ಅಧ್ಯಾಯ ೪: ನನಗೊಂದು ನೈಂಟಿ ಕೊಡಿಸಿ!
ಸೀತೆ ಯಾವ ವಿಚಾರದಲ್ಲೂ ಅತಿಯಾಸೆ ಉಳ್ಳವಳಲ್ಲ. ಬಟ್ಟೆ ಬರೆಯಲ್ಲೂ ಅಷ್ಟೇ. ಅವಳ ಬಳಿ ಇರುವವೇ ಮೂರು ವಾಯಿಲ್ ಸೀರೆ! ಎಲ್ಲಾದರೂ ಹೊರಗೆ ‘ಹೋಗಿ ಬರಲು’ ಹೊರಟಾಗ ಮಾತ್ರ ಅವುಗಳಲ್ಲೊಂದು ಟ್ರಂಕಿನಿಂದ ಹೊರಬರುತ್ತದೆ. ಉಪಯೋಗ ಮುಗಿದ ಕೂಡಲೇ ಒಗೆದು ಮಡಚಿ ಟ್ರಂಕಿನಲ್ಲಿಟ್ಟುಬಿಡುತ್ತಾಳೆ. ಇನ್ನೆರಡು ಸವೆದುಹೋದ ಹಳೆಯ ಸೀರೆ ತೋಟ ಗದ್ದೆಯ ಕೆಲಸದ ವೇಳೆ ಉಡಲು. ಇನ್ನು ಟ್ರಂಕಿನ ತಳ ಸೇರಿ ಕುಳಿತಿರುವ ರೇಷ್ಮೆ ಸೀರೆ! ತನ್ನ ಮದುವೆಯ ಧಾರೆಯ ವೇಳೆ ಧರಿಸಿದ್ದ ಆ ಸೀರೆಯನ್ನು ಮೈದುನ ಬಸಪ್ಪನ ಮದುವೆಯ ಹೊರತುಪಡಿಸಿ ಹೊರತೆಗೆಯುವ ಸಂದರ್ಭವೇ ಒದಗಿ ಬಂದಿಲ್ಲ. ಪುಟ್ಟಿ ದೊಡ್ಡವಳಾದ ಮೇಲೆ ಅದರಿಂದ ಒಂದು ಲಂಗ ಹೊಲೆಸಿ ಹಾಕಿ ಕಣ್ತುಂಬಿಕೊಳ್ಳಬೇಕೆಂಬುದು ಅವಳ ಒಂದು ಆಸೆ ಅಷ್ಟೆ. ಅಂತಹಾ ಸೀತೆ ಒಂದೇ ದಿನದಲ್ಲಿ ರಾತ್ರಿಯ ನಿಲುವಂಗಿಯ ಕನಸು ಕಟ್ಟಿಕೊಂಡಳೆಂದರೆ ಪಟ್ಟಣದ ಮಾಯೆಯ ಮೋಡಿಯೇ ಸರಿ!
ಇಷ್ಟು ದಿನವಾದರೂ ಹಾಸನ ನಗರ ನೋಡುವ ಅದೃಷ್ಟ ಸೀತೆಗೆ ಒಲಿದು ಬಂದಿರಲಿಲ್ಲ. ಪ್ರತಿವರ್ಷ ಚಿನ್ನಪ್ಪ ತಮ್ಮನ ಪಾಲಿನ ಭತ್ತ ಮಿಲ್ ಮಾಡಿಸಿ ಅಕ್ಕಿ ಕೊಟ್ಟು ಬರಲು ಹೋಗುವುದು ವಾಡಿಕೆಯಾಗಿತ್ತು. ಆದರೆ ಸೀತೆಯ ಕೈಯ ಇಸುಬು ಹಾಸನಕ್ಕೆ ಹೋಗುವ ಅವಕಾಶ ಒದಗಿಸಿಕೊಟ್ಟಿತ್ತು. ದೊಡ್ಡೂರಿನ ಡಾಕ್ಟರಿಗೂ ಬಗ್ಗಿರಲಿಲ್ಲ ಆ ಇಸುಬು. ನಾಟಿ ಔಷಧಿಗೂ ಕ್ಯಾರೆ ಎಂದಿರಲಿಲ್ಲ. ಎಕ್ಕದ ಹಾಲು ಬಿಟ್ಟು ನೋಡಿದಳು. ಪಕ್ಕದ ಚರ್ಮ ಸುಟ್ಟಿತೇ ಹೊರತು ಒಂದಿಷ್ಟೂ ಗುಣವಾಗುವ ಲಕ್ಷಣ ಕಾಣಲಿಲ್ಲ. ನೀರು ಬಿಟ್ಟುಕೊಂಡು ದಿನೇದಿನೇ ಅವಳ ಬಲ ಅಂಗೈಯ ಮೇಲ್ಭಾಗವನ್ನೆಲ್ಲಾ ಅಸಹ್ಯಕರವಾಗಿ ಆವರಿಸತೊಡಗಿತ್ತು. ನಾಗೇಶ ಡಾಕ್ಟರೇ ಮಂಗಳ ನರ್ಸಿಂಗ್‍ಹೋಂನಲ್ಲಿರುವ ಚರ್ಮದ ಡಾಕ್ಟರಿಗೆ ಕಾಗದ ಬರೆದುಕೊಟ್ಟು ಕಳಿಸಿದ್ದರು.
ಮೊದಲ ಬಾರಿಗೆ ಹಾಸನಕ್ಕೆ ಹೋಗುವುದಲ್ಲವ. ಪುಟ್ಟಿಯನ್ನೂ ಕರೆಸಿಕೊಂಡಿದ್ದಳು. ಬಹಳ ಕಾಲದಿಂದ ಇಷ್ಟಿಷ್ಟೇ ಎಂದು ಜೋಡಿಸಿ ಟ್ರಂಕಿನ ತಳದಲ್ಲಿ ಮಡಿಸಿಟ್ಟಿದ್ದ ಒಟ್ಟು ಐನೂರು ರೂಪಾಯಿಯಿತ್ತು. ಮಗುವಿಗೆ ಕಾಲ್ಚೈನು ಹಾಕಿಸಬೇಕು, ಕಿವಿ ಚುಚ್ಚಿಸಬೇಕು ಎಂದು ಕೋಳಿ, ಮೊಟ್ಟೆ ಮಾರಿ ಸಂಗ್ರಹಿಸುತ್ತಿದ್ದುದು. ಅದನ್ನು ಜೊತೆಗಿಟ್ಟುಕೊಂಡಿದ್ದಳು. ಅವರು ಹಾಸನ ತಲುಪುವ ವೇಳೆಗೆ ಬಸಪ್ಪ ಹಾಗೂ ಕಾವೇರಿ, ಬಸ್ ನಿಲ್ದಾಣದ ಬಳಿ ಬಂದು ಕಾದಿದ್ದರು. ಅವತ್ತು ಭಾನುವಾರವಾದದ್ದು ಅವರಿಗೆ ಅನುಕೂಲವೇ ಆಗಿತ್ತು.
‘ಇಲ್ಲೇ ನಿಂತಿರಿ ಒಂದೈದು ನಿಮಿಷ. ನಾವು ಇಲ್ಲೇ ಮಾರ್ಕೆಟ್‍ಗೆ ಹೋಗಿ ಬಂದ್‍ಬಿಡ್ತೀವಿ’ ಎನ್ನುತ್ತಾ ಕಾವೇರಿ ಸೀತೆ ಹಾಗೂ ಪುಟ್ಟಿಯೊಡನೆ ‘ಕಟ್ಟಿನ ಕೆರೆ’ ಕಡೆ ಹೆಜ್ಜೆ ಹಾಕತೊಡಗಿದಳು. ಮೂಲೆಯ ಹೂವಿನ ಅಂಗಡಿಗೆ ಹೋಗಿ ಎರಡು ಮೊಳ ಮಲ್ಲಿಗೆ ಹೂ ಕೊಂಡು, ಕಾವೇರಿ ತಾನೊಂದು ಮೊಳ ಮುಡಿದು ಅಕ್ಕನಿಗೂ ಒಂದು ಮೊಳ ಮುಡಿಸಿದಳು.
‘ನಿಂತಿರಿ, ಒಂದೆರಡು ಸಾಮಾನು ತರ್ತೀನಿ’ ಎನ್ನುತ್ತಾ ಹೂವಿನಂಗಡಿಯ ಮುಂದೆ ಸೀತೆಯನ್ನು ನಿಲ್ಲಿಸಿ ಕಾವೇರಿ ಜನಜಂಗುಳಿಯ ಮಧ್ಯೆ ನುಸುಳಿ ಹೋದಳು. ಎಡಕ್ಕೆ ಮುಖ್ಯರಸ್ತೆಯಲ್ಲಿ ಏಕಮುಖವಾಗಿ ಅಬ್ಬರಿಸಿ ಓಡುವ ಅಸಂಖ್ಯ ವಾಹನಗಳು. ಮಾರುಕಟ್ಟೆಯ ಒಳಗೆ ಅತ್ತಿಂದಿತ್ತ ಅವಸರದಿಂದ ನುಗ್ಗಾಡುವ ಜನಸಂದಣಿ. ಅಂತಹ ವಾಹನ ಹಾಗೂ ಜನಸಂದಣಿಯನ್ನು ಸೀತೆ ನೋಡಿಯೇ ಇರಲಿಲ್ಲ. ಪುಟ್ಟಿಯ ಕೈ ಹಿಡಿದು ಅಚ್ಚರಿಯಿಂದ ನೋಡತೊಡಗಿದಳು. ಕೆಳಗೆ ನೆಲದ ಮೇಲೆ ವಿವಿಧ ಹಣ್ಣು ತರಕಾರಿಗಳ ಅಂಗಡಿಗಳು ಇರುವುದು ಸೀತೆಯ ಅರಿವಿಗೇ ಬರಲಿಲ್ಲ. ಜನರೇಕೆ ಹೀಗೆ ಸುಮ್ಮನೆ ನುಸುಳಾಡುತ್ತಿದ್ದಾರೆ, ಮುಖ್ಯ ರಸ್ತೆಯಲ್ಲಿ ವಾಹ£ಗಳು ಅವಸರದಲ್ಲಿ ಏಕೆ ಒಂದೇ ದಿಕ್ಕಿನಲ್ಲಿ ಧಾವಿಸಿ ಹೋಗುತ್ತಿವೆ ಎಂದು ವಿಸ್ಮಯಪಡತೊಡಗಿದಳು.
‘ಜನಜಂಗುಳಿಯ ನಡುವೆ ನುಸುಳಿಹೋದ ಕಾವೇರಿ ಎತ್ತ ಹೋದಳು’ ನಾವೇನಾದರೂ ಈ ಜನಸಾಗರದ ಮಧ್ಯೆ ಕಳೆದುಹೋಗಿಬಿಟ್ಟರೆ! ಸಣ್ಣ ಭಯ ಕಾಡತೊಡಗಿತು. ಕಣ್ಣಾಡಿಸತೊಡಗಿದಳು. ಅದೃಷ್ಟಕ್ಕೆ ಕಾವೇರಿ ಸೀತೆ ನಿಂತ ನೇರದಲ್ಲಿ, ಎದುರುಬದಿಯಲ್ಲಿ ಎತ್ತರದಲ್ಲಿರುವ ಬೇಕರಿಯೊಂದರ ಮುಂದೆ ನಿಂತಿದ್ದಾಳೆ. ಅವಳನ್ನು ನೋಡಿ ವರ್ಷದ ಮೇಲಾಗಿತ್ತು. ಹಾಲು ಬಿಳುಪು ಬಣ್ಣದ ಹುಡುಗಿ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸುಂದರವಾಗಿದ್ದಾಳೆ ಎನಿಸಿತು. ನಿಮಿರಿ ನಿಮಿರಿ ಸಿಹಿತಿಂಡಿ ಹಾಗೂ ಕೇಕುಗಳನ್ನು ತೋರಿಸುವಾಗ ಅವಳ ಪುಟ್ಟ ನುಣುಪಾದ ಪಾದಗಳು ಆಕರ್ಷಕವಾಗಿ ಸೆಳೆದವು. ಅವಳ ಸೊಂಟದ ಬೆತ್ತಲೆ ಭಾಗ ಒಂದು ಸಣ್ಣ ಚುಕ್ಕೆಯಷ್ಟೂ ಐಬಿಲ್ಲದಂತೆ ಸುಂದರವಾಗಿ ಹೊಳೆಯುತ್ತಿದೆ.
ತನ್ನ ಪಾದ ಸೊಂಟದ ಕಡೆಗೊಮ್ಮೆ ನೋಡಿಕೊಂಡಳು. ಒಡೆದು ಸೀಳುಬಿಟ್ಟ ಕಪ್ಪಾದ ಪಾದಗಳು. ಬಿಸಿಲಿಗೆ ಸೀದು ಕರುಕಲಾದಂತೆ ಕಾಣುವ ಸೊಂಟ! ಅವಮಾನವಾದಂತೆನಿಸಿತು. ಯಾರೂ ಅವಳತ್ತ ನೋಡದೇ ಇದ್ದರೂ ಬಾಗಿ ಸೀರೆಯನ್ನು ಕೆಳಕ್ಕೆ ಜಗ್ಗಿ ಪಾದಗಳನ್ನು ಮುಚ್ಚಿಕೊಂಡಳು. ಸೆರಗನ್ನು ಸಡಿಲಗೊಳಿಸಿ ಸೊಂಟದ ಕಡೆಗೆಳೆದು ಮುಚ್ಚಿಕೊಂಡಳು.
ಕಾವೇರಿ ಅದೇ ಸಾಲಿನಲ್ಲಿದ್ದ ದಿನಸಿ ಅಂಗಡಿಗೆ, ಅಲ್ಲಿಂದ ಹಣ್ಣಿನ ಅಂಗಡಿಗೆ ಲಗುಬಗೆಯಿಂದ ಓಡಾಡಿ, ಬೇಕಾದ್ದು ಕೊಂಡಳು.
‘ಈ ಜನಸಂದಣಿಯ ಮಧ್ಯೆ ಹೇಗೆ ಹಕ್ಕಿಯಂತೆ ಹಾರಾಡುತ್ತಾಳೆ; ನನಗೆ ಈ ಬಗೆಯ ಚಟುವಟಿಕೆ ಸಾಧ್ಯವೆ!’ ಯೋಚಿಸುತ್ತಾ ನಿಂತಿದ್ದವಳಿಗೆ ಜನಸಂದಣಿಯನ್ನು ಸೀಳಿಕೊಂಡು ಕಾವೇರಿ ಬರುತ್ತಿರುವುದು ಕಾಣಿಸಿತು. ಚಿನ್ನಪ್ಪ ಲಗೇಜ್ ಬಳಿಯೇ ನಿಂತಿದ್ದ. ಬಸಪ್ಪ ಪಾರ್ಕಿಂಗ್ ಕಡೆಯಿಂದ ತನ್ನ ಟಿ.ವಿ.ಎಸ್. ನೂಕಿಕೊಂಡು ಬರುತ್ತಿದ್ದ.
‘ನೀವು ಆಟೋದಲ್ಲಿ ಹೋಗಿರಿ. ನಾವು ದೊಡ್ಡ ಮಾರ್ಕೆಟ್ ಕಡೆ ಹೋಗಿ ಬರ್ತೀವಿ’ ಎನ್ನುತ್ತಾ ಬಸಪ್ಪ ಸ್ಟಾರ್ಟ್ ಮಾಡತೊಡಗಿದ.
‘ಸಂಜೆ ಊಟಕ್ಕೆ ಏನ್ ತರ್ತೀರಿ’ ಎನ್ನುತ್ತಾ ಗಂಡನನ್ನು ಕೇಳಿದ ಕಾವೇರಿ ‘ಪೋರ್ಕ್ ಆಗುತ್ತೇನಕ್ಕ’ ಎಂದಳು ಸೀತೆಯ ಕಡೆ ತಿರುಗಿ. ತಬ್ಬಿಬ್ಬಾದಂತೆ ಕಂಡ ಸೀತೆ ‘ಅದ್ಯಾವ್ದು ಬ್ಯಾಡ ಸ್ವಲ್ಪ ಹಂದಿ ಮಟನ್ ಹಿಡಕೊಂಡು ಬರಕ್ಕೇಳು’ ಎಂದಳು. ಮುಸಿಮುಸಿ ನಗುತ್ತಾ ಕಾವೇರಿ ‘ಸರಿ’ ಎನ್ನುತ್ತಾ ಆಟೋಕ್ಕೆ ಕೈಬೀಸಿದಳು.
ಚಿನ್ನಪ್ಪ ಟಿ.ವಿ.ಎಸ್. ಹಿಂಬದಿಯಲ್ಲಿ ಠೀವಿಯಿಂದ ಕುಳಿತು ಮುಖ್ಯರಸ್ತೆಯಲ್ಲಿ ವಾಹನ ಸಾಗರದ ಮಧ್ಯೆ ನುಸುಳಿ ಹೋಗುವುದನ್ನೇ ಸೀತೆ ಹೆಮ್ಮೆಯಿಂದ ನೋಡುತ್ತಾ ನಿಂತಳು. ಲಗ್ಗೇಜ್ ತುಂಬಿಕೊಂಡ ಆಟೋ ಗುಂಡೇಗೌಡನ ಕೊಪ್ಪಲು ಕಡೆ ಧಾವಿಸತೊಡಗಿತು. ನಗರದ ಹೃದಯ ಭಾಗದಿಂದ ದೂರದಲ್ಲಿದ್ದುದರಿಂದ ಆ ಹೊಸ ವಿಸ್ತರಣದಲ್ಲಿ ಸಾಕಷ್ಟು ಚೆನ್ನಾಗಿರುವ ಒಂದು ಔಟ್‍ಹೌಸ್ ಬಾಡಿಗೆಗೆ ದೊರೆತಿತ್ತು. ಒಳಪ್ರವೇಶಿಸಿ ಲಗೇಜ್ ಎಲ್ಲಾ ತೆಗೆದಿಟ್ಟು ಕಾವೇರಿ ಮಲಗುವ ಕೋಣೆಗೆ ಹೋಗಿ ಕೆಲವೇ ನಿಮಿಷಗಳಲ್ಲಿ ಸೀರೆ ಬದಲಿಸಿ ನೈಟಿ ತೊಟ್ಟು ಬಂದಳು. ಸೀತೆಯ ಮುಂದೆ ಒಂದು ನೈಟಿ ಹಿಡಿದು ‘ಸೀರೆ ಬದಲಾಯಿಸು ಬಾರಕ್ಕ’ ಎಂದಳು. ‘ಅದು ಬೇಡ ಬಿಡು ಕಾವೇರಿ. ನಾನ್ ಸೀರೇಲೆ ಇರ್ತೀನಿ, ಸೀತೆ ನೈಟಿ ಇಷ್ಟಪಡದ್ದು ಕಂಡು ರೂಮಿಗೆ ಕರೆದೊಯ್ದು ಅಲ್ಮೇರಾ ತೆರೆದು ಹ್ಯಾಂಗರ್‍ನಲ್ಲಿದ್ದ ಹತ್ತಾರು ಸೀರೆಗಳಲ್ಲಿ ಯಾವುದಾದರೂ ಒಂದನ್ನು ಉಟ್ಟುಕೊಳ್ಳಲು ಸೂಚಿಸಿ ಹೊರಬಂದು ಅಡುಗೆಯ ಸಿದ್ಧತೆಯಲ್ಲಿ ತೊಡಗಿದಳು.
ನೈಟಿಯೆನ್ನುವುದು ಹಳ್ಳಿಯಲ್ಲೂ ಏನೂ ಹೊಸದಲ್ಲ. ಇತ್ತೀಚೆಗೆ ಮದುವೆಯಾಗಿ ತನ್ನೂರಿಗೆ ಬಂದ ಹುಡುಗಿಯರು ಎರಡೆರಡು ಮೂರುಮೂರು ಬಣ್ಣಬಣ್ಣದ ಆ ಉಡುಗೆ ಇಟ್ಟಿರುವುದು, ಓಣಿಯಲ್ಲೂ ಅದೇ, ನಲ್ಲಿಯ ಬಳಿಯೂ ಅದೇ, ತೋಟ ಗದ್ದೆ ಗೆಯ್ಯುವಾಗಲೂ ಅದೇ ಎಂಬಂತೆ ಮೆರೆದಾಡುತ್ತಿದ್ದುದು ಹೊಸದೇನೂ ಆಗಿರಲಿಲ್ಲ. ಇದನ್ನು ಕಂಡ ಹಳೆಯ ಕಾಲದ ಮುದುಕಿಯರು ‘ಅಚ್ಚುಕಟ್ಟಾಗಿ ಸೀರೆ ಉಟ್ಕಳಕೆ ಏನಾಗಿದೆ ಈ ಹುಡ್ಗಿರಿಗೆ. ಯಾವಾಗ ನೋಡಿದ್ರೂ ಸಾಬ್ರ ಹೆಂಗಸ್ರು ಬುರ್ಕಾ ಹಾಕಳ್ಳಂಗೆ ಗುಬ್ರಾಕಂಡಿರ್ತವೆ…ಹೇಲಕ್ಕೂ ಅದೇ ಉಚ್ಚೆ ಹುಯ್ಯಕ್ಕೂ ಅದೇ’ ಎಂದು ಛೇಡಿಸುತ್ತಿದ್ದರು.
ಹಳೆಯ ಕಾಲದ ಹೆಂಗಸಲ್ಲವಾದರೂ ಸೀತೆಗೇಕೋ ಆ ಉಡುಗೆ ಇಷ್ಟವಾಗಿರಲಿಲ್ಲ. ಯಾವುದಾದರೂ ಹುಡುಗಿ ಆ ವಿಚಾರ ತೆಗೆದರೆ ‘ಸೀರೆ ಉಡುವುದರಲ್ಲಿರುವ ಮಜ ಬೇರೆ ತೊಡುಗೆಯಲ್ಲಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿಬಿಡುತ್ತಿದ್ದಳು. ಅದೇ ಗುಂಗಿನಲ್ಲಿ ಹೊರಬಂದ ಸೀತೆಗೆ ಬೆಳ್ಳುಳ್ಳಿ, ಶುಂಠಿ, ಹಸಿರುಮೆಣಸಿನ ಕಾಯಿಯ ಗಮ ಮೂಗಿಗೆ ರಾಚಿತು.
‘ಹಂದಿ ಮಾಂಸಕ್ಕೆ ಮಸಾಲೆ ಎಲ್ಲಾ ರೆಡಿಯಾಯ್ತು. ಸ್ಟವ್ ಮೇಲೆ ಕಡುಬಿಗೆ ಕುದಿ ಹುಯ್ದಿದಿನಿ. ಸ್ವಲ್ಪ ನೋಡ್ಕಳಿ. ಹಂದಿ ಮಾಂಸ ಬರದೊಂದು ತಡ, ಅಡಿಗೆ ಆದಂಗೆ’ ಎನ್ನುತ್ತಾ ಒಬ್ಬಟ್ಟಿಗೆ ಸಿದ್ದಗೊಳಿಸತೊಡಗಿದಳು ಕಾವೇರಿ.
ವಾರಗಿತ್ತಿ ಮಗುವಿನೊಂದಿಗೆ ಊರಿನಿಂದ ಬಂದಿದ್ದಕ್ಕೋ ಅಥವಾ ಕೆಲವಾರು ತಿಂಗಳಿಗಾಗುವಷ್ಟು ಅಕ್ಕಿ ದಾಸ್ತಾನಾಗಿದ್ದಕ್ಕೋ ಕಾವೇರಿಯಂತೂ ಬಹಳ ಸಂಭ್ರಮದಿಂದಿದ್ದಳು; ಹೊರಗೆ ಟಿವಿಎಸ್ ಬಂದು ನಿಂತ ಸದ್ದಾಯಿತು. ಸೀತೆಯೇ ಬಾಗಿಲು ತೆರೆದಳು. ಚಿನ್ನಪ್ಪ ತನ್ನ ಕೈಯಲ್ಲಿದ್ದ ಹಂದಿಮಾಂಸದ ಕಪ್ಪು ಪ್ಲಾಸ್ಟಿಕ್ ಕವರನ್ನು ಸೀತೆಯ ಕೈಗೆ ಕೊಟ್ಟ, ಅಣ್ಣ ತಮ್ಮ ಇಬ್ಬರೂ ಆಗಲೇ ಒಂದು ರೌಂಡ್ ಬ್ರಾಂದಿ ಮುಗಿಸಿ ಬಂದಂತಿತ್ತು. ಮುಖ ತೊಳೆದು ರೂಮು ಸೇರುತ್ತಿದ್ದ ಅಣ್ಣತಮ್ಮಂದಿರನ್ನೇ ಸೀತೆ ಗಮನಿಸುತ್ತಾ ನಿಂತಿದ್ದು ಕಂಡ ಕಾವೇರಿ,
‘ಯಾವಾಗ್ಲೂ ಹೊರಗೆ ಕುಡಿಯಕ್ಕೆ ಹೋಗದಿಲ್ಲ ಕಣಕ್ಕ. ಬೇಕೂ ಅಂದ್ರೆ ನನ್ನ ಹತ್ರನೇ ದುಡ್ಡು ಇಸ್ಕಂಡು ಒಂದು ಸಣ್ಣ ಕ್ವಾರ್ಟರ್ ತಂದು ಮನೇಲೇ ಕುಡೀತಾರೆ…ನಮ್ಮಂಥ ಸಣ್ಣ ಸಂಬಳದ ಜವಾನರು ದಿನಾ ಕುಡುದ್ರೆ ಹೆಂಗ್ ಆಗುತ್ತೆ ಹೇಳು. ಬರೋ ಸಂಬಳದಲ್ಲಿ ಮನೆ ಬಾಡಿಗೆ ಕೊಟ್ಟುಕೊಂಡು, ಹೊಟ್ಟೆ ಬಟ್ಟೆಗೆ ನೇರ ಮಾಡದೇ ಆಗುತ್ತೆ ’
‘ಹೇಗೂ ದಿನಕ್ಕೆ ಐವತ್ತರಿಂದ ನೂರರವರೆಗೂ ಮೇಲ್ಸಂಪಾದನೆ ಇರೋ ಹೊತ್ತಿಗೆ ಏನೂ ತೊಂದರೆ ಇಲ್ಲ. ತಹಸೀಲ್ದಾರರ ಜವಾನ ಆದುದರಿಂದ ಜನ ಮರ್ಯಾದೆ ಕೊಡ್ತಾರೆ. ಪಹಣಿ ತೆಗೆಸಿಕೊಡದು, ರೆಕಾರ್ಡ್ ರೂಮಿನಲ್ಲಿ ಹಳೇ ರೆಕಾರ್ಡ್ ಹುಡುಕಿಕೊಡೋದು ಎಲ್ಲಾ ಮಾಡದ್ರಿಂದ ರೈತರೆಲ್ಲಾ ಇವರನ್ನೇ ನೆಚ್ಚಿಕೊಂಡು ಬರ್ತಾರೆ’.
ಕಾವೇರಿ ಪ್ರವರ ಹೇಳತೊಡಗಿದಂತೆ ಸೀತೆ ತಬ್ಬಿಬ್ಬಾಗಿ ನಿಂತಿದ್ದಳು. ‘ತಿಂಗಳಿಗೆ ಇಪ್ಪತ್ತೈದು ಸಾವಿರ ಸಂಬಳ. ಜೊತೆಗೆ ದಿನಕ್ಕೆ ನೂರರವರೆಗೆ ಮೇಲ್ಸಂಪಾದನೆ… ವರ್ಷಕ್ಕೆ ಎಷ್ಟಾಯಿತು? ನಾವು ವರ್ಷವಿಡೀ ಗೇಯ್ದರೂ ಕೊನೆಯಲ್ಲಿ ಒಂದು ರೂಪಾಯಿಯೂ ಕೈಮೇಲೆ ಉಳಿಯುವುದಿಲ್ಲವಲ್ಲ… ನಮ್ಮ ಚಿನ್ನಪ್ಪನಿಗೆ ಇಂಥದೇ ಒಂದು ಕೆಲ್ಸ ಕೊಡ್ಸೋಕೆ ಆಗುತ್ತಾ ಅಂತ ಟೈಮ್ ನೋಡಿ ಬಸಪ್ಪನನ್ನು ಕೇಳಬೇಕು’ ಅಂದುಕೊಂಡಳು.
ಅಪರೂಪಕ್ಕೆ ಭೇಟಿಯಾದ ಅಣ್ಣತಮ್ಮಂದಿರು ಬಹಳ ಉತ್ಸಾಹದಿಂದ ಮಾತನಾಡುತ್ತಾ ರೂಮಿನಲ್ಲಿ ಪಾನಗೋಷ್ಠಿ ಮುಂದುವರಿಸಿದ್ದರು. ಅಡುಗೆ ಮನೆಯ ತುಂಬಾ ಹಂದಿಮಾಂಸದ ಗೊಜ್ಜಿನ ಕಂಪು ಆವರಿಸಿತ್ತು. ಒಬ್ಬಟ್ಟಿನ ತಯಾರಿ ಕೊನೆಯ ಹಂತದಲ್ಲಿತ್ತು. ಪುಟ್ಟಿ, ತಯಾರಾಗುತ್ತಿದ್ದ ಸಿಹಿ ತಿಂಡಿಯನ್ನು ಆಸೆಯಿಂದ ನೋಡೂತ್ತಾ ಪಿಳಿಪಿಪಿಳಿ ಕಣ್ಣು ಬಿಡುತ್ತಾ ಕುಳಿತಿತ್ತು. ಸೀತೆ ಮೈತುಂಬಾ ಸೆರಗು ಹೊದ್ದು, ಪಾದ ಮುಚ್ಚುವಂತೆ ಸೀರೆ ಎಳೆದು ಕುಳಿತಿದ್ದಳು.
ಕಾವೇರಿ ಅದೂ ಇದೂ ಮಾತನಾಡುತ್ತಾ ಹೆಂಚಿನ ಮೇಲೆ ಒಬ್ಬಟ್ಟು ಬೇಯಿಸುತ್ತಿದ್ದಳು. ಅಷ್ಟರಲ್ಲಿ ಎದುರುಮನೆಯ ಭವಾನಮ್ಮ ‘ಇವರೇ ಏನ್ರಿ ನಿಮ್ಮ ವಾರಗಿತ್ತಿ?’ ಎನ್ನುತ್ತಾ ಅಡುಗೆ ಮನೆಗೆ ಇಣುಕಿದಳು.
‘ಹೂಂ ಕಣ್ರಿ ಬನ್ನಿ ಕೂತುಕೊಳ್ಳಿ’ ಎನ್ನುತ್ತಾ ಮಣೆಯೊಂದನ್ನು ನೀಡಿದಳು.
ಸೀತೆಗೆ ಹೊಸಬರೊಂದಿಗೆ ಹೇಗೆ ವ್ಯವಹರಿಸಬೇಕೆಂದು ತಿಳಿಯದೆ ಕುಳಿತಲ್ಲೇ ಮಿಸುಕಾಡಿದಳು. ಎದುರು ಮನೆಯವಳು ಹೊಸ ನೈಟಿ ಧರಿಸಿ ಬಂದಿದ್ದಳು. ‘ಇದೇನ್ರಿ ಭವಾನಮ್ಮನವರೆ, ದಿನಕ್ಕೊಂದು ಹೊಸಾ ನೈಟಿ ಹಾಕಕೆ ಶುರುಮಾಡಿದ್ರಿ. ಮೊದಲೆಲ್ಲಾ ನೈಟಿ ಅಂದ್ರೆ ಅಷ್ಟಕ್ಕಷ್ಟೆ ಅಂತಿದ್ರಿ’ ಛೇಡಿಸಿದಳು ಕಾವೇರಿ.
‘ಇಲ್ಲಾ ಕಣ್ರಿ ಕಾವೇರಿ, ನಮ್ಮ ಯಜಮಾನ್ರು ಯಾವಾಗ್ಲೂ ನೈಟೀನೇ ಹಾಕ್ಬೇಕು ಅಂತ ಆರ್ಡರ್ ಮಾಡಿಬಿಟ್ಟಿದ್ದಾರೆ. ನೈಟಿಯಾದ್ರೆ ಪೂರ್ತಿ ಮೈ ಮುಚ್ಚಿಕೊಳ್ಳುತ್ತೆ, ಸೀರೆಯಾದ್ರೆ ಅಲ್ಲಲ್ಲಿ ಬಿಸಿಲಿಗೆ ಮೈ ತೆರಕಂಡು ಚರ್ಮ ಸೀದು ಕಪ್ಪಾಗುತ್ತೆ. ಹಂಗಾಗಿ ಎಲ್ಲಾದ್ರೂ ಹೊರಗೆ ಹೋಗುವಾಗ ಮಾತ್ರ ಸೀರೆ ಉಡು ಅಂತಾರೆ’ ಸಮಜಾಯಿಸಿ ಹೇಳಿದ ಭವಾನಮ್ಮ ಕಾವೇರಿಯ ಬಳಿ ಸರಿದು ಸಣ್ಣ ದನಿಯಲ್ಲಿ ‘ಹೆಂಗಸರಿಗೆ ಸೊಂಟದ ಸೌಂದರ್ಯವೇ ಮುಖ್ಯ ಅಂತೆ ಕಂಡ್ರಿ. ಅದನ್ನ ಕಾಪಾಡಿಕೊಳ್ಳಬೇಕು ಅಂತಾರೆ ನಮ್ಮ ಯಜಮಾನರು’ ಅಮೂಲ್ಯವಾದ ಗುಟ್ಟೊಂದನ್ನು ಹೇಳುವಂತೆ ಹೇಳಿ ಮುಗಿಸಿದಳು. ಅವರ ಮಾತನ್ನು ಕೇಳುತ್ತಾ ಸೀತೆ ಸಂಕೋಚದಿಂದ ಮುದುಡಿ ಕುಳಿತಿದ್ದಳು. ಆ ಮಾತಿನಲ್ಲಿ ಕೆಲವೊಂದು ಸತ್ಯಗಳಿರುವಂತೆ ತೋರತೊಡಗಿತು.
‘ಬರೀ ಕತ್ತೆ ಗೇದಂಗೆ ಗೇಯುವುದೇ ಆಗಿ ಹೋಯಿತು. ಇನ್ನಾದರೂ ಶರೀರ ಅಚ್ಚುಕಟ್ಟಾಗಿ ಇಟ್ಕೊಳ್ಳದ ಕಲೀಬೇಕು…ಆಗಲಾದ್ರೂ ಚಿನ್ನಪ್ಪ ಕಾಳಮ್ಮನ ಮನೆ, ಅಲ್ಲಿ ಇಲ್ಲಿ ಅಂತಾ ಗಂಟೆಗಟ್ಲೆ ಕಾಲ ಕಳೆಯೋದ್ ಬಿಟ್ಟು ಮನೇಲೆ ಇರ್ತಾನೇನೋ’ ಅಂದುಕೊಂಡಳು.
‘ನಿಮ್ಮ ಅಕ್ಕನಿಗೆ ಬಹಳ ಸಂಕೋಚ ಅಂತ ಕಾಣುತ್ತೆ ಕಂಡ್ರಿ ಕಾವೇರಿ. ಆಗಿಂದ್ಲೂ ಒಂದೇ ಒಂದು ಮಾತೂ ಆಡಿಲ್ಲ’ ಎಂದು ಭವಾನಮ್ಮ ಸೀತೆಯನ್ನು ಮಾತಿಗೆಳೆಯಲು ಯತ್ನಿಸಿದಳು.
ಕಾವೇರಿ ಒಬ್ಬಳೇ ಆಗಿದ್ದರೆ ಸೀತೆಗೆ ಮಾತಿಗಿಳಿಯಲು ಸುಲಭವಾಗುತ್ತಿತ್ತು. ಆದರೆ ಈ ಹೊಸ ಹೆಂಗಸು ಭವಾನಮ್ಮ! ಇದುವರೆಗೂ ಕಾವೇರಿಯೊಂದಿಗೆ ಸಂಭಾಷಣೆ ನಡೆಸುವಾಗ ಈ ಪೇಟೆ ಹೆಂಗಸು ಟ್ರಾಫಿಕ್ ಜಾಮ್, ಆಕ್ಸಿಡೆಂಟ್, ಇನ್‍ಸ್ಟಾಲ್‍ಮೆಂಟು ಮುಂತಾಗಿ ಎಷ್ಟೊಂದು ಇಂಗ್ಲಿಷ್ ಪದಗಳನ್ನು ತೇಲಿಬಿಟ್ಟಿದ್ದಾಳೆ. ಕಾವೇರಿ ಏನೂ ಇದರಲ್ಲಿ ಕಮ್ಮಿ ಇಲ್ಲ. ಇವರೊಂದಿಗೆ ಹೇಗೆ ಸಂಭಾಷಣೆಯಲ್ಲಿ ತೊಡಗುವುದು? ಸೀತೆಗೆ ಸಂಕೋಚ ಕಾಡಿತು.
‘ಅವರೇನು ಬೇರೆಯವರಲ್ಲ. ನಮಗೆ ತೀರ ಬೇಕಾದವ್ರೆ. ಏನಾದ್ರೂ ಊರಕಡೆ ವಿಷಯ ಮಾತಾಡಕ್ಕ’ ಕಾವೇರಿ ಮಾತು ಶುರುಮಾಡಲು ವಿಷಯವನ್ನು ಸೂಚಿಸಿದಳು.
‘ಊರ ವಿಷ್ಯ ಮಾತಾಡಕ್ಕೆ ಏನ್ ಇರುತ್ತೆ ಕಾವೇರಿ. ಅದೇ ಹಾಳ್ ತೋಟ, ಗದ್ದೆ; ಅದೇ ಮಳೆ ಅದೇ ಬೆಳೆ’
‘ಅದ್ ಹೋಗ್ಲಿ ಯಾವ್ದೂ ಮದುವೆ ಎದ್ದಿಲ್ವ ಊರಲ್ಲಿ’ ಕಾವೇರಿಯೇ ಸಂಭಾಷಣೆ ಮುಂದುವರಿಸಿದಳು.
‘ಕೆಳಗಿನ ಓಣೀಲಿ ಒಂದೆರಡು ಹೆಣ್ಣಿನ ಮದುವೆ ಅಂತಾ ಓಡಾಡ್ತಿದ್ರಪ್ಪ…ಮತ್ಯಾಕೋ ಸುದ್ದಿಯೇ ಇಲ್ಲ’ ಸೀತೆ ಮತ್ತೆ ಮಾತು ಬೆಳೆಸುವ ಸೂಚನೆಯನ್ನೇನೂ ತೋರಲಿಲ್ಲ. ಕೊನೆಯ ಒಂದೆರಡು ಒಬ್ಬಟ್ಟುಗಳನ್ನು ಬೇಯಿಸಿ ಊಟಕ್ಕೆ ಅಣಿಮಾಡಲು ಕಾವೇರಿಗೆ ಇನ್ನೂ ಕೆಲವಾರು ನಿಮಿಷಗಳು ಬೇಕಾಗಿತ್ತು. ಅದುವರೆಗೂ ಭವಾನಮ್ಮ ಹಾಗೂ ಸೀತೆಯರು ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳಬೇಕಾಗಿತ್ತು.
‘ಕಳೆದ ವರ್ಷ ಆ ಮೇಗಲ ಓಣಿಯ ಹುಡುಗಿಯ ಬೆಂಗಳೂರಿಗೆ ಮದುವೆ ಮಾಡಿಕೊಟ್ಟಿದ್ರಲ್ಲ. ಅದೇನು ಆ ಮದುವೆ ಊರ್ಜಿತ ಆಗದಿಲ್ಲ ಅಂತಿದ್ರಲ್ಲ’ ಕಾವೇರಿ ಮತ್ತೆ ಮಾತಿಗೆ ಚಾಲನೆ ಕೊಟ್ಟಳು. ವಿಷಯ ಕುತೂಹಲದ್ದಾದ್ದರಿಂದ ಭವಾನಮ್ಮನೂ ಕಿವಿ ತೆರೆದು ಕುಳಿತಳು.
‘ಹೂಂ ಕಣೆ ಕಾವೇರಿ. ಆ ಹುಡ್ಗಿ ಬಂದು ಈಗ ತವರ್ಮನೇಲೇ ಕೂತವ್ಳೆ’ ಸೀತೆಯ ಮಾತು ಕುತೂಹಲ ಕೆರಳಿಸಿತು.
‘ಯಾಕಂತಕ್ಕ’
‘ಆ ಹುಡುಗನ್ನ ಡ್ರೈವಾಷ್ ಮಾಡಿದ್ಲಂತೆ’
ಭವಾನಮ್ಮ ಮಂಡಿಯೊಳಗೆ ಮುಖ ಹುದುಗಿಸಿಕೊಂಡು ಮುಸುಮುಸು ನಗತೊಡಗಿದಳು. ‘ಅದೇನ್ ಹಂಗ್ ಮಾಡಿದ್ಲಂತೆ? ಇನ್ನೂ ಒಂದೂವರೆ ವರ್ಷನೂ ಆಗಿಲ್ಲ’ ಕಾವೇರಿ ಕುತೂಹಲ ವ್ಯಕ್ತಪಡಿಸಿದಳು.
‘ಗೊತ್ತಿಲ್ಲ ಕಣೆ, ಅದೇನೋ ಆ ಹುಡುಗನ ಕ್ಯಾರೆಟ್ ಸರಿ ಇಲ್ಲ ಅಂತಾ ಮಾತಾಡ್ತಾರೆ’ ಸೀತೆಯ ಮಾತು ಕೇಳಿದ ಭವಾನಮ್ಮ ಎದ್ದುನಿಂತು ಅಂಗೈಯಲ್ಲಿ ಬಾಯಿ ಮುಚ್ಚಿ ನಗು ತಡೆಯಲು ಯತ್ನಿಸಿದಳು. ಎಷ್ಟು ಒತ್ತಿ ಹಿಡಿದರೂ ಮೂಗು ಬಾಯಿಯಿಂದ ನುಗ್ಗಿಬಂದ ಉಸಿರು ಕೆಮ್ಮಿಗೆ ಕಾರಣವಾಯ್ತು. ಹಾಗೆಯೇ ಬಾಯನ್ನು ಒತ್ತಿಹಿಡಿದ ಆಕೆ ಯಾರಿಗೂ ಹೇಳದೆ ತನ್ನ ಮನೆಯ ದಾರಿ ಹಿಡಿದುಬಿಟ್ಟಳು. ನಗುವನ್ನು ಹತ್ತಿಕ್ಕಿಕೊಳ್ಳುತ್ತಿದ್ದ ಕಾವೇರಿಗೆ ಸೀತೆಯೊಂದಿಗೆ ಮಾತು ಸಾಕೆನಿಸಿತು. ಒಳಗೆ ರೂಮಿನಲ್ಲಿದ್ದ ಚಿನ್ನಪ್ಪನನ್ನು ಕುರಿತು ‘ಭಾವ ಒಳಗೆ ರೂಮ್ ಸೇರಿಕೊಂಡ ಅಣ್ಣ ತಮ್ಮಂದಿರು ನೀವ್‍ನೀವೇ ಮಾತಾಡ್ಕಳ್ತೀರಾ. ನಮಗೂ ಒಂದಿಷ್ಟು ಹೇಳಿ’ ಎಂದಳು.
ಪ್ರಶ್ನೆ ಕೇಳಿದವಳು ಕಾವೇರಿಯಾದರೂ ಎದುರಿಗೆ ಕುಳಿತ ಬಸಪ್ಪನೊಂದಿಗೆ ಸಂಭಾಷಣೆ ಮುಂದುವರಿಸಿದ ಚಿನ್ನಪ್ಪ ‘ಹೇಳಕೇನಿರುತ್ತೆ ಮಾರಾಯ ಹಳ್ಳಿಯಿಂದ ಬಂದವರಿಗೆ! ಅಲ್ಲೇನು ಆಸ್ಪತ್ರೆಯಾ, ಕಾಲೇಜಾ, ಸಿನಿಮಾನ, ನಾಟಕಾನ, ಬಸ್ಸಾ, ರೈಲಾ, ಹೋಟ್ಲಾ, ಬಾರಾ! ಅದೆಲ್ಲಾ ಹೋಗ್ಲಿ ಅಂದ್ರೆ ನೆಟ್ಟಗೊಂದು ಕರೆಂಟಾ ರಾತ್ರಿಹೊತ್ತು! ಅಷ್ಟಿಲ್ಲದೆ ಹಿರಿಯರು ಗಾದೆ ಕಟ್ಟಿದಾರಾ? “ಹಳ್ಳಿ ತುಲ್ಲಿಗೆ ಕೊಳ್ಳಿ ಬೆಳಕು” ಅಂತ’ ಪಾನಗೋಷ್ಠಿಯ ಪರಾಕಾಷ್ಠೆಯ ರಸಮಟ್ಟಕ್ಕೆ ತಲುಪಿದ್ದ ಚಿನ್ನಪ್ಪ ಹಳ್ಳಿಯ ಸ್ಥಿತಿ-ಗತಿ ಕುರಿತು ಒಂದೇ ಗಾದೆಯ ಮಾತಿನಲ್ಲಿ ಸಮಸ್ತವನ್ನೂ ಹೇಳಿಬಿಟ್ಟಿದ್ದ. ಊಟ ಬಿದ್ದ ಮರುಗಳಿಗೆಯೇ ಅಣ್ಣ ತಮ್ಮಂದಿರಿಬ್ಬರೂ ನಿಂತಲ್ಲೇ ತೂಕಡಿಸುತ್ತಿದ್ದರು.
‘ನೀವಿಬ್ರೂ ಹೋಗಿ ಅಲ್ಲೇ ರೂಮಲ್ಲಿ ಮಂಚದ ಮೇಲೆ ಮಲಗಿ. ನಾವು ಹಾಲಲ್ಲಿ ಹಾಸ್ಗಳ್ತೀವಿ’ ಎನ್ನುತ್ತಾ ಕಾವೇರಿ, ಚೆಲ್ಲಾಡಿದ್ದ ಪಾತ್ರೆಗಳನ್ನೆಲ್ಲಾ ಬಚ್ಚಲಿಗೆ ಇಡತೊಡಗಿದಳು.
ಬೆಳಗಿನಿಂದ ಓಡಾಡಿ ದಣಿದಿದ್ದ ಕಾವೇರಿಗೆ ಮಲಗಿದ ಕೂಡಲೇ ನಿದ್ದೆ ಹತ್ತಿತು. ಮಧ್ಯದಲ್ಲಿ ಮಗು ಮಲಗಿತ್ತು. ಈಚೆಯ ಬದಿಯಲ್ಲಿ ಮಲಗಿದ್ದ ಸೀತೆ ಪುಟ್ಟಿಯನ್ನು ತಬ್ಬಿಕೊಳ್ಳಲೆಂದು ಕೈ ಚಾಚಿದಳು. ಕತ್ತಲೆಯಲ್ಲಿ ಕಾವೇರಿಯ ನೈಟಿ ಕೈಗೆ ತಗುಲಿತು. ಸೀತೆ ಕ್ಷಣಕಾಲ ಅದನ್ನು ಹಾಗೇ ಸವರುತ್ತಿದ್ದಳು. ಅಷ್ಟರಲ್ಲಾಗಲೇ ಸೀತೆ ನಿಲುವಂಗಿಗೆ ಮಾರುಹೋಗಿಬಿಟ್ಟಿದ್ದಳು. ಬೆಳಿಗ್ಗೆ ಪುಟ್ಟಿಗೆ ಕಾವೇರಿಯೇ ಆಸೆಪಟ್ಟು ಸ್ನಾನ ಮಾಡಿಸುತ್ತಿದ್ದಳು. ತಲೆಗೆ ಸೋಪು ತಿಕ್ಕುವಾಗ ಮಗುವಿನ ಬರಿಯ ಕಿವಿಗೆ ಕೈ ತಾಕಿತು. ಅಲ್ಲಿಯೇ ನಿಂತಿದ್ದ ಸೀತೆಯೆಡೆಗೆ ತಿರುಗಿ ‘ನಿನ್ನೆಯೇ ಹೇಳಬೇಕು ಅಂತಿದ್ದೆ. ಪುಟ್ಟಿಗೆ ನಾಕು ವರ್ಷ ತುಂಬಿದರೂ ಇನ್ನೂ ಕಿವಿ ಚುಚ್ಚಿಸಲಿಲ್ವಲ್ಲಕ್ಕ!’ ಆಪಾದನೆ ತುಂಬಿದ ದನಿಯಲ್ಲಿ ಹೇಳಿದಳು.
‘ಕಿವಿನೂ ಚುಚ್ಚಿಸಬೇಕು, ಕಾಲ್ಚೈನೂ ಹಾಕಬೇಕು ಈವತ್ತು, ಅದಕ್ಕೇಂತ ಐನೂರು ರೂಪಾಯಿ ಇಟ್ಕಂಡು ಬಂದಿದೀನಿ’ ಎಂದಳು ಸೀತೆ ಹೆಮ್ಮೆಯಿಂದ.
‘ಅಯ್ಯೋ ಸೀತಕ್ಕ, ನಿನಗೆ ಏನ್ ಹೇಳ್ಬೇಕೂ ಅಂತ! ಐನೂರು ರೂಪಾಯಿಗೆ ಏನ್ ಬರುತ್ತೆ ಈ ಕಾಲ್ದಲ್ಲಿ. ಒಂದ್ ಗ್ರಾಂ ಚಿನ್ನದ ಬೆಲೆಯೇ ಎರಡೂವರೆ ಸಾವಿರ. ಕಿವಿ ಚುಚ್ಚಿಸಿ ಒಂದೊಂದು ಸಣ್ಣ ತಂತಿ ನುಲಿಸ್ತೀವಿ ಅಂದ್ರೂ ಎರಡು ಸಾವಿರದ ಮೇಲಾಗುತ್ತೆ. ಇನ್ನ ಕಾಲ್ಚೈನು! ಎಷ್ಟೇ ಕಡಿಮೆ ತೂಕದ್ದು ಅಂದ್ರೂ ಒಂದೂವರೆ ಸಾವಿರನಾದ್ರೂ ಆಗುತ್ತೆ’ ತನ್ನ ಅಜ್ಞಾನ ಅರಿತುಕೊಂಡ ಸೀತೆ ಸಪ್ಪೆ ಮೋರೆ ಮಾಡಿದಳು. ‘ಇರ್ಲಿ ಬಿಡಕ್ಕ ಬೇಜಾರು ಮಾಡ್ಕಬೇಡ. ಹ್ಯಾಗೂ ಬಂದಿದೀಯ. ಕೆಲ್ಸ ಮುಗಿಸ್ಕಂಡೇ ಹೋಗು. ಇಲ್ಲಿ ಪಕ್ಕದ ಮನೆ ಹೆಂಗಸರ ಹತ್ರ ಹೊಂದಿಸಿಕೊಟ್ಟಿರ್ತೀನಿ. ಊರಿಗೆ ಹೋದ್ಮೇಲೆ ಹೆಂಗಾದ್ರೂ ಜೋಡಿಸಿ ಕೊಟ್ಟುಕಳಿಸು’ ಎಂದು ಕಾವೇರಿ ಸಮಾಧಾನ ಹೇಳಿದಳು.
‘ನೀವು ಇವತ್ತೇ ಹೋಗ್ಬೇಕೂಂತಿರಲ್ಲ. ನಿಮ್ಮ ಕೆಲ್ಸ ಎಲ್ಲ ಮುಗಿಸಿ ಮಧ್ಯಾಹ್ನದ ಬಸ್ಸಿಗೆ ಹತ್ತಬೇಕಂದ್ರೆ ಒಂಚೂರೂ ಟೈಮ್ ವೇಸ್ಟ್ ಮಾಡಂಗಿಲ್ಲ. ಇವ್ಳಿಗೆ ಮೈ ಒರೆಸಿ ಬಟ್ಟೆ ಹಾಕ್ತಿರಿ ಬಂದೆ’ ಎನ್ನುತ್ತಾ ಕಾವೇರಿ ತರಾತುರಿಯಲ್ಲಿ ಎದುರು ಮನೆಗೆ ಓಡಿದಳು. ಅರ್ಧ ಗಂಟೆಯಲ್ಲಿ ಹಿಂತಿರುಗಿ ಬಂದವಳು ‘ತಗಾ ಮೂರು ಸಾವಿರ ಐತೆ ಇದರಲ್ಲಿ. ಭವಾನಮ್ಮ ಬರೋ ತಿಂಗಳು ಮಲಬಾರ್ ಗೋಲ್ಡ್ ಕಂತು ಕಟ್ಟೋಕೆ ಹೊಂದಿಸಿ ಇಟ್ಕೊಂಡಿದ್ರು. ಅಷ್ಟರೊಳಗೆ ಹ್ಯಾಗಾದ್ರೂ ಮಾಡಿ ಕೊಟ್ಟು ಕಳಿಸು’ ಎಂದಳು.
‘ಇರ್ಲಿ ಬಿಡು ಕಾವೇರಿ. ಇದೂ ನಿನ್ನ ಹತ್ರನೇ ಇರ್ಲಿ’ ಎನ್ನುತ್ತಾ ತನ್ನ ಬಳಿ ಇದ್ದ ಐನೂರನ್ನು ಅವಳ ಕೈಗೆ ಹಾಕಿ ನಿರಾಳವಾದಳು.
ಆಸ್ಪತ್ರೆ, ಚಿನ್ನದಂಗಡಿ, ಎಲ್ಲಾ ಕೆಲಸ ಮುಗಿದಾಗ ಬಸ್ಸಿಗೆ ಇನ್ನೂ ಒಂದು ಗಂಟೆ ಟೈಮಿತ್ತು. ಸನ್ಮಾನ್‍ನಲ್ಲಿ ಕಾವೇರಿಯೇ ನಾಲ್ವರಿಗೂ ದೋಸೆ ಕೊಡಿಸಿದಳು. ರುಕ್ಮಿಣಿ ಕಾಂಪ್ಲೆಕ್ಸಿಗೆ ಹೋಗಿ ಸೀತೆಗೆ ಹಾಗೂ ಪುಟ್ಟಿಗೆ ಬಳೆ ಕೊಡಿಸಿದಳು. ಕಾಂಪ್ಲೆಕ್ಸ್ ಒಳಗೆಲ್ಲಾ ತಿರುಗಾಡಿ ಹಲವಾರು ರೆಡಿಮೇಡ್ ಶಾಪ್‍ಗಳಿಗೆ ಭೇಟಿಕೊಟ್ಟು ಪುಟ್ಟಿಗೆಂದು ಒಂದು ಫ್ರಾಕ್ ಖರೀದಿಸಿದಳು. ಆ ಕಾಂಪ್ಲೆಕ್ಸ್ ತುಂಬಾ ರೆಡಿಮೇಡ್ ಅಂಗಡಿಗಳ ಮುಂದೆ ನೇತಾಡಿಸಿದ್ದ ವಿವಿಧ ಡಿಸೈನಿನ, ಆಕರ್ಷಕ ಬಣ್ಣಗಳ ನೈಟಿಗಳು ಕಣ್ಸೆಳೆಯುವಂತಿದ್ದವು. ಪ್ರತಿ ಅಂಗಡಿಗೆ ಹೋದಾಗಲೂ ಅವುಗಳ ಮೇಲೆ ಅಂಟಿಸಿದ ದರ ಚೀಟಿಯನ್ನು ಸೀತೆ ಗಮನಿಸಿದ್ದಳು. ಒಳ್ಳೆಯ ನಿಲುವಂಗಿಗೆ ಮುನ್ನೂರೈವತ್ತರವರೆಗೆ!
ಚಿನ್ನಪ್ಪನೊಂದಿಗೆ ಆ ಬಗ್ಗೆ ಪ್ರಸ್ತಾಪ ಮಾಡಬೇಕೆಂದುಕೊಂಡಳು. ಕೊಂಡರೆ ಒಳ್ಳೆಯದನ್ನೇ ಕೊಳ್ಳಬೇಕು. ಅಷ್ಟು ಹಣ ಇದೆಯೇ ಗಂಡನ ಬಳಿ! ಬಾಯಿಗೆ ಬಂದ ಮಾತನ್ನು ಪ್ರತಿ ಬಾರಿಯೂ ಹಾಗೆಯೇ ನುಂಗಿಕೊಂಡಳು. ಎಲ್ಲಾ ಮುಗಿಯಿತು. ಕಾಂಪ್ಲೆಕ್ಸ್‍ನಿಂದ ಹೊರಬರುವ ಸಮಯ. ಚೇತನಾ ಬಾರ್ ಕಡೆಯ ಗೇಟಿನಿಂದ ಹೊರಗೆ ಕಾಲಿಟ್ಟರು. ಆ ಕಡೆ ಗಲ್ಲಿಯಲ್ಲೆಲ್ಲಾ ಬಾರ್‍ಗಳು, ಬ್ರಾಂದಿ ಅಂಗಡಿಗಳು, ಕೇರಳಾಪುರದ ಮಿಲಿಟರಿ ಹೋಟೆಲ್‍ಗಳು. ಅಲ್ಲಿ ತಿರುಗಾಡುವ ಜನರೂ ಬೇರೆಯೇ ರೀತಿಯವರಂತೆ ಕಾಣುತ್ತಿದ್ದರು. ಆಸೆಯನ್ನು ಎಷ್ಟು ಕಾಲ ಅದುಮಿಟ್ಟುಕೊಂಡಾಳು! ಇಲ್ಲಿಂದ ಕಾಲ್ಕಿತ್ತರೆ ನಿಲುವಂಗಿ ಕನಸಷ್ಟೆ! ಸೀತೆ ಚಿನ್ನಪ್ಪನ ಕೈ ಹಿಡಿದು ಜಗ್ಗಿದಳು. ಅವನು ಮುಖ ನೋಡಿದ.
‘ನಂಗೊಂದು ನೈಂಟಿ ಕೊಡ್ಸಿ’ ಎಂದು ರಾಗ ಎಳೆದಳು. ಅಲ್ಲಿ ತಿರುಗಾಡುತ್ತಿದ್ದ ಜನ ಸೀತೆಯನ್ನು ವಿಚಿತ್ರವಾಗಿ ನೋಡುತ್ತ ನಗತೊಡಗಿದರು.
ಚಿನ್ನಪ್ಪ ಪ್ಯಾಂಟಿನ ಜೇಬಿಗೆ ಕೈಹಾಕಿ ಬಸ್‍ಚಾರ್ಜಿಗೆ ಉಳಿಸಿಕೊಂಡಿದ್ದ ನೋಟುಗಳನ್ನು ಹಾಗೆಯೇ ಚಿಲುಕಿಸುತ್ತಾ ‘ಮುಂದಿನ ಸಾರಿ ನೋಡೋಣ ನಡಿ’ ಎನ್ನುತ್ತಾ ತಾನೇ ಮುಂದಾಗಿ ಬಸ್‍ಸ್ಟಾಂಡ್ ದಿಕ್ಕಿಗೆ ನಡೆಯತೊಡಗಿದ.
***
ಅಧ್ಯಾಯ ೫: ಎತ್ತಿಲ್ಲದವನಿಗೆ ಎದೆ ಇಲ್ಲ
ಸೀತೆ ಹಿಂದಿನ ದಿನವೇ ಸಸಿಮಡಿ ಕೆಲಸ ಸಂಪೂರ್ಣ ಮಾಡಿ ಬಂದಿದ್ದಳಲ್ಲ. ಬೆಳಗಾಗುತ್ತಲೇ ಚಿನ್ನಪ್ಪನನ್ನು ಎಂದಿಗಿಂತ ಬೇಗ ಎಬ್ಬಿಸಿ ಮಡಿಗೆ ಬೀಜ ಹಾಕುವ ಕೆಲಸ ನೆನಪಿಸಿದಳು. ಜತೆಗೆ ತಮ್ಮನನ್ನು ಎಬ್ಬಿಸಿ ‘ಅಪ್ಪಣ್ಣಿ, ನೀನೂ ಭಾವನೂ ಹೋಗಿ ಮೆಣಸಿನ ಬೀಜ ಹುಯ್ದು ಬನ್ನಿ’ ಎಂದು ಕಳಿಸಿಕೊಟ್ಟಳು.
ಮಡಿಗಳಿಗೆ ತೆಳ್ಳಗೆ ನೀರು ತಕ್ಕಳಿಸಿ ಇನ್ನೊಮ್ಮೆ ಕುಬುಕಿ, ಕೈಯಲ್ಲೊಮ್ಮೆ ಮಣ್ಣನ್ನು ಹರವಿ ಅಣಿಮಾಡಿದ ಚಿನ್ನಪ್ಪ. ಸುಬ್ಬಪ್ಪ ಮೊಳಕೆ ಕಟ್ಟಿದ್ದ ಗಂಟು ಬಿಚ್ಚಿದ. ಕಪ್ಪನೆಯ ಹುಡಿಗೊಬ್ಬರದ ತುಂಬಾ ಹರಡಿಕೊಂಡಿರುವ ಬಿಳಿಯ ಮೊಳಕೆಗಳು ಮನಸೆಳೆಯುವಂತಿದ್ದವು. ಗೊಬ್ಬರ ಬೆರೆತ ಬೀಜದ ಮೊಳಕೆಗಳನ್ನು ಉದುರಿಸುತ್ತಾ ಸುಬ್ಬಪ್ಪ ‘ಈ ಸಾರಿ ಒಳ್ಳೆ ಬೆಳೆ ಆಗುತ್ತೆ ಭಾವ’ ಎಂದ.
‘ಅದೆಂಗೆ ನಿಂಗೆ ಭವಿಷ್ಯ ಗೊತ್ತಾ?’ ಬೀಜದ ಮೇಲೆ ತೆಳ್ಳಗೆ ಹುಡಿ ಮಣ್ಣು ಉದುರಿಸುತ್ತಿದ್ದ ಚಿನ್ನಪ್ಪ ತಲೆಯೆತ್ತಿ ಕೇಳಿದ.
‘ಬೆಳೆಯ ಸಿರಿ ಮೊಳಕೆಯಲ್ಲಿ’ ಅಂತಾ ಪ್ರೈಮರಿ ಪಾಠದಲ್ಲೇ ಓದಿಲ್ವಾ?’ ಸುಬ್ಬಪ್ಪ ಭಾವನಿಗೆ ಸಮಜಾಯಿಸಿ ಹೇಳಿದ.
ಮಡಿಯ ಮೇಲೆ ಸೊಪ್ಪು ಹರಡಿ ಅದರ ಮೇಲಿಂದ ಮಡಿ ನೆನೆಯುವಂತೆ ನೀರು ಹುಯ್ದು ಅಲಿಂದ ಮನೆ ತಲಪುವಷ್ಟರಲ್ಲಿ ದನ ಹೊರಡಿಸುವ ಸಮಯವಾಗಿತ್ತು.
‘ನಾನೂ ಭಾವನ ಜತೆಲೇ ಹೊರಟುಬಿಡ್ತೀನಿ ಅಕ್ಕ. ಹೆಂಗೂ ಎಮ್ಮೆಗುಂಡಿವರೆಗೂ ಜತೇಲೆ ಹೋಗಬಹುದು. ಅಲ್ಲಿಂದಾಚೆಗೆ ಒಂದ್ ಮೈಲಿ ಅಷ್ಟೆ’ ಅಕ್ಕಿರೊಟ್ಟಿ, ಸೀಗಡಿ ಗೊಜ್ಜನ್ನು ಚಪ್ಪರಿಸಿ ತಿಂದ ಸುಬ್ಬಪ್ಪ ಕೈ ತೊಳೆಯುತ್ತಾ ಹೇಳಿದ.
‘ಯಾಕಾ, ಇನ್ನೊಂದು ದಿನ ಇದ್ ಹೋಗದಲ್ವ’ ಅಪರೂಪಕ್ಕೆ ಬಂದ ತಮ್ಮನನ್ನು ಬಿಟ್ಟುಕೊಡುವ ಮನಸ್ಸಿರಲಿಲ್ಲ ಸೀತೆಗೆ.
‘ನಿನ್ ಕೈ ರುಚಿ ನೋಡಿದ್ರೆ ಇಲ್ಲೇ ಇದ್ ಬುಡಾನ ಅನ್ಸುತ್ತೆ. ಆದ್ರೇನ್ ಮಾಡದು ನಮ್ಮವೂ ಕೆಲ್ಸ ಎಲ್ಲಾ ಬಾಕಿ ಇದಾವಲ್ಲ…’ ಅಕ್ಕನನ್ನು ಸಮಾಧಾನಪಡಿಸಿದ ಸುಬ್ಬಪ್ಪ ಚಿನ್ನಪ್ಪನ ಕಡೆ ತಿರುಗಿ ಹುಸಿ ನಗೆ ಬೀರುತ್ತಾ ‘ಯಾವುದಕ್ಕೂ ಭಾವನನ್ನು ಚೆನ್ನಾಗಿ ನೋಡ್ಕಳಕ್ಕ. ಕಾಳಮ್ಮನ ಮನೆ ಕಡೆ ಜಾಸ್ತಿ ಹೋಗಕೆ ಬಿಡ್‍ಬ್ಯಾಡ. ಅವ್ಳು ಇವ್ರನ್ನೇ ಇಟ್ಕಬಿಟ್ಟಾಳು! ಅಸಿಸ್ಟೆಂಟ್ ಆಗಿ… ಎನ್ನುತ್ತಾ ಕಣ್ಣು ಮಿಟುಕಿಸಿ ಹೇಳಿದ.
‘ನಿನ್ನ ಆಕ್ಲಾಸ ಹಂಗಿರ್ಲಿ. ನಾನೂ ಕಾಡ್ ಕಡೆ ಬತ್ತೀನಿ ಇವತ್ತು. ನೀನ್ ಇವತ್ತೊಂದು ದಿನ ಇದ್ದು ಬೇಲಿ ಕಟ್ಟಕೆ ತೀನ ಮತ್ತೆ ತಳಿ ಕಡುಕೊಟ್ಟು ಹೋಗಿಯಂತೆ. ನೀವು ಈ ಕಡೆ ಓಣಿಲಿ ಬಂದು ಕಡ್ಲೆ ಹಳ್ಳದ ಮಂಟಿ ಹತ್ತ ಹೊತ್ತಿಗೆ ಊಟ ತುಂಬಿಕಂಡು ಬಂದು ಬಿಡ್ತೀನಿ’ ಎಂದಳು ಸೀತೆ.
‘ಹುಂ ಸರಿಸರಿ ಬೇಗ ಬಾ, ನಾನು ಮಧ್ಯಾಹ್ನದ ಹೊತ್ತಿಗಾದ್ರೂ ಹೋಗಬೇಕು’ ಎನ್ನುತ್ತಾ ಸುಬ್ಬಪ್ಪ ಭಾವನನ್ನು ಹಿಂಬಾಲಿಸಿದ.
ಚಿನ್ನಪ್ಪನ ದನ ಓಣಿಗೆ ಇಳಿದದ್ದೇ ತಡ, ಆ ಕಡೆಯಿಂದ ಕರಿಯಣ್ಣನ ದನ, ಈ ಕಡೆಯಿಂದ ಕಾಳೇಗೌಡರ ದನ, ಕೆಳಗಿನ ಓಣಿಯಿಂದ ರಾಮೇಗೌಡನ ದನ ಮತ್ತೆ ಕೊನೆಯಲ್ಲಿ ಗುಂಡಪ್ಪನ ದನ ಬಂದು ಸೇರಿಕೊಂಡು ಪರಿಚಿತ ಹಾದಿಯಲ್ಲಿ ಕಡ್ಲೆಹಳ್ಳದ ಕಡೆ ನಡೆಯತೊಡಗಿದವು. ಹಳ್ಳದ ಜಾಗದಿಂದ ಕಡಿದಾದ ಏರುದಾರಿ. ಮೇಲಿನ ಹರೆ ತಲುಪಲು ಅರ್ಧ ಮೈಲಿ. ದನಗಳು ನಿಧಾನಕ್ಕೆ ಏದುಸಿರು ಬಿಡುತ್ತಾ ನಡೆಯತೊಡಗಿದವು.
‘ಏನ್ ಭಾವ ನಿನ್ನೆ ಮೊನ್ನೆ ಎಲ್ಲಾ ನೀವೇ ಬಾರಿಗೆ ಹೋಗಿದ್ರಂತೆ. ಅಕ್ಕ ಒಬ್ಳೇ ಕೆಲ್ಸ ಮಾಡಿದೆ ಅಂತಿದ್ಲು…ಒಬ್ಬೊಬ್ರು ಎರಡು ದಿನ ‘ಬಾರಿ’ ಕಾಯುವುದು ಅಲ್ವಾ’ ಸುಬ್ಬಪ್ಪ ಸಂಶಯ ವ್ಯಕ್ತಪಡಿಸಿದ.
‘ಹೌದು, ನಮ್ಮ ಬಾರಿ ನಿನ್ನೆಗೇ ಮುಗೀತು. ಈವತ್ತಿಂದ ಗುಂಡಪ್ಪನ ಬಾರಿ. ಅವನು ನನ್ನ ಮೆಣಸಿನ ಗಿಡದ ಗದ್ದೆ ಉಳಕೆ ಮೂರು ಒಪ್ಪತ್ತು ಬಂದಿದ್ನಲ್ಲ ಅದರ ಬದಲು ಒಟ್ಟು ಮೂರು ದಿನ ನಾನು ಕಾಯಬೇಕು ಅವನ ಪರವಾಗಿ’ ಚಿನ್ನಪ್ಪ ಬೇಸರ ತುಂಬಿದ ದನಿಯಲ್ಲಿ ಹೇಳಿದ.
‘ಅದೇನ್ ಮೂರು ಒಪ್ಪತ್ತು ಅಷ್ಟ್ ಜಾಗಕ್ಕೆ. ಮೊದ್ಲು ಟ್ರಾಕ್ಟರ್‍ನಲ್ಲಿ ಹೊಡ್ದಿದ್ದು ಅಲ್ವಾ?…ಏನ್ ಎರಡು ಸಾಲು ಹೊಡೆಸಿದ್ರಾ?’ ಸುಬ್ಬಪ್ಪ ಅನುಮಾನ ವ್ಯಕ್ತಪಡಿಸಿದ.
ಚಿನ್ನಪ್ಪ ನಿಡುಸುಯ್ದ. ನಂತರ ‘ಏನ್ ಹೇಳದು ನಮ್ಮ ಹಣೇಬರಹವ. ವ್ಯವಸಾಯದಲ್ಲಿ ಇನ್ನೊಬ್ಬರ ನಂಬಿ ಕೂತ್ರೆ ಹಿಂಗೇ ಆಗದು…ಬೆಳಿಗ್ಗೆ ಒಂಬತ್ತೂವರೆಗೆ ಬರ್ತಾನೆ ಅವ್ನು. ಎತ್ತುಗಳನ್ನ ಗದ್ದೆಗೆ ಇಳಿಸಿ ನೇಗಿಲು ಅಲ್ಲಾಡಿಸಿ ನೋಡ್ತನೆ… ‘ಎಲ್ಲಿ, ಕತ್ತಿ ಕೊಡಿಲ್ಲಿ’ ಅಂತಾನೆ. ದೂರದ ಗಿಡದ ಬಳಿ ಹೋಗಿ ಒಂದು ಗೂಟ ಕಡಿದು ಕೆತ್ತಿ ಕೀಲು ತಯಾರು ಮಾಡ್ತನೆ. ಅದನ್ನ ತಂದು ನೇಗಿಲಿನ ಯಾವುದೋ ಭಾಗಕ್ಕೆ ಜಡಿದು, ಕುಳಿತು ಒಂದು ಬೀಡಿ ಹಚ್ಚುತ್ತಾನೆ. ನಂತರ ಅವಸರಿಸುವವನಂತೆ ಎದ್ದು ಒಂದು ಹತ್ತಿಪ್ಪತ್ತು ಸುತ್ತು ತಿರುಗಿಸಿರುವುದೇ ಇಲ್ಲ, ಅಷ್ಟು ಹೊತ್ತಿಗೆ ರೊಟ್ಟಿ ಬಂದಿರುತ್ತದೆ. ಅದನ್ನ ಮುಗಿಸಿ ಒಂದು ಬೀಡಿ ಸೇದಿ ಟವಲ್ ಕೊಡವುತ್ತಾ ಏಳುವ ವೇಳೆಗೆ ಹನ್ನೊಂದು ಗಂಟೆ ಆಗಿಯೇ ಹೋಗಿರುತ್ತೆ. ನಂತರದಲ್ಲಿ ಅರ್ಧಗಂಟೆಗೊಮ್ಮೆ ನಿಲ್ಲಿಸಿ ಬೀಡಿ ಸೇದುತ್ತಾ ಹನ್ನೆರಡೂವರೆ ಆಗುವುದನ್ನೇ ಕಾಯುತ್ತಾನೆ. ಇನ್ನು ಅಕ್ಕಪಕ್ಕದ ಗದ್ದೆಯವರು ಮಾತಿಗೆ ಸಿಕ್ಕಿದರೆ ಸೈ. ಆವತ್ತು ಒಟ್ಟು ಒಂದು ಗಂಟೆಯ ಉಳುಮೆಯೂ ಇಲ್ಲ…ಅದೂ ಹೋಗ್ಲಿ, ಹದ ಇದ್ದಾಗ್ಲಾದ್ರೂ ಬಂದು ಆರಂಭ ಮಾಡಿಕೊಡ್ತಾನ. ಅವನಿಗೆ ಇಷ್ಟ ಆದಾಗ ಬಂದು ಒಂದಿಷ್ಟು ಕೆರೆದು ಹೋಗ್ತಾನೆ. ಇನ್ನು ಆರಂಭ ಊರ್ಜಿತ ಆಗು ಅಂದ್ರೆ ಹೆಂಗೆ ಹೇಳು’ ತುಸು ದೀರ್ಘವಾಗಿ ಮಾತಾಡಿ ಮಾತು ನಿಲ್ಲಿಸಿದ ಭಾವನ ಮಾತಿನಲ್ಲಿ ವಿಷಾದ ಮಡುಗಟ್ಟಿರುವುದನ್ನು ಸುಬ್ಬಪ್ಪ ಗಮನಿಸಿದ.
‘ಅಲ್ಲ ಭಾವ ವ್ಯವಸಾಯ ಅಂದ್ರೆ ಹೋರಾಟ. ಹೋರಾಡಕೆ ರೈತನಿಗೆ ಎದೆ ಬೇಕು. ಹದ ಇದ್ದಾಗ ಹಗಲು ರಾತ್ರಿ ಎನ್ನದೆ ಉತ್ಸಾಹದಿಂದ ಕೆಲಸ ಮಾಡಬೇಕು… ಎತ್ತುಗಳು ರೈತನ ಎದೆ ಇದ್ದಾಂಗೆ… ಅದಕ್ಕೇ ಹೇಳದು ಮತ್ತೆ ‘ಎತ್ತಿಲ್ಲದವನಿಗೆ ಎದೆ ಇಲ್ಲ’ ಅಂತ.
ಗಂಭೀರವಾದ ವಿಷಯ ಮಾತನಾಡುತ್ತಾ ದಿಣ್ಣೆ ಹತ್ತಿ ಬರುತ್ತಿದ್ದವರಿಗೆ ಹರೆ ತಲುಪಿದ್ದೇ ಗೊತ್ತಾಗಲಿಲ್ಲ. ದನಗಳಾಗಲೇ ಏರುದಾರಿಯ ದಣಿವನ್ನು ಸುಧಾರಿಸಿಕೊಂಡು ಮನಬಂದ ದಿಕ್ಕಿಗೆ ತಿರುಗಿ ಆ ವಿಶಾಲವಾದ ಹರೆಯ ತುಂಬಾ ಮೇಯುತ್ತಿದ್ದವು. ಅವರಿಬ್ಬರೂ ಅಲ್ಲಿದ್ದ ಮೀಟ್ಲಿ ಮರದ ಕಟ್ಟೆಯ ಮೇಲೆ ಕುಳಿತು ದಣಿವಾರಿಸಿಕೊಳ್ಳತೊಡಗಿದರು. ಹಿತವಾದ ಗಾಳಿ ಮನಸ್ಸಿಗೆ ಮುದ ನೀಡತೊಡಗಿತು.
ಸುಬ್ಬಪ್ಪನಿಗೆ ಹೆಚ್ಚು ಹೊತ್ತು ಸುಮ್ಮನೆ ಕೂರಲಾಗಲಿಲ್ಲ. ‘ಒಳ್ಳೆ ಭಾವ! ಗುಂಡಪ್ಪನಂತವರನ್ನ ನೆಚ್ಚಿಕೊಂಡ್ರೆ ನಿಮಗೆ ಜೀವಮಾನ ಇಡೀ ದನಾ ಕಾಯದು ತಪ್ಪದಿಲ್ಲ… ಪರಿಣಾಮ ಏನು ಹೇಳಿ…ಶ್ರಮ ಜಾಸ್ತಿ, ವರಮಾನ ಸೊನ್ನೆ. ಇದೊಂದು ತರಹ ಹಂದಿ ಹಾಳುಕೆರೆ ಉತ್ತಹಾಗೆ ವ್ಯರ್ಥ ಬದುಕು’ ಎಂದ. ಚಿನ್ನಪ್ಪ ತಲೆ ತಗ್ಗಿಸಿ ಕುಳಿತು ನಿಟ್ಟುಸಿರೊಂದನ್ನು ಹೊರಹಾಕಿದ.
‘ನಾವು ವಿಚಾರ ಮಾಡದೇ ಹಿಂಗೇ ಇದ್ರೆ ನಮ್ಮವರೇ ನಮ್ಮ ಮೇಲೆ ಸವಾರಿ ಮಾಡದು ತಪ್ಪದಿಲ್ಲ. ರೈತಾ ಅಂದವ್ನು ಎಷ್ಟು ಕಡೆಯಿಂದ ತಾನೆ ಒದೆಸಿಕೊಂಡು ಬದುಕೋಕೆ ಆಗುತ್ತೆ’ ಹಾಸ್ಯದ ಸಹಜ ಸ್ವಭಾವದ ಜಾಗದಲ್ಲಿ ಸಿಡುಕು ತುಂಬಿಕೊಂಡಿತ್ತು.
‘ರೈತರಾಗಿದ್ದುಕೊಂಡು ನೀವ್ಯಾಕೆ ಇಷ್ಟು ಉದಾಸೀನ ಮಾಡ್ತೀರಿ ಭಾವ. ಹೆಂಗಾದ್ರೂ ಮಾಡಿ ಒಂದ್ ಜೊತೆ ಎತ್ತು ಇಟ್ಕಳದಲ್ವ?’ ಸುಬ್ಬಪ್ಪ, ಮೌನವಾಗಿ ದಿಕ್ಕುಗಾಣದಂತೆ ಕುಳಿತಿದ್ದ ಭಾವನ ಕಡೆ ತಿರುಗಿ ಕೇಳಿದ.
‘ಎಲ್ಲಿ ಉದಾಸೀನ ಮಾಡಿದೆ ನಾನು? ಐದಾರು ವರ್ಷದಿಂದ್ಲೂ ಎತ್ತು ಇಟ್ಕೊಂಡೇ ಇದ್ವಲ್ಲ! ಅವು ಇರೋವರೆಗೂ ನೆಮ್ಮದಿಯಾಗಿ ಕೆಲಸ ನಡೀತಾ ಇತ್ತು. ಅವೂ ಮುದಿಯಾಗಕ್ಕೆ ಬಂದಿದ್ವು…ಆಚೆ ಮಳೆಗಾಲದಲ್ಲಿ ಇದರ ಜೊತೆ ಎತ್ತು ಕೊರತುಗೊಂಡು ಸತ್ತೋಯ್ತು’ ಎನ್ನುತ್ತಾ ಎದುರಿಗೆ ಮೇಯುತ್ತಿದ್ದ ಮುದಿ ಎತ್ತಿನ ಕಡೆ ಕೈತೋರಿದ.
‘ಇದು ನೂಕಿದರೆ ಬಿದ್ದೋಗೋ ಹಂಗೈತೆ. ಎಂತಕೆ ಅಂತಾ ಕೊಟ್ಟಿಗೆಲಿ ಕಟ್ಟಿಗಂಡಿದೀರಿ. ಅಕ್ಕನಿಗೆ ಸಗಣಿ ತೆಗಿಯೋ ಕೆಲಸ ಜಾಸ್ತಿ ಆಗ್ಲಿ ಅಂತ್ಲಾ! ಜೊತೆಗೆ ಆ ಗೊಡ್ಡು ಎಮ್ಮೆ ಬೇರೆ! ಅವೆರಡನ್ನು ಯಾರನ್ನಾದ್ರೂ ಸಾಬ್ರ ಕರ್ಕಂಡ್ ಬಂದು ಬಂದ ರೇಟಿಗೆ ಸೀದು ಬಿಡಿ… ಅಕ್ಕನಿಗೆ ಅಷ್ಟಾದ್ರೂ ಕೆಲ್ಸ ಕಡಿಮೆ ಆಗುತ್ತೆ’ ಸುಬ್ಬಪ್ಪ ವ್ಯಂಗ್ಯವಾಗಿ ಕುಟುಕಿದರೂ ಅದರಲ್ಲಿ ಸತ್ಯ ಇದೆ ಎನಿಸಿತು.
‘ನೀನ್ ಹೇಳದೂ ಸರಿ ಅನ್ಸುತ್ತೆ’ ಎನ್ನುತ್ತಾ ಚಿನ್ನಪ್ಪ ಸಲಹೆ ಬೇಡುವವನಂತೆ ಮೈದುನನ ಮುಖ ನೋಡಿದ. ವಯಸ್ಸಿನಲ್ಲಿ ಸಣ್ಣವನಾದರೂ ವ್ಯವಹಾರ ಜ್ಞಾನ ಚೆನ್ನಾಗಿದೆ ಎಂಬ ಮೆಚ್ಚುಗೆಯಿತ್ತು.
‘ಸರಿನೂ ಇಲ್ಲ, ಬೆಸನೂ ಇಲ್ಲ. ಕೂಡಲೇ ಅವೆರಡನ್ನೂ ಮಾರಿ ಸಾಲದೆ ಬಂದದನ್ನು ಎಲ್ಲಿಂದಲಾದರೂ ಸಾಲಮಾಡಿ, ಸಣ್ಣವಾದ್ರೂ ಪರವಾಗಿಲ್ಲ, ಒಂದು ಜೊತೆ ಗಿಡ್ಡಗಳನ್ನು ಹಿಡಕಂಡು ಬಂದು ಕಟ್ಟಿ. ಆಗ ನೋಡಿ ಅದರ ಮಜ’ ಎಂದು ಸುಬ್ಬಪ್ಪ ಭಾವನನ್ನು ಹುರಿದುಂಬಿಸುವಂತೆ ಮಾತನಾಡುತ್ತಾ ಅಂಡು ಕೊಡವಿಕೊಳ್ಳುತ್ತಾ ಕಟ್ಟೆಯ ಮೇಲಿಂದ ಏಳತೊಡಗಿದ.
ಅಷ್ಟರಲ್ಲಿ ತಲೆಯ ಮೇಲೊಂದು ಸಣ್ಣ ಕುಕ್ಕೆ ಹೊತ್ತ ಸೀತೆ ಊರ ಕಡೆಯಿಂದ ಬರುವ ದಾರಿಯ ತಿರುವಿನಲ್ಲಿ ಕಾಣಿಸಿಕೊಂಡಳು.
ರೂಢಿಯಂತೆ ಮುಂಡಿಗೆ ಹೊಳೆಯ ಕಡೆ ಸಾವಕಾಶ ನಡೆಯುತ್ತಿದ್ದ ದನಗಳನ್ನು ಮೂವರೂ ಹಿಂಬಾಲಿಸಿದರು.
–ಹಾಡ್ಲಹಳ್ಳಿ ನಾಗರಾಜ್
ಓದುಗರಿಗೆ ವಿಶೇಷ ಸೂಚನೆ:
ನಿಲುವಂಗಿಯ ಕನಸು… ಈಗ ಪಂಜು ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಗುತ್ತಿದೆ. ಖ್ಯಾತ ಸಾಹಿತಿಗಳಾದ ಹಾಡ್ಲಹಳ್ಳಿ ನಾಗರಾಜ್ ಅವರ ಈ ಕಾದಂಬರಿ ಬಹಳಷ್ಟು ಕಾರಣಕ್ಕಾಗಿ ಮುಖ್ಯವಾದುದು. ಇದನ್ನು ವಾರವಾರ ಓದುತ್ತಾ ಹೋದಂತೆ ನಿಮಗೆ ತಿಳಿಯುತ್ತಾ ಹೋಗುತ್ತದೆ. ಇಲ್ಲಿ ಒಂದು ಸಂಗತಿಯಿದೆ. ಕಾದಂಬರಿ ಮುಗಿದ ಮೇಲೆ ಕಾದಂಬರಿಯ ಬಗ್ಗೆ ಅಭಿಪ್ರಾಯಗಳನ್ನು ಓದುಗರಿಂದ ಕೇಳಲಾಗುವುದು. ಓದುಗರಿಂದ ಬಂದ ಅತ್ಯುತ್ತಮ ಅಭಿಪ್ರಾಯಗಳಿಗೆ ಪುಸ್ತಕ ರೂಪದ ಬಹುಮಾನಗಳನ್ನು ನೀಡಲಾಗುವುದು. ಇನ್ ಯಾಕೆ ತಡ… ಒಂದೊಳ್ಳೆ ಕೃತಿ ಓದಿದ ಅನುಭವದ ಜತೆ ಒಂದೊಳ್ಳೆ ಅಭಿಪ್ರಾಯ, ಚರ್ಚೆ… ಜೊತೆಗೆ ಬಹಳಷ್ಟು ಪುಸ್ತಕಗಳ ಬಹುಮಾನ. ಅಭಿಪ್ರಾಯಗಳ ಜತೆ ನಡೆಯೋಣ ಬನ್ನಿ.