“ತುದಿಯಿರದ ಹಾದಿ – ಅಂಬೇಡ್ಕರ್ ರನ್ನು ಧೇನಿಸುವ ದಲಿತ ಲೋಕದ ಜೀವನ ವಿಧಾನವನ್ನು ಕಟ್ಟಿಕೊಡುವ ಒಂದು ಮಹತ್ವದ ಕೃತಿ”: ಎಂ.ಜವರಾಜ್

ಮೋದೂರು ತೇಜ ಅವರ ‘ತುದಿಯಿರದ ಹಾದಿ’ ಕಾದಂಬರಿಯ ಪುಟ ತಿರುವುತ್ತಾ ಹೋದಂತೆಲ್ಲ ರಾವಬಹದ್ದೂರ್ ಅವರ ‘ಗ್ರಾಮಾಯಣ’ ಎಂಬ ದಟ್ಟವಾದ ಜೀವನಾನುಭವ ನೀಡುವ ಗ್ರಾಮೀಣ ವಸ್ತುವಿಷಯದ ಕಾದಂಬರಿಯ ಪುಟಗಳತ್ತ ಮನಸ್ಸು ಹರಿಯಿತು.

ರಾವಬಹದ್ದೂರ್ ಅವರು ತಮ್ಮ ‘ಗ್ರಾಮಾಯಣ’ ಕಾದಂಬರಿಯನ್ನು ಮೂರು ಭಾಗಗಳಾಗಿ ವಿಭಾಗಿಸಿ ಅಲ್ಲಿನ ಕಥೆಯನ್ನು ವಿಸ್ತರಣೆ ಮಾಡುತ್ತಾ ಕಥೆಗೆ ಒಂದು ಚೌಕಟ್ಟು ನಿರ್ಮಿಸಿದಂತೆ ಅಲ್ಲಿನ ಪಾತ್ರವರ್ಗವನ್ನೂ ಆ ಚೌಕಟ್ಟಿನೊಳಗೇ ರಂಗ ವೇದಿಕೆಯಲ್ಲಿ ಕಾಣ ಬರುವಂತೆ ಕಡೆದು ನಿಲ್ಲಿಸುತ್ತಾರೆ. ಆ ಪಾತ್ರಗಳು ಪಾದಳ್ಳಿಯಲ್ಲೇ ಹುಟ್ಟಿ ಪಾದಳ್ಳಿಯಲ್ಲೇ ಬೆಳೆದು ಆ ಹಳ್ಳಿಯ ಬೀದಿ ಓಣಿ ಹೊಲ ಗದ್ದೆ ಮಠದ ಸುತ್ತ ಒಂದು ವೃತ್ತಾಕಾರವಾಗಿ ಸುತ್ತುತ್ತ ಹಳ್ಳಿಯ ರಾಜಕೀಯ, ಅದರೊಳಗೆ ಉದಿಸುವ ದ್ವೇಷ, ಅಸೂಯೆ, ಕುಯುಕ್ತಿ, ವಂಚನೆ, ಹಲವು ಜಂಜಾಟಗಳ ವ್ಯಸನದ ಬದುಕು ಬವಣೆಗಳ ಸ್ಥಿತ್ಯಂತರವು ಕಾದಂಬರಿಯೊಳಗೆ ತುಂಬಿ ರೂಪುಕೊಂಡಿದೆ. ಹೀಗೆ ತುಂಬಿ ತುಳುಕುವ ಜನರ ಬವಣೆಯ ನೋವು ಮತ್ತು ಒಡೆದಾಳುವ ಗ್ರಾಮಕೇಂದ್ರಿತ ನ್ಯಾಯ ಮತ್ತು ಅನ್ಯಾಯಗಳ ಅಡಿಯಲ್ಲಿ ಕೆಲ ಕ್ರೌರ್ಯ ಮನಸುಗಳ ಭೋಗ ಜೀವನದ ಸುತ್ತಲಿನ ಪಡಿಪಾಟಲಿನ ಆ ಪಾದಳ್ಳಿಗೆ ಹೊರಗಿನ ಪಾತ್ರಗಳ ಪ್ರವೇಶಿಸಿಕೆಯ ನಂತರದಲ್ಲಿ ಬಿಚ್ಚಿಕೊಳ್ಳುವ ಕಥಾಕಾಲಕ್ಷೇಪವು ಆ ಊರೊಳಗೆ ಜರುಗುವ ಅಚಾನಕ್ ಅಥವಾ ಯಕ್ಕಶ್ಚಿತ್ ಸನ್ನಿವೇಶದ ಚಿತ್ರ ನಿರ್ವಹಣಾ ರೂಪಣೆಯನ್ನು ಕಾದಂಬರಿಕಾರ ರಾವಬಹದ್ದೂರ್ ರಂಗದ ಮೇಲೆ ಬೀಳುವ ನೆರಳು ಬೆಳಕಿನ ಚಿತ್ರಭೂಮಿಕೆಯಂತೆ ಚಿತ್ರಿಸುತ್ತ ‘ಗ್ರಾಮಾಯಣ’ದ ಬಿಂಬ ಓದುಗನಲ್ಲಿ ಅಚ್ಚಾಗಿ ನಿಲುವಂತೆ ನಿರೂಪಿಸಿದ್ದಾರೆ.

ಹಾಗೆ, ಇಲ್ಲಿ ನಿರ್ದಿಷ್ಟ ಕಥಾ ಕೇಂದ್ರ ಯಾವುದೆಂದು ಹಿಡಿದಿಡಲಾಗದೆ ಓದುಗ ಮಹಾಶಯ ಈ ಕಾದಂಬರಿಯಲ್ಲಿ ಗ್ರಾಮವೇ ಕೇಂದ್ರ ಅಂತ ಭಾವಿಸುತ್ತಲೆ ಅಚಾನಕ್ ಪಾತ್ರಗಳ ಪ್ರವೇಶಿಕೆ ‘ಗ್ರಾಮ ಕೇಂದ್ರ’ದ ಪರಿಕಲ್ಪನೆಯನ್ನೇ ತಲೆಕೆಳಗು ಮಾಡುತ್ತದೆ. ಬದಲಿಗೆ ಪ್ರವೇಶಿಕೆ ಪಡೆದ ಪಾತ್ರಗಳು ಕಾದಂಬರಿಯ ಕೇಂದ್ರ ಸ್ಥಾನ ಪಡೆಯುತ್ತಿರುವಂತೆ ಭಾಸವಾಗುತ್ತದೆ. ಅದೂ ಅದಾಗಿರದೆ ಬೇರೆಯದೇ ಕಥಾ ಕೇಂದ್ರದತ್ತ ಮನಸ್ಸು ಹೊರಳುತ್ತದೆ. ಹೀಗೆ ಮತ್ತೆ ಮತ್ತೆ ಘಟಿಸುವ ಅಲ್ಲಿನ ಘಟನೆಗಳು ಪಾತ್ರಗಳು ಓದುಗನ ಅಂಕೆಯೊಳಗೆ ಸುತ್ತಿ ಬರುತ್ತ, ಹಾಗೆ ಬಂದವೆಲ್ಲ ಕೇಂದ್ರವಾಗುತ್ತ, ಅವೂ ಅವಾಗದೆ ಮತ್ತೆ ಇಲ್ಲಿ ಯಾವುದೂ ಕೇಂದ್ರವಾಗದೆ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತ ಕಾದಂಬರಿಯ ಒಳಗೆ ದಟ್ಟವಾದ ಕಪ್ಪಮೋಡ ಆವರಿಸಿದಂತೆ ಭಾಸವಾಗುತ್ತದೆ. ಕಾರ್ಮೋಡದ ಬೇಗೆಯಲಿ ದುತ್ತನೆ ರಭಸವಾಗಿ ಬೀಳುವ ಮಳೆಯಲ್ಲಿ ಎಲ್ಲವೂ ಅಯೋಮಯವಾಗುವಂತೆ ಕಥಾಕೇಂದ್ರದ ಹೂರಣವು ಆರೋಹಣ ಅವರೋಹಣ ಲೆಕ್ಕಾಚಾರದ ಆವರಣ ಆವರಿಸಿ ಕಥೆ ತನ್ನ ಮಗ್ಗುಲು ಬದಲಿಸಿಕೊಳ್ಳುತ್ತ ಕೊನೆ ಮುಟ್ಟುತ್ತದೆ. ಕೊನೆಯಲ್ಲಿ ನಿಖರವಾದ ಸ್ಪಷ್ಟತೆಯ ನೆರಳಿನಲ್ಲಿ ಸತ್ಯದ ಬೆಳಕಿನ ಕಟು ವಾಸ್ತವವೇ ಪ್ರಧಾನವಾಗಿ ಗ್ರಾಮಾಯಣದ ಕಥಾಕೇಂದ್ರದ ಬಗ್ಗೆ ಓದುಗನಲ್ಲಿ ತಾರ್ಕಿಕವಾದ ಆಲೋಚನೆಗೆ ಇಂಬು ದೊರಕಿಸಿಕೊಡುತ್ತದೆ.

ಮೋದೂರು ತೇಜ

ಈ ಆರೋಹಣ ಅವರೋಹಣ ಕಥನ ತಂತ್ರದ ‘ಗ್ರಾಮಾಯಣ’ದ ಆವರಣದ ಚೌಕಟ್ಟನ್ನೇ ಮೋದೂರು ತೇಜ ಅವರ ‘ತುದಿಯಿರದ ಹಾದಿ’ ಕಾದಂಬರಿಯು ಹೊಂದಿದೆ. ಇಲ್ಲಿ ಗ್ರಾಮಾಯಣದ ದಟ್ಟ ಪಾತ್ರವರ್ಗ ಕಾಣ ಬರದಿದ್ದರು ಅದೇ ಮಾದರಿಯ ಗ್ರಾಮೀಣ ಬದುಕಿನ ಚಿತ್ರವತ್ತಾದ ನಿರೂಪಣೆ ಹೊಂದಿರುವ ‘ತುದಿಯಿರದ ಹಾದಿ’ಯು ಸಹ ಯಾವುದೋ ಒಂದರ ಕೇಂದ್ರ ಬಿಂದುವಾಗಿಲ್ಲ. ಬದಲಿಗೆ ಹಲವು ಸ್ತರಗಳ ನೆಲೆಯಲ್ಲಿ ಹರಡಿದ ಜಟಿಲ ಕಂದಕದ ನಿಷ್ಠೂರ ವಸ್ತು ವಿಷಯವೇ ಆಗಿದೆ. ಈ ಜಟಿಲ ಕಂದಕ ಬಹುಮುಖ್ಯ ನೆಲೆಯೊಡನೆ ಸೆಣಸುತ್ತ ಪರಿಣಾಮಕಾರಿ ಸಂಚುಗಳ ನಡುವೆ ಗಬ್ಬುಗಟ್ಟಿದ ವಾತಾವರಣವೊಂದು ಸೃಷ್ಟಿಯಾಗಿ ಅದು ಎಲ್ಲೆಡೆ ಆವರಿಸುತ್ತದೆ. ಈ ‘ಗಬ್ಬು’ ಇಡೀ ಕಾದಂಬರಿಯ ಕೇಂದ್ರದಂತೆ ಓದುಗನ ಗ್ರಹಿಕೆಗೆ ಬರುತ್ತದೆ. ಆದರೆ ಅದು ಅದಲ್ಲದೆ ಇನ್ನು ಬೇರೆಯದೆ ಆದ ಕೇಂದ್ರವಿದೆ ಅನಿಸುವಷ್ಟು ಸಂಕೀರ್ಣವಾಗಿದೆ. ಹಾಗೆ, ರಾವಬಹದ್ದೂರ್ ‘ಗ್ರಾಮಾಯಣ’ವನ್ನು ಮೂರು ಭಾಗಗಳಾಗಿ ವಿಭಾಗಿಸಿ ಕಾದಂಬರಿ ಕಟ್ಟಿರುವಂತೆ ಮೋದೂರು ತೇಜ ಅವರೂ ಸಹ ‘ತುದಿಯಿರದ ಹಾದಿ’ ಯನ್ನು – ಹಂಬಲದ ಹೂ ಬಿಟ್ಟ ತುದಿ, ನೋವಿನ ನೀರುಂಡ ಕಾಂಡ, ಅಸ್ಮಿತೆಯನ್ನು ಹಸಿಯಾಗಿಟ್ಟ ಬೇರುಗಳು – ಎಂಬುದಾಗಿ ಮೂರು ವಿಭಾಗಗಳಾಗಿ ವಿಂಗಡಿಸಿರುವುದು ಎರಡೂ ಕಾದಂಬರಿಗಳ ಕಥಾ ನಿರೂಪಣೆಯ ಸಾಮ್ಯತೆಯ ಪ್ರಧಾನ ಅಂಶವಾಗಿದೆ.

ಈ ಪ್ರಧಾನ ಅಂಶದಂತೆ ಯಥಾವತ್ ಕಾದಂಬರಿ ರೂಪು ಪಡೆದಿರುವ ‘ತುದಿಯಿರದ ಹಾದಿ’ಯ ಪ್ರತಿ ವಿಭಾಗದಲ್ಲು ಪಾತ್ರಗಳ ಪ್ರವೇಶಿಸಿಕೆ, ಅವು ತಾನಾಗಿ ಸೃಷ್ಟಿಗೊಳ್ಳುವ ಸನ್ನಿವೇಶದ ಚೌಕಟ್ಟಿನೊಳಗಿನ ಪರಿಧಿಯಲ್ಲಿ ಗ್ರಾಮಾಯಣದ ಬೇಸ್ ಇದೆ. ಇದು ಕಥೆಯ ಓದಿಗೆ ಮತ್ತು ಓದುಗನು ಕಾದಂಬರಿಯನ್ನು ಸ್ಪಷ್ಟವಾಗಿ ಗ್ರಹಿಸಲು ಪೂರಕವಾಗಿದೆ.

ಈ ಮೇಲಿನ ಸ್ಪಷ್ಟ ನಿಖರ ವೈಶಿಷ್ಟ್ಯಪೂರ್ಣ ವಿಶ್ಲೇಷಣೆಗೆ ಪೂರಕವಾದ ವಾತಾವರಣವಿರುವ ‘ತುದಿಯಿರದ ಹಾದಿ’ಯ ಹಾಲಾಪುರದಲ್ಲೀಗ ಹನುಮಂತರಾಯನ ಹಬ್ಬವಿದೆ. ಹಬ್ಬ ಅನ್ನುವುದಕ್ಕಿಂತ ಜಾತ್ರೆ ಅನ್ನಬಹುದು. ಹಾಗೆ ದುರ್ಗಮ್ಮನ ಗುಡಿಯಲ್ಲಿ ಕೋಣ ಬಲಿ ಕೊಡುವ ವಾಡಿಕೆಯೂ ಇದೆ. ವಿವಿಧ ಜಾತಿ ಜನವರ್ಗದ ಈ ಊರಿಗೆ ನೆಂಟರಿಷ್ಟರು ಬರುವುದುಂಟು. ಈ ಜಾತ್ರೆಯ ನೆವದಲ್ಲಾದರು ತನ್ನಿಬ್ಬರು ಹೆಣ್ಣು ಮಕ್ಕಳನ್ನು ಹಬ್ಬಕ್ಕೆ ಕರೆದು ಮಡಿಲು ತುಂಬಿಸುವ ಆಸೆ ಹೊತ್ತ ಚೆಲುವಮ್ಮನ ಸಂಕಟ ಹೇಳತೀರದು. ಗಂಡು ಮಕ್ಕಳು ತನ್ನ ಹೆಣ್ಣು ಮಕ್ಕಳನ್ನು ಕರೆಯಲೊಲ್ಲರು. ಕಿರಿಯವಳು ಜ್ಯೋತಿಯನ್ನು ಕರೆ ತರಲು ಯಾವ ಅಭ್ಯಂತರವೂ ಇಲ್ಲ. ಆದರೆ ಹಿರಿಯಳಾದ ರೇಣುಕಾಳ ಬಗ್ಗೆ ಅಸಡ್ಡೆ ಸಿಟ್ಟು. ಅದಕ್ಕೆ ಹಳೆಯ ಕಾರಣವೂ ಉಂಟು. ಚೆಲುವಮ್ಮನ ಹಿರಿ ಮಗಳು ರೇಣುಕಾಳಿಗೆ ಮದುವೆಗೂ ಮುನ್ನ ಮುಟ್ಟು ನಿಂತಿದೆ. ಅದಕ್ಕೆ ಕಾರಣನಾದ ಮಲ್ಲೇಶಿ ಜೊತೆ ದಸಂಸ ಮಂದಿಯ ಮಧ್ಯೆಸ್ಥಿಕೆಯಲ್ಲಿ ಮದುವೆ ಮಾಡಿಯೂ ಆಯ್ತು. ಇದರಿಂದ ಮಲ್ಲೇಶಿಯ ಅವ್ವ ಪುಟ್ಟಮ್ಮಳ ಎದೆಯ ಗೂಡಲ್ಲಿ ಸಿಟ್ಟು ಮತ್ತು ದ್ವೇಷದ ಬೀಜ ಮೊಳೆತು ಬೆಳೆಯುತ್ತಿತ್ತು.

ಈಗ ಮಲ್ಲೇಶಿಯ ಅವ್ವ ಲಸಂಪುರದ ಪುಟ್ಟಮ್ಮನ ಭಯದಿಂದ ಚೆಲುವಮ್ಮಳಿಗೆ ಮಗಳು ರೇಣುಕಾಳನ್ನು ಕರೆತರುವ ವಿಚಾರವೇ ದೊಡ್ಡ ಸಾಹಸವಾಗಿದೆ.

ಹಾಗೆ ಭಜನೆ ರಂಗಪ್ಪನ ಮನೆ ರಂಗುರಂಗಾಗಿದೆ. ಚೆಲುವಮ್ಮನ ಮುಂದೆ ಭಜನೆ ರಂಗಪ್ಪನ ಬಾಯಲ್ಲಿ ದಲಿತ ಹೋರಾಟಗಾರ ದೇವರಾಜನ ಪ್ರಸ್ತಾಪವಾಗುತ್ತದೆ. ಆ ದೇವರಾಜನ ಧೈರ್ಯದ ಮೇಲೆ ಚೆಲುವಮ್ಮನ ಆತ್ಮವಿಶ್ವಾಸಕ್ಕೆ ಆನೆಬಲ ಬರುತ್ತದೆ. ಪುಟ್ಟಮ್ಮಳ ಪ್ರತಿಭಟನೆಯ ನಡುವೆಯೂ ಮಗಳು ರೇಣುಕಾಳನ್ನು ಹಬ್ಬಕ್ಕೆ ಕರೆತರುವಲ್ಲಿ ಯಶಸ್ವಿಯಾದ ಚೆಲುವಮ್ಮನಿಗೀಗ ಹೇಳಲಸಾಧ್ಯವಾದ ಸಂತೋಷ.

ಈಗ ಸಂತೋಷದ ಚಿಲುಮೆಯಲ್ಲಿ ಚಿಮ್ಮುತ್ತಿರುವ ಚೆಲುವಮ್ಮನ ಹಳೆಯ ದಿನಗಳೂ ಭಿನ್ನವೇನಲ್ಲ. ಯೌವ್ವನದಲ್ಲಿ ಗೆಳತಿಯರೊಂದಿಗೆ ತನ್ನ ಆಸೆ ಹೇಳಿಕೊಂಡಿದ್ದುಂಟು. ಅವಳಿಗೂ ಅತ್ತೆ, ಮಾವ, ಬಾವ, ಮೈದ, ಓರೆಗಿತ್ತಿ, ಹೊಲ,ಗದ್ದೆ ಇರುವ ತುಂಬು ಕುಟುಂಬದ ಸೊಸೆಯಾಗಬೇಕೆಂಬ ಇರಾದೆ. ಈತರದ ಗಂಡು ಸಿಗದೆ ಅವರ ಗೆಳತಿಯರೆಲ್ಲ ಮದುವೆಯಾದರು ಅವಳು ಹಾಗೇ ಇರುವಳು. ಗೆಳತಿಯರು, ಊರವರು ಆಡಿಕೊಳ್ಳುವ ಗಳಿಗೆ ಬಂದಾಗ ಕೊನೆಗೆ ಸಿಕ್ಕ ಗಂಡನ್ನು ಒಪ್ಪಿ ಮದುವೆಯಾದಳು. ಅಕಸ್ಮಾತ್ ಅವಳು ಅಂದುಕೊಂಡಂತೆ ಮನೆ ಸಿಕ್ಕಿದರು ಗಂಡನಾದವನು ಹುಟ್ಟು ಸೋಂಬೇರಿ. ಈ ನಡುವೆ ಒಳಗೊಳಗೆ ಅಸಮಾಧಾನದ ಹೊಗೆ. ಉಣ್ಣಕೆ ಉಡೋಕೆ ಏನೂ ಇಲ್ಲದ ಸ್ಥಿತಿ. ಇದರ ನೆವದಲ್ಲಿ ಓರೆಗಿತ್ತಿಯರ ಇರುಸು ಮುರುಸುಗಳು ಶುರುವಾಗುತ್ತವೆ. ಈ ಕಾರಣ ಅವಳ ಕನಸುಗಳು ಕಮರಿ ಸಂಸಾರದ ನೊಗ ಹೊತ್ತು ಸಾಗಿಸಿದವಳು.

ಈಗ ಹಬ್ಬಕ್ಕೆ ಕಿರಿಯ ಮಗಳು ಜ್ಯೋತಿಯೂ ಬಂದಿದ್ದಾಳೆ. ರೇಣುಕಾ ಸುಮಾರು ವರ್ಷಗಳ ನಂತರ ತವರಿನ ನೆಲದ ಸಿರಿಯಲ್ಲಿ ಮುಳುಗಿದ್ದಾಳೆ. ಹಾಲಾಪುರ ನೆಂಟರಿಷ್ಟರಿಂದ ತುಂಬಿ ತುಳುಕ್ಕುತ್ತಿದೆ. ಊರಲ್ಲಿ ಒಂದಷ್ಟು ಪುಂಡುತನವಿದೆ. ಹಾಗೆ ಮೇಲು ಕೀಳಿನ ತಾರತಮ್ಯವೂ ಇದೆ. ಹನುಮಂತರಾಯನ ಗುಡಿಯಲ್ಲಿ ಪೂಜಾಕಾರ್ಯಗಳು ಜರುಗಿವೆ. ಅಲ್ಲಿಗೆ ಮೇಲು ವರ್ಗದ ಹದಿಹರೆಯದ ಹೆಣ್ಣು ಮಕ್ಕಳಿಂದ ಹಿಟ್ಟಿನಾರತಿಯೂ ಇದೆ. ಈ ವಿಚಾರವಾಗಿ ದಲಿತರಟ್ಟಿಯ ವಿದ್ಯೆ ಕಲಿತ ಕೆಲವರು ಮತ್ತು ದಲಿತ ಹೋರಾಟದ ಮುಂದಾಳುಗಳು ತಮ್ಮ ಮನೆಯ ಹೆಣ್ಣು ಮಕ್ಕಳಿಗೂ ಹಿಟ್ಟಿನಾರತಿ ಬೆಳಗಲು ಅವಕಾಶವಿರಬೇಕೆಂಬ ಬೇಡಿಕೆಯೇ ಕಗ್ಗಂಟಿನ ವಿಚಾರವಾಗುತ್ತದೆ. ಬೇಡಿಕೆಗೆ ಪೂರಕವಾಗಿ ರಾತ್ರಿಪೂರ ತಮಟೆ ಬಡಿಯುವ ಮೂಲಕ ಎಚ್ಚರಿಸುತ್ತಾರೆ. ಮೇಲುವರ್ಗದವರು ನ್ಯಾಯತೀರ್ಮಾನ ಮಾಡುತ್ತಾರೆ. ಬಗೆಹರಿಯದ ಅಥವಾ ಭಾಗಶಃ ‘ಬಗೆಹರಿಸಿದ’ ಗ್ರಾಮ ನ್ಯಾಯಾಲಯದ ತೀರ್ಪು ಗ್ರಾಮದೊಳಗೇ ಮೇಲ್ಜಾತಿ ಮತ್ತು ದಲಿತರೊಳಗೇ ಒಂದು ರೀತಿಯ ಅಂತರ್ಯುದ್ಧ ಶುರುವಾಗಿ ಅದು ಒಳಗೊಳಗೇ ಬೇಯುತ್ತದೆ.

ನರಸಿಂಹಪ್ಪನ ಕನಸಿನಲಿ ರಣಹದ್ದೊಂದು ಚೀರುತ್ತಾ ಹಾರುತ್ತಿರುತ್ತದೆ. ಬಂಡೆ ಮೇಲೆ ನಿಂತ ಮಾರಣ್ಣ ಆ ರಣಹದ್ದಿಗೆ ಗುರುಯಿಟ್ಟು ಕಲ್ಲಿನಲಿ ಹೊಡೆದ ಪರಿಣಾಮ ರೆಕ್ಕೆ ಕಳಚಿ ಬಿದ್ದ ಕ್ಷಣದಲ್ಲಿ ಅರಚಾಟ ಕುಲುಕಾಟದಲ್ಲಿ ಕೆಳಗೆ ಬಿದ್ದ ಅರ್ಚಕನ ತಲೆ ಕಾಂಪೌಂಡ್ ಗೋಡೆಗೆ ತಾಗಿ ಒಡೆದು ರಕ್ತಚಿಮ್ಮಿ ಮೆದುಳು ಹೊರಬಂದು ನರಳುತ್ತಾನೆ. ಆ ಹದ್ದು ಸೆಟೆದು ಮೇಲೆದ್ದು ಅರ್ಚಕನ ಮೆದುಳನ್ನು ಕಚ್ಚಿಕೊಂಡು ಹಾರಿ ಹೋಗುತ್ತದೆ. ನರಸಿಂಹಪ್ಪ ಕರೆಂಟ್ ತಗುಲಿ ಕಂಬದಲ್ಲಿ ನೇತಾಡುತ್ತಾನೆ. ರಣಹದ್ದಿಗೆ ಕಲ್ಲು ಹೊಡೆದ ಮಾರಣ್ಣ ಶಿಲೆಯಾಗುತ್ತಾನೆ. ಕನಸು ಮುಗಿದು ಎದ್ದ ನರಸಿಂಹಪ್ಪನ ಮನಸ್ಸು ಹೊಯ್ದಾಡುತ್ತದೆ.

ಹಾಗೆ ದಲಿತ ಕೇರಿಯ ಯಜಮಾನಿಕೆಯಲ್ಲಿ ದುರ್ಗಿಗೆ ಕೊಟ್ಟ ಕೋಣನ ಬಲಿಯ ನಂತರ ಅದರ ಮಾಂಸ ಹಂಚಿಕೆಯಲ್ಲಿ ತೊಡಕು ಕಾಣಿಸಿಕೊಳ್ಳುತ್ತದೆ. ಅದು ಇತ್ಯರ್ಥವಾಗದೆ ಪೀಸು ಮಾಡಿ ಗುಡ್ಡೆ ಹಿಡಿದಿದ್ದ ಕೋಣದ ಮಾಂಸ ಕೊಳೆತು ಅದರ ನಾತ ಇಡೀ ಹಾಲಪುರವನ್ನೇ ಆವರಿಸಿ ಮೇಲುಕೀಳೆನ್ನದೆ ಛೀ ಥೂ ಅನ್ನುವಷ್ಟು ರಾಡಿಯಾಗುತ್ತದೆ. ಈ ನಡುವೆ ಜಿಲ್ಲಾ ಮಟ್ಟದ ದಲಿತ ಸಂಘಟನಾ ಚತುರನಾಗಿದ್ದ ಮಾರಣ್ಣ ಅಸ್ತವ್ಯಸ್ತತೆಯ ರೂಪದಲ್ಲಿ ಕಾಣಿಸಿಕೊಂಡು ಸತ್ಯದ ಕಿಡಿಕಿಡಿ ಮಾತಾಡುವುದು ಇದ್ದೇ ಇದೆ. ಅವನ ಮಾತನ್ನು ತಲೆಕೆಟ್ಟವರ ಗುಂಪಿಗೆ ಸೇರಿಸಿ ನಗಾಡುವ ದೃಶ್ಯವೂ ಹಾದು ಹೋಗುತ್ತದೆ. ಕೊನೆಗೆ ಅದೇ ಮಾರಣ್ಣ ಹನುಮಂತರಾಯನ ಗರ್ಭಗುಡಿಯಲ್ಲಿ ಬೆತ್ತಲಾಗಿ ನಿಂತಿರುವ ಸುದ್ದಿಯೂ ಹಾಲಾಪುರದಲ್ಲಿ ಕಿಚ್ಚು ಹೊತ್ತಿಸುತ್ತದೆ. ಇದೆಲ್ಲ ಘಟನಾವಳಿಗಳ ನಡುವೆ ಚೆಲುವಮ್ಮನ ಮನೆಯ ನೀರಿನ ತೊಟ್ಟಿಯಲ್ಲಿದ್ದ ಆಮೆ ಆಗಾಗ ಹೊರಗೆ ಕಾಲು ಚಾಚುತ್ತ ಇಣುಕುತ್ತದೆ. ಮಕ್ಕಳು ತೊಟ್ಟಿಯಲ್ಲಿದ್ದ ನೀರನ್ನು ಬಡಿಯುತ್ತ ರೇಜಿಗೆ ಹುಟ್ಟಿಸುತ್ತವೆ.

ಹೀಗೆ ತುದಿಯಿರದ ಹಾದಿಯ ಕಥೆ ಮೊದಲಿನಿಂದ ಕೊನೆಯವರೆಗು ಕುತೂಹಲಕಾರಿ ಸನ್ನಿವೇಶಗಳ ಮೂಲಕ ಓದುಗನನ್ನು ನಿಬ್ಬೆರಗಾಗಿಸುತ್ತದೆ.

ಇಲ್ಲಿನ ಕಥೆ ನಿಜವಾಗಿ ಚೆಲುವಮ್ಮನ ಅಳುಕಿನ ಮೂಲಕ ಬಿಚ್ಚಿಕೊಳ್ಳುತ್ತದೆ. ಅದಕ್ಕು ಮುನ್ನಿನ ಪಾತ್ರಗಳು ಸನ್ಮಿವೇಶಗಳು ಕಥೆಗೆ ಒಂದು ಕೊಂಡಿಯಾಗಿ ಚೆಲುವಮ್ಮನ ಪ್ರವೇಶಿಕೆಗೆ ಒಂದು ಬೇಸ್ ಆಗಿದೆ.

ಅವಳ ಯೌವ್ವನದಲ್ಲಿನ ಕನಸು, ನಂತರ ಅವಳ ಆಸೆ, ಗಂಡನ ಸೋಂಭೇರಿತನ, ಮಕ್ಕಳನ್ನು ಕಟ್ಟಿಕೊಂಡು ಏಗಿದ ಬದುಕಿನ ಬಂಡಿ, ರೇಣುಕಾಳ ವಿಚಾರದಲ್ಲಿ ತನ್ನ ಸಹನೆ ಮೂಲಕವೇ ಬೀಗಿತಿ ಪುಟ್ಟಮ್ಮನನ್ನು ಸೋಲಿಸಿದ ರೀತಿ, ಅದುವರೆಗೂ ಬಾರದ ಅಳಿಯ ಮಲ್ಲೇಶಿಯನ್ನು ಮನೆಗೆ ಬರುವಂತೆ ಮಾಡಿದ ಅವಳ ನಡೆ ತುದಿಯಿರದ ಹಾದಿಯುದ್ದಕ್ಕು ಒಂದು ಲೆಜೆಂಡ್!

ಇದು ಈ ಕಾದಂಬರಿಯಲ್ಲಿನ ಹಾಲಾಪುರ ಲಂಸಂಪುರದ ಚೆಲುವಮ್ಮ ಪುಟ್ಟಮ್ಮನ ರೀತಿನೀತಿಗಳ ಬದುಕಿನ ಕಥೆಯಾಗದೆ ಈ ದೇಶದ ಪ್ರತಿ ಹಳ್ಳಿಗಾಡಿನ ಬದುಕಿನ ಪಡಿಪಾಟಲುಗಳ ಜೀವನಗಾಥೆಯಾಗಿದೆ. ಒಳಿತಿನ ಪ್ರತಿನಿಧಿಯಾಗಿ ಚೆಲುವಮ್ಮ, ಕೆಡುಕಿನ ಪ್ರತಿನಿಧಿಯಾಗಿ ಪುಟ್ಟಮ್ಮ ಕಾಣಿಕೊಂಡಿದ್ದಾಳೆ. ಆದರೆ ಈ ಪಾತ್ರಗಳಿಗೆ ಓದುಗ ಅಥವಾ‌ ಕಾದಂಬರಿಕಾರ ಒಳಿತು ಕೆಡುಕು ಎನ್ನುವ ತೀರ್ಪು ಕೊಡುವುದೂ ನ್ಯಾಯವಲ್ಲ. ಅವು ನಿರ್ವಹಿಸುವ ಪಾತ್ರ ಪ್ರಧಾನ ಧಾರೆಯಾಗಿ ಹರಿದಿರುವುದರಿಂದ ಹಾಗು ಆ ಪಾತ್ರಗಳು ಅವುಗಳ ಮೂಗಿನ ನೇರಕ್ಕೆ ಸರಿಯಾಗಿರುವುದರಿಂದ ಇವು ವಿಮರ್ಶಕ ವಿಶ್ಲೇಷಕನನ್ನು ಕೆಣಕುವಂತೆ ಮಾಡುತ್ತವೆ. ಹಾಗಾಗಿ ಇವೆರಡು ಪಾತ್ರಗಳು ಕಾದಂಬರಿಯುದ್ದಕ್ಕು ಓದುಗನನ್ನು ಬೆಂಬಿಡದೆ ಕಾಡುತ್ತವೆ. ತದ ನಂತರ ರೇಣುಕಾಳ ಬಾಳು ಅವಳ ಅವ್ವನ ತದ್ರೂಪಿನ ಬಾಳುವೆಯಂತೆ ಹರಿದಿದೆ.

ಭಜನೆ ರಂಗಪ್ಪನ ಮನೆಯ ಅಂಗಳ ಹನ್ನೆರಡನೇ ಶತಮಾನದ ಅನುಭವ ಮಂಟಪದಂತೆ ಭಾಸವಾಗುತ್ತದೆ. ತಾರತಮ್ಯ ರಹಿತ ನಡಾವಳಿಗಳ ಮೇಲೆ ಕೆಲವು ಕಿಡಿಗೇಡಿ ಮನಸುಗಳ ಕೃತ್ಯಗಳ ಸಂಚಿನ ಬಗ್ಗೆ ಬೆಳಕು ಚೆಲ್ಲುವ ಕಾದಂಬರಿ, ಬಸವಣ್ಣನ ಜಾತ್ಯಾತೀತ ತತ್ವದ ಪ್ರತಿಪಾದನೆಯ ಹೊಸ ಮಜಲುಗಳನ್ನು ಭಜನೆ ರಂಗಪ್ಪನ ಬದುಕಿನ ಅನಾವರಣವು ಕಟ್ಟಿಕೊಡುವ ಚಿತ್ರ ನಿರೂಪಣೆ ವಿಭಿನ್ನವಾಗಿದೆ.

ಕಥೆಯಲ್ಲಿ ಶತಮಾನಗಳಿಂದ ಮೇಲ್ವರ್ಗದವರಿಂದ ತುಳಿಸಿಕೊಂಡು ಬಂದಿರುವ ದಲಿತ ವರ್ಗ ಈಗ ಸುಧಾರಿಸಿದಂತೆ ಕಂಡು ಬಂದಿದೆ. ಕಲಿತವರು ಮೇಲುವರ್ಗದ ನಡಾವಳಿಗಳನ್ನು ಪ್ರಶ್ನಿಸುತ್ತಾರೆ. ದಲಿತ ಸಂಘಟನೆಗಳು ತಲೆ ಎತ್ತಿವೆ. ಅಂಬೇಡ್ಕರ್ ಚಿಂತನೆಗಳನ್ನು ಕಲಿತ ಮನಸುಗಳು ಆವಾಹಿಸಿಕೊಂಡು ಸ್ವಾಭಿಮಾನದ ಮಾತಾಡುತ್ತವೆ. ಆದರೆ ಈಗಲೂ ಊರೊಳಗಿನ ಸಾಂಪ್ರದಾಯಿಕ ಮನಸುಗಳು ಒಪ್ಪದೆ ಒಳಗೊಳಗೆ ಬೇಯುತ್ತವೆ. ದಲಿತ ನಾಯಕನಾಗಿ ಸಮಸ್ಯೆಗಳ ಕೇಂದ್ರಕ್ಕೆ ದುಮುಕಿ ಬಗೆಹರಿಸುವ ದೇವರಾಜ ಪ್ರಮುಖವಾಗಿ ಕಾಣುತ್ತಾನೆ. ಆದರೆ ಅದಕ್ಕಿಂತ ಮಿಗಿಲಾಗಿ ಅಂಬೇಡ್ಕರ್ ವಿಚಾರಧಾರೆಗಳ ಮೂಲಕ ಸಮಸ್ಯೆಗಳ ವಿವಿಧ ಮಗ್ಗುಲುಗಳನ್ನು ಕೇರಿಕೇರಿಗೂ ಹರಡಿ ದಲಿತ ಜಾಗೃತಿ ಮೂಡಿಸುತ್ತಿದ್ದ ಮಾರಣ್ಣ ವ್ಯವಸ್ಥೆಯ ಸಂಚಿಗೆ ಸಿಲುಕುತ್ತಾನೆ. ಈ ಸಂಚು ದಲಿರೊಳಗಿನ ಒಡಕಿನಲ್ಲಿದೆ. ಈ ಒಡಕು ಮೇಲುವರ್ಗದ ಹಿಕ್ಮತ್ತಿನಲ್ಲಿ ಅಡಗಿದೆ. ಹೀಗೆ ಹಿಕ್ಮತ್ತಿಗೆ ಸಿಲುಕಿ ಕಾದಂಬರಿಯೊಳಗೆ ಆಗಾಗ ಕಾಣಿಸಿಕೊಳ್ಳುವ ಮಾರಣ್ಣನ ಪಾತ್ರದ ಮೂಲಕ ಬಿ.ಕೃಷ್ಣಪ್ಪರಿಂದ ರೂಪು ಪಡೆದ ದಲಿತ ಸಂಘರ್ಷ ಸಮಿತಿಯು ತನ್ನ ಕಾಲದ ಕಸುವಿನಲ್ಲಿ ಚಳುವಳಿಗಾರ, ಹೋರಾಟಗಾರ, ಬರಹಗಾರರ ನೆವದ ಸ್ವಾರ್ಥಿಗಳ ಅಧಿಕಾರ ಲಾಲಸೆಯಿಂದ ವಿಘಟನೆಗೊಂಡು ಹಲವು ಕವಲುಗಳಾಗಿ ಛಿದ್ರವಾಗಿರುವ ಪ್ರಸ್ತುತತೆಯನ್ನು ಮತ್ತು ಅದೇ ಕಾಲಕ್ಕೆ ಪ್ರಾಮಾಣಿಕ ಹೋರಾಟಗಾರನೊಬ್ಬ ಹೇಳ ಹೆಸರಿಲ್ಲದೆ ಕಾಲನ ತೆಕ್ಕೆಯಲ್ಲಿ ಇದ್ದೂ ಇಲ್ಲದಂತೆ ವಿಘಟಿತಗೊಂಡ ನಂತರದ ಬೆಳವಣಿಗೆಗಳನ್ನು ಗಮನಿಸುತ್ತ ಯಾವುದೋ ಮೂಲೆಯಲ್ಲಿ ಕುಂತು ತೆರೆದಿಡುವ ನಿರ್ಭೀತ ಸತ್ಯವನ್ನು ಕೇಳಿಸಿಕೊಳ್ಳದ ಮನಸ್ಥಿತಿಗಳ ದಲಿತ ಕಥಾನಕದ ಒಂದು ಭಾಗವಾಗಿ ಅನಾವರಣಗೊಳಿಸಿರುವ ಮೋದೂರು ತೇಜ ಅವರ ಈ ಕಥನ ತಂತ್ರದಲ್ಲಿ ಸೂಕ್ಷ್ಮ ಒಳನೋಟದ ಗ್ರಹಿಕೆ ಇದೆ. ಈ ಕಥನ ತಂತ್ರವು ಕಾದಂಬರಿಯೊಳಗೆ ವಿಭಿನ್ನ ಪಾತ್ರಗಳ ಪ್ರವೇಶಿಕೆ, ಇದರಿಂದ ರೂಪು ಪಡೆವ ಸನ್ನಿವೇಶಗಳ ಗಾಢ ನಿರೂಪಣೆಯ ಮೂಲಕ ಘಟಿಸುವ ಅನೇಕ ವಿದ್ಯಮಾನಗಳ ಆರ್ತನಾದದಲ್ಲಿ ಅಡಗಿದೆ.

ಹಾಲಾಪುರದಲ್ಲಿ ಮೇಲುಕೀಳಿನ ತಾರತಮ್ಯದ ಜೊತೆಗೆ ಸಮುದಾಯದೊಳಗೇ ಮೇಲರಿಮೆ ಕೀಳರಿಮೆ ಇದೆ. ಇದರಿಂದ ಸಮುದಾಯದೊಳಗೆ ಯಜಮಾನಿಕೆ ಪ್ರವೃತ್ತಿ ಇದೆ. ಹಾಗೆ ಎಲ್ಲ ಕಾಲದಲ್ಲು ಎಲ್ಲ ಜಾತಿ ವರ್ಗದಲ್ಲು ಈತರದ ಯಜಮಾನಿಕೆ ಪ್ರವೃತ್ತಿ ಬಹುಶಃ ಮನುಷ್ಯ ಸಂಬಂಧಗಳ ಮೇಲಿನ ಅತಿರೇಕದ ದೌರ್ಜನ್ಯದ ಒಂದು ಮನಸ್ಥಿತಿ. ಇದು ಕಾದಂಬರಿಯುದ್ದಕ್ಕು ತಿಳಿನೀರು ತುಂಬಿದ ಬಾವಿಯೊಳಗೆ ಕೆಸರು ಜಿನುಗಿ ಕದಡುವಂತೆ ಮನುಷ್ಯನ ಸಾವಯವ ಸಂಬಂಧಗಳೊಳಗೆ ಬೆಸೆದುಕೊಂಡು ವಿವರಿಸಲಾಗದ, ಅಥವಾ ಇಲ್ಲಿ ಏನನ್ನೊ ಹುದುಗಿಸಿಟ್ಟು ಇನ್ನೇನನ್ನೊ ಗಳಿಸುವ ವಿಕೃತತೆ ಮತ್ತು ಮಾನಸಿಕ ತೊಳಲಾಟದಂತೆ ಈ ಯಜಮಾನಿಕೆಯ ಆಂತರ್ಯವು ಮಡುಗಟ್ಟಿದೆ.

ಹಾಗೆ ಊರೊಳಗೆ ಮೇಲುಕೀಳನ್ನದೆ ಅಥವಾ ಸಮುದಾಯದೊಳಗೇ ಅನೈತಿಕ ಸಂಬಂಧಗಳು ಬೇರು ಬಿಟ್ಟಿವೆ. ಅದು ವಾಸದ ಗ್ರಾಮದಿಂದ ಜಿಗಿದು ನಿಧಾನಕೆ ದಾಟಿ ಜಾತಿ ಮೀರಿದ ನೆಲದಲ್ಲೂ ಈ ಚಟುವಟಿಗಳೂ ನಡೆದಿರುವ ಕುರುಹನ್ನು ದಾಖಲಿಸುತ್ತದೆ. ಈ ಜಾತಿ ಮೀರಿದ ಸಂಬಂಧಗಳು ಮತ್ತು ಚಟುವಟಿಕೆಗಳು ಹಬ್ಬದ ವಾತಾವರಣದೊಳಗು ಪ್ರವೇಶಿಕೆ ಪಡೆಯುತ್ತದೆ. ಅದು ಸಾಂಪ್ರದಾಯಿಕವಾದ ಆಚಾರ ವಿಚಾರ ತುಂಬಿದ ಊರೊಳಗಿನ ವಾರಸುದಾರಿಕೆಯಲ್ಲು ಪರಿಣಾಮ ಬೀರುತ್ತದೆ.

ಇದು ಪಟ್ಟದ ಕೋಣದ ಬಲಿ ಮತ್ತು ಅದರ ಮಾಂಸ ಹಂಚಿಕೆಯಲ್ಲು ಪ್ರಭಾವ ಬೀರಿದೆ. ಈ ವಿಚಾರವಾಗಿ ಬೆಂಕಿರಾಮಪ್ಪನ ವಂಶದವರಿಗೆ ಪಟ್ಟ ಕಟ್ಟಲಾಗಿದೆ ಎಂಬ ಗ್ರಾಮನ್ಯಾಯಾಲಯದ ತೀರ್ಪು ಇದ್ದರು ಅದನ್ನು ವಿರೋಧಿಸುವ ಮನಸ್ಥಿತಿಯೂ ಇದೆ. ಅದರ ವಾರಸುದಾರನಾಗಿ ಈ ಕಾಲಕ್ಕೆ ಪಾಲಯ್ಯ ಇದ್ದಾನೆ. ಈ ಪಾಲಯ್ಯ ಗ್ರಾಮದೊಳಗೇ ರಾಜಕೀಯವಾಗಿ ಬೆಳೆಯುತ್ತಿರುವವ. ಆದರೆ ವಿರೂಪಾಕ್ಷಿಗೆ ಇದು ಸಲ್ಲದ ವಿಚಾರ. ಹಾಗಾಗಿ ಪಾಲಯ್ಯನಿಗೆ ಇದನ್ನು ತಪ್ಪಿಸುವ ಒಂದಂಶದ ಹಿಂದೆ ವಿರೂಪಾಕ್ಷಿಯ ರಾಜಕೀಯ ಕಾರಣವೂ ಇದೆ.

ಹೀಗೆ ವಂಶ ಪಾರಂಪರ್ಯದೊಳಗೆ ಅದೇ ವಂಶದ ಇನ್ನೊಂದು ಕುಡಿ ಪಟ್ಟದ ಯಜಮಾನಿಕೆ ಖಂಡಿಸುವ ಮಾತು ಆಡುತ್ತದೆ. ವಿರೋಧಿ ವಿರೂಪಾಕ್ಷಿ ಕೊಡುವ ಕಾರಣಗಳು ಪಾಲಯ್ಯನ ವಂಶಜ ರಾಮಪ್ಪನ ಮುತ್ತಾತ ಭರಮಪ್ಪ ಊರು ಬಿಟ್ಟು ಹೋಗಿ ದೊಂಬರ ಗುಂಪಿನಲ್ಲಿ ಸೇರಿ ಅಲ್ಲಿಯೇ ಕೂಡಾವಳಿ ಮಾಡಿಕೊಂಡು ಬಂದು ಊರು ಸೇರಿ ಜಾತಿ ಕುಲ ಸಂಪ್ರದಾಯ ಕೆಡಿಸಿದವನೆಂಬ ದೂರಿದೆ. ಆದರೆ ತಲೆಮಾರಿನ ಪಟ್ಟದ ಗಟ್ಟಕ್ಕೆ ಗ್ರಾಮದ ನ್ಯಾಯ ತೀರ್ಮಾನವು ವಿರೂಪಾಕ್ಷಿಯ ವಿರುದ್ದವಾಗಿ ಬರುತ್ತದೆ. ಈ ವಿರೂಪಾಕ್ಷಿಯ ವಿರೋಧ ಇತರರ ಕೇಡಿನ ಸಂಚಿಗೆ ರೂಪಗೊಂಡ ವಿರೋಧ. ಈ ವಿರೋಧಕ್ಕು ಬೆಲೆಕೊಟ್ಟ ಗ್ರಾಮ ನ್ಯಾಯಾಲಯ ಸಾಕ್ಷ್ಯ ಕೇಳುತ್ತದೆ. ಆದರೆ ಸಾಕ್ಷ್ಯ ನೀಡುವಲ್ಲಿ ವಿಕಟತನ ಪ್ರದರ್ಶಿಸಿ ವಿಫಲನಾಗುತ್ತಾನೆ.

ಇದಾದ ಮೇಲೆ ಎಲ್ಲವೂ ಬಗೆಹರಿದಿದೆ ಎಂದುಕೊಂಡಂತೆ ಕಾಣ ಬಂದರು ಒಂದು ಪವಾಡ ಜರುತ್ತದೆ. ಅದೆಂದರೆ ಕೋಣ ಕತ್ತರಿಸಲು ಮಚ್ಚುಗತ್ತಿ ಎತ್ತಿದ ಪಾಲಯ್ಯನು ಎತ್ತಿದ ಮಚ್ಚು ಕೋಣದ ಮೇಲೆ ಇಳಿಸುವ ಧೈರ್ಯವಿಲ್ಲದೆ ಬೆವರುತ್ತ ಸ್ತಬ್ಧನಾಗಿ ನಿಂತ ಸನ್ನಿವೇಶದಲ್ಲಿ ವಿರೂಪಾಕ್ಷಿಯ ಗೈರು ಹಾಜರಿಯಲ್ಲೆ ವಿರೋಧಿ ಪಾಳಯ ಮೇಲುಗೈ ಸಾಧಿಸಿದಂತ ಅನ್ಯಾಯದ ಧ್ವನಿಯೊಂದು ಧ್ವನಿಸುತ್ತದೆ.

ಈ ಸನ್ನಿವೇಶ ಪಟ್ಟದ ವಾರಸುದಾರಿಕೆ ವಿಚಾರವೊಂದು ಅನ್ಯಮಾರ್ಗದಲ್ಲಿ ಪಾಲಯ್ಯನನ್ನು ಅಸ್ಸಹಾಯಕ ಸ್ಥಿತಿಗೆ ತಳ್ಳಿರುವ ಒಂದು ವ್ಯವಸ್ಥಿತವಾದ ಗ್ರಾಮದೊಳಗಿನ ಕುತಂತ್ರ ರಾಜಕೀಯವನ್ನು ಬಿಚ್ಚಿಡುತ್ತದೆ. ಈ ರೋಚಕವಾದ ಸನ್ನಿವೇಶದ ಲಾಭದ ಪಾಲು ಪಡೆದ ಧಾಂ ಧೂಂ ಎಂದು ಅರಚುತ್ತಿದ್ದ ಗುಂಪಿನವರೆ ಆಗಿ ಪಾಲಯ್ಯನಿಂದ ಮಚ್ಚುಗತ್ತಿ ಕಸಿದು ಕೋಣವನ್ನು ಬಲಿಗಯುತ್ತಾರೆ.

ಇದು ಅದುವರೆಗೂ ಇದ್ದ ಗ್ರಾಮನ್ಯಾಯದಾನದ ತೀರ್ಪನ್ನು ವಿರೂಪಾಕ್ಷಿ ಪಿತೂರಿಯಿಂದ ಮುರಿದಿರುವ ಸತ್ಯ, ಸ್ವತಃ ತೀರ್ಪು ನೀಡಿದವರಿಗೂ ಅರಿವಿಗೆ ಬಾರದಂತೆ ಮಂಕಾಗಿಸುತ್ತದೆ. ಈ ಕಥಾ ನಿರೂಪಣಾ ಹೆಣಿಗೆ ಕಾದಂಬರಿಯೊಳಗೆ ಒಂದು ವ್ಯೂಹಾತ್ಮಕ ತಂತ್ರದಂತೆ ರಚಿತವಾಗಿದೆ.

ಹಾಗೆ ಕೋಣದ ಮಾಂಸ ಹಂಚಿಕೆಯಲ್ಲು ಯಲ್ಲಪ್ಪನ ಮಗ ಸುರೇಶನ ತಕರಾರು. ಅವನ ತಕರಾರು ಹಟ್ಟಿಯ ಆರು ಗುಂಪಿನವರಿಗೆ ಹೊರತಾಗಿ ಮನೆಗೊಂದು ಪಾಲು ಒಪ್ಪಲೊಲ್ಲ. ಇದು ಕೂಡ ಗ್ರಾಮ ವ್ಯವಸ್ಥೆಯೊಳಗೇ ಕುಯುಕ್ತಿಗಾಗಿ ಹಟ್ಟಿಯ ಯಜಮಾನಿಕೆಯ ಪ್ರವೃತ್ತಿಯಂತೆ ಕಾಣುತ್ತದೆ. ಈ ಪ್ರವೃತ್ತಿ ದ್ಯಾಮವ್ವನನ್ನು ಕೆಣಕುತ್ತದೆ. ಈ ದ್ಯಾಮವ್ವ ಗಂಡನನ್ನು ಕಳಕೊಂಡವಳು. ಇದನ್ನು ಹೇಗೆ ಅರ್ಥೈಸುವುದು? ಆದರೆ ಸುರೇಶನಿಗೆ ಅವಳು ಅನೈತಿಕವಾಗಿ ದಕ್ಕದ ಕಾರಣವೇ ಮನೆಗೊಂದು ಪಾಲು ಹಂಚಿದರೆ ದ್ಯಾಮವ್ವನಿಗೂ ಹಂಚಬೇಕಾಗುತ್ತದೆ. ನನಗೆ ದಕ್ಕದ ಇವಳಿಗೆ ಪಟ್ಟದ ಕೋಣದ ಮಾಂಸದ ಪಾಲೂ ದಕ್ಕಬಾರದು. ಹೀಗಾಗಿ ಅವಳನ್ನು ಹಳಿಯುವ, ತೇಜೋವಧೆ ಮಾಡುವುದೇ ಸುರೇಶನ ಹಿಕ್ಮತ್ತು. ಇದರ ಬೇರು ಹಿಡಿದ ದ್ಯಾಮವ್ವ ಸುರೇಶನ ಮೇಲೆ ನ್ಯಾಯಮಾರ್ಗದಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಾಳೆ. ಅವಳ ನ್ಯಾಯಮಾರ್ಗದ ತರಾಟೆಗೆ ಬೆರಗಾಗುವ ಸುರೇಶ ಒಂದು ಹಂತದಲ್ಲಿ ತಣ್ಣಗಾಗುತ್ತಾನೆ. ಅಲ್ಲಿಂದ ಸಾವಕಾಶವಾಗಿ ಬಿಡಿಸಿಕೊಂಡು ಹೋದರು ಅದು ತಣ್ಣಗೆ ಒಳಗೇ ಬೇಯುವ ಕುತಂತ್ರದ ಮಾರ್ಗಕ್ಕು ದಾರಿಯಾಗುತ್ತದೆ.

ಹಾಗೆ ದ್ಯಾಮವ್ವನ ಪ್ರತಿಭಟನೆ ಹೆಣ್ಣಿನ ಸ್ವಾಭಿಮಾನ, ಸಿಟ್ಟು, ಸೆಡವು, ಗಂಡ ಬಿಟ್ಟವಳೆಂದರೆ ಇತರರ ಸುಖಕ್ಕೆ ಸೆರಗು ಹಾಸುವವಳಲ್ಲ ಎಂಬ ಗಟ್ಟಿತನದ ಖಡಕ್ ಸೂಚನೆಯೊಂದು ಬಿತ್ತರವಾಗುತ್ತದೆ. ಇದು ಕಾದಂಬರಿಯಲ್ಲಿ ಗಂಭೀರವಾದ ಪ್ರಖರ ದನಿಯಲ್ಲಿ ನಿರೂಪಣೆಗೊಂಡಿರುವ ಪರಿಣಾಮಕಾರಿ ಸನ್ನಿವೇಶ.

ರಾವಬಹದ್ದೂರರ ಗ್ರಾಮಾಯಣದಲ್ಲಿ ನೂರಾರು ಪಾತ್ರಗಳು ಬಂದು ಹೋಗುತ್ತವೆ. ಪ್ರತಿ ಪಾತ್ರಗಳು ತಲೆಮಾರುಗಳ ವಂಶಾವಳಿಯನ್ನು ದಾಖಲಿಸುತ್ತ ಕಥೆ ತನ್ನ ನಿರ್ದಿಷ್ಟ ದಿಕ್ಕಿಗೆ ಸಾಗುತ್ತ ಬಿಡಿಬಿಡಿಯಾಗಿ ಚೆಲ್ಲಿ ಅವನ್ನು ಮತ್ತೆ ಮತ್ತೆ ಹೆಕ್ಕಿ ಒಂದು ಗುಚ್ಚವಾಗಿ ಬಿಚ್ಚಿಡುವಂತೆ, ತುದಿಯಿರದ ಹಾದಿಯಲ್ಲು ಈ ಕ್ರಮಾಂಕ ಇದೆ.

ಆದರೆ ಗ್ರಾಮಾಯಣದಲ್ಲಿನ ದಟ್ಟತೆ ನೂರಾರು ಪಾತ್ರಗಳಂತೆ ‘ತುದಿಯಿರದ ಹಾದಿ’ಯಲ್ಲಿ ಇಲ್ಲದಿದ್ದರು ಹಾಲಾಪುರದೊಳಗೆ ಬಾಳ್ವೆ ನಡೆಸುವ ಚೆಲುವಮ್ಮ, ಹನುಮಂತಪ್ಪ, ಯಲ್ಲಪ್ಪ, ಆಸಾದಿ ಯಲ್ಲಪ್ಪ, ಸುರೇಶ, ವಿರೂಪಾಕ್ಷಿ, ಬೆಂಕಿರಾಮಪ್ಪ, ಪುಟ್ಟಮ್ಮ, ಕಮಲಿ, ಸ್ವಾತಿ, ದ್ಯಾಮಜ್ಜಿ, ರಾಮಪ್ಪ, ದ್ಯಾಮವ್ವ, ಮಲ್ಲೇಶಿ, ಭಜನೆ ರಂಗಪ್ಪ, ಮಾರಣ್ಣ, ಕೆಂಚಪ್ಪ ಮತ್ತು ಕೆಂಚಪ್ಪನ ಸೊಸೆ, ದಬ್ಬುನಾಗಯ್ಯ, ಸಣ್ಣ ನಿಂಗಜ್ಜಿ, ದಿವಾಕರ, ಅನಸೂಯಮ್ಮ, ಮಲ್ಲಜ್ಜ, ಗಿಡ್ಡಹನುಮಪ್ಪ, ಹೊನ್ನೂರಪ್ಪ, ನರಸಿಂಹಪ್ಪಾದಿಯಾಗಿ ಕಪಿಲೆಬಾನೆಯವರು, ಗಾರೆಮನೆಯವರು, ಚೆಲ್ಲಾಪಿಲ್ಲಿಯವರು, ಗಡಿಗೆ ಗಂಗಯ್ಯನೋರು, ತೊದಲ ತಿಮ್ಮಯ್ಯನೋರು, ಪೂಜಾರಪ್ಪನೋರು,‌ ಅವರ ಅವ್ವ ಅಪ್ಪ ತಾತ ಮುತ್ತಾತರ ಬದುಕು ಬವಣೆಯನ್ನು ಮೋದೂರು ತೇಜ ಬಿಡಿ ಬಿಡಿಯಾಗಿ ಪಾತ್ರಗಳ ಬದುಕು ಬವಣೆಗಳನ್ನು ಹೆಕ್ಕಿ ವಿವರವಾಗಿ ಒಂದು ಗುಚ್ಚವಾಗಿ ದಾಖಲಿಸುತ್ತಾರೆ. ಹಾಗೆ ಇದು ಪ್ರಸ್ತುತ ಕಥಾ ಸನ್ನಿವೇಶಕ್ಕೆ ಪೂರಕವಾಗಿ ಅವುಗಳ ನಡಾವಳಿಗಳ ಮೇಲೆ ಷರಾ ಬರೆದಿದ್ದಾರೆ.

ಗ್ರಾಮಾಯಣದ ಮಾಮಲೇದಾರರು, ದಫೇದಾರರು, ಮಾದಿಗರಟ್ಟಿಯವರ ಓಣಿ, ಬೀದಿ, ಹೊಲೆರಟ್ಟಿಯವರ ಹಜಾರಗಳು, ಐಯ್ನೊರ ಪಡಸಾಲೆಗಳು, ಕಾವಿಧಾರಿ ಮಠದೊಳಗಿನ ಹರಟೆಗಳ ಅಡ್ಡಾದಲ್ಲಿ ಕಾನೂನು ವ್ಯಾಪ್ತಿ ಮೀರಿದ ಆಡಳಿತ ವ್ಯವಸ್ಥೆಯೊಂದು ರೂಪುಗೊಂಡು ಅದರೊಳಗೇ ಜಾತಿತನ, ಅನ್ಯಾಯ, ಅಕ್ರಮ, ಅನೈತಿಕತೆಯ ತಾಣವಾಗಿರುವಂತೆ ‘ತುದಿಯಿರದ ಹಾದಿ’ಯ ಒಳಗೂ ಹನುಮಂತರಾಯ ಗುಡಿಯ ನೆಪದಲ್ಲಿ ಊರೊಳ್ಳೊರು ಮಾಡುವ ಅಸಡ್ಡಾಳುತನ, ತಮ್ಮೊಳಗೇ ಮನೆ ಮಾಡಿಕೊಂಡ ಲೋಲುಪ ಮತ್ತು ಜಾತಿತನದ ಸಾಂಪ್ರದಾಯಿಕ ಚೌಕಟ್ಟಿನ ಎಲ್ಲೆಯಲ್ಲಿ ಅವರದೇ ಆದ ವ್ಯಾಖ್ಯಾನದ ಬಸಿರಿದೆ.

ಈ ಹನುಮಂತರಾಯ ವಿಗ್ರಹವೂ ಹಾಲಾಪುರದಲ್ಲಿ ನೆಲೆಯೂರಲು ದಲಿತರ ಸಾಹಸದ ಯಶೋಗಾಥೆ ಇದೆ. ಇಷ್ಟಾದರು ಊರೊಳ್ಳೊರ ಜಾತಿತನದಲ್ಲಿ ದಲಿತರು ಬೇಯುವಿಕೆಯೇ ಒಂದು ಅಮಾನವೀಯವಾಗಿದೆ. ಇದು ಪುರಾತನ ಕಾಲದಿಂದ ಒಂದು ಹಂತದವರೆಗೆ ಈ ದೇಶದ ಪ್ರತಿ ಹಳ್ಳಿಗಾಡುಗಳು ಜಾತಿ ಧರ್ಮದ ಸೆಳೆತಕ್ಕೆ ಒಳಪಟ್ಟು ಅಲ್ಲಿರುವ ಮೇಲ್ಮಟ್ಟದ ವ್ಯವಸ್ಥೆಯೊಂದು ಗ್ರಾಮಾಡಳಿತದ ನ್ಯಾಯದಾನದಲ್ಲಿ ಬೇರು ಬಿಟ್ಟು ಅನ್ಯಾಯದ ಬಾಳುವೆಗೆ ಭಾಷ್ಯ ಬರೆದ ಪುರಾವೆಯ ರೂಪದಲ್ಲಿ ಮೋದೂರು ತೇಜ ತಮ್ಮ ತುದಿಯಿರದ ಹಾದಿಯುದ್ದಕ್ಕು ದಟ್ಟವಾಗಿ ಕಟ್ಟಿಕೊಟ್ಟಿದ್ದಾರೆ.

ದಲಿತ ಬದುಕಿನ ವಿವಿಧ ಮಗ್ಗುಲುಗಳ ಬಗ್ಗೆ ಚರ್ಚಿಸುವ ‘ತುದಿಯಿರದ ಹಾದಿ’ ಯಲ್ಲಿ ಆಮೆ ಮತ್ತು ರಣಹದ್ದಿನ ಪ್ರಸ್ತಾಪವಿದೆ.

ಚೆಲುವಮ್ಮನ ಮನೆಯ ನೀರಿನ ತೊಟ್ಟಿಯಲ್ಲಿ ಕಾಲು ಚಾಚಿ ಇಣುಕುವ ಆಮೆಯು ಅದುವರೆಗೂ ಈ ನೀರಿನ ತೊಟ್ಟಿಯೇ ಅದ್ಬುತ ಪ್ರಪಂಚವೆಂದುಕೊಂಡು ತನ್ನಿಡೀ ಜೀವಯಾನ ಸಾಗಿಸುತ್ತಿರುತ್ತದೆ. ಅದಕ್ಕು ಈ ತೊಟ್ಟಿಗಿಂತ ಬೇರೆಯದೇ ಆದ ಪ್ರಪಂಚವಿರಬಹುದಾ ಎಂಬ ಸತ್ಯವನ್ನು ಕಂಡುಕೊಂಡಂತೆ ಅದು ಮತ್ತೆ ಮತ್ತೆ ನೀರಿನ ತೊಟ್ಟಿಯ ಅಂಚಿಗೆ ಬಂದು ಆಸೆಗಣ್ಣಿನಿಂದ ಕಾಲುಚಾಚಿ ನೋಡುತ್ತದೆ. ಆಗ ನೀರಿನಲ್ಲಿ ಚಿನ್ನಾಟ ಆಡುವ ಮಕ್ಕಳು ಮೋಜಿಗೆ ತೊಟ್ಟಿಯ ನೀರು ಬಡಿದು ಕೇಕೆ ಹಾಕುತ್ತವೆ. ಆ ಕೇಕೆಗೆ ಅದು ಆತಂಕದಿಂದಲೇ ಸರಿದು ತನ್ನ ಪ್ರಪಂಚದೊಳಕ್ಕೆ ಹಿಂತಿರುಗುತ್ತದೆ. ಮತ್ತೆ ಅಂಚಿಗೆ ಬಂದು ಕಾಲುಚಾಚಿ ನೋಡುತ್ತದೆ. ಮತ್ತೆ ಮಕ್ಕಳ ಆಟ. ಮತ್ತದೇ ಗಾಬರಿ. ಹೀಗೆ ಇದು ಪುನರಾವರ್ತನೆಯಾಗುತ್ತದೆ.

ಇದು ದಲಿತ ಬದುಕಿನ ಜೀವಯಾನವು ಕೇರಿ, ಬೀದಿ, ಸಂಪ್ರದಾಯ ಎನುವ ತೀರಾ ಸಂಕೀರ್ಣವಾದ ಪ್ರಪಂಚದೊಳಗೆ ಬದುಕು ಮಾಡಿಕೊಂಡು ಜೀವನ ರೂಪಿಸಿಕೊಂಡಿರುವ ದಲಿತರು ಹೊಸಿಲು ದಾಟಿ ಕೇರಿ ದಾಟಿ ನೋಡುವ ಆಸೆಗೆ ಕಲ್ಲು ಹಾಕುವ ಚಿತ್ರವನ್ನು ದೊರಕಿಸಿಕೊಡುತ್ತದೆ. ಇದರ ಧ್ವನಿ ಇತರ ಮೇಲ್ವರ್ಗ ಕೇರಿ ಬೀದಿ ನೋಡದ ಹಾಗೆ ನಡೆದಿರುವ ಬಹುದೊಡ್ಡ ಸಾಂಸ್ಕೃತಿಕ ಪಿತೂರಿಯೇ ಆಗಿರುವ ಚಿತ್ರವೊಂದು ಚಿತ್ರವತ್ತಾಗಿ ನಿಲ್ಲುತ್ತದೆ. ಜೊತೆಗೆ ಇದೆಲ್ಲವನ್ನು ಮೀರಿ ದಲಿತರು ಕೇರಿ ಊರು ದಾಟಿದರೆ ಅಪಾಯದ ಮುನ್ಸೂಚನೆಯನ್ನು ಇದು ಎಚ್ಚರಿಕೆ ದನಿಯಲ್ಲಿ ಹೇಳುವಂತಿದೆ. ಮೇಲ್ವರ್ಗದವರ ಇಂಥ ವ್ಯವಸ್ಥಿತವಾದ ನಡಾವಳಿಯು ಈಗಲೂ ನಡೆಯುತ್ತಿರುವುದನ್ನು ತೊಟ್ಟಿಯೊಳಗಿನ ಆಮೆಯ ರೂಪಕದ ಮೂಲಕ ಅನಾವರಣಗೊಳಿಸಿದರೆ, ನರಸಿಂಹಪ್ಪನ ಕನಸಿನಲ್ಲಿ ಕೇಡಾಗಿ ಕಾಡುವ ರಣಹದ್ದು ತನ್ನನ್ನು ಕಾಡಿ ಕೆಣಕುವ ಬ್ರಾಹ್ಮಣ್ಯದ ‘ಬುದ್ದಿ ಕೇಂದ್ರ’ದಂತಿರುವ ಮೆದುಳನ್ನೆ ಕಿತ್ತು ನಾಶಪಡಿಸುವ ರಣಹದ್ದಿನ ರೂಪಕವು ದಲಿತರ ಪ್ರತಿನಿಧಿಯಂತೆ ಕಾಣುತ್ತದೆ. ಹಾಗೆ ದಲಿತರ ಮೇಲೆ ದಬ್ಬಾಳಿಕೆ ದೌರ್ಜನ್ಯ ಶೋಷಣೆಯಂತವು ಪುನರಾವರ್ತನೆಯಾದರೆ ಭವಿತವ್ಯದಲ್ಲಿ ದಲಿತರ ಅಸಹನೆಯ ಕಟ್ಟೆ ಒಡೆದು ಉಗ್ರರೂಪ ತಾಳುವ ಪ್ರತೀಕವಾಗಿ ರಣಹದ್ದಿನ ಸನ್ನಿವೇಶ ಧ್ವನಿಸುತ್ತದೆ.

ಈ ಕಾದಂಬರಿಯಲ್ಲಿ ಬರುವ ಬಹುಮುಖ್ಯ ಸಂಗತಿ ಕೋಣದ ಮಾಂಸ ಹಂಚಿಕೆ.

ಇದು ದಲಿತ ಕೇರಿಯೊಳಗೆ ಮುಸುಕಿನ ವಾತಾವರಣವನ್ನೆ ಸೃಷ್ಟಿಸುತ್ತದೆ. ಇದರಿಂದ ಕೋಣದ ಮಾಂಸ ಹಂಚಿಕೆ ವಿಚಾರವೇ ನೇಪಥ್ಯ ಸರಿದ ಪರಿಣಾಮ ಗುಡ್ಡೆ ಹಿಡಿದ ಕೋಣದ ಮಾಂಸ ಅನಾಥವಾಗುತ್ತದೆ. ಹೀಗೆ ಅನಾಥವಾದ ಕೋಣದ ಮಾಂಸ ಹಗಲೂ ರಾತ್ರಿಗಳನ್ನು ಕಂಡುಂಡು ಸವೆದು ಕೊಳೆತು ನಾರುತ್ತದೆ. ಈ ಗಬ್ಬುನಾತ ಇಡೀ ಹಾಲಾಪುರವನ್ನೆ ಅಡರಿ ಒಂದು ವಿಕ್ಷಿಪ್ತ ವಿಷಮತೆಗೆ ಕಾರಣವಾಗುತ್ತದೆ. ಇದು ಈ ಕಾಲಘಟ್ಟದ ಸಾಂಸ್ಕೃತಿಕ ಚಳುವಳಿಯಂತಿದ್ದ ದಸಂಸ ಕೆಡುಕಿಗೆ ಕಾರಣ ರೂಪದ ಸಾಕ್ಷೀಕರಣದಂತಿದೆ.ಇದು ಅಂಬೇಡ್ಕರ್ ವಿಚಾರಧಾರೆಗಳಿಂದ ರೂಪು ಪಡೆದ ದಲಿತ ಸಂಘರ್ಷ ಸಮಿತಿಯು ಪ್ರಸ್ತುತ ಮುಂಚೂಣಿ ನಾಯಕರಿಲ್ಲದೆ ಅನಾಥವಾಗಿರುವುದನ್ನು ಸೂಚ್ಯವಾಗಿ ತೆರೆದಿಡುತ್ತದೆ. ಮುಂಚೂಣಿ ನಾಯಕಮಣಿಗಳು ತಮ್ಮ ಬೇರುಗಳನ್ನು ಭದ್ರ ಮಾಡಿಕೊಂಡು ದಲಿತರಿಗೆ ಬಂದೊದಗಿದ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವಲ್ಲಿ ವಿಫಲರಾಗಿರುವುದನ್ನು ನ್ಯಾಯದ ತಕ್ಕಡಿಯಲ್ಲಿ ತೂಗಿದೆ. ಈ ಮೂಲಕ ಗಲ್ಲಿಗೊಂದು ದಸಂಸ, ಗಲ್ಲಿಗೊಬ್ಬ ದಲಿತ ನಾಯಕ ರೂಪುಗೊಂಡಿದ್ದಾನೆ. ಹೀಗೆ ರೂಪುಗೊಂಡ ನಾಯಕ ಮಣಿಗಳು ಸಮಸ್ಯೆಗಳನ್ನು ಕಂಡೂ ಕಾಣದಂತೆ ಇರುವುದನ್ನು ಖಚಿತ ಧ್ವನಿಯಲ್ಲಿ ಹೇಳುತ್ತದೆ.

ಹಾಗೆ ಮೂಲ ದಸಂಸವನ್ನೆ ಹಾಲಾಪುರದ ಕೋಣ ಕತ್ತರಿಸಿದಂತೆ ಕತ್ತರಿಸಿ ಗಲ್ಲಿಗಲ್ಲಿಗಳಲ್ಲು ಅದರ ತುಂಡುಗಳನ್ನು ಬಿಸಾಡಿ ಗುಡ್ಡೆ ಹಿಡಿದಿರುವಂತೆ ಸೂಚಿಸುತ್ತದೆ. ಇದು ಈ ಕಾಲಘಟ್ಟದಲ್ಲಿ ಕೆಲವರ ಸ್ವಹಿತಾಸಕ್ತಿಗೆ ದಲಿತ ಚಳುವಳಿಯ ಮೂಲ ಅಶಯಗಳೇ ನೇಪಥ್ಯಕ್ಕೆ ಸರಿದು ಬಲಿಯಾಗಿ ವಿಘಟನೆ ಹೊಂದುತ್ತಾ, ಈ ಎಲ್ಲ ವಿಘಟಿತ ಸಮಿತಿಗಳಲ್ಲು ತಂತ್ರ ಕುತಂತ್ರಗಳೇ ಬೇರುಬಿಟ್ಟ ದಸಂಸದ ಮನಸ್ಥಿತಿಗಳೇ ಕೊಳೆತು ನಾರುತ್ತಿರುವಂತೆ ಪ್ರಸ್ತುತ ದಿಕ್ಕುದೆಸೆಗಳ ಸ್ಥಿತಿಗತಿಯನ್ನು ತುದಿಯಿರದ ಹಾದಿಯುದ್ದಕ್ಕು ಸ್ಥೂಲವಾಗಿ ಅನಾವರಣಗೊಳಿಸಿದೆ.

ಹೀಗೆ ತನ್ನೊಳಗಿನ ಒಳಗುದಿಯನ್ನು ವಿಶ್ಲೇಷಣಾತ್ಮಕವಾಗಿ ಹಂತಹಂತವಾಗಿ ತೆರೆದಿಡುವ ಕಾದಂಬರಿ ಅಂತಿಮವಾಗಿ ಕೆಲ ದಲಿತ ಪುಂಡರನ್ನೆ ಮುಂದಿಟ್ಟುಕೊಂಡು ಮೇಲ್ವರ್ಗ ರೂಪಿಸಿದ ಸಂಚಿನ ಕೆಡುಕಿಗೆ ಒಳಗಾಗಿ ತದ ನಂತರ ತಲೆಕೆಟ್ಟವರ ಗುಂಪಿಗೆ ನೂಕಿಸಿಕೊಂಡಿದ್ದ ಮಾರಣ್ಣ ತಲೆಕೆಟ್ಟ ಸ್ಥಿತಿಯಲ್ಲೆ ಹನುಮಂತರಾಯನ ಗರ್ಭಗುಡಿ ಪ್ರವೇಶಿಸಿ ವಿಗ್ರಹದ ಪಕ್ಕದಲ್ಲೆ ಬೆತ್ತಲಾಗಿ ನಿಟಾವಟ್ ನಿಲ್ಲುತ್ತಾನೆ. ಇದು ಅದುವರೆಗೂ ಇದ್ದ ಮೇಲ್ವರ್ಗದವರ ಹಿಕ್ಮತ್ತು ಮತ್ತು ಜಾತಿತನಕ್ಕೆ ಸೆಡ್ಡು ಹೊಡೆದು ದಲಿತರಿಗೆ ದೇಗುಲ ಪ್ರವೇಶ ನಿರಾಕರಣೆಯನ್ನು ಉಲ್ಲಂಘಿಸಿ ಮೇಲ್ವರ್ಗದವರ ಅಷ್ಟೂ ಕಟ್ಟಳೆಗಳನ್ನು ಮುರಿಯುತ್ತಾನೆ. ಅದೇ ಹೊತ್ತಿನಲ್ಲಿ ಅದೂವರೆಗೂ ಚೆಲುವಮ್ಮನ ಮನೆಯ ನೀರಿನ ತೊಟ್ಟಿಯಲ್ಲಿ ಮಕ್ಕಳ ಅರಚಾಟಕ್ಕೆ ನೀರಾಟಕ್ಕೆ ಹೆದರಿ ಹಿಂದೆ ಸರಿಯುತ್ತಿದ್ದ ಆಮೆ ಈಗ ಮಕ್ಕಳ ಯಾವ ಅರಚಾಟ ಕಿರುಚಾಟ ಮತ್ತು ನೀರು ಬಡಿಯುವ ಸದ್ದಿಗೆ ಕೇರು ಮಾಡದೆ ನೀರಿನ ತೊಟ್ಟಿಯ ಅಂಚಿಗೂ ಬಂದು ಹೊರಕ್ಕೆ ಕಾಲು ಚಾಚಿ ನಿಗುರುತ್ತದೆ. ಈ ಮೂಲಕ ದಲಿತರ ಮುಂದಿನ ಹೆಜ್ಜೆ ಗುರುತುಗಳನ್ನು ಹಾಗು ಅಂಬೇಡ್ಕರ್ ಎಳೆದುಕೊಂಡು ಬಂದ ದಲಿತ ವಿಮೋಚನಾ ರಥವನ್ನು ಹಿಂದಕ್ಕೊಯ್ಯದೆ, ನಿಂತಲ್ಲೆ ನಿಲ್ಲಿಸದೆ ನಿಸ್ಸಂದೇಹವಾಗಿ ಮುಂದಕ್ಕೊಯುವ ಆಶಯ ಮತ್ತು ಕೆಚ್ಚನ್ನು ಕಾದಂಬರಿ ತನ್ನ ಸ್ಪಷ್ಟವಾದ ನಿಲುವು ಪ್ರಕಟಿಸುತ್ತದೆ.

ಇನ್ನು ಈ ಕಾದಂಬರಿಯಲ್ಲಿ ಚಿತ್ರದುರ್ಗ ಪ್ರಾಂತ್ಯ ಚಳ್ಳಕೆರೆ ಮೋದೂರಿನ ಸುತ್ತಮುತ್ತಲಿನ ಆಡುನುಡಿಯ ಗ್ರಾಮ್ಯ ಸೊಗಡನ್ನು ಕಾದಂಬರಿಕಾರ ಮೋದೂರು ತೇಜ ಪರಿಣಾಮಕಾರಿಯಾಗಿ ಬಳಸಿದ್ದಾರೆ.

ಓನೂಡಿಯಾಗಿ, ಸುಡಾನ, ಅಮ್ತಿರಾ, ಎದ್ಮಕ್ಕೆ, ತಡಾಯಿ, ಸಿಗೇ ಬಿದ್ದಿದ್ದರು, ಅಸವಲ್ದ, ಗಬುರು ಗಬುರಾಗಿ, ಸೂಸ್ನೊಟು, ದಿಮ್ನಾಗಿ, ಅಕ್ಡಿ ಸಾಲು, ಗನ್ನಗರ್ತಿ, ಸಿಮ್ಲಾಡಿ, ಲೊಡಬುತ್ತಾ, ಅಳೆವತಾರೆನೆ ಕುಡಿದ, ದಿಮ್ಮನ್ನಾಳುಗಳು, ಹೊತ್ತು ಮುಣುಗ್ತಾ, ಓಜು, ಮುಶಿಣಿ, ಕಾಪರಗಿ, ಗಟಾಣಿ ಅತ್ತೆಗೆ ಬಡಾಣಿ ಸೊಸೆಗೆ, ಆಯ್ತುವಾರ, ಬೇಯುಸ್ತುವಾರ, ಈ ಗೊಸ್ಲಿ ಮಾತು ಕೇಳಿ, ಗುತ್ನಾಗಿ, ಲಂಸೋಡಿ, ಬ್ಯಾಡ ಅಮ್ದಂಗೆ ರವುರವೋಟು ಉಂಡು, ಉದಾಸ್ಲು ಕೂನುಕುರ್ತು – ಹೀಗೆ ಇಲ್ಲಿ ಬಳಸಿರುವ ಆಡುಭಾಷಾ ನುಡಿಗಟ್ಟಿನ ಈ ಭಾಷಾ ಪ್ರಯೋಗ ಕಾದಂಬರಿಯ ಗಟ್ಟಿತನಕ್ಕೆ ಮತ್ತು ಕಥೆ ಕಟ್ಟಿರುವ ಚೌಕಟ್ಟಿಗೆ ಒಂದು ರೂಪವನ್ನು ಸಹಜತೆಯನ್ನು ದೊರಕಿಸಿ ಕೊಟ್ಟಿದೆ.

ಒಟ್ಟಾರೆ ಮೋದೂರು ತೇಜ ಅವರ ಈ ‘ತುದಿಯಿರದ ಹಾದಿ’ ದಲಿತತ್ವದ ಅಸ್ಮಿತೆಯ ಸಂಕೇತವಾಗಿ ಧ್ವನಿಸಿದೆ. ಈ ದೇಶದ ಎಲ್ಲ ವರ್ಗದ ನೊಂದ ಜೀವಗಳ ಒಡಲಾಳದ ದನಿಯಾದ ಅಂಬೇಡ್ಕರನ್ನು ಧ್ಯೇನಿಸುತ್ತ ಅವರ ವಿಚಾರ ಧಾರೆಯನ್ನು ಪ್ರತಿಪುಟದಲ್ಲು ಹೊದ್ದು ಮಲಗಿದೆ. ಇದು ದಲಿತ ಲೋಕದ ಬಹುಬಗೆಯ ಜೀವನ ವಿಧಾನವನ್ನು ಕಟ್ಟಿಕೊಡುವ ಸಾಂಸ್ಕೃತಿಕ ಸಂಕಥನವೇ ಆಗಿದೆ. ಇದಲ್ಲದೆ ಮೇಲ್ವರ್ಗದ ಜಾತಿತನ, ಶೋಷಣೆ ಮತ್ತು ಆಚರಣೆಗಳ ಕಟು ಸಂಪ್ರದಾಯದ ನೆವದಲ್ಲಿನ ಅವರ ಅಮಾನವೀಯ ನಡೆಯನ್ನು ನಿಕಶಕ್ಕೆ ಒಡ್ಡಿ ತೀವ್ರತರ ಚಿಂತನೆಗೆ ಚರ್ಚೆಗೆ ಇಂಬು ನೀಡುವ ಈ ಕಾಲಘಟ್ಟದ ಒಂದು ಮಹತ್ವದ ವೈಚಾರಿಕ ಕೃತಿ ಎನ್ನಬಹುದು!

*
ಎಂ.ಜವರಾಜ್

ತುದಿಯಿರದ ಹಾದಿ ಈ ಪುಸ್ತಕದ ಪ್ರತಿಗಳಿಗಾಗಿ ಸಂಪರ್ಕಿಸಿ: ಮೋದೂರು ತೇಜ 9945562909

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x