“ಅಂತರಂಗದ ಅರ್ಥವ್ಯಾಪ್ತಿಯನ್ನು ಹಿಗ್ಗಿಸಿ ಎಡತಾಕಿ ಕಾಡುವ ಒಂದು ಹದವಾದ ಕಥಾಕೃತಿ”: ಎಂ‌. ಜವರಾಜ್

ಮುಂಬೈನ ಭಾರತೀಯ ಸಾಹಿತ್ಯ ವಿಚಾರ ಸಂಕಿರಣವೊಂದರಲ್ಲಿ ಕಥೆಗಾರ ಯಶವಂತ ಚಿತ್ತಾಲರು “ಬರಹಗಾರ ಶ್ರೇಷ್ಟತೆಯ ವ್ಯಸನಕ್ಕೆ ತುತ್ತಾಗದೆ ಸಾಹಿತ್ಯದಲ್ಲಿ ಶಿಷ್ಟ ಕ್ಲಿಷ್ಟ ಶ್ರೇಷ್ಠ ಎಂಬಂಥ ‘ಮನೋ ಒರತೆ’ ಗೆ ಒಳಗೊಳ್ಳುವ ಒಳಸುಳಿಗಳ ರಚನೆ ಬಿಟ್ಟು ಸ್ಪಷ್ಟ, ಸರಳ, ಪ್ರಯೋಗಶೀಲ, ಸೃಜನಶೀಲ ರಚನೆಯತ್ತ ಚಿತ್ತ ಹರಿಸಿದರೆ ಅಂತಹ ಬರಹದಲ್ಲಿ ವಿಶಿಷ್ಟತೆ ಕಾಣಬಹುದು. ಇದರಿಂದ ಲೇಖಕನನ್ನು ಬರಹದ ಶ್ರೇಷ್ಟತೆಯ ವ್ಯಸನಕ್ಕೆ ತುತ್ತಾಗುವುದನ್ನು ತಪ್ಪಿಸುತ್ತದೆ. ಒಮ್ಮೆ ಈ ಶ್ರೇಷ್ಟತೆಯ ವ್ಯಸನ ಆವರಿಸಿದರೆ ಅದರಿಂದ ಹೊರ ಬರಲಾರದೆ ಆತನಿಂದ ಹೊಸತೇನನ್ನೂ ನಿರೀಕ್ಷಿಸಲಾಗದು” ಅನ್ನೊ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಈ ಆಲೋಚನೆ – ಹೊಸತನ್ನು ಬಯಸುವ ಓದುಗನ ಮನಸ್ಸಿಗೆ ‘ಹೊಸತಿನ ಹುಡುಕಾಟ’ವೇ ಒಂದು ಸೃಜನಶೀಲ ಶೋಧ. ಓದುಗನ ಈ ‘ಸೃಜನಶೀಲ ಶೋಧ’ವೇ ಬರಹಗಾರನಿಗೆ ನೀಡುವ ಅಮೂಲ್ಯ ಕಾಣ್ಕೆ. ಈ ಕಾಣ್ಕೆ, ಬರಹಗಾರನ ‘ಚೈತನ್ಯದ ಬರಹ’ಕ್ಕೆ ಬೇಸ್ಮೇಟ್ ಹಾಕುತ್ತದೆ. ಈ ಬೇಸ್ಮೇಟ್ ಅವನ ಪ್ರಯೋಗಾತ್ಮಕ ಬರಹಗಳಿಗೆ ತಾಂತ್ರಿಕವಾದ, ಅಷ್ಟೇ ಸೂಕ್ಷ್ಮ ಸಂವೇದನಾಶೀಲ ವಸ್ತು ವಿಷಯ – ಕಥೆ ಅಥವಾ ಕವಿತೆಯೊಂದಕ್ಕೆ ಮೂಲ ಪ್ರೇರಣೆ ಒದಗಿಸುತ್ತದೆ.ಇಂಥ ಶೋಧಕ್ಕೆ ಸಿಕ್ಕಿದ್ದು ಶರಣಬಸವ ಕೆ.ಗುಡದಿನ್ನಿ ಅವರ ‘ಏಳು ಮಲ್ಲಿಗೆ ತೂಕದವಳು’!

ಈ ಹಿಂದೆ ಪತ್ರಿಕೆಯೊಂದರಲ್ಲಿ ಗುಡದಿನ್ನಿ ಅವರ ‘ಧಣೇರ ಬಾವಿ’ ಎಂಬ ಕಥೆಯೊಂದನ್ನು ಓದಿದ್ದ ನೆನಪು. ಇದರ ಹೊರತಾಗಿ ಇವರ ನೇರ ಪರಿಚಯವಿಲ್ಲ. ಆದರೆ, ಗುಡದಿನ್ನಿ ಕಥೆಗಳು – ರಾಜ್ಯ ಮಟ್ಟದ ಕೆಲ ಕಥಾಸ್ಪರ್ಧೆಗಳಲ್ಲಿ ಗಮನ ಸೆಳೆದಿವೆ ಎಂಬುದಿಲ್ಲಿ ಗಮನಾರ್ಹ. ಜೊತೆಗೆ ‘ಧಣೇರ ಬಾವಿ’ ‘ಉಡದಾರ’ ಸಂಕಲನಗಳು ಸಹ ಇವರ ಈ ಹಿಂದಿನ ಪ್ರಕಟಿತ ಕೃತಿಗಳೆಂಬ ಮಾಹಿತಿ ಇಲ್ಲಿವೆ.
ಇರಲಿ,

ಈ ಸಂಕಲನದಲ್ಲಿ – ಭೂಮಿಗೆ ಅರ್ದ ಬೆಳದಿಂಗಳು, ಏಳು ಮಲ್ಲಿಗೆ ತೂಕದವಳು, ತಾಂಬೇಲು, ಖುದಾ ಹಫೀಜ್, ಹೂವಿನಂಗಡಿ, ಪುಲಾರ, ಪುಷ್ಪ ವೀರ ವೇಣಿ, ನೆಟ್ ಪ್ರಾಕ್ಟೀಸ್ – ಹೀಗೆ ಒಟ್ಟು ಎಂಟು ಕಥೆಗಳಿವೆ.

ಈ ಕಥೆಗಳಿಗು ಮುನ್ನ “ಆಗಿನ್ನು ಬೀದಿ ದೀಪಗಳು ಇದ್ದವಾದರೂ ಮನೆಗಳಿಗೆ ಕರೆಂಟು ಬಂದಿರಲಿಲ್ಲ. ಅಮ್ಮ ಕೂಲಿಯಿಂದ ಬಂದವಳೇ ಎರಡು ಕಾಳು ನೀರು ಬೆನ್ನಿಗಾಕಿಕೊಂಡು ಉಸ್ಸ್ ಅಂತ ಉಸಿರು ಬಿಡುತ್ತಾ ಅನ್ನಕ್ಕೆ ಎಸರಿಡುತ್ತಿದ್ದಳು. ಹಾಗೆ ಅನ್ನ ಕುದಿಯುವ ಅಷ್ಟೊತ್ತು ನಾನು ಆಕೆ ಮಡಿಲಲ್ಲಿ ಮಲಗಿ ಕತೆ ಹೇಳಲು ದುಂಬಾಲು ಬೀಳುತ್ತಿದ್ದೆ. ಹಗಲೆಲ್ಲ ದುಡಿದು ಧಣಿದಿದ್ದರೂ ಅವ್ವ ಚೂರೂ ಬ್ಯಾಸರ ಮಾಡಿಕೊಳ್ಳದೆ ಮುದ್ದು ಮಾಡುತ್ತಲೇ ‘ಏಳು ಮಲ್ಲಿಗೆ ತೂಕದ ಸುಂದರಿ’ಯ ಕತೆಯನ್ನು ಹೇಳುತ್ತ ಮೈ ಮರೆಯುತ್ತಿದ್ದಳು” ಎನ್ನುವ ಗುಡದಿನ್ನಿ ತನ್ನ ಕಥಾಲೋಕದ ಹಿಂದಿನ inspire ಬಗೆಗಿನ ಗುಟ್ಟು ಬಿಚ್ಚಿಡುವುದರ ಜೊತೆಗೆ ತನ್ನ ಅವ್ವನ ವ್ಯಕ್ತಿತ್ವವನ್ನು ತುಂಬಾ ಆಪ್ತವಾಗಿ ತೆರೆದಿಡುತ್ತಾರೆ.

ನಮ್ಮ ಹೊಸ ತಲೆಮಾರಿನ ಲೇಖಕ ರಂಗಕರ್ಮಿ ಮಹಾದೇವ ಹಡಪದ ನಟುವರ ಸಹ ಈತರಹದ್ದೇ ಭಾವವನ್ನು ತಮ್ಮ ‘ಬಯಲುಡುಗೆಯ ಬೊಂತಾ’ ಸಂಕಲನದಲ್ಲಿ ವ್ಯಕ್ತಪಡಿಸಿದ್ದಾರೆ. ಹಾಗೆ ವೈಯಕ್ತಿಕವಾಗಿ ನನ್ನ ಕಥೆಗಳ ಹಿಂದೆಯೂ ನನ್ನ ಅಪ್ಪ ಹೇಳುತ್ತಿದ್ದ ಬಗೆಬಗೆಯ ರೋಚಕ ಕಥೆಗಳ ನೆರಳಿನ ನಂಟಿದೆ.

ಅಂದರೆ ಪ್ರತಿ ಲೇಖಕನ ಬರಹದ inspire ಅವ್ವನೊ ಅಪ್ಪನೋ ಆಗಿರುವುದು; ಅವ್ವ ಅಪ್ಪ, ತೊಡೆಯ ಮೇಲಿದ್ದಾಗಲೊ ಮಗ್ಗುಲಲ್ಲಿ ಮಲಗಿದ್ದಾಗಲೊ ಲಾಲಿಯ ರೂಪದಲ್ಲಿ ತನ್ನ ಮಗುವಿಗೆ ಹೇಳುವ ಕಥೆ. ಈ ಕಥೆಯೊಳಗಿನ ಕರುಳ ಸಂಕಟ, ಅನುಭಾವ ಗುಚ್ಛಗಳ ಅಪರೂಪದ ಗುಣ ವಿಶೇಷಣ ಕಾಣಬಹುದು. ಈ ಗುಣ ವಿಶೇಷಣದೊಂದಿಗೆ ಅಚ್ಚುಕಟ್ಟಾಗಿ ಕಥೆ ಕಟ್ಟಿ ಹೇಳುವ ಗುಡದಿನ್ನಿ ಅವರ ‘ಭೂಮಿಗೆ ಅರ್ದ ಬೆಳದಿಂಗಳು’ ದೇವದಾಸಿ ಪದ್ದತಿಯೊಂದರ ಸಂಪ್ರದಾಯದ ವಿಧಿವಿಧಾನವನ್ನು ಕೆದಕುತ್ತಾ ಹೋಗುವ ಒಂದು ವ್ಯಾಕುಲದ ಕಥೆ.

ದೇವದಾಸಿ ಪದ್ದತಿಯಲ್ಲಿ ಭೋಗವೇ ಪ್ರಧಾನ. ಸೇವೆ, ಸೇವಕ, ಸೇವಕಿ ನಂತರದ್ದು. ಉಳ್ಳವರು, ಮೇಲುವರ್ಗದವರು ಭೋಗದ ಜೀವನಕ್ಕಾಗಿ ‘ಹುಟ್ಟಿಸಿಕೊಂಡ’ ಪದ್ದತಿ. ಹೆಣ್ಣು ಪ್ರಧಾನ ಅಂದುಕೊಂಡರು ಪ್ರಕೃತಿಗೆ ವಿರುದ್ದವಾಗಿ ಗಂಡು ಹೆಣ್ಣಾಗಿ ಪರಿವರ್ತನೆ ಆದ ಹೊತ್ತಲ್ಲಿ ಪುರುಷನನ್ನು ಸಹ ದೇವರ ಸೇವಕನಾಗಿ ನೇಮಿಸುವ ಸಂಪ್ರದಾಯ ಬದ್ಧ ಪದ್ದತಿಯೊಂದೂ ಆಚರಣೆಯಲ್ಲಿದೆ. ಇದು ರಂಗಭೋಗ. ಈ ರಂಗಭೋಗದ ಅಂಗವಾಗಿ ಸ್ತ್ರೀಯೊಡನೆ ಪುರುಷರೂ ನರ್ತಿಸುವುದು. ಪುರುಷರೂ ದೇವರಿಗೆ ದಾಸರಾಗುವ ಸಂಪ್ರದಾಯದಲ್ಲಿ ಸ್ತ್ರೀಯಂತೆ ಪುರುಷರೂ ಅಲಂಕರಿಸಿಕೊಳ್ಳುವುದು. ನಂತರ ಆತನನ್ನು ‘ಸೇವೆಗೆ’ ತೊಡಗಿಸುವುದು. ಈ ಸೇವೆ ಮಹಾರಾಷ್ಟ್ರ, ಕರ್ನಾಟಕದ ಹಲವು ಕಡೆಗಳಲ್ಲಿ ಇಂದಿಗೂ ಇದೆ. ಅದರಲ್ಲಿ ಸವದತ್ತಿ ಎಲ್ಲಮ್ಮನ ಗುಡಿಯೂ ಒಂದು. ಈ ಎಲ್ಲಮ್ಮನ ದೇವದಾಸಿಯರನ್ನು – ದೇವರ ಸೂಳಿ, ಎಲ್ಲಮ್ಮನ ಸೂಳಿ, ಬಸವಿ ಜೋಗತಿ – ಎಂಬ ಪದ ಬಳಕೆಯೂ ಇದೆ. ಇದರ ಮೂಲ ಗ್ರೀಸ್, ಸೈಪ್ರಸ್, ಮಿಸಿಸಿಪ್ಪಿ ಎಂದು ಗುರುತಿಸಲಾಗಿದೆ. ಈ ಪದ್ದತಿ ತೀರಾ ಪ್ರಾಚೀನವಾದುದು ಎಂಬುದಾಗಿ ಕನ್ನಡದ ಹಿರಿಯ ಸಂಶೋಧಕರೊಬ್ಬರು ಸಂಕ್ಷೇಪವಾಗಿ ಈ ಬಗ್ಗೆ ದಾಖಲಿಸುತ್ತಾರೆ.

ಅಂತೆಯೇ ಈ ಪದ್ದತಿ ಈಗಲೂ ಭಾಗಶಃ ತನ್ನ ಅಸ್ತಿತ್ವ ಉಳಿಸಿಕೊಂಡಿರುವುದರ ದ್ಯೂತಕವಾಗಿ ಗುಡದಿನ್ನಿ ಅವರ ‘.. ಬೆಳದಿಂಗಳು’ ಕಥೆಯೊಳಗೆ ಸೂಚ್ಯವಾದ ವಿವರಗಳಿವೆ.

ಈ ಕಥೆಯೊಳಗೆ ಅಪ್ಪನಿದ್ದಾನೆ. ಅವನ ನಡೆ, ಮಗ ವಾದಿಯ ಆಂತರ್ಯವನ್ನು ಸದ್ದಿಲ್ಲದೆ ಕೆಣಕುತ್ತದೆ. ವಾದಿಯ ಜೀವನ ಶೈಲಿ ಪಾರಂಪರಿಕ ಸಂಪ್ರದಾಯವನ್ನು ಮೀರಿದ್ದು. ಗಂಡು ಹೆಣ್ಣಾಗಿ ರೂಪಾಂತರವಾಗುವ ಅವನ ಗೆಳೆಯ ರಾಘು. ತದ ನಂತರದಲ್ಲಿ ಅವನ ಸೂಕ್ಷ್ಮ ಗ್ರಹಿಕೆಗೆ ಸಿಕ್ಕ ಅಪ್ಪ ಬದುಕಿದ ರೀತಿ, ಇಂಥ ಗ್ರಹಿಕೆಗೆ ಪೂರಕವಾಗಿ ಅಪ್ಪನ ಕುರಿತು ಅವನವ್ವ ಆಡುವ ಮಾತು: “ಅದೇನ ಮಾಡಿದ್ರು ಮನಿವೊಳಗ ಆ ಮೂಲಿ ಕತ್ಲ ಕೋಣ್ಯಾಗ ಮಾಡ್ರಿ, ನನ ಮಡಿ ಸೀರಿ ಉಟಗಾರಿ, ನನ ಬ್ಲೌಜ ಲಂಗ ಎಲ್ಲಾ ನಿಮ್ತಾಕ ಇರ್ಲಿ, ಆದರ ಹುಡುಗೂರ ಸಾವಸಕ ಹೋಗೋದು ಬ್ಯಾಡ, ನಾಳಿ ಗೊತ್ತಾದ್ರ ಊರಾಗ ತಲೀ ಎತ್ತಿ ತಿರಗಾದ ಹೆಂಗಾ ಹೊಟ್ಯಾಗ ಹುಟ್ಟಿದ ಮಕ್ಳು ಬಾಳೇವೆಂಗ?” ಅಂತ ಧೇನಿಸಿ ಧೇನಿಸಿ ಬೇಡುವ ಅಷ್ಟೂ ವರ್ಷದ ಅವಳ ಜೀವಿತದ ಆತಂಕದ ಸ್ಥಿತಿ ಅವನನ್ನು ಇನ್ನಿಲ್ಲದಂತೆ ಕಾಡುತ್ತದೆ. ಅದು ಅಪ್ಪನ ಬಗ್ಗೆ ಅವಿತಿರುವ ಸತ್ಯವೊಂದು ಧ್ಯಾನಸ್ಥವಾದ ಎದೆಯ ಅಂಗಳದಲ್ಲಿ ಬಟಾಬಯಲಾಗಿ ಮೌನವೇ ರೂಪಾಂತಗೊಂಡು ಗಾಢವಾಗಿ ಶರಣಾಗತಿ ಸೂಚಿಸುವ ಪರಿಯಂತೆ ಭಾಸವಾಗುತ್ತದೆ.

ಸಹಜವಾಗಿ ಬದುಕಲಾಗದ ವಾದಿಯ ಅಪ್ಪ ಊರಲ್ಲಿ ‘ಬಲಿಷ್ಠ’ ವ್ಯಕ್ತಿ; ಅದೇ ಕಾಲಕ್ಕೆ ಸಹಜವಾಗಿ ಸತ್ಯ ಹೇಳಿಕೊಳ್ಳಲಾಗದ ಅವ್ವನ ವ್ಯಾಕುಲತೆ; ಅಪ್ಪನ ಅಸಹಜ ಕ್ರಿಯಾ ನಡಾವಳಿ; ಈ ನೆಲೆಯಲ್ಲಿ ತನ್ನ ಹುಟ್ಟಿನ ಬಗ್ಗೆ ಶಂಕೆ; ರಾಘುವಿನ ಅವ್ವ ಮಲ್ಲವ್ವನ ಮನೋವೇದನೆ; ಇಷ್ಟನ್ನು ತನ್ನ ಎದೆಯ ತಕ್ಕಡಿಯಲ್ಲಿ ತೂಗುವ ವಾದಿಯ ನೈಜತೆ; ಇದು ಅವನೊಳಗೆ ಪರಿಭ್ರಮಿಸಿ ಚಂಚಲವಾಗಿ, ಸತ್ಯ ಹೇಳಲಾಗದ/ ಸಮಾಜದಲ್ಲಿ ನೇರವಾಗಿ ಧೈರ್ಯವಾಗಿ ಬದುಕಲಾಗದೆ ಹೆಣಗಿ ಹೆಣವಾಗುವ ಅಪ್ಪ; ಈ ಪರಿಯಲ್ಲಿ ಪ್ರಶ್ನೆಯಾಗೇ ಉಳಿವ ಅವನ ನಿಲುವಿನಲ್ಲಿ – ‘ಭೂಮಿಗೆ ಅರ್ದ ಬೆಳದಿಂಗಳು’ ಕಟ್ಟಿಕೊಡುವ ಚಿತ್ರ ವಿವರಿಸಲಾಗದೆ ತನ್ನ ಅಂತರಂಗದ ಅರ್ಥವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದೆ.

ಪುರಾಣ, ಐತಿಹಾಸಿಕ, ಜಾನಪದ ವಸ್ತು ವಿಷಯಗಳು ಕಥೆಗಳಾಗಿ ಕಾದಂಬರಿಗಳಾಗಿ ನಾಟಕಗಳಾಗಿ ಸಾಕಷ್ಟು ರಚಿತಗೊಂಡಿವೆ. ಪುರಾಣೇತಿಹಾಸ ಓದುವ ಎಲ್ಲರಿಗೂ ಗೊತ್ತಿರುವ ವಿಷಯಗಳು, ಘಟಿಸಿದ ಘಟನೆಗಳು ಕಾಲದಿಂದ ಕಾಲಕ್ಕೆ ಹೊಸ ಹೊಸ ಲೇಖಕರಿಂದ ಭಿನ್ನ ಪ್ರಯೋಗಗಳನ್ನು ಕಂಡಿವೆ. ಇಂಥ ಪ್ರಯೋಗದ ಕಥೆಗಳಲ್ಲಿ ಗುಡದಿನ್ನಿ ಅವರ ‘ಖುದಾ ಹಫೀಜ್’ ಕೂಡ ಒಂದು.

ಮೂರನೇ ಮೈಸೂರು ಯುದ್ಧದಲ್ಲಿ ಟೀಪು ಸೋತು ತನ್ನ ಇಬ್ಬರು ಮಕ್ಕಳನ್ನು ಬ್ರಿಟೀಷರಿಗೆ ಒತ್ತೆ ಇಡುವ ಸನ್ನಿವೇಶದ ಒಂದು ಚಿತ್ರಣವನ್ನು ವಿಸ್ತೃತವಾದ ಘಟನಾವಳಿಯನ್ನು ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿರುವ ಕಥೆ ಇದು.

ಅದಾಗಿ ಆ ಒಂದು ಸಂಜೆ, ಆ ಒಂದು ರಾತ್ರಿ, ಆ ಒಂದು ಬೆಳಗಿನ ಸನ್ನಿವೇಶದ ಚಿತ್ರಣದ ದೃಶ್ಯದಲ್ಲಿ ಟೀಪುವಿನ ಕರುಳ ಸಂಕಟವನ್ನು ಗುಡದಿನ್ನಿ ನಿರೂಪಿಸಿರುವ ವ್ಯವಧಾನ ಅವರಲ್ಲಿನ ಒಂದು ಬಗೆಯ ಕಥಾ ಕೌಶಲವನ್ನು ಕಾಣಬಹುದು.

ಕಳಿಂಗ ಯುದ್ದದ ನಂತರ ಹಿಂಸೆ, ರಕ್ತಪಾತ, ಸಾವು, ನೋವಿನ ಘೋರತನ ಕಂಡು ಅಶೋಕನಿಗೆ, ತನ್ನ ವರ್ತನೆಯಿಂದ ತನಗೆ ತಾನೇ ತನ್ನೊಳಗಿನ ಅಸಹ್ಯ, ಕೆಟ್ಟತನ, ಕೇಡಿನ ಮನಸ್ಥಿತಿಯನ್ನೇ ಶಪಿಸಿ ಬೇಸತ್ತು ಹಿಡಿದ ಕತ್ತಿಯನ್ನು ಸಾವಾಕಾಶವಾಗಿ ಕೆಳಗಿಟ್ಟು ಸ್ತಬ್ಧವಾಗುತ್ತಾನೆ. ಅಲ್ಲಿ ಬುದ್ಧನ ಬೆಳಕೊಂದು ಢಾಳಾಗಿ ಪ್ರಜ್ವಲಿಸಿದಂತೆ ಧ್ಯಾನಸ್ಥ ಮನಸ್ಥಿತಿಯೊಂದು ರೂಪುಗೊಂಡು ಮನ ಪರಿವರ್ತನೆಯಾದಂತೆ, ಇಲ್ಲಿ ಟೀಪುವಿಗೂ ಆ ತರಹದ್ದೇ ಪರಿಸ್ಥಿತಿ ಸನ್ನಿವೇಶವೊಂದು ಧುತ್ತನೆ ಬಂದೆರಗುತ್ತದೆ.

ಬ್ರಟೀಷರಿಗೆ ತನ್ನ ಮಕ್ಕಳನ್ನು ಒತ್ತೆ ಇಟ್ಟ ಸನ್ನಿವೇಶದಿಂದ ವಿಚಲಿತನಾಗಿ, ನಾಳೆ ಅವರು ತನ್ನೊಂದಿಗೆ ಇರುವುದಿಲ್ಲ ಎಂಬುದನ್ನು ನೆನೆದು- ಈಗಾಗಲೇ ತಾನು ಮಾಡಿರಬಹುದಾದ ಯುದ್ದ, ಆ ಯುದ್ದದಿಂದ ಆದ ಹಿಂಸೆ, ರಕ್ತಪಾತ, ಸಾವು ನೋವಿನಿಂದ ನೆರೆಹೊರೆ ಜನ, ಸಂಸಾರ, ಮಕ್ಕಳ ಆಕ್ರಂದನ ಎಲ್ಲವೂ ಒಮ್ಮೆಲೆ ಅವನ ಅಂತರಂಗವನ್ನು ಕೆಣಕುತ್ತದೆ.

ಇದಲ್ಲದೆ ಟೀಪು ಒತ್ತೆಯಾಳು ಮಕ್ಕಳಾದ ಶಹಜಾದೆ ಮುಇಜುದ್ದೀನ್, ಅಬ್ದುಲ್ ಖಾಲಿಕ್ ರನ್ನು ತಬ್ಬಿ ನೇವರಿಸಿ ಹಣೆಗೆ ಮುತ್ತಿಟ್ಟು ‘ಖುದಾ ಹಫೀಜ್’ ಅಂತ ಕಣ್ಣೀರ್ಗರೆದು “ನಾನು ಸೇಂದಿ ಸಾರಾಯಿಗೆ ರಾಜ್ಯದಲ್ಲಿ ಅನುಮತಿ ಕೊಟ್ಟರೆ ನಾಳೆಯೇ ಈ ಸುಲ್ತಾನ ಮಕ್ಕಳನ್ನು ತನ್ನ ಸಾಮ್ರಾಜ್ಯಕ್ಕೆ ಮರಳಿ ತರಬಲ್ಲ! ಆದರೆ ಪ್ರಜೆಗಳ ಎದೆಗೆ ವಿಷವುಣಿಸಿ ಸ್ವಂತ ಮಕ್ಕಳ ಕಾಯ್ವ ಸ್ವಾರ್ಥ ನನಗಿಲ್ಲ” ಅನ್ನೊ ಅವನ ಅಂತಕರಣದ ಮಾತು ಎಷ್ಟು ದೇಶಪ್ರೇಮ ಎಷ್ಟು ಪ್ರಜಾಪ್ರೇಮ ಎನ್ನುವ ಮಾನವೀಯ ತುಡಿತವನ್ನು ಗುಡದಿನ್ನಿ ಸೂಕ್ಷ್ಮವಾಗಿ ಹೆಣೆದಿದ್ದಾರೆ.

ಹಾಗೆ, ಶಿಲ್ಪಿಯೊಬ್ಬ ಕಾಡ ಕಲ್ಲೊಂದನ್ನು ಕೆತ್ತಿ ಶಿಲ್ಪವಾಗಿಸಿದಂತೆ ಖಡ್ಗ ಹಿಡಿದು ಬ್ರಿಟೀಷರ ವಿರುದ್ದ ದೇಶಕ್ಕಾಗಿ ಪ್ರಾಮಾಣಿಕವಾಗಿ ಹೋರಾಡಿದ್ದ ಟೀಪುವಿನ ಪ್ರಬುದ್ಧತೆ, ಸಾಮರಸ್ಯ ನಡೆ, ಮೌಲ್ಯಧಾರಿತ ರಾಜಕೀಯ ಬದುಕನ್ನು ‘ಖುದಾ ಹಫೀಜ್’ ಭಿನ್ನವಾಗಿ ತೆರೆದಿಡುತ್ತದೆ.

ಕೋಮುದ್ವೇಷ ಇವತ್ತಿನ ಆತಂಕ. ಈ ಒಂಭತ್ತು ವರ್ಷಗಳಲ್ಲಿ ಈ ದೇಶದ ತುಂಬೆಲ್ಲ ಹಿಂದೆಂದೂ ಕಂಡಿರದ ಧರ್ಮದ್ವೇಷದ ಕಾರಣ ಕೊಲೆ ಸುಲಿಗೆ ಅತ್ಯಚಾರ ಅನಾಚಾರ ನಡೆದು ಹೋಗಿವೆ. ಹಿಂದು ಮುಸ್ಲಿಂ ಗಲಭೆಗಳಿಂದ ಜನ ತತ್ತರಿಸಿದ್ದಾರೆ. ಅಲ್ಪ ಸಂಖ್ಯಾತ ಜೀವಜ್ಜೀವಗಳು ನಲುಗಿವೆ. ಮಾನವೀಯ ಮೌಲ್ಯವನ್ನೇ ಅಣಕಿಸುವ ವಿಲಕ್ಷಣಗಳು ನಡೆದು ಹೋಗಿವೆ. ಅಂತಹ ಚಿತ್ರಣದ ‘ಹೂವಿನಂಗಡಿ’ ಆಯೇಷಾ – ಕರೀಂ ಕುಟುಂಬ ಜೀವನ ಚಿತ್ರವನ್ನು ಅನಾವರಣಗೊಳಿಸುವುದರೊಂದಿಗೆ ಪ್ರಸ್ತುತ ಭಾರತದ ಹಳ್ಳಿ ನಗರ ಪಟ್ಟಣವಾಸಿ ಮುಸ್ಲಿಂ ಜನರ ಬದುಕು ಬವಣೆ ತಲ್ಲಣವನ್ನು ಬಗೆಬಗೆಯಾಗಿ ಚರ್ಚಿಸುತ್ತದೆ.

ನಿಷ್ಠೆಗೆ ಹೆಸರಾದ ಕರೀಂ ಹೂವಿನಂಥ ಮನಸ್ಸಿನವನು. ಜಾತಿ ಧರ್ಮಗಳಾಚೆ ಮಾನವೀಯವಾದ ಸ್ಪಂದನೆಯನ್ನು ಇರಿಸಿಕೊಂಡು ಪ್ರೀತಿ, ಪ್ರೇಮ, ಸಾಮರಸ್ಯದ ಜೀವನದ ಮೂಲಕ ಮಾದರಿ ವ್ಯಕ್ತಿತ್ವವನ್ನು ರೂಪಿಸಿಕೊಂಡವನು. ಇಂಥ ಅಪರೂಪದ ಜಾತ್ಯಾತೀತ, ಧರ್ಮಾತೀತ, ಕಾಯಕ ನಿಷ್ಠೆ , ವ್ಯಕ್ತಿತ್ವ ನಿಷ್ಠೆಯ ಮೇಲೆ ಕಿಡಿಗೇಡಿ ಧರ್ಮಾಂಧರಿಂದ ಘೋರ ಕೃತ್ಯ ಜರುಗುತ್ತದೆ. ಯಾರ ಮೇಲೂ ದ್ವೇಷ ಕಾರದ ಕರೀಂ- ಆಯೇಷಾ, ಮುಂದಾಗುವ ಪರಿಣಾಮಗಳ ನೆನೆದು ಆತಂಕಗೊಳ್ಳುತ್ತಾರೆ. ಇದರ ನಡುವೆ ಮೌಲಸಾಬ್ ತರಹದವರು ಕರೀಂ ಗಾದ ಹಲ್ಲೆ ಅಪಮಾನ ನಮ್ಮಿಡೀ ಮುಸ್ಲೀಂ ಜನಾಂಗಕ್ಕೆ ಆಗಿದೆ ಎಂಬಂತೆ ಕ್ರುದ್ಧಗೊಂಡು ತನ್ನ ಕ್ರುದ್ಧತನವನ್ನು ತೋರುತ್ತಾನೆ. ಆದರೆ ಕರೀಂ ಸಮಚಿತ್ತಭಾವದಿಂದಲೇ ಪರಾಮರ್ಶಿಸುತ್ತಾನೆ. ಅವನ ಪರಾಮರ್ಶೆ ಮೌಲಸಾಬ್ ನ ಮನಸ್ಥಿತಿಯನ್ನು, ಈಗಾಗಲೇ ತನ್ನ ಹಾಗು ತನ್ನ ಹೂವಿನಂಗಡಿ ಧ್ವಂಸಗೊಳಿಸಿದ ಹಿಂದೂ ವಿಕೃತ ಮನಸ್ಥಿತಿಗೆ ತುಲನೆ ಮಾಡಿ ಈ ಈರ್ವ ಮನಸ್ಥಿತಿಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲವೆಂಬಂತೆ ಮನಸಲ್ಲೆ ನಕ್ಕು ಮಸೀದಿಯ ಪ್ರಾಂಗಣದಿಂದ ಕಾಲ್ದೆಗೆದು ಮೌಲಸಾಬ್ ನ ದ್ವೇಷತನವನ್ನು ತಣ್ಣಗೆ ಹೊಸಕುವ ದೃಶ್ಯ ಗುಡದಿನ್ನಿ ಅವರ ಸೂಕ್ಷ್ಮ ಕಥಾ ರಚನೆಗೆ ಸಾಕ್ಷಿ. ಹಾಗೆ ಈ ಸನ್ನಿವೇಶದ ಚಿತ್ರಣ ರಕ್ತಸಿಕ್ತ ನೆಲವಾಗಿ ಮಾರ್ಪಡುವುದನ್ನು ತಡೆಯುವಂಥ ಮನೋಸ್ಥಿತಿ ಸಾಮರಸ್ಯದ ಬೆಸುಗೆಯಾಗಿ ‘ಹೂವಿನಂಗಡಿ’ ಕಥೆ ಪ್ರಚಲಿತ ವಸ್ತು ವಿಷಯಾಧಾರಿತವಾಗಿದೆ.

ಈ ಸಂಕಲನದ ಆಳವಾದ ಧ್ವನಿಪೂರ್ಣ ಕಥೆ ‘ಪುಲಾರ’. ಇದು ಕುಕ್ಕರಳ್ಳಿ ಬಸವರಾಜು ಅವರ ‘ಕಾಲನೊದ್ದವರು’ ನೀಳ್ಗತೆಯ ವಸ್ತುವಿಷಯವನ್ನೇ ಮೈಯೊದ್ದಂತಿರುವ ಬಹುಮುಖ್ಯವಾಗಿ ಗಮನ ಸೆಳೆವ, ಕಥಾದೃಷ್ಟಿಯ ನಿರೂಪಣೆಯಲ್ಲಿಯೂ ಸಹ ಒಂದು ಸಮಾನ ಎಳೆಯದ್ದಾಗಿದೆ.

‘ಕಾಲನೊದ್ದವರು’ ಕತೆ ನಂಜಿ ಮತ್ತು ಅವಳ ಬದುಕನ್ನು ಹೇಳುತ್ತದೆ. ಅವಳ ಸಂಕಲ್ಪ , ಸ್ವಾಭಿಮಾನ, ದುಡಿಮೆಯ ತುಡಿತದ ತುಮುಲತೆಯನ್ನು ಬಸಿದು ಹೇಳುತ್ತದೆ. ಅವಳ ಕಾಯಕ ನಿರ್ವಹಣೆ ಜಾನುವಾರಗಳ ಸೆಗಣಿಯ ಬೆರಣಿಯಿಂದ ಆರಂಭವಾಗುತ್ತದೆ. ಆರಂಭದಲ್ಲಿ ಅದು ಅವಳಿಗೆ ‘ಹೀಗೂ ಉಂಟಾ..’ ಅನಿಸಿದ್ದಿದೆ. ಬರಬರುತ್ತ ಒಂದು ಸಂಸಾರದ ನೊಗವಾಗಿ ರೂಪಾಂತರವಾಗುತ್ತದೆ. ನಂಬಿದ ಕಾಯಕ ಅವಳನ್ನು ಬದುಕಿನ ಮಿತಿಯೊಳಗೆ ಬಹು ಎತ್ತರಕ್ಕೆ ಕೊಂಡೊಯ್ಯುತ್ತದೆ. ಇವಳ ದುಡಿಮೆಯ ಫಲವನ್ನು ಉಣ್ಣುವ ಗಂಡ ಕಾಯಕವನ್ನೆ ಮರೆತು ಭೂಮಿಗೆ ಭಾರವಾಗಿ ಅವಳಲ್ಲಿ ಸಿಟ್ಟು ಸೆಡವು ಕಾಣಿಸಿಕೊಂಡರು ಜಾಣ್ತನದಿಂದ ಗಂಡನನ್ನು ಒಂದು ಸ್ಥಿತಿಗೆ ತರುವ ಪ್ರಯತ್ನದಲ್ಲಿ ಅವಳ ಅಸಲೀತನ ಗೋಚರಿಸುತ್ತದೆ.

ಅವಳ ಕಾಲಘಟ್ಟದ ಬದುಕು ರೋಚಕ ತಿರುವು ಪಡೆದುಕೊಳ್ಳುತ್ತಿರುವ ಹೊತ್ತಲ್ಲೆ ಪರಿವರ್ತನೆಯ ಗಾಳಿ ಬೀಸುತ್ತದೆ. ಸಮಾಜದ ಓರೆಕೋರೆಗಳು ಸಡಿಲಗೊಂಡು ಬಿಡುಬೀಸಾಗಿ ನಿರ್ವಹಿಸುತ್ತವೆ. ಜಾಗತೀಕರಣ ತಂದೊಡ್ಡುವ ಅಪಾಯಗಳು ನಂಜಿಯ ಬದುಕಿನಲ್ಲಿ ನಿಧಾನಕೆ ಆವರಿಸುತ್ತವೆ. ಕಲ್ಲು ಮಣ್ಣಿನ ರಸ್ತೆಗಳು ಡಾಂಬರಾಗಿ ನಂತರ ಕಾಂಕ್ರಿಟ್ ಆಗಿ ಬದಲಾದಂತೆ ಪ್ರಕೃತಿಯ ವೈಪರೀತ್ಯಗಳು ನಂಜಿಗೆ ಗೋಚರಿಸುತ್ತಾ ಹೋಗುತ್ತವೆ. ಬೆರಣಿಗೆ ಬೇಡಿಕೆ ಕುಗ್ಗಿ, ಮರದ ಹೊಟ್ಟು, ಭತ್ತದ ಹೊಟ್ಟು ಲೋಡುಗಟ್ಟಲೆ ದಿನನಿತ್ಯದ ಅಗತ್ಯದ ಒಲೆ ಉರಿಸಲು ಪರ್ಯಾಯವಾಗುತ್ತದೆ. ತದ ನಂತರ ತೆಂಗಿನ ಮಟ್ಟಗಳು ಬಂದು ಬೀಳುತ್ತವೆ. ಅನಿಲದ ಪ್ರವೇಶವಾಗುತ್ತದೆ. ಬೇಲಿಗಳು ಮಾಯವಾಗಿ, ಕಾಡುಗಳು ಬಯಲಾಗಿ, ಹೊಲಗದ್ದೆಗಳು ಲಾಭದ ಲಾಲಸೆಗೆ ತುತ್ತಾಗಿ ಬಿಡುಗಾಸಿನಾಸೆಗೆ ಹಳ್ಳಿಗಾಡಿನ ಬಡ ಜನ ಮರುಳಾಗುತ್ತಾರೆ. ಇವರ ನಡುವೆ ನಂಜಿ ಭಿನ್ನವಾಗಿ ಕಾಣುವ ಬಗೆ ‘ಕಾಲನೊದ್ದವರು’ ಚಿತ್ರಿಸುತ್ತದೆ. ಧನವಂತರ ಆಮಿಷಕ್ಕೆ ಒಳಗಾಗಿ ಜಮೀನು ಮಾರಿ ಹಣ ಪಡೆದು ಲಕ್ಸುರಿಯಾಗಿ ಬದುಕಬಹುದೆಂದು ಹೇಳುವ ಮಕ್ಕಳ ಸಲಹೆಯ ಮಾತನ್ನು ದಿಕ್ಕರಿಸುತ್ತಾಳೆ. ಅವಳ ಈ ದಿಟ್ಟ ನಿರ್ಧಾರ ಅವಳ ಮಕ್ಕಳಿಂದಲೇ ಬೀದಿಗೆ ಬೀಳುವ ಸನ್ನಿವೇಶ ಬಹುಶಃ ಗಾಂಧಿಯ ಕನಸಿನ ಭಾರತವೇ ಇಲ್ಲವಾಗುತ್ತ ನಗರೀಕರಣದ ಸೆರಗಿನೊಳಗಿನ ಆತಂಕದ ಪ್ರಸ್ತುತತೆಯನ್ನು ತೆರೆದಿಡುತ್ತದೆ.

ಇಂಥದ್ದೇ ನಗರೀಕರಣದ ಬದುಕು ಸಂಸ್ಕೃತಿಗೆ ತತ್ತರಿಸಿ ಹೋಗುವ ‘ಪುಲಾರ’ ದ ಬಡಿಗೇರ ಭೀಮಣ್ಣನದು. ಹೆಣ ಹೊತ್ತೊಯ್ಯುವ ಚಟ್ಟದ ಮಂಟಪ ಮಾಡುತ್ತ ತನ್ನ ಕಾಯಕವನ್ನು ನಂಬಿಕೊಂಡು ಬಾಳ್ವೆ ನಡೆಸುತ್ತಿದ್ದವ. ಊರಲ್ಲಿ ಯಾರೇ ಸತ್ತರು ಇವನು ಮಾಡುವ ಹೆಣದ ಸಿಂಗಾರದ ಮಂಟಪವೇ ಬೇಕು. “ಭೀಮಣ್ಣ ಮಾಡಿದ್ಹಂಗ ಪುಲಾರ ಯಾರೂ ಮಾಡದಿಲ್ಲ” ಎನ್ನುವಷ್ಟು ಫೇಮಸ್. ಆದರೆ ಬರಬರುತ್ತಾ ಆಧುನಿಕತೆ ಅನ್ನೊದು ರೆಡಿಮೇಡ್ ಕಬ್ಬಿಣದ ಚಟ್ಟದ ಮಂಟಪಗಳು ಹಳ್ಳಿಹಳ್ಳಿಯನ್ನು ವ್ಯಾಪಿಸುತ್ತ ಭೀಮಣ್ಣನ ಸಾಂಪ್ರದಾಯಿಕ ಮಂಟಪಗಳಿಗೆ ಬೇಡಿಕೆ ಕಮ್ಮಿಯಾಗುತ್ತಾ ಅದು “ತಾನು ಸಾಯೋ ಕಾಲಕ್ಕೆ ಇದೆಲ್ಲ ಮರೆತು ಹೋಗಿ ತನ್ನನ್ನೂ ಬಾಡಿಗೆಯ ಕಬ್ಬಿಣದ ಮಂಟಪದಲ್ಲಿ ತಗಂಡೋಗಿ ಮಣ್ಣು ಮಾಡ್ತಾರ” ಅನ್ನೊದು ಭೀಮಣ್ಣನನ್ನು ಆತಂಕಕ್ಕೆ ತಳ್ಳುತ್ತದೆ.

ಅದಾಗಿ ಊರಲ್ಲಿ ನಿಂಗಪ್ಪನ ಸಾವಾಗುತ್ತದೆ. ಆಸೆಯಿಂದ ಸಾಮಾನು ಸರಂಜಾನು ತಂದು ಚಟ್ಟದ ಮಂಟಪ ಮಾಡಿ ಸತ್ತ ನಿಂಗಪ್ಪನ ಕಡೆಯವರ ಬರುವಿಕೆಗಾಗಿ ಕಾಯುತ್ತಾನೆ.

ಆದರೆ ಆಧುನಿಕತೆಯ ಬೆನ್ನ ಹಿಂದೆ ಬಿದ್ದವರು ಭೀಮಣ್ಣನ ಮಂಟಪ್ಪದ ಕಡೆ ಕಣ್ಣಾಯಿಸದೆ ಇದರ ಸುಳಿವರಿತು ಅತ್ತ ಹೆಜ್ಜೆ ಇಟ್ಟಾಗ ಆಧುನಿಕ ಚಟ್ಟದ ಮಂಟಪದಲ್ಲಿ ಮೆರವಣಿಗೆ ನಡೆದಿರುತ್ತದೆ. ಭೀಮಣ್ಣ ಪ್ರಶ್ನಿಸುತ್ತಾನೆ. ಪರಿಪರಿಯಾಗಿ ಬೇಡುತ್ತಾನೆ. ನಿಂಗಪ್ಪನ ಆತ್ಮಕ್ಕೆ ಶಾಂತಿ ದೊರಕಲು ಪರಂಪರಾಗತ ಆಚರಣಾ ಪದ್ದತಿಯಂತೆ ತಾನು ಮಾಡಿದ ಚಟ್ಟ (ಪುಲಾರ) ದಿಂದಲೇ ಆಗಬೇಕು ಎಂದು ವಾದಿಸುತ್ತಾನೆ. ಆಧುನಿಕ ಸಂಸ್ಕೃತಿ ಮೈಗೂಡಿಸಿಕೊಂಡಿದ್ದವರು ಹೆಣ ಹೊತ್ತೊಯ್ಯುವ ಮೆರವಣಿಗೆ ಜಾಗೆಯಲ್ಲೆ “ಥೋ ನಿನ ಶಾಣ್ಯ ಹೇಳಿದ್ರ ತಿಳ್ಯಾದಿಲ್ಲೇನು ನಿನಗ ಇನ್ನಾ ಯಾವ ಕಾಲ್ದಾಗ ಇದ್ದಿ” ಅಂತ ತಳ್ಳಿ ಅಪಮಾನಿಸುತ್ತಾರೆ. ತಳ್ಳಿದ ರಭಸಕ್ಕೆ ಅವನ ತಲೆ ಕಲ್ಲಿಗೆ ತಾಗಿ ಪ್ರಜ್ಞಾಶೂನ್ಯನಾಗಿ ಬೀಳುತ್ತಾನೆ. ಅಲ್ಲೆ ಅವನ ದೊಡ್ಡ ಮಗ ಕಂಡೂ ಕಾಣದ ಹಾಗೆ ಹೆಣದ ಮೆರವಣಿಗೆ ಉದ್ದಕ್ಕು ಅಳುತ್ತಾ ವಾಲಾಡುತ್ತ ಕೇಕೆ ಹಾಕುವ ದೃಶ್ಯ. ಚಿಕ್ಕ ಮಗ ಹಳ್ಳಿ ಬಿಟ್ಟು ಬೆಂಗಳೂರಿನಂತ ಮಾಯಾ ನಗರಿಗೆ ಹೊರಡುವ ಹಕೀಕತ್ತಿನಲ್ಲಿ.

ಇತ್ತ ಭೀಮಣ್ಣ ಅಧಿಕ ವೆಚ್ಚ ಭರಿಸಿ ಆಧುನಿಕ ಕಚ್ಛಾವಸ್ತುಗಳನ್ನೇ ತಂದು ಕಲರ್ ಫುಲ್ ಆಗಿ ಮಾಡಿದ್ದ ಪುಲಾರು ನಳನಳಿಸುತ್ತ ಗಮನ ಸೆಳೆಯುವ ದೃಶ್ಯ ಬಂಡವಾಳಶಾಹಿ ಆಧುನಿಕ ಭಾರತದ ಎಲ್ಲ ಹತಾರುಗಳ ಮಧ್ಯೆ ಕೈ ಕಸುಬುಗಳು ನಶಿಸಿ ಉದ್ಯೋಗ ವಂಚಿತರಾಗಿ ಆಧುನಿಕತೆ ಅಬ್ಬರಕ್ಕೆ ಸಾಮಾನ್ಯನ ಕಸುಬುಗಳೇ ಕನಸಾಗಿ ಬದುಕು ತತ್ತರಿಸಿ ಕೊನೆಗಾಣುವ ಧಾರುಣ ಚಿತ್ರವೊಂದು ಕಣ್ಮುಂದೆ ಬಂದು
“ಒಂದು ಜನಾಂಗದ ಶ್ರದ್ಧೆ, ಸಂಸ್ಕಾರ, ಸಂಸ್ಕೃತಿಗಳ ಜೀವನ ರೀತಿಯನ್ನು ಅವರ ಸಂವೇದನೆಯ ಪಾತಳಿಯ ಮೇಲೇ ರೂಪುಗೊಳಿಸಲು ಸಾಧ್ಯವಾದದ್ದು ಬಂಧದ ಸಡಿಲತೆಯ ಮೂಲಕವೇ. ಬಂಧದ ಸಡಿಲತೆಯ ಜೊತೆಜೊತೆಗೆ ಕತೆಗಳ ಗತಿಯೂ ನಿಧಾನವಾಗಿದೆ. ಈ ಕತೆಗಳನ್ನು ಓದುವ ಸಹೃದಯರು ನಿಧಾನ ಗತಿಯಲ್ಲಿ ಓದಿದರೇನೇ ಕತೆಗಳ ಧ್ವನಿಪೂರ್ಣ ಅನುಭವಗಳಿಗೆ ಸ್ಪಂದಿಸಲು ಸಾಧ್ಯ” ಎಂಬುದಾಗಿ ಡಾ.ಶಾಂತಿನಾಥ ದೇಸಾಯಿ ಕುಕ್ಕರಳ್ಳಿ ಅವರ ಕಥೆಯೊಂದಕ್ಕೆ ಬರೆದಿರುವ ಮುನ್ನುಡಿಯಲ್ಲಿ ಲೇಖಕನೊಬ್ಬನ ಕಥಾ ಕುಶಲತೆಯ ಮಿತಿಯನ್ನು ದಾಖಲಿಸುವಂತೆ, ಈ ಕುಶಲತೆಯ ಮಿತಿಯಲ್ಲೆ ಗುಡದಿನ್ನಿ ಅವರ ‘ಪುಲಾರ’ ದ ಕಡೆಗೂ ಪ್ರಜ್ಞಾಪೂರ್ವಕವಾಗಿ ಆಚೀಚೆಗೆ ಗಮನ ಸೆಳೆಯುವ ಅತ್ಯಂತ ಮಹತ್ವಪೂರ್ಣ ಕಥೆಗಳಲ್ಲೊಂದು.

ಆಧುನಿಕ ತಂತ್ರಜ್ಞಾನ, ಉನ್ನತ ಶಿಕ್ಷಣ, ಹೊಸ ಬಗೆಯ ಆಲೋಚನೆ, ಸಂಮೃದ್ಧ ಸಾಹಿತ್ಯ ರಚನೆ, ಪ್ರಗತಿಪರತೆ, ವೈಚಾರಿಕತೆ, ಜಾತಿ ಮತ ಪಂಥಗಳಾಚೆ ಯುವ ಸಮೂಹಗಳ ನಡುವೆ ಪ್ರೀತಿ ಪ್ರೇಮದೊಂದಿಗಿನ ಸಂಬಂಧಗಳ ಕೂಡುವಿಕೆ ಇದ್ದಾಗ್ಯೂ ಮೌಢ್ಯ, ಶಾಸ್ತ್ರ, ಸಂಪ್ರದಾಯ, ಜಾತಿ ಜನಸಂಘದ ಅಪರಿಮಿತತೆ, ಸಂಕುಚಿತತೆ ಸಮಾಜದಲ್ಲಿ ಹಾಸು ಹೊಕ್ಕಾಗಿವೆ. ಈ ಸೂಕ್ಷ್ಮತೆ ‘ತಾಂಬೇಲು’ ಬಯಲುಗೊಳಿಸುತ್ತದೆ. ಇಲ್ಲಿನ ಚೈನಾಬಿಯೊಬ್ಬಳ ಬದುಕು ಬವಣೆ ಭಾರತೀಯ ಸಾಮಾಜಿಕ ವ್ಯವಸ್ಥೆಯೊಳಗೆ ಗಾಢವಾಗಿ ಆವರಿಸಿರುವಂಥದ್ದೆ. ಅವಳ ದಿನನಿತ್ಯದ ಪಡಿಪಾಟಲು, ಗಂಡ ಖೀರುಸಾಬನ ಉಪಟಳ, ಅಶಿಸ್ತಿನಿಂದ ಕೂಡಿದ ಯಾತನೆ, ಇದೆಲ್ಲವನ್ನು ಸಹಿಸಿ ಏಗಿನ ಬದುಕು, ಎಮ್ಮೆಗಳ ಸಾಕಣೆ, ಹಾಲು ಕರೆದು ಮುಸುರೆ ತಿಕ್ಕಿ ಇದ್ದೊಬ್ಬ ಮಗ ಖಾಜಾನಿಗಾಗಿ ಜೀವ ತೆರುವ ಬಗೆ. ಅವನ ಮೇಲಿನ ಬದುಕಿನ ಭರವಸೆ ಅಪರಿಮಿತತೆ. ಇದೆಲ್ಲದರ ನಡುವೆ ಅವನ ಅಶಿಸ್ತು ಅಸಡ್ಡಾಳುತನದ ನಡವಳಿಕೆ. ಯಾವುದೊ ಹೆಣ್ಣಿನ ಹಿಂದೆ ಓಡಿ ಹೋದ ಮಗನ ಬಗ್ಗೆ ಮುತುವರ್ಜಿ. ಎಂಥ ತಾಯಿಗಾದರು ಕರುಳ ಕುಡಿಗಾಗಿ ಏನು ಬೇಕಾದರು ಮಾಡುವವಳು.ಧರ್ಮ ಯಾವುದಾದರೇನು ಜಾತಿ ಯಾವುದಾದರೇನು ಗುಡಿಯಾದರೇನು ಮಸೀದಿಯಾದರೇನು ಯಂತ್ರ ಮಂತ್ರ ತಂತ್ರ ಇದಾವುದಾದರು ಸರಿ ಅವಳಿಗೆ ಮಗ ಬಂದರೆ ಸಾಕೆನಿಸಿ ಅವಳ ಈ ‘ತುಡಿತ’ ‘ತಾಯ್ತನ’ ‘ಮಾನವೀಯತೆ’ ಕಥೆಯುದ್ದಕ್ಕು ನಿರೂಪಣೆಗೊಂಡು ‘ತಾಂಬೇಲು’ ಗೆ ಒಂದು ಅಪರಿಮಿತ ಸಂಚಲನ ಕ್ರಿಯೆ ಪ್ರಾಪ್ತವಾಗಿರುವುದಲ್ಲದೆ ಸಾಮಾಜಿಕ ಎಚ್ಚರದ ದನಿಯೂ ಇದೆ.

ಈ ಓಘದಲ್ಲೆ ಧರ್ಮ ಜಾತಿಗಳಾಚೆ ತನ್ನ ಕರುಳ ಕುಡಿಯಷ್ಟೇ ಮುಖ್ಯ ಎನಿಸಿ ತಾಂಬೇಲು (ಆಮೆ) ಬಗ್ಗೆ ದೇವರ ಗುಡ್ಡನ ಮಾತಿನ ತಾತ್ಪರ್ಯದಿಂದ ದಂಗಾಗುತ್ತಾಳೆ. ಅದುವರೆಗೂ ಮಂಕಾಗಿದ್ದ ಅವಳ ಮನಸ್ಥಿತಿ ತಾಂಬೇಲು ನೋಡಿದ ಮೇಲೆ ಕರುಳು ಹಿಂಡಿದಂತಾಗಿ ಅದರ ಹೊಟ್ಟೆ ಹಸಿವುವಿನ ಚಿಂತೆ ಹಾಗು ದೇವರ ಗುಡ್ಡನ ‘ತಾಯ್ತದ ಮುಕ್ತಿ’ – ಇಡೀ ಕಥೆಯ ತಾತ್ಪರ್ಯವನ್ನು ಹೇಳುವಲ್ಲಿ ಸಫಲತೆ ಕಂಡಿದೆ. ಇಲ್ಲಿನ ‘ಚೈನಾಬಿ’ ಅತ್ಯಂತ ಮಾನವೀಯ ಮೌಲ್ಯಗಳ ಜೀವಗಳ ತುಡಿತದ ತಾಯ್ತನ ತುಂಬಿದ ಒಂದು ಶಕ್ತ ಪಾತ್ರ.

ಭಗ್ನಗೊಳ್ಳದ, ಒಂದು ಅರ್ಥದಲ್ಲಿ ಭಗ್ನಪ್ರೇಮ! ಮದುವೆ ಆಗಿ ಒಂದು ಮಗುವಿರುವ, ಘೋರ ಖಾಯಿಲೆಗೆ ತುತ್ತಾಗಿ ತನ್ನ ಕೊನೆಗಾಲವನ್ನು ಎಣಿಸುತ್ತಿರುವ ವಿರಹಿಯೊಬ್ಬಳ ಮಾನಸಿಕವಾದ ಪ್ರೇಮ ತುಮುಲದಲ್ಲಿ ಒದ್ದಾಡುವ, ತನ್ನ ಕೊನೆಗಾಲದಲ್ಲಾದರು ಪ್ರೀತಿಸಿದವನ ಒಂದು ಅಪ್ಪುಗೆಗಾಗಿ ಕಾದು ವೇದನೆ ಹಂಚಿಕೊಳ್ಳುವ, ಅದೇ ಕಾಲಕ್ಕೆ ಗಂಡನಿದ್ದೂ ಪ್ರೀತಿಸಿದವಳೇ ಬಯಸಿ ಅಪೇಕ್ಷಿಸಿ ಸಂಧಿಸುವ ಒಂದು ಪ್ರೇಮದ ಕಥೆ ‘ಪುಷ್ಪ ವೀರ ವೇಣಿ’! ಇದು ಕಾಲೇಜು ದಿನಗಳ ಒನ್ ಸೈಡೆಡ್ ಲವ್. ಅದು ಕಾಲಾಂತರದಲ್ಲಿ ಟೂ.. ವೇ ಆಗುವ, ಎಲ್ಲರ ಬದುಕಿನಲ್ಲಿ ಬೇರೆ ಬೇರೆ ರೀತಿ ಜರುಗುವ ಸಾಮಾನ್ಯ ಪ್ರಕ್ರಿಯೆ. ಹಾಗೆ ‘ನೆಟ್ ಪ್ರಾಕ್ಟಿಸ್’ ಕೂಡ. ಅವಕಾಶ ವಂಚಿತ ಪ್ರತಿಭಾನ್ವಿತ ಆಟಗಾರನೊಬ್ಬನ ಕಥೆ. ಇವತ್ತು ಎಲ್ಲ ಕ್ಷೇತ್ರದಲ್ಲು ಸ್ಪರ್ಧೆ ಇದೆ. ಸ್ಪರ್ಧೆ ಆರೋಗ್ಯಕರವಾಗಿದ್ದರು ಕಾಣದ ಕೈಗಳ ಹಿಕ್ಮತ್ ನಿಂದಾಗಿ ಸಿಗುವ ಅವಕಾಶಗಳೂ ತಪ್ಪಿ ಹೋಗುವ ಒಬ್ಬ ಯುವಕನ ಕಥೆ. ಇವೆರಡೂ ಓದುಗನನ್ನು ಆಪ್ತವಾಗಿ ಓದಿಸಿಕೊಂಡು ಹೋಗುವ ಕಥೆಗಳು.

ಲೇಖಕ ಗುಡದಿನ್ನಿ ತನ್ನ ಅನುಭವ ಇಂಗಿತವನ್ನು ಕಥಾರೂಪಕ್ಕಿಳಿಸಿ ಸೈ ಎನಿಸಿದರು ಈ ಎರಡೂ ಸಿನಿಮಾ ಸ್ಟೈಲ್ ನಲ್ಲಿ ನಿರೂಪಣೆ ಹೊಂದಿರುವ ಕಥೆಗಳಾದರು ನಿರೂಪಣಾ ವಿಧಾನ ಭಿನ್ನವಾಗಿವೆ. ಹಾಗೆ ಓದುತ್ತಾ ಹೋದಂತೆ ತೆರೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಬರೆದಂತೆ ತಂತಾನೇ ಭಾಸವಾಗುತ್ತದೆ. ದೊಡ್ಡ ಪರದೆಯ ಮೇಲೆ ಹೀರೋ, ಹೀರೋಯಿಸಂ ಎಂಟ್ರಿ ಕೊಡುವಂತೆ ಕಥೆಯ ಕೊನೆಯಂಚು ಸಹ ಒಂದು ಪ್ರೀ ಪ್ಲ್ಯಾನ್ಡ್ ತರಹದ್ದು. ಹೀಗೆ ಪ್ರೀಪ್ಲ್ಯಾನ್ಡ್ ಆಗಿ ಸಿದ್ದ ಮಾದರಿ ಅನುಸರಿಸಿ ಬರೆದ ಕಥೆಗಳು ಪೇಲವವಾಗಿ ಸ್ಪಷ್ಟತೆಯ ಗೆರೆಯನ್ನು ದಾಟಲಾರವು ಎಂಬುದೂ ತಿಳಿಯಬೇಕಾದ ಸಂಗತಿ. ಹಾಗೆ ಎಮೋಷನಲ್ ಸನ್ನಿವೇಶಗಳು. ಇಲ್ಲಿ ಪಾತ್ರಗಳ ಗಾಢತೆ ಓದುಗನನ್ನು ಆವರಿಸಿ ತಾರ್ಕಿಕ ನಿಲುವಿವರೆಗೂ ಕೊಂಡೊಯ್ಯಬಹುದು. ಈ ಹಂತದಲ್ಲಿ ಲೇಖಕ ಸೂಕ್ಷ್ಮಗ್ರಾಹಿಯಾಗಬೇಕಾಗುತ್ತದೆ.

ಈ ಸೂಕ್ಷ್ಮಗ್ರಾಹಿ ಬರವಣಿಗೆ ಸಿನಿಮಾ ಪಟ್ಟು ತಾಂತ್ರಿಕ ಕೌಶಲ್ಯ ತೀರಾ ಸಾದಾ ಸೀದಾ ಎಲ್ಲ ಕಥೆ ಕವಿತೆ ಸಿನಿಮಾದಲ್ಲಿ ಬರುವಂತೆ – ಕರಿಯ, ವಡ್ಡ, ಒರಟು, ಶಕ್ತಿಶಾಲಿ, ಬಡವ, ದಲಿತ ತರಹದವನೊಬ್ಬ ಮೇಲ್ ಸ್ತರದ ಅಥವಾ ಪಟೇಲ ಗೌಡಿಕೆ ಮನೆಯಲ್ಲಿ ಜೀತಕ್ಕಿದ್ದು ಅರ್ಥಾತ್ ಆ ಮನೆಯ ಕೆಲಸದ ಆಳಾಗಿರುವವನ್ನು ಆ ಮನೆಯ ಸೌಂದರ್ಯವತಿ ಅಥವಾ ಯಾಜಮಾನಿ ಆ ಮನೆಯಲ್ಲಿ ತನಗೆ ಸಿಗಬೇಕಾದ, ಪೂರೈಸಿಕೊಳ್ಳಲಾಗ ಲೈಂಗಿಕ ಕ್ರಿಯೆಯಿಂದ ವಂಚಿತಳಾಗಿ ಅದನ್ನು ಇಷ್ಟಪಡುವ/ ಅವನಲ್ಲಿ ಲೀನವಾಗಿ ಆಸೆ ಪೂರೈಸಿಕೊಳುವುದು ಒಂದು. ಅದಾಗಿ ಆ ಊರಿನ ಅಥವಾ ಆ ಮನೆಯವರಿಗೆ ತಿಳಿದು ಅವನನ್ನು ಮುಗಿಸುವ ಅಥವಾ ಹಲ್ಲೆ ಮತ್ತಿತರ ಸೇಡು ಸಿಟ್ಟಿನಿಂದ ಇಡೀ ಊರು ಕಿಡಿ ಹೊತ್ತಿ ಬೇಯುವಂತೆ ಇಲ್ಲಿನ ‘ಏಳು ಮಲ್ಲಿಗೆ ತೂಕದವಳು’ ಕಥೆ ಮೈಯೊದ್ದು ರಚನೆಗೊಂಡಿರುವ ಒಂದು ಅಪರೂಪದ ಕಥೆ. ಇದೊಂದು ಸಂಮೃದ್ಧವಾದ ಕಥಾ ಹಂದರ. ಗುಡದಿನ್ನಿ ಇಲ್ಲಿ ತಮ್ಮ ಕಥನ ತಂತ್ರವನ್ನು ಬದಲಿಸಿ ಭಿನ್ನವಾಗಿ ರೂಪಿಸಿದ್ದಾರೆ. ನೆಟ್ ಪ್ರಾಕ್ಟಿಸ್, ಪುಷ್ಪ ವೀರ ವೇಣಿ ಕಥೆಗಳ ಸಿನಮೀಯ ಸ್ಟೈಲ್ ಇದ್ದರು ಅವುಗಳ ಜಾಳುತನದ ಹೊಡೆತದಿಂದ ಪಾರಾಗಿದೆ. ಬಿಗಿಯಾದ ನಿರೂಪಣೆ. ಪಾತ್ರ ಪೋಷಣೆಯಲ್ಲಿ ಕಥನ ಕುಶಲವಿದೆ. ಧಣೇರ ಸೊಸೆ ನೀಲವ್ವ ತನ್ನ ಕುಲದ ಎಲ್ಲ ಸಾಂಪ್ರದಾಯಿಕ ಲೆಕ್ಕಚಾರಗಳನ್ನು ಬುಡಮೇಲು ಮಾಡಿ ಒಡೆದು ಕಟ್ಟುವ ಸಾಹಸಕ್ಕೆ ಮುಂದಾಗುವ ಅವಳ ಛಲ ಕಥೆಗೊಂದು ಗಟ್ಟಿತನ ಪ್ರಾಪ್ತವಾಗಿದೆ ಮಾತ್ರವಲ್ಲ ಮುಂದಾಗುವ ಆತಂಕ ತಲ್ಲಣಗಳಿಗೂ ಸಾಕ್ಷಿಯಾಗಿ ನಿಲ್ಲುತ್ತಾಳೆ.

ಹಾಗಾಗಿ ಈ ‘ಏಳು ಮಲ್ಲಿಗೆ ತೂಕದವಳು’ – ನವಿರು ಮತ್ತು ಸುವಾಸಿತವಲ್ಲದೆ ವಿಪರೀತವಾಗಿ ಕಾಡುವ, ಒಲವಿನಾಸರೆ ಬಯಸಿ ಮೈಮನದ ಬೇಗೆಯ ಬಗೆಯನ್ನು ವಿವರಿಸುವುದಲ್ಲದೆ ಕ್ರುದ್ಧ ಮನಸ್ಥಿತಿಯ ರಕ್ತಸಿಕ್ತ ಸನ್ನಿವೇಶಗಳ ದಟ್ಟ ವಿವರಗಳೂ ಈ ಕಥೆಗೆ ಪ್ಲಸ್. ಹಾಗೆ ಹಳ್ಳಿ ಸೊಗಡಿನ ಭಾಷಾ ಪಾರಮ್ಯ ಮೆರೆದು ಓದುಗನ ಎದೆಗೆ ತಾಕಿ ಪದೇಪದೇ ಎಡತಾಕುವ ಒಂದು ಹದವಾದ ಕಥಾಕೃತಿ.

ಅಲ್ಲದೆ,
“ಯಕ್ಕಂಗೇ ಕಾಲು ಕೊಡು ಏಟು ಮಣ್ಣು ಕುಂತಾದ ಜಳಜಳ ತಿಕ್ಕಮು”
“ಏನವ್ವ ಯಕ್ಕ ಜಲ್ದಿ ಬಂದೆಲಾ ಹಳ್ಳಕಾ? ಏಸು ಬಟ್ಯಾ ಯವ್ವ ಕೊಡು”
“ನೀ ಹೋದಾ ಕ್ವಾಟೀ ಸಣ್ಣ ಕತೀದಲ್ಲೋ ಮುದೇತಾ! ಎಂಟು ತಲೀಲಿಂದ ಆ ಕ್ವಾಟೀ ಮನೆತನಕ್ಕ ಮಕ್ಳ ಆಗಿಲ್ಲ”
” ಮಕ್ಕಂಡ್ ಮಗ ಎದ್ದೇಳಟೀಗಿ ಮನೀ ಸೇರಬೇಕ್ರೀ, ಇನ್ನ ರಗಡ್ ಕೆಲಸ ಅದ್ಯಾವ್ರೀ”
“ಯಪ್ಪಾ ತಮ್ಮುಗುಳ್ಯಾ ದೇವ್ರಿಗೆ ಹಾಕೊ ಹೂವ್ವಪ್ಪೋ ಹಂಗ ತುಳುದು ಹಾಳಮಾಡಬ್ಯಾಡ್ರಿ”
ಎಂಬಂತೆ ಕಥೆಗಳಲ್ಲಿ ಹಾಸುಹೊಕ್ಕಗಿ ಸಂದರ್ಭೋಚಿತವಾಗಿ ಬಳಸಿರುವ ಈತರದ ಸಂಭಾಷಣೆ ಗುಡದಿನ್ನಿ ಅವರು ಈ ಕೃತಿಯ ಕಥೆಗಳಲ್ಲಿ ಆರಿಸಿಕೊಂಡಿರುವ ವಸ್ತುವಿಷಯವಲ್ಲದೆ ತಾವು ಹುಟ್ಟಿ ಆಡಿ ಬೆಳೆದ ಮನೆ, ಮನೆ ಮುಂದಿನ ಬೀದಿ ಓಣಿ, ಆ ಊರಿನ ದಟ್ಟ ಪರಿಸರ, ಜನರ ಜೀವನ ವಿಧಾನ, ಜನರ ಸಂಕಟ ತಳಮಳ ಅದರೊಂದಿಗೆ ಒಡನಾಟ ಲಿಂಗಸುಗೂರು ಸುತ್ತಮುತ್ತಲಿನ ಆಯಾ ಭಾಗದ ಆಡುನುಡಿಯ ಭಾಷಾಸೊಗಡು – ‘ಏಳು ಮಲ್ಲಿಗೆ ತೂಕದವಳು’ ಸಂಕಲನದ ‘ತೂಕದ ಮೌಲ್ಯ’ ಹೆಚ್ಚಿ, ಇಡೀ ಕೃತಿಯ ಗುಣವಿಶೇಷಣದ ಶ್ರೇಷ್ಟತೆಗೆ ಹೊಸ ಭಾಷ್ಯ ಬರೆದಿದೆ.
-ಎಂ.ಜವರಾಜ್

ಏಳು ಮಲ್ಲಿಗೆ ತೂಕದವಳು (ಕಥಾ ಸಂಕಲನ)
ಲೇಖಕರು- ಶರಣಬಸವ ಕೆ. ಗುಡದಿನ್ನಿ..
ಪುಟಗಳು – 100
ಬೆಲೆ – 120/-

ಪುಸ್ತಕಗಳಿಗಾಗಿ ಸಂಪರ್ಕಿಸಿ – 8660788450

ಎಂ.ಜವರಾಜ್ ಮೂಲತಃ ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ಟೌನ್ ಬೈರಾಪುರ ಗ್ರಾಮದವರು. ಮೈಸೂರಿನ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ಕರಾಮುವಿವಿ’ಯಲ್ಲಿ ಇತಿಹಾಸದಲ್ಲಿ ಎಂ.ಎ.ಪದವೀಧರರು. “ನವುಲೂರಮ್ಮನ ಕಥೆ” (ಕಥಾಸಂಕಲನ), “ಕಿಡಿ” (ಕಾದಂಬರಿ) “ಮೆಟ್ಟು ಹೇಳಿ ಕಥಾ ಪ್ರಸಂಗ (ಕಥನ ಕಾವ್ಯ) “ಅವ್ವ ನನ್ಹೆತ್ತು ಮುದ್ದಾಡುವಾಗ” (ಕವಿತೆಗಳು), “ನೆಲದ ಚಿತ್ರಗಳು” ( ವಿಮರ್ಶಾ ಬರಹಗಳು) ಇವರ ಪ್ರಕಟಿತ ಕೃತಿಗಳು. ಇವರ ಕಥೆ, ಕವಿತೆ, ಇತರೆ ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ  ಪ್ರಕಟಗೊಂಡಿವೆ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x