ಮಾತಾಡು ಓ ಗೆಳೆಯಾ… ಮಾತಾಡು
ಇದು ನನ್ನ ಮೊದಲ ಪ್ರೇಮ ಪತ್ರ. ನೀನು ನನ್ನ ಜೀವದ ಜೀವವಾದರೂ ನಾನು ನಿನಗೆ ಇದುವರೆಗೆ ಒಂದೂ ಪತ್ರ ಬರೆಯಲಿಲ್ಲ. ಬರೆಯುವ ಅಗತ್ಯವೇ ಬಿದ್ದಿರಲಿಲ್ಲ. ಏಕೆ ಗೊತ್ತ? ನೀನೇ ಆಗಾಗ ನನಗೆ ಫೋನ್ ಮಾಡುತ್ತಿದ್ದೆ. ಮೆಸ್ಸೇಜ್ ಮಾಡುತ್ತಿದ್ದೆ ಮತ್ತು ನನ್ನನ್ನು ತುಂ…….ಬ…… ಪ್ರೀತಿ ಮಾಡುತ್ತಿದ್ದೆ. ನಿನ್ನ ಪ್ರೇಮದಲ್ಲಿ ಮೀಯುತ್ತಿದ್ದ ನನಗೆ ಪತ್ರ ಬರೆಯುವ ಅವಶ್ಯಕತೆಯೇ ಬರಲಿಲ್ಲ. ಈ ವರ್ಷದ ಮುನ್ನಾ ದಿನ ನನಗಿಂತ ಮೊದಲೇ ನೀನು ನನಗೆ ಹೊಸ ವರ್ಷದ ಶುಭಾಶಯ ಕಳುಹಿಸಿದೆ. ಹೊಸ ವರ್ಷದ ಮೊದಲ ದಿನ ಶುಭಾಶಯ ಹೇಳಲು ನಾನು ಕರೆ ಮಾಡಿದಾಗ ನೀನು ತೆಗೆದುಕೊಳ್ಳಲಿಲ್ಲ. ಬ್ಯುಸಿ ಇರಬಹುದೆಂದು ಭಾವಿಸಿ ಆ ದಿನ ನಾನು ನಿನಗೆ ಮತ್ತೆ ಮತ್ತೆ ಕರೆ ಮಾಡಲು ಹೋಗಲಿಲ್ಲ. ಮರುದಿನ ನಾನು ಹಿಂದಿನ ಅದೇ ಪ್ರೀತಿಯಿಂದ ಕರೆ ಮಾಡಿದರೆ ನೀನು ಫೋನ್ ಎತ್ತಲಿಲ್ಲ. ಹಿಂದೆಲ್ಲ ನೀನು ಒಂದು ದಿನ ನಾನು ಮಾತಾಡದಿದ್ದರೆ ‘ಸಹನೀ, ದಿನದಲ್ಲಿ ಒಮ್ಮೆಯಾದರೂ ನಿನ್ನ ಧ್ವನಿ ಕೇಳದಿದ್ದರೆ ಕೆಲಸದಲ್ಲಿ ಉತ್ಸಾಹವೇ ಇರುವುದಿಲ್ಲ’ ಎನ್ನುತ್ತಿದ್ದೆ. ಬೆಳಿಗ್ಗೆ ನೀನು ಆಫೀಸಿಗೆ ಹೋಗುವ ಸಮಯದಲ್ಲಾದರೂ ಸಿಗಬಹುದೆಂದು ನಾನು ಕರೆ ಮಾಡಿದರೆ ನಿನ್ನಿಂದ ‘ಮೀಟಿಂಗ್‍ನಲ್ಲಿದ್ದೇನೆ’ ಎಂಬ ಮೆಸ್ಸೇಜ್ ಬಂತು. ಇದೇ ಪುನರಾವರ್ತನೆಯಾದಾಗ ನನಗೆ ಅನಿಸತೊಡಗಿತು ಮೊದಲು ಇಲ್ಲದ ಮೀಟಿಂಗ್ ಈ ಸಮಯದಲ್ಲಿ ಈಗ ಏಕೆ? ಸುಳ್ಳು ಇರಬಹುದು ಎಂಬ ಸಂಶಯವೂ ಮೂಡಿತು. ಹಾಗೆ ಈ ತಿಂಗಳಿನ ಒಂದು ಶುಕ್ರವಾರ ನಾನು ನಿನಗೆ ಮಧ್ಯಾಹ್ನ ಕರೆ ಮಾಡಿದೆ.
ಸಂಜೆ ಮಾಡಿದೆ. ರಾತ್ರಿ 8 ಗಂಟೆಯವರೆಗೆ ಮಾಡಿದೆ. ಪ್ರತಿ ಬಾರಿಯೂ ಫೋನ್ ರಿಂಗಾಗುತ್ತಿತ್ತೇ ವಿನಾ ನೀನು ತೆಗೆಯಲೇ ಇಲ್ಲ! ಮರುದಿನ ಮತ್ತೆ ಬೆಳಿಗ್ಗೆ 10 ಗಂಟೆಗೆ ಕರೆ ಮಾಡಿದೆ. ಈ ಸಾರಿ ನಿನ್ನ ಮೊಬೈಲಿನಿಂದ ‘ನೀವು ಕರೆ ಮಾಡುತ್ತಿರುವ ಚಂದಾದಾರರು ಬ್ಯುಸಿಯಾಗಿದ್ದಾರೆ. ದಯವಿಟ್ಟು ಸ್ವಲ್ಪ ಸಮಯದ ನಂತರ ಕರೆಮಾಡಿ’ ಎಂದು ಬಂತು. ಸ್ವಲ್ಪ ಸಮಯದ ನಂತರ ಮಾಡಿದೆ. ಆಗಲೂ ಹೀಗೆಯೇ ಬಂತು. ಆಗ ನನಗೆ ನೀನು ನನ್ನ ಕರೆ ಬ್ಲಾಕ್ ಮಾಡಿದ್ದಿ ಎಂದು ಗೊತ್ತಾಯಿತು. ಜೀವದ ಗೆಳೆಯ ಹೀಗೂ ಮಾಡಬಹುದಾ ಎಂದು ಶಾಕ್ ಆಯಿತು. ಮಾತಾಡದಿದ್ದರೂ ನಿನ್ನಿಂದ ಒಂದು ಮೆಸ್ಸೇಜ್ ಬಂತು ಮತ್ತು ಅದು ನೀನು ಬರೆದ ಕೊನೆಯ ಮೆಸ್ಸೇಜ್. ಅದು ಹೀಗಿತ್ತು ‘ಕ್ಷಮಿಸು, ನೀನು ಹೊತ್ತು ಗೊತ್ತು ಇಲ್ಲದೆ ಫೋನ್ ಮಾಡತೊಡಗಿದ್ದರಿಂದ ನನಗೆ ಅನಿವಾರ್ಯವಾಯಿತು. ಮಾತಾಡೋಣ’. ಇದರಲ್ಲಿ ನನ್ನ ತಪ್ಪೇನೂ ಇರಲಿಲ್ಲ. ನೀನು ಮಾತೇ ಆಡದ್ದರಿಂದ ನಾನು ನಿನಗೆ ಮತ್ತೆ ಮತ್ತೆ ಕರೆ ಮಾಡಿದೆನೇ ಹೊರತು ಒಂದು ಸಲ, ಒಂದೇ ಒಂದು ಸಲ ಮಾತಾಡುತ್ತಿದ್ದರೆ ನಾನು ಹಾಗೆ ಮಾಡುತ್ತಿರಲಿಲ್ಲ. ನಾನು ನಿನ್ನ ಮಾತಿಗಾಗಿ ಕಾದೆ. ಮಾತಾಡೋಣ ಎಂದು ಮೆಸ್ಸೇಜ್ ಕಳಿಸಿದ ನೀನು ಮತ್ತೆ ಮಾತಾಡಲಿಲ್ಲ. ಅಂದು ಮಾಡಿದ ಫೋನ್ ತಡೆಯನ್ನು ಇಂದಿನವರೆಗೆ ತೆಗೆದಿಲ್ಲ. ಕಾರಣ ಏನು? ಕಳೆದ ವಾರ ಮನೆಕೆಲಸದವಳ ಫೋನಿಂದ ಕರೆ ಮಾಡಿದೆ. ಹಲೋ ಹೇಳಿದ ನೀನು ನನ್ನ ಧ್ವನಿ ಕೇಳಿದಾಕ್ಷಣ ಇಟ್ಟುಬಿಟ್ಟೆ! ಏಕೆ? ನಾನು ನಿನಗೆ ಏನು ಮಾಡಿದ್ದೇನೆ? ನಿನ್ನ ಗೆಳತಿ ನಾನಲ್ಲವೆ? ನಿನ್ನ ಆಫೀಸ್ ಫೋನಿಗೂ ಮಾಡಿದೆ. ನನ್ನದು ಎಂದು ಗೊತ್ತಾದ ತಕ್ಷಣ ಮಾತೇ ಆಡದೆ ಇಟ್ಟುಬಿಡುತ್ತಿ!
ಹಿಂದೆ ಮಳೆ ಸುರಿವಂತೆ ಮಾತಾಡುತ್ತಿದ್ದ ನೀನು, ಬ್ರಹ್ಮಾಂಡ ಪ್ರೀತಿ ಮಾಡುತ್ತಿದ್ದ ನೀನು ಈಗ ಒಮ್ಮಿಂದೊಮ್ಮೆಗೆ ಕಾರಣವೇ ಇಲ್ಲದೆ ನಾನು ಇಷ್ಟು ಕರೆ ಮಾಡಿದರೂ ಒಂದನ್ನೂ ರಿಸೀವ್ ಮಾಡದೆ ಮುಗುಮ್ಮಾಗಿ ಇರುತ್ತೀಯಲ್ಲ; ನನ್ನನ್ನು ದೂರ ಸರಿಸಿದ್ದೀಯಲ್ಲ. ಇದು ಸರಿಯೇ? ನನ್ನೊಡನೆ ಮಾತಾಡಲೇನು ಅಡ್ಡಿ? ದಿನಾ ಅಲ್ಲದಿದ್ದರೂ ವಾರಕ್ಕೊಮ್ಮೆಯಾದರೂ ಒಂದೆರಡು ವಾಕ್ಯ ಮಾತಾಡಬಹುದಲ್ಲ. ಒಂದೆರಡು ಮೆಸ್ಸೇಜ್ ಮಾಡಬಹುದಲ್ಲ. ಆಗ ನನ್ನ ಮನಸ್ಸಿಗೆ ಎಷ್ಟೋ ಸಮಾಧಾನ ಆಗುತ್ತದೆ. ಈಗ ನಿನಗೆ ಹೇಗೂ ಕರೆ ಹೋಗುವುದಿಲ್ಲ. ಹಾಗಾಗಿ ನಾನು ಇಡೀ ದಿನ ಹೊತ್ತು ಗೊತ್ತಿನ ಪರಿವೆ ಇಲ್ಲದೆ ಕರೆ ಮಾಡುತ್ತಲೇ ಇರುತ್ತೇನೆ. ಬಹುಶ: 100ಕ್ಕಿಂತಲೂ ಹೆಚ್ಚು ಬಾರಿ. ಅದು ನಿನ್ನ ಮೊಬೈಲಿನಲ್ಲಿ ಕಾಣುತ್ತೊ ಇಲ್ಲವೋ ಗೊತ್ತಿಲ್ಲ. ಜಗತ್ತಿನಲ್ಲಿ ನನ್ನ ಜೊತೆ ಯಾರು ಮಾತು ಬಿಟ್ಟರೂ ತೊಂದರೆ ಇಲ್ಲ. ಆದರೆ ನೀನು ಮಾತಾಡದಿದ್ದರೆ ನನಗೆ ಸಹಿಸಲು ಆಗುವುದಿಲ್ಲ. ಹೇಳು, ನನ್ನೊಂದಿಗೆ ಏಕೆ ಮಾತಾಡುವುದಿಲ್ಲ? ಕಾರಣ ಕೊಡಲೇಬೇಕು. ಅದು ಬಿಟ್ಟು ಕರೆ ಬ್ಲಾಕ್ ಮಾಡಿ ಹೇಡಿಗಳ ಹಾಗೆ ಅಡಗುವುದು ನಿನಗೆ ಶೋಭೆ ತರುವುದಿಲ್ಲ ಅಲ್ಲವೇ? ಅಥವಾ ನಿನಗೇ ನೀನು ಹೇಡಿ ಎಂದು ಅನಿಸುವುದಿಲ್ಲವೇ? ಅಥವಾ ನೀನು ಅಹಂಕಾರಿ ಇರಬಹುದೇ? ಮಾತು ಸ್ವಲ್ಪ ಖಾರ ಅನಿಸಿದರೆ ಕ್ಷಮಿಸು. ನಾನು ಬಹಳ ನೊಂದಿದ್ದೇನೆ.
ಈಗೀಗ ನೀನು ಎಷ್ಟು ನೆನಪಿಗೆ ಬರುತ್ತಿ ಎಂದರೆ ನಾನು ನಿದ್ರಿಸುವ ಅಷ್ಟು ಹೊತ್ತು ಮಾತ್ರ ನಿನ್ನ ಯೋಚನೆ ಇಲ್ಲದೆ ಇರುವುದು. ಮಲಗುವ ಮೊದಲು, ಮಧ್ಯೆ ಎಚ್ಚರವಾದಾಗ, ಬೆಳಿಗ್ಗೆ ಏಳುವಾಗ, ಆಮೇಲಿನ ಎಲ್ಲಾ ಹೊತ್ತು ನಿನ್ನ ಗುಂಗಿನಲ್ಲಿಯೇ ಇರುತ್ತೇನೆ ಗೊತ್ತ? ಇಷ್ಟು ನಿನ್ನನ್ನು ಪ್ರೀತಿಸುವವಳ ಹತ್ತಿರ ಮಾತು ಬಿಡಲು ನಿನಗೆ ಮನಸ್ಸಾದರೂ ಹೇಗೆ ಬಂತು? ನನ್ನ ಮನೆ ಸಮೀಪದ ದೇವದಾರು ಮರವನ್ನು ನೋಡುವಾಗಲೆಲ್ಲ, ಮನೆ ಗೇಟಿನ ಹತ್ತಿರ ಹೋದಾಗಲೆಲ್ಲ ಅಲ್ಲಿ ನಿಂತು ನಿನ್ನೊಡನೆ ಮಾತಾಡುತ್ತಿದ್ದ ಗಳಿಗೆ ನೆನಪಾಗಿ ಹನಿಗಣ್ಣಾಗುತ್ತೇನೆ. ಮೊನ್ನೆ ಉತ್ತರ ಕರ್ನಾಟಕ ಪ್ರವಾಸದಲ್ಲಂತೂ ಹುಚ್ಚು ಹಿಡಿಯುವುದೊಂದು ಬಾಕಿ ಅಷ್ಟು ನಿನ್ನ ನೆನಪಾಗಿತ್ತು. ಅದಕ್ಕೆ ಒಂದು ಕಾರಣ ಪಟ್ಟದಕಲ್ಲು ದೇವಾಲಯದ ಶಿಲಾಬಾಲಿಕೆಯನ್ನು ತೋರಿಸುತ್ತ ನಮ್ಮ ಗೈಡ್ ಹೇಳಿದ ಮಾತು ‘ಹಿಂದಿನ ಕಾಲದ ಸ್ತ್ರೀಯರಿಗೆ ಎಷ್ಟು ಸೌಂದರ್ಯಪ್ರಜ್ಞೆ ಇತ್ತು ಎಂಬುದು ಈ ಶಿಲಾಬಾಲಿಕೆಯ ಉಡುಗೆ ನೋಡಿದರೆ ಗೊತ್ತಾಗುತ್ತದೆ. ಇವಳು ಉಟ್ಟ ಸೀರೆ ಹೊಕ್ಕಳಿನಿಂದ ಮೂರು ಇಂಚು ಕೆಳಗೆ ಇದೆ. ಹಾಕಿದ ಕುಪ್ಪಸವೂ ಎದೆಯ ಮಾಟವನ್ನು ಎತ್ತಿ ತೋರಿಸುವಂತಿದೆ’. ಆಗ ನನಗೆ ಹಿಂದೆ ನೀನು ನನ್ನನ್ನು ಒಮ್ಮೆ ಭೇಟಿಯಾದಾಗ ಹೇಳಿದ ಮಾತು ಜ್ಞಾಪಕಕ್ಕೆ ಬಂತು. ‘ಏನು ನೀನು ಹಳ್ಳಿಹೆಂಗಸರ ಹಾಗೆ ಸೀರೆ ಉಡುವುದು? ಹೊಕ್ಕಳು ಕಾಣುವ ಹಾಗೆ ಸೀರೆ ಉಡಬೇಕು. ನೀನು ರವಿಕೆ ಹೊಲಿಸುವ ರೀತಿಯೇ ಸರಿಯಿಲ್ಲ. ಬೆನ್ನು ವಿಶಾಲವಾಗಿ ಕಾಣುವಂತೆ ಇರಬೇಕು ಹಾಗೂ ಮುಂಭಾಗ ಡೀಪ್ ನೆಕ್ ಇರಬೇಕು’.
ನನಗೆ ನಿನ್ನೊಂದಿಗೆ ಹೇಳಲು ಎಷ್ಟು ಸುದ್ದಿ ಇದೆ ಗೊತ್ತಾ? ಹಸು ಕರು ಹಾಕಿದ್ದು, ಯಕ್ಷಗಾನ ನೋಡಿದ್ದು, ಹೊಸ ಪುಸ್ತಕ ಓದಿದ್ದು, ಪ್ರವಾಸ ಹೋದದ್ದು… ಓಹ್! ಒಂದೇ, ಎರಡೇ? ಮಾತಾಡು ಓ ಗೆಳೆಯಾ… ಮಾತಾಡು. ಪ್ರೇಮಿಗಳ ದಿನದಲ್ಲಾದರೂ ಮಾತಾಡುತ್ತೀಯ?
-ಸಹನಾ ಕಾಂತಬೈಲು