ಒಂದು ಹಂತ ಕಳೆದ ಮೇಲೆ ಎಲ್ಲವೂ ಎಲ್ಲಕೂ ಅರ್ಥ ಬರುತ್ತದೆ ಅಥವಾ ಅದುವರೆಗೆ ನಾವು ಕೊಟ್ಟು ಕೊಂಡಿದ್ದ ಅರ್ಥ ಹೋಗುತ್ತದೆ. ಮೂಲತಃ ಅರ್ಥ ಎಂಬುದೇ ಸಾಪೇಕ್ಷವಾದುದು; ನಿರಪೇಕ್ಷವಲ್ಲ! ಇದುವರೆಗಿನ ಭಾಷಾವಿಜ್ಞಾನದ ಅಧ್ಯಯನವು ಅರ್ಥವನ್ನು ಪದಗಳಲ್ಲಿ ಅಥವಾ ವಾಕ್ಯಗಳಲ್ಲಿ ಹುಡುಕುತ್ತಾ ಬಸವಳಿದಿದೆ. ಮಾತಿನಾಚೆಗೂ ಇರುವ ಅರ್ಥಸಾಧ್ಯತೆಗಳನ್ನು ಅರಿಯುವುದಾದರೂ ಹೇಗೆ? ಆಗ ಮನೋವಿಜ್ಞಾನ ಮತ್ತು ತತ್ತ್ವಜ್ಞಾನಗಳು ನಮ್ಮ ನೆರವಿಗೆ ಬರಬಹುದಾಗಿದೆ.
‘ವಾಗರ್ಥವಿವ ಸಂಪೃಕ್ತೌ ವಾಗರ್ಥಃ ಪ್ರತಿಪತ್ತಯೇ, ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ’ ಎಂದು ಮಹಾಕವಿ ಕಾಳಿದಾಸನು ತನ್ನ ರಘುವಂಶ ಮಹಾಕಾವ್ಯದ ಮಂಗಳ ಶ್ಲೋಕದಲ್ಲಿ ಪ್ರತಿಪಾದಿಸಿದ ಆಶಯದಂತೆ, ಶಬ್ದಾರ್ಥಗಳು ಪಾರ್ವತಿ ಪರಮೇಶ್ವರರ ಅರ್ಥಪೂರ್ಣ ಸಂಬಂಧದಂತಿರುತ್ತವೆ. ವಾಕ್ ಎಂದರೆ ಶಬ್ದ ಮತ್ತು ಅರ್ಥ ಎಂದರೆ ಅದಕ್ಕಿರುವ ಭಾವ- ಇವೆರಡನ್ನು ಬೇರ್ಪಡಿಸಲಾಗದು. ಮಾತು ಮತ್ತು ಅರ್ಥಗಳ ಸಂಯೋಗದ ಫಲಿತವೇ ವಾಗರ್ಥ; ಸಂವಹನದ ಸಾರ್ಥಕತೆ.
ಶಬ್ದ ಮತ್ತು ಅರ್ಥಗಳು ಒಂದರೊಡನೊಂದು ಬೆರೆತಿವೆಯೇನೋ ಸರಿ. ಆದರೆ ಹಾಗೆ ಬೆರೆತ ಹದವನು ತಿಳಿಯುವ ಮುದವನು ಕಂಡುಕೊಳ್ಳುವುದು ಹೇಗೆ? ಇಷ್ಟಕೂ ವ್ಯಕ್ತಿಯಿಂದ ವ್ಯಕ್ತಿಗೆ ಬೇರಾಗುವ ಅರ್ಥಗಳು ಬಹು ವಿಧವಾದ ವೈವಿಧ್ಯವನು ಹೊಂದಿರುವಾಗ ಇಂಥದೇ ಅರ್ಥ ಎಂದು ಆರೋಪಿಸುವುದಾದರೂ ಹೇಗೆ? ನಮ್ಮ ಮನಸ್ಥಿತಿ ಮತ್ತು ನಾವಿರುವ ಪರಿಸ್ಥಿತಿಗಳ ಮೂಲಕ ಅರ್ಥಗಳನು ಮಾಡಿಕೊಳ್ಳುವುದರಿಂದ ಇಂಥದಕ್ಕೆ ಇಂಥದೇ ಅರ್ಥ ಎಂದು ಇದಮಿತ್ಥಂ ಎನ್ನಲಾಗದು. ಮಾತಿಗೊಂದು ಅರ್ಥ ಹುಡುಕುವ ಮತ್ತು ಅರ್ಥಕೊಂದು ಭಾವವೈವಿಧ್ಯ ತಡಕುವ ಇಂದಿನ ಆಧುನಿಕ ಬಹುಮಾಧ್ಯಮಗಳ ಹಾವಳಿಯಲ್ಲಿ ಯಾವುದೋ ಎಲ್ಲಿಗೋ ತಲಪಿ, ನಾನು ಆ ಅರ್ಥದಲ್ಲಿ ಹೇಳಿರಲಿಲ್ಲ ಎಂಬ ಸಮಜಾಯಿಷಿಯು ಪದೇ ಪದೇ ನೀಡಿದರೂ ಅದೂ ಈಗಾಗಲೇ ಪ್ರಸಾರವಾಗಿರುವ ಅಪಾರ್ಥಗಳ ಸಂತೆಗದ್ದಲದಲ್ಲಿ ಅರಣ್ಯರೋದನವಾಗುತ್ತದೆ. ಅಷ್ಟರಲ್ಲಾಗಲೇ ಅನರ್ಥಗಳು ಸಂಭವಿಸಿ ಅನ್ಯಾರ್ಥಗಳು ವಿಜೃಂಭಿಸಿ, ಮಾತಿನ ಮಾಲಿನ್ಯ ನಮ್ಮನ್ನು ಕಂಗೆಡಿಸಿ, ಸುಮ್ಮನಿರುವಂತೆ ಮಾಡುತ್ತದೆ.
ಈಗ ವಿಷಯಕೆ ಬರುತ್ತೇನೆ: ಒಂದು ಕಾಲದಲಿ ಅರ್ಥವಾಗಿದ್ದುದು ಮುಂದೊಂದು ಕಾಲದಲಿ ಅರ್ಥಹೀನವೆನಿಸಬಹುದು. ಅದರಲೂ ನಮ್ಮ ಬದುಕಿನ ನಂಬಿಕೆಗಳು ಮತ್ತು ಆಚರಣೆಗಳ ವಿಚಾರದಲಿ ಈ ಮಾತು ಹೆಚ್ಚು ಸೂಕ್ತ. ಒಮ್ಮೆ ಅರ್ಥಹೀನ ಎನಿಸಿದ ಮೇಲೆ ನಮ್ಮ ಬದುಕಿನ ಧಾಟಿಯೇ ಬದಲಾಗುತ್ತದೆ. ಅಥವಾ ಅರ್ಥವಾದ ಮೇಲೆ ಕೂಡ!
ಮೊನ್ನೆ ನನ್ನ ಆತ್ಮೀಯ ಗೆಳೆಯರು ಭೇಟಿಯಾದಾಗ ಇವೆಲ್ಲ ಹಾಗೇ ಲೋಕಾಭಿರಾಮವಾಗಿ ಚರ್ಚೆಯಾಯಿತು. ನಾನು ಹೆಚ್ಚು ಚರ್ಚಿಸದೇ ಒಳ್ಳೆಯ ಕೇಳುಗನಾಗಲು ಪ್ರಯತ್ನಿಸಿದೆ. ಆದರೂ ಇದು ಬಿಡುವಾದಗಲೆಲ್ಲಾ ಕಾಡತೊಡಗಿತು. ವಾದ-ಸಿದ್ಧಾಂತ-ವ್ಯಕ್ತಿ ಸಂಬಂಧ ಇಟ್ಟುಕೊಂಡ ಪ್ರೀತ್ಯಭಿಮಾನಗಳನು ಹೊರ ಹಾಕುವ ಹಲವರು ವಿಚಿತ್ರವಾಗಿ ಬದುಕುತ್ತಿರುತ್ತಾರೆ. ಇಷ್ಟಕೂ ಇವೆಲ್ಲ ಪ್ರದರ್ಶಿತವಾಗಬಾರದ ಅಂತರಂಗದ ಭಕ್ತಿ ಗೌರವ. ತಮ್ಮೊಳಗನು ಹೊರ ಹಾಕುವ ಆತುರದಲಿ ಬಟ್ಟಂ ಬಯಲಾಗುತಾರೆ; ಹಗುರವಾಗುತಾರೆ. ವಾದಗಳಿಗೆ ಜೋತು ಬೀಳುವುದು, ಸಿದ್ಧಾಂತಗಳ ರಾದ್ಧಾಂತದಲಿ ಅಹಮಿಸುತಾ ತನ್ನದೇ ಸರಿಯೆಂದು ವಾದಿಸಿ ವ್ಯಗ್ರರಾಗುವುದು, ಇರುವ ಒಂದು ಜೀವಿತವನು ಸಂತಸದಿಂದ ಕಳೆಯದೇ ದುಃಖವನು ಆವಾಹಿಸಿಕೊಂಡು ಅಳಲು ಪಡುವುದು, ವಿವಿಧ ರಂಗಗಳಲಿ ಪರಮ ಸಾಧನೆ ಮಾಡಿದ ಪುಣ್ಯಾತ್ಮರು- ಇಂಥವರ ಭಾವಚಿತ್ರ, ಪ್ರತಿಮೆ, ವಿಗ್ರಹಗಳನಿಟ್ಟುಕೊಂಡು ಆರಾಧಿಸುವುದು- ಇವೆಲ್ಲ ಅಭಿಮಾನದ ಮಹಾಪೂರ ಎಂದಷ್ಟೇ ತಿಳಿದು ಕೈ ಬಿಡಲಾಗದು. ಜೀವ-ಜೀವನವನ್ನು ಕುರಿತ ಅವರ ಅನಿಸಿಕೆ ಮತ್ತು ವೈಯಕ್ತಿಕ ನೆಲೆ-ಬೆಲೆ ಎಂದು ತೂಗಿ ಸುಮ್ಮನಿರಲಾಗದು. ಆ ಆದರ್ಶನೀಯ ಸಾಧಕ ಮಹನೀಯರ ಮಾತುಗಳನೋ, ಕೃತಿಗಳನೋ ಉಲ್ಲೇಖಿಸಿ ಉದಾರತೆಯಿಂದ ವರ್ತಿಸುವವರು ಬೇರೆ. ಇದು ಸಹನೀಯ ಮತ್ತು ಆರೋಗ್ಯಕರ.
ಆದರೆ ವ್ಯಕ್ತಿಪೂಜೆಯನು ವಿಜೃಂಭಿಸಿ, ತಾವಿರುವ ಕಡೆಯಲೆಲ್ಲಾ ಅವರ ಭಾವಚಿತ್ರಗಳನ್ನು ತೂಗು ಹಾಕಿ, ತಮ್ಮ ಆರಾಧನಾ ಗೌರವವನ್ನು ಇತರರೂ ವ್ಯಕ್ತಪಡಿಸಬೇಕೆಂದು ಒತ್ತಾಯಿಸುವ ಮಂದಿ ಅಸಹ್ಯವನ್ನುಂಟು ಮಾಡುವಷ್ಟು ಅತಿರೇಕಗೊಳ್ಳುತ್ತಾರೆ. ವ್ಯಕ್ತಿಪೂಜೆಯೇ ತಪ್ಪು; ತತ್ತ್ವಪೂಜೆ ಒಪ್ಪು ಎಂಬ ಆಲೋಚನೆಯನ್ನು ನಾನು ಪೂರ್ಣ ಒಪ್ಪಲಾರೆ. ಮಹಾತ್ಮರ ಮತ್ತು ಮಹಾನುಭಾವರ ಜನ್ಮ ದಿನಾಚರಣೆಗಳಂದು ನಾವು ಅವರ ಭಾವಚಿತ್ರಕ್ಕೆ ಭಕ್ತಿ ಮತ್ತು ಗೌರವಗಳಿಂದ ನಮಿಸುತ್ತೇವೆ. ದೇವಾಲಯಗಳಲ್ಲಿ ವಿಗ್ರಹಗಳಿಗೆ ತನುಮನಧನಪೂರ್ವಕ ನಮಸ್ಕರಿಸುತ್ತೇವೆ. ಅಷ್ಟೇಕೆ, ನಮ್ಮಿಷ್ಟದ ಮತ್ತು ನಾವು ಗೌರವಿಸುವ ಸ್ನೇಹಿತರೂ ಅಧಿಕಾರಿಗಳೂ ಸಾಧಕರೂ ಆದವರನ್ನು ಭೇಟಿಯಾದಾಗ ಎರಡೂ ಕೈ ಮುಗಿದು ಹೃದಯಪೂರ್ವಕ ವಂದಿಸುತ್ತೇವೆ. (ಕೋವಿಡ್ ಪರಿಚಯವಾದ ಮೇಲೆ ಹಸ್ತಲಾಘವ ತೀರಾ ಎಂದರೆ ತೀರಾ ಕಡಮೆಯಾಗಿ ಕೈಮುಗಿಯುವುದೇ ವಿಶ್ವವ್ಯಾಪಿಯಾಗಿದೆ!) ಇದೂ ಒಂದು ರೀತಿಯಲ್ಲಿ ವ್ಯಕ್ತಿಪೂಜೆಯೇ! ಹಾಗಾಗಿ, ನಾನು ವ್ಯಕ್ತಿಪೂಜೆಯ ವಿರೋಧಿಯಾಗಲಾರೆ; ಆದರದು ತೀರ ಅತಿಯಾಗಿ ವ್ಯಕ್ತಿಯನ್ನೇ ವಿಜೃಂಭಿಸಿ, ಅವರ ತತ್ತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ, ಪ್ರದರ್ಶನ ಕಾಮಿಗಳಾಗುವ ಹಾಗೂ ಸ್ವಾರ್ಥಲಾಲಸೆಗೆ ಬಿದ್ದು ಸೋಗಲಾಡಿಗಳಾಗುವ ಅಂಧಾಭಿಮಾನಿಗಳನ್ನು ಕಂಡಾಗ ಜುಗುಪ್ಸೆಯುಂಟಾಗುತ್ತದೆ. ಯಾವುದೇ ಆಗಲಿ ಅತಿಯಾಗಬಾರದು; ಮಿತಿಯನರಿತವರು ಯತಿಗಳಂತಾಗುವರು ಎಂಬ ಮಾತು ಸತ್ಯ.
ಇಂಥ ಸಾಧಕರೂ ಮಹಾಮಹಿಮರೂ ದೊಡ್ಡವರೂ ಆದವರೊಂದಿಗೆ ನಾವು ಗುರುತಿಸಿಕೊಳ್ಳುವುದು ತಪ್ಪಲ್ಲ; ಆದರೆ ಸ್ವಾರ್ಥಮೂಲದಿಂದ ತೋರುವ ಅಭಿಮಾನ ನಿಜಕ್ಕೂ ತಪ್ಪು. ಅವರು ನನ್ನ ಊರಿನವರು, ನನ್ನ ಸಂಬಂಧಿಕರು, ನನ್ನ ಜಾತಿಯವರು, ನನ್ನ ಭಾಷೆಯವರು ಎಂಬ ಅಭಿಮಾನವು ಮೇಲ್ನೋಟಕ್ಕೆ ತಪ್ಪೆನಿಸದು; ಏಕೆಂದರೆ ಅಭಿಮಾನಕ್ಕೆ ಇಂಥದೇ ನೀತಿ ನಿಯಮಾವಳಿಗಳಿಲ್ಲವಲ್ಲ! ಈ ಅಭಿಮಾನವು ನಮ್ಮ ಆತ್ಮಗೌರವವನ್ನು ಪೋಷಿಸುವಂತಿರಬೇಕು ಜೊತೆಗೆ ನಾನು ತೋರಿದ ಅಭಿಮಾನವನ್ನು ನೀವೂ ತೋರಬೇಕು ಎಂದು ಒತ್ತಾಯಿಸುವುದು ತಪ್ಪೇ ತಪ್ಪು. ಎಲ್ಲ ಊರಿನಲ್ಲೂ ಎಲ್ಲ ಜಾತಿಯಲ್ಲೂ ಎಲ್ಲ ಭಾಷೆಯಲ್ಲೂ ಎಲ್ಲ ದೇಶದಲ್ಲೂ ಒಳ್ಳೆಯವರೂ ಇರುತ್ತಾರೆ; ಹಾಗೆಯೇ ಕೆಟ್ಟವರೂ ಇರುತ್ತಾರೆ. ಈ ಒಳ್ಳೆಯ ಮತ್ತು ಕೆಟ್ಟ ಎಂಬ ವರ್ಗೀಕರಣ ಕೂಡ ನಂನಮ್ಮ ಮನೋಧರ್ಮ ಮತ್ತು ಬದುಕಿನ ಆದ್ಯತೆಗಳನ್ನು ಅವಲಂಬಿಸಿರುತ್ತದೆ. ಒಮ್ಮೆ ಒಳ್ಳೆಯವರೆನಿಸಿಕೊಂಡವರು ಮತ್ತೊಮ್ಮೆ ಕೆಟ್ಟವರೆನಿಸಬಹುದು. ನನಗೆ ನೆರವು ನೀಡಿದಾಗ ಒಳ್ಳೆಯವರು; ಇಲ್ಲದಾಗ ಕೆಟ್ಟವರು ಅಷ್ಟೇ. ಮನುಷ್ಯ ಅಂತಿಮವಾಗಿ ಸ್ವಾರ್ಥಿ ಮತ್ತು ಅವಕಾಶವಾದಿ. ಇದರಾಚೆಗೂ ನನ್ನ ಆಲೋಚನೆ ಮತ್ತು ವರ್ತನೆಗಳು ನಿಷ್ಪಕ್ಷಪಾತವಾಗಿದ್ದರೆ ಅದು ಆ ವ್ಯಕ್ತಿಯ ಅರ್ಹತೆ, ಯೋಗ್ಯತೆ ಮತ್ತು ಸಂಸ್ಕಾರದಿಂದ ದೊರಕಿಸಿಕೊಂಡ ಸನ್ನಡತೆಯೆಂದೇ ಅರ್ಥ.
ದೊಡ್ಡವರೊಂದಿಗೆ ಗುರುತಿಸಿಕೊಳ್ಳುವುದು ಎರಡು ರೀತಿ: ಒಂದು, ಪ್ರೀತಿ-ಅಭಿಮಾನಗಳಿಂದ ಮತ್ತೊಂದು, ದ್ವೇಷ-ದುರಭಿಮಾನಗಳಿಂದ. ಇವೆರಡೂ ಪ್ರಬುದ್ಧತೆಯ ಲಕ್ಷಣವಲ್ಲ! ಒಬ್ಬರ ಆಲೋಚನೆ ಮತ್ತು ತತ್ತ್ವ ಸಿದ್ಧಾಂತಗಳು ನನಗಿಷ್ಟವಾಗಬಹುದು; ಆಗದೆಯೂ ಇರಬಹುದು. ಹಾಗೆಂದ ಮಾತ್ರಕೇ ಅವು ಪ್ರೀತಿ ಮತ್ತು ದ್ವೇಷಗಳಿಗೆ ಕಾರಣವಾಗುತ್ತವೆಂದರೆ ಅದರಂಥ ಅವಿವೇಕ ಮತ್ತೊಂದಿಲ್ಲ! ಪರಮಾತ್ಮನ ಜಗತ್ತಿನಲ್ಲಿ ಎಲ್ಲವೂ ಒರಿಜಿನಲ್; ಡೂಪ್ಲಿಕೇಟ್ ಎಂಬುದೇ ಇಲ್ಲ! ಒಂದೇ ಮರದಲ್ಲಿ ಬಿಟ್ಟ ಹಣ್ಣುಗಳೆರಡರಲ್ಲಿ ಸೂಕ್ಷ್ಮಾತಿಸೂಕ್ಷ್ಮ ರುಚಿವ್ಯತ್ಯಾಸವಿರುತ್ತದೆ. ಬಣ್ಣವಾಗಲಿ, ಆಕಾರವಾಗಲಿ, ಸ್ವಾದವಾಗಲಿ ವಿಭಿನ್ನ. ಒಂದು ಮರದ ಎಲೆಗಳೂ ಒಂದೇ ರೀತಿಯಲ್ಲಿರುವುದಿಲ್ಲ. ಈ ಅಗಾಧ ವಿಶ್ವದಲ್ಲಿ ಒಂದು ಇನ್ನೊಂದರಂತೆ ಇರಬಹುದು; ಆದರೆ ಅದು ಬೇರೆ; ಇದು ಬೇರೆ! ಹಾಗೆಯೇ ಸಕಲಜೀವರಾಶಿಯ ಗುಣವೈವಿಧ್ಯ. ಒಂದೇ ತಾಯಿಯ ಮಕ್ಕಳಿಬ್ಬರಲ್ಲಿ ಆಲೋಚನೆ, ಮಾತು ಮತ್ತು ವರ್ತನೆ, ಅಭಿರುಚಿಗಳು ವ್ಯತ್ಯಾಸದಿಂದ ಕೂಡಿರುತ್ತವೆ. ಅವರಿಬ್ಬರನ್ನು ಬೆಳೆಸಿದ ಪರಿಸರವಾಗಲೀ, ಕೊಡಿಸಿದ ಶಿಕ್ಷಣವಾಗಲೀ, ತೋರಿದ ಅಕ್ಕರೆಯಾಗಲೀ ಎಲ್ಲವೂ ಒಂದೇ ಆಗಿದ್ದರು ಕೂಡ. ಹಾಗಿದ್ದಾಗ ನಮ್ಮೆಲ್ಲರ ಆಲೋಚನೆ, ಅಭಿರುಚಿ ಹಾಗೂ ಇಷ್ಟಾನಿಷ್ಟಗಳು ಖಂಡಿತವಾಗಿಯೂ ಒಂದೇ ಆಗಿರುವುದಿಲ್ಲ ಮತ್ತು ಆಗಿರಬಾರದು ಸಹ! ಈ ನಿಸರ್ಗದ ಮೂಲ ಲಕ್ಷಣವೇ ವೈವಿಧ್ಯಮಯತೆ.
ಅಂದ ಮೇಲೆ ಒಬ್ಬರಂತೆ ಇನ್ನೊಬ್ಬರಾಗುವುದು ನಿಸರ್ಗಕ್ಕೂ ಇಷ್ಟವಿರದ ಸಂಗತಿ. ಮಹಾತ್ಮ ಗಾಂಧಿಯನ್ನು ಇಷ್ಟಪಡೋಣ, ಆದರೆ ಅವರಂತೆ ಆಗದೇ ನಾವು ನಮ್ಮಂತಾಗುವುದನ್ನು ಕಲಿಯೋಣ! ಏಕೆಂದರೆ ಪ್ರತಿಯೊಬ್ಬರೂ ವಿಭಿನ್ನ ಮತ್ತು ಬೇರೆಯೇ. ಒಬ್ಬರು ಇನ್ನೊಬ್ಬರಂತಾಗುವುದು ಅಸಾಧ್ಯ ಕೂಡ. ಯಾರೂ ಯಾರನ್ನೂ ಶೇಕಡ ನೂರರಷ್ಟು ಒಪ್ಪಲು ಕಷ್ಟಸಾಧ್ಯ. ಅವರ ಯಾವುದೋ ಮಾತು, ವರ್ತನೆ ಮತ್ತು ಸಿದ್ಧಾಂತಗಳು ನಮಗೆ ಇಷ್ಟವಾಗದಿರಬಹುದು; ಹಾಗಂತ ಸಾರಾಸಗಟಾಗಿ ನಾವು ತಳ್ಳಿ ಹಾಕಲು ಸಾಧ್ಯವಾಗದು! ಗಾಂಧಿಯವರನ್ನು ಒಪ್ಪದೇ ಇರಲು ಹತ್ತು ಕಾರಣ ಅಥವಾ ಕ್ಯಾತೆಗಳಿರಬಹುದು; ಆದರೆ ಅವರನ್ನು ಮೆಚ್ಚಲು ಮತ್ತು ಆರಾಧಿಸಲು ಸಾವಿರ, ಲಕ್ಷ ಕಾರಣಗಳಿವೆ ಎಂಬುದನ್ನು ನಾನು ಅರಿಯಬೇಕು. ಜೊತೆಗೆ ನಾನು ತೆಗೆಯುತ್ತಿರುವ ಕ್ಯಾತೆಯು ನನ್ನ ಕಾಲಮಾನದಲ್ಲಿ ನನ್ನ ಆಲೋಚನೆ ಮತ್ತು ಅನುಭವಗಳ ಮಟ್ಟದಿಂದ ಬಂದದ್ದು ಎಂಬುದರ ಅರಿವಿರಬೇಕು. ನಿನ್ನೆ ಆಡಿದ ಮಾತು ನನಗೆ ಇಂದು ಸರಿಯೆನಿಸದೇ ಪಶ್ಚಾತ್ತಾಪ ಪಡುವ ಸಂದರ್ಭಗಳು ಎಲ್ಲರಿಗೂ ಎಷ್ಟು ಸಲ ಆಗಿಲ್ಲ? ಅಂತಹುದರಲ್ಲಿ ನಿರಂತರವಾಗಿ ಬದಲಾಗುತ್ತಿರುವ ಈ ವ್ಯಾಪಕ ಕಾಲಚಕ್ರದಲ್ಲಿ ಆಗಿನ ಸಂದರ್ಭಕ್ಕೆ ತೋರಿದ ಮಾತು ಮತ್ತು ವರ್ತನೆಗಳನ್ನು ಇಂದು ನಾನು ನನ್ನ ಅರಿವಿನ ಮತ್ತು ಅನುಭವದ ಮಿತಿಯಲ್ಲಿ ವಿಮರ್ಶಿಸುವುದು, ಟೀಕಿಸುವುದು, ವಿರೋಧಿಸುವುದು ಎಷ್ಟರಮಟ್ಟಿಗೆ ಸರಿ? ಹಾಗೆಯೇ ಅಂಧಾಭಿಮಾನ ಸಹ! ಅದರಲ್ಲೂ ಸಾಹಿತ್ಯಾದಿ ಲಲಿತಕಲೆಗಳ ವಿಚಾರದಲ್ಲಂತೂ ಇದೇ ಸರಿ ಎಂಬ ಮಾತಾಗಲೀ ವಾದವಾಗಲೀ ಬಹುಕಾಲ ನಿಲ್ಲುವುದಿಲ್ಲ. ಇನ್ನು ಅಂತಿಮ ನಿರ್ಣಯ ಎಂಬುದಂತೂ ದೂರವೇ ಉಳಿಯುತ್ತದೆ.
ಆಡಿದ ಮಾತು, ಬರೆದ ವಾಕ್ಯ-ಲೇಖನಗಳು, ಸೃಜಿಸಿದ ಕವಿತೆ- ಕತೆ ಕಾದಂಬರಿಗಳು, ಕಣ್ಣಮುಂದೆ ಆಡಿದ ರೂಪಕ ನಾಟಕ-ನೃತ್ಯಗಳು, ನಿರ್ಮಿಸಿದ ಚಲನಚಿತ್ರಗಳು, ಬಿಡಿಸಿದ ಚಿತ್ರಗಳು, ನುಡಿಸಿದ ಮತ್ತು ಹಾಡಿದ ಸಂಗೀತ ಈ ಎಲ್ಲವೂ ಹಲವು ನೂರು ಅರ್ಥ ಸಾಧ್ಯತೆಗಳನ್ನು ಆಯಾಯ ವಯೋಮಾನ ಮತ್ತು ಮನೋಮಾನಗಳ ಹಿನ್ನೆಲೆಯಲ್ಲಿ ತೆರೆದು ತೋರುತ್ತವೆ. ನಾನು ಬೆಳೆದ ಹಾಗೆ ಎಂದೋ ಓದಿದ ಎಂದೋ ಕೇಳಿದ ಎಂದೋ ನೋಡಿದ ಈ ಸೃಷ್ಟಿಶೀಲ ಕಲಾಪ್ರಕಾರಗಳು ಹೊಸ ಗುಟ್ಟುಗಳನ್ನೂ ವೈವಿಧ್ಯಮಯ ಗ್ರಹಿಕೆಗಳನ್ನೂ ಬಿಟ್ಟು ಕೊಡಲಾರಂಭಿಸುತ್ತವೆ. ಹಾಗಾಗಿ ಅರ್ಥವು ಕೇವಲ ಬರೆದದ್ದರಲ್ಲಿ ಮತ್ತು ಚಿತ್ರಿಸಿದ್ದರಲ್ಲಿ ಇರುವುದಿಲ್ಲ; ನನ್ನೊಳಗೂ ಹುತ್ತಗಟ್ಟಿ ಹರಳುಗಟ್ಟಿ ಸುಪ್ತಾವಸ್ಥೆಯಲ್ಲಿ ಕಾಯ್ದುಕೊಂಡು ಕಾವು ಕೂರಲು ಕಾಯುತ್ತಿರುತ್ತದೆ. ಇದಕಾಗಿಯೇ ಏನೋ ಓಶೋ ರಜನೀಶ್ ಒಮ್ಮೆ ‘ನಾನಾಡಿದ ಮಾತಿಗಷ್ಟೇ ನಾ ಜವಾಬುದಾರ; ನೀವು ಕೇಳಿಸಿಕೊಂಡಿದ್ದಕ್ಕಲ್ಲ!’ ಎಂದದ್ದು.
‘ವಾಗರ್ಥ ರಥವೇರಿ, ಭಾವದಗ್ನಿಯ ಪಥಂ ಬಿಡಿದು ಬನ್ನಿಂ, ಸಚ್ಚಿದಾನಂದ ಪೂಜೆಯಂ ಸಹೃದಯ ಹೃದಯ ಭಕ್ತಿ ನೈವೇದ್ಯಮಂ ಕೊಂಡು ಓದುವರ್ಗಾಲಿಪರ್ಗೊಲಿದೀಯೆ ಚಿತ್ಕಾಂತಿಯಂ!’ ಎಂದು ರಸಋಷಿ ಕುವೆಂಪು ಅವರು ತಮ್ಮ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಅರ್ಪಣೆಯಲ್ಲಿ ಬಿನ್ನವಿಸಿರುವಂತೆ, ರಾಮಾಯಣದ ದಿವ್ಯ ಚೇತನಗಳನ್ನು ತಮ್ಮ ಕಾವ್ಯದಾತ್ಮದಲಿ ಬಂದು ನೆಲೆಸಲು ಆಮಂತ್ರಿಸುತ್ತಾರೆ. ವಾಗರ್ಥಗಳ ರಥಕ್ಕೆ ಭಾವದಗ್ನಿಯ ಪಥವದು. ಅದು ಕೇವಲ ಬೆಂಕಿಯಲ್ಲಿ ಹಾದು ಹೋಗುವ ಅಗ್ನಿಪರೀಕ್ಷೆಯಲ್ಲ; ದಾರಿಯೇ ಗುರಿಯಾಗಿ ಉರಿವ ಬೆಂಕಿಯಾಗಿರುವ ನಿತ್ಯ ಸತ್ಯ ಸಂಗ್ರಾಮ. ಹೀಗಾದಾಗಲೇ ಮಾತಿಗೆ ಮಂತ್ರದ ಬಲ ಬಂದು ಕಸುವಾಗುತ್ತದೆ, ದೃಢವಾಗುತ್ತದೆ.
ಮಾತಿಗೊಂದು ಅರ್ಥ ಬೇಕೆ? ಅರ್ಥವಿದ್ದರಷ್ಟೆ ಸಾಕೆ? ಎಂದು ಬೇಂದ್ರೆಯವರು ಕೇಳುವಲ್ಲಿ ಮೇಲಿನ ಈ ಎಲ್ಲ ಮನೋಲಹರಿ ಸುತ್ತಿಕೊಂಡಿತು. ಹಾಗಾಗಿ, ಹಾಗಾಗಿಯೇ ಇದನ್ನು ಬಿಚ್ಚಿಡುತ್ತ ಸಾಗಿದ್ದೇನೆ. ಇದು ನಿಲ್ಲದ ದೂರತೀರಯಾನ; ನಿರಂತರ ಸಂವಹನ. ಆಡುತ, ಆಲಿಸುತ ಸಾಗೋಣ.
-ಡಾ. ಹೆಚ್ ಎನ್ ಮಂಜುರಾಜ್