ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳು ಸಂದಿದೆ. ಈ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರು ತಮ್ಮ ಜೀವನ, ಜೀವಗಳನ್ನು ತ್ಯಾಗ ಮಾಡಿ ಭಾರತಮಾತೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಈ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿ ಕರ್ನಾಟಕ ಅದರಲ್ಲಿಯೂ ಬಸ್ರೂರು, ಸುತ್ತಮುತ್ತಲಿನ ಜನರ ಕೊಡುಗೆಗಳ ಬಗ್ಗೆ ಚಿಕ್ಕ ಪರಿಚಯ ನೀಡುವ ಉದ್ದೇಶ ಇಲ್ಲಿಯದು. ಇಂದಿನ ಬಸ್ರೂರು ಹಿಂದೆಲ್ಲಾ ವಸುಪುರ ಎಂದು ಕರೆಯಲ್ಪಡುತ್ತಿತ್ತು ಇದು ಕರಾವಳಿಯ ವಾರಾಹಿ ನದಿ ದಂಡೆಯ ಮೇಲಿರುವ ಐತಿಹಾಸಿಕ ಬಂದರು ಪಟ್ಟಣ. 16-17ನೇ ಶತಮಾನಗಳಲ್ಲಿ ಇಲ್ಲಿ ಅಕ್ಕಿ ಸೇರಿದಂತೆ ವಿವಿಧ ಪದಾರ್ಥಗಳು ಹೊರದೇಶಗಳಿಗೆ ರಫ್ತಾಗುತ್ತಿದ್ದವು. ಅಂದಿನ ದಕ್ಷಿಣ ಕನ್ನಡದಲ್ಲಿ ಕಾರ್ನಾಡು ಸದಾಶಿವರಾಯರ ದೇಶಭಕ್ತಿ ಎಲ್ಲರಿಗೂ ಮಾದರಿಯಾಗಿದ್ದು ಬಸ್ರೂರು ವ್ಯಾಪ್ತಿಯಲ್ಲಿಯೂ ಅನೇಕ ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.ಅವರುಗಳಲ್ಲಿ ಬಸ್ರೂರು ಸುಬ್ಬಣ್ಣ ಶೆಟ್ಟಿ, ಸೂರಪ್ಪ ಶೆಟ್ಟಿ, ಬಸ್ರೂರು ಸದಾಶಿವ ದೇವಾಡಿಗ, .ಗಾಂಧಿ ರಾಮಣ್ಣ ಶೆಟ್ಟಿ, ಕಳಂಜೆ ರಾಮಕೃಷ್ಣ ಭಟ್ಟ,ಗೋಪಾಲಕೃಷ್ಣ ಶೆಣೈ ಇವರುಗಳೂ ಪ್ರಮುಖರಾಗಿದ್ದಾರೆ,.
1920ರ ಅವಧಿಯಲ್ಲಿ ಸ್ವಾತಂತ್ರ್ಯ ಚಳುವಳಿ ಬಿರುಸಾಗಿದ್ದ ಸಮಯ ಬಸ್ರೂರು, ಕುಂದಾಪುರ ಪ್ರಾಂತ್ಯಗಳು ಕರಾವಳಿಯಲ್ಲಿ ಹೋರಾಟದ ಕೇಂದ್ರವಾಗಿದ್ದವು. 1930ರ ಉಪ್ಪಿನ ಸತ್ಯಾಗ್ರಹದಲ್ಲಿ ಬಸ್ರೂರಿನ ಉತ್ಸಾಹೀ ಯುವಕರಾದ ಶುಂಠಿ ರಾಮಪ್ರಭು, ರಾಮದಾಸ ಪಡಿಯಾರ್, ಸೂರಪ್ಪ ಶೆಟ್ಟಿ, ಸುಬ್ಬಣ್ಣ ಶೆಟ್ಟಿ, ಗೋಪಾಲಕೃಷ್ಣ ಶೆಣೈ ಇನ್ನೂ ಅನೇಕರು ಸರ್ವಸ್ವವನ್ನೂ ತ್ಯಾಗ ಮಾಡಿ ಚಳುವಳಿಯಲ್ಲಿ ಭಗವಹಿಸಿದ್ದರು. ಇದಕ್ಕೆ ಮುನ್ನ 1929ರಲ್ಲಿ ಕುಂದಾಪುರದ ಇಂದಿನ ಗಾಧಿ ಮೈದಾನದಲ್ಲಿ ನಡೆದ ಸಭೆಯೊಂದಿಗೆ ಈ ಭಾಗದಲ್ಲಿ ಸ್ವಾತಂತ್ರ್ಯ ಹೋರಾಟ ಬಿರುಸು ಪಡೆದಿತ್ತು. ಉಪ್ಪಿನ ಸತ್ಯಾಗ್ರಹದ ಸಮಯ ಬಸ್ರೂರು, ಕುಂದಾಪುರಗಳಿಂದ ಮಂಗಳೂರಿಗೆ ಪಾದಯಾತ್ರೆ ಮಾಡಿ ಅಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಅನೇಕರು ಬಾಗವಹಿಸಿದ್ದರು. ಉಪ್ಪಿನ ಸತ್ಯಾಗ್ರಹದ ಸಮಯ ಕುಂದಾಪುರ, ಬಸ್ರೂರಿನ ಗಲ್ಲಿ ಗಲ್ಲಿಗಳಲ್ಲಿ ಸತ್ಯಾಗ್ರಹ, ಬ್ರಿಟೀಷ್ ವಸ್ತುಗಳ ಬಹಿಷ್ಕಾರ ನಡೆದವು. ಬಸ್ರೂರು ಸೂರಪ್ಪ ಶೆಟ್ಟರು ಡೋಲು ಬಾರಿಸುತ್ತಾ ’ನಾವೆಲ್ಲಾ ಒಂದೇ, ನಮ್ಮ ಗುರಿ ಸ್ವರಾಜ್ಯ’ ಎಂದು ಸಾರಿ ಜಾತಿ ಮತಗಳಿಂದಾಚೆಗೆ ಜನರಿಗೆ ಸ್ವಾತಂತ್ರ್ಯದ ಸಂದೇಶ ಸಾರಿ ಅವರಲ್ಲಿ ಹೋರಾಡಲು ಪ್ರೇರಣೆ ನೀಡುತ್ತಿದ್ದರು. 1937ರಲ್ಲಿ ಪ್ರಾಂತ್ಯ ಸರಕಾರಕ್ಕೆ ಚುನಾವಣೆ ನಡೆದ ಸಮಯದಲ್ಲಿ ಸೂರಪ್ಪ ಶೆಟ್ಟಿ, ರಘುನಾಥ ಶೆಟ್ಟಿ ಇನ್ನೂ ಹಲವರು ಬಸ್ರೂರು ಭಾಗಗಳಲ್ಲಿ ಅಂದು ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದರು.ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಹ ಬಸ್ರೂರು ಜನತೆ ಪ್ರತಿಯೊಬ್ಬರೂ ಭಾಗವಹಿಸಿದ್ದರು. ಸುಬ್ಬಣ್ಣ ಶೆಟ್ಟಿ, ಸೂರಪ್ಪ ಶೆಟ್ಟಿ, ಸದಾಶಿವ ದೇವಾಡಿಗ, .ಗಾಂಧಿ ರಾಮಣ್ಣ ಶೆಟ್ಟಿ, ಕಳಂಜೆ ರಾಮಕೃಷ್ಣ ಭಟ್ಟ,ಗೋಪಾಲಕೃಷ್ಣ ಶೆಣೈ ಇವರೆಲ್ಲಾ ಧಾರವಾಡ, ಭಟ್ಕಳ, ತೀರ್ಥಹಳ್ಳಿ ಸೇರಿ ರಾಜ್ಯದಾದ್ಯಂತ ನಾನಾ ಕಡೆಗಳಲ್ಲಿ ಹೋರಾಟದ ಮುಂದಾಳತ್ವ ವಹಿಸಿದ್ದರು. ಅವರನ್ನೆಲ್ಲಾ ಬ್ರಿಟೀಷರು ಬಂಧಿಸಿ ಸೆರೆಯಲ್ಲಿಟ್ಟಿದ್ದರು.
ಗಾಂಧಿ ರಾಮಣ್ಣ ಶೆಟ್ಟಿ 1931ರಲ್ಲಿ ಕರಾಚಿಯಲ್ಲಿ ನಡೆದ ಸಮ್ಮೇಳನದಲ್ಲಿ ಭಾರೀ ಪ್ರಯಾಸಪಟ್ಟು ಎಲ್ಲರ ಕಣ್ಣು ತಪ್ಪಿಸಿ ವೇದಿಕೆ ಏರಿ ಮಹಾತ್ಮ ಗಾಂಧೀಜಿಯವರ ಪಾದ ಮುಟ್ಟಿ ಆಶೀರ್ವಾದ ಪಡೆದಿದ್ದರು. ಗಾಂಧೀಜಿಯ ಪರಮ ಅನುಯಾಯಿಯಾಗಿದ್ದ ಇವರು ಗಾಂಧೀಜಿ ಉಪವಾಸ ಸತ್ಯಾಗ್ರಹ ಮಾಡಿದಾಗ ತಾವೂ ತಮ್ಮ ಮನೆಯಲ್ಲಿ ಉಪವಾಸ ಸತ್ಯಾಗ್ರಹ ಆಚರಿಸಿದ್ದರು. ಅಲ್ಲದೆ ಕುಂದಾಪುರದ ವೆಂಕಟರಮಣ ದೇವಾಲಯದ ಮುಂದೆ ವೈಯುಕ್ತಿಕ ಸತ್ಯಾಗ್ರಹ ನಡೆಸಿದ್ದರು. ಅವರು ಬಸ್ರೂರು ಸೇರಿ ಸುತ್ತಮುತ್ತಲ ಅನೇಕ ಊರುಗಳಲ್ಲಿ ಹೋರಾಟ ನಡೆಸಿ ಜನರನ್ನು ಹೋರಾಟಕ್ಕೆ ಮುನ್ನುಗ್ಗುವಂತೆ ಮಾಡುತ್ತಿದ್ದ ಸಮಯ ಅವರು ಭಟ್ಕಳಕ್ಕೆ ಆಗಮಿಸಿದಾಗ ಬ್ರಿಟೀಷರಿಂದ ಬಂಧಿಸಲ್ಪಟ್ಟರು. ಕುಮಟಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಅವರಿಗೆ ಆರು ತಿಂಗಳ ಸೆರೆವಾಸ ಶಿಕ್ಷೆ ನೀಡಲಾಗಿತ್ತು. ಅವರು ಹಿಂಡಲಗಾ ಹಾಗೂ ಯರವಾಡ ಜೈಲುಗಳಲ್ಲಿ ಸೆರೆವಾಸ ಅನುಭವಿಸಿದ್ದರು.
ಸೂರಪ್ಪ ಶೆಟ್ತರು ಗಾಂಧೀಜಿಯವರ ಕರೆಗೆ ಸ್ಪಂದಿಸಿ ಬಸ್ರೂರಿನಲ್ಲಿ ಮೊಟ್ಟ ಮೊದಲಿಗೆ ಉಪ್ಪಿನ ಸತ್ಯಾಗ್ರಹ ನಡೆಸಿದ್ದರು, 10 ವರ್ಷಗಳ ಕಾಲ ಕುಂದಾಪುರದಲ್ಲಿ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ, 12 ವರ್ಷ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದ್ದ ಶೆಟ್ಟರು 1942ನೇ ವರ್ಷದಲ್ಲಿ ಕುಂದಾಪುರದಲ್ಲಿ ನಡೆದ ಅಸಹಕಾರ ಚಳುವಳಿಯ ನಾಯಕತ್ವ ವಹಿಸಿದ್ದರು. ಇವರ ಬ್ರಿಟೀಷ್ ಸರ್ಕಾರದ ವಿರುದ್ದ ಕೃತ್ಯಗಳನ್ನು ಕಂಡು ಬೆದರಿದ ಬ್ರಿಟೀಷರು ಕಣ್ಣೂರು, ತಿರುಚನಾಪಲ್ಲಿ ಜೈಲುಗಳಲ್ಲಿ ಸೆರೆ ಇಟ್ಟಿದ್ದರು.
ಗೋಪಾಲಕೃಷ್ಣ ಶೆಣೈ, ಎಮ್. ಉಮೇಶ ರಾವ್, ಆರ್. ಕೆ. ಪ್ರಭು ಮತ್ತು ಶೇಕ್ ಯೂಸಫ್ ಸಾಹೇಬರು, ಬಸ್ರೂರು ಸುಬ್ಬಣ್ಣ ಶೆಟ್ಟಿ, ಅಣ್ಣಪ್ಪ ಕಾರಂತ, ಹಾಲಾಡಿ ಮಹಾಬಲ ಶೆಟ್ಟಿ ಮತ್ತು ಹಾಲಾಡಿ ಶೀನಪ್ಪ ಶೆಟ್ಟಿಸೇರಿ ಅನೇಕರು ನಾನಾ ಕಡೆಗಳಲ್ಲಿ ಬ್ರಿಟೀಷರ ವಿರುದ್ದ ಹೋರಾಟದಲ್ಲಿ ಭಾಗವಹಿಸಿದ್ದರು.
ಇದಲ್ಲದೆ ದಕ್ಷಿಣ ಕನ್ನಡ ಜಿಲ್ಲೆ ಮದ್ರಾಸ್ ಪ್ರಾಂತದ ಅಧೀನದಲ್ಲಿದ್ದ ಸಮಯ ಥಾಮಸ್ ಮನ್ರೋ ಇಲ್ಲಿನ ಕಲೆಕ್ಟರ್ ಆಗಿದ್ದು ಬಸ್ರೂರಿನಲ್ಲಿ ಅವರ ಬಂಗಲೆ ಇತ್ತು. ಇಂದಿನ ನಿವೇದಿತಾ ಶಾಲೆ ಇರುವ ಜಾಗವನ್ನು ಕಚೇರಿ ಗುಡ್ಡೆ ಎನ್ನಲಾಗುತ್ತದೆ. ಆದರೆ ಮುಂದೆ ಕುಂದಾಪುರ ಆಡಳಿತಾತ್ಮಕವಾಗಿ ವ್ಯಾವಹಾರಿಕವಾಗಿ ಅಭಿವೃದ್ದಿಯಾದ ನಂತರ ಬಸ್ರೂರು ತನ್ನ ಮಹತ್ವ ಕಳೆದುಕೊಂಡು ಪಾರಂಪರಿಕ ತಾಣವಾಗಿ ಉಳಿಯಿತು. ಹೀಗೆ ಬಸ್ರೂರು ಹಾಗೂ ಸುತ್ತಲ್ಲಿನ ಪ್ರದೇಶಗಳು ಭಾರತ ಸ್ವಾತಂತ್ರ್ಯ ಹೋರಾಟಗಳಲ್ಲಿ ಮಹತ್ವದ ಪಾತ್ರ ವಾಹಿಸಿದ್ದವು.
–ರಾಘವೇಂದ್ರ ಅಡಿಗ ಎಚ್ಚೆನ್.