“ಉಪ್ಪುಚ್ಚಿ ಮುಳ್ಳು” ವಿಲಕ್ಷಣ, ವಿಕ್ಷಿಪ್ತ, ವಿಚಿತ್ರ ಎನಿಸಿದರೂ ವಿಶಿಷ್ಟ ಕೃತಿ: ಡಾ. ನಟರಾಜು ಎಸ್.‌ ಎಂ.

ಕಳೆದ ವರ್ಷ ಅನಿಸುತ್ತೆ ಸಿರಾ ಸೀಮೆಯ ರಂಗಕರ್ಮಿ ಗೋಮಾರದಹಳ್ಳಿ ಮಂಜುನಾಥ್‌ ರವರು ತಾವು ಇಷ್ಟಪಟ್ಟು ಶುರು ಮಾಡಿರುವ Native nest ಎಂಬ ಯೂ ಟ್ಯೂಬ್‌ ಚಾನೆಲ್‌ ನಲ್ಲಿ ಕವಿತೆಯೊಂದನ್ನು ವಾಚನ ಮಾಡಿದ್ದರು. ಕವಿತೆಯ ಶೀರ್ಷಿಕೆ “ಮೊಲೆ” ಎಂದಾಗಿತ್ತು. ಕವಿಯ ಹೆಸರು ದಯಾ ಗಂಗನಘಟ್ಟ (ದಾಕ್ಷಾಯಿಣಿ). “ಮೊಲೆ” ಅನ್ನುವ ಕವನವನ್ನು ಅದಕ್ಕೂ ಮೊದಲು ಆಶಾ ಜಗದೀಶ್‌ ರವರು ಫೇಸ್‌ ಬುಕ್‌ ನಲ್ಲಿ ಬರೆದಿದ್ದರು. ಎರಡೂ ಕವಿತೆಗಳನ್ನು ನೋಡಿದ್ದ ನನಗೆ ದಯಾ ಗಂಗನಘಟ್ಟ, ಆಶಾ ಜಗದೀಶ್‌ ರವರಿಂದ ಸ್ಫೂರ್ತಿ ಪಡೆದರಾ? ಅನ್ನುವ ಸಂದೇಹ ನನ್ನನ್ನು ಕಾಡಿತ್ತು. ಇಬ್ಬರು ಕವಯತ್ರಿಯರು ಒಂದೇ ವಸ್ತುವನಿ ಮೇಲೆ ವಿಭಿನ್ನ ದೃಷ್ಟಿಕೋನದಲ್ಲಿ ಬರೆಯುವುದರಲ್ಲಿ ತಪ್ಪೇನಿಲ್ಲ ಅಂದುಕೊಂಡು ಸುಮ್ಮನಾಗಿದ್ದೆ. ಬಹುಶಃ “ಮೊಲೆ” ಎನ್ನುವ ಕವಿತೆ ನನ್ನ ಕಣ್ಣಿಗೆ ಬಿದ್ದ ದಯಾ ಅವರ ಮೊದಲ ಕವಿತೆ ಎನ್ನಬಹುದು. ನಂತರದ ದಿನಗಳಲ್ಲಿ ಹಾಸನ ಜೇನು ಗಿರಿ ಪತ್ರಿಕೆಯಲ್ಲಿ ಬರಹಗಳನ್ನು ಅವರು ಪ್ರಕಟಿಸುತ್ತಾ ಬಂದಾಗ ಅವರ ಬರಹಗಳನ್ನು ಪ್ರತೀ ವಾರ ತಪ್ಪದೇ ಓದುತ್ತಾ ಬಂದಿದ್ದೆ. ಅವರು ಒಬ್ಬ ಲೇಖಕಿಯಾಗಿ ಪಕ್ವವಾಗುತ್ತಿರುವುದು ಗಮನಕ್ಕೆ ಬಂದಿತ್ತು. ಅದನ್ನು ಅವರಿಗೆ ಹೇಳಿದ್ದೇ ಕೂಡ. ಅವರ ಬರಹಗಳು ಜೇನುಗಿರಿಯಲ್ಲಿ ನಿಂತು ಹೋದ ಮೇಲೆ ಈಗ “ಉಪ್ಪುಚ್ಚಿ ಮುಳ್ಳು” ಎಂಬ ತಮ್ಮ ಚೊಚ್ಚಲ ಕಥಾ ಸಂಕಲನವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಕಳೆದ ವಾರ ಅವರ ಕೈಯಿಂದಲೇ ಪಡೆದ “ಉಪ್ಪುಚ್ಚಿ ಮುಳ್ಳು” ಕಥಾಸಂಕಲನವನ್ನು ಓದಿದ ಮೇಲೆ ಅವರ ಕಥೆಗಳ ಕುರಿತು ಬರೆಯಲೇಬೇಕು ಅನಿಸಿದ ಕಾರಣಕ್ಕೆ ಈ ಬರಹ.

“ಉಪ್ಪುಚ್ಚಿ ಮುಳ್ಳು” ಅನ್ನುವ ಶೀರ್ಷಿಕೆಯುಳ್ಳ ಪುಸ್ತಕದ ಉಪ್ಪುಚ್ಚಿ ಮುಳ್ಳು ಎಂಬುದು ತುಮಕೂರಿನ ಕಡೆಯ ಭಾಷೆಯಾದ ಕಾರಣ ಆ ಗಿಡ ಯಾವುದು ಎನ್ನುವುದು ತಿಳಿದಿಲ್ಲ. ಅವರದೇ ನೆಲದ ಕತೆಗಳ ಗುಚ್ಚ ಈ ಪುಸ್ತಕವಾದ ಕಾರಣ “ಉಪ್ಪುಚ್ಚಿ ಮುಳ್ಳು” ಶೀರ್ಷಿಕೆ ವಿಶಿಷ್ಟವಾದ ವಿಭಿನ್ನವಾದ ಶೀರ್ಷಿಕೆಯಾಗಿದೆ. ಎಂದಿನಂತೆ ಹಾಸನದ ಹಾಡ್ಲಹಳ್ಳಿ ಪ್ರಕಾಶನದ ಚಲಂ ಅವರು ತುಂಬಾ ಆಸಕ್ತಿ ವಹಿಸಿ ಪುಸ್ತಕ ಹೊರ ತರುವುದರ ಜೊತೆಗೆ ಪುಸ್ತಕದ ಪ್ರಚಾರಕ್ಕೆ ವಿಡಿಯೋ ಪ್ರೊಮೋಗಳನ್ನು ಕೂಡ ಸಾಮಾಜಿಕ ಜಾಣ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋಗಳಲ್ಲಿ ಲೇಖಕಿಯ ತಾಯಿಯವರು ತಮ್ಮ ಮಗಳ ಪುಸ್ತಕದ ಕುರಿತು ಮಾತುನಾಡಿರುವುದು ತುಂಬಾ ವಿಶೇಷವಾದ ಸಂಗತಿ. ಈ ಪುಸ್ತಕಕ್ಕೆ Bee culture ತಂಡದವರು ಮುಖಪುಟ ವಿನ್ಯಾಸ ಮಾಡಿದ್ದರೆ, ವಿಆರ್‌ ಕಾರ್ಪೆಂಟರ್‌ ಪುಸ್ತಕದ ಒಳ ಪುಟಗಳ ವಿನ್ಯಾಸ ಮಾಡಿದ್ದಾರೆ. ಕನ್ನಡದ ಹಿರಿಯ ಲೇಖಕರಾದ ಎಸ್‌ ನಟರಾಜ್‌ ಬೂದಾಳು ಅವರ ಮುನ್ನುಡಿ ಹಾಗು ಅಗ್ರಹಾರ ಕೃಷ್ಣಮೂರ್ತಿಯವರ ಬೆನ್ನುಡಿ ಈ ಪುಸ್ತಕಕ್ಕಿದೆ.

“ಉಪ್ಪುಚ್ಚಿ ಮುಳ್ಳು” ಕಥಾಸಂಕಲನದಲ್ಲಿ ಒಟ್ಟು ೧೭ ಕಥೆಗಳಿವೆ. ಕಥೆಗಳನ್ನು ಅವುಗಳ ಕಥಾಹಂದರಗಳ ಮೇಲೆ ಸೂಕ್ಷ್ಮವಾಗಿ ಕಣ್ಣಾಡಿಸಿದರೆ ಅವುಗಳನ್ನು ಸ್ತ್ರೀ ಕೇಂದ್ರಿತ ಕತೆಗಳು, ತಣ್ಣನೆಯ, ಬೆಚ್ಚಗಿನ ಕೌರ್ಯದ ಕತೆಗಳು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರ ಕತೆಗಳು, ಪ್ರಬಂಧ ಮಾದರಿಯ ಕತೆಗಳು ಎಂದು Broad ಆಗಿ ವರ್ಗೀಕರಿಸಬಹುದು. ಕಥೆಗಳ ಒಳ ಹೊಕ್ಕು ನೋಡಿದರೆ ಕತೆಗಳ ಹಂದರ ಒಂದು ವರ್ಗೀಕರಣಕ್ಕಷ್ಟೇ ಮೀಸಲಾಗಿರದೆ ಒಂದು ಪ್ರಕಾರದ ಕಥಾ ಹಂದರ ಮತ್ತೊಂದು ಪ್ರಕಾರದ ಕಥಾ ಹಂದರದಲ್ಲಿ ಮಿಳಿತವಾಗಿರುವುದನ್ನು ನಾವು ಕಾಣಬಹುದು. ಜೊತೆಗೆ ಹೆಚ್ಚಿನ ಕತೆಗಳಲ್ಲಿ ಕೌರ್ಯ ಅನ್ನುವುದು ಒಂದಲ್ಲ ಒಂದು ರೀತಿಯಲ್ಲಿ ಕಣ್ಣಿಗೆ ಕಾಣುತ್ತಲೇ ಹೋಗುತ್ತದೆ. ಕೌರ್ಯ ಎಂದರೆ ಕೊಲೆ ಮಾಡುವುದು, ಮೋಸ ಮಾಡುವುದು, ಕಣ್ಣಿಗೆ ಮಣ್ಣೆರೆಚುವುದು, ತಣ್ಣನೆಯ ಈರ್ಷೆಯನ್ನು ಎದೆಯೊಳಗೆ ಸಾಕಿಕೊಳ್ಳುವುದು… ಹೀಗೆ ಕೌರ್ಯ ನಾನಾ ರೂಪಗಳಲ್ಲಿ ಈ ಪುಸ್ತಕದ ಕತೆಗಳಲ್ಲಿ ಅವಿತು ಕುಳಿತಿದೆ. ಪುಸ್ತಕದ ಕರ್ತೃ ಲೇಖಕಿ ಆದ ಕಾರಣ ಎಲ್ಲಾ ಕತೆಗಳು ಕೂಡ ಸ್ತ್ರೀ ಕೇಂದ್ರಿತ ಕತೆಗಳಂತೆ ಕಂಡರೂ ಪುರುಷ ಕೇಂದ್ರಿತ ಕಥೆಗಳು ಅಥವಾ ವ್ಯಕ್ತಿ ಕೇಂದ್ರಿತ ಕಥೆಗಳು ಕೂಡ ಈ ಪುಸ್ತಕದಲ್ಲಿ ಇವೆ. ಪುಸ್ತಕದ ಕಾಲಘಟ್ಟ, ಪುಸ್ತಕದಲ್ಲಿ ಕಾಣಸಿಗುವ ಸ್ಥಳ, ಪುಸ್ತಕದಲ್ಲಿನ ಭಾಷೆ ಹಾಗು ಪುಸ್ತಕದಲ್ಲಿನ ಪಾತ್ರಗಳನ್ನು ಲೇಖಕಿ ವಿಶೇಷವಾಗಿ ಕಟ್ಟಿಕೊಟ್ಟಿರುವುದು ಈ ಪುಸ್ತಕದ ಹೈಲೈಟ್ಸ್‌ ಎನ್ನಬಹುದು.

ಪುಸ್ತಕದ ಕಾಲಘಟ್ಟದ ಬಗ್ಗೆ ಹೇಳಬೇಕೆಂದರೆ ಬಾಲಕಿಯ ಪಾತ್ರದಲ್ಲಿನ ನಿರೂಪಣೆಯ ಮೂಲಕ ತೊಂಬತ್ತರ ದಶಕದ ಕತೆಗಳನ್ನು ಕಟ್ಟಿಕೊಡುವುದರಿಂದ ಹಿಡಿದು ಒಬ್ಬ ವಯಸ್ಕ ಹೆಣ್ಣು ಮಗಳ ನಿರೂಪಣೆಯ ಮೂಲಕ ಇಂದಿನ ಕರೋನದ ಕಾಲದವರೆಗೂ ಕತೆಗಳು ಕಾಲಘಟ್ಟದ ವಿಸ್ತಾರವನ್ನು ಪಡೆದುಕೊಂಡಿವೆ. ಆ ಕಾಲಘಟ್ಟದಲ್ಲಿ ಘಟಿಸಿದ ಘಟನೆಗಳನ್ನು ಸಾಂಸ್ಕೃತಿಕ, ಸಾಮಾಜಿಕ ನೆಲೆಗಟ್ಟುಗಳಲ್ಲಿ ಚಿತ್ರಿಸಿಕೊಟ್ಟಿರುವುದರ ಜೊತೆಗೆ ಅಷ್ಟೂ ಕಾಲದ ವ್ಯಕ್ತಿಗಳ ಮಾನಸಿಕ ಸ್ಥಿತ್ಯಂಥರಗಳನ್ನು ಲೇಖಕಿ ಪಾತ್ರಗಳ ಮೂಲಕ ಬರೆಯುತ್ತಾ ಹೋಗಿದ್ದಾರೆ. ಇನ್ನು ಪುಸ್ತಕದಲ್ಲಿ ಕಾಣಸಿಗುವ ಸ್ಥಳಗಳ ವ್ಯಾಪ್ತಿ ಕೂಡ ಬಹಳ ದೊಡ್ಡದು. ತಿಪಟೂರಿನ ಸುತ್ತಮುತ್ತಲಿನ ಎಷ್ಟೋ ಹಳ್ಳಿಗಳ ಹೆಸರುಗಳು ಪ್ರತೀ ಕಥೆಗಳಲ್ಲೂ ನಮಗೆ ಕಾಣುವುದರ ಜೊತೆಗೆ ಮೈಸೂರಿನ ಒಂದಷ್ಟು ಏರಿಯಾಗಳನ್ನು ಕತೆಗಳಲ್ಲಿ ಲೇಖಕಿ ದಾಖಲಿಸಿದ್ದಾರೆ. ಪ್ರತೀ ಊರುಗಳ ಹೆಸರುಗಳಷ್ಟೇ ಪುಸ್ತಕದಲ್ಲಿ ದಾಖಲಾಗದೆ ಅಲ್ಲಿನ ನೆನಪುಗಳು, ಆಚಾರ ವಿಚಾರಗಳು, ಆ ಊರಿನ ಜೊತೆಗಿನ ನಂಟು, ಕರುಳು ಬಳ್ಳಿಯ ಸಂಬಂಧಗಳು ಎಲ್ಲವೂ ಲೇಖಕಿಯ ಲೇಖನಿಯಿಂದ ಚೆನ್ನಾಗಿ ಮೂಡಿ ಬಂದಿವೆ. ಇನ್ನೂ ಕತೆಗಳಲ್ಲಿನ ಕೆಲವು ಮುಖ್ಯಪಾತ್ರಗಳು ವಿಲಕ್ಷಣ, ವಿಕ್ಷಿಪ್ತ, ವಿಚಿತ್ರ ಎನಿಸಿದರೂ ಪಾತ್ರಗಳು ಸತ್ಯಕ್ಕೆ ಹತ್ತಿರವಾಗಿರಬಹುದಾದ ಸಾಧ್ಯತೆ ಇರುವುದರಿಂದ ಪಾತ್ರಗಳ ಸೃಷ್ಟಿಯನ್ನು ಓದುಗ ಒಪ್ಪಿಕೊಳ್ಳಬೇಕಾಗುತ್ತದೆ. ಜೊತೆಗೆ ಆ ತರಹದ ಪಾತ್ರಗಳ ದುರಂತ ಅಂತ್ಯಗಳಿಗೆ ಓದುಗ ಮರುಗಬೇಕಾಗುತ್ತದೆ. ಆ ದುರಂತ ಅಂತ್ಯ ಕಾಣುವ ಮುನ್ನ ಪಾತ್ರಗಳು ಮತ್ತೊಂದು ಪಾತ್ರಕ್ಕೆ ತನ್ನ ಸಂಕಟವನ್ನು confession ಮಾಡಿ ಮುಕ್ತಿ ಪಡೆಯುವುದು ಕೆಲವು ಕತೆಗಳಲ್ಲಿನ ವಿಶಿಷ್ಟತೆ ಎನ್ನಬಹುದು.

ಪುಸ್ತಕದಲ್ಲಿನ ಭಾಷೆಯ ವೈಶಿಷ್ಟ್ಯತೆ ಕಡೆಗೆ ಗಮನ ಹರಿಸಿದರೆ “ಕಸ್ಬರ್ಕೆಲಿ ಮಕ ಕೆರ್ದು ಕಳುಸ್ಬೇಕು ಇಂತ ಗೋಸುಂಬೆ ಜಾತಿವ್ನ” ಎನ್ನುವ ಮೊದಲ ಸಾಲಿನಿಂದಲೇ ತಮ್ಮ ಪುಸ್ತಕದ ಮೊದಲ ಕತೆ (ಜಗತ್ತಿನ ಸ್ವಲ್ಪ ಆ ಕಡೆಗೆ) ಶುರು ಮಾಡಿರುವ ಲೇಖಕಿ “ಆಫೀಸಿಗೆ ಹೊರಟ ಗಂಡನಿಗೆ ಟಿಫನ್‌ ಬಾಕ್ಸ್‌ ಕಟ್ಟುತ್ತಿದ್ದ ಸುನೀತಳ ಫೋನ್‌ “ಕಣ್ಣೇ ಅದಿರಿಂದಿ” ಎಂದು ಹೊಡೆದುಕೊಳ್ಳತೊಡಗಿತು” ಎನ್ನುವ ಸಾಲನ್ನು “ಹೆಬ್ಳೆ ಬೆಕ್ಕು” ಎನ್ನುವ ಕತೆಯಲ್ಲಿ ಬಳಸಿಕೊಂಡಿದ್ದಾರೆ. ಈ ಎರಡು ಉದಾಹರಣೆಗಳನ್ನು ನೋಡಿದರೆ ಹಳ್ಳಿಯ ಮತ್ತು ಪಟ್ಟಣದ ಎರಡು ಭಾಷಾ ಪ್ರಯೋಗಗಳನ್ನು ಲೇಖಕಿ ತುಂಬಾ ದುಡಿಸಿಕೊಂಡಿಸಿಕೊಂಡಿದ್ದಾರೆ ಎನ್ನುವುದನ್ನು ಅವರ ಪ್ರತೀ ಕತೆಗಳ ಸಂಭಾಷಣೆಗಳು ನಮಗೆ ಹೇಳುತ್ತವೆ. ಇನ್ನು ನುಡಿಗಟ್ಟುಗಳ ಬಳಕೆಗೆ ಕೂಡ ಲೇಖಕಿ ಕೂಡ ಹೆಚ್ಚು ಒತ್ತು ಕೊಟ್ಟಿರುವುದನ್ನು ಅನೇಕ ಕತೆಗಳಲ್ಲಿ ನಾವು ಕಾಣಬಹುದು. ಉದಾಹರಣೆಗೆ “ಹಣ್ಗಾಯೊಂದಕ್ಕೆ ಗೆಣ್ಣು ನೋಡಿ ಕುಳದಲ್ಲಿ ಏಟಾಕಿದಾಗ ಸುಮನಾದ ಎರಡು ಹೋಳಾಗುತ್ತಲ್ಲಾ ಹಾಗೆ”, “ತಿಪ್ಪೆ ಮೇಲಿನ ಕುಂಬಳ ಬಳ್ಳಿ ಹಾಗೆ ಬೆಳಕೊಂಡ್ಳು”, “ಆಡಿನ ಮೊಲೆಯಂತೆ ಜೊತೆಯಾಗಿ ಇರುತ್ತಿದ್ದ” “ಅವರೇ ಗಿಡದ ಜೊತೆಗೆ ಬೆಳೆದ ತಡ್ನೀ ಗಿಡದಂತೆ”, “ನೀರಿಗೆ ಬಿದ್ದ ಸುಣ್ಣದಂತೆ ಕುದ್ದು ಹೋಗಿದ್ದವು”, “ವಿಷ ನುಂಗಿದ ಇಲಿಯಂತೆ” ಹೀಗೆ ರೂಪಕಗಳಂತಿರುವ ಭಾಷಾ ಪ್ರಯೋಗಗಳು ಅನೇಕ ಕತೆಗಳಲ್ಲಿ ಚೆನ್ನಾಗಿ ಬಳಕೆಯಾಗಿವೆ. ಇನ್ನೂ ಗ್ರಾಮೀಣ ಪ್ರದೇಶದ ಅಶ್ಲೀಲ ಭಾಷಾ ಪ್ರಯೋಗ ಪುಸ್ತಕದಲ್ಲಿ ಅಷ್ಟು ದಾಖಲಾಗದಿದ್ದರೂ “ಸೂಳೆ ವಯಸ್ಸಾದ್ಮೇಲೆ ಪತಿವ್ರತೆ ಅಂತೆ ಸುಮ್ಕಿರೇ”, “ತಾಯ್ನಾಕೇಯ ಮುಂಡೇರು ಸಾರಿಗೆ ಒಂದಂಡೆ ನೀರೂದು ಕುಂಡುರ್ಸವ್ರೆ ಅದ್ನೇ ಉಣ್ಣುಸ್ತಾವ್ರೆ” ಎನ್ನುವ ಸಾಲುಗಳು ಹಳ್ಳಿಯ ಕಡೆಗಿನ ಮಾತು ಮತ್ತು ಬೈಗುಳಗಳಿಗೆ ಒಂದೆರಡು ಉದಾಹರಣೆಯಂತೆ ದಾಖಲಾಗಿವೆ.

“ಉಪ್ಪುಚ್ಚಿ ಮುಳ್ಳು” ಕಥಾ ಸಂಕಲನದ ಕತೆಗಳ ಶೀರ್ಷಿಕೆಗಳಲ್ಲಿ ದಾಖಲಾಗಿರುವ ನಾಮಪದಗಳನ್ನು ನೋಡುತ್ತಾ ಹೋದರೂ ರೂಡಣ್ಣ, ಹಲ್ಲೇ ಸಿದ್ದ, ಊರ್ಲಾಡಿ ಲಜ್ಜಿ, ಉಳ್ಳಾವಳ್ಳಿ ಇಂದ್ರಾಣಿ, ಗಂಗಾಮಾಳಕ್ಕ ಹೀಗೆ ಅನೇಕ ವಿಶೇಷವಾದ ಹೆಸರುಗಳು, ಕತೆಗಳ ಒಳಗೆ ನೀಲಿ, ಪಾರಿಜಾತ, ನಿಂಗತೋಡ, ಕೆಂಗೇಗೌಡ, ಎಂಬ ಹಳ್ಳಿಗಾಡಿನ ಅನೇಕ ಹೆಸರುಗಳು, ಕೆಂಪಿ, ಉಮ್ಮುಸ್ಳಿ, ಊದಪ್ಪ, ಸಿಂಗಳೀಕ, ಕಾಡೆಮ್ಮೆ, ಅಂಡ್ರುಮೂಗಿ, ಕೊರ್ಚಿ, ಕರ್ಕಿ, ಗುಂಗ್ರಿ ಮೂಗರ್ಕಿ ಎಂಬ ಅಡ್ಡ ಹೆಸರುಗಳು ಪುಸ್ತಕದಲ್ಲಿ ಯಥೇಚ್ಛವಾಗಿ ಸಿಗುತ್ತವೆ. ಇನ್ನು ತಿಮ್ಲಾಪುರ, ದಿಡಗ, ಕಾರೇಹಳ್ಳಿ, ತಿಲಕ್‌ ನಗರ, ತಿಪಟೂರು, ಸಾಸ್ಲಹಳ್ಳಿ, ನೊಣವಿನಕೆರೆ, ನುಗ್ಗೇಹಳ್ಳಿ, ಉಳ್ಳಾವಳ್ಳಿ, ಕಾಮನಘಟ್ಟ, ಹಿರೀಸಾವೆ ಹೀಗೆ ಊರುಗಳ ಹೆಸರುಗಳನ್ನು ಬರೆಯುತ್ತಾ ಹೋದರೂ ಮಿನಿಮಮ್‌ ಒಂದು ಮೂವತ್ತು ಊರುಗಳ ಹೆಸರುಗಳಾದರೂ ಈ ಪುಸ್ತಕದಲ್ಲಿ ಸಿಗುತ್ತವೆ. ಹೀಗೆ ಲೇಖಕಿ ತಾವು ಕಂಡ ಊರು, ಕೇರಿ, ಜನ, ಜಾತ್ರೆ, ಮನೆ, ಮಠ, ಹೊಲ ಗದ್ದೆ, ಶಾಲೆ ಕಾಲೇಜು ಗಳ ಕತೆಗಳನ್ನು ತಮ್ಮ ಮೊದಲ ಪ್ರಯತ್ನದಲ್ಲೇ ತುಂಬಾ ಗಂಭೀರವಾಗಿ, ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಗಂಭೀರತೆಯನ್ನು ಸ್ವಲ್ಪ ಸಡಿಲಿಸಿ ತಿಳಿ ಹಾಸ್ಯದ ಕತೆಗಳನ್ನೂ ಸಹ ಲೇಖಕಿ ಬರೆಯಲಿ. ಹಾಗೆಯೇ ಕೆಲವು ಕತೆಗಳು ಟೇಕ್‌ ಆಫ್‌ ಆಗಿರುವಾಗಲೇ ದಿಡೀರನೆ ನಿಂತು ಹೋಗಿರುವುದು ಲೇಖಕಿ ಕತೆಯನ್ನು ಮುಗಿಸಿಬಿಡುವ ದಾವಂತವನ್ನು ತೋರಿದರೂ ಓದುಗನಿಗೆ ಕತೆ ಮುಂದುವರೆಯಬೇಕಾಗಿತ್ತು ಎಂಬ ಭಾವ ಮೂಡುತ್ತದೆ. ಆ ಭಾವವನ್ನು ಲೇಖಕಿ ಗೌರವಿಸಿ ಇನ್ನೂ ವಿಸ್ತಾರವಾದ ಕಥಾಲೋಕವನ್ನು ಓದುಗರಿಗೆ ನೀಡಲಿ ಎಂದು ಹಾರೈಸುತ್ತೇನೆ.

ಡಾ. ನಟರಾಜು ಎಸ್‌ ಎಂ

ಪುಸ್ತಕ: ಉಪ್ಪುಚ್ಚಿ ಮುಳ್ಳು (ಕಥಾಸಂಕಲನ)

ಪ್ರಕಾಶಕರು: ಹಾಡ್ಲಹಳ್ಳಿ ಪ್ರಕಾಶನ, ಹಾಸನ

ಬೆಲೆ: Rs. 150/-

ಸಂಪರ್ಕ ಸಂಖ್ಯೆ: ಚಲಂ, ಹಾಡ್ಲಹಳ್ಳಿ- 8747043485


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x