ಪ್ರೇಮ ಪತ್ರಗಳು

ನಾನು ನಿನ್ನ ಹುಚ್ಚು ಪ್ರೇಮಿಯೇ ಆದರೆ…: ಜಗದೀಶ ಸಂ.ಗೊರೋಬಾಳ

ಪ್ರೀತಿಯ ಚಂದ್ರಕಲಾ,

ಹುಡುಕುತ್ತಾ ಹೋದ ನನ್ನಂತವನಿಗೆ ನಿನ್ನಂತ ಚೆಲುವೆ ಸಿಕ್ಕಿರಲಿಲ್ಲ.
ಎಷ್ಟು ಹುಡುಕಿದರೂ ನನಗೆ ನಿನ್ನಂತ ರೂಪವತಿ ದರ್ಶನವಾಗಿರಲಿಲ್ಲ.
ಹೃದಯದ ಬಡಿತ ನಾಟ್ಯವಾಡಿದೆ ಪ್ರೇಮದ ಮೊಗ್ಗು ಚಿಗುರಿದೆ
ಕನಸೊಂದ ಕಟ್ಟಿರುವೆ ಕೊಲ್ಲದಿರು ಗೆಳತಿ ಒಲವ ಸುಧೆಯನು ಹರಿಸು ಬಾ.

ನಿನ್ನ ಕಣ್ಣೋಟದ ಬಾಣ ನನಗೆ ತಾಕಿದಾಗಿನಿಂದ ನಾನು ನಿನ್ನ ಸೌಂದರ್ಯವೆಂಬ ಸವಿಯನ್ನು ಸವಿಯುತ್ತಾ ಹುಚ್ಚನಂತಾಗಿದ್ದೇನೆ. ನಿನ್ನ ಬೊಗಸೆ ಕಂಗಳ ಸೌಂದರ್ಯಕ್ಕೆ ಬೇರಿಲ್ಲ ಕಣೆ ಸಾಟಿ. ನನ್ನ ಹೃದಯ ಗೆದ್ದ ಚೆಂದದ ಚೆಲುವೆ ನೀನು. ಸಾವಿರ ಹೂಗಳ ಚೆಲುವು ನಿನ್ನ ಸೌದರ್ಯದ ಮುಂದೆ ಕಡಿಮೆಯೆ. ನಿನ್ನ ಹೊಳೆವ ಕಂಗಳು ಆಕಾಶದಿ ಮಿನುಗುವ ತಾರೆಗಳಿದ್ದಂತೆ. ಒಂದು ಕ್ಷಣ ನಿನ್ನ ನೋಡದೆ ಇದ್ದರೆ ಮನಸು ಮಂಕಾಗುತ್ತದೆ ಕಣೆ. ನಾನೂ ನೀನೂ ಜೊತೆಯಾದರೆ ಬದುಕು ಹಾಲು ಜೇನಿನಂತೆ ಒಂದು ಸುಂದರ ಪ್ರಪಂಚವಾಗುವುದರಲ್ಲಿ ಎರಡು ಮಾತಿಲ್ಲ. ನೀನು ನನ್ನ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿರುವೆ ಮತ್ತು ನನ್ನ ಜೀವನಕ್ಕೊಂದು ಹೊಸ ಚೈತನ್ಯ ನೀಡಿರುವೆ. ನನ್ನ ಜೀವನವೆಂಬ ಆಕಾಶದಲ್ಲಿ ನೀನೆ ಸೂರ್ಯ ನಾನೊಂದು ಗ್ರಹವಲ್ಲವೆ ಗೆಳತಿ. ಇಂದು, ನಾಳೆ, ಎಂದೆಂದೂ ನಾನು ನಿನ್ನ ಪ್ರೀತಿಸುವೆ. ನೀನೇ ನನ್ನ ಪ್ರಪಂಚ.

ಇಂದು ನಾನು ನಿನ್ನ ಪ್ರೀತಿಸುತ್ತಿರುವುದು ನಿಜ, ನೀನು ನನ್ನ ನಾಳೆಗಳಿಗೆ ಬೇಕು ಮತ್ತು ನನ್ನ ಉಳಿದ ಜೀವನದ ಅವಶ್ಯಕತೆಗೆ ನೀನು ಬೇಕು ನನ್ನೊಲವೆ. ನನ್ನ ಜೀವನಕ್ಕೆ ನೀನೆ ನಿಜವಾದ ಸಂಪತ್ತು. ನನ್ನ ಹೃದಯವೆಂಬ ವಿಶಾಲ ಸಾಗರದ ಬೆಲೆ ಬಾಳುವ ಮುತ್ತು ನೀನು. ನನ್ನೊಳಗಿನ ಪ್ರೀತಿ ಇಂದು ಹೃದಯವೆಂಬ ಭಾಷೆಯ ಅಕ್ಷರಗಳಾಗಿ ಹೊರಹೊಮ್ಮಿವೆ ಗೆಳತಿ. ಯಾರಲ್ಲೂ ಕಾಣದ ವ್ಯಕ್ತಿತ್ವವನ್ನು ನಿನ್ನಲ್ಲಿ ನಾನು ಕಂಡಿದ್ದೇನೆ. ಯಾರಲ್ಲೂ ಕಾಣದ ಸಂಸ್ಕಾರವನ್ನು ನಿನ್ನಲ್ಲಿ ನಾನು ಕಂಡಿದ್ದೇನೆ. ಮುದಗೊಂಡ ಮನಸಿಗೆ ಜೀವ ತುಂಬಿ ನಗು ತಂದಿರುವೆ ಸುಂದರಿ. ನನ್ನೆದೆ ಗೂಡಿನಲ್ಲಿ ನಿನ್ನನ್ನು ಜೋಪಾನವಾಗಿ ಇಟ್ಟು ನೋಡಿಕೊಳ್ಳುವೆ. ನನ್ನ ಕನಸಿನ ಸಾಮ್ರಾಜ್ಯಕ್ಕೆ ನೀನೆ ಮಹರಾಣಿ. ಹೆಣ್ಣು ಎಂದರೆ ಹೀಗಿರಬೇಕು ಎಂದು ನಾನು ನನ್ನ ಹೆತ್ತವರಿಗೆ ನಿನ್ನ ಗುಣಗಾನ ಮಾಡಿರುವೆ. ನೆಮ್ಮದಿಯ ನಾಳೆಗಳಿಗೆ ನೀನೇ ಸರಿಯಾದ ಜೊತೆಗಾತಿ ಎಂಬುದು ಅವರ ಅಭಿಮತ. ಗರಿಗೆದರಿ ಹಾರಾಡುವ ಈ ಪ್ರೇಮ ಹಕ್ಕಿಯನ್ನು ನಿನ್ನ ಪ್ರೀತಿಯೆಂಬ ಬಾಹು ಬಂಧನದಲ್ಲಿ ಬಂಧಿಸುವೆಯಾ ನಲ್ಲೆ. ನಾನು ನನ್ನ ಕೈ ಹಿಡಿಯುವಾಕೆ ಹೀಗಿರಬೇಕು ಹಾಗಿರಬೇಕು ಅಂತ ಏನೇನೂ ಕಲ್ಪನೆಗಳನ್ನು ಮಾಡಿಕೊಂಡು ಕನಸು ಕಾಣುತ್ತಿದ್ದೆ.

ನನ್ನ ಹೆತ್ತವರೂ ನನ್ನ ವಿವಾಹ ಮಾಡಲು ನನಗೆ ಎಷ್ಟೊಂದು ಹುಡುಗಿಯರನ್ನು ತೋರಿಸಿದರೂ ನನಗೆ ನಿನ್ನಲ್ಲೇನೋ ಹೊಸ ಸೆಳೆತ. ದೇವರಿಗೆ ನನ್ನ ಕನಸಿನ ಕನವರಿಕೆ ಕೇಳಿಸಿರಬೇಕೇನೊ ನಿನ್ನಂತ ಚೆಲುವೆಯನ್ನು ನನಗಾಗಿ ಸೃಷ್ಠಿಮಾಡಿ ಈ ಭೂಮಿಗೆ ಕಳಿಸಿದ್ದಾನೆ. ನಾನು ಪುಣ್ಯವಂತ ಅಂತಾನೇ ನೀನು ನನಗೆ ದೊರಕಿರುವುದು. ಬಾಳ ಪಯಣದಲಿ ನಾನೂ ನೀನೂ ಜೊತೆಯಾದರೆ ನಮ್ಮ ಬದುಕು ಬಂಗಾರವಾಗುವುದರಲ್ಲಿ ಸಂದೇಹವೇ ಇಲ್ಲ ಗೆಳತಿ. ಸ್ವಚ್ಚಂದವಾಗಿ ಹಾರಾಡುವ ಆ ಪ್ರೇಮ ಪಕ್ಷಿಗಳೂ ನಮ್ಮ ಜೋಡಿಯನ್ನು ನೋಡಿ ನಾಚಿ ನೀರಾಗಬೇಕು. ಯೋಚಿಸಿ ಮುನ್ನಡಿ ಇಡು ಚೆಲುವೆ. ನಿನ್ನಂದಕೆ ನಾನು ಸೋತಿರುವೆ ಪ್ರಿಯೆ. ನಿನ್ನ ಚೆಲುವಿಕೆಗೆ ಸರಿದೂಗೋ ಚೆಲುವಿಲ್ಲ ನನಗೆ. ಸುಳ್ಳು ಹೋಲಿಕೆಯಿದು ಅಲ್ಲ ಗೆಳತಿ. ನನ್ನೀ ಪ್ರೇಮ ನಿವೇದನೆ ಒಬ್ಬ ಹುಚ್ಚು ಸಾಮಾನ್ಯ ಪ್ರೇಮಿಯ ಹುಡುಗಾಟ ಎಂದು ಅಸಡ್ಡೆ ತೋರದಿರು. ನಾನು ನಿನ್ನ ಹುಚ್ಚು ಪ್ರೇಮಿಯೇ ಆದರೆ ನಾನು ಹುಚ್ಚನಲ್ಲ ಗೆಳತಿ. ನಾನು ಸಾಮಾನ್ಯನೇ ಆಗಿದ್ದರೂ ನನ್ನ ಪ್ರೇಮ ನಿವೇದನೆ ಅಸಾಮಾನ್ಯವಾದುದು. ಇದು ಏಳೇಳು ಜನ್ಮದ ಪ್ರೀತಿ ಅಂತಾರಲ್ಲ ಅದು ಇರಬೇಕು. ನಮ್ಮಿಬ್ಬರ ಈ ಪ್ರೀತಿಗೆ ದೇವರೆ ಸಾಕ್ಷಿಯಾಗಿ ರುಜು ಹಾಕಿರುವನು.

ನನ್ನ ನಿಜ ಪ್ರೀತಿಯನ್ನು ಅರಿತುಕೊ ಚೆಲುವೆ. ನನ್ನ ಮೊದಲ ಪ್ರೀತೀನೂ ನೀನೆ, ಕೊನೆಯ ಪ್ರೀತೀನೂ ನೀನೆ. ನನ್ನ ಜೀವನದಲ್ಲಿ ನೀನಿರದ ಬದುಕನ್ನು ನಾನೂ ಊಹಿಸಲೂ ಆಗದು. ಕಾಣದ ಪ್ರೀತಿಯನು ಹುಡುಕಿ ಹೊರಟಾಗ ದೊರೆತ ಮಾಣಿಕ್ಯದ ನಿಧಿ ನೀನು. ಇದೆ ಮೊದಲ ನನ್ನ ಪ್ರೇಮ ಪತ್ರವಿದು. ಈ ನನ್ನ ಪತ್ರದಲ್ಲಿ ಟೊಳ್ಳು ಗಿಳ್ಳು ಏನೂ ಇಲ್ಲ. ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ ಅಂತ ಕವಿಯೊಬ್ಬರು ಹೇಳಿದರು ಹಾಗೇ ನೀನಿಲ್ಲದ ಮೇಲೆ ನಾನು ಹೇಗಿರಲಿ ಹೇಳು ರೂಪಸಿ. ಮೀನಿಗೆ ನೀರೆ ಆಸರೆ, ಹಕ್ಕಿಗೆ ಆಕಾಶವೆ ಆಸರೆ ಆದರೆ ನನಗೆ ನೀನೇ ಆಸರೆಯಲ್ಲವೇ ಚಕೋರಿ? ನನ್ನೊಳಗಿನ ಕವಿಯು ನಿನ್ನ ಕಂಡಾಕ್ಷಣ ಗೀಚಿದೆಲ್ಲವೂ ಕವಿತೆಗಳಾಯಿತು. ಕನವರಿಸಿದೆಲ್ಲವೂ ಕಾವ್ಯವಾಯಿತು. ನಿನ್ನೀ ಮೋಹಕ ಪ್ರಭಾವಳಿಗಳು ನನ್ನ ಮೇಲೆ ಬಹಳ ಜೋರಾಗಿ ಅಚ್ಚೊತ್ತಿವೆ.

ನೀಲಿ ಆಗಸದ ಚಂದಿರನ ನೆರಳು
ನಸುಕು ರಾತ್ರಿಯ ಚುಕ್ಕಿಗಳ ಕೂಟವು
ಅನಂತ ಜಲರಾಶಿಯ ಒಡಲ ಜೀವಿಗಳು
ಆಗಾಗ ಶರಧಿಗೆ ಕಚಗುಳಿ ಇಡುವ ಹಾಯಿದೋಣಿಗಳು
ಜೊತೆಗಾರರೆಂದು ಸಂತೈಸಿ ಅಪ್ಪಿದರೂ ನಿನ್ನ ಸಮನಾಗಲಾರರು ನನ್ನೊಲವೆ

ಪ್ರತಿ ಕ್ಷಣ ನಿನ್ನ ನೆನೆಯುವ ನನ್ನ ಮನವೂ ನಿನ್ನ ಮನವ ಸೇರಲು ತವಕಿಸುತ್ತಿದೆ ಕೋಮಲೆ. ನಿನ್ನ ನೆನಪುಗಳು ನನಗೆ ಮಧುರ. ವಸಂತದ ಪ್ರಕೃತಿಯ ಚೆಲುವಿನಂತೆ ಕಂಗೊಳಿಸುತ್ತಿರುವ ನೀನು ನನ್ನ ಕೈ ಹಿಡಿದರೆ ಬದುಕು ಪರಿಪೂರ್ಣ ಅಲ್ಲವೆ ಪ್ರಿಯಾಮಣಿ. ಎಷ್ಟೇ ಕಷ್ಟ ಬಂದ್ರೂನೂವೆ ನಿನ್ನ ಜೊತೆಯಾಗ್ ನಾ ಇರ್ತೀನಿ, ನಿನ್ ಕಣ್ಣಲ್ ಒಂದ್ ಹನಿ ಕಣ್ಣೀರ ಬರದಂಗ್ ನಾನು ಕಾಯ್ಕೊಂಡಿರ್ತೀನಿ. ಯಾವುದೇ ನೋವು ನಿನ್ನ ಹತ್ತಿರ ಬರದಂಗ ಕಾವಲ ಕಾಯ್ತೀನಿ. ರಾಣಿಯಂತೆ ನಿನ್ನ ನೋಡ್ಕೋತೀನಿ. ನಿನ್ನನ್ನು ನನ್ನ ಪ್ರೇಮ ಪಲ್ಲಕ್ಕಿಯಲ್ಲಿ ಹೊತ್ತು ತಿರುಗಾಡುವೆನು ಗೆಳತಿ. ನಿನ್ನ ಮೇಲಿನ ನನ್ನೀ ಪ್ರೇಮವು ಆಕರ್ಷಣೆಯಲ್ಲ ಒಲವೆ. ನನ್ನ ಪ್ರೀತಿ ಅಪ್ಪಟ ಅಪರಂಜಿಯನ್ನೂ ಮೀರಿಸುವಂದದಿ ಇರುವುದು. ನನ್ನ ಬದುಕು ನಿನ್ನ ಕೈಯಲ್ಲಿದೆ. ದಯಮಾಡಿ ಒಪ್ಪಿಕೊ ಈ ಹುಚ್ಚು ಪ್ರೇಮಿಯನ್ನು. ನನ್ನೊಲವ ಕದ್ದ ಸಖಿಯೇ ನೀನು ಒಪ್ಪಿ ಸಮ್ಮತಿಸಿದರೆ ನನ್ನಂತ ಅದೃಷ್ಟವಂತ ಈ ಪ್ರಪಂಚದಲ್ಲಿ ಬೇರಾರೂ ಇಲ್ಲ ಅಂದುಕೊಳ್ಳುವೆ. ಹೃದಯದ ಬಡಿತ ಹೆಚ್ಚಾಗುತ್ತಿದೆ. ಕಂಡ ಕನಸುಗಳು ನಾಟ್ಯವಾಡುತಿವೆ. ನಿದ್ರೆಯಲ್ಲೂ ನಿನ್ನದೆ ಕನವರಿಕೆ. ದಯಮಾಡಿ ಬೇಗ ಪ್ರತಿಕ್ರಿಯಿಸು.

ಸಿಹಿಯಾದ ಪ್ರೀತಿಯೊಂದಿಗೆ

ಇಂತಿ ನಿನ್ನೊಲವ ಬಯಸುವವ

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *