“ಸಂಪ್ರೀತಿ ಲೋಕದಲ್ಲೊಂದು ರೋಚಕ ಪಯಣ”: ಅನುಸೂಯ ಯತೀಶ್

ಕಾವ್ಯವೆಂದರೆ ಕೇವಲ ಒಡಿಬಡಿ ಕೌರ್ಯಗಳ ಅನಾವರಣವಲ್ಲ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಬರಹಗಳ ಸೃಷ್ಟಿಯದು. ನೋಂದವರ ಪಾಲಿಗೆ ಅಳುವ ಮಗುವನ್ನು ಲಾಲಿಸಿ ಪಾಲಿಸಿ ಸಂತೈಸುವ ಹೆತ್ತವ್ವನ ಮಡಿಲು‌, ಅಂತಕರಣದ ತೊಟ್ಟಿಲು, ಭರವಸೆಯ ಬೆಳದಿಂಗಳು, ಅನುಭವಗಳ ಹಾರ, ಪ್ರೀತಿ ಪ್ರೇಮದ ಸಮ್ಮಿಲನ. ಒಟ್ಟಾರೆ ಜೀವ ಕಾರುಣ್ಯವೇ ಕಾವ್ಯವಾಗಿದೆ.

ಜೀವನ ಎಂಬುದು ಸಮತಟ್ಟಾದ ನುಣ್ಣನೆಯ ದಾರಿಯಂತಲ್ಲ. ಹುಬ್ಬು ತಗ್ಗುಗಳನ್ನು, ಅಂಕುಡೊಂಕುಗಳನ್ನು ಒಳಗೊಂಡ ದುರ್ಗಮ ಹಾದಿಯದು. ನಮಗರಿವಿಲ್ಲದಂತೆ ತಿರುವುಗಳನ್ನು ಪಡೆದುಕೊಂಡು, ಅನಿರೀಕ್ಷಿತವಾಗಿ ಘಟಿಸುವ ಸವಾಲುಗಳ ಸರಮಾಲೆಯದು. ಕೆಲವೊಮ್ಮೆ ನಮ್ಮ ತೀರ್ಮಾನಗಳೇ ನಮಗೆ ತಿರುಮಂತ್ರಗಳಾಗಿ ಕಾಡುವುದುಂಟು. ಜೀವನದಲ್ಲಿ ಬಂದೊದಗುವ ಅಡೆತಡೆಗಳು ನಮ್ಮ ಜೀವನೋತ್ಸಾಹವನ್ನು ಕುಂದಿಸಿ ನಮ್ಮಲ್ಲಿಯ ಚೈತನ್ಯ ಶಕ್ತಿಯನ್ನು ನೆಲಸಮ ಮಾಡುವುದುಂಟು.

ಇಂತಹ ಸಂದರ್ಭಗಳಲ್ಲಿ ಮನುಕುಲಕ್ಕೆ ಬೇಕಾಗಿರುವುದು ಪ್ರೀತಿ ಎಂಬ ಅಮೃತ ಸಂಜೀವಿನಿ. ಪ್ರೀತಿ ಒಂದಿದ್ದರೆ ಸಾಕು ಜಗವನ್ನೇ ಗೆಲ್ಲುವೆ ಎಂಬ ಹುಮ್ಮಸ್ಸು ಉತ್ಸಾಹ ಬರುತ್ತದೆ‌. ಅಸಾಧ್ಯವಾದುದನ್ನು ಸಾಧ್ಯವಾಗಿಸುವ, ಅಸಾಧಾರಣವೆಂಬುದನ್ನು ಸಾಧಾರಣವೆನಿಸುವ, ಅಸಹಜವಾದುದನ್ನು ಸಹಜವಾಗಿಸುವ ಶಕ್ತಿ ಈ ಪ್ರೀತಿಗಿದೆ. ಇದು ಸಾಧನೆಯ ಹಂಬಲವನ್ನು ಸೃಷ್ಟಿಸುತ್ತದೆ. ಕಷ್ಟಗಳನ್ನು ಮಥಿಸಿ ಸುಖವೆಂಬ ನವನೀತ ತೆಗೆದು ಬದುಕನ್ನು ಹಾಲು ಜೇನಿನಂತೆ ಸಿಹಿಸವಿಯಾಗಿಸುವ ಸಾಮರ್ಥ್ಯ ಈ ಪ್ರೀತಿಗಿದೆ‌ ಎಂದರೆ ಉತ್ಪ್ರೇಕ್ಷೆಯಾಗದು.

ಪ್ರೀತಿ ಎಂದರೆ ಕೇವಲ ಹೂವಿನಂತಲ್ಲ .ಹೂವಿನೊಳಗೆ ಮುಳ್ಳುಗಳು ಇರುವಂತೆ ಪ್ರೀತಿಯಲ್ಲಿ ಸರಸ ವಿರಸ ಜಗಳ ಜಂಜಾಟಗಳಿಗೂ ಕೊರತೆ ಇಲ್ಲ.ಇವೆಲ್ಲವನ್ನು ಸಮದೂಗಿಸಿಕೊಂಡು ಬದುಕು ಸಾಗಿಸಬೇಕು. ಇಂತಹ ಹಲವಾರು ರೂಪಗಳನ್ನು ಚಿತ್ರಿಸುವ ಪ್ರೀತಿಯ ಹೊತ್ತಿಗೆಯೆ ಸಿ‌.ಎಸ್ .ಆನಂದ್ ರವರ ಸಂಪ್ರೀತಿ ಸಂಕಲನ.

ಸಂಪ್ರೀತಿಯ ಕವಿ ಸಿ.ಎಸ್. ಆನಂದ್ ರವರು ಸೃಜನಶೀಲ ಹಾಗೂ ಸಂವೇದನಾಶೀಲ ಬರಹಗಾರರು. ಇವರ ಸಹೋದರ ಸಿ.ಎಸ್.ಭೀಮರಾಯ ಕೂಡ ಖ್ಯಾತ ಕವಿಗಳು ಹಾಗೂ ವಿಮರ್ಶಕರಾಗಿದ್ದು ಸಹೋದರರಿಬ್ಬರ ಸಾಹಿತ್ಯ ಸೇವೆ ಶ್ಲಾಘನೀಯವಾಗಿದೆ. ಸಿಎಸ್ ಆನಂದ್ ರವರೂ ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದು ಇದುವರೆಗೂ ಎರಡು ಕಥಾ ಸಂಕಲನಗಳು ಮತ್ತು ನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿದ್ದು, ಇದು ಇವರ ಏಳನೆಯ ಕೃತಿಯಾಗಿದೆ. ಈ ಸಂಪ್ರೀತಿ ಹೊತ್ತಿಗೆಯಲ್ಲಿ ಒಟ್ಟು 74 ಮುಕ್ತಕಗಳಿವೆ. ಪ್ರೀತಿ, ಪ್ರೇಮ, ವಿರಹ, ಅಗಲಿಕೆ, ಒಲವಿನ ಮೋಸ, ಬದುಕಿನ ಸಂಘರ್ಷ, ಸಮರಸ ಜೀವನ ,ಸಹಬಾಳ್ವೆಯ ಪ್ರಸ್ತುತತೆ, ನಮ್ಮ ನೆಲದ ಸಂಸ್ಕೃತಿ, ನಲ್ಲ ನಲ್ಲೆಯರ ಅನುರಾಗದ ಕನವರಿಕೆ, ಪ್ರೀತಿಯ ನೆನಪುಗಳ ಆಲಾಪನೆ, ಪ್ರೀತಿಯ ಆಶಾಗೋಪುರಗಳನ್ನು ಕಾವ್ಯ ವಸ್ತುವಾಗಿಸಿಕೊಂಡು ಅಭೂತಪೂರ್ವವಾಗಿ ತುಂಬಾ ಸೊಗಸಾಗಿ ಜೀವ ತುಂಬಿದ್ದಾರೆ.

“ಸಂಪ್ರೀತಿ” ಮುಕ್ತಕಗಳ ಸಂಕಲನವಾಗಿದ್ದು ಮುಕ್ತಕಗಳು ಎಂದರೆ ಬಿಡಿ ಪದ್ಯಗಳು. ಇವು ಛಂದೋಬದ್ಧವಾಗಿ ಬರೆಯುವ ದ್ವಿಪದಿ ಅಥವಾ ತ್ರಿಪದಿ ಮುಕ್ತಕಗಳ ಚೌಕಟ್ಟಿನಿಂದ ಹೊರಗುಳಿದ ಕವಿತೆಗಳಾಗಿವೆ. ಹಾಗಾಗಿ ಇವುಗಳನ್ನು ಮುಕ್ತ ಮುಕ್ತಕಗಳೆನ್ನಬಹುದು. ಈ ಮುಕ್ತಕಗಳ ಬಗ್ಗೆ ಖ್ಯಾತ ಸಾಹಿತಿಗಳಾದ ಡಾ. ರಾಜಶೇಖರ ಮಠಪತಿ (ರಾಗಂ) ಅವರು ತಮ್ಮ “ಮುನ್ನುಡಿ”ಯಲ್ಲಿ ಮುಕ್ತಕ ಎನ್ನುವುದು ಹಿಂದಿ ಕಾವ್ಯ ಪ್ರಕಾರಗಳಲ್ಲಿ ಒಂದಾಗಿದ್ದು, ಇವು ಪರ್ಶಿಯನ್,ಉರ್ದು ಮತ್ತು ಸಂಸ್ಕೃತ ಭಾಷೆಯ ಕಾವ್ಯದ ಮಾಧುರ್ಯ ಮತ್ತು ಮೃದುತ್ವಗಳನ್ನು ಹೀರಿಕೊಂಡು ಅದ್ಭುತವಾಗಿ ರಚನೆಯಾಗುತ್ತವೆ. ಅದರ ಪ್ರಭಾವದಿಂದ ಕವಿಗಳಾದ ಗವೀಶ್ ಹೀರೆಮಠ್ ಅವರು “ಪ್ರಣಯ‌ ಮುಕ್ತಕಗಳು”ಎಂಬ ಸಂಕಲನವನ್ನು ಹೊರತಂದಿದ್ದು ಅದರಷ್ಟು ಪುನರ್ ಮುದ್ರಣ ಕಂಡ ಮುಕ್ತಕಗಳ ಸಂಕಲನ ಕನ್ನಡದಲ್ಲಿ ಮತ್ತೊಂದಿಲ್ಲ. ಇದರಿಂದ ಪ್ರಭಾವಿತರಾಗಿ ಕವಿ ಬಸವರಾಜ ಯಂಕಂಚಿ ಅವರು “ಸ್ವಾತಿಮುತ್ತು” ಎನ್ನುವ ಸಂಕಲನವನ್ನು 90ರ ದಶಕದಲ್ಲಿ ಪ್ರಕಟಿಸಿದರು. ಈಗ ಸಿ.ಎಸ್. ಆನಂದ್ ರವರು ಇದೇ ದಾರಿಯಲ್ಲಿ ಸಾಗುತ್ತಿರುವುದು ಸಂತಸ ಸಡಗರ ತಂದಿದೆ ಎಂದು ದಾಖಲಿಸುತ್ತಾರೆ.

ಸಂಪ್ರೀತಿ ಮುಕ್ತಕಗಳ ಸಂಕಲನಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗ ಸಂಸ್ಥೆ ಕೊಡಮಾಡುವ 2020 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ💐

ಈ ಸಂಪ್ರೀತಿಯಲ್ಲಿರುವ ಮುಕ್ತಕಗಳು ಗಜಲ್ ನಂತಹ ಮೃದು ಮಧುರ ಭಾವವನ್ನು, ಕಾವ್ಯದ ಭಾವ ತೀವ್ರತೆಯನ್ನು ಹೊಂದಿದ್ದು ಅದ್ಭುತ ರೂಪಕಗಳು ಮತ್ತು ಪ್ರತಿಮೆಗಳಿಂದೊಡಗೂಡಿದ ಕಾವ್ಯ ಗುಚ್ಛವಾಗಿದೆ. ಓದುವರೆದೆಗೆ ಹರುಷದ ಹೊನಲನ್ನು ಹರಿಸಲು ದ್ವಿಪದಿಗಳ ರೂಪದಲ್ಲಿ ರಚಿತಗೊಂಡಿದ್ದು ಅಂತ್ಯಪ್ರಾಸ ಕವಿತೆಗಳ ಮೆರಗನ್ನು ಹೆಚ್ಚಿಸಿದೆ.

ರಾಷ್ಟ್ರಕವಿ ಜಿ.ಎ. ಶಿವರುದ್ರಪ್ಪನವರ “ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ” ಎಂಬ ಸಾಲು ಸಾಕಲ್ಲವೇ ಪ್ರೀತಿಯ ಹಿರಿಮೆ ಗರಿಮೆಯನ್ನು ಸಾರಲು. ಪ್ರೀತಿಯ ಸಖ್ಯ ಕವಿಗೆ ಆಪ್ತವಾಗಿ ಮೂಡಿಬಂದಿದ್ದು ಮನಕೆ ಕಚಗುಳಿಯಿಡುತ್ತದೆ. ಕವಿಗಳಾದ ಸಿ. ಎಸ್. ಆನಂದ್ ರವರದು ತುಂಬಾ ಸರಳತೆ ಹಾಗೂ ಸೌಮ್ಯತೆಯನ್ನು ಮೈಗೂಡಿಸಿಕೊಂಡಿರುವ ವ್ಯಕ್ತಿತ್ವ. ಹಾಗಾಗಿ ಅವರ ಲೇಖನಿ ಪ್ರೀತಿ ಪ್ರೇಮದಂಥ ನವಿರಾದ ಭಾಗಗಳತ್ತಾ ವಾಲುವುದು ಸಹಜ. ಅದಕ್ಕಾಗಿ ಅವರಿಂದು ಸಂಪ್ರೀತಿಯ ಕವಿಯಾಗಿದ್ದಾರೆ. ಹೊತ್ತಿಗೆ ತುಂಬಾ ವೈವಿಧ್ಯಮಯವಾದ ಪ್ರೀತಿ ಪ್ರೇಮದ ಭಾವಗಳು ನಲಿದಾಡಿವೆ. ಇಲ್ಲಿರುವ ಕವಿತೆಗಳು ಮನದರಸಿಯ ಸುತ್ತ ಸುತ್ತುತ್ತವೆಯಾದರೂ ಸಾಮೂಹಿಕ ದನಿಯನ್ನು ಪ್ರತಿನಿಧಿಸುವುದಿಲ್ಲವೆಂದು ತೀರ್ಮಾನಿಸಲಾಗದು.
ಇವು ಜಗದ ಬಹುತೇಕ ಪ್ರೇಮಿಗಳ ಒಳದನಿಗಳಂತೆ ಭಾಸವಾಗುತ್ತವೆ.
ಪ್ರೇಮವರಳಿ ಸುಗಂಧ ಸೂಸುವ ಪರಿ ಓದುಗರನ್ನು ಮೋಹ ಪರವಶಗೊಳಿಸುತ್ತವೆ.

“ಪ್ರೇಮವಿದ್ದರೆ ಕಲ್ಲು ಕರಗಿ ಎಣ್ಣೆಯಾಗುತ್ತದೆ
ಪ್ರೇಮವಿಲ್ಲದಿದ್ದರೆ ಮೇಣವೂ ಕಬ್ಬಿಣವಾಗುತ್ತದೆ” ಎಂಬ ಜಲಾಲುದ್ದೀನ್ ರೂಮಿಯ ಗಜಲ್ ನಾ ಈ ಶೇರ್ ಪ್ರೇಮದ ಘನ ಪ್ರಾಮುಖ್ಯತೆಯನ್ನು ಸಾರುತ್ತದೆ. ಪ್ರೀತಿ ಜಗದ ಜೀವಾಳ ಪ್ರೀತಿಯನ್ನು ಪಡೆಯುತ್ತಾ, ಹಂಚುತ್ತಾ ಸಾಗಬೇಕು. ಈ ಪ್ರೇಮದ ಕವಿತೆಗಳನ್ನು ಬರೆಯುವಾಗ ಕವಿ ತನ್ನೊಳಗಿನ ಭಾವಗಳನ್ನು ಹೊರಹಾಕಿ, ಅವುಗಳನ್ನು ಒಂದು ಸೊಗಸಾದ ಕವಿತೆ ಚೌಕಟ್ಟಿನಲ್ಲಿ ತಂದು, ಓದುಗನಿಗೆ ಉತ್ಕಟ ಪ್ರೇಮದ ಅನುಭೂತಿಯನ್ನು ನೀಡಿದ್ದಾರೆ. ಇಲ್ಲಿ ಕವಿ ಪ್ರೇಮಲೋಕವನ್ನು ಸೃಷ್ಟಿಸಿ ಪ್ರೇಮಿಗಳದೆಯಲ್ಲಿ ಒಲವ ಜ್ಯೋತಿಯನ್ನು ಹಚ್ಚ ಬಯಸಿದ್ದಾರೆ. ಅಂತಹ ಅನುಪಮ ಅನುರಾಗ ಮಾಲಿಕೆಯೆ ಈ ಸಂಪ್ರೀತಿ.

ಸುಮಧುರವಾದ ಪ್ರೀತಿಯನ್ನೇ ಉಸಿರಾಗಿಸಿಕೊಂಡು ಬದುಕುವ ಈ ನೆಲದ ಕಸುವಿನ ಪ್ರಭಾವದಿಂದ ಜನ್ಮವೆತ್ತಾ ಕವಿತೆಗಳು ನಮ್ಮ ಜೀವನ ಪ್ರೀತಿಯ ಪ್ರತೀಕಗಳಾಗಿವೆ. ಮನುಷ್ಯ ಪ್ರೀತಿಯ ಮೌಲ್ಯವರಿತೂ ಬದುಕುವುದು ಇಂದಿನ ದಿನಮಾನದಲ್ಲಿ ತುಂಬಾ ಅನಿವಾರ್ಯವಾಗಿದೆ. ದ್ವೇಷ ಅಸೂಯೆ ಮತ್ಸರಗಳಿಂದ ಮನುಕುಲದ ವಿನಾಶವೇ ಸರಿ. ಆದ್ದರಿಂದ ಅದರಾಚೆಗಿನ ಸ್ನೇಹ ವಿಶ್ವಾಸ ನಂಬಿಕೆ ನೆಮ್ಮದಿಯ ಬದುಕು ಸಾಗಿಸಲು ಪ್ರೀತಿಯೆಂಬ‌ ಆಯುಧ ಅಗತ್ಯವು ಇಂದಿನ ದಿನಮಾನದಲ್ಲಿ ಬಹಳವಿದೆ.

ಕೆ. ಎಸ್. ನರಸಿಂಹಸ್ವಾಮಿ ಅವರ “ಮೈಸೂರು ಮಲ್ಲಿಗೆ” ಕನ್ನಡ ನಾಡಿನ ಮನೆ ಮನಗಳನ್ನು ತಲುಪಿ ಓದುಗರ ಭಾವ ತಟ್ಟಿ ಹೃದಯದ ಹಾಡಾಗಿ ಇಷ್ಟು ಜನಪ್ರಿಯತೆ ಗಳಿಸಲು ಮೂಲ ಸ್ಥಾಯಿ ಪ್ರೀತಿ, ಪ್ರೇಮ ಹಾಗೂ ದಾಂಪತ್ಯದೊಲವು . ಅಂತಹ ಅದ್ಭುತ ಶಕ್ತಿ ಈ ಪ್ರೀತಿಗಿದೆ. ಈ ಪ್ರೀತಿಯನ್ನು ತನ್ನ ಕಾವ್ಯ ವಸ್ತುವಾಗಿಸಿಕೊಂಡು ವೈವಿಧ್ಯಮಯವಾದ ರೂಪಗಳಲ್ಲಿ ವಿಭಿನ್ನ ಆಯಾಮಗಳಲ್ಲಿ ಧ್ಯಾನಿಸಿದ್ದರ ಫಲವೇ ಈ ಸಂಪ್ರೀತಿ. ಈ ಕವಿತೆಗಳು ತುಂಬಾ ಭಾವಪೂರ್ಣವಾಗಿ ಅರ್ಥಪೂರ್ಣವಾಗಿ ಒಲವ ಧಾರೆಯನ್ನು ಹರಿಸುತ್ತಾ, ಅನುಭವಿಸುತ್ತಾ, ಅನುಭೂತಿಸುತ್ತಾ ಸಾಗಿರುವ ಕವಿತೆಗಳು ತುಂಬಾ ಸೊಗಸಾದ ಆಪ್ತತೆಯನ್ನು ಒದಗಿಸುತ್ತವೆ.

ಸಂಪ್ರೀತಿಯಲ್ಲಿರುವ ಕವಿತೆಗಳು ಹೆಣ್ಣು ಮತ್ತು ಪ್ರಕೃತಿಯ ಆರಾಧನೆಯಂತಿವೆ. ಪ್ರೀತಿಯ ಅಷ್ಟು ಸುಲಭಕ್ಕೆ ದಕ್ಕುವಂತದ್ದಲ್ಲ. ಅದರಲ್ಲೂ ವಿಭಿನ್ನ ಜಾತಿ ಧರ್ಮ ಭಾಷೆಗಳನ್ನು ಹೊಂದಿರುವ ಅಖಂಡ ಭಾರತದಲ್ಲಿ ಸಾಮಾಜಿಕವಾಗಿ ಹಲವಾರು ಗೋಜಲುಗಳು ಗೊಂದಲಗಳು ಮೂಡುತ್ತವೆ. ಹಳೆಯದನ್ನು ತಿರಸ್ಕರಿಸಲು ಹಿಂಜರಿಯುವ ಮನ, ಹೊಸದನ್ನು ಸ್ವೀಕರಿಸಲು ಮೀನಾ ಮೇಷ ಎಣಿಸುತ್ತದೆ. ಇಂತಹ ಜಾತಿ ಧರ್ಮಗಳ ಮೇಲಾಟಗಳು ಪಾರುಪತ್ಯ ಮೆರೆಯುವಾಗ ಪ್ರೀತಿಯನ್ನು ಉಳಿಸಿಕೊಳ್ಳಲು ಹೆಣಗಾಡುವ ಪ್ರೇಮಿಗಳ ಪ್ರಲಾಪನೆಯನ್ನು ಹೊತ್ತು ತಂದಿರುವ ಕೆಲವು ಕವಿತೆಗಳ ಹೋರಾಟವನ್ನು ಓದಿಯೇ ಜೀರ್ಣಿಸಿಕೊಳ್ಳಬೇಕು. ಪ್ರೀತಿಯೆಂದ ಮೇಲೆ ಅಲ್ಲಿ ಹುಸಿಗೋಪ, ಮುನಿಸು, ಅಡೆತಡೆಗಳು, ಸಫಲತೆಗಳು, ವಿಫಲತೆಗಳು, ನೋವು, ವಿರಹ, ಅಸಹಾಯಕ ಪರಿಸ್ಥಿತಿ, ಕನಸು, ನನಸು, ಸರಸ, ಸಲ್ಲಾಪ, ವಿರಹ, ಪ್ರಕೃತಿಯ ವರ್ಣನೆ, ಎಲ್ಲವೂ ಇದ್ದೇ ಇರುತ್ತದೆ. ಅಂತಹ ಎಲ್ಲ ಭಾವಗಳ ಸಂಗಮವೇ ಇಲ್ಲಿರುವ ಈ ಕವಿತೆಗಳ ಸಾರವಾಗಿದೆ.

ಕವಿಯು ಅಸಂಖ್ಯಾತ ಭಾವಗಳ ಭಾವಯಾನದಲ್ಲಿ ವಿಹರಿಸಿದ ಪ್ರಯುಕ್ತ ಜೀವತಳೆದ ಅಲ್ಹಾದಕರವಾದ ಕವಿತೆಗಳು ಕವಿಯ ಲೇಖನಿಯಿಂದ ಪುಂಖಾನುಪುಂಖವಾಗಿ ಹರಿದುಬಂದು ಮನಸ್ಸನ್ನು ಗರಿಬಿಚ್ಚಿ ಕುಣಿಸುತ್ತದೆ . ಸಿ.ಎಸ್. ಆನಂದ್ ರವರ ಪ್ರೇಮದ ಮಧುಬಟ್ಟಲ ಮೋಹ ಹೊತ್ತಿಗೆಯ ತುಂಬಾ ನಶೆ ಏರಿಸಿ ಓದುಗಳನ್ನು ಪರವಶಗೊಳಿಸುತ್ತದೆ. ಪ್ರೀತಿಯು ಕೇವಲ ದೈಹಿಕವಾದದಲ್ಲ ಅದು ಮಾನಸಿಕವಾದದ್ದು, ಭಾವನಾತ್ಮಕವಾದದ್ದು ಕೂಡ. ಇಲ್ಲಿ ಕವಿಯು ನನ್ನ ಸಖಿಯನ್ನು ಧ್ಯಾನಿಸಿದ್ದರಿಂದ ಮನದ ತಪ್ಪನಿನಿಂದ ಸವಿ ಸಿಹಿ ಭಾವಗಳ ಝೇಂಕಾರ ಮೊಳಗಿದೆ. ಸತಿಯೊಂದಿಗಿನ ಪ್ರೇಮ ತಪನೆಯಿಂದ ಜೀವತಳೆದ ಪ್ರೇಮ ಕವಿತೆಗಳು ಅವನ ಪ್ರೇಮಾರಾಧನೆಯ ಹೆಜ್ಜೆಯ ಸಪ್ಪಳದಲ್ಲೂ ನಲ್ಲೆಯ ಗೆಜ್ಜೆಯ ನಾದ ಮೊಳಗಿಸುತ್ತವೆ.

ಅಗಲಿಕೆಯಿಂದುದುಗಿದ ಭಾವಗಳ ಚಡಪಡಿಕೆ ಪ್ರೇಮಿಯೊಬ್ಬನ ಏಕಾಂತದ ನೋವಿನ ಅನಾಕರಣ ಮಾಡಿಸುತ್ತಾ, ಕಲ್ಪನೆಯ ಲೋಕದಲ್ಲಿ ಕಟ್ಟಿದ ಕಾಮನಬಿಲ್ಲಿನ ವರ್ಣ ರಂಜಿತ ಓಕುಳಿಯಂತೆ, ಸರಸ ಸಲ್ಲಾಪದ ಸಾಲುಗಳು ಮಿನುಗುತ್ತವೆ. ಅಪ್ರತಿಮ ಭಾವದಲ್ಲಿ ಕಂಗೊಳಿಸುತ್ತವೆ. ಸುಂದರವಾದ ಶಬ್ದ ತಂತ್ರಗಾರಿಕೆಯಲ್ಲಿ ಪಳಗಿದ ಕವಿಯು ಮೋಹಕವಾದ, ಸೊಗಸಾದ ಪದಕೋಶಗಳನ್ನು ಕಟ್ಟಿ, ಕಾವ್ಯದ ಚಂದದ ಕಮಾನಾಗಿಸಿದ್ದಾರೆ. ಇವರ ಕಾವ್ಯ ಹೆಣಿಗೆಯ ಸೊಬಗನ್ನು ಓದಿ ಆಸ್ವಾದಿಸುತ್ತಾ ತಲೆದೂಗಲೆಬೇಕು.
ಅಷ್ಟು ಸೆಳೆತ ಇವರ ಕವಿತೆಗಳ ಜೀವಾಳವಾಗಿದೆ.

ಬೆಡಗಿಯ ವರ್ಣನೆಯ ಬೆರಗಿನ ಸಾಲುಗಳು ಓದುವರನ್ನು ಮಂತ್ರಮುಗ್ಧಗೊಳಿಸುತ್ತವೆ. ಇವರ ಮನೋಭಿಲಾಷೆಯ ಗರಿಗಳು ಸ್ವಚ್ಛಂದವಾಗಿ ಹಾರಿದ್ದರ ಫಲವಾಗಿ ಹೃದಯಕ್ಕೆ ಮುದಾ ನೀಡುವ ಸಾಲುಗಳ ಸೃಷ್ಟಿಯಾಗಿವೆ.ಇಲ್ಲಿ ಸಖಿಯೊಂದಿಗಿನ ಸಖನ ಮೌನ ಸಂಭಾಷಣೆಯಿದೆ. ಪ್ರೇಮಾಲಿಂಗನವಿದೆ, ಪ್ರೀತಿಯ ಸೋಲಿಗೆ ಕಾರಣವಾಗುವ ಬಂಧನಗಳ ಸಂಕೋಲೆಯಿದೆ, ಪ್ರೇಮಿಗಳು ಸಾಮಾಜಿಕ ಕಟ್ಟುಪಾಡುಗಳಿಗೆ ಹರಕೆಯಾಗಿ ಅನುಭವಿಸಿದ ಕಷ್ಟ ಕಾರ್ಪಣ್ಯಗಳ ಸರಮಾಲೆಯಿದೆ.

ಈ ಕವಿತೆಗಳು ಕೇವಲ ಪದ ಜೋಡಣೆಯಲ್ಲಿ ಗಾಢವಾದ ಭಾವವನ್ನು ಹೊತ್ತು ಮನಸು ಮನಸುಗಳ ಬೆಸೆಯುವ ಅನುಬಂಧದ ಕೊಂಡಿಗಳು ಮಾತ್ರವಲ್ಲದೆ ಪ್ರಣಯದ ಸಾಲುಗಳು ಕವಿ ಎದೆಯ ದನಿಯಾಗಿ ಹೊರಹೊಮ್ಮಿವೆ. ಪ್ರೀತಿಯ ಧ್ಯಾನಸ್ಥ ಸ್ಥಿತಿಯಿಂದ ಚಲಿಸುವ ಸಾಲುಗಳು ಸುಮಧುರವಾದ ಕಾವ್ಯಾಭಿವ್ಯಕ್ತಿಯಾಗಿವೆ. ಒಲವಿಗಾಗಿ ತಹತಹಿಸುತ್ತವೆ. ನಿಟ್ಟುಸಿರಿನ ಬಿಕ್ಕುಗಳು ವಿರಹದ ಅಗ್ನಿಕುಂಡದಲ್ಲಿ ಅನುಭವವನ್ನು ಕಟ್ಟಿಕೊಡುತ್ತವೆ. ಅನುರಾಗದ ಬಯಕೆಗಳನ್ನು ಒಗ್ಗೂಡಿಸುವ ಸೂಚ್ಯವಾದ ಕವಿತೆಯ ಸಾಲುಗಳು ಸಮಾಧಾನದ ತೊಟ್ಟಿಲಂತೆ ಭಾಸವಾಗುತ್ತವೆ. ಮತ್ತೆ ಕೆಲವು ಭರವಸೆಯ‌ ಬೆಳಕನ್ನು ಬಿಂಬಿಸುತ್ತವೆ.

ಸಾಹಿತ್ಯ ಕ್ಷೇತ್ರದಲ್ಲಿ ಅಸಂಖ್ಯಾ ಕವಿಗಳ ಕಾವ್ಯದ ಹೊಳೆ ಹರಿದರು ನಿತ್ಯಪೊಸತು ಅರ್ಣವಂಬೋಲ್ ಅತಿ ಗಂಭೀರಂ ಎಂದು ಕವಿಗಳ ಕಾವ್ಯವನ್ನು ಶರಧಿಗೆ ಹೋಲಿಸಿರುವುದು ಕಾವ್ಯ ನಿತ್ಯ ನವೋನ್ಮೇಷಶಾಲಿನಿ ಎಂಬುದನ್ನ ಸಾಕ್ಷಿಕರಿಸುತ್ತದೆ. ಅದೇ ರೀತಿ ಇಲ್ಲಿ ಕವಿಯು ಪ್ರೀತಿಯಲ್ಲಿ ಚಲಿಸುತ್ತಾ, ವಿಭಿನ್ನ ಜಾಡುಗಳನ್ನು ಸೃಷ್ಟಿಸುತ್ತಾ, ವಿಶಿಷ್ಟ ತಿರುವುಗಳಲ್ಲಿ, ಕವಿತೆಯಿಂದ ಕವಿತೆಗೆ ಹೊರಳುವ ಕಾವ್ಮ ಸೊಬಗು ಮೈ ಮನಗಳನ್ನು ರೋಮಾಂಚನಗೊಳಿಸುತ್ತದೆ. ಪ್ರೀತಿಯ ಹುಡುಕಾಟ, ನಲ್ಲೆಯ ದರ್ಶನಕ್ಕೆ ಹಾತುರೆವ ಸಾಲುಗಳು, ಕವಿ ಹೃದಯದಿಂದ ಧ್ವನಿಸುತ್ತ ಓದುಗರಿಗೆ ತನ್ನದೇ ಕಾವ್ಯವೆಂಬ ಭಾವ ತರುತ್ತದೆ‌‌. ಪ್ರೀತಿಗೆಂದು ಸೋಲಿಲ್ಲ. ಇದು ಕೆಲವೊಮ್ಮೆ ಗೆಲುವು ತಂದು ಕೊಟ್ಟರೆ ಮತ್ತೆ ಕೆಲವೊಮ್ಮೆ ಸೋಲುಣಿಸುತ್ತದೆ. ಇಂತಹ ಅಪಾರ ನಿರೀಕ್ಷೆಗಳನ್ನು ಚಿತ್ರಿಸುತ್ತಲೇ ಕವಿತೆಗಳು ವಿಭಿನ್ನವಾದ ಆಯಾಮಗಳಲ್ಲಿ ರಚನೆಯಾಗಿವೆ.

ಪ್ರೀತಿಯು ಕೆಲವೊಮ್ಮೆ ನಮ್ಮ ಬದುಕಿನಲ್ಲಿ ಮರೀಚಿಕೆಯಾಗಿ ನೋವಿನೂಟವನ್ನು ಉಣಬಡಿಸಬಹುದು ಅಥವಾ ಸಂಗಾತಿಯ ಅಗಲಿಕೆಯಿಂದ ವಿರಹದ ತಾಪದಲ್ಲಿ ಬೇಯುವಂತಾಗಬಹುದು. ಈ ಎಲ್ಲಾ ಭಾವಗಳ ಕಲಾಗಾರಿಕೆಯನ್ನು ಈ ಸಂಪ್ರೀತಿಯಲ್ಲಿ ಕಾಣಬಹುದು.

ಮನುಕುಲವನ್ನು ಪ್ರೀತಿ ಕಾಡಿದಷ್ಟು ಮತ್ಯಾವ ಭಾವವು ಕಾಡಿಲ್ಲ. ಕಾರಣ ಪ್ರೀತಿಯೊಂದೇ ಬದುಕಿನ ಅಂತಃಸತ್ವ. ಹಾಗಾಗಿಯೇ ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲೂ ಕಾವ್ಯ ಪ್ರಪಂಚದಲ್ಲಿ ಕ್ರಾಂತಿಕಾರಿ ಬೆಳವಣಿಗೆ ಕಂಡ ಪ್ರಕಾರವಾಗಿದೆ..

ಇವರ ಕವಿತೆಗಳ ಒಳ ಹೊಕ್ಕಾಗ ಮಧು ಬಟ್ಟಲ ತುಂಬಾ ಒಲವನ್ನು ತುಂಬಿ ನಲ್ಲೆಯ ಎದೆಯೊಳಗೆ ಇಳಿಸಿದ ಅನುಭವವಾಗುತ್ತದೆ. ಹಲವಾರು ಕವಿತೆಗಳು ಜನರೊಂದಿಗೆ ಮಾತನಾಡುತ್ತವೆ. ಇವರ ಮನೋಗತವನ್ನು ಪ್ರತಿಫಲಿಸುತ್ತವೆ. “ತಣಿಸು” ಕವಿತೆಯಲ್ಲಿ ನಲ್ಲೆಯ ಉಸಿರುತಾಗಿ ಜೀವನೋತ್ಸಾಹ ಮೂಡುತ್ತದೆ ಎಂಬ ಭಾವ ಅಭಿವ್ಯಕ್ತಗೊಂಡರೆ, ಹೃದಯಂಗಳದ ಪ್ರೇಮದ ನೆನಪುಗಳ ಪ್ರತಿಧ್ವನಿಯ ಸಾಲುಗಳು “ಓಲೆಗಳು” ಕವಿತೆಯ ಜೀವಾಳವಾಗಿವೆ.

ಪ್ರೇಮ ಶಹರಿನಲ್ಲಿ ಎದೆಯರಮನೆಯ ಹೂ ಮಂಚ ಶೃಂಗರಿಸಿ ನಲ್ಲೆಗಾಗಿ ಕಾದ ನಲ್ಲನ ಪ್ರೀತಿಯ ಗುಂಗು ಸೊಗಸಾದ ರಮ್ಯಾ ಸಾಲುಗಳಲ್ಲಿ “ಹೂ ಮಂಚ” ಕವಿತೆಯಲ್ಲಿ ಶೃಂಗಾರಗೊಂಡಿದೆ. ಪ್ರೀತಿಸಿದವಳು ಮರೆತಾಗ ಜಗವೆಲ್ಲ ಶೂನ್ಯವೆನಿಸಿ, ಕನಸುಗಳು ಕೊರಗಿ,ದೇಹ ಕ್ಷೀಣಿಸಿ, ಭಾವಗಳು ಬರಡಾಗಿ, ಲೇಖನಿ ಸೋತು ಬದುಕಿನಲ್ಲಿ ಸತ್ತಂತೆ ಭಾಸವಾಗಿಳುವ ಪ್ರೀತಿಯ ಅಮೃತತ್ವವನ್ನು ಸಾರುವ ಸಾಲುಗಳು “ನೀ ನನಗೆ ಮರೆತ ಮ್ಯಾಲ” ಕವಿತೆಯಲ್ಲಿ ಅನಾವರಣಗೊಂಡಿವೆ.

“ಚಿಗುರು” ಕವಿತೆಯಲ್ಲಿ ಕವಿಯು ಪ್ರಕೃತಿಯ ಸ್ಥಾಯಿ ಭಾಗಗಳಾದ ಹಣ್ಣು, ಹೂವು, ಜಲಧಾರೆ, ಕೋಗಿಲೆ ಸವಿಗಾನ, ನವಿಲ ನರ್ತನ, ಹಸಿರು ಚಿಗುರುಗಳನ್ನು ಕುರಿತು ತನ್ನ ಸಖಿಯ ಸಂಭ್ರಮಕ್ಕೆ ಕಾರಣವಾಗಿದ್ದಕ್ಕಾಗಿ ಪ್ರಕೃತಿಯನ್ನು ಆರಾಧಿಸಿದಂತಹ ಸಾಲುಗಳು ತುಂಬಾ ಮನೋಜ್ಞವಾಗಿ ಮೂಡಿಬಂದಿವೆ. “ನಿರ್ಮಲೆ” ಕವಿತೆಯಲ್ಲಿ ತನ್ನೊಲವ ಸಖಿಯ ಚೆಲುವು, ನಡೆ ನುಡಿಗಳನ್ನು ವರ್ಣಿಸಿರುವುದನ್ನು ನೋಡಿದಾಗ ಹೆಣ್ಣಿನ ಬಗ್ಗೆ ಕವಿಗಿರುವ ಗೌರವ ಭಾವ ಎದ್ದು ಕಾಣುತ್ತದೆ. “ನಿನ್ನ ನೆನೆದು ಕವಿತೆಯಲ್ಲಿ ಕಾಡುವ ನಲ್ಲೆಯ ನೆನಪುಗಳನ್ನು ಚದುರಿಸುವ ಸಾಮರ್ಥ್ಯ ಬೀಸುವ ಚಂಡಮಾರುತಕ್ಕಾಗಲಿ, ಸುರಿವ ಘೋರ ಮಳೆಗಾಗಲಿ ಇಲ್ಲವೆಂದು ಪ್ರೀತಿಯ ನೆನಪುಗಳು ಎಂದೂ ನಂದದ ನಂದಾದೀಪದಂತೆ ನಿತ್ಯ ಪ್ರಜ್ವಲಿಸುತ್ತವೆ ಎಂಬ ಕಿವಿಮಾತು ‌ಹೇಳುತ್ತದೆ.

“ಹೂ ಚಂದಿರ” ಮತ್ತು “ಬೇಗ ಬಾರೋ ಸಖ” ಕವಿತೆಗಳು ಹೆಣ್ಣಿನ ಭಾವದಲ್ಲಿ ತುಂಬಾ ಸುಂದರವಾಗಿ ಮೂಡಿ ಬಂದಿದ್ದು ಅವರ ಸ್ತ್ರೀ ಸಂವೇದನೆಗಳ ಪ್ರತಿರೂಪವಾಗಿವೆ. ಅವರ ಕವಿತೆಗಳ ಕೆಲವು ಸಾಲುಗಳನ್ನು ಗಮನಿಸೋಣ “ಗುಳೆ ಹೋಗ್ಯಾವೋ” ಕವಿತೆಯಲ್ಲಿ “ನಮ್ಮೂರ ದೋಣಿ ನದಿ ದಂಡ್ಯಾಗಿನ ಬೆಳ್ಳಕ್ಕಿ ಹಿಂಡು ಗುಳೆ ಹೋಗ್ಯಾವೋ ಕವಿತೆಯಲ್ಲಿ ನಮ್ಮೂರ ದೋಣಿ ನದಿ ದಂಡೆಯಾಗಿನ ಬೆಳ್ಳಕ್ಕಿ ಹಿಂಡು ನಿನ್ನ ಪ್ರೀತಿಯನ್ನು ಹುಡುಕುತ್ತಾ ಗುಳೆ ಹೋಗ್ಯಾವು”
ಎಂಬ ಸಾಲುಗಳು ಗುಳೆ ಹೋಗುವವರಿಗೆ ಹೊಸ ರೂಪ ನೀಡಿವೆ. ನಾವು ಕಂಡಿರುವ, ಇದುವರೆಗೂ ಕೇಳಿರುವ ಗುಳೆಗಳಲ್ಲಿ ಅನ್ನ, ಆಹಾರ, ವಸತಿಗಾಗಿ ತನ್ನ ಬದುಕಿನ ಉಳಿವಿಗಾಗಿ ಜನ ಗುಳೆ ಹೋಗುತ್ತಾರೆ. ಅದರಿಲ್ಲಿ ಪ್ರಕೃತಿಯ ಅಂಶಗಳು, ಮಲೆನಾಡ ಹೆಣ್ಣಿನ ಪ್ರೀತಿಯನ್ನರಸಿ ಗುಳೆ ಹೋಗಿವೆ ಎಂಬ ಕವಿ ಕಲ್ಪನೆ ಸುಂದರವಾಗಿದ್ದು ಆ ಮೂಲಕ ನೋವಿನಲ್ಲೂ ಜೀವನೋತ್ಸಾಹ ತುಂಬುವಂತೆ ಕವಿತೆ ರಚಿಸಿದ್ದಾರೆ.

“ಜಾತಿ ಎಂಬುದರ ಅಂಗಳದಲ್ಲಿ ನೀನು ಪ್ರೀತಿಯ ಜೀವ ಚಿಗುರಿಸಿದವಳು
ಕಲ್ಲು ಹೃದಯಗಳಲಿ ನೀನು ಪ್ರೀತಿಯ ಕೆಂಗುಲಾಬಿ ಅರಳಿಸಿದವಳು”
ಈ ಕವಿತೆಯಲ್ಲಿ ಕವಿಯು ಪ್ರೀತಿಗೆ ಎಲ್ಲವನ್ನು ಜಯಿಸುವ ಶಕ್ತಿ ಇದೆ ಎಂದು ಪ್ರತಿಪಾದಿಸುತ್ತಾರೆ. ಪ್ರೀತಿಗಾಗಿ ಜಾತಿ ಎಂಬ ಜಾಡ್ಯ ತೊಳೆದವಳು. ಜೀವ ಚೈತನ್ಯ ಸ್ವರೂಪಿಯಾದ ಪ್ರೀತಿಯನ್ನು ಬಿತ್ತಿದವಳೆಂದು ತನ್ನ ನಲ್ಲೆಯ ಗುಣಗಾನ ಮಾಡುವ ಮೂಲಕ ಸಮ ಸಮಾಜ ನಿರ್ಮಾಣದ ಕನಸು ಕಾಣುತ್ತಾರೆ‌‌.

ನಿನ್ನನ್ನು ಹುಡುಕುತ್ತಾ ಬಿರು ಬಿಸಿಲಲ್ಲಿ ನಾನು ಓಡೋಡಿ ಬಂದಾಗ
ಅಂಗಾಲಿಗೆದ್ದ ಗುಳ್ಳೆಗಳನ್ನು ನೀನು ಕಣ್ಣೆತ್ತಿ ನೋಡಲಿಲ್ಲ ಸಖಿ”
ಎಂಬ ಸಾಲುಗಳು ನಲ್ಲನೆದೆಯ ನಲ್ಲೆಯ ಅಗಲಿಕೆಯ ನೋವಿನಾಳವನ್ನು ಪರಿಚಯಿಸುತ್ತವೆ. ನಲ್ಲೆಯೂ ಅವನ ಕಡೆ ಲಕ್ಷ ವಹಿಸಲಿಲ್ಲ ಇನ್ನು ನಲ್ಲೆಯ ಕಡೆಗಣನೆ ಸಲ್ಲದು ಎಂಬ ಭಾವವಿಲ್ಲಿ ಬಿತ್ತರಗೊಂಡಿದೆ.

“ಅರಸರು ಕಟ್ಟೋದ ಅರಮನೆಗಳು ಉರುಳ್ಯಾವು
ಗುಡಿಸಲ ಜೋಳಿಗೆಯಲಿ ಜ್ವಾಕೀಲಿ ಬದುಕೋಣ”
ಈ ಸಾಲುಗಳು ಐಹಿಕ ಸುಖ ಭೋಗಗಳೆಲ್ಲ ಕಾಲಂತರದಲ್ಲಿ ಭೂಗತವಾಗುತ್ತವೆ. ಹಾಗಾಗಿ ಅವುಗಳ ವ್ಯಾಮೋಹಕ್ಕೊಳಗಾಗಿ ಮರೀಚಿಕೆ ಹಿಂದೆ ಪಯಣಿಸಬಾರದೆಂದು ಗುಡಿಸಲಾದರು ಪರವಾಗಿಲ್ಲ ಪ್ರೀತಿಯ ಜೋಳಿಗೆ ಕಟ್ಟಿ ಜೋಪಾನವಾಗಿ ಬದುಕೋಣ ಎಂಬ ಕವಿತೆಯು ಈ ಜಗದಲ್ಲಿ ಪ್ರೀತಿಯ ಹೊರತಾಗಿ ಎಲ್ಲವೂ ನಶ್ವರವೆಂಬ ತತ್ವ ಜ್ಞಾನವನ್ನು ಬೋಧಿಸುತ್ತಾರೆ.

“ನನ್ನ ಭಾವ ಜಗತ್ತಿಗೆ ಬೆಂಕಿ ತಗಲಿ ಕಿಡಿ ಮುಗಿಲು ಮುಟ್ಟಿದರೂ
ನಿನ್ನ ನೋಡುವ ಹಂಬಲದಿ ಎದುರಿಗೆ ಬಂದೆ, ನೀನು ಗುರುತಿಸಲಿಲ್ಲ ಸಖಿ”
ಇಲ್ಲಿ ಪ್ರೀತಿಗಾಗಿ ನಲ್ಲೆಯ ಹೃದಯ ಮಿಡಿಯದಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತಾರೆ. ಬಿತ್ತಿದ ಪ್ರೀತಿಯ ಬೀಜ ಚಿಗುರದೆ ಹುಸಿಯಾಗಿರುವುದಕ್ಕೆ ಬೇಸರಿಸುವ ಕವಿ ಮನಸು ಭಾವಗಳು ಸುಟ್ಟು ಭಸ್ಮವಾಗಿವೆ ಎಂಬ ಭಾವ ತೋರುತ್ತಾರೆ.

“ಅನ್ನ ನೀರು ಬಿಟ್ಟು ಸಣ್ಣಾಗಬೇಡ ಪ್ರೀತಿಸಿ ಸಾತ್ ಕೊಡುವ ಮನಸುಗಳಿಲ್ಲ
ಬದುಕು ಹರಿಯುವ ನೀರಿನಂತೆ ಹೆದರದಿರು ಹೊಸ ನೀರಿಗೆ ತುಸು ಕಾಯಬೇಕು ಸಖಿ”
ಇದು ಪ್ರೇಮಿಗಳ ಬದುಕಿನ ಸಂಘರ್ಷವನ್ನು ಪ್ರತಿನಿಧಿಸುತ್ತದೆ ಜಾತಿ ಅನ್ನ ನೀರು ಬಿಟ್ಟು ಸಣ್ಣ ಆಗಬೇಡ, ಪ್ರೀತಿಸಿ ಸತ್ ಕೊಡುವ ಮನಸುಗಳಿಲ್ಲ ಬದುಕು ಹರಿಯುವ ನೀರಿನಂತೆ ಹೆದರದಿರು ಹೊಸ ನೀರಿಗೆ ತುಸು ಕಾಯಬೇಕು. ಈ ಜಗತ್ತು, ಈ ಸಮಾಜ ಪ್ರೇಮಿಗಳನ್ನು ಒಂದಾಗಲು ಬಿಡುವುದಿಲ್ಲಅದಕ್ಕಾಗಿ ಅನ್ನ ಹಾರ ತ್ಯಜಿಸಿ ದೇಹ ದಂಡಿಸಬೇಡ ಹೊಸ ನೀರು ಹರಿಯಲೇಬೇಕು ಅದುವರೆಗೂ ತಾಳ್ಮೆ ವಹಿಸು ಬದಲಾವಣೆ ಖಂಡಿತ ಸಾಧ್ಯ ಎಂಬ ಸಂದೇಶವನ್ನು ನೀಡುತ್ತದೆ.

“ಖುಷಿಪಡೋಣ ನಾಲ್ಕು ದಿನ ಕೂಡಿ ಬಾಳಿದ್ದಕ್ಕೆ ಮತ್ತೆ ತಿರುಗಿ ಬರಲು ಋಣ ಬೇಕು
ಸ್ಮಶಾನದ ಅವರೆ ಹೂ ಬನವು ದುಃಖಿಸುತ್ತಿದೆ ನಿನ್ನ ಚೆಲುವನ ಹೆಣಕ್ಕೆ ಹಾರವಾಗಿದ್ದಕ್ಕೆ ಸಖಿ”
ಜೀವನದ ಅಂತ್ಯಕಾಲದಲ್ಲಿ ನಿಲ್ಲಲು ಮಾಡುವ ಆಲಾಪನೆಯನ್ನು
ಇಲ್ಲಿ ಕಾಣಬಹುದು. ಸಾವಿನ ಮುಂದೆ ಬದುಕಿನಾಟ ಮುಗಿದಾಗ ಊರ ಅಗಸಿ ದಾಟಿ ಸ್ಮಶಾನ ಸೇರಲೇಬೇಕು. ಇಂದು ನಾನು ಹೋಗುವೆ, ನಾಳೆ ನೀನು ಅನುಕರಿಸುವೆ,ಅದರಂತೆ ನಾನಿಂದು ಹೋಗುವ ಸಮಯ ಬಂದಿದೆ. ಇದು ಎಲ್ಲರಿಗೂ ದುಃಖವೇ ಆಗಿದೆ ಎನ್ನುತ್ತಾರೆ.

“ನನ್ನ ಚೆಲುವನೇ ಈ ಧರೆಯಲ್ಲಿ ಸುರಸುಂದರವೆಂದವಳು ನಾನು
ಗುಲ್ ಮೊಹರ್ ಹೂವು ಕುಂತಲ್ಲೇ ಮೂಗು ಮುರಿದಾವು ಬಾರೋ ಸಖ”
ಈ ಕವಿತೆಯು ಹೆಣ್ಣಿನ ಭಾವದಲ್ಲಿ ಮೂಡಿಬಂದಿದ್ದು, ಅದ್ಭುತವಾದ ರೂಪಕಗಳಲ್ಲಿ ರಮ್ಯಾ ಪದಭಾವದಲ್ಲಿ ಓದುಗರಿಗೆ ಹೆಚ್ಚು ಆಪ್ತವಾಗುತ್ತದೆ.
ಧರೆಯ ಚೆಲುವೆಲ್ಲ ತನ್ನ ನಲ್ಲ ನೊಳಗೆ ಇದೆ ಎಂದು ನಲ್ಲನಾಗಮನಕೆ ಸಿದ್ಧರಾದ ನಲ್ಲೆಯ ಸೌಂದರ್ಯ ರಾಶಿಗೆ ಗುಲ್ ಮೋ
ಮೊಹರ್ ಅಂತ ಹೂವು ಕೂಡ ಅಸುಯೆ ಪಡುತ್ತದೆ ಎಂಬ ವರ್ಣನೆ ನಿಜಕ್ಕೂ ರಮಣೀಯವಾಗಿದೆ.

“ನೀನು ಬರುವ ಇರುಳಿಗೆ ನಾನು ಹಾಲು ಬೆಳದಿಂಗಳು ಚೆಲ್ಲಿರುವೆ
ಹೆಚ್ಚು ಗೆಜ್ಜೆ ಸದ್ದು ಮಾಡಬೇಡ ಸೂರ್ಯ ಸುಸ್ತಾಗಿ ಮಲಗಿರುವವನು ಸಖಿ”
ಇಲ್ಲಿ ನಲ್ಲಾ ನಲ್ಲೆ ಆಗಮನಕ್ಕಾಗಿ ಆತೊರೆದು ಕಾಯುತ್ತಿದ್ದಾನೆ. ಅವಳು ಬರುವ ದಾರಿಗೆ ಪ್ರೀತಿಯ ಬೆಳದಿಂಗಳ ಚೆಲ್ಲಿ ಅದರೊಳಗವಳ ಚೆಲುವನು ಸವಿಯಲು ಅವನ ಕಂಗಳು ಹಪಹಪಿಸುತ್ತವೆ. ನಲ್ಲಾ ನಲ್ಲೆ ಆಗಮನಕ್ಕಾಗಿ ಆತೊರೆದು ಕಾಯುತ್ತಿದ್ದಾನೆ. ಅವಳು ಬರುವ ದಾರಿಗೆ ಪ್ರೀತಿಯ ಬೆಳದಿಂಗಳ ಚೆಲ್ಲಿ ಅದರೊಳಗೆ ಅವಳ ಚೆಲುವನು ಸವಿಯಲು ನಯನಗಳು ಹಪಹಪಿಸುತ್ತವೆ. ಸದ್ದು ಮಾಡಬೇಡ ಗೆಳತಿ ನಿನ್ನ ಗೆಜ್ಜೆ ಸದ್ದಿನ ಝೇಂಕಾರ ದೈನಿಕ ಕಾರ್ಯ ಮುಗಿಸಿ ವಿರಮಿಸುತ್ತಿರುವ ದಿನಪನನ್ನು ತಬ್ಬಿಬ್ಬು ಮಾಡಿಯಾವು ಎಂದು ಎಚ್ಚರಿಸುತ್ತಾನೆ.

“ತುಟಿ ಕಚ್ಚಿ ಹಿಡಿದು ದುಃಖ ನುಂಗಬ್ಯಾಡ ನಿನ್ನ ಕೈ ಬಿಟ್ಟು ಹೋಗುತ್ತಿರುವುದಕ್ಕೆ
ಆಡಿಸುವವನ ಮುಂದೆ ಎಲ್ಲರೂ ಅಷ್ಟೇ ಜಗದ ಲೆಕ್ಕ ಒಪ್ಪಿಸಿ ಹೋಗುತ್ತಿರುವೆ ಸಖಿ”
ಜನನಂ ಜಾತಸ್ಯ ಮರಣಂ ಎಂಬಂತೆ ಜನಿಸಿದವರೆಲ್ಲ ಜಗದಾಟ ಮುಗಿಸಿ ಶಾಶ್ವತ ಮನೆಗೆ ತೆರಳಲೇಬೇಕು ಎನ್ನುವ ಸಖ ತನ್ನ ಸಖಿಗೆ ಸಾಂತ್ವನ ಹೇಳುವ ಪರಿ ಮನ ಮಿಡಿಯುವಂತೆ ಮೂಡಿಬಂದಿದ್ದು ತನ್ನ ಸಾವಿಗಾಗಿ ಕಣ್ಣೀರು ಹಾಕಬೇಡ ನಿನ್ನನ್ನು ಅಪ್ಪಿ ಸಂತೈಸಲು ನನ್ನ ಕೈಗಳು ಅಸಮರ್ಥವಾಗಿವೆ ಎಂಬ ಅಳಲು ತುಂಬಾ ಆದ್ರ ಭಾವದಲ್ಲಿದ್ದು ಓದುಗರ ಕಂಗಳನ್ನು ಒದ್ದೆಯಾಗಿಸುತ್ತವೆ.

“ಇದ್ದರೂ ಇರಲಿ ಬಡತನ ನಮ್ಮಿಬ್ಬರ ಬಾಳ ದೋಣಿಯಲ್ಲಿ
ಬದುಕೋಣ ಜೀವ ಪ್ರೀತಿಯನ್ನು ಸಮವಾಗಿ ಹಂಚಿಕೊಂಡು”
ಪ್ರೀತಿಯ ಮುಂದೆ ಎಲ್ಲವೂ ನಗಣ್ಯ, ನಶ್ವರ. ಪ್ರೀತಿ ಒಂದೇ ಜೀವದ್ರವ್ಯ. ಬದುಕಿನಲ್ಲಿ ಎಲ್ಲಾ ಸುಖ ಭೋಗಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಈ ಪ್ರೀತಿಗಿದೆ. ಹಾಗಾಗಿ ಪ್ರಿಯಕರ ತನ್ನ ಪ್ರಿಯತಮೆಗೆ ಬಡತನ ಬಂದರೂ ಬರಲಿ ಬಾಳಿನಲ್ಲಿ ಅನುರಾಗಕ್ಕೆಂದು ದಾರಿದ್ರ್ಯ ಕಾಡದಿರಲಿ ಎಂದು ಆಶಿಸುತ್ತಾರೆ.

“ಸುರಿಸಬೇಡ ಕಣ್ಣೀರ ನಾನು ಕೊಟ್ಟ ಮುತ್ತಿನ ಗುರುತು ಅಳಿಸಿ ಹೋಗುತ್ತದೆ
ಮರೆತು ಬಿಡು ನನ್ನ ಹಳೆಯ ನೆನಪುಗಳ ಗೆಳೆಯ ನಿನ್ನ ನಾಳೆಯ ನನ್ನ ಸುಖ ಜೀವನಕ್ಕಾಗಿ”
ಬದುಕಿನ ಜಂಜಾಟಗಳಿಗೆದರಿ
ಕಣ್ಣೀರು ಸುರಿಸಬೇಡ ಅವೆಲ್ಲವನ್ನು ಮೀರಿದ ಒಲವಿನ ಸಿಹಿ ಮುತ್ತಿನ ಗುರುತು ನಿನ್ನ ಕೆನ್ನೆ ಮೇಲಿದೆ. ಅದೊಂದು. ಬದುಕಿನ ಸ್ಪೂರ್ತಿ ಅದಿದ್ದರೆ ಎನ್ನುವಲ್ಲಿ ದುಃಖದ ಕಷ್ಟದ ದಿನಗಳನ್ನು ನೆನೆಯದೆ ಹೊಸ ಜೀವನಕ್ಕಾಗಿ ನವನವೀನ ಕನಸುಗಳನ್ನು ಮೆಲುಕು ಹಾಕೋಣ ಎಂದು ಕವಿ ಪ್ರಿಯತಮೆಯನ್ನು ಸಂತೈಸುತ್ತಾರೆ.

“ಮಲ್ಲಿಗೆ ಮೊಗ್ಗಿನಲು ಹಲವು ಹಾಡುಗಳಿವೆ ನೀನೊಮ್ಮೆ ಕೇಳಿ ನೋಡು
ನಿನ್ನ ಕಿವಿಯ ಜುಮುಕಿಯಲ್ಲು ಇಂಪಾದ ಸಂಗೀತವಿದೆ ನೀನು ಕೇಳೆ ಸಖಿ”
ಮಲ್ಲಿಗೆ ಪ್ರೀತಿಯ ಸಂಕೇತ. ಪ್ರೇಮಿಗಳ ಸುಮಧುರ ಭಾವಗಳ ಮಿಲನಕೆ ಮಲ್ಲಿಗೆಯ ಕಂಪು ಹೃದಯಕ್ಕೆ ಇಂಪು ನೀಡುತ್ತದೆ.ಮಲ್ಲಿಗೆ ಹತ್ತಾರು ಪ್ರೇಮಗೀತೆಗಳನ್ನು ಹಾಡುತ್ತದೆ ಎನ್ನುವ ಸಖನಿಗೆ ತನ್ನ ಗೆಳತಿಯ ಕಿವಿಯ ಜುಮುಕಿಯ ಓಲಾಟವು ಸಂಗೀತದಂತೆ ಮನಸ್ಸಿಗೆ ಮುದ ನೀಡುತ್ತಿದೆ.

ಈ ಕವಿತೆಗಳು ಗಜಲ್ ನಾ ಪ್ರೇರಣೆಯಿಂದ ರೂಪಿತವಾಗಿವೆ ಎನಿಸುತ್ತದೆ. ಗಜಲ್ ಗೆ ಅಷ್ಟು ‌ಹತ್ತಿರವಾಗಿವೆ. ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಪ್ರಕಟಿಸಿದ್ದರೇ ‌ಉತ್ತಮ ಗಜಲ್ ಸಂಕಲನವಾಗಿ ಗಜಲ್ ಕ್ಷೇತ್ರದಲ್ಲಿ ‌ಹೊಸ‌ ಚಾಪು ಮೂಡಿಸುತಿತ್ತು.
ಬೆಳಕು, ಬೆಳದಿಂಗಳು, ಜ್ಯೋತಿ ಮುಂತಾದ ಕೆಲವು ಪದಗಳು ಬಹಳಷ್ಟು ಸಲ ಪುನರಾವರ್ತನೆ ಆಗಿದ್ದರಿಂದ ಕಾವ್ಯದಲ್ಲಿ ಏಕತಾನತೆ ಮೂಡುವ ಸಾಧ್ಯತೆ ಇರುತ್ತದೆ.ಇಂತಹ ವಿಷಯಗಳ ಕಡೆಗೆ ಕವಿಯು ಸ್ವಲ್ಪ ಗಮನ ನೀಡುವರೆಂದು ಆಶಿಸುವೆ .

ಹೀಗೆ ಈ ಹೊತ್ತಿಗೆಯ ಕವನಗಳು ಸುಂದರವಾಗಿ, ಮೋಹಕವಾಗಿ ಮೂಡಿಬಂದಿದ್ದು ಓದುಗರಿಗೆ ತುಂಬಾ ಆಪ್ಯಾಯಮಾನವಾಗುತ್ತವೆ.
ಇಂತಹ ಹತ್ತಾರು ಕೃತಿಗಳು ಇವರ ಲೇಖನಿಯಿಂದ ಹೊರಬಂದು ಕನ್ನಡ ಸಾರಸ್ವತ ಲೋಕವನ್ನು ಮತ್ತಷ್ಟು ಶ್ರೀಮಂತಗೊಳಿಸಲಿ ಎಂದು ಶುಭ ಕೋರುವೆ.

-ಅನುಸೂಯ ಯತೀಶ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x