ಯಾರು ಹಿತವರು ನಿನಗೆ
ಓ ಮನಸೇ
ಯಾರು ಹಿತವರು ನಿನಗೆ
ಒಮ್ಮೆ ಅತ್ತ ಬಾಗುವೆ
ಒಮ್ಮೆ ಇತ್ತ ಬಾಗುವೆ
ಒಮ್ಮೆ ಅತ್ತಿಂದಿತ್ತ ಇತ್ತಿಂದತ್ತ ಒದ್ದಾಡುವೆ.
ಓ ಮನವೇ
ಯಾರು ಹಿತವರು ನಿನಗೆ
ಗೆದ್ದರೂ ಸಹಿಸಲಾರೆ
ಸೋತರೂ ಸಹಿಸಲಾರೆ,
ಗೆದ್ದು ಸೋತಿಲ್ವ, ಸೋತು ಗೆದ್ದಿಲ್ವ
ಸೋಲು ಗೆಲುವುಗಳಿಲ್ಲದ ಜೀವನವುಂಟೇ
ಓ ಮನವೇ
ಯಾರು ಹಿತವರು ನಿನಗೆ
ಕನಿಕರ ಎಲ್ಲೂ ಕರಕರ ಎನ್ನುತಿಲ್ಲ
ಹಾನಿಕರವೇ ನಿನ್ನ
ಮೂಲಮಂತ್ರವಾಯಿತಲ್ಲ.
ಬದುಕಲಾರೆ, ಬದುಕಿಸಲಾರೆ.
ಓ ಮನವೇ
ಯಾರು ಹಿತವರು ನಿನಗೆ
ವರಿ ಆಗಿದ್ದಕ್ಕಿಂತ ಉರಿ ಆಗಿದ್ದೇ ಹೆಚ್ಚು, ಮಾತುಗಳಲ್ಲಿ ನಿಸ್ವಾರ್ಥತೆ
ಕೆಲಸ ಕಾರ್ಯಗಳಲ್ಲಿ ಸ್ವಾರ್ಥತೆ.
ಓ ಮನವೇ
ಯಾರು ಹಿತವರು ನಿನಗೆ.
ಒಳಗೆ ಬಳುಕು ಹೊರಗೆ ತಳುಕು
ಏನು ನಿನ್ನ ನೀತಿ ಏನು ನಿನ್ನ ಫಜೀತಿ,
ನಿತ್ಯ ಸತ್ಯವೋ ಮಿಥ್ಯ ನಿತ್ಯವೋ.
ಓ ಮನಸೇ
ಯಾರು ನಿನಗೆ ಹಿತವರು
ಇರುವುದು ಮೂರು ದಿನ
ನಿನ್ನ ದುರಾಸೆಗಳೇನು,
ಮದ ಮತ್ಸರಗಳೇನು, ಲೋಭಗಳೇನು
ಶಾಂತವಾಗಿರು
ಅಲೌಕಿಕವಾಗಿರು
ಸೌಮ್ಯವಾಗಿರು
ಬದುಕು ಬದುಕಲು ಬಿಡು
ಓ ಮನಸೇ
ಯಾರು ಹಿತವರು ನಿನಗೆ…
ಒಂದು ಟೊಮೆಟೋ ಕಥೆ
ತರಕಾರಿಗೆ
ಗಂಡ-ಹೆಂಡತಿಯನ್ನು
ಬೇರೆ ಮಾಡುವ ಶಕ್ತಿಯಿದೆ
ಎನ್ನುವುದು ಊಹೆಗೆ ನಿಲುಕದ,
ನಂಬಲಾಗದ ಸಂಗತಿ
ಇತ್ತೀಚಿಗೆ ಭೋಪಾಲ್ ನಲ್ಲಿ
ಡಾಬಾ ನಡೆಸುತ್ತಿದ್ದ
ದಂಪತಿ ನಡುವೆ ವಿರಸಕ್ಕೆ ಕಾರಣೀಭೂತವಾಗಿದ್ದು
ಒಂದು ಟೊಮೆಟೋ!
ಅತಿಶಯೋಕ್ತಿ ಎನಿಸಿದರೂ
ಸತ್ಯ ಸಂಗತಿ
ಕಾರಣವಂತೂ ಇನ್ನೂ
ಭಯಾನಕ ಮತ್ತು ಕೌತುಕ
ವಿಷಯವೇನೆಂದರೇ
ಅಮ್ಮ ಅವರನ್ನು ಕೇಳದೆ
ಒಂದು ಟೊಮೆಟೊವನ್ನು
ಹೆಚ್ಚುವರಿ ಬಳಸಿದ್ದು..
ಪರಿಣಾಮ ಅಮ್ಮಾವ್ರು
ಕುಪಿತಗೊಂಡು ತಂಗಿಯ ಮನೆ ಸೇರಿಬಿಡುವುದೇ!
ಅಂತೂ ಪತಿರಾಯ
ಪೋಲೀಸರ ಮಧ್ಯಸ್ಥಿಕೆಯಲ್ಲಿ
ಹೆಂಡತಿ ಮನವೊಲಿಸಿ
ಮನೆಗೆ ಬರುವಂಗೆ
ಮಾಡಿರುವುದು ದುಸ್ಸಾಹಸವೇ..
ತರಕಾರಿ ತಂದ ತಕರಾರು ನೋಡಿದ್ರಾ!
ಇದು ಒಂದು ಟೊಮೆಟೋ ಕಥೆ ಟೊಮೆಟೋಗೋದ ಮಾನ
ಆನೆ ಕೊಟ್ಟರೂ ಬರಲ್ಲ ಅಂತಾಯ್ತು
ಕಾಲಾಯ ತಸ್ಮೈ ನಮಃ...
-ಡಾ. ಡಿ ಎಸ್ ಪ್ರಭಾಕರಯ್ಯ