ಗೀತ ಸಂತ ಸುಬ್ಬಣ್ಣ: ಡಾ. ಹೆಚ್ ಎನ್ ಮಂಜುರಾಜ್

ಮಾನವನೆದೆಯಲಿ ಆರದೆ ಉರಿಯುತಿದ್ದ ಪ್ರಜ್ವಲಿಪ ಗೀತಜ್ಯೋತಿ ಶಿವಮೊಗ್ಗ ಸುಬ್ಬಣ್ಣ ಎಂಬ ಸುಗಮ ಸಂಗೀತದರಸ ಮೊನ್ನೆ ಶಾಂತವಾದರು. ಕನ್ನಡ ಸುಗಮ ಸಂಗೀತವನು ಜನಪ್ರಿಯಗೊಳಿಸಿದವರು ಅವರು. ಸಿ ಅಶ್ವತ್ಥ್ ಅವರ ಹೆಸರಿನೊಂದಿಗೆ ಬೆಸೆದಿದ್ದ ತಂತು. ತಮ್ಮ ಎಂಬತ್ನಾಲ್ಕರ ವಯೋಮಾನದಲಿ ಅಸ್ತಂಗತರಾದ ಹಾಡು ಪಾಡಿನ ನೇಸರನೀತ.

ಇವರ ನಿಜ ನಾಮಧೇಯ ಜಿ ಸುಬ್ರಹ್ಮಣ್ಯಂ. ತಂದೆ ಗಣೇಶರಾವ್, ತಾಯಿ ರಂಗನಾಯಕಮ್ಮ. ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲಿ 1938 ರಲಿ ಜನಿಸಿದರು. ಪ್ರತಿದಿನವೂ ಪೂಜೆ ಪುರಸ್ಕಾರ ನಡೆಯುತಿದ್ದ ಮನೆತನ. ತಾತನವರಾದ ಶಾಮಣ್ಣನವರು ಸಂಗೀತ ಕೋವಿದರು. ಇವರ ರಕುತವೇ ಮುಂದೆ ಸುಬ್ಬಣ್ಣನವರಲಿ ಹರಿದು ಸಹೃದಯರ ಕಡಲ ಕಿನಾರೆಗೆ ಅಲೆ ಅಲೆಯಾಗಿ ಹೊಮ್ಮಿತು; ತಟ್ಟಿತು.

ಗಾಯನ ಕ್ಷೇತ್ರದಲಿ ಹೆಸರು ಮಾಡಿದ ಬಿ ಕೆ ಸುಮಿತ್ರ ಅವರೊಂದಿಗೆ ಕೆಲ ವರುಷಗಳ ಕಾಲ ಶಾಸ್ತ್ರೀಯ ಸಂಗೀತವನು ಅಭ್ಯಾಸ ಮಾಡಿದ್ದುಂಟು. ಆದರೆ ವ್ಯಾಸಂಗದ ಕಡೆಗೆ ನಿಗಾ ವಹಿಸಿದ್ದರಿಂದ ಅಭ್ಯಾಸ ನಿಂತಿತು. ಎಲ್‍ಎಲ್‍ಬಿ ಪದವೀಧರರಾಗಿ ವಕೀಲರಾದರು. ನೋಟರಿಯಾಗಿ ಶ್ರದ್ಧೆಯಿಂದ ಕರ್ತವ್ಯಪರರಾದರು. 1963 ರ ವೇಳೆಗೆ ಆಕಾಶವಾಣಿಯ ಗಾಯಕರಾದಾಗ ಮತ್ತೆ ಅವರಲ್ಲಿ ಹುದುಗಿದ್ದ ಸಂಗೀತ ಗಂಗೆ ಭೋರ್ಗರೆದಳು.
ಸಿನಿಮಾ ರಂಗಕೂ ಪ್ರವೇಶ ಪಡೆದರು. ಜ್ಞಾನಪೀಠ ಪುರಸ್ಕೃತರಾದ ಚಂದ್ರಶೇಖರ ಕಂಬಾರರ ಕರಿಮಾಯಿ ಚಿತ್ರದಲಿ ಹಿನ್ನೆಲೆ ಗಾಯಕರಾದರು. 1979 ರ ವೇಳೆಯಲ್ಲಿ ತೆರೆ ಕಂಡ ಇದೇ ಕಂಬಾರರ ಕಾಡುಕುದುರೆಯ ಹಾಡು ಸುಬ್ಬಣ್ಣನವರಿಗೆ ಅಪಾರ ಖ್ಯಾತಿ ತಂದು ಕೊಟ್ಟಿತು. ಈ ಹಾಡಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದ್ದು ಕನ್ನಡದ ಸಾಂಸ್ಕೃತಿಕ ಲೋಕಕೆ ದೊರೆತ ಬಹು ದೊಡ್ಡ ಸಮ್ಮಾನ; ನಮ್ಮೆಲ್ಲರ ಅಭಿಮಾನ.

‘ಹೌಹಾರಿತ್ತ, ಹರಿದಾಡಿತ್ತ, ಹೈ ಹೈ ಅಂತ ಹಾರಿ ಬಂದಿತ್ತʼ ಎನುವ ಸಾಲುಗಳನು ಹಾಡುವಾಗ ಮತ್ತು ‘ಒರತಿ ನೀರು ಭರ್ತಿಯಾಗಿ ಹರಿಯೋ ಹಾಂಗ ಹೆಜ್ಜೀ ಹಾಕಿ ಹತ್ತಿದವರ ಎತ್ತಿಕೊಂಡು ಏಳಕೊಳ್ಳ ತಿಳ್ಳೀ ಹಾಡಿ ಕಳ್ಳೆ ಮಳ್ಳೆ ಆಡಿಸಿ ಕೆಡವಿತ್ತʼ ಎಂಬ ಕ್ರಿಯಾಪದಗಳನು ಶಬ್ದದಲೇ ಅಭಿನಯಿಸಿ ಗೇಯತೆಯನು ತುಂಬಿದ ಸುಬ್ಬಣ್ಣ ಸದಾ ಕಿವಿಯಲಿ ಗುಂಯ್ ಗುಡುತಿದ್ದರು. ಕನ್ನಡಕೆ ಮೊದಲ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟರು. ಹಾಡುಗಳ ಉಸಿರಾಗಿಸಿಕೊಂಡರು. ಬದುಕನ್ನು ಧನ್ಯವಾಗಿಸಿಕೊಂಡರು. ಕುವೆಂಪು, ಬೇಂದ್ರೆ, ಲಕ್ಷ್ಮೀನಾರಾಯಣ ಭಟ್ಟರ ಪದ್ಯಗಳಿಗೆ ಸ್ವರ ಸಂಯೋಜಿಸಿ ಹಾಡಿದರು. ಮನೆ ಮಾತಾದರು.

ಕುವೆಂಪು ಅವರ ‘ಆನಂದಮಯ ಈ ಜಗಹೃದಯʼ ಎಂಬ ಆಧ್ಯಾತ್ಮಿಕ ಭಾವಗೀತೆಗೊಂದು ಏರೆತ್ತರದ ದನಿಯಾದರು. ‘ಬಿಸಿಲಿದು ಬರಿ ಬಿಸಿಲಲ್ಲವೋ?ʼ ಎಂದು ಶಾರೀರವನು ಎತ್ತರಿಸುವಾಗ ನಮ್ಮ ಇಡೀ ಶರೀರ ಪುಳಕಗೊಳ್ಳುತ್ತದೆ. ‘ಸೂರ್ಯನು ಬರಿ ರವಿಯಲ್ಲವೋ!ʼ ಎಂದಾಗ ಅಚ್ಚರಿಯಾಗುತ್ತದೆ. ಇಂಥ ದಿವ್ಯಾನುಭವವು ಎಲ್ಲರ ಗಾಯನದಲೂ ಸಾಧ್ಯವಾಗದು. ಹಾಡುವ ವ್ಯಕ್ತಿತ್ವ ಮತ್ತು ಗೀತದ ಅಸ್ತಿತ್ವ ಎರಡೂ ಮಿಳಿತಗೊಳ್ಳಬೇಕು. ಟಿ ಎಸ್ ಎಲಿಯಟ್ ಹೇಳುವಂತೆ ವ್ಯಕ್ತಿತ್ವ ಮತ್ತು ಅಸ್ತಿತ್ವಗಳೆರಡೂ ಕೊನೆಯಲ್ಲಿ ನಿರಸನಗೊಳ್ಳಬೇಕು. ಆಗ ಕವಿ, ಹಾಡುಗಾರ ಮತ್ತು ಹಾಡು- ಈ ಮೂರೂ ಮಾಯವಾಗಿ ಅಲ್ಲಿ ಶುದ್ಧ ಸಲಿಲ ಸಂಭ್ರಮಿಸುವುದು, ಸಂತಸ ಸಾಧ್ಯವಾಗುವುದು, ಅಹಮಿಕೆ ನಾಶಗೊಳ್ಳುವುದು.

‘ಚಿಂತೆ ಏತಕೆ ಗೆಳತಿ? ಜೀವ ಭಾವ ಹೆಗಲ ಹೂಡಿ, ನೋವು ನಲಿವು ಕೀಲಾ ಮಾಡಿ ಸಾಗುತಿಹುದು ಬಾಳ ಗಾಡಿʼ ಎಂದು ವಿಷಣ್ಣರಾಗಿ ಹಾಡುವಾಗ ಸುಬ್ಬಣ್ಣ ದುಃಖಿತರ ಸಾಂತ್ವನವಾದರು. ‘ಅಳಬೇಡ ತಂಗಿ ಅಳಬೇಡ, ನಿನ್ನ ಕಳುಹ ಬಂದವರಿಲ್ಲಿ ಉಳುಹಿಕೊಂಬುವರಿಲ್ಲʼ ಎಂದು ಶರೀಫರ ಹಾಡನುಸುರುವಾಗ ಕಣ್ಣೀರನೊರೆಸುವ ಸ್ನೇಹಿತರಾದರು. ‘ಒಮ್ಮೆ ಹೂದೋಟದಲ್ಲಿʼ ಎಂಬ ಹಾಡನ್ನು ಶುರು ಮಾಡುವಾಗ ಕುತೂಹಲಿಯಾದರು. ‘ಹಾಕಿದ ಜನಿವಾರವ, ಸದ್ಗುರುನಾಥʼ ಎನ್ನುವಾಗ ಸಂಭ್ರಮಿಸುವ ಮಗುವಾದರು. ‘ಮಾನವನೆದೆಯಲಿ ಆರದೆ ಉರಿಯಲಿ ದೇವರು ಹಚ್ಚಿದ ದೀಪ; ರೇಗುವ ದನಿಗೂ ರಾಗವು ಒಲಿಯಲಿ ಮೂಡಲಿ ಮಧುರಾಲಾಪʼ ಎಂಬ ಕವನವನು ಜೀವ ತುಂಬಿ ಹಾಡಿದರು. ಸ್ಪಷ್ಟ, ನಿರ್ದಿಷ್ಟ, ಗಂಭೀರ ನಿನಾದ ಇವರ ಸಿರಿಕಂಠದ ವೈಶಿಷ್ಟ್ಯ. ಹೆಸರು ಹುಡುಕುವುದೇ ಬೇಡ, ಹಾಡಿನ ಮೊದಲ ಸಾಲನು ತನ್ಮಯದಿಂದ ಆಲಿಸುವಾಗ ಇದು ಶಿವಮೊಗ್ಗ ಸುಬ್ಬಣ್ಣನವರ ದನಿ ಎಂದು ಯಾರೂ ಗುರುತು ಹಚ್ಚುವಂಥ ಸ್ವೋಪಜ್ಞ ಛಾಪು; ಘನತೆಯ ಗಾನ ಗಾರುಡಿಯಿಂಪು! ಹೀಗಾಗಿ ಈತ ಸಂಗೀತ ಸಂತ, ಈ ಲೋಕನಾಕ ಇರುವತನಕ ಈ ಮಾತು ಸಂತತ.

2008 ರಲ್ಲಿ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸಂದಿತು. ಪತ್ನಿಯ ಹೆಸರು ಶಾಂತ, ಮಕ್ಕಳಾದ ಶ್ರೀರಂಗ ಮತ್ತು ಬಾಗೇಶ್ರೀ. ಇನ್ನೋರ್ವ ಸುಗಮ ಸಂಗೀತಗಾರರಾದ ನಗರ ಶ್ರೀನಿವಾಸ ಉಡುಪರು ಇವರ ಹೆಮ್ಮೆಯ ಬೀಗರು. ಇವರ ಮಗಳು ಹೆಸರಾಂತ ಗಾಯಕಿ ಅರ್ಚನಾ ಉಡುಪರೇ ಸುಬ್ಬಣ್ಣನವರ ಅಚ್ಚುಮೆಚ್ಚಿನ ಸೊಸೆ. ಹೀಗೆ ಇವರದು ಗೀತಮನೆತನ, ಹಾಡಿನ ಸಂಕೀರ್ತನ. ಬಿಸಿಲನೆರಚುವ ಆಗಸವೇ ತಂಪು ಮಳೆಯ ತರುವುದು, ಅಗ್ನಿಯುಗುಳುವ ಭುವಿಯೇ ಅನ್ನ ನೀಡುವುದು, ಗೀರಿ ಗಾಯ ಮಾಡುವ ಮುಳ್ಳ ನಡುವೆಯೇ ಹೂವು ನಗುವುದು, ಅಹಮಿನಂತರಾಳದಲೆಲ್ಲೋ ವಾತ್ಸಲ್ಯ ಬಿರಿದು ಧನ್ಯವಾಗುವುದು, ರೇಗುವ ದನಿಯಾಚೆ ಸಂತಾಪ ಹುಟ್ಟಿ ಅಂತರ್ಮುಖಿಯಾಗುವುದು. ಮಾನವತ್ವವು ದೇವತ್ವದ ಕಡೆಗೆ ಪಯಣಿಸುವುದು. ಇದು ಸುಬ್ಬಣ್ಣನವರು ಹಾಡಿದ ಒಟ್ಟೂ ಅಂತರಾಳದೊಡಲು; ಕೊನೆಗೂ ಮೈ ದೋರುವ ಮಮತೆಯ ಮಡಿಲು.

ಗೀತೆಗೆ ಜೀವಭಾವ ತುಂಬಿ
ರಾಗವ ಪಲುಕಿಸಿ
ಪಲ್ಲವಿಯ ಪರಿಮಳಿಸಿ
ಚರಣಗಳಲಿ ಸಂಚರಿಸಿ ವಿಜೃಂಭಿಸಿ
ನರನಾಡಿಯಲಿ ಸರಿಗಮದ ಘಮವ ಹರಿದಾಡಿಸಿ
ನಲಿಯುತಿದ್ದ ನಮ್ಮನೆಲ್ಲ ನಲಿಸಿ
ಗೇಯತೆಯ ನಭದಲಿ ತೇಲಾಡಿಸುತಿದ್ದ
‘ಶಿವಮುಖ ಸುಬ್ಬಣ್ಣʼನವರಿಗೆ ಗೌರವದ ವಿದಾಯ.
ಅವರು ತಮ್ಮ ಹಾಡುಗಳಲಿ ಸದಾ ಜೀವಂತ;
ನಮ್ಮೆದೆಯೊಲುಮೆಯಲಿ ಕಾಪಿಟ್ಟ ಭಾವಲಹರಿ
ಅವುಗಳ ಗುನುಗು ನಿತ್ಯ ನಿರಂತರ ಅನವರತ.
-ಡಾ. ಹೆಚ್ ಎನ್ ಮಂಜುರಾಜ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x