ಕುಗ್ಗಿದಾಗಲೆಲ್ಲಾ ಕಗ್ಗ ಓದಬೇಕು !: ಮನು ಗುರುಸ್ವಾಮಿ

ಹೌದು.. ಮನುಷ್ಯ ಕುಗ್ಗಿದಾಗಲೆಲ್ಲಾ ಮಂಕುತಿಮ್ಮನ ಕಗ್ಗ ಓದಬೇಕು. ಬಹುತೇಕ ಮನುಷ್ಯನ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ, ಇರುವಷ್ಟು ಕಾಲ ಸೂರ್ಯನಂತೆ ಬೆಳಗಿ ಮರೆಯಾಗಬೇಕೆಂಬ ಸಂದೇಶವನ್ನು ಸಾರುವಲ್ಲಿ, ಬದುಕಿನ ಅಪರಿಮಿತ ಹೋರಾಟ, ಅನಿರೀಕ್ಷಿತ ಸವಾಲುಗಳನ್ನು ಹೇಗೆ ಎದುರುಗೊಳ್ಳಬೇಕೆಂಬ ವಿಚಾರವನ್ನು ಮನದಟ್ಟು ಮಾಡುವಲ್ಲಿ ಈ ಕೃತಿ ಮಹತ್ವದ ಪಾತ್ರವಹಿಸಿದೆ. ನಾನು, ನನ್ನದೆಂಬ ಭ್ರಮೆಯಲ್ಲಿ ಜೀವನವಿಡೀ ನಡೆದು, ಕೊನೆಗೆ ಎಲ್ಲವನ್ನು ಬಿಟ್ಟು ಮಣ್ಣು ಸೇರುವ ಮನುಷ್ಯನ ನಶ್ವರ ಬದುಕಿನ ಬಗ್ಗೆ ಇಲ್ಲಿನ ಚೌಪದಿಗಳು ಎಳೆ ಎಳೆಯಾಗಿ ತಿಳಿಸಿಕೊಡುತ್ತವೆ. ನಾಲ್ಕು ಸಾಲಿನ ಸಣ್ಣ ಸಣ್ಣ ಪದ್ಯಗಳಿಂದ ಕೂಡಿರುವ ಈ ಕೃತಿ ನೋಡಲಿಕ್ಕೆ ಸರಳವೆನಿಸಿದರೂ ಅದರಲ್ಲಿ ಅಡಗಿರುವ ವಿಚಾರಧಾರೆಗಳು ಮಾತ್ರ ಜ್ಞಾನ ದೀವಿಗೆ. ಮೊದಮೊದಲು ಕೈಗೆ ಬಂದ ಈ ಕೃತಿಯ ಬಗ್ಗೆ ರಾಷ್ಟ್ರಕವಿ ಕುವೆಂಪು ಅವರೇ ವ್ಯಕ್ತಪಡಿಸಿದ ನಿಲುವು ಹೀಗಿದೆ.

ಹಸ್ತಕ್ಕೆ ಬರೆ ನಕ್ಕೆ ಓದುತ್ತ ಓದುತ್ತ
ಮಸ್ತಕಕ್ಕಿಟ್ಟು ಗಂಭೀರನಾದೆ
ವಿಸ್ತರದ ದರುಶನಕೆ ತುತ್ತ ತುದಿಯಲಿ ನಿನ್ನ
ಪುಸ್ತಕಕೆ ಕೈ ಮುಗಿದೆ ಮಂಕುತಿಮ್ಮ

ಅಷ್ಟಕ್ಕೂ ಈ ಕೃತಿಯ ಕರ್ತೃ ಯಾರೆಂಬುದು ನಿಮಗೆಲ್ಲ ತಿಳಿದಿರುವಂತಹ ವಿಷಯವೇ ಸರಿ. ಆದರೂ ಇಲ್ಲಿ ಅವರ ಬಗ್ಗೆ ಮಾತನಾಡದೆಯೇ ಮುಂದುವರಿಯುವುದು ಅಸಾಧ್ಯ ಮತ್ತು ಅವಿವೇಕಿತನ. ಡಿವಿ ಗುಂಡಪ್ಪ ಕನ್ನಡದ ಆಧುನಿಕ ಸರ್ವಜ್ಞ ಎಂದೇ ಹೆಸರಾಗಿರುವಂತಹ ಪ್ರಸಿದ್ಧ ಕವಿ. ಮೂಲತಃ ಕೋಲಾರ ಜಿಲ್ಲೆಯವರು. ನಿವೇದನ, ಉಮರನ ಒಸಗೆ, ಅಂತಪುರ ಗೀತೆ ಹೀಗೆ ಹಲವಾರು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯಭಂಡಾರಕ್ಕೆ ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೇ ಡಿವಿಜಿ ಅವರು ಮಂಕುತಿಮ್ಮನ ಕಗ್ಗ ಹಾಗೂ ಮರಳ ಮುನಿಯ ಕಗ್ಗ ಎಂಬ ಎರಡು ಅದ್ಭುತ ಕೃತಿಗಳನ್ನು ಕನ್ನಡ ಸಾಹಿತ್ಯಲೋಕಕ್ಕೆ ಅರ್ಪಿಸಿದ್ದಾರೆ. ಈ ಎರಡೂ ಕೃತಿಗಳನ್ನು ಓದಿದೆ ಸಹೃದಯನ ಮನಸ್ಸಿನಲ್ಲಿ ನಿರಾಳ ಭಾವನೆಯೆಂಬುದು ಹೇಗೆ ಆವರಿಸಿ ಕಾಡುತ್ತದೆಂದರೆ, ಅದರಲ್ಲೂ ಮಂಕುತಿಮ್ಮನ ಕಗ್ಗದ ಬಗ್ಗೆ ಹೇಳಬೇಕೇ ? ಕಗ್ಗ ಓದಿದ ಯಾವುದೇ ವ್ಯಕ್ತಿಯು ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಹಿಂಜರಿಯಲೇಬೇಕು. ಜೀವನದಲ್ಲಿ ಏನಾದರೂ ಸರಿಯೇ ಎಲ್ಲದಕ್ಕೂ ಸಿದ್ಧನಾಗೇ ಇರಬೇಕೆಂಬ ಸಂದೇಶವನ್ನ ಈ ಕೃತಿಯ ಹಲವು ಪದ್ಯಗಳಲ್ಲಿ ಕಾಣಬಹುದು. ಹೀಗೆ ಮನುಷ್ಯನ ಆತ್ಮವಿಶ್ವಾಸವನ್ನು ಹೆಚ್ಚಿಸುವಂತಹ, ಆತನಿಗೆ ಕಿವಿಮಾತನ್ನು ಹೇಳುವಂತಹ ಹಲವು ಪದ್ಯಗಳನ್ನು ಈ ಕೃತಿಯಿಂದ ಆಯ್ದು ಈ ಲೇಖನದಲ್ಲಿ ಉಲ್ಲೇಖಿಸಿ ವಿವೇಚಿಸಲಾಗುತ್ತಿದೆ.
ಕವಿ ಇದೇ ಕೃತಿಯ ಮುಕ್ತಕವೊಂದರಲ್ಲಿ ಮನುಷ್ಯ ತನ್ನ ಬದುಕಿನಲ್ಲಿ ಎದುರಾಗುವ ಪರಿಸ್ಥಿತಿಗೆ ತಕ್ಕಂತೆ ಬದುಕುವ ರೀತಿಯನ್ನು ಹೊಂದಿಸಿಕೊಳ್ಳುವುದು ಅನಿವಾರ್ಯವೆಂಬ ಕಿವಿಮಾತನ್ನು ಓದುಗರ ಎದುರಿಗೆ ತೆರೆದಿಟ್ಟಿದ್ದಾರೆ.

ಬುದ್ಧಿ ಮಾತಿದು ನಿನಗೆ; ಸಿದ್ಧನಿರು ಸಕಲಕ್ಕಂ
ಎದ್ದು ಕುಣಿಯಲಿ ಕರ್ಮ; ದೈವ ನಿದ್ರಿಸಲಿ
ಅದ್ಭುತಗಳರಿದಿಲ್ಲ; ಭವ್ಯಕ್ಕೆ ಹದ್ದಿಲ್ಲ
ಸಿದ್ದನಾಗೆಲ್ಲಕಂ – ಮಂಕುತಿಮ್ಮ

ಜೀವನವೆಂಬುದು ಅನಿರೀಕ್ಷಿತ ಘಟನೆ, ಸನ್ನಿವೇಶಗಳಿಂದ ಕೂಡಿರುವ ಒಂದು ಯಾನ. ಇಲ್ಲಿ ಎದುರಾಗುವ ಸನ್ನಿವೇಶಗಳಿಗೆ ಅನುಗುಣವಾಗಿ ಹೆಜ್ಜೆಯನ್ನಿಡಬೇಕಾಗಿರುವುದು ಮನುಷ್ಯನ ಕರ್ತವ್ಯವೂ ಹೌದು. ಅಂತೆಯೇ ಹತಾಶೆ ಮನೋಭಾವದ ವ್ಯಕ್ತಿಯೊಬ್ಬನಿಗೆ ಕಿವಿಮಾತೊಂದನ್ನು ಹೇಳುವಂತಿದೆ ಈ ಪದ್ಯದ ಸಾಲುಗಳು. ಕವಿ ಈ ವ್ಯಕ್ತಿತ್ವದ ವ್ಯಕ್ತಿಯನ್ನುದ್ದೇಶಿಸಿ “ನಿನಗೆ ತಿಳಿಸಿ ಹೇಳುತ್ತಿದ್ದೇನೆ; ಜೀವನದಲ್ಲಿ ಏನೇ ಎದುರಾದರೂ ಸರಿಯೇ, ಎಲ್ಲವನ್ನು ಎದುರಿಸಿ ನಿಲ್ಲುವ ಆತ್ಮವಿಶ್ವಾಸ ನಿನ್ನಲ್ಲಿ ಇರಬೇಕು. ನಿನ್ನ ಕರ್ಮಾನುಸಾರವಾಗಿ ನಿನ್ನ ಜೀವನ ನಡೆಯಲಿ ಅಥವಾ ಬಿಡಲಿ; ನಿನ್ನನ್ನು ದೇವರು ಕೈಹಿಡಿದು ನಡೆಸಲಿ, ಬಿಡಲಿ ಆದರೆ ಬದುಕಿನಲ್ಲಿ ಯಾವುದೋ ಅದ್ಭುತ, ಪವಾಡಗಳು ನಡೆಯುತ್ತವೆಂಬ ಚಿಂತೆಯಲ್ಲಿ ಮುಳಗಬೇಡ. ಬರುವ ಸನ್ನಿವೇಶವನ್ನ ಧೈರ್ಯದಿಂದ ಎದುರಿಸಲು ನೀನು ಸದಾ ಸಿದ್ಧನಿರಬೇಕು. ನಿನಗೆ ನಿನಗೇ ದಾರಿ” ಎಂಬ ಸಂದೇಶವನ್ನು ಒತ್ತಿ ಹೇಳುತ್ತವಂತಿದೆ. ಆಗೆಯೇ ಮತ್ತೊಂದು ಚೌಪದಿದಲ್ಲಿ ಕವಿ –

ಏನಾದೊಡೆಯುಮಪ್ಪುದುಂಟು, ಸಿದ್ದನಿರದಕೆ
ಭಾನು ತಣುವಾದಾನು, ಸೋಮ ಸುಟ್ಟಾನು
ಕ್ಷೋಣಿಯೇ ಕರಗಿತು; ಜಗ ಶೂನ್ಯವಾದಿತು
ಮೌನದಲ್ಲಿ ಸಿದ್ದನಿರು – ಮಂಕುತಿಮ್ಮ

ಪ್ರಪಂಚದಲ್ಲಿ ಏನು ಬೇಕಾದರೂ ಬದಲಾಗಬಹುದು; ಏನು ಬೇಕಾದರೂ ನಡೆದು ಹೋಗಬಹುದು. ಸೂರ್ಯ ತಂಪಾಗಬಹುದು; ಚಂದ್ರ ಶಾಂತವಾಗಿರುವ ಬದಲು ದಗದಗಿಸಿ ಸುಡಬಹುದು. ಧರೆಯೇ ಕರಗಿ ಇಲ್ಲವಾಗಬಹುದು ಅಥವಾ ಜಗವೇ ಎಲ್ಲವನ್ನ ಕಳೆದುಕೊಂಡು ಶೂನ್ಯವಾಗಬಹುದು. ಇಲ್ಲಿ ಯಾವುದು ಶಾಶ್ವತವಲ್ಲ; ಆದ್ದರಿಂದ ಮೌನವಾಗಿ, ತಾಳ್ಮೆಯಿಂದ ಎದುರಾಗುವ ಎಲ್ಲ ಸನ್ನಿವೇಶವನ್ನ ಮನುಷ್ಯನಾದವನು ಎದುರಿಸಲು ಸಿದ್ಧನಿರಬೇಕೆಂಬ ಸಂದೇಶ ಈ ಸಾಲುಗಳದು.

ಇನ್ನೂ ಮನುಷ್ಯನಾದವನಿಗೆ ಪ್ರೀತಿ, ಕರುಣೆ, ದಯೆ ಎಂಬುವು ಅತ್ಯಂತ ಮುಖ್ಯವಾದ ಅಂಶಗಳು. ಅವುಗಳಿಲ್ಲದೆ ಹೋದಲ್ಲಿ ಆತ ಮನುಷ್ಯನಾಗಲು ಸಾಧ್ಯವೇ ? ಅಂತೆಯೇ ಇಲ್ಲೊಂದು ಪದ್ಯ ಮನುಷ್ಯನ ಉತ್ತಮವಾದ ಗುಣ ಯಾವುದು ಎಂಬುದನ್ನ ತಿಳಿಸಿಕೊಡುತ್ತಿದೆ.
ಕೊಲೆಗಡಿಕನೆನಿಪ ಹುಲಿ ಸಲಹದೇಂ ಮರಿಗಳನು ?

ಒಲುಮೆಕರುಳಡಗಿಹುದು ಪಗೆತನದ ಪೊಡೆಯೊಳ್ ನಲುಮೆಯನು ಹೊರಹೊಮ್ಮಿಸುವುದು ನರನುನ್ನಿತಿಗೆ ಒಲವಾತ್ಮ ವಿಸ್ತರಣ – ಮಂಕುತಿಮ್ಮ
ಕ್ರೂರ ಪ್ರಾಣಿ ಎನಿಸಿದ ಹುಲಿಯೇ ತನ್ನ ಮರಿಗಳ ವಿಚಾರ ಬಂದಾಗ ಎಷ್ಟು ಪ್ರೀತಿಯಿಂದ ಅವುಗಳನ್ನ ಸಾಕಬಲ್ಲದಲ್ಲವೆ ? ಅಂತೆಯೇ ಮನುಷ್ಯನ ಜೀವನದಲ್ಲೂ ಕೂಡ; ಹಗೆತನದ ನಡುವೆಯೂ ಪ್ರೀತಿಯೆಂಬುದು ಬೆಚ್ಚನೆ ಅಡಗಿ ಕುಳಿತಿರಬಲ್ಲದು. ಅದು ಯಾವ ಸಮಯದಲ್ಲಿ ಹೇಗೆ ಬೇಕಾದರೂ ಮನುಷ್ಯನಿಂದ ವ್ಯಕ್ತವಾಗಬಹುದು. ಪ್ರೀತಿಯೆಂಬುದು ಮನುಷ್ಯನ ಉತ್ತಮ ಗುಣವೂ ಹೌದು. “ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ” ಎಂಬ ಜಿಎಸ್ಎಸ್ ಅವರ ಕವಿತೆಯ ಸಾಲಿನಂತೆ ಇಲ್ಲಿಯೂ ಕೂಡ ಎಲ್ಲಾ ಚರಾಚರಗಳಲ್ಲಿ, ಮನುಷ್ಯನಲ್ಲಿ ಪ್ರೀತಿ, ಕರುಣೆಯೆಂಬುದು ಇದ್ದೇ ಇರುತ್ತದೆ. ಅದು ಇಲ್ಲದೆ ಏನೇನೂ ಸಾಧ್ಯವಿಲ್ಲ ಎಂಬ ಸತ್ಯ ಇಲ್ಲಿ ಕಾಣಿಸುತ್ತದೆ.

ಇನ್ನೂ ಮತ್ತೊಬ್ಬರನ್ನು ನೋಡಿ ಸದಾ ಅಸೂಯೆ ಪಡುವ ವ್ಯಕ್ತಿಗಳು ಈ ಸಮಾಜದಲ್ಲಿ ಇದ್ದೇ ಇರುತ್ತಾರೆ. ಅಂತಹ ವ್ಯಕ್ತಿಗಳಿಗೆ ಕವಿ “ಮತ್ತೊಬ್ಬರನ್ನು ನೋಡಿ ಹೊಟ್ಟೆಕಿಚ್ಚನ್ನು ಪಡುವುದರಿಂದ ಯಾರಿಗೂ ಯಾವುದೇ ರೀತಿಯ ಲಾಭವಿಲ್ಲ. ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ; ನೆರೆಮನೆಯ ಸುಡದು ಎಂಬ ಬಸವಣ್ಣನವರ ವಚನದಂತೆ ಇಂತಹ ವ್ಯಕ್ತಿಗಳು ತಮ್ಮ ಬದುಕನ್ನ ತಾವೇ ನಾಶ ಮಾಡಿಕೊಳ್ಳುತ್ತಾರೆ.” ಅಂತಹ ವ್ಯಕ್ತಿಗಳಿಗೆ ಈ ಪದ್ಯದ ಸಾಲುಗಳು ಹೆಚ್ಚು ಪ್ರಸ್ತುತ.

ಹೊಟ್ಟೆಯೊಂದರ ರಗಳೆ ಸಾಲದೆಂದೇನೋ ವಿಧಿ
ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್
ಹೊಟ್ಟೆ ತುಂಬಿದ ತೋಳ ಮಲಗೀತು ನೀಂ ಪೆರರ
ದಿಟ್ಟಿಸುತ ಕರುಬುವೆಯೋ – ಮಂಕುತಿಮ್ಮ

ಮನುಷ್ಯನಿಗೆ ಹೊಟ್ಟೆಯ ಹಸಿವಿನೊಂದಿಗೆ ಇತರ ವಿಚಾರಗಳಲ್ಲೂ ತೀರ ಹಸಿವು. ಅಧಿಕಾರ, ಹಣ, ಆಸ್ತಿ, ಸಂಪತ್ತು, ಕೀರ್ತಿ ಮೊದಲಾದ ಹಸಿವುಗಳು ಆತನನ್ನು ಯಾವ ಮಟ್ಟಕ್ಕೆ ಬೇಕಾದರೂ ಇಳಿಸಿಬಿಡುತ್ತವೆ. ಹೊಟ್ಟೆ ತುಂಬಿದ ಕ್ರೂರ ಪ್ರಾಣಿಗಳು ತನ್ನ ಹೆದರು ಯಾವುದೇ ಜೀವಿ ಸರಿದರೂ ಮುಟ್ಟುವುದಿಲ್ಲ, ಆದರೆ ಮನುಷ್ಯನೋ ತನ್ನ ಬಳಿ ಇರುವುದನ್ನ ಬಿಟ್ಟು ಮತ್ತಷ್ಟು, ಮಗದಷ್ಟು ಬೇಕೆಂಬ ಕಡೆಗೆ ಗಮನಹರಿಸುತ್ತಾನೆ. ಆತ ಇತರರ ನೋಡಿ ಅಸೂಯೆಯಿಂದ ಕರುಬುವ ರೀತಿ ವಿಷಾಧನೀಯ. ಅದನ್ನೇ ಕವಿ ಮನುಷ್ಯನಿಗೆ ಹೊಟ್ಟೆ ಹಸಿವಿನ ಜೊತೆಗೆ ಹೊಟ್ಟೆಕಿಚ್ಚಿನ ಹಸಿವವನ್ನು ವಿಧಿ ತುಂಬಿ ಕಳಿಸಿದ್ದಾನೆಯೇ ಎಂದು ಆತಂಕವನ್ನು ವ್ಯಕ್ತಪಡಿಸುತ್ತಾರೆ.

ಮತ್ತೊಂದು ಮುಕ್ತಕದಲ್ಲಿ ಕವಿ ಮನುಷ್ಯನ ನಿರೀಕ್ಷೆಗಳಿಗೆ ಕೊನೆಯಿಲ್ಲ. ಪ್ರಸ್ತುತ ತನ್ನ ಬಳಿ ಏನಿದೆಯೋ ಅದಕ್ಕಿಂತಲೂ ಮಿಗಿಲಾದನ್ನು ಹುಡುಕುವುದರಲ್ಲಿ ಆತ ತನ್ನ ಸಮಯವನ್ನು ವ್ಯರ್ಥ ಮಾಡುತ್ತಾನೆ. ಆದರೆ ಅದು ತನ್ನ ಕೈಗತ್ತದೇ ಹೋದಾಗ, ತನ್ನ ಲೆಕ್ಕಚಾರ ಬದಲಾದಾಗ ನಿರಾಶೆ ಭಾವನೆಗೆ ಒಳಗಾಗುತ್ತಾನೆ. ಇಂತಹ ವ್ಯಕ್ತಿಗಳಿಗೆ ಕವಿ ಅಪೂರ್ವ ಸಂದೇಶವನ್ನ ಕೊಟ್ಟಿದ್ದಾರೆ.
ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು ಗುರುತಿಸೊಳಿತಿರುವುದನು ಕೇಡುಗಳ ನಡುವೆ

ಇರುವ ಭಾಗ್ಯವ ನೆನೆದು ಬಾರನೆಂಬುದನು ಬಿಡು
ಹರುಷಕದೆ ದಾರಿಯೆಲೊ – ಮಂಕುತಿಮ್ಮ

ಯಾವುದರದೋ ನಿರೀಕ್ಷೆಯಲ್ಲಿ ಪ್ರಸ್ತುತ ಇರುವ ವಿಚಾರಗಳಿಂದ ದೂರ ಸರಿಯುವುದು ತಪ್ಪು. ಬಳಿ ಇರುವ ವಿಚಾರದಲ್ಲಿ ಏನು ಕೆಡುಕುಗಳಿವೆಯೋ, ಸಣ್ಣಪುಟ್ಟ ತಪ್ಪುಗಳಿವೆಯೋ ಅವುಗಳನ್ನು ಬದಿಗಿಟ್ಟು ಒಳ್ಳೆಯ ವಿಚಾರಗಳನ್ನು ಗುರುತಿಸುವುದರ ಮೂಲಕ ಇರುವ ವಿಚಾರದಲ್ಲಿ ಸಂತೋಷವನ್ನು ಹುಡುಕುವ ಪ್ರಯತ್ನವನ್ನು ಮಾಡಬೇಕು. ಅದನ್ನು ಹೊರತುಪಡಿಸಿ “ಇರುವುದೆಲ್ಲವಾ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ” ಎಂಬ ಗೋಪಾಲಕೃಷ್ಣ ಅಡಿಗರ ಮಾತಿನಂತೆ, ಇರದುದರ ಅಥವಾ ಸಿಗದುದರ ಹಿಂದೆ ಬಿದ್ದು ಕೈಯಲ್ಲಿರುವ ವಿಚಾರಗಳನ್ನು ಕಳೆದುಕೊಳ್ಳಬಾರದು. ಕೆಲವೊಮ್ಮೆ ಜೀವನ ಸಾಗಲಿಕೆ ಮನುಷ್ಯನಾದವನಿಗೆ‌ ಏನು ಬೇಕು ಅದೆಲ್ಲವೂ ಇದ್ದಾಗ, ತನ್ನ ಬಳಿ ಎಲ್ಲವೂ ಇದೆ ಎಂಬ ಒಣಜಂಬವನ್ನ ತೋರಿ ಹಾಗೂ ಅಲ್ಪತನವನ್ನು ಮೆರೆಯುವುದೂ ಉಂಟು.

ಇನ್ನೂ ಇರುವ ಭಾಗ್ಯವೇನಿದೆಯೋ ಅದರ ಬಗ್ಗೆ ತೃಪ್ತಿ ಹೊಂದಿದ, ಮುಂದಿನ ಭವಿಷ್ಯಕ್ಕಾಗಿ ಹೆಜ್ಜೆಯನ್ನಿಡಬೇಕಾಗಿರುವುದು ಮುಖ್ಯ. ಮನುಷ್ಯ ಈ ರೀತಿ ನಡೆದುಕೊಂಡಾಗ ಆತನ ಹರುಷಕ್ಕೆ ಯಾವುದೇ ಅಡೆತಡೆಗಳು ಇರುವುದಿಲ್ಲ.

ಜಗತ್ತಿನಲ್ಲಿ ಸಮಸ್ಯೆ ಎನ್ನುವುದು ಯಾರಿಗಿಲ್ಲ ಹೇಳಿ ? “ಕಷ್ಟ ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತದೆಯೇ ?” ಎಂಬ ಗಾದೆ ಮಾತೇ ಇದೆ. ಪ್ರಸ್ತುತ ದಿನಗಳಲ್ಲಿ ಮರಗಿಡಗಳಲ್ಲೂ ಕೂಡ ರೋಗ – ರುಜನೆಗಳು ಕಂಡುಬರುವುದು ಸಹಜವೇ ಆಗಿವೆ; ಆದರೆ ಅದು ಬೇರೆ ವಿಚಾರ. ಇಲ್ಲಿ ಕವಿ ಸಮಸ್ಯೆಗಳು ಎದುರಾದಾಗ ಮನುಷ್ಯ ಯಾವ ರೀತಿ ಇರಬೇಕು ಎಂಬುದರ ಬಗ್ಗೆ ಮಾತನಾಡಿದ್ದಾರೆ.

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ‌- ಮಂಕುತಿಮ್ಮ

“ದೊಡ್ಡವರ ಸಂಗದಲ್ಲಿರುವಾಗ ದಡ್ಡನಂತಿರಬೇಕು” ಎಂಬ ಮಾತಿದೆ. ಆದರೆ ಇಲ್ಲಿಯ ಅರ್ಥವೇ ಬೇರೆ. ಎಚ್ ಎಸ್ ಶಿವಪ್ರಕಾಶ್ ಹೇಳುವಂತೆ ಮನುಷ್ಯ “ಎಲ್ಲರಿಗೂ ದಕ್ಕುವ ಎಲಚಿ ಹಣ್ಣಿನ ರೀತಿ” ಇರಬೇಕು. ಇತರರಿಗೆ ಕಷ್ಟ ನೋವು ಎಂದಾಗ ಅವರಿಗೆ ನೆರವಾಗಲು ಲಭ್ಯವಿರುವಂತಾಗಬೇಕು. ತನಗೆ ಕಷ್ಟ ಬಂದಾಗ ಕಲ್ಲಿನ ರೀತಿ ಇದ್ದು, ಅದನ್ನು ಎದುರಿಸಿ ನಿಲ್ಲಬೇಕು. ಯಾರು ದುರ್ಬಲರು, ಬಡತನದ ಬೇಗೆಯಲ್ಲಿ ಬೆಂದು ನೊಂದಿರುವರೋ ಅಂತವರ ಪರವಾಗಿ ನಿಲ್ಲಬೇಕು. ಅವರ ನೆರವಿಗೆ ಧಾವಿಸುವ ಮನೋಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಊರಿಗೆ ಉಪಕಾರಿಯಾಗಿ ತನ್ನ ಮನೆಗೂ ಮನೆಯಾಗಿ ಎಲ್ಲರ ಜೊತೆ ಬೆರೆತು, ಎಲ್ಲರ ಮುಖದಲ್ಲಿ ನಗುತರಿಸಬೇಕು. ಅದಕ್ಕಾಗಿಯೇ ಕವಿ “ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ” ಎಂದಿದ್ದಾರೆ. ಇತರರನ್ನು ನೋಡಿ ನಗುವುದಕ್ಕಿಂತ, ಇತರರನ್ನು ಕಂಡು ಅಪಹಾಸ್ಯ ಮಾಡುವುದಕ್ಕಿಂತ, ಅವರ ಕಷ್ಟದ ಕಾಲದಲ್ಲಿ ನೆರವಾಗಿ ನಿಂತು ಅವರ ಬದುಕಲ್ಲಿ ಹರುಷವನ್ನು ತಂದು, ತಾನು ಖುಷಿ ಪಡುವಂಥದ್ದು ಮನುಷ್ಯನಿಗೆ ಇರಬೇಕಾದ ಮುಖ್ಯಲಕ್ಷಣ. ಅಂತಹ ವರವನ್ನು ದೇವರಲ್ಲಿ ಮನುಷ್ಯನಾದವನು ಬೇಡಿಕೊಳ್ಳಬೇಕೆಂಬುದಾಗಿ ಕವಿ ಕರೆಕೊಟ್ಟಿದ್ದಾರೆ.

ಒಟ್ಟಾರೆಯಾಗಿ ಡಿವಿಜಿಯವರ ಮಂಕುತಿಮ್ಮನ ಕಗ್ಗದಲ್ಲಿನ ಮುಕ್ತಕಗಳು ಸಹೃದಯನ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ, ಅಹಂಕಾರವನ್ನೆಲ್ಲ ಕಳೆದು ಬದುಕೇನೆಂಬುದನ್ನು ಅರ್ಥ ಮಾಡಿಸುವ ವಿಚಾರದಲ್ಲಿ, ಇಲ್ಲಿ ಯಾರೂ, ಯಾವುದು ಶಾಶ್ವತವಲ್ಲವೆಂಬ ಸತ್ಯವನ್ನು ಅರಿತು ಇತರರಿಗೆ ತಾವು ನೆರವಾಗಬೇಕೆಂಬ ಆತ್ಮವಲೋಕವ ಸಹೃದಯನ ಮನಸ್ಸಿನಲ್ಲಿ ಮೂಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ. ಹತಾಶೆ, ನಿರಾಸೆ ಭಾವನೆಗಳನ್ನು ಹೊಂದಿರುವ ವ್ಯಕ್ತಿಗಳು ಇನ್ನೂ ಕಗ್ಗವನ್ನು ಓದಿಲ್ಲವಾದಲ್ಲಿ ಒಮ್ಮೆ ಓದಲು ಪ್ರಾರಂಭಿಸಿದರೆ, ಅವರ ಎಲ್ಲಾ ನಿರಾಶೆ, ಬೇಸರದ ಭಾವನೆಗಳು ಕಳೆದು ಹೊಸ ಜಗವೇ ಅವರ ಮುಂದೆ ತೆರೆದುಕೊಳ್ಳಲಿದೆ. ಇಂತಹ ಅಪೂರ್ವ ಕೃತಿಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ ಗುಂಡಪ್ಪನವರಿಗೆ ಕನ್ನಡಿಗರು ಸದಾ ಕೃತಜ್ಞರಾಗಿರಬೇಕು.

ಮನು ಗುರುಸ್ವಾಮಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x