ಆಡಿ ಬಾ ನನ ಕಂದ ; ಅಂಗಾಲ ತೊಳೆದೇನು!: ಡಾ. ಹೆಚ್ ಎನ್ ಮಂಜುರಾಜ್,

ಮಕ್ಕಳನ್ನು ಕುರಿತು ನಮ್ಮ ಜನಪದರು ಇನ್ನಿಲ್ಲದಂತೆ ಹಾಡಿ ಹರಸಿದ್ದಾರೆ. ಜನವಾಣಿ ಬೇರು; ಕವಿವಾಣಿ ಹೂವು ಎಂದು ಆಚಾರ್ಯ ಬಿಎಂಶ್ರೀಯವರು ಹೇಳಿದಂತೆ, ಜನಪದ ಹಾಡು, ಗೀತ ಮೊದಲಾದ ಸಾಹಿತ್ಯದ ಸೃಷ್ಟಿಕರ್ತರು ಬಹುತೇಕ ಹೆಣ್ಣುಮಕ್ಕಳೇ. ಅದರಲ್ಲೂ ತವರು, ದಾಂಪತ್ಯ, ಬಡತನ, ದೇವರು, ಸೋದರರು, ಗಂಡ, ಗಂಡನಮನೆ ಹೀಗೆ ಜನಪದ ತ್ರಿಪದಿಗಳನ್ನು ಗಮನಿಸಿದರೆ ಸಾಕು, ನಮಗೆ ಅರ್ಥವಾಗುತ್ತದೆ. ಏಕೆಂದರೆ ಭಾರತೀಯ ಕುಟುಂಬ ವ್ಯವಸ್ಥೆ ಹಾಗಿತ್ತು. ಈಗಿನದೆಲ್ಲ ಮೈಕ್ರೋ ಫ್ಯಾಮಿಲಿ ಯುಗ. ಕೂಡು ಕುಟುಂಬ ಮತ್ತು ಹಿರಿಯರ ಯಾಜಮಾನ್ಯಗಳು ನಮ್ಮ ಕೌಟುಂಬಿಕ ಪದ್ಧತಿಯನ್ನು ಕಾಪಿಟ್ಟಿದ್ದವು. ಇದರಿಂದ ಅಧಿಕಾರ ಕೇಂದ್ರವು ಒಬ್ಬರಲ್ಲೇ ಮಡುಗಟ್ಟಿತ್ತು ಎಂಬುದೊಂದನ್ನು ಬಿಟ್ಟರೆ, ಬಹುತೇಕ ಸಕಾರಾತ್ಮಕವಾಗಿ ನೋಡುವುದಾದರೆ ಇಷ್ಟು ವರ್ಷಗಳ ಕಾಲ ನಮ್ಮ ದೇಶದ ಕುಟುಂಬ ವಿಧಾನ ಭದ್ರವಾದ ಬುನಾದಿಯನ್ನು ಹಾಕಿದ್ದವು.
ಆಧುನಿಕತೆ ಪ್ರಾಪ್ತವಾದಂತೆ ಬರು ಬರುತ್ತಾ ವೈಯಕ್ತಿಕತೆ ಮತ್ತು ಖಾಸಗೀತನಗಳೇ ಮುಂದಾಗಿ, ‘ಪ್ರೈವೆಸಿ’ ಎಂಬುದು ಮೌಲ್ಯವಾಗಿ ಕಾಲಕ್ಕೆ ತಕ್ಕ ಹಾಗೆ ನಮ್ಮ ಸಮಾಜೋ ಕೌಟುಂಬಿಕತೆ ವಿಘಟಿತವಾಯಿತು. ಇದು ಸರಿಯೋ ತಪ್ಪೋ ಎಂಬ ಜಿಜ್ಞಾಸೆಗೆ ನಾನು ಹೋಗುವುದಿಲ್ಲ. ಸೀಮಿತ ಜನಸಂಖ್ಯೆ, ಪೂರೈಸಬಹುದಾದ ಬಯಕೆ-ಬೇಡಿಕೆಗಳು, ಗುರು ಹಿರಿಯರ ಮೇಲಣ ಗೌರವ-ಭಯಗಳು ಸಹ ಕುಟುಂಬ ವ್ಯವಸ್ಥೆಯ ತಳಹದಿಯನ್ನು ರೂಪಿಸಿದ್ದವು. ಅದು ಹಾಗೆಯೇ ಇರಬೇಕು; ಬದಲಾಗಬಾರದು ಎಂಬ ಆಲೋಚನೆ ನನ್ನದಲ್ಲ. ಬದಲಾದದ್ದರ ಹಿನ್ನೆಲೆಗಳನ್ನು ಈ ಮೂಲಕ ನೆನಪಿಗೆ ತಂದುಕೊಳ್ಳುತ್ತಿದ್ದೇನೆ ಅಷ್ಟೇ.

ಇಂದಿನ ಬಹುತೇಕ ಯುವಜನತೆಯು ಹಿಂದಿನ ವಿಚಾರ ವಿವರಗಳತ್ತ ಕುತೂಹಲಕ್ಕಾದರೂ ಇಣುಕುನೋಟ ಹಾಕುವ ಆಸಕ್ತಿಯನ್ನು ಹೊಂದಿಲ್ಲ. ‘ನಮ್ಮಜ್ಜೀಕಾಲದ್ದು’ ಎಂಬ ಒಂದೇ ಪದದಲ್ಲಿ ಎಲ್ಲವನ್ನೂ ತಿರಸ್ಕರಿಸುವ ಉಡಾಫೆಯನ್ನು ಪ್ರದರ್ಶಿಸುವುದರಿಂದ ಒಂದೊಮ್ಮೆ ಆತಂಕವಾಗುವುದು ಸಹಜ. ನಾವು ಹೀಗೆ ಮಾತಾಡುತಿರುವಾಗಲೇ ನಮ್ಮ ಮಕ್ಕಳು ದೇಶವನ್ನು ಸುತ್ತಿ ವಿದೇಶಕ್ಕೆ ವಿಮಾನದಲ್ಲಿ ಹೋಗುವ-ಬರುವ ವಿದ್ಯಮಾನವನ್ನೂ ಕಾಣುತ್ತಿರುತ್ತೇವೆ. ನಮ್ಮ ಹಳವಂಡಗಳು ಮತ್ತು ನಾಸ್ಟಾಲ್ಜಿಯಾಗಳು ಅವರಿಗೆ ಬೇಕಾಗಿಯೂ ಇರುವುದಿಲ್ಲ. ‘ಅಮ್ಮ ಎಂದರೆ ಫಾಸ್ಟ್ಫುಡ್, ಅಪ್ಪ ಎಂದರೆ ಏಟೀಯಮ್ಮು’ ಎಂಬ ಕಾಲದಲ್ಲಿ ನಗರ ವ್ಯವಸ್ಥೆ ಬಸವಳಿಯುತ್ತಿದೆ. ಜಾಗತೀಕರಣ ಮತ್ತು ನಗರೀಕರಣಗಳು ಅತಿಯಾಗಿ ಅದರ ಅಪಾಯದ ತೀವ್ರತೆಯನ್ನು ಎದುರಿಸಲಾಗದೇ ಸಹ ನಾವು ಹಿಂದಿನ ಕಾಲವನ್ನು ನೆನಪಿಸಿಕೊಂಡು ಅಲವತ್ತುಕೊಳ್ಳುವುದೂ ಇದೆ. ಮಧ್ಯಮವರ್ಗದವರು ತಮ್ಮ ಮಕ್ಕಳು ಅಧಿಕಾರಿಗಳಾಗುವ, ಕಂಪೆನಿಯ ಸೀಈಓಗಳಾಗುವ ಕನಸು ಕಾಣುವಾಗಲೇ ಮೇಲ್ಮಧ್ಯಮ ವರ್ಗದವರು ತಮ್ಮ ಮಕ್ಕಳು ವಿದೇಶದಲಿ ಸೆಟಲ್ ಆಗುವುದನ್ನು ಕಂಡು ಏನನ್ನೂ ಹೇಳಲಾಗದೇ ಸುಮ್ಮನಾಗುತ್ತಿದ್ದಾರೆ. ಇನ್ನು ಬಹುತೇಕ ಸಿರಿವಂತರ ಮಕ್ಕಳು ತಮ್ಮ ಪೋಷಕರ ದುಡ್ಡಿನಲ್ಲಿ ಮೋಜು ಮಸ್ತಿಗಳನ್ನು ನಡೆಸುತ್ತಾ ರಾಜಕೀಯ ಆರ್ಥಿಕ ಸಾಮಾಜಿಕ ಶೈಕ್ಷಣಿಕ ರೀತಿನೀತಿಗಳನ್ನೂ ಸಿದ್ಧಾಂತ ರಾದ್ಧಾಂತಗಳನ್ನೂ ಕ್ಲಬ್ಬು-ಪಬ್ಬು-ಹೊಟೆಲಿನ ಟೇಬಲುಗಳಲ್ಲಿ ಚರ್ಚಿಸುತ್ತಾ ಸಮಯವನ್ನು ಕಳೆಯುವ ಪ್ಲಾನುಗಳನ್ನು ಹಾಕಿಕೊಳ್ಳುತ್ತಿರುತ್ತಾರೆ. ಹಾಗಂತ ಅವರು ದುಡಿಯುವುದಿಲ್ಲ ಎಂದಲ್ಲ. ದುಡಿಮೆಯ ಪರಿಕಲ್ಪನೆಯು ಈಗ ಬದಲಾಗಿದೆ. ರಿಯಲ್ ಎಸ್ಟೇಟುಗಳ ವ್ಯವಹಾರಗಳು ಇಂದು ಜಾಣರ ಲೆಕ್ಕಾಚಾರಗಳಾಗಿ ಕಪ್ಪುಹಣದ ಕೇಂದ್ರವಾಗಿ ದಿಢೀರ್ ಶ್ರೀಮಂತರಾಗುವ ಪವಾಡವಾಗಿ ರಕ್ತಬೀಜಾಸುರವಾಗಿದೆ. ಹೊಟೆಲೋದ್ಯಮವು ಅದ್ಭುತವಾಗಿ ಬೆಳೆಯುತ್ತಿದೆ. ಕೇಟರಿಂಗ್ ಎಂಬುದು ಒಂದಲ್ಲ ಒಂದು ಬಗೆಯಲ್ಲಿ ಎಲ್ಲರಿಗೂ ಅಗತ್ಯವಾಗಿ ಬೇಕಾದಂಥ ಅನುಕೂಲವಾಗಿದೆ. ತಂತ್ರಜ್ಞಾನವು ಒಂದು ಕಡೆ ಅನ್ಸ್ಕಿಲ್ಡ್ ಲೇಬರನ್ನು ಕೈ ಬಿಡುತ್ತಾ ಸ್ಕಿಲ್ಡ್ ಲೇಬರನ್ನು ತನ್ನ ತೆಕ್ಕೆಗೆ ಒಳಗೊಳಿಸಿಕೊಳ್ಳುತ್ತಿದೆ. ಏಕ್ದಂ ಪ್ರಪಂಚವು ವಾಣಿಜ್ಯದ ಮಹಾಗೋಲವಾಗಿ ಪರಿವರ್ತಿತವಾಗಿದೆ. ಕಳೆದ ನೂರು ವರುಷಗಳಲ್ಲಿ ಆದ ಬದಲಾವಣೆಯ ವೇಗ ಮತ್ತು ದರಗಳಿಗಿಂತ ಹತ್ತು ವರುಷಗಳಲ್ಲಿ ಆದ ವೇಗ ಮತ್ತು ದರಗಳು ಏಕಕಾಲಕ್ಕೆ ಅಚ್ಚರಿಯನ್ನೂ ಆಘಾತವನ್ನೂ ತರಿಸುತ್ತವೆ. ಹೀಗಿರುವಾಗ ಈ ಎಲ್ಲದರಿಂದ ಪ್ರಭಾವಿತವಾದ ಕುಟುಂಬ ವ್ಯವಸ್ಥೆ ಬೇರೊಂದು ದಿಕ್ಕಿನತ್ತ ಮುಖ ಮಾಡಿದೆ. ಬಹುತೇಕ ಪಶ್ಚಿಮದವರ ಆ್ಯಟಿಟ್ಯೂಡ್ ಅನ್ನು ಅಳವಡಿಸಿಕೊಳ್ಳುತ್ತಿದೆ. ಸಂಸ್ಕೃತಿಯ ವಿಚಾರದಲ್ಲಿ ಇದು ನಮ್ಮದು, ಅದು ನಿಮ್ಮದು ಎಂಬ ಭೇದಭಾವ ಹೊರಟು ಹೋಗುತ್ತಿದೆ; ಅನುಕೂಲ ಸಿಂಧುವಷ್ಟೇ ವಿಜೃಂಭಿಸುತ್ತಿದೆ. ಇಂಥ ಹೊತ್ತಿನಲ್ಲಿ ಶಿಕ್ಷಣ, ಉದ್ಯೋಗ, ಸಂಪಾದನೆ, ಸಂಬಂಧ, ಮದುವೆ, ಮನೆ, ಮಕ್ಕಳು ಮೊದಲಾದ ಅಂಶಗಳು ಗಣನೀಯ ತಿರುವುಗಳನ್ನು ಪಡೆದುಕೊಂಡಿವೆ. ನಾವು ನಮ್ಮ ಪೋಷಕರಂತೆ ಆಲೋಚಿಸಿದ ಹಾಗೆ, ನಮ್ಮ ಮಕ್ಕಳು ನಮ್ಮಂತೆ ಆಲೋಚಿಸಲು ಬಯಸುವುದಿಲ್ಲ ಎಂಬ ಕಡುವಾಸ್ತವವನ್ನು ಒಪ್ಪಿಕೊಳ್ಳಲೇಬೇಕಿದೆ.

ಶುದ್ಧ ಗ್ರಾಮೀಣ ಬದುಕನ್ನು ಸುಸ್ಪಷ್ಟವಾಗಿ ತೆರೆದಿಡುವ ಜನಪದರು ನಿರ್ವಂಚನೆಯಿಂದ ಕೌಟುಂಬಿಕ ಸಂಬಂಧದ ಭಾವನಾತ್ಮಕತೆಯನ್ನು ಕರುಳಿಗೆ ತಟ್ಟುವಂತೆ ಚಿತ್ರಿಸಿದ್ದಾರೆ. ‘ನನ್ನಯ್ಯನಂತೋರು ಹನ್ನೇಡು ಮಕ್ಕಳು, ಹೊನ್ನೆಯ ಮರದ ಬುಡದಲ್ಲಿ ಆಡುವಾಗ ಸಂನ್ನೇಸಿ ಜಪವ ಮರೆತಾನು’ ಎಂಬ ಸಾಲುಗಳಂತೂ ಮಕ್ಕಳಾಟದ ಬೆರಗನ್ನು ಅಲ್ಟಿಮೇಟಾಗಿ ವರ್ಣಿಸುತ್ತವೆ. ದಾಂಪತ್ಯ, ಕುಟುಂಬಗಳೇ ಬೇಡವಾಗಿ ವಿರಕ್ತಿಗೊಂಡು ಪರದ ಚಿಂತನೆಯಲ್ಲಿ ತೊಡಗಿ ಜಪತಪಗಳನ್ನು ಆಚರಿಸಲು ಪದ್ಮಾಸನ ಹಾಕಿಕೊಂಡು ಕುಳಿತ ಹೊತ್ತಲಿ ಅಲ್ಲೆಲ್ಲೋ ಸಮೀಪದ ಹೊನ್ನೆಯ ಮರದ ಕೆಳಗೆ ಮಕ್ಕಳಾಡುವುದನು ನೋಡಿ ತನ್ನಿರವನ್ನೇ ಮರೆತನಂತೆ. ಎಷ್ಟು ಚೆಂದದ ಬಣ್ಣನೆ! ಆ ಮಟ್ಟಿಗೆ ಲೌಕಿಕದ ಸೆಳೆತ; ಮತ್ತೆ ಮರಳಿ ತನ್ನ ದಾಂಪತ್ಯಕೆ ಸೆಳೆವ ಭರತ. ತನ್ನ ಸ್ವಂತ ಕುಟುಂಬದ ನೆನಪುಗಳು ನುಗ್ಗಿ ಬಂದು ಕಣ್ಣಂಚು ತೇವವಾಗಿರಬೇಕು. ಇನ್ನೊಂದು ತ್ರಿಪದಿಯಲ್ಲಿ ತಾಯಿಯಾದವಳು ತನ್ನ ಮಗುವಿಗೆ ಹೇಳುತ್ತಾಳೆ: ‘ಆಡಿ ಬಾ ನನ ಕಂದ, ಅಂಗಾಲ ತೊಳೆದೇನು, ತೆಂಗೀನಕಾಯಿ ಎಳನೀರ ತಕ್ಕೊಂಡು ನಿನ ಬಂಗಾರ ಮೋರೆ ತೊಳೆದೇನು!’ ಆಟವಾಡುವ ತನ್ನ ಮಗುವನ್ನು ತಾಯಿಕರುಳು ಹೀಗೆ ಮುದ್ದಿಸುತ್ತದೆ, ಮುದಗೊಳಿಸುತ್ತದೆ. ಹರಸುತ್ತದೆ ಕೂಡ. ‘ಕೂಸು ಕಂದಯ್ಯ ಒಳ ಹೊರಗ ಆಡಿದರೆ ಬೀಸಣಿಗೆ ಗಾಳಿ ಸುಳಿದಾವು’ ಎನ್ನುವ ಇನ್ನೊಂದು ಅದ್ಭುತವಾದ ರೂಪಕವಿದೆ. ಹೊಸಿಲು ದಾಟಿದ ಮಗು ಮನೆಯ ಒಳಗೂ ಹೊರಗೂ ಅಂಬೆಗಾಲಿಟ್ಟು ಓಡಾಡುವ, ಹಾಗೆಯೇ ನಡಿಗೆ ಕಲಿತು ತನ್ನ ಚೆಂದದ ಪುಟ್ಟ ಪಾದಗಲ ಗುರುತು ಮೂಡಿಸಿ ನಲಿವ ಮಗುವು ತಾಯಿಗೆ ಸ್ವರ್ಗದೇಣಿ. ಕೂಸು ಕಂದಯ್ಯ ಒಳ ಹೊರಗೆ ಆಡಿದರೆ ಎಂಬ ಸಾಲನ್ನು ಬೇಕೆಂದೇ ನನ್ನ ಇಷ್ಟದಂತೆ ಎಳೆದಾಡಿಕೊಳ್ಳಲು ಹೊರಡುವೆ: ಇಲ್ಲಿ ಒಳಗೆ ಎಂದರೆ ನಮ್ಮ ಊರಿನ, ಸಮೀಪದ ಎಂದೂ ಹೊರಗೆ ಎಂದರೆ ನಮ್ಮ ಊರಾಚೆ, ದೂರದ, ವಿದೇಶದ ಎಂದೂ ಅರ್ಥೈಸಿಕೊಂಡರೆ ಈ ಕಾಲಮಾನದ ಚಹರೆಗಳಿಗೆ ಇನ್ನಷ್ಟು ಮಗ್ಗಲುಗಳು ತೆರೆದುಕೊಳ್ಳುತ್ತವೆ. ಹಾಗಾಗಿ ನಾನು ಈ ಪ್ರಬಂಧ ಲಹರಿಯಲ್ಲಿ ನಮ್ಮ ಮಕ್ಕಳು ವಿದೇಶಕೆ ಹೋಗಿ ಬರುವ ಕುರಿತ ಜೊತೆಗೆ ಆ ಸಂಬಂಧದ ಪೋಷಕರ ಪರಿಣಾಮಗಳ ಒಂದಷ್ಟು ವಿಚಾರಗಳನ್ನು ಅಭಿವ್ಯಕ್ತಿಸಲು ಇಚ್ಛಿಸುವೆ.

ಮಕ್ಕಳ ಬಗ್ಗೆ ಮಾತಾಡುವುದೆಂದರೆ ನಮ್ಮ ಬಗ್ಗೆಯೇ ಬರೆದಂತೆ ಅಂತ ನಾನೊಂದು ಕಡೆ ಗುರುತು ಹಾಕಿದ್ದೆ. ಅಂದರೆ ಆ ಮಟ್ಟಿಗೆ ಚಿಕ್ಕವರು ಮತ್ತು ದೊಡ್ಡವರು ಒಂದೇ. ದೊಡ್ಡವರಾಗುವ ಮೊದಲು ಪುಟ್ಟವರಾಗಿದ್ದೆವು. ಹಾಗೆಯೇ ಪುಟ್ಟವರಾಗಿದ್ದವರು ದೊಡ್ಡವರಾಗುತ್ತಾರೆ. ಇದು ನಿಸರ್ಗ ಸಹಜ. ನಮ್ಮ ಜೀವದ, ನಮ್ಮ ಬದುಕಿನ ಮುಂದುವರೆದ ಭಾಗವೇ ಮಕ್ಕಳು. ನಮ್ಮ ನಂತರವೂ ನಾವು ನಮ್ಮ ಮಕ್ಕಳ ಮೂಲಕ ಬದುಕಿರುತ್ತೇವೆ; ಬದುಕಿರಬೇಕು ಕೂಡ. ಕೇವಲ ಆನುವಂಶಿಕವಾಗಿಯಲ್ಲ; ಸಮಾಜೋ ಸಾಂಸ್ಕೃತಿಕವಾಗಿಯೂ! ಅಂಥದೊಂದು ವ್ಯವಸ್ಥೆ ನಮ್ಮ ಈ ಸೃಷ್ಟಿಯಲ್ಲಿದೆ. ಹಿಂದೆ ಇದು ನೂರಕ್ಕೆ ನೂರರಷ್ಟು ಆಗುತ್ತಿತ್ತು. ಈಗ ಶೇಕಡಾವಾರು ಪ್ರಮಾಣ ಕಡಮೆಯಾಗಿದೆ. ಅದಕ್ಕೆ ಅನ್ಯ ಕಾರಣಗಳೂ ಇವೆ. ಅತಿ ವೇಗವಾಗಿ ಎಲ್ಲವೂ ಬದಲಾಗುತ್ತಿರುವುದರಿಂದ ನಮ್ಮ ಸಂಸ್ಕೃತಿ – ಆಲೋಚನಗಳು ನಮ್ಮ ಮಕ್ಕಳಲ್ಲಿ ಹೆಚ್ಚು ಪ್ರತಿಬಿಂಬಿಸುತ್ತಿಲ್ಲ. ಇದು ಸರಿ ತಪ್ಪುಗಳ ಜಿಜ್ಞಾಸೆ ಅಲ್ಲ. ಹುಟ್ಟಿದಂದಿನಿಂದಲೂ ತಾಯ್ತಂದೆಗಳ ಬಳಿಯಲ್ಲೇ ಬೆಳೆಯುವುದರಿಂದ ಸಹಜವಾಗಿಯೇ ಮಕ್ಕಳಿಗೆ ಬೆಳೆಸಿದವರ ಪ್ರಭಾವ ಪ್ರೇರಣೆ ಉಂಟಾಗುತ್ತದೆ. ಆಲೋಚನಾ ಶಕ್ತಿ ಬಂದ ಮೇಲೆ ತಾಯ್ತಂದೆಗಳ ಪದ್ಧತಿ ಪಾಂಗಿತಗಳನ್ನೇ ಅನುಸರಿಸಬೇಕೋ? ಬೇಡವೋ ಅನ್ನುವುದು ಗೊಂದಲವಾಗಿ ತಮಗೆ ಸರಿ ಕಂಡದ್ದನ್ನು ಮುಂದುವರೆಸುತ್ತಾರೆ ಅಥವಾ ಸರಿಯಲ್ಲ ಎನಿಸಿದ್ದನ್ನು ಕೈ ಬಿಡುತ್ತಾರೆ. ಈ ವಿಚಾರದಲ್ಲಿ ಹೀಗೆಯೇ ಇಂಥದನ್ನೇ ಅನುಸರಿಸಬೇಕೆಂದು ನಿಯಮ ಮಾಡಬಾರದು. ಮಾಡಿದರೆ ಅದು ತಪ್ಪು ಅಷ್ಟೇ.

ನಮ್ಮ ಸ್ನೇಹಿತರ ಮನೆಗೆ ಬಾಡಿಗೆಗಾಗಿ ಒಬ್ಬರು ಸಂಪರ್ಕಿಸಿದ್ದರು. ನನ್ನ ಮಡದಿಯು ಗರ್ಭಿಣಿ. ಮುಂದೆ ಹುಟ್ಟಲಿರುವ ನನ್ನ ಮಗುವು ಸುಂದರವಾದ ಮತ್ತು ಸುಸಂಸ್ಕøತ ವಾತಾವರಣದಲ್ಲಿ ಬೆಳೆಯಬೇಕು ಅಂದರು. ಗರ್ಭದಲ್ಲಿರುವಾಗಲೇ ಇಂಥದೊಂದು ಅಗತ್ಯ ಇದೆ ಅನ್ನುವುದು ಅವರ ನಂಬಿಕೆ. ಮಗು ಇನ್ನೂ ಹುಟ್ಟೇ ಇಲ್ಲ, ಆಗಲೇ ಇಷ್ಟೊಂದು ಪ್ರಿಕಾಶನರಿ ಅಂತ ನಾನು ಹಗುರವಾಗಿ ತೆಗೆದುಕೊಂಡೆ. ಆಮೇಲೆ ನೆನಪಾಯಿತು. ಜೈನ ಸಾಹಿತ್ಯದಲ್ಲಿ ಪಂಚಕಲ್ಯಾಣವು ಅತೀವವಾಗಿ ವರ್ಣಿತವಾಗಿರುವುದು. ಬಾಲಕನು ಗರ್ಭ ತಳೆದು ಜನಿಸಿ ತೀರ್ಥಂಕರ ಆಗುವವರೆಗೂ ಜೀವನದ ಅತ್ಯಮೂಲ್ಯ ಘಟನೆಗಳನ್ನು ಮರುಸೃಷ್ಟಿಸಿ ಕಣ್ಣೆದುರಿಗೆ ಕಟ್ಟಿಕೊಡುವುದು. ಗರ್ಭ ಕಲ್ಯಾಣ, ಜನ್ಮ ಕಲ್ಯಾಣ, ದೀಕ್ಷಾ ಕಲ್ಯಾಣ, ಕೇವಲಜ್ಞಾನ ಕಲ್ಯಾಣ ಮತ್ತು ಮೋಕ್ಷ ಕಲ್ಯಾಣ ಎಂಬ ಐದು ಬಗೆಯವು.

ಇದರ ಜೊತೆಗೇ ನೆನಪಾಗಿದ್ದು ಅಭಿಮನ್ಯುವಿನ ಪ್ರಸಂಗ. ಮಗುವು ಗರ್ಭದಲ್ಲಿರುವಾಗಲೇ ಚಕ್ರವ್ಯೂಹದ ಒಳಗೆ ಹೋಗುವ ರಹಸ್ಯವನ್ನು ಅರಿತಂತೆ. ರವಿ ಬೆಳಗೆರೆಯವರ ಭ್ರೂಣ ಸಂಭಾಷಣೆ ಎಂಬ ಕತೆಯನ್ನು ಓದಿದ್ದು ಸಹ ಸ್ಮರಣೆಗೆ ಬಂದು ಹಾಗೆಲ್ಲ ಯಾವುದನ್ನೂ ಹಗುರವಾಗಿ ತೆಗೆದುಕೊಳ್ಳಬಾರದು ಅಂತ ಮನದಲ್ಲಿ ನೊಂದೆ. ಕೆಲವು ಸಲ ನಮಗೆ ಇನ್ನೊಬ್ಬರ ಮಾತು ಮತ್ತು ನಡವಳಿಕೆಗಳು ಅತಿರೇಕ ಅಂತ ಅನ್ನಿಸುವುದು ಸಹಜ; ಅವರಮಟ್ಟಿಗೆ ಅದು ಗಂಭೀರ. ಲೋಕೋಭಿನ್ನರುಚಿಃ ಅಂತ ಸುಮ್ಮನಾಗಬೇಕಷ್ಟೆ.

ಹೀಗೆ ಮಕ್ಕಳನ್ನು ಬೆಳೆಸುವ ವಿಧಿಪೂರ್ವಕ ವೇಳಾಪಟ್ಟಿಯನ್ನು ಕೆಲವು ಪೋಷಕರು ಸಿದ್ಧ ಮಾಡಿಕೊಂಡಿರುತ್ತಾರೆ. ಕೆಟ್ಟ ಮಾತು ಮತ್ತು ಬೈಗುಳಗಳು ಕಿವಿಗೆ ಬೀಳಬಾರದು ಅಂತ ನನ್ನೋರ್ವ ಸ್ನೇಹಿತರು ಬಡಾವಣೆಯ ಮಕ್ಕಳ ಜೊತೆ ಆಟಕ್ಕೇ ಕಳಿಸುತ್ತಿರಲಿಲ್ಲ. ‘ಕೋವಿಡ್’ ಅವಧಿ ಮುಗಿದು ಮಾಮೂಲಿ ‘ಡೇವಿಡ್’ ಕಾಲ ಮತ್ತೆ ಬಂದಾಗ ಮುಂಚಿನಂತೆ ಶಾಲೆಗಳು ತೆರೆದವು. ಅಲ್ಲಿನ ಮಕ್ಕಳಲ್ಲಿ ಹಲವು ಮಂದಿ ಸುತ್ತಮುತ್ತಲ ಹಳ್ಳಿಗಳಿಂದ ಬರುವಂಥವರು. ಈಗ ಪೋಷಕರಾದವರಿಗೆ ಹೊಸ ರೀತಿಯ ಜ್ಞಾನೋದಯವಾಗಿದೆ. ಲಕ್ಷಾಂತರ ದುಡ್ಡು ಕೊಟ್ಟು ಕೇಂದ್ರೀಯ ಶಾಲೆಗೆ ಸೇರಿಸಲು ಹಿಂದೆ ಮುಂದೆ ನೋಡರು. ಎಲ್ಲ ಪೋಷಕರಿಗೂ ತಮ್ಮ ಮಕ್ಕಳು ಇಂಗ್ಲಿಷ್ ಮೀಡಿಯಮ್ಮಿನಲ್ಲಿ ಓದಿ ‘ದೊಡ್ಡಾಪಿಸರಾಗಬೇಕು’ ಅನ್ನುವ ಹಪಾಹಪಿ. ಹೀಗಿರುವಾಗ ಆ ಮಕ್ಕಳು ಕನ್ನಡದಲ್ಲೇ ಏನೇನೋ ಮಾತಾಡುವಾಗ ಮನೆಯಲ್ಲೇ ದ್ವೀಪಜೀವಿಗಳಂತಾಗಿದ್ದ ಮಕ್ಕಳು ಸಹಜವಾಗಿಯೇ ಚಡಪಡಿಸಿದರು. ಎಷ್ಟೇ ಮುಚ್ಚಿಟ್ಟು, ಜತನ ಮಾಡಿದರೂ ಕೊನೆವರೆಗೂ ನಾವು ಮಕ್ಕಳ ಜೊತೆ ಇರಲು ಸಾಧ್ಯವೇ? ಹೀಗಾಗಿ ಒಂದು ಗ್ಯಾಪು ಕ್ರಿಯೇಟಾಯಿತು. ನಾಜೂಕಾಗಿ ಬೆಳೆಸಿದ ಮಕ್ಕಳು ನಾಜೂಕಲ್ಲದ ರೀತಿಯಲ್ಲಿ ಬೆಳೆದ ಮಕ್ಕಳ ಜೊತೆ ಸಂವಹನಿಸುವಾಗ ಮತ್ತು ಜೊತೆಗಿದ್ದು ವಿದ್ಯಾಭ್ಯಾಸ ಮಾಡುವಾಗ ಕೆಲವೊಂದು ತೊಂದರೆ-ಸವಾಲುಗಳನ್ನು ಎದುರಿಸಬೇಕಾಗುತ್ತದೆ. ‘ನೀರಿಗಿಳಿದೇ ಈಜು ಕಲಿಯಬೇಕು’ ಎನ್ನುವಂತೆ ಇಂಥವನ್ನು ಮುಖಾಮುಖಿ ಎದುರಿಸಿಯೇ ಪ್ರಸಂಗಗಳನ್ನು ಹ್ಯಾಂಡಲ್ ಮಾಡಬೇಕು. ಮನೆಯಲ್ಲಿ ಹೇಳಿಕೊಟ್ಟ ಮಾತು ಮತ್ತು ಕಟ್ಟಿಕೊಟ್ಟ ಬುತ್ತಿ ಕೊನೆವರೆಗೂ ಬರುವುದೇ ಇಲ್ಲ. ಕೋಟಿವಿದ್ಯೆ ಕಲಿಯಲು ಹೋಗಿ ಮೇಟಿ ವಿದ್ಯೆಯನು ಮರೆತು ‘ಇರುವ ಒಂದು ಬದುಕನ್ನು’ ಪ್ರಾಯೋಗಿಕವಾಗಿ ಎದುರುಗೊಳ್ಳಲು ವಿಫಲವಾಗುವರು. ಗಿಳಿಯೋದು ಕೇಳಲು ಚಂದ; ಆದರೆ ಉಪಯೋಗವೇನು?

ಬಹುಶಃ ಪ್ರಪಂಚದ ಅತಿ ದೊಡ್ಡ ಟಾಸ್ಕು ಎಂದರೆ ಮಕ್ಕಳನ್ನು ಬೆಳೆಸುವುದು. ಇದು ನಮ್ಮಂಥ ಭಾರತೀಯ ಸಮಾಜದಲ್ಲಿ ಸಮಸ್ಯೆಯಾಗಿರಲಿಲ್ಲ. ಬೆಳೆಸುವುದು ಎಂದರೇನು? ಅವೇ ಬೆಳೆದುಕೊಳ್ಳುತ್ತವೆ ಎಂದುಕೊಂಡು ಪೋಷಕರು ನಿರುಮ್ಮಳವಾಗಿದ್ದರು. ‘ಮಳೆ ಬರುವುದು; ಮಕ್ಕಳಾಗುವುದು ನಮ್ಮ ಕೈಯಲ್ಲಿಲ್ಲ’ ಎಂಬ ಕಾಲಮಾನವದು. ಮಳೆ ಬರುವುದು ಅಥವಾ ಬರಿಸುವುದು ನಮ್ಮ ಕೈಯಲಿಲ್ಲ ಎಂಬುದು ಈಗಲೂ ಸರಿ. ಆದರೆ ಮಕ್ಕಳಾಗುವುದು, ಬಿಡುವುದು ನಮ್ಮ ಕೈಯಲ್ಲೇ ಇದೆ! ಎಂಬ ಜಾಗೃತಿ ಮೂಡಿದ ಮೇಲೆ ಅಕ್ಷರಶಃ ಜನಸಂಖ್ಯಾ ಸ್ಫೋಟವಾಗಿ, ಅದರ ನಿಯಂತ್ರಣ ನಡೆದ ನಂತರ ‘ಮಕ್ಕಳು ಮತ್ತು ಪೋಷಕರು’ ಎಂಬ ಎರಡು ಕೆಟಗರಿ ಹುಟ್ಟಿಕೊಂಡವು. ‘ಹತ್ತು ಕಟ್ಟುವ ಕಡೆ ಒಂದು ಮುತ್ತು ಕಟ್ಟು’ ಎಂಬಂತೆ, ‘ಆರತಿಗೊಬ್ಬ ಮಗಳು; ಕೀರುತಿಗೊಬ್ಬ ಮಗ’ ಎಂಬ ಕುಟುಂಬ ಯೋಜನೆ ಬಂತು; ಅದು ಯಶಸ್ವಿಯೂ ಆಯಿತು. ‘ಒಬ್ಬ ಮಗ ಮಗನಲ್ಲ; ಒಂದು ಕಣ್ಣು ಕಣ್ಣಲ್ಲ’ ಎಂಬ ಗಾದೆಯೂ ಇದೆ. ಅದರಲ್ಲೂ ‘ಅಪುತ್ರಸ್ಯ ಗತಿರ್ನಾಸ್ತಿ’ ಎಂಬುದನ್ನು ಯಾವ ಪುಣ್ಯಾತ್ಮ ಹೇಳಿದನೋ? ಅದರಂತೆ ಗಂಡುಸಂತಾನವೇ ಬೇಕೆಂದು ಒಂದಾದ ಮೇಲೊಂದರಂತೆ ಮಕ್ಕಳನ್ನು ಮಾಡಿಕೊಂಡವರೇನೂ ಕಡಮೆಯಿಲ್ಲ. ಅಪರಕರ್ಮಗಳನ್ನೂ ವರ್ಷಕ್ಕೊಂದರಂತೆ ತಿಥಿಕರ್ಮಗಳನ್ನೂ ಮಾಡಲು ಗಂಡು ಮಕ್ಕಳು ಬೇಕೆಂದು ಹಠ ಹಿಡಿದವರ ಪೈಕಿ ಗಂಡಸರಿಗಿಂತ ಹೆಂಗಸರೇ ಹೆಚ್ಚು. ಗಂಡು ಹೆರದ ತನಗೆ ಗಂಡನ ಮನೆಯ ಕಡೆಯವರು ಅಸಡ್ಡಾಳ ಮಾಡುತ್ತಾರೆಂಬುದೂ ಹೆಂಗಸರ ಚಡಪಡಿಕೆಯಾಗಿತ್ತು. ಗಂಡಸರಾದವರು ‘ಇದ್ದಾಗಲೇ ತಿಥಿಯಾಗಿ ಹೋಗಿದ್ದೇನೆಂದುಕೊಂಡು’ ಅವರು ಅಪರಕರ್ಮಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಾರರು. ಆದರೆ ತಾವು ಕೂಡಿಟ್ಟ, ಪಿತ್ರಾರ್ಜಿತವಾಗಿ ಬಂದ, ಹೊಡೆದ, ದೋಚಿದ ಎಲ್ಲ ಆಸ್ತಿಪಾಸ್ತಿಗಳಿಗೆ ಗಂಡುಮಕ್ಕಳೇ ಉತ್ತರಾಧಿಕಾರಿಗಳಾಗಬೇಕು ಎಂದು ಭಾವಿಸಿದ ದಂಪತಿಗಳೇ ಹೆಚ್ಚು. ಹೀಗೆ ಮನುಷ್ಯನ ಹೆಸರು ಮತ್ತು ಆಸ್ತಿಮೋಹಗಳು ಎಲ್ಲ ಮದಗಳಿಗಿಂತಲೂ ಹೆಚ್ಚಾದದ್ದು. ಇರಲಿ. ಇವೆಲ್ಲ ಈಗ ಕಡಮೆಯಾಗಿದೆ. ಕಾಲ ಬದಲಾಯಿತೋ ಇಲ್ಲವೋ ನಮ್ಮ ದೃಷ್ಟಿಕೋನವಂತೂ ಬದಲಾಗಿದೆ. ‘ಗಂಡೋ ಹೆಣ್ಣೋ ಒಂದು ಮಗು ಸಾಕು’ ಎಂಬುದು ಈಗ ಓದಿದ ಮತ್ತು ವಿವೇಚನೆ ಇರುವ ಎಲ್ಲರ ತೀರ್ಮಾನವಾಗಿದೆ. ಈಗಂತೂ ಇನ್ನೂ ಬದಲಾಗಿದೆ. ಓದಿದವರು ಮದುವೆಯೇ ಆಗುತ್ತಿಲ್ಲ, ಜೊತೆಗೆ ಮದುವೆಯಾಗಲು ಒಪ್ಪುತ್ತಿಲ್ಲ! ಅವರಿಗೆ ವಿವಾಹ ಎಂಬ ಸಮಾಜೋಕೌಟುಂಬಿಕ ಸಂಸ್ಥೆಯಲ್ಲಿ ನಂಬುಗೆ ಹೊರಟು ಹೋಗಿದೆ. ಮತ್ತು ಲಿವ್ಇನ್ಗಳಲ್ಲಿ ತಮ್ಮ ಬದುಕನ್ನು ಕಂಡುಕೊಂಡಿದ್ದಾರೆ. ‘ಸಿಂಗಲ್ ಪೇರೆಂಟ್’ ಎಂಬುದು ಸಿಂಡ್ರೋಮಾಗಿ ಬಿಟ್ಟಿದೆ. ವಿವಾಹೇತರ ಮತ್ತು ವಿವಾಹೋತ್ತರ ಸಂಬಂಧಗಳು ಹೆಚ್ಚಾಗುತ್ತಿದೆ. ಕೇವಲ ನೈತಿಕ ಚೌಕಟ್ಟಿನಲ್ಲಿಟ್ಟು ಪ್ರಶ್ನಿಸುವುದೊಂದನ್ನು ಬಿಟ್ಟರೆ ಇನ್ನುಳಿದಂತೆ ಯಾವ ರೀತಿಯಲ್ಲೂ ಕ್ಲೇಮು ಮಾಡಲು ಬರುವುದೂ ಇಲ್ಲ! ಏಕೆಂದರೆ ವ್ಯಭಿಚಾರವನ್ನು ಕಾನೂನಾತ್ಮಕವಾಗಿ ಪ್ರಶ್ನಿಸಲಾಗದು. ಅವರವರ ಇಷ್ಟಾನಿಷ್ಟಗಳ ವ್ಯಾಪ್ತಿಗೆ ಇದು ಬರುವುದರಿಂದ ಎಲ್ಲವೂ ಪರ್ಸನಲ್ಲಾಗಿ ಹೋಗಿದೆ. ಇನ್ನು ಮಗುವನ್ನು ಹೆರುವ, ಹೊರುವ ನೋವು-ಹಿಂಸೆಗಳು ಬೇಡವೇ ಬೇಡ, ಮಗು ನಮ್ಮದೇ ಆಗಬೇಕೆಂದೇನಿಲ್ಲ ಎಂಬ ವೈಶಾಲ್ಯವು ಹೆಚ್ಚಾಗಿ ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದು ರೂಢಿಯಾಗುತ್ತಿದೆ. ‘ದಾಂಪತ್ಯದ ಸಾರ್ಥಕ್ಯವಿರುವುದು ಸಂತಾನದಲಿ’್ಲ ಎಂಬ ಬಲವಾದ ತತ್ತ್ವಕ್ಕೆ ಹೊಡೆತ ಬಿದ್ದಿದೆ. ದಾಂಪತ್ಯದ ಅಡಿಗಲ್ಲು ಸಂತಸವಷ್ಟೇ ಎನ್ನುವಂತಾಗಿದೆ. ಹಿಂದಿನವರಿಗೆ ಇದರ ಅಗತ್ಯವಿತ್ತು. ಕುಟುಂಬವು ಮುಂದುವರಿಯಲು ಸಂತಾನವೇ ಮೀಟುಗೋಲಾಗಿತ್ತು. ವಂಶ ಬೆಳೆಸುವುದು ಎನ್ನುವುದು ಹೆಮ್ಮೆಯ ಮತ್ತು ಪ್ರತಿಷ್ಠೆಯ ವಿಷಯವಾಗಿತ್ತು. ನಮ್ಮ ನಂತರ ಏನಾದರೇನು? ಪ್ರಪಂಚ ಇದ್ದರೆಷ್ಟು? ಹೋದರೆಷ್ಟು? ಎಂಬುದೀಗ ಬಲವಾಗುತ್ತಿದೆ. ಇದೊಂದು ಹೊಸ ರೀತಿಯ ಅಸ್ತಿತ್ವ ಮತ್ತು ಅಸಂಗತವಾದವಾಗಿ ಬೆಳೆಯುತ್ತಿದೆ.

ಇಂಥವು ಐಟಿ ಬೀಟಿ ಜನಗಳ ಆಲೋಚನೆ ಎಂದು ಉಳಿದವರು ತಮ್ಮ ಪಾಡಿಗೆ ತಾವು ತಮ್ಮ ಮಕ್ಕಳ ಏಳಿಗೆಗೆ ಹಾತೊರೆಯುತ್ತಿದ್ದಾರೆ. ಇವರಿನ್ನೂ ಯಾವ ಕಾಲದಲ್ಲಿದ್ದಾರೆ? ಎಂದು ಒಂದು ಅಂತರ ಕಾಯ್ದುಕೊಂಡು ಐಟೀಬೀಟಿ ಮಂದಿ ಮಾತ್ರ ವಿದೇಶದ ಇಂಥ ‘ಅನುಕೂಲಸಿಂಧು ಜೀವನವಿಧಾನ’ವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇಲ್ಲೆಲ್ಲ ಸರಿತಪ್ಪುಗಳ ನಿರ್ಣಯಕ್ಕಿಂತ ಅವರವರ ಬದುಕು ಅವರವರದು. ಹೇಗೆ ಬದುಕಬೇಕೆಂಬುದು ಅವರ ಆಯ್ಕೆ. ನಾವು ಮೂಗು ತೂರಿಸುವುದು ಸಭ್ಯತೆಯಲ್ಲ ಮಾತ್ರವಲ್ಲದೇ ಸಂಸ್ಕೃತಿಯೂ ಅಲ್ಲ! ಎಂಬ ನಿರ್ಣಯಕ್ಕೆ ನಿಧಾನವಾಗಿಯಾದರೂ ಸಮಾಜ ಬರುತ್ತಿದೆ.

ಇದು ಎಲ್ಲ ಕಾಲದಲ್ಲೂ ಇದ್ದದ್ದೇ! ಎಂದು ಅಂದುಕೊಳ್ಳಬಹುದಾದರೂ ನಮ್ಮ ಕಾಲಮಾನವು ಹಲವು ಸ್ಥಿತ್ಯಂತರಗಳನ್ನು ಕಾಣುತ್ತಿದೆ ಎಂಬುದು ಮಾತ್ರ ನಿಜ. ಅದರಲ್ಲೂ ಕುಟುಂಬ ವ್ಯವಸ್ಥೆಯು ಹಲವು ರೀತಿಯ ಪ್ರಯೋಗಗಳಿಗೆ ಒಳಪಟ್ಟು ಸಾಂಪ್ರದಾಯಿಕ ವಿಧಾನದಲ್ಲಿ ಜೀವಿಸುತ್ತಿರುವವರು ಉಳಿದ ವಿಧಾನಗಳನ್ನು ಉಪೇಕ್ಷಿಸಿ ಮೂಗು ಮುರಿಯುತ್ತಾರೆ. ನನ್ನ ತಾಯ್ತಂದೆಯರು ನನಗೆ ಸಂಪ್ರದಾಯದ ಗೊಡ್ಡು ಎಂದು ಕಂಡ ಹಾಗೆಯೇ ನಾನು ನನ್ನ ಮಕ್ಕಳಿಗೆ ಸಂಪ್ರದಾಯಸ್ಥನಂತೆ ಕಾಣುತ್ತಿರುತ್ತೇನೆ ಎಂಬ ಸುಡುಸತ್ಯ ತಿಳಿಯದೇ ದೂರುತ್ತಿರುತ್ತೇವೆ. ಪೀಳಿಗೆಯ ಅಂತರ ಎಂಬುದು ಈಗ ಹಲವು ವರ್ಷಗಳ ಮೂಲಕ ನಿರ್ಧಾರವಾಗುತ್ತಿಲ್ಲ. ಎರಡು ಮೂರು ವರುಷ ವ್ಯತ್ಯಾಸ ಇರುವ ಅಣ್ಣತಮ್ಮ, ಅಕ್ಕತಂಗಿಯರಲ್ಲೇ ಪೀಳಿಗೆಯ ಅಂತರ ಕಂಡು ಬರುವಂಥ ಗ್ರ್ಯಾಸ್ಟಿಕ್ ಚೇಂಜಸ್ ಉಂಟಾಗುತ್ತಿದೆ. ಒಂದೊಮ್ಮೆ ಇದೆಲ್ಲ ಎಲ್ಲಿಗೆ ಹೋಗಿ ಮುಟ್ಟುತ್ತದೆ? ಎಂದೂ ಅನಿಸದೇ ಇರದು. ಆಧುನಿಕತೆ ಮತ್ತು ಜಾಗತೀಕರಣಗಳು ನಮ್ಮ ಸನಾತನ ಭಾರತೀಯ ಕುಟುಂಬ ಪದ್ಧತಿಯ ಮೇಲೆ ಗಧಾಪ್ರಹಾರ ಮಾಡಿರುವುದಂತೂ ಎಲ್ಲರೂ ಒಪ್ಪಿಕೊಳ್ಳಬೇಕಾದ ಅನಿವಾರ್ಯ ಸಂಗತಿ.

ಹೀಗಿರುವಾಗ ನನ್ನ ಆಲೋಚನೆ ಇರುವುದು ಪೋಷಕರು ಮಕ್ಕಳ ಮೇಲೆ ಹೊಂದಿರುವ ಪ್ರೀತಿ ಮತ್ತು ಹಿಡಿತವನ್ನು ಕುರಿತು. ನಮ್ಮ ಮಕ್ಕಳ ಮೇಲೆ ನಾವು ತೋರಿಸುವ ಪ್ರೀತಿ ಹೆಚ್ಚಿರಬೇಕು; ಅವರ ಮೇಲಿನ ಹಿಡಿತ ಕಡಮೆ ಇರಬೇಕು. ತುಂಬ ಓದಿದವರು ಎಂದುಕೊಂಡವರು, ನಾವು ಪ್ರಬುದ್ಧರು ಅಂತ ಅಂದುಕೊಂಡು ಬೀಗುವವರು, ವಿದೇಶಕೆ ಹೋಗಿ ಕಲಿತು ಮರಳಿ ಬಂದವರು ಸಹ ಈ ವಿಚಾರದಲಿ ತಮ್ಮದೇ ಆದ ಸ್ವಾರ್ಥೀಯ ಮನೋಭಾವ ಹೊಂದಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅದರಲ್ಲೂ ತಂದೆಯಾದವನಿಗೆ ‘ತಾನು ಹುಟ್ಟಿಸಿದ್ದು’ ಎಂಬ ಅಹಮಿನ ಖಾರ; ತಾಯಿಯಾದವಳಿಗೆ ನಾನು ಹೆತ್ತು ಹೊತ್ತು ಸಾಕಿದ್ದು ಎಂಬ ಮಮತೆಯ ಮಮಕಾರ. ನಮ್ಮ ಮಕ್ಕಳು ನಮ್ಮ ಜೊತೆಯಲ್ಲಿ ಇರಲು ಬಂದವರು, ನಮಗಿಂತ ಬೇರೆಯದೇ ಆದ ಕಾಲಧರ್ಮ, ಮನೋಧರ್ಮ ಮತ್ತು ಯುಗಧರ್ಮಗಳಲ್ಲಿ ಬದುಕಿ ಬಾಳಬೇಕಾದವರು. ಅವರು ಸ್ವತಂತ್ರರು ಎಂಬುದನ್ನು ಬಹುತೇಕ ಪೋಷಕರು ಒಪ್ಪುವುದಿಲ್ಲ. ನಮಗೆ ಬೇಕಾದಂತೆ ಬೆಳೆಸುತ್ತೇವೆ, ಅದು ನಮ್ಮ ಹಕ್ಕು ಎಂದೇ ಬಹಳಷ್ಟು ತಾಯ್ತಂದೆಯರು ಅಂದುಕೊಳ್ಳುತ್ತಾರೆ. ‘ನಾವೇನು ಬೇರೆಯವರ ಮಕ್ಕಳಿಗೆ ಹೇಳುತ್ತಿಲ್ಲವಲ್ಲ?’ ಎಂಬುದು ಅವರು ತಮ್ಮ ವರ್ತನೆಗೆ ಕೊಡುವ ಸಮಜಾಯಿಷಿ.
ನಮ್ಮ ಸ್ನೇಹಿತರು ತಮ್ಮ ಮಕ್ಕಳನ್ನು ಬಹಳ ಕಟ್ಟುನಿಟ್ಟಾಗಿ ಬೆಳೆಸುತ್ತಿದ್ದಾರೆ. ಉಸಿರುಗಟ್ಟುವ ವಾತಾವರಣ. ಸುಖ ಸಂತೋಷ ಮತ್ತು ದುಃಖ ದುಮ್ಮಾನಗಳನ್ನು ಸಹ ಬಾಯಿ ಬಿಟ್ಟು ಹೇಳಿಕೊಳ್ಳಲಾಗದ ಪರಿಸ್ಥಿತಿ ಮತ್ತು ಮನಸ್ಥಿತಿ. ಇಂಥ ಸಂದರ್ಭದಲ್ಲಿ ಮನೆಗೆ ಬಂದ ಕುಟುಂಬ ಮಿತ್ರರ ಬಳಿ ‘ನಮಗೆ ಬೆಲ್ಲದ ಮಿಠಾಯಿ ತಿನ್ನಬೇಕೆನಿಸಿದೆ. ಮಾಡಿಕೊಡುತ್ತೀರಾ? ಅಥವಾ ತಂದು ಕೊಡುತ್ತೀರಾ?’ ಎಂದು ಕೇಳಿದ್ದಿದೆ. ಇದು ಅತಿಯಾಯಿತು ಎಂದೆನಿಸುವುದಿಲ್ಲವೆ? ಹೀಗೆ ಮಿಲಿಟರಿಯ ಶಿಸ್ತಿನಲ್ಲಿ ಬೆಳೆಸಿದ ಮೇಲೆ ಮುಂದೇನಾಗುವುದು? ಎಂಬ ದೂರಾಲೋಚನೆಯು ಇಂಥ ತಾಯ್ತಂದೆಯರಲಿಲ್ಲ. ತಣ್ಣನೆಯ ಜ್ವಾಲಾಮುಖಿಯು ಒಮ್ಮೆ ಸ್ಫೋಟವಾಗಿ ಬಿಡುತ್ತದೆ. ಇಂಥ ಅದೆಷ್ಟೋ ಉದಾಹರಣೆಗಳು ನಮ್ಮ ಸಮಾಜದಲ್ಲಿ ನಡೆದು ಹೋಗಿವೆ. ಒಂದು ಹಂತ ಕಳೆದು ಯೌವನಕೆ ಕಾಲಿಟ್ಟ ಮಕ್ಕಳು ಉಲ್ಟಾ ಹೊಡೆಯಲು ಶುರು ಮಾಡಿಬಿಡುವರು. ಹಾಗಾಗಿಯೇ ಇಂದು ಮಕ್ಕಳನ್ನು ಬೆಳೆಸುವುದು ಜಾಗತಿಕ ಸಮಸ್ಯೆಯಾಗಿ ಬಿಟ್ಟಿದೆ. ಹೇಗೆ ಬೆಳೆಸಬೇಕು? ಎಂಬುದು ಪೋಷಕರಾದವರ ನಿರಂತರ ಸಂಶೋಧನೆಯೂ ಆಗಿದೆ. ಇನ್ನು ಸೇಫ್ eóÉೂೀನ್ನಲ್ಲಿರುವ ದಂಪತಿಗಳು ತುಸು ಹೆಚ್ಚೇ ಸೋಂಬೇರಿಗಳಾಗಿ, ಮಕ್ಕಳನ್ನು ಹೆತ್ತು ಹೊತ್ತು ಬೆಳೆಸುವ ಸಂಕಟಕ್ಕೆ ತಮ್ಮನ್ನು ಒಡ್ಡಿಕೊಳ್ಳಲು ಇಷ್ಟಪಡದೆ, ಹಾಯಾಗಿ ತಿರುಗಾಡಿಕೊಂಡು ಕಾಲ ಕಳೆಯುತ್ತಿರುವುದೂ ಇದೆ. ಮಕ್ಕಳಾಗಲಿಲ್ಲ ಎಂಬ ಅಳಲು ಕೆಲವರನ್ನು ಕಾಡುವುದೇ ಇಲ್ಲ; ಕಾಡಬೇಕಿಲ್ಲ ಕೂಡ! ಐವಿಎಫ್ ಚಿಕಿತ್ಸೆಯು ಸಹ ವಿಫಲವಾದ ಮೇಲೆ ಕೆಲವರು ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದಿದೆ. ಇನ್ನು ಕೆಲವರು ಹೀಗೆ ದತ್ತು ತೆಗೆದುಕೊಳ್ಳಲು ಸಹ ರೆಡಿ ಇರುವುದಿಲ್ಲ. ಯಾರಿಗೋ ಹುಟ್ಟಿದ್ದು, ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳು ಆ ಮಕ್ಕಳಲ್ಲಿ ಹೇಗೆ ಬರಲು ಸಾಧ್ಯ? ಎಂದೇ ಪ್ರಶ್ನಿಸುತ್ತಾರೆ. ಆಧುನಿಕ ವಿಜ್ಞಾನ ಓದಿದ ಎಜುಕೇಟೆಡ್ ಮಂದಿ ಸಹ ಹೀಗೆ ಹೇಳುತ್ತಾರೆ. ಇದೆಲ್ಲವೂ ಅಂತಿಮವಾಗಿ ಅವರವರ ಆಯ್ಕೆ ಎಂದೇ ನಾನು ಗೌರವಿಸುವುದನ್ನು ಕಲಿತಿದ್ದೇನೆ, ಕಲಿಯಬೇಕು ಕೂಡ. ನನ್ನ ಮಟ್ಟಿಗೆ ನಾನು, ಅವರ ಮಟ್ಟಿಗೆ ಅವರು ಸರಿಯಾಗಿಯೇ ಇರುತ್ತಾರೆ ಎಂಬುದೇ ನಿಜ ಜ್ಞಾನೋದಯ. ಏಕೆಂದರೆ ಪರಿಸ್ಥಿತಿ, ಮನಸ್ಥಿತಿ ಮತ್ತು ಗತಿಸ್ಥಿತಿಗಳು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನ ಮತ್ತು ವಿಚಿತ್ರ.

ನಮ್ಮ ಕುಟುಂಬ ಮಿತ್ರರ ಮಗಳು ಮತ್ತು ಅಳಿಯ ದೂರದೇಶದಲ್ಲಿದ್ದಾರೆ. ‘ಡೆಲಬರೇಟಾಗಿಯೇ ನಾವು ಮಗುವನ್ನು ಮಾಡಿಕೊಳ್ಳುವುದಿಲ್ಲ. ಹಾಗಂತ ನಾವೇನೂ ಮಕ್ಕಳ ವಿರೋಧಿಗಳಲ್ಲ. ಜಗತ್ತಿನಲ್ಲಿ ಎಷ್ಟೊಂದು ಅನಾಥ ಮಕ್ಕಳಿವೆ. ಅವುಗಳಲ್ಲಿ ಒಂದನ್ನು ತಂದು ಸಾಕುತ್ತೇವೆ, ನಮಗೇ ಮಗು ಆಗಬೇಕೆಂದೇನಿಲ್ಲ; ಉಳಿದವರ ಮಕ್ಕಳೂ ನಮ್ಮ ಮಕ್ಕಳಾಗಬಹುದು’ ಎಂಬ ವಿಶಾಲಹೃದಯವನ್ನು ವ್ಯಕ್ತಪಡಿಸಿದ್ದಾರೆ. ಹಾಗಾಗಿ ಇಂಥವರೂ ಇದ್ದಾರೆ ಮತ್ತು ಅಂಥವರೂ ಇದ್ದಾರೆ ಎಂದೇ ತಿಳಿಯಬೇಕು. ಇನ್ನು ಕೆಲವು ಹುಡುಗರಂತೂ ತಾವು ವಯಸ್ಕರಾಗುವ ಮೊದಲೇ ‘ನಾವು ಮದುವೆಯಾಗುವುದಿಲ್ಲ; ಕಾಫಿ ಟೀಗಾಗಿ ಅರ್ಧ ಲೀಟರ್ ಹಾಲು ಬೇಕು, ಅದಕಾಗಿ ಹಸುವನ್ನೇ ಕಟ್ಟಿಕೊಂಡು ಅದರ ಚಾಕರಿ ಮಾಡುವುದು ದುಸ್ಸಾಹಸ’ ಎಂದೇ ವ್ಯಂಗ್ಯವಾಡುವ ಹಂತಕ್ಕೆ ಹೋಗಿದ್ದಾರೆ. ಒಬ್ಬ ಹುಡುಗನಂತೂ ನಾನು ಒಂದೆರಡು ನಾಯಿಗಳನ್ನು ಸಾಕಿಕೊಳ್ಳುತ್ತೇನೆ, ಮಕ್ಕಳು ಬೇಡವೇ ಬೇಡ ಎಂಬ ತೀರ್ಮಾನಕ್ಕೆ ಈಗಲೇ ಬಂದಿದ್ದಾನೆ! ಇವರ ಅಪ್ಪ-ಅಮ್ಮ ಕೂಡ ಇಂಥ ತೀರ್ಮಾನಕ್ಕೆ ಬಂದಿದ್ದರೆ ಇವನು ಎಲ್ಲಿಂದ ಬರುತ್ತಿದ್ದ? ಎಂಬ ಪ್ರಶ್ನೆಗೆ ಅವನಲ್ಲಿ ಉತ್ತರವೇ ಇಲ್ಲ ಮತ್ತು ಇರುವುದಿಲ್ಲ! ಒಟ್ಟಾರೆ ಏನೆಂದರೆ ಈಗಿನ ಮಕ್ಕಳು ಹಿಂದಿನ ಮಕ್ಕಳಂತಲ್ಲ ಎಂಬುದು ಮಾತ್ರ ಕಟು ವಾಸ್ತವ. ಇನ್ನು ಮಕ್ಕಳ ಪೋಷಕರ ಬಗ್ಗೆ ಹೇಳುವುದಾದರೆ ತಮ್ಮ ಮಕ್ಕಳು ತಮ್ಮಂತೆಯೇ ಇರಬೇಕು, ಬೆಳೆಯಬೇಕು, ತಮ್ಮ ಆಸಕ್ತಿ ಮತ್ತು ಹವ್ಯಾಸಗಳನ್ನೇ ಮುಂದುವರಿಸಬೇಕು ಎನ್ನುವ ಮೂರ್ಖರು ಹಲವರು. ಮಕ್ಕಳನ್ನು ಸ್ನೇಹಿತರಂತೆ ನೋಡುವ ಪೋಷಕರು ತುಂಬ ಕಡಮೆ.

ಈ ನಿಟ್ಟಿನಲ್ಲಿ ನನಗೆ ಲೆಬನಾನ್ ಮೂಲದ ಅಮೆರಿಕನ್ ಕವಿಯೂ ತತ್ತ್ವಜ್ಞಾನಿಯೂ ಆಗಿದ್ದ ಖಲೀಲ್ ಗಿಬ್ರಾನ್ ನೆನಪಾಗುತ್ತಾನೆ. ‘ಸುಖ ದುಃಖಗಳಲ್ಲಿ ಒಂದು ನಿಮ್ಮೊಡನೆ ಊಟಕ್ಕೆ ಕುಳಿತರೆ ಮತ್ತೊಂದು ನೀವು ಮಲಗಲೆಳಸುವ ಹಾಸುಗೆಯ ಮೇಲೆ ನಿದ್ರಿಸುತ್ತಿರುತ್ತದೆ, ಜೋಪಾನ’ ಎಂದವನು ಇವನು. ‘ಮನುಷ್ಯನ ಮನಸ್ಸು ಮಾತ್ರ ಕಾಲರಹಿತವಲ್ಲ, ಬರೆಯುವ ಮತ್ತು ಮಾತಾಡುವ ಪದಗಳು ಸಹ’ ಎಂದು ಹೇಳಿ ದಿಗ್ಭ್ರಮೆ ಹುಟ್ಟಿಸಿದವನು. ‘ದ ಪ್ರಾಫೆಟ್’ ಎಂಬುದು ಈತನ ಜನಪ್ರಿಯ ಕೃತಿಗಳಲ್ಲೊಂದು. ಪ್ರಪಂಚದ ನೂರಾ ಹತ್ತು ಭಾಷೆಗಳಿಗೆ ಇವನ ಕೃತಿಗಳು ಅನುವಾದಗೊಂಡಿವೆ. ಅವನು ಬರೆದ ಕವಿತೆಗಳ ಪೈಕಿ ‘ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ’ ಎಂಬುದೂ ಒಂದು.

Your children are not your children.
They are the sons and daughters of Life’s longing for itself.
They come through you but not from you,
and though they are with you yet they belong not to you.
You may give them your love but not your thoughts,
for they have their own thoughts.
You may house their bodies but not their souls,
For their souls dwell in the house of tomorrow,
Which you cannot visit, not even in your dreams.
You may strive to be like them, but seek not to make them like you.
For life goes not backward nor tarries with yesterday.
You are the bows from which your children as living arrows are sent forth.
The archer sees the mark upon the path of the infinite,
And He bends you with His might that His
Arrows may go swift and far.
Let your bending in the archer’s hand be for gladness;
for even as He loves the arrow that flies, so He loves also the bow that is stable.

ನಿಮ್ಮ ಮಕ್ಕಳು ಕೇವಲ ನಿಮ್ಮ ಮಕ್ಕಳು ಮಾತ್ರವೇ ಅಲ್ಲ !
ಅವರು ಜೀವನದ ಅಮೃತಪುತ್ರರು ಮತ್ತು ಪುತ್ರಿಯರು.
ಸದಾ ಚಡಪಡಿಸುವ ಬದುಕಿನ ತುಡಿತಕ್ಕೆ ಮಿಡಿಯುತಿರುವವರು ಅವರು.
ಅವರು ನಿಮ್ಮ ಮೂಲಕ ಬರುತ್ತಾರೆ; ಆದರೆ ನಿಮ್ಮಿಂದಲ್ಲ
ಮತ್ತು ಅವರು ನಿಮ್ಮೊಂದಿಗಿದ್ದರೂ ಅವರು ನಿಮಗೆ ಸೇರಿದವರಲ್ಲ. ಹಾಗಾಗಿ ಅವರು ನಿಮ್ಮವರಲ್ಲ!
ನಿಮ್ಮ ಜೊತೆ ಇರಬಹುದು, ಆದರೆ ನಿಮ್ಮ ಆಸ್ತಿಯಾಗುವುದು ಸಾಧ್ಯವಿಲ್ಲ.

ನೀವು ಅವರಿಗೆ ನಿಮ್ಮ ಪ್ರೀತಿಯನ್ನು ನೀಡಬಹುದು ಆದರೆ ನಿಮ್ಮ ಆಲೋಚನೆಗಳನ್ನಲ್ಲ;
ಏಕೆಂದರೆ ಅವರಿಗೆ ಅವರದೇ ಆದ ಆಲೋಚನೆಗಳಿವೆ.
ನೀವು ಕಟ್ಟಬಹುದಾದ ಮನೆ ಅವರ ದೇಹಗಳಿಗೆ ಮಾತ್ರವೇ ವಿನಾ ಆತ್ಮಗಳಿಗಲ್ಲ.

ಅವರ ಆತ್ಮಗಳ ಮನೆಯು ಭವಿಷ್ಯದಲ್ಲಿ ನೆಲೆ ನಿಂತಿವೆ.
ಆ ಮನೆಯ ವಿಳಾಸ ನಿಮಗಷ್ಟೇ ಅಲ್ಲ; ನಿಮ್ಮ ಕನಸುಗಳಿಗೂ ನಿಲುಕುವುದಿಲ್ಲ!
ಅವರ ದಾರಿಯಲ್ಲಿ ನೀವು ನಡೆದು ನೋಡಬಹುದು
ಆದರೆ ಅವರನ್ನು ನಿಮ್ಮ ದಾರಿಗೆ ನೂಕದಿರಿ
ಅವರು ಕಂಡುಕೊಂಡ ದಾರಿಗಳಲಿ ನಿಶ್ಚಯವಾಗಿದೆ ಅವರ ಪ್ರಯಾಣ!

ಅವರ ಜಗತ್ತಿಗೆ ನೀವು ಭೇಟಿ ನೀಡಲು ಸಾಧ್ಯವಿಲ್ಲ, ನಿಮ್ಮ ಕನಸಿನಲ್ಲಿಯೂ ಅಲ್ಲ.
ನೀವು ಅವರಂತೆ ಇರಲು ಪ್ರಯತ್ನಿಸಬಹುದು, ಆದರೆ ಅವರನ್ನು ನಿಮ್ಮಂತೆ ಮಾಡಲು ಪ್ರಯತ್ನಿಸಬೇಡಿ.
ಏಕೆಂದರೆ ಜೀವನವು ಹಿಂದಕ್ಕೆ ಹೋಗುವುದಿಲ್ಲ ಅಥವಾ ನಿನ್ನೆಯೊಂದಿಗೆ ನಿಲ್ಲುವುದಿಲ್ಲ.
ಬದುಕಿಗೆ ಹಿಂದೆ ನಡೆದು ಗೊತ್ತಿಲ್ಲ, ನಿನ್ನೆಯ ಜೊತೆ ವ್ಯವಹಾರ ಮಾಡಿ ಗೊತ್ತಿಲ್ಲ

ನಿಮ್ಮ ಮಕ್ಕಳನ್ನು ಜೀವಂತ ಬಾಣಗಳಾಗಿ ಕಳುಹಿಸುವ ಬಿಲ್ಲುಗಳಷ್ಟೇ ನೀವು.
ಬಿಲ್ಲುಗಾರನು ಅನಂತದ ಹಾದಿಯಲ್ಲಿ ಗುರುತು ನೋಡುತ್ತಾನೆ,
ಅವನ ಕಣ್ಣು ಮುಗಿಯದ ದಾರಿಯ ಮೇಲಿನ ಗುರಿಯ ಮೇಲೆ!
ಅವನಿಗೆ ಬಾಣಗಳ ಮೇಲೆ ಎಷ್ಟು ಪ್ರೀತಿಯೋ ಅಷ್ಟೇ ಪ್ರೇಮ,
ಬಾಗಿದ ಮೇಲೂ ಮುರಿಯದ ಬಿಲ್ಲಿನ ಮೇಲೆ ಕೂಡ
ಏಕೆಂದರೆ ಅವನು ಚಿಮ್ಮುವ ಬಾಣವನ್ನು ಪ್ರೀತಿಸುವಂತೆಯೇ ಸ್ಥಿರವಾಗಿರುವ ಬಿಲ್ಲನ್ನೂ ಪ್ರೀತಿಸುವವನು!!

ಖಲೀಲ್ ಗಿಬ್ರಾನ್ ತುಂಬ ಸಂವೇದನಾಶೀಲ ಕವಿ. ಆ ಕಾಲಕ್ಕೆ ಅವನು ಎಲ್ಲರಿಗಿಂತ ವಿಶಿಷ್ಟನಾಗಿದ್ದವನು. ಜಾತಿ, ಮತ, ಧರ್ಮಗಳಾಚೆಗೆ ಇರುವ ಶುದ್ಧ ಮಾನವಾಂತಃಕರಣವನ್ನು ಆಳವಾದ ತಿಳಿವಿನ ಬೆಳಕಿನಲ್ಲಿ ಪರಿಶೀಲಿಸಿ, ಪ್ರಸ್ತುತಪಡಿಸಿದವನು. ಇವನು ಮಕ್ಕಳ ಬಗ್ಗೆ ಹೇಳಿದ ಮಾತುಗಳು ಪೋಷಕರ ಕಣ್ತೆರೆಸುತ್ತವೆ. ನಮ್ಮ ಸ್ವಾರ್ಥ ಮತ್ತು ಆಸೆಬುರುಕತನವನ್ನು ಪ್ರಶ್ನಿಸುತ್ತವೆ. ನಾವೂ ನಮ್ಮ ತಾಯ್ತಂದೆಯರಿಗೆ ಮಕ್ಕಳಾಗಿದ್ದುದರಿಂದ ಈ ಸಾಲುಗಳು ನಮಗೂ ಅನ್ವಯಿಸುತ್ತವೆ. ಆದರೆ ನಮ್ಮ ತಾಯ್ತಂದೆ ಮತ್ತು ಪೋಷಕರು ಇಂಥ ಒಂದು ಸಾಧ್ಯತೆಯನ್ನು ಯೋಚಿಸಿದವರಲ್ಲ. ಅವರು ತಮ್ಮ ಸ್ವಾರ್ಥ ಮತ್ತು ಮಹತ್ವಾಕಾಂಕ್ಷೆಗಳನ್ನು ನಮ್ಮ ಮೇಲೆ ಹೇರಿದವರೇ. ಹೆಚ್ಚೆಂದರೆ ಬಡ ಮಧ್ಯಮ ವರ್ಗದವರಲ್ಲಿ ಇರುವ ಆಶೋತ್ತರವೆಂದರೆ: ನಮ್ಮ ಮಕ್ಕಳು ನಮ್ಮನ್ನು ಸಾಕಬೇಕು. ಅವರು ತಮ್ಮ ಸ್ವಂತ ಕಾಲುಗಳ ಮೇಲೆ ನಿಂತು ಜೀವನ ನಡೆಸಬೇಕು. ವಿದ್ಯೆ ಕಲಿತು ದೊಡ್ಡಾಫೀಸರಾಗಬೇಕು. ಸರೀಕರ ಮುಂದೆ ಮತ್ತು ನಮ್ಮ ನೆಂಟರಿಷ್ಟರ ಮುಂದೆ ಮೆರೆಯಬೇಕು. ಆ ಮೂಲಕ ನಾವು ನಮ್ಮ ಬಂಧುಗಳಿಗೆ ‘ಹೇಗೆ ನಮ್ಮ ಮಕ್ಕಳು!?’ ಅಂತ ವಾರೆನೋಟ ಬೀರಬೇಕು. ಇಷ್ಟೇ ನಮ್ಮ ಪೋಷಕರಿಗೆ ಇದ್ದ ಅನಿಸಿಕೆಗಳು.

ಹಿಂದೆ ಒಂದಕ್ಕಿಂತ ಹೆಚ್ಚಿನ ಮಕ್ಕಳು ಇದ್ದುದರಿಂದ ಒಬ್ಬರು ಓದುತ್ತಿದ್ದರು, ಇನ್ನೊಬ್ಬರು ಓದುತ್ತಿರಲಿಲ್ಲ. ತಂದೆಯ ಅಥವಾ ಮನೆತನದ ಕುಲಕಸುಬನ್ನು ಮುಂದುವರಿಸುತ್ತಿದ್ದರು. ಪೋಷಕರ ಮಾತನ್ನು ಕೇಳುವವರು ಇದ್ದರು ಮತ್ತು ಪೋಷಕರಂತೆಯೇ ಮಕ್ಕಳೂ ಆಗುತ್ತಿದ್ದರು. ಆದರೆ ಈಗ ಹಾಗಲ್ಲ. ಖಲೀಲ್ ಗಿಬ್ರಾನ್ ಹೇಳಿದಂತೆ ನಮ್ಮ ಮಕ್ಕಳು ನಮ್ಮ ಮಕ್ಕಳು ಮಾತ್ರವೇ ಅಲ್ಲ! ಹೆತ್ತವರೆಂದು ಅಧಿಕಾರ ಚಲಾಯಿಸುವಂತಿಲ್ಲ. ವಾಸ್ತವವಾಗಿ ಹೆತ್ತವರಿಗೆ ಯಾವ ಅಧಿಕಾರವೂ ಇರುವುದಿಲ್ಲ. ಇದೊಂದು ಭ್ರಮೆ. ಅಧಿಕಾರ ಎಂಬುದೇ ಅಹಂಕಾರವು ತರುವ ಭ್ರಮೆ. ಯಾವುದೂ ನಮ್ಮ ಕಂಟ್ರೋಲಿನಲಿ ಇಲ್ಲ ಎಂಬುದೇ ವಾಸ್ತವ. ಅಂತಹುದರಲ್ಲಿ ನಾವು ಮಕ್ಕಳನ್ನು ಕಂಟ್ರೋಲ್ ಮಾಡುತ್ತಿದ್ದೇವೆಂಬುದು ನಮ್ಮೊಳಗೆ ಮನೆ ಮಾಡಿಕೊಂಡಿರುವ ಭಯವೇ ವಿನಾ ಬೇರೇನೂ ಅಲ್ಲ. ನಮ್ಮ ಆಸೆ ಆಕಾಂಕ್ಷೆಗಳನ್ನು ತಣಿಸಬೇಕು, ನಮ್ಮ ಕನಸುಗಳ ಕೈಗೂಸು ಅವರಾಗಬೇಕು ಎಂದುಕೊಳ್ಳುವುದು ಅಪ್ರಬುದ್ಧತೆ.

ಈಗಂತೂ ದಿಢೀರನೆ ಎಲ್ಲವೂ ದಿಗ್ಭ್ರಮೆಗೊಳಗಾಗುವಷ್ಟು ಬದಲಾಗಿವೆ ಮತ್ತು ಇನ್ನೂ ಬದಲಾಗುತ್ತಿವೆ. ನಾವು ಅಂದುಕೊಳ್ಳುವುದಕಿಂತಲೂ ಬೇಗ ಬದಲಾಗುತ್ತಿರುವುದು ನಮ್ಮ ಮಕ್ಕಳ ಮನಸ್ಥಿತಿ. ಒಂದು ಕಡೆ ನಾವಿರುವ ಪರಿಸ್ಥಿತಿ, ಮತ್ತೊಂದು ಕಡೆ ಅನೂಚಾನವಾಗಿ ನಡೆದುಕೊಂಡು ಬಂದ ಸಂಸ್ಕೃತಿ. ಈ ಮೂರೂ ಒಂದು ತ್ರಿಭುಜದ ಮೂರು ಕೋನಗಳ ಬಿಂದುಗಳಂತೆ ಪರಸ್ಪರ ಸಂಧಿಸುತ್ತಲೇ ತಮ್ಮ ಪ್ರಾಬಲ್ಯವನ್ನು ತೋರುತ್ತಿರುತ್ತವೆ. ಈಗಾಗಲೇ ನಾನು ನುಡಿದಂತೆ ‘ನಮ್ಮ ಕಾಲ ಸರಿಯಿತ್ತು; ಈಗಿನ ಕಾಲ ಸರಿಯಿಲ್ಲ’ ಎಂಬಂಥ ಚಿಂತನೆಗಳಿಂದ ದೂರ ನಿಂತು ವೀಕ್ಷಿಸಿದಾಗ ಒಂದು ಸಮಗ್ರತೆ ಪ್ರಾಪ್ತವಾಗುತ್ತದೆ. ಪೂರ್ಣದೃಷ್ಟಿಯಿಂದ ನೋಡಿದಾಗ ಎಲ್ಲವೂ ಸರಿಯೇ, ಆಯಾಯ ಕಾಲಮಾನಕ್ಕೆ ತಕ್ಕಂತೆ ಆಯಾ ಜಾಯಮಾನ ಎಂಬ ಸಮಾಧಾನವೂ ದೊರಕುತ್ತದೆ. ನಾವು ನಮ್ಮ ಮಕ್ಕಳಿಗೆ ಮಕ್ಕಳಾಗಿದ್ದರೆ ಹೀಗೆಯೇ ಜೀವಿಸುತ್ತಿದ್ದೆವು, ಹೀಗೆಯೇ ಅಂದುಕೊಳ್ಳುತ್ತಿದ್ದೆವು ಎಂಬಂಥ ನಗ್ನಸತ್ಯ ಅರಿವಾದರೆ ಎಲ್ಲಕೂ ಒಂದರ್ಥ ಪ್ರಾಪ್ತವಾಗುತ್ತದೆ. ಇದನ್ನೇ ಸಂಕ್ಷಿಪ್ತವಾಗಿ ಲೋಕೋಭಿನ್ನರುಚಿಃ, ಕಾಲಾಯ ತಸ್ಮೈ ನಮಃ ಎಂದೆಲ್ಲಾ ಅಂದದ್ದು.

ಹಿಂದೆ ಹೆಚ್ಚಿನ ಸಂಖ್ಯೆಯ ಮಕ್ಕಳು ಇದ್ದುದರಿಂದ ವೃದ್ಧಾಪ್ಯ ಎಂಬುದು ಈಗಿನಂತೆ ಸಮಸ್ಯೆಯಾಗಿರಲಿಲ್ಲ. ಯಾರೋ ಒಬ್ಬರು ಸಾಕುತ್ತಿದ್ದರು. ತಾಯಿ ಮತ್ತು ತಂದೆ ಎಂಬ ಗೌರವಭಾವದಿಂದ ಪೋಷಿಸುತ್ತಿದ್ದರು. ಹಾಗೆಯೇ ವೃದ್ಧಾಪ್ಯವು ತರುವ ಅಸಹಾಯಕತೆ ಮತ್ತು ಅನಾರೋಗ್ಯಗಳಿಂದ ನರಳಿದರೂ ಹೆಚ್ಚಿನಾಂಶ ಕುಟುಂಬ ವ್ಯವಸ್ಥೆಯ ಸ್ವರೂಪವು ಒಂದು ಸೂತ್ರದಲ್ಲಿ ಬಂಧಿತವಾಗಿತ್ತು. ಇದರಿಂದಾಗಿ ವಯಸ್ಸಾದ ಕಾಲದಲ್ಲಿ ಮಕ್ಕಳ ಆಶ್ರಯದಲ್ಲಿ ಇರುವುದು ಸಹಜವೂ ಔಚಿತ್ಯವೂ ಆಗಿತ್ತು. ಜಾಗತೀಕರಣದ ಪ್ರತಿಫಲವಾಗಿ ಜಗತ್ತು ಎಂಬುದು ಮಾನಸಿಕವಾಗಿ ಪುಟ್ಟದಾಯಿತು, ನಮಗೆ ಪರಿಚಿತವೆನಿಸಿತು. ದೂರದ ಬೆಂಗಳೂರಿಗೋ ಮುಂಬೈಗೋ ವಿದ್ಯೆ ಕಲಿಯಲು ಮತ್ತು ಉದ್ಯೋಗ ನಿಮಿತ್ತ ಮಕ್ಕಳು ಮನೆಯಿಂದ ಹೊರಟು ನಿಂತಾಗ ಪೋಷಕರಿಗೆ ದಿಗಿಲಾಗುತಿತ್ತು. ಆ ಸ್ಥಾನವನ್ನು ಈಗ ವಿದೇಶಗಳು ಆವರಿಸಿಕೊಂಡಿವೆ. ಉನ್ನತ ವ್ಯಾಸಂಗಕಾಗಿ ಮತ್ತು ಸಾಮಾಜಿಕ, ಆರ್ಥಿಕ ಪ್ರತಿಷ್ಠೆ-ಲಾಭಗಳಿಗಾಗಿ ಮಕ್ಕಳು ದೂರದ ದೇಶಗಳಿಗೆ ಹೋಗುವುದು, ಕೆಲವೊಂದು ಸಾರಿ ಅಲ್ಲಿಯೇ ನೆಲೆಸುವುದು ಹೆಚ್ಚಾಗುತಿದೆ. ಅವರ ಭವಿಷ್ಯ, ಪ್ರೊಫೈಲುಗಳು ಅವರವರವೇ! ನಾವೀಗ ವಿಶ್ವಮಾನವರಾಗಿ, ವಿಶ್ವಕುಟುಂಬಿಗಳಾಗಿ ಎಲ್ಲರಿಗೂ ಬೇಕಾದವರಾಗಿದ್ದೇವೆ. ವಲಸೆ ಹೆಚ್ಚಾಗಿದೆ, ವ್ಯಾಸಂಗ ಮತ್ತು ಉದ್ಯೋಗಗಳ ಕಾರಣವಾಗಿ ವಿದೇಶ ಸಲೀಸಾಗಿದೆ. ಅಲ್ಲಿಯೇ ನೆಲೆಸುವುದು ಅನಿವಾರ್ಯವಾಗಿ ಬಿಟ್ಟಿದೆ. ಹಾಗಂತ ಅಲ್ಲಿಯೇ ನೆಲೆಸಿದವರು ಈ ನೆಲದ ದ್ರೋಹಿಗಳೆಂತಲೂ ಮರಳಿ ಬರುವವರು ಮಹಾನ್ ದೇಶಪ್ರೇಮಿಗಳೆಂತಲೂ ಕರೆಯಲಾಗದು. ಪ್ರತಿಭಾ ಪಲಾಯನ ಎಂಬುದು ಒಂದು ಕಾಲದಲ್ಲಿ ಸಮಾಜೋ ಸಾಂಸ್ಕೃತಿಕ ಪಿಡುಗಾಗಿತ್ತು. ಈಗ ಹಾಗಿಲ್ಲ. ಅವರವರ ಇಷ್ಟಗಳು ಮತ್ತು ಕಷ್ಟಗಳು ಅವರವರಿಗೆ ಗೊತ್ತುಂಟು. ದೂರ ನಿಂತು ವ್ಯಾಖ್ಯಾನ, ವಿಮರ್ಶೆಗಳನ್ನು ಮಾಡುವವರಿಗೆ ಆತ್ಯಂತಿಕ ಸತ್ಯವು ಮರೀಚಿಕೆಯಾಗಿರುತ್ತದೆ. ಒಳ್ಳೆಯದು ಎಲ್ಲಿಯೇ ಇರಲಿ, ಯಾರಲ್ಲಿಯೇ ಇರಲಿ ಅದು ಸ್ವೀಕಾರಾರ್ಹ ಮತ್ತು ಅನುಕರಣೀಯ. ಹಾಗಾಗಿ ನಮ್ಮ ಮಕ್ಕಳ ಪೀಳಿಗೆ ಇನ್ನು ಮುಂದೆ ಹೆಚ್ಚು ಹೆಚ್ಚು ಓಡಾಡುವಂಥವರು. ಊರುಗಳನ್ನು ಬದಲಾಯಿಸುವ ಹಾಗೆ ದೇಶಗಳನ್ನು ಬದಲಾಯಿಸುವ ಕಾಲ ಬರುವುದು ಗ್ಯಾರಂಟಿ. ಇದರಿಂದಾಗಿ ಮಕ್ಕಳು ನಮ್ಮ ಹತ್ತಿರವೇ ಇರಬೇಕು ಎಂಬ ಕಾನ್ಸೆಪ್ಟು ಹಳೆಯದಾಗುತ್ತಿದೆ. ‘ಎಲ್ಲಾದರೂ ಇರು ಸುಖವಾಗಿರು’ ಎಂದು ಹಾರೈಸುವುದು ಅನಿವಾರ್ಯವಾಗಿದೆ.

ನಮ್ಮ ಕುಟುಂಬ ಸ್ನೇಹಿತರ ಮನೆಯ ಇಬ್ಬರು ಹೆಣ್ಣು ಮಕ್ಕಳೂ ವಿದೇಶ ಸೇರಿದ್ದಾರೆ. ಒಬ್ಬರಂತೂ ಅಲ್ಲಿಯೇ ಸೆಟಲ್ ಆಗಿದ್ದಾರೆ. ಇನ್ನೊಬ್ಬರು ಬರಬಹುದು ಎನ್ನಲಾಗುತ್ತಿದೆ. ತಾಯ್ತಂದೆಯರನ್ನು ನೋಡಿಕೊಳ್ಳುವುದು ಮಕ್ಕಳ ಹೊಣೆ ಎಂಬ ಮಾತಿಗೆ ಮನ್ನಣೆ ನೀಡಿದರೆ ಮಕ್ಕಳ ಫ್ಯೂಚರು ಮಸುಕಾಗುವುದು. ಅದಕಾಗಿ ಅವರನ್ನು ಕಟ್ಟಿ ಹಾಕಿದಂತಾಗುವುದು. ಇಷ್ಟಕೂ ವಯಸಾದ ತಂದೆ ತಾಯಿಯರನ್ನು ನೋಡಿಕೊಳ್ಳುವುದೇ ಮಕ್ಕಳ ಕೆಲಸವೇ? ಅದಕಾಗಿ ಅವರು ಇಲ್ಲಿಯೇ ಇರಬೇಕೆ? ತಮ್ಮ ಪ್ರತಿಭೆ ಮತ್ತು ಪಾಂಡಿತ್ಯಗಳನ್ನೂ ಅದಕೆ ಸಿಗುವ ಜಾಗತಿಕ ಮನ್ನಣೆಯನ್ನೂ ಮರೆಯಬೇಕೆ? ಇದೊಂದು ಧರ್ಮಸಂಕಟ ಇದ್ದಂತೆ ಕುಟುಂಬಸಂಕಟ. ಪ್ರತಿಯೊಂದು ಮನೆಯೂ ವೃದ್ಧಾಶ್ರಮವಾಗಿದೆ ಈಗ ಎಂದು ನಾನು ತಮಾಷೆಗೆ ಹೇಳುತ್ತಿರುತ್ತೇನೆ. ಅಂದರೆ ‘ಮಕ್ಕಳು ನಮ್ಮನ್ನು ನೋಡಿಕೊಳ್ಳಬೇಕು’ ಎಂಬ ಮಾತು ಒಂದು ಕಡೆ, ‘ನಮ್ಮ ಮಕ್ಕಳು ನಮ್ಮ ಮಕ್ಕಳಲ್ಲ, ಅವರು ಜಗತ್ತಿಗೆ ಸೇರಿದವರು’ ಎಂದ ಖಲೀಲ್ ಗಿಬ್ರಾನನ ಮಾತು ಇನ್ನೊಂದೆಡೆ! ಇವೆರಡೂ ಭಾರತದಂಥ ಸಂಸ್ಕೃತಿ, ಸಂಪ್ರದಾಯ ಮತ್ತು ಕುಟುಂಬ ವ್ಯವಸ್ಥೆಯಲ್ಲಿ ಇನ್ನಷ್ಟು ಹೆಚ್ಚು ಸಂಕೀರ್ಣಕ್ಕೆ ಪಕ್ಕಾಗಿವೆ; ಇಕ್ಕಟ್ಟು ಬಿಕ್ಕಟ್ಟುಗಳನ್ನು ಎದುರಿಸುತ್ತಿವೆ.

ಇರುವ ಒಂದೋ ಎರಡೋ ಮಕ್ಕಳನ್ನು ವಿದೇಶಕ್ಕೆ ಕಳಿಸಲೇಬೇಕಾದ ಪರಿಸ್ಥಿತಿಯಲ್ಲಿ ಪೋಷಕರು ಚಡಪಡಿಸುತ್ತಿದ್ದಾರೆ. ‘ನಿಮಗಿರುವವನು ಒಬ್ಬನೇ; ಅವನನ್ನು ವಿದೇಶಕ್ಕೆ ಕಳಿಸಬೇಡಿ’ ಎಂದು ನನಗೆ ಒಬ್ಬರು ಕಿವಿಮಾತು ಹೇಳಿದ್ದರು. ನಾನು ನಕ್ಕು ಸುಮ್ಮನಾದೆ. ಯಾರನ್ನೂ ಯಾವುದನ್ನೂ ಕಂಟ್ರೋಲಿಸದ ನನ್ನನ್ನು ಹುಡುಕಿಕೊಂಡು ಬಂದು, ಇವರು ಬುದ್ಧಿಮಾತು ಹೇಳುತ್ತಿದ್ದಾರಲ್ಲ ಎಂದುಕೊಂಡೆ. ನಾವು ಕಳಿಸುವುದಿಲ್ಲ; ಅವರೇ ಹೋಗುತ್ತಾರೆ ಎಂದೂ ಒಬ್ಬರು ನುಡಿದರು. ಕೊನೆಯವರೆಗೂ ಅವರ ಜೊತೆ ನಾವಿರುವುದಿಲ್ಲ. ಅವರ ಬೇಕು ಬೇಡಗಳನ್ನು ಅವರು ಕಂಡುಕೊಳ್ಳುತ್ತಾರೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಇದು ಸಹಜ ಪ್ರಕ್ರಿಯೆ. ಹೋಗಿ ವ್ಯಾಸಂಗ, ಅಧ್ಯಯನ ಮುಗಿಸಿ, ಮೌಲ್ಯಯುತ ಸರ್ಟಿಫಿಕೇಟುಗಳು, ಪದವಿ ಪ್ರಮಾಣಪತ್ರಗಳನ್ನು ಪಡೆದು ಒಂದಷ್ಟು ವರ್ಷ ಉದ್ಯೋಗ ಮಾಡಿ ದುಡ್ಡು ಮಾಡಿಕೊಂಡು ಸ್ವದೇಶಕ್ಕೆ ಮರಳುವವರೂ ಇದ್ದಾರೆ. ಮರಳದೇ ಅಲ್ಲಿಯೇ ಸೆಟಲ್ ಆಗುವವರೂ ಇದ್ದಾರೆ. ಅದು ಅವರ ಆಗಿನ ಪರಿಸ್ಥಿತಿ ಮತ್ತು ಮನಸ್ಥಿತಿ ಅಷ್ಟೇ.

ಪೋಷಕರಾದವರು ಮೊದಲು ಬದಲಾಗಬೇಕು. ತಾವು ನೋಡಿದ ಮೊಲಕ್ಕೆ ಮೂರು ಕೊಂಬು ಎನ್ನುವ ವಿತರ್ಕವನ್ನು ಕೈ ಬಿಡಬೇಕು. ಮಕ್ಕಳ ಆಸೆ ಆಕಾಂಕ್ಷೆಗಳಿಗೆ ಅಡ್ಡಿಯಾಗದೇ ಸಾಧ್ಯವಾದಷ್ಟೂ ಪ್ರಾಮಾಣಿಕ ಪ್ರೋತ್ಸಾಹ ನೀಡಬೇಕು. ಅವರು ಪರ್ಮಿಶನ್ ಕೇಳುತ್ತಿಲ್ಲ; ಇನ್ಫರ್ಮೇಶನ್ ಕೊಡುತ್ತಿದ್ದಾರೆ ಎಂದುಕೊಂಡರೆ ಆ ಮಟ್ಟಿಗೆ ಕಡುವಾಸ್ತವವನ್ನು ಅರಿಯಬಹುದು. ಕೆಲವೊಮ್ಮೆ ಪೋಷಕರು ತಾವು ಸಾಧನೆ ಮಾಡಲಾಗದ ಅತೃಪ್ತತೆಗಳನ್ನೆಲ್ಲ ತಮ್ಮ ಮಕ್ಕಳಿಗೆ ಹೇರಿ ವಿನಾಕಾರಣ ಗೊಂದಲಕ್ಕೆ ಬೀಳಿಸುವರು. ತಾವು ಕನಸು ಕಂಡ, ಅರ್ಧಕ್ಕೆ ಕೈ ಬಿಟ್ಟ ಓದು, ವಿದ್ಯೆ, ಉದ್ಯೋಗಗಳನೆಲ್ಲ ಅವರಿಗೆ ಉಣಬಡಿಸಿ, ‘ನಾನಂತೂ ಸಾಧಿಸಲಾಗಲಿಲ್ಲ; ನೀನಾದರೂ ಸಾಧಿಸಿ ನಮ್ಮ ಮನೆತನದ, ವಂಶದ, ಕುಟುಂಬದ ಮಾನ ಮರ್ಯಾದೆಗಳನ್ನು ಎತ್ತಿ ಹಿಡಿ’ ಎಂಬ ಸಮಜಾಯಿಷಿ ಬೇರೆ. ಇಂಥವರನ್ನು ಕಂಡರೆ ಮೈಯೆಲ್ಲ ಉರಿದು ಹೋಗುತ್ತದೆ. ನಮಗೇ ಹೀಗೆ ಆಗುವಾಗ ಇನ್ನು ಅವರ ಮಕ್ಕಳಿಗೆ ಹೇಗಾಗಬೇಡ? ಅಪ್ಪನಾದವನು ಹುಟ್ಟಿಸಿದ ಒಂದೇ ಕಾರಣಕಾಗಿ (ಅದೂ ಅವನ ತೆವಲಿಗೋಸ್ಕರ) ಮಕ್ಕಳು ಅದನ್ನು ಪಾಲಿಸಲೇಬೇಕೆ? ಅವರಿಗೆ ಅವರದೇ ಆದ ಮನಸು ಮತ್ತು ಕನಸುಗಳು ಇರುತ್ತದಲ್ಲವೆ? ಅವರ ಅಸ್ತಿತ್ವ ಮತ್ತು ವ್ಯಕ್ತಿತ್ವಗಳನ್ನು ನಾವು ಗೌರವಿಸಬೇಕು. ಅವರಿಗೆ ನಾವು ಪ್ರೀತಿ, ಮಮತೆ ಮತ್ತು ಅಭಿಮಾನಗಳನ್ನು ನೀಡಬೇಕೇ ವಿನಾ ಒತ್ತಾಯ ಮಾಡಬಾರದು. ಅವರು ತಾವು ಕಂಡುಕೊಂಡ ಜೀವನವನ್ನು ಸಾಕ್ಷಾತ್ಕರಿಸಿಕೊಳ್ಳಲು ಅನುವು ಮಾಡಿಕೊಡಬೇಕು. ಶಕ್ತ್ಯನುಸಾರ ನೆರವಾಗಬೇಕು. ಅದಕಾಗಿಯೇ ಗಿಬ್ರಾನನು ‘ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ’್ಲ ಎಂದು ಎಚ್ಚರಿಸಿರುವುದು! ‘ತನ್ನ ಮಕ್ಕಳಿಗೆ ಮೀನು ಕೊಡಿಸುವವನು ನಿಜವಾದ ಅಪ್ಪನಲ್ಲ ; ಮೀನು ಹಿಡಿಯುವುದನು ಕಲಿಸಿ ಕೊಡುವವನು ಪರಿಪೂರ್ಣನಾದ ತಂದೆ’ ಎಂಬ ಮಾತಿದೆ. ಅದರಂತೆ ಅನಂತ ಸಾಧ್ಯತೆಗಳನ್ನು ಜೀವನದ ನಾನಾ ನಮೂನೆಯ ಸ್ತರಗಳಲ್ಲಿ ಆವಿಷ್ಕರಿಸಲು ತನ್ನ ಮಕ್ಕಳಿಗೆ ಅವಕಾಶ ನೀಡಬೇಕು.

ಇದನ್ನು ಮುಗಿಸುವ ಮುನ್ನ ನನ್ನ ಗುರುಕಾಣ್ಕೆಮಾಲಿಕೆ ಪುಸ್ತಕದ 189 ನೇ ಬಿಡಿಹೂವಿನ ಬರೆಹವನ್ನು ಇಲ್ಲಿ ಉಲ್ಲೇಖಿಸ ಬಯಸುವೆ:

ಕುಟೀರಕೆ ಓರ್ವ ಭಕ್ತರು ಬಂದಿದ್ದರು. ಹೀಗೇ ಮಾತಾಡುವಾಗ ಗುರುವಿನ ಬಳಿ ತಮ್ಮ ಅಳಲನ್ನು ತೋಡಿಕೊಂಡರು. ಕಷ್ಟಪಟ್ಟು ಇಬ್ಬರು ಗಂಡು ಮಕ್ಕಳನ್ನು ಬೆಳೆಸಿ, ಓದಿಸಿದರು. ಒಬ್ಬ ಎಂಜಿನಿಯರು, ವಿದೇಶಕೆ ಹೋಗಿ ಬಂದು ಮಾಡುವನು. ಬುದ್ಧಿವಂತ. ಆದರೇನು? ಯಂತ್ರಾಂಶ ತಂತ್ರಾಂಶಗಳ ನಡುವೆ ಹುದುಗಿ ಮಾನವತೆಯ ಮಂತ್ರವನ್ನು ಮರೆತವನು. ಅವನ ಬಳಿ ದುಡ್ಡಿದೆ. ಪ್ರೀತಿಯಿಲ್ಲ.
ಇನ್ನೊಬ್ಬನಿಗೆ ಕುಟುಂಬ ಮತ್ತು ತಾಯ್ತಂದೆ ಎಂದರೆ ಕಕ್ಕುಲಾತಿ. ಅಡುಗೆ ಕಂಟ್ರಾಕ್ಟರು. ಅನ್ನದಾನದ ಜೊತೆ ಪುಣ್ಯ ಸಂಪಾದನೆ. ಹೃದಯವಂತ. ಚಿಕ್ಕಮಗನ ಜೊತೆಯೇ ಇರುವ ಈತ ದೊಡ್ಡಮಗನ ಅಗಲಿಕೆಯನ್ನು ಚಿಕ್ಕಮಗನ ಸಖ್ಯದಲ್ಲಿ ಮರೆತಿದ್ದಾರೆ.

ಆಗು ಗುರುವು ಹೇಳಿದರು: ಇದು ಇಂದಿನ ಭಾರತದ ಕತೆ. ನೆಮ್ಮದಿ ಎಲ್ಲಿದೆಯೋ ಅಲ್ಲಿದ್ದು ಬಿಡಿ. ವಿಧಿ ವಿಪರೀತವನು ಬಲ್ಲವರು ಇಲ್ಲ. ಇಲ್ಲಿ ಸರಿ ತಪ್ಪುಗಳಿಗಿಂತ ಹೃದಯವಂತಿಕೆ ಇಲ್ಲದ ಬುದ್ಧಿವಂತಿಕೆಯಿಂದ ಆಗುತ್ತಿರುವ ಅಪಾಯಗಳನ್ನು ಮನಗಾಣಬೇಕು. ನಿಮಗೇನೋ ಇಬ್ಬರಿದ್ದಾರೆ. ಒಬ್ಬನೇ ಮಗ ಇದ್ದು ಆತ ನಿಮ್ಮ ದೊಡ್ಡಮಗನಂತೆ ಹೃದಯ ಮತ್ತು ಭಾವದಾರಿದ್ರ್ಯಗಳಿಂದ ನರಳುವಂತಾಗಿದ್ದರೆ ಏನು ? ಯೋಚಿಸಿ. ಅಂಥ ಪೋಷಕರು ಸಹ ಇಲ್ಲಿಗೆ ಬರುತ್ತಾರೆ. ಸಮಾಧಾನ ಕೇಳುತ್ತಾರೆ ಎಂದರು.

ನಾನು ಯೋಚಿಸುತಿದ್ದೆ: ಪೀಳಿಗೆಯ ಅಂತರ ಎಂಬುದು ಬರುಬರುತ್ತಾ ಕಡಮೆ ಆಗಿ, ಐದಾರು ವರುಷಗಳಲ್ಲೇ ಆಲೋಚನೆ ಬದಲಾಗಿ ಮಾತು, ನಡತೆ, ವ್ಯಕ್ತಿತ್ವಗಳ ಮೇಲೆ ಗಾಢ ಪರಿಣಾಮ ಬೀರುತ್ತಿದೆ. ಬಹುಶಃ ಇದಕ್ಕಾಗಿಯೋ ಏನೋ ನಮ್ಮ ಹಿಂದಿನವರು ‘ಕರ್ಮ ಥಿಯರಿ’ಯನು ಮುಂದಿಟ್ಟು ಮನಸಿಗೊಂದು ಶಾಂತತೆ ಕೊಡುತ್ತಿದ್ದರು.

ಮಕ್ಕಳು ಬೆಳೆದ ಮೇಲೆ ನಮ್ಮವರಲ್ಲ; ದೇಶದ ಮತ್ತು ಪ್ರಪಂಚದ ಆಸ್ತಿ. ಅವರು ಬೇರೊಂದು ಕಾಲಮಾನದಲ್ಲಿ ಮತ್ತು ಆಯಾಮದಲ್ಲಿ ಬದುಕಬೇಕು. ‘ಅರಗಿನಂಥ ತಾಯಿ; ಮರದಂಥ ಮಕ್ಕಳು’ ಎಂಬ ಗಾದೆ ಇದೆ. ಅವರೇ ಸ್ವತಃ ಪೋಷಕರು ಆದಾಗ ಬದುಕಿನ ಇನ್ನೊಂದು ಮಗ್ಗುಲು ಮನವರಿತ ಎಂದರು ಗುರು.

-ಡಾ. ಹೆಚ್ ಎನ್ ಮಂಜುರಾಜ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x