ಹರಿದ ಮುಗಿಲು: ರಾಯಸಾಬ ಎನ್. ದರ್ಗಾದವರ

ಆಗತಾನೇ ಪಶ್ಚಿಮದಲ್ಲಿ ದಿನನಿತ್ಯದ ಕೆಲಸ ಮುಗಿಸಿ ಧಗಧಗ ಉರಿಯುತ್ತಿದ್ದ ಸೂರ್ಯ ಊರು ಮುಂದಿನ ಎರಡು ಗುಡ್ಡಗಳ ಮಧ್ಯ ಅವುಗಳನ್ನು ತಿಕ್ಕಿಕೊಂಡು ಹೋಗುತ್ತಿರುವದಕ್ಕೋ, ಇಲ್ಲವೇ ಅವನದೇ ಶಾಖದಿಂದಲೋ ಕೆಂಪಾದಂತೆ ಕಂಡು ಮುಳಗಲು ತಯಾರಾಗಿದ್ದನು. ನೋಡಲು ಹೆಣ್ಣಿನ ಹಣೆಯ ಮೇಲಿರುವ ಕುಂಕುಮದಂತೆ ನೋಡುಗರಿಗೆ ಭಾಸವಾಗುತ್ತಿತ್ತು. ಬಿಸಿಲನ್ನು ಇಷ್ಟೋತನ ಸಹಿಸಿ ಬಿಸಿಯನ್ನು ಬೆಂಕಿ ಅಂತೆ ಬೀಸುತ್ತಿದ್ದ ಗಾಳಿಯು ತನ್ನ ವರೆಸಿಯನ್ನು ಬದಲಿಸಿ ತುಸು ತಂಪನ್ನು ತಣಿದ ಮೈಗೆ ಹಿತವೇನಿಸುವಷ್ಟು ಮುದವನ್ನು ನೀಡುತ್ತಿತ್ತು. ಹೊತ್ತಿನ ತುತ್ತಿಗಾಗಿ ತೆರಳಿದ್ದ ಹಕ್ಕಿಗಳು ಗೂಡು ಸೇರಿ ಸುತ್ತಲಿನ ಗಿಡಮರಗಳ ತುಂಬ ಇಂಪಾದ ಕಲರವವನ್ನು ಹೊಮ್ಮಿಸುತ್ತಿದ್ದವು. ಅವುಗಳನ್ನು ಸ್ವಾಗತಿಸುವಂತೆ ಗಿಡಗಳು ಅಲುಗಾಡಿ ಸಂತೋಷದಿಂದ ನಲಿಯುತ್ತಿದ್ದವು. ಓಣಿಯ ಬೀದಿ ದೀಪಗಳು ಅಲ್ಲೊಂದು ಇಲ್ಲೊಂದು ಪಣತೆ ಬೆಳಗುವಂತೆ ಕಾಣುತ್ತಿದ್ದವು. ಏನೋ ಯೋಚಿಸಿ ತಲೆಯೆತ್ತಿದರೆ ನೆತ್ತಿಯ ಮೇಲೆ ಚಂದ್ರ ಭೂಮಿಯನ್ನೇ ನೋಡುತ್ತಿದ್ದ ಅವನೂ ಸಹ ಅರ್ಧವಾಗಿದ್ದಾನೆ. ನಂತರದ ಹೊತ್ತಿಗೆ ಕಪ್ಪನೆಯ ಮೋಡ ಅದನ್ನು ಮುಚ್ಚಿಕೊಂಡು ಕಾಣದಂತೆ ಮಾಡಿತ್ತು. ಚಂದ್ರನನ್ನೇ ನೋಡುತ್ತಿದ್ದ ತಾತಪ್ಪನಿಗೆ ತನ್ನ ಜೀವನವೇ ಅರ್ಧ ಮುಳುಗಿದಂತೆ ಅನಿಸಿತು. ದೂರದ ಸರದಿಯಲ್ಲಿ ದೊಡ್ಡಚುಕ್ಕಿಯೊಂದು ಕಾಣುತ್ತಿದ್ದದ್ದು ತಾತಪ್ಪನಿಗೆ ಚಂದ್ರನನ್ನು ಮರೆಯುವಂತೆ ಮಾಡಿತ್ತು. ಉಳಿದಂತೆ ಯಾವ ಚುಕ್ಕಿಗಳು ಬೆಳಗಲು ಇನ್ನು ತಯಾರು ಮಾಡಿದ್ದಿಲ್ಲವೋ, ಕಪ್ಪುಗೊಂಡ ಮೋಡ ದಟ್ಟವಾಗಿದ್ದರಿಂದ ಉಳಿದ್ಯಾವ ಚುಕ್ಕಿಗಳು ಕಾಣಲಿಲ್ಲವೋ ತಿಳಿಯಲೇ ಇಲ್ಲ. ಸುತ್ತಲೂ ಈಗ ಕಡುಕಪ್ಪು ಮೋಡವೇ ಕೌದಿ ಹೊತ್ತು ಮಲಗಿದಂತೆ ಕಾಣುತ್ತಿತ್ತು.

ಮೊದಲ ಮಳೆಯೊಂದಿಗೆ ಮಳೆಗಾಲ ಆರ್ಭಟವಾಗಿತ್ತು. ಒಂದೇ ಸಮನೆ ಭೂಮಿಗೂ ಮುಗಿಲಿಗೂ ದಾರದಿಂದ ಹೆಣೆದಂತೆ ಸುರಿಯುತ್ತಿತ್ತು. ಮಲೆನಾಡ ಸೆರಗಿನ ಆ ಊರಲ್ಲಿ ಮಳೆ ಅಬ್ಬರಕ್ಕೆ ಸುತ್ತಲೂ ನೀರೋ ನೀರು
“ಇವತ್ತ್ ಮುಗಿಲಿನ ಮುಕ್ಲಿ ಹರಿದೆತಿ ಅಂತ ಕಾನತೈತಿ ಅದ್ಕ ಇಷ್ಟೊಂದು ಮಳಿ ಬರಾಕುಂತೆತಿ “
ಎನ್ನುತ್ತಾ ತಾತಪ್ಪ ಮನೆಯೊಳಗಿನಿಂದಲೇ ಹೊರ ಹೆಪ್ಪುಗಟ್ಟಿದ ಕಪ್ಪುಮೋಡವನ್ನು ನೋಡಲು ಯತ್ನಿಸಿದ. ಹನಿಗಳ ಹೊತ್ತ ಮೋಡವು ಬಹಳ ಭಯಾನಕವಾಗಿ ಕಂಡಿತು.
“ಮಳಿ ಇನ್ನು ಕಡ್ಮಿ ಅಂದ್ರೂ ಯಾಡ್ ತಾಸ ಹೊಡೀತೇತಿ ಕುರಿಗಾರ್ರು ಹೆಂಗ್ ಮಾಡ್ತಾರೋ ಎಪ್ಪ” ಎನ್ನುತ್ತಾ ಊಟ ಮಾಡುವ ಪ್ಲೇಟಿನಿಂದ ಹೊರಗಿನಿಂದ ಮನೆಯೊಳಗೆ ಬರುತ್ತಿದ್ದ ನೀರನ್ನು ತಾತಪ್ಪ ಬಗ್ಗಿಕೊಂಡು ಎಸೆಯೇಸದು ಹೊರಹಾಕ ತೊಡಗಿದ. ಅವನನ್ನೆ ಅನುಕರಣೆ ಮಾಡುವಂತೆ ಅರ್ಧದಲ್ಲೇ ನಿದ್ದೆಯಿಂದ ಎದ್ದ ಎರಡು ಹೆಣ್ಣಮಕ್ಕಳು ಕೈಮೀರಿ ಹರಿದು ಒಳ ಬರುತ್ತಿದ್ದ ಮಳೆ ನೀರನ್ನು ಅಂಗಳ ಗುಡಿಸುವ ಕಸಬರಿಗೆಯಿಂದ ತಡೆಯಲು ಹೆಣಗಾಡುತ್ತಿದ್ದರು. ಆಗಲೇ ಮಳೆನೀರು ಹೊಸ್ತಿಲ ದಾಟಿ ಮನೆಯನ್ನು ಪ್ರವೇಶಿಸಿತ್ತು. ಇನ್ನೊಂದು ಕಡೆ ತಾತಪ್ಪನ ಹೆಂಡತಿ ಮಾರುದ್ದ ಕೋಲಿನಿಂದ ಮನೆಯ ಹೆಂಚುಗಳನ್ನು ಸರಿ ಮಾಡುತ್ತಾ
” ಬಡ್ಕೊಂಡೆ ಇವ್ನ್ಗ ಮಳೆಗಾಲ ಚಲು ಅಕ್ಕಾವ್ ಎಲ್ಲ ಹಂಚ ಚಲೋ ಹೊಚ್ಚಬೇಕ್
ಹಂಚಿನ್ಯಾಗ ಸಿಕ್ಕೊಂಡ ಕಸ ತಗದ ಚ್ವಚ್ಛ ಮಾಡಬೇಕ” ಅಂತ ನರಸಮ್ಮ ಸಿಟ್ಟಿನಿಂದ ಬೈಯತೊಡಗಿದ್ದಳು .

ತಾತಪ್ಪ ತಪ್ಪೇಲ್ಲ ನಂದೇ ಅನ್ನುವಂತೆ ಅವಳ ಮುಖವನ್ನೊಮ್ಮೆ ನೋಡಿ ಮತ್ತೆ ನೀರನ್ನು ಹೊರ ಹಾಕಲು ಬಗ್ಗಿಕೊಂಡ.
“ಬಾಳ್ ಹಂಚ ಮಂಗ್ಯಾನ ಕಾಟಕ್ ವಡದ ಹೊಗ್ಯಾವ್. ಅವಕ್ಕೆಲ್ಲ ಪ್ಲಾಸ್ಟಿಕ ಹಾಳಿ ಹಾಕ್ಬೇಕ್. ನನ್ನ ಮಾತ ನೀ ಎಲ್ಲಿ ಕೇಳಬೇಕ. ಸೌಕಾರ್ ಚಾಕರಿ ಮಾಡೋದsss ಬಾಳ್ ಅಕ್ಕೆತಿ. ಮನಿ ಬಾಳೆ ಮಾಡಾಕ್ ಎಲ್ಲಿ ಹೊತ್ತ ಕೂಡಿಬರಬೇಕ್ “
ಎನ್ನುತ್ತಾ ನರಸಮ್ಮ ಗುನಗತೊಡಗಿದಳು. ಸೌಕಾರ ಸುದ್ದಿಗೆ ಹೋಗಿದ್ದಕ್ಕೆ ಸಿಟ್ಟು ತಡೆದುಕೊಳ್ಳದ ತಾತಪ್ಪ-
“ಬಾಯಿ ಮುಚ್ಚಿಗ ಹಲ್ಲ ಮುರಿದೆನಿ ಬಿಟ್ರ ಬಾಳ್ ಮಾತಾಡತಿ ಆ “
ಮಧ್ಯರಾತ್ರಿಯಲ್ಲಿ ತಾತಪ್ಪನ ದನಿ ಜೋರಾಗಿ ಇತ್ತು. ಅವನ ಅಬ್ಬರಕ್ಕೆ ಕುತ್ತಿಗೆ ಸುತ್ತಲೂ ಅಮೃತ ಬಳ್ಳಿಯಂತೆ ನರಗಳು ದೊಡ್ಡದಾಗಿ ಕಾಣುತ್ತಿದ್ದವು.

“ಸೌಕರ ಮುಂದ ಇಲಿ ನಮ್ಮ ಮುಂದ ಹುಲಿ” ಎಂದು ಮೆಲ್ಲನೆ ಸೂಜಿಗೆ ಮುತ್ತಿಸಿದಂತೆ ನುಡಿದು ಮನದ ಕೋಪಕ್ಕೆ ತಣ್ಣೀರ ಎರಚಲು ಯತ್ನಿಸಿದಳು. ಕೋಪ ಹಾಗೆ ಒಳಗೊಳಗೆ ಬುಸುಗುಟ್ಟುತ್ತಿತ್ತು.
ಅವನ ಅಬ್ಬರ ಸಿಡಿಲನ್ನೇ ಹೋಲುವಂತಿತ್ತು. ಸುರಿಯುವ ಮಳೆಯಲ್ಲಿ ದನಿಯು ಹೊರಗಿನ ಯಾರಿಗೂ ಕೇಳದಾಯಿತು. ಅಲ್ಲಿ ಮಳೆಯ ಶಬ್ದವೇ ಅಧಿಕವಾಗಿತ್ತು. ಛಾವಣಿ ಹೆಂಚುಗಳಿಗೆ ಸಾವಿರ ಕಲ್ಲುಗಳಿಂದ ಒಂದೇ ಸಮನೆ ಹೊಡೆದಂತೆ ಮಳೆ ಸಪ್ಪಳ ಏರ್ಪಟ್ಟಿತ್ತು. ಗಾಳಿಗೆ ಗಿಡಮರಗಳೆಲ್ಲ ಭೂಮಿಯನ್ನು ಮುತ್ತಿಸಿ ಹೋಗುತ್ತಿದ್ದವು. ಮನೆಯ ಪಕ್ಕದಲ್ಲಿ ಎತ್ತರವಾಗಿ ಬೆಳೆದ ಪರಂಗಿ ಗಿಡ,ಹಾಗೂ ಮನೆ ಮುಂದೆ ಆಕಾಶದಗಲ ಬೆಳೆದಿದ್ದ ಗೊಬ್ಬರಗಿಡದ ಟೊಂಗೆಗಳು ಇದ್ದಲಿಂದಲೇ ಗಿರಗಿರ ತಿರುಗುತ್ತಿದ್ದವು. ಕ್ಷಣಮಾತ್ರಕ್ಕೆ ಹಗಲಿನಷ್ಟೇ ಬೆಳಕನ್ನು ನೀಡುವಂತೆ ಮಿಂಚುಗಳು, ಅವುಗಳನ್ನು ಬೆನ್ನುತ್ತುವಂತೆ ಸಿಡಿಲುಗಳು ಆರ್ಭಟಿಸುತ್ತಿದ್ದರೆ, ಅದರ ನಂತರ ಸೋತ ಗುಡುಗುಗಳು ಬಿಟ್ಟು ಬೇಸರಕ್ಕೆ ಸಣ್ಣಸಪ್ಪಳ ಮಾಡುತ್ತಿದ್ದವು. ಊರಿಗೆ ಊರೇ ಗಾಢ ನಿದ್ದೆಯಿಂದ ಗೊರಕೆ ಹೊಡೆಯುತ್ತಾ ಮಲಗಿತ್ತು. ಇದ್ದೊಬ್ಬ ಮಗ ಇದ್ಯಾವುದು ಪರಿವೆ ಇಲ್ಲದಂತೆ ಹಾಸಿಗೆಯಲ್ಲಿ ಮಲಗಿತ್ತು. ಸಿಡಿಲಿನ ಸಪ್ಪಳಕ್ಕೋ ಇಲ್ಲವೇ ನಿತ್ಯರೂಢಿ ಇರುವಂತೆ ಹಾಸಿಗೆಯಲ್ಲಿ ಉಚ್ಚೆ ಹೊಯ್ದು ಹಾಸಿಗೆಯಲ್ಲ ಗಬ್ಬೆದ್ದು ಹೋಗಿತ್ತು. ಅಕ್ಕಳೊಬ್ಬಳು ಬಂದು ಅವ್ವ ಮುತ್ತ್ಯಾ ಉಚ್ಚಿ ಓಯ್ಕೊಂಡಾನ ಎಂದು ಪಿರಾದಿ ಒಪ್ಪಿಸಿದಳು.
‘ಏ ಮುತ್ತ್ಯಾ ಹಾಸಿಗ್ಯಾಗ್ ನೀರ್ ಬರಾಕುಂತಾವ ಏಳಲಾ ಮ್ಯಾಕ್ ‘
ಎಂದು ಮಲಗಿದ್ದ ಹುಡ್ಗನನ್ನು ಕೈಹಿಡಿದು ಮೇಲಕ್ಕೆ ನರಸಮ್ಮ ಎತ್ತಲು ಯತ್ನಿಸಿದಳು. ಹುಡ್ಗನ ನಿದ್ದಿ ಗಾಢವಾಗಿ ಅವರಿಸಿದ್ದರಿಂದ ಆತ ನಿದ್ದೆಯಿಂದ ಕಣ್ಣುಬಿಡದೆ ಕುಳಿತಲ್ಲೇ ತೂಗಡಿಸುತ್ತಾ ನಿದ್ದೆಯನ್ನು ಮುಂದುವರೆಸಿದ. ರಭಸವಾಗಿ ಬೀಸುತ್ತಿದ್ದ ಗಾಳಿಗೆ ಕರೆಂಟ್ ಹೋಗಿ ಮಿಂಚಿನ ಬೆಳಕು ಅವರ ಮನೆಯನ್ನೆಲ್ಲ ದೀಪದಂತೆ ಬೆಳಗುತ್ತಿತ್ತು. ಹತ್ತಿಸಿದ ಗುಬ್ಬಿಲಾಟನ್ನ ಗಾಳಿಗೆ ಅತ್ತ ಇತ್ತ ಅಲುಗಾಡಿ ಹತ್ತಿದ ದೀಪ ಪದೇಪದೇ ಕಳೆದುಹೋಗಿ ಕ್ಷಣಾರ್ಧದಲ್ಲಿ ಬೆಳಕು ಮಾಯವಾಗುತ್ತಿತ್ತು. ನೀರು ಹೊರ ಹಾಕುವ ಧಾವಂತದಲ್ಲಿದ್ದ ಹೆಣ್ಣು ಮಕ್ಕಳು ದೊಡ್ಡ ದೊಡ್ಡ ಮಿಂಚಿಗೆ ಅವ್ವ. . . ಯಪ್ಪ. . . . ಅನ್ನುತ್ತಾ ಅಪ್ಪನ ಮರೆಯಲ್ಲೋ,ಅವ್ವನ ಮರೆಯಲ್ಲೋ ಅವಿತುಕೊಂಡು,ಅಲ್ಲಿಂದಲೇ ಕುತೂಹಲದಿಂದ ಕಣ್ಣುಗಳನ್ನು ದೊಡ್ಡದಾಗಿಸಿ ಮಿಂಚನ್ನು ನೋಡಲು ಇಣುಕುತ್ತಿದ್ದವು. ಮಿಂಚಿನ ನಂತರ ಬರುವ ಸಿಡಿಲಿನ ಶಬ್ದಕ್ಕೆ ಬೆಚ್ಚಿದಂತೆ ಒಳ ಓಡಿ ಪಡಸಾಲಿ ಕಟ್ಟೆಯೇರಿ ಮೂಲೆಯಲ್ಲಿ ಅವಿತು ಕುಳಿತುಬಿಡುತ್ತಿದ್ದರು.

ಬೆಳಿಗ್ಗೆ ಎದ್ದಾಗ ತಾತಪ್ಪನ ಮಗ ಮುತ್ತ್ಯಾನಿಗೆ ರಾತ್ರಿಯ ಯಾವ ಪರಿವು ಇರಲಿಲ್ಲ. ಅಸಲಿಗೆ ರಾತ್ರಿ ಮಳೆಯಾಗಿದೆ ಅನ್ನೋ ಪ್ರಜ್ಞೆಯು ಇದ್ದಂತೆ ಕಾಣಲಿಲ್ಲ. ಮನೆಯ ಪಡಸಾಲಿ ಹಸಿಹಸಿಯಾಗಿ ಇರುವದು ನೋಡಿ ಅಕ್ಕಂದಿರಲ್ಲಿ ಒಬ್ಬಳು ಬಿಂದಿಗೆ ಹೊತ್ತುಕೊಂಡು ಬಿದ್ದಿರಬಹುದು. ಅವಳು ಯಾವಾಗಲೂ ಹೀಗೆ ಎತ್ತಲಾರದ ದೊಡ್ಡ ದೊಡ್ಡ ಬಿಂದಿಗೆಗಳನ್ನು ಎತ್ತಲು ಯತ್ನಿಸುತ್ತಾಳೆ. ಹೀಗೆಲ್ಲ ಯತ್ನಿಸುವಾಗ ಅಪ್ಪನ ಕಡೆಯಿಂದ ಅವ್ವನ ಕಡೆಯಿಂದ ಅನೇಕ ಬಾರಿ ಹೊಡೆತ ತಿಂದು ಅತ್ತಿದ್ದಾಳಾದರೂ ಅವಳು ತನ್ನ ಪ್ರಯತ್ನ ಬಿಟ್ಟಿಲ್ಲ. ಇವತ್ತು ಮತ್ತೆ ಈ ಪ್ರಯತ್ನ ಮಾಡಲು ಹೋಗಿ ಅದೆಷ್ಟು ಹೊಡೆತಗಳನ್ನು ತಿಂದಿದ್ದಾಳೋsss ಯೋಚಿಸುತ್ತಾ ಸುತ್ತಲೂ ನೋಡಿದ ಅಕ್ಕಂದಿರ ದನಿಯ ಸುಳಿವಾಗಲಿ, ಅವರಾಗಲಿ ಕಾಣಲಿಲ್ಲ ಕಣ್ಣನೊಮ್ಮೆ ಉಜ್ಜಿದ ಪಡಸಾಲಿ ಎತ್ತರ ಕಟ್ಟೆಯ ಮೇಲೆ ಒಬ್ಬರಿಗೊಬ್ಬರು ಹತ್ತಿಕೊಂಡು ಇನ್ನೂ ಮಲಗಿದ್ದಾರೆ. ಆ ಕಟ್ಟೆ ಇರುವದೇ ಅಷ್ಟು, ಒಬ್ಬರು ಮಲಗಲು ಸೂಕ್ತ. ಆದರೀಗ ಮನೆಯ ಮುಕ್ಕಾಲು ಭಾಗ ಮಳೆ ನೀರು ಒಳಬಂದು ಹಸಿಹಸಿಯಾಗಿದೆ. ರಾತ್ರಿ ಪೂರ್ತಿ ಮಳೆಯ ನೀರನ್ನು ಹೊರ ಹಾಕಿ ಮಲಗುವಷ್ಟರಲ್ಲಿ ನಸುಕಿನ ಜಾವ ಗುಬ್ಬಿ-ಕಾಗೆಗಳು ಗೂಡಿನಿಂದ ಗಲಿಬಿಲಿಗೊಂಡು ಹಾರಲು ಸಿದ್ದಕೊಂಡಿದ್ದವು. ಬೆಳ್ಳನೆ ಬೆಳಕು ಭೂಮಿ ಸೋಕುವದಷ್ಟೇ ತಡ,ಸೋರುತ್ತಿದ್ದ ಮನೆಯನ್ನು ರಿಪೇರಿ ಮಾಡಲು ತಾತಪ್ಪ ತಯಾರಿ ನಡಿಸಿದ.

ಮಲಗಿದ್ದ ಮುತ್ತ್ಯಾನ ಬಳಿ ಏರ್ಡ್ಮುರು ಬಾರಿ ಬಂದು ಸುಳಿದು ಹೋಗಿದ್ದನಾದರೂ ಮುತ್ತ್ಯಾ ಇನ್ನು ಎದ್ದಿರಲಿಲ್ಲ. ಆತ ಎದ್ದ ನಂತರವೇ ರಿಪೇರಿ ಕೆಲಸ. ಅವನೇ ತಾನೇ ಮನೆ ಮೇಲೆ ಹತ್ತುವದು. ರಾತ್ರಿ ಪೂರ್ತಿ ಜಡಿದ ಮಳೆಗೆ ನೆನೆದ ಹೆಂಚುಗಳು ಉಳಿದವರು ಹತ್ತಿದರೆ ಒಡೆಯುವ ಸಾಧ್ಯತೆ ಹೆಚ್ಚಾಗಿರುವ ಕಾರಣ ತೆಳ್ಳಗೆ ಒಣಕಲು ಕಡ್ಡಿಯಂತಿರುವ ಅವನನ್ನೆ ಮೇಲಕ್ಕೆ ಹತ್ತಿಸಲು ನೋಡಿದ್ದ. ಸ್ವಲ್ಪ ಸಮಯದ ನಂತರ ಅವನೇ ಎದ್ದು ಅಪ್ಪನ ಬಳಿ ಅಕ್ಕಂದಿರ ವಿರುದ್ಧ ದೂರು ನೀಡಲು ಬಂದಿದ್ದ .
“ಅಕ್ಕಾಗುಳ ಇನ್ನೂ ಮಕ್ಕೊಂಡಾರ್ ಅಪ್ಪಾ” ಅಂತ ಉತ್ಸುಕನಾಗಿ ಹೇಳಿದ. ಅವನ ಮಾತಿನಲ್ಲಿ ಅಕ್ಕಂದಿರನ್ನ ಹೊಡಿಸಬೇಕು ಅನ್ನೋ ಇರಾದೆ ಸ್ಪಷ್ಟವಾಗಿತ್ತು. ಅವರು ಹೊಡೆತ ತಿಂದು ಅಳುತ್ತಿದ್ದರೆ ಇವನು ಖುಷಿಗೊಳ್ಳುತ್ತಿದ್ದ. ಕೆಲವು ಸಲ ಈ ಸರದಿ ಅವರದೂ ಆಗಿರುತ್ತಿತ್ತು.
ಮಗನ, ಅವರ ರಾತ್ರಿ ಪೂರ್ತಿ ನಿದ್ದೆಗೆಟ್ಟು ಮಳಿ ನೀರ್ ಹೊರಗ್ ಹಾಕಿ ನಸಿಕೀನ್ಯಾಗ ಮಕ್ಕಂದಾರೋsss ಅಂತ ತಾತಪ್ಪ ಹೇಳಿದ .

ಮನೆಯ ಹೆಣ್ಣುಮಕ್ಕಳು ಯಾವಾಗಲೂ ಬೇಗ ಎದ್ದು ಮನೆಯ ಎಲ್ಲ ಕೆಲಸ ಮಾಡಬೇಕು. ಗಂಡಸರು ಒಂದು ಗಂಟೆ ತಡವಾಗಿ ಎದ್ದರೂ ಕರಗುವ ಗಂಟು ಏನಿಲ್ಲ ಎಂಬುವದು ತಾತಪ್ಪನ ವಾದ ಆದರೆ ಇಂದು ಒಂಬತ್ತು ಗಂಟೆಯಾದರೂ ಮಲಗಿದ್ದಾರೆ. ಮನೆಯಿಂದ ಹೊರ ಬಂದ ಮುತ್ತ್ಯಾನಿಗೆ ಈಗ ಮಳೆಯಾಗಿರಬಹುದು ಅನ್ನೋ ಸ್ಪಷ್ಟತೆ ಇನ್ನೂ ಹೆಚ್ಚು ಸಿಕ್ಕಂತಾಗಿತ್ತು. ಅದಕ್ಕೆಲ್ಲ ಸಾಕ್ಷಿಯಂಬಂತೆ ಮನೆಯ ಅಂಗಳದಲ್ಲಿ ಮಳೆಯ ನೀರು ಶೇಖರಣೆಯಾಗಿತ್ತು. ಮನೆಯ ಮುಂದೆ ತಗ್ಗು ಇರುವುದರಿಂದ ಬಿದ್ದ ನೀರು ಮುಂದೆ ಹರಿಯದೆ ಇವನ ಮನೆಯ ಮುಂದೆ ಕೆರೆಯಂತೆ ಕಂಡಿತು. ಮೊದಲೇ ಗಟರಿನ ವ್ಯವಸ್ಥೆ ಇಲ್ಲದ ಓಣಿಯಲ್ಲಿ ಮಳೆಯ ನೀರು ಇವರ ಮನೆಯ ಮುಂದೆ ನಿಲ್ಲುತ್ತಿತ್ತು. ಅದರಲ್ಲಿ ಕಪ್ಪೆಗಳು ಗುಟುರು. . . . ಗುಟುರು ಎಂದು ಒಂದಕ್ಕೊಂದು ಬೈದಾಡುಕೊಳ್ಳುವಂತೆ ಅರಚುತ್ತಿದ್ದವು. ಆ ಕಪ್ಪೆಗಳ ಶಬ್ಧವನ್ನು ತದೆಕಚಿತ್ತದಿಂದ ಕೇಳುತ್ತಾ ಕಪ್ಪೆಗಳನ್ನು ನೀರಿನಲ್ಲಿ ಹುಡುಕುತ್ತಾ ನಿಂತ. ಆಕಸ್ಮಿಕವಾಗಿ ಕಪ್ಪೆಗಳು ಕಂಡರೆ ಕೋಪ್ಪಿ,ಕೋಪ್ಪಿ ಎಂದು ನಿಂತಲ್ಲೇ ಜಿಗಿಯತೊಡಗಿದ. ಕಲ್ಲುಗಳನ್ನು ಎತ್ತಿ ಶಬ್ಧ ಬಂದ ಕಡೆ ಎಸಿಯುತ್ತಿದ್ದ. ಕಲ್ಲು ಒಗೆದ ಸಪ್ಪಳಕ್ಕೆ ಕ್ಷಣಾರ್ಧದಲ್ಲಿ ಸುಮ್ಮನಿರುತ್ತಿದ್ದ ಕಪ್ಪೆಗಳು ಮತ್ತೆ ಕುಡ್ರ ssss ಕುಡ್ರ ssss ಅಂತ ಸಪ್ಪಳ ಮಾಡುತ್ತಿದ್ದವು. ಮುತ್ತ್ಯಾನಿಗೆ ಇದು ಒಂದು ಆಟದಂತೆ ಅನಿಸಿತು.

ಮನೆಯ ಮುಂದೆ ಹೋಗುವ ಬರುವ ಎಲ್ಲರೂ ಕಚ್ಚೆಯನ್ನು ಮೇಲೆತ್ತಿ ಇಲ್ಲವೇ ಪ್ಯಾಂಟನ್ನು ಮೊಳಕಾಲುವರೆಗೂ ಮಡಚಿ ಹೋಗುತ್ತಿದ್ದರು. ಮುತ್ತ್ಯಾನನ್ನು ಮನೆಯ ಮೇಲೆ ಹತ್ತಿಸಿ ಸೋರುತ್ತಿದ್ದ ಜಾಗದಲ್ಲೆಲ್ಲ ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಿಸಿದ. ಒಡೆದ ಹೆಂಚುಗಳನ್ನು ತಗೆದು ಬೇರೆ ಹಂಚಗಳನ್ನು ಹಾಕಿಸಿದ. ಮುತ್ತ್ಯಾನ ಅಕ್ಕಂದಿರು ಹೊಸ ಮನೆಯನ್ನೇ ಕಟ್ಟಿಸಿದ ಖುಷಿಯಲ್ಲಿದ್ದರು. ಇಂದಾದರು ಸುಖದ ನಿದ್ದೆ ಕಾಣಬಹುದು ಎಂಬಂತೆ ಮುತ್ತ್ಯಾ ಮಾಡುತ್ತಿದ್ದ ಕೆಲಸವನ್ನು ಎಂದೂ ನೋಡಿಯಿಲ್ಲವೇನೋ ಅನ್ನೋ ಅರ್ಥದಲ್ಲಿ ನೋಡುತ್ತಾ ನಿಂತಿದ್ದರು.
“ಏ ತಾತ್ಯಾ. . . . ಸೌಕಾರ್ ಕರೆಯಾಕುಂತಾರ. . . . . ಸಗಣಿಕಸ ಹಂಗ ಬಿದ್ದೆತಿ ನೀ ಹುಡ್ಗನ ಕೂಡ ಏನ್ ಮಾಡಕುಂತಿ, ಕಸ ತುಂಬಿಚಲ್ಲಿ ದನಕರುಗಳನ್ನು ಹೊರಗೆ ಕಟ್ಟಿ ಬರುವಂತ”
ಎಂದು ಸೌಕಾರ್ ಮನೆಯ ಹಿರಿತನ ಮಾಡುವ ಆಳು ಕರೆಯಲು ಬಂದಾಗ ತಾತಪ್ಪ ಇನ್ನು ಹಂಚು ಹಾಕಿಸುವ ಕೆಲಸದಲ್ಲಿ ನಿರತನಾಗಿದ್ದ. ಕರೆಯಲು ಬಂದವನ ದನಿಯು ಕಿವಿಯನ್ನು ತಲುಪುತ್ತಿದಂತೆ ಒಂದೇ ಸಲ ‘ಬಂದೆ ಬಸನ್ನ’ ಅಂತ ಹೋಗಲು ರಡಿಯಾದ.
“ಕೂಸಿನ್ನ ಛಾವಣಿಯಿಂದ ಇಳಿಸಿಯಾದ್ರು ಹೋಗ್ ಮಾರಾಯ” ಎಂದು ನರಸಮ್ಮ ಚಿಟ್ಟನೆ ಚೀರಿದಳು. ಗಾಬರಿಯಲ್ಲಿ ಅದು ಅವನ ಕಿವಿ ತಲುಪಲು ವಿಫಲವಾಯಿತೇನೋ.
ಮೇಲೆ ಕುಳಿತಿದ್ದ ಮುತ್ತ್ಯಾ ಗೋಣ್ಣಿಯನ್ನು ಮೇಲೆ ಏಳಿಯುತ್ತಾ ಅಪ್ಪಾ. . . ಅಂದಾಗಲೇ ಅವನಿಗೆ ವಾಸ್ತವ ನೆನಪಾಗಿದ್ದು .

“ಇವಕ್ ಮಣ್ಣ ಕೊಡ್ಲಿ, ಮಾಡೋ ಕೆಲಸನೂ ಮಾಡಿಸಿ ಕೊಡಲ್ಲ ನೋಡ್,ಮೊದಲssss ಇವತ್ತ್ ಮಳಿ ಕಸವು ಜಾಸ್ತಿ ಇದ್ದಂಗ ಕಾಣತೈತಿ”
ಅಂತ ಅಡುಗೆ ಮನೆಯಿಂದಲೇ ನರಸಮ್ಮ ಸಿಟ್ಟಿನಿಂದ ಗುನುಗಿದಳು. ಸಂಜೆಯಾಗುತ್ತಿದಂತೆ ಮೈದುಂಬಿ ಹಣಿಯಲು ತಯಾರಾದ ಮಳೆಯ ಭಯವಿತ್ತವಳಲ್ಲಿ. ಈ ರಾತ್ರಿಯಾದರೂ ನೆಮ್ಮದಿಯ ನಿದ್ದೆ ಕಾಣಬಹುದು ಎಂಬ ಆಶಾಭಾವನೆ ಇತ್ತು. ಆ ರೋಷವೆಲ್ಲ ರೊಟ್ಟಿಯ ಮೇಲೆ ತೋರಿಸುತ್ತಾ ಪಟ್ಟ. . . ಪಟ್ಟ. . . ಅಂತ ಬಡಿಯುತ್ತಿದ್ದರೆ ರೊಟ್ಟಿಯು ತೆಳ್ಳಗೆ ದುಂಡಗೆ ಚಂದ್ರನಂತೆ ಆಯಿತು. ಅವಳ ಹೊಡೆತವು ರೊಟ್ಟಿಗೆ ಚುರುಗುಟ್ಟುವಂತಿತ್ತು.
“ದಿನಾ ನಿಂಗ ಮನೆಗೆ ಒಂದ ಆಳು ಕರ್ಯಾಕ್ ಬರ್ಬೇಕ್ ಏನ್ ತಾತ್ಯಾ. . . ? ಲಘು ಬರಾಕ್ ಬರಲ್ಲ ಯೆಂಟ್ ಆದ್ರೂ ಸಗಣಿ ಕಸ ಹಂಗ ಬಿದ್ದೆತಿ ನಾ ತಗಿಲಿ ಏನ್. . ? ಸಾಹುಕಾರನ ಏರು ದನಿಗೆ ತಾತ್ಯಾ ತಡವರಿಸುತ್ತಾ ಏನೋ ಹೇಳಲು ಹೊರಟ
ನಿನ್ನ ಪುರಾಣ ಆಮೇಲೆ ಹೇಳಂತ ಈಗ ಕಸ ಬಳಿ ಹೋಗ. . . ಎನ್ನುವಷ್ಟರಲ್ಲಿ ತಾತಪ್ಪ ದನಕಟ್ಟೋ ಹಕ್ಕಿಯನ್ನು ಸೇರಿದ್ದ .

ಸೌಕಾರನ ಮನೆಯಿಂದ ಸಗಣಿಕಸ ಬಳಿದು ಬಂದವನೇ ತಾತಪ್ಪ ಗುದ್ದಲಿ, ಪೀಕಾಸಿ ತಗೆದುಕೊಂಡು ಮನೆಯ ಅಂಗಳದಿಂದ ಗಟಾರು ಮಾಡಲು ಶುರು ಮಾಡಿದ. ಅಂಗಳದಲ್ಲಿ ಜಮಾಯಿಸಿದ್ದ ನೀರನ್ನು ಸಾಗಹಾಕಬೇಕು. ಇಂದು ಸಂಜೆ ಜಡಿಯುವ ಮಳೆಯ ನೀರನ್ನು ಒಳಬರದಂತೆ,ಬಿದ್ದ ಮಳೆ ನೀರು ನಿಲ್ಲದಂತೆ ಮುಂದೆ ಹರಿಯುತ್ತಿರಬೇಕು ಎಂಬಿತ್ಯಾದಿ ಉದ್ದೇಶದಿಂದ ಪಂಚಾಯತಿಯವರು ಮಾಡಬೇಕಿದ್ದ ಗಟಾರನ್ನು ತಾನು ಮಾಡತೊಡಗಿದ. ತಾತಪ್ಪನ ಕೆಲಸ ನೋಡಿದವರೆಲ್ಲ ನಾನಾ ತರ ಮಾತಿಗಿಳಿದರು.
ಕೆಲವರು ಹಾಗೆ ಕೆರೆಯ ಅಂಗಳ ತಲುಪಿಸಿಬಿಡು ಎಲ್ಲಿಯೂ ನೀರು ನಿಲ್ಲದಂತೆ,ಆಳ ಕಡ್ಮಿ ಆತು ಇನ್ನು ಸ್ವಲ್ಪ ಆಳವಾಗಲಿ. . . ಬೇಸಿಗೆಯಲ್ಲಿ ಮಣ್ಣಿನಿಂದ ಮುಚಕೋತೇತಿ. ಇನ್ನು ಕೆಲವರು ಪಂಚಾಯತಿಯವರು ಏನ್ ಮಣ್ಣು ತಿನ್ನಕುಂತಾರsss, ಅವರು ಮಾಡುವ ಕೆಲಸ ನೀ ಮಾಡುದ್ಯಾಕ್ ಬಿಟ್ಟಬಿಡು ಹೋಗ್ಲಿ ಎಂದು ಆಳಿಗೊಂದು ಮಾತನಾಡತೊಡಗಿದರು.

“ಈ ವರ್ಷ ಮಳಿ ಬಾಳ್ ಕೊಟ್ಟಾನ್ ಪಂಚಾಂಗದಾಗ “ಯಾರೋ ಹೇಳಿದ್ದು ನೆನಪಾಗಿ ತನ್ನ ಕಾರ್ಯದಲ್ಲಿ ನಿರತನಾದವನಿಗೆ ಕೈಗೂಡಿದ್ದು ಅದೇ ಹೆಣ್ಣುಮಕ್ಕಳು. ಉಳಿದವರು ಪ್ರಶಂಸಿಸುತ್ತಾ, ವಿಮರ್ಶಿಸುತ್ತಾ ಕೈಕಟ್ಟಿ ನಿಂತು ನೋಡಿದರೆ ವಿನಃ ಯಾರೂ ಕೈಗೂಡಲಿಲ್ಲ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಕೆರೆಯ ಅಂಚಿನವರೆಗೂ ಗಟಾರನ್ನು ತೋಡುತ್ತಿದ್ದ ತಾತಪ್ಪನಿಗೆ ಗಟಾರನ್ನು ಕೆರೆಯ ಅಂಗಳದವರೆಗೂ ಮುಟ್ಟಿಸುವುದೇ ಮುಖ್ಯ ಗುರಿಯಾಗಿತ್ತು. ಮುಟ್ಟಿಸಿದ ನಂತರ ನೆಮ್ಮದಿ ಸಿಕ್ಕಿತಾದರೂ ಅದು ಕ್ಷಣ ಮಾತ್ರವಾಗಿತ್ತು.

ಮತ್ತೆ ಆ ಸಂಜೆ ಧಾರಾಕಾರ ಮಳೆ ಸುರಿಯಲು ಆರಂಭಿಸಿತು. ಅದು ನೋಡುಗರಿಗೆ ಮೋಡವೇ ಕಪ್ಪರಿಸಿ ಬಿಳ್ಳುವಂತೆ ಕಾಣುತ್ತಿತ್ತು. ಮನೆಯ ತುಂಬ ಸೋರುತ್ತಿದ್ದ ಜಾಗದಲ್ಲೆಲ್ಲ ಮನೆಯಲ್ಲಿದ್ದ ಎಲ್ಲ ಪಾತ್ರೆಗಳು ಅಲ್ಲೊಂದು ಇಲ್ಲೊಂದು ಬಿದ್ದಕೊಂಡಿದ್ದವು. ಅದರಲ್ಲಿ ಮಳೆಯ ನೀರು ತಟ್. . ತಟ್. . ಎಂದು ಬಿಳ್ಳುತ್ತಿದವು. ಮುತ್ತ್ಯಾ ಬಿಳ್ಳುತ್ತಿದ್ದ ಹನಿಗಳನ್ನು ತಪ್ಪುತಪ್ಪಾಗಿ ಎಣಿಸುತ್ತಾ ಮೂಲೆಯಲ್ಲಿ ಕುಳಿತ್ತಿದ್ದ. ತಾತಪ್ಪ ಸೋರುತ್ತಿದ್ದ ಕಡೆಯಲ್ಲ ಮತ್ತೆ ಮತ್ತೆ ಹೆಂಚುಗಳನ್ನು ಸರಿ ಮಾಡುತ್ತಿದ್ದ .
“ಹೊಯ್ಕೊಂಡೆ ಕೆಲ್ಸ ಮುಗಿಸಿ ಹೋಗ್ ಅಂದ್ರ್ ಸೌಕಾರ್ ಕರೆದಾ ಅಂತ ಅವನ ಹಿಂದ ಓಡಿದಿ” ಅಂತ ತನ್ನ ಅಳಲನ್ನು ತೊಡುತ್ತಾ ಮಳೆಗೆ ಹಿಡಿಶಾಪ ಹಾಕುತ್ತಾ ನಿಂತಿದ್ದಳು. ಹೊರಗಿನಿಂದ ಬರುತ್ತಿದ್ದ ಮಳೆ ನೀರು ಗಟಾರು ಮಾಡಿದ್ದರಿಂದ ಈಗ ಬರುತ್ತಿಲ್ಲವಾದರೂ ಬೆಳಿಗ್ಗೆ ಅರ್ಧ ಮಾಡಿದ ಕೆಲಸದಿಂದ ಇವತ್ತು ಮತ್ತೆ ಮಳೆಯು ಒಡೆದ ಹೆಂಚಿನಿಂದ ಹನಿಹನಿಯಾಗಿ ಮನೆ ಸೇರುತ್ತಿದೆ. ಒಡೆದ ಹೆಂಚುಗಳ ಮಧ್ಯ ದೊಡ್ಡದೊಡ್ಡ ಶಬ್ಧ ಮಾಡುತ್ತಾ ಬರುತ್ತಿದ್ದ ಸಿಡಿಲು ಅದಕ್ಕೂ ಮೊದಲು ಬರುತ್ತಿದ್ದ ಮಿಂಚುಗಳ ಬೆಳಕು ಒಡೆದ ಹೆಂಚುಗಳ ಮಧ್ಯ ಮುತ್ತ್ಯಾನ ಮನವನ್ನು ರೋಚಕಗೊಳಿಸಿತು. ಹೆಂಚುಗಳನ್ನು ಕೋಲಿನಿಂದ ತಿವಿದು ತಿವಿದು ಸರಿಪಡಿಸುತ್ತಿದ್ದ ತಾತಪ್ಪನನ್ನು
ಅಪ್ಪ, ಬೆಳಕು ಬಂದಂಗ ಆತಲ ಏನದ ಅಂತ ಕೇಳಿದ .
ಮಿಂಚದ ಅಂತ ತಾತಪ್ಪ ಹೇಳಿದ.
ಮುತ್ತ್ಯಾನಿಗೆ ಅವನ ಒಂದೇ ಪದದ ಉತ್ತರ ಹಿತವೆನಿಸಲಿಲ್ಲ .
ಅಂದ್ರ. . . . ? ಮತ್ತೆ ಕೇಳಿದ.

ಅದೇನು ಹೇಳಬೇಕು ಅಂತ ಗೊಂದಲಕ್ಕೊಳಗಾದ ತಾತಪ್ಪ, ಮಗ ಕೇಳಿದ ಪ್ರಶ್ನೆಗೆ ಥಟ್ಟನೆ ಹೊಳೆದ ಉತ್ತರವನ್ನು ಬಣ್ಣ ಹಚ್ಚಿ ಹೇಳಿದ್ದ.
“ಅದು ಫೋಟುದ ಬೆಳಕು ದೇವ್ರ್ ಮ್ಯಾಲ್ ಕೂತ್ಕೊಂಡ ನಮದೆಲ್ಲ ಫೋಟೋ ತಗೀತಾನ ಆಗ ಹಿಂಗ್ ಬೆಳಕ ಬರ್ತೇತಿ ,ಅದ್ಕ ಮಿಂಚ ಅಂತಾರ್ ಅಂತ ಸಮಜಾಯಿಸಲು ಉತ್ತರ ಕೊಡುತ್ತಿದ್ದ. ಅದು ಮುತ್ತ್ಯಾ ನೋಡಿದ ಮೊದಲ ಮಿಂಚಾಗಿತ್ತು .
ಮತ್ತ್ ಆ ಸಪ್ಪಳ ಯಾಕ್ ಬರ್ತೇತಿ ಕೇಳಿದ. . ?
ಅದ್ಕ ಗುಡ್ಗ ಅಂತಾರ್ ಅಂದ. ಗುಡುಗಿನ ಸಪ್ಪಳವೇ ಭಯನಕವಾಗಿದ್ದರಿಂದ ಅದರ ಗೊಡುವೆಯೇ ಬೇಡವೆನ್ನಿಸಿತು ಅನಿಸುತ್ತೆ. ಅವನಿಗೆ ಗುಡುಗು ಅಷ್ಟಾಗಿ ಸೆಳೆಯಲು ವಿಫಲವಾದಂತೆ ಕಾಣುತ್ತೆ ಮತ್ತೆ ಅದರ ಚಕಾರವೆತ್ತಲಿಲ್ಲ. ಹಾವು ಕಪ್ಪೆಗೆ ಮಳೆ ಅಂದ್ರೆ ಇಷ್ಟವಿರುವಂತೆ ಮತ್ತ್ಯಾನಿಗೆ ಮಳೆ ಅಂದರೆ ಬಲು ಪ್ರೀತಿ ಅದಕ್ಕೆ ಇದು ಹೆದರಿಸಲು ಈ ಸೂಕ್ತ ಉಪಾಯವೆಂದುಕೊಂಡು ತಾತಪ್ಪನೆ ಮುಂದುವರೆದು ಮತ್ತೊಂದು ವಿವರಣೆ ಕೊಟ್ಟ.
“ಮಳಿಯಾಗ್ ಯಾರ್ ಅಡ್ಡಾಡತಾರ್,ಹೊರಗ ಹೋಗಿ ಮಳಿಲಿ ಯಾರ್ ಆಡ್ತಾರ್ ಅವ್ರನ್ ದೇವ್ರ ಅಸ್ಟ ಜೋರಾಗಿ ಹೊಡೀತಾನ ನೀನೂ ಮಳಿ ಬರುವಾಗ ಹೊರಗ ಅಡ್ಡಾಡಬ್ಯಾಡ್ ಅಂತ ಹೇಳಿದ.

ಅವನಿಗೆ ಮಿಂಚು ಅಂದರೆ ಏನೋ ಕುತೂಹಲ ಅವನ ಅಕ್ಕಂದಿರಂತೆ ಹೆದರುತ್ತಿರಲಿಲ್ಲ. ಹೆದರಿ ಓಡುತ್ತಿರಲಿಲ್ಲ. ಆಕಾಶದಲ್ಲಿ ಮಿಂಚುತ್ತಿದ್ದರೆ ಇವನು ಮುಖವನ್ನು ಬೆಳ್ಳಿ ತಟ್ಟೆಯಂತೆ ಹೊಳಪಿಸಿ ಬಚ್ಚಲ ಮೇಲಿದ್ದ ನೀರುತುಂಬಿದ ಅಲ್ಯೂಮಿನಿಯಂನ ಪಾತ್ರೆಯಲ್ಲಿ ಸಣ್ಣ ಬೊಗಸೆ ಮಾಡಿ ಆ ಬೊಗಸೆಯಿಂದ ನೀರು ಹಿಡಿದು ಮುಖ ತೊಳೆದುಕೊಂಡು ಬಟ್ಟೆಯನ್ನು ಸರಿ ಮಾಡಿಕೊಂಡು ಒಡೆದ ಹಂಚುಗಳ ನಡುವೆ ಆಕಾಶಕ್ಕೆ ಮುಖ ಮಾಡಿ ನಿಲ್ಲುತ್ತಿದ್ದ. ತಾತಪ್ಪ ಬೆದರಿಸುತ್ತಿದ್ದನಾದರೂ,ಇವನ ಹುಚ್ಚಾಟಕ್ಕೆ ತಾತಪ್ಪ ಮತ್ತು ನರಸಮ್ಮ ತಮ್ಮ ತಾಪತ್ರಯಗಳ ನಡುವೆ ನಗುವನ್ನು ಚಿಮ್ಮಿಸಿ ಮಗನ ನಟನೆಗೆ ಬೇರಾಗುತ್ತಿದ್ದರು. ಬರುತ್ತಿದ್ದ ಮಿಂಚುಗಳೆಲ್ಲವೂ ನಮ್ಮವೇ ಫೋಟೋ ತಗೆಯುತ್ತಿರುವಂತೆ ಕಾಣುತ್ತಲ್ವಾ ಅಂದುಕೊಂಡು ಅವುಗಳಿಗೆ ಕಾಯುತ್ತ ಕುಳಿತುಕೊಳ್ಳುತ್ತಿದ್ದ. ಮಿಂಚಿನಿಂದ ಮೂಡುತ್ತಿದ್ದ ಆಕೃತಿಗಳಿಗೆ ಒಂದೊಂದು ಹೆಸರು ಇಡುತ್ತಾ ಅವುಗಳನ್ನೇ ನೋಡುತ್ತಾ ನಿಂತುಬಿಡುತ್ತಿದ್ದ. ಕೆಲವು ಸಲ ಬಳ್ಳಿಯಂತೆ ಕಂಡರೆ ಇನ್ನು ಕೆಲವು ಸಲ ಗಿಡದ ರೆಂಬೆಯಂತೆ,ಸೌಕಾರ ಎತ್ತಿನ ಕೊಂಬಿನಂತೆ, ಹೀಗೆ ಅಂದುಕೊಳ್ಳುತ್ತಾ ಅಕ್ಕಂದಿರನ್ನ ನೋಡಲು ಕರೆಯುತ್ತಿದ್ದ. ಅವ್ವನ ಏರುದನಿಗೆ ಒಳಬರುತ್ತಿದ್ದನಾದರೂ ಮತ್ತೆ ಅವಳ ಮುಖವನ್ನು ನೋಡಿ ಹಾಜರಾತಿ ಕೊಟ್ಟು ಮತ್ತೆ ಹೋಗಿ ಒಡೆದ ಹೆಂಚುಗಳ ಕೆಳಗೆ ನಿಲ್ಲುತ್ತಿದ್ದ. ಮುತ್ತ್ಯಾ ಸಣ್ಣಹನಿ ಮಳೆಯಲ್ಲಿ ಅವ್ವನ ಕಣ್ಣು ತಪ್ಪಿಸಿ ಗೆಳೆಯರೊಂದಿಗೆ ಆಡುವಾಗ ನಿನ್ನೆ ಕಂಡ ಮಿಂಚುಗಳ ಬಗ್ಗೆ ಉತ್ಸುಕನಾಗಿ ಬೆರಗಾಗುವಂತೆ ಹೇಳುತ್ತಿದ್ದ ‘ದೇವ್ರ ನಾವ್ ಆಡುದನ್ನ ಫೋಟೋ ತಗೀತಾನ ಅದ್ಕ ಹಂಗ ಮಿಂಚತೈತಿ ಅಂತ ಆಡುವಾಗ ಜೊತೆಯಿರುತ್ತಿದ್ದ ಗೆಳೆಯರಿಗೆ ಹೇಳಿ ಖುಷಿಪಡುತ್ತಿದ್ದ. ಯಾವಾಗಲೂ ತಡವಾಗಿ ಬರುತ್ತಿದ್ದ ಅಪ್ಪನ ದಾರಿ ಕಾಯೋ ನೆಪದಲ್ಲಿ ಮಿಂಚಿಗಾಗಿ ಕಾಯುತ್ತಿದ್ದ. ಸಣ್ಣ ಮಿಂಚಿಗೆ ಅಯ್ಯೋ ಅಯ್ಯೋ ಎನ್ನುತ್ತಾ ತಡಬಡಸಿ ಫೋಟೋಗೆ ನಿಲ್ಲುವಂತೆ ನಿಲ್ಲುತ್ತಿದ್ದ. ಮಿಂಚು ಕ್ಷಣಾರ್ಧದಲ್ಲಿ ಬಂದು ಕಣ್ಮರೆಯಾದರೆ ಅಯ್ಯೋ ಚಲೋ ನಿಲ್ಲಲಿಲ್ಲ ಅಂತ, ದೊಡ್ಡದಾಗಿ ಮಿಂಚಿದರೆ ‘ಅಬ್ಬಾ ಫೋಟೋ ಮಸ್ತ್ ಬಂದಿರಬೇಕ್ ‘ಅಂತ ಹಲ್ಲು ತೆರೆಯುತ್ತಿದ್ದ. ಅವನನ್ನೇ ಅನುಕರಿಸುವಂತೆ ಗೆಳೆಯರೆಲ್ಲರೂ ಅವನಿಗೆ ಹೊಂದಿಕೊಂಡು ನಿಲ್ಲುತ್ತಿದ್ದರು.

ಆ ವರ್ಷ ಯಾವ ಮಳೆಯು ವಿಫಲವಾಗದೆ ನಿರಂತರ ಜಡಿಯುತ್ತಲೇ ಇದ್ದವು. ಕೆಲಹೊತ್ತಿನ ಮಳೆ ಕೊಟ್ಟ ಬಿಡುವಿನಲ್ಲಿ ಮುತ್ತ್ಯಾನನ್ನು ಮಾಳಿಗೆ ಮೇಲೆ ಹೆಂಚುಗಳನ್ನು ತಗೆದು ಬೇರೆ ಹಾಕಲು ಅಥವಾ ಗಾಳಿಗೆ ಆಯಾ ತಪ್ಪಿದ ಹೆಂಚುಗಳನ್ನು ಸರಿಪಡಿಸಲು ಹತ್ತಿಸಿದರೆ ನಿರಂತರ ಮಳೆಗೆ ನೆನೆದು ಮೃದುವಾಗಿದ್ದ ಹೆಂಚುಗಳೆಲ್ಲ ಫಳಫಳ ಅಂತ ಒಡೆಯತೊಡಗಿದವು. ಸಾವಿರಮಲ್ಲಿಗೆ ತೂಕವಿರುವ ಮುತ್ತ್ಯಾ ಕೂಡ ನೆನದ ಹೆಂಚುಗಳಿಗೆ ಭಾರವಾಗತೊಡಗಿದ್ದ. ಇದೊಂದು ಮಳೆಗಾಲ ಕಳೆದರೆ ಅಥವಾ ಜಡಿಮಳೆಯ ಮಧ್ಯ ಒಂದು ಹೊತ್ತಿನ ಬಿಸಿಲು ಬಿದ್ದರೆ ಮನೆಯ ಮಾಳಿಗೆ ಬಿಚ್ಚಿ,ಹೆಂಚುಗಳ ಮಧ್ಯ ಸಿಕ್ಕ ಪರಂಗಿ ತಪ್ಪಲವನ್ನ,ಗೊಬ್ಬರಗಿಡದ ಎಲೆಗಳನ್ನ ಸ್ವಚ್ಛಗೊಳಿಸಿ,ಒಡೆದ ಹೆಂಚುಗಳನ್ನು ತೆಗೆದು, ಅರ್ಧಬೆಲೆಗೆ ಕೊಂಡಿಟ್ಟ ಹಳೆ ಹೆಂಚುಗಳನ್ನು ಹಾಕಬೇಕೆಂದುಕೊಂಡರೂ ಮಳೆಯು ಬಿಡುತ್ತಿಲ್ಲ. ಮುತ್ತ್ಯಾನನ್ನು ಹೆಂಚುಗಳು ಸರಿ ಮಾಡಲು ಹತ್ತಿಸಿದ ತಪ್ಪಿಗೆ ಈಗ ಮತ್ತೆರಡು ಹೆಂಚುಗಳು ಒಡೆದು ಮತ್ತಷ್ಟು ನೀರು ಸುರಿಯುವಂತಾಯಿತು. ಸಾಲದಕ್ಕೆ ಗೋಡೆಗುಂಟ ನೀರು ಇಳಿದು ಗೋಡೆಗೆ ಮೆತ್ತಿದ ಮಣ್ಣು ಬಿಳ್ಳುತ್ತಿದೆ,ಅದು ಯಾವಾಗ ಬಿಳ್ಳುತ್ತೊ. . . ಅಂತ ಪದೇ ಪದೇ ನರಸಮ್ಮ ಬಂದು ಗೋಡೆಯನ್ನು ನೋಡಿ ಲೋಚಗುಟ್ಟಿ ಹೋಗುತ್ತಿದ್ದಳು.

ನರಸಮ್ಮ ಯಾವಾಗ ತಾತಪ್ಪನ ಮನೆಯ ಹೊಸ್ತಿಲವನ್ನ ತುಳಿದಳೋ ಅವಾಗಿನಿಂದ ಇಲ್ಲಿವರೆಗೂ ಮನೆಯ ಸ್ಥಿತಿ ಹಾಗೆಯೇ ಇದೆ. ಅಸಲಿಗೆ ತಾತಪ್ಪ ಒಳ್ಳೆ ದುಡಿತಯುಳ್ಳವನೆಂದು ತಿಳಿದೇ ನರಸಮ್ಮನ ಅಪ್ಪ ಅವಳನ್ನ ಆ ಮನೆಗೆ ಧಾರೆಯರೆದು ಕೊಟ್ಟಿದ್ದು. ಆದರೆ ಅವಳು ಬಂದಾಗಿನಿಂದ ಆ ಮನೆಯ ಎತ್ತರವಾಗಲಿ,ಅಗಲವಾಗಲಿ ಬೆಳೆದಂತೆ ಕಾಣುತ್ತಿಲ್ಲ. ಬಹಳ ವರ್ಷಗಳಿಂದ ಹಾಗೆ ಇದೆ. ಅದೇ ಮನೆ ಅವಳು ನೋಡಿಕೊಂಡು ಬಂದ ಮನೆ, ಆದರೆ ಹಿತ್ತಲಿನಲ್ಲಿ ಕಾಂಪೋಂಡ ಅನ್ನೋ ತರ ನೆಟ್ಟ ಹಾಲುಕಳ್ಳಿಯ ಬೇಲಿಯು ಮಳೆಗಾಲದಲ್ಲಿ ಬಲವಾಗಿ ದೆವ್ವದಂತೆ ಬೆಳೆದಿದ್ದರಿಂದ ತಾತಪ್ಪನ ಕುಡುಗೋಲಿಗೆ ಆಗಾಗ ಕತ್ತರಿಸಿ ಬಿಳ್ಳುತ್ತೇ, ಮತ್ತೆ ಮಳೆಗಾಲ ಮುಗಿಯುತ್ತಿದಂತೆ ಚಿಗುರಿ ನಿಲ್ಲುತ್ತೆ. ಆ ಕಳ್ಳಿಬೇಲಿಯ ಪಕ್ಕದಲ್ಲೇ ಓಣಿಯ ಎಲ್ಲರೂ ಹೆಣ್ಣುಮಕ್ಕಳು ಹಬ್ಬಹರಿದಿನಕ್ಕೆ ಚಂದಾಗಿ ಅಲಂಕಾರಗೊಂಡು ಬೆಳಗಿನ ಸೂರ್ಯನೊಂದಿಗೆ ಬರುತ್ತಿದ್ದ ‘ರೋಕಡಿ’ಅಂತಲೇ ಪ್ರಸಿದ್ದಿಯಾದ ಫೋಟೋಗ್ರಾಫರ ಕಡೆಯಿಂದ ಫೋಟೋವನ್ನು ತೆಗಿಸಿಕೊಳ್ಳುವದು. ಫೋಟೋದಲ್ಲಿ ಅಚ್ಚಹಸಿರು ಚನ್ನಾಗಿ ಬರುತ್ತೆ ಅನ್ನೋ ಆಸೆಯಿಂದ ಅದರ ಪಕ್ಕ ನಿಂತು ಎಲ್ಲರೂ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಫೋಟೋಗ್ರಾಫರ್ ಪ್ಲಾಶ್ ಮಾಡಿದಾಗ ಬರುವ ಬೆಳಕು ಮಿಂಚನ್ನೇ ಹೋಲುತ್ತಿದ್ದರಿಂದ ಅಂದು ಅಪ್ಪ ಮಿಂಚಿನ ಬಗ್ಗೆ ಹೇಳಿದ್ದು ನಿಜವಿರಬಹುದುವೆಂದುಕೊಂಡಿದ್ದನು. ಈ ಸನ್ನಿವೇಶವು ಸಹ ಅದನ್ನೇ ಪ್ರತಿನಿಧಿಸುತ್ತಿತ್ತು.

ತಾತಪ್ಪ ದುಡಿದ ದುಡ್ಡು ಅಪ್ಪನ ಕ್ಯಾನ್ಸರ ಹುಣ್ಣನ್ನು ವಾಸಿ ಮಾಡಲು ಸೌಕಾರನಿಂದ ಪಡೆದ ಸಾಲಕ್ಕೆ, ಮತ್ತೆ ಸ್ವಲ್ಪ ಹೊಟ್ಟೆಗೆ ಸಾಕಾಗುತ್ತಿತ್ತು. ಅವನ ಅಪ್ಪ ಕ್ಯಾನ್ಸರನೊಂದಿಗೆ ಕಳೆದುಹೋದ,ಆದರೆ ಮಾಡಿದ ಸಾಲ ಹೆಗಲ ಮೇಲೆ ಹೆಣಭಾರವಾಗಿ ಹಾಗೆಯೇ ಇತ್ತು. ಅದನ್ನು ಮುಟ್ಟಿಸುವ ಹಠಕ್ಕೆ ಅಥವಾ ಸಮಯಕ್ಕೆ ಸರಿಯಾಗಿ ಮಾಡಿದ ಸಹಾಯ ನೆನದು ಮನೆ ಬಾಳ್ವೆಯನ್ನು ಬದಿಗಿಟ್ಟು ಧಣಿಯ ಮನೆಗೆ ಜೀತದಾಳಗಿ ದುಡಿಯುತ್ತಿರುವ ತಾತಪ್ಪನಿಗೆ ಜೀವನವೇ ಸಮುದ್ರದಲ್ಲಿ ಈಜಿದಂತೆ ಆಗಿತ್ತು. ಉಳಿದಂತೆ ತಿಂಗಳಿಗೊಮ್ಮೆ ಬರುವ ಯಾವದೋ ಹಬ್ಬಕ್ಕೆ ಕನಿಷ್ಟಪಕ್ಷ ಬೆಲ್ಲಬೆಳೆಯಾದರು ಬೇಡವೇ. . . ?ಅದಕ್ಕೂ ಯಾವಾಗಲಾದರೂ ದುಡಿದು ದಣಿದಿದ್ದ ದಣಿವಿಗೆ ಸೌಕಾರ ರಾತ್ರಿ ಎಣ್ಣೆಗೆ ಅಂತ ಕೊಟ್ಟಿದ್ದ ಚಿಲ್ಲರೆಯಲ್ಲೇ ಅದರ ಖರ್ಚು ನೀಗುತ್ತಿತ್ತು. ಕೆಲವು ಸಲ ಹಬ್ಬ ಹರಿದಿನಗಳು ಸೌಕಾರ ಮನೆಯಲ್ಲಿ ಕೊಡುತ್ತಿದ್ದ ತಂಗಳನಲ್ಲಿಯೇ ಸಂಭ್ರಮಗೊಳ್ಳುತ್ತಿದ್ದವು. ಇನ್ನು ಮನೆ ರಿಪೇರಿಗೆ ಅಂತ ಹಣ ಉಳಿಸುವುದಾದರು ಹೇಗೆ ಉಳಿಸಲು ಹಣ ಎಲ್ಲಿಂದ ಬರಬೇಕು.

ಅದೆಷ್ಟು ಚುನಾವಣೆಗಳು ಬಂದವು,ಹೋದವು. ಬಂದವರೆಲ್ಲ ಮನೆಯವರಂತೆ, ಬಂಧುಬಗಿನಿಯರಂತೆ, ನುಡಿಯಲ್ಲಿ ಶ್ರೀರಾಮಚಂದ್ರನಂತೆ ನಡಿದುಕೊಂಡು ಚುನಾವಣೆ ನಂತರದಲ್ಲಿ ಅಪರಿಚಿತರಂತೆ ದೂರ ಹಾಯುತ್ತಿದ್ದದ್ದು ನೋಡಿ ತಾತಪ್ಪ ಮನಸಿನಲ್ಲಿ ನೊಂದುಕೊಂಡಾನಾದರೂ ಬಾಯಿಬಿಟ್ಟು ಕೇಳಿದವನಲ್ಲ, ಸೌಕಾರನ ಮಾತನ್ನು ಕೇಳದವರೆ ಊರಿನಲ್ಲಿರಲಿಲ್ಲ ಆದರೆ ಅವರ ಮುಂದೆ ‘ನನಗೆ ಮನೆಯನ್ನು ರಿಪೇರಿಯೋ ಇಲ್ಲವೇ ಸಣ್ಣದಾಗಿ ಕಟ್ಟಿಕೊಳ್ಳಲು ಪಂಚಾಯತಿಯಿಂದ ಧನಸಹಾಯ ಮಾಡಿಸಿ ಒಂದು ಉಪಕಾರ ಮಾಡಿ’ ಅಂತ ಹೇಳುವ ಧೈರ್ಯ ತಾತಪ್ಪನ ಬಳಿ ಇರಲಿಲ್ಲ. ಇನ್ನು ನರಸಮ್ಮ ಆಕಸ್ಮಿಕವಾಗಿ ಪಂಚಾಯತಿ ದಾರಿಯಲ್ಲಾಗಲಿ ಮನೆಯ ಮುಂದೆ ಹಾಯ್ದು ಹೋಗುತ್ತಿರುವಾಗ ಅಥವಾ ರೇಷೆನ್ ತರಲು ಹೋದಾಗ ಎದುರು ಸಿಕ್ಕ ನೆಂಬರ್ ಲಚ್ಚಪ್ಪನನ್ನು ಕೇಳಲು ನರಸಮ್ಮ ಎಲ್ಲಿಂದಲೋ ಮಾತನ್ನು ಆರಂಭಿಸಿ ಕೊನೆಗೆ ಮನೆ ಸೋರುವ ವಿಷಯದಲ್ಲಿ ಮುಗಿಸುತ್ತಿದ್ದಳು.
“ಸರ್ಕಾರ ಬಾಳ ಯೋಜನೆ ತಂದೆತಿ ಅದ್ರ ಅವು ನಿಮಗ ಅಲ್ಲ, ಈ ಸಲ ನಿಮ್ಮ ಮಂದಿಗೆ ಬಂದಿಲ್ಲ ಬಂದ್ರ ಹೇಳ್ತೇವಿ. ಈಗ ಬಂದಿದ್ವ ಎಲ್ಲ ಅವ್ರಿಗೆ,ಇವ್ರ್ಗೆ,ಹರಿಜನ,ಗಿರಿಜನ ಅಂತ ಕೊಟ್ಟೇವಿ,ನಾ ಅಡ್ಡಾಡುವಾಗೊಮ್ಮೆ ನೀ ಕರೆದ ತಡೆದ ಕೇಳಬ್ಯಾಡ” ಬಂದ್ರ ನಾನ ಮನೆಮಠ ಬಂದ ಹೇಳ್ತೇನಿ ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟಿದ್ದ. . . !

ಇವನೆ ಅಲ್ಲವೇ ಅವತ್ತು ನೀವ್ ಯಣ್ಣ,ಯಕ್ಕ ಇದ್ದಂಗ, ಅಪ್ಪ,ಅವ್ವ ಇದ್ದಂಗ ಅಂತ ನೂರರ ಎರಡು ನೋಟನ್ನ ಬೇಡಂದ್ರೂ ಅಂಗಿಯ ಕಿಸೆದಾಗ ಇಟ್ಟವನು. ಬಗ್ಗಿ ಬರುತ್ತಿದ್ದ ಮನೆಯನ್ನು ನೋಡಿ “ನಾ ಪಂಚಾಯತಿ ನೆಂಬರ್ ಆದ್ರ ನಿಮ್ಗ ಒಂದ್ ಪ್ಲಾಟ್ ಪಕ್ಕಾ ಹಾಕಸ್ತೀನಿ ನಂಗ್ ಓಟ್ ಹಾಕ್ರಿ. ಯಕ್ಕಾ ಅಂತ ಬಾಯ ತುಂಬ ಯಕ್ಕಾ ಅಂತ ಅಂದ ಮಾತು ಕೊಟ್ಟವಾ. . . . ?! ಎಂದು ಯೋಚಿಸುತ್ತಾ ಸಿಟ್ಟು ಬಂದಂತಾಗಿ ಕೈಬೆರಳನ್ನು ಒತ್ತಿ ಲಟ ಲಟ ಸಪ್ಪಳದೊಂದಿಗೆ ಏನೋ ಗುನುಗಿದಳು. ಸಾವಿರಾರು ರೂಪಾಯಿಗಳನ್ನ ಕೊಟ್ಟರೆ ಕೊಡ್ತಾರ್ ಅಂತ ಎಲ್ಲಿಂದ ತರೋದು ಅಸ್ಟ ರೋಖ. ಹೊಲ ಮನಿ ಇದ್ದವರಿಗೆ ಮನಿ ಕೊಡ್ತಾರ್. ಆದ್ರ ನಮ್ಮಂತವರಿಗೆ ಯಾರ್ ಕೊಡಬೇಕ್ ಎನ್ನುತ್ತಾ ಸೀರೆ ಸೆರಗನ್ನು ತಲೆಯ ಮೇಲೆ ಎಳೆದುಕೊಳ್ಳುತ್ತಾ ಬರುವ ಮಳೆಯ ಹನಿಯನ್ನು ತಲೆಗೆ ಬಿಳ್ಳದಂತೆ ತಡೆದುಕೊಳ್ಳುತ್ತಾ ಮನೆ ಕಡೆ ಹೆಜ್ಜೆ ಹಾಕಿದಳು

ರಾಯಸಾಬ ಎನ್. ದರ್ಗಾದವರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x