ಪಂಜು ದಶಕದ ಸಂಭ್ರಮದ ಪ್ರಯುಕ್ತ ಏರ್ಪಡಿಸಿದ್ದ 2021 ನೇ ಸಾಲಿನ ಪಂಜು ಕಥಾ ಸಂಕಲನ ಪ್ರಶಸ್ತಿಯ ವಿವರ ಈ ಕೆಳಗಿನಂತಿದೆ
ಪಂಜು ಕಥಾ ಸಂಕಲನ ಪ್ರಶಸ್ತಿ ಪಡೆದ ಕೃತಿ
ಬಯಲಲಿ ತೇಲುತ ತಾನು: ಅಕ್ಷಯ ಪಂಡಿತ್
ತೀರ್ಪುಗಾರರ ಮೆಚ್ಚುಗೆ ಪಡೆದ ಕೃತಿಗಳು
೧. ಅಗ್ಗಷ್ಟಿಕೆ: ರಾಜಶ್ರೀ ಟಿ. ರೈ, ಪೆರ್ಲ
೨. ಪೂವಿ: ಮಲ್ಲೇಶ್ ಮಾಲಿಂಕಟ್ಟೆ
೩. ದಶಕದ ಕತೆಗಳು: ಟಿ ಎಂ ರಮೇಶ
೪. ನೀಲಕುರಿಂಜಿ: ದಾದಾಪೀರ್ ಜೈಮನ್
೫. ಮಾರ್ಗಿ: ಲಿಂಗರಾಜ ಸೊಟ್ಟಪ್ಪನವರ
ಒಟ್ಟು 25 ಕಥೆಗಾರರು ನಾಡಿನ ಮೂಲೆಮೂಲೆಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಖ್ಯಾತ ಲೇಖಕರಾದ ಶ್ರೀಧರ ಬಳಗಾರ ಮತ್ತು ಭಗವತಿ ಎಂ ಆರ್ ಅವರು ಈ ಕಥಾ ಸಂಕಲನ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ತೀರ್ಪುಗಾರರ ಟಿಪ್ಪಣೆ
ಹರಿಯುವ ಕಾಲವನ್ನು ತನ್ನ ದಾರಿಗೆ ತಂದು ಅರಿಯುವ ಪರಿ ಕತೆಗಳ ಮಾಂತ್ರಿಕತೆಗೆ ಮಾತ್ರ ಸಾಧ್ಯ. ಹರಿಯುವಿಕೆ ನದಿಯ ಗುಣ; ಅದೇನೊ ಹುಡುಕುತ್ತ, ಬದಲಾಗುತ್ತ, ಹರಿದ ಜಾಗದ ಸಾರವನ್ನು ಹೊತ್ತು ಸಾಗುತ್ತದೆ. ಮಳೆ ಜೋರಾದಾಗ ಉಕ್ಕುತ್ತದೆ; ಉಳಿದ ದಿನಗಳಲ್ಲಿ ಶಾಂತ. ಹಲವು ತೊರೆಗಳು ಸೇರಿ ಅದು ಉಕ್ಕುತ್ತದೆ. ಇತ್ತೀಚಿಗೆ ಸಣ್ಣ ಕತೆಯೂ ಉಕ್ಕಿ ಹರಿಯುತ್ತಿದೆ. ಭಿನ್ನ ಭೂಗೋಲ, ಚರಿತ್ರೆ, ಪ್ರತಿಭೆ, ಭಾಷೆಗಳ ಸಂಕೀರ್ಣ ಸಮಾವೇಶದಿಂದ ರೂಪುಗೊಂಡ ಹೊಳೆಯದು. ಅದು ಜೀವನದ ವಿವಿಧ ಕ್ಷೇತ್ರಗಳ ಪ್ರಾತಿನಿಧಿಕ ಅನುಭವದ ಸಮುಚ್ಚಯವಾಗಿದೆ. ಕತೆಗಳ ಜೀವಕ್ಕೆ ಆಯಸ್ಕಾಂತದ ಗುಣ ಪ್ರಾಪ್ತವಾಗುವುದು ಅವುಗಳ ರೂಪಕ ಶಕ್ತಿಯಿಂದ. ಕತೆಗಳು ಚಲಿಸುತ್ತಲೇ ಇರುವ ರೂಪಕಗಳು; ಅನುಭವದ ವಿವರಗಳನ್ನು ರೂಪಕಗಳ ಆಯಸ್ಕಾಂತ ಗುಣ ಆಕರ್ಷಿಸುತ್ತದೆ; ಅಷ್ಟೇ ಅಲ್ಲ, ಅದು ವಿವರಗಳು ಪ್ರತಿಮೆಗಳಾಗಿ, ಪ್ರತೀಕಗಳಾಗಿ ವಾಸ್ತವವನ್ನು ದಾಟಿ ಆಚೆಯ ಸತ್ಯವನ್ನು ತಲುಪುವುದನ್ನು ಸೂಚಿಸುತ್ತದೆ. ಕಂಪಾಸಿನೊಳಗಿನ ಮುಳ್ಳುಗಳನ್ನು ಉತ್ತರ-ದಕ್ಷಿಣಕ್ಕೆ ನಿಲ್ಲಿಸುವ ಅಗೋಚರ ಪ್ರಭಾವವನ್ನು ಕಲ್ಪಿಸುವಂತೆ ಉದ್ದೀಪಿಸುವ ಕಲ್ಪನಾ ಪ್ರತಿಭೆಯದು. ಹೀಗೆ ಯೊಚಿಸಲು ಹಚ್ಚಿದ್ದು ‘ಪಂಜು’ ಪತ್ರಿಕೆಯವರು ಪ್ರಶಸ್ತಿಗೆ ಆಹ್ವಾನಿಸಿ, ನನಗೆ ಕಳುಹಿಸಿದ್ದ ಆಯ್ದ ಕಥಾ ಸಂಕಲನಗಳ ಆಪ್ತ ಓದು.
ಅಕ್ಷಯ ಪಂಡಿತರ ‘ಬಯಲಲಿ ತೇಲುತ ತಾನು’ ಕಥಾ ಸಂಕಲನ ಗಮನಿಸಬೇಕಾದ ಕೃತಿ. ಬದಲಾಗುತ್ತಿರುವ ವರ್ತಮಾನದ ವಸ್ತು, ವಸ್ತುಪ್ರಪಂಚದಾಚೆಗೂ ಧ್ವನಿಸುವ ಕತೆಯ ರೂಪಕಗಳು, ಪಾತ್ರ ಮತ್ತು ಪರಿಸರದ ಪೂರಕ ಸಂಬಂಧಗಳು, ನಿರರ್ಗಳ ನಿರೂಪಣೆ ಕಥೆಗಾರನಿರಬೇಕಾದ ಕಥಾ ಭಾಷೆಯ ಪರಿಚಯ ಮತ್ತು ನಿಲುವನ್ನು ಸ್ಪಷ್ಟ ಪಡಿಸುತ್ತವೆ. ಶಿಕ್ಷಣ ಮತ್ತು ಉದ್ಯೋಗದ ಕಾರಣಗಳಿಂದಾಗಿ ಸ್ಥಾನಭ್ರಷ್ಟತೆಗೆ ತೆರೆದುಕೊಂಡ ತಲೆಮಾರಿದು. ಜನಿಸಿದ ಜಾಗದಲ್ಲಿ ತನ್ನ ದೈವವನ್ನು ಜಾಗ್ರತಗೊಳಿಸಿಕೊಳ್ಳುವ ಅದೃಷ್ಟದಿಂದ ವಂಚಿತರಾಗಿ ಹಲವು ವರ್ಷಗಳೇ ಕಳೆದಿವೆ. ಹೊಸ ಕಾಲದ ಅಲೆಮಾರಿತನದಿಂದ ಮನುಷ್ಯ ಸಂಬಂಧಗಳ ಎಳೆಗಳು ತುಂಡಾಗುತ್ತಿವೆ ಅಥವ ಸಂಕಟದಿಂದ ನೇಯ್ದುಕೊಳ್ಳುತ್ತಿವೆ. ಅಕ್ಷಯರ ಕತೆಗಳು ಕಮ್ಮರಡಿ ಎಂಬ ಸಣ್ಣ ಹಳ್ಳಿಯಿಂದ ಹಿಡಿದು ಸಾಗರ ಪೇಟೆ, ಬೆಂಗಳೂರು ನಗರ, ಅಮೆರಿಕಾದಂತಹ ಬೃಹತ್ ನಗರಗಳನ್ನು ಸುತ್ತಾಡುತ್ತವೆ. ಈ ಒತ್ತಡದ ವೇಗದ ಓಟ ಕಾಲದ ವರ್ತನೆಯೂ ಕತೆಗಳ ಲಯದ ಗತಿಯೂ ಆಗಿರುವುದು ಆಕಸ್ಮಿಕವಲ್ಲ. ಬೇರೆ ಬೇರೆ ಪಿಚ್ಚುಗಳಿಗೆ ತಕ್ಕಂತೆ ಆಡುವ ಕ್ರಿಕೆಟಿಗನಂತೆ ಅಕ್ಷಯ್ ಭಿನ್ನ ಬಗೆಯ ಕತೆಗಳನ್ನು ಬರೆದಿದ್ದಾರೆ; ಗುಂಪಿನಲ್ಲಿ ಗುರುತಿಸಿಕೊಂಡು, ಬೆರೆತು ಆಡುತ್ತಲೇ ತನ್ನ ವೈಯಕ್ತಿಕ ಅನನ್ಯತೆಯನ್ನು ಉಳಿಸಿಕೊಂಡೇ ಅಕ್ಷಯ್ ತನ್ನ ಸಮಕಾಲೀನ ಕತೆಗಾರಗಿಂತ ಭಿನ್ನರಾಗಿದ್ದಾರೆ. ಭೌತಿಕ ಪಲ್ಲಟದಂತಯೇ ಭಾವ ಪಲ್ಲಟವೂ ಉಂಟಾಗಿದೆ. ಹಲವು ಕತೆಗಳಲ್ಲಿ ತಂದೆ ಮತ್ತು ಮಕ್ಕಳ ನಡುವಿನ ಸಂಬಂಧ ಉದ್ವಿಗ್ನತೆಗೆ ಒಳಗಾಗುತ್ತದೆ; ಮತ್ತು ಮುಖ್ಯ ಸ್ಥಾಯಿಭಾವದಂತೆ ‘ಪಿತೃಪೀಡೆ’ ಆವರ್ತನಗೊಳ್ಳುತ್ತದೆ. ಬಸು (ಬಯಲಲಿ ತೇಲುತ ತಾನು), ಪ್ರದ್ಯುಮ್ನ (ರೇಖೆಗಳು), ವಿಶ್ವ (ಎಲ್ಲೂ ಸಲ್ಲದವರು), ಚಿರಂತ್ (ಎಲ್ಲ ಮರೆತಿರುವಾಗ) ಪಿತೃಪೀಡಕರು; ಇವರೆಲ್ಲ ತಾಯಿಯ ಅನುಪಸ್ಥಿತಿಯಿಂದ ಖಿನ್ನರಾದವರು. ಒಡಗೂಡಿ ಬದುಕಲಾರದ ಯುವಕರು, ಯುವತಿಯರು, ವೃದ್ಧರು ಒಂಟಿತನದಲ್ಲಿ ಸಂಕಟದಿಂದ ನರಳುವವರು. ಸ್ವಂತದ್ದನ್ನು ಕಳೆದುಕೊಂಡು ಸಾಂತ್ವನಕ್ಕಾಗಿ ಪರಿತಪಿಸುವ ಸಂತ್ರಸ್ತರು. ಸಂತೋಷವನ್ನು ಹೊರಗೆಲ್ಲೊ ಹುಡುಕಾಡಿ ಕೊನೆಯಲ್ಲಿ ಅದು ತನ್ನೊಳಗಿರುವುದನ್ನು ಶೋಧಿಸುವವರು ಅವರ ಕತೆಗಳಲ್ಲಿ ಜೀವಿಸುತ್ತಾರೆ.
‘ಬಯಲಲಿ ತೇಲುತ ತಾನು’ ಕತೆಯಲ್ಲಿ ಜಾತ್ರೆ ಊರವರ ಸಂಭ್ರಮಕ್ಕೆ ಸಾಕ್ಷಿಯಾಗುತ್ತದೆ. ಅಲ್ಲಿ ಬಂಗಾರುಸ್ವಾಮಿ ಅಂಗಡಿ ಹಾಕಿದ್ದಾನೆ; ಮಗ ಬಸು ರೆಕ್ಕೆ ಆಟಿಕೆ ಮಾರಿ ಹಣ ಸಂಪಾದಿಸಬೇಕೆಂದು ಅಪ್ಪನ ಆಸೆ. ಮಗನಿಗೆ ಜೇಯಿಂಟ್ ವೀಲ್ ಏರುವ ಬಯಕೆ; ಆದರೆ ಅದು ಹಣವಿದ್ದವರಿಗೆ. ಕೊನೆಯಲ್ಲಿ ಆಟಿಕೆ ಮಾರಿ ಬಂದ ಹಣದಿಂದ ಅಪ್ಪನ ಜೊತೆಗೆ ತೊಟ್ಟಿಲೇರುತ್ತಾನೆ. ರೆಕ್ಕೆ ಆಟಿಕೆಯನ್ನು ತೊಟ್ಟಿಲೆತ್ತರಕ್ಕೆ ಹಾರಿ ಬಿಡುತ್ತಾನೆ. ಜಾತ್ರೆಯಲ್ಲಿ ಸೇರುವ ಜನರ ನೆನಪನ್ನು ಮೊಗೆಯುವ ಸಡಗರದಲ್ಲಿ ಬಂಗಾರುಸ್ವಾಮಿ ಮತ್ತು ಬಸುವಿನ ಕನಸು ನನಸಾಗಿ ಕತೆ ಇನ್ನೂ ಏನನ್ನೊ ಸೂಚಿಸುವಂತಿದೆ. ವಿವರಗಳಲ್ಲಿ ಕತೆ ಸರಳವೆನಿಸಿದರೂ ಧ್ವನಿ ಸಂಕೀರ್ಣವಾಗಿದೆ.
ಅಪ್ಪನಿಂದ ದೂರಾಗಿ, ಓಡಿ ಹೋದ ಅಕ್ಕನನ್ನು ಹುಡುಕುತ್ತ ಚಿತ್ರ ಬರೆದು, ಅದು ಯಾಂತ್ರಿಕವಾದಾಗ ತನ್ನದು ಜೆರಾಕ್ಸ್ ಕೆಲಸ ಎಂದು ವಿಷಾದಿಸುತ್ತ, ಸಂಜೆಗಪ್ಪಾಗುತ್ತಿದ್ದಂತೆ ಗಿರಾಕಿಗಳನ್ನು ಹುಡುಕಿ ಅಟೋ ಏರುವ ‘ಏಂಜಲ್’ಳ ಜೀವಂತಿಕೆಯ ರೇಖಾಚಿತ್ರ ಬರೆದು ಅವಳ ಜೊತೆ ಸುರ್ಯಾಸ್ತ ನೋಡುವುದರಲ್ಲಿ ಮಗ್ನನಾಗುವುದು ಕನಸೊ ಕಲ್ಪನೆಯೊ ಬಿಡುಗಡೆಯೊ ಬಂಧನವೊ ಎಂದು ಸುಲಭದಲ್ಲಿ ಬಿಡಿಸಲಾರದ ವಿಲಕ್ಷಣ ಕತೆ ‘ರೇಖೆಗಳು’. ಇಲ್ಲೂ ಗತದಿನಗಳು ಚಿತ್ರದಲ್ಲಿ ಪುನರ್ ಸೃಷ್ಟಿಯಾಗುತ್ತವೆ.
ಹುಟ್ಟಿದೂರು ಕಮ್ಮರಡಿ ಈಗ ಅಕ್ಷರಶಃ ಅವಶೇಷವಾಗಿದೆ. ಅಲ್ಲಿ ವಿಶ್ವನಿಗೆ ಎದುರಾಗುವುದು ವಿಷಾದಪೂರ್ಣ ನೆನಪು ಮಾತ್ರ. ಊರಿನಲ್ಲಿ ಅಪರಿಚಿತನಂತೆ ಸುತ್ತಾಡಿ ರಾತ್ರಿ ಹೋಮ್‍ಸ್ಟೇಯಲ್ಲಿ ಉಳಿಯುವ ಹೊತ್ತಿಗೆ ಕತೆ ‘ಎಲ್ಲೂ ಸಲ್ಲದವರು’ ವರ್ತಮಾನದ ಕೌಟುಂಬಿಕ ವ್ಯವಸ್ಥೆಯ ವಿಡಂಬನಾತ್ಮಕ ಚಿತ್ರವಾಗಿ ಕಾಡುತ್ತದೆ. ಮಾಯವಾದ ಕಪ್ಪೆಗುಂಡಿ ಅರ್ಥವತ್ತಾದ ರೂಪಕವಾಗಿದೆ. ಈ ಕತೆಯನ್ನು ಊರಿಂದ, ಮಕ್ಕಳಿಂದ ದೂರಾಗಿ ರೈಲಿನಲ್ಲಿ ಅನಾಥನಂತೆ ಸಾಯುವ ವೃದ್ಧನನ್ನು ಭೇಟಿಯಾಗುವ ‘ಭಾರತ ಸಿಟಿ’ ಯ ಸಮೀರ್‍ನ ದರ್ಶನಕ್ಕೆ ಹೋಲಿಸಿ ನೋಡಬಹುದು. ಭಾರತದ ಸಿಟಿಗಳು ಸ್ಮಶಾನವಾಗಿರುವುದಕ್ಕೆ ಈ ಕತೆ ಅದ್ಭುತ ರೂಪಕವಾಗುತ್ತದೆ.
ತನ್ನನ್ನು ಕಾಮದ ಉಪಭೋಗದ ವಸ್ತುವನ್ನಾಗಿ ಬಳಸಿಕೊಳ್ಳಲು ಮುಂದಾಗಿದ್ದ ಪ್ರದೀಪ ಮತ್ತು ಮುಕುಂದನ ಲೈಂಗಿಕ ಚಪಲದ ರಾಹು ಬಿಡಿಸುವ ‘ಫ್ರೀ ವೇ’ಯ ನಿವೇದಿತ ಹೊಸ ತಲೆಮಾರಿನ ಸ್ತ್ರೀಯರ ಧೈರ್ಯಕ್ಕೆ ಮಾದರಿಯಾಗುತ್ತಾಳೆ. ಫ್ರೀ ವೇ ಸ್ವಾತಂತ್ರ್ಯ ಮತ್ತು ಬಿಡುಗಡೆಗೆ ಪ್ರತೀಕವಾಗುತ್ತದೆ. ಅಪ್ಪ, ಹೆಂಡತಿ, ಆಫೀಸು, ಸಂಬಳ ಎಂಬೆಲ್ಲ ಹಗ್ಗಗಳಿಂದ ಬಂಧಿತನಾದ ಚಿರಂತ್ ಮತ್ತು ಎಲ್ಲವುಗಳಿಂದ ಮುಕ್ತನಾಗಿರುವ ಸುಧೀರ್ ಇವರಿಬ್ಬರ ಜೀವನದ ಹೋಲಿಕೆಯಲ್ಲಿ ಯಾರು ಸುಖಿಷ್ಟರು ಎಂಬ ಹುಡುಕಾಟದ ಕತೆ ‘ಎಲ್ಲ ಮರೆತಿರುವಾಗ’ ಓದುಗರಲ್ಲಿ ಮುಂದೊರೆಯುತ್ತದೆ: ‘ಅಮ್ಮ, ಪ್ರಣತಿ, ಚಿರಂತನ್‍ನ ಮ್ಯಾನೇಜರ್ ಎಲ್ಲರೂ ಚಿರಂತ್‍ನನ್ನು ಹುಡುಕುತ್ತಿದ್ದರು. ಚಿರಂತ್ ಕೂಡ ಅವನ ಹುಡುಕಾಟದಲ್ಲಿದ್ದ.’-ಎಂಬುದು ಕತೆಯ ಆಶಯವಾಗಿದೆ. ಹಳ್ಳಿಯ ಜನರ ಮುಗ್ಧತೆಯನ್ನು ಟಿವಿಯ ರಿಯಾಲಿಟಿ ಶೋಗಳ ವಸ್ತುವನ್ನಾಗಿ ಉಪಯೋಗಿಸಿ ವಿಕೃತಗೊಳಿಸುವುದನ್ನು ವಿಡಂಬನಾತ್ಮಕವಾಗಿ ನಿರೂಪಿಸುವ ‘ಹೆಂಗೆಂಗಿದ್ಯೋ ಹಂಗಂಗೆ’ ಕತೆ ಹೃದಯವನ್ನು ಆದ್ರ್ರಗೊಳಿಸುತ್ತದೆ. ಎಟಿಎಂನಲ್ಲಿ ಸೆಕ್ಯುರಿಟಿಯಾಗಿದ್ದ ರಮಾಕಾಂತ ಹಣದ ಹುಚ್ಚು ಹಿಡಿಸಿಕೊಂಡು, ಓಡಿ ಹೋದ ಹೆಂಡತಿಯ ಬಗ್ಗೆ ವ್ಯಾಕುಲಗೊಂಡು ನಂತರದಲ್ಲಿ ಅವುಗಳಿಂದ ಬಿಡುಗಡೆಯಾಗಿ ಸಾಫ್ಟ್‍ವೇರ್ ಕಂಪನಿಯೊಂದರಲ್ಲಿ ಸೆಕ್ಯುರಿಟಿಯಾಗುತ್ತಾನೆ. ಸಮಾಜಿಕ ಅನ್ಯಾಯ, ಅವಮಾನದ ನಡುವೆ ನರಳುತ್ತ ಮಗನ ಬವಿಷ್ಯದ ಬಗ್ಗೆ ಕನಸು ಕಾಣುವ ‘ನೀಲಿ ನಕ್ಷತ್ರ’ದ ರಮಾಕಾಂತ ನೆನಪಿನಲ್ಲಿರುವ ಪಾತ್ರ. ಪ್ರಿಯತಮೆ ರೋಶನ್, ಪ್ರಮೋಶನ್, ಅಮೆರಿಕೆಯ ಐಶಾರಾಮಿ ಬದುಕು ತ್ಯಜಿಸಿ ದೂರದ ಊರಿನಿಂದ ಕರೆಯುತ್ತಿದ್ದ ವೃದ್ಧ ತಂದೆ-ತಾಯಿಯ ಬಳಿ ಮರಳಿಹೋಗಲು ತೀರ್ಮಾನಿಸುವ ‘ಗೋಡೆಗಳ ದಾಟಿ’ ಕತೆಯ ಅನಿಕೇತನ ಬಿಡುಗಡೆಯಾಗುತ್ತಾನೆ. ಗೋಡೆ ರೂಪಕವಾಗಿ ಹೊಸದೇನೂ ಹೇಳುವುದಿಲ್ಲ. ಚಿಮಣಿಯೇ ನಿರೂಪಕನಾಗಿ ಕತೆ ಹೇಳುವ ‘ಚಿಮಣಿ ಬುಡ್ಡಿ’ ಪ್ರಯೋಗದ ದೃಷ್ಟಿಯಿಂದ ಕುತೂಹಲಕಾರಿಯಾಗಿದೆ.
ಕಣ್ಮರೆಯಾದ ಹಳೆಯ ತಲೆಮಾರು ಮತ್ತು ದಾರುಣವಾದ ವರ್ತಮಾನದ ನಡುವೆ ನಿಂತು ಅನುಭವಿಸುವ ಸಂಕಟಗಳನ್ನು ಸಹಿಸಿಕೊಳ್ಳುವುದನ್ನು ಬಿಟ್ಟು ಉಳಿದಿರುವ ದಾರಿಯಾದರೂ ಏನು ಎಂದು ಪ್ರಶ್ನಿಸುವ ಕತೆಗಳನ್ನು ನೀಡಿದ ಅಕ್ಷಯ ಪಂಡಿತ್ ಅಭಿನಂದನೆಗೆ ಪಾತ್ರರು.
‘ನೀಲಕುರಿಂಜಿ’ ಗ್ರಾಮ ಮತ್ತು ನಗರ ಸಂವೇದನೆಯನ್ನು ಹದವಾಗಿ ನೇಯ್ದ ಕತೆಗಳ ಸಂಕಲನ. ಕೆಳಸ್ತರದಲ್ಲಿ ಬದುಕುತ್ತಿರುವವರ ಅಸ್ತಿತ್ವದ ಸಂಕಟ, ನೀತಿ-ಅನೀತಿಗಳನ್ನು ಮೀರಿದ ಸಾಂಪ್ರದಾಯಕ ಕಟ್ಟುಪಾಡುಗಳಾಚೆ ಜಿಗಿಯುವ ಜೀವಪ್ರೇಮಿಗಳ ಸಂಬಂಧ, ಪಾಪಪ್ರಜ್ಞೆಯಿಂದ ನರಳುವವರ ಅಸಹಾಯಕತೆ, ಮಾರುಕಟ್ಟೆಯ ವಸ್ತುಗಳನ್ನಾಗಿ ಮನುಷ್ಯರನ್ನು ಪರಿವರ್ತಿಸುವ ಆರ್ಥಿಕ ವ್ಯವಸ್ಥೆ ಹೀಗೆ ಸಂಕೀರ್ಣ ಅನುಭವದ ನಿರೂಪಣೆಯಿಂದ ಗಮನ ಸೆಳೆಯುತ್ತದೆ.
ವಿಶಿಷ್ಟವಾದ ಸ್ಥಳೀಯತೆಯ ಸಾರಭೂತ ಅಂಶಗಳನ್ನು ಕತೆಯ ಜೀವದ್ರವ್ಯವನ್ನಾಗಿಸಿ ಬರೆದ ಕತೆಗಳ ಮಾದರಿಗೆ ‘ಪೂವಿ’ ಕಥಾ ಸಂಕಲನವನ್ನು ಉದಾಹರಿಸಬಹುದು. ಕತೆ ಜೀವಿಸುವ ಜಗತ್ತಿನ ಭೂಗೋಲ, ಭಾವ ಮತ್ತು ಭಾಷೆಗಳು ಒಡಗೂಡುವ ಅಪರೂಪದ ಯಶಸ್ಸು ಈ ಕತೆಗಳಿಗಿವೆ. ಅಸಹಾಯಕ ಬಡವರು ಲೈಂಗಿಕ ಕ್ರೌರ್ಯಕ್ಕೆ ಬಲಿಯಾಗುವುದು, ಹೆತ್ತವರಿಂದ ಮಕ್ಕಳೂ ಮಕ್ಕಳಿಂದ ಹೆತ್ತವರೂ ಅವಗಣನೆಗೆ ತುತ್ತಾಗಿ ದೂರಾಗುವ ದುರಂತ, ವಿಶ್ವಾಸ ದ್ರೋಹದಂಥ ಪಾಪಗಳು ಓದುಗರನ್ನು ದುಃಸ್ವಪ್ನದಂತೆ ಕಾಡುತ್ತ ಮಾನವೀಯ ಸಾಧ್ಯತೆಯತ್ತ ಕಣ್ತೆರೆಸುತ್ತವೆ.
ಸಮಾಜದ ಅಂಚಿಗೆ ತಳ್ಳಲ್ಪಟ್ಟವರ ಜೀವಹಿಂಸೆಯನ್ನು ಗ್ರಾಮ ಜಗತ್ತಿನ ಸಂಕೀರ್ಣ ಸಂಬಂಧಗಳ ನೇಯ್ಗೆಯಲ್ಲಿ ಮುಖ್ಯ ಆಶಯವನ್ನಾಗಿ ಶೋಧಿಸುವ ಪ್ರಯತ್ನವನ್ನು ‘ಮಾರ್ಗಿ’ ಸಂಕಲನದಲ್ಲಿ ನೋಡಬಹುದು. ಪ್ರತಿಭಟನೆಯ ದನಿಯನ್ನು ಎಲ್ಲ ಕತೆಗಳ ಹಿನ್ನಲೆಯಲ್ಲಿ ಕೇಳಲು ಸಾಧ್ಯ. ಗ್ರಾಮ ಜಗತ್ತನ್ನು ಆಕ್ರಮಿಸಿದ ಆಧುನಿಕತೆ ಸೃಷ್ಟಿಸಿದ ತಳಮಳದ ಪಲ್ಲಟ, ವಲಸೆಯ ಸಂಕಟ, ನಗರಗಳಲ್ಲಿನ್ನೂ ಜೀವಂತವಾಗಿರುವ ಅಸ್ಪೃಶ್ಯತೆ, ವಿವಾಹೇತರ ಸಂಬಂಧಗಳು, ಪಾವಿತ್ರ್ಯವನ್ನು ಕಳೆದುಕೊಂಡಿರುವ ಧರ್ಮ ಪೀಠಗಳು, ಶೋಷಿತ ವರ್ಗದವರನ್ನು ಅವಮಾನಿಸಿ ತಿರಸ್ಕರಿಸುವುದು ಕತೆಗಳ ವಸ್ತು ಮತ್ತು ಆ ಮೂಲಕ ಮಾನವೀಯತೆಯತ್ತ ಕಣ್ತೆರೆಸುವ ನಿಲುವಾಗಿ ಗಮನ ಸೆಳೆಯುತ್ತವೆ. ಪಾತ್ರ ಮತ್ತು ಪರಿಸರದ ಹಾಸುಹೊಕ್ಕು ಈ ಸಂಕಲನದ ಕತೆಗಳ ಗುಣಾತ್ಮಕ ಅಂಶಗಳಲ್ಲೊಂದು.
ಜೀವನದ ವಿಘಟನೆಯ ಸಂಕೀರ್ಣ ಸ್ವರೂಪವನ್ನು ಹಲವು ಆಯಾಮಗಳಲ್ಲಿ ವಿವರವಾಗಿ ನಿರೂಪಿಸುವುದೇ ‘ದಶಕದ ಕತೆಗಳು’ ಸಂಕಲನದ ಕೇಂದ್ರ ಕಾಳಜಿಯಾಗಿದೆ. ಪರಿಸ್ಥಿತಿ ಮತ್ತು ಮನಸ್ಥಿತಿ, ಗ್ರಾಮ ಮತ್ತು ನಗರ, ವಾಸ್ತವ ಮತ್ತು ಕನಸು, ವೈಯಕ್ತಿಕ ನಂಬಿಕೆ ಮತ್ತು ಸಾಮಾಜಿಕ ಕಟ್ಟುಪಾಡುಗಳು, ಭೌತಿಕ ಮತ್ತು ನೈತಿಕ ಆಯ್ಕೆಗಳು, ವಿರಕ್ತಿ ಮತ್ತು ಅನುರಕ್ತಿ, ಮೃಗೀಯ ಮತ್ತು ನಾಗರಿಕ ಹೀಗೆ ವಿರುದ್ಧ ಹಿತಾಸಕ್ತಿಗಳ ನಡುವೆ ಉಂಟಾದ ಬಿರುಕು ಮತ್ತು ಅದರ ಫಲಶೃತಿಯಾಗಿ ಪ್ರತಿಧ್ವನಿಸಿದ ಪರಿವರ್ತನೆ, ಪ್ರತಿರೋಧ, ಪ್ರತಿಶೋಧ ಮತ್ತು ಪ್ರತಿಗಾಮಿತ್ವದ ವಿಷಾದಪೂರ್ಣ ನಿಷ್ಕೃಮಣದ ವಿನ್ಯಾಸವೊಂದರ ಅನಾವರಣ ಇಲ್ಲಾಗಿದೆ.
ಪ್ರಾದೇಶಿಕ ಜನಸಮುದಾಯದ ಜೀವನ ವಿಧಾನವನ್ನು ದಟ್ಟ ಅನುಭವದ ವಿವರಗಳಲ್ಲಿ ಕಟ್ಟಿಕೊಡುವ ‘ಅಗ್ಗಿಷ್ಟಿಕೆ’ಯ ಕತೆಗಳು ಸಾಂಪ್ರದಾಯಕ ಕುಟುಂಬದ ಕಟ್ಟುಪಾಡುಗಳಲ್ಲಿ ಹೆಣ್ಣು-ಗಂಡು ಪಡುವ ಕಷ್ಟ, ತುಳುನಾಡಿನ ದೈವ ನಂಬಿಕೆಗಳು, ಅನಿಷ್ಟ ಆಚರಣೆಗಳು, ಬಡವರ ಅಸಹಾಯಕತೆ ಮತ್ತು ಶ್ರೀಮಂತರ ಪ್ರತಿಷ್ಟೆ ಹೀಗೆ ವಿಸ್ತ್ರತ ಸಾಂಸ್ಕೃತಿಕ ನಕ್ಷೆಯನ್ನೇ ಪರಿಚಯಿಸುತ್ತವೆ. ‘ಅಗ್ಗಿಷ್ಟಿಕೆ’ ಸಂಕಲನದ ಆಶಯಕ್ಕೆ ಒಂದು ರೂಪಕದಂತಿದೆ.
ಮೆಚ್ಚುಗೆಗೆ ಪಾತ್ರರಾದ ಐದೂ ಕಥೆಗಾರರನ್ನು ಅಭಿನಂದಿಸುವೆ.
-ಶ್ರೀಧರ ಬಳಗಾರ
ಪಂಜು ಬಳಗದ ಟಿಪ್ಪಣಿ
ತಮ್ಮ ಅಮೂಲ್ಯವಾದ ಹಣ, ಸಮಯ ವ್ಯಯಿಸಿ ಕಥಾ ಸಂಕಲನ ಸ್ಪರ್ಧೆಗೆ ಪುಸ್ತಕಗಳನ್ನು ಕಳುಹಿಸಿಕೊಟ್ಟಿರುವ ಇಪ್ಪತ್ತೈದು ಬರಹಗಾರರಿಗೂ ಹಾಗೂ ಅಷ್ಟೂ ಸಂಕಲನಗಳನ್ನು ಶ್ರದ್ಧೆಯಿಂದ ಓದಿ ತೀರ್ಪು ನೀಡಿರುವ ಶ್ರೀಧರ ಬಳಗಾರ ಮತ್ತು ಭಗವತಿ ಎಂ ಆರ್ ಅವರಿಗೆ ಪಂಜು ಬಳಗದ ವತಿಯಿಂದ ಅನಂತ ವಂದನೆಗಳು.
ಬಹುಮಾನಿತ ಮತ್ತು ಮೆಚ್ಚುಗೆ ಪಡೆದ ಕತೆಗಾರರಿಗೆ ಪಂಜು ಬಳಗದ ವತಿಯಿಂದ ಹಾರ್ದಿಕ ಶುಭಾಶಯಗಳು.
ಧನ್ಯವಾದಗಳೊಂದಿಗೆ
ಪಂಜು ಬಳಗ