ಶ್ರಾವಣ ಮಾಸ ಅಂದರ ಹಬ್ಬಗಳ ಮಾಸ. ಅದು ಶುರುವಾಗೋದೇ, “ಈ ಸಲಾ ಐದು ಶುಕ್ರವಾರ ಬಂದಿಲ್ಲ, ನಾಲ್ಕೇ ವಾರ ಬರತಾವ. ಅದರಾಗೂ ಮೊದಲನೇ ವಾರ ನಾಗರ ಚೌತಿ, ಹಂಗಾದರ, ಎರಡನೇ ವಾರ, ಅಂದರ, ವರ ಮಹಾಲಕ್ಷ್ಮಿ ಏಕಾದಶೀನೋ, ದ್ವಾದಶೀನೋ, ಇರತದ, ಈ ಸಲಾ ಈ ಗೌರವ್ವನೂ ನಮಗ ಖರ್ಚು ಕಡಿಮೀ ಮಾಡ್ಯಾಳ.” ಅನ್ನುವ ಲೆಕ್ಕಾಚಾರದಿಂದ. ಯಾಕೆಂದರೆ, ಶ್ರಾವಣ ಮಾಸದ ಗೌರಿದೇವಿ ಅಂದರ ಭಕ್ತಿ ಎಷ್ಟೋ, ಮಡಿನೂ ಅಷ್ಟೇ, ಅಲ್ಲದೇ ಖರ್ಚೂ ಅಷ್ಟೇ ಹೆಚ್ಚು. ಶ್ರಾವಣ ಮಾಸದ ಖರ್ಚು ಎರಡು ತಿಂಗಳ ಕಿರಾಣಿ ಖರ್ಚು. ಪ್ರತೀ ವಾರ ಹೂರಣದ ಆರತೀ ಆಗಲಿಕ್ಕೇ ಬೇಕು.
ಆಷಾಢದ ಮಾಸದೊಳಗ ಹುಣ್ಣಿವಿ ಆತಂದರ, ಗೌರಿ ತಯಾರಿ ಶುರುವಾಗತದ. ಅಜ್ಜೀ “ಸಮಾ ತಳ ಇರೂ ಗೌರಿ ಗಡಗೀ ತೊಗೊಂಬಾ, ಮುಚ್ಚಾಳ ಸಮಾ ಕೂಡಬೇಕು ನೋಡು, ಪಳ್ಳ ಬಿಟ್ಟರ ಗೌರಿ ಹೊಟ್ಟ್ಯಾಗಿನ ಅಕ್ಕಿ ಮುಗ್ಗಸಾಗತಾವ. ಪೂಜಾಕ್ಕ ಬರೂದಲ್ಲಾ.” ಅಂತ ಎಚ್ಚರಿಕಿ ಕೊಡತಿದ್ದಳು. ಅಪ್ಪ ಸೈಕಲ್ಲೇರಿ, ಹಾನಗಲ್ ಸಂತೀಗೆ ಹೋಗಿ, ಗೌರಿ ಗಡಗೀ ತರಬೇಕು. ಅದನ್ನ ಬರೋವಾಗ, ಕಯ್ಯಾಗ ಹಿಡಕೊಂಡಿರಬೇಕು, ಅದಕ್ಕ ಒಂದ ಕೈಯಿಂದ ಹ್ಯಾಂಡಲ್ ಹಿಡಕೊಂಡು, ಸೈಕಲ್ ಬ್ಯಾಲೆನ್ಷ ಮಾಡಿಕೊಂಡು ಬರಬೇಕು. ಹದಿನೈದು ಕಿಲೋ ಮೀಟರ್. ಅದನ್ನ ತಂದಿದ್ದ ಕತೀಯನ್ನೂ ಚಹಾ ಕುಡಕೋತ, ಅಪ್ಪ, ಅಜ್ಜೀ ಮುಂದ ಹೇಳತಿದ್ದರ, ಅಜ್ಜೀನೂ ಈ ಗೌರೀ ಗಡಗೀ ಪರೀಕ್ಷಾ ಮಾಡಿಕೋತನ, ಪ್ರತೀ ವರ್ಷನೂ ಅಷ್ಟ ಆಸಕ್ತಿಯಿಂದ ಕೇಳತಿದ್ದಳು. ಸಂತ್ಯಾಗ, ಸಮಾ ಕೂಡೋ ಗಡಗೀ ಇರಲೇ ಇಲ್ಲವಾ, ಕಡೀಕೆ, ಕುಂಬಾರ ಮನೀಗೇ ಹೋಗಿ, ಆರಿಸಿಕೊಂಡು ಬಂದೆ ನೋಡು, ಬರೋತನಕಾ ಇದ ಕೈಯಾಗ ಹಿಡಕೊಂಡಿದ್ದೇ, ಒಂಚೂರು ತ್ರಾಸ ಆಗಿಲ್ಲವಾ.” ಅನ್ನೋ ಮಾತಂತೂ ಖಾಯಂ ಇರೋದು. ಅದಕ್ಕ, ನಮ್ಮಜ್ಜಿ, ತನ್ನ ಪರೀಕ್ಷಾ ಎಲ್ಲಾ ಮುಗಿಸಿ, ಭೇಷಿದ್ದಾಳ ಗೌರವ್ವ, ಅಂತ ಸರ್ಟಿಫಿಕೇಟ್ ಕೊಟ್ಟಳಂದರ ಒಂದು ಅಂಕ ಮುಗೀತು.
ಆಮ್ಯಾಲ, ಏಕಾದಶಿ ದಿನ ಗೌರಿ ಬರಿಯೋ ಸಡಗರ, ಅದರಾಗೂ ಅಜ್ಜೀದೇ ಹಿರೇತನಾ. “ನೋಡು ಶೋಭಾ, ಗೌರಿ ಲಗೂನ ಮುಂಜಾನೇನ ಬರದು ಮುಗಿಸಿಬಿಡು. ಅಂದರ, ಮಧ್ಯಾನ್ಹ ಅವಲಕ್ಕಿ ಗಿವಲಕ್ಕಿ ತಿನಬಹುದು, ಇಲ್ಲಾಂದರ, ಸಂಜೀತನಕಾ ಎಳೀತದ, ಉಪಾಸ ಕೂಡಬೇಕಾಗತದ.” ಅಂತಿದ್ದಳು. “ನೋಡೂ, ಕ್ಯಾವೀನ ತುಂಬಾ ಎರಡು ಸಲ ಹಚ್ಚು. ಅಂದರ ಗೌರವ್ವ ರಬ್ಬಾಗತಾಳ. ಮಾಡ ಮುಸುಕೇದ, ಲಗೂ ಕ್ಯಾವಿ ಒಣಗೂದಿಲ್ಲ, ಹಸೀ ಕ್ಯಾವೀ ಮ್ಯಾಲ ಬಿಳೇ ಚಿಕ್ಕಿ ಎದ್ದು ಕಾಣೂದಿಲ್ಲ. ಅವಸರಾ ಮಾಡಬ್ಯಾಡ, ಹೋದಸಲಾ ಸುಂದರಾಬಾಯಿ ಮನ್ಯಾಗ, ಗೌರವ್ವನ ಮಾರೀನೇ ಕಾಣತಿದ್ದಿಲ್ಲಾ. ಎಲ್ಲಾ ಮಸಕ ಮಸಕ ಚಿಕ್ಕಿ. ಇಲ್ಲೆ ನೋಡು ಬೆಳ್ಳನ್ನಿ ಬೆಣ್ಣಿಯಂತಾ ಸುಣ್ಣಾ ತಗದ ಇಟ್ಟೇನಿ, ಸಣ್ಣ ಸಣ್ಣ ಚಿಕ್ಕಿ ಇಡು. ಚಿಕ್ಕಿ ಅಂದರ, ಮತ್ತು ಜೋಡಿಸಿದಂಗ ಕಾಣಬೇಕು ನೋಡು. ತುಳಸವ್ವ, ವಯಸ್ಸಾದರೂ ತಾನೇ ಗೌರೀ ಬರೀತೀನಿ ಅಂತಾಳ, ವಯಸ್ಸಾತು, ಕಣ್ಣೂ ಕಾಣೂದಿಲ್ಲ, ಕೈನೂ ನಡಗತಾವ, ಸೊಟ್ಟಾ ಪಟ್ಟಾ ಚಿಕ್ಕಿ, ಏನೇನೂ ಚಂದಾಗೂದಿಲ್ಲ. ಮತ್ತ ನೆನಪದನೋ ಇಲ್ಲೋ. ಗೌರವ್ವನ ಮಂಗಳ ಸೂತ್ರ, ಪಾದ, ಸೀತಾ ಸೆರಗು, ಆಕಳಾ ಕರಾ, ಅಕಮಂಚೀ ಬರೀಬೇಕು, ಮಾರಿ ಸಮಾ ಅರ್ಧಾ ಕರೇ ಬಣ್ಣಾ ಹಾಕಬ್ಯಾಡ, ಕಣ್ಣು ಮೂಗು ಬರೀಲಿಕ್ಕೆ ಜಾಗಾ ಬಿಡು.” ಹೀಂಗ ನೂರಾ ಎಂಟು ಸಲಹಿ, ಸೂಚನಾ ಇರತಿದ್ದವು ಅಕೀ ಕಡಿಂದ. ಅಂದರೂ ಗೌರೀ ಬರದಾದ ಮ್ಯಾಲ, ಇಷ್ಟೆಲ್ಲಾ ಹೇಳೀದ ಅಜ್ಜೀನ, “ನಮ್ಮ ಶೋಭಾ ಭಾರೀ ಜಾಣಿ, ಒಂದೂ ಹೇಳಿಸಿಕೊಳ್ಳೋದಲ್ಲ, ಎಲ್ಲಾ ತಾನ ತಿಳವಳಿಕಿಂದ ಮಾಡತಾಳ, ಭಾರಿ ಮುದ್ದಾಗ್ಯಾಳ ನೋಡು ಗೌರವ್ವ” ಅಂತಿದ್ದಳು. ಇಲ್ಲೀ ತನಕಾ ಇದ್ದ ಗಡಗೀ ಅನ್ನೋ ಶಬ್ದ ಈಗ ಮಾಯ. ಸಿರಿಯು ಸಂಪತ್ತನ್ನ ಕೊಡುವಂಥಾ ಗೌರವ್ವ ತಯಾರಾಗಿರತಿದ್ದಳು. ಭಕ್ತಿಂದ ಶಿರವಾ ಬಾಗುವರು.
ಗೌರೀ ಮಾಡಾ ಸ್ವಚ್ಛ ಮಾಡಿಕೋ, ನೋಡೂ ಸುತ್ತಲೂ ಸುಣ್ಣಾ ಹಚ್ಚಿದರೂ, ಒಂದು ಬಟ್ಟು ಹೊರಗೂ ಕೆಮ್ಮಣ್ಣು ಎಳೀ, ಗೌರವ್ವನ ಮಾಡಕ್ಕ, ಮಾಡದೊಳಗ, ತೆಳಗ ಇವತ್ತನ, ಎಳಿಬಟ್ಟು ಬರೀ, ಅಂದರ ನಾಳಿಗೆ ಒಣಗತದ. ಬಾಗಲದಾಗ, ಹೊಚ್ಚಲ ಮ್ಯಾಲ, ನಡಮನಿಯೊಳಗನೂ ಸಂಜೀ ಮುಂದ ಎಳ ಬಟ್ಟು ಬರೀ, ಇಕಾ ಇಲ್ಲೆ ಮಂತ್ರಾಕ್ಷತಿ ಮಾಡಿಟ್ಟೇನಿ, ಈ ಡಬ್ಬೀ ತುಂಬ ಅವ, ಜ್ವಾಕೀ, ತೆಳಗ ಬೀಳಸ ಬ್ಯಾಡ, ಶ್ರಾವಣ ಮಾಸ ಪೂರ್ತಿ ಸಾಲಬೇಕು. ಮತ್ತ ಇಲ್ಲೆ ಮಂಗಳಾರತೀ ಬತ್ತಿ, ಹೂಬತ್ತಿ ತಪ್ಪದಾಗ ತೊಯಿಸಿಟ್ಟೇನಿ. ಗೆಜ್ಜಿ ವಸ್ತ್ರಕ್ಕ ಕೆಂಪ ಹಚ್ಚಿಟ್ಟೇನಿ. ಗೌರಿ ಮಾಡದ ಮ್ಯಾಲೆ ಶ್ರೀಕಾರ ಹಾಕಲಿಕ್ಕೆ ಗೋಪಣ್ಣಗ ಹೇಳಬೇಕು ಇನ್ನೂ. ಅಜ್ಜೀ ತಯಾರಿ ಇದಿನ್ನೂ ಶ್ರಾವಣ ಮಾಸದ ಶುರೂವಿಗೂ ಮೊದಲಿನದು. ಒಂದೂ ತಪ್ಪಬಾರದು ಅಕೀಗೆ.
ಶುಕ್ರವಾರಕ್ಕ ಎರಡು ದಿನಾ ಮೊದಲೇನೆ ಒಂಭತ್ತು ವಾರೀ ಸೀರಿ ಮಡೀಲೆ ಒಣಾ ಹಾಕತಿದ್ದಳು. ಮಳಿಗಾಲ, ಒಂದ ದಿನಕ್ಕ ಒಣಗೂದಿಲ್ಲ ಖೋಡಿ, ಅಂತಿದ್ದಳು, ಮುಂಜಾನೆ ನಾಕಕ್ಕನ ಎದ್ದು ತನ್ನ ಅಡಗೀ ತಯಾರಿ ಮಾಡತಿದ್ದಳು. ಭಾರೀ ಸತ್ಯಳ್ಳ ಗೌರವ್ವ. ಶ್ರಾವಣ ಮಾಸದಾಗ ತಪ್ಪಿಲ್ಲದನ ಹೂರಣದ ಆರತೀ ಆಗಬೇಕು ನಮ್ಮನಿಯೊಳಗ, ಮದಲಿನ ಶುಕ್ಕರವಾರ ತಪ್ಪದ ಹೋಳಿಗೀ. ಬ್ಯಾಳ್ಯಾಗ ಬೆಲ್ಲ ಬೀಳದ ಗೌರೀ ಪೂಜಾ ಆಗತದನು ಅನಕೋತನ, ಹಿಂದಿನ ದಿನ ಅವ್ವನ ಕಡೆ ಎಲ್ಲಾ ಉಪಕಾರಣೀ ಜೋಡಸತಿದ್ದಳು. “”ಹೋಗೀ ಸರಸ್ವತೀ ಬಾಯಿನ್ನ ಊಟಕ್ಕ ಕರದು ಬಾ, ಹಂಗ ಎರಡೂ ಮಕ್ಕಳನೂ ಕರಕೊಂಬರಲಿಕ್ಕೆ ಹೇಳು. ಸಂಜೀಗೆ ರಾಘೂಗು ಬಡಿಸಿಕೊಡತಾರಂತ ಹೇಳೇಬಾ. ಅಂದಾಕಾರ ಖೊಟ್ಟಿ, ಮಾಡಿಸಿಕೊಂಡು ಊರ ಮಂದೀ ಮುಂದ ಆಡಿಕೋತಾಳ, ಸಂಜೀಕೆ ಬಂದು ಬಿಸಿ ಅಡಗೀ ಮಾಡಿದನರೆವಾ ಅಂತ. ಹೇಳಿಸಿಕೊಳ್ಳೋದು ಯಾಕ.” ಇವೆಲ್ಲಾ ಹಬ್ಬದ ತಯಾರಿಯೊಳಗೇ ಸೇರಿದ ಮಾತುಗಳು.
ಅಪ್ಪನ ತಯಾರೀನೂ ಕಡಿಮೀದಲ್ಲ. ಮುಖ್ಯ ಗೌರೀ ಗಡಗೀ ತರೋದು, ಕಾರಣೀ ಬರಿಯೋದು, ಅಲ್ಲದ, ಹಬ್ದದ ಸಾಮಾನೂ ತರಬೇಕು. ಜಿನ್ನಪ್ಪನ ಮನೀಗೆ ಹೋಗಿ ಗೋದೀ ತೊಗೊಂಬಾ, ಮಂದೀ ಇದ್ದಾಗ ಹೋಗಬ್ಯಾಡ. ನಮಗ ಅಂತ ಅವರ ಅವ್ವ ಬ್ಯಾರೇ ಛೋಲೋ ಗೋದೀ ಇಟ್ಟಿರತಾಳ. ಅಕೀನ್ನ ಕೇಳು, ಈ ಜಿನ್ನಪ್ಪ ಮುಂದಿನ ಚೀಲದಾಗಿರೋ ಗೋದೀ ಕೊಡತಾನ, ಮಂದೀಗೆ ಕೊಡೋವು, ಅಮೃತ ಗೋಧಿನ ಬೇಕು ಹೋಳಿಗೀಗೆ. ಮತ್ತ ತೆಂಗಿನಕಾಯಿ ಮಡ್ಡೇರ ಮನಿಯಿಂದನ ತೊಗೊಂಬಾ. ಸಂತ್ಯಾಗ ತರಬ್ಯಾಡ. ಎಳೇ ಖೊಬ್ಬರೀ. ಕಾಯಿನೂ ಸಣ್ಣವಿರತಾವ. ಮಡ್ಡೇರ ಬಸವಣ್ಣೆಪ್ಪನ ಮನೀ ಕಾಯಿ ಭಾಳ ರುಚಿ ಇರತಾವು. ಶುಕ್ರವಾರಕ್ಕ ಸಂತೀಯೊಳಗ ಎಳೇ ತಿಂಗಳವರೀ ಕಾಯಿ ಪಲ್ಯಾಕ್ಕ ಬೇಕು, ಮದಲನೇ ವಾರ ನಾಗಪ್ಪನ ಹಬ್ಬ ಇರತದ ಪಡವಲಕಾಯಿ ಬ್ಯಾಡ, ಹೀರೀಕಾಯಿ, ಆಲೂಗಡ್ಡಿ ಬುರಬುರೀ ಮಾಡರೀ, ಮೂರನೇ ವಾರಕ್ಕ ಪಡವಲಕಾಯಿ ಮಾಡಿದರಾತು, ಎರಡನೇ ವಾರಂತೂ ಚಕ್ಕಲಿ, ಕ್ವಾಡಬಳಿ, ಕರ್ಚಿ ಕಾಯಿ, ಹೂರಣದ ಕಡಬು ಮಾಡೋಣಂತ, ಹಿಂಗ ಅಡಗೀ ತಯಾರಿಗೆ ತಕ್ಕಂಗ ಸಾಮಾನು ಹೊಂದಸ ಬೇಕು. ಅಷ್ಟಾದ ಮ್ಯಾಲೂ ಸೌತೀಕಾಯಿ ಎಳೇವಿಲ್ಲ, ಹುಳೀ ಅಲ್ಲ ಕೂಟಿಗೆ ಹಾಕೋಹಂಗವ, ಕೋಸಂಬರಿ ರುಚೀನ ಆಗುದುಲ್ಲ, ಶುಂಠೀ ಚಟ್ನಿ ಈ ದಿನಕ್ಕ ದೇಹಕ್ಕ ಭಾಳ ಛೋಲೋ, ಮಜ್ಜೀಗೀಗೆ ಜಾಸ್ತಿ ಹೆರದು ಹಾಕು. ಇಂಗು ಕರಬೇವಿನ ಒಗ್ಗರಣಿ ಘಂ ಅಂತದ. ರಸಾ, ಮಸಾಲೀ ಭಾತು ಬ್ಯಾಡಾಂತಾವ ಖೋಡಿ, ಯಾರ ತಿಂತಾರಂತ, ಗೌರವ್ವನ ನೈವೇದ್ಯಕ್ಕಾಗೆರ ಮಾಡಬೇಕು. ನಿಮಗಲ್ಲ, ಗೌರವ್ವ ಕಣ್ಣ ತಗದು ನೋಡಿದರ ಈ ಕ್ಷಣ ಮನೀ ಅರಮನೀ ಆಗತದ ಕೇಳೀ ಇಲ್ಲೋ ಶುಕ್ಕರವಾರದ ಹಾಡನ್ಯಾಗ ಬರತದಲ್ಲಾ. ಹೂರಣಕ್ಕ ಯಾಲಕ್ಕೀ ಜೊತೆ ಸ್ವಲ್ಪು ಜಾಜಿಕಾಯಿ ಜಜ್ಜಿ ಹಾಕು, ಹೋಳಿಗಿ ಖಂಮಗ ಆಗತಾವ. ಹೋಳಗೀ ಹಿಟ್ಟು ಕಲಸೀ ಕೋಸಂಬರಿ ಹತ್ತರ ಇಡಬ್ಯಾಡ, ಹೋಳಗೀ ಹರೀತಾವ. ಇಲ್ಲಾಂದ್ರ, ಅಮೃತ ಗೋಧಿ ತಂದಿರತೇವಿ, ರೇಶಿಮಿ ಕುಚ್ಚಾಗಿರತಾವ. ತುಪ್ಪದಾ ಎದ್ದಕೊಂಡು ತಿಂದರ, ಭ್ರಾಂಬ್ರ ಬಾಯಿ ಸ್ವಚ್ಛ ಆಗತದ. ಫೇಢೇ ತಿಂದಂಗ. ಹೀಂಗ ಅಡಗೀ ತಯಾರೀ ಮಾಡೋದು ಹಬ್ಬದ ಸಡಗರ ಹೆಚ್ಚಾಗುತ್ತಿತ್ತು.
ಶನಿವಾರಂದರ, ಹುಳಿನುಚ್ಚು ಮನ್ಯಾಗ ಕುಟ್ಟಬೇಕು, ಜರಡಿಯಾಡಿ ಹಿಟ್ಟು ಸೋಸಬೇಕು. ಇಲ್ಲಾಂದರ, ಅಂಬಲಿ ಮುದ್ದ್ಯಾಗತದ, ಮತ್ತ ನುಚ್ಚು ಮುಂಜಾನೆ ಮೊದಲ ನೆನಸಿಟ್ಟರ ಬೇಕು, ನುಚ್ಚು ಲಗೂ ಬೇಯೂದಿಲ್ಲ, ಹುಳಪಲ್ಯಾಕ್ಕ ಐದು ತರದ ಸೊಪ್ಪು ಬೇಕೇ ಬೇಕು. ಮತ್ತ, ಇಡ್ಲಿ, ಬಿಸಿಬ್ಯಾಳಿ ಭಾತು ಮಾಡಿದರ ಸಾಕು, ಹಯಗ್ರೀವ ಮಾಡಿಬಿಡೋಣ ಶನಿವಾರ. ಆರತೀ ಪೂರ್ತೆ ಹೂರಣಾ ರುಬ್ಬಿದರಾತು. ಆರತೀನ ದೊಡ್ಡವು ಮಾಡು ಒಂದೊಂದು ತಿಂದರ ಕಡಬು ತಿಂದಂಗಿರಲಿ. ಇದು ಶನಿವಾರದ ಅಡಗೀ ತಯಾರೀ.
ನಮ್ಮೂರಿನ ವರದಾ ನದೀನೂ ಈ ಹಬ್ಬಕ್ಕಂತನ ತುಂಬೀ ಹರೀತಿದ್ದಳು. ಆದರ, ಮಡೀ ನೀರಿಗೆ ಅಂತ ನದೀಗೆ ಹೋಗೋದು ಶ್ರಾವಣದಾಗ ಕಡಿಮಿ. ಯಾಕಂದರ ಅಜ್ಜಿ ಮಳೀ ನೀರು ಹಿಡಿದು ಇಟ್ಟಿರತಿದ್ದಳು, ಅಡಗೀಗೆ, ಮಡಿ ಮಟ್ಟಿ-ಮೇಲ್ನೀರಿಗೆ ಎಲ್ಲಾದಕ್ಕೂ ಸಾಕಾಗೋ ಅಷ್ಟು.
ಇನ್ನ, ಗೌರೀ ಪೂಜಾಕ್ಕ ಹಿತ್ತಲಾದಾಗಿನ ಮಲ ಮಲ ಅನ್ನೋ ಹಸರಿರೋ ಕರಕೀ ಪತ್ರಿ ತರಬೇಕು, ಮಲ್ಲಿಗೀ ಹೂವಿದ್ದರ, ಒಬ್ಬರು ಬಾಳಿ ನಾರು ಕೈಯಾಗ ಹಿಡಿದು ಇನ್ನೊಬ್ಬರು ಅದರೊಳಗ ಹೂವಿಟ್ಟು ನಡುನಡುವ ಗುಲಾಬಿ ಪಕಳಿ ಹಸರು ಎಲಿ ಇಟ್ಟು ಮಾಲಿ ಹೆಣದು ಇಡಬೇಕು. ಗುಲಾಬಿ ಬಿಡಿ ಹೂ ಇಟ್ಟಿರಬೇಕು. ಯಾವುದೇ ಕಾರಣಕ್ಕೂ ಎರಡನೇ ಶುಕ್ರವಾರ ಕ್ಯಾದಗೀ ವಡಿ ತರೋದನ್ನ ಮರೀಬಾರದೂ. ದೊಡ್ಡ ವಡೀ ಇದ್ದರ ಛೋಲೋನೇ. ಅಗಲದ ಕ್ಯಾದಗೀ ಜಡೀಗೆ ಹೆಣಸಿ ಕೋಳಿಕ್ಕಾಗತದ. ಪುಟ್ಟ ಪುಟ್ಟ ಘಂ ಅನ್ನೋ ಕ್ಯಾದಗೀ ಗೌರವ್ವನ ಮುಂದ ಎಡಕ ಬಲಕ ನಿಂತಿರತಾವ.
ಕಾಲಿನೊಳಗ ಕೆಸರು, ಮೇಲೆ ಜಿಟಿ ಜಿಟಿ ಮಳೆ, ಮೋಡ ಮುಸುಕಿ, ಹಗಲಿನಲ್ಲೇ ನಸುಕತ್ತಲಿನೊಳಗ ಶ್ರಾವಣದ ಗೌರವ್ವಗ ಹೂರಣದ ನೈವೇದ್ಯ ಬಡಸೀ, ಪೂಜೀ ಮಾಡೋಣ ಬನ್ನೀರೇ ಅಂತ ಶುರುವಾದರ, ಅದೊಂದು ಬ್ಯಾರೇದ ಲೋಕ, ಗೌರವ್ವಗ ಹೂರಣದ ಆರತಿ ಎತ್ತಿ, “ಆರುತಿ ಬೆಳಗಿರೆ ನಾರಿಯರು” ಅಂತ ಶುಕ್ರವಾರ, ಶನಿವಾರ, ಆರುತೀಯ ಮಾಡುವೇ ನಾ ಲಕ್ಷ್ಮಿದೇವಿಗೆ, ಸಾಹೆಕ್ಕಾ ದೇಹಕ್ಕಾ ಸಂಪತ್ತು ಕೊಟ್ಟ ಲಕ್ಷ್ಮಿ ದೇವಿಗೆ” ಅಂತ ಎರಡು ಹಾಡಿನಿಂದ ಆರತೀ ಮಾಡಿ, “ವರವ ಕೊಡ ತಾಯಿ ವರವ ಕೊಡ” ಎಂದು ಭಕ್ತಿಯಿಂದ ಸೆರಗೊಡ್ಡಿ ಬೇಡಿಕೊಳ್ಳುವ, ಒಂಭತ್ತುವಾರಿ ಸೀರಿಯ ಕಚ್ಚಿ ಹಾಕಿದ ಅವ್ವ, ಪ್ರತಿ ಹಬ್ಬದಾಗೂ, ಪೂಜಾ ಮಾಡೋವಾಗ ಮುಂದ ನಿಂತಿರತಿದ್ದ ಅಪ್ಪ ಜಾಗಟೀ ಹಿಡಕೊಂಡು ಅವ್ವನ ಹಿಂದ ನಿಂತಿರೋದು, ಅವರ ಮಾರೀ ಮ್ಯಾಲ ಈ ಆರತೀ ಬೆಳಕು ಇದ್ದು, ಕಪ್ಪನ್ನೀ ಆಕಾಶದಾಗಿನ ಸೂರ್ಯ-ಚಂದ್ರರಂಗ, ಆರತೀ ಬೆಳಕನ್ಯಾಗ ಈ ಜೋಡಿ ಮಾರಿ ಮಿಂಚುತಿದ್ದವು. “ಹಿತ್ತಲದಾಗಿನ ಗುಲಾಬಿ ಗೌರವ್ವನ ತಲೀ ಮ್ಯಾಲೆ ಸಮಾತ್ನ್ಯಾಗಿ ಕೂಡೋ ಹಂಗ ಏರಿಸು, ಗೌರವ್ವಗ ಕೈ ತಾಗಿಸಬ್ಯಾಡ, ಕ್ಯಾದಗೀ ಮುಳ್ಳ ನೋಡಿ ಹಿಡಕೋ, ಮುಂದನ ಏರಸು, ಬೀಳಬಾರದು, ಭಾಳ ಮಡೀ ಅಕೀ” ಅಂತ ಈ ಸಂಭ್ರಮಕ್ಕ ಸಾಥ್ ನೀಡೋ ಅಜ್ಜಿ, ಘಮ್ಮನ್ನೋ ಹೂರಣದ ಪರಿಮಳ, ಇದೆಲ್ಲಾ ಸೇರಿ ವಿಶೇಷವಾದ ನಂದನವನದ ದೇವ ಲೋಕನ ಬಂದು ನಮ್ಮನಿಯಲ್ಲಿಳಿದಂಗಿರತಿತ್ತು, ಅಲ್ಲೆ ಹಿಂದ, ನಾನು ಮತ್ತ ನನ್ನ ತಮ್ಮ, ಈ ವಾತಾವರಣದ ಭಕ್ತಿಗೆ ಪೂರಕವಾಗಿ, ನಮ್ಮ ಎಂದಿನ ಜಗಳಾ ಮರತು ಕೈಮುಗದು ನಿಂತಿರತಿದ್ದಿವಿ. “ಮಕ್ಕಳು ಮಾಡೋ ಮಹಾ ತಪ್ಪು ಅಪರಾಧ ಹೆತ್ತ ಮಾತೆಯರೆಣಿಸುವರ,” ಅನ್ನೋ ಹಾಡು, ನಾವು ಮಾಡಿದ ತಪ್ಪುಗಳನ್ನೆಲ್ಲಾ ಕ್ಷಮಿಸಲಿಕ್ಕೆಂದೇ ಬಂದ ಗೌರವ್ವ ಎಂಬ ಭಾವನೆಯನ್ನು ಮೂಡಿಸುವುದೇ ಶ್ರಾವಣ. ಕಡೇವಾರ ಬರೋಕಿಂತ ಮೊದಲೇ, ಒಂದು ನೂರು ಸರತೇಯರ, ಕಡೆಯವಾರವು ಕಾಮಧೇನಂತೆ ಬರುವೇನು, ಕರೆದುಕೋ ಮನದ ಇಷ್ಟಾರ್ಥ” ಅಂತ ಗುನುಗುನು ಬರತಿತ್ತು ಹಾಡು.
ಇನ್ನ ಮುಂಜಾನೆ ಪೂಜಾ ಶುರೂ ಆಗೋಕಿಂತ ಮೊದಲ, ಸಂಜೀ ಮಂಗಲಾರತೀ ಆಗಬೇಕು, ಶುಕ್ರವಾರದ ಹಾಡು ಅನಬೇಕು ಅನ್ನೋ ಇಂಡೆಂಟ್ ಇರತಿತ್ತು. ಹರನ ಕುಮಾರನ ಚರಣ ಕಮಲಲಕ್ಕೆರಗಿ ಅಂತ ಅರ್ಧಾ ತಾಸಿನ ಹಾಡು, ಅದು ಮುಗಿಯೋತನಕಾ ನಾವ್ಯಾರೂ ಏಳ ಬಾರದು, ನಿಂಬೆ ಭಾತು, ಸೌತೆ ಭಾತು ಕೆನಿ ಕೆನಿ ಮಸರು, ಹಾಗಲ ಕಾಯಿ ಹಂದರದವರೆ, ಬಾಳೆ ಹೀರೇ ಕುಂಬಳವು. ಹಿಂಗೆಲ್ಲಾ ಹಾಡಿನ್ಯಾಗ ಬಂದರ ಇಷ್ಟೆಲ್ಲಾ ಒಂದ ದಿನಾ ಮಾಡತಾರನೂ ಅಂತ ತಮ್ಮ ಅಜ್ಜಿನ್ನ ಕಾಡತಿದ್ದ. ಅಲ್ಲ ಅಜ್ಜಿ, ಪೂಜಾ ಮಾಡಲಿಕ್ಕೆ ಅಡಗೀ ಹೆಸರೂ ಹೇಳಬೇಕೇನು, ಮಂತ್ರದಂಗ, ಗೌರವ್ವಗ ಕಾಣತದಲ್ಲ ನಾವೇನು ಮಾಡಿ ಬಡಿಸೇವಿ ಅಂತ” ಅಂತಿದ್ದ, ಸುಮ್ಮನ ಹಾಡು ಕೇಳೋ ಖೋಡೀ ಅಂತ ಬೈಗಳಾ ಅಜ್ಜೀ ಕಡಿಂದ, ಅವ್ವ ಹಾಡಿಕೋತನ ನಮ್ಮ ಕಡೆ ಕಣ್ಣು ತಗದ ನೋಡತಿದ್ದಳು.. ಕಡೀಕೆ ಭೀಮೇಶ ಕೃಷ್ಣ ತಾನೊಲಿವಾ ಅಂತ ಹಾಡಿದಾಗ ನಮಗ ಆಡಲಿಕ್ಕೆ ಅನುಮತಿ ಸಿಕ್ಕಂಗ.
ಇವತ್ತು ನಾವೆಲ್ಲ ಆಫೀಸಿಗೆ ಓಡುವ ಅವಸರದಲ್ಲಿ ಮಾಡಿ ಮುಗಿಸುವ ಆರತಿಗೆ ಇಷ್ಟೆಲ್ಲಾ ಹೋಲಿಸಲು ಸಾಧ್ಯವೇ. ಗೌರಿ ಗಡಗಿ ಮಾಡೋ ಕುಂಬಾರರು ಇವತ್ತು ಎಲ್ಲಿದ್ದಾರೋ ಯಾರಿಗೂ ಗೊತ್ತಿಲ್ಲ. ಗೌರಿ ಬರಿಯೋ ಕೆಲಸ ಇಲ್ಲ, ಬೆಳ್ಳಿ ತಂಬಿಗೀನ ತಯಾರೀ ಅವ. ತೊಳದು ಒಳಗಿಡೋದು, ಮುಂದಿನ ವಾರ ಅದನ್ನೇ ಮತ್ತೇ ಕೂಡಿಸೋದು. ಈಗ ಇದೂ ಸಹ ಕಷ್ಟ. ಕೆಲವೊಂದು ಸಲ ನಾಲ್ಕು ಐದು ವಾರ ಮಾಡೋ ಗೌರೀ ಪೂಜಾನ, ಶ್ರಮ ಜಾಸ್ತಿ, ರಜಾ ಇಲ್ಲ ಅನ್ನೋ ನೆವದಿಂದ ಕಡೇ ವಾರ ಪೂಜಾ ಮಾಡೋಣ ಬಿಡು ಅನ್ನೋ ಶಾರ್ಟ ಕಟ್ ಗೆ ನಾವೇ ಬಂದಿರತೀವಿ. ಎಷ್ಟೋ ಸಲ ಒಂದು ವಾರ ಪೂಜಾ ಮಾಡಿ, ಎಲ್ಲಾರನೂ ಕರದು, ತಾಟಿನ ತುಂಬ ಹಣ್ಣು ಹೂವು ಇಟ್ಟು, ತೋರಕೀಗೆ ಆಡಂಬರದ ಹೂವೀಳ್ಯ ಮಾಡತೇವಿ. ಉಳಿಕೀ ವಾರ ಬೆಳ್ಳಿ ಹೂವು ಕ್ಯಾದಗೀ ಅವ ಅಲ್ಲ, ಎಲೀ ಅಡಕೀನೂ ಬೆಳ್ಳಿದೇ. ನಾವೇ ಹಿಂಗ ಮಾಡಿ, ನಮ್ಮ ನೆನಪನ್ನ ಮಕ್ಕಳಲ್ಲಿ ತುಂಬಿ ಹೇಳತೇವಿ. ಇವೆಲ್ಲಾ ನಮ್ಮ ನೆನಪಿನ ಖಜಾನೆ. ನಮ್ಮ ಮಕ್ಕಳು ತಾವು ನೋಡಿದ್ದನ್ನ, ಅನುಭವಿಸಿದ್ದನ್ನ ನೆನಪಿಡತಾರ. ನಾವು ಹೇಳಿದ್ದನ್ನಲ್ಲ. ಅವರ ನೆನಪಿನ ಶ್ರೀಮಂತಿಕೆ, ಅನುಭವ ಕಳೀಲಿಕ್ಕೆ ದುಡ್ಡಿನ ಹಿಂದೆ ಓಡಿದ ನಾವೂ ಕಾರಣರೇ ಎನ್ನುವ ತಪ್ಪಿತಸ್ಥ ಭಾವ ಪ್ರತೀ ಹಬ್ಬಕ್ಕೂ ಕಾಡತದ.
–ಡಾ. ವೃಂದಾ ಸಂಗಮ್
ವೃಂದಾ ಸಂಗಮ ಅವರ ಗೌರೀ ಹಬ್ಬ ತುಂಬಾ ಚೆನ್ನಾಗಿದೆ.
ಹಳೆಯ ದಿನಗಳು ಮತ್ತೆ ನೆನಪಾದವು. ಎಂಥ ಮಾಂತ್ರಿಕ ದಿನಗಳವು!!!.
ಧನ್ಯವಾದಗಳು.
Super vrunda akka…aa guiltiness antuu bhaal kadtada