2012 ತೆರೆಕಂಡ ಉಮೇಶ್ ಶುಕ್ಲಾ ನಿರ್ದೇಶನದ ಸಿನಿಮಾ ʼಓಹ್ ಮೈ ಗಾಡ್ʼ ಸಿನಿಮಾ ತನ್ನ ಕಥಾವಸ್ತುವಿನಿಂದ ಪ್ರೇಕ್ಷಕರ ಗಮನ ಸೆಳೆದಿತ್ತು. ಈ ಚಿತ್ರದಲ್ಲಿ ಪರೇಶ್ ರಾವಲ್ ಮತ್ತು ಅಕ್ಷಯ್ ಕುಮಾರ್ ಪ್ರಧಾನ ಭೂಮಿಕೆಯಲ್ಲಿದ್ದರು. ಅದರಲ್ಲೂ ಅಖಂಡ ನಾಸ್ತಿಕ, ಅಲ್ಲದೆ ವ್ಯವಹಾರ ಚತುರನಾಗಿ ಪರೇಶ್ ರಾವಲ್ ತಮ್ಮ ಅತ್ಯುತ್ತಮ ನಟನೆಯಿಂದ ಸಿನಿಮಾದ ಗೆಲುವಿಗೆ ಕಾರಣವಾಗಿದ್ದರು. ಪ್ರಾಕ್ತನ ವಸ್ತುಗಳ ವ್ಯಾಪಾರ ಮಾಡುವ ಕಾಂಜಿ ಲಾಲ್ಜಿ ಮೆಹ್ತಾನ ಅಂಗಡಿ ಭೂಕಂಪಕ್ಕೆ ತುತ್ತಾದಾಗ, ವಿಮಾ ಕಂಪನಿಯವರು ಭೂಕಂಪ, ಪ್ರವಾಹ ಇತ್ಯಾದಿಗಳು act of god ಎಂದು ನೆಪ ಹೇಳಿ ಪರಿಹಾರ ನಿರಾಕರಿಸುತ್ತಾರೆ. ಆಗ ಕಾಂಜಿ ದೇವರ ಮೇಲೆ ಅರ್ಥಾತ್ ದೇವರ ಉತ್ತರದಾಯಿತ್ವವಾಗ ಬೇಕಾಗಿರುವ ಎಲ್ಲಾ ಧರ್ಮದ ಗುರುಗಳ ವಿರುದ್ದ ನ್ಯಾಯಾಲಯದಲ್ಲಿ ಪರಿಹಾರ ಕೋರಿ ದಾವೆ ಹೂಡುತ್ತಾನೆ. ಹಾಗಾಗಿ ಈ ಸಿನಿಮಾಸ್ತಕರ ಗಮನ ಸೆಳೆದಿತ್ತು.
ಅದೇ ಕಾರಣವಾಗಿ ಈಗ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿರುವ ʼಓಹ್ ಮೈ ಗಾಡ್ – 2ʼ ಕೂಡ ತನ್ನ ಶೀರ್ಷಿಕೆ ಕಾರಣವಾಗಿಯೇ ಕುತೂಹಲ ಹುಟ್ಟುಹಾಕಿದೆ. ಈ ಸಿನಿಮಾದ ನಿರ್ದೇಶಕರು ಅಮಿತ್ ರೈ. ಪ್ರಧಾನ ಭೂಮಿಕೆಯಲ್ಲಿ ಈ ಬಾರಿ ಪ್ರತಿಭಾವಂತ ನಟ ಪಂಕಜ್ ತ್ರಿಪಾಠಿ ಮತ್ತು ಎಂದಿನಂತೆ ಅಕ್ಷಯ್ ಕುಮಾರ್ ಇದ್ದಾರೆ. ಸಿನಿಮಾ ಬೆಳ್ಳಿಪರದೆ ಮೇಲೆ ತೆರೆದುಕೊಳ್ಳುವ ಸುಮಾರು ಅರ್ಧ ತಾಸಿನಲ್ಲಿಯೇ ಪ್ರೇಕ್ಷಕರು ದಂಗಾಗುವಂತೆ ಮಾಡುತ್ತದೆ.
ಪ್ರತಿಕ್ಷಣದಲ್ಲೂ ಶಿವನನ್ನು ಸ್ಮರಿಸುವ ಕಾಂತಿ ಶರಣ್ ಮುದ್ಗಲ್, ಮಹಾಕಾಲ ಅಥವಾ ಬೋಲೆನಾಥನ ಅಖಂಡ ಭಕ್ತ. ದೇವಾಲಯದ ಪ್ರಾಂಗಣದಲ್ಲಿಯೇ ಪೂಜಾ ಸಾಮಗ್ರಿಗಳನ್ನು ಮಾರುವ ಅವನ ಅಂಗಡಿ ಇದೆ. ದಿನಾಲೂ ಮುಂಜಾನೆ ನಡೆಯುವ ಬೋಲೆನಾಥನ ಪ್ರಮುಖ ಪೂಜಾ ಕ್ರಿಯೆಗಳಲ್ಲಿ ಭಾಗವಹಿಸಲು ಅವನಿಗೆ ವಿಶೇಷ ಆಹ್ವಾನವಿದೆ. ಆ ದಿನ ಶಾಲೆಯಲ್ಲಿ ಓದುವ ತನ್ನ ಮಗ ವಿವೇಕ ಅಚಾನಕ್ಕಾಗಿ ಅನಾರೋಗ್ಯಗೊಂಡು ಆಸ್ಪತ್ರೆಗೆ ದಾಖಲಾದ ಸುದ್ದಿ ಕೇಳಿ ಗಾಬರಿಯಿಂದ ಧಾವಿಸುತ್ತೇನೆ. ಅಲ್ಲಿ ವೈದ್ಯರು ಅನಾರೋಗ್ಯಕ್ಕೆ ಕಾರಣ ತಿಳಿಸಿದಾಗ ದಿಗ್ಭ್ರಮೆಗೊಳ್ಳುತ್ತಾನೆ. ಮಗ ವಿವೇಕ, ಕಾಮೋದ್ರಕ ಗುಳಿಗೆ ವಯಾಗ್ರವನ್ನು ಒಂದಲ್ಲ ಮೂರು ನುಂಗಿದ್ದಾನೆ! ಮೆಡಿಕಲ್ ಶಾಪಲ್ಲಿ ಕೊಂಡ ಆ ಮಾತ್ರೆ ನಕಲಿಯದ್ದಾದ್ದರಿಂದ ಶಾಲೆಯಲ್ಲಿಯೇ ಮೂರ್ಛೆ ತಪ್ಪಿದ್ದಾನೆ. ಶಿಶ್ನ ನಿಮಿರುವಿಕೆಗಾಗಿ ವಯಾಗ್ರ ಬಳಸುತ್ತಾರೆಂದು ವೈದ್ಯರು ತಿಳಿಸಿದಾಗ ಸಂಪ್ರದಾಯಸ್ಥ ಕಾಂತಿ ಶರಣ್ ಗೆ ಮೊದಲಿಗೆ ಅದನ್ನು ಅರಗಿಸಿಕೊಳ್ಳಲು ಆಗುವುದಿಲ್ಲ. ಆದರೆ, ಸೂಕ್ಷಮತಿ ವೈದ್ಯರು ʼಇದೆಲ್ಲ ವಯೋ ಸಹಜ ಕುತೂಹಲದ ಕ್ರಿಯೆʼ ಎಂದು ತಿಳಿಸಿ, ಮಗ ಸಮಾಜದಿಂದ ಅಪಮಾನಿತನಾಗಿ ಮಾನಸಿಕವಾಗಿ ಕುಗ್ಗಿ ಹೋಗದಂತೆ ಜಾಗರೂಕನಾಗಲು ಎಚ್ಚರಿಸುತ್ತಾನೆ.
ಕಾಂತಿ ಶರಣ್ – ಮಗನ ಭವಿಷ್ಯ ಮುಕ್ಕಾಗದಂತೆ ಅವನನ್ನು ಮನೆಯವರಿಂದ, ಸುತ್ತಲ ಜನರಿಂದ ರಕ್ಷಿಸಲು ಹೆಣಗಾಡುತ್ತಿರುವಾಗಲೇ ಮತ್ತೊಂದು ಸುದ್ದಿ ದಿಗ್ಮೂಢನಾಗುವಂತೆ ಮಾಡುತ್ತದೆ. ಶಾಲೆಯ ಟಾಯ್ಲೆಟ್ಟಿನಲ್ಲಿ ಮಗ ಹಸ್ತಮೈಥುನ ಮಾಡಿಕೊಂಡ ವಿಡಿಯೊ ವೈರಲ್ ಆಗಿ, ಶಾಲೆಗೆ ಅಪಕೀರ್ತಿ ಬಂತೆಂದು ಶಾಲಾ ಮಂಡಳಿ ಅವನನ್ನು ಶಾಲೆಗೆ ಬರದಂತೆ ನಿರ್ಬಂಧ ಹೇರುತ್ತದೆ. ಅಪಮಾನಿತ ಮಗ ವಿವೇಕ ರೈಲಿಗೆ ಸಿಕ್ಕಿ ಆತ್ಮಹತ್ಯೆಗೂ ಪ್ರಯತ್ನಿಸುತ್ತಾನೆ. ಇಡೀ ಕುಟುಂಬವೇ ಸಾರ್ವಜನಿಕವಾಗಿ ಅವಮಾನಕ್ಕೀಡಾದಾಗ ಕಾಂತಿ ಶರಣ್ ಕುಟುಂಬ ಸಮೇತ ಊರನ್ನೇ ಬಿಡಲು ನಿರ್ಧರಿಸುತ್ತಾನೆ. ಆಗ ತನ್ನ ಪರಮಭಕ್ತ ಕಾಂತಿ ಶರಣ್ ಗೆ ಮಾರುವೇಷದಲ್ಲಿ ಬಂದ ಶಿವ, ಭಗವಂತನ ಮೇಲಿರುವ ವಿಶ್ವಾಸವನ್ನು ಕಳೆದುಕೊಳ್ಳದಿರುವಂತೆ ಧೈರ್ಯ ಹೇಳುತ್ತಾನೆ.
ಮುಂದೆ ಸಿನಿಮಾ ಕೋರ್ಟ್ ರೂಮ್ ಡ್ರಾಮಾವಾಗಿ ತೆರೆದುಕೊಳ್ಳುತ್ತದೆ. ಕಾಂತಿ ಶರಣ್ ಮುದ್ಗಲ್ – ತನ್ನ ಮಗನಿಗೆ ನಕಲಿ ವಯಾಗ್ರ ನೀಡಿದ ಮೆಡಿಕಲ್ ಶಾಪ್ ಮಾಲೀಕ, ರಸ್ತೆಯಲ್ಲಿ ಶಿಶ್ನ ನಿಮಿರುವಿಕೆಗೆ ತೈಲ ಮಾರುತ್ತಿದ್ದವ, ಶಾಲೆಗೆ ಕೆಟ್ಟಹೆಸರು ಬರುತ್ತದೆಂಬ ನೆಪ ಒಡ್ಡಿ ಮಗನನ್ನು ಶಾಲೆಯಿಂದ ಹೊರ ಹಾಕಿದ ಪ್ರಿನ್ಸಿಪಾಲ್ ಮತ್ತು ತರುಣಾವಸ್ಥೆಗೆ ಬರುವ ಶಾಲಾ ಮಕ್ಕಳಿಗೆ ಸೂಕ್ತ ಲೈಂಗಿಕ ಶಿಕ್ಷಣ ನೀಡದ ಶಾಲೆಯ ಆಡಳಿತ ವರ್ಗದ ಅಧ್ಯಕ್ಷನನ್ನು ಆರೋಪಿಗಳನ್ನಾಗಿಸಿ ಕೋರ್ಟಿನಲ್ಲಿ ನ್ಯಾಯ ಕೋರಿ ಕೇಸನ್ನು ದಾಖಲಿಸುತ್ತಾನೆ. ಆಡಳಿತ ಮಂಡಳಿಯ ಧಮಕಿಗೆ ಹೆದರಿ ಲಾಯರ್ ಗಳು ಕೇಸನ್ನು ನಿರ್ವಹಿಸಲು ನಿರಾಕರಿಸಿದಾಗ, ದೂರುದಾರ ಮತ್ತು ಪ್ರತಿವಾದಿಯಾಗಿ ತಾನೇ ಕೋರ್ಟಿನಲ್ಲಿ ವಾದ ಮಾಡುತ್ತಾನೆ. ಹಾಗೆ ಕಾಂತಿ ಶರಣ್ ಮುದ್ಗಲ್ ನ ನ್ಯಾಯಾಲಯದಲ್ಲಿನ ಹೋರಾಟದಲ್ಲಿ ಗೆದ್ದು ತನ್ನ ಮಗ ವಿವೇಕನನ್ನು ಪುನಃ ಶಾಲೆ ಸೇರಿಸಲು ಯಶಸ್ವಿಯಾಗುವನೇ ಎಂಬುದು ಸಿನಿಮಾದ ವಸ್ತು.
Omg 2 – ಪಕ್ಕಾ ವ್ಯಾಪಾರಿ ಸಿನಿಮಾ. ಆದರೆ, ಯಾಂತ್ರಿಕ ಬುದ್ದಿಮತ್ತೆ ಅಂದರೆ ಆರ್ಟಿಫಿಯಲ್ ಇಂಟಲಿಜೆನ್ಸ್ ನ ಈ ಕಾಲಘಟ್ಟದಲ್ಲೂ ಲೈಂಗಿಕತೆ ಬಗ್ಗೆ ಸಮಾಜದ ಆಳದಲ್ಲಿ ಅಜ್ಞಾನ, ಮಡಿವಂತಿಕೆ ಬೇರೂರಿರುವಾಗ, ಶಾಲೆಗಳಲ್ಲಿ ಲೈಂಗಿಕ ಶಿಕ್ಷಣದ ಅಗತ್ಯತೆ ಬಗ್ಗೆ ಸಿನಿಮಾ ತುಸು ಅವಸರದಲ್ಲಿ ಪ್ರತಿಪಾದಿಸುತ್ತದೆ. ಆದರೂ, ಮುಷ್ಟಿಮೈಥುನ ಅಥವಾ ಹಸ್ತಮೈಥುನದಂತ ಖಾಸಗಿ ವಿಷಯವನ್ನು ಕಥಾವಸ್ತುವನ್ನಾಗಿರಿಸಿಕೊಂಡು ಸಿನಿಮಾ ಮಾಡಿರುವ ನಿರ್ದೇಶಕ, ನಿರ್ಮಾಪಕರ ಧೈರ್ಯವನ್ನು ಮೆಚ್ಚಲೇ ಬೇಕು.
ಕೋರ್ಟ್‌ನಲ್ಲಿ ನಡೆಯುವ ವಾದ, ಪ್ರತಿವಾದದಲ್ಲಿ ತನ್ನ ವಾದವನ್ನು ಸಮರ್ಥಿಸಲು ಕಾಂತಿ ಶರಣ್, ಶತಮಾನಗಳ ಹಿಂದೆಯೇ ವಾತ್ಸಾಯನ ಕಾಮಸೂತ್ರ ಗ್ರಂಥ ರಚನೆ, ದೇವಾಲಯಗಳ ಶಿಲ್ಪಕೆತ್ತನೆಯಲ್ಲಿ ಯಥೇಚ್ಚವಾಗಿ ಕಾಣ ಸಿಗುವ ಮಿಥುನ ಶಿಲ್ಪಗಳನ್ನು ಉಲ್ಲೇಖಿಸುತ್ತ ಲೈಂಗಿಕ ಶಿಕ್ಷಣ ಸಮಾಜದಲ್ಲಿ ಅಪರೋಕ್ಷವಾಗಿ ಪುರಾತನಕಾಲದಿಂದಲೂ ಇರುವುದನ್ನು ಸಾಕ್ಷಿ ಸಮೇತ ಸಾಬೀತು ಮಾಡುತ್ತಾನೆ. ಇವೆಲ್ಲ ನಮ್ಮ ಸನಾತನಧರ್ಮದಲ್ಲಿತ್ತು ಎಂದು ಹೇಳುವ ಈ ದೃಶ್ಯಗಳು ಬಹುಶಃ ಮಡಿವಂತ ಒಂದು ಧರ್ಮದವರಿಗೆ ಮುಜುಗರ ತರಬಹುದೇನೊ?
ನಿಸರ್ಗ ಸಹಜವಾದ ಲೈಂಗಿಕತೆಯ ವಿಚಾರವಾಗಿ ಮಾತಾಡುವುದು ಅಶ್ಲೀಲವೆಂದು ವಾದಿಸುವ ಡಿಫೆನ್ಸ್ ಲಾಯರನ್ನು ಪಾಟೀ ಸವಾಲನಲ್ಲಿ ಪ್ರಶ್ನಿಸುವ ವಿಡಂಬಾತ್ಮಕ ಹಾಸ್ಯ ಸನ್ನಿವೇಶಗಳು ನಗೆ ತರಿಸಲು ಸೋತಿದೆ. ಚಿತ್ರಕತೆಯನ್ನು ಹೆಣೆಯುವಾಗ ಕಾಂತಿ ಶರಣ್ ಪಾತ್ರಕ್ಕೆ ಹೆಚ್ಚು ಒತ್ತುಕೊಟ್ಟಿರುವುದರಿಂದ ಉಳಿದ ಪಾತ್ರಗಳು ನೆಪಮಾತ್ರಕ್ಕೆ ಇದ್ದಂತೆ ಕಾಣುತ್ತದೆ. ಅದಕ್ಕೆ ಮಾರುವೇಷದಲ್ಲಿ ಬರುವ ಶಿವನ ಪಾತ್ರವೂ ಹೊರತಾಗಿಲ್ಲ. ಅಕ್ಷಯ್ ಕುಮಾರ್ ನ ಸ್ಟಾರ್ ಗಿರಿಗಾಗಿ ತುರುಕಿರುವ ರಸ್ತೆ ಮೆರವಣಿಗೆಯ ಸಮೂಹ ನೃತ್ಯವೂ ಕಿರಿಕಿರಿಯೆನಿಸುತ್ತದೆ, ಹಾಗೆ ಶಿವನ ಚಿತ್ರವಿಚಿತ್ರ ವಸ್ತ್ರಭೂಷಣ.
ಮಂಗೇಶ್ ದಾಡ್ಕೆಯ ಹಿನ್ನೆಲೆ ಸಂಗೀತ ಕೆಲವೆಡೆ ಅಬ್ಬರಿಸುತ್ತದೆ. ಸಂಕಲನ ಮಾಡಿರುವ ಸುವೀರ್ ನಾಥ್ ಅವರು ಕೋರ್ಟ್ ನಲ್ಲಿ ಜಡ್ಜ್ ನ ಕೆಲವು ದೃಶ್ಯಕಟ್ಟುಗಳಿಗೆ ಕತ್ತರಿ ಹಾಕಬಹುದಿತ್ತು. ಅಮಲೆಂಡ್ ಚೌಧರಿಯ ಛಾಯಾಗ್ರಹಣ ಸಿನಿಮಾಕ್ಕಿದೆ.
ನಟವರ್ಗದಲ್ಲಿ ಪ್ರೊಟೊಗಾನಿಸ್ಟ್ ಕಾಂತಿ ಶರಣ್ ಮುದ್ಗಲ್ ಪಾತ್ರದಲ್ಲಿ ಲೀಲಾಜಾಲವಾಗಿ ನಟಿಸಿದ್ದಾರೆ. ಮಿಕ್ಕಂತೆ ಡಿಫೆನ್ಸ್ ಲಾಯರಾಗಿ ಯಾಮಿ ಗೌತಮ್, ಶಿವನಾಗಿ ಅಕ್ಷಯ್ ಕುಮಾರ್, ಜಡ್ಜ್ ಆಗಿ ಪವನ್ ಮಲೊತ್ರ ಇದ್ದಾರೆ. ಇರುವುದರಲ್ಲಿ ಮಗ ವಿವೇಕನ ಪಾತ್ರದಲ್ಲಿ ಬಾಲನಟ ಆರುಶ್ ವರ್ಮ ಗಮನ ಸೆಳೆಯುತ್ತಾರೆ.
ಒ ಮೈ ಗಾಡ್ ಮೊದಲ ಸಿನಿಮಾದಂತೆ ದೃಶ್ಯಗಳ ಹೆಣಿಗೆ ಸೂತ್ರಬದ್ಧವಾಗಿಲ್ಲವಾದರೂ, omg 2 ಸಿನಿಮಾವು ಹಸ್ತಮೈಥುನದಂಥ ಕಥಾವಸ್ತುವಿನಿಂದ ಮತ್ತು ತೀರಾ ಮುಜುಗರವಾಗದಂತೆ ಅದನ್ನು ನಿರ್ವಹಿಸಿರುವ ಕಾರಣವಾಗಿ ಗಮನ ಸೆಳೆಯುತ್ತದೆ.
–ಚಂದ್ರಪ್ರಭ ಕಠಾರಿ
cpkatari@yahoo.com