ಪ್ರೀತಿಯ ಪುಟ್ಟ…
ಬದುಕಿನ ಭಾವಗತಿಯಲಿ ಬಿಡದೆ ಕಾಡುವವನ ಎಂದು ಕಾಣುವೆನೆಂದು ಕಾದುಕೊಂಡಿರುವಾಗ ಅಂದು ಮೊದಲ ಬಾರಿ ನೀನು ಬಳಿಸಾರಿ ಬಂದೆ. ಹಿಂದೆಂದೂ ಮೂಡದ ಒಲವೊಂದು ಅನುವಾದಾಗ, ನಿನ್ನ ಹಿರಿತನವನು ಮರೆತು ನನ್ನ ಮಗುತನವನೇ ಪೆÇರೆದು ಇತಿಮಿತಿಯ ರೇಖೆಗಳಿಂದ ಮುಕ್ತವಾಗಿ ಹಕ್ಕಿ ಹಾಡನು ಮನಬಿಚ್ಚಿ ಹಾಡಿದಾಗಲೆಲ್ಲಾ ನೀನು ಕೇಳುತ್ತಿದ್ದುದೊಂದೇ ‘ಎಲೈ ಮುದ್ದು ಬಂಗಾರಿ ನಾನೆಂದರೆ ನಿನಗ್ಯಾಕೆ ಇಷ್ಟೊಂದು ಪ್ರೀತಿ…’
ಆಗ…
ನನ್ನಾಲಯದಲ್ಲಿ ನೀನು ಇನ್ನಷ್ಟು ಪ್ರಕಾಶವಾಗುತ್ತಿದ್ದೆ. ಬೆಳ್ಳನೆ ಹೊಳಪು ಕೇಸರಿ ಕದಪಿನಲಿ ರಂಗು ಮೂಡಿ ನಿನ್ನಿರುವಿನಲಿ ಇನಿತಿನಿತಾಗಿ ಕರಗುತ್ತಲೇ ‘ನಾನೆಂದಿಗೂ ನಿನ್ನವಳು’ ಎಂದು ಉಸುರುತ್ತಿದ್ದೆ. ಅಂದು ನನ್ನೊಳು ಮೂಡಿದ ಪ್ರೀತಿಗೆ ಅರ್ಥವಿತ್ತೋ ಇಲ್ಲವೋ…! ಸ್ವಾರ್ಥವಂತೂ ಇರಲಿಲ್ಲ. ಒಡಲು ತುಂಬಾ ಪ್ರೀತಿ, ನಗು, ಹಾಸ್ಯ, ಚೇಷ್ಠೆ, ಮುನಿಸು, ಎಲ್ಲವೂ ನಮ್ಮೊಳಗೆ ನಿತ್ಯ ಸಂಚರಿಸುವ ಭಾವಗಳಾಗಿತ್ತು. ಇವೆಲ್ಲವುಗಳ ನಡುವೆ ಪ್ರೀತಿ ನಿಜವಾಗಿದ್ದು ಸುಳ್ಳಲ್ಲ. ದಿನೇ ದಿನೇ ನಮ್ಮ ನಡುವಿನ ಮಧುರ ಭಾವಗಳು ಗಾಡವಾಗಿ ಈ ಜನ್ಮದ ಸಂಗಾತಿ ನೀನೇ ಎಂಬಷ್ಟು ಆಪ್ತವಾಗಿಬಿಟ್ಟಿದ್ದೆವು. ಎಲ್ಲವನ್ನೂ ಕಾಯ ವಾಚಾ ಮನಸಾ ಒಪ್ಪಿಕೊಂಡು ಸಾಗುವ ಸಹಜೀವನ ನಮ್ಮದಾಗಬೇಕು. ಅಕಾಲಿಕ ನೆರೆಯಲಿ ಕಳೆದು ಹೋಗದೆ ಸಕಾಲಿಕ ಮಳೆಯಲ್ಲಿ ತಂಪಾಗಬೇಕು. ಮಾತು ಮೌನಗಳ ಸಂಜ್ಞೆಯಲ್ಲಿ ಗೇಯ ಭಾವದ ಪದಗಳಷ್ಟೇ ಕೂಡಿ ಸೋಬಾನೆ ಹಾಡುಗಳೇ ಕೇಳಿ ಬರಬೇಕು. ಒಲವ ಮುಗಿಲೊಳಗಿನ ಮುನಿಸನು ತೊರೆದು, ಒಳಗಿಳಿವ ಹಾಗೆ ಪ್ರೇಮದಿ ನುಡಿದು, ಮುದ್ದು ಮನಸಲಿ ಮನಸಾರೆ ಅರಳಿ ಎದೆಯಾಳದ ಪದವಾಗಬೇಕು. ಪ್ರೀತಿ ನುಡಿದ ಕಾವ್ಯಕೆ ಭವದ ಬಣ್ಣದಲೆಯಲಿ ಸೇರಿ ಅಲೆಯಬೇಕು. ಇರುವ ಒಂದೇ ಒಂದು ಬಾಳಲಿ ದಿನವೂ ಹೊಸತಾಗಿ ನಗುತಾ ಕಳೆಯುವ ಹಂಬಲ ನಮ್ಮಿಬ್ಬರದೂ ಆಗಿತ್ತಲ್ಲವೇ…!
ಆದರೆ ಕೆಲವೊಮ್ಮೆ ನಿನ್ನ ಸುಳಿವಿಲ್ಲದಾಗ, ಕ್ಷಣ ಕ್ಷಣವೂ ನಿನ್ನ ನೆನಪಿನಲ್ಲಿರುತ್ತಿದ್ದ ನನಗೆ ಕಾಯುವಿಕೆ ಅಸಹನೀಯವಾಗಿ ಮನಸ್ಸು ಪೂರ ಕಪ್ಪುಮೋಡ ಕವಿದಂತಾಗುತ್ತಿತ್ತು. ನನ್ನ ಮನಸ್ಸು ತಿಳಿಯಾಗಲು, ನಿನ್ನ ಕೋಪ ಶಮನವಾಗಲು ಒಂದೇ ಒಂದು ಪ್ರೀತಿಯ ಮಾತು ಸಾಕಾಗುತ್ತಿತ್ತು. ಆದರೆ ಹಾಗಾಗುತ್ತಿರಲಿಲ್ಲವಲ್ಲ್ಲಾ…! ಬದಲಿ ಭಾವಗಳಿಗೆ ಎಡೆ ನೀಡದೆ ಇರುವ ಬಂಧವನೇ ಮನಸಾ ಒಪ್ಪಿಕೊಂಡು ಅದರೊಳಗೆ ತನ್ನ ತಾ ಜೀಕಿಸಿಕೊಂಡು. ಮುಂದೆ ಮುಂದೆ ನಡೆದಂತೆ, ಮಾತುಗಳು ಪರವಾಗದೆ ವಿವಶವಾಗಿ ಮೌನ ತೀರಕ್ಕೆ ಬಂದು ನಿಂತಿದ್ದು, ಸೋಲು ಸೋಲೆಂದೆನ್ನದೆ ಮರುಮಾತಿಗೆ ಮುನ್ನುಡಿ ಬರೆಯುತ್ತಿದ್ದುದು. ಮೌನ ಬಿಡುವ ಹೊತ್ತು, ಅಲ್ಲಿ ಅರಳುವ ಹೂವು, ಮುದ್ದು ಮನಸ್ಸಿನ ಚಿಟ್ಟೆ, ರಾಶಿ ರಾಶಿ ಒಲವಿನ ಗೀತೆಗಳು. ಆ ಕ್ಷಣಗಳು ಎಷ್ಟೊಂದು ಹಿತವಾಗಿರುತ್ತಿತ್ತು ಅಲ್ಲವೇ…! ಕೆಲವೊಮ್ಮೆ ಒಂದರ ಮೇಲೊಂದರಂತೆ ಒಮ್ಮತದ ಒಪ್ಪಂದಗಳು ಮುರಿದು ಬೀಳುತ್ತಿರಲು ‘ಎಲ್ಲಿ ಈ ನಂಟು ಕಳೆದು ಹೋಗುವುದೋ’ ಅನ್ನುವ ಅಳುಕು ಒಳಗೊಳಗೆ ಕಾಡುತ್ತಿತ್ತು.
ಪ್ರೀತಿಗೆ ಒಲಿದ ಮಾತು ವಿರಸದ ವೇಳೆಯಲಿ ಗತಿ ಬದಲಿಸದೆ ಇರುತ್ತಿದ್ದರೆ, ಪೂರ್ಣ ಅಪೂರ್ಣತೆಯ ನಡುವೆ ಇಬ್ಬಗೆಯ ದನಿಯೇಳದಿರುತ್ತಿದ್ದರೆ ಹೀಗಾಗುತಿರಲಿಲ್ಲವೇನೋ…! ಒಪ್ಪು ತಪ್ಪುಗಳ ಸವಾಲಿಗಿಂತ ಸಣ್ಣ ಕಾರಣ ಸಾಕು ಒಂದು ಎರಡಾಗಲು ಮೃದು ಮಂದಹಾಸದ ಬಣ್ಣ ಮಾಸಲು. ನೀನಿರುವ ಹಾಗೆಯೇ ನಾನು, ನಾನಿರುವ ಹಾಗೆಯೇ ನೀನು ಒಪ್ಪಿಕೊಂಡೆವಾದರೂ, ಕೆಲವೊಮ್ಮೆ ಸಲುಗೆಯ ಮಾತಿನಲ್ಲಿ ಬಿರುಸಿನಲೆಯೆದ್ದು ಭಾವದೊಡಲು ಕದಡಿದಾಗ ಇಬ್ಬರೂ ಮೌನದ ಪರದೆ ಎಳೆದು ಬಿಡುತ್ತಿದ್ದೆವು. ಬದುಕಿನ ಒಂದೊಂದು ಕ್ಷಣ ಜೊತೆಯಾಗಿ ಕಳೆಯುವ ಆಸೆ ಪರಿಭಾಷೆಗಳು ಇನ್ನಷ್ಟು ಗಾಢವಾಗಬೇಕಾದರೆ ‘ಅಹಂನ ಕುಣಿಕೆ ಕಳಚಿ ಬಿಡಬೇಕಿತ್ತು’
ಅಂದು ಮಾತಿನ್ನೂ ಮುಗಿದಿರಲಿಲ್ಲ ಭಾವವೂ ನೀರಸವಾಗಿರಲಿಲ್ಲ. ತಿಂಗಳ ಬೆಳಕಿರದ ಹಾದಿಯಲ್ಲಿ ಕಳೆದು ಹೋಗುವೆನೆಂದು ಪರಿಪರಿಯಾಗಿ ನೀ ನೊಂದು ನುಡಿದಾಗ ಮಾತು ಸಂಧಾನಕ್ಕೆ ಸೋತು ಸುಮ್ಮನಾಯಿತು. ಬರೀ ನನಗಷ್ಟೆ ಕೇಳುವಂತೆ ಮೌನದಿರುಳಿನಲ್ಲೊಂದು ನೀ ಹಾಡಿದ ವಿದಾಯಗೀತೆ…! ಅಂದಿನಿಂದ ಪ್ರತಿ ಇರುಳಿನ ಹೊತ್ತಗೆಯಲ್ಲಿ ನೀನಿರುವ ಮುಖ್ಯ ಪುಟಗಳೇ ತೆರೆದುಕೊಂಡಾಗ ರೆಪ್ಪೆ ಭಾರವಾಗಿ ಅದೆಷ್ಟೋ ಬಾರಿ ನಿಂತ ನೆಲವೇ ತೇವ. ಒಮ್ಮೆ ಬೆಳಕು, ಮಗದೊಮ್ಮೆ ಕತ್ತಲು. ಬೆಳಕಿನಲ್ಲಿ ಕಾಣುವ, ಕತ್ತಲಿನಲ್ಲಿ ಕಾಡುವ ಮುಖವೆಲ್ಲ ನಿನ್ನವೇ. ನೀನು ಕಳೆದು ಹೋದಾಗ ನೆನಪನುಳಿದು ಮಿಕ್ಕಿದೆಲ್ಲವೂ ನಿನ್ನ ಹಿಂದೆಯೇ…! ಖಾಲಿ ಖಾಲಿ ಭಾವ ಕಾಡಿದಾಗಲೂ ಬರೀ ನೀನಷ್ಟೆ ಅಲ್ಲಿ ಇಲ್ಲಿ ಅಲೆಯುತ್ತಿದ್ದವನು.
ಈಗೀಗ ಚಿಗರೆ ಮರಿಗಳ ಮುದ್ದಿನಾಟದ ದನಿ ಕೇಳಿ ಬರುತ್ತಿಲ್ಲ. ಮೆಲ್ಲನೆ ಮುತ್ತಿಟ್ಟು ಹೋಗುವ ಹಕ್ಕಿಗಳ ಸುಳಿವಿಲ್ಲ. ಸುತ್ತ ಹೂಬಳ್ಳಿಯ ಘಮವಿರದೆ ಚಿಟ್ಟೆಗಳ ರಂಗಿನೊಲವಿಲ್ಲವೆಂದು ಕೆಲವೊಮ್ಮೆ ಅದೇನೋ ನೆನೆದು ಸುಮ್ಮನೆ ನಗುತ್ತೇನೆ. ಯಾರೂ ಸುಳಿಯದ ಕಪ್ಪಿರುಳಿನಲಿ ಮೊಗ್ಗು ಮನಸ್ಸನ್ನು ಹದವಾಗಿ ಒಡೆದು ನೆಲದ ಮೇಲುರುಳಿ ಹಗುರಾಗುತ್ತೇನೆ. ನಮ್ಮೀರ್ವರ ಮಾತಿರದ ಮೌನಕೆ ಒಳಗೊಳಗೆ ಸುಡುವ ಝಳದಲಿ ತೆಳುವಾಗುತ್ತೇನೆ. ನೋಡು ನೋಡುತ್ತಲೇ ನೆಲದ ಗುಣವನು ಒಪ್ಪಿಕೊಳ್ಳುತ್ತೇನೆ.
ಜೀವನ ಅಂದರೆ ಇದೇ ತಾನೇ…? ನೋವು ನಲಿವುಗಳ ಹಾದಿಯನು ಇದ್ದಂತೆ ಒಪ್ಪಿಕೊಳ್ಳುವುದು. ಒಳಗಿನ ಕಶ್ಮಲಗಳನು ಅಂದಂದಿಗೆ ತೊಳೆದು ಹರಿವ ತೊರೆಯಂತೆ ನಿರ್ಮಲವಾಗುವುದು. ಪ್ರೀತಿ ಎಲ್ಲರೂ ಮಾಡುತ್ತಾರೆ ಆದರೆ ಜೊತೆಯಾಗಿ ಬಾಳುವ ಅವಕಾಶ ಕೆಲವರಿಗಷ್ಟೇ ಲಭಿಸುತ್ತದೆ. ಸನಿಹವಿದ್ದರೆ ಮಾತ್ರ ಪ್ರೀತಿ ಅಲ್ಲ. ದೂರದಲ್ಲಿದ್ದುಕೊಂಡೇ ತಾನು ಇಷ್ಟ ಪಡುವ ಜೀವದ ಒಳಿತನ್ನು ಬಯಸುವುದು ಕೂಡ ಪ್ರೀತಿಯೇ. ಈ ಪತ್ರದಲ್ಲಿ ಬರೆದಿರುವುದೆಲ್ಲ ನನ್ನ ಭಾವುಕ ಮನಸ್ಸಿನ ಪುಟಗಳ ಕಥೆಗಳು. ಅಂದು ಎನ್ನೊಳು ನಿನಗಾಗಿ ಪಲ್ಲವಿಸಿದ ಪ್ರೀತಿ, ನನ್ನ ಪಾಲಿಗೆ ಎಷ್ಟು ಮುಖ್ಯವಾಗಿತ್ತು ಎನ್ನುವುದಕ್ಕಷ್ಟೇ ಈ ಅಕ್ಷರ ಕಾವ್ಯ.
-ಅನಿತಾ ಪಿ ತಾಕೊಡೆ