ಒಂದು ಪರ್ಸಿನ ಕತೆ…: ಅಮರದೀಪ್

ಆಗಾಗ ನಾವು ಗಂಡಸರು  ಎದೆ ಮೇಲಿನ ಜೇಬು ಮುಟ್ಟಿ ನೋಡಿಕೊಳ್ಳುತ್ತೇವೆ. ಖಾತರಿಯಾದರೆ ಸಮಾಧಾನ; ಮೊಬೈಲ್ ಇದೆ ಅಂತ. ಪ್ಯಾಂಟಿನ ಹಿಂಬದಿಯ ಜೇಬು ಮುಟ್ಟುತ್ತೇವೆ.ಪರ್ಸ್ ಇದೆಯಾ?! ಇಲ್ಲವಾ?!! ಅಂತ.  ಎದೆ  ಜೇಬಿನಲ್ಲಿ ಮೊಬೈಲ್ ಬಿಟ್ಟು ಚೀಟಿ ಚಪಾಟಿ,  ವಿಸಿಟಿಂಗ್ ಕಾರ್ಡ್, ಪೆಟ್ರೋಲ್ ಹಾಕಿಸಿದ ಬಿಲ್ಲು, ಎಟಿಎಂ ನಲ್ಲಿ ದುಡ್ಡು ಡ್ರಾ ಮಾಡಿದ ಪ್ರಿಂಟೆಡ್ ರಸೀತಿ, ಮೆಡಿಕಲ್ ಶಾಪಿಗೆ ಹೋಗಲೆಂದು ಇಟ್ಟುಕೊಂಡ ಡಾಕ್ಟರ್ ಬರೆದುಕೊಟ್ಟ ಗುಳಿಗೆ ಚೀಟಿ.. ಹಾಳು ಮೂಳು ಎಲ್ಲವನ್ನು ತುರಿಕೊಂಡಿರುತ್ತೇವೆ…  ದುಡ್ಡೊಂದನ್ನು ಬಿಟ್ಟು.

ಪರ್ಸಿನ ಕತೆಯೂ ಹಾಗೇ… ಅಲ್ಲಿ ಎಟಿಎಂ ಕಾರ್ಡ್, ಡ್ರೈವಿಂಗ್ ಲೈಸನ್ಸ್,  ಆರ್.ಸಿ. ಕಾರ್ಡ್, ಲ್ಯಾಮಿನೇಷನ್ ಮಾಡಿಸಿದ ಪಾನ್ ಕಾರ್ಡ್, ಆಧಾರ್ ಕಾರ್ಡ್, ಒಂದೆರಡು ಪಾಸ್ ಪೋರ್ಟ್ ಸೈಜ್ ಫೋಟೋ. ವಿಶೇಷವಾಗಿ  ಅತೀ ಇಷ್ಟಪಡುವವರ ಅಮ್ಮ ಅಪ್ಪಂದೋ, ಹುಡುಗೀದೋ ಸೆಪರೇಟಾಗಿ ಇಟ್ಟಿರುತ್ತೇವೆ…. ಅದರೊಂದಿಗೆ ದುಡ್ಡು ಇರಲೇಬೇಕೆಂದಿನಿಲ್ಲ… ಆದರೂ ಪರ್ಸ್ ಅಂತೂ ಹಿಂಬದಿ ಜೇಬಲ್ಲಿರಬೇಕು.

ಎಲ್ಲಾದ್ರೂ ಹೊಟೆಲ್ಲಿಗೋ ಬಾರಿಗೋ ಶಾಪಿಂಗಿಗೋ ಹೋಗಿ ತಿಂದುಂಡು, ಖರೀದಿ ಮಾಡಿ ” ಎಷ್ಟಾಯ್ತು” ಅಂತ ಕೇಳೋಕೆ ಮುಂಚೇನೆ ಬಿಲ್ಲು ಬಂದಿರುತ್ತೆ… ಆಗ ಪರ್ಸ್ ತೆಗೆದು ದುಡ್ಡು ಎಣಿಸಿ ಕೊಡುವ ಸ್ಟೈಲೇ ಬೇರೆ.  ಅದು ದುಡ್ಡಿದ್ದಾಗಿನ ಖದರ್ರು.

ಜೇಬಲ್ಲಿ, ಪರ್ಸಲ್ಲಿ ದುಡ್ಡಿಲ್ಲದ ಸಂದರ್ಭದಲ್ಲಿ ಆ ಪರ್ಸನ್ನು ಹನ್ನೆರಡು ಬಾರಿ ತಿರುಗಿಸಿ ಇಲ್ಲವೆಂದು ಗೊತ್ತಿದ್ದೂ ಹುಡುಕಾಡುವ ದೈನೇಸಿತನ ಒಂದಲ್ಲ ಒಂದು ಬಾರಿ ಯಾರಾದರೂ  ಎದುರಿಸಿಯೇ ಇರುತ್ತೇವೆ.   ಈಗ ಬಿಡಿ ಬಾರ್ ಕೋಡು, ಗೂಗಲ್ ಪೇ, ಫೋನ್ ಪೇ, ಪೇಟಿಎಮ್, ಎಲ್ಲ ಬಂದ ಮೇಲೆ ಬ್ಯಾಂಕ್ ಅಕೌಂಟಲ್ಲಿ ದುಡ್ಡಿದ್ದರೆ ಸಾಕು… ಜೇಬು ಪರ್ಸು ಖಾಲಿ ಇದ್ದರೂ ನಡೆಯುತ್ತದೆ.  ಹಾಗಂತ ಅದನ್ನೇ ಎಲ್ಲಾ ಕಡೆ ನಂಬಿ ಹೊರಡುವಂತಿಲ್ಲ.. ಆ ಫಜೀತಿ ಬೇರೆಯದೇ… 

ನನಗೆ ಮೊದಲಿಂದಲೂ ಎದೆ ಜೇಬಲ್ಲಿ ಒಂದು ಚಿಕ್ಕ ಪಾಕೆಟ್ ಡೈರಿ ಇರೋದು.   ಅದರಲ್ಲೇ ಫೋನ್ ನಂಬರ್ರು, ಓದಿನ ನೋಟ್ಸು, ನೆನೆದಾಗ ಬರೆದು ಗೀಚಿದ ಚಿಕ್ಕ ಸಾಲುಗಳು ಎಲ್ಲವೂ ಅದರಲ್ಲೇ.  ಪರ್ಸು ನನ್ನ ಇಷ್ಟದ ವಸ್ತುವಾಗಲೇ ಇಲ್ಲ.  ಕಾರಣವಿಷ್ಟೇ,  ಪರ್ಸಿನಲ್ಲಿ ಇಡುವಷ್ಟು ದುಡ್ಡು ನನ್ನಲ್ಲಿರುತ್ತಿರಲಿಲ್ಲ.   ಹಾಸ್ಟಲ್ ನಲ್ಲಿ ಟ್ರಂಕಿನಲ್ಲಿಟ್ಟರೆ ಕದಿಯುವರೆಂಬ ಭಯ ( ಇಟ್ಟು ಕಳೆದುಕೊಂಡಿದ್ದರ ಪರಿಣಾಮವದು). ಹಾಗಾಗಿ ನಂಬಿಕಸ್ಥ ಗೆಳೆಯರ ಕೈಗಿಟ್ಟಿರುತ್ತಿದ್ದೆ. ಬೇಕಾದಾಗ ಕೇಳೋದು… 

 ಓದುವಾಗ, ದುಡಿಯಲಾರದ ದಿನಗಳಲ್ಲಂತೂ ಸರಿಯೇ.  ದುಡಿಯುವಾಗಾದರೂ ಇಟ್ಟುಕೊಳ್ಳಬೇಕಲ್ಲ!  ಅದೂ ಅಭ್ಯಾಸವಾಗುತ್ತದೆಂದು ನಂಬಿದ್ದೆ.  ಸುಡುಗಾಡು, ತಿಂಗಳ ಕೊನೆಗೆ ಬರೋ ಸಂಬಳ ನಂಬಿಕೊಂಡು  ಅದಕ್ಕೂ ಮೊದಲೇ   ಖರ್ಚು ಮತ್ತು ಸಾಲದ ಬಾಬ್ತು ದೊಡ್ದದಿರುತ್ತಿತ್ತು.  ಅದಲ್ಲದೇ ಸಂಬಳದ ನಂತರದ ದಿನಗಳಿಗೆ ಬೇಕಿರುತ್ತಲ್ಲ?!!! ಅದಕ್ಕಾದರೂ ದುಡ್ಡಿಡಲು ಪರ್ಸು ಬೇಕೆನಿಸುತ್ತಲೇ ಇರಲಿಲ್ಲ.  ಮನೆಯಲ್ಲೋ ಆಫೀಸಿನ ಅಲಮಾರಿನಲ್ಲೋ ಇಟ್ಟುಬಿಡುತ್ತಿದ್ದೆ.   ಕೈಯಲ್ಲಿದ್ದರೆ ಅಷ್ಟನ್ನು ಎದೆ ಮೇಲಿನ ಜೇಬಲ್ಲೇ ಇಟ್ಟು ಅಭ್ಯಾಸ… 

ಸ್ನೇಹಿತರು ಹೋದಲ್ಲಿ ಪರ್ಸು (violet ಅಂತ ಆಮೇಲೆ ತಿಳೀತು) ನೋಡಿ “ಲೆದರ್ರಮಾ, ಮಸ್ತಿದೆ” ಅನ್ನೋರು.. ಖರೀದಿಸೋರು.  ತೀರ ಇತ್ತೀಚೆಗೆ ಅಂದರೆ  2011ರ ನಂತರ ನಾನು ಆಸೆಪಟ್ಟು ಖರೀದಿಸಿದ್ದೆಂದರೆ ಒಂದೆರಡು ಪರ್ಸು ಮಾತ್ರ. ಅದರ ಮೇಲೆ ಅಷ್ಟಾಗಿ ಆಸೆ ಹುಟ್ಟಲೇ ಇಲ್ಲ.  ಇದ್ದಾಗಾದರೂ ಅದರಲ್ಲಿ ದುಡ್ಡು ಇಡುತ್ತಿದ್ದೇನೆಂದರೆ ಅದೂ ಇಲ್ಲ.  ಇಟ್ಟಿದ್ದು ಕೇವಲ ಡಿ.ಎಲ್ಲು, ಆರ್.ಸಿ. ವಿಸಿಟಿಂಗ್ ಕಾರ್ಡು, ಮತ್ತು ಕರೆಂಟು ಬಿಲ್ಲು, ಬರೀ ಇಂಥದರಿಂದಲೇ ತುಳುಕುತ್ತಿತ್ತು.

ಅಪರೂಪಕ್ಕೆ ದುಡ್ಡಿದ್ದಾಗ, ಅದೆಷ್ಟು ದಿನ ಬಳಿಯಿರುತ್ತೋ ಗೊತ್ತಿಲ್ಲ… ನನ್ನ ಕೈಯಲ್ಲಿ ದುಡ್ಡು ನಿಲ್ಲುವುದಿಲ್ಲವೆಂದು ಗೊತ್ತಿದ್ದೂ  ಪರ್ಸಿನಲ್ಲಿ ದುಡ್ಡಿಟ್ಟುಕೊಂಡು  ಅದೊಮ್ಮೆ ಕನ್ಯಾ ( ನೋಡಲಲ್ಲ)  ತೋರಿಸುವ ಘನಕಾರ್ಯಕ್ಕೆಂದು ಗದಗಕ್ಕೆ ಹೋಗಿದ್ದೆ. ಮೂರುವರೆ ಸಾವಿರ ಇತ್ತು. ಮರಳಿ ಬರುವಾಗ ರೈಲ್ವೆ ಸ್ಟೇಷನ್ ದಾಟಿ ಅರ್ಧ ಕಿಲೋಮೀಟರ್ ದಾಟಿರಲಿಲ್ಲ. ನಾವಿದ್ದ ಬೋಗಿಯಿಂದಲೇ ಒಬ್ಬ ಹಾರಿದ್ದಲ್ಲದೇ ಡೋರಲ್ಲಿದ್ದ ನನಗೇ ಫಿಂಗರ್ ತೋರಿಸಿ ಹಂಗಿಸಿದ್ದ.  ಅಗಲೂ ಗೊತ್ತಾಗಲಿಲ್ಲ. ಸುಮಾರು ಹೊತ್ತಾದ ನಂತರ ಹಿಂಬದಿಗೆ ಕೈ ಹಾಕಿದರೆ ಪರ್ಸಿಲ್ಲ.  

“ಇವ್ನೌನ್,  ಪರ್ಸೇ ಇಡದವನು ನಾನು, ಅಪರೂಪಕ್ಕೆ ಖರೀದಿಸಿದ ಪರ್ಸಲ್ಲಿ ದುಡ್ಡಿಟ್ಟುಕೊಂಡರೆ ಹೀಗಾಯ್ತಲ್ಲಾ!?” ಅಂತ ಬೇಜಾರಾಗಿ ಪರ್ಸ್ ಸಹವಾಸವನ್ನೇ ಬಿಟ್ಟಿದ್ದೆ.

ಆಗಾಗ ಆಫೀಸಲ್ಲಿ, ಮನೆಯಲ್ಲಿ,ಗೆಳೆಯರ ಮಧ್ಯೆ ತಮಾಷೆಗೆ ದುಡ್ಡಿನ ವಿಚಾರ ಬಂದರೆ ಸಾಕು; ” ಕಾಯಕವೇ ಕೈ ಸಾಲ” ಅಂದುಬಿಡುತ್ತಿದ್ದೆ.  ಅದೊಮ್ಮೆ ಸದಾ ಕಾಲಕ್ಕೂ ಕೇಳಿದರೆ ಇಲ್ಲವೆನ್ನದೇ ಸಾಲ ಕೊಡುವ ಲಕ್ಷ್ಮಿಪುತ್ರಿಯಂಥ ಗೆಳತಿಯೊಬ್ಬಳು  ನನ್ನ ಜನ್ಮ ದಿನಕ್ಕೆ  ಪರ್ಸೊಂದನ್ನು ಗಿಫ್ಟ್ ಮಾಡಿದಳು. ದುಡ್ಡು ಅದರಲ್ಲಿಡಲು ಮನಸ್ಸು ಬರಲೇ ಇಲ್ಲ. ಆದರೆ ಪ್ರೀತಿಯಿಂದ ಕೊಟ್ಟಿದ್ದು ಪರ್ಸ್ ನಾನಿಟ್ಟುಕೊಳ್ಳಲೇಬೇಕು…. ಆದರೆ ಏನಿಡುವುದು?!!! ಮೊದಮೊದಲು ಅದನ್ನು ಎಷ್ಟು ಚೆಂದ ಕಾಪಾಡಿಕೊಂಡೆ.  ನಂತರ ಅದೇ ಕತೆ…. ದುಡ್ಡೊಂದನ್ನು ಬಿಟ್ಟು ಉಳಿದೆಲ್ಲಾ ತುಂಬಿಕೊಳ್ಳುತ್ತಾ ಹೋಯಿತು…. ಆಗಾಗ ಬೇಡವಾದವುಗಳನ್ನು ಪರ್ಸಿನಿಂದ ಬಿಸಾಡುತ್ತಿದ್ದೆ. ಮತ್ತೆ ಖುಷ್ಬೂ ಸ್ಲಿಮ್ಮಾದಂತೆ ತೆಳ್ಳಗಾಗುತ್ತಿತ್ತು.  

ಕಾಲೇಜ್ ಗೆಳೆಯ/ತಿಯರ ವಾಟ್ಸಪ್ ಗ್ರೂಪ್ ಆದಮೇಲೆ ಮೊದಲಿಂದಲೂ ಸಲುಗೆಯಿದ್ದ  ಗೆಳೆಯ ಗೆಳತಿಯರನ್ನು  ರೇಗಿಸುವುದು ಮಾಮೂಲು….   ಅವರ ತುಂಬಾ ಹಳೆಯ ಅಂದರೆ ಕಾಲೇಜಿನ ಅಥವಾ ಅದಕ್ಕೂ ಮುಂಚಿನ ಪಾಸಪೋರ್ಟ್,  ಸ್ಟಾಂಪ್ ಸೈಜಿನ ಕೆಲವು ಫೋಟೋಗಳು ಕಾಲೇಜು ಬಿಟ್ಟು ಬರುವಾಗ ಯಾವಾಗ ಪಡೆದಿದ್ದೆನೋ ಅಥವಾ ಎತ್ತಿಕೊಂಡಿದ್ದೆನೋ ನೆನಪಿಲ್ಲ,  ಈಗಲೂ ಇವೆ… ಒಮ್ಮೆ ಗೆಳತಿಯೊಬ್ಬಳ ಹಳೆಯ ಫೋಟೋ ಗ್ರೂಪಲ್ಲಿ ಶೇರ್ ಮಾಡಿ ” ಇಪ್ಪತ್ತೈದು ವರ್ಷಗಳಿಂದ ಕಾಣೆಯಾಗಿದ್ದಾಳೆ, ಪತ್ತೆಯಾದರೆ ಈ ಗ್ರೂಪಿನಲ್ಲಿ ಮಾಹಿತಿ ಕೊಡಿ”  ಅಂತ ಹಾಕಿಬಿಟ್ಡಿದ್ದೆ.  ನೋಡಿದರೆ ಆ ಫೋಟೋದಲ್ಲಿದ್ದವಳೂ ಗ್ರೂಪಲ್ಲಿದ್ದಳು.

ಉಳಿದವರು ಅಲೆಲೆಲೆ….. ” ಈ ಬಡ್ಡಿಮಗ ಕಾಲೇಜಲ್ಲಿ ನಿನ್ನ  ಲೈನ್ ಹೊಡಿತ್ತಿದ್ದ ಅಂತ ಕಾಣುತ್ತೆ, ಹೌದೇನೇ?!!!!” ಎನ್ನುವಂತಾಗಿತ್ತು….. ಅದಾಗಿ ಆ ಪ್ರಸಂಗವನ್ನು ಮರೆತೇಬಿಟ್ಟಿದ್ದೆ.   ಸ್ಲಿಮ್ಮಾಗಿತ್ತಲ್ಲಾ! ಖುಷ್ಬೂನಂತೆ ಆಗ ಪರ್ಸಲ್ಲಿ ಮತ್ತೆ ಸಿಕ್ಕಿದ್ದು ಆ  ಹಳೆಯ ಫೋಟೋ. 

ಗಿಫ್ಟ್ ನೀಡಿದ ಗೆಳತಿ ಲಕ್ಷ್ಮಿಪುತ್ರಿಯ ಪರ್ಸಿಗೀಗ ಭರ್ತಿ ನಾಲ್ಕು ವರ್ಷ. ಹಿಂಬದಿಯ ಜೇಬಲ್ಲಿಟ್ಟು ಇಟ್ಟು ಕೂತು ಎದ್ದು ಅದರ ಬೆನ್ನೆಲುಬು, ಪಕ್ಕೆ, ಮತ್ತು  ಮೈಕೈ ಮೆತ್ತಗಾಗಿದೆ. ಮೊದಲಿನಂತೆ ಪರ್ಸಿನ ಮೇಲೆ ಆಸೆ ಇಲ್ಲದಿರಬಹುದು. ಆದರೆ  ಗೆಳತಿಯೊಬ್ಬಳು “ಪ್ರೀತಿ”ಯಿಂದ ನೀಡಿದ್ದಲ್ಲವೇ! ಜೋಪಾನ ಮಾಡಿಟ್ಟಿದ್ದೇನೆ…. ಬದಲಾಗಿ ಅವಳು ನನ್ನ ಪ್ರತಿ  ಬರ್ತಡೆಗೆ ವಿಶ್ ಮಾಡುವ ನೆನಪಿಗೆ ಶಾಶ್ವತವಿರುವಂತೆ ಅವಳ ಕಣ್ಣ ಹಚ್ಚೆ ನನ್ನ ಕೈ ಮೇಲಿದೆ…. 

-ಅಮರದೀಪ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
ಗಣೇಶ್, ಮೈಸೂರು
ಗಣೇಶ್, ಮೈಸೂರು
1 year ago

ನಿಮ್ಮ ಪರಸ್ ಕತೆ ಪಸಂದ್ ಆಗಿದೆ ಪಾಪ ಖಾಲಿ ಪರ್ಸ್ ಮೇಲೆ ಕತೆ ಬರೆದು ತುಂಬಿಸಿ ಬೆಟ್ಟರಲ್ಲ ಗುರುಗಳೇ…

Savitha S P
Savitha S P
1 year ago

ಚೆನ್ನಾಗಿದೆ….😊

ಗಣೇಶ ಮೈಸೂರು
ಗಣೇಶ ಮೈಸೂರು
1 year ago

ಖಾಲಿ ಪರ್ಸಿನೊಳಗೆ ಅಕ್ಷರಗಳನ್ನು ತುಂಬಿಸಿ ಶ್ರೀಮಂತರಾಗಿದ್ದಿeರಿ. ಪಸಂದ್ ಆಗಿದೆ

3
0
Would love your thoughts, please comment.x
()
x