ಪ್ರೀತಿ ಪ್ರೇಮ

ನೀನಿಲ್ಲದೇ ಇನ್ನೇನಿದೆ….: ಪೂಜಾ ಗುಜರನ್ ಮಂಗಳೂರು.

ಅದೆಷ್ಟು ದಿನಗಳು ಉರುಳಿದವು
ನಿನ್ನ ನೋಡದೆ ಮಾತು ಆಡದೆ.
ಆದರೂ ನೀನೆಂಬ ಗುಂಗು..
ಎದೆಯಲಿ ಮೂಡಿಸಿದ ರಂಗು..
ಇವತ್ತಿಗೂ ಅಚ್ಚಳಿಯದೆ ಉಳಿದಿದೆ.
ಇರಬೇಕು ಜೊತೆಯಲಿ
ಒಂದಷ್ಟು ಮನಸ್ಸಿನ ಭಾರಗಳನ್ನು
ಇಳಿಸಿ ಅಳಿಸಲು.
ಅದಿಲ್ಲದೆ ಹೋದಾಗಲೇ ಈ
ಮನಸ್ಸುಗಳು ಭಾರವಾಗಿ
ಬದುಕು ನಿರ್ಜೀವವಾಗುತ್ತದೆ.
ತಡೆದಿರುವ ಮಾತುಗಳನ್ನು ನಿನ್ನವರೆಗೂ ತಲುಪಿಸಲು ಆಗದೆ ಒದ್ದಾಡಿದ ಕ್ಷಣಗಳು ಬಲು ಭೀಕರವಾಗಿತ್ತು‌. ಸಂಬಂಧಗಳನ್ನು ಜೋಡಿಸುವುದು ಸುಲಭ. ಆದರೆ ಅದನ್ನು ಉಳಿಸಿ ಬೆಳೆಸುವುದೇ ಬದುಕಿನ ಬಹುದೊಡ್ಡ ಸವಾಲು. ಇದೆಲ್ಲವನ್ನು ಅರ್ಥ ಮಾಡಿಕೊಳ್ಳಲು ನಿನ್ನ ಅನುಪಸ್ಥಿತಿಯೇ ಬರಬೇಕಾಯಿತು.

ನನಗೆ ಗೊತ್ತಿಲ್ಲ. ಈ ಸಂಬಂಧಗಳು ಯಾಕೆ ಹುಟ್ಟುತ್ತವೆ ಎಂದು.‌ ನೀನು ನನ್ನ ಬದುಕಲ್ಲಿ ಯಾಕೆ ಬಂದೆ ಎಂದು ನಾನು ನನ್ನ ಪ್ರಶ್ನಿಸಿಕೊಂಡರು ಉತ್ತರವಿಲ್ಲ. ಯಾಕೆಂದರೆ ನೀನು ಅಂದರೆ ನನಗೆ ಹೆಸರಿಡಲಾಗದ ಒಲವು. ಕೆಲವೊಮ್ಮೆ ಈ ಸಂಬಂಧಗಳಿಗೆ ಹೆಸರಿಡಲು ನಮಗೆ ಆಗುವುದಿಲ್ಲ. ಹೆಸರನ್ನು ಮೀರಿ ಬೆಳೆದಿರುವ ಬಾಂಧವ್ಯಕ್ಕೆ ಹೆಸರಿನ ಹಂಗು ಆದರೂ ಯಾಕೆ ಅಂತ ನೀನೇ ಹೇಳಿರುವಾಗ ಅದನ್ನು ಇದ್ದಂತೆ ಒಪ್ಪಿಕೊಂಡು ಜೊತೆಯಾಗಿ ಬಂದೆ.
ಪ್ರೀತಿ ನಾನು ಬಯಸಿದಂತೆ ನಂಗೆ ಸಿಗಬೇಕು
ಅಂತ ಹಂಬಲಿಸುವುದು ತಪ್ಪು. ಇಲ್ಲಿ ಎಲ್ಲವೂ ಬಯಸಿದಂತೆ ಆಗಲ್ಲ. ನೀನು ನನ್ನ ಹಾಗೇ ಪ್ರೀತಿಸು ಅಂತ ನಿನಗೆ ದುಂಬಾಲು ಬಿದ್ದ ತಕ್ಷಣಕ್ಕೆ ನಿನ್ನತನವನ್ನು ನಾನು ಕಸಿದುಕೊಂಡಂತೆ.

ನನ್ನ ಅನುಕೂಲಕ್ಕಾಗಿ ಯಾವತ್ತು ನಿನ್ನನ್ನು ಬಳಸಿಕೊಳ್ಳಲಾರೆ.‌ ನೀನು ಅಂದ್ರೆ ನನಗೆ ಮುಗಿಯದ ಒಲವು ತೀರದ ಕುತೂಹಲ. ಜೀವದ ಉಸಿರು. ಇದಕ್ಕೆಲ್ಲ ಇತಿಮಿತಿಯ ಹಂಗು ಇಲ್ಲ. ನನ್ನದು ನಿನ್ನ ಜೊತೆ ಹಂಚಿ ಹೋದ ಬದುಕು. ಇವತ್ತು ನೀನಿಲ್ಲ ಅಂದ್ರೆ ನಾನು ಒಂಟಿಯೇ. ನೀನು ನನಗಾಗಿ ಏನೂ ಸಹಿಸಬೇಡ. ಯಾರ ನೋಟವನ್ನು ಯಾರ ಕೊಂಕನ್ನು. ಆದರೆ ನಾನು ನಿನಗಾಗಿ ಎಲ್ಲವನ್ನು ಸಹಿಸಿದ್ದೆ. ಎಲ್ಲಾ ಬಿಟ್ಟು ನನ್ನ ಸ್ವಾಭಿಮಾನವನ್ನು ಕೂಡ. ಇದು ನನ್ನತನಕ್ಕೆ ನಾನು ಕೊಟ್ಟ ದೊಡ್ಡ ಪೆಟ್ಟು.

ಆದರೂ ಪ್ರೀತಿಯಲ್ಲಿ ನಿರೀಕ್ಷೆಗಳು ಸಹಜ. ನೀನು ನನಗೆ ಸಿಕ್ಕಿದಾಗ ನನಗನಿಸಿದ್ದು ಇದೆ. ಅದಮ್ಯ ಪ್ರೀತಿಯ ಹೊರತು ಇನ್ಯಾವ ನಿರೀಕ್ಷೆಗಳು ನನ್ನಲ್ಲಿ ಇರಲಿಲ್ಲ.
ನೀನು ನನ್ನ ಜೀವನದ ಒಂದು ಹೊಸ ಅಧ್ಯಾಯಕ್ಕೆ ನಾಂದಿ ಹಾಡುವ ಸುಂದರ ರಾಗವಾಗಿ ಇರುತ್ತಿಯ ಅಂತ ಮನಸಾರೆ ಹಂಬಲಿಸಿದ್ದೆ. ಬಯಸಿದ್ದೆ ಕೂಡ.
ಈ ಪ್ರೀತಿ ಅಂದ್ರೆ ಹೀಗೆ.. ಯಾವುದು ನಾವು ಬಯಸಿದಂತೆ ಇರಲಾರದು. ಒಮ್ಮೆ ಅಗಾಧವಾದ ಪ್ರೀತಿ. ಮಗದೊಮ್ಮೆ ಅಸಾಧ್ಯವಾದ ನೋವು.‌ ಪರಿಶುದ್ಧವಾದ ಭಾವ. ತಾಳ್ಮೆಯನ್ನು ಪರೀಕ್ಷಿಸುವ ಕೋಪ.

ತುಂಬಾ ಮುದ್ದಾಡಿ ಮಡಿಲಲ್ಲಿ ಮಲಗಿಸುವ ಆಸೆಗೆ ನೀನು ಯಾವಾಗಲೂ ಒಂದು ಹೆಜ್ಜೆ ಮುಂದೆ ನಿಲ್ಲುತ್ತಿದ್ದೆ. ಅದಕ್ಕೆ ನಿನ್ನ ಮಡಿಲಲ್ಲಿ ಮಗುವಾಗಿಯೇ ಉಳಿಯುವ ಆಸೆ ಈ ಮನಸ್ಸಿನದು. ಆದರೂ ಈ ಹಟಮಾರಿಯ ಪ್ರೀತಿ ಆಗಾಧವಾದ ಸಾಗರದಂತೆ. ಅದರ ಆಳ ಹರಿವು ಊಹೆಗೂ ನಿಲುಕದು.‌

ನಿನಗೆ ನೆನಪಿದೆಯಾ ಅಂದು ನೀನಾಡಿದ ಆ ಮಾತು.‌? ಹುಣ್ಣಿಮೆಯ ಬೆಳಕಿನಲ್ಲಿ ಆಕಾಶವನ್ನೇ ದಿಟ್ಟಿಸಿ ಕುಳಿತಿದ್ದೆ. ನಿನ್ನ ಪಕ್ಕ ನಾನಿದ್ದೇನೆ ಅನ್ನುವ ಸುಳಿವು ಕೂಡ ಆ ಕ್ಷಣಕ್ಕೆ ನೀನು ಮರೆತಂತೆ ಇದ್ದೆ. ನಿನ್ನ ಹೆಗಲ ಮೇಲೆ ಕೈ ಇಟ್ಟಾಗ ಬೆಚ್ಚಿ ನನ್ನ ನೋಡಿದ್ದೆ. ಹೇಯ್ ಏನಾಯಿತು ಅದೇನೂ ಅಂತಹ ಗಾಢ ಆಲೋಚನೆ ಅಂತ ನಾನು ಕೇಳಿದಾಗ ನೀನು ಮಗುವಂತೆ ಬಿಕ್ಕಿ ಬಿಕ್ಕಿ ಅತ್ತಿದ್ದೆ. ಬಹುಶಃ ಆ ದಿನ ನನ್ನ ಮಡಿಲಲ್ಲಿ ಮೊದಲ ಬಾರಿ ತಲೆಯಾನಿಸಿ ಮಗುವಂತೆ ಮಲಗಿದ್ದೆ. ನಿನ್ನ ಕೂದಲ ಮೇಲೆ ಬೆರಳಾಡಿಸುವಾಗಲೂ ನೀನು ಮೌನವಾಗಿಯೇ ಇದ್ದೆ. ಕೊನೆಗೂ ನೀನು ನನ್ನ ಕೇಳಿದ್ದು ಒಂದೇ ಮಾತು.. ನಾವಿಬ್ಬರೂ ಕೊನೆವರೆಗೂ ಹೀಗೆ ಇರಬೇಕು. ಇರುತ್ತೇವೆ ಅಲ್ವ.? ಆಗ ನಾನು ನಕ್ಕಿದ್ದೆ. ಇರದೆ ಎಲ್ಲೋಗ್ತೀವಿ. ಜೊತೆಯಾಗಿಯೇ ನಡೆಯುವ ಭಾಷೆಯನ್ನು ನೀನು ಇಟ್ಟಿರುವಾಗ ಅದನ್ನು ಪಾಲಿಸುವವಳು ನಾನೇ ತಾನೇ.. ನೀನು ಬಿಟ್ಟು ಹೋದರು ನಿನ್ನ ನೆರಳಿನಂತೆ ಜೊತೆಯಾಗಿಯೇ ಬರುತ್ತೇನೆ ಅಂತ ನಿನ್ನ ಹಣೆಗೆ ಮುತ್ತಿಟ್ಟಿದ್ದೆ.

ಬಿಟ್ಟು ಹೋಗಲು ನಿನ್ನಲ್ಲಿ ಹಲವಾರು ಕಾರಣಗಳಿರಬಹುದು.‌ಆದರೆ ಅದೆಲ್ಲ ನನಗೆ ಸಮ್ಮತವಲ್ಲ ಅನ್ನುವುದು ನಿನಗೂ ತಿಳಿದಿರುವ ಸತ್ಯ.
ಇದೆಲ್ಲವನ್ನೂ ನೆನಪು ಮಾಡಿಕೊಂಡಾಗ ಕಣ್ಣಂಚು ಒದ್ದೆಯಾಗುತ್ತದೆ.‌
ನಾವಿಬ್ಬರೂ ಕೂಡಿ ಬಾಳುವ ರೇಖೆಗಳು ಎಲ್ಲಿ ಮಾಸಿತು. ಬಹುಶಃ ಇದಕ್ಕೆ ಉತ್ತರ ಸ್ವತಃ ದೇವರು ಕೊಡಲಾರನೇನೋ.? ಅಂಗೈಯಲ್ಲಿ ಬರೆದ ಹೆಸರನ್ನು ಮುಂಗೈಯಲ್ಲಿ ಒರೆಸಿ ಹೋಗುವ ಈ ಪ್ರೀತಿಗೆ ಭವಿಷ್ಯ ಇದೆಯೆಂದು ನಂಬುವುದಾದರೂ ಹೇಗೆ.

ನಿನ್ನ ಹೆಸರನ್ನು ಹಣೆಯಲ್ಲಿ ಬರೆದಿಲ್ಲ ನಿಜ. ಆದರೆ ಹೃದಯದ ಬಡಿತಕ್ಕೆ ಇದರ ಅರಿವು ಇನ್ನು ಬಂದಿಲ್ಲ ಅದು ಪ್ರತಿದಿನ ನಿನ್ನನ್ನು ಜಪಿಸುವಂತೆ ಮಾಡಿ ಕಂಗಾಲು ಮಾಡುತ್ತದೆ. ನೋವಿನ ಹೊಡೆತ ತಿಂದ ಹೃದಯದ ಮಿಡಿತ ಬಲು ಭೀಕರ.ಆ ನೋವು ಕೊಡುವ ಯಾತನೆ ಅದು ಅನುಭವಿಸುವವರಿಗೆ ಮಾತ್ರ ಅರಿಯಲು ಸಾಧ್ಯ.

ನಿನ್ನ ನೆನೆಯುವ ದಿನಗಳ ಮಧ್ಯೆಯು ಬದುಕು ಹೀಗೆ ಕವಲೊಡೆದ ದಾರಿಯಲ್ಲಿ ಸಾಗುತ್ತದೆ. ಮುಂದೆ ಒಂದು ದಿನ ಅದೆಲ್ಲಿಯೋ ಕೊನೆಯಾಗುತ್ತದೆ. ಇದರ ಮಧ್ಯೆಯೂ ಪ್ರೀತಿ ಪ್ರೇಮ, ಸ್ವಾರ್ಥ, ಅಸೂಯೆ, ಕೋಪತಾಪಗಳ ಜೊತೆ ಬದುಕು ಹಿಗ್ಗಾಮುಗ್ಗಾವಾಗಿ ಚಲಿಸುತ್ತದೆ. ನೀನೆಂಬ ನಿನ್ನನ್ನು ಅತ್ತ ಮರೆಯಲಾಗದೆ ಇತ್ತ ಉಳಿಸಲಾರದೆ ಒದ್ದಾಡಿದ ಕ್ಷಣಗಳನ್ನು ವಿವರಿಸಲು ಪದಗಳೇ ಇಲ್ಲವೇನೋ.ನನ್ನ ಏದುಸಿರಿನ ಬಿಸಿಯೂ ನಿನ್ನನ್ನು ಎಂದಿಗೂ ತಲುಪದಿರಲಿ.

ಬದುಕಿನ ವೇಗದಲ್ಲಿ ದಿಕ್ಕಪಾಲಾದ ಪ್ರೇಮಕತೆಗಳೆಷ್ಟೊ.. ಆದರೂ ಇಲ್ಲಿ ಪ್ರತಿಕ್ಷಣ ಪ್ರೀತಿ ಹುಟ್ಟುತ್ತಲೇ ಇರುತ್ತದೆ. ಹುಟ್ಟಿದ ಪ್ರೀತಿಗೆ ಆಯುಷ್ಯ ಎಷ್ಟು ಅಂತ ಯಾರೋ ಒಬ್ಬರು ಕೇಳಿದ್ದರೂ. ನಾನು ನಗುತ್ತ ಉತ್ತರಿಸಿದೆ. ಪ್ರೀತಿಗೆ ಸಾವಿಲ್ಲ. ಪ್ರೀತಿ ಸಾಯೋದು ಇಲ್ಲ. ಅದು ಚಿರನೂತನ. ಅದನ್ನು ಮನುಷ್ಯ ತನ್ನತನದಲ್ಲಿ ಉಪಯೋಗಿಸಿ ಬಿಟ್ಟು ಹೋಗುತ್ತೇನೆ ಹೊರತು ಪ್ರೀತಿಗೆ ಆಯುಷ್ಯ ಇಲ್ಲ ಅಂದುಕೊಳ್ಳುವುದು ತಪ್ಪು. ಪ್ರೀತಿ ಕಾರಣ ಇಲ್ಲದೆ ಹುಟ್ಟಬಹುದು ಪ್ರೀತಿ ಕೊನೆಯಾಗಲು ಕಾರಣಗಳ ಪಟ್ಟಿಯೇ ಬೆಳೆಯಬಹುದು.ಆದರೂ ಪ್ರೀತಿ ಸಾಯುವುದಿಲ್ಲ. ಇದು ಪ್ರಕೃತಿಯಷ್ಟೆ ಸತ್ಯ.

-ಪೂಜಾ ಗುಜರನ್ ಮಂಗಳೂರು.


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *