ಈಚೆಗೆ ಒಂದು ಪುಟ್ಟ ಕೃತಿ ‘ನನ್ನವ್ವನ ಬಯೋಗ್ರಫಿ’ ಓದಿದೆ. ಬಯೋಗ್ರಫಿ – ಜೀವನ ಚರಿತ್ರೆ, ಜೀವನ ಚಿತ್ರ, ಲೈಫ್ ಸ್ಟೋರಿ, ದಿನಚರಿ, ಇದೆಲ್ಲಕ್ಕು ಮೀರಿದ ಆಪ್ತವಾದ ಗಾಢವಾದ ಆತ್ಮಕಥನ ಅನ್ನಬಹುದು.
ಆತ್ಮಕಥನದ ಲಕ್ಷಣ- ಇರುವುದನ್ನು ಮತ್ತು ಇದ್ದು ಬದುಕಿದ್ದನ್ನು ಪ್ರಾಮಾಣಿಕವಾಗಿ ಹೇಳುವುದು; ನೋಡಿದ್ದನ್ನು ಕೇಳಿಸಿಕೊಂಡಿದ್ದನ್ನು ಯಥಾವತ್ ದಾಖಲಿಸುವುದು; ಅರ್ಥಾತ್ ‘ಇದ್ದದ್ದು ಇದ್ದ ಹಾಗೆ’!
ಸಾಹಿತ್ಯ ಪ್ರಾಕಾರಗಳಲ್ಲಿ ಆತ್ಮಕಥನವೂ ಒಂದು. ಆತ್ಮಕಥನಗಳ ರಚನೆ ಅಷ್ಟು ಸುಲಭವಲ್ಲ. ಅಲ್ಲಿ ಮರೆಮಾಚುವುದಕ್ಕೆ ಅವಕಾಶವಿಲ್ಲ. ಹಾಗೇನಾದರು ಮರೆಮಾಚಿದರೆ ಅದು ಆತ್ಮಕಥನವೇ ಅಲ್ಲ. ಗಾಂಧಿಯ ‘ನನ್ನ ಸತ್ಯಾನ್ವೇಷಣೆ’ ಅತ್ಮಕಥನ – ಕಾದ ಕಬ್ಬಿಣದ ಸಲಾಕೆಯಂತೆ! ಅದು ಸ್ವಾತಂತ್ರ್ಯಪೂರ್ವ ಭಾರತೀಯ ಆತ್ಮಕಥನಗಳ ಬೇರು ಅಂದರೂ ತಪ್ಪಿಲ್ಲ! ಒಂದು ಆತ್ಮಕಥನ ಹೇಗಿರಬೇಕು ಎಂದು ಹೇಳುವುದಕ್ಕೆ ಉದಾಹರಣೆಯಂತಿದೆ. ಹಾಗೆ ಸ್ವಾತಂತ್ರ್ಯೊತ್ತರ ಭಾರತದಲ್ಲಿ ರಚಿತವಾದ ಆತ್ಮಕಥನಗಳಿಗೂ ಗಾಂಧಿಯ ಕಥನ – ಸ್ಫೂರ್ತಿಯೂ ಹೌದು.
ನಮ್ಮ ಕನ್ನಡದ ಜೀವಂತ ಕವಿ ಎನ್ಕೆ ಹನುಮಂತಯ್ಯ ಅವರ ಪದ್ಯಗಳು ಅವರದೇ ಆತ್ಮಕಥನದಂತಿವೆ. ಇವು ರಕ್ತಮಾಂಸ ತುಂಬಿದಂತ ರಚನೆಗಳು. ಅವರ ಒಂದು ಜೀವನ ಚಿತ್ರ- “ಹೊಲಗೇರಿ ಹಾದಿಯಲಿ ಸೋಬಾನೆ ದೀಪಗಳು’! ಈ ಜೀವನ ಚಿತ್ರ (ಆತ್ಮಕಥನ) ಕೇವಲ ಕೆಲವೇ ಪುಟಗಳ ಸಂಕ್ಷಿಪ್ತ ಕಥನ. ಅದನ್ನು ಓದಿದವರ‌್ಯಾರೂ ಡಿಸ್ಟರ್ಬ್ ಆಗದೆ ಇರಲಾರರು! ಅಷ್ಟು ಗಾಢವಾದ ಆತ್ಮಕಥನ! ಬಹುಶಃ ಕನ್ನಡದಲ್ಲಿ ಬಂದಂಥ ಅತ್ಯಂತ ಪುಟ್ಟದಾದ ತೂಕದ ಆತ್ಮಕಥನವಿದು! ಇಲ್ಲಿ ಎನ್ಕೆ ತಮ್ಮ ಅನುಭವವನ್ನು ‘ರೂಪಕ ಗೆರೆಗಳ’ ಮೂಲಕ ಓದುಗನನ್ನು ಆವಾಹಿಸಿ ಕೊಳ್ಳುತ್ತಾರೆ. ಹೀಗೆ ಆವಾಹಿಸಿಕೊಳ್ಳುವ ಬದುಕಿನ ಕಟು ವಾಸ್ತವದ ಗೆರೆಗಳು ಓದುಗನ ಎದೆಯಾಳಕ್ಕೆ ಇಳಿದು ಮೈ ಮನಸ್ಸನ್ನು ಬಿಸಿಯಾಗಿಸಿ ಬೆವರಿಸಿ ಒದ್ದೆಯಾಗಿಸುತ್ತವೆ. ಪಿ.ಲಂಕೇಶರ ಆತ್ಮಕಥನವು ಇಷ್ಟು ಗಾಢವಲ್ಲದಿದ್ದರು ಬಿಡು ಬೀಸಾದ ಓದುಗರ ಮನಸ್ಸನ್ನು ಸೂರೆಗೊಳ್ಳುವ ಸತ್ಯದ ಕೆಲವು ಘಟನಾವಳಿಗಳನ್ನು ದಾಖಲಿಸುತ್ತದೆ. ಪೂರ್ಣಚಂದ್ರ ತೇಜಸ್ವಿ ಅವರು ಸ್ವತಃ ಆತ್ಮಕಥನ ಬರೆಯದಿದ್ದರು ಕುವೆಂಪು ತೀರಿಕೊಂಡ ಮೇಲೆ ‘ಪತ್ರಿಕೆ” ಒತ್ತಾಸೆಗೆ ಮಣಿದು ‘ಅಣ್ಣನ ನೆನಪು’ ಬರೆದರು. ಅದು ಕೇವಲ ಅವರ ಅಣ್ಣನ ನೆನಪಲ್ಲ ಬದಲಿಗೆ ಅವರ ಜೀವನ ವಿಧಾನ ದಾಖಲಿಸುವ ನೆಪದಲ್ಲಿ ರೂಪುಗೊಂಡ ತೇಜಸ್ವಿ ಅವರ ಪ್ರಾಮಾಣಿಕ ಆತ್ಮಕಥನವೇ ಆಗಿದೆ. ಅವರ ಪತ್ನಿ ರಾಜೇಶ್ವರಿಯವರ ಕಥನವೂ ಇದೇ ಮಾದರಿಯದ್ದು.
ಕೆಲವರು ಈತರದ ಬಯೋಗ್ರಫಿ ಬರೆಯಲು ಹೋಗಿ ವಿವರಗಳು ಹಿಂದಕ್ಕು ಮುಂದಕ್ಕು ಮಿಕ್ಸ್ ಆಗಿ ಬಯೋಗ್ರಫಿಯ ಸಹವಾಸವೇ ಬೇಡವೆಂದು ಸುಮ್ಮನಿದ್ದವರಿದ್ದಾರೆ. ಅವರಲ್ಲಿ ಹೆಚ್.ಎಲ್.ಕೇಶವಮೂರ್ತಿ ಮತ್ತು. ಕೆ.ರಾಮದಾಸ್! ಇದನ್ನು ಪಿ.ಲಂಕೇಶ್ ತಮ್ಮ ‘ಈ ಸಂಚಿಕೆ’ ಕಾಲಂ ನಲ್ಲಿ ಹೇಳಿಕೊಂಡೇ ತಮ್ಮ ಆತ್ಮಕಥನ “ಹುಳಿಮಾವಿನ ಮರ” ವನ್ನು ರಚಿಸಿದ್ದರು. ಹಾಗೇ ಇಂದಿರಾ ಲಂಕೇಶ್ ಸಹ ಪತಿ ಪಿ.ಲಂಕೇಶರೊಂದಿಗಿನ ಒಡನಾಟವನ್ನು ‘ಹುಳಿಮಾವಿನ ಮರ’ದಲ್ಲಿ ಬಿಟ್ಟು ಹೋದ ದಿನಚರಿ ವಿವರಗಳನ್ನು ತಮ್ಮ ಕಥನದಲ್ಲಿ ದಾಖಲಿಸಿದ್ದಾರೆ. ಯು.ಆರ್.ಅನಂತಮೂರ್ತಿ ಅವರು ‘ಸುರಗಿ’ ಯಲ್ಲಿ, ಎಪ್ಪತ್ತರ ದಶಕದ ದಲಿತ ಚಳುವಳಿಯ ಕಾಲಘಟ್ಟದಲ್ಲಿ ಜಾತಿ ತೊಲಗಿಸುವ ಅಭಿಯಾನ ಮಾಡುವಾಗ ಅವರಿಗೆ ದಲಿತರ ಮನೆಯಲ್ಲಿ ಊಟ ಮಾಡುವ ಪ್ರಸಂಗ ಎದುರಾಗುತ್ತದೆ. ಅದುವರೆಗೂ ಜಾತಿ, ಜಾತ್ಯಾತೀತ, ಪ್ರಗತಿಪರ ಚಿಂತನೆ ಮತ್ತು ಮಾತಿನ ವಾಗ್ಬಾಣದಲ್ಲಿ ತೊಡಗಿದ್ದವರಿಗೆ ಏಕಾಏಕಿ ದಲಿತರ ಮನೆಯಲ್ಲಿ ಕುಳಿತು ಅವರದೇ ಮನೆಯ ತಟ್ಟೆ ಹಿಡಿದು ಪಂಕ್ತಿಯಲಿ ಉಣ್ಣಲು ಮುಂದಾಗಿ, ಕೈಲಿಡಿದ ತುತ್ತನ್ನು ಬಾಯಿಗೆ ಹಾಕುವಾಗ ಅವರ ಮೈ ಜುಮ್ಮೆನ್ನುವ ಕ್ಷಣವನ್ನು ದಾಖಲಿಸುತ್ತಾರೆ. ಹೀಗೆ ಯಾವ ಅಳುಕಿಲ್ಲದೆ ಮರೆ ಮಾಚದೆ ತನ್ನನ್ನು ತಾನು ಸಮಾಜದೆದುರು ದಾಖಲಿಸುವುದು ಆತ್ಮಕಥನದ ಲಕ್ಷಣ.
ನಾನು ಮೇಲೆ ಹೇಳಿದಂತೆ ಆತ್ಮಕಥನ ರಚನೆ ಅಷ್ಟು ಸುಲಭದ್ದಲ್ಲ. ಸತ್ಯ ಹೇಳಲು ಧೈರ್ಯ, ಆತ್ಮ ವಿಶ್ವಾಸ ಬೇಕು. ಅದಿಲ್ಲದೆ ಆತ್ಮಕಥನ ರಚಿಸಲು ಹೋದವರು ಹರಾಜಾಗಿರುವವರೂ ಇದ್ದಾರೆ. ಅವರಲ್ಲಿ ಎಸ್.ಎಲ್.ಭೈರಪ್ಪ ಕೂಡ ಒಬ್ಬರು. ‘ಆತ್ಮಕಥನ’ ಎಂದು ಹೇಳಿಕೊಳುವ ಅವರ “ಭಿತ್ತಿ” ಆತ್ಮ ವಂಚನೆಯಿಂದ ಕೂಡಿದ ಹಸಿಹಸಿಯಾದ ನಾಟಕೀಯ ಗುಣದ ಅಪ್ರಾಮಾಣಿಕ ಕೃತಿ.
ಹಾಗಾಗಿ ಆತ್ಮಕಥನ – ಸತ್ಯದ ಶೋಧನೆ. ವ್ಯಕ್ತಿಯ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ರಂಗ ವೇದಿಕೆ. ವಿಚಾರ, ನಡೆ ನುಡಿಗಳ ನೇರ ಮುಖಾಮುಖಿ!
ಹೀಗೆ ಎಲ್ಲವನ್ನು ಒಟ್ಟಿಗೆ ಮುಖಾಮುಖಿಯಾಗಿಸಿ ಚರ್ಚಿಸಲ್ಪಡುವ “ನನ್ನವ್ವನ ಬಯೋಗ್ರಫಿ” ಜಯರಾಮಾಚಾರಿ ಅವರ 68 ಪುಟಗಳ ಒಂದು ಪುಟ್ಟ ಆತ್ಮಕಥನ. ಅದು ಎಷ್ಟು ಗಾಢವಾಗಿದೆ ಎಂದರೆ ಕುಂತು ನಿಂತು ಎದ್ದು ಮಲಗಿ ಏಗುವ ನನ್ನವ್ವನನ್ನು ನೋಡಿದಾಗೆಲ್ಲ, ಅವಳಿಗೆ ಆಗಾಗ ನೀರು ಕೊಟ್ಟು ಊಟ ಕೊಟ್ಟು ಸಮಾಧಾನಿಸುವಾಗೆಲ್ಲ ಅವಳ ಅಕ್ಕಪಕ್ಕವೇ ಕುಂತು ಓದಿದ ‘ನನ್ನವ್ವನ ಬಯೋಗ್ರಫಿ’ ಯ ವಿವರಗಳು ಬಿಟ್ಟೂ ಬಿಡದೆ ಡಿಸ್ಟರ್ಬ್ ಮಾಡತೊಡಗಿದವು.
ಈ ಜಯರಾಮಾಚಾರಿ ಅವರು ಹುಟ್ಟಿದ್ದು 1987. ಅವರ ಊರು ಮೈಸೂರು, ಕಾಫಿನಾಡು ಕೊಡಗು ಮಡಿಕೇರಿ, ಬೆಂಗಳೂರಿನ ಹಲವು ನೆಲಗಳು – ಹೀಗೆ ದಾಖಲಿಸಲು ಆಗದು. ಇಲ್ಲೆಲ್ಲ ಅವರ ನೆಲೆ ಇದೆ. ಬದುಕೂ ಇದೆ. ಇವತ್ತಿಗೆ ಅವರ ವಯಸ್ಸು 36. ಇಷ್ಟು ಚಿಕ್ಕ ವಯಸ್ಸಿಗೇ ಆತ್ಮಕಥನ ರಚನೆಯೇ? ಇಲ್ಲ , ಇದು ಅವರ ಅನಿರೀಕ್ಷಿತ ಆತ್ಮಕಥನ! ಅವರ ಅವ್ವನ ಕುರಿತಾದ್ದು. ಅವರ ಈ ‘ಮುವ್ವತ್ತಾರು ವರ್ಷ’ ಗಳಲ್ಲದಿದ್ದರು ಅದರಲ್ಲಿ ಕಳೆದು ಉಳಿದು ಲೋಕಜ್ಞಾನದೊತ್ತಿನಿಂದ ಸರಿ ಸುಮಾರು ತಮ್ಮ ಬಾಲ್ಯದ ದಿನಗಳಿಂದ ತನ್ನಿಡೀ ಕುಟುಂಬದ ಬದುಕಿನ ಏಳುಬೀಳುಗಳನ್ನು ಸಂಕ್ಷಿಪ್ತವಾಗಿ ದಾಖಲಿಸಿರುವ ಅತ್ಯಂತ ಪ್ರಾಮಾಣಿಕ ಆತ್ಮಕಥನವಿದು ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ. ಅಷ್ಟು ಚೊಕ್ಕವಾಗಿ ಸ್ಪಷ್ಟವಾಗಿದೆ. ಇಲ್ಕಿರುವ ವಿವರಗಳು ದಟ್ಟವಾಗಿ ಭಾವುಕವಾಗಿವೆ.
ಈ ಆತ್ಮಕಥನದ ಕೃತಿಕರ್ತೃ ಜಯರಾಮಾಚಾರಿ
ಸುಖಾಸುಮ್ಮನೆ ಬರೆದಿಲ್ಲ. ಬದಲಿಗೆ ತನ್ನ, ತನ್ನವ್ವನ ಬದುಕಿನ ಬಗೆಯ ಮೆಲುಕು ಹಾಕಿದ್ದಾರೆ. ಇದು ಅಂತಿಂಥ ಮೆಲುಕಲ್ಲ. ತಾಯ್ತನದ ಮೆಲುಕು. ಅವ್ವನ ಬಯೋಗ್ರಫಿ ಅಂದರೆ ಜಗತ್ತಿನ ಎಲ್ಲ ಹೆಣ್ಣುಗಳ ಪಿಸುಮಾತು. ಓದುವ ಪ್ರತಿಯೊಬ್ಬರ ಅವ್ವಂದಿರ ಬದುಕು. ಹಾಗಾಗಿ ಅವ್ವನೊಂದಿಗಿನ ಬದುಕಿನ ಒಡನಾಟವನ್ನು ಅಕ್ಕರೆಯಿಂದ ಆಪ್ತವಾಗಿ ಮನಬಿಚ್ಚಿ ಹೇಳಿರುವ ಬಯೋಗ್ರಫಿ. ಇಲ್ಲಿ ಕಾದಂಬರಿಕಾರ ಎಸ್.ಎಲ್. ಭೈರಪ್ಪನಂತವರ ‘ಹುಸಿ ಆತ್ಮಕಥನದಂತೆ’ ಎಲ್ಲೂ ಅದು ‘ಸೇರಿಸಿ ಹೇಳಿದ್ದು’ ‘ತುರುಕಿ ಹೇಳಿದ್ದು’ ಅನಿಸುವುದೇ ಇಲ್ಲ. ಈ ಕಾರಣ ಜಯರಾಮಾಚಾರಿ ಅವರ ‘ನನ್ನವ್ವನ ಬಯೋಗ್ರಫಿ’ ಪ್ರಾಮಾಣಿಕವಾಗಿದೆ.
ಈ ಬಯೋಗ್ರಫಿಯ ಮೊದಲ ಪುಟ ತಿರುವಿದಾಗ ಲೇಖಕರು ಕಾಶ್ಮೀರದ ಪ್ರವಾಸದಲ್ಲಿದ್ದಾರೆ. ಅಲ್ಲಿನ ಲೇಕ್ ಒಂದರ ಬೋಟ್ ನಲ್ಲಿ ಹೂವಿನ ಹಾಸಿಗೆಯ ನೀರಿನಲಿ ತೇಲುತ್ತಾ ಪ್ರಕೃತಿಯ ಸೊಬಗನ್ನು ನೋಡುತ್ತಾ ಎಂಜಾಯ್ ಮಾಡುವಾಗ ಅವ್ವನ ಸಾವಿನ ಸುದ್ದಿ ರಪ್ಪಂತ ಕಿವಿಗೆ ಅಪ್ಪಳಿಸುವ ಮೂಲಕ ‘ನನ್ನವ್ವನ ಬಯೋಗ್ರಫಿ’ ತೆರೆದುಕೊಳ್ಳುತ್ತದೆ.
ಇಲ್ಲಿ ಅವ್ವನ ಬಗ್ಗೆ ಭಾವುಕತನವಿದೆ. ಸಲಿಗೆ ಇದೆ. ಅಕ್ಕರೆ ಇದೆ. ಪ್ರೀತಿ ಇದೆ. ಜಗಳ ಇದೆ. ಕೋಪ ಇದೆ. ತಾಪ ಇದೆ. ಸಹನೆ ಇದೆ. ಅಸಹನೆ ಇದೆ. ಜಿಗುಪ್ಸೆ ಇದೆ. ಅಪ್ಪಟ ದೇಸೀತನದ ಮುನಿಸು, ಕೋಪ, ಬೈಗುಳವಿದೆ. ಆತ್ಮಾವಲೋಕನವಿದೆ. ಆಸ್ತಿಕತೆ ನಾಸ್ತಿಕತೆಗಳ ಮನಸ್ಥಿತಿಗಳಿವೆ. ಅವೆರಡು ಒಂದನ್ನೊಂದು ಮುಖಾಮುಖಿಯಾಗಿ ಶೋಧನೆಗೊಳಪಡುತ್ತವೆ. ಚರ್ಚಿಸಲ್ಪಡುತ್ತವೆ. ಗೇಲಿಗೊಳಗಾಗುತ್ತವೆ. ಒಂದು ಹಂತದಲ್ಲಿ ಆಸ್ತಿಕ ಪ್ರಜ್ಞೆ ನಾಸ್ತಿದೊಳಕ್ಕೆ, ನಾಸ್ತಿಕ ಪ್ರಜ್ಞೆ ಆಸ್ತಿಕದೊಳ ಹೊಕ್ಕು ಆತ್ಮ ವಿಮರ್ಶೆಗೊಳಪಡುತ್ತವೆ. ಅದುವರೆಗೂ ಇದ್ದ ಅವ್ವಳ ‘ಜಾತಿತನ’ ಮಗನ ಅಂತರ್ಜಾತಿ ವಿವಾಹದ ನಂತರದಲ್ಲಿ ಮೊಮ್ಮಗುವಿನ ಉಪಸ್ಥಿತಿಯಲ್ಲಿ ಪುಡಿಪುಡಿಯಾಗಿ ಜಾತ್ಯಾತೀತವಾದ ವ್ಯಕ್ತಿತ್ವ ರೂಪುಗೊಳ್ಳುವ ಬಗೆಯನ್ನು ಈ ಆತ್ಮಕಥನ ಅನಾವರಣಗೊಳಿಸುತ್ತದೆ.
ಒಂದು ತಲೆಮಾರನ್ನು ಪ್ರಭಾವಿಸಿದ ಡಾ.ರಾಜ್ ಕುಮಾರ್ ಈ ‘ಬಯೋಗ್ರಫಿ’ಯ ಲೇಖಕರಿಗೆ ಇಷ್ಟವಾಗದ್ದು. ರಾಜ್ ಬಗ್ಗೆ ಅದೆಂಥದ್ದೊ ಅಸಹನೆ, ಅದೆಂಥದ್ದೊ ಬೇಸರ. ಆದರೆ ಅವ್ವ….? ಅಣ್ಣಾವ್ರ ಆದರ್ಶ ಬದುಕನ್ನೇ ಹೊದ್ದು ಅರಿವಿನೋಪಾದಿಯಲಿ ಲೇಖಕರ ‘ಅಸಹನೆ’ ‘ಬೇಸರ’ವನ್ನು ಪುಡಿಪುಡಿ ಕಾಡುವ ರೀತಿ ಅನನ್ಯ! ಇಂಥ ಅನನ್ಯತೆ “ಯಾರನ್ನೂ ದ್ವೇಷಿಸದ ಅವ್ವ ನಿಜಕ್ಕೂ ಆಲದ ಮರದಂತೆ ಬದುಕಿದವಳು. ಸಂಬಂಧ ಬಲು ದೊಡ್ಡದು ಎಂದು ನಂಬಿ ನಮಗೂ ನಂಬಿಸಿ ಬದುಕಿದವಳು” ಎಂಬುದರಲ್ಲಿದೆ.
ಇಲ್ಲಿ ಅಪ್ಪನ ಅಲೆಮಾರಿತನವಿದೆ. ಈ ಅಲೆಮಾರಿತನದ ರೂಢಿ, ಅವನ ಅನುಪಸ್ಥಿತಿಯಲ್ಲಿ ಅವ್ವನ ಒಂಟಿತನವಿದೆ. ಇಲ್ಲಿ ಅವ್ವ ಅವನಪ್ಪನಿಗೆ ಎರಡನೇಯವಳಾಗಿ ಆತನ ಜಂಜಾಟ, ತಾಕಲಾಟ, ಚೀರಾಟ, ಹಿಂಸೆ, ನೋವು ಯಾತನೆಯ ಪಡಿಪಾಟಲಲ್ಲಿ ನಲುಗುವ ಚಿತ್ರಣವಿದೆ. ಅವಳ ಹುಟ್ಟು ಬೆಳವಣಿಗೆಯೂ ಇದಕ್ಕಿಂತ ಭಿನ್ನವಿಲ್ಲದ. ಮಲತಾಯಿ ಹಂಗಿನ ಬಾಲ್ಯದ ನೋವಿನ ಯಾತನೆ ಇದೆ. ಆ ಮಲತಾಯಿಗೆ ಇವಳನ್ನು ಮನೆಯಿಂದ ತೊಲಗಿಸುವ ಹಕೀಕತ್ತು. ಯಾವ ಗಂಡಾದರೇನು? ಮದುವೆ ನಡೆದೇ ಹೋಗುತ್ತದೆ. ಅನಂತರದ ಪಡಿಪಾಟಲು ಅನುಭವಿಸಿ ಜೀವನ ರೂಪಿಸಿಕೊಳುವ ‘ಅವ್ವ’ ಎನುವ ‘ಮಹಾತಾಯಿ’ ಐವರು ಗಂಡಿಗೆ ಒಂದು ಹೆಣ್ಣಿಗೆ ತಾಯಿಯಾಗಿ ಸಂಸಾರದ ನೊಗ ಹೊತ್ತು ನೀಗುವ ಬಗೆಯನ್ನು ‘ತನ್ನ ತನ್ನವ್ವನ ಆತ್ಮಕಥನ ಹೇಳುವ’ ಜಯರಾಮಾಚಾರಿ ಅವರು ಅತ್ಯಂತ ಭಾವುಕವಾಗಿ ದಾಖಲಿಸುತ್ತಾರೆ. ತನ್ನವ್ವನ ‘ಗಟ್ಟಿಗಿತ್ತಿತನ’ವನ್ನು ಹೆಮ್ಮೆಯಿಂದ ಆಸ್ವಾದಿಸಿ ಪರಿಚಯಿಸುತ್ತಾರೆ.
ಈ ಬಯೋಗ್ರಫಿಯಲ್ಲಿ ಅಂದ್ರಳ್ಳಿ, ಹೇರೋಹಳ್ಳಿ, ಸುಂಕದ ಕಟ್ಟೆ, ಅಂಜನ ನಗರಗಳಿವೆ. ಇವನ್ನು ನಾನಿಲ್ಲಿ ದಾಖಲಿಸಲು ಕಾರಣವಿದೆ. ಲೇಖಕರು ಓಡಾಡಿ ಆಡಾಡಿ ಬೆಳೆದ ನೆಲ. ಅಲ್ಲೆಲ್ಲ ಗಾರ್ಮೆಂಟ್ಸು ಇತರೆ ಸಣ್ಣಪುಟ ಕೂಲಿನಾಲಿ ಕೆಲಸ ಮಾಡಿಕೊಂಡು ಬದುಕನ್ನು ಕಟ್ಟಿಕೊಂಡು ಬಾಳುವೆ ಮಾಡುವ ಕಡು ಬಡವರು. ಮಧ್ಯಮ ವರ್ಗದವರು. ಗಂಧದ ಕಡ್ಡಿ ಉಜ್ಜಿ ಒಂದಾರು ಕಾಸು ಮೂರುಕಾಸು ಕೂಡಿಟ್ಟು ಭವಿತವ್ಯದ ಕನಸು ಕಾಣುವವರು. ಇಲ್ಲಿ ಲೇಖಕರ ಅವ್ವಳೂ ಈತರದ ಕನಸಿನ ಭಾಗವಾಗಿ ಇದ್ದವರು. ಒಂದು ಕಾಲದಲ್ಲಿ ನಾನೂ ಇಲ್ಲೆಲ್ಲ ಓಡಾಡಿದವನೆ. ಹೇರೋಹಳ್ಳಿಯಲ್ಲಿರುವ ನನ್ನ ಅಕ್ಕನ ಮನೆಯಲ್ಲಿ. ಈ ಕಾಲಘಟ್ಟದಲ್ಲೆ ನನ್ನ ಅಕ್ಕ ಭಾವನ ಆ ಈ ಕೆಲಸಗಳ ಜೊತೆ ಗಂಧದ ಕಡ್ಡಿ ಉಜ್ಜುವುದೂ ಒಂದಾಗಿತ್ತು. ಅಲ್ಲಿನ ಶನಿ ದೇವಾಲಯದ ಅಂಗಳದಲ್ಲಿ ಅಡ್ಡಾಡುತ್ತ ನನ್ನ ‘ನವುಲೂರಮ್ಮನ ಕಥೆ’ ಸಂಕಲನದ ಕೆಲವು ಕಥೆಗಳನ್ನೂ ರಚಿಸಿದ್ದೂ ಅಲ್ಲೆ. ಹಾಗೇ ಪೆನ್ನು ಪೇಪರ್ ಹಿಡಿದು ಕೆರೆ ಏರಿ ಹಾದು ಅಂಜನಾ ನಗರದೆಡೆ ಮುಖ್ಯ ರಸ್ತೆಗೆ ತಲುಪಿ ಚಾ ಹೀರಿ ಹೇರೋಹಳ್ಳಿ ಗೇಟ್ ಬಳಸಿ ಮತ್ತೆ ಶನಿ ದೇವಾಲಯದ ಅಂಗಳದಲ್ಲೆ ಠಿಕಾಣಿ. ಹಾಗಾಗಿ ಈ ಬಯೋಗ್ರಫಿ ಓದುವಾಗ ನನ್ನನ್ನು ಬಹು ಹಿಂದಕ್ಕೆ ಕೊಂಡೊಯ್ದ ನೆನಪಿನ ಕೃತಿಯೂ ಹೌದು. ಆದರೆ ಈ ನೆನಪಿನ ಬುತ್ತಿಯಲ್ಲಿ ತರಾವರಿ ಪ್ರಶ್ನೆಗಳಿವೆ. ಆಗ ಅಲ್ಲಿದ್ದ ಕೆರೆ.. ? ಈಗ.. ? ಹೀಗೆ ಕೆಲವು ಪ್ರಶ್ನೆಗಳು ಸತ್ಯಗಳನ್ನು ಬಿಚ್ಚಿಡುವ ‘ನನ್ನವ್ವನ ಬಯೋಗ್ರಫಿ’ ಯ ಪ್ರತಿ ಪುಟಗಳೂ ಅಚ್ಚರಿಯ ವಿಚಾರಗಳನ್ನು ಕ್ವಚಿತ್ತಾಗಿ ದಾಖಲಿಸುತ್ತಾ ಹೋಗುತ್ತದೆ.
ಇಷ್ಟಾಗಿ “ನನ್ನ ಬದುಕಿನ ಒಂದು ಭಾಗವೇ ಆಗಿ ಹೋಗಿದ್ದ ನನ್ನವ್ವ ಸತ್ತಾಗ ಅವಳ ಬಳಿ ನಾನು ಇರಲಿಲ್ಲ” ಎಂಬುದು ಇಡೀ ಬಯೋಗ್ರಫಿಯ ಗದ್ಗದಿತ ದನಿಯಾಗಿದೆ.
-ಎಂ.ಜವರಾಜ್
ಪುಸ್ತಕ: ನನ್ನವ್ವನ ಬಯೋಗ್ರಫಿ
ಲೇಖಕರು: ಜಯರಾಮಾಚಾರಿ
ಪ್ರಕಾಶಕರು: ಬಹುರೂಪಿ ಪ್ರಕಾಶನ, ಬೆಂಗಳೂರು
ಬೆಲೆ: Rs. 100/-
ಸಂಪರ್ಕ ಸಂಖ್ಯೆ: ಜಯರಾಮಾಚಾರಿ- 9739082600