ಪ್ರೇಮ ಪತ್ರಗಳು

ಏನಂತ ಸಂಭೋದಿಸಲಿ ನಾ ನಿನ್ನ?: ಮಧು ಅಕ್ಷರಿ

ಏನಂತ ಸಂಭೋದಿಸಲಿ ನಾ ನಿನ್ನ?

ಇದೇ ಪ್ರಶ್ನೆಯೊಂದಿಗೆ ಅದೆಷ್ಟು ಪತ್ರಗಳು ನಿನ್ನ ಮನೆಯಂಗಳವನ್ನಿರಲಿ, ಅಂಚೆಪೆಟ್ಟಿಗೆಯ ಮುಖವನ್ನೂ ಕಾಣದೆ, ಹರಿದು ಬರಿದಾಗಿ ಕಸದ ಬುಟ್ಟಿಯಲ್ಲಿ ಮೋಕ್ಷ ಪಡೆದಿವೆಯೋ? ಸಿಕ್ಕಿಬೀಳುವ ಭಯಕ್ಕೆ ಹೆದರಿ, ಅವಶೇಷವನ್ನೂ ಬಿಡದಂತೆ ಸುಟ್ಟು ಸಂಸ್ಕಾರ ಮಾಡಿದ್ದೂ ಆಯ್ತು. ಅಲ್ಲಿಗೆ ಎದೆಯಲ್ಲೋ, ತಲೆಯಲ್ಲೋ, ಅಸಲು ಸರಿಯಾದ ವಿಳಾಸವಿಲ್ಲದೇ, ನನ್ನಲ್ಲಿ ಉದಯಿಸಿದ ನವಿರಾದ ಭಾವನೆಗಳಿಗೆ ಕಾರಣನಾದ ನಿನ್ನ ಪರಿಚಯಿಸುವ ಮೊದಲೇ ಸಂಸ್ಕಾರವಾದದ್ದಾಯಿತು. ಮತ್ತೆ ಕುಳಿತಿರುವೆ ಉಕ್ಕಿಬರುವ ಭಾವಗಳ‌ ಅದುಮಿಡಲಾಗದೇ. ನಿನ್ನೆದೆಗೆ ತಲುಪಿಸಿ ನಿರುಮ್ಮಳವಾಗಿ ಬಿಡುವ ಹಂಬಲದಿಂದ. ವಾಟ್ಸಪ್, ಟಿಂಡರ್, ಇನ್ಸ್ಟಾ ಕಾಲದಲ್ಲಿ ಪತ್ರವನ್ನು ಗೀಚುತ್ತಿರುವ ನಾನು ಹುಚ್ಚಳಂತೆಯೇ ಗೋಚರಿಸಬಹುದು. ಆದರೆ, ಕೇಳೋ ಹುಡುಗ.. ಪ್ರೇಮಾಂಕುರವಾಗಿ, ಆಗಷ್ಟೇ ಹೊರಹೊಮ್ಮಿದ ಬೆಚ್ಚಗಿನ ಭಾವಗಳನ್ನೆಲ್ಲಾ ಬಸಿದು ತಲುಪಿಸಲು ಪತ್ರಗಳಿಗಿಂತ ಉತ್ತಮ ಸಂಗಾತಿ ಇನ್ನೊಂದಿಲ್ಲ. ಪ್ರತಿ ಅಕ್ಷರಗಳನ್ನೂ ಓದಿ, ಅಳೆದು, ಸುರಿದು, ತಿದ್ದಿ, ಹರಿದು, ಕೊನೆಗೊಮ್ಮೆ ಸರಿ ಎನ್ನಿಸುವಷ್ಟರಲ್ಲಿ, ಕಾಗದಗಳನ್ನು ಖಾಲಿ ಮಾಡಿದ್ದಕ್ಕೆ ಪರಿಸರ ಸಂರಕ್ಷಕರು ನನ್ನ ವಿರುದ್ದ ತಕರಾರು ತೆಗೆಯುವಷ್ಟು ಕಾಗದಗಳು ಕೋಣೆಯ ತುಂಬಾ ಹರಡಿ ನಿಂತಿದ್ದವು. ಖಾಲಿಯಾದ ಪೆನ್ನಿನ ಶ್ಯಾಯಿಗೆ ಪೆಟ್ರೋಲಿನಷ್ಟು ಬೆಲೆ ಇದ್ದಿದ್ದರೆ, ದೇಶದ ಆರ್ಥಿಕತೆಗೆ ಬಹು ದೊಡ್ಡ ಕೊಡುಗೆಯಾಗಿಬಿಡುತ್ತಿತ್ತು. ಪ್ರತಿ ಅಕ್ಷರಗಳಿಗೂ ನಿನ್ನ ಭಾವವ ಊಹಿಸಿ, ನಕ್ಕು, ನಾಚಿ, ಮುತ್ತನಿಟ್ಟು ನಿನ್ನನ್ನೇ ಬಿಗಿದಪ್ಪಿದ ಭಾವದಲ್ಲಿ ಪತ್ರವನ್ನೇ ಬಿಗಿದಪ್ಪಿ ಬರೆದು ಕಳಿಸುತ್ತಿರುವ ಈ ಪತ್ರಕ್ಕೆ ನಿನ್ನ ಸಾವಿರ ಎಮೋಜಿ, ಜಿ ಐ ಎಫ್‍, ವಿಡಿಯೋ ಕಾಲ್ ಯಾವುದೂ ಸಮವಲ್ಲ.

ನನ್ನಂತವಳಿಗೆ ಅಸಲು ಪ್ರೇಮವೆಂಬ ಭಾವನೆಯೊಂದು ಅಂಕುರಿಸಲು ಸಾಧ್ಯವೇ ಇಲ್ಲ ಎಂಬಂತೆ ನಿರ್ಭಾವುಕಳಾಗಿ ಬದುಕುತ್ತಿದ್ದ ನನಗೂ ಅಂದು ಪ್ರೀತಿಯಾಗಿದೆ ಎಂಬ ಅರಿವಾಯಿತು ನೋಡು, ಮುಗಿಲು ಕೆಕ್ಕರಿಸಿ ನೋಡುವಂತೆ ಹರ್ಷಿಸಿ ಬಿಟ್ಟಿದ್ದೆ. ಅಸಲು ಅದ್ಯಾಕೆ ಅಷ್ಟು ಹತ್ತಿರವಾದೆ ನೀನು? ಕಾರಣಗಳ ಹುಡುಕಿ ತಡಕಿ ಸುಸ್ತಾದೆನೇ ಹೊರತು ಸರಿಯಾದ ಕಾರಣ ಗೋಚರಿಸಲೇ ಇಲ್ಲ. ಸಮಾಜವೆಂಬ ಸಮಾಜದಿಂದ ಹುಟ್ಟಿನ ಕ್ಷಣದಿಂದ ಪಡೆದದ್ದು ನೋವನ್ನಷ್ಟೇ. ನನ್ನ ಮೇಲೇ ನನಗೊಂದು ತಾತ್ಸಾರ ಭಾವ. ನನ್ನ ಸುತ್ತಲೂ ನಾನೇ ಗಟ್ಟಿ ಕೋಟೆಯೊಂದನ್ನು ಕಟ್ಟಿಕೊಂಡು, ಅಂತರಾಳದಿ ಚೀರಿ ಅಳುವ ಮಗುವಾಗಿ, ಹೊರ‌ಜಗತ್ತಿಗೆ ಅಹಂಕಾರಿ, ಕಲ್ಲಿನಂತಹ ಬಜಾರಿ, ಗುಂಡುಬೀರಿಯಾಗಿ, ಹಲವು ಪದರಗಳ ಕೋಟೆಯೊಳಗೆ ಹುಚ್ಚಿಯಂತೆ ಸಾವಿನ ಅಪ್ಪುಗೆ ಬಯಸಿದ್ದ ಪುರಷದ್ವೇಷಿ ನಾನು. ನೀನಂದು ಬಂದು ಮಾತಾಡಿಸಿದಾಗ, ಕಾರಣವಿಲ್ಲದೇ ಹತ್ತಿರ ಸಮೀಪಿಸಿದಾಗ ಮೊದಲ ಬಾರಿ ಎಂತದ್ದೋ ಹೊಸ ಭಾವ ಮೂಡಿದ್ದು ನಿಜ. ಆದರೆ ಕೋಟೆ ಗಟ್ಟಿ ಇತ್ತಲ್ಲ. ಬಾಗಿಲಿನಾಚೆ ಮುಲಾಜಿಲ್ಲದೇ ನಿನ್ನ ದೂಡಿ, ಮತ್ತೆ ಬಾಗಿಲು ಗಟ್ಟಿಯಾಗಿ‌ ಮುಚ್ಚಿ, ಕಾವಲಿಗೆ ಬೈಗುಳದ ಪಹರೆಯನ್ನಿಟ್ಟು ಬೆಚ್ಚನೆ ಮಲಗಿದೆ.

ನಿಜ ಹೇಳುವೆ ಕೋತಿ. ನನಗೆ ಪ್ರೀತಿ ಎಂದರೇ ಸಿಟ್ಟು ಬರುತ್ತಿತ್ತು. ಸ್ವಾರ್ಥಕ್ಕಾಗಿ ಸ್ವೇಚ್ಚೆಗಾಗಿ ಬಳಸಲ್ಪಡುವ ಪದವಲ್ಲವೇ ಪ್ರೀತಿ. ನಾಭಿಯುದ್ದಗಲಕ್ಕೂ ಆಡಿ ಹೊಕ್ಕುಳಾಚೆಯ ಎಲ್ಲೆಯ ಮೀರಿ ಕಿಬ್ಬೊಟ್ಟೆಯ ಕೆಳಗಿನ ಹಸಿವ ನೀಗಿಸಿ ಬಸಿರಾಗುವ ಚಿಂತೆಗೆ ಉತ್ತರ ಹುಡುಕುವ ಮುನ್ನವೇ ಪ್ರೀತಿ ಪೇಚಿಗೆ ಸಿಲುಕಿರುತ್ತದೆ. ಅಂತಹ ಪ್ರೀತಿಯ ಅಗತ್ಯ ಅನಿವಾರ್ಯ ಎರಡೂ, ಈಗಾಗಲೇ ಬಿಡಿಸಲಾಗದ ಸಿಕ್ಕಾಗಿದ್ದ ನನ್ನ ಜೀವನಕ್ಕೆ ಖಂಡಿತ ಇರಲಿಲ್ಲ. ನನ್ನ ಈ ವರ್ತನೆಯೇ ನಿನ್ನನ್ನು ನನ್ನೆಡೆಗೆ ಸೆಳೆಯಿತು ಎಂದೆಯಲ್ಲವೇ? ಇದೇ ನೋಡು ಗಂಡಿನ ಅಹಂ. ನೀ ಬೇಡವೆಂದು ದೂರ ಸರಿದವರು ನಿಮಗೆ, ನಿಮ್ಮ ಅಹಮ್ಮಿನ ಸಮಾಧಾನಕ್ಕೆ ಬೇಕೇ ಬೇಕೆಂಬ ಹಠಕ್ಕೆ‌ ಬಿದ್ದುಬಿಡುತ್ತೀರಲ್ಲವೇ? ನಿಮ್ಮ ಈ ಭಾವನೆಗಳ ಭೇಟೆಗೆ ನಾವು ಮೊಲವಾಗಿ ಕೈಗೆ ತಲುಪಿಬಿಡುತ್ತೇವಲ್ಲವೇ?

ನೀ ಹತ್ತಿರ ಸುಳಿಯುತ್ತಲೇ ಇದ್ದೆ. ಅದೆಂತದ್ದೋ ಆಕರ್ಷಣೆಯಂತ ಭಾವಕ್ಕೆ ಈಗಾಗಲೇ ಸಿಲುಕ್ಕಿದ್ದ ನನಗೆ, ಗೆಳೆಯನಾಗಿ ಹತ್ತಿರವಾದೆ. ಇನ್ಯಾರದ್ದೋ ರಾದ್ದಾಂತ ಪರಿಹರಿಸಲು ಹೋಗಿ, ನೀ ನನಗೆ – ನಾ ನಿನಗೆ ಹತ್ತಿರ ಬಂದು ಕುಳಿತಾಗಿತ್ತು. ಗಂಟೆಗಟ್ಟಲೆ ಅತ್ತಿಂದಿತ್ತ ಹೊರಳುವ ಕರೆಗಳಲ್ಲಿ, ಫೋನಿನ ಮುಖದಲ್ಲಿ ಹೊಮ್ಮುವ ಮೆಸೇಜಿನ ಬೆಳಕಿನ ದೀಪಾವಳಿಯಲ್ಲಿ, ಪದೇ ಪದೇ ನನ್ನ ನೋಡ ಬಯಸುವ, ಬೇಡೆಂದರೂ ಕ್ಷಣಮಾತ್ರಕ್ಕಾದರೂ ನನ್ನ ನೋಡಿಯೇ ಹೋಗುವೆನೆಂಬ ನಿನ್ನ ಹಠದಲ್ಲಿ, ನನ್ನ ಕಣ್ಣಿಗೇ ಅಲ್ಪಳಾಗಿದ್ದ ನಾನು ವಿಶಿಷ್ಟಳಾಗಿ ಗೋಚರಿಸತೊಡಗಿದೆ. ಅಲ್ಲೆಲ್ಲೋ ಮೂಲೆಯಲ್ಲಿ ಹೂತಿದ್ದ ಆತ್ಮವಿಶ್ವಾಸವು ಗೂಡಿಂದ ಹೊರಬಂದು ರೆಕ್ಕೆಯಗಲಿಸಿ‌ ನನ್ನ ಆವರಿಸಿಕೊಂಡಿತ್ತು. ಆಗಲೂ ಇದೇ ಪ್ರಶ್ನೆ ಆವರಿಸಿತ್ತು. ಏನೆಂದು ಸಂಭೋಧಿಸಲಿ ನಾ ನಿನ್ನ? ಗೆಳೆಯನಿಗಿಂತ ಸನಿಹವಾಗಿದ್ದೆ. ಇನಿಯನಿಗಿಂತ ಹತ್ತಿರವಾಗಿದ್ದೆ. ಬದುಕಿಗೊಂದು ಸ್ಪೂರ್ತಿಯಾಗಿ, ಕಡುಗತ್ತಲಿನ ಜೀವನದಲ್ಲೊಂದು ಬೆಳಕಾಗಿ ಗೋಚರಿಸುತ್ತಿದ್ದೆ. ನಿದಿರೆಗೆ ವಿದಾಯ ಹೇಳಿಸಿದವನು ನೀನೇ ಕಣೋ ಗೂಬೆ. ಅದೆಷ್ಟು ಹತ್ತಿರವಾಗಿದ್ದೆ ಎಂದರೆ, ನಿನ್ನ ಸಲಿಗೆಗೆ ರೂಡಿಯಾಗಿದ್ದ ಮನಸ್ಸನ್ನು “ಇವನು ಗೆಳೆಯನಲ್ಲ” ಎಂದು ಹಾಡು ಕೇಳಿಸಿ ತೆಪ್ಪಗಾಗಿಸುತ್ತಿದ್ದೆ.

ದೇವರ ಇರುವನ್ನೇ ಪ್ರಶ್ನಿಸಿ ನಾಸ್ತಿಕಳಾಗಿದ್ದ ನನಗೆ, ನಿನ್ನ ಸ್ನೇಹದಿಂದ ದೇವರಿರಬಹುದೇನೋ ಎನ್ನಿಸಿದ್ದಲ್ಲದೇ, ಅದೇ ದೇವರ ಮುಂದೆ, “ಕೊಡು ಕೊಡು ಇವನನು ನನಗಂತ” ಅಂತ ಕೋರಿದ್ದೂ ಇದೆ. ಮೈಲು ದೂರದ ಊರಿಗೆ ಗಂಟೆಗಟ್ಟಲೆ ಬೈಕು ನಡೆಸಿ, ಬೀಳಿಸಿ, ಕೊನೆಗೆ ಮನಸ್ಸಿಲ್ಲದ ಮನಸ್ಸಿಂದ ಮನೆಗೆ ಕರೆದೊಯ್ದು, ವಿದಾಯ ಹೇಳದೇ ಅಲ್ಲೇ ಉಳಿದಾಗ, ನೀನೇ ಚಿಪ್ಪಿನೊಳಗೆ ತುರುಕಿ ತಂದುಕೊಟ್ಟ ಹಾಡುಗಳೆಲ್ಲವನ್ನೂ ಹಾಡಿ ಮುಗಿಸಿತ್ತು ಮನಸ್ಸು. ಕತ್ತಲಿನ ರಾತ್ರಿಗಳಲ್ಲಿ ನಿನ್ನೊಂದಿಗೆ ಕುಳಿತು ಚಂದಿರನಿಗೆ ಹೊಟ್ಟೆಕಿಚ್ಚು ಮೂಡಿಸುವುದರಿಂದ, ನಟ್ಟ ನಡು ರಸ್ತೆಯಲಿ‌ ನಿನ್ನ ಕೈ ಹಿಡಿದು ಬಹುದೂರ ಸಾಗುವವರೆಗೂ ಆಸೆಗಳು ಚಿಗುರಲಾರಂಭಿಸಿತ್ತು. ಹೀಗೊಮ್ಮೆ ನಿನ್ನೆದೆಗೆ ಒರಗಿ ಹೃದಯ ಬಡಿತವನ್ನಾಲಿಸುತ್ತಾ ಪ್ರತಿಬಡಿತಕ್ಕೂ ನನ್ನ ಹೆಸರ ನಮೂದಿಸಿ ನಿನ್ನನ್ನು ನನ್ನವನೆಂದು ಘೋಷಿಸುವ ಹುಚ್ಚು ಹಂಬಲಗಳಿಗೆ ಬೆಚ್ಚಗಿನ ಕನಸ್ಸೊಂದು ತೆವಳಿ ಬಂದು ತೂಕಡಿಸದಿರಲೆಂದು, ನಿನ್ನ ಉಸಿರನ್ನು ಕಾವಲಿಗಿಟ್ಟು, ನಿನ್ನ ಅದೇ ಹೃದಯದ ಬಡಿತವನ್ನು ನಮ್ಮಿಬ್ಬರ ಪ್ರೇಮ ಕ್ಷಣದ ಸಾಕ್ಷಿಯನ್ನಾಗಿಸುತ್ತಿದ್ದೆ. ಮಂಚದ ಕಾಲಿಗೆ ಗಂಟು ಹಾಕಿದ್ದ ಸಮಯ ಸುಮ್ಮನೇ ಸೋರಿ ಹೋಗಿತ್ತು ಎಂಬುದರೊಂದಿಗೆ ಕನಸೂ ಮುಗಿದಿತ್ತು.

ಅಷ್ಟಕ್ಕೂ ನೀನಿಷ್ಟವಾದದ್ದು ನಿನ್ನ ಕಾಳಜಿಗೆ, ಹತ್ತಿರವಿದ್ದೂ ಗೆರೆಯ ದಾಟದ ನಿನ್ನ ಒಲುಮೆಗೆ, ಕೈ ತಾಕಿದರೂ ಪ್ರೀತಿಯನ್ನಷ್ಟೇ ಒಸರುತ್ತಿದ್ದ ಭಾವನೆಗೆ. ಹೌದು ಕಣೋ‌ ಕಂದ ನೀನ್ಯಾವತ್ತೂ ನನ್ನ ಈ ಕ್ರೂರ ಜಗತ್ತಿನ ಗಂಡಸರಂತೆ ದಾಹದಿಂದ ನೋಡಲೇ ಇಲ್ಲ. ನಿನ್ನ ಸ್ಪರ್ಶ ಕಚಗುಳಿ ಮೂಡಿಸಲೂ ಇಲ್ಲ. ಏಕೆಂದರೆ ಅಲ್ಲೊಂದು ಭದ್ರತೆ, ಆಪ್ತತೆಯಷ್ಟೇ ಇತ್ತು. ಇಂದು ಇಷ್ಟುದ್ದದ ಈ ಪತ್ರವನ್ನು ಬರೆವಾಗಲೂ ನೀ ಎರೆದ ಅಷ್ಟೂ ಭಾವಗಳು ಇಷ್ಟು ದಶಕಗಳ ನಂತರವೂ, ಕಣ್ಣೆದುರಿಗೆ ಸುಳಿದು ಮತ್ತದೇ, ಸಂತಸವನ್ನು ಹುಟ್ಟುಹಾಕುತ್ತದೆ‌. ನಿನಗೆ ಗೊತ್ತಾ? ಆ ಬಸ್ ನಿಲ್ದಾಣದ ನಮ್ಮ ನೆಚ್ಚಿನ ಕಲ್ಲುಹಾಸು ಈಗ ಬದಲಾಗಿದೆ. ನಡೆದಾಡಿದ್ದ ರಸ್ತೆ ಅಗಲವಾಗಿ, ಮರಗಿಡ ಹೂಗಳು ಕಡಿಮೆಯಾಗಿ ಮೊದಲ ಸೌಂದರ್ಯ ಕಳೆದುಕೊಂಡಿದೆ. ಮತ್ತೆ ಆ ದೇಗುಲದಲ್ಲಿ, ರಾಶಿ‌ ಜನರ ಡಾಂಭಿಕತೆಯ ನಡುವೆ ದೇವರೂ ಅನಾಥನಾಗಿ ಕುಳಿತುಬಿಟ್ಟಿದ್ದಾನೆ‌. ನಮ್ಮ ದಾರಿಯೂ ಬದಲಾಗಿದೆಯಲ್ಲವೆ? ನೀನೊಲಿದು ಆಯ್ದ ದಾರಿಯಲ್ಲಿ ನೀ ಸುಖವಾಗಿರುವೆ ತಾನೇ? ಏಷ್ಟೇ ಆಗಲಿ ಎಲ್ಲರ ಜೀವನ ಲವ್ ಮಾಕ್ಟೈಲ್ ಚಿತ್ರವಲ್ಲವಲ್ಲ. ನಿಜ ಜೀವನದಲ್ಲಿನ ಆದಿಗೆ ಜೋ ಇಷ್ಟವಾಗುವಷ್ಟು, ನಿಧಿಮಾ ಇಷ್ಟವಾಗುವುದೂ ಇಲ್ಲ. ಹಾಗಾಗಿ ನಿಧಿಮಾಗೆ ಕ್ಯಾನ್ಸರ್ ಕೂಡ ಬರಲಿಲ್ಲ. ಇಷ್ಟರ ಮಟ್ಟಕ್ಕೆ ನಮ್ಮ ಕಥೆ ಸುಖಾಂತ್ಯವಾಗಿದೆ ಅಲ್ಲವೇ.

ಇಷ್ಟು ವರ್ಷಗಳ‌ ಅನಾಥ ಭಾವಗಳಿಗೆ, ನಿನ್ನ ಹತ್ತಿರವಿದ್ದಾಗಲೂ ನಿನಗೆ ಹೇಳದೇ ಉಳಿದ ಮಾತುಗಳಿಗೆ, ದೂರಾದಾಗ ಆಡಿದ ಜಗಳಗಳಿಗೆ, ಇಂದೇಕೋ ಬರಹದ ರೂಪ ಕೊಡಬೇಕೆನಿಸಿತ್ತು. ನಿನಗೆ ಬರೆದ ಅದಷ್ಟೋ ಕವನಗಳು ಡೈರಿಯಲ್ಲಿನ್ನೂ ಮುಸುಕು ಹೊದ್ದು ಮಲಗಿವೆ. ಮತ್ತೆ ಈ ಪತ್ರವೂ ಬಹುಶಃ ಮುಂಚೆ ಬರೆದ ಲೆಕ್ಕವಿಲ್ಲದಷ್ಟು ಪತ್ರಗಳಂತೇ, ಅಂಚೆಪೆಟ್ಟಿಗೆಯನ್ನೂ ಸೋಕದೇ, ಬೂದಿಯಾಗುತ್ತದೆ. ಮತ್ತೊಮ್ಮೆ ನಾನಿಲ್ಲಿ ನೀಕೊಟ್ಟ ಆತ್ಮವಿಶ್ವಾಸದೊಂದಿಗೆ ಜಗವನ್ನು ಗೆಲ್ಲಲು ಹೊರಡುತ್ತೇನೆ. ಅಲ್ಲೆಲ್ಲೋ ನನ್ನ ಹೆಸರು ಪ್ರಖ್ಯಾತಿ ಪಡೆದು ನಿನ್ನೆದುರು ನಿಂತಾಗ ನಿನ್ನ ಮುಖದಲ್ಲಿ ಮಂದಹಾಸ ಮೂಡಬಹುದೆಂಬ ಹಂಬಲದಿಂದ. ಹೌದು ಕಣೋ ಹುಚ್ಚ. ನನ್ನಂತ ಕಲ್ಲುಬಂಡೆಯೊಂದು ಕರಗಿ, ನಿನ್ನ ಮೇಲೆ ಒಮ್ಮುಖ ಪ್ರೇಮಕ್ಕೆ ಶರಣಾಗಿದ್ದು ಸತ್ಯವೇ!! ನೀ ದೂರಾದಾಗಲು ನೀ ಕೊಟ್ಟ ನೆನಪ ಬುತ್ತಿಯನ್ನು ಬಿಚ್ಚಿಟ್ಟು ಜೀವನ ಸಾಗಿಸುತ್ತಿರುವುದೂ ನಿಜವೇ!! ಮತ್ತೆ ಚಂದಿರನ ಬಳಿ ಆ ನಕ್ಷತ್ರ ಕಂಡಾಗ ನಿನ್ನ ನೆನಪಾಗುವುದೂ ನಿಜವೇ!! ಆ ಚಂದಿರನಡಿಯಲ್ಲಿ ಅಲ್ಲೆಲ್ಲೋ ನೀ ಸುಖವಾಗಿರಬಹುದೆಂಬ ನೆಮ್ಮದಿಯಲ್ಲಿ ಬದುಕು ದೂಡುತ್ತಿರುವುದೂ ನಿಜವೇ!!

ನಿನ್ನದೇ ನೆನಪಿನಲ್ಲಿ,

ಇಂತಿ
ನಿನ್ನವಳಾಗದೇ ಉಳಿದವಳು


ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಏನಂತ ಸಂಭೋದಿಸಲಿ ನಾ ನಿನ್ನ?: ಮಧು ಅಕ್ಷರಿ

Leave a Reply

Your email address will not be published. Required fields are marked *