ಗ್ರಹಣ ಎಂದರೇನು? ಅಂತ ಐದನೇ ಕ್ಲಾಸಿನೊಳಗ ವಿಜ್ಞಾನದ ವಿಷಯದೊಳಗ ಒಂದು ಪ್ರಶ್ನೆ ಇತ್ತು. ಒಂದು ಆಕಾಶಕಾಯ ಇನ್ನೊಂದು ಆಕಾಶ ಕಾಯದ ನೆರಳಿನಿಂದ ಆಂಶಿಕವಾಗಿ ಇಲ್ಲವೇ ಪೂರ್ಣವಾಗಿ ಅಸ್ಫುಟವಾಗುವಿಕೆಯನ್ನು ಗ್ರಹಣ ಎನ್ನುವರು ಅಂತ ಬಾಯಿಪಾಠಾನೂ ಮಾಡಿಸಿದ್ದಳು, ನಮ್ಮವ್ವ. ಹಿಂದ ನಾವು ಬಾಯಿಪಾಠ ಕಲಿತಿದ್ದು ಈಗಲೂ ನೆನಪಿರತದ, ಮೂರು ವರುಷದ ುದ್ಧಿ ನೂರು ವರುಷದ ತನಕಾಂತ. ಆದರ, ಈಗ ಗ್ರಹಣ ಎಂದರೇನು? ಪ್ರಶ್ನೆ ಮುಂದ ನಿಮ್ಮ ಮಾತಿನಲ್ಲಿ ಬರೆಯಿರಿ ಅಂತ ಇತ್ತು, ನಾನೂ ಹಿಂದ ಮುಂದ ನೋಡಲಿಲ್ಲ, ನಮ್ಮವ್ವ ಬಾಯಿಪಾಠ ಮಾಡಿಸಿದ್ದು, ನನ್ನ ಮಾತು ಹೆಂಗಾದೀತು. ಅದಕ್ಕ ಬರದೇ ಬಿಟ್ಟೆ, ಗ್ರಹಣ ಅಂದರೆ ಶಿಕ್ಷೆ. ಗ್ರಹಣದಲ್ಲಿ ಎರಡು ವಿಧ, ಒಂದು ಸೂರ್ಯಗ್ರಹಣ, ಇನ್ನೊಂದು ಚಂದ್ರಗ್ರಹಣ. ಅಂದರೆ ಈ ಶಿಕ್ಷೆಯಲ್ಲಿಯೂ ಎರಡು ವಿಧ, ಒಂದು ಉಪವಾಸದ ಶಿಕ್ಷೆ, ಇನ್ನೊಂದು ನಿದ್ದೆಗೆಟ್ಟು, ತಣ್ಣೀರು ನದೀ ಸ್ನಾದ ಶಿಕ್ಷೆ. ಸೂರ್ಯಗ್ರಹಣ ಎಂದರೆ, ಹಗಲು ಬರುತ್ತದೆ. ಹಗಲಿನಲ್ಲಿ ಯಾವುದೇ ಸಮಯಕ್ಕೆ ಗ್ರಹಣ ಹಿಡಿದರೆ, ವೇದಕಾಲ ಅಂತ, ಮುಂಜಾನೆಯಿಂದಲೇ ಅಥವಾ ಗ್ರಹಣ ಹಿಡಿಯುವ ಹತ್ತೂ ಹನ್ನೆರಡು ತಾಸು ಮೊದಲಿನಿಂದಲೇ ಉಪವಾಸ. ಅದರಾಗೂ ಧರ್ಮ ಸೂಕ್ಷ್ಮ, ಮುಪ್ಪಿನವರು, ಅಶಕ್ತರು, ಮಕ್ಕಳು ಗ್ರಹಣ ಕಾಲದ ಮೂರು ತಾಸು ಗ್ರಹಣ ಹಿಡಿಯುವ ಮೊದಲಿನಿಂದ ಉಪವಾಸ ಇದ್ದರೆ ಸಾಕು. ಆದರೂ ನಮ್ಮವ್ವ, ನೋಡು, ವ್ಯಾಸಾಚಾರ್ ಮನ್ಯಾಗ ಸಣ್ಣ ಹುಡುಗೂರ ಜೊತೆ ದೊಡ್ಡವರೂ ತಿಂತಾರ. ನಾ ಅದಕ್ಕ, ಹೇಳಿ ಬಿಟ್ಟೆ, “ನಮ್ಮನ್ಯಾಗ, ನಮ್ಮ ಹುಡುಗನೂ ಉಪಾಸ ಮಾಡತದ ಪಾಪ, ಏಕಾದಶಿ ಇದ್ದಂಗ ಇರತದ ನೋಡರೀ, ನನಗ ರಾತ್ರೀ ತನಕಾ ಅಡಗೀ ಮನೀಗೆ ಹೋಗೋ ಹಂಗಿಲ್ಲ,” ಅಂದೆ. ಅಂತ, ನನ್ನನ್ನ ಒಳ್ಳೇ ಹುಡುಗನ್ನ ಮಾಡಿ ಬರತಿದ್ದಳು. ನಾನು, ಇನ್ನೇನೂ ಮಾಡಿಕ್ಕಾಗುದಿಲ್ಲ, ಮಾರಿ ಸಣ್ಣ ಮಾಡಿಕೊಂಡು, ಒಳ್ಳೇ ಹುಡುಗನಂಗ, “ಹೂ, ನಾನೂ ಉಪಾಸನ ಇರತೇನಿ” ಅಂತಿದ್ದೆ. ಅದಕ್ಕ, ಸೂರ್ಯಗ್ರಹಣ ಅಂದರ, ಉಪವಾಸದ ಶಿಕ್ಷೆ.
ಇನ್ನ, ಚಂದ್ರಗ್ರಹಣ ಅಂದರ, ನಡುರಾತ್ರಿಯೊಳಗ ಬರತದ. ಮನಿಯೊಳಗ ಗ್ರಹಣ ಹಿಡಿದ ಕೂಡಲೇ, ಮನ್ಯಾಗಿನ ನೀರನ್ನೆಲ್ಲಾ ಛಲ್ಲಿ, ಒಣಗಲಿಕ್ಕೆ ಹಂಡೆ ಇಡತಿದ್ದರಿಂದ, ಗ್ರಹಣ ಬಿಟ್ಟ ಕೂಡಲೇ, ಅಜ್ಜಿಗೆ ಭಾವಿಯೊಳಗ ಬಿಂದಗೀ ಮುಳಗಿಸಿ ಹಗ್ಗ ಕಟ್ಟಿ, ನಾವು, ನಿದ್ದೀಗಣ್ಣನ್ಯಾಗ ನದೀಗೆ ಸ್ನಾನಕ್ಕ ಹೋಗಬೇಕು. ಈ ರಾಹು ಕೇತುಗಳಿಗೆ ಬ್ಯಾರೆ ಸಮಯ ಸಿಗಿಲಿಲ್ಲೇನು ಚಂದ್ರನ ಹಿಡಕೊಳ್ಳಲಿಕ್ಕೆ, ಪ್ರಶಸ್ತ ಸಮಯ ಅಂದರ ಅದೂ ರಾತ್ರೀನೆ ಆಗಬೇಕ. ನಾವೆಲ್ಲ, ಈ ನಡು ರಾತ್ರಿಯೊಳಗ, ಕಟಕಟ ನಡಗೋ ದಿನದೊಳಗೂ ವರದಾ ನದೀಗೆ ನಡೀ ಬೇಕು. ಅಂಥಾ ಥಂಡೀಯೊಳಗ, ಥಣ್ಣೀರು ಸ್ನಾನ, ಮ್ಯಾಲೆ ಒದ್ದೀ ಅರವೀ ಹಾಕಿಕೊಂಡು, ಹಲ್ಲು ತಾಳ ಹಾಕೋ ಹಂಗ, ಆ…. ಅಂತ ಒಂದು ಕಿಲೋಮೀಟರ್ ನಡಕೋತ ಬರಬೇಕು. ಅದಕ್ಕ ಚಂದ್ರಗ್ರಹಣ ಅಂದರ, ನಡುರಾತ್ರಿ ಥಣ್ಣೀರು ಸ್ನಾನದ ಶಿಕ್ಷೆ. ಒಟ್ಟಿನೊಳಗೆ ಗ್ರಹಣ ಅಂದರೆ, ಯಾವುದೋ ಒಂದು ಶಿಕ್ಷೆ, ಅದನ್ನ ಬಿಟ್ಟು ಇನ್ನೇನೂ ಇಲ್ಲ. ಅಂತ ಬರೆದಿದ್ದೆ. ಅದಕ್ಕ, ನಮ್ಮ ವಿಜ್ಞಾನದ ಮಾಸ್ತರು, ನಮ್ಮ ಅಪ್ಪಗ ಆ ಪೇಪರು ತೋರಿಸಿ, “ಊರು ಉಢಾಳಾಗತಾನ ನೋಡರೀ ನಿಮ್ಮ ಮಗ, ಇಷ್ಟೆಲ್ಲಾ ತಲೀ ಒಡಕೊಂಡು ಪಾಠ ಹೇಳಿದರೂ ಹಿಂಗ ರದ ಕೂತಾನ ಖೋಡಿ” ಅಂತ ಬೈದರಂತ. ಖರೇ ಅಂದರ, ನಾಯೇನು ಬರದು ಕೂತಿಲ್ಲ, ಕೂತಗೊಂಡೇ ಪ್ರಶ್ನೆ ಉತ್ತರ ಬರೆದಿದ್ದೆ, ಮತ್ತ ನಮ್ಮ ಮಾಸ್ತರೇನು ತಲಿ ಒಡಕೊಂಡಿರಲಿಲ್ಲ, ಯಾಕಂದರ, ನನಗ ಇನ್ನೂ ಗ್ಯಾರಂಟೀ ಅಂದರ, ನಮ್ಮ ಕ್ಲಾಸಿನ್ಯಾಗ, ನಾನು ಧಡ್ಡ ಇದ್ದೆ ಖರೇ, ನನಗಿಂತ ಶತ ಧಡ್ಡ ಹುಡುಗರಿಗೂ ಅವರು ತಲೀ ಒಡಕೊಂಡಿರಲಿಲ್ಲ ಬಿಡರೀ. ಆದರ, ನಮ್ಮಪ್ಪ ಮಾತ್ರ, “ನೋಡು, ನೀ ಬರೆದದ್ದು ಸರೀ ಅದ, ಆದರ, ಪರೀಕ್ಷಾದಾಗ ಹಂಗ ಬರೀಬಾರದು, ಅಲ್ಲೆ ಮಾಸ್ತರು ಏನು ಕಲಿಸಿರತಾರೋ ಅದನ್ನೇ ಬರೀಬೇಕು, ನಿನಗನಿಸಿದ್ದನ್ನ ಕತೀ-ಕವನದಾಗ ಬರೀ, ಅಂದಿದ್ದ.” ನನ್ನ ಪುಣ್ಯ ಜೋರದ, ಈಗಿನ್ಹಂಗ, ಪೇಪರ ಮನೀಗೆ ಕೊಡತಿದ್ದಿಲ್ಲ, ಇಲ್ಲಾಂದ್ರ ನಮ್ಮವ್ವ ಬಿಡತಿದ್ದಿಲ್ಲ, ಕೈಯೋ-ಕಾಲೋ ಮುರೀತಿದ್ದಳು. ಇರಲಿ ಬಿಡರೀ,
ಹಂಗಾರ ಇಷ್ಟೆಲ್ಲ ಇರೋ ಗ್ರಹಣ ಅಂದರೇನು, ಅದು ಯಾಕ ಬರತದ ಅಂದರ, ಗ್ರಹಣಕ್ಕೆ ಒಳಗಾಗುವ ಕಾಯ ಸ್ವಯಂಪ್ರಭಾಯುತವಾಗಿದ್ದು ಅಪಾರ ಕಾಯವೊಂದರ ನೆರಳಿನಿಂದ ಅಸ್ಫುಟವಾಗುವುದು ಒಂದು ಬಗೆಯ ಗ್ರಹಣ; ಬದಲು ಅದು ಪ್ರತಿಫಲಿತ ಬೆಳಕಿನಿಂದ ಹೊಳೆಯುವುದಾಗಿದ್ದು ಅಪಾರ ಕಾಯವೊಂದು ಇದಕ್ಕೂ ಇದರ ಬೆಳಕಿನ ಆಕಾರಕ್ಕೂ ನಡುವೆ ಸರಿಯುವಾಗ ಅಸ್ಫುಟವಾಗುವುದು ಇನ್ನೊಂದು ಬಗೆಯ ಗ್ರಹಣ. ಮೊದಲನೆಯ ಪ್ರರೂಪದ ಗ್ರಹಣಕ್ಕೆ ಆಚ್ಛಾದನೆ ಎಂದು ಹೆಸರು. ಇದಕ್ಕೆ ಸೂರ್ಯಗ್ರಹಣ ಮತ್ತು ನಕ್ಷತ್ರಗ್ರಹಣ ನಿದರ್ಶನಗಳು. ಸೂರ್ಯಗ್ರಹಣದಲ್ಲಿ ವೀಕ್ಷಕನಿಗೂ ಸೂರ್ಯನಿಗೂ ನಡುವೆ ಚಂದ್ರ ಸರಿಯುತ್ತದೆ. ನಕ್ಷತ್ರಗ್ರಹಣದಲ್ಲಾದರೋ ವೀಕ್ಷಕನಿಗೂ ನಕ್ಷತ್ರಕ್ಕೂ ನಡುವೆ ಚಂದ್ರ ಇಲ್ಲವೇ ಒಂದು ಗ್ರಹ ಸರಿಯುತ್ತದೆ. ಗ್ರಹಣಕಾರಕ ಯಮಳ ನಕ್ಷತ್ರಗಳು ಕೂಡ ಈ ಬಗೆಯ ಗ್ರಹಣಕ್ಕೆ ನಿದರ್ಶನಗಳು. ಎರಡನೆಯ ಪ್ರರೂಪದ ಗ್ರಹಣಕ್ಕೆ ಚಂದ್ರ ಗ್ರಹಣ ಅದರಂತೆಯೇ ಗ್ರಹಗಳ ಉಪಗ್ರಹಗಳ ಗ್ರಹಣಗಳು ಕೂಡ ಉದಾಹರಣೆಗಳು. ಅಂದರ, ಈ ಪ್ರಪಂಚದಾಗ, ಬರೇ ಸೂರ್ಯಗ್ರಹಣ, ಚಂದ್ರ ಗ್ರಹಣ ಮಾತ್ರ ಇರೂದಿಲ್ಲ, ಇನ್ನುಳಿದ ಗ್ರಹಗಳಿಗೂ ಗ್ರಹಣ ಇರತದ. ಅಷ್ಟ ಅಲ್ಲ, ನಕ್ಷತ್ರಗಳಿಗೂ ಗ್ರಹಣ ಹಿಡಿದಿರತದ ಅನ್ನೋದು ಮುಖ್ಯ ಅದ. ರೂಢಿಯಲ್ಲಿ ಗ್ರಹಣ ಎನ್ನುವ ಪದದ ಬಳಕೆ ಭೂಮಿಯಿಂದ ಕಾಣುತ್ತದೆ. ಇದಲ್ಲದೆ ಶುಕ್ರ ಮತ್ತು ಬುಧ, ಸೂರ್ಯನ ಮುಂದೆ ಹಾದುಹೋಗುವ ಅಪೂರ್ವ ಘಟನೆಗಳನ್ನು ಸಂಕ್ರಮ ಎಂದು ಕರೆಯಲಾಗಿದೆ.
ಇದರಾಗ, ಏನೇನೂ ತಿಳೀಲಿಲ್ಲ, ಅಲ್ಲ, ಖರೇ ಅದ, ನಿಮಗ ಹೆಂಗರೇ ತಿಳಿದೀತು, ಇದು ಯಾವುದೋ ಅನ್ಯ ಲೋಕದ ಭಾಷಾ ಇದ್ದಂಗದ, ನಾವೇ ಒಂದು ಕಾಲದಾಗ ಕಲಿತಂತಾ ಭಾಷಾ ಅಂತ ನೆನಪೂ ಆಗದಷ್ಟು ಮರತು ಹೋಗೇದ. ಇರಲಿ ಬಿಡರೀ, ಮರತದ್ದದ್ದು, ಮರತಂಗೇ ಇರಲಿ. ಆದರೆ,
ಎಲ್ಲಾ ಬಿಟ್ಟು ಈ ಗ್ರಹಣ,
ಸೂರ್ಯ ಚಂದ್ರರಿಗೇ ಹಿಡಿಯಲು ಕಾರಣ,
ಇನ್ನೇನಿದೆ, ಜಗತ್ತನ್ನೇ ನೋಡುವ ಅರುಣ,
ನೋಡಿ ಬಿಟ್ಟನಂತೆ, ರಾಹು-ಕೇತುಗಳು
ಬದಲಾಯಿಸಿ, ವೇಷ-ಭೂಷಣ,
ಅಮೃತಕ್ಕಾಗಿ ಬಂದು ಕೂತಿದ್ದ ಹೂರಣ,
ಮುಂದೇನಿದೆ, ವಿಷ್ಣುವಿನಿಂದ ಅವರ ಸಂಹರಣ,
ರಾಹು-ಕೇತು ದ್ವೇಷದಿಂದ, ಹುಡುಕುವರಂತೆ-
ಎಲ್ಲಿರುವನೋ ಅರುಣ,
ಸಿಕ್ಕವನು, ಚಂದ್ರ, ರೋಹಿಣಿ ರಮಣ,
ಅಮವಾಸ್ಯೆಯ ದಿನ ಸಿಕ್ಕೇ ಬಿಟ್ಟ ಅರುಣ,
ರಾಹು-ಕೇತುಗಳು ನುಂಗಿದರಂತೆ ಸೂರ್ಯನ,
ಹುಣ್ಣಿಮೆಯಂದು ಮೆರೆಯುವ ಚಂದ್ರನ,
ಅದೇ ಆಕಾಶದಲ್ಲಿ ನಡೆಯುವ ಚಂದದ ಗ್ರಹಣ,
ನಮಗೆಲ್ಲ ಬರೀ ಗ್ರಹಣದ ಆಚರಣ,
ಗ್ರಹಣ ಬಿಟ್ಟಾದ ಮೇಲೆ ಸ್ನಾನ,
ಬಿಸಿ ಬಿಸಿ ಪಾಯಸದ ಊಟದಲ್ಲಿ ತಲ್ಲೀನ.
ಅಂತ ಹೈಸ್ಕೂಲಿನೊಳಗ, ಕೈಬರಹದ ಮ್ಯಾಗಝೀನ್ ಗೆ ಕವನ ಬರೆದಿದ್ದೆ, “ನಿನಗ ತಿನ್ನೋದು ಬಿಟ್ಟರ, ನಿನ್ನ ತಲೀಗೆ ಇನ್ನೇನೂ ಹೋಗೂದಿಲ್ಲೇನು.” ಅಂತ ಮಾಸ್ತರ ಹುಡುಗೇರ ಮುಂದನ ಬೈದಿದ್ದರು. ಖರೇ ಅದ, ಅಮೃತ ಮಥನ ನಡೆದು, ದೇವತೆಗಳಿಗೆ ಮಾತ್ರ, ಅಮೃತ ಅಂತ, ವಿಷ್ಣು ಪ್ಲ್ಯಾನ್ ಮಾಡಿ, ಮೋಹಿನಿ ರೂಪದಾಗ ನಿಂತಿದ್ದ, ದಡ್ಡ ದೈತ್ಯರು, ಅದನ್ನ ನೋಡಕೋತ ನಿಂತಿದ್ದರು, ಇದನ್ನು ತಿಳಿದದ್ದ, ರಾಹು ಕೇತು ಇಬ್ಬರೂ, ದೇವತೆಗಳಂಗನ ವೇಷಾ ಹಾಕಿಕೊಂಡು, ದೇವತೆಗಳ ಸಾಲಿನ್ಯಾಗ ಬಂದು ಕೂತರಂತ, ಇಡೀ ಜಗತ್ತನ್ನ ನೋಡೋಂಥ ಸೂರ್ಯ ಇದನ್ನ ನೋಡಿ, ವಿಷ್ಣುಗ ಹೇಳಿದನಂತ, ವಿಷ್ಣು ಅವರ ತಲೀ ಕಡದನಂತ. ಅದಕ್ಕ, ಅವರಿಬ್ಬರಿಗೂ ಸೂರ್ಯನ ಮ್ಯಾಲೆ ಸಿಟ್ಟಂತ, ಅವನ ಹಿಂದನ ತಿರುಗತಿರತಾರಂತ, ಒಮ್ಮೊಮ್ಮೆ, ಸೂರ್ಯನಂಗ ಹೊಳಿಯೋ ಚಂದ್ರನ ಕಂಡರು, ಸೂರ್ಯ ಅಂತ ಭ್ರಮಿಸಿ ಹಿಡಿಲಿಕ್ಕೆ ಹೋದರು, ಅವಾ ಓಡಿ ಓಡಿ ಹೋಗಿ ಸೂರ್ಯನೊಳಗ ಅವಕೊಂಡು ಕೂತಿದ್ದನಂತ, ಅದಕ್ಕ ಅಮಾವಾಸ್ಯೆ ಅಂತಾತು. ಅವತ್ತ, ಈ ರಾಹು ಕೇತುಗಳು, ಸೂರ್ಯನ ಹಿಡಕೊಂಡವು, ಇದು ಹಗಲಿನ್ಯಾಗ ಬರತದ, ಮುಂದ, ಚಂದ್ರನ ಹಿಡಕೊಂಡವು, ಅವತ್ತ ಚಂದ್ರ ತಾನೇ ಅಂತ ಆಕಾಶದಾಗ ಮೆರೀತಿದ್ದ, ಹುಣ್ಣಿವಿ ಆಗಿತ್ತು, ಅದು ರಾತ್ರಿ ಇರತದ. ಅಂತಾರ. ಾದರ, ಜಗತ್ತಿಗೇ ಬೆಳಕು ಕೊಡೋ ಸೂರ್ಯ-ಚಂದ್ರರನ್ನ ಭಾಳ ಹೊತ್ತು ಅವರಿಗೆ ಹಿಡಕೊಳ್ಳಲಿಕ್ಕೆ ಆಗೂದಿಲ್ಲ, ಅದಕ್ಕ, ಸ್ವಲ್ಪ ಹೊತ್ತಿನ್ಯಾಗ ಬಿಟ್ಟು ಬಿಡತಾರ, ಆದರೂ ಅವರ ಇನ್ನೂ ದ್ವೇಷ ತೀರಿಲ್ಲ, ಅನ್ನೋದೇ ಈ ಗ್ರಹಣದ ಹಿಂದಿರುವ ಕತಿ.
ಗ್ರಹಣ ಹಿಡಿಯೋದು ಮತ್ತ ಬಿಡೋದು ಅಂದರ ಎರಡು ಆಕಾಶ ಕಾಯಗಳ ನಡುವೆ ಇನ್ನೊಂದು ಆಕಾಶಕಾಯ ಬಂದು ಮೊದಲಿನ ಆಕಾಶ ಕಾಯ ನಮಗ ಕಾಣದಂತಾಗೋದು. ಇದು ಯಾಕ ಆಗತದ ಅಂದರ, ಆಕಾಶದಾಗ ಎಲ್ಲಾ ಆಕಾಶ ಕಾಯಗಳೂ ತಮ್ಮ ತಮ್ಮ ಪಥದೊಳಗೇ ತಿರಗತಿರತಾವ, ಆದರ, ಭೂಮಿ ಮ್ಯಾಲ, ದಾರಿ ಬಿಟ್ಟು ತಿರಗೋ ಅಂಥವರಿಗೇ ಇರೋದು ಪಾಣಿಗ್ರಹಣ, ಈ ಪಾಣಿಗ್ರಹಣ ಅಂದರ ಮದುವಿ, ಹಿಡೀತದ ಅಷ್ಟೇ ಬಿಡೂದಿಲ್ಲ ಅಂತಾರ, ಯಾಕಂದರ, ದಾರಿ ಬಿಟ್ಟರಿಗೇ, ಈ ಪಾನಿಗ್ರಹಣ ಅಂದರ ಮದುವಿ ಮಾಡಿದರ ಸರಿ ಹೋಗತಾರೇನೋ ಅಂತ ಹಿರಿಯರು ಹಿಡಿದು ಮದುವಿ ಮಾಡಿರತಾರ ಅಥವಾ ಈ ದಾರಿ ಬಿಟ್ಟು ತಿರುಗೋವಾಗ, ತಮಗ ಎದುರಿಗೆ ಸಿಕ್ಕವರನ್ನ ತಾವ ಕಟಗೊಂಡಿರತಾರ ಅದಕ್ಕ, ಆದರ, ಈಗೀಗ, ಡೈವರ್ಸ ಆಗೋ ಸಂಖ್ಯಾ ನೋಡಿದರ, ಬಿಡೋದರಕಿಂತಾ ಬಿಡಿಸಿಕೊಳ್ಳಲಿಕ್ಕೆ ಪ್ರಯತ್ನಾ ಭಾಳ ಇರತದ, ಮತ್ತ ತಾವ ಹಿಡಿದರೋ ಕೈ ಬಿಡಲಿಕ್ಕೆ ಪ್ರಯತ್ನಾ ಮಾಡೋದಿದು.
ಯಾರಿಗರೇ ಭಾಳ ಚಿಂತಿ, ದುಃಖ, ತನ್ನದಲ್ಲದ ಕಾರ್ಯಕ್ಕ ಬಂದಿರೋ ತೊಂದರಿ, ಇವೆಲ್ಲದರಿಂದ ಸ್ವಲ್ಪ ದಿನ ಭಾಳ ತ್ರಾಸನ್ಯಾಗಿದ್ದರ, ಗ್ರಹಣ ಹಿಡದದ ಬಿಡು ಅವಗ, ಅದಕ್ಕ ಹಂಗಾಗ್ಯಾನ. ಅಂತಾರ. ಈ ಜೀವನಾ ಅನ್ನೋ ನಾಟಕದಾಗ, ನಾವೇ ಹೀರೋಯಿನ್, ಚಂದ್ರನಂಗ ಹೊಳೀತೇವಿ ಅನ್ನೋ ಹುಡುಗೇರಿಗೆ, ಮದುವಿ ಅಂದರ, ಸೂರ್ಯನಂತಾ ಪ್ರಕಾಶದ, ಬಿಟ್ಟೂ ಬಿಡದೇ ಕೆಲಸಾ ಮಾಡೋ ಹುಡುಗ ಬೇಕು, ಆದರ, ಆ ಹುಡುಗನ ಅವ್ವಾ-ಅಪ್ಪಾ ಅಂದರ ರಾಹು-ಕೇತು ಇದ್ದಂಗ. ನಮಗ ರಾಹು ಕೇತು ಇಲ್ಲದ ಮನೀನೇ ಬೇಕು ಅಂತಾವ.
ವಿಜ್ಞಾನದ ಮಾಸ್ತರು ಅವರ ಹೆಂಡತಿ, ಅಕೀನೂ ವಿಜ್ಞಾನದ ಮಾಸ್ತರತಿ, ಗ್ರಹಣ ಅಂದರ ವೈಜ್ಞಾನಿಕ ಒಂದು ಸಾಮಾನ್ಯ ಘಟನೆ, ಅದನ್ನ ನಾವು ಈ ಮಡೀಗೆ ಹೋಲಿಸಿ, ಆಚರಣೆ ಮಾಡಬಾರದು ಅಂತ ಸಾಲಿಯೊಳಗ ಮಕ್ಕಳಿಗೆ ಪಾಠ ಹೇಳಿ, ಮನೀಗೆ ಬಂದು, ಸ್ನಾನ ಮಾಡಿ, ನೀರು ಚಲ್ಲಿ ಆಚರಣೆ ಮಾಡಿದರು, ಸಮಾಜ ಸುಧಾರಣೆ ಹೇಳಿದ ಸ್ವಾಮಿಗಳಿಗೆ, ಗ್ರಹಣ ಕಾಲದಾಗ ಹೊರಗ ಬಂದಿದ್ದಕ್ಕ ಹುಚ್ಚು ಹಿಡದದ, ಮುಂದಿನ ಗ್ರಹಣದೊಳಗ ಈ ಹುಚ್ಚು ಬಿಡತದ ಅನ್ನೋ ವಿಷಯ ತುಂಬಿರುವ ಭೈರಪ್ಪನವರ ಗ್ರಹಣ ಅನ್ನೋ ಕಾದಂಬರಿ,ಈ ಗ್ರಹಣ ಅನ್ನೋ ಕಾದಂನರಿ ಕನ್ನಡ ಕಾದಂಬರಿ ಲೋಕದೊಳಗೂ ಭಾಳ ದಿನ ಗ್ರಹಣ ಹಿಡಿಸಿತ್ತು.
ಗ್ರಹಣದ ಕಾಲದಾಗ, ಬರೀ ಹೆಂಗಸರು, ಏನರ ಹೆಚ್ಚಿ, ಕೊಚ್ಚಿ ಮಾಡಿದರ, ಕೂಸಿನ ಸ್ವಾಟಿ ಹರದಿರತದಂತ, ಗ್ರಹಣ ಅಂದರ ಉಪವಾಸ ಇರೋದು ಅಂದರ, ಇಕಿ, ಬಸರೆಂಗಸು, ಯಾಕ ಅಡಗೀ ಮನೀಗೆ ಹೋಗಿದ್ದಳೋ, ಕೂಸಿನ ತುಟಿ ಹರೀಲಿಕ್ಕೆ, ಪಾಪ, ನಮ್ಮಂತಹವರಿಗೆ ತಿಳ್ಯೂದಿಲ್ಲ ಬಿಡರೀ,
ಮತ್ತ, ಗ್ರಹಣ ಅಂದರ, ಬರೇ ನೀರಷ್ಟೇ ಚಲ್ಲೂದಲ್ಲ, ಗ್ರಹಣದ ಮೊದಲು ಬೇಯಿಸಿದ ಯಾವ ಆಹಾರಾನೂ, ಗ್ರಹಣದ ನಂತರ ತಿನಲಿಕ್ಕೆ ಆಗೂದಿಲ್ಲ. ಹಿಂಗಾಗಿ, ಗ್ರಹಣ ಬಿಟ್ಟ ಮ್ಯಾಲೆ, ಬಿಸೀ ಅಡುಗೀ ಮಾಡಿ, ಆಮ್ಯಾಲೆನೇ ಊಟ. ಎಷ್ಟೋ ಸಲ, ಸಜ್ಜಗೀ ಪಾಯಸ, ಅನ್ನ ಝುಣಕದ ಮಸಾಲಿ ಭಾತು, ಅಥವಾ ಗೊಜ್ಜು, ಪಳದ್ಯದ ಊಟ. ಹೊಟ್ಟಿ ಹಸದಿರತದ, ಬಿಸೀ ಅನ್ನ, ಎಷ್ಟು ಹಾಕಿದರೂ ಖಾಲಿ ಅನ್ನೋ ಹಂಗಿರತದ, ನಮ್ಮೂರಾಗ, ಯಾರೂ ಗ್ರಹಣದ ಹಿಂದಿನ ಅಡಗೀ ಊಟಾ ಮಾಡತಿದ್ದಿಲ್ಲ. ಆದರ ಹಾಲು, ಮಸರು ಇವಕ್ಕೆ, ಹರಿಯೋ ನೀರಿಗೆ ದೋಷ ಇಲ್ಲ, ಗ್ರಹಣ ಹಿಡದಾಗ ಕೆಲವರು, ಉಳಿದಿದ್ದ ಅಡುಗೀ ಬೇಡಲಿಕ್ಕೆ ಬರ್ತಾರಂತ, ನಮಗೇನದು ಗೊತ್ತಿಲ್ಲ ಬಿಡರೀ. ಗ್ರಹಣ ಹಿಡಿದಾಗ ಹಾಲು, ಮಸರಿಗೆ ಧರ್ಭಿ ಹಾಕಿಡೋದು ಮಾತ್ರ ಗೊತ್ತು, ನಮ್ಮನೀಗೂ ನಮ್ಮ ಅಜ್ಜೀನ್ನ ಧರ್ಭೆ ಕೇಳಲಿಕ್ಕೆ ಯಾರರೆ ಬರತಿದ್ದರು.
ಇನ್ನ, ಗ್ರಹಣ ಅಂದರ ಯಾವ ನಕ್ಷತ್ರದ ಮ್ಯಾಲೆ ಬಂದಿರತದೋ, ನೋಡಿ, ಗ್ರಹಣ ಬಿಟ್ಟ ಮ್ಯಾಲೆ, ಅವರನ್ನ ಕರಕೊಂಡು ಊರಾಗಿನ ಹಣಮಂತ ದೇವರ ಗುಡೀಗೆ ಹೋಗಿ, ದೀಪಾ ಹಚ್ಚಿ, ನಮಸ್ಕಾರ ಮಾಡಿಸಿ ಬರತಿದ್ದರು.
ಈಗ ಈ ಬೆಂಗಳೂರಿನೊಳಗ, ಗ್ರಹಣ ಬಂದರ, ಪೇಪರಿನವರಿಗೆ, ಟೀವಿ ನ್ಯೂಸ್ ಚಾನಲ್ ನವರಿಗೆ ಹಬ್ಬ, ಯಾವ ರಾಶಿಯವರಿಗೆ ಯಾವ ಫಲ. ಯಾವ ಫಲ ಇದ್ದವರು ಯಾವ ದಾನಾ ಕೊಡಬೇಕು, ಗ್ರಹಣ ಶಾಂತಿ ಯಾವ ದೇವಸ್ಥಾನದೊಳಗೆ ಮಾಡುತಾರ, ಎಷ್ಟು ಹೊತ್ತು ಗುಡೀ ಬಾಗಲಾ ಹಾಕತಾರ, ಒಂದ, ಎರಡ, ಎಲ್ಲಾ ಸುದ್ದಿ ಹೇಳೋ ಸಂಭ್ರಮದಾಗ, ಉಳಿದಿದ್ದ ಸುದ್ದಿ ಎಲ್ಲಾ ಹಿಂದೆ ಉಳೀತಾವು. ಬೆಂಗಳೂರಿನವರಿಗಂತೂ, ಗ್ರಹಣ ಅಂದರ, ಗ್ರಹಣ ಶಾಂತಿಗೆ ಯಾದರೆ ದೇವಸ್ಥಾನದೊಳಗೆ ಹೆಸರು ಬರಸೋದು, ಆಯಾ ಧಾನ್ಯಗಳ ದಾನ, ಮನೀಯೊಳಗ ಗೀಸರ್ ನೀರಿನ ಸ್ನಾನ, ಆದರೆ ಮುಗಿದೇ ಹೋತು, ಇನ್ನೇನದ ಅಂತಾರ. ಇನ್ನೂ ಈ ಗ್ರಹಣದಾಗ, ಹೋಟೇಲೂ ಭಾಳು ಬಂದ್ ಆಗಿರತಾವ. ಟೀವಿ, ಪೇಪರು, ಗುಡಿ ಗುಂಡಾರಕ್ಕ ಛೊಲೋ ವ್ಯಾಪಾರ ಸೃಷ್ಟಿ ಮಾಡಿದರ ಈ ಗ್ರಹಣ, ಹೊಟೇಲು, ದರ್ಶಿನಿಗಳ ವ್ಯಾಪಾರ ನುಂಗಿ ಬಿಡತಾವ ನೋಡರ.
ಇನ್ನ, ಬೆಂಗಳೂರಿನವರು, ಗ್ರಹಣ ಅಂದರ, ಸೂರ್ಯ ಗ್ರಹಣರೇ ಇರ್ಲಿ, ಚಂದ್ರ ಗ್ರಹಣರೇ ಇರ್ಲಿ ಜವಾಹರ ಲಾಲ್ ನೆಹರೂ ತಾರಾಲಯಕ್ಕೆ, ಆಕಾಶಕಾಯಗಳ ನೋಡಲಿಕ್ಕೆ ಹೋಗತಾರ. ಏನು ವಿಶೇಷನೂ ಅದರಾಗ ಕಾಣೂದುಲ್ಲ. ನಾವೆಲ್ಲಾ ಸಣ್ಣವರಿದ್ದಾಗ, ಚಂದ್ರಗ್ರಹಣ ಬಂದರ, ಆಕಾಶದ ಕೆಳಗೆ ನಿಂತು ಬರಿಗಣ್ಣಿಂದನ ನೋಡತಿದ್ದಿವಿ, ಆಕಾಶ ನೋಡಲಿಕ್ಕೆ ತಿಕೀಟು ಯಾಕ ಅಂತ ಕುಣೀತಿದ್ದಿವಿ. ಪರಾತದಾಗ ನೀರು ತುಂಬಿ ಗ್ರಹಣದ ನೆರಳು ತೋರಸತಿದ್ದಿವಿ. ಒಂಚೂರು ಕಷ್ಟ ಆಗೋದು ಅಂದರ, ಸೂರ್ಯಗ್ರಹಣದ್ದು. ಊರಕಿಂತಾ ಮೊದಲನಿಂದನ ನೀವು ಬರೇ ಕಣ್ಣಿನಿಂದ ನೋಡಬ್ಯಾಡರೀ ಅಂತ ಬಡಕೋತಿದ್ದರಲ್ಲ, ಅದನ್ನ ಕೇಳಿ, ನಮ್ಮ ಮನ್ಯಾಗೂ ಹಿರಿಯರು ಬರೇ ಕಣ್ಣಿನಿಂದ ನೋಡಗೀಡ್ಯಾವು ಇವು ಮಂಗ್ಯಾನಂಗವ ಅಂತ ನಮ್ಮನ್ನ ಮನ್ಯಾಗ ಹಿಡದು ಕೂಡಸತಿದ್ದರು, ಅಷ್ಟ ಅಲ್ಲ. ಕಿಡಕೀ ಬಾಗಲಾನೂ ಹಾಕುತಿದ್ದರು. ಈಗಿನಿಂಗ, ಟೀವಿಯೊಳಗ ಲೈವ್ ಶೋ ಗಳನ್ನ ಕಲ್ಪನಾ ಕೂಡಾ ಮಾಡಿಕೊಂಡಿದ್ದಿಲ್ಲ, ಮತ್ತ ನಮಗ ಗ್ರಹಣ ನೋಡಲಿಕ್ಕೆ ತಂಪಿನ ಚಾಳೀಸ ಎಲ್ಲಿ ಸಿಗಬೇಕು, ನಾವೂ ಭಂಡರು, ಕನ್ನಡಿಯೊಳಗಿನ ಪ್ರತಿಬಿಂಬ ನೋಡಲಿಕ್ಕೆ ಪ್ರಯತ್ನಾ ಮಾಡತಿದ್ದಿವಿ. ಕನ್ನಡಿಯೊಳಗಿನ ಪ್ರತಿಬಿಂಬ ಗೋಡೀ ಮ್ಯಾಲ ಬೀಳತದ ಅಂತ ತೋರಸತಿದ್ದಿವಿ. ಭಾಳ ಕಷ್ಟ ಪಟ್ಟು ಒಂದು ನೆಗೆಟಿವ್ ಫೋಟೋ ಹುಡುಕಿ ಇಟ್ಟಿರತಿದ್ದಿವಿ, ಹಿಂಗೇನೂ ಇಲ್ಲಾಂದರ, ಒಂದು ಗುಬ್ಬಿ ಚಿಮಣಿ ಪಾವಿಗೆ ಕಪ್ಪು ಕೂಡಿಸಿ, ನೋಡತಿದ್ದಿವಿ. ಹಂಗೂ ಹಿಂಗೂ ಮಂಗ್ಯಾನಾಟ ಆಡೇ ಬಿಡತಿದ್ದಿವಿ. ಈಗಿನ ಹುಡುಗರು ಇಂತಾ ಪ್ರಯೋಗ ಮಾಡೋಕಿಂತ ಮೊದಲನ, ತಂದಿ ತಾಯಿ ಅದರ ತಯಾರಿ ಮಾಡಿ ಬಿಟ್ಟಿರತಾರ. ನಮ್ಮನೀ ಬಾಜೂದ ಹುಡುಗಾ, ಮೂರು ವರ್ಷದ್ದು, ಅದಕ್ಕ, ಸೂರ್ಯ ಚಂದ್ರ ಭೂಮಿ ಅನ್ನೋದ ತಿಳಿಯೋ ವಯಸ್ಸಲ್ಲ, ಆದರೂ ವಿದೇಶದಿಂದ ಎಕ್ಲಿಪ್ಸ ಕಿಟ್ ತಂದಿಟ್ಟಾರ ಮನ್ಯಾಗ. ಹುಡುಗರಿಗೆ ಹಿಂಗ ಎಲ್ಲಾ ಸಾಧನಾ ಕೇಳೋಕಿಂತ, ತಿಳಿಯೋಕಿಂತ ಮೊದಲ ತಂದು ಕೊಟ್ಟರ, ಆ ಹುಡುಗೂರೊಳಗ ತಮ್ಮ ಕ್ರಿಯಾ ಶಕ್ತಿ ಹೆಂಗ ಉಳದೀತು, ಅವು ಏನು ಸೃಷ್ಟಿ ಮಾಡತಾವು. ಇದ್ದದ್ದನ್ನ ಉಪಯೋಗಿಸಿದರ ಸಾಕು ಅನ್ನೋ ಹಂಗದ. ಒಂದೋ ಎರಡೋ ಮಕ್ಕಳು ಇರತಾವು, ಆ ಮಕ್ಕಳಿಗೂ, ಅವರ ಅಪ್ಪ ಅಮ್ಮನ ಜೊತೆಗೆ ಅಪ್ಪಮ್ಮ, ಅಮ್ಮಮ್ಮ, ಅಪ್ಪಪ್ಪ, ಅಮ್ಮಪ್ಪ ಅನಕೋತ, ಒಂದಿಲ್ಲ ಒಂದು ತಂದಿಟ್ಟರ ಹೆಂಗ, ನಾವೇ ಈಗಿನ ಹುಡುಗರ ಕ್ರಿಯಾ ಶಕ್ತಿಗೆ ಗ್ರಹಣ ಹಿಡಸೇವಿ. ಏನೇನೋ ತಂದು ಹಾಕಿ, ಅವುಗಳಿಗೆ ಏನು ಬೇಕು, ಏನು ಬೇಡ ಅನ್ನೋದನ್ನ ತಿಳಿಯೋಕಿಂತ ಮೊದಲೇ, ಎಲ್ಲಾ ತಂದು ತುಂಬಿ ಕಲಸುಮೇಲೋಗರ ಮಾಡಿ, ಅವರ ಬುದ್ಧಿಗೆ ಗ್ರಹಣ ಹಿಡಿಸಿ ಕೂಡತೇವಿ. ಯಾಕೋ ಹಿಂಗೆ ಈ ತಿಂಗಳೊಳಗೆ ಎರಡು ಗ್ರಹಣಗಳು, ಸೂರ್ಯಗ್ರಹಣ ಮತ್ತು ಚಂದ್ರ ಗ್ರಹಣ, ಅದೂ ರಕ್ತ ಚಂದ್ರ ಗ್ರಹಣ, ಪ್ರಪಂಚದ ರಾಜಕೀಯ, ದೇಶದ ರಾಜಕೀಯಗಳ ಗ್ರಹಗತಿ, ಪ್ರಾಕೃತಿಕ ಬದಲಾವಣೆಗಳು, ಹಿಂಗೆ ಏನೇನೋ ವಿಷಯಗಳು, ವಿಶ್ಲೇಷಣೆಗಳು, ವರದಿಗಳನ್ನು ನೋಡುತ್ತಾ, ಕೇಳುತ್ತಿದ್ದಾಗ, ನಮ್ಮ ಹಿಂದಿನವರ ಶಾಂತ ಮನಸ್ಕತೆ, ಆಚರಣೆಗಳು ನೆನಪಿಗೆ ಬಂದವು, ಹಂಚಿಕೊಳ್ಳಲು ನೀವಿದ್ದೀರಿ, ಇಷ್ಟು ಸಾಕಲ್ಲ. ಮತ್ತೆ ಸಿಗೋಣ
-ಡಾ. ವೃಂದಾ ಸಂಗಮ್