಶಗಳ ಸುರುಳಿಗಳು ಆಗಾಗ ನಸುನಾಚುವ ಕೆನ್ನೆಗಳು ನಾನೆ ಕೊಡಿಸಿದ್ದು ಎಂದು ಹೇಳಲು ತೂಗುವ ಆ ಕಿವಿಯೊಲೆಗಳು ಬಾರಿಬಾರಿ ಬೆರಳಿನಿಂದ ಕಿವಿಯಾಚೆ ನೀನು ನೂಕುವ ಮುಂಗುರುಳು ಚೂರು ಬಲಕ್ಕೆ ತುಟಿಗಳ ಜಗ್ಗಿ ನೀ ನಗುವ ಆ ಕಿರುನಗೆ.. ನೀನುಡುವ ಬಟ್ಟೆಗಳಿಗೂ ನಿತ್ಯ ಹಬ್ಬವೆ ಹಾಗಿರುವ ನಿನ್ನ ಮೈಮಾಟ ಕವಿಕಣ್ಣಿಗೆ ಕಾಣುವ ದೇವತೆ ನೀನು… ಆರಾಧಕನಾಗಿಬಿಟ್ಟೆ

“ನಿನ್ನಂದವನು
ಬಣ್ಣಿಸಲೆಂದೆ
ಬಂದೆ….
ಅದೆಗೊ ನೀನಾಗಲೆ
ನನ್ನೊಳಗಿನ
ಕವನದ ಸಾಲುಗಳ
ಕದ್ದೆ…”

ಆದರೆ ಇಬ್ಬರೂ ತುಟಿಪಿಟಕ್ಕೆನ್ನಲೆ ಇಲ್ಲ ಒಲವಾಗಿ ಚಿಗುರಿದ್ದರು..ಹೃದಯಗಳು ಕದ್ದುಮುಚ್ಚಿ ಮಾತಾಡಿದ್ದರೂ.. ಹೀಗೆ ಸಾಗುತಲೆ ಇದೆ ಇದು ಅದಕ್ಕಿಗ ಜೀವ ಕೊಡಲೆಂದು ಈ ಪತ್ರ ನಿನಗಾಗಿ ಬರೆಯುತಿರುವೆ ಓದಿಕೋ. ಪುಟ್ಟ ಮಗುತನ, ಅಷ್ಟೆ ಅಲ್ಲೊಂದು ತಾಯ್ತನವಿತ್ತು, ಗೆಳೆತನ ಪರಿಶುದ್ಧ ಗಂಗೆ, ಪ್ರೀತಿ ಸ್ವಚ್ಛವಾಗಿ ಹರಿಯುವ ಕಾವೇರಿ.. ಅಂದಕೆ ಸುಂದರ ಯೌವನ ಚೆಲುವಿಗಿಳಿದ ಈ ಧರೆಯ ರಾಯಭಾರಿ ಹಾಗೆ ಅಲ್ಲೊಂದು ಜವಾಬ್ದಾರಿಯುತ ಹೆಣ್ತನವಿತ್ತು. ನಿನ್ನಲ್ಲಿ..ಕೋಟಿಕನಸುಗಳ ತಲ್ಲಣವಿತ್ತು.. ತುಂಟತನಗಳೊಂದಿಗೆ ಬದುಕು ತುಂಬುವ ದೀಪದ ಬೆಳಕಿತ್ತು. ಮನಸು ವಿಶಾಲವಾದ ಸಾಗರ..ಗುಣ ಅಪ್ಪಟ ಕ್ಷಮಯಾ ಧರಿತ್ರಿ ಯಾರ ಬಗ್ಗೆಯು ಅಸೂಹೆ, ದ್ವೇಷವನ್ನೆ ನಾ ಕಾಣಲಿಲ್ಲ ( ಅದೆಲ್ಲ ಹೆಣ್ಣಿಗೆ ಸಹಜ ಅಂತಾರೆ ಆದರೆ ನಿನಗದರ ಸುಳಿವೆ ಇಲ್ಲವಲ್ಲ). ಎಲ್ಲವನು ಚರ್ಚಿಸೋಕೆ ಒಂದು ನಿನ್ನದೆ ಪ್ರತಿರೂಪದ ಮನಸು ಬೇಕಿತ್ತು ನಿನಗೆ ಹಾಗೂ ನಿನ್ನತನವನ್ನು ಹಂಚಿಕೊಳ್ಳಲು ನಂಬುಗೆಯ ಹೃದಯದ ಅವಶ್ಯಕತೆ ಇತ್ತು… ಗೊತ್ತು ನಿನ್ನ ನನ್ನ ಗೆಳೆತನದಲ್ಲಿ ನಾ ಅರ್ಥ ಮಾಡಿಕೊಂಡೆ ಈ ಎಲ್ಲವನ್ನು. ನೀ ಬರೆದಿರೋದನ್ನು ಓದಲು ಬಂದವ ನಾನು ನನ್ನನೆ ಬರೆಸೋಕೆ ಹಚ್ಚಿಬಿಟ್ಟೆ ಪುಟ್ಟ ಕಾಫಿ ಕಪ್ ನಲ್ಲೂ ಕಡಲಷ್ಟು ಸ್ವಾದವಿದೆ ಎಂದು ಅದರ ಗುಟುಕು ಮುಗಿಯದಂತೆ ಸವಿಯೋಕೆ ಹೇಳಿಕೊಟ್ಟೆ ಆ ಗುಟುಕಲಿ ನೀನೆ ಕಳೆದುಹೋದೆ, ನಾ ಲೀನವಾದೆ…..

ನೀನೆಂದರೆ…
ತುಂಟಕೆನ್ನೆಗಳ ಮೇಲೆ
ನಗು ಮೂಡಿ…
ರೆಪ್ಪೆಗಳು ಕಿರಣನ ಗುಡ್ಮಾರ್ನಿಂಗ ಓದಲು ಸಂಜೆ ಕೈಕಾಲು ಮುಖ ತೊಳೆದು ಮಕ್ಕಳು ಅಭ್ಯಾಸಕ್ಕೆ ಕೂತಂತೆ
ಕಣ್ಣುಗಳ ನಿತ್ಯ ಒಲವ ಹೋಮವರ್ಕು ಅದು..

ಫೈನಲಿ ಕಾಫಿ ಹಾಗೂ ಕಪ್ಪಿನ ತರಾ ಒಂದಾಗಿ ಬಿಟ್ಟೆವು ( ಗೊತ್ತಿಲ್ಲವೆನ್ನುತ್ತಲೆ ಅದೆಷ್ಟು ಗೊತ್ತಾಗಿಬಿಟ್ಟೆ ನೀನು )
ನೀನೊಂದು ಹೂವರಳಿದಾಗ ಕಂಡ ಮೊದಲ ನಗು
ಅದಿಗತಾನೆ ಬಿರಿದ ಮೊಗ್ಗು
ಸೂರ್ಯಕಿರಣಕೆ ಮೈಮುರಿದು
ನಸುನಾಚಿಕೆ ತೋರಿ ನಕ್ಕು ಗುಡ್ಮಾರ್ನಿಂಗ ಅಂತಾ ಪಕ್ಕದ ಹೂಗಳಿಗೆ ಹೇಳಿ ಎಬ್ಬಿಸಿದಂತೆ
ಎಲೆಗಳ ಹೊದಿಕೆ ಸರಿಸಿ ಗಿಡ ಓಹ್ ಎದ್ರಾ..? ಎಂದಂತೆ..

ನಿನ್ನೊಂದಿಗೆ ಕಳೆದ ಕ್ಷಣಗಳಂತೂ ಅತಿಮಧುರ ಸಾವಿರಹೂಗಳ ಮಕರಂದ ಜೇನಾಗುವಂತೆ ಲೆಕ್ಕವಿಲ್ಲದಷ್ಟು ಒಲವಿನ ಮಾತುಗಳು ಸವಿಸಿಹಿಯಾದವು. ಅದೆಷ್ಟು ನೋವುಗಳಿಗೆ ನೀನು ಔಷಧಿಯಾದೆ, ಅದೆಷ್ಟು ಏಕಾಂತಗಳ ಮರೆಸಿ ಸ್ನೇಹಿಯಾದೆ ತಪ್ಪುತಡೆ, ಅಸಹನೆ, ಗೊಂದಲ, ಕೋಪತಾಪಗಳ ಮರೆಸಿ ಒಡನಾಡಿಯಾದೆ, ನೋವಾದಾಗ ಮಡಿಲಾದೆ, ನಕ್ಕಾಗ ಬೆಳದಿಂಗಳ ಅಂಗಳವಾದೆ, ಎದೆಗಪ್ಪಿ ನಲ್ಲೆಯಾಗಲೆಕೆ ತಡ..? ಯಾವುದಕ್ಕೂ ಪರದೆ ಇರದೆ ಶರಧಿಯಾಗಿ ಧುಮ್ಮಿಕ್ಕೊಣ… ಹೆಣ್ಣು ಕೊರಗಿದರೆ ಜ್ವಾಲಾಮುಖಿಯಾಗುತ್ತಾಳೆ, ಕರಗಿದರೆ ಲೀನವಾಗುತ್ತಾಳೆ ಒಲವಲ್ಲಿ ನೀನು ಕರಗಿಬಿಟ್ಟೆ ಕಾರಣ ನಾ ಕೊಟ್ಟಿದ್ದು ಕೇವಲ ಪ್ರೀತಿಯಲ್ಲ ನೀನು ಚೆನ್ನಾಗೆ ಬದುಕಬಲ್ಲೆ ಎಂಬ ಭರವಸೆಯನ್ನ, ಎದ್ದು ನಿಲ್ಲಬಲ್ಲೆಯೆಂಬ ಧೈರ್ಯವನ್ನ ನಿನಗದರ ಅವಶ್ಯಕತೆ ತುಂಬ ಇತ್ತು..ನನಗೂ ಅದೆ ಬೇಕಿತ್ತು. ತುಂಬ ಹೇಳ್ತಿದಿನಾ….ಆಯ್ತು ಇನ್ನೊಂದು ಚೂರು ಇದೆ ಇರು ಮಾರಾಯ್ತಿ…ಕೊನೆಯ ಅಂಕಣ ಓದಿಬಿಡು…

ಮುಗಿಲಯಾನ ಮುಗಿಸಿ
ಹತ್ತಾರು ದೃಶ್ಯವೈಭವಕಂಡು
ಸಂಜೆ ದಣಿವಿಗೆ ಗೂಡು ಸೇರೋ ಹಕ್ಕಿ ಬೆಚ್ಚನೆಯ ಹುಲ್ಲಿನ ಮೇಲೆ ಮಲಗಿದಂತೆ ರಾತ್ರಿ ನೀ ಎದೆಯ ಮೇಲೆ ಮಲಗೋದು ನಾ ಸವಿಯಬೇಕಿದೆ…ನನ್ನೆದೆಲ್ಲವನು ನಿನ್ನೊಂದಿಗೆ ಹಂಚಿಕೊಳ್ಳಬೇಕಿದೆ…
ನಾ ಕಾದಿರುವೆ ತಳಿರು ತೋರಣದ
ನಗುವಿನ ಸ್ವಾಗತಕೆ
ಈಗ ನನ್ನ ನಯನಗಳಲಿ
ಹಬ್ಬದ ವಾತಾವರಣ…
ಇನ್ನೆನು ಸಿಹಿಯೂಟ
ಒಂದೆ ಬಾಕಿ.. ನೀನೊಪ್ಪಿ ನನನ್ನೊಲವಿಗೆ ಸಮ್ಮತಿಸಿದರೆ…
ಬದುಕು ಭರವಸೆಯ ಕಿರಣವಾಗಿ
ನಾವಿಬ್ಬರೂ
ಸವಿಯಬೇಕಷ್ಟೆ….

ಮೃಷ್ಟಾನ್ನ ತಯಾರಾಗಿದೆ…

ನಾನು ಕಾಯುತ್ತಿರುವೆ….

ಒಪ್ಪಿಗೆ ಸಿಕ್ಕೆ ಸಿಗುವದೆಂಬ ನಿರಿಕ್ಷೆಯಲ್ಲಿ….. ಸಿಕ್ಕರೆ

…..ಧನ್ಯ ನಾನು
ನಿನ್ನಲ್ಲಿ…ನಿನ್ನೊಲವಲ್ಲಿ…..

ಹೊಸಸಂಭ್ರಮ, ಹೊಸತನ ಹೊಸಕನಸು, ಎಲ್ಲವೂ ನನಸಾಗಲಿ ಜೊತೆಗಿರುವೆ, ಜೊತೆಗಿರು ಜೊತೆಯಾಗಿರೋಣ ಜೊತೆಗೆ ಸಾಗೋಣ…ಮತ್ತೆ ಮತ್ತೆ ಒಲವಾಗಿ ಬದುಕನು ಮರತಬ್ಬಿದ ಬಳ್ಳಿಯಂತೆ ಹಬ್ಬಿಕೊಳ್ಳೋಣ

-ಕಿರಣ ದೇಸಾಯಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x