ಕಾವ್ಯಧಾರೆ

ಪಂಜು ಕಾವ್ಯಧಾರೆ

ಯಾರ ಮಾನಸ್ಯಾಗ ಏನೈತೋ!

ಬೊಗಸೆಯಾಗೆ ಏನಿಲ್ಲ
ಕಣ್ಣ ತುಂಬಿ ಕಂಬನಿ ತುಳುಕ್ಯಾವಲ್ಲ
ಯಾರ ಮನಸ್ಯಾಗ ಏನೈತೋ
ಕಾಣದ ಆ ದ್ಯಾವನೆ ಬಲ್ಲ

ಹೊರಳ್ಯಾದ ಹಕ್ಕಿ ಮರಳಿ ಗೂಡಿಗೆ
ಹೋಗುವುದಾದರೂ ಹಾರಿ ಎಲ್ಲಿಗೆ?
ಹಾರಲಿಕ್ಕ ಇರುವುದು ಆಕಾಸ ದಿಟ
ಬದುಕೆನೆದ್ದರೂ ಭೂಮಿ ಮ್ಯಾಗೆ

ಎಲ್ಲಿಂದ ಬಂದಿಯೋ
ಅಲ್ಲಿಗೆ ಹೋಗಾಂವ ನೀ
ಖರೇ ಅಂದ್ರ ನಿನ ಬದ್ಕು ಮೂರು ದಿನದ ಸಂತಿ ಐತಿ
ಖದರಿರಲಿ ತಿಳಕೊಂಡು ಬಾಳು ನೀ

ಎಷ್ಟಾಂತ ಹೊರ್ತಿ
ಬವಣೆಗಳ ಮೂಟೆಗಳ
ಇಷ್ಟಲಿಂಗ ಇಟ್ಟಂಗ್ ಆಗತೈತೆ
ಯಾಕೆ ನೀ ಸುಮ್ನೆ ಚಿಂತಿ ಮಾಡ್ತಿ

ಎಲ್ಲರೂ ಸಾಯೋವ್ರೆ ಒಂದ್ ದಿವ್ಸ
ಅಮರ ಯಾರಿಲ್ಲ ಈ ಲೋಕದಾಗ
ನೀ ನಡದಂತೆ ದಾರಿ ತೆರಿತೈತಿ
ನಂಬಿಕಿ ಇರಲಿ ನಿನಗ, ನಿನ ಮ್ಯಾಗ

-ಜಬೀವುಲ್ಲಾ ಎಂ. ಅಸದ್

ಹಗ್ಗ ಜಗ್ಗಾಟ

ಹಗ್ಗ ಜಗ್ಗಾಟದಲಿ ಯಾರಾದರೊಬ್ಬರು
ಗೆರೆ ದಾಟಿ ಸೋಲುತ್ತಲಿರಬೇಕು
ಹಟ ಬಿಡದೆ ಜಗ್ಗಾಡಿ ಹಗ್ಗ ಹರಿದರೆ
ಹಗ್ಗವೂ ಇಲ್ಲ, ಜಗ್ಗಾಟವೂ ಇಲ್ಲ

ಒಮ್ಮೆ ಮುನಿದರೆ ರಮಿಸಬಹುದು
ಮತ್ತೊಮ್ಮೆ ಮುನಿದರೆ ಒಲಿಸಬಹುದು
ಮುನಿಯುತ್ತಲೇ ಇರುವವರ ಮನ್ನಿಸಲಾಗದು
ಹತಾಶೆಯ ಮೌನ ಒಮ್ಮೆ ಹುತ್ತಗಟ್ಟಿದರೆ
ಭೀಮನ ಗದೆಯೂ ಮುಕ್ಕಾಗುವುದು ಬಡಿದರೆ

ಬಾಗುವವರು ಬಾಗುತ್ತಲೇ ಇರುವರೆಂದು
ಮತ್ತೆ ಮತ್ತೆ ಬಾಗಿಸಲಾಗದು
ಬಾಗಿದ ಬಿಲ್ಲು ಹೆದೆಯೇರಿ ಸೆಟೆದರೆ
ಘಾತವೆಂತಾಗುವುದು ಬಲ್ಲಿರೇನು

ಪ್ರೀತಿಗೇನು? ಸಿಗುವುದು ದಂಢಿಯಾಗಿ
ಎಲ್ಲಿ ಬೇಕೆಂದರಲ್ಲಿ
ಅದು ಉಳಿಯುವುದು ಮಾತ್ರ ಯೋಗ್ಯತೆಯಿರುವಲ್ಲಿ
ವಿರಸವೆಂಬುದು ಒಂದೇ ಎಳೆಯ ಪಾಕ
ಹದಮೀರಿದರತ್ತ ಬಾಯಿಗೂ ಇಲ್ಲ ಬಚ್ಚಲಿಗೂ ಇಲ್ಲ

-ವಿನಯಚಂದ್ರ

ಮಿನುಗುವ ನಕ್ಷತ್ರಗಳು

ತಾಯಿಯೇ ದೇವರು
ನನ್ನ ತಂದೆಯೇ ನನಗೆ ಗುರುಗಳು
ಜೀವನ ದೋಣಿ ಎಳೆಯಲು

ತಾಯಿಯೇ ಪ್ರತಿಬಿಂಬ
ನನ್ನ ಪ್ರತಿ ಕೆಲಸಗಳಲ್ಲಿ
ಜೀವನ ಕಲಿಕೆಯ ಹಾದಿಯಲ್ಲಿ

ತಂದೆಯೇ ಗುರುಗಳು
ಮನೆಯ ನಿರ್ವಹಣೆ ಕಲಿಸಿದ ದೇವರು
ಜೀವನ ಪಾಠ ಶಾಲೆಯಲ್ಲಿ

ತಂದೆ ತಾಯಿ ಎರಡು ಕಣ್ಣುಗಳು
ಸದಾ ಆನಂದದಲ್ಲಿ ಮುಳುಗಿ ತೇಲುವೆ
ಜೀವನ ಆನಂದ ಸಾಗರದಲ್ಲಿ

ತಂದೆ ತಾಯಿ ನನಗೆ ದಾರಿ ದೀಪ
ನನಗೆ ಪ್ರತಿನಿಧಿಸಿ ಜೀವನ ಕಲಿಸಿದ
ಮಿನುಗುವ ನಕ್ಷತ್ರಗಳು

-ರಜನಿ ಜಿ

ಒಲವಿನ ವರ್ಷಧಾರೆ….

ಇಂದು ನಾಳೆ ಎಂದಿಗೂ ನೀ ನನ್ನವಳೆ
ಒಲವ ಮುತ್ತನು ಹಿಡಿದು ತಂದವಳೆ
ಹೊಸಆಶೆಯ ಬಾಳಲಿ ತುಂಬಿದವಳೆ
ಮಾಧುರ್ಯದ ಮಂದಾರವನು
ಹರಡಿದವಳೆ

ನೀನೆ ನನಗೆಲ್ಲ ನೀನಿಲ್ಲದೆನಿಲ್ಲ
ಬಯಕೆಗಳಿಗೆಲ್ಲ ನವ ಚೈತನ್ಯ ನೀಡಿದವಳೆ
ಆಶೆಯ ಅರಮನೆಯ ಅರಸಿ ನೀ
ರಸಮಯ ಸಲ್ಲಾಪದ ಸರಸಿ ನೀ

ಮಧುರ ಬಂಧುರ ಬಂಧನವಿದು
ಅಧರಗಳ ಅಮೃತದ ಅನುರಾಗವಿದು
ಕಣ್ಣಸನ್ನೆಗಳ ಸಂಚಿನ ಭಿನ್ನಾನದವಳೆ
ಮನಮೋಹಕ ಮೈ ಪರಿಮಳದವಳೆ

ಅಂಬರದಂತ ವಿಶಾಲ ಹೃದಯಿಯೇ
ಅಂಗಳದ ತುಂಬ ನಿನ್ನದೆ ಘಮ
ತಿಂಗಳನ ಬೆಳಕನು ಕದ್ದು ಹೊದ್ದವಳೆ
ಬೇಲೂರ ಶಿಲಾಬಾಲಿಕೆಯ ಅಂದದವಳೆ

ಮೋಹಕ ಮುಂಗುರುಳ ಕೆನ್ನೆಯವಳೆ
ಮಾಧಕ ಮೈಮಾಟಕೆ ಸೋತು
ಶರಣಾಗಿಹೆನು
ಶರಾಬಿ ನಿಶೆಯ ಕಣ್ಣಲಿ ಕೊಲ್ಲುವವಳೆ
ಮನದಲಿ ಅಲೆಅಲೆಯಾಗಿ ನಶೆ ತುಂಬಿದವಳೆ

ಮಾಧುರ್ಯವೇ ಮೈ ತಾಳಿ ನಿಂತ ಗಳಿಗೆ
ನೀನಿರಲು ಜೊತೆಯಲಿ ಅಂಜಲಾರೆ ಚಳಿಗೆ.

-ಜಯಶ್ರೀ ಭ ಭಂಡಾರಿ

ಬೇಕಾಗಿದ್ದಾರೆ

ಸ್ಬಾರ್ಥಬಯಸುವ
ಮೂಢರೊಳಗೆ ನಿಸ್ವಾರ್ಥದಿ
ಜನಸೇವೆಗೈಯುವ
ಜನನಾಯಕರು ಬೇಕಾಗಿದ್ದಾರೆ…

ಕಾವಿಯೊಳಗೆ ಕಾಮವಡಗಿಸಿ
ಕಗ್ಗತ್ತಲ್ಲನ್ನಾಳುವ
ಕಟುಕರ ನಡುವೆ
ಕರುಣಾಮಯಿಗಳು ಬೇಕಾಗಿದ್ದಾರೆ…

ನಾನು-ನನ್ನಿಂದ ಎಂಬುವವರ ನಡುವೆ
ನಾವು-ನಮ್ಮಿಂದ ಎಂಬ
ಭಾವವಿರುವ
ವ್ಯಕ್ತಿಗಳು ಬೇಕಾಗಿದ್ದಾರೆ…

ಅನ್ಯಾಯ,ಅನೀತಿಗಳಿರಿವ
ಈ ಜಗದಲಿ
ಶುಭದ ದಿಸೆ ತರಿಸುವ
ಸಜ್ಜನರು ಬೇಕಾಗಿದ್ದಾರೆ…

ಮಿತ್ಯದೊಳಗೆ ಸತ್ಯ ಹುಡುಕುವ
ಆಭಾಸದಲ್ಲೂ ಭಾವ
ತರಿಸುವ
ಪ್ರತಿಭಾವಂತರು ಬೇಕಾಗಿದ್ದಾರೆ..

ಬೇಕಾಗಿದ್ದಾರೆ ಈ ಭೂಮಿಗೆ
ಭೂಮಂಡಲವ ಉಳಿಸಿ-ಬೆಳೆಸುವ
ಸರಳ ಸಜ್ಜನಿಕೆಯ
ಮನುಕುಲದವರು ಬೇಕಾಗಿದ್ದಾರೆ….

-ಸುರೇಶ ತಂಗೋಡ

ಅರಳು ಮಲ್ಲಿಗೆ

ಹಿತ್ತಲ ತೋಟದಿ ಅರಳಿದ ಮಲ್ಲಿಗೆ
ಮೆಲ್ಲಗೆ ಸೆಳೆದಿದೆ ಗಮನವನು
ಮುತ್ತಿವೆ ಮುತ್ತಿಕ್ಕಿ ಹೀರುತ ಮಧುವನೆ
ಭೃಂಗವು ಹಾಡಿವೆ ಗಾನವನು

ಮಲ್ಲಿಗೆ ಗಿಡದಲಿ ಚೆಲ್ಲಿದ ಮೊಸರಿದೆ
ಕಂಪಲಿ ಬಿರಿದಿಹ ಗಂಧವಿದೆ
ಎಲ್ಲಿಗೆ ಹೋದರು ಅಲ್ಲಿಗೆ ಕಂಪಿದೆ
ಸುಂದರ ಹೂವಿಗೆ ಅಂದವಿದೆ

ಹೆಣ್ಣಿನ ಜಡೆಗದು ದೇವರ ಮುಡಿಗದು
ಸೇರುವ ತವಕವು ಹೂವಿಗಿದೆ
ಹುಟ್ಟಿಗು ಸಾವಿಗು ಅಪ್ಪುತ ಬೆರೆವುದು
ಭೇದವ ಮಾಡದೆ ಬೆಳಗುತಿದೆ

ಗಂಡನು ತಂದರೆ ಮಲ್ಲಿಗೆ ದಂಡನು
ಹೆಣ್ಣಿಗೆ ಉಕ್ಕುವ ಪ್ರೀತಿಯದು
ಸರಸಕು ಸನಿಹಕು ಗಂಟನು ಕಟ್ಟುವ
ಸುಂದರ ಭಾವದ ಕುಸುಮವಿದು.

ಚನ್ನಕೇಶವ ಜಿ ಲಾಳನಕಟ್ಟೆ.

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಪಂಜು ಕಾವ್ಯಧಾರೆ

  1. ಪಂಜು ಕಾವ್ಯಧಾರೆ
    ಎಂಬ ಅಂಕಣ ತುಂಬಾ ಸೊಗಸಾಗಿದೆ.ಕಾವ್ಯ ಬರೆಯುವವರ,ಕವಿತೆ ಪ್ರೀತಿಸುವವರ,ಕವನದ ಕುರಿತು ಮಾತನಾಡುವ,ಚೆರ್ಚಿಸುವ,ಆಸ್ವಾಧಿಸುವವರಿಗೆ ,ಓದುಗರಲ್ಲಿ ಆಸಕ್ತಿ ಮೂಡಿಸುತ್ತದೆ.ಹೀಗೆ ಮುಂದುವರಿಯಲಿ ಕಾವ್ಯ ಬರೆಯುವವರಿಗೆ ವೇದಿಕೆಯಾಗಲಿ.

Leave a Reply

Your email address will not be published. Required fields are marked *