“ಯಾಕೋ ನನ್ ಟೈಮೇ ಚೆನ್ನಾಗಿಲ್ಲ. ಹಾಳಾದ್ದು ಈ ಟೈಮಲ್ಲೆ ಒಳ್ಳೊಳ್ಳೆ ಯೋಚನೆಗಳು ಬರ್ತವೆ. ಆದರೂ ಏನು ಮಾಡೋಕೆ ಆಗ್ತಾ ಇಲ್ಲ. ಥತ್…” ಹೀಗೆ ನಿಮಗೆನೆ ಗೊತ್ತಿಲ್ಲದಂತೆ ದಿಢೀರ್ ಅಂತ ಒಂದು ಅಸಹನೆ ಸ್ಪೋಟಗೊಳ್ಳುತ್ತೆ.
ಖಂಡಿತ ನಿಮ್ಮ ಸಮಸ್ಯೆ ಇರೋದು ಟೈಮ್ ಚೆನ್ನಾಗಿಲ್ಲ ಅಂತಲ್ಲ. ನಿಜ ಹೇಳಬೇಕಂದ್ರೆ ಟೈಮು ಚೆನ್ನಾಗಿರೋದಕ್ಕೆನೆ ನಿಮ್ಮಲ್ಲಿ ಒಳ್ಳೆಯ ಯೋಚನೆಗಳು ಬರ್ತಿರೋದು. ಇನ್ನು ಹೇಳಬೇಕಂದ್ರೆ ನಿಮ್ಮಲ್ಲಿ ಒಳ್ಳೆಯ ವಿಚಾರಗಳು ಮೂಡುತ್ತಿವೆ ಅಂದ್ರೆ ಅದನ್ನ ಕಾರ್ಯರೂಪಕ್ಕೆ ಇಳಿಸುವುದಕ್ಕೆ ಇದಕ್ಕಿಂತ ಒಳ್ಳೆ ಟೈಮ್ ಮತ್ತೊಂದಿಲ್ಲ. ಆದರೂ ನಿಮಗೆ ಟೈಮ್ ಯಾಕೆ ಚೆನ್ನಾಗಿಲ್ಲ ಅಂತ ಅನ್ನಿಸ್ತದೆಂದರೆ ನಿಮ್ಮ ಯೋಚನೆಗಳನ್ನು ಕಾರ್ಯರೂಪಕ್ಕೆ ತರಲು ಆಗದಿರೋದಕ್ಕೆ. ಅಂದರೆ ನಿಮ್ಮ ಸಮಸ್ಯೆ ಇರೋದು ಯೋಚನೆಗಳನ್ನು ಕಾರ್ಯರೂಪಕ್ಕೆ ತರಲು ಅನುಕೂಲಕರವಾದ ವಾತಾವರಣವಿಲ್ಲದಿರುವುದಕ್ಕೆ ಹಾಗೂ ಅದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿಯಲ್ಲಿ ನೀವಿರೋದಕ್ಕೆ.
ಹೌದು, ನಿಮ್ಮದು ಬಡಮಧ್ಯಮ ವರ್ಗದ ಕುಟುಂಬ. ಎಲ್ಲರೂ ದುಡಿದರಷ್ಟೆ ಕುಟುಂಬ ನಡೆಯುತ್ತೆ ಅನ್ನುವ ಸ್ಥಿತಿ. ನೀವು ಬೇರೆ ವಯಸ್ಸಿಗೆ ಬಂದಿದ್ದೀರಿ. ಹಾಗಾಗಿನೆ ತಂದೆ ತಾಯಂದಿರಿಗೆ ನಿಮ್ಮ ಮೇಲೆ ಸಹಜವಾದ ನಿರೀಕ್ಷೆ. ಮಗ ಓದಿ ಏನೋ ಮಾಡ್ತಾನೆ ಒಂದೊಳ್ಳೆ ಕೆಲಸ ಗಿಟ್ಟಿಸಿಕೊಂಡು ಕುಟುಂಬಕ್ಕೆ ಆಸರೆಯಾಗುತ್ತಾನೆ ಅಂತ. ಅದು ನಿಮಗೂ ಗೊತ್ತು ಹಾಗೂ ನಿಮ್ಮಲ್ಲೂ ಕೂಡಾ ಅದೇ ಭಾವನೆ. ಒಂದೊಳ್ಳೆ ಕೆಲಸ ಗಿಟ್ಟಿಸಿಕೊಂಡು ತಂದೆ ತಾಯಿಯರನ್ನು ಬದುಕಿದಷ್ಟು ದಿನ ಚೆನ್ನಾಗಿ ನೋಡ್ಕೋಬೇಕು ಅನ್ನೋದು. ಇದಕ್ಕಿಂತ ಹೆಚ್ಚಾಗಿ ಅವರು ಜೀವನ ನಡೆಸುವುದಕ್ಕೆ ಪಟ್ಟ ಕಷ್ಟ ನೀವು ಬಲ್ಲಿರಿ. ಅದು ಗೊತ್ತಿರುವುದರಿಂದಲೇ ಇಷ್ಟು ದಿನದವರೆಗೆ ನೀವು ಅವರ ಜವಾಬ್ದಾರಿಗೆ ಹೆಗಲಾಗುತ್ತಲೇ ಬಂದಿದ್ದೀರಿ. ಅದರಂತೆಯೇ ಅವರ ನಿರೀಕ್ಷೆಗೆ ದಿನದಿಂದ ದಿನಕ್ಕೆ ಹತ್ತಿರವಾಗುತ್ತಲೇ ಇದ್ದೀರಿ.
ಇದಕ್ಕೆ ಸರಿಯಾಗಿ ನಿಮ್ಮ ಮನಸ್ಸಲ್ಲಿ ತಾನೆನೋ ಸಾಧನೆ ಮಾಡ್ಬೇಕು ಅಂತ ಬಹಳ ದಿನಗಳಿಂದ ಕಾಡುತ್ತಿರುತ್ತೆ. ಅದೇ ಹೊತ್ತಿಗೆ ನಿಮ್ಮೊಳಗಿನ ಪ್ರತಿಭೆ, ಕ್ರೀಯಾಶೀಲತೆ ಅರಳೋಕೂ ಶುರುವಾಗಿರುತ್ತೆ. ಇನ್ನು ಆ ಕ್ರಿಯಾಶೀಲತೆ ನಿಮ್ಮೊಳಗಿನ ಆ ಕನಸುಗಳಿಗೆಲ್ಲ ರೂಪುರೇಷೆ ಕೊಡೋಕೆ ಶುರುಮಾಡಿರುತ್ತೆ. ತಾನೇನೋ ಒಂದ್ ಮಾಡ್ಬೇಕು, ಆ ತರಹ ಮಾಡ್ಬೇಕು. ಈ ತರಹ ಆಗ್ಬೇಕು, ಯಾರು ಮಾಡದೆ ಇರೋ ಕೆಲಸ ಮಾಡ್ಬೇಕು. ಇಲ್ಲವಾ ಎಲ್ಲರಿಗೂ ಅನುಕೂಲವಾಗೋ ರೀತಿಯಲ್ಲಿ ಏನೋ ಒಂದ್ ಮಾಡ್ಬೇಕು. ಹೀಗೆ ಏನೆನಲ್ಲ ಅಂದುಕೊಂಡಿದ್ದೀರೋ ಅದನ್ನೆಲ್ಲ ಮಾಡೋಕೆ ನಿಮ್ಮೊಳಗಿನ ಕ್ರೀಯಾಶೀಲತೆ ಒಂದು ಮಟ್ಟಿಗೆ ಯೋಜನೆನೂ ಸಿದ್ದಪಡಿಸಿರುತ್ತೆ. ಹಾಗಾಗಿಯೇ ಅನುಭವ ಮಾರ್ಗದರ್ಶನವಿಲ್ಲದಿದ್ದರೂ ನಿಮ್ಮಲ್ಲಿ ಒಂದು ಬಗೆಯ ಉತ್ಸಾಹವಂತೂ ಇದೆ. ಆ ಉತ್ಸಾಹವೇ ಸದ್ಯಕ್ಕೆ ನಿಮ್ಮ ಪಾಲಿನ ಆತ್ಮವಿಶ್ವಾಸವಾಗಿದೆ. ಹೀಗಿದ್ದರೂ ನೀವು ಆ ದಾರಿಯಲ್ಲಿ ತಕ್ಷಣಕ್ಕೆ ಹೋಗಲಿಕ್ಕಾಗುವುದಿಲ್ಲ. ಅದನ್ನೆಲ್ಲ ಕಾರ್ಯರೂಪಕ್ಕೆ ತರಲು ಅನೂಕೂಲಕರವಾದ ವಾತಾವರಣ, ಪರಿಸ್ಥಿತಿ ನಿಮ್ಮದಾಗಿರುವುದಿಲ್ಲ. ಇನ್ನು ಇದನ್ನೆಲ್ಲ ನಿಮ್ಮ ತಂದೆ ತಾಯಂದಿರಿಗೆ ವಿವರಿಸೋಣವೆಂದರೆ ಅದು ಅವರಿಗೆ ಅಷ್ಟು ಸುಲಭದಲ್ಲಿ ಅರ್ಥವಾಗುವುದಿಲ್ಲ. ಅರ್ಥವಾದರೂ ಹೊಟ್ಟೆಪಾಡು ಬದುಕು ಅನ್ನುವ ಅವರ ಅದೇ ಮಾತುಗಳು ನಿಮ್ಮನ್ನು ಹಿಂದಕ್ಕೆ ಎಳೆಯುತ್ತಲೇ ಇರುತ್ವೆ. ಇನ್ನು ನಿಮ್ಮ ತಲೇಲಿರೋದು ಸಾಧನೆಯ ದಾರಿ. ಅದರಿಂದಲೇ ಆಗಬೇಕು ಹೊಟ್ಟೆಪಾಡಿನ ದಾರಿ. ಆದರೆ ಅವರಿಗೆ ಗೊತ್ತಿರೊದು ಬರೀ ಹೊಟ್ಟೆಪಾಡಿನ ದಾರಿ. ಸಾಧನೆ ಅಂತ ಹೋದ್ರೆ ಹೊಟ್ಟೆಪಾಡು ನಡಿತದಾ ಅನ್ನೊದು ಅವರ ಪ್ರಶ್ನೆ. ಅದಕ್ಕೆ ಉತ್ತರ ನಿಮ್ಮ ಬಳಿಯೂ ಇಲ್ಲ. ನಿಮಗಿರೋದು ವಿಶ್ವಾಸ ಮಾತ್ರ. ಏಕೆಂದರೆ ನೀವಿನ್ನು ನೀರಿಗೆ ಇಳಿದಿಲ್ಲ. ಹಾಗಾಗಿನೇ ಅದರ ಆಳ ಅಗಲ ಗೊತ್ತಿಲ್ಲ. ಈ ಕಾರಣವೇ ನಿಮ್ಮ ಮೇಲೆ ನಿಮಗಿರುವ ಭರವಸೆ ಅವರಿಗೆ ನಿಮ್ಮ ಮೇಲೆ ನಂಬಿಕೆ ಮೂಡಿಸುವ ಮಟ್ಟಿಗೆ ಸಾಕಾಗುತ್ತಿಲ್ಲ. ಇನ್ನು ಅವರಿಗೆ ಇದೆಲ್ಲ ಹೊಸ ವಿಷಯವಾದ್ದರಿಂದ ಸಪೋರ್ಟ್ ಕೊಡೋದು ಕನಸಿನ ಮಾತಾಗಿರುತ್ತೆ. ಹಾಗಂತಲೇ ತಿಳಿದು ಅವರ ಇಷ್ಟದಂತೆಯೇ ಸಾಗುವ ನಿರ್ಧಾರ ಮಾಡುತ್ತೀರಿ. ನಂತರ ಸಮಯ ಸಿಕ್ಕಾಗ ಕನಸು, ಸಾಧನೆ ಅಂತ ಯೋಚಿಸಿದರಾಯಿತು ಎನ್ನುವುದು ನಿಮ್ಮ ಯೋಚನೆ.
ನೋಡು ನೋಡುತ್ತಿದ್ದಂತೆಯೇ ಪದವಿ ಮುಗಿಯುತ್ತೆ. ಮೊದಲು ಒಂದ್ ಕೆಲಸಕ್ಕೆ ಸೇರೋಣ ಅಂತ ಸಿಟಿಗೆ ತೆರಳುತ್ತೀರಿ. ಅಲ್ಲಿ ನಿಮ್ಮ ವಿದ್ಯಾರ್ಹತೆಗೆ ತಕ್ಕಂತೆ ಒಂದ್ ಚಿಕ್ಕ ಕೆಲಸಾನೂ ಸಿಗುತ್ತೆ. ಆದರೆ ಸಂಭಳ ಕಡಿಮೆ. ಸಿಕ್ಕಿದ್ರಲ್ಲೆ ಸ್ವಲ್ಪ ದಿನ ಮಾಡೋಣ ಅಂದ್ರೆ, ರೂಮ್ ಬಾಡಿಗೆ ಅದು ಇದು ಖರ್ಚು ಅಂತ ಬರುವ ಸಂಬಳವೇ ಸಾಕಾಗುತ್ತಿಲ್ಲ. ಇನ್ನು ಸಂಭಳ ಉಳಿಸಿ ಮನೆಗೆ ಕಳುಹಿಸೋದೆಲ್ಲಿ.? ಹಾಗಾಗಿನೆ ಸ್ವಲ್ಪ ದಿನ ಪಾರ್ಟ್ ಟೈಮ್ ಏನಾದರೂ ಮಾಡ್ಬೇಕು ಅಂತ ನಿರ್ಧರಿಸುತ್ತೀರ. ಕೊನೆಗೂ ಪಾರ್ಟ್ ಟೈಮು ಅಂತಾನೂ ಮಾಡಿ ಮ್ಯಾನೆಜ್ ಮಾಡಿಕೊಳ್ಳುವಷ್ಟು ಹಣ ಹೊಂದಿಸಿಕೊಂಡರೂ ನೆಮ್ಮದಿ ಇಲ್ಲ. ಕಾರಣ ನಿಮ್ಮಲ್ಲಿರುವ ಟ್ಯಾಲೆಂಟ್, ಕ್ರಿಯಾಶೀಲತೆ ಮೇಲಿಂದ ಮೇಲೆ ಹೊರಬರಲು ಚಡಪಡಿಸುತ್ತಿರುತ್ತೆ. ಅದಕ್ಕಿನ್ನು ದಾರಿ ಸಿಕ್ಕಿಲ್ಲ. ಇನ್ನು ಅದನ್ನು ಹೊರಹಾಕಲು ವೇದಿಕೆ, ಸಿಕ್ಕರೂ ಆ ದಾರಿಯಲ್ಲಿ ಸಾಗಲು ಸಿಗದ ಸಮಯ, ತೊಡಗಿಸಿಕೊಳ್ಳಲಾಗದ ಅಸಹಾಯಕತೆ ನಿಮ್ಮನ್ನು ದಿನದಿನವೂ ಹತಾಶೆಗೆ ತಳ್ಳಿರುತ್ತೆ. ಆದರೂ ಬದುಕು ಹೊಟ್ಟೆಪಾಡು ಮೊದಲು ಅನ್ನೊ ತೀರ್ಮಾನಕ್ಕೆ ಅಚಲರಾಗಿ ನಿಮ್ಮ ಕನಸನ್ನು ಮತ್ತೆ ಸ್ವಲ್ಪ ದಿನ ಸೈಡ್ ಗೆ ತಳ್ಳುತ್ತೀರ. ನೀವು ಅದನ್ನು ಸೈಡ್ ಗೆ ಇಟ್ಟಿದ್ದಕ್ಕಿಂತ ಹೆಚ್ಚಾಗಿ ನಿಮ್ಮ ಅಸಹನೆ, ಹತಾಶೆ ನಿಮಗೆನೆ ಗೊತ್ತಿಲ್ಲದಂತೆ ಅದನ್ನು ನಿರ್ಲಕ್ಷಿಸುವಂತೆ ಮಾಡಿರುತ್ತೆ.
ಮುಂದೆ ನೀವೇನು ಮಾಡ್ಬೇಕು ಅಂದುಕೊಂಡಿದ್ದೀರೊ ಅದನ್ನ ಬೇರೊಬ್ಬರು ನಿಮ್ಮ ಕಣ್ಣೇದುರಿಗೆ ಮಾಡಿ ಯಶಸ್ಸು ಕಾಣುತ್ತಾರೆ. ಆಗ ನಿಮಗೆ ತಪ್ಪಿತಸ್ಥ ಭಾವನೆ ಕಾಡೋಕೆ ಶುರುವಾಗುತ್ತೆ. ಇದನ್ನ ನಾನು ಅಂದೇ ನಿರ್ಧರಿಸಿ ಶುರುಮಾಡಿದಿದ್ದರೆ ಇಷ್ಟೊತ್ತಿಗಾಗಲೇ ನಾನು ಸಾಕಷ್ಟು ಮುಂದೆ ಹೋಗಿರುತ್ತಿದ್ದೆ. ಬದುಕು ಹೊಟ್ಟೆ ಪಾಡು ಅಂತ ಹೋಗಿ ನಾನೇನು ಸಾಧನೆ ಮಾಡಿದ ಹಾಗಾಯಿತು? ಎಷ್ಟು ಮಾಡಿದ್ರು ಮುಗಿಯದ ಅದೇ ಕೆಲಸ, ಅದೇ ಬಾಸ್ ನ ಕಿರಿಕಿರಿ, ಅದೇ ಸಿಬ್ಬಂದಿಗಳ ಕಾಲೆಳೆತದ ರಾಜಕೀಯ, ಪ್ರಾಮಾಣಿಕತೆ ದಕ್ಷತೆಗೆ ಇಲ್ಲದ ಬೆಲೆ, ಏರದ ಸಂಬಳ, ಮರೀಚಿಕೆ ಎನಿಸುವ ಭಡ್ತಿ, ಇದು ಸಾಕಾಗಲಿಲ್ಲ ಅಂತ ಪಾರ್ಟ್ ಟೈಮ್ ಅಂತ ಯಂತ್ರದ ಹಾಗೆ ದುಡಿದಿದ್ದಕ್ಕೆ ಸೊರಗಿ ಹೋದ ಆರೋಗ್ಯ ಹೀಗೆ ಪ್ರಶ್ನಿಸಿಕೊಂಡಾಗ ಸಿಕ್ಕಿದ್ದು ಅತೃಪ್ತಿ ಬಿಟ್ಟರೆ ಸಂತೋಷ ಕಿಂಚಿತ್ತೂ ಇಲ್ಲ.
ಹಾಗಿದ್ರೆ ನಿಮ್ಮ ನಿರ್ಧಾರ ತಪ್ಪಾಯಿತಾ…? ನೀವೊಂದುಕೊಂಡಂತೆ ಸಾಧನೆ ಮಾರ್ಗ ಅಂತ ಹಿಡಿದಿದ್ರೆ ಸರಿ ಇರುತ್ತಿತ್ತಾ…? ಅದರಿಂದ ಆ ಕ್ಷಣಕ್ಕೆ ಖುಷಿ ಸಿಕ್ಕರೂ ಹೊಟ್ಟೆ ಪಾಡು ನಡೆಯುತ್ತಿತ್ತಾ..? ತಂದೆ ತಾಯಿಯರಂತೆ ಬರೀ ಬದುಕು ಹೊಟ್ಟೆ ಪಾಡಂತ ಯೋಚಿಸುವುದೇ ಸರೀನಾ.? ಹಾಗಿದ್ರೆ ನಾನೇಕೆ ಸಂತೋಷದಿಂದಿಲ್ಲ. ಹೀಗೆ ಯೋಚಿಸುತ್ತಾ ಕೊನೆಗೂ ಒಂದು ಉತ್ತರಕ್ಕೆ ಬರಲಿಕ್ಕಾದೆ ನನ್ನ ಟೈಮೇ ಚೆನ್ನಾಗಿಲ್ಲ ಹಾಳಾದ್ದು ಈ ಟೈಮಲ್ಲೆ ಎಲ್ಲಾ ಒಳ್ಳೊಳ್ಳೆ ವಿಚಾರಗಳು ಬರ್ತವೆ ಅಂತ ಅದನ್ನ ದೂರೋಕೆ ಶುರುಮಾಡ್ತೀರಾ..
ಆದರೆ ಒಮ್ಮೆ ಹೀಗೆ ಯೋಚಿಸಿ ನೋಡಿ.
ನಿಮಗೆ ನಿಮ್ಮ ಸಂತೋಷದ ಕೀಲಿಕೈ ನೀವು ಇಷ್ಟಪಡುವ ವಿಚಾರದಲ್ಲಿದೆ ಅಂತ ಗೊತ್ತಿದೆ. ಆದರೂ ನೀವು ಆ ದಾರಿಯಲ್ಲಿ ಸಾಗುತ್ತಿಲ್ಲವೆಂದರೆ ಅದು ನೀವು ಮಾಡುವ ತಪ್ಪು ಎನ್ನುವುದಕ್ಕಿಂತಲೂ ನಿಮಗೆ ನೀವು ಮಾಡಿಕೊಳ್ಳುವ ಮೋಸವೇ ಸರಿ. ಹಾಗಂತ ಇರುವ ಕೆಲಸವನ್ನು ಬಿಟ್ಟು ಅದನ್ನೆ ಧ್ಯಾನಿಸಿ ಅಂತ ಹೇಳುತ್ತಿಲ್ಲ. ಹೀಗೆ ನಿಮಗೆ ನೀವು ಮಾಡಿಕೊಳ್ಳುವ ಮೋಸದಿಂದ ಅತಂತ್ರ, ಅನಿಶ್ಚಿತತೆ ಹೆಚ್ಚಾಗುತ್ತದಯೇ ವಿನಃ, ಅದರಿಂದ ನಿಮಗಾಗಲಿ ನಿಮ್ಮನ್ನು ನಂಬಿಕೊಂಡವರಿಗಾಗಲಿ ಸುಖವಿಲ್ಲ ಎನ್ನುತ್ತಿದ್ದೇನಷ್ಟೇ. ಹೌದು, ನಿಮ್ಮ ತಂದೆ ತಾಯಂದಿರು ತಮ್ಮ ಸಂತೋಷವನ್ನೆಲ್ಲ ಪಕ್ಕಕ್ಕಿಟ್ಟು ಹಗಲಿರುಳು ಕಷ್ಟಪಟ್ಟು ನಿಮ್ಮನ್ನು ಬೆಳೆಸಿದರು. ಅದೇ ಪರಿಸರದಲ್ಲಿ ಅದನ್ನೆ ನೋಡಿಕೊಂಡು ಬೆಳೆದ ನೀವೀಗ ಅದೇ ರೀತಿಯಲ್ಲಿ ಸಾಗುತ್ತಿದ್ದೀರಿ. ಆದರೆ ನೆನಪಿರಲಿ.
ಮೊತ್ತಮೊದಲು ನೀವು ಂ ಸಂತೋಷವಾಗಿರದೆ ಅವರು ಸಂತೋಷವಾಗಿರಲು ಸಾಧ್ಯವಿಲ್ಲ. ಅವರೆಷ್ಟೇ ಕಷ್ಟಪಟ್ಟಿದ್ದರೂ ಆ ಕಾಯಕದಲ್ಲೆ ಅವರು ಖುಷಿ ಕಂಡಿದ್ದರು. ನೆಮ್ಮದಿಯಿಂದ ನಿದ್ರಿಸುತ್ತಿದ್ದರು. ಆರೋಗ್ಯದಿಂದಿದ್ದರು. ಅವರಿಗೆ ತಮ್ಮ ಬದುಕಿನ ವಿಚಾರದ ಹೊರತಾಗಿ ಬೇರಾವ ಆಸೆ, ಕನಸುಗಳಿರಲಿಲ್ಲ. ಆದರೆ ನಿಮ್ಮ ವಿಚಾರ ಹಾಗಲ್ಲ. ನಿಮಗೆ ನಿಮ್ಮದೇ ಆದ ಆಸೆ ಕನಸುಗಳಿವೆ. ಅವೆಲ್ಲ ಬಿಟ್ಟು ಬಿಡದೆ ಕಾಡುತ್ತಿವೆ. ಕಾರಣ, ಅದು ನಿಮ್ಮೊಳಗಿನ ಮಹತ್ವಾಕಾಂಕ್ಷೆಯಾಗಿದೆ. ಆದರೂ ಹೊಟ್ಟೆ ಪಾಡು, ಸಾಧನೆ, ಅಂತೆಲ್ಲ ಒಟ್ಟಾಗಿ ಯೋಚಿಸಿ ಯಾವುದರಲ್ಲೂ ಕ್ಲಾರಿಟಿ ಇಲ್ಲದೆ ಸೊರಗುತ್ತಿದ್ದೀರಿ.
ಆದರೆ ನೀವು ಹೀಗೆ ಪ್ರಯತ್ನಿಸಬಹುದು.
ಎಷ್ಟೇ ಬದುಕು ಹೊಟ್ಟೆಪಾಡು ಅಂತಂದುಕೊಂಡರೂ ದಿನದ ಇಪ್ಪತ್ನಾಲ್ಕು ಗಂಟೆ ಅದರ ಬಗ್ಗೆನೆ ಯೋಚಿಸಿಲಿಕ್ಕಾಗದು. ಚೇಂಜ್ ಅಂತ ಬೇಕೇ ಬೇಕು. ಆ ಚೇಂಜ್ ನ ಆಯ್ಕೆಯಾಗಿ ನೀವಿಷ್ಟಪಟ್ಟ ವಿಷಯವನ್ನೆ ಕೈಗೆತ್ತಿಕೊಳ್ಳಿ. ಅಂದರೆ ಆ ಸಮಯದಲ್ಲಿ ನೀವೇನು ಮಾಡಬೇಕಂತ ಹಂಬಲಿಸಿದ್ದೀರೋ ನೀವೇನು ಆಗಬೇಕಂತ ಬಯಸಿದ್ದೀರೋ ಅದರ ಕುರಿತಾಗಿ ಯೋಚಿಸೋಕೆ ಶುರುಮಾಡಿ. ಅಂದರೆ ಅದಕ್ಕೆ ಸಂಬಂಧಪಟ್ಟ ವಿಷಯಗಳನ್ನು ಸ್ಟಡೀ ಮಾಡುವುದು. ಈಗಾಗಲೇ ಮನಸ್ಸಿನಲ್ಲಿ ಸಿದ್ಧವಾಗಿರುವ ರೂಪುರೇಷೆಗೆ ಹ್ಯಾಗೆ ಶೇಪ್ ಕೊಡಬೇಕಂತ ಪ್ಲಾನ್ ಮಾಡುವುದು, ಹ್ಯಾಗೆ ಅದನ್ನು ಡೆವೆಲಪ್ ಮೆಂಟ್ ಮಾಡಬಹುದು ಅನ್ನೊದರ ಕುರಿತಾಗಿ ಯೋಚಿಸುವುದು. ಅದಕ್ಕೆ ಸಂಬಂಧಪಟ್ಟ ಅಥವಾ ನಿಮ್ಮದೆ ಅಭಿರುಚಿ ಇರುವ ವ್ಯಕ್ತಿಗಳ ಕಾಂಟಾಕ್ಟ್ ಬೆಳೆಸುವುದು. ಅವರೊಂದಿಗೆ ನೀವೇನು ಮಾಡಬಹುದು ಅನ್ನೊದರ ಕುರಿತಾಗಿ ತಿಳಿಯೋದು, ನಿಮ್ಮ ಕಾರ್ಯವೈಖರಿ ಗುರಿ ಕನಸುಗಳ ಕುರಿತಾಗಿ ಅವರೊಂದಿಗೆ ಹಂಚಿಕೊಳ್ಳುವುದು, ಈಗಿನ ಟ್ರೆಂಡ್ ಗೆ ಜನರೇಷನ್ ಗೆ ನಿಮ್ಮ ವಿಚಾರಧಾರೆಗಳು ಎಷ್ಟರ ಮಟ್ಟಿಗೆ ಅಪ್ಡೇಟ್ ಇದೆ ಇಲ್ಲದಿದ್ದರೆ ಅಪ್ಡೇಟ್ ಆಗುವುದರ ಕುರಿತಾಗಿ ಯೋಚಿಸುವುದು. ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಸಮಯದ ನಿಭಂಧನೆಗಳಿಲ್ಲದೆ ಯಾವುದೇ ರೀತಿಯ ಕಟ್ಟಳೆ, ಕಟ್ಟುಪಾಡು, ಟಾರ್ಗೆಟ್ ಹಾಕಿಕೊಳ್ಳದೆ, ಯಾವುದೇ ರೀತಿಯ ಹಠಕ್ಕೆ ಬೀಳದೆ, ಸುಮ್ಮನೆ ಖುಷಿಗಾಗಿ ಮಾಡ್ತಿದೀನಿ ಕಲಿತೀನಿ ಅಂತ ಮಾಡುವುದು.
ಹೌದು, ಇದು ಬಹಳಾನೇ ಮುಖ್ಯ. ನೀವು ಆ ವಿಷಯದಲ್ಲಿ ಉತ್ಸಾಹ, ಆತ್ಮವಿಶ್ವಾಸದಿಂದ್ದೀರಿ ಅಂದಾಕ್ಷಣ ಮಾಡುವ ಕೆಲಸವನ್ನೆಲ್ಲ ಬದಿಗೊತ್ತಿ ಸಂಪೂರ್ಣ ಆ ಕಡೆಗೆ ಮುಖಮಾಡುತ್ತೆನೆಂದು ಹೊರಟರೆ ನಿಜಕ್ಕೂ ಕಷ್ಟವಾಗುತ್ತೆ. ಅದಕ್ಕಾಗಿನೆ ಯಾವುದೇ ಕಟ್ಟಳೆ ನಿಬಂಧನೆಗಳನ್ನು ಹಾಕಿಕೊಳ್ಳದೆ ಖುಷಿಗಾಗಿ ಮಾಡಿ ಅಂದಿದ್ದು.. ಹೀಗೆ ಅಭ್ಯಾಸ ಮಾಡಿಕೊಳ್ಳುವುದರಿಂದ ಮೊದಲನೆಯದಾಗಿ ನಿಮ್ಮ ಧಣಿದ ದೇಹ ಮನಸ್ಸಿಗೆ ಒಂದಷ್ಟು ರಿಲಾಕ್ಸ್ ಸಿಗುತ್ತದೆ. ಅದಕ್ಕೂ ಮುಖ್ಯವಾಗಿ ನೀವು ಕಂಡ ಕನಸು ಅಷ್ಟರ ಮಟ್ಟಿಗೆ ನಿಮ್ಮನ್ನು ದಿನವೂ ಜೀವಂತವಾಗಿರಿಸಿದೆ ಅನ್ನೊ ಫೀಲ್ ಇರುತ್ತೆ. ನೀವು ಕಂಡ ಕನಸು ಎಷ್ಟರ ಮಟ್ಟಿಗೆ ದಿನವೂ ಜೀವಂತವಾಗಿದೆ ಅನ್ನೋದರ ಮೇಲೆನೆ ಅಲ್ವಾ, ನಿಮ್ಮ ಜೀವನದ ಸಂತೋಷವಿರೋದು…
ಅಯ್ಯೋ ಇದೆಲ್ಲ ಎಲ್ಲಿ ಸರ್.. ಎರಡೆರಡು ಕಡೆ ಕೆಲಸ ಮಾಡಿ ಸುಸ್ತಾಗಿ ಮನೆಗೆ ಬಂದ್ ಬಿದ್ರೆನೆ ಸಾಕನ್ನಿಸಿರುತ್ತೆ ಅಂತ ಕೇಳಬಹುದು. ಆದರೆ ಬೇರೆ ದಾರಿಯೇ ಇಲ್ಲ. ಸ್ವರ್ಗ ಬೇಕೆಂದರೆ ಹೇಗೆ ಸಾಯೋಕೆ ರೆಡಿ ಇರಬೇಕೋ ಹಾಗೆ ಏನಾದ್ರೂ ಮಾಡಲೇಬೇಕಂದ್ರೆ ಸಮಯ ಕೊಡಲೇಬೇಕು. ಇಷ್ಟಕ್ಕೂ ನೀವು ಹಂಬಲಿಸ್ತಿರೋದು ಪರಿತಪಿಸ್ತಿರೋದು ಧ್ಯಾನಿಸ್ತಿರೋದು ಯಾವತ್ತಿಗೂ ಕಷ್ಟವಾಗದು ಅಲ್ವಾ…? ಅದನ್ನು ಹೊರತೆಗೆಯುವ ಸಂಕಲ್ಪ ಮಾಡಬೇಕಷ್ಟೇ. ಶುರುಮಾಡೋದಷ್ಟೇ ಕಷ್ಟ.. ಆ ನಂತರ ಇಷ್ಟವಾದದ್ದು ಯಾವತ್ತೂ ಕಷ್ಟವಾಗೊಲ್ಲ. ನೀವು ಒಂದರ್ಧ ಗಂಟೆ ಅದಕ್ಕೆ ಮೀಸಲಿಟ್ರಿ ಅಂತಾದರೆ ನಿಮ್ಮ ಅರ್ಧ ದಿನದ ಮೂಡೇ ಬದಲಾಗಬಹುದು. ಎರಡೆರಡು ಹೊಟ್ಟೆಪಾಡಿನ ಕೆಲಸಗಳ ಮಧ್ಯೆ ರಿಲಾಕ್ಸ್ ಗೆ ಅಂತಾನೇ ಶುರುಮಾಡಿದ ಯೋಚನೆ, ನೋಡು ನೋಡುತ್ತಿದ್ದಂತೆಯೇ ಇನ್ನೊಂದೆಡೆಯಲ್ಲಿ ಅದರ ಸರಿಸಮನಾಗೆ ಸಾಗುತ್ತಿರುತ್ತೆ. ಆ ನಿಟ್ಟಿನಲ್ಲಿ ಸಾಗುವ ಬದ್ಧತೆಯನ್ನು ಕೈ ಬಿಡಬಾರದಷ್ಟೆ. ಕೊನೆಪಕ್ಷ ನಿಮ್ಮ ತಲೆಯಲ್ಲಿ ಒಳ್ಳೊಳ್ಳೆ ಐಡಿಯಾಗಳು ಬರುವಾಗ ಹತ್ತು ನಿಮಿಷವಾದರೂ ಅದಕ್ಕೆ ಸಮಯ ಕೊಡುವ ಸಂಕಲ್ಪ ಮಾಡಬೇಕು. ಅದರ ಬದಲಾಗಿ ಯಾಕಾದರೂ ಇಂತಹ ಒಳ್ಳೆ ವಿಚಾರಗಳು ಬರ್ತಾವಪ್ಪ ಅಂತ ಗೊಣಗೋದಲ್ಲ. ಹಾಗೆ ತುಂಬಾ ಹೊತ್ತು ಯೋಚಿಸುವುದರಿಂದ ಕೊರಗುವುದರಿಂದ ಸಮಸ್ಯೆಗೆ ಉತ್ತರ ಸಿಗ್ತದೆ ಅನ್ನೋದು ಕೂಡ ಭ್ರಮೆಯೇ. ಸಮಸ್ಯೆಗೆ ಉತ್ತರ ಸಿಗೋದು ಮನಸು ಉಲ್ಲಾಸವಾಗಿದ್ದಾಗ ಖುಷಿಯಲ್ಲಿದ್ದಾಗ ಮಾತ್ರ. ಮನಸು ಉಲ್ಲಾಸವಾಗೋದಕ್ಕೆ ಸಂತೋಷವಾಗಿರೋದಕ್ಕೆ ಏನ್ ಮಾಡ್ಬೇಕು ಅನ್ನೊದು ನಿಮಗೆ ಗೊತ್ತಿದೆ. ಅಲ್ಲಿಗೆ ಉಲ್ಲಾಸದ ಕೀಲಿ ಕೈನೂ ನಿಮ್ಮೊಳಗೆ ಇದೆ. ನಿಮ್ಮಲ್ಲಿನ ಪ್ರಶ್ನೆಗೆ ಉತ್ತರವೂ ನಿಮ್ಮಲ್ಲೆ ಇದೆ. ಅದಕ್ಕೆ ಕೊಡಬೇಕಾದ ಸಮಯವೂ ನಿಮ್ಮ ಹತ್ತಿರಾನೇ ಇದೆ. ಸೋ, ಆ ಸಮಯಾನ ನೀಡಬೇಕಷ್ಟೇ.
ಮೊದಲು ಗಮನಿಸುವುದು, ನಂತರ ವಿಶ್ಲೇಷಿಸುವುದು, ತದನಂತರ ಅಪ್ಲೈ ಮಾಡುವುದು. ಮೊತ್ತ ಮೊದಲಿಗೆ ಕೆಲಸದ ನಡುವೆಯೂ ಬಿಟ್ಟು ಬಿಡದೆ ಕಾಡುವ ಕ್ರಿಯೇಟಿವ್ ಯೋಚನೆಗಳನ್ನು, ಐಡಿಯಾಗಳನ್ನು ಗಮನಿಸೋದು. ತದನಂತರ ನೀವಿರುವ ಪರಿಸ್ಥಿತಿಯಲ್ಲಿ ಅದಕ್ಕೆ ಸಮಯ ನೀಡಲು ನಿಮಗೆಷ್ಟು ಅನುಕೂಲತೆಗಳಿವೆ ಅನ್ನೊದನ್ನ ಸ್ಟಡಿ ಮಾಡೋದು. ತದನಂತರ ನಿಮ್ಮ ಮಿತಿಯೊಳಗೆ ಅದನ್ನು ಎಷ್ಟರ ಮಟ್ಟಿಗೆ ಅಪ್ಲೈ ಮಾಡಬಹುದು ಅನ್ನೊದರ ಕುರಿತಾಗಿ ಯೋಚಿಸೋದು. ಕೊನೆಯದಾಗಿ ಅಪ್ಲೈ ಮಾಡೋದು. ಅದು ಫೇಲಾಗಲಿ ಪಾಸಾಗಲಿ, ಏನೇ ಆದರೂ ಅದನ್ನು ಮುಕ್ತ ಮನಸ್ಸಿನಿಂದ ತೆಗೆದುಕೊಳ್ಳುವ ಮನಸ್ಥಿತಿ ನಿಮ್ಮದಾಗಬೇಕು. ಬಿದ್ದರೆ ಹಣ್ಣು, ಹೋದರೆ ಕಲ್ಲು ಅಂತಾರಲ್ಲ ಹಾಗೆ. ಕೊನೆಯಲ್ಲಿ ಒಂದು ಅನುಭವಂತೂ ನಿಮ್ಮ ಜೊತೆಲಿ ಹ್ಯಾಗೂ ಇರುತ್ತೆ. ಒಂದು ವೇಳೆ ಫೇಲಾದರೂ ನೀವು ನಿಮ್ಮ ಮಿತಿಯೊಳಗೆ ಮಾಡಿದ ಪ್ರಯತ್ನ ಬಹಳ ದೊಡ್ಡ ಮಟ್ಟದಲ್ಲಂತೂ ನಷ್ಟ ಮಾಡದು. ಅದಲ್ಲದಿದ್ದರೂ ಪ್ರಯತ್ನಿಸಿದ ತೃಪ್ತಿ ಅಥವಾ ಆ ಪ್ರಯತ್ನವನ್ನು ಇನ್ನೂ ಹ್ಯಾಗೆ ಉತ್ತಮಪಡಿಸಿಕೊಳ್ಳಬಹುದು ಅನ್ನೊ ಚಿಂತನೆಯಂತೂ ನಡೆದಿರುತ್ತೆ. ಕೊನೆಗೆ ಫೇಲಾಗಲಿ ಪಾಸಾಗಲಿ ವಾಟ್ ನೆಕ್ಸ್ಟ್ಅಂತಲೇ ಎದುರಿಗೆ ಬರೋದು…
ಒಬ್ಬ ಬಡ ಮಧ್ಯಮ ವರ್ಗದ ಹುಡುಗನಿಗೆ ಹೊಟ್ಟೆಪಾಡಾ ಅಥವಾ ಸಾಧನೆಯಾ ಅಂತ ಬಂದಾಗ, ಯಾವುದಕ್ಕೆ ಮೊದಲು ಆದ್ಯತೆ ಕೊಡಬೇಕು ಅನ್ನೊ ಪ್ರಶ್ನೆ ಹುಟ್ಟಿದಾಗ, ಯಾವುದ್ಯಾವುದಕ್ಕೆ ಎಷ್ಟೆಷ್ಟು ಸಮಯ ನೀಡುತ್ತೀರಿ ಅನ್ನೊದಷ್ಟೇ ಮುಖ್ಯವಾಗ್ತದೆ. ಹಾಗೆಯೇ ಪ್ರತಿಯೊಂದು ಒಂದಕ್ಕೊಂದು ಪರ್ಯಾಯವಾಗಿ, ಇಲ್ಲಾ ಪೂರಕವಾಗಿ ಇರುವಂತೆಯೂ ನೋಡಿಕೊಳ್ಳಬೇಕಾಗುತ್ತೆ.
–ಮಧುಕರ್ ಬಳ್ಕೂರು