ನಿನ್ನ ಇಚ್ಛೆಯಂತೆ ನಡೆವೆ: ಮನು ಗುರುಸ್ವಾಮಿ

ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಾಣಸಿಗುವ ವಿಭಿನ್ನ ವ್ಯಕ್ತಿತ್ವದ ಬರಹಗಾರರು. ತಮ್ಮನ್ನು ಜರಿದವರಿಗೆ ತಮ್ಮ ಕವಿತೆಗಳ ಮೂಲಕವೇ ಉತ್ತರ ಕೊಟ್ಟು, ಓದಿದರೆ ಕೆ ಎಸ್ ನರಸಿಂಹಸ್ವಾಮಿ ಅವರ ಕವಿತೆಗಳನ್ನೇ ಓದಬೇಕು ಎನ್ನುವಷ್ಟರ ಮಟ್ಟಿಗೆ ಒಂದು ಕಾಲದಲ್ಲಿ ಜನಪ್ರಿಯರಾಗಿದ್ದ ಕವಿ. ‘ಮೈಸೂರು ಮಲ್ಲಿಗೆ’ ಕವನ ಸಂಕಲನದ ಮೂಲಕ ಕನ್ನಡಿಗರ ಮನಮನೆಯಲ್ಲಿ ಮಾತಾದ ಪ್ರೇಮಕವಿ; ಅಲ್ಲಲ್ಲ ದಾಂಪತ್ಯ ಕವಿ. ನವೋದಯ, ರೋಮ್ಯಾಂಟಿಕ್ ಚಳವಳಿಯ ಕಾಲಘಟ್ಟದಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳುವ ಕೆ ಎಸ್ ನ “ನಾನು ಬರೆದ ಕವಿತೆಗಳು ಪ್ರೇಮಕವಿತೆಗಳಲ್ಲ, ದಾಂಪತ್ಯ ಕವಿತೆಗಳೆಂದು” ಹೇಳಿಕೊಂಡಿದ್ದಾರೆ. ಹಳೆಮೈಸೂರು ಭಾಗದ ಸೊಂಪಾದ, ತಂಪಾದ ಭಾಷೆಯನ್ನು ತಮ್ಮ ಬರವಣಿಗೆಯಲ್ಲಿ ಮೈಗೂಡಿಸಿಕೊಂಡಿರುವ ಕವಿ ಮೂಲತಃ ಮಂಡ್ಯ ಜಿಲ್ಲೆಯ ಕಿಕ್ಕೇರಿಯವರು. ನವಿಲೂರು, ಹೊನ್ನೂರಿನ ಬಾಂಧವ್ಯದ ಬೆಸುಗೆ ಇವರ ಕವಿತೆಗಳ ಹೆಗ್ಗಳಿಕೆ. ಮೈಸೂರು ಮಲ್ಲಿಗೆಯಿಂದ ಹಿಡಿದು ಐರಾವತ, ತೆರೆದ ಬಾಗಿಲು, ಎದೆ ತುಂಬ ನಕ್ಷತ್ರ, ಮಲ್ಲಿಗೆಯ ಮಾಲೆ, ಹಾಡುಹಸೆವರೆಗೆ ಹತ್ತು ಹಲವಾರು ಜನಪ್ರಿಯ ಕವನ ಸಂಕಲನಗಳನ್ನು ಕನ್ನಡ ಸಾಹಿತ್ಯಕ್ಕೆ ಅರ್ಪಿಸಿದ್ದಾರೆ.

ಕೆ ಎಸ್ ನ ಮಧ್ಯಮ ವರ್ಗದ ಜನರ ಜೀವನವನ್ನು ವಿವಿಧ ಸ್ತರಗಳಲ್ಲಿ ಸರಳವಾಗಿ, ಆಡುಭಾಷೆಯಲ್ಲಿ, ನೈಜತೆಯೊಂದಿಗೆ, ವಾಸ್ತವತೆಯೊಂದಿಗೆ ತಮ್ಮ ಕವಿತೆಗಳಲ್ಲಿ ಕಟ್ಟಿಕೊಟ್ಟಿರುವುದು ವಿಶೇಷ. ಇವರ ಬಹುತೇಕ ಕವಿತೆಗಳು ದಾಂಪತ್ಯ ಗೀತೆಗಳಾಗಿ ಹೊಮ್ಮಿದ್ದರೂ, ಅವುಗಳಲ್ಲೂ ಶ್ರೀಸಾಮಾನ್ಯನೊಬ್ಬನ ಅನುರಾಗದ ಆಲಿಂಗನವಿರುವುದನ್ನು ನಾವು ಗಮನಿಸಬಹುದು.

ಮಧ್ಯಮ ವರ್ಗದ ಜನರ ನಿತ್ಯ ಜೀವನವನ್ನು ಸಹಜವಾಗಿಯೇ ತೆರೆದಿಡುವ ಇವರ ಪ್ರಸಿದ್ಧ ಕವಿತೆ ‘ಸಂಬಳದ ಸಂಜೆ’. ತಿಂಗಳಿಡೀ ದುಡಿದು, ತಿಂಗಳಾಂತ್ಯದಲ್ಲಿ ಸಂಬಳಕ್ಕಾಗಿ ಕಾಯುವ ವ್ಯಕ್ತಿಯ ಮುಖದಲ್ಲಿ ‘ಸಂಬಳದ ಸಂಜೆ’ ಆನಂದವನ್ನು ತಂದಿರುತ್ತದೆ. ಆದರೆ ತನ್ನ ನಿತ್ಯ ಜೀವನದ ವ್ಯವಹಾರದಿಂದ ಬಂದ ಹಣ ತುಂಡಾಗಿ ಹಂಚಿಕೆಯಾಗಬೇಕಾದಾಗ ಆತನಿಗಾಗುವ ನಿರಾಶೆ, ಹತಾಶೆ‌ ಹೇಳತೀರದು. ಈ ಹತಾಶೆ, ಹತಾಶೆಯಲ್ಲೂ ವಿನೋದ, ವಿನೋದ ಜೊತೆ ಪ್ರೇಮ ಒಟ್ಟಾಗಿ ಕೆ ಎಸ್ ನ ಅವರ ಸಂಬಳದ ಸಂಜೆ ಕವಿತೆಯಲ್ಲಿ ಮೂಡಿಬಂದಿದೆ.

ಸಂಬಳದ ಸಂಜೆ ಒಳಜೇಬು ಬೆಳಕಾಗಿರಲು
ಮುಗುಳುನಗೆ ಸೂಸಬೇಕು !
ತಂದ ಹಣ ತುಂಡಾಗಿ ತಲೆನೋವು ಬಂದಿರಲು
ಮಂದಲಗೆ ಹಾಸಬೇಕು

ಈ ಸಾಲುಗಳನ್ನು ಓದಿವ ಪ್ರತಿಯೊಬ್ಬ ಮಧ್ಯಮ ವರ್ಗದ ವ್ಯಕ್ತಿಯು “ಕವಿ ತನಗಾಗಿಯೇ ಹೀಗೆ ಬರೆದಿರಬಹುದೆ ?!” ಎಂದು ಅಚ್ಚರಿಪಡುವುದರಲ್ಲಿ ಎರಡನೇಯ ಮಾತಿಲ್ಲ. ಕಿರಿದಾದ ಮನೆಗೆ ದುಬಾರಿ ಬಾಡಿಗೆ, ನೀರು, ವಿದ್ಯುತ್ತಿನ ಅವ್ಯವಸ್ಥೆ, ಮನೆ ಕಿರಿದಾಗಿರುವುದರಿಂದ ಸ್ಥಳಾವಕಾಶದ ಅಭಾವ ಹೀಗೆ ಶ್ರೀಸಾಮಾನ್ಯನ ನಿತ್ಯ ಬದುಕಿನ ಹೋರಾಟವನ್ನು ಕವಿ ಬಹಳ ಸರಳವಾದ ಭಾಷೆಯಲ್ಲಿ ವ್ಯಕ್ತಪಡಿಸಿದ್ದಾರೆ. ತಮ್ಮ ಪ್ರೀತಿಯ ಮಡದಿಗೆ ಕೊಡಿಸಿದ ಸೀರೆಯ ಬಾಕಿ, ಹಾಲಿನ ಲೆಕ್ಕ, ತರಕಾರಿಯವಳು, ಪತ್ರಿಕೆಯ ಹುಡುಗ, ಸೌದೆಯವ ಅಂಗಡಿಯ ಶೆಟ್ಟಿ ಹೀಗೆ ಬಂದ ಹಣದಲ್ಲಿ ಎಲ್ಲರನ್ನೂ ಸಮಾಧಾನ ಪಡಿಸುವ ಪರಿಯನ್ನು ಕವಿ ಹುಡುಕುವ ಸಂದರ್ಭ ಹೆಚ್ಚು ಪ್ರಸ್ತುತ. ಕವಿ ಇಲ್ಲಿರುವ ಯಾರಿಗೆ ಬೇಕಾದರೂ ಸಬೂಬು ಹೇಳಿ ಮುಂದಿನ ತಿಂಗಳು ಕೊಟ್ಟೇನು ಎನ್ನಬಹುದು. ಆದರೆ ತಮ್ಮ ಪ್ರೀತಿಯ ಮಡದಿಗೆ ಕೊಡಿಸಿದ ಬಳೆಗಳಿಗೆ ಸೂಕ್ತ ಹಣವನ್ನು ಕೊಟ್ಟು ಬಿಡುವೆನು ಎನ್ನುತ್ತಾರೆ; ಕಾರಣ ಇಲ್ಲಿದೆ –

ಬಳೆಗಾರ ಬಂದ – ‘ತಾಯೀ!’ ಎಂದ (ಅವಳಿಲ್ಲ),
ಕೆಮ್ಮುವುದು ಪಾಪ ! ಪ್ರಾಣಿ;
ಇವನದನು ಕೊಟ್ಟು ಬಿಡುವೆನು ಚರ್ಚೆ ಬೇಕಿಲ್ಲ
ನೊಂದಾಳು ನನ್ನ ರಾಣಿ

ಇಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದರೆ ತಮ್ಮ ಮಡದಿಯ ಮೇಲೆ ಕವಿಗಿರುವ ಒಲವು. ಇದು ಮಧ್ಯಮ ವರ್ಗದ ವ್ಯಕ್ತಿಯೊಬ್ಬರ ಬದುಕು ಎಂದಿಟ್ಟುಕೊಂಡರೂ ಆ ವ್ಯಕ್ತಿ ಎಷ್ಟೇ ಆರ್ಥಿಕ ಸಂಕಷ್ಟದಲ್ಲಿದ್ದರೂ ಮಡದಿಯ ಮೇಲಿಟ್ಟಿರುವ ಒಲವಿನಲ್ಲಿ ಕಿಂಚಿತ್ತು ಕಡಿಮೆಯಾಗದಂತೆ ನಡೆದುಕೊಳ್ಳುವ ರೀತಿ ಹಾಗೂ ಬಳೆ ಕೊಡಿಸಿದ ಮೇಲೆ ಬಳೆಗಾರನಿಗೆ ಹಣ ಕೊಡದಿದ್ದರೆ ಅದರಿಂದ ಆಕೆಗೆ ಬೇಸರ ಉಂಟಾಗಬಹುದೆಂದು ಯೋಚಿಸುವ ರೀತಿ ಮನೋಜ್ಞವಾಗಿದೆ. ಹೀಗೆ ಬಂದ ಹಣವೆಲ್ಲ ತುಂಡಾಗಿ ಖಾಲಿ ಕಿಸೆ ಉಳಿದಾಗ ಮನಸ್ಸನ್ನು ನಿರಾಳಗೊಳಿಸಿಕೊಳ್ಳಲು ಒಂದು ಸಣ್ಣ ವಾಯುವಿಹಾರಕ್ಕಾಗಿ ಮಧುವನದ ಕಡೆ ಹೊರಡುವ ಯೋಚನೆ ಮಾಡುವುದು ಸಹಜವೇ ಆದ ಮನಸ್ಥಿತಿ.

ನನಗಿಂತ ಮೊದಲೆ ಕತ್ತೆಗಳು ಹೊರಟಿವೆ ಹೊರಗೆ,
ಸಂಜೆಯಲ್ಲಿ ಸಣ್ಣ ಸೋನೆ
ಬಾಗಿಲಿಗೆ ಬೀಗವನು ಹಚ್ಚಿ ನಡೆಯುವುಂಟೆ ?
ಕಳ್ಳತನ ನಿನ್ನೆ ತಾನೆ !

ಈ ಸಾಲುಗಳು ವಿನೋದದಿಂದ ಕೂಡಿದ್ದರೂ, ಶ್ರೀಸಾಮಾನ್ಯನ ನಿತ್ಯ ಜೀವನದಲ್ಲಿ ಎದುರಾಗುವ ಆರ್ಥಿಕ ಸಂಕಷ್ಟ, ಅದನ್ನು ಎದುರಿಸಲು ಆತ ತನ್ನನ್ನು ತಾನು ಸಿದ್ಧಗೊಳಿಸಿಕೊಳ್ಳುವ ವಿಧಾನ, ಸಮಾಜದಲ್ಲಿ ಎಲ್ಲರಂತೆ ತಾನು ಒಂದು ಸುಸ್ಥಿತಿಯಲ್ಲಿ ಜೀವನ ನಡೆಸಬೇಕೆಂಬ ಬಯಕೆ, ಈ ಬಯಕೆಗಳಿಗೆ ಸಮಯ ತಣ್ಣೀರು ಎರಚಿದಾಗ ನಿರಾಸೆಯಿಂದಲೋ ಹತಾಶೆಯಿಂದಲೋ ನಮ್ಮ ಬದುಕು ಇಷ್ಟೇ ಎಂದು ನಿರಾಳವಾಗುವ ಮನಸ್ಥಿತಿ ಇಲ್ಲಿ ವ್ಯಕ್ತವಾಗುತ್ತಿದೆ. ಇನ್ನೂ ಪರಿಸ್ಥಿತಿ ಪೂರ್ಣ ಹದಗೆಟ್ಟಾಗ ತನ್ನಿಂದ ಅದನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಯಾವಾಗ ವ್ಯಕ್ತಿಗೆ ಅರಿವಾಗುತ್ತದೆಯೋ ಆಗ ಆತ ತನ್ನೆಲ್ಲ ಭಾರವನ್ನು ದೈವದ ಮೇಲೆ ಹೊರಿಸಿಬಿಡುತ್ತಾನೆ. ಅಂತದೇ ಸ್ಥಿತಿಯನ್ನು ವ್ಯಕ್ತಪಡಿಸುವ ಮತ್ತೊಂದು ಕವಿತೆ – ದೀಪವು ನಿನ್ನದೆ ಗಾಳಿಯು ನಿನ್ನದೆ.

ಎಲ್ಲವೂ ನೀನೇ, ಎಲ್ಲವೂ ನಿನ್ನದೇ, ನೀನು ಸರ್ವಭರಿತನೆಂದ ಮೇಲೆ ನಾನು, ನನ್ನ ಬದುಕು ಎಲ್ಲವೂ ಕೂಡಾ ನಿನ್ನದೆ, ಬಾಳ ಕಡಲ ಮೇಲೆ ದೋಣಿಯನ್ನು ತೇಲಿಬಿಟ್ಟಿದ್ದೇನೆ; ಅದು ಮುಳುಗದಂತೆ ನೋಡಿಕೊಳ್ಳುವ ಕರ್ತವ್ಯ ನಿನ್ನದು ಎಂದು ದೈವವನ್ನೇ ತನ್ನ ಬದುಕಿಗೆ ಹೊಣೆ ಮಾಡುವ ಚಿತ್ರಣ ಇಲ್ಲಿದೆ. ಇದು ಮಧ್ಯಮ ವರ್ಗದ ಎಲ್ಲಾ ಜನರ ಮನಸ್ಥಿತಿಯೂ ಹೌದು. ಇದರ ಒಂದು ಸುಂದರ ಚಿತ್ರಣ-

ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು
ಕಡಲು ನಿನ್ನದೆ, ಹಡಗು ನಿನ್ನದೆ
ಮುಳುಗದಿರಲಿ ಬದುಕು

ಬದುಕಿನಲ್ಲಿ ಸಿಹಿಯನ್ನೇ ಕರುಣಿಸು ಇಲ್ಲ ಕಹಿಯನ್ನೇ ಕರುಣಿಸು ಚಿಂತೆಯಿಲ್ಲ ಆದರೆ ಎರಡೂ ಸಮಾನಾಗಿದ್ದರೆ ಬದುಕು ಚೆಂದ. ಇದೇ ಕಾರಣದಿಂದಾಗಿ “ಬೆಟ್ಟ, ಬಯಲುಗಳ ನಡುವೆ ಪ್ರೀತಿ ಹಬ್ಬಿ ನಗಲಿ; ನೆಳಲೋ ಬಿಸಿಲೋ ಅದು ಏಕ ರೀತಿ ಇರಲಿ” ಎಂದು ಕವಿ ಪ್ರಾರ್ಥಿಸಿದ್ದಾರೆ. ದೈವದ ಮುಂದೆ ಹೀಗೆ ಕೋರಿಕೆ ಸಲ್ಲಿಸುವ ಕವಿ ಮಧ್ಯಮ ವರ್ಗದ ಜನರ ಬದುಕನ್ನು ಎಷ್ಟು ನಿಖರವಾಗಿ ಅರಿತಿದ್ದರು ಎಂಬುದು ಇಲ್ಲಿ ಗಮನಾರ್ಹ.

ನಮ್ಮನ್ನು ಕೈಹಿಡಿದು ನಡೆಸುವ ಕರ್ತವ್ಯ ನಿನ್ನದು ಎಂದು ದೈವಕ್ಕೆ ತನ್ನ ಕರ್ತವ್ಯ ಅರಿವನ್ನು ಮಾಡಿರುವ ಕವಿ, ಒಂದುವೇಳೆ ನಾನು ನಿನ್ನ ಮಾಯೆಯಂತೆ ನಡೆಯಬೇಕು ಎಂಬುದೇ ನಿನ್ನ ಇಚ್ಛೆಯಾದರೆ ಅದಕ್ಕೂ ಅಡಿಪಡಿಸುವುದಿಲ್ಲ ಎಂಬ ನಿರ್ಧಾರಕ್ಕೆ ಬರುವ ಸಂದರ್ಭ ಈ ಕೆಳಗಿನ ಕವಿತೆಯ ಸಾಲುಗಳಲ್ಲಿ ವ್ಯಕ್ತವಾಗಿದೆ.

ದೇವ ನಿನ್ನ ಮಾಯೆ ಗಂಜಿ
ನಡುಗಿ ಬಾಡೆನು
ನಿನ್ನ ಇಚ್ಛೆಯಂತೆ ನಡೆವೆ
ನಡ್ಡಿ ಮಾಡೆನು

ಶ್ರೀಸಾಮಾನ್ಯನ ಜೀವನದಲ್ಲಿ ಕಷ್ಟ-ನಷ್ಟಗಳು, ಸವಾಲು, ಸಮಸ್ಯೆಗಳು ಸರ್ವೇ ಸಾಮಾನ್ಯ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಯಾವುದಕ್ಕೂ ಎದೆಗುಂದದೆ ವ್ಯಕ್ತಿಯೊಬ್ಬ ಈ ರೀತಿ ಚಿಂತನೆಯನ್ನು ಮಾಡಬಹುದೆ ? ಎಂದು ನಮಗಸಿಸುವುದು ಸಾಮಾನ್ಯ. ಆದರೆ ಅದೇ ಸತ್ಯ. ಹೇ ದೈವವೇ ನನ್ನ ಜೀವನದಲ್ಲಿ ನಿನ್ನ ಮಾಯೆ ಹೇಗೆ ಇರಲಿ, ಎಷ್ಟೇ ಇರಲಿ. ಜೀವನದಲ್ಲಿ ಇನ್ನೂ ಹೆಚ್ಚಿನ ಸವಾಲಗಳನ್ನು ಕೊಡು; ನಾನು ಚಿಂತಿಸುವುದಿಲ್ಲ. ಅವುಗಳಿಗೆ ಹೆದರಿ ನಾನು ಬಾಡಿ ಹೋಗುವುದಿಲ್ಲ. ಬದಲಿಗೆ ಆ ಸವಾಲುಗಳನ್ನು ಸ್ವೀಕರಿಸಿ, ನೀನು ಹೇಗೆ ಹೇಳುವೆಯೋ ಆಗೇ ನಾನು ನಡೆಯುತ್ತೇನೆ. ಯಾವುದಕ್ಕೂ ನಿರಾಕರಿಸಲಾರೆ ಎನ್ನುವ ಆತನ ಧೈರ್ಯ ಇಲ್ಲಿ ಮೆಚ್ಚುವಂತದ್ದು. ಮುಕ್ತಿ ಎಂದರೆ ಏನು ? ನನ್ನನ್ನು ನಾನು ಅರ್ಥಮಾಡಿಕೊಳ್ಳುವುದೇ ? ಅಥವಾ ಮುಕ್ತಿ ಎಂದರೆ ಸಾವು, ಆ ಸಾವಿನಿಂದ ನನ್ನನ್ನು ರಕ್ಷಿಸು ಎಂದು ಬೆದರಿ ಬೇಡಿಕೊಳ್ಳುವುದೇ ? ಎಂದು ಪ್ರಶ್ನಿಸುವ ಕೆ ಎಸ್ ನ, ಈ ಪ್ರಪಂಚ ವಿಶಾಲವಾಗಿದೆ, ಇಲ್ಲಿ ನಾನು ಜೀವನವನ್ನು ನಡೆಸಲು ನೀನು ಎಲ್ಲವನ್ನೂ ಕೊಟ್ಟಿರುವೆ. ಈ ಜಗವನ್ನೇ ನನ್ನ ಪಾಲಿಗೆ ಬಿಟ್ಟಿರುವೆ; ಹೀಗಿದ್ದೂ ನಾನು ನಿನ್ನಲ್ಲಿ ಏನನ್ನು ಬೇಡಿಕೊಳ್ಳಲಿ ? ಬದುಕಿನಲ್ಲಿ ಸವಾಲುಗಳನ್ನು ಸ್ವೀಕರಿಸಿ‌, ಬದುಕು ಬಂದಂತೆ ಬದುಕಿ ತೋರಿಸಬಲ್ಲೇನು ಎಂಬ ನಿಲುವಿಗೆ ಬಂದಿದ್ದಾರೆ. ಇದು ಮಧ್ಯಮ ವರ್ಗದ ವ್ಯಕ್ತಿಯ ಮನೋಧರ್ಮವೂ ಹೌದಲ್ಲವೇ ?

ಇನ್ನೂ “ದೇವರು ವರ ಕೊಟ್ಟರೂ, ಪೂಜಾರಿ ಕೊಡಲೊಲ್ಲ” ಎಂಬ ಮಾತಿದೆ. ಈ ಹಿಂದೆ ಪ್ರಸ್ತಾಪಿಸಿದ ಕವಿತೆಯಲ್ಲೂ ಕವಿ “ಎಲ್ಲವನ್ನು ಕೊಟ್ಟಿರುವೆ ಏನ ಬೇಡಲಿ, ಜಗವನೆನಗೆ ಬಿಟ್ಟಿರುವೆ ಏಕೆ ಕಾಡಲಿ” ಎಂದಿದ್ದಾರೆ. ಹೀಗೆ ಇಡೀ ಜಗವನ್ನೇ ಸೃಷ್ಟಿ ಮುಕ್ತವಾಗಿ ನಮ್ಮ ಬದುಕಿಗೆ ಬಿಟ್ಟುಕೊಟ್ಟಿರುವಾಗ, ಇಲ್ಲಿರುವ ಕೆಲಜನರ ವರ್ತನೆ “ತಾವು ಬದುಕಲಾರರು, ಇತರರನ್ನು ಬದುಕಲು ಬಿಡರು” ಎಂಬಂತಾಗಿದೆ. ಮಾತೆತ್ತಿದರೆ ಕಂಡಕಂಡದ್ದನ್ನೆಲ್ಲಾ ಟೀಕಿಸುವ ಇಂತಹ ಜನರನ್ನು ಕುರಿತು ‘ಇಕ್ಕಳ’ ಎಂಬ ಕವಿತೆ ಹೀಗೆ ಹೇಳುತ್ತಿದೆ.

ನಿಂತವರ ಕೇಳುವರು; ನೀನೇಕೆ ನಿಂತೆ ?
ಮಲಗಿದರೆ ಗೊಣಗುವರು; ನಿನಗಿಲ್ಲ ಚಿಂತೆ;
ಓಡಿದರೆ ಬೆನ್ನ‌ ಹಿಂದೆಯೆ ಇವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

ಮಧ್ಯಮ ವರ್ಗದ ವ್ಯಕ್ತಿಗಳು ಸಾಮಾನ್ಯವಾಗಿ ಮಾನ ಮರ್ಯಾದೆಗೆ ಅಂಜುವ ಜನ. ಸಮಾಜದಲ್ಲಿ ನಾಲ್ಕು ಜನ ತಮ್ಮ ಬಗ್ಗೆ ಏನೆಂದುಕೊಂಡಾರೋ ಎಂದು ಯೋಚಿಸುವುದರಲ್ಲೇ ತಮ್ಮ ಅರ್ಧ ಜೀವಿತಾವಧಿವನ್ನು ಕಳೆದಿರುತ್ತಾರೆ. ಇಂತಹ ಜನರನ್ನು ಶೋಷಣೆಗೆ ಒಳಪಡಿಸಲೆಂದೇ ಕೆಲವು ವರ್ಗದ ಜನರಿರುತ್ತಾರೆ. ಅಂತಹ‌ ಜನರನ್ನು ಟೀಕೆಗೆ ಗುರಿಯಾಗಿಸಿರುವ ಕವಿ “ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ” ಎಂದಿದ್ದಾರೆ. ಕೆಲವರ ಅಭಿರುಚಿ
ಭಿನ್ನವಾಗಿರುವುದು ಸಹಜ. ಆದರೆ ನಾವು ಬಯಸಿದಂತೆಯೇ ಮತ್ತೊಬ್ಬರು ಬದುಕಬೇಕೆಂದು ಮೂರ್ಖತನದ ಪರಮಾವಧಿ. ಇದನ್ನು ಅರಿತಿದ್ದ ಕವಿ “ಇವರ ಬಯಕೆಗಳೇನೋ !” ಎಂಬುದಾಗಿ ಆಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

ಹೀಗೆ ಸಾಮಾನ್ಯ ವ್ಯಕ್ತಿಯ ಸ್ಥಾನದಲ್ಲಿ ನಿಂತು ಶ್ರೀಸಾಮಾನ್ಯನ ಭಾವನೆಗಳಿಗೆ ಹತ್ತಿರವಾಗುವಂತಹ‌ ಅಸಾಮಾನ್ಯ ಕವಿತೆಗಳನ್ನು ರಚಿಸಿದ ಕೀರ್ತಿ ಕೆ ಎಸ್ ನರಸಿಂಹಸ್ವಾಮಿ ಅವರಿಗೆ ಸಲ್ಲುತ್ತದೆ. ಕನ್ನಡ ನಾಡಿನಲ್ಲಿ ಹುಟ್ಟಿ ಇವರ ಕವಿತೆಗಳನ್ನು ಕೇಳದ ಕಿವಿಯಿಲ್ಲ, ಹೊಗಳದ ಬಾಯಿಲ್ಲ.

“ಮಾತು ಬರುವುದು ಎಂದು ಮಾತನಾಡುವುದು ಬೇಡ; ಒಂದು ಮಾತಿಗೆ ಎರಡು ಅರ್ಥವುಂಟು” ಎನ್ನುವ ಇವರ ಕವಿತೆಯ ಸಾಲುಗಳನ್ನು ಗಮನಿಸಿದಾಗ ಇವರನ್ನು ಕುರಿತು, ಇವರ ಕವಿತೆಗಳನ್ನು ಕುರಿತು ಬರೆಯುವಾಗ, ಮಾತನಾಡುವಾಗ ಅಪಾರ ಪದಕೋಶದ ಅಗತ್ಯವಿದೆ ಅನಿಸುತ್ತದೆ. ಆದರೂ ಜನಸಾಮಾನ್ಯರ ಬದುಕನ್ನು ಬಹಳ‌ ವಿಶಿಷ್ಟವಾಗಿ, ವಿಸ್ತಾರವಾಗಿ ತಮ್ಮ ಕವಿತೆಗಳಲ್ಲಿ ಹಿಡಿದಿಟ್ಟಿರುವ ಇವರ ಬಗ್ಗೆ ಒಂದೆರಡು ಸಾಲುಗಳಲ್ಲಿ ಬರೆದಿಡುವ ಪ್ರಯತ್ನ ಇದಾಗಿದೆ.

-ಮನು ಗುರುಸ್ವಾಮಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x